Thursday, August 29, 2013

ನಮ್ಮಲ್ಲಿನ ಪೌರಾಣಿಕ ಪಾತ್ರಗಳು

ಸೂರ್ಯ

ಸೂರ್ಯ ಭಗವಾನ್ 
    ಇಂದು ನಾವೆಲ್ಲಾ ದಿನನಿತ್ಯ ಕಾಣುವ ಸೂರ್ಯ ಒದು ಸಾಮಾನ್ಯ ನಕ್ಷತ್ರ ಎಂದು ಹೇಳುತ್ತೇವಾದರೂ ನಮ್ಮ ಹಿರಿಯರು, ಅದರಲ್ಲೂ ಪುರಾಣ ರಚನಾಕಾರರು ಸೂರ್ಯನನ್ನು ಭಗವಾನ್ ಎಂದೇ ಸಂಭೋಧಿಸಿದ್ದಾರೆ. ಹೀಗಾಗಿ ಇಂದೂ ಪುರಾಣಗಳ ಪ್ರಕಾರ ಸೂರ್ಯನು ಕಷ್ಯಪ ಮಹರ್ಷಿ ಮತ್ತು ಅದಿತಿಯರ ಮಗ. ಈ ಕಾರಣಕ್ಕಾಗಿ ಅವನಿಗೆ ಆದಿತ್ಯನೆಂಬ ಹೆಸರು(ಅದಿತಿಯ ಮಗ= ಆದಿತ್ಯ). ಸೂರ್ಯನಿಗೆ ಚಿನ್ನದ ಹೊಳಪಿನಿಂದ ಕೂಡಿದ ಕೂದಲುಗಳಿದ್ದು ಆತನು ದಿನನಿತ್ಯ ತನ್ನ ಏಳು ಕುದುರೆಗಳನ್ನು ಹೊಂದಿರುವ ವಿಜಯೋತ್ಸವದ ರಥದಲ್ಲಿ ದಯಮಾಡಿಸುತ್ತಾನೆ. ಈ ಏಳು ಕುದುರೆಗಳು ಕಾಮನಬಿಲ್ಲಿನ ಏಳು ಬಣ್ಣಗಳಾನ್ನು ಪ್ರತಿನಿಧಿಸುತ್ತವೆ. ಸೂರ್ಯನ ಇನ್ನೊಂದು ಹೆಸರು ವೈವಸ್ವತ. ಇವನಿಗೆ ಮೂವರು ಪತ್ನಿಯರು- ಸರಣ್ಯಾ, ರಾಗ್ಯೀ ಮತ್ತು ಪ್ರಭಾ.
    ಸರಣ್ಯಾಳಿಗೆ ಒಟ್ಟು ಮೂವರು ಮಕ್ಕಳು- ವೈವಸ್ವತ ಮನು(ಇಂದಿನ ಏಳನೇ ಮನು), ಯಮ(ಸಾವಿನ ದೇವತೆ) ಮತ್ತು ಯಮನ ತಂಗಿ ಯಮಿ(ಯಮುನಾನದಿಯ ದೇವತೆ). ಯಮಿಗೆ ಮೂವರು ಮಕ್ಕಳಾದರು- ಅವಳಿ-ಜವಳಿಗಳಾದ ಅಶ್ವಿನಿ ದೇವತೆಗ್ಳು ಹಾಗೂ ಮಾನವರೂಪಿ ಕುದುರೆಯ ಮುಖವನ್ನು ಹೊಂದಿದ ಹಯವದನ(ಈ ಮೂವರ ತಾತ ಸೂರ್ಯ ಭಗವಾನ್). ಮುಂದೊಮ್ಮೆ ಸರಣ್ಯಾಗೆ ಸೂರ್ಯನ ಪ್ರಭೆಯನ್ನು ತಾಳಲಾಗಲಿಲ್ಲ.ಅದಾಗ ಅವಳು ತನ್ನ ನೆರಳಿನಿಂದ ಸ್ಥೂಲವಾದ ಚಾಯಾದೇವಿಯನ್ನು ಸೃಜಿಸಿದಳುಹೀಗೆ ಸೃಷ್ಟಿಯಾದ ಚಾಯಾದೇವಿಗೆ ಸರಣ್ಯಾಳು ತನ್ನ ಗೈರುಹಾಜರಿಯಲ್ಲಿ ಸೂರ್ಯನ ಪತ್ನಿಯಾಗಿ ನಟಿಸುವಂತೆ ಅಪ್ಪಣೆ ಕೊಟ್ಟಳು. ಚಾಯಾದೇವಿ ಇಬ್ಬರು ಗಂಡು ಮಕ್ಕಳ ತಾಯಿಯಾದಳು- ಮನುಗಳಲ್ಲಿ ಎಂಟನೆಯವನಾದ ಸವರ್ಣೀ ಮನು ಹಾಗೂ ಶನಿ(ಶನಿಗ್ರಹದ ದೇವತೆ).
ಕೊನಾರ್ಕದಲ್ಲಿನ ಸೂರ್ಯ ದೇವಾಲಯ 
    ಹೀಗೆ ಸೂರ್ಯನಿಗೆ ಒಟ್ಟು ಐವರು ಮಕ್ಕಳು ಹಾಗೂ ಮೂವರು ಮೊಮ್ಮಕ್ಕಳು.
   ಇಷ್ಟಲ್ಲದೆ ರಾಮಾಯಣದಲ್ಲಿ ರಾಮನಿಗೆ ಸಹಾಯ ಮಾಡುವ ಸುಗ್ರೀವನನ್ನು ಸೂರ್ಯನ ಮಗನೆಂದು ಕರೆಯಲಾಗಿದೆ. ಇನ್ನು ರಾಮಾಯಣದಲ್ಲಿನ ರಾಮನೂ ಸೇರಿದಂತೆ ಅವನ ಪೂರ್ವಜರನ್ನು ಸೂರ್ಯವಂಶಜರೆನ್ನಲಾಗಿದೆ ಅಂತೆಯೇ ಮಹಾಭಾರತದಲ್ಲಿ ಕುಂತಿ ದೂರ್ವಾಸ ಮುನಿಗಳಿಂದ ಪಡೆದ ಮಂತ್ರದ ಪರೀಕ್ಷಾರ್ಥ ಹುಟ್ಟಿದ ಕರ್ಣ ಸೂರ್ಯಪುತ್ರನಾಗಿದ್ದಾನೆ.
.   ಇಂತಹಾ ಸೂರ್ಯ ಭಗವಾನ್ ನಿಗೆ ಭಾರತದಾದ್ಯಂತ ಹಲವಾರು ದೇವಾಲಯಗಳಿದ್ದು ಅದರಲ್ಲಿ ಪ್ರಸಿದ್ದವಾದುದು ಒಡಿಷ್ಯಾದ ಕೊನಾರ್ಕ ಸೂರ್ಯ ದೇವಾಲಯ. ಹಾಗೆಯೇ ಮಕರ ಸಂಕ್ರಾಂತಿಯಂತಹಾ ಹಬ್ಬವೂ ಸೇರಿದಂತೆ ಹಲವಾರು ಹಬ್ಬಗಳಲ್ಲಿ ಭಾರತೀಯರು ಸೂರ್ಯ ದೇವರ ಆರಾಧನೆ ಕೈಗೊಳ್ಳುತ್ತಾರೆ. 

Tuesday, August 27, 2013

ನನ್ನೆಲ್ಲಾ ಆತ್ಮೀಯ ಸ್ನೇಹಿತರಿಗೆ ನಮಸ್ಕಾರ,

ಯದಾಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ।
ಅಭ್ಯುತ್ಥಾನಮಧರ್ಮಸ್ಯ ತದಾSSತ್ಮಾನಂ ಸೃಜಾಮ್ಯಹಮ್ ॥೭॥
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ ।
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ ॥೮॥
ಇಂದು ಶ್ರೀ ಕೃಷ್ಣ ಜನ್ಮಾಷ್ಠಮಿ, ಇಂದಿಗೆ ಕೃಅಷ್ಣಾವತಾರವಾ ಗಿ ಸರಿಯಾಗಿ  ವರುಷಗಳಾದವು. ಈ ಹಿನ್ನೆಲೆಯಲ್ಲಿ ಕೃಷ್ಣನ ಜನ್ಮಸ್ಥಾನ ಮಥುರಾದಲ್ಲಿನ ದೇವಾಲಯವನ್ನೊಮ್ಮೆ ದರ್ಷಿಸೋಣವೆ?




Thursday, August 22, 2013

ಭಾರತೀಯ ನೌಕಾಪಡೆಯ ಬಲವನ್ನು ಕುಗ್ಗಿಸಿದ ಸಿಂಧುರಕ್ಷಕ್ ಸ್ಪೋಟ(Sindhuraksak explosion: Reduced the strength of the Indian Navy)

ಹಿಂದೆ ಸಿಂಧುರಕ್ಷಕ್ ಜಲಾಂತರ್ಗಾಮಿ ಹೀಗಿತ್ತು
    ಭಾರತದ ಜಲಾಂತರ್ಗಾಮಿ ಸಿಂಧುರಕ್ಷಕ್ ಇತ್ತೀಚಿಗಷ್ಟೇ ಸ್ಪೋಟಗೊಳ್ಲುವುದರೊಂದಿಗೆ ಭಾರತೀಯ ನೌಕಾಬಲಕ್ಕೆ ಭಾರೀ ಆಘಾತವನ್ನು ನೀಡಿದೆ. ಭಾರತದಲ್ಲಿ ಸಂಭವಿಸಿದ ಮಹಾ ದುರಂತಗಳಲ್ಲಿ ಒಂದೆಂದು ಪರಿಗಣಿಸಬಹುದಾದ ಈ ದುರಂತದ ಹಿನ್ನೆಲೆಯಲ್ಲಿ ಸಿಂಧುರಕ್ಷಕ್ ಕುರಿತಾಗಿ ಒಂದಷ್ತು ಮಾಹಿತಿಯೊಂದಿಗೆ ಈ ದುರಂತ ಹೇಗೆ ಸಂಭವಿಸಿತು ಎನ್ನುವುದನ್ನು ತಿಳಿಯೋಣವೇ?
    1997 ರಲ್ಲಿ ನೌಕಾಪಡೆಗೆ ಸೇರ್ಪಡೆಗೊಂಡ ಸಿಂಧುರಕ್ಷಕ್ ಜಲಾಂತರ್ಗಾಮಿಯು ನೂರೈವತ್ತು ಮೈಲಿಯ ಆಚಿನ ವೈರಿಯತ್ತ ಕ್ಷಿಪಣಿಯನ್ನು ಚಿಮ್ಮಿಸಬಲ್ಲ ಸಾಮರ್ಥ್ಯ ಹೊಂದಿತ್ತು. ಸುಮಾರು ನಾಲ್ಕುನೂರು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಸಿಧುರಕ್ಷಕ್ ಒಮ್ಮೆ ಗಸ್ತಿಗೆ ಹೊರಟಿತೆಂದರೆ ನಲವತ್ತೈದು ದಿನಗಳವರೆಗೆ ನೀರಿನಲ್ಲಿರುವ ಸಾಮರ್ಥ್ಯವನ್ನು ಹೊಂದಿತ್ತು.
    ಸ್ಪೋಟಿಸಿದ್ದು ಹೇಗೆ?
    ಒಟ್ಟು ಹದಿನೆಂಟು ಮಂದಿ ನುರುತ ತಂಡವಿದ್ದ ಸಿಂಧುರಕ್ಷಕ್ ಸ್ಪೋಟಿಸಿದ್ದು ಹೇಗೆ? ಇದೀಗ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ. ಇದೊಂದು ಆಕಸ್ಮಿಕವೆ? ವಿಧ್ವಂಸಕ ಕೃತ್ಯವೆ? ಎಂಬ ತನಿಖೆಯೂ ಶುರುವಾಗಿದೆ. ಜಲಾಂತರ್ಗಾಮಿ ಕ್ಷಿಪಣಿ ಹಾಗೂ ಟಾರ್ಬೆಡೋ ಸಿಡಿತಲೆಗಳನ್ನು ಸಂಗ್ರಹಿಸಿದ್ದ ಕೋಣೆಯಲ್ಲಿ ಸ್ಪೋಟ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದು ಸ್ಪೋಟದ ಜ್ವಾಲೆ ಕಿತ್ತಳೆ ಬಣ್ಣದಿಂದ ಕೂಡಿರುವುದು ಇದಕ್ಕೆ ಪುಷ್ಟಿನೀಡುವಂತಿದೆ. ಜಲಜನಕದ ಸೋರಿಕೆಯಿಂದ ಈ ಸ್ಪೋಟ ಸಂಭವಿಸಿಲ್ಲವೆನ್ನುವುದು ಪ್ರಾಥಮಿಕ ತನಿಖೆಯಿಂದ ಧೃಢಪಟ್ಟಿದ್ದು ಜಲಾಂತರ್ಗಾಮಿಯಲ್ಲಿದ್ದವರೆಲ್ಲಾ ನಿಪುಣ ತಂತ್ರಜ್ಞರೇ ಆದ ಕಾರಣ ಇದೊಂದು ಆಕಸ್ಮಿಕ ಘಟನೆಯೆಂದೇ ಹಲವರ ವಾದವಾಗಿದೆ. ಸ್ಪೋಟದ ವೇಳೆ ಸಿಂಧುರಕ್ಷಕ್ ನಲ್ಲಿ ಒಟ್ಟು ಹದಿನೆಂಟು ಮಂದಿಯ ತಂಡವಿತ್ತು, ಅದರಲ್ಲಿ ಮೂವರು ಅಧಿಕಾರಿಗಳು, ಮತ್ತೆ ಮೂವರು ಜಲಶಸ್ತ್ರಾಸ್ತ್ರ ನಿಪುಣರು ಮತ್ತುಳಿದಂತೆ ಕಿರಿಯ ಅಧಿಕಾರಿಗಳಾಗಿದ್ದರು. ಇನ್ನೊಂದು ವಾದದ ಪ್ರಕಾರ ಸಾಂದ್ರೀಕೃತ ಆಮ್ಲಜನಕವನ್ನು ಹೊಂದಿದ್ದ ಫ್ಲಾಸ್ಕ್ ಸ್ಪೋಟಗೊಂಡಿರಬಹುದು ಎನ್ನಲಾಗುತ್ತಿದ್ದು ಅದಕ್ಕೆ ತಾಗಿಕೊಂಡಂತಿದ್ದ ಆರು ಕ್ಷಿಪಣಿಗಳು, ಟಾರ್ಪೆಡೋಗಳಿಗೂ ಬೆಂಕಿ ತಗುಲಿರುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ. ಆದರೆ ಇದು ಜಲಜನಕ ಸೋರಿಕೆಯಿಂದಾದ ಸ್ಪೋಟವಲ್ಲವೆನ್ನುವುದನ್ನು ನುರಿತ ತಜ್ಞರ ತಂಡವಿದಾಗಲೇ ಪತ್ತೆಮಾಡಿದೆ. ಸ್ಪೋಟಗೊಂಡ ಸಿಂಧುರಕ್ಷಕ್ ನಲ್ಲಿ ತಲಾ ಎಂಟುನೂರು ಕೆಜಿ ತೂಗುವ ಇನ್ನೂರಾ ನಲವತ್ತು ಲಿಡ್ ಆಸಿಡ್ ಬ್ಯಾಟರಿಗಳಿದ್ದವು, ಅವುಗಳನ್ನು ಚಾರ್ಜ್ ಮಾಡುವ ವೇಳೆಯಲ್ಲಿ ಜಲಜನಕದ ಉತ್ಪಾದನೆ ಗರಿಷ್ಠ ಮಟ್ಟದಲ್ಲಿರುತ್ತದೆ. ಒಂದು ವೇಳೆ ಅದೇ ಸ್ಪೋಟಕ್ಕೆ ಕಾರಣವಾಗಿದ್ದಲ್ಲಿ ಈ ಬ್ಯಾಟರಿಗಳನ್ನು ಚಾರ್ಜ್ ಮಾಡುವ ಪ್ರಕ್ರಿಯೆ ಸ್ಪೋಟಕ್ಕೆ ಎರಡು ದಿನಗಳ ಹಿಂದೆಯೇ ಮುಗಿದಿತ್ತು, ಹೀಗಾಗಿ ಸ್ಪೋಟಕ್ಕೂ, ಇದಕ್ಕೂ ಸಂಬಧವನ್ನು ಕಲ್ಪಿಸಲು ಬರದಾಗಿದೆ. ಇನ್ನು ಇದಾಗಲೇ ಸಾವಿರ ಗಂಟೆಗಳನ್ನು ಸಮುದ್ರದಲ್ಲಿ ಕಳೆದಿರುವ ಸಿಂಶುರಕ್ಷಕ್ ನ್ನು ಅನೇಕ ಬಾರಿ ಪರೀಕ್ಷೆಗೊಳಪಡಿಸಲಾಗಿದ್ದು ಯಾವುದೇ ಬಗೆಯ ತಾಂತ್ರಿಕ ತೊಂದರೆಗಳೂ ಕಂಡುಬಂದಿರಲಿಲ್ಲ. ಇನ್ನು ವಿದ್ವಂಸಕ ಕೃತ್ಯಗಳ ಸಾಧ್ಯತೆಯನ್ನೂ ಅಲ್ಲಗೆಳೆಯಬೇಕಾಗುತ್ತದೆ ಏಕೆಂದರೆ ಅತ್ಯಂತ ಕಟ್ಟೆಚ್ಚರ ವಹಿಸುವ ನೌಕಾಪಡೆಯ ಡಾರ್ಕ್ ಯಾರ್ಡ್ ಒಳನುಗ್ಗಿ ಸ್ಪೋಟ ನಡೆಸುವುದೇನು ಅಷ್ಟೋಂದು ಸುಲಭದ ಕೆಲಸವಲ್ಲ. ಹೀಗೆ ಸ್ಪೋಟಕ್ಕೆ ನಾನಾ ಕಾರಣಗಳನ್ನು ನೀಡಿ ವಿಶ್ಲೇಷಿಸಲಾಗುತ್ತಿದೆಯಾದರೂ ಜಲಾಂತರ್ಗಾಮಿಯ ಅವಶೇಷಗಳ ಪರೀಕ್ಷೆ ನಡೆಸುತ್ತಿರುವ ವಿಧಿ ವಿಜ್ಞಾನ ಪರೀಕ್ಷಾಲಯದ ವರದಿ ಬಂದ ಬಳಿಕವಷ್ಟೇ ನಿಖರ ಕಾರಣವನ್ನು ತಿಳಿಯಬಹುದೆನ್ನುವುದು ಸತ್ಯ.
    ಭಾರತವೂ ಸೇರಿದಂತೆ ವಿಶ್ವದೆಲ್ಲೆಡೆ ಸಂಭವಿಸಿದ ಜಲಾಂತರ್ಗಾಮಿ ದುರಂತಗಳ ಬಗೆಗಿನ ಒಂದು ಇಣುಕುನೋಟ ಇಲ್ಲಿದೆ-
ಸ್ಪೋಟಗೊಂಡು 18 ಮಂದಿಯನ್ನು ಬಲಿಪಡೆದಾಗಿನ ದೃಷ್ಯ
  • Ø  ರಷ್ಯಾದ ಆಸ್ಕರ್ -2 ನೇ ಹಂತದ ಜಲಾಂತರ್ಗಾಮಿ ಕುರ್ ಸ್ಕ್ ಆ.12 2000 ದಂದು ಇಂಧನ ಸೋರಿಕೆಯಿಂದಾಗಿ ಸ್ಪೋಟಗೊಂಡು ಬರೆಂಟ್ಸ್ ಸಮುದ್ರದಲ್ಲಿ ಮುಳುಗಿತ್ತು, 118 ಮಂದಿ ಮೃತಪಟ್ಟಿದ್ದರು.
  • Ø  ದಿನಾಂಕ ಆ. 30 2003 ರಂದು ರಷ್ಯಾದ ಕೆ-159 ಎನ್ನುವ ಜಲಾಂತರ್ಗಾಮಿ ಪೋಲಿಯಾರ್ನಿಯಲ್ಲಿನ ಹಡಗು ಒಡೆಯುವ ಕೇಂದ್ರಕ್ಕೆ ಸಾಗಿಸುತ್ತಿದ್ದಾಗ ಮುಳುಗಡೆಗೊಂಡು ಅದರಲ್ಲಿದ್ದ 10 ಮಂದಿಯಲ್ಲಿ 9 ಜನ ಸಾವಿಗೀಡಾಗಿದ್ದರು.
  • Ø  ಅಮೇರಿಕಾದ ಯು.ಎಸ್.ಎಸ್. ಸ್ಯಾನ್ ಫ್ರಾನ್ಸಿಸ್ಕೋ ಎನ್ನುವ ಜಲಾಂತರ್ಗಾಮಿ ಜನವರಿ 9 2005 ರಂದು ಫೆಸಿಪಿಕ್ ಸಮುದ್ರದಲ್ಲಿ ತಲಸ್ಪರ್ಷಿಸುವುದರ ಮೂಲಕ ದುರಂತಕ್ಕೀಡಾಗಿತ್ತು. ಅದರಲ್ಲಿನ 24 ಸಿಬ್ಬಂದಿಗಳಲ್ಲಿ ಒಬ್ಬ ಮೃತಪಟ್ಟರೆ 23 ಮಂದಿ ಗಾಯಗೊಂಡಿದ್ದರು.
  • Ø  ಸಪ್ಟೆಂಬರ್ 6 2006 ರಂದು ರಷ್ಯಾದ ಸೇಂಟ್ ಡೇನಿಯಲ್ ಆಫ್ ಮಾಸ್ಕೋ ಎನ್ನುವ ಜಲಾಂತರ್ಗಾಮಿಯು ಅಗ್ನಿ ಆಕಸ್ಮಿಕಕ್ಕೀಡಾಗಿ ಅದರಲ್ಲಿನ ಇಬ್ಬರು ಸಿಬ್ಬಂದಿ ಮೃತರಾಗಿದ್ದರು.
  • Ø  ಬ್ರಿಟನ್ ನ ಎಚ್.ಎಮ್.ಎಸ್.ಟೈರ್ ಲೆಸ್ ಎನ್ನುವ ಜಲಾಂತರ್ಗಾಮಿ ಆರ್ಕಟಿಕ್ ನಲ್ಲಿನ ಸಮರಾಭ್ಯಾಸದ ವೇಳೆ ಸ್ಪೋಟಗೊಂಡು ಅದರಲ್ಲಿದ್ದ ಇಬ್ಬರು ಸೈನಿಕರು ಮೃಅತಪಟ್ಟರೆ ಒಬ್ಬರು ಗಾಯಗೊಂಡಿದ್ದರು.
  • Ø  ನವೆಂಬರ್ 8 2008 ರಂದು ರಷ್ತಾ ನಿರ್ಮಿತ ಕೆ-152 ನೆರ್ಪಾ ಹೆಸರಿನ ಜಲಾಂತರ್ಗಾಮಿ ಪರೀಕ್ಷಾರ್ಥ ಸಂಚಾರದ ವೇಳೆ ಅಪಘಾತಕ್ಕೀಡಾಗಿ 20 ಮಂದಿಯನ್ನು ಬಲಿಪಡೆದಿತ್ತು.
  • Ø  ಫೆಬ್ರವರಿ 27 2010 ರಂದು ಭಾರತೀಯ ನೌಕಾಪಡೆಗೆ ಸೇರಿದ ಐ.ಎನ್.ಎಸ್ ಸಿಂಧುರಕ್ಷಕ್ ನ ಬ್ಯಾಟರಿ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡು ಸ್ಪೋಟ ಸಂಭವಿಸಿತ್ತು ಆ ಸಮಯದಲಿ ಅದರಲ್ಲಿದ್ದ ನಾವಿಕನೋರ್ವನು ಸಾವನ್ನಪ್ಪಿ
    ದ್ದನು.
  • Ø  ಯೆಕಾಟರೈನ್ ಬರ್ಗ್ ಹೆಸರಿನ ಜಲಾಂತರ್ಗಾಮಿ ಡಿಸೆಂಬರ್ 30 2011 ರಂದು ಬಂದರಿನಲ್ಲಿ ನಿಲ್ಲಿಸಿದ್ದ ಸಂದರ್ಭ ಬೆಂಕಿಗಾಹುತಿಯಾಗಿತ್ತು. ಅದರಲ್ಲಿ 9 ಮಂದಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು. 

    ಭಾರತ ನೌಕಾಪಡೆಗಳಲ್ಲಿ ಇದುವರೆವಿಗಿರುವ ಜಲಾಂತರ್ಗಾಮಿಗಳ ಒಟ್ಟಾರೆ ಅಂಕಿ ಅಂಶ ಈ ರೀತಿ ಇದೆ-
  • Ø  ಡೀಸೆಲ್ ನಿಂದ ಚಲಿಸಬಲ್ಲ ಜಲಾಂತರ್ಗಾಮಿಗಳು- 13(ಇದರಲ್ಲಿ 11 ಜಲಾಂತರ್ಗಾಮಿಗಳು ಇಪ್ಪತ್ತು ವರ್ಷಕ್ಕೂ ಹಳೆಯವು)
  • Ø  ರಷ್ಯಾ ಮೂಲದ ಒಂಭತ್ತು ಕಿಲೋ ಕ್ಲಾಸ್ ಜಲಾಂತರ್ಗಾಮಿಗಳು- 04
  • Ø  ಜರ್ಮನಿ ಮೂಲದ ಎಚ್.ಡಿ.ಡಬ್ಲ್ಯೂ ಜಲಾಂತರ್ಗಾಮಿಗಳು- 04
  • Ø  ಅಣ್ವಸ್ತ್ರಗಳನ್ನು ಹೊರಬಲ್ಲ ಐ.ಎನ್.ಎಸ್. ಚಕ್ರ ಜಲಾಂತರ್ಗಾಮಿ- 01

ನಮ್ಮಲ್ಲಿನ ಸ್ಥಳ ಪುರಾಣಗಳು(Myths) - 4

    ಫಂಡರಾಪುರ (Phandarapur)
    ಇಂದಿನ ಮಹಾರಾಷ್ಟ್ರದಲ್ಲಿರುವ ಸೊಲ್ಲಾಪುರ ಜಿಲ್ಲೆಯ ಫಂಡರಾಪುರ ಹಿಂದೂಗಳ ಅದರಲ್ಲೂ ಕೃಷ್ಣಭಕ್ತರ ಮೆಚ್ಚಿನ ಯಾತ್ರಾಸ್ಥಳ. ಚಂದ್ರಭಾಗಾ ನದಿದಂಡೆಯ ಮೇಲೆ ನೆಲೆಸಿರುವ ರುಕ್ಮಿಣಿ ಸಮೇತನಾದ ಶ್ರೀ ಕೃಷ್ಣನ ಭವ್ಯ ಮೂರ್ತಿ ಎಂಥವರಲ್ಲಿಯೂ ಭಕ್ತಿಯನ್ನು ಚಿಮ್ಮಿಸುವಂತಹುದು. ಪಾಂಡುರಂಗ, ವಿಠಲ, ವಿಠೋಬಾ ಎಂದೆಲ್ಲಾ ಕರೆಸಿಕೊಳ್ಳುವ ಶ್ರೀಕೃಷ್ಣನ ದರ್ಶನಕ್ಕೆ ದಿನನಿತ್ಯವೂ ಲಕ್ಷಾಂತರ ಮಂದಿ ಪಾದಯಾತ್ರೆಯ ಮೂಲಕ, ವಾಹನಗಳ ಮುಖೇನ ಆಗಮಿಸುತ್ತಾರೆ.
    ಹಿಂದೆಯೂ ಭಕ್ತ ಕುಂಬಾರನಂತಹಾ ಹಲವು ವೈಷ್ಣವ ಸಂತರ ಆರಾದ್ಯದೈವವೆನಿಸಿದ್ದ ವಿಠ್ಠಲ ತನ್ನ ನಿಜ ಭಕ್ತರಿಗೆ ಅತಿ ಸುಲಭದಲ್ಲಿ ಒಲಿವ ದೇವರೆನ್ನಿಸಿದ್ದಾನೆ. ಇದಕ್ಕೆ ದೇವಾಲಯ, ಕ್ಷೇತ್ರದ ಹಿಂದಿರುವ ಪೌರಾಣಿಕ ಹಿನ್ನೆಲೆಯ ಕಥೆಯೊಂದು ಉತ್ತಮ ಉದಾಹರಣೆ.
    ಹಿಂದೊಮ್ಮೆ ದಂಡಿರವನವೆನ್ನುವ ಅರಣ್ಯ ಪ್ರದೇಶದಲ್ಲಿ ವಾಸವಿದ್ದ ಜುನದೇವ ಹಾಗೂ ಸತ್ಯವತಿ ಎನ್ನುವ ದಂಪತಿಗಳಿಗೆ ಮಕ್ಕಳಾಗಿರಲಿಲ್ಲ. ಅದಾಗ ಅವರಿಬ್ಬರೂ ದೇವರ ಮೊರೆಹೋದರು. ಆಗ ಭಗವಂತನ ಕೃಪೆಯಿಂದ ದಂಪತಿಗಳಿಗೆ ಪುತ್ರ ಜನನವಾಗಲು ಅವನಿಗೆ ಪುಂಡರೀಕನೆಂದು ಹೆಸರಿಟ್ಟು ಬೆಳೆಸಿದರು. ಕೆಲ ವರ್ಷಗಳ ಕಾಲ ಮೂವರ ಜೀವನವೂ ಚೆನ್ನಾಗಿ ಸಾಗಿರಲು ಮಗ ಪುಂಡರೀಕನು ಬೆಳೆದು ಪ್ರಾಪ್ತವಯಸ್ಕನಾದನು. ಅದಾಗ ಅವನಿಗೆ ಯೋಗ್ಯ ಕನ್ಯೆಯನ್ನು ನೋಡಿ ವಿವಾಹವನ್ನು ಮಾಡಿ ಅವನ ಮಾತಾ ಪಿತರು ಆಶೀರ್ವದಿಸಿದರು.
    ಆದರೆ ಪುಂಡರೀಕನಿಗೆ ಯಾವಾಗ ಮದುವೆಯಾಯಿತೋ ಅದಾದ ಬಳಿಕ ಅವನು ತಂದೆ ತಾಯಿಯರ ಬಗ್ಗೆ ಬಹಳ ಅಸಡ್ಡೆಯನ್ನು ತಾಳಿದನು, ಅಷ್ಟೇ ಅಲ್ಲ ಹಿರಿಯರಾದ ಅವರಿಗೆ ನಾನಾ ನಮೂಮೆಯ ಕಿರುಕುಳ, ತೊಂದರೆಯನ್ನು ನೀಡಲು ಆರಂಭಿಸಿದನು. ಇದರಿಂದ ಬೇಸತ್ತ ಮಾತಾ ಪಿತರು ತಾವು ಕಾಶಿಗೆ ಹೋಗಿ ಅಲ್ಲೇ ಪ್ರಾಣತ್ಯಾಗ ಮಾಡಲು ನಿರ್ಧರಿಸಿದರು. ಇಲ್ಲಿಗೂ ಅವರ ಕಷ್ಟಗಳು ಕಳೆಯಲಿಲ್ಲ. ತಂದೆ ತಾಯಿಯರ ಕಾಶೀ ಯಾತ್ರೆಯ ಯೋಜನೆಯ ಬಗ್ಗೆ ತಿಳಿದುಕೊಂಡ ಪುಂಡರೀಕ ಮತ್ತಾತನ ಪತ್ನಿ ತಾವೂ ಅವರ ಜೊತೆಗೂಡಿ ಕಾಶಿಗೆ ಬರುವುದಾಗಿ ನಿರ್ಧರಿಸಿದರು. ಹಾಗೆ ಕಾಶಿಗೆ ಹೋಗುವ ಮಾರ್ಗದುದ್ದಕ್ಕೂ ಮತ್ತೆ ಹಿರಿಜೀವಗಳಿಗೆ  ಮಗ-ಸೊಸೆಯರ ತೊಂದರೆ ಮುಂದುವರಿಯಿತು, ಪುಂಡರೀಕ ಮತ್ತವನ ಪತ್ನಿ ತಾವು ಹಾಯಾಗಿ ಕುದುರೆಯ ಮೇಲೆ ಕುಳಿತು ಪಯಣಿಸಿದರೆ ಅವನ ತಂದೆ-ತಾಯಿಯರು ವೃದ್ದಾಪ್ಯದಲ್ಲಿಯೂ ನಡೆದುಕೊಂಡೆ ಸಾಗುತ್ತಿದ್ದರು. ಅದಲ್ಲದೆ ರಾತ್ರಿಯ ವೇಳೆಯಲ್ಲಿ ಮಾರ್ಗಮದ್ಯೆ ತಂಗಲು ವ್ಯವಸ್ಥೆ ಮಾಡಿದಾಗಲೂ ಪುಂಡರೀಕನ ಕುದುರೆಯನ್ನು ಮೇಯಿಸುವುದು, ಅವನಿಗೂ ಅವನ ಪತ್ನಿಗೂ ಆಹಾರವನ್ನು ಬೇಯಿಸುವುದೂ ವೃದ್ದರ ಪಾಲಿಗೆ ಒದಗಿತ್ತು. ಇದೆಲ್ಲವನ್ನೂ ಅವರು ಅದು ಹೇಗೋ ಕಷ್ಟದಿಂದ ಸಹಿಸಿದ್ದರು.
    ಹೀಗಿರಲು ಅದೊಂದು ದಿನ ಅವರೆಲ್ಲರೂ ಕಾಶಿಗೆ ಹೋಗುವ ಮಾರ್ಗದಲ್ಲಿ ಇರುವ ಬಹಳ ಪವಿತ್ರವಾದ ಕುಕ್ಕುಟಸ್ವಾಮಿಗಳ ಆಶ್ರಮವನ್ನು ತಲುಪಿದರು. ವೃದ್ದ ದಂಪತಿಗಳು ತಾವು ಕೆಲಕಾಲ ಅಲ್ಲೆ ನೆಲೆಸಲು ತೀರ್ಮಾನಿಇದರು. ಅಂತಹದರಲ್ಲಿ ಅದೊಂದು ರಾತ್ರಿ ಎಲ್ಲರೂ ಮಲಗಿ ನಿದ್ರಿಸುತ್ತಿರಲು ಅದೇಕೋ ಪುಂಡರೀಕನಿಗೆ ಎಚ್ಚರವಾಯಿತು. ಅದೇ ಸಮಯದಲ್ಲಿ ಒಳ್ಳೆಯ ಬೆಲೆಯುಳ್ಳ ವಸ್ತ್ರಗಳನ್ನುಟ್ಟ, ಸುಂದರವಾದ ಆಭರಣಗಳಿಂದ ಅಲಂಕೃತರಾದ ಇಬ್ಬರು ದೇವಕನ್ನಿಕೆಯರು ಪ್ರವೇಶಿಸಿದರು. ಅವರು ಬಂದವರೇ ಆಶ್ರಮವನ್ನೆಲ್ಲಾ ಸಾರಿಸಿ, ಒರೆಸಿ ಸ್ವಚ್ಚಗೊಳಿಸಿದರು. ಮತ್ತೆ ಅಲ್ಲಿದ್ದ ಸಾಧುಗಳ ಕೊಳೆಯಾದ ಉಡುಪುಗಳನ್ನೆಲ್ಲವನ್ನೂ ಒಗೆದು ಹಾಕಿದರು. ಹೀಗೆ ಎರಡು ಗಂಟೆಗಳಲ್ಲಿ ತಮ್ಮ ಕಾರ್ಯಗಳನ್ನು ಮುಗಿಸಿದ ಅವರು ಬಳಿಕ ಅಲ್ಲಿದ್ದ ಪ್ರಾರ್ಥನಾ ಕೊಠಡಿಗೆ ಹೋಗಿ ತಾವೂ ಶುಭ್ರ ವಸ್ತ್ರಧಾರಿಗಳಾಗಿ ಬಂದು ಆಶ್ರಮದಿಂದ ವಾಪಾಸಾದರು. ಇದೆಲ್ಲವನ್ನೂ ನೋಡುತ್ತಿದ್ದ ಪುಂಡರೀಕನಿಗೆ ತನ್ನ ಕಣ್ಣನ್ನು ತಾನು ನಂಬದಂತಾಯಿತು. ಪುಂಡರೀಕನ ಕುತೂಹಲ ತಡೆಯದಾಯಿತು. ದಿನವೆಲ್ಲಾ ಅವನ ಮನದಲ್ಲಿ ಎರಡು ದೇವಕನ್ಯೆಯರ ಬಗ್ಗೆ ನಾನಾ ಪ್ರಶ್ನೆಗಳೆದ್ದು ಅವನನ್ನು ಬಾಧಿಸಿದವು. ಅಂದು ರಾತ್ರಿಯೇ ಇದಕ್ಕೆಲ್ಲ ಉತ್ತರವನ್ನು ಕಂಡುಕೊಳ್ಳಬೇಕೆಂದು ಆಗಲೇ ಅವನು ನಿರ್ಧರಿಸಿದನಿ. ಅಂತೆಯೇ ರಾತ್ರಿಯಾಗುತ್ತಲೇ ಇಬ್ಬರು ದೇವಕನ್ಯೆಯರ ಬರವಿಗಾಗಿ ಕಾದು ಕುಳಿತನು. ಅಂತೂ ಸಮಯವೂ ಬಂದಿತು. ಪುಂಡರೀಕನಿಗೆ ಕುತೂಹಲವನ್ನು ಹೆಚ್ಚು ಸಮಯ ತಡೆದಿಡಲಾಗದೆ ಒಬ್ಬ ಸುಂದರಿಯೊಂದಿಗೆ ಕೇಳಿದನು-ನೀವು ಯಾರು? ಇಲ್ಲಿಗೇಕೆ ಬಂದಿರುವಿರಿ? ಆಗ ದೇವಕನ್ಯೆಯು ಪ್ರತಿಕ್ರಯಿಸಿ- ನಾವು ದೇವ ನದಿಗಳಾದ ಗಂಗಾ ಮತ್ತು ಯಮುನೆಯರು, ನಮ್ಮಲ್ಲಿಗೆ ಬರುವ ಲಕ್ಷಾಂತರ ಭಕ್ತರ ಪಾಪವನ್ನು ನಾವು ತೊಳೆಯುತ್ತೇವೆ ಅದರ ಕಲ್ಮಷದ ಸೊಂಕು ನಮಗೂ ತಗುಲಿ ನಾವೂ ಮಲಿನರಾಗುತ್ತೇವೆ, ಮಲಿನತೆಯನ್ನು ತೊಳೆದುಕೊಳ್ಳಲು ನಾವಿಲ್ಲ್ ಬಂದು ಪುಣ್ಯಜೀವಿಗಳ ಬಟ್ಟೆ ಬರೆಗಳನ್ನು ತೊಳೆದು ಅವರು ವಾಸಿಸುವ ಆಶ್ರಮವನ್ನು ಶುಚಿಯಾಗಿಸಿ ಹೋಗುತ್ತೇವೆ, ಹೀಗೆ ಹಿರಿಯರ ಸೇವೆ ಮಾಡುವುದರಿಂದ ನಮ್ಮಲ್ಲಿ ಅಂಟಿದ್ದ ಅಲ್ಪ ಪಾಪಗಳೂ ಇನ್ನಿಲ್ಲದಂತಾಗುತ್ತವೆ.ಎಂದಳು. ಹಾಗೆ ಅವಳು ಮುಂದುವರಿದು ಹೀಗೆಂದಳು- ಎಲೈ ಪುಂಡರೀಕ ನೀನು ಮಾತ್ರ ನಿನ್ನ ತಂದೆ-ತಾಯಿಯರಿಗೆ ಕೊಡಬಾರದ ತೊಂದರೆಗಳನ್ನು ಕೊಡುತ್ತಿರುವೆ, ಮುಖೇನ ನಿನ್ನ ಪಾಪದ ಕೊಡವನ್ನು ತುಂಬಿಸಿಕೊಳ್ಳುತ್ತಿರುವೆಯಲ್ಲ? ಇದಾಗ ಪುಂಡರೀಕನಿಗೆ ಇನ್ನಿಲ್ಲದ ಆಘಾತ, ವಿಸ್ಮಯಗಳಾಯಿತು. ತಾನು ಎಂತಹಾ ಮಹಾ ತಪ್ಪನ್ನೆಸಗುತ್ತಿದ್ದೇನೆನ್ನುವ ಅರಿವಾಯಿತು. ಅಂದಿನಿಂದ ಪುಂಡರೀಕ ತನ್ನ ತಂದೆ-ತಾಯಿಯರನ್ನು ದೇವರೆಂದು ಕಾಣಲು ಆರಂಭಿಇದನು. ಅವರಿಗೆ ಎಲ್ಲ ಬಗೆಯ ಅರೈಕೆಯನ್ನು ಮಾಡಲು ಮುಂದಾದನು.
    ಭಕ್ತಿಯು ಅದಾವ ರೂಪದಲ್ಲಿದ್ದರೂ ಭಗವಂತನನ್ನು ತಲುಪುತ್ತದೆ. ಅಂತೆಯೇ ಪುಂಡರೀಕನಲ್ಲಿನ ಮಾತಾ ಪಿತೃ ಸೇವೆಯಲ್ಲಿನ ಭಕ್ತಿ, ಶ್ರದ್ದೆಗಳು ವೈಕುಂಠದಲ್ಲಿದ್ದ ಮಹಾವಿಷ್ಣುವನ್ನು ತಲುಪಿತು. ಅದೇ ತಕ್ಷಣ ವಿಷ್ಣುವು ವೈಕುಂಠದಿಂದ ಹೊರಟು ಪುಂಡರೀಕನಿದ್ದ ಆಶ್ರಮಕ್ಕೆ ಬಂದನು. ಹಾಗೆ ಬಂದ ಮಹಾವಿಷ್ಣು ಪುಂಡರೀಕನ ಆಶ್ರಮದ ದ್ವಾರವನ್ನು ತಟ್ಟಿದನು. ಅದಾಗ ತನ್ನ ತಂದೆ ತಾಯಿಯರಿಗಾಗಿ ಊಟ ತಯಾರಿಸುವಲ್ಲಿ ತನ್ಮಯನಾಗಿದ್ದ ಪುಂಡರೀಕ ತನ್ನ ಆಶ್ರಮದ ಬಾಗಿಲಲ್ಲಿ ಮಹಾವಿಷ್ಣುವು ಬಂದಿರುವುದನ್ನು ಗುರುತಿಸಿದನು, ಆದರೂ ತಾನು ಮಾಡುತ್ತಿರುವ ಕೆಲಸ ಪೂರ್ಣವಾಗುವವರೆಗೆ ಕಡೆ ಗಮನ ಕೊಡಲಿಲ್ಲ, ಬದಲಾಗಿ ತಾನು ತನ್ನ ತಂದೆ ತಾಯಿಯರ ಸೇವೆಯನ್ನು ಪೂರ್ತಿಗೊಳಿಸುವವರೆಗೂ ಬಂದ ಅತಿಥಿ ಅಲ್ಲೇ ಹೊರಗೆ ನಿಂತಿರಲೆಂದು ಒಂದು ಇಟ್ಟಿಗೆಯನ್ನು ಅತ್ತ ಎಸೆಯುತ್ತಾನೆ. ಇದನ್ನು ಕಂಡ ಮಹಾವಿಷ್ಣುವೂ ಅತ್ಯಂತ ಆಶ್ಚರ್ಯ ಹೊಂದುತ್ತಾನೆ. ಆದರೆ ಪುಂಡರೀಕನಲ್ಲಿ ಮಾತಾ ಪಿತರ ಬಗ್ಗೆ ಇದ್ದ ನಿಜಭಕ್ತಿಗೆ ಮೆಚ್ಚಿದ ವಿಷ್ಣು ಪುಂಡರೀಕ ತಾನಾಗಿ ಬರುವವರೆಗೂ ಕಾದು ನಿಲ್ಲುತ್ತಾತೆ. ತಂತೆ ತಾಯಿಯರ ಸೇವೆ ಪೂರೈಸಿದ ಬಳಿಕ ಬಂದಂತಹಾ ಪುಂಡರೀಕನಿಗೆ ವಿಷ್ಣು ಏನಾದರೂ ವರವನ್ನು ಕೇಳಲು ಸಲಹೆ ಮಾಡುತ್ತಾನೆ, ಆಗ ಪುಂಡರೀಕ ನೀನು ಪುನಃ ಭೂಮಿಯಲ್ಲಿಯೇ ನೆಲೆಸಿ ನನ್ನಂತಹಾ ಸಾವಿರಾರು ನಿಜಭಕ್ತರಿಗೆ ಅನುಗ್ರಹಿಸಬೇಕು ಎಂದು ಬೇಡುತ್ತಾನೆ. ಇದಕ್ಕೆ ಮೆಚ್ಚಿ ಒಪ್ಪಿಗೆ ಸೂಚಿಸಿದ ಮಹಾವಿಷ್ಣು ಫಂಡರಾಪುರದಲ್ಲಿ ರುಕ್ಮಿಣಿ ಸಮೇತನಾಗಿ ವಿಠ್ಠಲ ಎನ್ನುವ ಹೆಸರನ್ನು ಹೊತ್ತು ನೆಲೆಸುತ್ತಾನೆ.
    ಮುಂದೆ ಅಲ್ಲೆ ವಿಠ್ಠಲ ದೇವಾಲಯ ನಿರ್ಮಾಣವಾಗುತ್ತದೆ. ಲಕ್ಷಾಂತರ ಭಕ್ತರ ಕೋರಿಕೆಯನ್ನು ಈಡೆರಿಸುತ್ತಾ ಸಾಕ್ಷಾತ್ ಶ್ರೀಕೃಷ್ಣ ಸ್ವರೂಪಿಯಾದ ವಿಷ್ಣು ಇಂದಿಗೂ ನಮ್ಮೆಲ್ಲರನ್ನೂ ಹರಸುತ್ತಿದ್ದಾನೆ