Wednesday, July 31, 2013

ನಮ್ಮಲ್ಲಿಯ ಸ್ಥಳ ಪುರಾಣಗಳು (Myths) -2

ತಿರುವಣ್ಣಾಮಲೈ(Thiruvannamalai)
    ಇಂದು ತಮಿಳು ನಾಡಿನ ಜಿಲ್ಲಾ ಕೆಂದ್ರವಾಗಿರುವ ತಿರುವಣ್ಣಾಮಲೈ ದಕ್ಷಿಣ ಭಾರತದ ಪ್ರಖ್ಯಾತ ಶೈವ ಕ್ಷೇತ್ರವೂ ಹೌದು. ಶ್ರೀ ಅರುಣಾಚಲೇಶ್ವರನೆನ್ನುವ ಹೆಸರಿನಲ್ಲಿ ಇಲ್ಲಿ ನೆಲೆಸಿರುವ ಪರಮೇಶ್ವರ ಭಕ್ತರ ಕಷ್ಟಗಳ ದೂರ ಮಾಡುತ್ತಾ ಅವರ ಸೇವೆಯನ್ನು ಯಥೊಚಿತ ಪಡೆಯುತ್ತಾ ಅಗ್ನಿಲಿಂಗ ಸ್ವರೂಪದಲಿ ಪೂಜೆಗೊಳ್ಳುತ್ತಿದ್ದಾನೆ.
    ಹಿಂದೊಮ್ಮೆ ಸೃಷ್ಟಿಕರ್ತನಾದ ಬ್ರಹ್ಮನಿಗೂ ಮಹಾವಿಷ್ಣುವಿಗೂ ತಮ್ಮಿಬ್ಬರಲ್ಲಿ ಯಾರು ಶ್ರೇಷ್ಠರೆನ್ನುವ ಪ್ರಶ್ನೆ ಮೂಡಿತು. ಅದಾಗ ಇಬ್ಬರೂ ಪರಮೇಶ್ವರನ ಬಳಿ ಧಾವಿಸಿದರು. ಪರಮೇಶ್ವರನು ಇಬ್ಬರ ವಾದಗಳನ್ನೂ ಆಲಿಸಿ ತಾನೋಂದು ಪಂದ್ಯವನ್ನೇರ್ಪಡಿಸಲು ಮುಂದಾದನು. ಅದೆಂದರೆ, ಶಿವನು ಜ್ಯೋತಿ ಸ್ವರೂಪನಾಗುವುದು, ಜ್ಯೋತಿಅ ಶಿರ ಭಾಗ ಹಾಗೂ ತಳಭಾಗವನ್ನು ಯಾರು ಕಂಡು ಹಿಡಿಯುವರೋ ಅವರೇ ಶ್ರೇಷ್ಠರಾಗುತ್ತಾರೆ. ಇಬ್ಬರೂ ಷರತ್ತಿಗೆ ಒಪ್ಪಿದರು,
    ವಿಷ್ಣುವು ವರಾಹ ರೂಪದಲ್ಲಿ ಪಾತಾಳಕ್ಕೆ ಜ್ಯೋತಿಯ ತಳವನ್ನು ಹುಡುಕಲು ಹೊರಟರೆ, ಬ್ರಹ್ಮನು ತಾನು ರಾಜ ಹಂಸದ ರೂಪುತಾಳಿ ಜ್ಯೋತಿಯ ತಲೆಯನ್ನು ತಲುಪುವದಕ್ಕೆ ಹೋದನು. ದಿನಗಳು, ವಾರಗಳು, ಕೊನೆಗೆ ವರ್ಷಗಳು, ಮನ್ವಂತರಗಳು ಉರುಳಿದರೂ ಜ್ಯೋತಿ ಸ್ವರೂಪನಾದ ಪರಶಿವನ ತಲೆ ಯಾಗಲೀ ತಳವಾಗಲೀ ದೊರೆಯಲಿಲ್ಲ. ಕೊನೆಗೊಮ್ಮೆ ವಿಷ್ಣುವು ತಾನು ಪಣದಲ್ಲಿ ಸೋತುದಾಗಿ  ಒಪ್ಪಿದನು. ಬ್ರಹ್ಮನೂ ಸಹ ಜ್ಯೋತಿಯ ತಲೆಯನ್ನು ಕಾಣುವಲ್ಲಿ ವಿಫಲನಾಗಿ ಮರಳುವ ವೇಳೆ ಅವನಿಗೊಂದು ತುಂಬೆ ಪುಷ್ಪ ಮೇಲಿನಿಂದ ಬಿಳುತ್ತಿರುವುದು ಕಂಡಿತು. ತಕ್ಷಣ ಜಾಗೃತನಾದ ಬ್ರಹ್ಮನು ಅದರ ಬಳಿ ಕೇಳಿದನು, ”ಎಲೆ ಪುಷ್ಪವೇ ನೀನು ಶಿವನ ತಲೆತಿಂದ ಬೀಳುತ್ತಿರುವಿಯಷ್ಟೆ, ಪರಮೇಶ್ವರನ ತಲೆ ಇಲ್ಲಿಂದ ಎಷ್ಟು ದೂರದಲ್ಲಿದೆ?” ಅದಕ್ಕೆ ಪುಷ್ಪವೆಂದಿತು ;;ಅದರ ಬಗ್ಗೆ ನನಗೆ ಅರಿವಿಲ್ಲ, ನಾನು ಸುಮಾರು ನಲವತ್ತು ಸಾವಿರ ವರುಷಗಳಿಂದಲೂ ಹೀಗೆ ಬೀಳುತ್ತಿರುವೆನು, ಇನ್ನೂ ತಳ ಮುಟ್ಟಿಲ್ಲ.” ಹೀಗೆಂದಾಗ ಬ್ರಹ್ಮನಿಗೆ ತಾನು ಜ್ಯೋತಿಯ ತಲೆ ಮುಟ್ಟುವುದು ಸಾದ್ಯವಿಲ್ಲ ಎನ್ನುವುದು ಖಚಿತವಾಯಿತು. ಮತ್ತು ಅವನು ತುಂಬೆ ಹೂವಿನ ಬಳಿ ಹೀಗೆಂದನು, ”ನೀನು ನನಗೊಂದು ಸಹಾಯ ಮಾಡಬೇಕು ಅದೆಂದರೆ ಶಿವನ ಬಳಿ ಸಾರಿ ಬ್ರಹ್ಮನು ಜ್ಯೋತಿಯ ತಲೆಯನ್ನು ತಲುಪಿದನೆಂದು ಸುಳ್ಳು ಹೇಳಬೇಕು”. ಅದಕ್ಕೊಪ್ಪಿದ ಪುಷ್ಪ ಹಾಗೆಯೇ ಮಾಡಿತು. ಎಲ್ಲದರ ಮರ್ಮವನ್ನರಿತ ಪರಮೇಶ್ವರನು ಬ್ರಹ್ಮನ ಮೋಸಕ್ಕಾಗಿ ಆತನಿಗೆ ಭೂಮಿಯಲ್ಲೆಲ್ಲೂ ದೇವಾಲಯವಿಲ್ಲದಂತಾಗಲೆಂದು ಶಪಿಸಿದನು. ಹಾಗೆ ತುಂಬೆ ಹೂವಿಗೆ ಪೂಜೆಗೆ ನೀನು ಅರ್ಹನಲ್ಲದವಳಾಗೆಂದು ಶಾಪವನ್ನು ನೀಡಿದನು. ಹೀಗೆ ಬ್ರಹ್ಮನ ಅಹಂಕಾರವನ್ನು ಪರಮೇಶ್ವರನು ಮುರಿದಂತಹಾ ಸ್ಥಳವೇ ಇಂದಿನ ತಿರುವಣ್ಣಾಮಲೈ ಎನ್ನಲಾಗಿದೆ.
    ಅದಾಗಿ ಹಲವು ಮನ್ವಂತರಗಳಾದ ಮೇಲೆ ಒಮ್ಮೆ ಪಾರ್ವತಿಯು ಹುಡುಗಾಟಕ್ಕಾಗಿ ಶಿವನ ಕಣ್ಣುಗಳನ್ನು ಮುಚ್ಚಿದಳು. ಅದಾಗ ಲೋಕದ ಕಣ್ಣೆ ಅವನಾಗಿರುವ ಕಾರಣ ಲೋಕವೆಲ್ಲಾ ಗಾಢ ಅಂಧಕಾರದಲ್ಲಿ ಮುಳುಗಿತು. ಅದಾಗ ಪಾರ್ವತಿದೇವಿಗೆ ತಾನು ಮಾಡಿದ ಪಾಪದ ಅರಿವಾಗಿ ಅದರ ಪ್ರಯಶ್ಚಿತ್ತವಾಗಿ ಮರಳಿನ ಒಂದು ಲಿಂಗವನ್ನು ತಯಾರಿಸಿ ಕಂಚಿಯಲ್ಲಿ ನಿಂತು ಪೂಜಿಸಲು ಮುಂದಾದಳು. ಪರಮೇಶ್ವರನು ಸಮಯದಲ್ಲಿ ಲಿಂಗವನ್ನು ತಿರುವಣ್ಣಾಮಲೈಗೆ ತರಲು ಹಾಗೂ ಅಲ್ಲೇ ಪೂಜಿಯನ್ನು ಮಾಡಲು ತನ್ನ ಸತಿಯಾದ ಪಾರ್ವತಿಗೆ ಆದೇಶಿಸಿದ. ಅದರಂತೆ ಗೌತಮ ಮುನಿಗಳ ನೆರವಿನೊಂದಿಗೆ ಉಮೆಯು ಲಿಂಗವನ್ನು ತಿರುವಣ್ಣಮಲೈಗೆ ಸಾಗಿಸುತ್ತಿರಲು ಮಾರ್ಗದ ಮದ್ಯೆ ಮಕಿದಾಸುರನೆಂಬ ರಕ್ಕಸ ಅವಳಿಗೆ ಉಪಟಳವನ್ನು ನೀಡಲು ಬಂದಾಗ ಆಕೆ ಆದಿ ದುರ್ಗಾ ಪರಮೇಶ್ವರಿಯ ರೂಪವನ್ನು ಧರಿಸಿ ಅವನನ್ನು ವಧಿಸಿದಳು. ಹಾಗೆ ತಾಯಿಯು ರಕ್ಕಸನನ್ನು ವಧಿಸಿದ ದಿನ ಕಾರ್ತಿಕ ಪೌರ್ಣಮಿಯಾಗಿದ್ದು, ಅಂದೆ ಪರಮೇಶ್ವರನು ತಾಯಿಯ ಎಡಪಾರ್ಶ್ವದಲ್ಲಿ ಒಂದಾಗಿ ಅರ್ಧನಾರೀಶ್ವರ ಸ್ವರೂಪವನ್ನು ತಾಳಿದನು. ಘಟನೆಗಳು ನಡೆದುದು ಸಹ ತಿರುವಣ್ಣ್ಣಾಮಲೈನ ಬೆಟ್ಟದಲ್ಲಿಯೇ ಎನ್ನುವುದು ಪ್ರತೀತಿ.
    ಅದಕ್ಕೆಂದೇ ಜ್ಯೋತಿಸ್ವರೂಪಿಯಾದ ಪರಮೇಶ್ವರನ ಸನ್ನಿಧಾನದಲ್ಲಿ ಪ್ರತಿ ವರ್ಷ ಕಾರ್ತಿಕ ದೀಪೋತ್ಸವ ಅತ್ಯಂತ ವೈಭವಯುತವಾಗಿ ಆಚರಿಸಲಾಗುತ್ತದೆ



Friday, July 26, 2013

ಕಾರ್ಗಿಲ್ ನಲ್ಲಿ ಕಾದಾಡಿದ ಭಾರತಾಂಬೆಯ ಆ ವೀರಕೇಸರಿಗಳನ್ನು ನೆನೆಯುತ್ತಾ………(Remember of Lions of Kargil)

    ನನ್ನೆಲ್ಲ ಆತ್ಮೀಯ ಸ್ನೇಹಿತರಿಗೆ ನಮಸ್ಕಾರ.
    ಇಂದು ಕಾರ್ಗಿಲ್ ವಿಜಯದ ದಿನ(ಜುಲೈ26). ಇಂದಿಗೆ ಸರಿಯಾಗಿ 14 ವರ್ಷಗಳ ಹಿಂದೆ ಇದೇ ದಿನ ಭಾರತ ತನ್ನದೇ ನೆಲವನ್ನಾಕ್ರಮಿಸಿದ್ದ ಪಾಕಿಸ್ತಾನದ ವಿರುದ್ದ ಕಾರ್ಗಿಲ್ ಯುದ್ದದಲ್ಲಿ ವಿಜಯಿಯಾಯಿತು. ವೈರಿಗಳ ಸದ್ದಡಿಸುತ್ತಾ ವೀರ ಮರಣವನಪ್ಪಿದ 533 ಸೈನಿಕರಿಗೆ, ನಮ್ಮ-ನಿಮ್ಮ ರಕ್ಷಣೆಯ ಸಲುವಾಗಿ ತಮ್ಮ ಕೈ, ಕಾಲುಗಳನ್ನು ಕಳೆದುಕೊಂಡ 1363 ಮಂದಿಯನ್ನು ನೆನೆಯುವ ದಿನವಿದು. ಸಂದರ್ಭದಲ್ಲಿ ನಾನು ನಿಮಗೊಬ್ಬ ರಿಯಲ್ ಹೀರೋನ ಕಥೆ ಹೇಳಬೇಕನಿಸುತ್ತಿದೆ.
ಮೇಜರ್ ಸುಧೀರ್ ವಾಲಿಯಾ
    ಇದು ನಾವು ನೀವೆಲ್ಲ ಸಿನಿಮಾ, ಟಿವಿಗಳಲ್ಲಿ ಪ್ರತಿನಿತ್ಯ ನೋಡುವ ಹೀರೋಗಳ (ಜ಼ೀರೋಗಳ) ಕಥೆಯಲ್ಲ, ಬದಲಾಗಿ ನಮಗಾಗಿ ಪ್ರಾಣಕೊಟ್ಟ ಒಬ್ಬ ವೀರ ಸೈನಿಕನ ಬದುಕಿನ ಕಥೆ.
    ಮೇಜರ್ ಸುಧೀರ್ ವಾಲಿಯಾ
    ಸ್ನೇಹಿತರೇ, ಮೇಜರ್ ಸುಧೀರ್ ವಾಲಿಯಾ ಹುಟ್ಟಿದ್ದು ಹಿಮಾಚಲ ಪ್ರದೇಶದಲ್ಲಿನ ಕುಗ್ರಾಮದಲ್ಲಿ. ಅವರ
ತಂದೆ ಮೇಜರ್ ರುಲಿಯಾ ರಾಮ್ ಹಾಗೂ ತಾಯಿ ರಾಜೇಶ್ವರಿ ದೇವಿ. ರುಲಿಯಾ ರಾಮ್ ಕುಟುಂಬ ಹಿಮಾಚಲ ಪ್ರದೇಶದ ಕಾಂಗ್ರಾ ಕಣಿವೆ ಸೀಮೆಯಲ್ಲಿ ವಾಸವಿದ್ದಿತು ರುಲಿಯಾ ರಾಮ್ ಕೂಡ ಸತತ 28 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿದ್ದವರು. 1976 ರಲ್ಲಿ ನಿವೃತ್ತನಾಗಿದ್ದ ಮೇಜರ್ ರುಲಿಯಾ ರಾಮ್ ಮೊದಲ ಮಗನೇ ಮೇಜರ್ ಸುಧೀರ್ ವಾಲಿಯಾ. ಪ್ರಾಥಮಿಕ ವಿದ್ಯಾಭ್ಯಾಸವನ್ನು ತನ್ನ ಸ್ವಗ್ರಾಮದಲ್ಲಿ ಮುಗಿಸಿದ ಇವರು ಐದನೇ ತರಗತಿಯ ಬಳಿಕ ಊರಿನಿಂದ ನಲವತ್ತು ಕಿ.ಮೀ. ದೂರದಲ್ಲಿದ್ದ ಸುಜಾನ್ಪುರ್ ತಿರಾದ ಮಿಲಿಟರಿ ಶಾಲೆಗೆ ಸೇರಿಕೊಂಡರು. ಅದೇ ಸಂದರ್ಭದಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡಮಿ ಪರೀಕ್ಷೆಯಲ್ಲಿ ಪಾಸಾದ ಸುಧೀರ್ ಖಡಕ್ ವಾಸ್ಲಾದಲ್ಲಿರುವ ನ್ಯಾಷನಲ್ ಡಿಫೆನ್ಸ್ ಅಕಾಡಮಿಯನ್ನು ಸೇರಿಕೊಂಡರು. ರಜೆಗೆಂದು ಮನೆಗೆ ಬಂದಾಗೆಲ್ಲಾ ಇಂಗ್ಲೀಷ್ ಭಾಷಾ ತರಬೇತಿಯನ್ನು ಸೇರಿಕೊಂಡ ಸುಧೀರ್ ಮುಂದೆ ನಿರರ್ಗಳವಾಗಿ ಇಂಗ್ಲೀಶ್ ನಲ್ಲಿ ಮಾತಾಡುವುದರಲ್ಲಿ ಪರಿಣಿತರಾದರು. ಮುಂದೆ ನ್ಯಾಷನಲ್ ಡಿಫೆನ್ಸ್ ಅಕಾಡಮಿಯಲ್ಲಿ ಅವರು ತೋರಿದ ಪ್ರತಿಭೆ ಅವರನ್ನು ಡೆಹರಾಡೂನ್ ನಲ್ಲಿರುವ ಇಂಡಿಯನ್ ಮಿಲಿಟರಿ ಅಕಾಡಮಿಯ ಮೆಟ್ಟಿಲೇರುವಂತೆ ಮಾಡಿತು. ಅಲ್ಲಿ ಪದವಿ ಶಿಕ್ಷಣ ಪೂರೈಸಿದ ಸುಧೀರ್ 1988 ರಲ್ಲಿ ಮೂರನೇ ಜಾಟ್ ರೆಜಿಮೆಂಡ್ ಗೆ ಸೇನಾಧಿಕಾರಿಯಾಗಿ ಸೇರ್ಪಡೆಗೊಂಡರು. ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ಎಪ್ಪತ್ತು ಸಾವಿರ ಸೈನಿಕರ ಶಾಂತಿ ಪಾಲನಾ ಪಡೆಯನ್ನು ಶ್ರೀಲಂಕಾಗೆ ಕಳಿಸಿಕೊಟ್ಟ ಸಂದರ್ಭದಲ್ಲಿ ಸುಧೀರ್ ಕೂಡ ಅಲ್ಲಿಗೆ ಹೋಗಿದ್ದರು. 1990 ರಲ್ಲಿ ಅಲ್ಲಿಂದ ವಾಪಾಸಾದ ನಂತರ ಅಲ್ಲಿನ ಜಂಗಲ್ ವಾರ್ ಗಳಲ್ಲಿ ಸುಧೀರ್ ತೋರಿದ ನೈಪುಣ್ಯದಿಂದಾಗಿ 9 ಪ್ಯಾರಾಚೂಟ್ ಕಮಾಂಡೋ ಪಡೆಗೆ ಅವರನ್ನು ವರ್ಗಾಯಿಸಲಾಯಿತು.
    ಸಮುದ್ರ ಮಟ್ಟದಿಂದ 6300 ಮೀಟರ್ ಎತ್ತರದಲ್ಲಿದ್ದ ಜಗತ್ತಿನ ಅತ್ಯಂತ ಎತ್ತರದ ರಣಭೂಮಿ ಸಿಯಾಚಿನ್ ನಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ್ದ ಸುಧೀರ್ ರನ್ನು ವಿಶೇಷ ತರಬೇತಿಗಾಗಿ ಅಮೇರಿಕಾಗೆ ಕಳುಹಿಸಲಾಯಿತು. ಅಲ್ಲಿಂದ ಹಿಂತಿರುಗಿದ ಬಳಿಕ ಸುಧೀರ್ ರವರನ್ನು ಸೇನಾ ದಂಡನಾಯಕರ ಸಹಾಯಕರನ್ನಾಗಿ ತಾತ್ಕಾಲಿಕ ನೇಮಕ ಮಾಡಲಾಯಿತು. ಆದರೆ ಸಂದರ್ಭದಲ್ಲಿಯೇ ಕಾರ್ಗಿಲ್ ಯುಧ್ಧ ಆರಂಭವಾಗಿತ್ತು. ಸುಧೀರ್ ಗೆ ತಾವು ದೆಹಲಿಯ ಸೇನಾ ಕೇಂದ್ರ ಕಛೇರಿಯಲ್ಲಿದ್ದೆ ಯುಧ್ಧವನ್ನು ವೀಕ್ಷಿಸುವುದು ಸರಿಕಾಣಲಿಲ್ಲ. ತಕ್ಷಣ ತನ್ನ ಮೇಲಾಧಿಕಾರಿಗಳ ಮನವೊಲಿಸಿ ಯುಧ್ಧರಂಗಕ್ಕೆ ಧುಮುಕಿಯೇ ಬಿಟ್ಟರು. ಜುಲೈ 25 1999 ರಂದು ಸುಧೀರ್ ನೇತೃತ್ವ ವಹಿಸಿದ್ದ ಕಮಾಂಡೋ ಪಡೆ 5200 ಮೀಟರ್ ಎತ್ತರದಲ್ಲಿರುವ ಜುಲು ಪರ್ವತ ಶ್ರೇಣಿ ಪ್ರದೇಶದಲ್ಲಿ ದಿಟ್ಟತನದಿಂದ ಕಾದಾಡಿ 13 ಭಯೋತ್ಪಾದಕರನ್ನು ಸದೆಬಡಿಯಿತು, ಅದರೊಂದಿಗೆ ಇಡೀ ಭೂಪ್ರದೇಶ ಭಾರತದ ವಶವಾಯಿತು. ಕಾರ್ಗಿಲ್ ಯುಧ್ಧವೂ ಕೊನೆಗೊಂಡಿತು.
    ಸುಧೀರ್ ರವರ ದಿಟ್ಟ ಹೋರಾಟಕ್ಕೆ ದೇಶದ ಸೈನಿಕರಿಗೆ ಸಲ್ಲುವ ಮೂರನೇ ಅತ್ಯುನ್ನತ ಶೌರ್ಯ ಪ್ರಶಸ್ತಿ ವೀರಚಕ್ರವು ಒಲಿಯಿತು.
    ಕಾರ್ಗಿಲ್ ನಲ್ಲೇನೋ ಭಾರತ ವಿಜಯ ದುಂದುಭಿ ಮೊಳಗಿಸಿತ್ತು, ಆದರೆ ಭಯೋತ್ಪಾದಕರ ಉಪಟಳ ಮಾತ್ರ ಇನ್ನೂ ಮುಂದುವರಿದಿತ್ತು!  1999 ಆಗಸ್ಟ್ 29 ರಂದು ಜಮ್ಮು ಕಾಶ್ಮೀರದ ಹಫುದಾ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಮಾಹಿತಿ ಸಿಕ್ಕಿತು. ಮೇಜರ್ ಸುಧೀರ್ ವಾಲಿಯಾರವರಿದ್ದ ತಂಡಕ್ಕೆ ಉಗ್ರರನ್ನು ಸದೆಬಡಿಯುವಂತೆ ಆದೇಶವೂ ರವಾನೆಯಾಯಿತು. ಮತ್ತೆ ತಡಮಾಡದೆ ಕಾರ್ಯ ಪ್ರವೃಅತ್ತರಾದ ಸುಧೀರ್ ಮತ್ತವರ ತಂಡ ರಾತ್ರಿಯಿಡಿ ದಟ್ಟಾರಣ್ಯವನ್ನು ಜಾಲಾಡಿತು. ಆದರೂ ಉಗ್ರರ ಸುಳಿವು ದೊರೆಯಲಿಲ್ಲ! ಅದೇ ಮಾರನೆ ಬೆಳೆಗ್ಗೆ ಹತ್ತಿರದ ನದಿಯೊಂದರ ದಡದಲ್ಲಿ ಟೂತ್ ಪೇಷ್ಟ್ ನೊರೆಯು ಕಾಣಿಸಿತು. ಉಗ್ರರು ಇಲ್ಲೆ ಎಲ್ಲೋ ಇರುವರೆಂಬ ಅಂಶ ನಿಖರವಾಯಿತು. ಅಷ್ಟರಲ್ಲಿ ಗುಂಡಿನ ಹಾರಾಟವೂ ಆರಂಭವಾಯಿತು. ಒಟ್ಟು ಇಪ್ಪತ್ತು ಜನರಿದ್ದ ಉಗ್ರರ ತಂಡದಲ್ಲಿನ ಒಂಭತ್ತು ಜನರನ್ನು ಮೇಜರ್ ಸುಧೀರ್ ವಾಲಿಯಾ ಏಕಾಂಗಿಯಾಗಿ ಕೊಂದುಹಾಗಿದರು. ಮೂವತ್ತೈದು ನಿಮಿಷದ ಬಳಿಕ ಉಗ್ರರನ್ನು ಸಂಪೂರ್ಣಾವಾಗಿ ನಿರ್ಮೂಲನ ಮಾಡಲಾಯಿತು. ಮಧ್ಯ ಉಗ್ರರು ಹಾರಿಸಿದ ಗುಂಡೊಂದು ಸುಧೀರ್ ವಾಲಿಯಾರವರ ಹೊಟ್ಟೆಯನ್ನು ಸೀಳಿತ್ತು. ತಕ್ಷಣವೇ ಹೆಲಿಕಾಪ್ಟರದ ಮೂಲಕ ಸುಧೀರ್ ರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಾರ್ಗ ಮಧ್ಯದಲ್ಲೆ ಸುಧೀರ್ ರವರ ಪ್ರಾಣಪಕ್ಷಿ ಹಾರಿಹೋಗಿತ್ತು!
ಕಾರ್ಗಿಲ್ ವಿಜಯದ ಸಂಭ್ರಮದ ಕ್ಷಣ 
    2000 ಗಣಾರಾಜ್ಯೋತ್ಸವ ದಿನದಂದು ಶಾಂತಿ ಕಾಲದಲ್ಲಿ ವೀರ ಸೈನಿಕರಿಗಾಗಿ ಕೊಡಮಾಡುವ ಅತ್ಯುನ್ನತ ಗೌರವ ಪ್ರಶಸ್ತಿಯಾದ ಅಶೋಕ ಚಕ್ರವನ್ನು ಮರಣೋತ್ತರವಾಗಿ ಮೇಜರ್ ಸುಧೀರ್ ವಾಲಿಯಾರಿಗೆ ಪ್ರಧಾನಮಾಡಲಾಯಿತು.
    ಹೀಗೆ ಅಸಾಧಾರಣ ಶೌರ್ಯ ಮೆರೆದ ಧೀರ ಮೇಜರ್ ಸುಧೀರ್ ವಾಲಿಯಾರಂತಹಾ ಸುಪುತ್ರನನ್ನು ಪಡೆದ ಭಾರತಾಂಬೆಯೇ ಧನ್ಯ!
   ಸ್ನೇಹಿತರೇ ಕಾರ್ಗಿಲ್ ಕದನದ ಕಥೆ ಇಲ್ಲಿಗೇ ಕೊನೆಯಾಗದು. ಮೇಜರ್ ಸುಧೀರ್ ವಾಲಿಯಾ ಮಾತ್ರವಲ್ಲ ಅವರಂತೆ ತಮ್ಮ ಪ್ರಾಣವನ್ನೇ ಕೊಟ್ಟು ನಮ್ಮ-ನಿಮ್ಮನ್ನು ಕಾಪಾಡಿದ ಲೆ. ಸೌರಭ್ ಕಾಲಿಯಾ, ಕ್ಯಾ. ವಿಕ್ರಮ್ ಭಾತ್ರಾ, ಯೋಗೀಂದ್ರ ಸಿಂಗ್, ಸಂಜಯ್ ಕುಮಾರ್, ಮೇಜರ್ ಪದ್ಮಪಾಣಿ ಆಚಾರ್ಯ, ಲೆ. ಬಲ್ವಾನ್ ಸಿಂಗ್, ಮೇಜರ್ ಸರವಣಾನ್, ಲೆ. ಕಣಾದ್ ಭಟ್ಟಾಚಾರ್ಯ, ಕ್ಯಾ. ಸಜು ಚೇರಿಯನ್, ಲೆ. ಕೈಸಿಂಗ್ ಕ್ಲಿಫರ್ಡ್ ಸಂಗ್ರಾಮ್, ಕ್ಯಾ. ಜೆರ್ರಿ ಪ್ರೇಮರಾಜ್, ಮೇಜರ್ ಸೋನಮ್ ವಾಂಗ್ ಚುಕ್, ಕ್ಯಾ. ವಿಜಯ್ ಥಾಪರ್, ರಾಜಶ್ರೀ ಗುಪ್ತಾ....... ಪಟ್ಟಿ ಹೀಗೇ ಬೆಳೆಯುತ್ತಾ ಹೋಗುತ್ತದೆ. ಇವರೆಲ್ಲರದೂ ಒಂದೊಂದು ರೋಚಕ ಕಥೆಹಿಮಾಲಯದ ತಪ್ಪಲಿನಲ್ಲಿ ಸುಮಾರು 15 ಡಿಗ್ರಿಯಷ್ಟು ತಾಪಮಾನದಲ್ಲಿ ಮೇ 4 1999 ರಿಂದ ಜುಲೈ 26 1999 ರವರೆಗೆ ನಡೆದ ಕಾರ್ಗಿಲ್ ಕದನದಲ್ಲಿಆಪರೇಷನ್ ವಿಜಯ್ಹೆಸರಿನ ಭಾರತೀಯ ಸೈನಿಕರ ದಿಟ್ಟ ಕಾರ್ಯಾಚರಣೆ ಯಶಸ್ವಿಯಾಗಿತ್ತು.
    ನಮ್ಮ-ನಿಮ್ಮೆಲ್ಲರ ಒಳಿತಿಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡ ಪುಣ್ಯಜೀವಿಗಳನ್ನು ಕಾರ್ಗಿಲ್ ವಿಜಯ ದಿನವಾದ ಇಂದು ನಾವೆಲ್ಲಾ ಹೃಅದಯತುಂಬಿ ಸ್ಮರಿಸಿಕೊಳ್ಳೋಣ್ವಲ್ಲವೆ?
    ಭಾರತದ ನವ ಜವಾನರೇ ನಿಮಗಿದೋ ನಮ್ಮ ಸೆಲ್ಯೂಟ್!
    ಜೈ ಹಿಂದ್!
    ಜೈ ಭಾರತಾಂಬೆ!