Tuesday, August 30, 2016

ಬಹುಮುಖ ಪ್ರತಿಭೆಯ ಅಪೂರ್ವ ಸೋದರಿಯರು

ಓರ್ವ ವ್ಯಕ್ತಿ ಒಂದು  ಕ್ಷೇತ್ರದಲ್ಲಿ ಯಶಸ್ವಿಯಾಗಿ  ಗುರುತಿಸಿಕೊಳ್ಳುವುದು  ಸಹ  ಇಂದಿನ  ದಿನಮಾನದಲ್ಲಿ ಬಹಳ ಕ್ಲಿಷ್ಟಕರ ಸಂಗತಿ. ಯಾವುದೇ ಕ್ಷೇತ್ರದಲ್ಲಿಯೂ ಯಶ ಕಾಣಬೇಕಾದರೆ ಅವರು ಬಹಳ ದೊಡ್ಡ ಪ್ರಮಾಣದಲ್ಲಿ ಸ್ಪರ್ಧೆ ಎದುರಿಸಬೇಕಾಗುತ್ತದೆ. ಇಂತಹಾ ಸ್ಪರ್ಧಾತ್ಮಕ ಯುಗದಲ್ಲಿಯೂ ಎಲ್ಲರನ್ನೂ ಹಿಂದಿಕ್ಕಿ ಒಂದಲ್ಲ ಎರಡೆರಡು ಕ್ಷೇತ್ರಗಳಲ್ಲಿ ಸಾಧನೆಗೈದ ಸೋದರಿಯರಿಬ್ಬರ ಕಥೆ ಇದು. ಸಾಧಿಸುವ ಛಲ, ಉತ್ತಮ ಬೆಂಬಲ ಸಿಕ್ಕರೆ ಯಶಸ್ಸುಸಿಕ್ಕುವುದು ಎಷ್ಟು ಮಾತ್ರಕ್ಕೂ ಕಷ್ಟವಲ್ಲ ಎನ್ನುವುದು ತಿಳಿಯಬೇಕಾದರೆ ಸೋದರಿಯರ ಬಗ್ಗೆ ತಿಳಿಯಬೇಕು.



ನಮಿತಾ ರಾವ್ ಹಾಗೂ ನಮೃತಾ ರಾವ್

ಮೂಲತಃ ಮಂಗಳೂರಿನವರಾದ ಇವರು ಬೆಳೆದದ್ದೆಲ್ಲಾ ಬೆಂಗಳೂರಿನಲ್ಲಿ. ಇಂದು ಇಬ್ಬರು ಸೋದರಿಯರೂ ಆಕ್ಸೆಂಚರ್ ಹಾಗೂ ಇನ್ಫೋಸಿಸ್ ನಂತಹಾ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನೃತ್ಯ ಹಾಗೂ ಸ್ಕೇಟಿಂಗ್ ಕ್ರೀಡೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದ್ದಾರೆ.

ಕುಮಾರನ್ಸ್ ಸ್ಕೂಲ್ ಹಾಗೂ ಕಾರ್ಮೆಲ್ಸ್ ನಲ್ಲಿ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪೂರೈಸಿದ ಇವರು ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಹೊಂದಿದರು. ಎಂಜಿನಿಯರಿಂಗ್ ಪದವಿ ಶಿಕ್ಷಣ ಮುಗಿಸುತ್ತಿದ್ದಂತೆಯೇ ಇಬ್ಬರಿಗೂ ಕ್ಯಾಂಪಸ್ ಆಯ್ಕೆಯಲ್ಲಿಯೇ ಪ್ರಖ್ಯಾತ ಸಂಸ್ಥೆಗಳಲ್ಲಿ ಕೆಲಸ ದೊರಕಿತ್ತು.

ನಮಿತಾ ರಾವ್

ನಮಿತಾ ತಾನು ಏಳು ವರ್ಷದವರಾಗಿದ್ದಾಗಲೇ ನೃತ್ಯಾಭ್ಯಾಸಕ್ಕೆ ತೊಡಗಿದ್ದರು. ಶ್ರೀಮತಿ ಸುಂದರಿ ಸಂತಾನಂ ಇವರ ನೃತ್ಯ ಗುರುಗಳು. ಶ್ರೀಮತಿ ಸುಂದರಿಯವರು ಪ್ರಖ್ಯಾತ ನೃತ್ಯಗಾರ್ತಿಯಾದ ಡಾ.ಪದ್ಮಾ ಸುಬ್ರಹ್ಮಣ್ಯನ್ ಅವರ ಶಿಷ್ಯೆಯಾಗಿದ್ದರು.
ನಮಿತಾ 2003ರಲ್ಲಿ ಭರತ್ನಾಟ್ಯ ಜೂನಿಯರ್ ಹಾಗೂ 2006ರಲ್ಲಿ ಸೀನಿಯರ್ ಪರೀಕ್ಷೆಗಳಲ್ಲಿ ಮೊದಲ ದರ್ಜೆಯಲ್ಲಿ ಉತ್ತೀರ್ಣರಾದರು. 2003ರಲ್ಲಿ ದೂರದರ್ಶ್ನದದಲ್ಲಿ ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾದ ನಮಿತಾ ತಾವು ಇದುವರೆಗೂ ಸರಿ ಸುಮಾರು 50ಕ್ಕೂ ಹೆಚ್ಚು ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಿದ್ದಾರೆ.

ಅವುಗಳಲ್ಲಿ ಪ್ರಮುಖವಾದವು ಮುಂದಿನಂತಿವೆ- ಸತ್ಯ ಸಾಯಿಬಾಬಾರವರ 70ನೇ ವರ್ಷದ ಜನುಮ ದಿನಕ್ಕಾಗಿ ಪುಟ್ಟ ಪರ್ತಿಯಲ್ಲಿ ನಡೆದ ನೃತ್ಯ ಪ್ರದರ್ಶನ, 2002ರಲ್ಲಿ ಡಾ. ಪದ್ಮಾ ಸುಬ್ರಹ್ಮಣ್ಯಂ ಅವರ ಸಮ್ಮುಖ ತಮಿಳು ನಾಡಿನ ನಾಗಾ ಪಟ್ಟಣಂನಲ್ಲಿ ನಡೆದ ನೃತ್ಯ ಕಾರ್ಯಕ್ರಮ, 2003ರಲ್ಲಿ ಡಾ. ಪದ್ಮಾ ಸುಬ್ರಹ್ಮಣ್ಯಂ ಅವರ ನೃತ್ಯ ಶಾಲೆಯ ಚಿನ್ನದ ಹಬ್ಬದ ಸಮಯದಲ್ಲಿ ಚೆನ್ನೈನಲ್ಲಿ ನಡೆಸಿಕೊಟ್ಟ ನೃತ್ಯ ಪ್ರದರ್ಶನ, ಬಾಲಿವುಡ್ ಮೇರುನಟ ಅಮಿತಾಬ್ ಬಚ್ಚನ್ ಅವರ 70ನೇ ವರ್ಷದ ಜನುಮದಿನದ ಕಾರ್ಯಕ್ರಮ, ಲಂಡನ್ ಅಲ್ಲಿ ಬ್ರಿಟನ್ ರಾಣಿ ಎಲಿಜಬೆತ್ ಬೆಳ್ಳಿ ಹಬ್ಬ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದ ಇವರು ರಾಣಿಯ ಸಮ್ಮುಖದಲ್ಲಿ ನೃತ್ಯ ರೂಪಕವನ್ನು ಅಭಿನಯಿಸಿ ಭೇಷ್ ಅನ್ನಿಸಿಕೊಂಡರು.



ಇದಲ್ಲದೆ ಇವರು ನವರಾತ್ರಿ ವಿಶೇಷ ಕಾರ್ಯಕ್ರಮಗಳಲ್ಲಿ ಮಂಗಳೂರು ಮಂಗಳಾದೇವಿ ದೇವಾಲಯ, ಕಟೀಲಿನ ದುರ್ಗಾ ಪರಮೇಶ್ವರಿ ದೇವಾಲಯಗಳಲ್ಲಿ ತಮ್ಮ ಭರತನಾಟ್ಯ ಕಾರ್ಯಕ್ರಮವನ್ನು ನೀಡಿದ್ದಾರೆ. ಧರ್ಮಸ್ಥಳದಲ್ಲಿ ನಡೆದ ಸ್ರ್ವ ಧರ್ಮ ಸಮ್ಮೇಳನದಲ್ಲಿಯೂ ಇವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದು ಅಲ್ಲಿ ನೆರೆದ ದೇಶ ವಿದೇಶದ ಕಲಾಭಿಮಾನಿಗಳ ಮನ ಸೂರೆಗೊಂಡಿದ್ದರು.

ನಮಿತಾ ಅವರು ನೃತ್ಯದಲ್ಲಷ್ಟೇ ಅಲ್ಲದೆ ರೋಲರ್ ಸ್ಕೇಟಿಂಗ್ ನಲ್ಲಿಯೂ ಸಾಕಷ್ಟು ಉನ್ನತ ದರ್ಜೆಯ ಸಾಧನೆ ಮಾಡಿದ್ದಾರೆ. ತಮ್ಮ ಏಳನೇ ವಯಸ್ಸಿನಲ್ಲಿ ಬೆಂಗಳೂರಿನ ಗಾರ್ಡನ್ ಸ್ಕೇಟಿಂಗ್ ಕ್ಲಬ್ ಅಲ್ಲಿ ಸ್ಕೇಟಿಂಗ್ ಅಭ್ಯಾಸದಲ್ಲಿ ತೊದಗಿದ ಇವರು ರಾಷ್ಟ್ರ ಮಟ್ಟದ ಸ್ಕೇಟಿಂಗ್ ಚಾಂಪಿಯನ್ ಶಿಪ್ ಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದು ಹಲವಾರು ಪದಗಳನ್ನು ಜಯಿಸಿದ್ದಾರೆ.
ನಮಿತಾ ಅವ್ರಿಗೆ ಸಂದ ಪ್ರಶಸ್ತಿ ಗೌರವಗಳು ಮುಂದಿನಂತಿದೆ- ಕನ್ನಡ ಸಂಸ್ಕೃತಿ ಇಲಾಖೆ ಆಯೋಜಿಸುವ ಯುವ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಮಿತಾ ಪ್ರಥಮ ಸ್ಥಾನ2000ನೇ ವರ್ಷದಲ್ಲಿ ಎಡಿನ್ ಬರ್ಗ್ ಡ್ಯೂಕ್ಲೆ ಎನ್ನುವಲ್ಲಿ ನೀಡುವ "ಇಂಟರ್ ನ್ಯಾಷನಲ್ ಅವಾರ್ಡ್ ಫಾರ್ ಯಂಗ್ ಪೀಪಲ್" ಗೌರವ, ಆರ್ಯಭಟ ಸಾಂಸ್ಕೃತಿಕ ಸಂಘ ಕೊಡಮಾಡುವ "ಕಲಾ ಕುಸುಮ" ಪುರಸ್ಕಾರ 2001ರಲ್ಲಿ ನಮಿತಾ ಅವರಿಗೆ ಒಲಿದು ಬಂದಿತ್ತು. ಕಂಟ್ರಿ ಕ್ಲಬ್, ಬೆಂಗಳೂರು ಆಯೋಜಿಸಿದ್ದ "ಬೂಗಿ ಊಗಿ ನೃತ್ಯ ಸ್ಪರ್ಧೆಯಲ್ಲಿ ಅತ್ಯುತ್ತಮ ನೃತ್ಯ ಕಲಾವಿದೆಯಾಗಿ ಆಯ್ಕೆಗೊಂಡಿದ್ದರು. ಕರ್ನಾಟಕ ನೃತ್ಯ ಕಲಾ ಪರಿಷತ್ತು ನಡೆಸಿದ್ದ "ಯಂಗ್ ಡ್ಯಾನ್ಸ್ ಫೆಸ್ಟಿವಲ್" ನಲ್ಲಿ ಸಹ ನಮಿತಾ ಅವರಿಗೆ ಪ್ರಶಂಸನಾ ಪತ್ರವು ಸಿಕ್ಕಿದ್ದಿತು.

ಇನ್ನು ನಮಿತಾ ಕೇವಲ ನೃತ್ಯ ಹಾಗೂ ಸ್ಕೇಟಿಂಗ್ ಗಳಷ್ಟೇ ಅಲ್ಲದೆ ಟ್ಯಾಟೂ ಸ್ಕೆಚ್ಚಿಂಗ್ಸ್ ಮತ್ತು ಮಾಡಲಿಂಗ್ ಗಳಲ್ಲಿಯೂ ಆಸಕ್ತಿಯನ್ನು ಹೊಂದಿದ್ದಾರೆ. ಇವರು ಬಿಡುವಾದಾಗಲೆಲ್ಲಾ ಸ್ಕೆಚ್ಚಿಂಗ್ ನಲ್ಲಿ ತೊಡಗಿಸಿಕೊಳ್ಳುತ್ತಾರೆ. ನಮಿತಾ ತಾವು ಭವಿಷದಲ್ಲಿ ಟ್ಯಾಟೂಯಿಂಗ್ ಅಲ್ಲಿ ಹೆಚ್ಚೆಚ್ಚು ಮುಂದುವರಿಯಬೇಕೆನ್ನುವ ಆಸಕ್ತಿ ಹೊಂದಿದ್ದಾರೆ.

ನಮೃತಾ ರಾವ್
ನಮೃತಾ ರಾವ್ ಸಹ ತನ್ನ ಸೋದರಿಯಂತೆಯೇ ಸ್ಕೇಟಿಂಗ್ ಹಾಗೂ ನೃತ್ಯ ಎರಡೂ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ತಮ್ಮ ಅಣ್ಣಂದಿರ(ಸೋದರ ಸಂಬಂಧಿಗಳ) ಸ್ಕೇಟಿಂಗ್ ಪ್ರತಿಭೆಯಿಂದ ಸ್ಪೂರ್ತಿ ಹೊಂದಿದ ಇವರು ತಾವು ಸಹ ತಮ್ಮ 5ನೇ ವಯಸ್ಸಿನಲ್ಲಿ ಸ್ಕೇಟಿಂಗ್ ಅಭ್ಯಾಸ ಪ್ರಾರಂಭಿಸಿದರು. ಇವರಿಗೆ ಆರ್ಟಿಸ್ಟಿಕ್ ಸ್ಕೇಟಿಂಗ್ ಗಿಂತಲೂ ಸ್ಪೀಡ್ ಸ್ಕೇಟಿಂಗ್ ನಲ್ಲಿ ಹೆಚ್ಚು ಆಸಕ್ತಿ ಇತ್ತು. ಬೆಳೆಗಿನ ವೇಳೆ ಹಾಗೂ ಸಂಜೆ ಪ್ರತಿದಿನವೂ ಸತತ ಅಭ್ಯಾಸ ನಡೆಸಿದ ಫಲವಾಗಿ ಇವರು ರೋಲರ್ ಸ್ಕೇಟಿಂಗ್ ನಲ್ಲಿ ಅಂತರಾಷ್ಟ್ರೀಯ ಮಟ್ಟದವರೆಗೂ ತಲುಪಲು ಸಾಧ್ಯವಾಯಿತು.

2003ರಲ್ಲಿ ಇಟಲಿಯಲ್ಲಿ ನಡೆದ ಅಂತರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಇವರು 2008ರಲ್ಲಿ ಸ್ಪೇನ್ ಅಲ್ಲಿ ನಡೆದ ಸ್ಪರ್ಧೆಯಲ್ಲಿಯೂ ಭಾಗವಹಿಸಿ ನಮ್ಮ  ದೇಶದ ಕೀರ್ತಿಯನ್ನು ಹೆಚ್ಚಿಸಿದ್ದರು. ಸ್ಕೇಟಿಂಗ್ ನಲ್ಲಿ ಇದುವರೆಗೂ ಸುಮಾರು 60 ಪದಕಗಳನ್ನು ಗಳಿಸಿರುವ ನಮೃತಾ ತಮ್ಮ ಅಕ್ಕನ ದಾರಿಯಲ್ಲೇ ನಡೆದು ಮಾದರಿಯಾಗಿದ್ದಾರೆ.  

ಶಾಲಾ ದಿನಗಳಲ್ಲಿ ಹಿಂದಿ ಚಲನಚಿತ್ರ ಗೀತೆಗಳಿಗೆ ಅಭಿನಯಿಸುತ್ತಿದ್ದ ನಮೃತಾ ಅವರು ಎಂಜಿನಿಯರಿಂಗ್ ಅಭ್ಯಾಸದ ಸಮಯದಲ್ಲಿ ನೃತ್ಯವನ್ನು ಗಂಭೀರವಾಗಿ ಅಭ್ಯಸಿಸಲು ಮೊದಲು ಮಾಡಿದರು. ಇದೀಗ ಶಾಸ್ತ್ರೀಯ ನೃತ್ಯ ಹಾಗೂ ಪಾಶ್ಚಾತ್ಯ ನೃತ್ಯ ಶೈಲಿಗಳೆರಡರಲ್ಲಿಯೂ ಸೈ ಎನ್ನಿಸಿಕೊಂಡಿರುವ ಇವರು ಇದುವರೆಗೂ ಸಾಕಷ್ಟು ಸಂಖ್ಯೆಯಲಿ ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಿದ್ದಾರೆ. ಲಂಡನ್ ನಲ್ಲಿ ರಾಣಿ ಎಲಿಜಬೆತ್ ಸಮ್ಮುಖದಲ್ಲಿ ನಡೆದ ನೃತ್ಯ ಕಾರ್ಯಕ್ರಮ ಹಾಗೂ ಅಮಿತಾಬ್ ಬಚ್ಚನ್ ಅವರ 70ನೇ ಜನುಮ ದಿನದ ಕಾರ್ಯಕ್ರಮಗಳಲ್ಲಿ ತನ್ನ ಸಹೋದರಿ ನಮಿತಾ ಅವರೊಡನೆ ನಮೃತಾ ಸಹ ಪಾಲ್ಗೊಂಡು ತಮ್ಮ ಅಮೋಘವಾದ ನೃತ್ಯ ಪ್ರದರ್ಶನ ನೀಡಿ ಸಭಿಕರ ಕಣ್ಮನಗಳನ್ನು ಸೂರೆಗೊಂಡಿದ್ದರು.



ಇಷ್ಟೇ ಅಲ್ಲದೆ ನಮೃತಾ ತಾವು ಪೇಂಟಿಂಗ್ಸ್ ಅಲ್ಲಿ ಆಸಕ್ತಿ ಹೊಂದಿದ್ದು ಆಗಾಗ ಸ್ಕೆಚ್ಚಿಂಗ್ಸ್ ಹಾಗೂ ಪೇಂಟಿಂಗ್ಸ್ ಸಹ ಮಾಡುತ್ತಾರೆ.

ಇವರ ಬಹುಮುಖಿ ಪ್ರತಿಭೆ ಹಾಗೂ ಸಾಧನೆ ಗುರುತಿಸಿ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಇವರನ್ನು ಅರಸಿ ಬಂದಿವೆ. ಅವುಗಳಲ್ಲಿ ಕೆಲವು ಪ್ರಮುಖವಾದವುಗಳೆಂದರೆ- ಇವರ ಸ್ಕೇಟಿಂಗ್ ಹಾಗೂ ನೃತ್ಯ ಸೇರಿದಂತೆ ಸಮಗ್ರ ಸಾಧನೆಗೆ ಒಲಿದು ಬಂದ 2005ನೇ ಸಾಲಿನ ರಾಷ್ಟ್ರ ಪ್ರಶಸ್ತಿ, ಕರ್ನಾಟಕ ರಾಜ್ಯ ಸರ್ಕಾರದ ಪುರಸ್ಕಾರ, ಇವರು ಕಾರ್ಯ ನಿರ್ವಹಿಸುತ್ತಿರುವ ಆಕ್ಸೆಂಚ್ರ್ ಸಂಸ್ಥೆಯವರು ಇವರ ಉತ್ತಮ ಕಾರ್ಯ ದಕ್ಷತೆಯನ್ನು ಗುರುತಿಸಿ ನೀಡಿದ ನ್ಯುಮರೋ ಉನೋ ಅವಾರ್ಡ್.

ಇಂದು ಮಹಿಳೆಯರು ತಾವು ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದೆ ಬರುತ್ತಿರುವ ಸಮಯ. ಹಾಗಾಗಿ ಮನೆಯವರ ಪ್ರೋತ್ಸಾಹ, ತಂದೆ ತಾಯಿ , ಪತಿಯ ಕಡೆಯ ಸಹಕಾರವಿದ್ದಲ್ಲಿ ಹೆಣ್ಣು ತಾನು ಏನನ್ನಾದರೂ ಸಾಧಿಸಲು ಸಾಧ್ಯವಿದೆ ಎನ್ನುವ ನಮಿತಾ - ನಮೃತಾ ಸೋದರಿಯರು ಹೆಣ್ಣುಮಕ್ಕಳೆಂದರೆ ಕೇವಲ ಮದುವೆಯಾಗಿ ಮನೆ, ಸಂಸಾರವೆಂದಷ್ಟೇ ಯೋಚಿಸದೆ ಅವರಲ್ಲಿಯೂ ಸಾಮರ್ಥ್ಯವಿದೆ ಎನ್ನುವುದನ್ನು ಗುರುತಿಸಿ ಅದಕ್ಕೆ ಸೂಕ್ತ ಪ್ರೋತ್ಸಾಹ ನೀಡಬೇಕಿದೆ ಎನ್ನುತ್ತಾರೆ. ಸತತ ಪರಿಶ್ರಮ, ಶ್ರದ್ದೆಗಳಿದ್ದಲ್ಲಿ ಏನನ್ನಾದರೂ ಸಾಹಿಸಬಹುದು ಎನ್ನುವುದು ಸೋದರಿಯರ ಆಂಬೋಣ.

ತಮ್ಮ ನೃತ್ಯ ಗುರುಗಳಾದ ಶ್ರೀಮತಿ ಸುಂದರಿ ಸಂತಾನಂ, ಅವರ ನೃತ್ಯ ಗುರುಗಳಾಗಿದ್ದ ಡಾ. ಪದ್ಮಾ ಸುಬ್ರಹ್ಮಣ್ಯಂ ಇವರುಗಳೇ ನನ್ನ ರೋಲ್ ಮಾಡೆಲ್ ಗಳು ಎನ್ನುವ ನಮಿತಾ ನೃತ್ಯ ಕ್ಷೇತ್ರದಲ್ಲಿ ನಾವಿನ್ನೂ ಕಲಿಯಬೇಕಾದದ್ದು ಬಹಳಷ್ಟಿದೆ. ಇನ್ನೂ ಬಹಳ ದೂರ ಸಾಗಬೇಕಿದೆ ಎನ್ನುತ್ತಾರೆ.

 ನಮೃತಾ ಅವರು ಮಾತ್ರ ನನಗೆ ನನ್ನ ಅಕ್ಕನೇ ರೋಲ್ ಮಾಡಲ್, ನಾನು ಚಿಕ್ಕಂದಿನಿಂದ ಅವರನ್ನೇ ನೋಡಿಕೊಂಡು ಬೆಳೆದವಳಾದುದರಿಂದ ಅವರೇ ನನ್ನ್ಗೆ ಉತ್ತಮ ರೋಲ್ ಮಾಡಲ್ ಆಗಬಲ್ಲ್ರು ಎನ್ನುತ್ತಾರೆ.

ಹೀಗೆ ಬಹುಮುಖ್ ಪ್ರತಿಭೇ ಹೊಂದಿದ ನಮ್ಮ ನಾಡಿನ ಪ್ರತಿಭಾನ್ವಿತ ಸೋದರಿಯರು ತಮ್ಮ ಭವಿಷ್ಯದಲ್ಲಿ ಇನ್ನೂ ಉತ್ತಮ ಸಾಧನೆ ಮಾಡಲಿ, ಇನ್ನೂ ಹೆಚ್ಚು ಎತ್ತರಕ್ಕೆ ಬೆಳೆಯಲಿ ಎಂದು "ಗೃಹಶೋಭಾ" ಹಾರೈಕೆ.

(ಈ ನನ್ನ ಲೇಖನವು ಕನ್ನಡ ಪ್ರಸಿದ್ದ ಮಹಿಳಾ ಮಾಸಪತ್ರಿಕೆ "ಗೃಹಶೋಭಾ" ಆಗಸ್ಟ್ 2016 ರ ಸಂಚಿಕೆಯಲ್ಲಿ ಪ್ರಕಟವಾಗಿತ್ತು.)

Tuesday, August 23, 2016

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 75

ಸನ್ನತಿ (Sannathi)

ಸನ್ನತಿ, ಕಲ್ಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕಿನಲ್ಲಿರುವ ಒಂದು ಪ್ರಸಿದ್ದ ಶಕ್ತಿಪೀಠ. ದೇವಿಯ ಪಾದುಕೆಗಳಿಂದಾಗಿ ಪ್ರಸಿದ್ದವಾದ ಈ ಕ್ಷೇತ್ರದಲ್ಲಿ ಶ್ರೀ ಲಕ್ಷ್ಮಿಯು ಚಂದ್ರಲಾ ಪರಮೇಶ್ವರಿ ಎನ್ನುವ ಹೆಸರಿನಲ್ಲಿ ನೆಲೆಸಿರುವಳು. ತಾಲೂಕಾ ಕೇಂದ್ರ ಚಿತ್ತಪೂರದಿಂದ 48 ಕಿ.ಮೀ. ಪ್ರಮುಖ ರೈಲ್ವೆ ಜಂಕ್ಷನ್ ವಾಡಿ ಇಂದ ಸುಮಾರು 35 ಕಿ.ಮೀ. ದೂರದಲ್ಲಿದೆ. ಹಾಗೂ ಶಹಾಪೂರದಿಂದ ಪೂರ್ವಕ್ಕೆ 19ಕಿ.ಮೀ. ದೂರದಲ್ಲಿರುವ ಈ ಕ್ಷೇತ್ರಕ್ಕೆ ದಿನನಿತ್ಯವೂ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಹುಣ್ಣಿಮೆ ಮತ್ತಿತರೆ ವಿಶೇಷ ದಿನಗಳಂದು ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಿರುತ್ತದೆ. ಆದರೆ ಇಲ್ಲಿಗೆ ತಲುಪಲು ಉತ್ತಮ ಬಸ್ ಸೌಲಭ್ಯವಾಗಲೀ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಲಿ ಇರುವುದಿಲ್ಲ. ಭಕ್ತಜನರು ತಾವು ಖಾಸಗಿ ವಾಹನದಲ್ಲಿಯೋ, ಆಟೋ ರಿಕ್ಷಾಗಳಲ್ಲಿಯೋ ಆಗಮಿಸಬೇಕಿದೆ. 

Goddess Sri Lakshmi Chandrala Parameshwari



ಸುಮಾರು ಸಾವಿರದ ಇನ್ನೂರು ವರ್ಷದ ಇತಿಹಾಸ ಹೊಂದಿರುವ ಈ ಸನ್ನಿಧಿಯಲ್ಲಿ  ದವನದ ಹುಣ್ಣಿಮೆಯಂದು ಚಂದ್ರಲಾ ಪರಮೇಶ್ವರಿಯ ಉತ್ಸವ ಹಾಗೂ ಪಂಚಮಿಯಂದು ದೇವಿ ರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ಈ ಸಂದರ್ಭಕ್ಕೆ ಸಾವಿರಾರು ಜನರು ಸಾಕ್ಷಿಯಾಗುವರು.

***

ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ಸೀತಾದೇವಿ ಸಮೇತನಾಗಿ ಸನ್ನತಿಗೆ ಬಂದು ನಾರಾಯಣ ಹಾಗೂ ಚಂದ್ರವದರಾಗಿ ಇಲ್ಲಿ ನೆಲೆಸಿದ್ದರು.  ಆಗ ಇಲ್ಲಿನ ಸೇತುರಾಜ ಎಂಬುವನು ಚಂದ್ರವದಳತ್ತ ಆಕರ್ಷಿತನಾಗಿ ಅವಳಲ್ಲಿ ಅನುರಕ್ತನಾದ. ತನ್ನನ್ನೇ ವಿವಾಹವಾಗುವಂತೆ ಒತ್ತಾಯಿಸತೊಡಗಿದ. ಇದರಿಂದ ಚಂದ್ರವದ ಚಿಂತಾಕ್ರಾಂತಳಾದಳು. `ನಾನೀಗ ಒಂದು ವ್ರತಾಚರಣೆಯಲ್ಲಿರುವುದರಿಂದ ನೀನು ನನ್ನ ಬಳಿ ಸುಳಿಯಬೇಡ~ ಎಂದು ಅವನಿಗೆ ಹೇಳಿ ಅವನಿಂದ ವಾಗ್ದಾನ ಪಡೆದಳು. ಈ ವಿಷಯವನ್ನು ಚಂದ್ರವದ ನಾರಾಯಣನಿಗೆ ಹೇಳುವಳು. ಆಗ ನಾರಾಯಣ ಕಾಶ್ಮೀರಕ್ಕೆ ತೆರಳಿ ಹಿಂಗುಳಾಂಬಿಕೆಯನ್ನು ಕುರಿತು ತಪ್ಪಸ್ಸು ಮಾಡುವನು. 

ನಾರಾಯಣನ ತಪಸ್ಸಿಗೆ ದೇವಿ ಪ್ರತ್ಯಕ್ಷಳಾಗಿ ನೀನು ಹಿಂದಕ್ಕೆ ನೋಡದೆ ಮುಂದೆ ನಡೆ  ನಾನು ನಿನ್ನ ಹಿಂದೆ ಹಿಂದೆಯೇ ಬರುತ್ತೇನೆ ಎಂದು ಹೇಳುವಳು. ನಾರಾಯಣನು ದೇವಿಯ ಗೆಜ್ಜೆ ಸಪ್ಪಳ ಆಲಿಸುತ್ತಾ ಸನ್ನತಿ ಕಡೆಗೆ ನಡೆದು ಬರುತ್ತಿರುವಾಗ ಚಿತ್ತಾಪುರ ತಾಲೂಕಿನ ಹೊನಗುಂಟಿಯ ಬಳಿ ದೇವಿಯ ಗೆಜ್ಜೆ ಸಪ್ಪಳ ಕೇಳದೇ ಇದ್ದಾಗ ಹಿಂದಿರುಗಿ ನೋಡಿದನು. ಆಗ ಹಿಂಗುಳಾಂಬಿಕೆ ದೇವಿಯು ಅಲ್ಲೇ ತಟಸ್ಥಳಾಗುವಳು.


 Sri Lakshmi Chandrala Parameshwari Temple Sannathi
ನಂತರ ನಾರಾಯಣನಿಗೆ ತನ್ನ ಪಾದುಕೆಗಳನ್ನು ನೀಡಿ ಅವನ್ನು ಸನ್ನತಿಯಲ್ಲಿ  ಪ್ರತಿಷ್ಠಾಪಿಸಿ ನಂತರ ತೆಂಗಿನಕಾಯಿ ಒಡೆ. ಅದರಿಂದ ಬರುವ ಭೃಂಗಗಳು ಸೇತುರಾಜನಿಗೆ ತಕ್ಕ ಶಾಸ್ತಿ ಮಾಡುತ್ತವೆ ಎಂದು ಹೇಳುವಳು. ಇದರಿಂದ ಸಂತುಷ್ಟನಾದ ನಾರಾಯಣನು ಸನ್ನತಿಗೆ ಬಂದು ಪಾದುಕೆಗಳನ್ನು ಅಲ್ಲಿ ಪ್ರತಿಷ್ಠಾಪಿಸಿ, ಭಕ್ತಿಯಿಂದ  ತೆಂಗಿನಕಾಯಿ ಒಡೆಯುವನು. ಆಗ ಅದರಿಂದ ಹೊರಬಂದ ಭೃಂಗಗಳು ಸೇತುರಾಜನನ್ನು  ಬೆನ್ನಟ್ಟುತ್ತವೆ. ಅವುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಸೇತುರಾಜ ಭೀಮಾ ನದಿಯಲ್ಲಿ ಮುಳುಗಿ ಜಲಸಮಾಧಿಯಾದ.  ನಂತರ ಭೃಂಗಗಳು ದೇವಿಯ ಪಾದುಕೆಗಳನ್ನು ಸೇರಿದವು. ಆನಂತರ ಈ ಕ್ಷೇತ್ರ ಹಿಂಗುಳಾಂಬಿಕೆ, ಭ್ರಮರಾಂಬಿಕೆ, ಚಂದ್ರಲಾ ಪರಮೇಶ್ವರಿ ಎಂಬ ಹೆಸರುಗಳಿಂದ  ಪ್ರಸಿದ್ಧವಾಯಿತು. ಸೇತುರಾಜನು ಜಲಸಮಾಧಿ ಹೊಂದಿದ ಸ್ಥಳವನ್ನು `ಸೇತುರಾಜನ ಮಡುವು~ ಎಂದು ಹೆಸರಾಯಿತು.

Thursday, August 04, 2016

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 74

ಭಾವನಗರದ ನಿಷ್ಕಳಂಕ ಮಹಾದೇವ 
(Nishkalank Mahadev at Bhavanagar)



ಭಾರತದ ಪಶ್ಚಿಮದ ಭಾಗದಲಿನ ಗುಜರಾತ್ ರಾಜ್ಯವು ತನ್ನದೇ ಆದ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಇಲ್ಲಿನ ಭಾವನಗರದಲ್ಲಿರುವ ನಿಷ್ಕಳಂಕ ಮಹಾದೇವ ಸನ್ನಿಧಿಯು ಅಷ್ಟೇ ವಿಶಿಷ್ಟ ಪರಂಪರೆ, ಐತಿಹ್ಯವನ್ನು ಹೊಂದಿದ್ದಾಗಿದೆ. ಭಾವನಗರ ಜಿಲ್ಲೆ ಕೂಲಿಯಾಕ್ (ಬಾವನಗರದಿಂದ ಸುಮಾರು 30 ಕಿ.ಮೀ. ಅಂತರದಲ್ಲಿದೆ.)ಎನ್ನುವ ಪ್ರದೇಶದ ಸಮುದ್ರ ಕಿನಾರೆ ನಿಂದ  2 ಕಿ.ಮೀ ಅಂತರದಲ್ಲಿ ಸಮುದ್ರದ ನಡುವೆ ಮಹಾದೇವನ ಸನ್ನಿಧಾನವಿದ್ದು ಅದುವೇ ನಿಷ್ಕಳಂಕಘಾದೇವ ಸನ್ನಿಧಿ. ಇಲ್ಲಿ ಐದು ಶಿವಲಿಂಗಗಳಿದ್ದು ಎಲ್ಲವೂ ಸ್ವಯಂಭೂ ಲಿಂಗಗಳಾಗಿರುವುದು ವಿಶೇಷ. 

***

ಹಿಂದೆ ಕುರುಕ್ಷೇತ್ರ ಯುದ್ದದ ನಂತರ ಪಾಂಡವರಿಗೆ ಬಂಧುಗಳನ್ನು ಕೊಂದ ಕಳಂಕ ಅಂಟಿಕೊಂಡಿತ್ತು. ಆಗ ಕೃಷ್ಣನ ಬಳಿ ಬಂದ ಪಾಂಡವರು ತಾವು ಈ ಕಳಂಕದಿಂದ ಮುಕ್ತರಾಗುವುದಕ್ಕೆ ದಾರಿ ತೋರಿಸುವಂತೆ ಕೇಳಿದರು. ಆಗ ಕೃಷ್ಣ ಅವರಿಗೆ ಒಂದು ಕಪ್ಪು ಹಸು ಹಾಗೂ ಕಪ್ಪು ಬಾವುಟವನ್ನು ನೀಡಿ ಈ ಹಸು ಹಾಗೂ ಬಾವುಟಗಳು ಬಿಳಿ ಬಣ್ಣಕ್ಕೆ ತಿರುಗುವ ಸ್ಥಳದಲ್ಲಿ ಶಿವನನ್ನು ಕುರಿತು ತಪಸ್ಸನ್ನಾಚರಿಸಿದರೆ ನಿಮ್ಮ ಸರ್ವ ಪಾಪಗಳೂ ತೊಳೆದು ಹೋಗುವುದಾದ್ಗಿ ತಿಳಿಸುತ್ತಾನೆ. ಅದರಂತೆಯೇ ಪಾಂಡವರು ಹಸುವನ್ನು ಹಿಂಬಾಲಿಸಿಕೊಂಡು ಬರಲು ಈಗಿನ ಕೋಲಿಯಾಕ್ ಪ್ರದೇಶದ ಕಡಲ ಕಿನಾರೆಗೆ ಬಂದಾಗ ಹಸು ಹಾಗೂ ಬಾವುಟ್ಗಳು ಬಿಳಿ ವರ್ಣಕ್ಕೆ ಬದಲಾಯಿಸುತ್ತವೆ. ಆಗ ಪಾಂದವರು ಅಲ್ಲಿಯೇ ಶಿವನ ಕುರಿತಂತೆ ಘೋರ ತಪಸ್ಸನ್ನಆಚರಿಸುತ್ತಾರೆ. ಆ ತಪಸ್ಸಿಗೆ ಮೆಚ್ಚಿದ ಶಿವನು ಅವರಿಗೆ ಐದು ಶಿವಲಿಂಗಗಳನ್ನು ಅನುಗ್ರಹಿಸುತ್ತಾನೆ. ಅದನ್ನು ಅದೇ ಸ್ಥಳದಲ್ಲಿ ಪ್ರತಿಷ್ಠಾಪಿಸುವ ಪಾಂಡವರು ನಿತ್ಯ ಪೂಜೆ ನಡೆಸುತ್ತಾ ಬರುತ್ತಾರೆ. ಅದೇ ಶಿವಲಿಂಗಗಳನ್ನು ನಾವಿಂದು ನಿಷ್ಕಳಂಕ ಮಹಾದೇವ ಮಂದಿರದಲ್ಲಿ ನೋಡುತ್ತೇವೆ. ಈ ಐದು ಲಿಂಗಗಳಿಗೂ ಐದು ಪ್ರತ್ಯೇಕ ನಂದಿ ಇರುವುದು ಇನ್ನೊಂದು ವಿಶೇಷವಾಗಿದೆ. 

Monday, August 01, 2016

ಸಂಗೀತದ ಅರ್ಚನೆಯಲ್ಲಿ ತೊಡಗಿರುವ ಸುಮಧುರ ಗಾಯಕಿ ಅರ್ಚನಾ ಉಡುಪ

ಭಾವಗೀತೆ ಗಾಯನ ಪ್ರಪಂಚದಲ್ಲಿ ನೂತನ ಛಾಪು ಮೂಡಿಸಿದ ಹೊಸ ತಲೆಮಾರಿನ ಕನ್ನಡ ಗಾಯಕಿಯರಲ್ಲಿ ಅರ್ಚನಾ ಉಡುಪ ಅವರ ಹೆಸರು ಅತ್ಯಂತ ಪ್ರಮುಖವಾದದ್ದು. ಅರ್ಚನಾ ಉಡುಪ ತಾವು ಚಲನಚಿತ್ರ ಗೀತೆಗಳ ಹಾಡುವಿಕೆಯೊಂದಿಗೇ ಸುಗಮ ಸಂಗೀತದ ಪ್ರಕಾರದಲ್ಲಿಯೂ ಸಾಕಷ್ಟು ಪ್ರಯೋಗಗಳನ್ನು ನಡೆಸುತ್ತಾ ಬಂದಿದ್ದಾರೆ.   ಸಂತ ಶಿಶುನಾಳ ಷರೀಫರ ಹಾಡುಗಳಿಗೆ ಹೊಸರೂಪ ನೀಡಿ 'ಸೂಫಿಯಾನ ಶರೀಫ್' ಕಾರ್ಯಕ್ರಮ ನೀಡುವ ಮೂಲಕ ಸುಗಮ ಸಂಗೀತ ಲೋಕದಲ್ಲಿ ಹೊಸ ಮಜಲೊಂದನ್ನು ತೆರೆದಿದ್ದಾರೆ. ಝೀ ಟಿವಿ ಜನಪ್ರಿಯ ಕಾರ್ಯಕ್ರಮ "ಸರಿಗಮಪ" ನಲ್ಲಿ ವಿಜೇತರಾದ ಪ್ರಪ್ರಥಮ ದಕ್ಷಿಣ ಭಾರತೀಯರೆನ್ನುವುದು ಇವರ ಸಂಗೀತ ಸಾಧಬೆಗೆ ಇನ್ನೊಂದು ಗರಿ. ಮೈಸೂರು ಅನಂತ ಸ್ವಾಮಿ ಮತ್ತು ಸಿ. ಅಶ್ವಥ್ರಂಥ ಮಹಾನ್ ಗಾಯಕರ  ಮಾರ್ಗದರ್ಶನದಲ್ಲಿ ಅನೇಕ ಕವಿಗಳ ಗೀತೆಗಳಿಗೆ ಜೀವ ತುಂಬಿ ಹಾಡಿರುವ ಅರ್ಚನಾ ಹರಿಹರನ್, ಜೇಸುದಾಸ್, ಸೋನು ನಿಗಮ್, ಷಾನ್, ಜಗಜೀತ್ ಸಿಂಗ್, ಮನ್ನಾಡೆ ಹಾಗು ಎಸ್.ಪಿ. ಬಾಲಸುಬ್ರಮಣ್ಯರೊಂದಿಗೆ ದನಿಗೂಡಿಸಿ ಅನೇಕ ಸಮಾರಂಭಗಳಲ್ಲಿ ಸಮನಾಗಿ ವೇದಿಕೆ ಹಂಚಿಕೊಂಡ ಹೆಗ್ಗಳಿಕೆ ಹೊಂದಿದ್ದಾರೆ.



ಇಷ್ಟೇ ಅಲ್ಲದೆ ಇತ್ತೀಚೆಗೆ ಬಿಡುಗಡೆಯಾದ "ಆಟಗಾರ" ಕನ್ನಡ ಚಿತ್ರದಲ್ಲಿಯೂ, ನೂತನ ಕನ್ನಡ ಚಿತ್ರ "ಮಡಾಮಕ್ಕಿ" ಚಿತ್ರದಲ್ಲಿಯೂ ಅರ್ಚನಾ ಅವರ ನೂತನ ವಿಶಿಷ್ಟ್ಯಪೂರ್ಣವಾದ ಹಾಡುಗಳಿವೆ ಎನ್ನುವುದು ಕನ್ನಡ ಸಂಗೀತ ಪ್ರೇಮಿಗಳು ಗಮನಿಸಬೇಕಾದ ಅಂಶ.

ಹಿನ್ನೆಲೆ ಗಾಯನಕ್ಕಾಗಿ ರಾಜ್ಯ ಪ್ರಶಸ್ತಿ ಗಳಿಸಿರುವ ಅರ್ಚನಾ ತಾವು ಚಿಕ್ಕ ವಯಸ್ಸಿನಿಂದಲೇ ಹಾಡುಹಕ್ಕಿಯೆಂದು ಚಿರಪರಿಚಿತರಾಗಿದ್ದವರು. ಇವರ ತಂದೆ ಕಾಶವಾಣಿಾ ಗಾಯಕರಾಗಿ ಪ್ರಸಿದ್ದರಾದ ನಗರ ಶ್ರೀನಿವಾಸ ಉಡುಪ ಅವರೇ ಅರ್ಚನಾಗೆ ಮೊದಲ ಗುರು ಹಾಗು ವಿಮರ್ಶಕ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ನಗರ ಪಟ್ಟಣ ಸಮೀಪ ಬಿದನೂರು ಇವರ ಮೂಲ ಸ್ಥಳವಾಗಿದ್ದು ತಮ್ಮ 5 ನೇ ವಯಸ್ಸಿಗೆ ಬೆಂಗಳೂರಿಗೆ ಬಂದರು.

ಬಿದನೂರಿನ ಮನೆಯಲ್ಲಿರುವಾಗಲೇ ಅರ್ಚನಾ ಅವರಿಗೆ ಸಂಗೀತದ ವಾತಾವರಣ ದೊರಕಿತ್ತು. ಮಲೆನಾಡಿನ ಹಚ್ಚ ಹಸಿರಿನ ಪರಿಸರ, ಜತೆಗೆ ಮನೆಯಲ್ಲಿ ನಿತ್ಯವೂ ನಡೆಯುತ್ತಿದ್ದ ಭಜನೆಗಳು ಅವರಲ್ಲಿ ಸಂಗೀತದ ಕುರಿತ ಆಸಕ್ತಿ ಕೆರಳಿಸಿದ್ದವು. ಅವರಿಗೆ ಚಿಕ್ಕಂದಿನಿಂದಲೂ ತಾನೂ ತಂದೆಯಂತೆಯೇ ಹಾಡುಗಾರಳಾಗಬೇನ್ನುವ ತುಡಿತ ಇದ್ದಿತು.  ಇದಕ್ಕೆ ತಕ್ಕಂತೆಯೇ ತಂದೆ ಶ್ರೀನಿವಾಸ ಉಡುಪರೂ ಮಗಳ ಆಸಕ್ತಿಯನ್ನು ಪೋಷಿಸಿದ್ದರು. ನಗರದಲ್ಲಿ ಬಾಲಕೃಷ್ಣ್ ಎನ್ನುವವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸದಲ್ಲಿ ತೊಡಗಿದ್ದ ಅರ್ಚನ ಬೆಂಗಳೂರಿಗೆ ಬಂದ ನಂತರ ರಾಧಾಕೃಷ್ಣ ಅವರ ಬಳಿ ಹಿಂದೂಸ್ತಾನಿ ಗಾಯನ, ಪಂಡಿತ್ ಬಿ.ವಿ. ರವೀಂದ್ರ, ಡಾ. ಶಕುಂತಲಾ ನರಸಿಂಹನ್ ಅವರ ಬಳಿ ಸಂಗೀತಾಭ್ಯಾಸ ನಡಿಸಿದ್ದಾರೆ.

ಇಂದು "ಗಾಂಧಾರ" ಸಂಸ್ಥೆಯನ್ನು ಪ್ರಾರಂಭಿಸಿ ಅದರ ಮೂಲಕ ಸಂಗೀತ ಪ್ರಿಯರ ಮನದಣಿಸುತ್ತಿರುವ ಅರ್ಚನಾ ಅವರೊಡನೆ ನಿಮ್ಮ "ಗೃಹಶೋಭಾ" ನಡೆಸಿದ ಸಂದರ್ಶನದ ಪ್ರಮುಖ ಭಾಗ ಇಲ್ಲಿದೆ-



"ಗಾಂಧಾರ"ಸಂಸ್ಥೆಯ ಹಿನ್ನೆಲೆ...
ಒಳ್ಳೆಯ ಕಿವಿಗಳಿಗೆ ಒಳ್ಳೆಯ ಸಂಗೀತ ಕೊಡುವ ಉದ್ದೇಶದಿಂದ "ಗಾಂಧಾರ" ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ಚಿತ್ರ ಸಂಗೀತ, ಶಾಸ್ತ್ರೀಯ ಸಂಗೀತ ಎರ್ಡರಲ್ಲಿಯೂ ಒಳ್ಳೆಯ ಉತ್ತಮವಾದ ಸಂಗೀತವನ್ನು ಆಯ್ದುಕೊಂಡು ಅದನ್ನು ಜನಗಳಿಗೆ ತಲುಪಿಸಬೇಕು ಎನ್ನುವುದು ಇದರ ಮೂಲ ಉದ್ದೇಶವಾಗಿದೆ. ಕಳೆದ ಆರು ವರ್ಷಗ್ಳಿಂದ್ಲೂ ಇದೇ ಉದ್ದೇಶವನ್ನಿಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರಲಾಗುತ್ತಿದೆ.

ಮೊದಲ ಕಾರ್ಯಕ್ರಮ ರಾಜನ್ ನಾಗೇಂದ್ರ ಅವರಿಗೆ ಮೀಸಲಾಗಿತ್ತು. ಅಂದು ರಾಜನ್ ಅವರನ್ನು ಸನ್ಮಾನಿಸಿದ್ದಲ್ಲದೆ ಅವರ ಸಂಗೀತ ನಿರ್ದೇಶನದ ಗೀತೆಗಳನ್ನೇ ಹಾಡಲಾಗಿತ್ತು. ಆ ಕಾರ್ಯಕ್ರಮವನ್ನು ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಉದ್ಘಾಟಿಸಿದ್ದರುಮುಂದೆ ಸುಗಮ ಸಂಗೀತ ಕ್ಷೇತ್ರದ ಹಿರಿಯ ಗಾಯಕಿಯರನ್ನು ಒಟ್ಟು ಸೇರಿಸಿ ಅವರ ಗೀತೆಗಳನ್ನು ಹಾಡುವ ಕಾರ್ಯಕ್ರಾಮ ನಡೆಸಿ ಕೊಟ್ಟೆವು. ಅದೇ ಸಮಯದಲ್ಲಿ ನಾನು ಸಂಗೀತ ಸಂಯೋಜನೆ ಮಾಡಿದ "ಬಾಳೇ ಗಾಯನ" ಹೆಸರಿನ ಹಾಡುಗಳ ಸಿ.ಡಿ.ಯನ್ನು ಬಿಡುಗಡೆಗೊಳಿಸಲಾಯಿತು. ಮೂರನೇ ವರ್ಷದ ಕಾರ್ಯಕ್ರಮದಲ್ಲಿ ಶಿಶುನಾಳ್ ಷರೀಫರ ಹಾಡುಗಳಿಗೆ ಹೊಸ ರೂಪ ನೀಡಿ ಹಾಡುವ ಪ್ರಯತ್ನ ನಡೆಯಿತು. ಇದರಲ್ಲಿ ಸೂಫಿ ಸಂಗೀತಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದ್ದು ಬಹುತೇಕ ಗೀತೆಗಳಿಗೆ ನಾನೇ ಸಂಗೀತ ಸಂಯೋಜನೆ ಮಾಡಿದ್ದೆ. ಇನು ಕಳೆದ ವರ್ಷದ "ಗಾಂಧಾರ" ವಾರ್ಷಿಕ ಕಾರ್ಯಕ್ರಮವನ್ನು ಪ್ರೇಮಿಗಳ ದಿನದ ವಿಶೇಷವಾಗಿ ರೂಪಿಸಲಾಯಿತು. ಇದರಲ್ಲಿ ಕನ್ನಡ, ಹಿಂದಿ, ತಮಿಳು ಹೀಗೆ ಎಲ್ಲಾ ಭಾಷೆಗಳ ಉತ್ತಮ ಯುಗಳ ಗೀತೆಗಳನ್ನು ಆಯ್ಕೆ ಮಾಡಿ ಹಾಡಲಾಗಿತ್ತು.

ತಂದೆ, ಮಾವನವರ ಕುಟುಂಬದ ಕುರಿತಾಗಿ......
ನಾನು ಇಂದು ಇಷ್ಟರ ಮಟ್ಟಿಗೆ ಬೆಳೆಯಲು ನನ್ನ ತಂದೆ, ತಾಯಿಗಳೇ ಕಾರಣ. ತಾಯಿ ನನಗೆ ತೆರೆಮರೆಯಿಂದ ಬೆಂಬಲ ನೀಡಿದರೆ ತಂದೆ ನನ್ನಲ್ಲಿನ ಸಂಗೀತಾಸಕ್ತಿಯನ್ನು ಗುರುತಿಸಿ ಬೆಳೆಸಿದವರು. ನಗರದಂತಹಾ ಚಿಕ್ಕ ಊರಿನಲ್ಲಿದ್ದರೆ ನನ್ನ ಪ್ರತಿಭೆಗೆ ತಕ್ಕ ಪೋಷಣೆ ಸಿಗಲಾರದೆಂದು ಬೆಂಗಳೂರಿಗೆ ತಮ್ಮ ವಾಸವನ್ನು ಬದಲಾಯಿಸಿದರು. ಇಂದು ಅವರ ಕನಸನ್ನು ನಾನು ಜೀವಿಸುತ್ತಿದ್ದೇನೆ. ನಾನು ದೊಡ್ಡ ಗಾಯಕಿ ಆಗಬೇಕು ಎನ್ನುವುದು ಅವರ ಮುಖ್ಯ ಕನಸು.ಐಂದು ನಾನು ಅದನ್ನು ತಕ್ಕ ಮಟ್ಟಿಗೆ ನನಸಾಗಿಸಿದ್ದೇನೆ ಎನ್ನುವ ತೃಪ್ತಿ ನನಗಿದೆ.

ಮದುವೆಯ ನಂತರ ನಾನು ಸೇರಿದ ಮನೆಯಲ್ಲಿಯೂ ನನಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ನನ್ನ ಅತ್ತೆ ನನ್ನನ್ನು ಸಹ ಅವರ ಮಗಳಂತೆಯೇ ಕಂಡಿದ್ದಾರೆ. ನನ್ನ ಪತಿ ಸಹ ನನ್ನ ಹಾಡುಗಳನ್ನು ಕೇಳಿ ಸಂತೋಷ ಪಡುವರಲ್ಲದೆ ನನಗೆ, ನನ್ನ ಹಾಡುಗಾರಿಕೆಗೆ  ಎಂದೂ ತಡೆಯೊಡ್ಡಿದವರಲ್ಲ. ನನ್ನ ಮಕ್ಕಳಿಗೂ ಸಹ ಸಂಗೀತದ ಬಗ್ಗೆ ಆಸಕ್ತಿ ಇದೆ. ಆದರೆ ಇನ್ನೂ ಶಾಸ್ತ್ರೀಯವಾಗಿ ಸಂಗೀತಾಭ್ಯಾಸದಲ್ಲಿ ತೊಡಗಿಕೊಂಡಿಲ್ಲ ಅಷ್ಟೆ. ನನ್ನ ಮಾವನವರು, ಅವರು ಸಹ ದೊಡ್ಡ ಸಂಗೀತಗಾರರು, ನನಗೂ ಸಾಕಷ್ಟು ಸಹಕಾರ ನೀಡುತ್ತಾ ಬಂದಿದ್ದಾರೆ. ಇವರೆಲ್ಲರ ಒಟ್ಟೂ ಬೆಂಬಲದಿಂದ ನಾನು ಇಂದು ಇಷ್ಟರ  ಮಟ್ಟಿಗೆ ಸಾಧನೆ ಮಾಡಲು ಸಾಧ್ಯವಾಗಿದೆ.



ಸಂಗೀತ ನಿರ್ದೇಶನದ ಕುರಿತಂತೆ...
ನನಗೆ ಚಿಕ್ಕಂದಿನಲ್ಲಿ ಸಂಗೀತದ ಕುರಿತಂತೆ ಆಸಕ್ತಿ ಇತ್ತಾದರೂ ಸಂಗೀತ ನಿರ್ದೇಶನದ ಯೋಚನೆ ಇರಲಿಲ್ಲ. ಆದರೆ ನಾನು ಚಿಕ್ಕವಳಿದ್ದಾಗಲೇ ಮಕ್ಕಳ ಶಿಶು ಗೀತೆಗಳಿಗೆ ತನ್ನದೇ ಆದ ರೀತಿಯಲ್ಲಿ ರಾಗ ಸಂಯೋಜನೆ ಮಾಡುತ್ತಿದ್ದೆ. ಆದರೆ ಅದಾವುದನ್ನೂ ಸಂಗ್ರಹಿಸಿಟ್ಟಿಲ್ಲ. ನನಗೆ ಖುಷಿ ಎನಿಸಿದ್ದನ್ನು ತನಗಿಷ್ಟವಾಗುವಂತೆ ಹಾಡಿಕೊಳ್ಳುತ್ತಿದ್ದೆ, ಬಳಿಕ ಮರೆತೂ ಹೋಗುತ್ತಿತ್ತು. ಆದರೆ ಬೆಂಗಳೂರಿಗೆ ಬಂದ ನಂತರ ನನಗೆ ಸುಗಮ ಸಂಗೀತದ ಆಲ್ಬಂ ಮಾಡಲು ಯೋಚನೆ ಬಂದಿತ್ತು. ಆಗ ನನಗೆ ಮೊದಲಿನಿಂದ ಪರಿಚಯವಿದ್ದ ಲಕ್ಷ್ಮಿ ನಾರಾಯಣ ಭಟ್ಟರು ಹಾಗೂ ಎಚ್.ಎಸ್. ವೆಂಕಟೇಶ ಮೂರ್ತಿಗಳ ಕವನ ಸಂಗ್ರಹಗಳನ್ನು ಆಯ್ಕೆ ಮಾಡಿಕೊಂಡು ಕೆಲವು ಗೀತೆಗಳಿಗೆ ರಾಗ ಸಂಯೋಜನೆ ಮಾಡಿದ್ದೆ. ಮತ್ತು ಇಬ್ಬರಿಗೂ ಹಾಡಿ ತೋರಿಸಲು ಅವರಿಗೂ ಅದು ಸಂತೋಷವನ್ನು ತಂದಿತ್ತು. ಇದರಿಂದ ನನಗೂ ಸಹ ಸಂತಸ ಜತೆಗೆ ನಾನೂ ಸಂಗೀತ ನಿರ್ದೇಶನಕ್ಕೆ ತೊಡಗಬಹುದು ಎನ್ನುವ ಧೈರ್ಯ ಬಂದಿತು.

ಸುಗಮ ಸಂಗೀತದ ಇಂದಿನ ಸ್ಥಿತಿ ಗತಿ....
ಮೈಸೂರು ಅನಂತಸ್ವಾಮಿ, ಕಾಂಳಿಂಗರಾಯರ ಕಾಲದಲ್ಲಿದ್ದ ವೈಭವ ಈಗಿಲ್ಲ ಎನ್ನುವುದು ನಿಜ. ಆದರೆ ಇಂದು ಸಹ ಸುಗಮ ಸಂಗೀತಕ್ಕೆ ಅದರದೇ ಆದ ಕೇಳುಗರಿದ್ದಾರೆ. ಇದು "ಕ್ಲಾಸ್ ಮ್ಯೂಸಿಕ್". ಸುಗಮ ಸಂಗೀತಕ್ಕೆ ಉತ್ತಮ ಭವಿಷ್ಯವಿದೆ ಎನ್ನಲು ಒಂದು ಉದಾಹರಣೆ ನೀಡುವುದಾದರೆ ಇತ್ತೀಚೆಗೆ ಝೀ ಕನ್ನಡದಲ್ಲಿ ನಡೆದ ಸರಿಗಮಪ ಕಾರ್ಯಕ್ರಮಕ್ಕೆ ನನ್ನನ್ನು ತೀರ್ಪುಗಾರಳಾಗಿ ಆಹ್ವಾನಿಸಿದ್ದಾಗ ಅಲ್ಲಿ ಸುಗಮ ಸಂಗೀತಕ್ಕಾಗಿ ಎರಡು ದಿನಗಳ ಕಾರ್ಯಕ್ರಮ ಆಯೋಜಿಸಿದ್ದದ್ದು, ಅಲ್ಲಿನ ಸ್ಪರ್ಧಿಗಳೆಲ್ಲರೂ ಉತ್ತಮ ರೀತಿಯಲ್ಲಿ ಸುಗಮ ಸಂಗೀತ ಹಾಡಲು ಪ್ರಯತ್ನ ನಡೆಸಿದ್ದರೆನ್ನುವುದು ಗಮನಾರ್ಹ.

ಚಿತ್ರ ಸಂಗೀತಕ್ಕೂ ಸುಗಮ ಸಂಗೀತಕ್ಕೂ ಇರುವ ವಿಭಿನ್ನತೆ ಕುರಿತಂತೆ....
ಸಂಗೀತದಲ್ಲಿ ಭೇಧವಿಲ್ಲವೆನ್ನುವುದು ನನ್ನ ಅನಿಸಿಕೆ. ಸಾಹಿತ್ಯದಲ್ಲಿ ಕೆಟ್ಟ ಸಾಹಿತ್ಯವಿರಬಹುದು ಆದರೆ ಸಂಗೀತದಲ್ಲಿ ಒಳ್ಳೆಯದು, ಕೆಟ್ಟದ್ದು ಎನ್ನುವುದು ಇಲ್ಲ ಎಂದು ರಾಜನ್ ಅವರೊಮ್ಮೆ ಹೇಳಿದ್ದನ್ನು ನೆನೆಯಬಹುದು. ಸಂಗೀತ ಕೇಳುಗರು ಹಾಗೂ ಹಾಡುವವರನ್ನು ಅವಲಂಬಿಸಿ ಅದು ಒಳ್ಳೆಯದೋ ಕೆಟ್ಟದ್ದೋ ಆಗಬಹುದು. ಆದರೆ ಎಲ್ಲಾ ಸಂಗೀತಕ್ಕೂ ಅದರದೇ ಆದ ಸೌಂದರ್ಯವಿದೆ. ಹೀಗಾಗಿ ಶ್ರೇಷ್ಠವಾದ ಸಂಗೀತ ಅದು ಚಿತ್ರಗೀತೆಯಾಗಲಿ, ಸುಗಮ ಸಂಗೀತವೇ ಆಗಲಿ ಸರ್ವ ಕಾಲಕ್ಕೂ ಸಲ್ಲುತ್ತದೆ.

ಇನ್ನು ನನ್ನ ಮಟ್ಟಿಗೆ ಹೇಳುವುದಾದಲ್ಲಿ ಸ್ಟುಡಿಯೋದಲ್ಲಿ ಹಾಡುವುದಕ್ಕಿಂತಲೂ ಲೈವ್ ಆಗಿ ಹಾಡುವುದು ಸ್ವಲ್ಪ ಕಷ್ಟ್ದ ಕೆಲಸ. ಏಕೆಂದರೆ ಸ್ಟುಡಿಯೋದಲ್ಲಿ ನಮಗೆ ಹಲವು ಟೇಕ್ ಗಳು ದೊರೆಯುತ್ತವೆ. ಲೈವ್ ನಲ್ಲಿ ಹಾಗಾಗುವುದಿಲ್ಲ. ಜತೆಗೆ ನಾವ್ ಸಾಹಿತ್ಯಕ್ಕೆ ತಕ್ಕಂತೆ ಭಾವನೆಗಳನ್ನು ವ್ಯಕ್ತಪಡಿಸಿ ಒಂದೇ ಟೇಕ್ ನಲ್ಲಿ ಹಾಡವುದು ಸಾಹಸವೇ ಎನ್ನಬಹುದು.

ಭವಿಷ್ಯದ ಸಂಗೀತಗಾರರಿಗೆ ಸಲಹೆಗಳು....
ಈಗ ಅವಕಾಶಗಳು ಹೇರಳವಾಗಿವೆ. ಯು ಟ್ಯೂಬ್ ನಿಂದ ಹಿಡಿದು ರಿಯಾಲಿಟಿ ಶೋ ವರೆಗೂ ಅವಕಾಶಗಳಿದ್ದರೂ ಜನರು ಬೇಗನೇ ಬೇಸರ್ಗೊಳ್ಳುತ್ತಿದ್ದಾರೆ ಎನಿಸುತ್ತಿದೆ. ಎಂದರೆ ಇಂದಿನ ಪೀಳಿಗೆಯವರು ನಿತ್ಯವೂ ಹೊಸತನ್ನು ನಿರೀಕ್ಷಿಸುತ್ತಾರೆ. ಇದು ಸ್ವಲ್ಪ ಮಟ್ಟಿಗೆ ಆಘಾತಕರ ಸನ್ನಿವೇಶವೇ ಹೌದು. ಈಗಿನ ಪೀಳಿಗೆಯವರಿಗೆ ಕಾಯುವ ತಾಳ್ಮೆ ಇಲ್ಲ. ತಕ್ಷಣವೇ ಪ್ರಸಿದ್ದರಾಗಬೇಕು. ಅವರಿಗೆ ಕಲಿಯಬೇಕೆನ್ನುವ ಹಸಿವು ಕಡಿಮೆಯಾಗಿದೆ ಎನ್ನುವುದು ನನ್ನ ಭಾವನೆ.

 ಶಾಸ್ತ್ರೀಯವಾಗಿ ಸಂಗೀತವನ್ನು ಕಲಿಯುವುದು ಬಹಳ ಮುಖ್ಯ. ಯಾರು ಏನನ್ನು ಸಹ ಹಾಡಬಹುದು ಆದರೆ ಕಲಿಯುವುದನ್ನು ಕ್ರಮಬದ್ದವಾಗಿ ಕಲಿಯಬೇಕು. ಬೇರು ಗಟ್ಟಿಯಾಗಿದ್ದಾಗ ಮಾತ್ರ ಮರ ಗಟ್ಟಿಯಾಗಿರಲು ಸಾಧ್ಯ. ಅವಕಾಶಗಳ ಹಿಂದೆ ನಾವು ಬೀಳುವ ಬದಲು ನಮ್ಮನ್ನು ಅವಕಾಶಗಳು ಹುಡುಕಿ ಬರುವಂತೆ ಮಾಡಬೇಕು. ನಮ್ಮತನವನ್ನು ನಾವು ಕಾಯ್ದುಕೊಳ್ಳಬೇಕು. ಆತ್ಮಗೌರವ ಕಾಪಾಡಿಕೊಂಡಾಗ ಆತ್ಮ ವಿಶ್ವಾಸ ಹೆಚ್ಚುತ್ತದೆ. ಹೀಗೆ ಮಾಡಿದಾಗ ನಾವು ಹೆಚ್ಚು ಕಾಲ ಸಂಗೀತ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆಸಭುದು.

(ಈ ನನ್ನ ಲೇಖನವು ಕನ್ನಡದ ಹೆಸರಾಂತ ಮಹಿಳಾ ಮಾಸಿಕ "ಗೃಹಶೋಭಾ"ದ ಜುಲೈ 2016ರ ಸಂಚಿಕೆಯಲ್ಲಿ ಪ್ರಕಟಗೊಂಡಿದೆ.)