Thursday, November 06, 2014

“ಕರ್ಮ”: ಶ್ರದ್ದೆ - ನಂಬಿಕೆಗಳ ನಡುವಿನ ಒಂದು ಹೊಯ್ದಾಟ

“ಬೇರೆಯವರ ಮೇಲಿನ ನಿನ್ನ ಅವಲಂಬನೆ, ನಂಬಿಕೆ. ನಿನ್ನ ಮೇಲಿನ ನಿನ್ನ ಅವಲಂಬನೆ, ಶ್ರದ್ದೆ. ನಂಬಿಕೆ ಚಂಚ, ಶ್ರದ್ದೆ ಅಚಲ. ಇದೇ ನಂಬಿಕೆ ಮತ್ತು ಶ್ರದ್ದೆಯ ನಡುವಿನ ವ್ಯತ್ಯಾಸ.”

***
ಅಣ್ಣನ ತಲೆ ತಣ್ಣಗಾಗಿದೆ ಎಂದು ಸುಬ್ಬು ಮಾವನಿಗೆ ಹೇಳುವಾಗ ನರಹರಿಯ ಕಣ್ಣುಗಳು ಚಲನೆಯಲ್ಲಿರಲಿಲ್ಲ. ಮುಂದಿನ ಕೆಲಸ ನೋಡುವಂತೆ ಸುಬ್ಬು ಮಾವ ಸೂಚಿಸಿದರು. ಅಮ್ಮನು ಆಗಲೇ ನಿಶ್ಚೇತಳಾಗಿದ್ದಾಳೆ, ಹೇಳಿದ್ದನ್ನು ಆಲಿಸುವ ಗಮನವೂ ಅವಳಲ್ಲಿಲ್ಲ ಎಂದುಕೊಳ್ಳುತ್ತಾ ಮತ್ತೊಮ್ಮೆ ಅಣ್ಣನ ತಲೆಯನ್ನು ಮುಟ್ಟಿದ. ತಣ್ಣನೆಯ ಸ್ಪರ್ಶ, ಇಡೀ ದೇಹ ತಣಿವಿನಿಂದ ಬೆಸೆತುಗೊಳ್ಳುತ್ತಿತ್ತು. “ನರಹರಿ, ಡಾಕ್ಟರ್ ಒಂದು ಸಾರಿ ನೋಡಿ ಬಿಡ್ಲಿ. ಆಮೇಲೆ ಎಲ್ಲರಿಗೂ ತಿಳಿಸುವಂತೆ.” ಎನ್ನುತ್ತಾ ಡಾಕ್ಟ್ರ್ ಜತೆಗೂಡಿ ಸುಬ್ಬು ಮಾವ ಬಂದರು. ರಾಘವೇಂದ್ರರು ಪಕ್ಕದ ಬೀದಿಯಲ್ಲೇ ಇರುವುದರಿಂದ ಸುಬ್ಬು ಮಾವ ಅವರನ್ನು ಕರೆ ತರುವುದು ತಡವಾಗಲಿಲ್ಲ. ನಡು ಮನೆಯ ಒಳಭಾಗದಲ್ಲಿ ಮಲಗಿಸಿದ್ದ ಶ್ರೀಕಂಠ ಜೋಯಿಸರನ್ನು ನೋಡುತ್ತಲೇ ನಮ್ಮ ಕೈ ಬಟ್ಟೆಯಿಂದ ಮೀಸೆಯ ಬೆವರನ್ನು ಒರೆಸಿಕೊಂಡರು. “ಸುಬ್ರಹ್ಮಣ್ಯಾ.. ತುಂಬಾ ಹೊತ್ತು ಆಗಿದೆ, ತಿಳಿಸಿಬಿಡಿ ಎಲ್ಲರಿಗೂ...” ಹಿಡಿದಿಟ್ಟ ಅಳು ಫಳ್ಳನೆ ಒಡೆದು ನರಹರಿಯ ಮುಖವೆಲ್ಲಾ ನೀರಾಗಿ ಹೋಯಿತು. ಸುಬ್ಬು ಮಾವ ಶಾರದಮ್ಮನನ್ನು ಗಟಿಯಾಗಿ ಹಿಡಿದು ತಲೆಯನ್ನು ತಟ್ಟುತ್ತಿದ್ದರು. ಶಾರದಮ್ಮನ ಕಣ್ಣುಗಳು ಶ್ರೀಕಂಠ ಜೋಯಿಸರ ಹಣೆಯನ್ನೇ ಗಮನಿಸುತ್ತಿತ್ತು. ಅಗಲವಾದ ಹಣೆ, ಸುಕ್ಕಿದ್ದರೂ ಕಪ್ಪುಗಟ್ಟಿದ್ದ ಬಣ್ಣ, ಅವರ ಕಣ್ಣು ಮುಚ್ಚಬೇಡವೋ ನರಹರಿ ಎಂದು ಕೂಗಿಕೊಳ್ಳುವ ಮನಸ್ಸು ಶಾರದಮ್ಮನಿಗೆ ಆಗುತ್ತಿತ್ತು, ಆದರೆ ತುಟಿ ಬಿಚ್ಚಲೂ ಸಾಧ್ಯವಾಗದಂತೆ ಒಳಗಿನ ಅಳು, ಇನ್ನು ತಡೆಯಲು ಸಾಧ್ಯವಿಲ್ಲವೆನಿಸಿತೋ ಏನೋನರಹರಿ... ನಮ್ಮನ್ನ ಬಿಟ್ಟು ಹೊಗಿ ಬಿಟ್ರಲ್ಲೋ ನಿಮ್ಮಣ್ಣ...” ಎಂದು ಜೋರಾಗಿ ಕೂಗಿಕೊಂಡರು

ರಾತ್ರಿ ಹನ್ನೊಂದೂವರೆಯಾಗಿತ್ತು. ಪಿಜ್ಜಾಹಟ್ಟಿನ ಬಾಕ್ಸ್ ಗಳು ಟೀಪಾಯಿಯ ಮೇಲೇ ಇವೆ. ರಟ್ಟಿನ ಡಬ್ಬದಲ್ಲಿ ತಂದಿದ್ದ ಕಿಂಗ್ ಫಿಷರ್ ಬೀರ್ ಕ್ಯಾನಿನ ಹನ್ನೆರಡು ಡಬ್ಬಿಗಳು ಅದಾಗಲೇ ಖಾಲಿಯಾಗಿತ್ತು. “ಸೂರಿ.. ಕ್ಯಾನ್ ಯು ಗೆಟ್ ಮೀ ಸಮ್ ವೈನ್?” ನೇಹಾ ಜೀವಂತಿ ಕೂಗಿದಳು. ಬಾಲ್ಕನಿಯಲ್ಲಿ ಇಡೀ ದಕ್ಷಿಣ ಬೆಂಗಳೂರಿನ ರಾತ್ರಿಯ ಅಂದವನ್ನು ನೋಡುತ್ತಾ ನಿಂತಿದ್ದ ಸೂರಿ ಏನೂ ಮಾತನಾಡಲಿಲ್ಲ. ೨೪ ನೇ ಅಂತಸ್ತಿನ ಫ್ಲಾಟ್ ಇಡೀ ದಕ್ಷಿಣ ಬೆಂಗಳೂರನ್ನು ತೋರಿಸುತ್ತಿತ್ತು.

ಯಾಕಿಷ್ಟು ತಿಂದೆ ಇಂದು, ವೀಕೆಂಡ್ ಬಂತು ಎಂತಲೋ ಅಥವಾ ಏನಿರಬಹುದು? ಎರಡು ಲಾರ್ಜ್ ಪಿಜ್ಫ಼್ಜಾ ಚೀಜ್ ಬಸ್ಟ್ ಮಾಡಿಸಿದ್ದು ಒಬ್ಬನೇ ತಿಂದೆ, ಅದಲ್ಲದೆ ಕೋಕ್, ಇಷ್ಟು ಸಾಲದು ಎಂಬಂತೆ ಕೆ.ಎಫ್.ಸಿ ನಿಂದ ಮನೆಗೆ ತಂದ ಒಂದು ಟಬ್ ಪೂರ್ತಿ ಚಿಕನ್ ನಾನು ನೇಹಾ ಇಬ್ಬರೂ ಮುಗಿಸಿದೆವು.......... 



***
ಇದು ನಾನು ಇತ್ತೀಚೆಗೆ ಓದಿದ ವಿನೂತನವಾಗಿ ಕಾದಂಬರಿ ಕ್ಷೇತ್ರವನ್ನು ಪ್ರವೇಶ ಮಾಡಿದ ಶ್ರೀ ಕರಣಂ ಪವನ್ ಪ್ರಸಾದ್ ರವರಕರ್ಮಕಾದಂಬರಿಯ ಮೊದಲ ಪುಟ. ಕನ್ನಡದಲ್ಲಿ ಹಿಂದೆ ಪ್ರಕಟವಾಗಿದ್ದಸಂಸ್ಕಾರ”, “ವಂಶವೃಕ್ಷಗಳ0ತಹಾ ಕಾದಂಬರಿಗಳನ್ನು ನೆನಪಿಸುವಕರ್ಮಹೊಸ ಲೇಖಕರೊಬ್ಬರ ಮೊದಲ ಪ್ರಯತ್ನ ಎಂದು ಎಲ್ಲಿಯೂ ಅನ್ನಿಸಲಾರದು. ಕೇವಲ ಹದಿನಾಲ್ಕು ದಿನಗಳಲ್ಲಿ ನಡೆಯುವ ಕಥೆಯಾದರೂ ಕಾದಂಬರಿ ಎಲ್ಲಿಯೂ ಬೋರಾಗದಂತೆ ಓದಿಸಿಕೊಂಡು ಹೋಗುತ್ತದೆ. ಮಲೆನಾಡಿನ ವಾತಾವರಣ ಮತ್ತು ನಗರ ಜೀವನದ ಬೆತ್ತಲೆ ದರ್ಶನ ಕಾದಂಬರಿಯಲ್ಲಿ ನಮಗುಂಟಾಗುತ್ತದೆ..ಧಾರ್ಮಿಕತೆ, ಆಚರಣೆ ಮತ್ತು ಶ್ರದ್ಧೆಎಲ್ಲವೂ ಬೇರೆ ಎಂಬ ತರ್ಕದ ವಿಚಾರ ಮಂಟನವನ್ನು ನಡೆಸುತ್ತಾ ಸಾಗುವ ಕಾದಂಬರಿ .ಕನ್ನಡದ ಓದುಗರಿಗೆ ಹೊಸ ಅನುಭೂತಿಯನ್ನು ಕೊಡುತ್ತದೆ.

ನಾಟಕಕಾರರಾದ ಕರಣಂ ಪವನ್ ಪ್ರಸಾದರ ಮೊದಲ ಕಾದಂಬರಿಯಿದು. ಖ್ಯಾತ ಕಾದಂಬರಿಕಾರರಾದ ಎಸ್ಎಲ್ ಭೈರಪ್ಪನವರು  ಕಾದಂಬರಿಯ ಪ್ರಥಮ ಪ್ರತಿಯನ್ನು ಓದಿ ಮೆಚ್ಚಿಕೊಂಡಿದ್ದಾರೆ. ಸದ್ಯ ಕಾನ್ ಕೇವ್ ಮೀಡಿಯಾ ಸಂಸ್ಥೆಯಲ್ಲಿ ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪವನ್ ಪ್ರಸಾದ್ ಶರ್ಮ ಅವರು ಕಳೆದ ಏಳು ವರ್ಷಗಳಿಂದ ಸೃಜನಾತ್ಮಕ ವಿನ್ಯಾಸಗಾರರಾಗಿದ್ದಾರೆ. ಕಸ್ತೂರಿ ಮೀಡಿಯಾ. ಪ್ರೈ.ಲಿ ನಲ್ಲಿ ಪೊಗ್ರಾಂ ಕಾನ್ಸೆಪ್ಟ್ ಡಿಸೈನರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ವಂದೇಮಾತರಂ ಟ್ರಸ್ಟ್ ಜನಗಣ ರಂಗ ತಂಡದ ಸಂಚಾಲಕರಾಗಿದ್ದರು. ಬೀದಿ ಬಿಂಬ ರಂಗದ ತುಂಬ, ಪುರಹರ ಸೇರಿದಂತೆ ಐದಾರು ಜನಪ್ರಿಯ ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದಾರೆ. ಇವರ ಎರಡು ಕೃತಿಗಳು ಈವರೆಗೂ ಪ್ರಕಟಗೊಂಡಿವೆ.

ಪ್ರಸ್ತುತ ಕನ್ನಡ ಕಾದಂಬರಿ ಲೋಕ ನಿಂತ ನೀರಾಗಿದೆ ಎಂದು ಒಬ್ಬರು ಹಲುಬಿದ್ದನ್ನು ಕಂಡು ಕಾದಂಬರಿಯಲ್ಲಿ ತೊಡಗಲು ಮನಸ್ಸಾಯಿತುಎಂದು ಹೇಳುವ ಲೇಖಕರು ತಂದೆಯ ಸಾವಿನ ನಂತರದಲ್ಲಿ ಪ್ರಸ್ತುತ ನಗರ ಸಮಾಜದ ವ್ಯಕ್ತಿ ಹದಿನೈದು ದಿನಗಳ ಸಮಯದಲ್ಲಿ ಹಲವಾರು ಹೊಳಹುಗಳನ್ನು ಕಂಡು ನಂಬಿಕೆ ಮತ್ತು ಶ್ರದ್ಧೆಯ ತೊಳಲಾಟದಲ್ಲಿ ಸಿಲುಕುತ್ತಾನೆ. ಹೊಳಹುಗಳಿಂದ ಪ್ರಾರಂಭವಾಗಿ ಕೊನೆಯವರೆಗೆ ಆತನಲ್ಲಿ ಆಗುವ ಸ್ಥಿತ್ಯಂತರದ ಯಾನವೇಕರ್ಮ’. ಎಂದು ತಮ್ಮ ಕಾದಂಬರಿಯ ಮುನ್ನುಡಿಯಲ್ಲಿ ಕಥೆಯ ಸಂಕ್ಷಿಪ್ತ ಪರಿಚಯವನ್ನು ಮಾಡಿಕೊಡುತ್ತಾರೆ.

ಕಾದಂಬರಿಯಲ್ಲಿ ಬರುವ ಕೆಲವು ಸನ್ನಿವೇಶಗಳು,ಪಾತ್ರಗಳು ನಮ್ಮನ್ನು ಚಿಂತನೆಗೊಳಪಡಿಸುತ್ತವೆ. ವೆಂಕಟೇಶ ಭಟ್ಟರು ಆಡುವಬೇಕಾದರೆ ಮುಂದಿನ ಜನ್ಮದಲ್ಲಿ ಬೇರೆ ದೇಶದಲ್ಲಿ ಹುಟ್ಟುವಂತೆ ದೇವರಲ್ಲಿ ಬೇಡಿಕೋ ಏಕೆಂದರೆ ಆಗ ಅಲ್ಲಿ ಕುಟುಂಬ ಪದ್ಧತಿ ಬಂದಿರುತ್ತದೆ.ಇಲ್ಲಿ ಸ್ವೇಚ್ಛಾ ಸಮಾಜ ಆಗಿರುತ್ತದೆ.ಗಂಡ-ಹೆಂಡತಿ,ಅಣ್ಣ-ತಂಗಿ,ತಾಯಿ-ತಂದೆ ಯಾವ ಸಂಬಂಧಗಳಿಗೂ ಇಲ್ಲಿ ಬೆಲೆಯೇ ಇರುವುದಿಲ್ಲ…….. ಜೀವನದಲ್ಲಿ ಶ್ರದ್ಧೆ ಬೇರೆ.ವಿಜ್ಞಾನ ಬೇರೆ.ಕ್ರೈಸ್ತರು ಬಹಳ ಮೊದಲೇ ಹೇಳಿದ್ದಾರೆ Faith is different Science is different ಅಂತ.ನಾವು ಮಾತ್ರ ಎಲ್ಲದಕ್ಕೂ ವಿಜ್ಞಾನದ ಪ್ಯಾರಾಮೀಟರ್ ಕೇಳುತ್ತಾ ನಮ್ಮನ್ನು ನಾವೇ ಗೇಲಿ ಮಾಡಿಕೊಳ್ಳುತ್ತಿದ್ದೇವೆ……. ನಮ್ಮ ದೇಶದಲ್ಲಿ ದೇವರನ್ನು ನಂಬೋದು ಅತಿರೇಕ,ನಂಬದೇ ಇರೋದು ಶೋಕಿ,ದೇವರನ್ನು ಗೇಲಿ ಮಾಡೋದು ಚಿಂತನೆ.ಹಿನ್ನಲೆ ಹುಡುಕುವ ಅವಸರದಲ್ಲಿ ಹಿಂದೂ ಧರ್ಮ ತನ್ನ ಹುಳುಕನ್ನು ತಾನೇ ಬಿಚ್ಚಿಡುತ್ತಿದೆ”  ಇವೆಲ್ಲವೂ ನಮ್ಮ ಇಂದಿನ ನಗರಗಳಲ್ಲಿನ ಒತ್ತಡದ ಜೀವನ ಶೈಲಿಯನ್ನು ಕಂಡಾಗ ನಿಜವೆನ್ನಿಸಿದೆ ಇರದು.

ಇದರೊಡನೆ ಧರ್ಮದಲ್ಲಿ ಅದರಲ್ಲೂ ಸಂಸ್ಕಾರವಂತ ಬ್ರಾಹ್ಮಣರಲ್ಲಿ ಹದಿನಾಲ್ಕು ದಿನಗಳ ಕಾಲ ನೆಡೆಯುವ ಉತ್ತರಕ್ರಿಯೆಯನ್ನು ಸಂಪೂರ್ಣವಾಗಿ ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ವಿವರಿಸಲಾಗಿದೆ. ಜತೆಗೆ ಇಂದಿನ ಆಧುನಿಕ ಸಮಾಜದಲ್ಲಿ ನೈಜ ಮಾನುಷ ಸಂಬಂಧಗಳಾನ್ನೆಲ್ಲಾ ಹಾಳು ಮಾಡುತ್ತಾ ಬೆಳೆದಿರುವ .‘ಲಿವಿಂಗ್ ಟುಗೆದರ್ಸಂಬಂಧದ ಕರಾಳ ಮುಖವನ್ನು ತೆರೆದಿಡುತ್ತಾರೆ ಮೃತ್ಯುವಿನ ನಂತರ ನಡೆಯುವ ಕರ್ಮ,ಕಾರ್ಯ ವಿಧಾನಗಳ ಬಗ್ಗೆ ಸುಲಭವಾಗಿ ತಿಳಿದುಕೊಳ್ಳಬೇಕಾದರೆ ಎಲ್ಲರೂ ಕಾದಂಬರಿಯನ್ನು ಓದಲೇಬೇಕು.ಕೂಡಿ ಬಾಳುವ ಕುಟುಂಬವೇ ಶ್ರೇಷ್ಠ,ನಂಬಿಕೆ ನಾಶವಾಗಬಹುದು ಆದರೆ ಶ್ರದ್ಧೆ ಅಚಲಾವಾದದ್ದು ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಎನ್ನುವುದನ್ನು ಲೇಖಕರು ಇಲ್ಲಿ ಬಹಳ ನವುರಾಗಿ ನಿರೂಪಿಸಿದ್ದಾರೆ.

ಒಟ್ಟಾರೆ ಕನ್ನಡಕ್ಕೊಬ್ಬ ಉತ್ತಮ ಲೇಖಕರು ದೊರಕಿದ್ದಾರೆ. ಒಳ್ಳೆಯ ಕಾದಂಬರಿಯು ದಕ್ಕಿದೆ ಎಂದರೆ ಅದು ಉತ್ಪ್ರೇಕ್ಷೆಯಾಗಲಾರದು

No comments:

Post a Comment