Tuesday, March 22, 2022

ನಮ್ಮಲ್ಲಿನ ಸ್ಥಳ ಪುರಾಣಗಳು (Myths) -113

 

ಕಟೀಲು(Kateel)

ಕರ್ನಾಟಕ ಕರಾವಳಿಯ ಪ್ರಸಿದ್ದ ಯಾತ್ರಾಸ್ಥಳಗಳ ಪೈಕಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಸಹ ಒಂದಾಗಿದೆ. . ನಂದಿನಿ ನದಿಯ ದಂಡೆಯ ಮೇಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ದಕ್ಷಿಣ ಕನ್ನಡ ಜಿಲ್ಲೆಯ ಮುಖ ದೇವಸ್ಥಾನಗಳಲ್ಲೊಂದು. ದೇವಾಲಯದಲ್ಲಿ ಕೇವಲ ಪೂಜೆ ಪುನಸ್ಕಾರಗಳಲ್ಲದೆ ವಿದ್ಯಾದಾನ ಮತ್ತು ಅನ್ನದಾನಗಳ ಮೂಲಕ ಸಮಾಜೋನ್ನತಿಗೆ ಸೇವೆಗಳೂ ನಡೆಯುತ್ತದೆ. ಈ ದೇವಾಲಯವು ನಂದಿನಿ ಎಂಬ ಒಂದು ಪುಟ್ಟ ನದಿಯ ಮಧ್ಯದಲ್ಲಿರುವ ಒಂದು ಸಣ್ಣ ದ್ವೀಪದಲ್ಲಿ ನೆಲೆಗೊಂಡಿದೆ. ಪ್ರತಿ ವರ್ಷವೂ ಸಾವಿರಾರು ಯಾತ್ರಿಕರು ಇಲ್ಲಿಗೆ ತಾಯಿ ದುರ್ಗಾ ಪರಮೇಶ್ವರಿಯ ದರ್ಶನಕ್ಕಾಗಿ ಭೇಟಿ ನೀಡುತ್ತಾರೆ. ಈ ದೇವಾಲಯವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿದೆ. ದೇವಸ್ಥಾನವು ಅನೇಕ ಬಗೆಯ ಕಲೆಗಳಿಗೆ ಆಶ್ರಯವನ್ನು, ಪ್ರೋತ್ಸಾಹವನ್ನು ನೀಡುತ್ತಿದೆ. ಆವುಗಳಲ್ಲಿ ಮುಖ್ಯವಾದ್ದು ಯಕ್ಷಗಾನ. 6 ಯಕ್ಷಗಾನ ಮೇಳಗಳು ಸೇವಾರೂಪದಲ್ಲಿ ಯಕ್ಷಗಾನ ಬಯಲಾಟವನ್ನು ನಡೆಸಿಕೊಡುತ್ತವೆ. ವಿಶೇಷ ದಿನಗಳಂದು ಇಲ್ಲಿ ಚಂಡಿಕಾ ಹೋಮ, ತುಲಾಭಾರ, ವೇದ ಪಾರಾಯಣ, ಹರಿಕಥೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿ ಜರುಗುತ್ತದೆ.

ಕಟೀಲು ಶ್ರೀ ದುರ್ಗಾಪರಮೇಶ್ವರಿ(ಫೋಟೋ ಕೃಪೆ: Kateel Sri Durgaparameshwari Temple Facebook page)
ದೇವರಿಗೆ ನಡೆಯುವ ಸೇವೆಗಳಲ್ಲಿ ಹೂ ಪೂಜೆಯೂ ಒಂದು. ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಮಲ್ಲಿಗೆ ಹೂವಿನ ಅಲಂಕಾರ ಅಂದರೆ ಬಹಳ ಇಷ್ಟ. ವರ್ಷಕ್ಕೆ ಐದು ಲಕ್ಷಕ್ಕೂ ಹೆಚ್ಚಿನ ಸೇವೆಗಳು ನಡೆಯುತ್ತವೆ. ಹೂಪ್ರಶ್ನೆ ಪ್ರತಿನಿತ್ಯ ಮಧ್ಯಾಹ್ನ 12.25ರಿಂದ 12.30 ಹಾಗೂ ರಾತ್ರಿ 7.15ರಿಂದ 8.30ರವರೆಗೆ ನಡೆಯುತ್ತದೆ. ಯಾವುದೇ ಒಂದು ಕೆಲಸವನ್ನು ಮಾಡುವ ವಿಚಾರದಲ್ಲಿಪ್ರಯತ್ನಿಸಬಹುದೇ ಅಥವಾ ಬೇಡವೇ ಎನ್ನುವ ಕುರಿತು ದೇವಿಯಿಂದ ಆದೇಶ ಪಡೆದುಕೊಳ್ಳುವುದೇ ಹೂಪ್ರಶ್ನೆ. ಶ್ರೀಕ್ಷೇತ್ರದ ಆರಾಧ್ಯಮೂರ್ತಿ ಶ್ರೀ ದುರ್ಗಾಪರಮೇಶ್ವರಿಯ ಆವಿರ್ಭಾವಕ್ಕೆ ಕಾರಣಳಾದ ನಂದಿನಿಯ ಮೂಲ ಸ್ವರೂಪವೇ ಗೋಮಾತೆ. ಈ ಕಾರಣದಿಂದ ಶ್ರೀಕ್ಷೇತ್ರವು ಎರಡು ಗೋಶಾಲೆಗಳನ್ನು ನಡೆಸುತ್ತಿದೆ. ನಂದಿನಿ ಗೋಸೇವೆಗಾಗಿ ಆಸಕ್ತ ಭಕ್ತರಿಗೂ ಅವಕಾಶ ಕಲ್ಪಿಸಿದೆ.

***

ನಂದಿನಿ ನದಿಯ ಕಥೆ:



ಜಾಬಾಲಿ ಮಹರ್ಷಿಯು ಲೋಕ ಕಲ್ಯಾಣಕ್ಕಾಗಿ ತಪಸ್ಸು ಮಾಡಿ ದೇವಲೋಕಕ್ಕೆ ತೆರಳಿದ್ದರು. ಕಾಮಧೇನುವನ್ನು ತಂದು ಲೋಕದ ಸಮಸ್ಯೆ ನೀಗಿಸುವ ಆಲೋಚನೆ ಅವರದ್ದಾಗಿತ್ತು. ಕಾಮಧೇನು ಇಲ್ಲದ ಹೊತ್ತಿನಲ್ಲಿ ಭೂಮಿಗೆ ಬರುವಂತೆ ನಂದಿನಿಯನ್ನು ಅವರು ಪರಿಪರಿಯಾಗಿ ಬೇಡುತ್ತಾರೆ. ಆದರೆ ನಂದಿನಿಯು ಭೂಲೋಕದ ಜನರನ್ನು ದೂಷಿಸಿ ಭೂಮಿಗೆ ಬರುವುದಿಲ್ಲ ಎಂದು ಖಡಾ ಖಂಡಿತವಾಗಿ ಹೇಳುತ್ತಾಳೆ. ಕುಪಿತನಾದ ಮುನಿವರ್ಯ ಭೂಲೋಕದಲ್ಲಿ ಹುಟ್ಟುವಂತೆ ಶಪಿಸುತ್ತಾನೆ. ಮುಂದೆ ದೇವಿಯೇ ಸಾಂತ್ವನ ಮಾಡಿ ಭೂಮಿಯಲ್ಲಿ ನದಿಯಾಗಿ ಹರಿಯುವಂತೆ ಹರಸುತ್ತಾಳೆ.

ರಾಕ್ಷಸ ವೀರ ಅರುಣಾಸುರನನ್ನು ದೇವಿ ದುಂಬಿಯ ರೂಪದಲ್ಲಿ ಸಂಹಾರ ಮಾಡುತ್ತಾಳೆ. ಹಾಗಾಗಿ ಆಕೆಯನ್ನು ಶಾಂತಗೊಳಿಸಲು ಸೀಯಾಳಭಿಷೇಕ ಅಂದು ಮಾಡಿದ್ದರು ಇಂದೂ ಮಾಡುತ್ತಾ ಬರುತ್ತಿದ್ದಾರೆ.

***

ನಂದಿನಿ ನದಿ ಅವತರಣ ದಿನ

ಹೀಗೊಂದು ಕಲ್ಪನೆಯೇ ಎಷ್ಟೊಂದು ಚೆಂದ!ನದೀ ನಂದಿನೀಯ ಅವತರಣ ದಿನ ಅಥವಾ ಇಳೆಯಲ್ಲಿ ಆಕೆ ಜನ್ಮ ತಾಳಿದ ದಿನ!

ಇದು ಪುರಾಣ ಕಥೆಭೂಮಿಯಲ್ಲಿ ಹನ್ನೆರಡು ವರುಷಗಳ ಭೀಕರ ಬರಗಾಲ. ಎಲ್ಲೆಲ್ಲಿಯೂ ಜನರ ಹಾಹಾಕಾರ. ಇದರಿಮದ ನೊಂದ ಮುನಿ ಜಾಬಾಲಿ ಯಜ್ಞ ಮಾಡಬೇಕೆಂದು ಯೋಚಿಸಿ, ಕಾಮಧೇನುವನ್ನು ಕರೆತರಲು ದೇವಲೋಕಕ್ಕೆ ಹೋದನು. ಮುನಿ ಜಾಬಾಲಿಯ ವಿನಂತಿಗೆ ಸ್ಪಂದಿಸಿದ ಸುರಪಾಲ, ಕಾಮಧೇನುವು ವರುಣಲೋಕಕ್ಕೆ ಯಜ್ಞಕ್ಕಾಗಿ ಹೋಗಿರುವಳೆಂದೂ, ಆಕೆಯ ಮಗಳಾದ ನಂದಿನೀಯನ್ನು ಕಳುಹಿಕೊಡುವುನೆಂದೂ ಹೇಳಿದನು. ಅದರಂತೆ ನಂದಿನೀಯನ್ನು ಕರೆದು, ‘ಭೂಲೋಕಕ್ಕೆ ಹೋಗಿ ಜನರ ಕಷ್ಟವನ್ನು ಹೋಗಲಾಡಿಸು’ ಎಂದನು. ನಂದಿನಿಯಾದರೋ ಅಜ್ಞಾನಕ್ಕೊಳಗಾಗಿ ಸ್ವಾರ್ಥ ಪ್ರಪಂಚಕ್ಕೆ ಬರಲಾರೆನೆಂದು ಹೇಳಿ ಮಾನವಲೋಕವನ್ನು ನಿಂದಿಸಿದಳು. ಒಡನೆ ಕೋಪಗೊಂಡ ಮುನಿ, ಭೂಮಿಯಲ್ಲಿ ನದಿಯಾಗಿ ಜನ್ಮ ತಾಳು ಎಂದು ಶಪಿಸಿದನು. ತಪ್ಪನ್ನರಿತ ನಂದಿನಿ ಮುನಿಯನ್ನು ಯಾಚಿಸಲು, ಕರುಣಾರ್ದ್ರ ಹೃದಯನಾಗಿ, ಆದಿಮಾಯೆಯನ್ನು ಸ್ತುತಿಸು. ಅವಳೇ ನಿನಗೆ ವಿಶಾಪದ ದಾರಿಯನ್ನು ತೋರುವಳು ಎಂದನು.ನಂದಿನೀ ಅನನ್ಯ ಭಕ್ತಿಯಿಂದ ಸ್ತುತಿಸಲಾಗಿ ಜಗಜ್ಜನನೀ ಪ್ರತ್ಯಕ್ಷಳಾದಳು; ಮಗಳೇ ದುಃಖಿಸದಿರು, ನಿನ್ನ ಮಾತೆಯಾದ ನಾನು ನಿನ್ನ ಮಗಳಾಗಿ ಜನಿಸುವೆನು ಎಂದು ಅಭಯವಿತ್ತಳು.ಕೂಡಲೇ ನಂದಿನಿಯು ಮಾಘ ಶುದ್ಧ ಪೂರ್ಣಿಮಾ ದಿನದಂದು ಕಾಂಚನಗಿರಿಯಲ್ಲಿ(ಕನಕಗಿರಿ) ನದಿಯಾಗಿ ಹುಟ್ಟಿ ಹರಿದು ಪಡುಗಡಲನ್ನು ಸೇರುವಳು.ಅರುಣಾಸುರನನ್ನು ಭ್ರಮರ ರೂಪ ತಾಳಿ ವಧಿಸಿದ ಜಗನ್ಮಾತೆಯನ್ನು ಸುರರು ಹೂಮಳೆಗೈದು ಸ್ತುತಿಸಿದರು. ದೇವೇಂದ್ರನು ಕಲ್ಪವೃಕ್ಷದ ಫಲವನ್ನು ತಂದು ಅಭಿಷೇಕಗೈದನು. ಆಗ ಪ್ರಸನ್ನಳಾದ ಜಗನ್ಮಾಥೆ ದುಷ್ಟನ ಖಡ್ಗಾಘಾತದಿಂದಲೂ, ದುರ್ಜನರ ರಕ್ತಪಾತದಿಂದಲೂ ಈ ಸ್ಥಳವು ಅಪವಿತ್ರವಾಗಿದೆ. ಆದುದರಿಂದ ಇದೇ ನಂದಿನೀ ನದಿ ಮಧ್ಯದಲ್ಲೇ ಪ್ರಸನ್ನಳಾಗುವಳೆಂದು ಅಭಯವನ್ನಿತ್ತು, ಲಿಂಗಕ್ಯಳಾದಳು.

೪೦ಕಿಲೋ ಮೀಟರ್…ಈಗಿನ ಮಿಜಾರುವಿನ ಕನಕಬೆಟ್ಟುವಿನ ನಾಗಬನವೊಂದರ ಸಮೀಪ ಪುಟ್ಟ ಕಾಡಮಧ್ಯೆ ನೀರ ಒಸರು ಕಾಣುತ್ತದೆ. ಇಲ್ಲೇ ನಂದಿನಿ ಉಗಮವಾದದ್ದು ಎನ್ನುತ್ತಾರೆ ಸ್ಥಳೀಯರು. ಅಲ್ಲಿಂದ ದೊಡ್ಡದಾಗುತ್ತ ಮುಚ್ಚಾರು, ಮಚ್ಚಾರು, ಕಟೀಲು, ಎಕ್ಕಾರು, ಶಿಬರೂರು, ಚೇಳಾರು, ಪಾವಂಜೆಗಳ ಮೂಲಕ ಹಾದು ಸಸಿಹಿತ್ಲು, ಚಿತ್ರಾಪಿನಲ್ಲಿ ಶಾಂಭವಿ ನದಿಯೊಂದಿಗೆ ಕಡಲನ್ನ ಸೇರುತ್ತದೆ. ಒಂದು ಲೆಕ್ಕಾಚಾರದ ಪ್ರಕಾರ ಕಟೀಲಿನಿಂದ ಹದಿನಾರು ಮೈಲು ದೂರದಲ್ಲಿ ಹುಟ್ಟಿ ಹದಿನಾರು ಮೈಲುಗಳ ಬಳಿಕ ಸಮುದ್ರ ಸೇರುತ್ತದೆ. ಅಂದರೆ ನದಿಯ ಉದ್ದ ಮೂವತ್ತೆರಡು ಮೈಲುಗಳು. ಸಣ್ಣ ನೀರಾವರಿ ಇಲಾಖೆಯ ಮಾಹಿತಿಯಂತೆ ನಂದಿನೀಯ ಉದ್ದ ೪೦ಕಿಲೋ ಮೀಟರ್. ಜಲಾನಯನ ಇಲಾಖೆಯ ಪ್ರಕಾರ ನದಿಯ ಜಲಾಯನದ ವ್ಯಾಪ್ತಿ ೯೧೧೨ ಹೆಕ್ಟೇರ್ ಪ್ರದೇಶ.ಮುಚ್ಚೂರು, ಮೂಡುಪೆರಾರ, ಬಡಗ ಎಡಪದವು, ಪೆರ್ಮುದೆ, ಎಕ್ಕಾರು, ಮೆನ್ನಬೆಟ್ಟು, ಬಜಪೆ, ಸೂರಿಂಜೆ, ಚೇಳಾಯರು ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯ ಹದಿನೈದರಷ್ಟು ಗ್ರಾಮಗಳ ವ್ಯಾಪ್ತಿಯಲ್ಲಿ ಈ ನದಿ ಹರಿದು ಹೋಗುತ್ತದೆ.ನದಿಗೆ ಕನಕಬೆಟ್ಟು, ಪಿಜಿನಬೆಟ್ಟು, ಒಂಟಿಮಾರು, ಗುಂಡಾವು, ನೀರ್ ಕೆರೆ, ಮುಚ್ಚೂರು ಕಾನ, ಕಾಯರ್‌ಮುಗೇರ್, ಮುಚ್ಚೂರು ಕೊಂಠಿಕಟ್ಟ, ಮಚ್ಚಾರು, ನಿಡ್ಡೋಡಿ, ಅಜಾರು ಜಲಕದ ಕಟ್ಟೆ, ಕಟೀಲು, ಪರಕಟ್ಟ, ಎಕ್ಕಾರು ಕಂಬಳಪದವು, ಶಿಬರೂರು, ಪುಚ್ಚಾಡಿ, ಸೂರಿಂಜೆ, ಚೇಳಾಯರುಗಳಲ್ಲಿ ರೈತರು ಕಟ್ಟಿದ ಕಟ್ಟಗಳು, ಇಲಾಖೆಗಳು ಕಟ್ಟಿದ ಕಿಂಡಿ ಅಣೆಕಟ್ಟು, ಉಪ್ಪು ನೀರು ತಡೆಯುವ ಅಣೆಕಟ್ಟುಗಳಿವೆ. ಒಂದೂವರೆ ಸಾವಿರ ಎಕರೆಗಳಿಗಿಂತಲೂ ಹೆಚ್ಚು ಕೃಷಿ ಭೂಮಿಗಳಿಗೆ ಈ ಕಟ್ಟಗಳು ನೀರಾಶ್ರಯ ನೀಡುತ್ತವೆ.

ದೇಗುಲಗಳನ್ನು ಹಾಡುಮಿಜಾರು ವಿಷ್ಣುಮೂರ್ತಿ, ಕಾಂಬೆಟ್ಟು ಸೋಮನಾಥೇಶ್ವರ, ಮುಚ್ಚೂರು ದುರ್ಗಾಪರಮೇಶ್ವರೀ, ಕಟೀಲು ದುರ್ಗಾಪರಮೇಶ್ವರೀ, ನಂದಬೆಟ್ಟು ಆಲಡೆ, ಸುರಗಿರಿ ಮಹಾಲಿಂಗೇಶ್ವರ, ಅತ್ತೂರು ಬೈಲು ಮಹಾಗಣಪತಿ ಮಂದಿರ, ಎಕ್ಕಾರು, ಶಿಬರೂರು ಕೊಡಮಣಿತ್ತಾಯ ದೈವಸ್ಥಾನಗಳು, ಪಾವಂಜೆ ಮಹಾಲಿಂಗೇಶ್ವರ, ಸಸಿಹಿತ್ಲು ಸಾರಂತಾಯ ಗರಡಿ, ಹೊಯಿಗೆಗುಡ್ಡೆ ಉಮಾಮಹೇಶ್ವರ ದೇವಸ್ಥಾನಗಳು ಸೇರಿದಂತೆ ಅನೇಕ ನಾಗಬನಗಳು, ದೈವ, ದೇವಸ್ಥಾನಗಳು ಈ ನದಿಯ ತಟದಲ್ಲಿವೆ.

ಕಟೀಲು ನಂದಿನಿ ನದಿ

***

ಹಿಂದೆ ಶುಂಭ ಮತ್ತು ನಿಶುಂಭರೆಂಬ ರಾಕ್ಷಸರನ್ನು ದುರ್ಗೆಯು ಸಂಹರಿಸಿದ ಕಾಲದಲ್ಲಿ, ಅವರ ಮಂತ್ರಿಗಳಲ್ಲಿ ಒಬ್ಬನಾದ ಅರುಣಾಸುರನು ಯುದ್ಧಭೂಮಿಯಿಂದ ಓಡಿಹೋಗಿ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದನು. ಕಾಲಕ್ರಮೇಣ ಅವನು ರಾಕ್ಷಸರ ನಾಯಕನಾಗಿ, ಋಷಿಮುನಿಗಳ ತಪಸ್ಸು, ಯಾಗ, ಯಜ್ಞ ಮುಂತಾದವುಗಳಿಗೆ ವಿಘ್ನವನ್ನೊಡ್ಡತೊಡಗಿದನು. ಇದರಿಂದ ಋಷಿಮುನಿಗಳು ಯಾಗ ನಡೆಸದಂತಾದಾಗ ಕುಪಿತಗೊಂಡ ದೇವತೆಗಳು ಭೂಮಿಗೆ ಮಳೆ ಸುರಿಯುವುದನ್ನು ನಿಲ್ಲಿಸಿಬಿಟ್ಟರು. ಇದರಿಂದಾಗಿ ಭೂಮಿಯಲ್ಲಿ ಭೀಕರ ಕ್ಷಾಮ ತಲೆದೋರಿತು. ಎಲ್ಲೆಡೆಯೂ ನೀರು, ಆಹಾರಗಳ ಅಭಾವ ತಲೆದೋರಿತು. ಜನರ ದಾರುಣ ಸ್ಥಿತಿಯಿಂದ ವಿಚಲಿತರಾದ ಜಾಬಾಲಿ ಮಹರ್ಷಿಗಳು, ದೇವತೆಗಳನ್ನು ತೃಪ್ತಿಗೊಳಿಸಿ ತನ್ಮೂಲಕ ಮಳೆ ಸುರಿಯುವಂತೆ ಮಾಡಲು ಒಂದು ಯಜ್ಞವನ್ನು ನಡೆಸಲು ನಿಶ್ಚಯಿಸಿದರು. ಅದಕ್ಕಾಗಿ ಅವರು ದೇವಲೋಕಕ್ಕೆ ತೆರಳಿ ಯಜ್ಞಕ್ಕೆ ಸಹಾಯಕವಾಗುವಂತೆ ಕಾಮಧೇನುವನ್ನು ತಮ್ಮೊಡನೆ ಕಳುಹಿಸಿ ಕೊಡಲು ದೇವೇಂದ್ರನಲ್ಲಿ ವಿನಂತಿಸಿದರು. ಆದರೆ ಕಾಮಧೇನುವು ವರುಣ ಲೋಕಕ್ಕೆ ತೆರಳಿದ್ದರಿಂದ ಅವಳ ಬದಲಿಗೆ ಅವಳ ಮಗಳಾದ ನಂದಿನಿಯನ್ನು ಉದ್ದೇಶಿತ ಯಜ್ಞಕ್ಕೆ ಹೋಮಧೇನುವನ್ನಾಗಿ ಕರೆದೊಯ್ಯಲು ದೇವೇಂದ್ರನು ಅನುಮತಿಸಿದನು. ಅದಕ್ಕಾಗಿ ಮಹರ್ಷಿಗಳು ನಂದಿನಿಯ ಬಳಿಗೆ ತೆರಳಿ ತಮ್ಮೊಡನೆ ಬರುವಂತೆ ವಿನಂತಿಸಿದಾಗ ಅವಳು ಭೂಲೋಕವನ್ನು ಹಾಗೂ ಭೂಲೋಕದ ಜನರನ್ನು ನಿಂದಿಸಿ, ಮಹರ್ಷಿಗಳೊಡನೆ ಬರಲು ನಿರಾಕರಿಸಿದಳು. ಇದರಿಂದ ಮನನೊಂದ ಮಹರ್ಷಿಗಳು ಭೂಲೋಕದಲ್ಲಿ ನದಿಯಾಗಿ ಹರಿಯುವಂತೆ ನಂದಿನಿಯನ್ನು ಶಪಿಸಿದರು. ನಂದಿನಿಯು ಕ್ಷಮಿಸುವಂತೆ ಪ್ರಾರ್ಥಿಸಿದಾಗ ಕರುಣಾಪೂರ್ಣರಾದ ಮಹರ್ಷಿಗಳು ಶಾಪವಿಮೋಚನೆಗಾಗಿ ಆದಿಶಕ್ತಿಯನ್ನು ಪ್ರಾರ್ಥಿಸುವಂತೆ ಸೂಚಿಸಿದರು. ಅದರಂತೆಯೇ ನಂದಿನಿಯು ನಡೆದುಕೊಂಡಾಗ ಪ್ರತ್ಯಕ್ಷಳಾದ ಆದಿಶಕ್ತಿಯು ಋಷಿವಾಕ್ಯವನ್ನು ಸುಳ್ಳಾಗಿಸುವುದು ಅಸಾಧ್ಯವಾದ್ದರಿಂದ ನಂದಿನಿಯು ನದಿಯಾಗಿ ಹರಿಯಲೇಬೇಕೆಂದೂ, ಮುಂದೆ ತಾನೇ ಅವಳ ಮಗಳಾಗಿ ಜನಿಸಿ ಶಾಪದಿಂದ ಮುಕ್ತಿಯನ್ನು ಕೊಡುವುದಾಗಿಯೂ ಅಭಯವನ್ನಿತ್ತಳು. ಇದರಿಂದ ಸಮಾಧಾನಗೊಂಡ ನಂದಿನಿಯು ಮಾಘ ಶುಧ್ಧ ಪೂರ್ಣಿಮೆಯಂದು ಕನಕಗಿರಿಯಿಂದ ನದಿಯಾಗಿ ಹರಿದಳು. ಇದರಿಂದ ಭೂಮಿಯು ಮತ್ತೆ ಹಸುರಿನಿಂದ ಕಂಗೊಳಿಸಲಾರಂಭಿಸಿತು.

ಇತ್ತ ಅರುಣಾಸುರನು ಬ್ರಹ್ಮನನ್ನು ಕುರಿತು ತಪಸ್ಸನ್ನಾಚರಿಸಿ ತನಗೆ ತ್ರಿಮೂರ್ತಿಗಳಿಂದಾಗಲೀ, ದೇವತೆಗಳಿಂದಾಗಲೀ, ಪುರುಷರಿಂದ ಅಥವಾ ಸ್ತ್ರೀಯರಿಂದಲಾಗಲೀ, ಚತುಷ್ಪದಿಗಳಿಂದಲಾಗಲೀ, ಷಟ್ಪದಿಗಳಿಂದಲಾಗಲೀ ಮರಣ ಬಾರದಂತೆ ವರವನ್ನು ಪಡೆದಿದ್ದನು. ಸರಸ್ವತೀ ದೇವಿಯೂ ಕೂಡ ಅವನಿಗೆ ಗಾಯತ್ರೀ ಮಂತ್ರವನ್ನುಪದೇಶಿಸಿ ಅನುಗ್ರಹಿಸಿದ್ದಳು. ಇವೆಲ್ಲವುಗಳಿಂದ ಅತ್ಯಂತ ಬಲಿಷ್ಠನಾದ ಅವನು ದೇವಲೋಕಕ್ಕೆ ಆಕ್ರಮಣ ನಡೆಸಿ ಅದನ್ನು ತನ್ನ ವಶಪಡಿಸಿಕೊಂಡನು. ತಮ್ಮ ನೆಲೆಯನ್ನು ಕಳೆದುಕೊಂಡ ದೇವತೆಗಳು ತ್ರಿಮೂರ್ತಿಗಳ ಜೊತೆಗೂಡಿ ಸ್ವರ್ಗವನ್ನು ಮರಳಿ ವಶಪಡಿಸಿ ಕೊಡುವಂತೆ ಆದಿಶಕ್ತಿಯನ್ನು ಮೊರೆಹೊಕ್ಕರು. ಆಗ ದೇವಿಯು, ಅರುಣಾಸುರನು ಗಾಯತ್ರೀ ಮಂತ್ರವನ್ನು ಉಪಾಸಿಸುವಷ್ಟು ಸಮಯ ತನಗೂ ಅವನನ್ನು ವಧಿಸುವುದು ಅಸಾಧ್ಯವೆಂದು ಹೇಳಿ, ದೇವಗುರು ಬೃಹಸ್ಪತಿಗಳ ಸಹಾಯದಿಂದ ಅವನನ್ನು ಗಾಯತ್ರೀ ಮಂತ್ರಪಠಣದಿಂದ ವಿಮುಖನನ್ನಾಗಿ ಮಾಡುವಂತೆ ತಿಳಿಸಿದಳು. ಅದರಂತೆಯೇ ಅರುಣಾಸುರನಲ್ಲಿಗೆ ತೆರಳಿದ ಬೃಹಸ್ಪತಿಗಳು ಅವನನ್ನು ಉಪಾಯದಿಂದ ಗಾಯತ್ರೀ ಮಂತ್ರದಿಂದ ವಿಮುಖನನ್ನಾಗಿಸಿದರು. ಇದರಿಂದ ಅರುಣಾಸುರನು ತಾನು ದೇವರಿಂದಲೂ ದೊಡ್ಡವನೆಂದು ಭಾವಿಸಲಾರಂಭಿಸಿದನು. ಋಷಿ ಮುನಿಗಳ ಯಜ್ಞವನ್ನು ಹಾಳುಗೆಡವಿ, ಎಲ್ಲರೂ ತನ್ನನ್ನೇ ಆರಾಧಿಸಬೇಕೆಂದು ಆಜ್ಞೆ ವಿಧಿಸಿದನು(ಆದೇಶಿಸಿದನು). ಅವನ ಅಟ್ಟಹಾಸ ಮಿತಿಮೀರಿದಾಗ ದೇವತೆಗಳಿಗೆ ಇತ್ತ ಮಾತಿನಂತೆ ದೇವಿಯು ಮೋಹಿನಿಯ ರೂಪವನ್ನು ತಾಳಿ ಅರುಣಾಸುರನ ಉದ್ಯಾನದಲ್ಲಿ ಸುತ್ತಾಡಲಾರಂಭಿಸಿದಳು. ಅರುಣಾಸುರನ ಮಂತ್ರಿಗಳಾದ ಚಂಡ ಪ್ರಚಂಡರು ಅವಳನ್ನು ನೋಡಿ, ಅರುಣಾಸುರನಿಗೆ ಅವಳ ಸೌಂದರ್ಯದ ಬಗ್ಗೆ ತಿಳಿಸಿದರು. ಅರುಣಾಸುರನು ಅವಳನ್ನು ಮದುವೆಯಾಗಲು ಉದ್ದೇಶಿಸಿ ಅವಳ ಬಳಿಗೆ ತೆರಳಿದನು. ತನ್ನ ಒಡೆಯರಾಗಿದ್ದ ಶುಂಭ ನಿಶುಂಭರನ್ನು ವಧಿಸಿದವಳು ಅವಳೇ ಎಂದು ತಿಳಿದು ಅವಳ ಮೇಲೆ ದಾಳಿ ಮಾಡಿದನು. ಆಗ ದೇವಿಯು ಅಲ್ಲಿಯೇ ಸಮೀಪದಲ್ಲಿದ್ದ ಬಂಡೆಯೊಂದರಲ್ಲಿ ಅಂತರ್ಧಾನಳಾದಳು. ಅರುಣಾಸುರನು ಕೋಪದಿಂದ ಆ ಬಂಡೆಯನ್ನು ತನ್ನ ಖಡ್ಗದಿಂದ ಒಡೆಯಲು ಅದರಿಂದ ಸಾವಿರಾರು ಸಂಖ್ಯೆಯಲ್ಲಿ ಹೊರಟ ದುಂಬಿಗಳು ಅವನನ್ನು ಕಚ್ಚಲಾರಂಭಿಸಿದವು. ದೇವಿಯು ಒಂದು ದೊಡ್ಡದಾದ ದುಂಬಿ (ಭ್ರಮರ) ಯ ರೂಪವನ್ನು ತಾಳಿ ಅರುಣಾಸುರನನ್ನು ಕಚ್ಚಿ ಕೊಂದಳು. ಭ್ರಮರದ ರೂಪವನ್ನು ತಾಳಿದ್ದರಿಂದ ಭ್ರಾಮರಿ ಎಂದು ಪ್ರಖ್ಯಾತಿಯನ್ನು ಪಡೆದಳು. ದೇವತೆಗಳು, ಜಾಬಾಲಿ ಮಹರ್ಷಿಗಳು ದೇವಲೋಕದ ಕಲ್ಪವೃಕ್ಷದಿಂದ ತಂದ ಎಳನೀರಿನಿಂದ ರೌದ್ರ ರೂಪದಲ್ಲಿದ್ದ ದೇವಿಗೆ ಅಭಿಷೇಕವನ್ನು ಮಾಡಿ ಶಾಂತರೂಪವನ್ನು ಹೊಂದುವಂತೆ ಪ್ರಾರ್ಥಿಸಿದರು. ಅದರಂತೆಯೇ ದೇವಿಯು ನಂದಿನಿ ನದಿಯ ಮಧ್ಯದಲ್ಲಿದ್ದ ಒಂದು ಪುಟ್ಟ ದ್ವೀಪದಲ್ಲಿ ಲಿಂಗ ರೂಪದಲ್ಲಿ ದುರ್ಗಾ ಪರಮೇಶ್ವರೀ ಎಂಬ ಹೆಸರಿನಿಂದ ಉದ್ಭವಿಸಿದಳು. ಇದರಿಂದ ನಂದಿನಿಯ ಶಾಪ ವಿಮೋಚನೆಯಾಯಿತು. ನಂದಿನಿಯ ಕಟಿ (ಸೊಂಟ/ನಡು) ಭಾಗದಲ್ಲಿರುವ ಇಳೆ (ಭೂಮಿ) ಯಲ್ಲಿ ದೇವಿಯು ಉದ್ಭವಿಸಿದ ಕಾರಣ ಆ ಕ್ಷೇತ್ರಕ್ಕೆ ಕಟೀಲು ಎಂಬ ಹೆಸರಾಯಿತು.

ಆಧಾರ: ವಿವಿಧ ಜಾಲತಾಣಗಳು

ಮಾರ್ಕಂಡೇಯ ಪುರಾಣಾಂತರ್ಗತ-ದೇವಿ ಮಹಾತ್ಮೆ (ಸಪ್ತಶತೀ)

ದೇವೀ ಭಾಗವತ

ಸ್ಕಾಂದ ಪುರಾಣಾಂತರ್ಗತ ಸಹ್ಯಾದ್ರಿಖಂಡ

ಸೋದೆಮಠದಿಂದ ಪ್ರಕಾಶಿತ ನಿರ್ಜರಾರಣ್ಯ ಮಹಾತ್ಮ್ಯ (1927)

Tuesday, March 08, 2022

ರಷ್ಯಾ-ಉಕ್ರೇನ್ ಕದನ: ಮಾನವ ಹಕ್ಕು ಹೋರಾಟಗಾರರು ಎಲ್ಲಿ ಅಡಗಿ ಕುಳಿತಿದ್ದಾರೆ?

 ಯುದ್ಧ …

ಕಳೆದ ಒಂದು ವಾರದಿಂದ ಭಾರತ ಸೇರಿ ಜಗತ್ತಿನ ನಾನಾ ರಾಷ್ಟ್ರಗಳ ಜನರಲ್ಲಿ ಆತಂಕ, ದುಗುಡಕ್ಕೆ ಕಾರಣವಾಗಿರುವುದು ರಷ್ಯಾ-ಉಕ್ರೇನ್ ಯುದ್ಧ.  ಉಕ್ರೇನ್ ನ್ಯಾಟೋ ರಾಷ್ಟ್ರಗಳ ಜತೆ ಕೈಜೋಡಿಸಲಿದೆ, ಯುರೋಪಿಯನ್ ಯೂನಿಯನ್ ಜತೆಯಾಗಿ ತನ್ನ ಕಮ್ಯುನಿಸ್ಟ್ ಸಿದ್ಧಾಂತ ಆಧಾರಿತ ವ್ಯವಸ್ಥೆಯ ಪ್ರಭಾವದಿಂದ ದೂರವಾಗಲಿದೆ ಎಂಬ ಕಾರಣದಿಂದ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದೆ.  ರಷ್ಯಾ ಕಳುಹಿಸಿದ ಯುದ್ಧ ವಾಹನಗಳ ಮೇಲೆ *Z* ಸಂಕೇತವನ್ನು ರಷ್ಯಾ ಸೂಚಿಸಿದ್ದು, ಇದರ ಸೂಚನೆ ಎಂದರೆ 8  ಗಣರಾಜ್ಯಗಳನ್ನು ರಷ್ಯಾಕ್ಕೆ ಸೇರಿಸುವ ಮೂಲಕ ರಷ್ಯಾವನ್ನು ವಿಸ್ತರಿಸುವ ದೂರ ದೃಷ್ಠಿ ಹಾಗೂ ಮುಂದಾಲೋಚನೆ ಈ ಸೇನಾ ಕಾರ್ಯಾಚರಣೆಯ ಹಿಂದಿದೆ ಎನ್ನಲಾಗುತ್ತಿದೆ. ಎಂದರೆ ಇದರ ಪರಿಣಾಮ ಭವಿಷ್ಯದಲ್ಲಿ ಜಗತ್ತಿನ ಭೂಪಟವನ್ನೇ ಬದಲಾಯಿಸಲಿದೆ, ಕೆಲವೊಂದು ರಾಷ್ಟ್ರಗಳನ್ನು ಪ್ರಪಂಚದ ನಕಾಶೆಯಿಂದಲೇ ಅಳಿಸಿ ಹಾಕಲಾಗುತ್ತದೆ!

ಆದರೆ ಇದೀಗ ನಮ್ಮ ಮುಂದಿರುವ ಪ್ರಶ್ನೆ ಎಂದರೆ ಜಗತ್ತಿನಲ್ಲಿ ಶಾಂತಿ ನೆಲೆಗೊಳಿಸಿ ಎಲ್ಲವೂ ಸುಗಮವಾಗಿ ನಡೆಯುವಂತೆ  ನೋಡಿಕೊಳ್ಳುವ ಜವಾಬ್ದಾರಿಯೊಂದಿಗೆ ಹುಟ್ಟಿಕೊಂಡ ವಿಶ್ವಸಂಸ್ಥೆ ರಷ್ಯಾ-ಉಕ್ರೇನ್ ಯುದ್ಧ ವಿಷಯದಲ್ಲಿ ಏಕೆ ಗಟ್ಟಿ ನಿರ್ಧಾರವನ್ನು ತಾಳದೆ ಹೋಗಿದೆ?  ಹೌದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಕ್ರೇನ್-ರಷ್ಯಾ ಯುದ್ಧದ ವಿರುದ್ಧ ನಿರ್ಣಯ ತೆಗೆದುಕೊಳ್ಳಲಾಗಿದೆ.  ಉಕ್ರೇನ್‌ ವಿರುದ್ಧದ ಸೇನಾ ಕಾರ್ಯಾಚರಣೆಯನ್ನು ರಷ್ಯಾ ತಕ್ಷಣವೇ ನಿಲ್ಲಿಸಬೇಕೆಂದು ಆಗ್ರಹಿಸಿ ವಿಶ್ವಸಂಸ್ಥೆ ಕೈಗೊಂಡ ನಿರ್ಣಯದ ಪರ ಒಂದು ಡಜನ್‌ಗೂ ಹೆಚ್ಚು ದೇಶಗಳ ರಾಯಭಾರಿಗಳು ದನಿ ಎತ್ತಿದ್ದಾರೆ. ಐದು ದಿನಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ಉಕ್ರೇನ್‌ ಅಪಾರ ನಷ್ಟ ಅನುಭವಿಸಿದೆ. ಸಾವಿರಾರು ಅಮಾಯಕ ಜೀವಗಳು ಹಾರಿ ಹೋಗಿವೆ. “ಈ ಅನಾಹುತ ಇಲ್ಲಿಗೆ ಕೊನೆಗೊಳಿಸಿ. ಮನುಷ್ಯತ್ವದ ಕಡೆ ಹೆಜ್ಜೆ ಹಾಕಿ” ಎಂದು ವಿಶ್ವಸಂಸ್ಥೆ ಸಲಹೆ ನೀಡಿದೆ. ಅದರೆ ರಷ್ಯಾದಂತಹಾ ಬಲಿಷ್ಟ, ವಿಸ್ತರಣಾದಾಹ್ಹಿ, ಕಮ್ಯುನಿಸ್ಟ್ ಸಿದ್ದಾಂತದ ಪ್ರತಿಪಾದಕ ರಾಷ್ಟ್ರವೊಂದಕ್ಕೆ ಇಂತಹಾ ಕೇವಲ ಸಲಹೆ ಸೂಚನೆಗಳು ಸಾಕಾಗುತ್ತದೆಯೆ? ಒಂದೊಮ್ಮೆ ಈ ಯುದ್ಧದಲ್ಲಿ ಉಕ್ರೇನ್ ಸೋಲೊಪ್ಪಿದ್ದಾದರೆ ಭವಿಷ್ಯದಲ್ಲಿ ನ್ಯಾಟೋ ರಾಷ್ಟ್ರಗಳೂ ಸಹ ರಷ್ಯಾವನ್ನು ಎದುರಿಸಲಾರವು. ಅಲ್ಲದೆ ವಿಶ್ವಸಂಸ್ಥೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯವೂ ಇದೆ. ಒಟ್ತಾರೆ ಜಗತ್ತಿನ ಯಾವುದೇ ರಾಷ್ಟ್ರ ರಷ್ಯಾವನ್ನು ಮುಖಾಮುಖಿಯಾಗಿ ಎದುರಿಸಲು ವಿಫಲವಾಗಲಿದೆ.

ಇದಷ್ಟೇ ಅಲ್ಲದೆ ಜಗತ್ತಿನಾದ್ಯಂತ ಇರುವ ಮಾನವ ಹಕ್ಕು ಹೋರಾಟ(ಹಾರಾಟ)ಗಾರರು, ಬುದ್ದಿಜೀವಿಗಳು ರಷ್ಯಾ-ಉಕ್ರೇನ್ ನಡುವಿನ ಈ ಯುದ್ಧದ ಬಗ್ಗೆ ಏಕೆ ಯಾವ ಹೇಳಿಕೆಯನ್ನು ನೀಡುತ್ತಿಲ್ಲ? ಪ್ರತಿಭಟನೆ ನಡೆಸುತ್ತಿಲ್ಲ? ಭಾರತದಂತಹಾ ಸರ್ವಮತ ಸಹಬಾಳ್ವೆ ಇರುವ ದೇಶದಲ್ಲಿ ಅದೆಲ್ಲೋ ಒಂದು ಗುಂಪು ಹತ್ಯೆ ನಡೆದಿದೆ, ಇನ್ನೆಲ್ಲೋ ಗುಂಪುಗಳ ನಡುವೆ ಸಂಘರ್ಷ ನಡೆದಿದೆ ಎನ್ನುವ ಕಾರಣಕ್ಕೆ ಮಾನವ ಹಕ್ಕು ಉಲ್ಲಂಘನೆ, ಭಾರತದಲ್ಲಿ ಯಾವುದೂ ಸರಿಯಿಲ್ಲ ಎಂದು ಬೊಬ್ಬಿಡುವ ಜಗತ್ತಿನ ಪ್ರಚಂಡ ಮಾನವ ಹಕ್ಕು ಪ್ರತಿಪಾದಕರು ಇಂದು ಎಲ್ಲಿ ಹೋಗಿದ್ದಾರೆ? ರಷ್ಯಾ ಉಕ್ರೇನ್ ನ ಹಲವಾರು ಸೈನಿಕರನ್ನು ಮಾತ್ರವಲ್ಲದೆ ಅಮಾಯಕ ನಾಗರಿಕರ ಮೇಲೆ ಸಹ ದಾಳಿ ಮಾಡುತ್ತಿದೆ. ಈ ದಾಳಿಯ ನಡುವೆ ಕರ್ನಾಟಕದ ಹಾವೇರಿಯ ವೈದ್ಯ ವಿದ್ಯಾರ್ಥಿ ನವೀನ್ ಎನ್ನುವವ ಸಹ ದುರಂತ ಸಾವಿಗೆ ಈಡಾಗಿದ್ದಾನೆ. ಇಷ್ಟೆಲ್ಲಾ ಘಟಸುತ್ತಿದ್ದರೂ ಬುದ್ದಿಜೀವಿಗಳೆನಿಸಿಕೊಂಡವರು ಯಾರೂ ರಷ್ಯಾ ನಡೆಯನ್ನು ಟೀಕಿಸುವ ಮಾತನಾಡುತ್ತಿಲ್ಲ ಏಕೆ? ಕೇವಲ ನರೇಂದ್ರ ಮೋದಿ, ಕೇಂದ್ರ ಸರ್ಕಾರ ಮಾತ್ರ ಈ ಬಗ್ಗೆ ಪ್ರತಿಕ್ರಿಯಿಸಬೇಕಿದೆಯೆ?

ಕಳೆದ ವರ್ಷಗಳಲ್ಲಿ “ಟೂಲ್ ಕಿಟ್” ಮೂಲಕ ಭಾರತದಲ್ಲಿ ಅಸಮಾನತೆ ಇದೆ, ಅಸಹಿಷ್ಣುತೆ, ಮಾನವ ಹಕ್ಕು ಉಲ್ಲಂಘನೆ ಸತತ ಆಗುತ್ತಿದೆ ಎನ್ನುತ್ತಿದ್ದ ಜಾಗತಿಕ ಹೋರಾಟಗಾರ್ತಿಯರಾರೂ ಇದೀಗ ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ತುಟಿ ಪಿಟಿಕೆನ್ನುತ್ತಿಲ್ಲ.  ಇದಷ್ಟೇ ಅಲ್ಲ ಕಳೆದ ತಿಂಗಳಲ್ಲಿ ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಕುರಿತು ವಿವಾದ ಏರ್ಪಟ್ಟ ಸಮಯದಲ್ಲಿ ಅಮೆರಿಕಾ, ಪಾಕಿಸ್ತಾನ ಸೇರಿ ಜಗತ್ತಿನ ನಾನಾ ರಾಷ್ಟ್ರಗಳ ನಾಯಕರು ಅಲ್ಲದೇ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮಲಾಲಾಳಂತಹಾ ವ್ಯಕ್ತಿಗಳು ಭಾರತದಲ್ಲಿ ಪರಿಸ್ಥಿತಿ “ಭಯಂಕರವಾಗಿದೆ” ಅಂತ ಅಂದಿದ್ದರು. ಆದರೆ ಇದೀಗ ಅವರಾರೂ ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ಹಾಗೂ ಅದರಿಂದಾಗುತ್ತಿರುವ ಜೀವಹಾನಿ ಬಗ್ಗೆ ಪ್ರತಿಕ್ರಿಯೆ ನೀಡುತ್ತಿಲ್ಲ.

ಇದೆಲ್ಲದರಿಂದ ತಿಳಿದುಬರುತ್ತಿರುವುದೇನೆಂದರೆ ವಿಶ್ವದ ಬಲಾಡ್ಯ ರಾಷ್ಟ್ರಗಳು ತಾವೇನು ಮಾಡಿದರೂ ಅದೆಲ್ಲವೂ ಸರಿಯಾಗಿಯೇ ಇರುತ್ತದೆ. ಆದರೆ ಭಾರತದಂತ ಕೆಲವು ರಾಷ್ಟ್ರಗಳು ಮಾತ್ರ ಅವರ ಅಣತಿಯ ಪ್ರಕಾರವೇ ನಡೆಯಬೇಕು!  ಉದಾಹರಣೆಗಾಗಿ ಹೇಳುವುದಾದರೆ ರಷ್ಯಾ-ಉಕ್ರೇನ್ ಮೇಲೆ ದಾಳಿ ನಡೆಸಿದ್ದಂತೆ ಭಾರತವೇನಾದರೂ ಪಾಕಿಸ್ತಾನದ ಕರಾಚಿ, ಲಾಹೋರ್ ಮೇಲೆ ದಾಳಿ ನಡೆಸಿದ್ದರೆ ಆಗ  ಅಮೆರಿಕಾ ಸೇರಿ ಜಾಗತಿಕ ಶಕ್ತಿಗಳು ಹೀಗೆಯೇ ಸುಮ್ಮನೆ ಕುಳಿತಿರುತ್ತಿದ್ದವೆ?  ಖಂಡಿತಾ ಇಲ್ಲ. ಭಾರತದ ವಿರುದ್ಧ ವಿಷ ಕಾರುತ್ತಿದ್ದವು.

ಇನ್ನು ಇಂದಿನ ಯುದ್ಧ ಪರಿಸ್ಥಿತಿಯಲ್ಲಿ ಭಾರತ ತಟಸ್ಥ ಧೋರಣೆ ತಾಳಿದೆ. ಇದಕ್ಕೆ ಕಾರಣ ಕೂಡ ಇದೆ. ರಷ್ಯಾ ನಮ್ಮ ಅನಾದಿ ಕಾಲದ ಮಿತ್ರರಾಷ್ಟ್ರ.  ಅಂತಹಾ ದೇಶದ ವಿರುದ್ಧ ನಿಲುವು ತೆಗೆದುಕೊಳ್ಳುವುದು ಅಷ್ಟೇನೂ ಸುಲಭವಲ್ಲ. ಇನ್ನೊಂದು ಸಂಗತಿ ಎಂದರೆ ಭಾರತಕ್ಕೆ ಅಮೆರಿಕಾ ಸಹ ಮಿತ್ರರಾಷ್ಟ್ರವೇ ಆಗಿದ್ದರೂ ಅಮೆರಿಕಾದ ಭಾರತ ಪರ  ನಿಲುವು ಎಲ್ಲಾ ಕಾಲದಲ್ಲಿ ಏಕಪ್ರಕಾರವಾಗಿ ಇರುವುದಿಲ್ಲ.  ಹಾಗಾಗಿ ಇಂದು ಅಮೆರಿಕಾ ಮಾತುಕೇಳಿ ರಷ್ಯಾ ವಿರುದ್ಧ ಹೋದರೆ ನಾವು ಒಬ್ಬ ಆಪ್ತಮಿತ್ರನನ್ನೇ ಕಳೆದುಕೊಳ್ಳುತ್ತೇವೆ.  ಹಾಗೆಂದ ಮಾತ್ರಕ್ಕೆ ರಷ್ಯಾ ನಡೆಸಿರುವ ಈ ಯುದ್ಧಕ್ಕೆ ಭಾರತದ ಸಮ್ಮತಿ ಇದೆ ಎಂದೂ ಅರ್ಥವಲ್ಲ. ಭಾರತ ಪ್ರಧಾನಿ ರಷ್ಯಾ ಅಧ್ಯಕ್ಷ ಪುಟಿನ್ ಗೆ ಪದೇ ಪದೇ ಕರೆ ಮಾಡಿ ಯುದ್ಧ ನಿಲ್ಲಿಸುವ ಮನವಿ ಮಾಡುತ್ತಿದ್ದಾರೆ. ಅಲ್ಲದೆ ಉಕ್ರೇನ್‌ ನಲ್ಲಿ ಸಿಲುಕಿದ್ದ ನಮ್ಮ ದೇಶವಾಸಿಗಳನ್ನು ಮರಳಿ ಕರೆತರುತ್ತಿದ್ದಾರೆ.  ಆದರೆ ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸುವಂತೆ ರಷ್ಯಾ ಮೇಲೆ ಭಾರತ ಒತ್ತಡ ಹಾಕುವುದು ಸಾಧ್ಯವಿಲ್ಲ. ಮತ್ತು ವಿಶ್ವಸಂಸ್ಥೆಯಲ್ಲಿಯೂ ಸಹ ಯುದ್ಧದ ವಿರುದ್ಧ ಮತ ಚಲಾವಣೆ ಅಸಾಧ್ಯ. ಏಕೆಂದರೆ ರಷ್ಯಾದಂತೆ ಉಕ್ರೇನ್ ನಮಗೆ ಹಳೇ ಮಿತ್ರನಲ್ಲ. ಇದೀಗ ತನ್ನ ಮೇಲೆ ರಷ್ಯಾ ಎಲ್ಲಾ ದಿಕ್ಕುಗಳಿಂದ ಆಕ್ರಮಣ ನಡೆಸಿದೆ. ನನ್ನ ಪರವಾಗಿ ರಷ್ಯಾ ಅಧ್ಯಕ್ಷರೊಂದಿಗೆ  ಮಾತನಾಡಿ ತಕ್ಷಣವೇ ಯುದ್ಧ ನಿಲ್ಲಿಸಲು ಮಧ್ಯ ಪ್ರವೇಶಿಸುವಂತೆ ಹಾಗೂ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ರಷ್ಯಾ ವಿರುದ್ಧ ಬೆಂಬಲಿಸುವಂತೆ ಉಕ್ರೇನ್ ಸರ್ಕಾರವು ಭಾರತವನ್ನು ಅಂಗಲಾಚುತ್ತಿದೆ. ಆದರೆ ಇದೇ ದೇಶ ಈ ಹಿಂದೆ ಹಲವು ಬಾರಿ ಭಾರತದ ವಿರುದ್ಧ ನಿರ್ಣಯ ತೆಗೆದುಕೊಂಡ ಉದಾಹರಣೆಗಳು ನಮ್ಮ ಮುಂದಿದೆ.  1998ರಲ್ಲಿ ಅಂದಿನ ಆಟಲ್ ಬಿಹಾರಿ ವಾಜಪೇಯಿ ಸರ್ಕಾರ ‘ಆಪರೇಷನ್ ಶಕ್ತಿ’ ಹೆಸರಿನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದಾಗ, ಪಾಕಿಸ್ತಾನ-ಭಾರತ ಯುದ್ಧ ಸಮಯದಲ್ಲಿ, ವಿಶ್ವಸಂಸ್ಥೆಯ ಭದ್ರಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಪಡೆಯಲು ಭಾರತ ಪ್ರಯತ್ನಿಸುತ್ತಿದ್ದ ಸಮಯ, ಕಾಶ್ಮೀರ ವಿಷಯದಲ್ಲಿ ಸಹ ಉಕ್ರೇನ್ ಭಾರತದ ವಿರುದ್ಧ ನಿರ್ಣಯ ತೆಗೆದುಕೊಂಡಿದೆ. ಹೀಗಿರುವಾಗ ಇಂದು ಉಕ್ರೇನ್ ಪರ ಭಾರತ ನಿರ್ನಯ ತೆಗೆದುಕೊಳ್ಳಲಾಗುತ್ತದೆಯೆ?

ಒಟ್ಟಾರೆಯಾಗಿ ಹೇಳುವುದಾದರೆ ಯುದ್ಧ ಎಂದಿಗೂ ಒಳ್ಳೆಯದಲ್ಲ. ಮಾನವ ವಿಕಾಸದ ಇತಿಹಾಸದಲ್ಲಿ ಅಳಿಸಲಾಗದ ಕಠೋರ ಕಪ್ಪು ಕಲೆ ಎಂದರೆ ಅವು ಯುದ್ಧದ ಕಲೆಗಳು. ಹಾಗಾಗಿ ಇಂದೂ ಸಹ ಕೋಟ್ಯಾಂತರ ಜೀವಹಾನಿಗೆ ಪ್ರೇರಣೆಯಾಗಿರುವ ಯುದ್ಧ ತಕ್ಷಣ ನಿಲ್ಲಲೇಬೇಕು, ಜಗತ್ತು ಶಾಂತಿ ಸೌಹಾರ್ದತೆಯಿಂದ ನಡೆಯುವಂತಾಗಬೇಕು ರಷ್ಯಾ-ಉಕ್ರೇನ್ ಕದನ ಶೀಘ್ರವೇ ಮುಕ್ತಾಯವಾಗಲಿ, ಅದಕ್ಕಾಗಿ ನಮ್ಮೆಲ್ಲರ ಪ್ರಾರ್ಥನೆ ಇರಲಿ. 

ನನ್ನ ಈ ಲೇಖನವು ಪ್ರಸಿದ್ದ ಆನ್ ಲೈನ್ ತಾಣ "ನಿಲುಮೆ"ಯಲ್ಲಿ ಮಾರ್ಚ್ 9, 2022ರಂದು ಪ್ರಕಟವಾಗಿದೆ..