ಯುದ್ಧ …
ಕಳೆದ ಒಂದು ವಾರದಿಂದ ಭಾರತ ಸೇರಿ ಜಗತ್ತಿನ ನಾನಾ ರಾಷ್ಟ್ರಗಳ ಜನರಲ್ಲಿ ಆತಂಕ, ದುಗುಡಕ್ಕೆ ಕಾರಣವಾಗಿರುವುದು ರಷ್ಯಾ-ಉಕ್ರೇನ್ ಯುದ್ಧ. ಉಕ್ರೇನ್ ನ್ಯಾಟೋ ರಾಷ್ಟ್ರಗಳ ಜತೆ ಕೈಜೋಡಿಸಲಿದೆ, ಯುರೋಪಿಯನ್ ಯೂನಿಯನ್ ಜತೆಯಾಗಿ ತನ್ನ ಕಮ್ಯುನಿಸ್ಟ್ ಸಿದ್ಧಾಂತ ಆಧಾರಿತ ವ್ಯವಸ್ಥೆಯ ಪ್ರಭಾವದಿಂದ ದೂರವಾಗಲಿದೆ ಎಂಬ ಕಾರಣದಿಂದ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದೆ. ರಷ್ಯಾ ಕಳುಹಿಸಿದ ಯುದ್ಧ ವಾಹನಗಳ ಮೇಲೆ *Z* ಸಂಕೇತವನ್ನು ರಷ್ಯಾ ಸೂಚಿಸಿದ್ದು, ಇದರ ಸೂಚನೆ ಎಂದರೆ 8 ಗಣರಾಜ್ಯಗಳನ್ನು ರಷ್ಯಾಕ್ಕೆ ಸೇರಿಸುವ ಮೂಲಕ ರಷ್ಯಾವನ್ನು ವಿಸ್ತರಿಸುವ ದೂರ ದೃಷ್ಠಿ ಹಾಗೂ ಮುಂದಾಲೋಚನೆ ಈ ಸೇನಾ ಕಾರ್ಯಾಚರಣೆಯ ಹಿಂದಿದೆ ಎನ್ನಲಾಗುತ್ತಿದೆ. ಎಂದರೆ ಇದರ ಪರಿಣಾಮ ಭವಿಷ್ಯದಲ್ಲಿ ಜಗತ್ತಿನ ಭೂಪಟವನ್ನೇ ಬದಲಾಯಿಸಲಿದೆ, ಕೆಲವೊಂದು ರಾಷ್ಟ್ರಗಳನ್ನು ಪ್ರಪಂಚದ ನಕಾಶೆಯಿಂದಲೇ ಅಳಿಸಿ ಹಾಕಲಾಗುತ್ತದೆ!
ಆದರೆ ಇದೀಗ ನಮ್ಮ ಮುಂದಿರುವ ಪ್ರಶ್ನೆ ಎಂದರೆ ಜಗತ್ತಿನಲ್ಲಿ ಶಾಂತಿ ನೆಲೆಗೊಳಿಸಿ ಎಲ್ಲವೂ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿಯೊಂದಿಗೆ ಹುಟ್ಟಿಕೊಂಡ ವಿಶ್ವಸಂಸ್ಥೆ ರಷ್ಯಾ-ಉಕ್ರೇನ್ ಯುದ್ಧ ವಿಷಯದಲ್ಲಿ ಏಕೆ ಗಟ್ಟಿ ನಿರ್ಧಾರವನ್ನು ತಾಳದೆ ಹೋಗಿದೆ? ಹೌದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಕ್ರೇನ್-ರಷ್ಯಾ ಯುದ್ಧದ ವಿರುದ್ಧ ನಿರ್ಣಯ ತೆಗೆದುಕೊಳ್ಳಲಾಗಿದೆ. ಉಕ್ರೇನ್ ವಿರುದ್ಧದ ಸೇನಾ ಕಾರ್ಯಾಚರಣೆಯನ್ನು ರಷ್ಯಾ ತಕ್ಷಣವೇ ನಿಲ್ಲಿಸಬೇಕೆಂದು ಆಗ್ರಹಿಸಿ ವಿಶ್ವಸಂಸ್ಥೆ ಕೈಗೊಂಡ ನಿರ್ಣಯದ ಪರ ಒಂದು ಡಜನ್‌ಗೂ ಹೆಚ್ಚು ದೇಶಗಳ ರಾಯಭಾರಿಗಳು ದನಿ ಎತ್ತಿದ್ದಾರೆ. ಐದು ದಿನಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ಉಕ್ರೇನ್ ಅಪಾರ ನಷ್ಟ ಅನುಭವಿಸಿದೆ. ಸಾವಿರಾರು ಅಮಾಯಕ ಜೀವಗಳು ಹಾರಿ ಹೋಗಿವೆ. “ಈ ಅನಾಹುತ ಇಲ್ಲಿಗೆ ಕೊನೆಗೊಳಿಸಿ. ಮನುಷ್ಯತ್ವದ ಕಡೆ ಹೆಜ್ಜೆ ಹಾಕಿ” ಎಂದು ವಿಶ್ವಸಂಸ್ಥೆ ಸಲಹೆ ನೀಡಿದೆ. ಅದರೆ ರಷ್ಯಾದಂತಹಾ ಬಲಿಷ್ಟ, ವಿಸ್ತರಣಾದಾಹ್ಹಿ, ಕಮ್ಯುನಿಸ್ಟ್ ಸಿದ್ದಾಂತದ ಪ್ರತಿಪಾದಕ ರಾಷ್ಟ್ರವೊಂದಕ್ಕೆ ಇಂತಹಾ ಕೇವಲ ಸಲಹೆ ಸೂಚನೆಗಳು ಸಾಕಾಗುತ್ತದೆಯೆ? ಒಂದೊಮ್ಮೆ ಈ ಯುದ್ಧದಲ್ಲಿ ಉಕ್ರೇನ್ ಸೋಲೊಪ್ಪಿದ್ದಾದರೆ ಭವಿಷ್ಯದಲ್ಲಿ ನ್ಯಾಟೋ ರಾಷ್ಟ್ರಗಳೂ ಸಹ ರಷ್ಯಾವನ್ನು ಎದುರಿಸಲಾರವು. ಅಲ್ಲದೆ ವಿಶ್ವಸಂಸ್ಥೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯವೂ ಇದೆ. ಒಟ್ತಾರೆ ಜಗತ್ತಿನ ಯಾವುದೇ ರಾಷ್ಟ್ರ ರಷ್ಯಾವನ್ನು ಮುಖಾಮುಖಿಯಾಗಿ ಎದುರಿಸಲು ವಿಫಲವಾಗಲಿದೆ.ಇದಷ್ಟೇ ಅಲ್ಲದೆ ಜಗತ್ತಿನಾದ್ಯಂತ ಇರುವ ಮಾನವ ಹಕ್ಕು ಹೋರಾಟ(ಹಾರಾಟ)ಗಾರರು, ಬುದ್ದಿಜೀವಿಗಳು ರಷ್ಯಾ-ಉಕ್ರೇನ್ ನಡುವಿನ ಈ ಯುದ್ಧದ ಬಗ್ಗೆ ಏಕೆ ಯಾವ ಹೇಳಿಕೆಯನ್ನು ನೀಡುತ್ತಿಲ್ಲ? ಪ್ರತಿಭಟನೆ ನಡೆಸುತ್ತಿಲ್ಲ? ಭಾರತದಂತಹಾ ಸರ್ವಮತ ಸಹಬಾಳ್ವೆ ಇರುವ ದೇಶದಲ್ಲಿ ಅದೆಲ್ಲೋ ಒಂದು ಗುಂಪು ಹತ್ಯೆ ನಡೆದಿದೆ, ಇನ್ನೆಲ್ಲೋ ಗುಂಪುಗಳ ನಡುವೆ ಸಂಘರ್ಷ ನಡೆದಿದೆ ಎನ್ನುವ ಕಾರಣಕ್ಕೆ ಮಾನವ ಹಕ್ಕು ಉಲ್ಲಂಘನೆ, ಭಾರತದಲ್ಲಿ ಯಾವುದೂ ಸರಿಯಿಲ್ಲ ಎಂದು ಬೊಬ್ಬಿಡುವ ಜಗತ್ತಿನ ಪ್ರಚಂಡ ಮಾನವ ಹಕ್ಕು ಪ್ರತಿಪಾದಕರು ಇಂದು ಎಲ್ಲಿ ಹೋಗಿದ್ದಾರೆ? ರಷ್ಯಾ ಉಕ್ರೇನ್ ನ ಹಲವಾರು ಸೈನಿಕರನ್ನು ಮಾತ್ರವಲ್ಲದೆ ಅಮಾಯಕ ನಾಗರಿಕರ ಮೇಲೆ ಸಹ ದಾಳಿ ಮಾಡುತ್ತಿದೆ. ಈ ದಾಳಿಯ ನಡುವೆ ಕರ್ನಾಟಕದ ಹಾವೇರಿಯ ವೈದ್ಯ ವಿದ್ಯಾರ್ಥಿ ನವೀನ್ ಎನ್ನುವವ ಸಹ ದುರಂತ ಸಾವಿಗೆ ಈಡಾಗಿದ್ದಾನೆ. ಇಷ್ಟೆಲ್ಲಾ ಘಟಸುತ್ತಿದ್ದರೂ ಬುದ್ದಿಜೀವಿಗಳೆನಿಸಿಕೊಂಡವರು ಯಾರೂ ರಷ್ಯಾ ನಡೆಯನ್ನು ಟೀಕಿಸುವ ಮಾತನಾಡುತ್ತಿಲ್ಲ ಏಕೆ? ಕೇವಲ ನರೇಂದ್ರ ಮೋದಿ, ಕೇಂದ್ರ ಸರ್ಕಾರ ಮಾತ್ರ ಈ ಬಗ್ಗೆ ಪ್ರತಿಕ್ರಿಯಿಸಬೇಕಿದೆಯೆ?
ಕಳೆದ ವರ್ಷಗಳಲ್ಲಿ “ಟೂಲ್ ಕಿಟ್” ಮೂಲಕ ಭಾರತದಲ್ಲಿ ಅಸಮಾನತೆ ಇದೆ, ಅಸಹಿಷ್ಣುತೆ, ಮಾನವ ಹಕ್ಕು ಉಲ್ಲಂಘನೆ ಸತತ ಆಗುತ್ತಿದೆ ಎನ್ನುತ್ತಿದ್ದ ಜಾಗತಿಕ ಹೋರಾಟಗಾರ್ತಿಯರಾರೂ ಇದೀಗ ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ತುಟಿ ಪಿಟಿಕೆನ್ನುತ್ತಿಲ್ಲ. ಇದಷ್ಟೇ ಅಲ್ಲ ಕಳೆದ ತಿಂಗಳಲ್ಲಿ ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಕುರಿತು ವಿವಾದ ಏರ್ಪಟ್ಟ ಸಮಯದಲ್ಲಿ ಅಮೆರಿಕಾ, ಪಾಕಿಸ್ತಾನ ಸೇರಿ ಜಗತ್ತಿನ ನಾನಾ ರಾಷ್ಟ್ರಗಳ ನಾಯಕರು ಅಲ್ಲದೇ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮಲಾಲಾಳಂತಹಾ ವ್ಯಕ್ತಿಗಳು ಭಾರತದಲ್ಲಿ ಪರಿಸ್ಥಿತಿ “ಭಯಂಕರವಾಗಿದೆ” ಅಂತ ಅಂದಿದ್ದರು. ಆದರೆ ಇದೀಗ ಅವರಾರೂ ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ಹಾಗೂ ಅದರಿಂದಾಗುತ್ತಿರುವ ಜೀವಹಾನಿ ಬಗ್ಗೆ ಪ್ರತಿಕ್ರಿಯೆ ನೀಡುತ್ತಿಲ್ಲ.
ಇದೆಲ್ಲದರಿಂದ ತಿಳಿದುಬರುತ್ತಿರುವುದೇನೆಂದರೆ ವಿಶ್ವದ ಬಲಾಡ್ಯ ರಾಷ್ಟ್ರಗಳು ತಾವೇನು ಮಾಡಿದರೂ ಅದೆಲ್ಲವೂ ಸರಿಯಾಗಿಯೇ ಇರುತ್ತದೆ. ಆದರೆ ಭಾರತದಂತ ಕೆಲವು ರಾಷ್ಟ್ರಗಳು ಮಾತ್ರ ಅವರ ಅಣತಿಯ ಪ್ರಕಾರವೇ ನಡೆಯಬೇಕು! ಉದಾಹರಣೆಗಾಗಿ ಹೇಳುವುದಾದರೆ ರಷ್ಯಾ-ಉಕ್ರೇನ್ ಮೇಲೆ ದಾಳಿ ನಡೆಸಿದ್ದಂತೆ ಭಾರತವೇನಾದರೂ ಪಾಕಿಸ್ತಾನದ ಕರಾಚಿ, ಲಾಹೋರ್ ಮೇಲೆ ದಾಳಿ ನಡೆಸಿದ್ದರೆ ಆಗ ಅಮೆರಿಕಾ ಸೇರಿ ಜಾಗತಿಕ ಶಕ್ತಿಗಳು ಹೀಗೆಯೇ ಸುಮ್ಮನೆ ಕುಳಿತಿರುತ್ತಿದ್ದವೆ? ಖಂಡಿತಾ ಇಲ್ಲ. ಭಾರತದ ವಿರುದ್ಧ ವಿಷ ಕಾರುತ್ತಿದ್ದವು.
ಇನ್ನು ಇಂದಿನ ಯುದ್ಧ ಪರಿಸ್ಥಿತಿಯಲ್ಲಿ ಭಾರತ ತಟಸ್ಥ ಧೋರಣೆ ತಾಳಿದೆ. ಇದಕ್ಕೆ ಕಾರಣ ಕೂಡ ಇದೆ. ರಷ್ಯಾ ನಮ್ಮ ಅನಾದಿ ಕಾಲದ ಮಿತ್ರರಾಷ್ಟ್ರ. ಅಂತಹಾ ದೇಶದ ವಿರುದ್ಧ ನಿಲುವು ತೆಗೆದುಕೊಳ್ಳುವುದು ಅಷ್ಟೇನೂ ಸುಲಭವಲ್ಲ. ಇನ್ನೊಂದು ಸಂಗತಿ ಎಂದರೆ ಭಾರತಕ್ಕೆ ಅಮೆರಿಕಾ ಸಹ ಮಿತ್ರರಾಷ್ಟ್ರವೇ ಆಗಿದ್ದರೂ ಅಮೆರಿಕಾದ ಭಾರತ ಪರ ನಿಲುವು ಎಲ್ಲಾ ಕಾಲದಲ್ಲಿ ಏಕಪ್ರಕಾರವಾಗಿ ಇರುವುದಿಲ್ಲ. ಹಾಗಾಗಿ ಇಂದು ಅಮೆರಿಕಾ ಮಾತುಕೇಳಿ ರಷ್ಯಾ ವಿರುದ್ಧ ಹೋದರೆ ನಾವು ಒಬ್ಬ ಆಪ್ತಮಿತ್ರನನ್ನೇ ಕಳೆದುಕೊಳ್ಳುತ್ತೇವೆ. ಹಾಗೆಂದ ಮಾತ್ರಕ್ಕೆ ರಷ್ಯಾ ನಡೆಸಿರುವ ಈ ಯುದ್ಧಕ್ಕೆ ಭಾರತದ ಸಮ್ಮತಿ ಇದೆ ಎಂದೂ ಅರ್ಥವಲ್ಲ. ಭಾರತ ಪ್ರಧಾನಿ ರಷ್ಯಾ ಅಧ್ಯಕ್ಷ ಪುಟಿನ್ ಗೆ ಪದೇ ಪದೇ ಕರೆ ಮಾಡಿ ಯುದ್ಧ ನಿಲ್ಲಿಸುವ ಮನವಿ ಮಾಡುತ್ತಿದ್ದಾರೆ. ಅಲ್ಲದೆ ಉಕ್ರೇನ್ ನಲ್ಲಿ ಸಿಲುಕಿದ್ದ ನಮ್ಮ ದೇಶವಾಸಿಗಳನ್ನು ಮರಳಿ ಕರೆತರುತ್ತಿದ್ದಾರೆ. ಆದರೆ ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸುವಂತೆ ರಷ್ಯಾ ಮೇಲೆ ಭಾರತ ಒತ್ತಡ ಹಾಕುವುದು ಸಾಧ್ಯವಿಲ್ಲ. ಮತ್ತು ವಿಶ್ವಸಂಸ್ಥೆಯಲ್ಲಿಯೂ ಸಹ ಯುದ್ಧದ ವಿರುದ್ಧ ಮತ ಚಲಾವಣೆ ಅಸಾಧ್ಯ. ಏಕೆಂದರೆ ರಷ್ಯಾದಂತೆ ಉಕ್ರೇನ್ ನಮಗೆ ಹಳೇ ಮಿತ್ರನಲ್ಲ. ಇದೀಗ ತನ್ನ ಮೇಲೆ ರಷ್ಯಾ ಎಲ್ಲಾ ದಿಕ್ಕುಗಳಿಂದ ಆಕ್ರಮಣ ನಡೆಸಿದೆ. ನನ್ನ ಪರವಾಗಿ ರಷ್ಯಾ ಅಧ್ಯಕ್ಷರೊಂದಿಗೆ ಮಾತನಾಡಿ ತಕ್ಷಣವೇ ಯುದ್ಧ ನಿಲ್ಲಿಸಲು ಮಧ್ಯ ಪ್ರವೇಶಿಸುವಂತೆ ಹಾಗೂ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ರಷ್ಯಾ ವಿರುದ್ಧ ಬೆಂಬಲಿಸುವಂತೆ ಉಕ್ರೇನ್ ಸರ್ಕಾರವು ಭಾರತವನ್ನು ಅಂಗಲಾಚುತ್ತಿದೆ. ಆದರೆ ಇದೇ ದೇಶ ಈ ಹಿಂದೆ ಹಲವು ಬಾರಿ ಭಾರತದ ವಿರುದ್ಧ ನಿರ್ಣಯ ತೆಗೆದುಕೊಂಡ ಉದಾಹರಣೆಗಳು ನಮ್ಮ ಮುಂದಿದೆ. 1998ರಲ್ಲಿ ಅಂದಿನ ಆಟಲ್ ಬಿಹಾರಿ ವಾಜಪೇಯಿ ಸರ್ಕಾರ ‘ಆಪರೇಷನ್ ಶಕ್ತಿ’ ಹೆಸರಿನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದಾಗ, ಪಾಕಿಸ್ತಾನ-ಭಾರತ ಯುದ್ಧ ಸಮಯದಲ್ಲಿ, ವಿಶ್ವಸಂಸ್ಥೆಯ ಭದ್ರಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಪಡೆಯಲು ಭಾರತ ಪ್ರಯತ್ನಿಸುತ್ತಿದ್ದ ಸಮಯ, ಕಾಶ್ಮೀರ ವಿಷಯದಲ್ಲಿ ಸಹ ಉಕ್ರೇನ್ ಭಾರತದ ವಿರುದ್ಧ ನಿರ್ಣಯ ತೆಗೆದುಕೊಂಡಿದೆ. ಹೀಗಿರುವಾಗ ಇಂದು ಉಕ್ರೇನ್ ಪರ ಭಾರತ ನಿರ್ನಯ ತೆಗೆದುಕೊಳ್ಳಲಾಗುತ್ತದೆಯೆ?
ಒಟ್ಟಾರೆಯಾಗಿ ಹೇಳುವುದಾದರೆ ಯುದ್ಧ ಎಂದಿಗೂ ಒಳ್ಳೆಯದಲ್ಲ. ಮಾನವ ವಿಕಾಸದ ಇತಿಹಾಸದಲ್ಲಿ ಅಳಿಸಲಾಗದ ಕಠೋರ ಕಪ್ಪು ಕಲೆ ಎಂದರೆ ಅವು ಯುದ್ಧದ ಕಲೆಗಳು. ಹಾಗಾಗಿ ಇಂದೂ ಸಹ ಕೋಟ್ಯಾಂತರ ಜೀವಹಾನಿಗೆ ಪ್ರೇರಣೆಯಾಗಿರುವ ಯುದ್ಧ ತಕ್ಷಣ ನಿಲ್ಲಲೇಬೇಕು, ಜಗತ್ತು ಶಾಂತಿ ಸೌಹಾರ್ದತೆಯಿಂದ ನಡೆಯುವಂತಾಗಬೇಕು ರಷ್ಯಾ-ಉಕ್ರೇನ್ ಕದನ ಶೀಘ್ರವೇ ಮುಕ್ತಾಯವಾಗಲಿ, ಅದಕ್ಕಾಗಿ ನಮ್ಮೆಲ್ಲರ ಪ್ರಾರ್ಥನೆ ಇರಲಿ.
ನನ್ನ ಈ ಲೇಖನವು ಪ್ರಸಿದ್ದ ಆನ್ ಲೈನ್ ತಾಣ "ನಿಲುಮೆ"ಯಲ್ಲಿ ಮಾರ್ಚ್ 9, 2022ರಂದು ಪ್ರಕಟವಾಗಿದೆ..
No comments:
Post a Comment