Friday, May 29, 2015

ನಮ್ಮಲ್ಲಿನ ಸ್ಥಳ ಪುರಾಣಗಳು (Myths) – 53

ಝರಣಿ (Jharani)


Lord Sri Narasimhaswamy, Jharani, Bidae

ಕರ್ನಾಟಕದ ಉತ್ತರ ತುದಿಯಲ್ಲಿನ ಬೀದರ್ ಜಿಲ್ಲೆ ಸಸಾಕಷ್ಟು ಐತಿಹಾಸಿಕ ಸ್ಥಳಗಳನ್ನು ಒಳಗೊಂಡಿರುವ ಜಿಲ್ಲೆ. ಇಲ್ಲಿನ ಬಹಮನಿ ಸುಲ್ತಾನರ ಸ್ಮಾರಕಗಳು, ಬಸವಕಲ್ಯಾಣ ಎಲ್ಲವೂ ಜಗತ್ಪ್ರಸಿದ್ದವಾಗಿವೆ. ಅಂತೆಯೇ ಬೀದರ್ ಹೊರವಲಯದಲ್ಲಿರುವ ನರಸಿಂಹ ಝರಣಿ ಗುಹಾ ದೇವಾಲಯ ಕರ್ನಾಟಕದ ಅಪರೂಪದ ಯಾತ್ರಾಸ್ಥಳ ಜತೆಗೆ ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಭಕ್ತರ ಆರಾಧ್ಯ ಕ್ಷೇತ್ರವಾಗಿದೆ. ಮಕ್ಕಳಾಗದ ದಂಪತಿ ಸಂತಾನ ಪ್ರಾಪ್ತಿಗಾಗಿ ನರಸಿಂಹ ದೇವರಲ್ಲಿ ಹರಕೆ ಕಟ್ಟಿಕೊಳ್ಳುತ್ತಾರೆ. ಹೆರಿಗೆಗೆ ತವರಿಗೆ  ಹೋಗುವ ಮುನ್ನ ಇಲ್ಲಿಗೆ ಬಂದು ವಿಶೇಷ ಪೂಜೆ ಸಲ್ಲಿಸಿ ಹೋಗುವ ರೂಢಿಯಿದೆ. ಮಕ್ಕಳಾದ ಮೇಲೆ ಬಂದು ಮಗುವಿನ ಜಾವಳ ತೆಗೆಸುವ ಅಥವಾ ತೊಟ್ಟಿಲು ಬಿಡುವ ಹರಕೆ ಸಲ್ಲಿಸುತ್ತಾರೆ. ಹೀಗೆ ಇದು ಭಕ್ತ ಪಾಲಿಗೆ ಪವಿತ್ರ ತೀರ್ಥಸ್ಥಳವೆನಿಸಿದೆ.
ಪ್ರತೀ ವರ್ಷವೂ ನರಸಿಂಹ ಜಯಂತಿಯಂದು ಇಲ್ಲಿ ವಿಶೇಷ ಪೂಜೆ, ಹೋಮ-ಹವನಗಳು ನಡೆಯುತ್ತವೆ.

***

Jharani Narasimhaswamy temple, Jharani, Bidar
Jharani Narasimhaswamy temple, Jharani, Bidar
ಮಹಾವಿಷ್ಣುವು ತಾನು ನರಸಿಂಹನ ಅವತಾರವನ್ನು ತಾಳಿ ರಾಕ್ಷಸನಾದ ಹಿರಣ್ಯ ಕಷಿಪುವನ್ನು ವಧಿಸಿ ಪ್ರಜಹ್ಲಾದರಾಜನಿಗೆ ಅಭಯವನ್ನು ಇತ್ತನು. ಅದೇ ಸಮಯದಲ್ಲಿ ಜಾಲಾಸುರ ಎನ್ನುವ ಇನ್ನೋರ್ವ ರಾಕ್ಷಸನು ಇಂದಿನ ಝರಣಿ ಇರುವ ಸ್ಥಳದಲ್ಲಿ ಇದ್ದು ಮಾನವರಿಗೆ ಉಪಟಳ ನೀಡುತ್ತಿದ್ದನು. ಪರಮೇಶ್ವರ ಅದಮ್ಯ ಭಕ್ತನಾಗಿದ್ದ ಜಾಲಾಸುರನನ್ನು ನರಸಿಂಹ ಸ್ವಾಮಿಯು ಇದೇ ಸ್ಥಳದಲ್ಲಿ ಸಂಹರಿಸಿದನು. ಹಾಗೆ ಹತನಾದ ಜಾಲಾಸುರನು ಜಲದ ರೂಪವನ್ನು ಹೊಂದಿ ನರಸಿಂಹನ ಪಾದದಡಿಯಲ್ಲಿ ಹರಿಯಲಾರಂಭಿಸಿದನು. ಅಂದಿನಿಂದ ಇಂದಿನವರೆಗೂ ಇಲ್ಲಿ ಯಾವ ಬರಗಾಲದಲ್ಲಿಯೂ ನೀರು ಕಡಿಮೆಯಾಗದೆ 4 ರಿಂದ 5 ಅಡಿಯಷ್ಟು ನೀರು ಹರಿಯುವುದನ್ನು ಕಾಣುತ್ತೇವೆ. ಅಲ್ಲದೆ ಜಾಲಾಸುರನು ಪೂಜಿಸುತ್ತಲಿದ್ದ ಶಿವಲಿಂಗವನ್ನೂ ನಾವಿಲ್ಲಿ ನೋಡಬಹುದಾಗಿದೆ

ಜಾಲಾಸುರನಿದ್ದ ಸ್ಥಳಕ್ಕೆ ಅವನ ಹೆಸರಿನ ಝರಿಯಿಂದಾಗಿಯೇ ಝರಣಿ ಎನ್ನುವ ಹೆಸರು ಬಂದಿದೆ.

Thursday, May 21, 2015

ನಮ್ಮಲ್ಲಿನ ಸ್ಥಳ ಪುರಾಣಗಳು (Myths) – 52

ಹೊಂಬುಜ / ಬಿಲ್ಲೇಶ್ವರ (Hombuja / Billeshwara)

ಕರ್ನಾಟಕದ ಮಲೆನಾಡಿನ ಸೆರಗು ಶಿವಮ್ಮೊಗ್ಗ  ಜಿಲ್ಲೆಯ ಹೊಸನಗರ ತಾಲೂಕು ಹಲವು ಪುರಾಣ, ಇತಿಹಾಸ ಪ್ರಸಿದ್ದ ಸ್ಥಳಗಳನ್ನು ತನ್ನ ಒಡಲಲ್ಲಿರಿಸಿಕೊಂಡಿದೆ. ಹೊಸನಗರದ ಹೊಂಬುಜ ಅಥವಾ ಹುಂಚವು ಅವುಗಳಲ್ಲಿ ಒಂದಾಗಿದ್ದು ಜೈನ ಧರ್ಮೀಯರ ಪಾಲಿನ ಪವಿತ್ರ ಸ್ಥಳ ಎನಿಸಿದರೆ ಅದರ ಸಮೀದಲ್ಲಿರುವ ಬಿಲ್ಲೇಶ್ವರವು ಅತ್ಯಂತ ಪುರಾತನ ಶಿವ ದೇವಾಲಯದಿಂದ ಪ್ರಸಿದ್ದವಾಗಿದೆ ಹೊಂಬುಜವನ್ನಾಳಿದ್ದ ಜಿನದತ್ತ ರಾಜನು ದೇವಾಲಯವನ್ನು ಜೀರ್ಣೋದ್ದಾರ ಮಾಡಿದ್ದಲ್ಲದೆ ದಾನ ದತ್ತಿಗಳನ್ನು ನೀಡಿದ್ದನೆಂಬುದಕ್ಕೆ ದಾಖಲೆಗಳಿವೆ. ಇನ್ನು ಹೊಸಗುಂದದ ಸಾಮಂತರು ತಾವು ಬಿಲ್ಲೇಶ್ವರನ ಆರಾಧಕರಾಗಿದ್ದರು.

ನಿತ್ಯವೂ ನೂರಾರು ಭಕ್ತಜನರೂ, ಪ್ರವಾಸಿಗರೂ ಆಗಮಿಸುವ ದೇವಾಲಯದಲ್ಲಿ ಮಹಾಶಿವರಾತ್ರಿ, ಕಾರ್ತಿಕ ಮಾಸಗಳಲ್ಲಿ ವಿಶೇಷ ಪೂಜೆ ಉತ್ಸವಗಳು ನೆರವೇರುತ್ತವೆ.

***


Billeshwara temple, Hombuja, Hosanagara, Shivamogga


ಶ್ರೀ ರಾಮನು ವನವಾಸದ ಸಮಯದಲ್ಲಿ ಸೀತೆಯೊಂದಿಗೆ ಕಾಡುಗಳಲ್ಲಿ ಅಲೆಯುತ್ತಿದ್ದಾಗ ಒಮ್ಮೆ ಸೀತಾದೇವಿಗೆ ಬಾಯಾರಿಕೆಯಾಗಿತ್ತು. ಸೀತೆಯ ಬಾಯಾರಿಕೆ ನೀಗಿಸಲಿಕ್ಕಾಗಿ ಶ್ರೀ ರಾಮನು ಭೂಮಿಯಿಂದ ಜಲವನ್ನು ಚಿಮ್ಮಿಸಲು ಸಂಕಲ್ಪಿಸಿ ಬಾಣವನ್ನು ಪ್ರಯೋಗಿಸಲು ಬಿಲ್ಲನ್ನು ಎತ್ತಿದ್ದನು. ಹಾಗೆ ಬಿಲ್ಲನ್ನು ಎತ್ತುವ ಮುನ್ನ ರಾಮನು ಅಲ್ಲೊಂದು ಶಿವಲಿಂಗವನ್ನು ಪ್ರತಿಷ್ಠೆ ಮಾಡಿ ಪೂಜಿಸಿದ್ದನು. ಆ ಸ್ಥಳವೇ ಇಂದು ಬಿಲ್ಲೇಶ್ವರ ಎಂದು ಪ್ರಸಿದ್ದವಾಗಿದೆ. ತದನಂತರದಲ್ಲಿ ಬಾಣ ಪ್ರಯೋಗಿಸಲು ಆ ಬಾಣವು ಅಂಬುತೀರ್ಥದ ಬಳಿಯಲ್ಲಿ ಬಿದ್ದು ಅಲ್ಲಿಂದ ನೀರು ಚಿಮ್ಮಿ ಬಂದಿತು. ಅದುವೇ ಮುಂದೆ ಶರಾವತಿ ಎಂದೆನಿಸಿತು.


Wednesday, May 20, 2015

ವಿವೇಕ ಶಾನಭಾಗರ ಹೊಸ ಕಾದಂಬರಿ – ‘ಊರು ಭಂಗ’

‘ಎಲ್ಲವನ್ನೂ ಹೇಳುತ್ತೇನೆ...’
ಭಾಸ್ಕರರಾವ್ ಆಡಿದ್ದೆನ್ನಲಾದ ಮಾತಿನ ಕುರಿತು ನಮ್ಮೊಳಗೆ ತೀವ್ರ ಚರ್ಚೆ ಶುರುವಾಗಿತ್ತು. ಎರಡು ಶಬ್ದಗಳು ಒಂದು ಕಂಪನಿಯ ಕಾರ್ಪೊರೇಟ್ ಆಫೀಸಿನಲ್ಲಿ ಎಷ್ಟು ಕ್ರಾಂತಿಕಾರಿಯಾದ, ಭೀಕರ ಘೋಷಣೆಯಾಗಿ ಕೇಳಬಹುದೆನ್ನುವುದು ಇಂಥ ಜಗತ್ತಿನ ಬಗ್ಗೆ ಗೊತ್ತಿದ್ದವರಿಗೇ ಗೊತ್ತು. ಅಲ್ಲಿ ಮಾತ್ರ ಯಾಕೆ, ಕುಟುಂಬ ಅಥವಾ ರಾಜಕೀಯದಂಥ ಯಾವುದೇ ವ್ಯವಸ್ಥೆಯೂ ಅಂಜುವ ಶಬ್ದಗಳಿವು.
ಎಲ್ಲವನ್ನೂ ಹೇಳುತ್ತೇನೆಂಬುದೇ ಭಿನ್ನಮತದ ಅತ್ಯಂತ ಶಕ್ತಿಶಾಲಿ ಅಸ್ತ್ರ ತಾನೇ? ಪಕ್ಷ ತೊರೆದ ಧುರೀಣರು, ತಂಡದಿಂದ ಕೈಬಿಟ್ಟ ಆಟಗಾರರು, ಹೊಡೆದಾಡಿದ ವ್ಯಾಪಾರದ ಪಾಲುದಾರರು, ಜಗಳಾಡಿದ ಪ್ರೇಮಿಗಳು, ಬೇರೆಯಾದ ದಂಪತಿಗಳುಎಲ್ಲರೂ ಒಂದಲ್ಲ ಒಂದು ವಿಧದಲ್ಲಿ, ಒಂದಲ್ಲ ಒಂದು ರೂಪದಲ್ಲಿ ಅಸ್ತ್ರ ಎತ್ತಿಕೊಂಡವರೇ. ಎರಡು ಮಾತಿನಲ್ಲಿ ಎದೆಗಾರಿಕೆ, ಇಷ್ಟು ದಿನ ಸಾಧ್ಯವಾಗದ್ದನ್ನು ಈಗಲಾದರೂ ಮಾಡುತ್ತಿದ್ದೇನೆನ್ನುವ ಆತ್ಮಸಮಾಧಾನ, ತುಸು ಹುತಾತ್ಮತೆ ಇರುವಂತೆಯೇ ಸ್ವಲ್ಪ ವಿಶ್ವಾಸಘಾತುಕತನವೂ ಇದೆ.
ಕಂಪನಿಯ ವೈಸ್ ಪ್ರೆಸಿಡೆಂಟ್ ಆಗಿರುವ ಭಾಸ್ಕರರಾವ್ ಅವಧಿಗಿಂತ ಮುನ್ನ ನಿವೃತ್ತಿ ಪಡೆಯುತ್ತಾರೆ ಎಂಬುದು ಬೆಳಗಿನ ಮುಖ್ಯ ಸುದ್ದಿಯಾಗಿತ್ತು. ಅದು ಜೀರ್ಣವಾಗುವ ಮೊದಲೇ ಅವರು ಹೇಳಿದ್ದಾರೆನ್ನಲಾದಎಲ್ಲವನ್ನೂ ಹೇಳುತ್ತೇನೆ...’ ಎಂಬ ಶಬ್ದಗಳು ನಮ್ಮ ಆಫೀಸಿನಾದ್ಯಂತ ಕಂಪನಗಳನ್ನು ಎಬ್ಬಿಸಿದವು..………………………..

'Ooru Bhanga' novel 

***

ಇದು ವಿವೇಕ್ ಶಾನಭಾಗ ಅವರ ಮೂರನೆಯ ಕಾದಂಬರಿ.“ಊರು ಭಂಗ ದ ಮೊದಲ ಸಾಲುಗಳು ಸುಮಾರು ಇನ್ನೂರೈವತ್ತು ಪುಟಗಳ "ಊರು ಭಂಗ" ಕಾದಂಬರಿ ಆರಂಭದ ಪುಟಗಳಿಂದಲೇ  ಆವರಿಸಿಕೊಳ್ಳುವ ಧಾಟಿಯದು ಕಾರ್ಪೊರೇಟ್ ರಂಗದ ಒಳಸುಳಿಗಳನ್ನು ನಿಧಾನವಾಗಿ ಹೇಳುತ್ತಾ ಹೋದಂತೆ ತೆಂಕಣಕೇರಿ ಎಂಬ ಊರಿನ ಭೂತ ಜಗತ್ತು ಬಿಚ್ಚಿಕೊಳ್ಳತೊಡಗುತ್ತದೆ. ಕಾದಂಬರಿಯ ಮೊದಲ ಎರಡು ಅಧ್ಯಾಯಗಳು ಕಾರ್ಪೊರೇಟ್ ಜಗತ್ತಿನ ಕಿರು ಪರಿಚಯ ಮಾಡುವುದರೊಂದಿಗೆ, ಬರವಣಿಗೆಯ ನಿಖರ, ಆಕರ್ಷಕ ಶೈಲಿಯ ಪರಿಚಯವನ್ನೂ ಮಾಡುತ್ತವೆ. ಕಾದಂಬರಿಯುದ್ದಕ್ಕೂ  ಸಂಭಾಷಣೆಗಳು , ಸನ್ನಿವೇಶಗಳ ವಿವರಣೆಗಳು , ಎಲ್ಲವೂ ತುಂಬಾ ನೈಜವಾಗಿ ಮೂಡಿ ಬಂದಿವೆ. .
ಕಾದಂಬರಿಯ ಪ್ರಧಾನ ಪಾತ್ರ ಮನಮೋಹನ್ ಎರಡು ತಲೆಮಾರುಗಳ ನಡುವಿನ ಕೊಂಡಿ. ಮಧ್ಯವಯಸ್ಕನಾದ ಈತನಿಗೆ ಕಿಮಾನಿ ವಕೀಲರ ಕಾಲವೂ ಗೊತ್ತು, ಅತ್ಯಾಧುನಿಕ ಜಗತ್ತಿನ ಪ್ರತಿನಿಧಿಯಾದ ಶಮಿ ಕಾಲೀನರ ಮುಕ್ತತೆಯೂ ಗೊತ್ತು. ಆದರೆ ಇವೆರಡನ್ನೂ ಅನುಭವಿಸದ ಎಡಬಿಡಂಗಿ ಈತ. ಇವೆಲ್ಲದರ ಜೊತೆಗೆ ಇಲ್ಲಿ ಕ್ರಾಂತಿಕಾರಿಗಳ ಜಗತ್ತೂ ಇದೆ. ಚಂದ್ರು, ಚಿರಾಗ್ ಮೂಲಕ ಪರಿಚಯವಾಗುವ ವಿವರಗಳು ಕೂಡ ದಾಟುವುದು ಕೂಡ ಯಾವೂದೂ ಅಲ್ಲದ ಮನಮೋಹನನ ಮುಖಾಂತರ. ಕಿಮಾನಿ ವಕೀಲರು ಸ್ವಾತಂತ್ರ್ಯಪೂರ್ವದ ಒಂದು ತಲೆಮಾರನ್ನು, ಅದರ ಆದರ್ಶ, ಛಲ ಮತ್ತು ಹೋರಾಟದ ಮನೋಭಾವವನ್ನು ಸಾಂಕೇತಿಸುತ್ತಾರೆ. ಇಲ್ಲಿ ಸ್ವಾತಂತ್ರ್ಯಪೂರ್ವದ ದಿನಗಳ ಒಂದು ತಲೆಮಾರು ಚಂದು, ಚಿರಾಗ್ ತರದ ಸ್ನೇಹಿತರಿಂದ ಹಾದು ರಾಮ-ರಹೀಮರಿಂದ ಕಳಚಿಕೊಂಡ ಅಶೋಕನ ತರದ ಇಂದಿನ ತಲೆಮಾರಿನ ತನಕ ಚಾಚಿಕೊಳ್ಳುವ ಕಾಲಮಾನಕ್ಕೂ ಇದು ಹರಡಿಕೊಳ್ಳುತ್ತದೆ. ಮಾತ್ರವಲ್ಲ ಈ ಎಲ್ಲ ಕಾಲಮಾನದ ಸಹಜ ಬದಲಾವಣೆಗಳನ್ನು ಗಮನಿಸುತ್ತಲೇ ಅದರಲ್ಲಿನ ಸಾಂಕೇತಿಕತೆಗಳನ್ನೆಲ್ಲ ದುಡಿಸಿಕೊಂಡು, ಅದರಿಂದ ಬೇರೆಯಾದ ಕಾದಂಬರಿಯಾಗಿ ರೂಪುಗೊಳ್ಳುತ್ತದೆ.
ಇನ್ನು ಕಾದಂಬರಿಯ ವಿವರಗಳು ಸಿಕ್ಕುಸಿಕ್ಕಾಗದಂತೆ ಅಥವಾ ಗೋಜಲಾಗದಂತೆ ಓದುಗರ ಮುಂದಿಡುವ ಪರಿ ಗಮನಾರ್ಹ. ಜೊತೆಗೆ ಕೃತಿ ಮುಕ್ತವಾಗಿ ಹೇಳುವುದು ಗಟ್ಟಿ ಪಾತ್ರ ಹೆಣ್ಣು. ಅದು ಕಿಮಾನಿ ಮಾಸ್ತರರ ಪತ್ನಿ ನೀಲಾವತಿ ಮತ್ತು ಶಮಿ ತಾಯಿ ರೇವತಿ. ಇವರಿಬ್ಬರೂ ತಮ್ಮತಮ್ಮ ಮಿತಿಯೊಳಗೆ ತಮಗಿರುವ ಸವಾಲುಗಳನ್ನು ಎದುರಿಸಿ ಗೆಲ್ಲಲ್ಲು ಯತ್ನಿಸುತ್ತಿರುವವರು. ಹಾಗೆ ನೋಡಿದರೆ ಕಥಾನಕದೊಳಗೆ ಹೆಚ್ಚು ವಿವರಗಳು ಇರುವ ಪಾತ್ರಗಳು ಇವಲ್ಲ. ಆದರೂ ಕೃತಿ ಮುಗಿಸಿದಾಗ ಬರುವ ದೊಡ್ಡ ನಿಟ್ಟುಸಿರಿನೊಡನೆ ಆವರಿಸಿಕೊಳ್ಳುವ ಪಾತ್ರಗಳು ಇವೆರಡೆ ಎಂದರೆ ಅತಿಶಯೋಕ್ತಿಯಲ್ಲ. ಕಿಮಾನಿ ಮಾಸ್ತರರ ಮಗಳು ವಿಜಯಾ, ರೇವತಿ ಮಗಳು ಶಮಿ ತಮ್ಮ ತಮ್ಮ ಚೌಕಟ್ಟುಗಳ ಬಗ್ಗೆ ಸಿಟ್ಟಿರುವ ಆದರೆ ಅದು ವ್ಯಕ್ತವಾಗುವ ಪರಿಯಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಯೋಚಿಸದ ಪಾತ್ರಗಳಾಗಿ ಕಾಣುತ್ತವೆ. ಶಮಿ ಎಲ್ಲವನ್ನೂ ಮೀರಬೇಕೆನ್ನುವ ಹಠದಲ್ಲಿ ಯಾವುದನ್ನೂ ಮೀರಲಾಗದೆ ಸೋಲುವಾಕೆಯಾದರೆ,. ಚೌಕಟ್ಟಿನೊಳಗೆ ಎಲ್ಲ ಸುಖವನ್ನೂ ದಕ್ಕಿಸಿಕೊಳ್ಳಲು ಹೋಗಿ ಸೋಲುವಾತ ಮನಮೋಹನ. ಈ ಎರಡೂ ಪಾತ್ರಗಳ ಆಂತರಿಕ ಘರ್ಷಣೆಗಳನ್ನು ಇನ್ನೂ ಹೆಚ್ಚು ಪ್ರಬಲವಾಗಿ ಚಿತ್ರಿಸುವ ಸಾಧ್ಯತೆಗಳಿದ್ದರೂ ಲೇಖಕರು ಅದರ ಕಡೆ ಹೆಚ್ಚು ಗಮನ ಹರಿಸಿಲ್ಲ. ಎನ್ನಬೇಕು.
ಕಾದಂಬರಿಯಲ್ಲಿ ಮನುಷ್ಯ ಸಂಬಂಧಗಳು ಕೇವಲ ಒಳಗಿನ ಟೊಳ್ಳು ಸಂಭಾಳಿಸಿಕೊಳ್ಳುವುದಕ್ಕಷ್ಟೇ ಬೇಕೆನಿಸುವ, ಅದನ್ನು ಟೆಂಪೊರರಿಯಾಗಿ ತುಂಬಿಕೊಳ್ಳುವ ಒಂದಾನೊಂದು ದಾರಿಯಷ್ಟೇ ಆಗಿ, ಅದಕ್ಕಾಗಿ ಸಾಹಿತ್ಯ- ಕಥೆ ಕಟ್ಟುವ ಕೌಶಲ - ಬಾಲ್ಯದ ಅನುಭವಗಳು - ಒಲಿಸಿಕೊಳ್ಳುವ ಚಾಲಾಕಿತನ ಎಲ್ಲವನ್ನೂ ಬಳಸಿಕೊಳ್ಳಬಲ್ಲ ಮಟ್ಟಕ್ಕೆ ಇಳಿಯುವ ಮನುಷ್ಯ - ನನ್ನು ತೋರಿಸಿಯೂ ಇನ್ನೊಂದು ಕಡೆಯಿಂದ ಇವತ್ತಿನ ಕಾರ್ಪೊರೇಟ್ ಜಗತ್ತು ಇದನ್ನು ಹೇಗೆ ಬಳಸಿಕೊಳ್ಳಬಲ್ಲುದು ಎನ್ನುವುದನ್ನು ತೀರಾ ಸೂಕ್ಷ್ಮವಾಗಿ (ಭಾಸ್ಕರ ರಾವ್-ವ್ಯಾಂಡಿ ಶೊನಾಯ್-ಎಂಡಿ-ಸಾಹು-ಸನ್ಯಾಲ್-ರೇವತಿ) ತೋರಿಸಿರುವುದು ಈ ಕಾದಂಬರಿಯ ಇನ್ನೊಂದು ಆಯಾಮ. ವಿವಾಹಿತನಾದ ಮನಮೋಹನ್ ಶಮಿಯ ಒಡನಾಟಕ್ಕೆ ಎಳಸುವಲ್ಲಿ ಕೇವಲ ತೆಂಕಣಕೇರಿ ಎಫೆಕ್ಟನ್ನು ಮೀರುವ ಸಾಹಸ ಅಥವಾ ಪ್ರಯತ್ನವನ್ನಷ್ಟೇ ಕಾಣಬೇಕಿಲ್ಲ. ಇವತ್ತಿನ ತಲೆಮಾರು ಮಾತ್ರವಲ್ಲ, ನಡುವಯಸ್ಸಿನವರೂ ಸೋಶಿಯಲ್ ವೆಬ್ಸೈಟ್ಗಳಲ್ಲಿ, ಮೊಬೈಲುಗಳಲ್ಲಿ ಹೊಸ ಸ್ನೇಹಕ್ಕೆ, ಸಂಬಂಧಕ್ಕೆ ತಹತಹಿಸುತ್ತಿರುವಲ್ಲಿಯೂ ಈ ಒಳಗಿನ ಟೊಳ್ಳನ್ನೇ ವರ್ಚ್ಯುಯಲ್ ರಿಲೇಶನ್ಸ್ ಮೂಲಕ ತುಂಬಿಕೊಳ್ಳಲು ಮಾಡುವ ಲಂಘನವೇ ಕಾಣಿಸುತ್ತದೆ. ಹಾಗೆಯೇ ಈ ಪ್ರಕ್ರಿಯೆಯಲ್ಲಿ ಬಹುತೇಕ “ಊರುಭಂಗ ವನ್ನೇ ಬೇರೆ ಬೇರೆ ಅರ್ಥಗಳಲ್ಲಿ ಸಾಕ್ಷಾತ್ಕರಿಸುತ್ತದೆ.
ಇನ್ನು ಕಾದಂಬರಿಕಾರರು ಕ್ರಾಂತಿಯ ಬೆಳವಣಿಗೆ ತಲ್ಲಣಗಳು-ತವಕಗಳನ್ನು ದಕ್ಕಿಸಿಕೊಳ್ಳಲಾಗದೆ ಮೇಲ್ನೋಟದ ವಿವರಗಳ ಮೂಲಕವೇ ಚಂದೂ ಮತ್ತು ಚಿರಾಗರನ್ನು ಚಿತ್ರಿಸಿದ್ದಾರೆ. ಆದರೆ ಕ್ರಾಂತಿಗೆ ನಾನಾ ಆಯಾಮಗಳಿದ್ದು ಕೇವಲ ರಕ್ತ ಕ್ರಾಂತಿ ಮಾತ್ರವೇ ಕ್ರಾಂತಿಯಾಗಿರುವುದಿಲ್ಲ. ಶಸ್ತ್ರರಹಿತ ಕ್ರಾಂತಿಯೂ ಆಗಿರಬಹುದು ಎಂಬುದನ್ನು ನೆನೆಯಬೇಕಿದೆ.
Author Vivek Shanabhaga
ಐದು ಭಾಗಗಳಿರುವ ಕಾದಂಬರಿಯ ಒಂದು, ಮೂರು ಮತ್ತು ಐದು - ಮೂರು ಭಾಗಗಳು  ಇಂದಿನ ನಗರ ಕೇಂದ್ರಿತ ಕತೆಯಾಗಿದ್ದು ಉಳಿದೆರಡು ಭಾಗಗಳು ಎಪ್ಪತ್ತರ ದಶಕದ ಕತೆಗೆ ಸೀಮಿತವಾಗಿವೆ. ಹಿಂದಿನ ತಲೆಮಾರಿನ ವೃತ್ತಾಂತವು ನಿರೂಪಕ ತನ್ನ ಗೆಳತಿಗೆ ಹೇಳುವ ಕತೆಯ ರೂಪದಲ್ಲಿ ಬರುವುದೂ ಕಾದಂಬರಿಯ ಒಂದು ವಿಶೇಷ. ಇನ್ನು ಈ ಕಾದಂಬರಿ ಮೇಲೆ ಯಶವಂತ ಚಿತ್ತಾಲರ 'ಶಿಕಾರಿ' 'ಕೇಂದ್ರ ವೃತ್ತ್ತಾಂತ' ಕೃತಿಗಳ ಪ್ರಭಾವ ದಟ್ಟವಾಗಿ ಆವರಿಸಿಕೊಂಡಿರುವುದು ಎದ್ದು ಕಾಣುತ್ತದೆ. 'ಶಿಕಾರಿ'ಯಲ್ಲಿ ನಾಗಪ್ಪನ ಮೂಲಕ ಚಿತ್ತಾಲರು ಮುಂಬೈ ನಗರ ಜೀವನದ ಒಳಗನ್ನು ವಿವರಿಸಿದ್ದರೆ ಇಲ್ಲಿಯೂ ಮನಮೋಹನನ ಪಾತ್ರ ಅದನ್ನೇ ಮಾಡುತ್ತದೆ. ಇಲ್ಲಿಯೂ ಚಿತ್ತಾಲರ ಕೇಂದ್ರ ವೃತ್ತಾಂತದಂತೆಯೇ ತಾನು ಕೇಂದ್ರ ಎಂದುಕೊಂಡಿರುವ ಮನಮೋಹನನ ಕತೆಯಲ್ಲಿ ಅವನೇ ಬೇರೊಂದು ಕೇಂದ್ರದಿಂದ ಹೊರಟ ಬೇರೊಂದು ವೃತ್ತದ ಪರಿಧಿಯ ಮೇಲೆ ಕುಳಿತ ಒಂದು ಬಿಂದುವಷ್ಟೇ ಆಗಿರುವ ಸಾಧ್ಯತೆ ನಮ್ಮನ್ನು ಅಚ್ಚರಿಗೆ ಕೆಡಹುತ್ತದೆ.
ಕಡೆಯದಾಗಿ ಕಾದಂಬಿಕಾರರಾದ ಶಾನಬಾಗರೇ ಹೇಳಿದಂತೆ ಕಥೆ ಅಥವಾ ಕಾದಂಬರಿಯಲ್ಲಿ ಬರೆದ ಮೇಲೆ ಎಲ್ಲವೂ ನನ್ನ ಅನುಭವಕ್ಕೆ ಬಂದಂತೆಯೇ ಒಟ್ಟಾರೆಯಾಗಿ ಒಂದು ಕೃತಿ ಏನನ್ನು ಹೇಳುತ್ತಿದೆ ಎನ್ನುವುದನ್ನು ಕುರಿತು ಯೋಚಿಸುವ ಮನಸ್ಸು ಅದನ್ನು ಸಮಗ್ರವಾಗಿ ಒಂದು ಬೀಸಿನಲ್ಲಿ ಹಿಡಿದಿಡಲು ಬಯಸುವುದು ಕೂಡ ಅರ್ಥಮಾಡಿಕೊಳ್ಳುವ, ಗ್ರಹಿಸುವ ಸಹಜವಾದ ಪ್ರಯತ್ನ. ಮನಸ್ಸು ಒಂದನ್ನು ಇನ್ನೊಂದರ ಜೊತೆ ಜೋಡಿಸಲು, ಜೋಡಿಸಿ ಅರ್ಥದ ಪೊರೆ ಹಚ್ಚಲು ಮತ್ತು ತನ್ಮೂಲಕ ಇದು ಹೀಗೆ ಎಂದು ಗ್ರಹಿಸಲು ಬಯಸುವುದು ಕೂಡ ಇದು ತನಗೆ ದಕ್ಕಿತು ಎಂಬ ಸಮಾಧಾನ ಹೊಂದುವ ಅದರ ಸ್ವಾರ್ಥದಿಂದ ಪ್ರೇರಿತವಾದದ್ದೇ ಹೊರತು ಇನ್ನೇನಲ್ಲ. ಹೀಗಾಗಿ ಕಾದಂಬಿ ಓದಿದ ಪ್ರತಿ ಓದುಗರಲ್ಲಿಯೂ ಅದು ವಿಭಿನ್ನ ರೂಪವನ್ನು ತಾಳಿ ನಿಲುತ್ತದೆ. ಹೀಗೆ 'ಊರು ಭಂಗ' ಸರಾಗವಾಗಿ ಓದಿಸಿಕೊಳ್ಳುವ  ಶೈಲಿಯಾದರೂ ಹಲವು ಪದರಗಳನ್ನು ಕುಶಲತೆಯಿಂದ ಹೆಣೆದು ಸಿದ್ಧಪಡಿಸಿರುವ ಕಾದಂಬರಿಯಿದು ಎನ್ನಲಡ್ಡಿ ಇಲ್ಲ.

Friday, May 15, 2015

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 51

ಕೈದಾಳ (Kaidaala)

ತುಮಕೂರಿನಿಂದ 8 ಕಿ.ಮೀ. ದೂರದಲ್ಲಿರುವ ಇತಿಹಾಸ ಪ್ರಸಿದ್ಧ ಸ್ಥಳ ಕೈದಾಳ. ಪ್ರಾಚೀನ ಕಾಲದಲ್ಲಿ  ಕ್ರೀಡಾಪುರವೆಂದು ಖ್ಯಾತವಾಗಿದ್ದ ಪಟ್ಟಣ ಕಿರು ಸಾಮ್ರಾಜ್ಯದ ರಾಜಧಾನಿಯೂ ಆಗಿತ್ತು. ಕೈದಾಳಕ್ಕೆ ಖ್ಯಾತಿ ಬಂದಿದ್ದು ಅಮರಶಿಲ್ಪಿ ಜಕಣಾಚಾರಿಯಿಂದ.ಜಕಣಾಚಾರಿಯ ಜನ್ಮಸ್ಥಳವಾದ ಕೈದಾಳದಲ್ಲಿ  ದ್ರಾವಿಡ ವಾಸ್ತುಶೈಲಿಯಲ್ಲಿರುವ ಸುಂದರ ಚೆನ್ನಕೇಶವ ದೇವಾಲಯವಿದೆ. 1150-51ರಲ್ಲಿ  ಹೊಯ್ಸಳರ 1ನೆಯ ನರಸಿಂಹನ ಸಾಮಂತನಾಗಿದ್ದ ಗುಳೇ-ಬಾಚಿ ಎಂಬಾತ ದೇವಸ್ಥಾನ ಕಟ್ಟಿದನಂತೆ. ಚೆನ್ನಕೇಶವ ಮಂದಿರದ ಅನತಿ ದೂರದಲ್ಲಿ  ಗಂಗಾಧರೇಶ್ವರ ದೇವಾಲಯವಿದೆ. ಇದೂ ಕೂಡ ದ್ರಾವಿಡ ಶೈಲಿಯಲ್ಲಿದೆ. ಹಳೆಯ ದೇವಾಲಯದ ಗೋಪುಗಳ ಜೀರ್ಣೋದ್ಧಾರ ಮಾಡಲಾಗಿದೆ.

Lord Sri Chennakeshava Swamy, Kaidala



Lord Sri Chennakeshava Swamy temple, Kaidala
ಬೇಲೂರಿನಚೆನ್ನಕೇಶವ ದೇವಾಲಯವನ್ನೇ ಹೋಲುವ ಸುಂದರ ಕೆತ್ತನೆಗಳಿಂದ ಕೂಡಿರುವ ದೇವಾಲಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.ಇನ್ನು ಪ್ರತಿವರ್ಷ ಊರಿನಲ್ಲಿ ಗಣಪತಿ ಉತ್ಸವ ಜರುಗುತ್ತದೆ. ಭಾದ್ರಪದ ಚೌತಿಯಂದು ಪ್ರತಿಷ್ಠಾಪಿಸಲಾಗುವ ಮಣ್ಣಿನ ಗಣಪನನ್ನು ಮೂರು ತಿಂಗಳುಗಳ ಕಾಲ ಪೂಜಿಸಲಾಗುತ್ತದೆ. ಸಂಗೀತೋತ್ಸವ, ಹರಿಕಥೆ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗುತ್ತವೆ.ಎನ್ನುವುದು ವಿಶೇಷ.

***

ಜಗಣಾಚಾರಿ ಪತ್ನಿಯನ್ನೂ ಪುತ್ರನನ್ನೂ ತೊರೆದು ದೇಶಾಂತರ ಹೋದ ಹಲವು ವರ್ಷಗಳ ಬಳಿಕ ಬೇಲೂರಿನಲ್ಲಿ ಚೆನ್ನಿಗರಾಯ ಮೂರ್ತಿಯನ್ನು ಕಡೆಯುತ್ತಿದ್ದಾಗ, ಅಲ್ಲಿಗೆ ಬಂದ ಆತನ ಮಗ ಡಕಣಾಚಾರಿ ಚೆನ್ನಿಗರಾಯಮೂರ್ತಿ ಕಡೆಯುತ್ತಿರುವ ಶಿಲೆಯಲ್ಲಿ ದೋಷವಿದೆ ಎಂದು ಸವಾಲು ಹಾಕುತ್ತಾನೆ.

 Temple, Kaidala
ಚೆನ್ನಿಗರಾಯ ಶಿಲ್ಪದ ಹೊಟ್ಟೆಯ ಭಾಗದಲ್ಲಿ ಉಳಿಯಿಂದ ಹೊಡೆದಾಗ, ಭಾಗ ಒಡೆದು ಅದರಿಂದ ಕಪ್ಪೆಯೊಂದು ಹೊರಬಂತಂತೆ. ಹೀಗಾಗೇ ದೇವಾಲಯದಲ್ಲಿರುವ ದೇವರನ್ನು ಕಪ್ಪೆ ಚೆನ್ನಿಗರಾಯ ಎಂದೇ ಕರೆಯುತ್ತಾರೆ.
ಮಗನಿಂದಲೇ ರೀತಿ ಅವಮಾನಿತನಾದ ಖ್ಯಾತ ಶಿಲ್ಪಿ  ತನ್ನ ಬಲಗೈಯನ್ನೇ ಕತ್ತರಿಸಿಕೊಳ್ಳುತ್ತಾನೆಭಗವಂತ ಆತನ ಕನಸಿನಲ್ಲಿ ಬಂದು ಕೈದಾಳದಲ್ಲಿ ಚೆನ್ನಿಗರಾಯನ ದೇವಾಲಯ ನಿರ್ಮಿಸಲು ಅವನಿಗೆ ಆದೇಶಿಸುತ್ತಾರೆ.
ಕೈದಾಳದಲ್ಲಿ ದೇವತಾ ಪ್ರತಿಷ್ಠಾಪನೆಯಾದಾಗ ಜಕಣನಿಗೆ ಮತ್ತೆ ಕೈದಳಯಿತು ಅರ್ಥಾತ್ ಕೈ ಬಂತು. ಹೀಗಾಗೇ  ಕ್ರೀಡಾಪುರಿ ಎಂದು ಕರೆಸಿಕೊಂಡಿದ್ದ ಊರು ಕೈದಳವೆಂದು ಖ್ಯಾತವಾಯಿತು.

Wednesday, May 06, 2015

ಗುದ್ದೋಡು ಪ್ರಕರಣ: ಸಲ್ಮಾನ್‌ ಖಾನ್‌ ದೋಷಿ, 5ವರ್ಷ ಜೈಲು


ಹಿಟ್ ಅಂಡ್ ರನ್ ಪ್ರಕರಣದಲ್ಲಿ ನಟ ಸಲ್ಮಾನ್ ಖಾನ್ ಅಪರಾಧಿ ಎಂದು  ಮುಂಬೈ ಸೆಷನ್ಸ್ ಕೋರ್ಟ್ ಇಂದು (ಮೇ 6 ) ತೀರ್ಪು ನೀಡಿದೆ. 2002ರಲ್ಲಿ ನಡೆದ ಪ್ರಕರಣದ ತೀರ್ಪು ಇದಾಗಿದ್ದು  ಸಲ್ಮಾನ್ ಖಾನ್ ಅಪರಾಧಿ ಎಂದು ತೀರ್ಪು ನೀಡಿರುವ ಕೋರ್ಟ್, 5 ವರ್ಷಗಳ ಜೈಲು ಶಿಕ್ಷೆ ಮತ್ತು 25 ಸಾವಿರ ರೂ. ದಂಡವನ್ನು ವಿಧಿಸಿದೆ. ಸಲ್ಮಾನ್ ಖಾನ್ ಪರ ವಕೀಲರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ

ಈ ಮಧ್ಯೆ ನಟ ಸಲ್ಮಾನ್‌ ಖಾನ್ ಅವರಿಗೆ ಬಾಂಬೆ ಹೈಕೋರ್ಟ್‌ ಎರಡು ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.ಅನಾರೋಗ್ಯ ಕಾರಣದಿಂದ ಸಲ್ಮಾನ್‌ ಖಾನ್‌ ಅವರಿಗೆ ಜಾಮೀನು ನೀಡುವಂತೆ ಅವರ ಪರ ವಕೀಲರು ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿದ ಬಾಂಬೆ ಹೈಕೋರ್ಟ್‌ ಎರಡು ದಿನಗಳ ಮಧ್ಯಂತರ ಜಾಮೀನು ನೀಡಿದೆ.



ಏನಿದು ಪ್ರಕರಣ?

ಸೆಪ್ಟೆಂಬರ್ 28,2002ರ ಮಧ್ಯರಾತ್ರಿ 2 ಗಂಟೆಯ ವೇಳೆ ಮುಂಬೈನ ಬಾಂದ್ರಾ ರಸ್ತೆಯಲ್ಲಿ ಮಲಗಿದ್ದವರ ಮೇಲೆ ಲ್ಯಾಂಡ್ ರೋವರ್ ಕಾರು ಹರಿದು ಒಬ್ಬರು ಮೃತಪಟ್ಟರೆ, ನಾಲ್ವರಿಗೆ ಗಂಭೀರ ಗಾಯಗಳಾಗುತ್ತದೆ. ಸಲ್ಮಾನ್ ಖಾನ್ ಕಂಠಪೂರ್ತಿ ಕುಡಿದು ಚಲಾಯಿಸಿದ ಪರಿಣಾಮದಿಂದಲೇ ಈ ಅವಘಡ ಸಂಭವಿಸಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ 2002ರ ಅಕ್ಟೋಬರ್ 21ರಂದು ಐಪಿಸಿ ಸೆ. 304/2ರ ಅಡಿ ಖಂಡನೀಯ ನರಹತ್ಯೆ ಪ್ರಕರಣ ದಾಖಲಾಗುತ್ತದೆ. ಅಕ್ಟೋಬರ್ 24ರಂದು ಸಲ್ಮಾನ್ ಖಾನ್‍ರನ್ನು ಪೊಲೀಸರು ಬಂಧಿಸಿಸುತ್ತಾರೆ. ಬಳಿಕ ಜಾಮೀನಿನ ಮೇಲೆ ಸಲ್ಮಾನ್ ಬಿಡುಗಡೆಯಾಗುತ್ತಾರೆ. ಮಾರ್ಚ್ 2003 ರಿಂದ ಮಾರ್ಚ್ 2015ರವರೆಗೂ ವಾದ-ಪ್ರತಿವಾದ ನಡೆಯುತ್ತದೆ.

ಪ್ರಕರಣದ ಹಿನ್ನೋಟ

2002, ಸೆ. 28: ನಟ ಸಲ್ಮಾನ್‌ ಖಾನ್‌ ಮುಂಬೈನ ಬಾಂಧ್ರಾ ಪ್ರದೇಶದ ಹಿಲ್‌ ರಸ್ತೆಯ ಅಮೆರಿಕನ್‌ ಎಕ್ಸ್‌ಪ್ರೆಸ್‌ ಬೇಕರಿ ಸಮೀಪ ಅಡ್ಡಾ ದಿಡ್ಡಿ ಕಾರು ಚಲಾಯಿಸಿದ ಪರಿಣಾಮ ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟು ನಾಲ್ವರಿಗೆ ಗಂಭೀರ ಗಾಯ.
2002, ಸೆ. 28: ಬಾಂಧ್ರಾ ಪೊಲೀಸರಿಂದ ಸಲ್ಮಾನ್‌ ಖಾನ್‌ ಬಂಧನ ಮತ್ತು ಜಾಮೀನಿನ ಮೇಲೆ ಬಿಡುಗಡೆ.
2002, ಆ. 01:  ಸಲ್ಮಾನ್‌ ಖಾನ್‌ ವಿರುದ್ಧ ಪೊಲೀಸರಿಂದ  ಅಪಘಾತ, ಅತಿ ವೇಗ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ ಆರೋಪದ ಪ್ರಕರಣ ದಾಖಲು.
2002, ಆ. 07: ಸಲ್ಮಾನ್‌ ಖಾನ್‌ ಬಂಧನ
2002, ಆ. 21: ಪೊಲೀಸರಿಂದ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆ.
2002, ಆ. 24: ಸಲ್ಮಾನ್‌ ಖಾನ್‌ಗೆ ನ್ಯಾಯಾಲಯದಿಂದ ಜಾಮೀನು
2003 ರಿಂದ 2007ರವರೆಗೂ ಬಾಂಬೆ ಹೈಕೋರ್ಟ್‌ನಲ್ಲಿ ಕಾನೂನು ಸಮರ
2007ರಿಂದ 2013: ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆ
2014, ಏ. 27: ಮತ್ತೆ ಚಾರ್ಜ್‌ ಶೀಟ್‌ ಸಲ್ಲಿಕೆ

ಇನ್ನೂ ಸಲ್ಮಾನ್ ಖಾನ್ ಮೇಲೆ ಯಾವ್ಯಾವ ಕೇಸ್ ಹಾಕಲಾಗಿದೆ?

ಐಪಿಸಿ ಸೆಕ್ಷನ್ 304/2 – ಶಿಕ್ಷಾರ್ಹ ನರಹತ್ಯೆ
ಐಪಿಸಿ ಸೆಕ್ಷನ್ 279 – ನಿರ್ಲಕ್ಷ್ಯ ಮತ್ತು ಅತೀ ವೇಗದ ಚಾಲನೆ
ಐಪಿಸಿ ಸೆಕ್ಷನ್ 337, 338 – ಪ್ರಾಣಕ್ಕೆ ಮಾರಣಾಂತಿಕ ಹಾನಿ
ಐಪಿಸಿ ಸೆಕ್ಷನ್ 427 – ಕಿಡಿಗೇಡಿತನದಿಂದ ಆಸ್ತಿ ಹಾನಿ
ಮೋಟಾರ್ ಕಾಯ್ದೆ ಸೆ.34 (ಎ)(ಬಿ) – ಸಾರಿಗೆ ನಿಯಮಗಳ ಉಲ್ಲಂಘನೆ
ಮೋಟಾರ್ ಕಾಯ್ದೆ ಸೆ. 185 – ಕುಡಿದು ವಾಹನ ಚಾಲನೆ, ಪರವಾನಗಿ ದುರುಪಯೋಗ


ಕೃಷ್ಣಮೃಗ ಬೇಟೆ ಪ್ರಕರಣ 

 ಸಲ್ಮಾನ್ ಭಾಗಿಯಾಗಿರುವ ಇನ್ನೊಂದು ಪ್ರಮುಖ ಪ್ರಕರಣ ಕೃಷ್ಣಮೃಗ ಬೇಟೆ ಪ್ರಕರಣ 1998ರ ಅಕ್ಟೋಬರ್ 1-2ರಂದು ಕಂಕಾನಿ ಗ್ರಾಮದಲ್ಲಿ ಹಮ್ ಸಾಥ್ ಸಾಥ್ ಹೈ ಚಿತ್ರೀಕರಣದ ಸಂದರ್ಭದಲ್ಲಿ ರಾಜಸ್ಥಾನದ ಕಾಡೊಂದರಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಕೃಷ್ಣ ಮೃಗ ಬೇಟೆಯಾಡಿದ್ದರು. ಸಲ್ಮಾನ್ ಖಾನ್ ಅವರ ಜೊತೆಯಲ್ಲಿ ನಟಿ ಸೋನಾಲಿ ಬೇಂದ್ರೆ, ತಬು, ನೀಲಂ, ಸೈಫ್ ಅಲಿ ಖಾನ್ ಮುಂತಾದವರಿದ್ದರು. ಎಲ್ಲರ ಮೇಲೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಲೂನಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

 ಎಪ್ರಿಲ್‌ 10, 2006ರಲ್ಲಿ ಪ್ರಕರಣಾಕ್ಕೆ ಸಂಬಂಧಿಸಿ ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಯಿತು. ಜೋಧಪುರ ಜೈಲಿನಲ್ಲಿ ಶಿಕ್ಷೆಗೆ ಒಳಗಾಗುವಂತೆ ಆದೇಶಿಸಲಾಯಿತು‌. ಜಾಮೀನು ದೊರೆಯುವವರೆಗೂ  ಅವರು ಅಲ್ಲಿಯೇ ಕಾಲ ನೂಕಿದರು. ಪ್ರಕರಣ ವಿಚಾರಣೆ ಮತ್ತೊಮ್ಮೆ ನಡೆಸಲಾಗಿದ್ದು,ಅಂತಿಮ ತೀರ್ಪು ಮಾತ್ರ ಇನ್ನೂ ಹೊರಬರಬೇಕಿದೆ. ಇದರಲ್ಲಿಯೂ ಖಾನ್ ದೋಷಿಯಾಗಿದ್ದಾರೆಂದಾದಲ್ಲಿ ಕನಿಷ್ಟ ಪಕ್ಷ ಐದರಿಂದ ಏಳು ವರ್ಷಗಳ ಕಾಲ ಶಿಕ್ಷೆಯಾಗುವ ಸಂಭವವಿದೆ.

Monday, May 04, 2015

ಮುಸ್ಸಂಜೆಯಲ್ಲಿ ಲೀನವಾದ 'ಮಣಿ' - ಹಿರಿಯ ಪತ್ರಕರ್ತ ಬಿ.ಎಸ್.ಮಣಿ ನಿಧನ

ಸಂಜೆವಾಣಿ ಹಾಗೂ ತಮಿಳು ದಿನ ಸುಡರ್ ಪತ್ರಿಕೆಗಳ ಸಂಸ್ಥಾಪಕ ಸಂಪಾದಕರಾದ ಡಾ.ಬಿ.ಎಸ್.ಮಣಿ ನಿನ್ನೆ(ಮೇ 3) ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕನ್ನಡ ಹಾಗೂ ತಮಿಳು ಭಾಷಿಗರ ನಡುವಿನ ಕೊಂಡಿಯಾಗಿದ್ದ ಮಣಿಯವರ ಜೀವನ ಚಿತ್ರಣದ ಸಂಕ್ಷಿಪ್ತ ನೋತ ನಿಮ್ಮ ಮುಂದಿದೆ. ಅಗಲಿದ ಅವರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ ಹಿರಿಯ ಜೀವ ಸವೆಸಿದ ಹಾದಿಯನ್ನೊಮ್ಮೆ ಹೊರಳಿ ನೋಡೋಣ.....

***

ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ನಾಗಲಾಪುರಂ ಗ್ರಾಮದಲ್ಲಿ  1936ರಲ್ಲಿ ಜನಿಸಿದ ಬಿ.ಎಸ್.ಮಣಿ ಇವರ ಯತಂದೆ ತಂಗವೇಲು ನಾಡಾರ್ ಹಾಗೂ ತಾಯಿ ಶೇಸಮ್ಮಳ್ ಕಿರಿಯ ವಯಸ್ಸಿನಲ್ಲೇ ಮಾತೃವಿಯೋಗವನ್ನನುಭವಿಸಿದ್ದ ಮಣಿಯವರಿಗೆ ಓದಿನಲ್ಲಿ ಅಪಾರ ಆಸಕ್ತಿ ಇತ್ತು. 8ನೇ ತರಗತಿಯವರೆಗೆ ಅಲ್ಫೋನ್ಸ್ ಶಾಲೆಯಲ್ಲಿ ಕಲಿತ ಮಣಿಯವರು 10ನೇ ತರಗತಿಯನ್ನು ಚೆನ್ನೈನಲ್ಲಿ ಮುಗಿಸಿದ್ದರು.ಮುಂದೆ ಚೆನ್ನೈನ ಸರಕಾರಿ ಕಾಲೇಜಿನಲ್ಲಿ ಸಾಹಿತ್ಯ ವಿಷಯದಲ್ಲಿ ಎಂ.ಎ. ಮಾಡಿದ್ದಲ್ಲದೆ ರಾಜ್ಯಕ್ಕೇ ಪ್ರಥಮ ಸ್ಥಾನ ಬಂದು ಚಿನ್ನದ ಪದಕ ವಿಜೇತರಾದರು. 

'ದಿನತಂತಿ', 'ಮಾಲೈ ಮುನಸು'ಪತ್ರಿಕೆಗಳಲ್ಲಿ ಸುದ್ದಿ ಸಂಪಾದಕರಾಗಿ ಕೆಲಸ ಮಾಡಿದ ಮಣಿ 1964ರಲ್ಲಿ 'ದಿನಸುಡರ್'ಎನ್ನುವ ಪತ್ರಿಕೆ ಪ್ರಾರಂಭಿಸಿದರು. ಬೆಂಗಳೂರಿನ ವಿಕ್ಟೋರಿಯಾ ಬಡಾವಣೆಯಲ್ಲಿ ಆ ನೂತನ ತಮಿಳು ಪತ್ರಿಕೆ ಕಛೇರಿ ಉದ್ಘಾಟನೆಗಾಗಿ ಬಂದ ಕಾಮರಾಜ್ ನಾದಾರ್ ಕನ್ನಡದಲ್ಲಿ ಪತ್ರಿಕೆ ಪ್ರಾರಂಭಿಸಲು ಸೂಚಿಸಿದ್ದರು. ಅವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಮಣಿಯವರು 1982ರ ಡಿಸೆಂಬರ್ 10ರಂದು 'ಸಂಜೆವಾಣಿ' ಕನ್ನಡ ಸಂಜೆ ಪತ್ರಿಕೆಯನ್ನು ಪ್ರಾರಂಭಿಸಿದರು. 
ಡಾ.ಬಿ.ಎಸ್.ಮಣಿ (11-09-1936 - 03-05-2015)

ಕನ್ನಡ ಪತ್ರಿಕೋದ್ಯಮದಲ್ಲಿ ಯಶಸ್ಸು ಕಂಡ ಸಂಜೆ ದಿನಪತ್ರಿಕೆಗಳು ಕೇವಲ ಬೆರಳೆಕೆಯಷ್ಟು ಮಾತ್ರ ಸಂಜೆವಾಣಿಗಿಂತಲೂ ಮುನ್ನ ಮತ್ತು ನಂತರದಲ್ಲಿ ಜನ್ಮತಾಳಿದ್ದ ಹಲವು ಸಂಜೆ ದೈನಿಕಗಳು ಮಾರುಕಟ್ಟೆಯಲ್ಲಿ ಗೆಲುವು ಸಾಧಿಸಲಾಗಲಿಲ್ಲ ಎಂಬುದು ಕಟು ಸತ್ಯ ಅಂತಹದರಲ್ಲಿಯೂ  33 ವರ್ಷಗಳ ಹಿಂದೆಯೇ, ಓದುಗರಿಗೆ ಅಂದಿನ ಸುದ್ದಿಯನ್ನು ಅಂದೇ ತಲುಪಿಸುವ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಯಶಸ್ವಿಯಾದದ್ದು ಸಂಜೆವಾಣಿಯ ಸಾಹಸಕ್ಕೊಂದು ನಿದರ್ಶನ. ಇದಕ್ಕೆ ಪ್ರಮುಖ ಹಾಗೂ ಮೂಲ ಕಾರಣ ಸಂಜೆವಾಣಿಯ ಸಂಸ್ಥಾಪಕ ಬಿ. ಎಸ್. ಮಣಿ  ಅವರ ದೂರದೃಷ್ಠಿ ಮತ್ತು ಶ್ರಮ ಎಂದರೆ ಅತಿಶಯೋಕ್ತಿಯಲ್ಲ. 
ಬಿ.ಎಸ್. ಮಣಿ ನಿಧನಕ್ಕೆ ಸಂಜೆವಾಣಿಯ ಶ್ರದ್ದಾಂಜಲಿ ಬರಹ

ತಮಿಳು ಸಾಹಿತಿಯೂ ಆಗಿದ್ದ ಮಣಿ ಅವರು ಕಥೆ, ಕಾದಂಬರಿ, ಸಂಶೋಧನೆಗಳೂ ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.ಹೀಗೆ ಮಣಿ ಅವರು ಸಾಹಿತಿಯಾಗಿ, ಪತ್ರಕರ್ತರಾಗಿ ಜನಮನ್ನಣೆ ಗಳಿಸಿದ್ದರುತಮ್ಮ ತೀಕ್ಷ್ಣ ಚಿಂತನೆಗಳು, ಸುದ್ದಿ ಯನ್ನು ಗುರುತಿಸುವ ರೀತಿಯಿಂದಲೂ ಎಲ್ಲರನ್ನೂ ಬೆರಗುಗೊಳಿಸಿದ್ದರು. 

ಕನ್ನಡ ಹಾಗೂ ತಮಿಳು ಭಾಷಾ ಬಾಂಧವ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದ ಮಣಿ ತಮ್ಮ ಸಂಸ್ಥೆಯಿಂದ ಹೊರತರುತ್ತಿದ್ದ 'ಚೇತನ'ಎನ್ನುವ ಹೆಸರಿನ ಮಾಸಿಕದಲ್ಲಿ ಕನ್ನದದ ಖ್ಯಾತನಾಮರ ಕಾದಂಬೈಸಿ ರಿ, ಕಥೆಗಳನ್ನು ಪ್ರಕಟಿಸಿ ಸುಲಭ ಬೆಲೆಯಲ್ಲಿ ಜನರಿಗೆ ತಲುಪಿಸುವ ಮೂಲಕ ಜನರಲ್ಲಿ ಸಾಹಿತ್ಯಾಭಿರುಚಿ ಹುಟ್ತಲು ಕಾರಣರಾಗಿದ್ದರು. ಮಣಿಯವರು ತಮ್ಮ ಸರಳ, ಸಜ್ಜನಿಕೆ ಸ್ವಭಾವದಿಂದ  ಅಪಾರ ಅಭಿಮಾನಿಗಳನ್ನು  ಹೊಂದಿದ್ದರು.

ಹೀಗೆ ಸಾಹಿತಿಯಾಗಿ, ಪತ್ರಕರ್ತರಾಗಿ ಜನಮನ್ನಣೆ ಗಳಿಸಿದ್ದ ಮಣಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ನಾನಾ ಪುರಸ್ಕಾರಗಳು ಸಂದಿವೆ.