Tuesday, October 21, 2014

ವೀರಪ್ಪನ್‌ ಹತ್ಯೆಗೆ 10 ವರ್ಷ - ಒಂದು ಸಂಕ್ಷಿಪ್ತ ಪಕ್ಷಿ ನೋಟ


ಸುಮಾರು 4 ದಶಕಗಳ ಕಾಲ ಕರ್ನಾಟಕ ಮತ್ತು ತಮಿಳುನಾಡು ಪೊಲೀಸರು ಹಾಗು ಅರಣ್ಯ ಇಲಾಖೆ ಸಿಬ್ಬಂದಿ ಪಾಲಿಗೆ ಸಿಂಹಸ್ವಪ್ನನಾಗಿದ್ದ ವೀರಪ್ಪನ್‌, ಎಸ್‌ಟಿಎಫ್ ಗುಂಡಿಗೆ ಬಲಿಯಾಗಿ ಶನಿವಾರಕ್ಕೆ 10 ವರ್ಷ ತುಂಬಿದೆ. 2000ಕ್ಕೂ ಹೆಚ್ಚು ಆನೆ, 150ಕ್ಕೂ ಜನರನ್ನು ಬಲಿ ಪಡೆದ ನರಹಂತಕ ಬದುಕಿದ್ದಷ್ಟು ಕಾಲವೂ ಕಾಡಿನ ರಾಜನಾಗಿ, ಕೊನೆಗೊಂದು ರಾತ್ರಿ ಅಕ್ಷರಶಃ ನಿಸ್ಸಹಾಯಕನಾಗಿ ಮಣ್ಣಾಗಿ ಹೋಗಿದ್ದ. ಆತನ 4 ದಶಕದ ಬದುಕು, ಆತನ ಅಟ್ಟಹಾಸ, ಸಾವಿನ ಕಡೆಯ ಕ್ಷಣಗಳ ಕುರಿತ ಒಂದು ನೋಟ ಹೀಗಿದೆ...... 



ವೀರಪ್ಪನ್‌ ಯಾರು? 


ಕರ್ನಾಟಕ- ತಮಿಳುನಾಡು ಸರ್ಕಾರಗಳನ್ನು ಎರಡು ದಶಕಗಳ ಕಾಲ ನಿದ್ರೆಗೆಡಿಸಿದ್ದವನು ವೀರಪ್ಪನ್‌. ಈತ ಹುಟ್ಟಿದ್ದು ತಮಿಳುನಾಡು ಗಡಿಯಲ್ಲಿರುವ ಗೋಪಿನಾಥಂ ಎಂಬ ಪುಟ್ಟ ಹಳ್ಳಿಯಲ್ಲಿ. 10ನೇ ವಯಸ್ಸಿನಲ್ಲೇ ಆನೆಯೊಂದನ್ನು ಗುಂಡಿಟ್ಟು ಕೊಂದಿದ್ದ ವೀರಪ್ಪನ್‌ ಬಳಿಕ ಕಾಡುಗಳ್ಳ, ದಂತಚೋರ, ಶ್ರೀಗಂಧಚೋರ ಹಾಗೂ ನರಹಂತಕನಾಗಿ ಬದಲಾದ. ಕರ್ನಾಟಕ, ತಮಿಳುನಾಡು- ಕೇರಳದಲ್ಲಿ ಹರಡಿಕೊಂಡಿರುವ ಪಶ್ಚಿಮಘಟ್ಟ ಶ್ರೇಣಿಯಲ್ಲಿ ಕಾಡಿನ ಅನಭಿಷಿಕ್ತ ದೊರೆಯಾಗಿ ಮೆರೆದ. ದೊಡ್ಡದೊಂದು ತಂಡ ಕಟ್ಟಿಕೊಂಡು ಅರಣ್ಯ ಪ್ರದೇಶವನ್ನು ಲೂಟಿ ಮಾಡಿದ. ತಮಿಳುನಾಡಿನ ಮುತ್ತುಲಕ್ಷ್ಮಿಯನ್ನು ವರಿಸಿದ ಈತನಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮತ್ತೂಂದು ಹೆಣ್ಣುಮಗು ಇತ್ತಾದರೂ, ಅದರ ಅಳು ತನ್ನನ್ನು ಸುತ್ತುವರಿದಿರುವ ಪೊಲೀಸರಿಗೆ ಕೇಳಿಸಿಬಿಡುತ್ತದೆ ಎಂಬ ಕಾರಣಕ್ಕೆ ಈತ ಅದನ್ನು ಕೊಂದಿದ್ದ ಎಂಬ ವರದಿಗಳಿವೆ. ವೀರಪ್ಪನ್‌ ತಲೆಗೆ ಕರ್ನಾಟಕ- ತಮಿಳುನಾಡು ಸರ್ಕಾರಗಳು 50 ಲಕ್ಷ ರೂ. ಬೆಲೆ ಕಟ್ಟಿದ್ದವು. ವೀರಪ್ಪನ್‌ ಸದೆಬಡಿಯಲು ವಿಶೇಷ ಕಾರ್ಯಾಚರಣೆ ಪಡೆ (ಎಸ್‌ಟಿಎಫ್) ಕೂಡ ರಚಿಸಿದ್ದವು. ದಶಕದ ಕಾಲ ಈ ಎರಡೂ ರಾಜ್ಯಗಳ ಪೊಲೀಸರು, ಅರಣ್ಯ ಸಿಬ್ಬಂದಿಯನ್ನು ಏಮಾರಿಸಿ, ತನ್ನ ಸೆರೆಹಿಡಿಯಲು ಬರುವ ಅಧಿಕಾರಿಗಳನ್ನು ಕೊಂದು ಗಹಗಹಿಸಿ ಕೇಕೆ ಹಾಕುತ್ತಿದ್ದ ವೀರಪ್ಪನ್‌, 2004ರ ಅ.18ರಂದು ತಮಿಳುನಾಡಿನ ಧರ್ಮಪುರಿ ಬಳಿ ಎಸ್‌ಟಿಎಫ್ ಗುಂಡೇಟಿಗೆ ಬಲಿಯಾಗಿದ್ದ. ನಕಲಿ ಎನ್‌ಕೌಂಟರ್‌ ನಡೆಸಿ ಕೊಲ್ಲಲಾಗಿದೆ ಎಂಬ ಆರೋಪಗಳು ಆ ವೇಳೆ ಕೇಳಿಬಂದಿದ್ದವು. 

ಏನು ಮಾಡಿದ್ದ? 


ಅರಣ್ಯ, ಪೊಲೀಸ್‌ ಸಿಬ್ಬಂದಿ, ಪೊಲೀಸ್‌ ಮಾಹಿತಿದಾರರು ಸೇರಿದಂತೆ ಕನಿಷ್ಠ 130 ಜನರನ್ನು ನಿರ್ದಯವಾಗಿ ಕೊಂದ ಆರೋಪ ವೀರಪ್ಪನ್‌ ಮೇಲಿದೆ. 2 ಸಾವಿರಕ್ಕೂ ಆನೆಗಳನ್ನು ಕೊಂದು ಅವುಗಳ ದಂತಗಳನ್ನು ಹಾಗೂ ಲೆಕ್ಕವಿಲ್ಲದಷ್ಟು ಶ್ರೀಗಂಧದ ಮರಗಳನ್ನು ಕಳ್ಳ ಸಾಗಣೆ ಮಾಡಿದ ಕುಖ್ಯಾತಿಯೂ ಈತನಿಗಿದೆ. ಒಂದು ಅಂದಾಜಿನ ಪ್ರಕಾರ ವೀರಪ್ಪನ್‌ 136 ಕೋಟಿ ರೂ. ಮೌಲ್ಯದ 10 ಸಾವಿರ ಟನ್‌ ಶ್ರೀಗಂಧ, 16 ಕೋಟಿ ರೂ. ಬೆಲೆ ಬಾಳುವ ಆನೆದಂತಗಳನ್ನು ಲೂಟಿ ಹೊಡೆದಿದ್ದಾನೆ. ಕೆಲವು ಪೊಲೀಸ್‌ ಅಧಿಕಾರಿಗಳನ್ನು ಗುಂಡಿಟ್ಟು, ನೆಲಬಾಂಬ್‌ ಸ್ಫೋಟಿಸಿ, ರುಂಡ ಚೆಂಡಾಡಿ ಕೊಂದಿದ್ದಾನೆ. 

ಕನ್ನಡ ಚಿತ್ರರಂಗದ ವರನಟ ಡಾ| ರಾಜ್‌ಕುಮಾರ್‌ ಅವರನ್ನು ಅಪಹರಿಸಿದ ಬಳಿಕ ವೀರಪ್ಪನ್‌ ದೇಶಾದ್ಯಂತ ಪ್ರಸಿದ್ಧಿಯಾದ. ರಾಜ್‌ ಕುಮಾರ್‌ ಅವರನ್ನು ಆತ ಸುರಕ್ಷಿತವಾಗಿ ಬಿಡುಗಡೆ ಮಾಡಿದನಾದರೂ ಅದಾದ ಕೆಲವೇ ತಿಂಗಳಲ್ಲಿ ಮಾಜಿ ಸಚಿವ ಎಚ್‌. ನಾಗಪ್ಪ ಅವರನ್ನು ಕೊಳ್ಳೇಗಾಲ ತಾಲೂಕಿನ ಕಾಮಗೆರೆ ನಿವಾಸದಿಂದಲೇ ಅಪಹರಿಸಿ ಕರೆದೊಯ್ದಿದ್ದ. ಕೆಲವು ತಿಂಗಳ ಬಳಿಕ ನಾಗಪ್ಪ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇಷ್ಟಾದರೂ ಪೊಲೀಸರಿಗೆ ಈತನನ್ನು ಸೆರೆಹಿಡಿಯಲು ಆಗಿರಲಿಲ್ಲ. 

ಆತನ ಕಾರ್ಯವ್ಯಾಪ್ತಿ ಎಲ್ಲಿ? 


ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಹರಡಿಕೊಂಡಿರುವ 6000 ಚದರ ಕಿ.ಮೀ. ವಿಸ್ತೀರ್ಣದಷ್ಟು ಅರಣ್ಯವೇ ವೀರಪ್ಪನ್‌ನ ಕಾರ್ಯಕ್ಷೇತ್ರ. 150ಕ್ಕೂ ಹೆಚ್ಚು ಮಂದಿಯ ತಂಡ ಕಟ್ಟಿಕೊಂಡಿದ್ದ ಈತ ಅರಣ್ಯ ಭಾಗಗಳಲ್ಲಿನ ಜನರನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದ್ದ. ಅಲ್ಲಿನ ಜನರಿಗೆ ಸಹಾಯ ಕೂಡ ಮಾಡುತ್ತಿದ್ದ. ತನ್ನ ಚಲನ-ವಲನದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವವರನ್ನು ಮುಲಾಜಿಲ್ಲದೆ ಕೊಂದುಬಿಡುತ್ತಿದ್ದ. ಕರ್ನಾಟಕದಲ್ಲಿ ಒಂದು ಅಪರಾಧವೆಸಗಿದರೆ, ದಿಢೀರನೆ ತಮಿಳುನಾಡು ಅಥವಾ ಕೇರಳ ಅರಣ್ಯಕ್ಕೆ ಪರಾರಿಯಾಗಿಬಿಡುತ್ತಿದ್ದ. ಕಾಡಿನ ಮೂಲೆಮೂಲೆಯ ಮಾಹಿತಿಯೂ ಈತನಿಗೆ ಇತ್ತು. ಪೊಲೀಸರ ಸಪ್ಪಳ, ಅವರ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಹಲವು ಪಕ್ಷಗಳ ಧ್ವನಿಯನ್ನು ಅನುಕರಣೆ ಕೂಡ ಮಾಡುತ್ತಿದ್ದ. ಹೀಗಾಗಿ ಈತನನ್ನು ಪತ್ತೆ ಮಾಡುವುದು ಪೊಲೀಸರಿಗೆ ಕಷ್ಟವಾಗಿತ್ತು. 
---------- 

ವರನಟ ರಾಜ್‌ಕುಮಾರ್‌ ಅಪಹರಣ 


ವರನಟ ರಾಜ್‌ಕುಮಾರ್‌ ತಮಿಳುನಾಡಿನ ಗಾಜನೂರಿನಲ್ಲಿ ಹೊಸದಾಗಿ ಮನೆಯೊಂದನ್ನು ನಿರ್ಮಿಸಿದ್ದರು. ಇದರ ಗೃಹಪ್ರವೇಶ ಕಾರ್ಯಕ್ರಮಕ್ಕೆಂದು ಅವರು ಕುಟುಂಬ ಸಮೇತರಾಗಿ ಜು.27ರಂದು ಗಾಜನೂರಿಗೆ ತೆರಳಿದ್ದರು. ಅದಾದ ಮೂರು ದಿನಗಳ ಬಳಿಕ ಆಗಷ್ಟೇ ಊಟ ಮಾಡಿದ್ದ ರಾಜ್‌, ಕುಟುಂಬ ಸದಸ್ಯರಿಗೆ ಟೀವಿ ನೋಡುತ್ತಾ ಕುಳಿತಿದ್ದರು. ಈ ಹಂತದಲ್ಲಿ ತನ್ನ ಸಂಗಡಿಗರೊಂದಿಗೆ ರಾಜ್‌ ನಿವಾಸದ ಮೇಲೆ ದಾಳಿ ನಡೆಸಿದ ವೀರಪ್ಪನ್‌, ರಾಜ್‌ಕುಮಾರ್‌, ರಾಜ್‌ ಸಂಬಂಧಿ ಎಸ್‌.ಎ. ಗೋವಿಂದರಾಜ್‌, ನಾಗೇಶ್‌ ಮತ್ತು ಚಿತ್ರ ನಿರ್ದೇಶಕ ನಾಗಪ್ಪ ಅವರನ್ನು ಅಪಹರಿಸಿಕೊಂಡು ಹೋದ. ಬಳಿಕ ತನ್ನ ಸಹಚರರ ಮೇಲಿನ ಟಾಡಾ ಕೇಸು ಹಿಂಪಡೆಯುವುದೂ ಸೇರಿದಂತೆ ಹಲವು ಬೇಡಿಕೆಗಳನ್ನು ವೀರಪ್ಪನ್‌ ಮುಂದಿಟ್ಟಿದ್ದ. ಈ ಹಂತದಲ್ಲಿ ರಾಜ್ಯ ಸರ್ಕಾರದ ಪರವಾಗಿ ನಕ್ಕೀರನ್‌ ಪತ್ರಿಕೆ ಸಂಪಾದಕ ಗೋಪಾಲ್‌ ಮತ್ತಿತರರು, ಸಂಧಾನಕಾರರಾಗಿ ತೆರಳಿದ್ದರು. ಹೀಗಾಗಿ ಐದಾರು ಸುತ್ತಿನ ಮಾತುಕತೆ ನಡೆದು ಕೊನೆಗೆ 108 ದಿನಗಳ ಬಳಿಕ ರಾಜ್‌ಕುಮಾರ್‌ ಅವರನ್ನು ಸುರಕ್ಷಿತವಾಗಿ ವೀರಪ್ಪನ್‌ ಬಿಡುಗಡೆ ಮಾಡಿದ್ದ. 
--------- 

ಆಪರೇಷನ್‌ ಕಕೂನ್‌ಗೆ ವೀರಪ್ಪನ್‌ ಬಲಿಯಾದ 


2000ಕ್ಕೂ ಹೆಚ್ಚು ಆನೆ, 150ಕ್ಕೂ ಹೆಚ್ಚು ಜನರನ್ನು ಬಲಿಪಡೆದ ನರಹಂತಕ ವೀರಪ್ಪನ್‌ನನ್ನು ಸೆರೆಹಿಡಿಯಲು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಮಾಡದೇ ಇರುವ ಯತ್ನವೇ ಇರಲಿಲ್ಲ. 1990ರಲ್ಲೇ ಎಸ್‌ಟಿಎಫ್ ರಚನೆಯಾಗಿತ್ತಾದರೂ, ಕೆಲವೊಂದಿಷ್ಟು ವರ್ಷ ಅದು ರಾಜಕೀಯ ಒತ್ತಡಕ್ಕೆ ಒಳಗಾಗಿ ಕಾರ್ಯನಿರ್ವಹಿಸಬೇಕಾಗಿ ಬಂದಿತ್ತು. ಆದರೆ ಕೆ. ವಿಜಯ್‌ಕುಮಾರ್‌ ಅವರು ಯಾವಾಗ ಎಸ್‌ಟಿಎಫ್ನ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರೋ, ಆಗ ಮತ್ತೆ ಅದಕ್ಕೆ ಬಲ ತುಂಬಿಕೊಂಡಿತ್ತು. 

ವಿಜಯ್‌ಕುಮಾರ್‌ ಅಧಿಕಾರ ವಹಿಸಿಕೊಂಡ ಮೊದಲ ಕೆಲ ವರ್ಷ ಸಾಕಷ್ಟು ಯತ್ನ ನಡೆದರೂ, ಆತ ಬಲೆಗೆ ಬೀಳುವ ಯಾವುದೇ ಸುಳಿವು ಕಂಡುಬಂದಿರಲಿಲ್ಲ. ಹೀಗಾಗಿ ಕಾದು ನೋಡುವ ವಿಶೇಷ ರಹಸ್ಯ ತಂತ್ರವೊಂದನ್ನು ವಿಜಯ್‌ ಕುಮಾರ್‌ ಹೆಣೆದಿದ್ದರು. ಅದಕ್ಕೆ 'ಆಪರೇಷನ್‌ ಕಕೂನ್‌' ಎಂದು ಹೆಸರಿಡಲಾಗಿತ್ತು. 

ಹೀಗಿತ್ತು ಕಾರ್ಯಾಚರಣೆ: ವೀರಪ್ಪನ್‌ ಹತ್ಯೆಯಾಗಿದ್ದು 2004ರ ಅ.18ರಂದಾದರೂ, ಅದಕ್ಕೂ 10 ತಿಂಗಳು ಮೊದಲಿನಿಂದಲೇ ಎಸ್‌ಟಿಎಫ್ ಬಹಳ ಸಿದ್ಧತೆ ನಡೆಸಿತ್ತು. ತನ್ನ ಕೆಲ ಸಿಬ್ಬಂದಿಯನ್ನು ಅದು ಹಳ್ಳಿಗಾಡುಗಳಲ್ಲಿ ಸಾಮಾನು ಮಾರಾಟ ಮಾಡಲು ಕಳುಹಿಸಿತ್ತು. ಕೆಲವರು ಹಳ್ಳಿಗಳಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು, ವೀರಪ್ಪನ್‌ನ ಕುರಿತು, ಆತನ ಚಲನವಲನಗಳ ಕುರಿತು ಮಾಹಿತಿ ಸಂಗ್ರಹ ಮಾಡತೊಡಗಿದರು. ಕಾಡಿನಲ್ಲಿನ ಆದಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಂದ ಮಾಹಿತಿ ಸಂಗ್ರಹಿಸಲಾಯಿತು. ಇನ್ನು ಕೆಲವರನ್ನು ಕೈದಿಗಳ ರೀತಿಯಲ್ಲಿ ಬೆಂಗಳೂರು, ಚೆನ್ನೈನ ಜೈಲುಗಳಿಗೆ ಕಳುಹಿಸಿ, ಅಲ್ಲಿ ವೀರಪ್ಪನ್‌ನ ಕುರಿತು ಮಾಹಿತಿ ಸಂಗ್ರಹಿಸುವ ಕೆಲಸ ಮಾಡಲಾಯಿತು. 

ಹೀಗೆ 10 ತಿಂಗಳು ಕಳೆಯುವಷ್ಟರಲ್ಲಿ ವೀರಪ್ಪನ್‌ ತೀವ್ರ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದಾನೆ ಎಂಬ ವಿಷಯ ಎಸ್‌ಟಿಎಫ್ ಗಮನಕ್ಕೆ ಬಂದಿತ್ತು. ಇದನ್ನೇ ದಾಳವಾಗಿ ಬಳಸಿಕೊಳ್ಳಲು ಮುಂದಾದ, ತನ್ನ ಗುಪ್ತಚರರ ಮೂಲಕ ವೀರಪ್ಪನ್‌ ಕಾಡಿನಿಂದ ಹೊರಗೆ ಬರುವಂತೆ ನೋಡಿಕೊಂಡಿತು. 

ಅದು ಅ.18 ರಾತ್ರಿ: ಅ.18ರಂದು ರಾತ್ರಿ ವೀರಪ್ಪನ್‌ ತನ್ನ ಸಹಚರರಾದ ಸೇತುಕುಳಿ ಗೋವಿಂದ, ಚಂದ್ರೇಗೌಡ ಮತ್ತು ಗೋವಿಂದನ್‌ ಜೀಪನ್ನ ಏರಿ ಧರ್ಮಪುರಿ ಜಿಲ್ಲೆಯ ಪಾಪರಪಟ್ಟಿ ಎಂಬಲ್ಲಿಗೆ ಬಂದಿದ್ದ. ಅಲ್ಲಿಂದ ಆತ ಆತನಿಗಾಗಿಯೇ ಕಾದಿದ್ದ ಆ್ಯಂಬುಲೆನ್ಸ್‌ ಏರಿ ಹೊರಡಬೇಕಿತ್ತು. ಆದರೆ ಆ ಆ್ಯಂಬುಲೆನ್ಸ್‌ನ ಚಾಲಕ ಸ್ವತಃ ಓರ್ವ ಪೊಲೀಸ್‌ ಎಂದು ವೀರಪ್ಪನ್‌ಗೆ ಗೊತ್ತಿರಲಿಲ್ಲ. ಹೀಗೇ ಏನೂ ವಿಷಯ ಅರಿಯದ ವೀರಪ್ಪನ ತನ್ನ ಸಹಚರರೊಡಗೂಡಿ ಪ್ರಯಾಣ ಬೆಳೆಸಿದ್ದ. ಅದು ರಾತ್ರಿ 10.50ರ ಸಮಯ. ಪಾಡಿ ಎಂಬಲ್ಲಿ ಶಾಲೆ ಬಳಿ ಇದ್ದಕ್ಕಿದ್ದಂತೆ ವೀರಪ್ಪನ್‌ ಪ್ರಯಾಣಿಸುತ್ತಿದ್ದ ಆ್ಯಂಬುಲೆನ್ಸ್‌ ಅನ್ನು ಎಸ್‌ಟಿಎಫ್ ಪಡೆ ಅಡ್ಡಗಟ್ಟಿತು. ಆ ಕ್ಷಣದಲ್ಲೇ ಆ್ಯಂಬುಲೆನ್ಸ್‌ನಲ್ಲಿದ್ದ ಚಾಲಕ ಛಂಗನೆ ಕೆಳಗಿಳಿದು ಕತ್ತಲಲ್ಲಿ ಪರಾರಿಯಾಗಿ ಬಿಡುತ್ತಾನೆ. ಇತ್ತ ಏನಾಗುತ್ತಿದೆ ಎಂದು ಅರಿವಾಗುವುದರೊಳಗೆ ಇಡೀ ಪ್ರದೇಶವನ್ನು ಎಸ್‌ಟಿಎಫ್ ಪಡೆ ಸುತ್ತುವರೆದು, ಶರಣಾಗುವಂತೆ ವೀರಪ್ಪನ್‌ ಮತ್ತು ಆತನ ಸಹಚರರಿಗೆ ಎಚ್ಚರಿಕೆ ನೀಡುತ್ತದೆ. ಏಕಾಏಕಿ ನಡೆದ ಈ ಘಟನೆಯಿಂದ ಆಘಾತಕ್ಕೆ ಒಳಗಾಗುವ ವೀರಪ್ಪನ್‌, ತನ್ನ ಸಹಚರರೊಡಗೂಡಿ ಎಸ್‌ಟಿಎಫ್ ಸಿಬ್ಬಂದಿ ಮೇಲೆ ದಾಳಿಗೆ ಮುಂದಾಗುತ್ತಾನೆ. ಇತ್ತಕಡೆಯಿಂದ ಎಸ್‌ಟಿಎಫ್ ಸಿಬ್ಬಂದಿ ಕೂಡಾ ಆ್ಯಂಬುಲೆನ್ಸ್‌ನ ಮೇಲೆ ಪ್ರತಿ ದಾಳಿ ನಡೆಸುತ್ತದೆ. 

ಹೀಗೆ 10.50ಕ್ಕೆ ಆರಂಭವಾದ ಗುಂಡಿನ ಚಕಮಕಿ, 11.10ಕ್ಕೆಲ್ಲಾ ಮುಗಿದು ಹೋಗಿರುತ್ತದೆ. ಭಾರತ ಕಂಡ ಅತ್ಯಂತ ಕುಖ್ಯಾತ ಪಾತಕಿ, ನರಹಂತಕ ವೀರಪ್ಪನ್‌ ಮತ್ತು ಆತನ ಸಹಚರರರು ಎಸ್‌ಟಿಎಫ್ ಗುಂಡಿಗೆ ಸ್ಥಳದಲ್ಲೇ ಬಲಿಯಾಗುತ್ತಾರೆ. 

ಮೀಸೆಯೇ ಇರಲಿಲ್ಲ! 


ವೀರಪ್ಪನ್‌ ಎಂದರೆ ಮೊದಲು ನೆನಪಿಗೆ ಬರುವುದು ಆತನ ಭರ್ಜರಿ ಮೀಸೆ. ಆದರೆ ಹತ್ಯೆಯಾದ ವೇಳೆ ಆತ ಮೀಸೆಯನ್‌ ಟ್ರಿಮ್‌ ಮಾಡಿಕೊಂಡಿದ್ದ. ತನ್ನನ್ನು ಸುಲಭವಾಗಿ ಯಾರೂ ಗುರುತು ಹಿಡಿಯದೇ ಇರಲಿ ಎನ್ನುವ ಕಾರಣಕ್ಕೆ ಆತನ ಹೀಗೆ ಮಾಡಿಕೊಂಡಿದ್ದ ಎನ್ನಲಾಗಿದೆ. ಹೀಗಾಗಿ ಸತ್ತಿದ್ದು ವೀರಪ್ಪನ್‌ ಹೌದೇ ಅಲ್ಲವೇ ಎಂಬ ಜಿಜ್ಞಾಸೆಯೂ ಹುಟ್ಟಿತ್ತು. ಆದರೆ ಈ ಹಿಂದೊಮ್ಮೆ ಆತನನ್ನು ಬಂಧನಕ್ಕೆ ಒಳಪಡಿಸಿದ್ದ ವೇಳೆ ಪೊಲೀಸರು ಆತನ ಫಿಂಗರ್‌ಪ್ರಿಂಟ್‌ ತೆಗೆದುಕೊಂಡಿದ್ದರು. ಹೀಗಾಗಿ ಅದರ ಜೊತೆಗೆ ಮೃತ ದೇಹದ ಹಸ್ತ ಹೋಲಿಕೆ ಮಾಡುವ ಮೂಲಕ ಸತ್ತಿದ್ದು ವೀರಪ್ಪನ್‌ ಎಂದು ಖಚಿತಪಡಿಸಿಕೊಳ್ಳಲಾಯಿತು. 
-------- 

ವೀರಪ್ಪನ್‌ ಟೈಮ್‌ಲೈನ್‌ 


1962: 10 ವರ್ಷವಿದ್ದಾಗಲೇ ತನ್ನ ಗುರು ಸೇವಿ ಗೌಂಡರ್‌ ಜೊತೆಗೂಡಿ ಆನೆ ಹತ್ಯೆ 

1983: ಕೊಡಗಿನ ಪೊನ್ನಂಪೇಟೆ ಬಳಿ ಆನೆ ಹತ್ಯೆ ತಡೆಯಲು ಯತ್ನಿಸಿದ ಅರಣ್ಯ ರಕ್ಷಣ ಕೆ.ಎಂ. ಪೃಥ್ವಿ ಹತ್ಯೆ. 

1986: ಮೊದಲ ಬಾರಿಗೆ ಬಂಧನ, ಬೂದಿಪಾದ ಗೆಸ್ಟ್‌ಹೌಸ್‌ನಲ್ಲಿ ಇಟ್ಟ ವೇಳೆ ಪೊಲೀಸರಿಗೆ ಲಂಚ ನೀಡಿ ಪರಾರಿ. 

1990: ವೀರಪ್ಪನ್‌ ಹಿಡಿಯಲು ತಮಿಳುನಾಡು ಮತ್ತು ಕರ್ನಾಟಕ ಪೊಲೀಸರಿಂದ ವಿಶೇಷ ಕಾರ್ಯಪಡೆ ರಚನೆ. 

1990: ಕರ್ನಾಟಕ ಅರಣ್ಯ ಹಿರಿಯ ಇಲಾಖೆಯ ಅಧಿಕಾರಿ ಶ್ರೀನಿವಾಸ್‌ ತಲೆಗೆ ಗುಂಡಿಟ್ಟು ಹತ್ಯೆ ಮಾಡಿ, ರುಂಡ- ಮುಂಡ ಬೇರ್ಪಡೆ. 

1992: ರಾಮಾಪುರ ಪೊಲೀಸ್‌ ಠಾಣೆ ಮೇಲೆ ದಾಳಿ ಮಾಡಿ 5 ಜನರ ಹತ್ಯೆ 

1992: ವೀರಪ್ಪನ್‌ ಗುಂಡಿಗೆ ಮೈಸೂರು ಜಿಲ್ಲಾ ಎಸ್ಪಿ ಟಿ. ಹರಿಕೃಷ್ಣ, ಎಸ್‌ಐ ಶಕೀಲ್‌ ಅಹಮದ್‌ ಮತ್ತು ನಾಲ್ವರು ಪೊಲೀಸ್‌ ಪೇದೆಗಳು ಬಲಿ. 

1993: ವೀರಪ್ಪನ್‌ ಸೆರೆಗೆ ಬಿಎಸ್‌ಎಫ್ ಯೋಧರ ನಿಯೋಜನೆ. ಕೇರಳಿದ ವೀರಪ್ಪನ್‌. ಬಿಎಸ್‌ಎಫ್ ಯೋಧರ ಮೇಲೆ ದಾಳಿ ನಡೆಸಿ 20 ಜನರ ಹತ್ಯೆ. 

1993: ತಮಿಳುನಾಡಿನ ಪಾಲಾರ್‌ ಬಳಿ ನೆಲ ಬಾಂಬ್‌ ಸ್ಫೋಟಿಸಿ, 22 ಪೊಲೀಸರು, ಅರಣ್ಯ ಇಲಾಖೆ, ನಾಗರಿಕರ ಹತ್ಯೆ. 

1996: ಪೊಲೀಸ್‌ ವಶದಲ್ಲಿದ್ದ ತನ್ನ ಸೋದರ ಅರ್ಜುನ್‌ ಸಾವಿಗೆ ಪ್ರತೀಕಾರವಾಗಿ ವೀರಪ್ಪನ್‌ನಿಂದ 10 ಜನರ ಹತ್ಯೆ 

2000: ಕನ್ನಡದ ವರ ನಟ ಡಾ. ರಾಜ್‌ಕುಮಾರ್‌ ಅಪಹರಣ. 109 ದಿನಗಳ ಬಳಿಕ ಬಿಡುಗಡೆ 

2002: ಕರ್ನಾಟಕದ ಮಾಜಿ ಸಚಿವ ಎಚ್‌. ನಾಗಪ್ಪ ಅಪಹರಣ, ಬಳಿಕ ಹತ್ಯೆ. 

2004: ಆ್ಯಂಬುಲೆನ್ಸ್‌ನಲ್ಲಿ ತೆರಳುವ ವೇಳೆ ತಮಿಳುನಾಡಿನ ಚೆಕ್‌ಪೋಸ್ಟ್‌ ಬಳಿಕ ಎಸ್‌ಟಿಎಫ್ ಗುಂಡಿಗೆ ವೀರಪ್ಪನ್‌ ಬಲಿ. 
----------- 
ನಂಬರ್‌ಗೆàಮ್‌ 

184: ವೀರಪ್ಪನ್‌ ಮತ್ತು ಆತನ ಗುಂಪಿಗೆ ಬಲಿಯಾದವರು. 

2000: ವೀರಪ್ಪನ್‌ಗೆ ಬಲಿಯಾದ ಆನೆಗಳ ಸಂಖ್ಯೆ 

10000 ಟನ್‌: ವೀರಪ್ಪನ್‌ ಕಡಿದ ಗಂಧದ ಮರದ ತೂಕ 

135 ಕೋಟಿ: ವೀರಪ್ಪನ್‌ ಕಡಿದ ಆನೆದಂತದ ಅಂದಾಜು ಮೌಲ್ಯ 

50 ಲಕ್ಷ ರೂ. ವೀರಪ್ಪನ್‌ ತಲೆಗೆ ಘೋಷಿಸಲಾಗಿದ್ದ ಬಹುಮಾನದ ಮೊತ್ತ 
---- 
ವೀರಪ್ಪನ್‌ ಕುರಿತ ಚಿತ್ರ, ಧಾರಾವಾಹಿ 

ಜಂಗಲ್‌: ರಾಂ ಗೋಪಾಲ್‌ ವರ್ಮಾರಿಂದ ಚಲನಚಿತ್ರ 

ಕ್ಯಾಪ್ಟನ್‌ ಪ್ರಭಾಕರನ್‌: ತಮಿಳುಚಿತ್ರ 

ವೀರಪ್ಪನ್‌: ಕನ್ನಡ ಚಿತ್ರ 

ಸ್ಯಾಂಡನಕಾಡು: ತಮಿಳು ಧಾರಾವಾಹಿ 

ಅಟ್ಟಹಾಸ: ಕನ್ನಡ ಚಲನಚಿತ್ರ 

ವನಯುದ್ಧಂ: ತಮಿಳುಚಿತ್ರ 
----- 
ವೀರಪ್ಪನ್‌ ಕುರಿತ ಪುಸ್ತಕಗಳು 

ವೀರಪ್ಪನ್‌: ಇಂಡಿಯಾಸ್‌ ಮೋಸ್ಟ್‌ ವಾಂಟೆಡ್‌ ಮ್ಯಾನ್‌- ಸುನ್ನಾದ್‌ ರಘುರಾಂ 

ಬರ್ಡ್ಸ್‌, ಬೀಸ್ಟ್ಸ್ ಆ್ಯಂಡ್‌ ಬ್ಯಾಂಡಿಟ್ಸ್‌: 14 ಡೇಸ್‌ ವಿತ್‌ ವೀರಪ್ಪನ್‌- ಕೃಪಾಕರ್‌ ಮತ್ತು ಸೇನಾನಿ 
-------- 
ವೀರಪ್ಪನ್‌ ನಡೆಸಿದ ಪ್ರಮುಖ ಅಪಹರಣಗಳು 

1987: ತಮಿಳುನಾಡು ಅರಣ್ಯ ಇಲಾಖೆಯ ಚಿದಂಬರಂ ಅಪಹರಣ, ಹತ್ಯೆ 

1989: ಬೇಗೂರು ಅರಣ್ಯದಿಂದ 3 ಅರಣ್ಯ ಇಲಾಖೆ ಸಿಬ್ಬಂದಿ ಅಪಹರಣ, ಹತ್ಯೆ 

1991: ಗ್ರಾನೈಟ್‌ ಕ್ವಾರಿ ಮಾಲೀಕನ ಪುತ್ರನ ಅಪಹರಣ, ಹಣ ಪಡೆದು ಬಾಲಕನ ಬಿಡುಗಡೆ 

1994: ಕೊಯಮತ್ತೂರಿನ ಡಿಎಸ್‌ಪಿ ಚಿದಂಬರಂ ಸೇರಿ ಮೂವರ ಅಪಹರಣ 

1997: ಕರ್ನಾಟಕದ ವನ್ಯಜೀವಿ ಛಾಯಾಚಿತ್ರಗ್ರಾಹಕರಾದ ಸೇನಾನಿ ಮತ್ತು ಕೃಪಾಕರ್‌ ಅಪಹರಣ, ಬಿಡುಗಡೆ 

1997: ಬುರುಡೆ ಪ್ರದೇಶದಿಂದ ಕರ್ನಾಟಕ ಅರಣ್ಯ ಇಲಾಖೆಯ 9 ಸಿಬ್ಬಂದಿ ಅಪಹರಣ, ಹತ್ಯೆ. 

1998: ನೇತಿಕತ್‌ ಪತ್ರಿಕೆ ಸಂಪಾದಕ ಎ.ಎಸ್‌.ಮಣಿ, ಪ್ರೊ.ಕೃಷ್ಣಸಾಮಿ, ಪತ್ರಕರ್ತ ಪಯ್ಯಂಪುಲಿ, ಫೋಟೋಗ್ರಾಫ‌ರ್‌ ರಿಚರ್ಡ್‌ ಮೋಹನ್‌ ಅಪಹರಣ. ಎಸ್‌ಟಿಎಫ್ ಕಾರ್ಯಾಚರಣೆ ಬಳಿಕ ಬಿಡುಗಡೆ 

2000: ಕನ್ನಡದ ವರನಟ ರಾಜ್‌ಕುಮಾರ್‌ ಅಪಹರಣ, 109 ದಿನಗಳ ಬಳಿಕ ಬಿಡುಗಡೆ 

2002: ಕರ್ನಾಟಕದ ಮಾಜಿ ಸಚಿವ ಎಚ್‌. ನಾಗಪ್ಪ ಅಪಹರಣ, ಹತ್ಯೆ 
(ಕೃಪೆ: ಉದಯವಾಣಿ ಕನ್ನಡ ದಿನಪತ್ರಿಕೆ)

No comments:

Post a Comment