Friday, November 21, 2014

ಕಂಬಳ: ಇತಿಹಾಸ, ವರ್ತಮಾನ ಭವಿಷ್ಯ

(ಇದು ನಿನ್ನೆ - 21/11/2014 ರಂದು ಕರಾವಳಿ ಕರ್ನಾಟಕ ಜಾಲತಾಣದಲ್ಲಿ ಪ್ರಕಟವಾದ ನನ್ನ ಲೇಖನ.)
ಶತಮಾನಗಳ ಇತಿಹಾಸ ಹೊಂದಿರುವ ಕರ್ನಾತಕದ ಕರಾವಳಿಯಲ್ಲಿನ ಕಂಬಳ ಕ್ರೀಡೆಗೆ ಇದೀಗ ಕಂತಕವು ಎದುರಾಗಿದೆ. ಹೋರಿಗಳನ್ನು ಹಿಂಸಾತ್ಮಕವಾಗಿ ಬೆದರಿಸುವ ತಮಿಳುನಾಡಿನ ಜಲ್ಲಿಕಟ್ಟು ಸ್ಪರ್ಧೆ ಮತ್ತು ಮಹಾರಾಷ್ಟ್ರದ ಎತ್ತಿನ ಗಾಡಿ ಓಟದ ಸ್ಪರ್ಧೆಯನ್ನು ಸುಪ್ರೀಂ ಕೋರ್ಟ್ 2014ರ ಮೇ 7ರಂದು ನಿಷೇಧಿಸಿ ಆದೇಶ ಹೊರಡಿಸಿತ್ತು. ಪ್ರಾಣಿಗಳನ್ನು ಮನರಂಜನೆಗಾಗಿ ಹಿಂಸಾತ್ಮಕವಾಗಿ ನಡೆಸಿಕೊಳ್ಳಬಾರದು ಎಂಬುದು ನ್ಯಾಯಾಲಯದ ತೀರ್ಪಿನ ತಾತ್ಪರ್ಯವಾಗಿತ್ತು. ಇದೀಗ ಸುಪ್ರೀಂ ಕೊರ್ಟ್ ತೀರ್ಪಿನ ಹಿನ್ನೆಲೆಯನ್ನಿಟ್ಟುಕೊಂಡು ಭಾರತೀಯ ಪ್ರಾಣಿಗಳ ಕಲ್ಯಾಣ ಮಂಡಳಿ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಕಂಬಳ ನಡೆಸದಂತೆ ಸೂಚಿಸಿದೆ. ಹೀಗಾಗಿ ದ.ಕ ಜಿಲ್ಲಾಡಳಿತದ ಕ್ರೀಡೆಗೆ ನಿಷೇಧ ಹೇರಿದೆ. ಈ ಹಿನ್ನೆಲೆಯಲ್ಲಿ ಕಂಬಳದ ಆಚರಣೆ, ಇತಿಹಾಸ, ಹಿನ್ನೆಲೆಯ ಮೇಲೆಂದು ಇಣುಕು ನೋಟವಿಲ್ಲಿದೆ.


ಕರಾವಳಿ ಕರ್ನಾಟಕದ ಬೇಸಾಯ ವೃತ್ತಿಯೇ ಪ್ರಮುಖವಾಗಿರುವ ಸಮಾಜದಲ್ಲಿ ಕೋಣಗಳು ಅವರ ಬದುಕಿನ ಅವಿಭಾಜ್ಯ ಅಂಗವಾಗಿ ಹೋಗಿದೆ.  ಬೇಸಾಯಗಾರರು ಬತ್ತದ ಗದ್ದೆಗಳಲ್ಲಿ ಉತ್ತಿದ ಬಳಿಕ ಕೋಣ ಎತ್ತುಗಳನ್ನು ಓಡಿಸುತ್ತಿದ್ದ ಆಚರಣೆ ಮತ್ತು ಆಟ ‘ಕಂಬಳ’. ಕಂಬಳ ಅತವಾ ತುಳು ಬಾಶೆಯಲ್ಲಿ ಹೇಳುವಂತೆ ‘ಕಂಬುಲ’ ಎಂದರೆ ಉಳುವುದಕ್ಕೆ ಮತ್ತು ಬೀಜಗಳ ಬಿತ್ತನೆಗೆ ಸಿದ್ದವಾಗಿರುವ ಕೆಸರುಗದ್ದೆ ಎಂದೇ ಹುರುಳು. ಕೆಸರುಗದ್ದೆಯಲ್ಲಿ, ಬಾಕಿಮಾರು ಗದ್ದೆಯಲ್ಲಿ, ಕಂಬಳ ಗದ್ದೆಯಲ್ಲಿ ದಪ್ಪನೆ ಮಯ್ಯ, ಸಾಕಿದ ಕೋಣಗಳನ್ನು ಓಡಿಸುವುದು ಒಂದು ಮನೋರಂಜನೆ ಆಟ. ಹೀಗೆಂದ ಮಾತ್ರಕ್ಕೆ ಕಂಬಳವು ಕೇವಲ ಕೋಣಗಳ ಓಟದ ಸ್ಪರ್ಧೆಯು ಮಾತ್ರವೇ ಎಂದು ತಿಳಿಯಬೇಕಿಲ್ಲ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿನ ರೈತರು ಭತ್ತದ ಕೊಯ್ಲಿನ ಬಳಿಕದಲ್ಲಿ ಮನರಂಜನೆಗಾಗಿ ಏರ್ಪಡಿಸುತ್ತಿದ್ದ ಆಟವಿದಾಗಿದ್ದು ಇಂತಹಾ ಆಚರಣೆಯ ಜತೆಗೆ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಧಾರ್ಮಿಕ ನಂಬಿಕೆಯೂ ಮಿಳಿತಗೊಂಡಿದೆ.

ಕಂಬಳ ಪದದ ನಿಷ್ಪತ್ತಿ
ಕಂಪ ಎಂಬುದಕ್ಕೆ ಕೆಸರು ಎಂಬ ಅರ್ಥವಿದೆ. ಆದ್ದರಿಂದ ಕಂಪ+ಪೊಲ>ಕಂಬುಲ ಆಯಿತು ಎಂದು ಹೇಳಲಾಗುತ್ತದೆ. ಕಳ ಎಂಬುದಕ್ಕೆ ಸ್ಪ್ರರ್ಧೆಯ ವೇದಿಕೆ, ಕಣ ಎಂಬ ಅರ್ಥವಿರುವುದರಿಂದ ಕಂಪದ ಕಳ>ಕಂಬಳ ಆಗಿರಬಹುದು ಎಂದೂ ನಂಬಿಕಕೆಯಿದೆ. ಸಾಮಾನ್ಯವಾಗಿ ಗದ್ದೆಗಳ ಸಾಲಿನಲ್ಲಿ ಕೊನೆಯದಾದ, ಅತ್ಯಂತ ಕೆಳಗಿನ ಗದ್ದೆಗೆ ತುಳುವಿನಲ್ಲಿ ಕಂಬಳ ಎನ್ನುತ್ತಾರೆ. ಕೊನೆಯಲ್ಲಿರುವ ಗದ್ದೆಯಾದ ಕಾರಣ ಇದರಲ್ಲಿ ಸಾಮಾನ್ಯವಾಗಿ ಕೆಸರು ಜಾಸ್ತಿ. ಆದ್ದರಿಂದ ತುಳುವಿನಲ್ಲಿ ಕಂಪದ ಕಂಡ (ತುಳುವಿನಲ್ಲಿ ಗದ್ದೆಗೆ ಕಂಡ ಎನ್ನುತ್ತಾರೆ) ಕಂಬಳ ಆಗಿರಬಹುದು. ನುಡಿಯರಿಮೆಯ ಕಣ್ಣಿನಿಂದ ನೋಡಿದಾಗ ಳ>ಡ ಗಳು ಹಲವೆಡೆ ಪರಸ್ಪರ ಬದಲಾಗಿರುವುದು ಕಂಡುಬರುತ್ತದೆ.

ಕಂಬಳದ ಇತಿಹಾಸ
ಕರಾವಳಿಯಲ್ಲಿ ಕಂಬಳದ ಆಚರಣೆ ಸುಮಾರು 800-900 ವರುಶಗಳ ಹಿಂದಿನಿಂದಲೇ ನಡೆದುಕೊಂಡು ಬಂದಿದೆ. ಉಡುಪಿ ತಾಲೂಕಿನ ಕೆಂಜೂರಿನ ಸಮೀಪ ದೊರಕಿದ ಆಳುಪ ರಾಣಿ ಬಲ್ಲಮಹಾದೇವಿಗೆ ಸಂಬಂದಿಸಿದ ಶಾಸನದಲ್ಲಿ ಕಂಬಳದ ಬಗ್ಗೆ ಹೇಳಲಾಗಿದೆ. ಇದರ ಕಾಲ ಕ್ರಿ. ಶ.1200 (ಶಕ ವರುಶ 1281). ಕಂಬಳ ಆಚರಣೆಯು ಸುಗ್ಗಿ ಬೆಳೆಯ ಬಿತ್ತನೆಯ ಸಮಯದಲ್ಲಿ ನಡೆಯುತ್ತದೆ. ಕುಂದಾಪುರ ಕನ್ನಡದಲ್ಲಿ ಸುಗ್ಗಿ ಅಗೇಡಿ ಎಂದರೆ ಸುಗ್ಗಿಯ ನೇಜಿ ಬಿತ್ತುವ ಜಾಗ. ಸುಗ್ಗಿ ಅಗೇಡಿ > ಸುಗ್ಗೇಡಿ > ಸುಗ್ಗಾಡಿ ಎಂದು ಪ್ರಯೋಗವಾಗಿರಬಹುದು ಇದರಿಂದ ಕಂಬಳ ಕನಿಶ್ಟ ಎಂಟುನೂರು ವರುಶಗಳಿಂದ ಆಚರಿಸಲ್ಪಡುತ್ತಾ ಬಂದಿದೆ ಎಂದು ಸ್ಪಶ್ಟವಾಗುತ್ತದೆ. ಕ್ರಿ. ಶ. 1421ರ ಬಾರಕೂರು ಶಾಸನದಲ್ಲಿ “ದೇವರು ಸಾವಂತನ ಕಂಬಳ ಗದ್ದೆಯ ಮೇಲೆ” ಎಂದು ಕಂಬಳಗದ್ದೆಯನ್ನು ಹೇಳಲಾಗಿದೆ. ಇನ್ನು  ಕ್ರಿ. ಶ. 1424ರ ಬಾರಕೂರು ಶಾಸನದಲ್ಲಿ, ಕ್ರಿ. ಶ. 1437ರ ಉಡುಪಿ ಶಾಸನ, ಕ್ರಿ. ಶ. 1482ರ ಕೊಲ್ಲೂರು ಶಾಸನ, ಕ್ರಿ. ಶ. 1521ರ ಬಾರಕೂರು ಶಾಸನ, ಕ್ರಿ. ಶ. 1676ರ ಸುಬ್ರಹ್ಮಣ್ಯದ ಕಲ್ಲುಮಾಣೆರು ಶಂಕರದೇವಿ ಬಲ್ಲಾಳ್ತಿಯ ಹೆಸರಿನಲ್ಲಿರುವ ಶಾಸನಗಳಲ್ಲಿ ನಮಗೆ ಕಂಬಳ ಹಾಗೂ ಕಂಬಳ ಗದ್ದೆಗಳ ಉಲ್ಲೇಖ ದೊರಕುತ್ತದೆ.

ಕಂಬಳದ ಆಚರಣೆ ಹಾಗೂ ವಿಧಾನಗಳು
ಮೊದಲ ಭತ್ತದ ಬೆಳೆಯ ಕೊಯ್ಲು ಮುಗಿದು ಎರಡನೆಯ ಸುಗ್ಗಿ ಬೆಳೆಗೆ ಭೂಮಿ ಹದಮಾಡುವ ಸಮಯದಲ್ಲಿ ದೊರೆಯುವ ಬಿಡುವಿನ ವೇಳೆಯಲ್ಲಿ ನಡೆಯುವ ಆಚರಣೆಯೇ ಕಂಬಳ. ಕಂಬಳ ಅಥವಾ ತುಳು ಭಾಷೆಯಲ್ಲಿ ಹೇಳುವಂತೆ ‘ಕಂಬುಲ’ ಎಂದರೆ ಉಳುವುದಕ್ಕೆ ಮತ್ತು ಬೀಜಗಳ ಬಿತ್ತನೆಗೆ ಸಿದ್ಧವಾಗಿರುವ ಕೆಸರುಗದ್ದೆ ಎಂಬ ಅರ್ಥವಿದ್ದು ಕಂಬಳ ಎಂದರೆ ಕೇವಲ ಕೋಣಗಳ ಓಟದ ಪಂದ್ಯವಲ್ಲ. ಅದಕ್ಕೆ ಸಂಬಂಧಿಸಿದ ಅನೇಕ ಆಚರಣೆಗಳಿವೆ.  
ಕಾರ್ತಿಕ ಮಾಸದ ದೀಪಾವಳಿ ಹಬ್ಬದ ನಂತರ ಚಳಿಗಾಲದಲ್ಲಿ ಆರಂಭವಾಗುವ ಈ ಜಾನಪದ ಕ್ರೀಡೆಯನ್ನು, ಮಾರ್ಚ್ ತಿಂಗಳವರೆಗೂ ಅವಳಿ ಜಿಲ್ಲೆಯ ವಿವಿಧ ಭಾಗದಲ್ಲಿ ಆಯೋಜಿಸಲಾಗುತ್ತದೆ. ಈ ಕಂಬಳದಲ್ಲಿ ಒಟ್ಟು ಎರಡು ವಿಧವಿದೆ, ಒಂಟಿ ಗೆದ್ದೆಯ ಕಂಬಳ ಮತ್ತು ಜೋಡುಕರೆ ಕಂಬಳ. ಅಂದಾಜು 100-200 ಮೀಟರ್ ಉದ್ದದ ಓಟದ ಕಣಗಳಲ್ಲಿ ಕಂಬಳ ಸಾಮಾನ್ಯವಾಗಿ ನಡೆಯುತ್ತದೆ. ಗದ್ದೆಯ ಮಣ್ಣಿಗೆ ಮರಳು ಸೇರಿಸಿ ಅದರ ಮೇಲೆ ನೀರು ನಿಲ್ಲಿಸಲಾಗುತ್ತದೆ. ಕಂಬಳದ ಅಂಕಣವು ನೆಲ ಮಟ್ಟಕ್ಕಿಂತ ಕೆಲವು ಅಡಿಗಳಷ್ಟು ಆಳದಲ್ಲಿರುತ್ತದೆ. ನೀರುತುಂಬಿದ ಕೆಸರುಗದ್ದೆ ಅಥವಾ ನದಿಯ ದಡದ ಮರಳುದಂಡೆಗಳ ಬದಿಯಲ್ಲಿ ಕೃತಕವಾಗಿ ನಿರ್ಮಿಸಿರುವ ಕೊಳದಲ್ಲಿ, ಕೋಣಗಳ ನಡುವೆ ಓಟದ ಪಂದ್ಯವನ್ನು ನಡೆಸಲಾಗುತ್ತದೆ
ಇನ್ನು ಕಂಬಳದಲ್ಲಿ ‘ಬಾರೆ ಕಂಬಳ’, ‘ಪೂಕರೆ ಕಂಬಳ’, ‘ಅರಸು ಕಂಬಳ’ ಮತ್ತು ಈಗ ನಡೆಯುತ್ತಿರುವ ‘ಆಧುನಿಕ ಕಂಬಳ’ ಎಂಬ ನಾಲ್ಕು ಬಗೆಗಳನ್ನು ಗುರುತಿಸಬಹುದು. ಬಾರೆ ಕಂಬಳ ಮತ್ತು ಪೂಕರೆ ಕಂಬಳಗಳಲ್ಲಿ ಕೋಣಗಳ ಪಂದ್ಯಕ್ಕಿಂತ, ಇತರ ಆಚರಣೆಗಳಿಗೆ ಹೆಚ್ಚಿನ ಮಹತ್ವವಿದೆ. ಬಾರೆಕಂಬಳದಲ್ಲಿ, ಗದ್ದೆಯ ನಡುವೆ ಒಂದು ಬಾಳೆಯ ಗಿಡವನ್ನು ನೆಡುವುದೇ ಬಹಳ ಮುಖ್ಯ. ಕೋಣಗಳ ಓಟ ಕೇವಲ ಸಾಂಕೇತಿಕವಾದುದು. ಅರಸು ಕಂಬಳದಲ್ಲಿ ಆಚರಣೆಗಳು ಮತ್ತು ಪಂದ್ಯ ಎರಡಕ್ಕೂ ಸಮಾನ ಮಹತ್ವವಿದೆ
ಕಂಬಳಕ್ಕೆ ಸಂಬಂಧಿಸಿದ ಆಚರಣೆಗಳು, ಅದಕ್ಕಾಗಿ ನಿಗದಿ ಪಡಿಸಿರುವ ದಿನಕ್ಕಿಂತ, ಕೆಲವು ದಿನಗಳು ಮುಂಚಿತವಾಗಿಯೇ ಪ್ರಾರಂಭವಾಗಿ, ಅದು ಮುಗಿದ ನಂತರವೂ ಮುಂದುವರಿಯುತ್ತವೆ. ಹಳ್ಳಿಯ ಹಿರಿಯರನ್ನು ಕಂಬಳಕ್ಕೆ ಆಹ್ವಾನಿಸುವುದು, ಕಂಬಳದ ಗದ್ದೆಯನ್ನು ಅಲಂಕರಿಸುವುದು, ಬೇರೆ ಬೇರೆ ಜಾನಪದ ದೈವಗಳನ್ನು ಪೂಜಿಸುವುದು, ಡೋಲು ಕುಣಿತ, ಕೊರಗ ಮತ್ತು ಮುಂಡಾಲ ಜಾತಿಗಳಿಗೆ ಸೇರಿದವರು ಹಾಡುವ ಹಾಡುಗಳು ಮತ್ತು ಕೋಣಗಳ ಮೆರವಣಿಗೆ ಇವೆಲ್ಲವನ್ನೂ ವಿಜೃಂಭಣೆಯಿಂದ ಆರಾಧನೆಯ ಹಾಗೆ ನಡೆಸಲಾಗುವುದು. ಕೋಣಗಳ ಓಟದ ಪಂದ್ಯವನ್ನು ನಡೆಸುವ ವಿಧಾನವನ್ನು ಅವಲಂಬಿಸಿ ಕಂಬಳದಲ್ಲಿ ಮತ್ತೆ ನಾಲ್ಕು ಬಗೆಗಳಿವೆ. ಹಗ್ಗದ ಓಟ, ಅಡ್ಡಹಲಗೆ ಓಟ, ನೇಗಿಲ ಓಟ ಮತ್ತು ಕಣೆ ಹಲಗೆ ಓಟ ಎಂಬ ಹೆಸರುಗಳಿಂದ ಅವುಗಳನ್ನು ಕರೆಯುತ್ತಾರೆ. ಹಗ್ಗದ ಓಟದಲ್ಲಿ, ಕೋಣಗಳು ಒಂದು ನೊಗವನ್ನು ಕಟ್ಟಿಕೊಂಡು ಓಡುತ್ತವೆ. ಆ ನೊಗದ ಮಧ್ಯಕ್ಕೆ ಕಟ್ಟಿದ ಹಗ್ಗಗಳನ್ನು ಹಿಡಿದುಕೊಂಡಿರುವ ಮನುಷ್ಯನು ಕೋಣಗಳ ಸಂಗಡ ತಾನೂ ಓಡುತ್ತಾನೆ. ಅಡ್ಡ ಹಲಗೆ ಓಟದಲ್ಲಿ ಆ ಮನುಷ್ಯನು, ನೊಗಕ್ಕೆ ಸೇರಿಸಿರುವ ಹಲಗೆಯ ಮೇಲೆ ನಿಂತುಕೊಂಡು ಕೋಣಗಳ ಓಟವನ್ನು ನಿಯಂತ್ರಿಸುತ್ತಾನೆ. ನೇಗಿಲ ಓಟದಲ್ಲಿ ನೊಗದ ಜಾಗದಲ್ಲಿ ನೇಗಿಲು ಇರುತ್ತದೆ. ಇಲ್ಲಿ ಸಾರಥಿಯು ನೇಗಿಲನ್ನು ಹಿಡಿದಿರುತ್ತಾನೆ. ಆ ನೇಗಿಲಿಗೆ ಕೋಣಗಳನ್ನು ಕಟ್ಟಿರುತ್ತಾರೆ. ಈ ಮೂರು ಪ್ರಭೇದಗಳಲ್ಲಿ, ‘ಮಂಜೊಟ್ಟಿ’ಯನ್ನು (ಪಂದ್ಯದ ಹಾದಿಯ ಕೊನೆ ಬಿಂದು), ಮೊದಲು ತಲುಪುವ ಕೋಣಗಳ ಜೋಡಿಯನ್ನು ವಿಜಯಿಯೆಂದು ಘೋಷಿಸಲಾಗುವುದು. ಆದರೆ, ‘ಕಣೆ ಹಲಗೆ ಓಟ’ದಲ್ಲಿ ಪಂದ್ಯದಲ್ಲಿ ಗೆಲ್ಲುವ ಜೋಡಿಯನ್ನು ನಿರ್ಧರಿಸುವ ವಿಧಾನ ಬೇರೆ. ಕಂಬಳದ ಗದ್ದೆಯ ಎರಡೂ ಬದಿಗಳಲ್ಲಿ, ನೆಲಮಟ್ಟದಿಂದ ಸುಮಾರು ಎರಡು ಮೀಟರುಗಳ ಎತ್ತರದಲ್ಲಿ, ಅಗಲವಾದ ಬಟ್ಟೆ ಅಥವಾ ಮರದ ಹಲಗೆಗಳನ್ನು ಕಟ್ಟಿರುತ್ತಾರೆ. ಇವುಗಳನ್ನು ‘ನಿಶಾನೆ’ ಎಂದು ಕರೆಯುತ್ತಾರೆ. ಕೋಣಗಳು ಓಡುವಾಗ, ನೀರು ಮತ್ತು ಕೆಸರುಗಳ ಮಿಶ್ರಣವು ಎಗರುವ ಎತ್ತರವನ್ನು ಪರಿಗಣಿಸಿ, ಗೆಲ್ಲುವ ಜೋಡಿಯನ್ನು ತೀರ್ಮಾನಿಸುತ್ತಾರೆ. ಪಂದ್ಯದಲ್ಲಿ ಗೆದ್ದ ಜೋಡಿಯ ಒಡೆಯರಿಗೆ ಬಂಗಾರದ ಪದಕ ಮತ್ತು ಷೀಲ್ಡುಗಳನ್ನು ಬಹುಮಾಣವಾಗಿ ಕೊಡುತ್ತಾರೆ. ಗೆಲುವನ್ನು ತಂದಿಕೊಟ್ಟ ಕೋಣಗಳಿಗೆ ಬಾಳೇಹಣ್ಣು, ಎಳನೀರು ಮುಂತಾದ ರುಚಿಯಾದ ಆಹಾರ ದೊರೆಯುತ್ತದೆ.

ಕೋಣಗಳಿಗೆ ರಾಜ ಮರ್ಯಾದೆ
ಕಂಬಳದಲ್ಲಿ ಬಳಸುವ ಕೋಣಗಳನ್ನು ಬೇರೆ ಯಾವ  ಕೆಲಸಕ್ಕೂ ಬಳಸುವುದಿಲ್ಲ . ಒಂದು ಜೋಡಿ ಕಂಬಳದ ಕೋಣಗಳ ವಾರ್ಷಿಕ ಸಾಕಣೆ ವೆಚ್ಚ 3 ಲಕ್ಷದಷ್ಟು ಇರುತ್ತದೆ. ವರ್ಷವಿಡೀ ಜತನದಿಂದ ಸಾಕಲ್ಪಡುವ ಈ ಕೋಣಗಳಿಗೆ ರಾಜ ಮರ್ಯಾದೆ ಹಾಗೂ ಕಂಬಳದಲ್ಲಿ ಓಡುವ ನಿರಂತರ ತರಬೇತಿ ಯನ್ನು ನೀಡಲಾಗಿರುತ್ತದೆ. ಕೋಣಗಳಿಗೆ ತಿನ್ನಲು ಬಹುವಿಧದ ಪುಷ್ಟಿದಾಯಕ ಆಹಾರವನ್ನು ನೀಡಲಾಗುತ್ತದೆ. , ಕಂಬಳದ ಸೀಸನ್‌ನಲ್ಲಿ ದಿನಕ್ಕೆ 4 ಕೇಜಿ ಹುರುಳಿಯನ್ನು ಬೇಯಿಸಿ ಕೊಡಲಾಗುತ್ತದೆ! ಈ ಅವಧಿಯಲ್ಲಿ ಅಪ್ಪಟ ಬೈಹುಲ್ಲಿನ ಮೇವನ್ನು ನೀಡಲಾಗುತ್ತದೆ. ಕಂಬಳ ಸೀಸನ್ ಮುಗಿದು ಬೇಸಗೆ ಬಂದಾಗ ಕೋಣಗಳ ಮೈ ತಂಪಾಗಿರಲು ಕುಂಬಳ ಕಾಯಿ ಕೊಡುತ್ತಾರೆ. ಕಂಬಳದ ಕೋಣಗಳಿಗೆ  ಪ್ರತಿ ದಿನ ಎಣ್ಣೆ ಸ್ನಾನ ಕಡ್ಡಾಯ .
ಒಂದು ಕೋಣವನ್ನು ನೋಡಿಕೊಳ್ಳಲು ನಿತ್ಯ ಮೂವರಾದರೂ ಬೇಕು. ವರ್ಷದ ಆರು ತಿಂಗಳ ಪ್ರತಿ ಶನಿವಾರ-ಭಾನುವಾರಗಳಲ್ಲಿ ನಡೆಯುವ ಕಂಬಳಕ್ಕೆ ಕೋಣ ಒಯ್ಯುವಾಗ 15 ಜನರಾದರೂ ಬೇಕು. ಎರಡು ದಿನಗಳ ಅವರ ವೇತನವೊಂದೇ 15 ಸಾವಿರ ರೂ. ದಾಟುತ್ತದೆ. ಕೋಣ ಓಡಿಸುವವರು ಸಹ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವನಾಗಿದ್ದು ವಾರ್ಷಿಕ ಗುತ್ತಿಗೆ. 26 ಪ್ರಮುಖ ಕಂಬಳ ಮತ್ತು ಐದಾರು ಟ್ರಯಲ್‌ಗಳಿರುತ್ತವೆ. ಓಡಿಸುವ ತಾಕತ್ತು, ಗೆಲ್ಲುವ ಪದಕಗಳ ಆಧಾರದಲ್ಲಿ ವರ್ಷಕ್ಕೆ ಕನಿಷ್ಠ 50 ಸಾವಿರದಿಂದ ಮೂರು ಲಕ್ಷದವರೆಗೆ ವೇತನ ನೀಡಲಾಗುತ್ತದೆ. ಜತೆಗೆ ಕಂಬಳ ಭತ್ಯ ದಿನ ಒಂದಕ್ಕೆ 1000ದಿಂದ 3 ಸಾವಿರ ಇರುತ್ತದೆ. ಇನ್ನು ಕೋಣಗಳ ಮಾರುಕಟ್ಟೆಯಲ್ಲಿ ಸಾಮಾನ್ಯ ಕೋಣಗಳಿಗೆ ರೂ. 15000 ಇದ್ದರೆ ಕಂಬಳ ಕೋಣಗಳಿಗೆ 1 -5 ಲಕ್ಷಗಳಷ್ಟಿರುತ್ತದೆ.
ಕಂಬಳದ ಕೋಣ ಸಾಕುವುದು ಒಂದು ಪ್ರತಿಷ್ಠೆಯಾಗಿದ್ದು ಅವುಗಳಿಗೆ ತೋರುವ ಪ್ರೀತಿಯೂ ಸಹ ಯಾವು ನಿಲುಕಿಗೂ ಸಿಗದಷ್ಟಾಗಿರುತ್ತದೆ. ಅವುಗಳಿಗೆ ಹೊಟ್ಟೆ ತುಂಬಾ ಪೌಷ್ಟಿಕ ಆಹಾರ, ಪ್ರತಿ ದಿನದ ಎಣ್ಣೆ ಸ್ನಾನ, ಕೆಲ ಸಮಯದ ಹೊರಗಿನ ವಾಕಿಂಗ್, ಹೀಗೆ ಅವುಗಳನ್ನು ರಾಜ ವೈಭೋಗಗಳಿಂದ ನೋಡಿಕೊಳ್ಳಲಾಗುತ್ತದೆ.

ಆಧುನಿಕ ಕಾಲದಲ್ಲಿ ಕಂಬಳ
ಇಂದಿನ ಆಧುನಿಕ ಜಗತ್ತಿನ ಧಾವಂತದ ಬದುಕಿನಲ್ಲಿ ಸಂಪ್ರದಾಯಿಕ ಆಚರಣೆಗಳೆಲ್ಲವೂ ಪ್ರಶ್ನಾರ್ಹವೆಂದು ತಿಳಿದಿರುವಾಗ ಕಂಬಳವೂ ಸಹ ಕಾಲಕ್ಕೆ ತಕ್ಕಂತೆ ಬದಲಾಗಿದೆ. ಈ ಹಿಂದೆ ಕಂಬಳ ಕೋಣಗಳ ಓಟ ಸ್ಪರ್ಧೆಯ ಹಿಂದಿದ್ದ ಧಾರ್ಮಿಕ ಶ್ರದ್ದೆ ಮಾಯವಾಗಿ ಶುದ್ದ ಮನೋರಂಜನಾತ್ಮಕ ಕ್ರೀಡೆಯಾಗಿ ಮಾರ್ಪಟ್ಟಿದೆ. ಹಿಂದೆಲ್ಲಾ ಕೃಷಿಗೆ ಉಪಯೋಗವಾಗುತ್ತಿದ್ದ ಕೋಣಗಳೇ ಕಂಬಳದಲ್ಲಿ ಓಡಿ ಶಾಸ್ತ್ರ ಪೂರೈಸುತ್ತಿದ್ದವಾದರೂ ಕಂಬಳವು ಆಟದ ಹದಕ್ಕೆ ಹೊಂದಿಕೊಂಡ ನಂತರ  ವಿಶೇಷ ಅಕ್ಕರೆಯಿಂದ ಕಂಬಳಕ್ಕೆಂದೇ ಕೋಣಗಳನ್ನು ಸಾಕುವ ಹವ್ಯಾಸವು ಬೆಳೆದು ಬಿಟ್ಟಿದೆ. ಅಲ್ಲದೆಯೇ, ಇತ್ತೀಚಿನ ದಿನಗಳಲ್ಲಿ ಕಂಬಳವು ಬಹಳ ವೈಭವಯುತವಾಗಿದೆ. ಸೋಲು-ಗೆಲುವುಗಳು ಮರ್ಯಾದೆಯ ಪ್ರಶ್ನೆಯಾಗಿಬಿಟ್ಟಿವೆ.

ಕಂಬಳಕ್ಕೆ ಕಂಟಕ`
ಅರ್ವಾಚೀನ ಇತಿಹಾಸ ವನ್ನು ಹೊಂದಿರುವ ಕರಾವಳಿಯ ಮಣ್ಣಿನಲ್ಲಿ ಬೆರೆತು ಹೋಗಿರುವ ಜಾನಪದ ಕ್ರೀಡೆ ಕಂಬಳದ ಮೇಲೆ ಇದೀಗ ನಿಷೇಧದ ತೂಗುಗತ್ತಿ ತೂಗುತ್ತಿದೆ. ಹೋರಿಗಳನ್ನು ಹಿಂಸಾತ್ಮಕವಾಗಿ ಬೆದರಿಸುವ ತಮಿಳುನಾಡಿನ ಜಲ್ಲಿಕಟ್ಟು ಸ್ಪರ್ಧೆ ಮತ್ತು ಮಹಾರಾಷ್ಟ್ರದ ಎತ್ತಿನ ಗಾಡಿ ಓಟದ ಸ್ಪರ್ಧೆಯನ್ನು ಸುಪ್ರೀಂ ಕೋರ್ಟ್ 2014ರ ಮೇ 7ರಂದು ನಿಷೇಧಿಸಿ ಆದೇಶ ಹೊರಡಿಸಿತ್ತು. ಪ್ರಾಣಿಗಳನ್ನು ಮನರಂಜನೆಗಾಗಿ ಹಿಂಸಾತ್ಮಕವಾಗಿ ನಡೆಸಿಕೊಳ್ಳಬಾರದು ಎಂಬುದು ನ್ಯಾಯಾಲಯದ ತೀರ್ಪಿನ ತಾತ್ಪರ್ಯವಾಗಿತ್ತು. ಇದೀಗ ಸುಪ್ರೀಂ ಕೊರ್ಟ್ ತೀರ್ಪಿನ ಹಿನ್ನೆಲೆಯನ್ನಿಟ್ಟುಕೊಂಡು ಭಾರತೀಯ ಪ್ರಾಣಿಗಳ ಕಲ್ಯಾಣ ಮಂಡಳಿ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಕಂಬಳ ನಡೆಸದಂತೆ ಸೂಚಿಸಿದೆ. ಹೀಗಾಗಿ ದ.ಕ ಜಿಲ್ಲಾಡಳಿತದ ಕ್ರೀಡೆಗೆ ನಿಷೇಧ ಹೇರಿದೆ.
ಆದರೆ ವಾಸ್ತವದಲ್ಲಿ ಜಲ್ಲಿ ಕಟ್ಟು ಕ್ರೀಡೆಯ ರೀತಿಗೂ, ಕಂಬಳದ ರೀತಿ ನೀತಿಗೂ ಸಾಕಷ್ಟು ವ್ಯತ್ಯಾಸವಿದ್ದು ಇಲ್ಲಿ ಕೋಣಗಳೆಗೆ ಯಾವುದೇ ಬಗೆಯ ಹಿಂಸೆಯಾಗದಂತೆ ಸಾಕಷ್ಟು ಮುತುವರ್ಜಿಯನ್ನು ವಹಿಸಲಾಗುತ್ತದೆ. ಜಲ್ಲಿಕಟ್ಟು ನಿಷೇಧಕ್ಕೆ ಪ್ರಮುಖ ಹಿನ್ನೆಲೆ ಇದ್ದಿದ್ದು ಸಾವು-ನೋವು. ಆದರೆ, ಕಂಬಳದ ಇಷ್ಟೂ ಇತಿಹಾಸದಲ್ಲಿ ಒಂದೇ ಒಂದು ಸಾವು ಸಂಭವಿಸಿದ ಉಲ್ಲೆಖವಿಲ್ಲ. ಪ್ರಾಣಿಗಳಾಗಲೀ, ನೋಡಿಕೊಳ್ಳುವವರಾಗಲೀ, ಪ್ರೇಕ್ಷಕರಿಗಾಗಲೀ ಗಾಯಗಳಾದದ್ದೂ ಕಡಿಮೆ ಕೋಣಗಳ ಸಾಕುವಿಕೆ, ಅದರ ಪಾಲನೆ, ಕಂಬಳದ ಗದ್ದೆಯಲ್ಲಿನ ವಸತಿ, ಆಹಾರ ವ್ಯವಸ್ಥೆಗಳಲ್ಲಿ ಯಾವುದೇ ನಕಾರಾತ್ಮಕ ಅಂಶಗಳಿಲ್ಲ. ಇನ್ನೂ ಹೇಳಬೇಕೆಂದರೆ ಹಿಂದೆಲ್ಲಾ ಕಂಬಳದ ಜತೆಗೆ ನಡೆಯುತ್ತಿದ್ದ ಕೊರಗರ ಡೋಲು, ಪನಿ ಕುಲ್ಲುನು ಮೊದಲಾದ ಆಚರಣೆಗಳನ್ನು ಅದಾಗಲೇ ಕೈಬಿಡಲಾಗಿದೆ. ಆಧುನಿಕ ಕಂಬಳಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಕೋಣಗಳನ್ನು ಓಡಿಸಲು ಶಿಸ್ತುಬದ್ಧವಾದ ತರಬೇತಿ ನೀಡಲು ಅಕಾಡೆಮಿಕ್ ಶಾಲೆಯನ್ನೇ ಸ್ಥಾಪಿಸಲಾಗಿದೆ. ಇದರಲ್ಲಿ ಕ್ರೀಡಾಳು, ದೈಹಿಕ ಶಿಕ್ಷಕರು ಮತ್ತು ಸಮಾಜದ ಎಲ್ಲ ವರ್ಗದವರು ತರಬೇತಿ ಪಡೆದವರಾಗಿರುತ್ತಾರೆ. ಅತ್ಯಂತ ನಿಕಟ ಸ್ಪರ್ಧೆಗಳು ನಡೆಯುವುದರಿಂದ ಫಲಿತಾಂಶ ನಿಖರತೆಗೆ ಟೀವಿ ಎಂಬ ಥರ್ಡ್ ಅಂಪಾಯರ್, ಸೆನ್ಸಾರ್ ಪಟ್ಟಿಗಳನ್ನು ವ್ಯವಸ್ಥೆ ಮಾಡಲಾಗಿರುತ್ತದೆ. ಕಂಬಳ ಗದ್ದೆಗಳಲ್ಲಿ ಓಡುತಿರುವ ಕೋಣಗಳ ಮೇಲೆ ಕ್ಯಾಮರಾ ಅಳವಡಿಸಲಾಗಿರುತ್ತದೆ. ಕಂಬಳದ ವೇಳೆ ಕೋಣಗಳಿಗೆ ಒಂದೇ ಒಂದು ಪೆಟ್ಟು ನೀಡದೆ ಓಡಿಸುವ ಬಗ್ಗೆ ತರಬೇತಿ ನೀಡಲಾಗಿರುತ್ತದೆ. ಕೆಲವು ಮಾಲೀಕರೇ ತಮ್ಮ ಮನೆಗಳಲ್ಲಿ ಕೋಣಗಳಿಗಾಗಿ ಈಜುಕೊಳ ನಿರ್ಮಿಸಿದ್ದಾರೆ. ಸ್ಥಳದಲ್ಲಿಯೇ ಪಶುವೈದ್ಯರ ಉಪಸ್ಥಿತಿ ಇದ್ದು ಅಗತ್ಯ ಸಮಯದಲ್ಲಿ ಉಚಿತ ವೈದ್ಯಕೀಯ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಈ ಕಾರಣಗಳಿಂದಾಗಿ ಕಂಬಳವನ್ನು ನಿಷೇಧಿಸುವುದು ಯಾವ ಕಾರಣಕ್ಕೂ ಸಾಧುವಲ್ಲ.

ಕಂಬಳ ಉಳಿಸಿ
ಕಂಬಳವನ್ನೇ ನಂಬಿಕೊಂಡಿರುವ ಸಾವಿರಾರು ಜನರ ಹಿತದೃಷ್ಟಿಯಿಂದಲೂ, ದೇಶ-ವಿದೇಶಗಳ ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದಲೂ ಕಂಬಳವನ್ನು ನಿಷೇಧಿಸುವುದು ಎಷ್ಟು ಮಾತ್ರಕ್ಕೂ ಸರಿಯಾದ ಕ್ರಮವಲ್ಲ. ಬದಲಾಗಿ ಕಂಬಳವನ್ನು ಒಂದು ಕ್ರೀಡೆಯಾಗಿ ಅಭಿವೃದ್ದಿ ಪಡಿಸಬೇಕು. ಸಾಂಪ್ರದಾಯಿಕ ಕಂಬಳಗಳನ್ನು ನಂಬಿಕೆ, ಆಚರಣೆ ಹಿನ್ನೆಲೆಯಲ್ಲಿ ಮುಂದುವರೆಸುವುದು ಅನಿವಾರ್ಯ. ನಿರ್ವಿವಾದವಾಗಿ ಕಂಬಳ ಅಹಿಂಸಾತ್ಮಕವಾಗಿ ಸಂಘಟಿಸಲ್ಪಡಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಪ್ರಾಣಿ ದಯಾ ಸಂಘದವರು, ಕಂಬಳಾಭಿಮಾನಿಗಳು ಒಂದೆಡೆ ಸೇರಿ ಕಂಬಳವನ್ನು ಮುಂದುವರೆಸುವ ಕುರಿತು ಒಂದು ಸ್ಪಷ್ಟ ನಿರ್ಧಾರಕ್ಕೆ ಬರಬೇಕಾಗಿದೆ.  ಎಂದಿನಂತೆಯೇ ಕಂಬಳದ ವೈಭೋಗ ಮುಂದುವರಿಯಬೇಕಿದೆ. 

Sunday, November 16, 2014

ನಮ್ಮಲ್ಲಿನ ಸ್ಥಳ ಪುರಾಣಗಳು (Mythes) - 36

ಬಸವನಗುಡಿ (Basavanagudi)




ಬೆಂಗಳೂರು ಮಹಾನಗರದಲ್ಲಿನ ಅತ್ಯಂತ ಹಳೆಯ ಬಡಾವಣೆಗಳಲ್ಲಿ ಒಂದು ಬಸವನಗುಡಿ. ಇಂದಿನ ಐಟಿ ಬಿಟಿ ಜಮಾನದಲ್ಲಿಯೂ ಕನ್ನಡತನದೊಡನೆ ನಮ್ಮ ನೆಲದ ಸಂಸ್ಕೃತಿಯನ್ನು ಇನ್ನೂ ಉಳಿಸಿಕೊಂಡು ಬಂದಿರುವ ಈ ಬಡಾವಣೆ ಸಂಪ್ರದಾಯ ಹಾಗೂ ಆಧುನಿಕತೆಯ ಮಿಶ್ರಣವಾಗಿದೆ. ಇಲ್ಲಿನ ದೊಡ್ಡ ಬಸವನ ದೇವಾಲಯವು ಪ್ರಾಚೀನವೂ, ಸುಂದರವೂ ಆಗಿದ್ದು ಇದರಿಂದಾಗಿಯೇ ಈ ಬಡಾವಣೆಗೆ ಬಸವನಗುಡಿ ಎಂಬ ಹೆಸರು ಬಂದಿರುತ್ತದೆ. ದೇವಾಲಯದಲ್ಲಿ 15 ಅಡಿ ಎತ್ತರ 20 ಅಡಿ ಉದ್ದದ ದೊಡ್ಡ ಬಸವಣ್ಣನ ವಿಗ್ರಹವಿದೆ. ಇಲ್ಲಿ ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ನಡೆವ ಕಡಲೇಕಾಯಿ ಪರಿಷೆ ಎನ್ನುವ ದೊಡ್ಡ ಜಾತ್ರೆಯು ಬೆಂಗಳೂರಿಗರಿಗೆಲ್ಲಾ ಗ್ರಾಮೀಣ ಜಾತ್ರೆಯ ಸೊಗಸನ್ನು ಸವಿಯುವ ಅವಕಾಶವನ್ನು ನೀಡುತ್ತದೆ.
ದೊಡ್ಡ ಬಸವನ  ದೇವಾಲಯ. ಎತ್ತರದ ಗುಡ್ಡದ ಮೇಲೆ ಕಟ್ಟಲಾಗಿದೆ.  ದೇವಾಲಯವನ್ನು ಕೆಂಪೇಗೌಡರು 1537ರಲ್ಲಿ ಕಟ್ಟಿಸಿದರು. ದೇವಾಲಯದ ಮುಂದೆ ಸುಂದರವಾದ ದ್ವಜಸ್ತಂಭವಿದೆ. ಈ ಕಲ್ಲು ಕಂಬದಲ್ಲಿ ತಂತಿ ವಾದ್ಯ ನುಡಿಸುತ್ತಿರುವ ಸ್ತ್ರೀ ಮೊದಲಾದ ಉಬ್ಬು ಶಿಲ್ಪಗಳಿವೆ. ದೇವಾಲಯಕ್ಕೆ ಭವ್ಯವಾದ ಗೋಪುರವಿದ್ದು, ಒಳ ಪ್ರಾಕಾರದಲ್ಲಿಯೂ ವಿಶಾಲವಾದ ಗುಡಿ, ಪ್ರಥಕ್ಷಿಣ ಪಥವಿದೆ. ಬಾಗಿಲಲ್ಲಿ ದ್ವಾರಪಾಲಕರ ಶಿಲ್ಪಗಳಿವೆ. ಈ ಗರ್ಭಗೃಹದಲ್ಲಿರುವ ಕಪ್ಪು ಶಿಲೆಯ ಬಸವ ಉದ್ಭವಮೂರ್ತಿಯೆಂದು ಹೇಳುತ್ತಾರೆ.
 ***      
ಈಗ ಬಸವಣ್ಣನ ದೇವಸ್ಥಾನ ಇರುವ ಸ್ಥಳ ಹಿಂದೆ ಸುಂಕೇನ ಹಳ್ಳಿ ಎಂದು ಹೆಸರಾಗಿತ್ತು. ಇಲ್ಲಿ ಹೊಲ ಗದ್ದೆಗಳಿದ್ದವು. ರೈತಾಪಿವರ್ಗದ ಜನ ಇಲ್ಲಿ ವಾಸಿಸುತ್ತಿದ್ದರು. ಇವರು ಪ್ರಧಾನವಾಗಿ ತಮ್ಮ ಹೊಲಗಳಲ್ಲಿ ಕಡಲೇ ಕಾಯಿ ಬೆಳೆಯುತ್ತಿದ್ದರು. ಸರ್ವರಿಗು ಸಮಪಾಲುಸರ್ವರದು ಸಹಬಾಳ್ವೆ ಎಂದು ಬದುಕುತ್ತಿದ್ದ ಆ ರೈತಾಪಿ ವರ್ಗಕಡಲೆಕಾಯಿ ಫಸಲು ಬರುವ ಕಾರ್ತೀಕದಲ್ಲಿ ತಾವು ಬೆಳೆದ ಕಡಲೆಕಾಯಿಯನ್ನು ರಾಶಿ ಮಾಡಿ ಕಣದ ಪೂಜೆ ಮಾಡಿ ಮಾರನೆ ದಿನ ಸಮನಾಗಿ ಹಂಚಿಕೊಳ್ಳುತ್ತಿದ್ದರು. ಒಮ್ಮೆ ಹೀಗೆ ಕಣ ಮಾಡಿದ್ದ ಸಂದರ್ಭದಲ್ಲಿ ಗೂಳಿಯೊಂದು ಬಂದು ರಾಶಿ ರಾಶಿ ಕಡಲೆಕಾಯಿ ತಿಂದು ಹೋಗುತ್ತಿತ್ತಂತೆ.
ಈ ಗೂಳಿ ಅರ್ಥಾತ್ ಬಸವನ ಕಾಟ ತಾಳಲಾರದೆ ರೈತರು ಒಂದು ದಿನ ರಾತ್ರಿಯಿಡೀ ಕಾದಿದ್ದು ಬಡಿಗೆ ಹಿಡಿದು ಬಸವನ ಬಡಿಯಲು ಕಾದಿದ್ದರಂತೆ. ನಿರೀಕ್ಷೆಯಂತೆ ಬಸವ ಬಂದಕಡಲೆಕಾಯಿ ತಿನ್ನುತ್ತಿದ್ದ. ಇದನ್ನು ನೋಡಿ ಕೋಪಗೊಂಡ ರೈತರುತಾವು ತಂದಿದ್ದ ಬಡಿಗೆ ಹಿಡಿದು ಬಸವನ್ನು ಅಟ್ಟಿಸಿಕೊಂಡು ಹೋದರಂತೆ ಆಗ ರೈತರ ಹೊಡೆತ ತಪ್ಪಿಸಿಕೊಳ್ಳಲೆಂದು ಓಡಿದ ಬಸವ ಸುಂಕೇನಹಳ್ಳಿಯಿಂದ ಸ್ವಲ್ಪದೂರ ಓಡಿಬಂದು ಗುಡ್ಡ ಏರಿ ಕಲ್ಲಾದನಂತೆ . ಈ ಸೋಜಿಗವನ್ನು ಕಣ್ಣಾರೆ ಕಂಡ ರೈತರಿಗೆ ಇದು ಸಾಮಾನ್ಯ ಗೂಳಿಯಲ್ಲ. ಶಿವನ ವಾಹನ ನಂದಿ ಎಂಬ ಸತ್ಯ ತಿಳಿಯಿತಂತೆ. ಕೈಲಾಸದಿಂದ ಧರೆಗಿಳಿದುಬಂದ ನಂದಿಕೇಶ್ವರನನ್ನೇ ಹೊಡೆದು ಎಂಥ ತಪ್ಪು ಮಾಡಿದೆವೆಂದು ಮರುಗಿದರಂತೆ. ಅರಿಯದೆ ತಾವು ಮಾಡಿದ ತಪ್ಪು ಮನ್ನಿಸೆಂದು ಪರಿಪರಿಯಾಗಿ ಬೇಡಿದರಂತೆ. ಅಂದಿನಿಂದ ರೈತರು ತಪ್ಪೊಪ್ಪಿಗೆಯಾಗಿ ಪ್ರತಿವರ್ಷ ಕಡಲೆಕಾಯಿ ಬೆಳೆ ಬಂದ ತತ್‌ಕ್ಷಣ ತಮ್ಮ ಮೊದಲ ಬೆಳೆಯನ್ನು ಈ ಕಲ್ಲಿನ ಬಸವಣ್ಣನಿಗೆ ತಂದು ಒಪ್ಪಿಸಿ ನೇವೇದ್ಯ ಮಾಡಿಕ್ಷಮಿಸೆಂದು ಕೇಳಿ ನಂತರ ಮಾರಾಟ ಮಾಡುತ್ತಿದ್ದರಂತೆ. ಇಂದಿಗೂ ಈ ಪರಂಪರೆ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಪ್ರತಿವರ್ಷ ಕಾರ್ತೀಕ ಮಾಸದಲ್ಲಿ ನಡೆಯುವ ಜಾತ್ರೆ ಕಡಲೆಕಾಯಿ ಪರಿಷೆ ಎಂದೇ ಖ್ಯಾತವಾಗಿದೆ.




Friday, November 14, 2014

‘ಟಾಟಾ, ಬಿರ್ಲಾಗಳು ಯಾರು? ಎಂದವ ಅವರುಗಳನ್ನು ಮೀರಿ ನಿಂತ ಕತೆ

‘’ನೀವುಗಳು ಯಾರೂ ಅವರನ್ನು ಏನೊಂದನ್ನೂ ಕೇಳಲು ಹೋಗಬೇಡಿರಿ. ಅವರೇನನ್ನ ಮಾಡುವರೋ ಅದನ್ನು ಗಮನವಿಟ್ಟು ನೋಡಿರಿ, ಕಲಿಯಿರಿ. ದಿನದ 24 ಘಂಟೆಗಳೂ ಕಾರ್ಖಾನೆಯಲ್ಲಿಯೇ ಇರಿ. ಅವಶ್ಯ ಬಿದ್ದರೆ ಅಲ್ಲಿಯೇ ನಿದ್ರಿಸಿದ್ರೂ ಯಾವ ಅಭ್ಯಂತರವಿಲ್ಲ. ನಿಮಗೆಷ್ಟು ಸಾಧ್ಯವೋ ಅಷ್ಟು ಜನರ ಸ್ನೇಹ ಸಂಪಾದಿಸಿಕೊಳ್ಳಿರಿ. ಒಬ್ಬ ಮನುಷ್ಯ ದೊಡ್ಡದಾಗಿ ಬೆಳೆಯಬೇಕಾದಲ್ಲಿ ಆತನಿಗೆ ವಿಶ್ವದಾದ್ಯಂತ ಎಲ್ಲೆಡೆಗಳಲ್ಲಿ ಸ್ನೇಹಿತರಿರುವುದು ಅವಶ್ಯಕ.”
 
My Book Dhirubhai Ambani - Cover Page



ಅದು 1960 ರ ದಶಕ.
ಗುಜರಾತಿನ ಅಹಮದಾಬಾದ್ ನ ನರೋಡಾದಲ್ಲಿ ಅದಾಗಷ್ಟೇ ‘ರಿಲಯನ್ಸ್ ಟೆಕ್ಸ್ ಟೈಲ್ಸ್’ ಪ್ರಾರಂಭವಾಗಿತ್ತು. ಆ ಸಂಸ್ಟೆಯ ಸ್ಟಾಪಕ ಅಧ್ಯಕ್ಷ, ಪ್ರೇರಕ ಶಕ್ತಿಯಾದ ಧೀರೂಭಾಯಿ ಅಂಬಾನಿಯವರು ತಮ್ಮ ತಂಡದಲ್ಲಿದ್ದ ಕೆಲ ಮಂದಿಯನ್ನು ಹೆಚ್ಚಿನ ಅಧ್ಯಯನ, ಸಂಶೋಧನೆಗಾಗಿ ಜರ್ಮನಿಗೆ ಕಳಿಸುವವರಿದ್ದರು. ಅಂತಹಾ ಸಮಯದಲ್ಲಿ  ಹಾಗೆ ಜರ್ಮನಿಗೆ ತೆರಳಲು ಸಜ್ಜಾಗಿದ್ದ ಓರ್ವ ಸದಸ್ಯರು ತಾವು ದೂರ ದೇಶಕ್ಕೆ ತೆರಳುವ ಮುನ್ನ ಧೀರೂಭಯಿಯವರನ್ನು ಬೇಟಿಯಾದರು. ಆ ಸಂದರ್ಭದಲ್ಲಿ ಅವರಿಬ್ಬರ ನಡುವೆ ನಡೆದ ಸಂಭಷಣೆ ಹೀಗಿತ್ತು- 
ಅಂಬಾನಿ: “ನಿಮಗೆ ಟಾಟಾ, ಬಿರ್ಲಾಗಳ ಪರಿಚಯವಿದೆಯೆ?”
ಸದಸ್ಯ: “ಹೌದು... ನಾನವರನ್ನು ಇದುವರೆವಿಗೂ ನೋಡಿಲ್ಲ, ಮಾತನಾಡಿಸಿಲ್ಲ... ಆದರೆ ಅವರಾರೆನ್ನುವುದು ನನಗೆ ತಿಳಿದಿದೆ.”
ಅಂಬಾನಿ: “ಸರಿ, ಅವರು ಯಾರು?”
ಸದಸ್ಯ: “ಅವರಿಬ್ಬರೂ ಭಾರತ ದೇಶದ ಬಹು ದೊಡ್ಡ ಕೈಗಾರಿಕೋದ್ಯಮಿಗಳು.”
ಅಂಬಾನಿ: “ಸರಿ, ನೀವು ಹೆಚ್ಚಿನ ತರಬೇತಿಗಾಗಿ ಜರ್ಮನಿಗೆ ತೆರಳಬಹುದು.”
ಇಷ್ಟು ಹೇಳಿದ ಬಳಿಕದಲ್ಲಿ ಸ್ವಲ್ಪ ಸಮಯ ಮೌನವಾಗಿದ್ದ ಅಂಬಾನಿ ಮತ್ತೆ ಆ ಸದಸ್ಯರನ್ನುದ್ದೇಶಿಸಿ ಹೀಗೆಂದರು- “ಈಗ ನಾನು ಹೇಳುವ ಮಾತು ನೀವಲ್ಲಿ ಇರುವಷ್ಟೂ ದಿನಗಳು ನಿಮ್ಮ ಮನಸ್ಸಿನಲ್ಲಿರಲಿ, ಮುಂದೊಂದು ದಿನ ನಾವೂ ಸಹ ಆ ಟಾಟಾ, ಬಿರ್ಲಾರಿಗಿಂತ ದೊಡ್ಡವರಾಗಲಿದ್ದೇವೆ. ಆದರೆ ಹಾಗಾಗಬೇಕಾದರೆ ನಾವೆಲ್ಲರೂ ನಮ್ಮನ್ನು ಯಾವುದೇ ಮಿತಿಗಳಿಗೆ ಒಳಗು ಮಾಡಿಕೊಳ್ಳಬಾರದು. ಮುಕ್ತ ಮನಸ್ಸು ಹೊಂದಿರಬೇಕು, ನಿಮ್ಮ ಕಣ್ಣುಗಳನ್ನು ಸದಾ ತೆರೆದಿಡಿರಿ. ಎಲ್ಲವನ್ನೂ ನೋಡಿರಿ, ಎಲ್ಲವನ್ನೂ ಕಲಿಯಿರಿ, ಅಲ್ಲಿನ ಸಂಶೋಧಕರು, ಉದ್ಯಮಿಗಳು, ಕೆಲಸಗಾರರು ಅವರೇನೇನನ್ನು ಮಾಡುವರೋ, ಯಾವ ಯಾವ ರೀತಿಯಲ್ಲಿ ಯೋಚಿಸುತ್ತಾರೆಯೋ, ಏನೇನನ್ನು ಅಭಿವೃದ್ದಿಪಡಿಸುತ್ತಾರೆಯೋ ಎಲ್ಲವನ್ನೂ ಟಿಪ್ಪಣಿ ಮಾಡಿಕೊಳ್ಳಿರಿ.
‘’ನೀವುಗಳು ಯಾರೂ ಅವರನ್ನು ಏನೊಂದನ್ನೂ ಕೇಳಲು ಹೋಗಬೇಡಿರಿ. ಅವರೇನನ್ನ ಮಾಡುವರೋ ಅದನ್ನು ಗಮನವಿಟ್ಟು ನೋಡಿರಿ, ಕಲಿಯಿರಿ. ದಿನದ 24 ಘಂಟೆಗಳೂ ಕಾರ್ಖಾನೆಯಲ್ಲಿಯೇ ಇರಿ. ಅವಶ್ಯ ಬಿದ್ದರೆ ಅಲ್ಲಿಯೇ ನಿದ್ರಿಸಿದ್ರೂ ಯಾವ ಅಭ್ಯಂತರವಿಲ್ಲ. ನಿಮಗೆಷ್ಟು ಸಾಧ್ಯವೋ ಅಷ್ಟು ಜನರ ಸ್ನೇಹ ಸಂಪಾದಿಸಿಕೊಳ್ಳಿರಿ. ಒಬ್ಬ ಮನುಷ್ಯ ದೊಡ್ಡದಾಗಿ ಬೆಳೆಯಬೇಕಾದಲ್ಲಿ ಆತನಿಗೆ ವಿಶ್ವದಾದ್ಯಂತ ಎಲ್ಲೆಡೆಗಳಲ್ಲಿ ಸ್ನೇಹಿತರಿರುವುದು ಅವಶ್ಯಕ.”
ಇದು ಧೀರೂಭಾಯಿ ಅಂಬಾನಿಯವರ ಯಶಸ್ಸಿನ ಮಂತ್ರ....!
ಧೀರೂಭಾಯಿ ಹಿರಾಚಂದ್ ಗೋವರ್ಧನದಾಸ್ ಅಂಬಾನಿ
ಭಾರತೀಯ ಉದ್ಯಮ ರಂಗದಲ್ಲಿ ಹಲವು ಪ್ರಥಮಗಳನ್ನು ಸಾಧಿಸಿದ್ದ ಮಹಾನ್ ಉದ್ಯಮಿ. ಇಂದು ನೂರಾರು ಕೋಟಿ ವಹಿವಾಟು ನಡೆಸುತ್ತಿರುವ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್ ನ ಸ್ಥಾಪಕ ಅಧ್ಯಕ್ಷರಾಗಿದ್ದವರು. ತಮ್ಮ ಸತತ ಪ್ರಯತ್ನ, ಸಂಕಲ್ಪ ಶಕ್ತಿಯಿಂದ ತಳ ಮಟ್ಟದಿಂದ ಉನ್ನತಿಯ ಶಿಖರಕ್ಕೇರಿದ ಸಾಧಕ. ಇವರ ಜೀವನಗಾಥೆ ಅಂದಿನಿಂದ ಇಂದಿನವರೆವಿಗಿನ ಎಲ್ಲಾ ಸಣ್ಣ, ಮದ್ಯಮ ಗಾತ್ರದ ಉದ್ಯಮಿಗಳಿಗೆ ಒಂದು ಸ್ಪೂರ್ತಿ ಸೆಲೆಯಾಗಿದೆ ಎಂದರೆ ಅದು ಅತಿಶಯೋಕ್ತಿಯಲ್ಲ. “ನಾನು ಮುಚ್ಚುಮರೆಯಿಲದವ, ಆದರೆ ನನ್ನೆಲ್ಲಾ ಸಾಧನೆಗೆ ನನ್ನ ಜಾಣ್ಮೆಯನ್ನೇ ಹೊಣೆಯಾಗಿಸಲಾರೆ. ದೇವರ ಆಶೀರ್ವಾದವೂ ನನ್ನ ಮೇಲಿದೆ. ಇದನ್ನು ಒಬ್ಬೊಬ್ಬರು ಒಂದೊಂದು ಬಗೆಯಾಗಿ ಹೇಳಬಹುದು. ಆದರೆ ನಾನಂತೂ ಎಲ್ಲರ, ಎಲ್ಲದರ ನೆರವಿನಿಂದ ಈ ಸ್ಥಾನಕ್ಕೆ ಏರಿದ್ದೇನೆ.” ಎನ್ನುವುದಾಗಿ ಅಂಬಾನಿಯವರೇ ಒಮ್ಮೆ ಹೇಳಿಕೊಂಡಿದ್ದರು.
My Book Dhirubhai Ambani - First Page
ಅಂಬಾನಿಯವರು ತಮ್ಮ ಬಾಲ್ಯದಲ್ಲಿ ಅನುಭವಿಸಿದ ಬಡತನ, ಉದ್ಯಮ ಜಗತ್ತಿನಲಿ ಬೆಳೆದ ಬಗೆ, ತನ್ನ ಸ್ವಂತದ ಸಂಸ್ಥೆಯನ್ನು ಕಟ್ಟಲು ಅವರು ಪಟ್ಟ ಪರಿಪಾಟಲು, ಎಲ್ಲವೂ ಸಹ ಯುವಜನತೆ ಹಾಗೂ ಮುಂದಿನ ಪೀಳಿಗೆಯವರಿಗೆ ಮಾದರಿಯಾಗಿವೆ. ತನ್ನ ೨೬ ನೇ ವಯಸ್ಸಿನಲ್ಲಿ ಭಾರತದ ವಾಣಿಜ್ಯ ರಾಜಧಾನಿ ಮುಂಬೈಗೆ ಆಗಮಿಸಿದ ಧೀರೂಭಾಯಿ ತಾವು ಸಾಕಷ್ಟು ಔಪಚಾರಿಕ ಶಿಕ್ಷಣವನ್ನೂ ಪಡೆದವರಲ್ಲ. ಅಲ್ಲದೆ ಸ್ವಂತ ಉದ್ಯಮ ಸ್ಥಾಪನೆಗೆ ಸಾಕಷ್ಟು ಬಂಡವಾಳವೂ ಅವರಲ್ಲಿರಲಿಲ್ಲ. ಆದರೂ ಸಹ ಕೇವಲ ನಾಲ್ಕು ದಶಕಗಳಲ್ಲಿಯೇ ದೇಶಕ್ಕೆ ದೇಶವೇ ಅಚ್ಚರಿ ಪಡುವಂತೆ ಬೃಹತ್ ಉದ್ಯಮಪತಿಯಾಗಿ ಬೆಳೆದು ನಿಂತರು. ಅಂದು ಕೇವಲ 15000 ರೂಪಾಯಿ ಬಂಡವಾಳದೊಡನೆ ಪ್ರಾರಂಭಿಸಿದ ರಿಲಯನ್ಸ್ ಸಂಸ್ಥೆ ಇಂದು ಸಾವಿರಾರು ಕೋಟಿಗಳ ವಹಿವಾಟು ನಡೆಸುತ್ತಿದೆ. ಫಾರ್ಚೂನ್ 50 ಗುಂಪಿಗೆ ಸೇರಿದ ಭಾರತದ ಪ್ರಥಮ ಖಾಸಗಿ ಸಂಸ್ಥೆ ಎನ್ನುವ ಹಿರಿಮೆಗೆ ಭಾಜನವಾದ ರಿಲಯನ್ಸ್ ಸಮೂಹವನ್ನು ಇಷ್ಟೆತ್ತರ ಬೆಳೆಸುವುದರಲ್ಲಿ ಧೀರೂಭಾಯಿಯವರ ಪಾತ್ರ ನಿಜಕ್ಕೂ ಮಹತ್ವದ್ದಾಗಿದೆ.
***
ಸ್ನೇಹಿತರೆ, ಇದೇ ವಾರ ನಾನು ಬರೆದ ‘ಧೀರೂಭಾಯಿ ಹಿರಾಚಂದ್ ಗೋವರ್ಧನದಾಸ್ ಅಂಬಾನಿ (ಜೀವನ ಚರಿತ್ರೆ)’ ಪುಸ್ತಕವು ಕನ್ನಡದ ಖ್ಯಾತ ಪ್ರಕಾಶನ ಸಂಸ್ಥೆ ‘ವಾಸನ್ ಪಬ್ಲಿಕೇಷನ್ಸ್’ ರವರಿಂದ ಪ್ರಕಟವಾಗಿದೆ. ಭಾರತದ ಅತ್ಯಂತ ಶ್ರೀಮಂತ ಉದ್ಯಮಪತಿಯಾಗಿದ್ದು, ಬಡತನದಿಂದ ಸಿರಿತನಕ್ಕೇರಿದ ಸಾಧಕನೋರ್ವನ ಜೀವನಗಾಥೆ ತಮಗೂ ಇಷ್ಟವಾಗುತ್ತದೆ. ತಪ್ಪದೇ ಪುಸ್ತಕವನ್ನು ಕೊಂಡು ಓದಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿ.
ಇದು ನನ್ನ ಎರಡನೇ ಪುಸ್ತಕವಾಗಿದ್ದು ಇದಕ್ಕೂ ಮೊದಲು ಜೂನ್ ತಿಂಗಳ 16, 2014 ನೇ ದಿನಾಂಕದಂದು ನನ್ನ ಮೊದಲ ಪುಸ್ತಕ ‘ನರೇಂದ್ರ ದಾಮೋದರದಾಸ್ ಮೂಲಚಂದ್ ಮೋದಿ (ಜೀವನ ಚರಿತ್ರೆ)’ ಪುಸ್ತಕವು ಇದೇ ‘ವಾಸನ್ ಪಬ್ಲಿಕೇಷನ್ಸ್’ ಸಂಸ್ಥೆಯಿಂದ ಪ್ರಕಟಗೊಂಡಿತ್ತು.  ಬರವಣಿಗೆ ಕ್ಷೇತ್ರದಲ್ಲಿ ಅಂಬೆಗಾಲಿಕ್ಕುತ್ತಿರುವ ನಮ್ಮಂತಹಾ ಬರಹಗಾರರನ್ನು ವಿಶಾಲ ಹೃದಯಿಗಳಾದ ಕನ್ನಡಿಗರು ಕೈ ಹಿಡಿದು ನಡೆಸುವಿರೆನ್ನುವ ನಂಬಿಕೆ ನನ್ನದು.
ಅಂದಹಾಗೆ ನಾನು ಬರೆದುಕೊಟ್ಟ ಪುಸ್ತಕವನ್ನು, ಅದರಲ್ಲಿನ ಅದೆಷ್ಯೋ ತಪ್ಪುಗಳನ್ನು ತಿದ್ದಿ, ಸುಂದರವಾಗಿ ಮುದ್ರಿಸಿ ಪ್ರಕಟಿಸಿಕಿದ ‘ವಾಸನ್ ಪಬ್ಲಿಕೇಷನ್ಸ್’ ಮುಖ್ಯಸ್ಥರಿಗೂ, ಸಿಬ್ಬಂದಿವರ್ಗಕ್ಕೂ ನನ್ನ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ.

“ಪುಸ್ತಕಗಳನ್ನು ಕೊಳ್ಳಿರಿ,
ಪುಸ್ತಕಗಳನ್ನು ಓದಿರಿ,
ಪುಸ್ತಕಗಳನ್ನು ನೀಡಿರಿ.”

ಜೈ ಕನ್ನಡಾಂಬೆ...!

ಜೈ ಹಿಂದ್....!

Wednesday, November 12, 2014

ಸಚಿನ್ ಮನದಾಳವನ್ನು ತೆರೆದಿಟ್ಟ ಪುಸ್ತಕ: ಪ್ಲೇಯಿಂಗ್ ಇಟ್ ಮೈ ವೇ

ಕಳೆದ ವಾರ ಬಿಡುಗಡೆಯಾದ ಕ್ರಿಕೆಟ್ ಲೋಕದ ದಂತಕಥೆ, ಅಭಿಮಾನಿಗಳ ಪಾಲಿನ ಕ್ರಿಕೆಟ್ ದೇವರು, ಸಚಿನ್ ತೆಂಡೂಲ್ಕರ್ ರವರ ಆತ್ಮಕಥೆ “ಪ್ಲೇಯಿಂಗ್ ಇಟ್ ಮೈ ವೇ” ನ ಆಯ್ದ ಭಾಗಗಳ ಕನ್ನಡಾನುವಾದವನ್ನು ಕನ್ನಡದ ಖ್ಯಾತ ದಿನಪತ್ರಿಕೆ “ಪ್ರಜಾ ವಾಣಿ” ಯ ಪತ್ರಿಕಾ ಮಿತ್ರರು ಪ್ರಕಟಿಸಿರುತ್ತಾರೆ. ಕೆಲವು ಮೂಲಗಳ ಪ್ರಕಾರವಾಗಿ ಈ ಸಚಿನ್ ಆತ್ಮಕಥೆಯು ಕನ್ನಡ ಸೇರಿದಂತೆ ಇತರೆ ಭಾರತೀಯ ಭಾಷೆಗಳಲ್ಲಿಯೂ ಶೀಘ್ರದಲ್ಲಿ ಪ್ರಕಟವಾಗಲಿಕ್ಕಿದೆಯಂತೆ... ಇದೇ ಕುತೂಹಲದಲ್ಲಿ ನಾನು ಈ ಅನುವಾದವನ್ನು ತಮ್ಮಗಳೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಸಚಿನ್ ಆತ್ಮಕಥೆ ಆದಷ್ಟು ಬೇಗನೇ ಕನ್ನಡದಲ್ಲಿಯೂ ಸಿಗುವಂತಾಗಲಿ, ಆ ಮುಖೇನ ಇಂಗ್ಲಿಷ್ ತಿಳಿಯದವರೂ ಸಹ ಸಚಿನ್ ರನ್ನು ತಿಳಿದುಕೊಳ್ಳುವುದಕ್ಕೆ ಅವಕಾಶವಾಗಲಿ. ಎಂದು ಆಶಿಸೋಣ....


***

ಅಕ್ಕ ನೀಡಿದ ಆ ಬ್ಯಾಟು

‘ಅಕ್ಕ ಸವಿತಾ ಕೂಡಾ ನನ್ನಪ್ಪನಂತೆ, ಅತ್ಯಂತ ಶಾಂತ ಸ್ವಭಾವದವಳು. ಅವಳು ಒಮ್ಮೆ ಕಾಶ್ಮೀರಕ್ಕೆ ಹೋಗಿ ಬರುವಾಗ ನನಗೊಂದು ಕ್ರಿಕೆಟ್‌ ಬ್ಯಾಟ್‌ ತಂದಿದ್ದಳು. ಅದು ವಿಲೊ ಮರದಿಂದ ತಯಾರಿಸಿದ್ದ ಪುಟ್ಟ ಬ್ಯಾಟು. ಆಗ ನನಗೆ ಐದು ವರ್ಷ ವಯಸ್ಸು. ಬ್ಯಾಟಿನೊಂದಿಗಿನ ಪ್ರೀತಿ ಆ ದಿನಗಳಲ್ಲೇ ನನ್ನಲ್ಲಿ ಮೊಳೆಯಿತು’ ಎಂದು ತಾವು ಮೊದಲ ಬಾರಿಗೆ ಬ್ಯಾಟು ಹಿಡಿದ ದಿನಗಳನ್ನು ಸಚಿನ್‌ ನೆನಪಿಸಿಕೊಂಡಿದ್ದಾರೆ.

ಅಚ್ರೇಕರ್‌ ಸರ್‌ ಮಾಡಿದ ‘ಮ್ಯಾಜಿಕ್‌’

‘ನನಗೆ ಕ್ರಿಕೆಟ್‌ ಕುರಿತು ಅಪಾರ ಪ್ರೀತಿ ಇತ್ತು, ನಿಜ. ಆದರೂ ನಮ್ಮ ಮನೆ ಇದ್ದ ಅಪಾರ್ಟ್‌ಮೆಂಟ್‌ನ ಹೊರಗೆ ಹುಡುಗರೊಡನೆ ಹತ್ತು ಹಲವು ಆಟಗಳಲ್ಲಿ ತಲ್ಲೀನನಾಗಿ ಬಿಡುತ್ತಿದ್ದೆ. ಅದಾಗಲೇ ನಾನು ಶಿವಾಜಿ ಪಾರ್ಕ್‌ನಲ್ಲಿ ರಮಾಕಾಂತ ಅಚ್ರೇಕರ್‌ ಸರ್‌ ಬಳಿ ತರಬೇತಿ ಸೇರಿಯಾಗಿತ್ತು. ಅದನ್ನೂ ಮರೆತು ನಮ್ಮ ಮನೆಯ ಹೊರಗೆ ಇತರ ಹುಡುಗರೊಡನೆ ಆಟದಲ್ಲಿ ಮಗ್ನವಾಗುತ್ತಿದ್ದೆ. ಆಗ ಅಚ್ರೇಕರ್‌ ಸರ್‌ ನನಗಾಗಿ ಒಂದಷ್ಟು ಹೊತ್ತು ಕಾದು, ರೋಸಿ ಹೋಗುತ್ತಿದ್ದರು. ಸ್ಕೂಟರ್‌ ಏರಿ ನೇರವಾಗಿ ನನ್ನ ಮನೆಯ ಬಳಿ ಬರುತ್ತಿದ್ದರು.

ಹುಡುಗರ ಗುಂಪಿನಲ್ಲಿರುತ್ತಿದ್ದ ನನ್ನ ರಟ್ಟೆಗಳನ್ನು ಹಿಡಿದು ದರದರನೆ ಎಳೆದೊಯ್ಯುತ್ತಿದ್ದರು. ಸ್ಕೂಟರ್‌ನ ಹಿಂಬದಿ ಸೀಟಿನಲ್ಲಿ ಕುಳ್ಳಿರಿಸಿಕೊಂಡು ‘ನೆಟ್ಸ್‌’ ಅಭ್ಯಾಸಕ್ಕೆ ಶಿವಾಜಿ ಪಾರ್ಕ್‌ನತ್ತ ಸಾಗುತ್ತಿದ್ದರು. ನಾನು ಮೈದಾನಕ್ಕೆ ಹೋಗದಿದ್ದುದಕ್ಕೆ ಏನೇ ಸಬೂಬು ಹೇಳಿದರೂ, ಅವರು ಕೇಳಿಸಿಕೊಳ್ಳುತ್ತಲೇ ಇರಲಿಲ್ಲ. ‘ಏನೇನೋ ಆಟವಾಡುತ್ತಾ ಸಮಯ ವ್ಯರ್ಥ ಮಾಡಬೇಡ. ನೆಟ್ಸ್‌ ಬಳಿ ಕ್ರಿಕೆಟ್‌ ನಿನಗಾಗಿ ಕಾಯುತ್ತಿದೆ. ಕಷ್ಟ ಪಟ್ಟು ಅಭ್ಯಾಸ ಮಾಡು. ಮುಂದೆ ಅದೆಂತಹ ಮ್ಯಾಜಿಕ್‌ ನಡೆಯುತ್ತೆ ಎಂಬುದು ನಿನಗೇ ಗೊತ್ತಾಗುತ್ತದೆ...’ ಎಂಬುದಾಗಿ ದಾರಿಯುದ್ದಕ್ಕೂ ನನಗೆ ಹಿತವಚನ ಹೇಳುತ್ತಾ ಸ್ಕೂಟರ್‌ ಚಲಾಯಿಸುತ್ತಿದ್ದರು.

ಅವರು ಅಂದು ನನ್ನನ್ನು ನನ್ನ ವಾರಗೆಯ ಹುಡುಗರ ನಡುವಿನಿಂದಲೇ ಕೈ ಹಿಡಿದು ಎಳೆದೊಯ್ದಾಗ ತೀವ್ರ ಅಸಮಾಧಾನವಾಗಿತ್ತು. ಮುಖ ಗಂಟಿಕ್ಕಿಕೊಂಡಿದ್ದೆ. ಅಂದಿನ ನನ್ನ ವರ್ತನೆಯನ್ನು ನೆನಪಿಸಿಕೊಂಡಾಗ ಇವತ್ತು ನಾಚಿಕೆ ಎನಿಸುತ್ತದೆ. ಹೌದು, ಅಚ್ರೇಕರ್‌ ಸರ್‌ ಇಲ್ಲದಿದ್ದಿದ್ದರೆ ನಾನು ಇವತ್ತಿನ ಈ ಎತ್ತರದಲ್ಲಿರುತ್ತಲೇ ಇರಲಿಲ್ಲ’ ಎಂದೂ ತಮ್ಮ ಕ್ರಿಕೆಟ್‌ ಗುರು ಅಚ್ರೇಕರ್‌ ಅವರ ಬಗ್ಗೆ ಸಚಿನ್‌ ಅತೀವ ಕೃತಜ್ಞತೆಯಿಂದ ಮಾತನಾಡುತ್ತಾರೆ.

ದೈವಭಕ್ತರಾದ ಸಚಿನ್‌ ಅವರಿಗೆ ತಮ್ಮ ತಂದೆ, ತಾಯಿ, ಗುರುಗಳ ಬಗ್ಗೆ ಅಪಾರ ಗೌರವ. ತಮಗೆ ನೆರವು ನೀಡಿದವರನ್ನಂತೂ ಅವರು ಮರೆಯುವುದೇ ಇಲ್ಲ. ಈ ಕೃತಿಯ ಹಲವು ಕಡೆ ಇದಕ್ಕೆ ನಿದರ್ಶನಗಳು ಸಿಗುತ್ತವೆ. ‘ನಾನು ಯಾವುದೇ ಸರಣಿಯಲ್ಲಿ ಆಡುವುದಕ್ಕೆ ಮೊದಲು ಅಥವಾ ಹೊರಗೆ ಪ್ರವಾಸಕ್ಕೆ ತೆರಳಬೇಕಾದ ಸಂದರ್ಭಗಳಲ್ಲಿ, ಅದೆಷ್ಟೇ ಒತ್ತಡವಿದ್ದರೂ ಮುಂಬೈನ ನಾಲ್ಕು ಕಡೆ ಭೇಟಿ ನೀಡುತ್ತೇನೆ.

ಶಿವಾಜಿ ಪಾರ್ಕ್‌ನಲ್ಲಿರುವ ಗಣೇಶ ದೇವಸ್ಥಾನ, ಪ್ರಭಾವತಿಯಲ್ಲಿರುವ ಸಿದ್ಧಿ ವಿನಾಯಕ ದೇಗುಲಗಳಿಗೆ ಹೋಗಿ ಪ್ರಾರ್ಥಿಸುತ್ತೇನೆ. ನಂತರ ನನ್ನ ಆಂಟಿ ಮತ್ತು ಅಂಕಲ್‌ ಮನೆಗೆ ಹೋಗಿ ಮಾತನಾಡುತ್ತೇನೆ. ಅಚ್ರೇಕರ್‌ ಸರ್‌ ಮನೆಗೆ ಹೋಗಿ ಕೆಲವು ನಿಮಿಷ ಅವರೊಂದಿಗೆ ಚರ್ಚಿಸಿ ಅವರ ಆಶೀರ್ವಾದ ಪಡೆಯುತ್ತೇನೆ. ಈ ನಾಲ್ಕು ಸ್ಥಳಗಳಿಗೆ ಭೇಟಿ ನೀಡಿದ ನಂತರವೇ ನಾನು ಮುಂಬೈನಿಂದ ಹೊರಗೆ ಕಾಲಿಡುವುದು’ ಎಂದೂ ಸಚಿನ್‌ ಒಂದು ಕಡೆ ಬರೆದಿದ್ದಾರೆ.

ರಿಚರ್ಡ್ಸ್‌ ಜತೆಗಿನ ಭೇಟಿ ಸಂಭ್ರಮ
‘ಕ್ರಿಕೆಟಿಗನಾಗಿ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತಿದ್ದ ದಿನಗಳಿಂದಲೇ ವೆಸ್ಟ್‌ ಇಂಡೀಸ್‌ನ ವಿವ್‌ ರಿಚರ್ಡ್‌್ಸ ನನ್ನ ‘ಹೀರೊ’ ಆಗಿದ್ದರು. ಅವರನ್ನು ಮೊದಲ ಬಾರಿಗೆ ಭೇಟಿಯಾದ ಕ್ಷಣವನ್ನು ನಾನು ಹೇಗೆ ತಾನೆ ಮರೆಯಲಿ. ಅದೊಂದು ದಿನ ಅಡಿಲೇಡ್‌ನ ಹೋಟೆಲ್‌ ಒಂದರ ಮೊಗಸಾಲೆಯಲ್ಲಿ ನಾನು ಮತ್ತು ಸಂಜಯ್‌ ಮಂಜ್ರೇಕರ್‌ ಲೋಕಾಭಿರಾಮ ಮಾತನಾಡುತ್ತಾ ನಿಂತಿದ್ದೆವು. ಕಾರೊಂದು ಬಂದು ಹೋಟೆಲ್‌ನ ಪ್ರವೇಶ ದ್ವಾರದಲ್ಲಿ ನಿಂತಿತು.

ಅದರೊಳಗಿಂದ ಹ್ಯಾಟು ಧರಿಸಿದ ವ್ಯಕ್ತಿಯೊಬ್ಬರು ಇಳಿದು, ಹೋಟೆಲ್‌ನ ಒಳಗೆ ನಡೆದು ಬಂದರು. ‘ಇವರನ್ನು ಹಿಂದೆ ಎಲ್ಲಿಯೋ ನೋಡಿದಂತಿದೆಯಲ್ಲಾ...’ ಎಂದು ಸಂಜಯ್‌ಗೆ ಹೇಳಿದೆ. ಅಷ್ಟರಲ್ಲಿ ಅವರು ನಮ್ಮ ಸಮೀಪದಿಂದಲೇ ನಡೆದು ಹೋದರು. ‘ಏಯ್‌, ನನಗೆ ನಂಬಲಿಕ್ಕೇ ಆಗುತ್ತಿಲ್ಲ. ಇವರು ವಿವ್‌ ರಿಚರ್ಡ್‌್ಸ. ನನ್ನ ಬಾಲ್ಯ ಕಾಲದ ಹೀರೊ’ ಎಂದು ಸಂಜಯ್‌ ಮುಖ ನೋಡಿ ನಾನು ಉದ್ಗರಿಸಿದ್ದೆ. ರಿಚರ್ಡ್‌್ಸ ತಮ್ಮ ಕೊಠಡಿಯತ್ತ ಹೊರಟು ಹೋದರು. ‘ಸಂಜಯ್‌, ನಡಿ ಮಾರಾಯಾ. ನನಗೆ ಅವರನ್ನು ಭೇಟಿಯಾಗಲೇ ಬೇಕು’ ಎಂದು ದುಂಬಾಲು ಬಿದ್ದೆ. ಆಗ ಸಂಜಯ್‌ ಹೋಟೆಲ್‌ ಸ್ವಾಗತಕಾರಿಣಿಯ ಬಳಿ ಹೋಗಿ ರಿಚರ್ಡ್ಸ್ ಕೊಠಡಿಯ ಸಂಖ್ಯೆ ತಿಳಿದುಕೊಂಡರು.

ಸಂಜಯ್‌ 1989ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ದದ ಕ್ರಿಕೆಟ್‌ ಸರಣಿ ಆಡಿದ್ದ ಭಾರತ ತಂಡದಲ್ಲಿದ್ದವರು. ಆಗಿನ ಆ ಪರಿಚಯವನ್ನೇ ನೆಪ ಮಾಡಿಕೊಂಡು ಸಂಜಯ್‌ ಬಾಗಿಲು ತಟ್ಟಿದರು. ನಾವು ಕೊಠಡಿಯ ಒಳಗೆ ಹೋದೆವು. ಅಲ್ಲಿದ್ದುದು ಕೇವಲ ಮೂರು ನಿಮಿಷಗಳಷ್ಟೇ. ನಾನು ರಿಚರ್ಡ್ಸ್‌ ಅವರಿಗೆ ಹಲೋ ಎಂದಿದ್ದೆ ಅಷ್ಟೆ. ಆದರೆ ಅದೊಂದು ರೋಚಕ ಅನುಭವ’. ಈ ಅನುಭವವನ್ನು ಹಂಚಿಕೊಳ್ಳುವಾಗ ಸಚಿನ್‌ ತಾವು ಕ್ರಿಕೆಟ್‌ ರಂಗದ ಉತ್ತುಂಗಕ್ಕೆ ಏರಿದ್ದನ್ನು ಮರೆತು ಬಿಡುತ್ತಾರೆ. ದಶಕಗಳ ಹಿಂದೆ ಇನ್ನೊಂದು ಶಿಖರವನ್ನು  ಬೆರಗಿನಿಂದ ನೋಡಿದ್ದ ಕ್ಷಣಗಳನ್ನು ನೆನೆದು ಸಂಭ್ರಮಿಸುತ್ತಾರೆ.

ಸಚಿನ್‌ ಕಣ್ಣ ಬೆಳಕಲ್ಲಿ ಅಂಜಲಿ

ಸಚಿನ್‌ ಬದುಕಲ್ಲಿ ಸ್ಫೂರ್ತಿಯ ಚೇತನವಾದವರು ಅಂಜಲಿ. ಇವರಿಬ್ಬರ ಪ್ರೇಮ ಪ್ರಕರಣದ ಮೊದಲ ದಿನಗಳ ಬಗ್ಗೆ ಸಚಿನ್‌ ಈ ಕೃತಿಯಲ್ಲಿ ಮನಮೋಹಕವಾಗಿ ಬರೆದಿದ್ದಾರೆ. ಅದನ್ನು ಅವರ ಮಾತುಗಳಲ್ಲೇ ಕೇಳಿ..
***
‘1990ರ ಒಂದು ದಿನ. ನಾನು ಇಂಗ್ಲೆಂಡ್‌ ಪ್ರವಾಸ ಮುಗಿಸಿ ತಂಡದ ಜತೆಯಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದು, ನನ್ನ ಬ್ಯಾಗ್‌ಗಾಗಿ ಕಾಯುತ್ತಾ ನಿಂತಿದ್ದೆ. ಆಗ ಸ್ವಲ್ಪ ದೂರದಲ್ಲಿ ನಿಂತಿದ್ದ ಚೆಲುವೆಯೊಬ್ಬಳು ನನ್ನ ಮನ ಸೆಳೆದಿದ್ದಳು. ಆಕೆಯೂ ನನ್ನನ್ನು ದಿಟ್ಟಿಸಿದ್ದು ಗಮನಿಸಿ, ತಲೆ ತಗ್ಗಿಸಿಕೊಂಡು ಬ್ಯಾಗು ಎತ್ತಿಕೊಂಡು ಹೊರನಡೆದೆ. ವಿಮಾನ ನಿಲ್ದಾಣದಿಂದ ಹೊರ ಬರುವಾಗ ಮತ್ತೊಮ್ಮೆ ಆಕೆ ಕಣ್ಣಿಗೆ ಬಿದ್ದಳು.

ಕಿತ್ತಳೆ ಬಣ್ಣದ ಟೀಶರ್ಟ್‌, ನೀಲಿ ಜೀನ್ಸ್‌ ಧರಿಸಿದ್ದ ಅವಳು ನನ್ನ ಹಿಂದೆಯೇ ಓಡೋಡಿ ಬರುತ್ತಿರುವುದು ಕಂಡು ಬಂದಿತು. ‘ಬಲು ಮುದ್ದಾಗಿದ್ದಾನೆ...’ ಎಂದು ತನ್ನ ಗೆಳತಿಯ ಜತೆಗೆ ಹೇಳಿದ್ದೂ ಕೇಳಿಸಿತ್ತು. ಹೊರಗಡೆ ಅಣ್ಣ ಅಜಿತ್‌, ನಿತಿನ್‌ ಅಲ್ಲದೆ, ಬಾಲ್ಯದ ಗೆಳೆಯ ಸುನಿಲ್‌ ಹರ್ಷೆ ಕಾಯುತ್ತಿದ್ದರು. ನಾನು ಹಿಂತಿರುಗಿ ನೋಡಲಿಲ್ಲ. ಆದರೆ ನನ್ನ ಹೃದಯ ಅದೇಕೋ ಏನೋ ಹಿಂತಿರುಗಿ ನೋಡುತಿತ್ತು !
ವಿಮಾನ ನಿಲ್ದಾಣದಲ್ಲಿ ನನ್ನನ್ನು ನೋಡಿದ ಆ ಹುಡುಗಿ ಸುಮ್ಮನಿರಲಿಲ್ಲ. ಆ ದಿನಗಳಲ್ಲಿ ಕ್ಲಬ್‌ ಕ್ರಿಕೆಟ್‌ ಆಡುತ್ತಿದ್ದ ಆಕೆಯ ಪರಿಚಿತ ಮುಫಿ ಮುಫಾಜಲ್‌ ಲಡ್ಕವಾಲಾ ನೆರವಿನಿಂದ ನನ್ನ ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡಳು.

ಒಂದು ದಿನ ಮನೆಯ ಫೋನ್‌ ಟ್ರಿಣ್‌ ಟ್ರಿಣ್‌ ಎಂದಿತು. ಸಾಮಾನ್ಯವಾಗಿ ನಾನು ಊರಿಗೆ ಬಂದರೂ ಮನೆಯಲ್ಲಿರುವುದೇ ಕಡಿಮೆ. ಇದ್ದರೂ ಫೋನ್‌ ಎತ್ತುವ ಪ್ರಶ್ನೆ ಇಲ್ಲವೇ ಇಲ್ಲ ಬಿಡಿ. ಆದರೆ ಅವತ್ತು ಅದೇಕೋ ಏನೋ ರಿಸೀವರ್‌ ಎತ್ತಿದೆ. ಅತ್ತ ಕಡೆಯಿಂದ ‘ಮೊನ್ನೆ ಏರ್‌ಪೋರ್ಟ್‌ನಲ್ಲಿ ನಿಮ್ಮನ್ನು ನೋಡಿದ್ದೆನಲ್ಲಾ ಆ ಹುಡುಗಿ ನಾನು. ನೆನಪಾಯಿತಾ’ ಎಂಬ ಮಧುರ ಧ್ವನಿ ಕೇಳಿಸಿತು. ನಾನು ‘ನೆನಪಾಗುತ್ತಿದೆ. ಕಿತ್ತಳೆ ಬಣ್ಣದ ಟೀಶರ್ಟ್‌, ನೀಲಿ ಜೀನ್ಸ್‌ ಧರಿಸಿದ್ದವಳಲ್ಲವೇ’ ಎಂದೆ. ಆಕೆಗೆ ತುಂಬಾ ಖುಷಿಯಾದಂತೆನಿಸಿತು.

‘ಭೇಟಿಯಾಗಲು ಸಾಧ್ಯವಾ’ ಎಂದು ಕೇಳಿದಳು. ಆಗ ನಾನು ‘ಇಂಡಿಯ ಕ್ರಿಕೆಟ್‌ ಕ್ಲಬ್‌ನಲ್ಲಿ ಭೇಟಿಯಾಗುವಾ’ ಎಂದೆ. ಆಕೆ ಕ್ಲಬ್‌ಗೆ ಬಂದಳು. ಅಲ್ಲಿ ನಾವಿಬ್ಬರೂ ಮಾತನಾಡುವುದಾದರೂ ತಾನೆ ಏನು. ಏಕೆಂದರೆ ಸುತ್ತಲೂ ನೂರಾರು ಜನ ತುಂಬಿಕೊಂಡಿದ್ದರು. ನಮ್ಮ ಟೆಲಿಫೋನ್‌ ನಂಬರ್‌ಗಳನ್ನು ವಿನಿಮಯ ಮಾಡಿಕೊಂಡೆವು, ಅಷ್ಟೇ. ನಂತರ ಆಗಿಂದಾಗ್ಗೆ ಫೋನ್‌ನಲ್ಲಿ ಮಾತನಾಡುತ್ತಿದ್ದೆವು. ಈ ನಡುವೆ ಮನೆಯಲ್ಲಿ ಮೀನಾ ಅತ್ತಿಗೆಗೆ ಏನೋ ಅನುಮಾನ. ಫೋನು ಬರುತ್ತಿದ್ದಂತೆ ನಾನು ಮುಖ ಅರಳಿಸಿ ಮಾತನಾಡುವುದನ್ನೆಲ್ಲಾ ಆಕೆ ಗಮನಿಸಿಬಿಟ್ಟಿದ್ದಳು. ‘ಯಾರೋ ಆ ಹುಡುಗಿ, ಪದೇ ಪದೇ ಫೋನ್‌ ಮಾಡ್ತಾಳಲ್ಲಾ..’ ಎಂದು ಅತ್ತಿಗೆ ಕೇಳಿದಾಗ ಸುಮ್ಮನಿದ್ದು ಬಿಟ್ಟಿದ್ದೆ.

‘ವರದಿಗಾರ್ತಿ’ಗೆ ಚಾಕಲೆಟ್‌ ಕೊಟ್ಟಿದ್ದು...
ಅದೊಂದು ದಿನ ಆ ಹುಡುಗಿ ಅಂಜಲಿ ನನ್ನ ಮನೆಗೆ ಬರುತ್ತೇನೆಂದಳು. ಬಾ ಎಂದೆ. ಆಕೆ ನಮ್ಮ ಮನೆಗೆ ಬಂದು ಪತ್ರಿಕೆಯೊಂದರ ವರದಿಗಾರ್ತಿ ಎಂದು ಪರಿಚಯಿಸಿಕೊಂಡಳು. ನಾನು ಆಕೆಯ ಎದುರು ಸಂದರ್ಶನಕ್ಕೆ ಕುಳಿತು ಕೊಳ್ಳುವ ಬದಲು ಇಂಗ್ಲೆಂಡಿನಿಂದ ತಂದಿದ್ದ ಚಾಕ್‌ಲೇಟ್‌ಗಾಗಿ ಹುಡುಕಾಟ ನಡೆಸಿದ್ದೆ. ಎರಡೇ ಚಾಕ್‌ಲೆಟ್‌ ಉಳಿದಿದ್ದವು. ಅವುಗಳನ್ನೇ ಮುತುವರ್ಜಿಯಿಂದ ತುಂಡು ಮಾಡಿ ಬಟ್ಟಲಲ್ಲಿಟ್ಟು ಅದನ್ನು ಆಕೆಯ ಮುಂದಿಟ್ಟು, ವಿಧೇಯನಾಗಿ ನಿಂತಿದ್ದೆ. ಆಕೆಯೂ ಹೆಚ್ಚು ಹೊತ್ತು ಇರಲಿಲ್ಲ. ಬೇಗನೆ ಹೊರಟು ಹೋದಳು. ಆದರೆ ಅವಳ ಆ ಇರುವಿಕೆ ನನ್ನ ಮನಸ್ಸನ್ನು ಇನ್ನಿಲ್ಲದಂತೆ ಮುದಗೊಳಿಸಿತ್ತು.

ನಾನು ಅಂದು ಆ ‘ವರದಿಗಾರ್ತಿ’ಯ ಎದುರು ಹೆಚ್ಚು ಮಾತನಾಡಿರಲಿಲ್ಲ. ಏನೇನೋ ಪೆದ್ದು ಪೆದ್ದಾಗಿ ಮಾತನಾಡಬಾರದೆಂದು ನಿರ್ಧರಿಸಿ ಮೌನವಾಗಿದ್ದೆ. ಆಕೆಯೇ ಮಾತನಾಡಿದ್ದಳು. ಆ ದಿನಗಳಲ್ಲಿ ನನ್ನ ಇಂಗ್ಲಿಷ್‌ ಭಾಷೆ ಕೂಡಾ ಅಷ್ಟೇನೂ ಚೆನ್ನಾಗಿರಲಿಲ್ಲ, ಬಿಡಿ. ಅದು ಅವಳಿಗೆ ಗೊತ್ತಾಗದಿರಲಿ ಎಂಬ ‘ರಕ್ಷಣಾ’ ತಂತ್ರವೂ ನನ್ನದಾಗಿತ್ತು. ಅಂಜಲಿ ‘ವರದಿಗಾರ್ತಿ’ಯಾಗಿದ್ದು ಅದೇ ಮೊದಲು ಮತ್ತು ಅದೇ ಕೊನೆ. ಆದರೆ ನನ್ನ ಅತ್ತಿಗೆಗೆ ಮಾತ್ರ ಈ ‘ವಿಶೇಷ ವರದಿಗಾರ್ತಿ’ ಬಗ್ಗೆ ಅನುಮಾನ ಇನ್ನೂ ಹೆಚ್ಚಾಗಿತ್ತು.

ಆ ನಂತರ ಫೋನ್‌ನಲ್ಲಿ ನಾವು ಬಹಳ ಸಂಭಾಷಣೆ ನಡೆಸಿದ್ದೇವೆ. ಆದರೆ ಭೇಟಿಯಾಗುತ್ತಿದ್ದುದು ಕಡಿಮೆ. ರಾತ್ರಿ ಎಂಟೂವರೆ ಸುಮಾರಿಗೆ ಅವಳ ಮನೆಯ ಬಳಿ ಹೋಗಿ ಅಲ್ಲಿಂದ ಕಾರಿನಲ್ಲಿ ಕೆಲವು ನಿಮಿಷ ತಿರುಗಾಡಿ ಅವಳನ್ನು ಮನೆಯ ಬಳಿ ಬಿಟ್ಟು ಬರುತ್ತಿದ್ದೆ. ಆ ಕೆಲವೇ ನಿಮಿಷಗಳ ಭೇಟಿಗಾಗಿ ನಾನು ಬಾಂದ್ರಾದಿಂದ 40 ನಿಮಿಷಗಳ ಕಾಲ ಕಾರು ಚಲಾಯಿಸಿಕೊಂಡು ವಾರ್ಡನ್‌ ರಸ್ತೆಗೆ ಹೋಗುತ್ತಿದ್ದೆ. ಕೆಲವೊಮ್ಮೆ ನಮ್ಮ ಭೇಟಿಯ ಸಮಯ ಹೆಚ್ಚು ಕಡಿಮೆ ಆಗಿ ಬಿಡುತಿತ್ತು.

ನಾನು ಅಷ್ಟು ದೂರದಿಂದ ಆಕೆಯ ಮನೆಯ ರಸ್ತೆಯ ಬಳಿ ಬಂದು ಕಾರು ನಿಲ್ಲಿಸಿ ಕಾಯುತ್ತಿದ್ದರೆ, ನನ್ನ ಕಾಯುವಿಕೆ ಆಕೆಗೆ ಗೊತ್ತಿರುತ್ತಿರಲಿಲ್ಲ. ಅಲ್ಲಿದ್ದ ಪಬ್ಲಿಕ್‌ ಬೂತ್‌ನಿಂದ ಫೋನ್‌ ಮಾಡಲೂ ನನಗೆ ಸಾಧ್ಯವಾಗುತ್ತಿರಲಿಲ್ಲ. ಮತ್ತೆ ಬಾಂದ್ರಾಕ್ಕೆ ವಾಪಸಾಗುತ್ತಿದ್ದೆ. ಆಗ ಆಕೆಯ ಫೋನು ಬರುತಿತ್ತು. ಮತ್ತೆ ವಾರ್ಡನ್‌ ರಸ್ತೆಗೆ ನನ್ನ ಕಾರು  ಸಾಗುತಿತ್ತು. ಅದಾಗಲೇ, ಜನ ನನ್ನ ಗುರುತು ಹಿಡಿಯ ತೊಡಗಿದ್ದರು. ಹೀಗಾಗಿ ನಮ್ಮಿಬ್ಬರ ನಡುವಣ ಮಾತುಕತೆ, ಭೇಟಿಗೆ ಆ ದಿನಗಳಲ್ಲಿ ಅದೆಷ್ಟು ಅಡಚಣೆ ಇತ್ತು ಗೊತ್ತಾ ? ಹೀಗಾಗಿಯೇ ನೋಡಿ, ದಶಕದ ಹಿಂದೆ ಈ ಮೊಬೈಲ್‌ ಫೋನ್‌ ತಂತ್ರಜ್ಞಾನ ಬಂದಾಗ ಬಹಳ ಖುಷಿ ಪಟ್ಟಿದ್ದೆ. ಅದರ ಮಹತ್ವ ಎಷ್ಟೆಂಬುದರ ಅರಿವು ನನಗಿದೆ.

ನಾನು ಮತ್ತು ಅಂಜಲಿ ಸಾರ್ವಜನಿಕ ಸ್ಥಳಗಳಲ್ಲಿ ಖುಷಿಯಾಗಿ ಕೈ ಕೈ ಹಿಡಿದು ನಡೆದಾಡಿದ್ದೇ ಕಡಿಮೆ. 90ರ ದಶಕದ ಆರಂಭದ ದಿನಗಳವು. ಅದೊಂದು ದಿನ ಅಂಜಲಿಯ ಮನೆಯ ಬಳಿ ಹೋಗಿದ್ದೆ. ಆಕೆಯ ಮಾರುತಿ 800 ಕಾರಿನಲ್ಲಿ ಕುಳಿತೆ. ನಾವಿಬ್ಬರೂ ಮರೀನ್‌ ಡ್ರೈವ್‌ ಬಳಿ ಸಾಗಿದೆವು. ಅಲ್ಲಿ ಏರ್‌ ಇಂಡಿಯಾ ಕಟ್ಟಡದ ಎದುರು ಕಲ್ಲು ಬೆಂಚಿನ ಮೇಲೆ ಕುಳಿತೆವು. ಮನಸಾರೆ ಮಾತನಾಡಿದ್ದೆವು. ಎಳನೀರು ಕುಡಿದಿದ್ದೆವು. ಬಹುಶಃ ಅದೇ ಕೊನೆ ನೋಡಿ.

ಮತ್ತೆ ಆ ರೀತಿ ಈ ಮಹಾನಗರದ ಸಾರ್ವಜನಿಕ ಸ್ಥಳಗಳೆಲ್ಲಿಯೂ ಕುಳಿತು ಮುಕ್ತವಾಗಿ ಹರಟಲು ಸಾಧ್ಯವೇ ಆಗಲಿಲ್ಲ. ಎಲ್ಲಿಗೆ ಹೋದರೂ ಜನ ನನ್ನನ್ನು ಗುರುತಿಸುತ್ತಿದ್ದರು. ಎಲ್ಲರಂತೆ ನಾವು ಫುಟ್‌ಪಾತ್‌ನಲ್ಲಿ ಮಾತನಾಡುತ್ತಾ ನಡೆಯಲಾಗಲಿಲ್ಲ, ಸಮುದ್ರ ಕಿನಾರೆಯಲ್ಲಿ ಮನದಣಿಯ ಸುತ್ತಾಡಲು ಆಗಲಿಲ್ಲ. ರಸ್ತೆ ಬದಿಯಲ್ಲಿ ಗಾಡಿಗಳಲ್ಲಿ ಮಾರುವ ತಿನಿಸುಗಳನ್ನು ತಿನ್ನಲಾಗಲಿಲ್ಲ.

ವಿಗ್‌ ಧರಿಸಿ ಚಿತ್ರಮಂದಿರಕ್ಕೆ ಹೋಗಿದ್ದು...

1993ರ ವರ್ಷ ಇರಬೇಕು. ದಕ್ಷಿಣ ಮುಂಬೈಯ ವರ್ಲಿಯಲ್ಲಿರುವ ಚಿತ್ರ ಮಂದಿರ ಒಂದರಲ್ಲಿ ‘ರೋಜಾ’ ಚಿತ್ರ ಪ್ರದರ್ಶನಗೊಳ್ಳುತಿತ್ತು. ಅಂಜಲಿ, ಆಕೆಯ ತಂದೆ ಆನಂದ್‌ ಮೆಹ್ತಾ ಮತ್ತು ನಮ್ಮ ಕೆಲವು ಗೆಳೆಯರು ಆ ಚಿತ್ರ ನೋಡಲು ಹೋದೆವು. ನಾನು ತಲೆಗೊಂದು ವಿಗ್‌ ಹಾಕಿಕೊಂಡಿದ್ದೆ. ಮೀಸೆಯೊಂದನ್ನು ಅಂಟಿಸಿಕೊಂಡಿದ್ದೆ. ಕಣ್ಣಿಗೆ ಕಪ್ಪು ಕನ್ನಡಕ ಹಾಕಿಕೊಂಡಿದ್ದೆ. ಯಾರೂ ನನ್ನ ಗುರುತು ಹಿಡಿಯಲು ಸಾಧ್ಯವೇ ಇಲ್ಲ ಎಂದುಕೊಂಡು ಚಿತ್ರ ಮಂದಿರದೊಳಗೆ ಹೋಗಿ ಕುಳಿತೆ.

ಮಧ್ಯಂತರದವರೆಗೂ ಎಲ್ಲವೂ ನಾವು ಅಂದು ಕೊಂಡಂತೆ ನಡೆಯಿತು. ಆದರೆ ನನ್ನ ಕಪ್ಪು ಕನ್ನಡಕ ಆಕಸ್ಮಾತ್‌ ಕೆಳಗೆ ಬಿದ್ದಿತು. ಅದರ ಒಂದು ಮಸೂರ ಒಡೆದು ಹೋಯಿತು. ‘ಒಡೆದ ಕನ್ನಡಕ ಬಳಸುವುದರಿಂದ ಕಣ್ಣಿಗೆ ಹಾನಿಯಾಗುತ್ತದೆ’ ಎಂದು ನನ್ನ ಗೆಳೆಯರು ಹೇಳಿದ್ದರಿಂದ ಅದನ್ನು ತೆಗೆದು ಕಿಸೆಯಲ್ಲಿಟ್ಟು ಕೊಂಡೆ. ಈ ಗೊಂದಲದಲ್ಲಿ ನನ್ನ ಮೀಸೆ ಅರ್ಧ ಕಿತ್ತು ಬಂದಿತ್ತು. ಅದು ನನಗೆ ಗೊತ್ತಾಗಲೇ ಇಲ್ಲ. ಅಷ್ಟರಲ್ಲಿ ಸುತ್ತಮುತ್ತಲಿದ್ದ ಜನ ನನ್ನ ಗುರುತು ಹಿಡಿದು ಬಿಟ್ಟಿದ್ದರು. ಅವರ ಅಭಿಮಾನದ ಅತಿರೇಕದಿಂದಾಗಿ ನಾವೆಲ್ಲರೂ ಇನ್ನಿಲ್ಲದ ಮುಜುಗರ ಅನುಭವಿಸುವಂತಾಗಿ, ಚಿತ್ರ ಮುಗಿಯುವ ಮೊದಲೇ ಚಿತ್ರ ಮಂದಿರದಿಂದ ಜಾಗ ಖಾಲಿ ಮಾಡಿದ್ದೆವು.

ವಿದೇಶಗಳಲ್ಲಿಯೂ ನನಗೆ ಇಂತಹದೆ ಸಮಸ್ಯೆ ಹಲವು ಬಾರಿ ಎದುರಾಗಿದೆ. ಕೆಲವು ವರ್ಷಗಳ ಹಿಂದೆ ನಾನು ಕುಟುಂಬ ಸಮೇತ ಸ್ವಿಟ್ಜರ್‌ಲೆಂಡ್‌ಗೆ ತೆರಳಿದ್ದೆ. ಅಲ್ಲೊಂದು ರೆಸಾರ್ಟ್‌ನಲ್ಲಿ ಇಳಿದು ಕೊಂಡಿದ್ದೆವು. ಅಲ್ಲಿ ಇಂಟರ್‌ ಲ್ಯಾಕೆನ್‌ ಎಂಬ ಸ್ಥಳಕ್ಕೆ ಹೋಗಲು ನಿರ್ಧರಿಸಿದೆವು. ಆ ಪ್ರೇಕ್ಷಣೀಯ ಸ್ಥಳದಲ್ಲಿ ಬಾಲಿವುಡ್‌ನ ಕೆಲವು ಜನಪ್ರಿಯ ಚಲನಚಿತ್ರಗಳಿಗೆ ಶೂಟಿಂಗ್‌ ನಡೆದಿದೆ. ನಾವು ಅಲ್ಲಿಗೆ ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕೆಂದು ಮೊದಲು ನಿರ್ಧರಿಸಿದ್ದೆವು.

ಆಗ ಗೆಳೆಯರು ‘ಬೇಡ ಮಾರಾಯ, ಅಲ್ಲಿ ಭಾರತೀಯ ಪ್ರವಾಸಿಗಳು ಇದ್ದೇ ಇರುತ್ತಾರೆ, ಸುಮ್ಮನೆ ಕಿರಿಕಿರಿ ಏಕೆ’ ಎಂದಿದ್ದರು. ಅದಕ್ಕಾಗಿ ನಾವೊಂದು ಕುದುರೆ ಗಾಡಿಯಲ್ಲಿ ಕುಳಿತು ಸಾಗಿದೆವು. ದಾರಿಯಲ್ಲಿ ಕೆಲವು ಭಾರತೀಯರು ನಮ್ಮನ್ನು ಗುರುತಿಸಿಯೇ ಬಿಟ್ಟರು. ಕೆಲವು ನಿಮಿಷಗಳಲ್ಲಿ ಅವರ ಸಂಖ್ಯೆ ದೊಡ್ಡದಾಯಿತು. ಅವರೆಲ್ಲಾ ನಮ್ಮ ಬೆನ್ನು ಹಿಡಿದು ಬಿಟ್ಟರು. ವೇಗವಾಗಿ ಹೋಗಲು ನಮ್ಮ ಬಂಡಿಯ ಚಾಲಕನಿಗೆ ಹೇಳಿದೆ. ಅವರೂ ಅಷ್ಟೇ ವೇಗವಾಗಿ ಬರತೊಡಗಿದರು. ಕೊನೆಗೂ ನಮ್ಮ ವೇಗದ ಮುಂದೆ ಅವರ ಕೈಸಾಗಲಿಲ್ಲ.

ಪರೀಕ್ಷೆಗೆ ಕುಳಿತವಳಿಗೆ ಸಲಹೆ ಕೊಟ್ಟಿದ್ದು !

ಅಂಜಲಿ ತನ್ನ ವೈದ್ಯಕೀಯ ಪರೀಕ್ಷೆಗೆ ತಯಾರಿ ನಡೆಸಿದ್ದಳು. ಆಗ ನಾನು ಆಸ್ಟ್ರೇಲಿಯ ಪ್ರವಾಸದಲ್ಲಿದ್ದೆ. ಮುಂಜಾನೆ ಅಷ್ಟೊತ್ತಿಗೇ ಆಕೆಗೆ ಫೋನ್‌ ಮಾಡಿ ‘ಚೆನ್ನಾಗಿ ಓದಬೇಕಮ್ಮ. ಯಾವುದೇ ತೆರನಾದ ಗಾಬರಿ ಪಡಬೇಡ. ಪರೀಕ್ಷೆ ನಿನಗೇನು ಸುಲಭವಾಗಿಯೇ ಇರುತ್ತೆ ಬಿಡು...’ ಎಂದೆಲ್ಲಾ ಧೈರ್ಯ ತುಂಬುತ್ತಿದ್ದೆ. ಆಗ ಆಕೆ ‘ನನಗೆ ಆತಂಕ ಶುರುವಾಗಿದೆ. ಈ ಸಲ ಪಾಸಾಗುತ್ತೇನೋ ಇಲ್ಲವೋ ದೇವರಿಗೇ ಗೊತ್ತು’ ಎನ್ನತೊಡಗಿದ್ದಳು. ಆಗ ಗಮನವಿಟ್ಟು ಓದಲು ಸಲಹೆಗಳನ್ನು ನೀಡಿದ್ದೆ. ಅವಳು ತೇರ್ಗಡೆಗೊಂಡಿದ್ದಳು. ನನ್ನ ಆತ್ಮವಿಶ್ವಾಸದ ನುಡಿಗಳು ಮತ್ತು ಪರೀಕ್ಷೆಯನ್ನು ಹೇಗೆ ಎದುರಿಸಬೇಕೆಂಬ ಕಿವಿಮಾತು ಆಕೆಗೆ ಸಾಕಷ್ಟು ನೆರವಾಯಿತಂತೆ! ವಿಪರ್ಯಾಸ ಏನು ಗೊತ್ತುಂಟಾ ? ಆಕೆ  ಒಂದು ದಿನದಲ್ಲಿ ಎಷ್ಟು ಗಂಟೆ ಓದಿದ್ದಳೋ, ನಾನು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ 1 ತಿಂಗಳಲ್ಲಿ ಅಷ್ಟು ಗಂಟೆ ಓದಿರಲಿಲ್ಲ !!
***
ದಿಲೀಪ್‌ ವೆಂಗ್‌ಸರ್ಕರ್‌ 1988ರ ಸುಮಾರಿನಲ್ಲಿ ತಮ್ಮ ಪ್ರತಿಭೆಯನ್ನು ಗುರುತಿಸಿ ಗೌರವದಿಂದ ಕಂಡಿದ್ದು, ಗಾವಸ್ಕರ್‌ ಜತೆಗೆ ಆಡುವ ಅವಕಾಶ ಸ್ವಲ್ಪದರಲ್ಲಿ ತಪ್ಪಿ ಹೋಗಿದ್ದು, ತಮ್ಮ ಕ್ರಿಕೆಟ್‌ ಬದುಕಿನ ಕೊನೆಯ ದಿನಗಳಲ್ಲಿ ಟೀಕಾ ಪ್ರವಾಹ ಹರಿದು ಬರುತ್ತಿರುವಾಗ ತಮ್ಮ ಜತೆಗೆ ನಿಂತವರ ಬಗ್ಗೆ ಕೃತಜ್ಞತೆ, ವಿಶ್ವಕಪ್‌ನ ದಿನಗಳ ರೋಚಕ ನೆನಪುಗಳ ಬುತ್ತಿಯನ್ನು ಬಿಚ್ಚಿಡುವ ಸಚಿನ್‌ ಓದುಗನ ಕುತೂಹಲಕ್ಕೆ ನಿರಾಸೆ ಉಂಟು ಮಾಡುವುದಿಲ್ಲ.

ತಮ್ಮ ತಾಯಿಯ ಕೈ ಅಡುಗೆಯ ರುಚಿಯನ್ನು ಓದುಗರೊಂದಿಗೆ ಹಂಚಿಕೊಳ್ಳುವ ಅವರು ವೃತ್ತಿಪರ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದಾಗಿನ ಘಟನೆಯನ್ನು ಮನೋಜ್ಞವಾಗಿ ನಿರೂಪಿಸುತ್ತಾರೆ. ‘ನನ್ನ ನಿವೃತ್ತಿ ಬಗ್ಗೆ ಮಗ ಅರ್ಜುನ್‌ಗೆ ಅಂಜಲಿ ಹೇಳಿದಳಂತೆ. ಆಗ ಅವನು ಮೌನವಾಗಿ ಕಿಟಕಿಯ ಬಳಿ ನಡೆದು ಆಕಾಶ ನೋಡುತ್ತಾ ನಿಂತು ಬಿಡುತ್ತಾನಂತೆ. ಅವನ ಕೆನ್ನೆಗಳ ಮೇಲೆ ಕಣ್ಣೀರು ಹರಿಯುತಿತ್ತಂತೆ. ಆದರೆ ಮಗಳು ಪ್ರೌಢಿಮೆಯಿಂದ ನಡೆದುಕೊಂಡಳಂತೆ. ಈ ವಿಷಯವನ್ನು ಅಂಜಲಿ ನನಗೆ ಹೇಳಿದಾಗ ನಾನು ಪಕ್ಕದಲ್ಲಿ ಕುಳಿತ್ತಿದ್ದ ಮಗಳ ತಲೆ ನೇವರಿಸಿದ್ದೆ...‘ ಹೀಗೆ ಸಚಿನ್‌ ಭಾವಲೋಕ ತೆರೆದುಕೊಳ್ಳುತ್ತಾ ಹೋಗಿದೆ.

ಸಚಿನ್‌ ಆಟದಷ್ಟೇ ಉತ್ತಮವಾಗಿ ಈ ಕೃತಿ ಮೂಡಿ ಬಂದಿದೆ. ಹಲವು ಭಾವನಾತ್ಮಕ ಕ್ಷಣಗಳಿವೆ. ಕಲಾತ್ಮಕ ನಿರೂಪಣೆ ಇದೆ. ಅಂಕಿ ಅಂಶ, ಆಟದ ಶೈಲಿಗಳೆಲ್ಲವೂ ಕ್ರಿಕೆಟ್‌ ಜಗತ್ತಿನ ಮಂದಿಗೆ ಚಿರಪರಿಚಿತ, ನಿಜ. ಆದರೆ ಈ ಕೃತಿಯ ಮೂಲಕ ಸಚಿನ್‌ ಭಾವಲೋಕದ ಪರಿಚಯವಾಗುತ್ತದೆ. ಈ ಕೃತಿಯನ್ನು ಒಂದೇ ಉಸಿರಿಗೆ ಓದಿ ಮುಗಿಸಿದ ನಂತರ, ಆ ಗುಂಗಿನಿಂದ ಹೊರಬರಲು ಕೆಲವು ಗಂಟೆಗಳು ಬೇಕು.

Thursday, November 06, 2014

“ಕರ್ಮ”: ಶ್ರದ್ದೆ - ನಂಬಿಕೆಗಳ ನಡುವಿನ ಒಂದು ಹೊಯ್ದಾಟ

“ಬೇರೆಯವರ ಮೇಲಿನ ನಿನ್ನ ಅವಲಂಬನೆ, ನಂಬಿಕೆ. ನಿನ್ನ ಮೇಲಿನ ನಿನ್ನ ಅವಲಂಬನೆ, ಶ್ರದ್ದೆ. ನಂಬಿಕೆ ಚಂಚ, ಶ್ರದ್ದೆ ಅಚಲ. ಇದೇ ನಂಬಿಕೆ ಮತ್ತು ಶ್ರದ್ದೆಯ ನಡುವಿನ ವ್ಯತ್ಯಾಸ.”

***
ಅಣ್ಣನ ತಲೆ ತಣ್ಣಗಾಗಿದೆ ಎಂದು ಸುಬ್ಬು ಮಾವನಿಗೆ ಹೇಳುವಾಗ ನರಹರಿಯ ಕಣ್ಣುಗಳು ಚಲನೆಯಲ್ಲಿರಲಿಲ್ಲ. ಮುಂದಿನ ಕೆಲಸ ನೋಡುವಂತೆ ಸುಬ್ಬು ಮಾವ ಸೂಚಿಸಿದರು. ಅಮ್ಮನು ಆಗಲೇ ನಿಶ್ಚೇತಳಾಗಿದ್ದಾಳೆ, ಹೇಳಿದ್ದನ್ನು ಆಲಿಸುವ ಗಮನವೂ ಅವಳಲ್ಲಿಲ್ಲ ಎಂದುಕೊಳ್ಳುತ್ತಾ ಮತ್ತೊಮ್ಮೆ ಅಣ್ಣನ ತಲೆಯನ್ನು ಮುಟ್ಟಿದ. ತಣ್ಣನೆಯ ಸ್ಪರ್ಶ, ಇಡೀ ದೇಹ ತಣಿವಿನಿಂದ ಬೆಸೆತುಗೊಳ್ಳುತ್ತಿತ್ತು. “ನರಹರಿ, ಡಾಕ್ಟರ್ ಒಂದು ಸಾರಿ ನೋಡಿ ಬಿಡ್ಲಿ. ಆಮೇಲೆ ಎಲ್ಲರಿಗೂ ತಿಳಿಸುವಂತೆ.” ಎನ್ನುತ್ತಾ ಡಾಕ್ಟ್ರ್ ಜತೆಗೂಡಿ ಸುಬ್ಬು ಮಾವ ಬಂದರು. ರಾಘವೇಂದ್ರರು ಪಕ್ಕದ ಬೀದಿಯಲ್ಲೇ ಇರುವುದರಿಂದ ಸುಬ್ಬು ಮಾವ ಅವರನ್ನು ಕರೆ ತರುವುದು ತಡವಾಗಲಿಲ್ಲ. ನಡು ಮನೆಯ ಒಳಭಾಗದಲ್ಲಿ ಮಲಗಿಸಿದ್ದ ಶ್ರೀಕಂಠ ಜೋಯಿಸರನ್ನು ನೋಡುತ್ತಲೇ ನಮ್ಮ ಕೈ ಬಟ್ಟೆಯಿಂದ ಮೀಸೆಯ ಬೆವರನ್ನು ಒರೆಸಿಕೊಂಡರು. “ಸುಬ್ರಹ್ಮಣ್ಯಾ.. ತುಂಬಾ ಹೊತ್ತು ಆಗಿದೆ, ತಿಳಿಸಿಬಿಡಿ ಎಲ್ಲರಿಗೂ...” ಹಿಡಿದಿಟ್ಟ ಅಳು ಫಳ್ಳನೆ ಒಡೆದು ನರಹರಿಯ ಮುಖವೆಲ್ಲಾ ನೀರಾಗಿ ಹೋಯಿತು. ಸುಬ್ಬು ಮಾವ ಶಾರದಮ್ಮನನ್ನು ಗಟಿಯಾಗಿ ಹಿಡಿದು ತಲೆಯನ್ನು ತಟ್ಟುತ್ತಿದ್ದರು. ಶಾರದಮ್ಮನ ಕಣ್ಣುಗಳು ಶ್ರೀಕಂಠ ಜೋಯಿಸರ ಹಣೆಯನ್ನೇ ಗಮನಿಸುತ್ತಿತ್ತು. ಅಗಲವಾದ ಹಣೆ, ಸುಕ್ಕಿದ್ದರೂ ಕಪ್ಪುಗಟ್ಟಿದ್ದ ಬಣ್ಣ, ಅವರ ಕಣ್ಣು ಮುಚ್ಚಬೇಡವೋ ನರಹರಿ ಎಂದು ಕೂಗಿಕೊಳ್ಳುವ ಮನಸ್ಸು ಶಾರದಮ್ಮನಿಗೆ ಆಗುತ್ತಿತ್ತು, ಆದರೆ ತುಟಿ ಬಿಚ್ಚಲೂ ಸಾಧ್ಯವಾಗದಂತೆ ಒಳಗಿನ ಅಳು, ಇನ್ನು ತಡೆಯಲು ಸಾಧ್ಯವಿಲ್ಲವೆನಿಸಿತೋ ಏನೋನರಹರಿ... ನಮ್ಮನ್ನ ಬಿಟ್ಟು ಹೊಗಿ ಬಿಟ್ರಲ್ಲೋ ನಿಮ್ಮಣ್ಣ...” ಎಂದು ಜೋರಾಗಿ ಕೂಗಿಕೊಂಡರು

ರಾತ್ರಿ ಹನ್ನೊಂದೂವರೆಯಾಗಿತ್ತು. ಪಿಜ್ಜಾಹಟ್ಟಿನ ಬಾಕ್ಸ್ ಗಳು ಟೀಪಾಯಿಯ ಮೇಲೇ ಇವೆ. ರಟ್ಟಿನ ಡಬ್ಬದಲ್ಲಿ ತಂದಿದ್ದ ಕಿಂಗ್ ಫಿಷರ್ ಬೀರ್ ಕ್ಯಾನಿನ ಹನ್ನೆರಡು ಡಬ್ಬಿಗಳು ಅದಾಗಲೇ ಖಾಲಿಯಾಗಿತ್ತು. “ಸೂರಿ.. ಕ್ಯಾನ್ ಯು ಗೆಟ್ ಮೀ ಸಮ್ ವೈನ್?” ನೇಹಾ ಜೀವಂತಿ ಕೂಗಿದಳು. ಬಾಲ್ಕನಿಯಲ್ಲಿ ಇಡೀ ದಕ್ಷಿಣ ಬೆಂಗಳೂರಿನ ರಾತ್ರಿಯ ಅಂದವನ್ನು ನೋಡುತ್ತಾ ನಿಂತಿದ್ದ ಸೂರಿ ಏನೂ ಮಾತನಾಡಲಿಲ್ಲ. ೨೪ ನೇ ಅಂತಸ್ತಿನ ಫ್ಲಾಟ್ ಇಡೀ ದಕ್ಷಿಣ ಬೆಂಗಳೂರನ್ನು ತೋರಿಸುತ್ತಿತ್ತು.

ಯಾಕಿಷ್ಟು ತಿಂದೆ ಇಂದು, ವೀಕೆಂಡ್ ಬಂತು ಎಂತಲೋ ಅಥವಾ ಏನಿರಬಹುದು? ಎರಡು ಲಾರ್ಜ್ ಪಿಜ್ಫ಼್ಜಾ ಚೀಜ್ ಬಸ್ಟ್ ಮಾಡಿಸಿದ್ದು ಒಬ್ಬನೇ ತಿಂದೆ, ಅದಲ್ಲದೆ ಕೋಕ್, ಇಷ್ಟು ಸಾಲದು ಎಂಬಂತೆ ಕೆ.ಎಫ್.ಸಿ ನಿಂದ ಮನೆಗೆ ತಂದ ಒಂದು ಟಬ್ ಪೂರ್ತಿ ಚಿಕನ್ ನಾನು ನೇಹಾ ಇಬ್ಬರೂ ಮುಗಿಸಿದೆವು.......... 



***
ಇದು ನಾನು ಇತ್ತೀಚೆಗೆ ಓದಿದ ವಿನೂತನವಾಗಿ ಕಾದಂಬರಿ ಕ್ಷೇತ್ರವನ್ನು ಪ್ರವೇಶ ಮಾಡಿದ ಶ್ರೀ ಕರಣಂ ಪವನ್ ಪ್ರಸಾದ್ ರವರಕರ್ಮಕಾದಂಬರಿಯ ಮೊದಲ ಪುಟ. ಕನ್ನಡದಲ್ಲಿ ಹಿಂದೆ ಪ್ರಕಟವಾಗಿದ್ದಸಂಸ್ಕಾರ”, “ವಂಶವೃಕ್ಷಗಳ0ತಹಾ ಕಾದಂಬರಿಗಳನ್ನು ನೆನಪಿಸುವಕರ್ಮಹೊಸ ಲೇಖಕರೊಬ್ಬರ ಮೊದಲ ಪ್ರಯತ್ನ ಎಂದು ಎಲ್ಲಿಯೂ ಅನ್ನಿಸಲಾರದು. ಕೇವಲ ಹದಿನಾಲ್ಕು ದಿನಗಳಲ್ಲಿ ನಡೆಯುವ ಕಥೆಯಾದರೂ ಕಾದಂಬರಿ ಎಲ್ಲಿಯೂ ಬೋರಾಗದಂತೆ ಓದಿಸಿಕೊಂಡು ಹೋಗುತ್ತದೆ. ಮಲೆನಾಡಿನ ವಾತಾವರಣ ಮತ್ತು ನಗರ ಜೀವನದ ಬೆತ್ತಲೆ ದರ್ಶನ ಕಾದಂಬರಿಯಲ್ಲಿ ನಮಗುಂಟಾಗುತ್ತದೆ..ಧಾರ್ಮಿಕತೆ, ಆಚರಣೆ ಮತ್ತು ಶ್ರದ್ಧೆಎಲ್ಲವೂ ಬೇರೆ ಎಂಬ ತರ್ಕದ ವಿಚಾರ ಮಂಟನವನ್ನು ನಡೆಸುತ್ತಾ ಸಾಗುವ ಕಾದಂಬರಿ .ಕನ್ನಡದ ಓದುಗರಿಗೆ ಹೊಸ ಅನುಭೂತಿಯನ್ನು ಕೊಡುತ್ತದೆ.

ನಾಟಕಕಾರರಾದ ಕರಣಂ ಪವನ್ ಪ್ರಸಾದರ ಮೊದಲ ಕಾದಂಬರಿಯಿದು. ಖ್ಯಾತ ಕಾದಂಬರಿಕಾರರಾದ ಎಸ್ಎಲ್ ಭೈರಪ್ಪನವರು  ಕಾದಂಬರಿಯ ಪ್ರಥಮ ಪ್ರತಿಯನ್ನು ಓದಿ ಮೆಚ್ಚಿಕೊಂಡಿದ್ದಾರೆ. ಸದ್ಯ ಕಾನ್ ಕೇವ್ ಮೀಡಿಯಾ ಸಂಸ್ಥೆಯಲ್ಲಿ ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪವನ್ ಪ್ರಸಾದ್ ಶರ್ಮ ಅವರು ಕಳೆದ ಏಳು ವರ್ಷಗಳಿಂದ ಸೃಜನಾತ್ಮಕ ವಿನ್ಯಾಸಗಾರರಾಗಿದ್ದಾರೆ. ಕಸ್ತೂರಿ ಮೀಡಿಯಾ. ಪ್ರೈ.ಲಿ ನಲ್ಲಿ ಪೊಗ್ರಾಂ ಕಾನ್ಸೆಪ್ಟ್ ಡಿಸೈನರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ವಂದೇಮಾತರಂ ಟ್ರಸ್ಟ್ ಜನಗಣ ರಂಗ ತಂಡದ ಸಂಚಾಲಕರಾಗಿದ್ದರು. ಬೀದಿ ಬಿಂಬ ರಂಗದ ತುಂಬ, ಪುರಹರ ಸೇರಿದಂತೆ ಐದಾರು ಜನಪ್ರಿಯ ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದಾರೆ. ಇವರ ಎರಡು ಕೃತಿಗಳು ಈವರೆಗೂ ಪ್ರಕಟಗೊಂಡಿವೆ.

ಪ್ರಸ್ತುತ ಕನ್ನಡ ಕಾದಂಬರಿ ಲೋಕ ನಿಂತ ನೀರಾಗಿದೆ ಎಂದು ಒಬ್ಬರು ಹಲುಬಿದ್ದನ್ನು ಕಂಡು ಕಾದಂಬರಿಯಲ್ಲಿ ತೊಡಗಲು ಮನಸ್ಸಾಯಿತುಎಂದು ಹೇಳುವ ಲೇಖಕರು ತಂದೆಯ ಸಾವಿನ ನಂತರದಲ್ಲಿ ಪ್ರಸ್ತುತ ನಗರ ಸಮಾಜದ ವ್ಯಕ್ತಿ ಹದಿನೈದು ದಿನಗಳ ಸಮಯದಲ್ಲಿ ಹಲವಾರು ಹೊಳಹುಗಳನ್ನು ಕಂಡು ನಂಬಿಕೆ ಮತ್ತು ಶ್ರದ್ಧೆಯ ತೊಳಲಾಟದಲ್ಲಿ ಸಿಲುಕುತ್ತಾನೆ. ಹೊಳಹುಗಳಿಂದ ಪ್ರಾರಂಭವಾಗಿ ಕೊನೆಯವರೆಗೆ ಆತನಲ್ಲಿ ಆಗುವ ಸ್ಥಿತ್ಯಂತರದ ಯಾನವೇಕರ್ಮ’. ಎಂದು ತಮ್ಮ ಕಾದಂಬರಿಯ ಮುನ್ನುಡಿಯಲ್ಲಿ ಕಥೆಯ ಸಂಕ್ಷಿಪ್ತ ಪರಿಚಯವನ್ನು ಮಾಡಿಕೊಡುತ್ತಾರೆ.

ಕಾದಂಬರಿಯಲ್ಲಿ ಬರುವ ಕೆಲವು ಸನ್ನಿವೇಶಗಳು,ಪಾತ್ರಗಳು ನಮ್ಮನ್ನು ಚಿಂತನೆಗೊಳಪಡಿಸುತ್ತವೆ. ವೆಂಕಟೇಶ ಭಟ್ಟರು ಆಡುವಬೇಕಾದರೆ ಮುಂದಿನ ಜನ್ಮದಲ್ಲಿ ಬೇರೆ ದೇಶದಲ್ಲಿ ಹುಟ್ಟುವಂತೆ ದೇವರಲ್ಲಿ ಬೇಡಿಕೋ ಏಕೆಂದರೆ ಆಗ ಅಲ್ಲಿ ಕುಟುಂಬ ಪದ್ಧತಿ ಬಂದಿರುತ್ತದೆ.ಇಲ್ಲಿ ಸ್ವೇಚ್ಛಾ ಸಮಾಜ ಆಗಿರುತ್ತದೆ.ಗಂಡ-ಹೆಂಡತಿ,ಅಣ್ಣ-ತಂಗಿ,ತಾಯಿ-ತಂದೆ ಯಾವ ಸಂಬಂಧಗಳಿಗೂ ಇಲ್ಲಿ ಬೆಲೆಯೇ ಇರುವುದಿಲ್ಲ…….. ಜೀವನದಲ್ಲಿ ಶ್ರದ್ಧೆ ಬೇರೆ.ವಿಜ್ಞಾನ ಬೇರೆ.ಕ್ರೈಸ್ತರು ಬಹಳ ಮೊದಲೇ ಹೇಳಿದ್ದಾರೆ Faith is different Science is different ಅಂತ.ನಾವು ಮಾತ್ರ ಎಲ್ಲದಕ್ಕೂ ವಿಜ್ಞಾನದ ಪ್ಯಾರಾಮೀಟರ್ ಕೇಳುತ್ತಾ ನಮ್ಮನ್ನು ನಾವೇ ಗೇಲಿ ಮಾಡಿಕೊಳ್ಳುತ್ತಿದ್ದೇವೆ……. ನಮ್ಮ ದೇಶದಲ್ಲಿ ದೇವರನ್ನು ನಂಬೋದು ಅತಿರೇಕ,ನಂಬದೇ ಇರೋದು ಶೋಕಿ,ದೇವರನ್ನು ಗೇಲಿ ಮಾಡೋದು ಚಿಂತನೆ.ಹಿನ್ನಲೆ ಹುಡುಕುವ ಅವಸರದಲ್ಲಿ ಹಿಂದೂ ಧರ್ಮ ತನ್ನ ಹುಳುಕನ್ನು ತಾನೇ ಬಿಚ್ಚಿಡುತ್ತಿದೆ”  ಇವೆಲ್ಲವೂ ನಮ್ಮ ಇಂದಿನ ನಗರಗಳಲ್ಲಿನ ಒತ್ತಡದ ಜೀವನ ಶೈಲಿಯನ್ನು ಕಂಡಾಗ ನಿಜವೆನ್ನಿಸಿದೆ ಇರದು.

ಇದರೊಡನೆ ಧರ್ಮದಲ್ಲಿ ಅದರಲ್ಲೂ ಸಂಸ್ಕಾರವಂತ ಬ್ರಾಹ್ಮಣರಲ್ಲಿ ಹದಿನಾಲ್ಕು ದಿನಗಳ ಕಾಲ ನೆಡೆಯುವ ಉತ್ತರಕ್ರಿಯೆಯನ್ನು ಸಂಪೂರ್ಣವಾಗಿ ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ವಿವರಿಸಲಾಗಿದೆ. ಜತೆಗೆ ಇಂದಿನ ಆಧುನಿಕ ಸಮಾಜದಲ್ಲಿ ನೈಜ ಮಾನುಷ ಸಂಬಂಧಗಳಾನ್ನೆಲ್ಲಾ ಹಾಳು ಮಾಡುತ್ತಾ ಬೆಳೆದಿರುವ .‘ಲಿವಿಂಗ್ ಟುಗೆದರ್ಸಂಬಂಧದ ಕರಾಳ ಮುಖವನ್ನು ತೆರೆದಿಡುತ್ತಾರೆ ಮೃತ್ಯುವಿನ ನಂತರ ನಡೆಯುವ ಕರ್ಮ,ಕಾರ್ಯ ವಿಧಾನಗಳ ಬಗ್ಗೆ ಸುಲಭವಾಗಿ ತಿಳಿದುಕೊಳ್ಳಬೇಕಾದರೆ ಎಲ್ಲರೂ ಕಾದಂಬರಿಯನ್ನು ಓದಲೇಬೇಕು.ಕೂಡಿ ಬಾಳುವ ಕುಟುಂಬವೇ ಶ್ರೇಷ್ಠ,ನಂಬಿಕೆ ನಾಶವಾಗಬಹುದು ಆದರೆ ಶ್ರದ್ಧೆ ಅಚಲಾವಾದದ್ದು ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಎನ್ನುವುದನ್ನು ಲೇಖಕರು ಇಲ್ಲಿ ಬಹಳ ನವುರಾಗಿ ನಿರೂಪಿಸಿದ್ದಾರೆ.

ಒಟ್ಟಾರೆ ಕನ್ನಡಕ್ಕೊಬ್ಬ ಉತ್ತಮ ಲೇಖಕರು ದೊರಕಿದ್ದಾರೆ. ಒಳ್ಳೆಯ ಕಾದಂಬರಿಯು ದಕ್ಕಿದೆ ಎಂದರೆ ಅದು ಉತ್ಪ್ರೇಕ್ಷೆಯಾಗಲಾರದು