Tuesday, August 26, 2014

ನಮ್ಮಲ್ಲಿನ ಸ್ಥಳ ಪುರಾಣಾಗಳು(Myths) – 29

ಅಯೋಧ್ಯೆ (Ayodhya)
ಭಾರತದ ಏಳು ಪರಮ ಪವಿತ್ರ ಸ್ಥಳ (ಅಯೋಧ್ಯೆ, ಮಥುರಾ, ಹರಿದ್ವಾರ, ವಾರಣಾಸಿ, ಕಂಚಿ, ಉಜ್ಜೈನಿ ಹಾಗೂ ದ್ವಾರಕೆ) ಗಳಲ್ಲಿ ಒಂದೆನಿಸಿದ ಅಯೋಧ್ಯೆ ಉತ್ತರ ಪ್ರದೇಶದ ಫೈಝಾಬಾದ್ ಜಿಲ್ಲೆಯಲ್ಲಿದೆ. ಸರಯೂ ನದಿದಂಡೆಯ ಮೇಲಿರುವ ಈ ನಗರವನ್ನು ಆಯುಧ್ ಎನ್ನುವ ಅರಸನ ನೆನಪಿಗಾಗಿ “ಅಯೋಧ್ಯೆ” ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ. ರಾಮಾಯಣ ಸೇರಿದಂತೆ ವೇದಗಳು ಈ ಅಯೋಧ್ಯೆ ನಗರವನ್ನು ಸ್ಥಾಪಿಸಿದಾತನು ಹಿಂದೂ ನ್ಯಾಯಶಾಸ್ತ್ರದ ಪಿತಾಮಹ ಮನು ಎನ್ನುವುದಾಗಿ ಉಲ್ಲೇಖಿಸುತ್ತವೆ. ನಾರಾಯಣನ ಅವತಾರವೆಂದೆನಿಸಿದ ಶ್ರೀ ರಾಮನ ಅವತಾರವಾದ ಸ್ಥಳ ಅಯೋಧ್ಯೆಯಾಗಿದ್ದು ಪುರಾಣ ಕಾಲದಿಂದ ಇಂದಿನ ವರೆಗೂ ಆ ನಗರವು ಜನವಸತಿಯನ್ನು ಹೊಂದಿತ್ತು. ಹಲವಾರು ಶತಮಾನಗಳ ಕಾಲ ರಘುವಂಶಜರ/ಸೂರ್ಯ ವಂಶದವರ ಆಳ್ವಿಕೆಗೆ ಒಳಪಟ್ಟಿದ್ದ ಈ ಅಯೋಧ್ಯಾ ನಗರವನ್ನು ಇಕ್ಷ್ಯಾಕು, ಸತ್ಯಕ್ಕೆ ಹೆಸರಾದ ಹರಿಶ್ಚಂದ್ರ, ಗಂಗೆಯನ್ನು ಭೂಮಿಗೆ ತಂದಂತಹಾ ಭಗೀರಥ, ರಘುವಂಶದ ಸ್ಥಾಪಕನಾದ ರಘು ಹಾಗೂ ಶ್ರೀರಾಮನ ತಂದೆ ದಶರಥ ಮಹಾರಾಜರುಗಳು ಆಳಿದ್ದಾರೆ. ದಶರಥನ ಕಾಲದಲ್ಲಿ ಈ ನಗರವು ಸುಖ ಸಮೃದ್ದಿಯಿಂದ ಕೂಡಿದ್ದು “ಕೋಸಲದೇಶ” ಎಂದು ಹೆಸರಾಗಿತ್ತು.
Lord Sri Rama, Seethadevi, Laksmana and Hanuman


ರಾಮಾಯಣದ ಕಥೆ
ದಶರಥ ಮಹಾರಾಜನಿಗೆ ಕೌಸಲ್ಯೆ, ಸುಮಿತ್ರಾ ಹಾಗೂ ಕೈಕೆಯಿ ಎನ್ನುವ ಮೂವರು ಮಹಾರಾಣಿಯರಿದ್ದು ಪುತ್ರ ಸಂತಾನವಿಲ್ಲದ ಕಾರಣದಿಂದ ಪುತ್ರ ಕಾಮೇಷ್ಟಿ ಯಾಗವನ್ನು ಮಾಡಿದನು. ಅದರ ಫಲವಾಗಿ ಶ್ರೀರಾಮ, ಲಕ್ಷ್ಮಣ, ಭರತ ಹಾಗೂ ಶತ್ರುಘ್ನರ ಜನನವಾಯಿತು. ಶ್ರೀರಾಮನು ದಶರಥನ ಜೇಷ್ಠ ಪುತ್ರನಾಗಿದ್ದು ಆತನು ಪ್ರಾಯಪ್ರಬುದ್ದನಾದಾಗ ಅವನನ್ನೇ ಪಟ್ಟದರಸನನ್ನಾಗಿಸಲು ಯೋಚಿಸಿದ ದಶರಥನಿಗೆ ಆತನ ಕಿರಿಯ ಪತ್ನಿ, ಭರತನ ತಾಯಿಯಾದ ಕೈಕೇಯಿಯು ತನ್ನ ಮಗನಿಗೆ ಪಟ್ಟವಾಗಬೇಕೆನ್ನುವ ಆಸೆಯಿಂದ ದಶರಥನಲ್ಲಿ ತನ್ನ ಮಗನನ್ನೇ ಯುವರಾಜ ಪದವಿಗೇರಿಸಬೇಕು, ಶ್ರೀರಾಮನನ್ನು ಹದಿನಾಲ್ಕು ವರ್ಷಗಳ ಕಾಲ ವನವಾಸಕ್ಕೆ ಕಳಿಸಬೇಕೆನ್ನುವ ವರಗಳನ್ನು ಬೇಡುತ್ತಾಳೆ. ತಾಯಿ ತಂದೆಯ ಮೇಲಿನ ಅಪಾರ ಗೌರವದಿಂದ ಶ್ರೀರಾಮನು ತನ್ನ ಪತ್ನಿ ಸೀತಾದೇವಿ ಹಾಗೂ ತಮ್ಮ ಲಕ್ಷ್ಮಣನೊಡನೆ ತಾನು ವನವಾಸಕ್ಕೆ ಹೋಗಲು ಸಮ್ಮತಿಸುತ್ತಾನೆ. ಶ್ರೀರಾಮ, ಸೀತಾದೇವಿ, ಲಕ್ಷ್ಮಣರು ಹಾಗೆ ವನವಾಸದಲ್ಲಿ ಇರಲು ಲಂಕಾಧಿಪತಿಯಾಗಿದ್ದ ರಾವಣನು ಸೀತಾದೇವಿಯನ್ನು ಅಪಹರಿಸಿಕೊಂಡು ಹೋಗಿ ತನ್ನ ಅರಮನೆಯಲ್ಲಿನ ಅಶೋಕವನದಲ್ಲಿರಿಸುತ್ತಾನೆ. ಶ್ರೀರಾಮ ಲಕ್ಷ್ಮಣರು ತಾವು ಹನುಮಂತ ಹಾಗೂ ಸುಗ್ರೀವ ಸೇರಿದಂತೆ ಲಕ್ಷಗಳ ಸಂಖ್ಯೆಯ ವಾನರ ಸೈನ್ಯದ ನೆರವಿನಿಂದ ಲಂಕಾನಗರಕ್ಕೆ ಮುತ್ತಿಗೆ ಹಾಕಿ ರಾವಣನನ್ನು ಸಂಹರಿಸಿ ಸೀತಾದೇವಿಯನ್ನು ಪುನಃ ಜೊತೆಗೂಡುತ್ತಾನೆ.
ಇತ್ತ ಭರತನು ತನ್ನ ತಾಯಿಯಿಂದ ಶ್ರೀರಾಮನಿಗಾದ ಕೇಡನ್ನು ನೆನೆದು ನೊಂದುಕೊಳ್ಳುವುದಲ್ಲದೆ ತಾನು ರಾಜ್ಯಭಾರವನ್ನು ವಹಿಸಿಕೊಳ್ಳಲು ಬಯಸದೆಯೇ ಶ್ರೀರಾಮನು ವನವಾಸ ಸಂಪೂರ್ಣಗೊಳಿಸಿ ಬರುವವರೆಗೂ ಶ್ರೀರಾಮನ ಹೆಸರಿನಲ್ಲಿಯೇ ರಾಜ್ಯಭಾರವನ್ನು ನಡೆಸುತ್ತಾ ಇರುತ್ತಾನೆ. ವನವಾಸ ಮುಗಿಸಿ ರಾವಣ ಸಂಹಾರವನ್ನು ನಡೆಸಿದ ಬಳಿಕ ಅಯೋಧ್ಯೆಗೆ ಹಿಂತಿರುಗಿದ ಶ್ರೀರಾಮ ಹಾಗೂ ಸೀತಾದೇವಿಯರು ತಾವು ಭರತನು ವಹಿಸಿಕೊಟ್ಟ ಆಡಳಿತ ಸೂತ್ರವನ್ನು ಕೈಗೆತ್ತಿಕೊಂಡು ಸತ್ಯ, ತ್ಯಾಗ, ನ್ಯಾಯಮಾರ್ಗಗಳಿಂದಲೂ ಪ್ರಜೆಗಳಾನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುವಂತೆ ಆಳ್ವಿಕೆ ನಡೆಸುತ್ತಾರೆ.
Lord Sri Rama temple, Ayodhya

ಶ್ರೀರಾಮನ ಇಂತಹಾ ನ್ಯಾಯನಿಷ್ಠುರ ಆಳ್ವಿಕೆಯಲ್ಲಿಯೂ ಅದೊಮ್ಮೆ ಒಬ್ಬ ಅಗಸನು ಸೀತಾದೇವಿಯ ಕುರಿತಾಗಿ ಸಂದೇಹದ ಮಾತುಗಳನ್ನಾಡುತಾನೆ. ವನವಾಸದಲ್ಲಿ, ರಾವಣನಿಂದ ಅಪಹೃತಳಾದಾಗಲೂ ತಾನು ಕಾಯಾ ವಾಚಾ ಮನಸಾ ಶ್ರೀರಾಮನ ಧರ್ಮಪತ್ನಿಯಾಗಿದ್ದೆನೆಂದು ನಿರೂಪಿಸಲು ಅದಾಗಲೇ ಒಮ್ಮೆ ಅಗ್ನಿಪ್ರವೇಶವನ್ನೂ ಮಾಡಿದ್ದ ಸೀತಾದೇವಿಯನ್ನು ಶ್ರೀರಾಮನು ಪುನಃ ಕಾಡಿಗಟ್ಟುತ್ತಾನೆ. ಪತಿವ್ರತಾ ಶಿರೋಮಣಿಯಾಗಿದ್ದ ಸೀತಾದೇವಿಯು ತಾನು ವಾಲ್ಮೀಕಿ ಮಹರ್ಷಿಗಳ ಆಶ್ರಮದಲ್ಲಿ ಆಶ್ರಯವನ್ನು ಪಡೆದುಕೊಳ್ಳುವಳಾಲ್ಲದೆಯೇ ಅಲ್ಲಿಯೇ ಲವ ಕುಶರೆನ್ನುವ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾಳೆ. ಅದಾಗಿ ಕೆಲವಾರು ವರ್ಷಗಳ ಬಳಿಕ ಲವ ಕುಶರು ಸಕಲ ಶಾಸ್ತ್ರ, ಶಸ್ತ್ರ ಪಾರಂಗತರಾಗಿದ್ದು ಪ್ರಾಯಪ್ರಬುದ್ದರಾದ ಸಮಯದಲ್ಲಿ ಶ್ರೀರಾಮನಿಗೆ ತಾನು ತನ್ನ ಮಡದಿ ಸೀತಾದೇವಿಗೆ ಅನ್ಯಾಯ ಮಡಿದೆ ಎಂದೆನ್ನಿಸುತ್ತದೆ. ಆತ ನೇರವಾಗಿ ವಾಲ್ಮೀಕಿಗಳ ಆಶ್ರಮಕ್ಕೆ ತೆರಳಿ ಸೀತಾದೇವಿಯನ್ನು ಕಂಡು ಅಯೋಧ್ಯೆಗೆ ಮರಳುವಂತೆ ಕೇಳಿಕೊಳ್ಳುತ್ತಾನೆ. ಆದರೆ ಸೀತಾದೇವಿಯು ತಾನಿನ್ನೆಂದಿಗೂ ಅಲ್ಲಿಗೆ ಮರಳಲಾರೆನೆಂದು ಹೇಳಿದುದಲ್ಲದೆ ಶ್ರೀರಾಮನಿಂದ ಜನ್ಮಿಸಿದ ಆ ಅವಳಿ ಮಕ್ಕಳಾದ ಲವ ಕುಶರನ್ನು ಶ್ರೀರಾಮನಿಗೆ ಒಪ್ಪಿಸಿ ತಾನು ಹುಟ್ಟಿದ ಸ್ಥಳವಾದ ಭೂಮಿಯಲ್ಲಿಯೇ ಅಡಗಿ ಹೋಗುತ್ತಾಳೆ. ಈ ಕಾರಣದಿಂದ ಅತೀವ ದುಃಖದೊದನೆ ಅಯೋಧ್ಯೆಗೆ ಹಿಂತಿರುಗಿದ ಶ್ರೀರಾಮನು ತನ್ನ ಮಕ್ಕಳಾದ ಲವನಿಗೆ ಯುವರಾಜ ಪಟ್ಟವನ್ನು ಕಟ್ಟಿ ತಾನೂ ಸಹ ತನ್ನ ವತಾರವನ್ನು ಪರಿಸಮಾಪ್ತಿಗೊಳಿಸುತ್ತಾನೆ.
ಹೀಗೆ ಶ್ರೀರಾಮ ಹಾಗೂ ಸೀತಾದೇವಿಯರು ಆದರ್ಶವಾಗುತ್ತಾರೆ. ಅವಒಡನೆ ಸದಾ ಸಹಚರ್ಯವನ್ನು ಹೊಂದಿದ್ದ ಲಕ್ಷ್ಮಣ, ಹನುಮಂತರೂ ಕೃತಾರ್ಥರಾಗುತ್ತಾರೆ. ಶ್ರೀ ಮಹಾವಿಷ್ಣುವಿನ ಅವತಾರವೆನಿಸಿದ ರಾಮನು ಹಿಂದೂಗಳ ಪಾಲಿನ ಆರಾದ್ಯ ದೈವನಾಗುತ್ತಾನೆ. ಶ್ರೀರಾಮನೇ ಅಲ್ಲದೆ ‘’ರಾಮಾಯಣ’’ ಮಹಾಕಾವ್ಯದಲ್ಲಿ ಬರುವ ಪ್ರಮುಖ ವ್ಯಕ್ತಿಗಳೆಲ್ಲರೂ ಪೂಜನೀಯರಾಗುತ್ತಾರೆ. ರಾಮಾಯಣ ಮಹಾಕಾವ್ಯವು ಪರಮ ಪಾವನ ಪುರಾಣ ಕಾವ್ಯವೆನಿಸಿಕೊಳ್ಳುತ್ತದೆ. ಆ ಮೂಲಕ ವಾಲ್ಮೀಕಿಯು ಕಾವ್ಯ ಪ್ರಪಂಚದ ‘’ಆದಿಕವಿ’’ಯಾಗುತ್ತಾನೆ.

Friday, August 22, 2014

ಆರಿತು ಅನಂತ ಬೆಳಕು - ಡಾ. ಯು.ಆರ್. ಅನಂತಮೂರ್ತಿ ಇನ್ನಿಲ್ಲ

ಕನ್ನಡದ ಹೆಮ್ಮೆಯ ಸಾಹಿತಿ ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಯು.ಆರ್. ಅನಂತಮೂರ್ತಿಯವರು ಇಂದು ನಮ್ಮನ್ನೆಲ್ಲಾ ಅಗಲಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅನಂತಮೂರ್ತಿ ಅವರನ್ನು ಇಂದು ಬೆಳಗ್ಗೆ ಬೆಂಗಳೂರು ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸಂಜೆ 6 ಗಂಟೆ ವೇಳೆಗೆ ಲಘು ಹೃದಯಾಘಾತವಾಗಿ, ನಂತರ ಚೇತರಿಕೆ ಕಾಣದೆ ಕೊನೆಯುಸಿರೆಳೆದರು ಎಂದು ಮಣಿಪಾಲ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಸುದರ್ಶನ್ ಬಲ್ಲಾಳ್ ತಿಳಿಸಿದರು.

ಈ ಹಿನ್ನೆಲೆಯಲ್ಲಿ ಭಗವಂತನು ಮೂರ್ತಿಗಳ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಎಂದು ಆಶಿಸುತ್ತಾ “ಕನ್ನಡ ಕರ್ನಾಟಕ” ಎನ್ನುವ ಕೃತಿಯೊಂದರಿಂದ ಆಯ್ದ ವರ ಲೇಖನ “ಅಕ್ಷರ ಜ್ಞಾನ ಮತ್ತು ಪ್ರಜ್ಞೆ” ಯನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ.

Dr. U.R. Ananthamurti (21 December 1932 - 23 August 2014)

***
ಬುಟ್ಟಿಯಲ್ಲಿ ಮಲವನ್ನು ತಲೆಯ ಮೇಲೆ ಹೊತ್ತಿರುವ ಹೊಲೆಯನ ಕೈಯಲ್ಲಿ ಪುಸ್ತಕವೋ ಅಥವಾ ದಿನಪತ್ರಿಕೆಯೊ ಇರಬಹುದಾದ ಸಾಧ್ಯತೆಯನ್ನು ಕಲ್ಪಿಸಿಕೊಳ್ಳೋಣ: ಆಗ ಮಲವನ್ನು ತಲೆಯ ಮೇಲೆ ಹೊರಬೇಕಾದದ್ದರ ಬಗ್ಗೆ ಅವನಿಗೇನು ಅನ್ನಿಸೀತು? ಹೊರಿಸುವುದರ ಬಗ್ಗೆ ನಮಗೇನು ಅನ್ನಿಸೀತು?
ಇಂತಹ ಸಾಧ್ಯತೆಯನ್ನು ಕಲ್ಪಿಸಿಕೊಳ್ಳುವುದು ಕೂಡ ಅಸಾಧ್ಯವೆಂದು ನಮಗೆ ಎನ್ನಿಸುವುದೇ ನಮ್ಮ ಸಾಮಾಜಿಕ ಜೀವನದ ದುರಂತ. ಇರುವ ವಾಸ್ತವಕ್ಕೆ ಒಗ್ಗಿಬಿಟ್ಟ ಜನ ನಾವು. ನಿತ್ಯ ನಾವು ನೋಡುವ ಹೇಸಿಗೆಯಿಂದ, ಹಿಂಸೆಯಿಂದ, ಅಸಮಾನತೆಯಿಂದ ನಮಗೆ ನಾಚಿಕೆಯಾಗುತ್ತಿಲ್ಲ.
ರಷ್ಯಾ ಚೀನಾ ದೇಶಗಳಲ್ಲಿ ರಾಜಕೀಯ ಸ್ವಾತಂತ್ರ್ಯವಿಲ್ಲೆಂದು ನಾವು ರೇಗಾಡುತ್ತೇವೆ; ‘ವಾಕ್ ಸ್ವಾತಂತ್ರ್ಯವಿಲ್ಲದ ಆ ದೇಶಗಳಲ್ಲಿ ಹೇಗೆ ಜನ ಬದುಕುತ್ತಾರೋ’ ಎಂದು ಆಶ್ಚರ್ಯಪಡುತ್ತೇವೆ. ಆದರೆ ಯಾಕೆ ಪ್ರತಿನಿತ್ಯ ಚೂರು ಚೂರೇ ಸಾಯಿಸುತ್ತ, ಕುಷ್ಠರೋಗದಂತೆ ನಮ್ಮ ನೈತಿಕ ಭಾವನೆಗಳನ್ನು ಕರಗಿಸುತ್ತ ಬದುಕನ್ನು ಕಸಕ್ಕೆ ಸಮಾನ ಮಾಡುವ ನಮ್ಮ ದೇಶದಲ್ಲಿರುವ ಹಿಂಸೆಯನ್ನು ನಾವು ಕಾಣುವುದಿಲ್ಲ? ನಮ್ಮ ವರ್ಗದ ಸುಖದುಃಖಗಳಿಗಷ್ಟೇ ನಮ್ಮ ಸಂವೇದನೆ ಪರಿಮಿತವಾದ ದುರಂತ ನಮ್ಮ ಸಮಾಜಕ್ಕೆ ವಿಶಿಷ್ಟವಾದ ಗುನವೆನ್ನಬಹುದು.
ಮಲ ಹೊತ್ತ ಹೊಲೆಯ ಪತ್ರಿಕೆಯೋದಬಲ್ಲವನಾಗಿದ್ದಲ್ಲಿ ನಮಗೂ ಅವನಿಗೂ ನಡುವಿರುವ ಮಾನವ ಸಂಬಂಧದಲ್ಲಿ ಒಂದು ಆಸ್ಫೋಟ ಉಂಟಾದೀತೇ ಎಂಬ ಕುತೂಹಲ ನನ್ನದು. ಯಾಖೆ ಈ ಕುತೂಹಲವೆಂದರೆ: ಈಗ ನನ್ನಂತೆಯೇ ಅವನು ಮನುಷ್ಯನಾಗಿದ್ದರೂ, ನನ್ನ ಹಾಗೇ ಕೋಪ ತಾಪಗಳು, ಓದಿ ಸಂತೋಷಪಡಬಲ್ಲ ಸಾಮರ್ಥ್ಯ, ನನ್ನ ಹಾಗೇ ಸಂಬಳ ಪಡೆಯುವ ನೌಕರನಾಗುವ ಶಕ್ತಿ ಇತ್ಯಾದಿಗಳು ಅವನಲ್ಲಿ ಸುಪ್ತವಾಗಿದ್ದರೂ, ಹೀಗೆ ಸುಪ್ತವಾಗಿರುವ ಸಾಧ್ಯತೆಗಳನ್ನು ನಾನಾಗಲೀ ಅವನಾಗಲೀ ಕಲ್ಪಿಸಿಕೊಳ್ಳಲೂ ಕೂಡ ಸಾಧ್ಯವಾಗದಂತಹ ಅಂತರ ನಮ್ಮಿಬ್ಬರ ನಡುವೆ ಇರುವುದರಿಂದಾಗಿ, ಈ ಅಸಹಜ ಅಂತರವನ್ನು ಅಕ್ಷರ ಜ್ಞಾನ ಹರಿದೀತೆ ಎಂಬುದು. ಅಕ್ಷರ ಬಾರದವನಿಗಿಂತ ಬಲ್ಲವನು ಹೆಚ್ಚು ಪಾಲು ನಮ್ಮ ರೀತಿಯ ಮನುಷ್ಯನಾಗಿ ನಮಗೆ ಕಾಣುತ್ತಾನೆ ಅಲ್ಲವೆ? ಆದ್ದರಿಂದ ಮಾನವ ಸಂಬಂಧಗಳಲ್ಲಿ ಆಸ್ಫೋಟ ಉಂಟಾಗಲು ಎಲ್ಲರೂ ಅಕ್ಷರಸ್ಥರಾಗುವುದು ಮೊದಲಿನ ಅಗತ್ಯವಲ್ಲವೆ ಎಂಬ ಪ್ರಶ್ನೆಯನ್ನು ನಾವು ತೀವ್ರವಾಗಿ ಪರಿಶೀಲಿಸಬೇಕು. ಆದರೆ ಅನ್ನ ಬಟ್ಟೆಗಳ ಅಗತ್ಯಗಳ ಪೂರೈಕೆಗೂ ಮೊದಲು ಅಕ್ಷರ ಜ್ಞಾನ ಎಲ್ಲರಿಗೂ ದೊರೆಯತಕ್ಕದ್ದು ಎಂಬ ನಿಶ್ಚಯ ನಾವು ಮಾಡಬಲ್ಲೆವೆ? ಸಾಮಾಜಿಕ ಪರಿವರ್ತನೆಯ ಅವಸರ ನಮಗೆ ನಿಜವಾಗಿ ಇದ್ದಲ್ಲಿ ಸಾರ್ವತ್ರಿಕ ಅಕ್ಷರತೆಯ ನಿಶ್ಚಯವನ್ನು ನಾವು ಮಾಡಿಯೇ – ತೀರುತ್ತೇವೆಂದು ನನಗೆ ಅನ್ನಿಸುತ್ತದೆ. ಆದರೆ ಅಂಥ ಅವಸರ ಈ ದೇಶದಲ್ಲಿ ಕಾಣುತ್ತಿಲ್ಲವೆಂದೂ ಬಾಯಿಬಿಟ್ಟು ಹೇಳಬೇಕಾಗಿಲ್ಲ.
ಉಗ್ರ ಸಮಾಜವಾದಿಗಳು ಸಹ ನನ್ನ ಉದಾಹರಣೆ ಕೇಳಿ ನಕ್ಕಾರು. ಅವರ ವಾದ ನಮಗೆ ಗೊತ್ತು. ಆರ್ಥಿಕ ಸಂಬಂಧಗಳಲ್ಲಿ ಮೊದಲು ಬದಲಾವಣೆಗಳಾಗಬೇಕು. ಬಸವ ಪ್ಲಸ್ ಗಾಂಧಿ ಮೈನಸ್ ಫ್ಲಶ್ ಕಕ್ಕಸಿನ ಸ್ಥಿತಿಯಲ್ಲಿ ಹರಿಜನೋದ್ಧಾರವಾಗಲಾರದು. ಗಾಂಧಿಯ ಜೊತೆ ಉಕ್ಕಿನ ಕೊಳಾಯಿಯೂ ಬೇಕು. ಆಗ ಮಾತ್ರ ಮಲ ಹೊರುವ ಅಗತ್ಯ ಮಾಯವಾಗುತ್ತೆ. ಸುಧಾರಕ ಸಮಾಜವಾದಿ ಕಳಕಳಿಯಿಂದ ಹೇಳುತ್ತಾನೆ: ಈಗಿಂದೀಗಲೇ ಕೈಗಾಡಿಯಲ್ಲಿ ಮಲವನ್ನು ತಳ್ಳಬಹುದಲ್ಲ; ಅಗತ್ಯವಾದ ಕಾನೂನು ಮಾಡೋಣ.
ಆದರೆ ನನಗೆ ಹೀಗೆ ಪ್ರಶ್ನೆ ಕೇಳುವ ಆಸೆ: ಸರ್ವರೂ ಈಗಿಂದೀಗಲೇ ಅಕ್ಷರಸ್ಥರಾಗಬೇಕೆಂಬ ಪ್ರಯತ್ನ ನಾವು ಮಾಡಿದಲ್ಲಿ ಮಲವನ್ನು ಕೈಗಾಡಿಯಲ್ಲಿ ತಳ್ಳುವುದರಲ್ಲಾಗಲೀ, ತಲೆಯ ಮೇಲೆ ಹೊರುವುದರಲ್ಲಾಗಲೀ ತನ್ನ ಜೀವನದ ಇತಿ ಮಿತಿಗಳನ್ನು ಕಂಡುಕೊಳ್ಳಲು ಯಾವನಾದರೂ ಮನುಷ್ಯನಾದವನು ಒಪ್ಪಿಕೊಳ್ಳುವುದು ಸಾಧ್ಯವೆ? ಸಾರ್ವತ್ರಿಕ ಅಕ್ಷರಜ್ಞಾನದಿಂದಾಗಿ ನಮ್ಮಲ್ಲಿ ಅವನಲ್ಲಿ ಒಂದು ಹೊಸ ಪ್ರಜ್ಞೆ ಮೂಡಬಹುದಲ್ಲವೆ? ಈಗಿಂದೀಗಲೇ ಹೊಲೆಯನೊಬ್ಬ ಅಕ್ಷರಸ್ಥನಾದಲ್ಲಿ ಉಂಟಾಗುವ ಆಸ್ಫೋಟ – ಅವನ ಪ್ರಜ್ಞೆಯಲ್ಲಿ, ನಮ್ಮ ಪ್ರಜ್ಞೆಯಲ್ಲಿ ನಮ್ಮಿಬ್ಬರ ಮೂಲತಃ ಮಾನವೀಯವಾದ ಸಂಬಂಧದ ಪ್ರಜ್ಞೆಯಲ್ಲಿ – ಎಷ್ಟೊಂದು ವ್ಯಾಪಕ ಬದಲಾವಣೆಗೆ ಪ್ರೇರಕವಾಗಲಿಕ್ಕಿಲ್ಲ? ಹಾಗಾದರೆ ಸಾಮಾಜಿಕ ಕ್ರಾಂತಿಗೆ ತಾವು ಬದ್ಧರೆಂದು ಸಾರುವ ಆಳುವ ವರ್ಗದ ಜನ ಈ ಅಸ್ಫೋಟನೆಗೆ ಬೇಕಾದ ಆತುರವನ್ನು ಯಾಕೆ ತೋರಿಸುತ್ತಿಲ್ಲ?
ಈಗಿರುವ ಪರಿಸ್ಥಿತಿಯಲ್ಲಿ ಹೊಲೆಯನೊಬ್ಬ ಅಕ್ಷರಸ್ಥನಾಗುವುದು ಯಾವಾಗ ಸಾಧ್ಯವೆಂದರೆ – ಅವನು ಮಧ್ಯಮ ವರ್ಗಕ್ಕೆ ಏರಬಲ್ಲ ಸ್ಥಿತಿಯನ್ನು ಮುಟ್ಟಿದ್ದಾನೆ ಎನ್ನುವಾಗ, ಆದರೆ ಈ ಬಗೆಯಲ್ಲಿ ಕ್ರಮೇಣ ನಡೆಯುವ ಬದಲಾವಣೆಯಿಂದ ನಾವು ಬಯಸುವ ಆಸ್ಫೋಟ ಆಗಬಾರದು. ಯಾಕೆಂದರೆ ಅಂಥ ಹೊಲೆಯ ನವಬ್ರಾಹ್ಮಣಿಕೆಯ ಅಂತಸ್ತನ್ನು ಮುಟ್ಟಿ ತನ್ನ ವರ್ಗದವರ ಶೋಷಣೆಗೆ ಆಗಲೇ ತಯಾರಾಗಿರುತ್ತಾನೆ. ಅವನ ಈಗಿರುವ ದೀನದಲಿತ ಸ್ಥಿತಿಯಲ್ಲೆ ಅಕ್ಷರಸ್ಥನಾಗತಕ್ಕದ್ದೆಂಬ ನಿಶ್ಚಯವನ್ನು ನಾವು ಮಾಡಬಲ್ಲವೆ ಎಂದು ಕೇಳುವುದೇ ನನ್ನ ಈ ಲೇಖನ ಉದ್ದೇಶ. ಬಹುಸಂಖ್ಯಾತ ಭಾರತೀಯರು ಇನ್ನೂ ಅಕ್ಷರಸ್ಥರು ಸಹ ಅಲ್ಲದ್ದರಿಂದ ನಮ್ಮ ನಡುವಿನ ಮಾನವೀಯ ಸಂಬಂಧ ಪ್ರಜ್ಞೆ ಸಹ ನಮಗಿಲ್ಲವೆಂಬ ಸಂಕಟದಿಂದ ನಮ್ಮಲ್ಲಿ ಸೂಕ್ಷ್ಮ ಮನಸ್ಸಿನವರಾದ ಕೆಲವರಾದರೂ ಸಹ ಈ ಬಗ್ಗೆ ಯೋಚಿಸಬಲ್ಲರೆ?
ಅಂದರೆ ಯುದ್ಧ ಪರಿಸ್ಥಿತಿಯ ತುರ್ತಿನಿಂದ ಅನಕ್ಷರತೆಯ ನಿರ್ಮೂಲನಕ್ಕೆ ನಾವು ಸಿದ್ಧರಾಗಬೇಕು. ದೈಹಿಕವಾಗಿ ಮಾನಸಿಕವಾಗಿ ಅಕ್ಷರ ಕಲಿಯುವುದು ಅಸಾಧ್ಯವಾದ ಮನುಷ್ಯನನ್ನು ಬಿಟ್ಟು ಉಳಿದವರು ಅಕ್ಷರಸ್ಥರಾಗದಿರುವುದು ಅಪರಾಧವಾಗಿ ಪರಿಗಣಿಸಬೇಕು. ಈಗ ಸಂತಾನ ನಿಯಂತ್ರಣದ ಪ್ರಚಾರ, ವಿಶ್ವವಿದ್ಯಾಲಯಗಳಲ್ಲಿ ನಡೆಯುವ ರಿಸರ್ಚ್ – ಇತ್ಯಾದಿ ಎಲ್ಲ ಬಗೆಯ ಖರ್ಚು ವೆಚ್ಚಗಳನ್ನು ಅವಶ್ಯವೆನಿಸಿದರೆ ನಿಲ್ಲಿಸಿ ಈ ಅಕ್ಷರ ಪ್ರಚಾರಕ್ಕಾಗಿ ವಿನಿಯೋಗಿಸಬೇಕು. ನಾವು ಆರ್ಥಿಕವಾಗಿ ಸ್ವಸಂಪೂರ್ಣರಾಗಲು ಎಷ್ಟು ಕಾಲ ಬೇಕೊ ಹೇಳುವುದು ಕಷ್ಟ; ಆದರೆ ಇಡೀ ದೇಶದ ಜನ ಅಕ್ಷರಸ್ಥರಾಗಲು ಹೀಗೆ ನಾವು ಮಾಡಿದ್ದಲ್ಲಿ ಎರಡು ಮೂರು ವರ್ಷಗಳು ಸಾಕಾದೀತು. ಅಂದರೆ, ನಮ್ಮ ಜನರ ಆರ್ಥಿಕ ವರ್ಗಗಳಲ್ಲಿ ಬದಲಾವಣೆಗಳಾಗುವುದಕ್ಕೆ ಮುಂಚೆಯೇ ಜನರು ಅಕ್ಷರಸ್ಥರಾಗಬೇಕು. ಈಗಿಂದೀಗಲೇ ಜನರು ಅಕ್ಷರಸ್ಥರಾದಲ್ಲಿ ನಮ್ಮ ಜನರ ನಡುವಿನ ವರ್ಗದ ಅಂತರ, ಬದುಕಿನ ಹೀನತೆ, ಸಾಕಲಾರದ ಮಕ್ಕಳನ್ನು ಹುಟ್ಟಿಸುವ ನಮ್ಮಮೂರ್ಖತನ, ಯಾವುದು ಈ ಕೂಡಲೇ ಆಡಳಿತದ ಭಾಷೆಯಾಗಬೇಕೆಂಬ ಪ್ರಶ್ನೆ – ಈ ಎಲ್ಲದರ ಬಗ್ಗೆಯೂ ಇಡೀ ದೇಶದಲ್ಲಿ ಒಂದು ವಿಚಾರ ಕ್ರಾಂತಿ ಸಾಧ್ಯವಾದೀತೆಂಬ ನಂಬಿಕೆ ನಮ್ಮಲ್ಲಿರಬೇಕು. ಆರ್ಥಿಕ ಕ್ರಾಂತಿಯ ಮುಖಾಂತರ ಇವೆಲ್ಲ ಆಗುತ್ತದೆಂಬ ಸಮಾಜವಾದಿ, ಜನರಿಗೆ ಹೊಟ್ಟೆ ಬಟ್ಟೆಗೆ ಸಿಕ್ಕಾಗ ಅವನು ಹೇಗೂ ವಿದ್ಯಾವಂತನಾಗುತ್ತಾನೆಂಬ ಬಂಡವಾಳಶಾಹಿವಾದಿಗಿಂತೇನೂ ಬೇರೆಯಲ್ಲ.
ಬ್ರಾಹ್ಮಣ ಜನಾಂಗವನ್ನು ನೋಡೋಣ. ಸಾಮಾನ್ಯವಾಗಿ ಪ್ರತಿಯೊಬ್ಬ ಬ್ರಾಹ್ಮಣನೂ. ಆತ ಅಡಿಗೆ ಭಟ್ಟಿನಿರಲಿ, ಪೂಜಾರಿಯಿರಲಿ, ಸೇವಕನಿರಲಿ – ಅಕ್ಷರಸ್ಥನಾಗಿರುತ್ತಾನೆ. ಆದ್ದರಿಂದ ಅವನ ಬಗ್ಗೆ ನಾವು ಯೋಚಿಸುವ ಕ್ರಮದಲ್ಲೆ ಬದಲಾವಣೆಯಾಗುತ್ತದೆ. ಬ್ರಾಹ್ಮಣ ಸೇವಕನಾಗಿದ್ದರೂ ಸಹ ಅವನನ್ನು ಬಹುವಚನದಲ್ಲಿ ಕರೆಯಬೇಕು ಎಂದು ಅವನ ಆಫೀಸರನಿಗೆ ಅನ್ನಿಸುವುದುಂಟು – ಅಲ್ಲವೆ? ಅಷ್ಟೇ ಅಲ್ಲ; ಯಾವ ಪರಿಸ್ಥಿತಿಯಲ್ಲೇ ಇರಲಿ ಬ್ರಾಹ್ಮಣ ಉದ್ಧಾರಕ್ಕಾಗಿ ಹಾತೊರೆಯುತ್ತಾನೆ; ತಾನಲ್ಲದಿದ್ದರೂ ತನ್ನ ಮಕ್ಕಳನ್ನಾದರೂ ಓದಿಸುತ್ತಾನೆ. ಏನೇನೋ ಕನಸು ಕಾಣುತ್ತಾನೆ. ಆದರೆ ಮಲವನ್ನು ಹೊತ್ತ ತಲೆಯಲ್ಲಿ ಏನು ಕನಸು ಸುಳಿದೀತು?
ಈತ ಮಧ್ಯಮ ವರ್ಗಕ್ಕೇರುವ ಅಪಾರ ಕಾಲಾವಧಿಯ ಬದಲಾವಣೆಗಳ ಮೂಲಕವೋ, ಅಥವಾ ಉಕ್ಕಿನ ಕೊಳಾಯಿ ಆರ್ಥಿಕ ಕ್ರಾಂತಿಗಳ ಮೂಲಕವೊ ಪರಿಹಾರ ಹುಡುಕುವ ನಮ್ಮ ಆಲೋಚನಾಕ್ರಮ ನಮ್ಮ ಸಾಮಾಜಿಕ ಪ್ರಜ್ಞೆಯನ್ನು ಸೃಷ್ಟ್ಯಾತ್ಮಕವಾಗಿ ಮಾಡಲಾರೆಂಬುದೇ ನನ್ನ ವಾದದ ತಿರುಳು. ಹೊಸ ವಾಸ್ತವದ ಹಂಬಲ, ಆತುರಗಳನ್ನು ಈಗಿಂದೀಗಲೇ ಚಿಗುರಿಸುವಂತಹ ಕಾರ್ಯವಿಧಾನಗಳನ್ನು ನಾವು ಹುಡುಕಬೇಕಾಗಿದೆ. ಕೂಡಲೇ ಸಾರ್ವತ್ರಿಕ ಅಕ್ಷರತೆಯನ್ನು ಸಾಧಿಸುವ ಆತುರ ನಮ್ಮಲ್ಲಿ ಹುಟ್ಟುವುದು ಸಾಧ್ಯವಾದಲ್ಲಿ ಹೀಗೆ ಭಾರತೀಯ ಮನಸ್ಸು ಮೂಲಭೂತವಾಗಿ ಬದಲಾಗಬಲ್ಲದೆಂಬ ಭರವಸೆ ಹುಟ್ಟಬಹುದೆಂದು ನನ್ನ ಎಣಿಕೆ.
ಈಗ ಕಾಂಗ್ರೆಸ್ ಸಮಾಜವಾದಿಗಳ ಮಾತಿನ ಕ್ರಮ, ಕಮ್ಯೂನಿಸ್ಟರ ವಿಚಾರ ಎಲ್ಲವೂ ಹಳಸಲು ಪ್ರಾರಂಭಿಸಿವೆ. ಕ್ರಾಂತಿಕಾರಕ ಬದಲಾವಣೆಗೆ ಅವಶ್ಯವಾದ ಸಂದರ್ಭವನ್ನು ಈಗಿಂದೀಗಲೇ ಸೃಷ್ಟಿಸುವ ಕೆಲಸಗಳಲ್ಲಿ ಎಲ್ಲರೂ ಸೋತಿದ್ದಾರೆ ಎನ್ನಿಸುತ್ತದೆ. ನಮ್ಮ ದೇಶದ ಎಲ್ಲ ಮುಖ್ಯ ರಾಜಕೀಯ ಪಕ್ಷಗಳೂ ಒಂದಲ್ಲ ಒಂದು ಪ್ರಾಂತ್ಯದಲ್ಲಿ ಅಧಿಕಾರದಲ್ಲಿದ್ದರೂ ಸಹ ಜನರಿಗೆ ಈಗಿರುವ ವಾಸ್ತವದ ಬಗ್ಗೆ ತೀವ್ರವಾದ ಜುಗುಪ್ಸೆ ಹುಟ್ಟಿಸುವಂತಹ ವಾತಾವರಣವನ್ನು ಯಾಕೆ ಸೃಷ್ಟಿಸಲಿಲ್ಲವೆಂಬುದನ್ನು ನಾವು ನಿಷ್ಠುರವಾಗಿ ಯೋಚಿಸಬೇಕು.
ಪ್ರಾಯಶಃ ಇದು ಕಾರಣವಿರಬಹುದು: ಈಗ ಬಾಯಿಯಿರುವ ಜನರೆಲ್ಲರೂ ಒಂದೋ ಮಧ್ಯಮವರ್ಗದವರು, ಅಥವಾ ಕಾರ್ಖಾನೆಗಳಲ್ಲಿ ವ್ಯವಸ್ಥಿತವಾಗಿ ಸಂಬಳ ಪಡೆಯುವ ಕೂಲಿ ವರ್ಗದವರು. ಮೂಲಭೂತವಾದ ಸಾಮಾಜಿಕ ಬದಲಾವಣೆಗಾಗಿ ನಿಶ್ಚಯ ಮಾಡಬಲ್ಲವರು ಪ್ರಾಯಶಃ ಇವರಲ್ಲವೇ ಅಲ್ಲವೇನೋ? ಆದರೆ ಪಾರ್ಲಿಮೆಂಟರಿ ರಾಜಕಾರಣದಲ್ಲಿ ಮತ ಚಲಾಯಿಸುತ್ತಿರುವ ಜನ ಇವರು. ಅಭಿಪ್ರಾಯ ರೂಪಿಸುವ ಶಕ್ತಿ ಇವರ ಕೈಯಲ್ಲಿದೆ. ಎಲ್ಲ ರಾಜಕೀಯ ಪಕ್ಷಗಳೂ ಇವರ ಬೆನ್ನು ಬಿದ್ದಿದ್ದಾರೆ. ಆದರೆ ಈ ಲೇಖನ ಬರೆಯುವಾಗ ನಾನು ಕೂಡ ಈ ವರ್ಗದ ಜನರೇ ಸಾರ್ವತ್ರಿಕ ಅಕ್ಷರತೆಯ ನಿಶ್ಚಯವನ್ನು ಕೈಗೊಳ್ಳುವರೆಂಬ ಭ್ರಮೆಯನ್ನು ಯಾಖೆ ಇಟ್ಟುಕೊಂಡಿದ್ದೇನೆ?
ಈಗ ಹೈಸ್ಕೂಲು ಮುಗಿಸಿದ ಅಷ್ಟು ಬುದ್ಧಿವಂತನಲ್ಲದ ಹುಡುಗ ಹೇಗೋ ಪ್ರಯತ್ನಿಸಿ ಮಾಸ್ಟರ್ ಡಿಗ್ರಿ ತನಕವೂ ಓದುವುದು ಸಾಧ್ಯವಾಗಿದೆ. ಈತ ಎಂ.ಎ. ಮಾಡಿದಾಗ ತಾನು ಎಸ್.ಎಸ್.ಎಲ್.ಸಿ.ಯಲ್ಲಿ ಮುಟ್ಟಿದ ಮಟ್ಟಕ್ಕಿಂತ ಸ್ವಲ್ಪ ಹೆಚ್ಚು ಮಟ್ಟವನ್ನು ಹಾಗೂ ಹೀಗೂ ಮುಟ್ಟಿರುತ್ತಾನೆ. ಆದರೆ ಈತ ಹೋಗುವ  ದೂರಕ್ಕಿಂತ ಇದೇ ಮಟ್ಟದ ಅಷ್ಟು ಜಾಣನಲ್ಲದ ಅಕ್ಷರಸ್ಥನೊಬ್ಬ ಅಕ್ಷರಸ್ಥನಾದಾಗ ಹೆಚ್ಚು ದೂರ ಹೋಗಿರುತ್ತಾನೆ. ಈಗ ಎಲ್ಲ ಜಾತಿಗಳಿಂದಲೂ ಮುಂದೆ ಬಂದ ಶೋಷಕವರ್ಗ ಪ್ರತಿ ತಾಲೂಕಿನಲ್ಲೂ ಡಿಗ್ರಿ ಕಾಲೇಜುಗಳನ್ನು ಸ್ಥಾಪಿಸಿಕೊಳ್ಳುತ್ತಿದ್ದಾರೆ. ಇದರಿಂದಾಗುವ ಪ್ರಯೋಜನ ಅಷ್ಟರಲ್ಲೆ ಇದೆ. ಆದರೆ ಈ ವರ್ಗದ ಕೈಯಲ್ಲಿ ಅಧಿಕಾರವಿರುವುದರಿಂದ ಎಲ್ಲ ಲಾಭಗಳನ್ನೂ ತನ್ನ ಹಿತಕ್ಕಾಗಿ ಮಾಡಿಕೊಳ್ಳುತ್ತಿದೆ.
ಆದರೆ ಒಬ್ಬ ಅನಕ್ಷರಸ್ಥ ಅಕ್ಷರಸ್ಥನಾದಾಗ ಅವನ ಕೈಯಲ್ಲಿ ಒಂದು ಬಂದೂಕನ್ನು ಕೊಟ್ಟಂತೆ.
ಆದರೆ ಅದಕ್ಕೆ ನಾವು ತಯಾರಾಗಿದ್ದೇವೆಯೇ? ಎಂಬುದೇ ಪ್ರಶ್ನೆ.

(ಆಧಾರ: ಕಣಜ - ಕನ್ನಡ ಜಾಲತಾಣ http://kanaja.in/archives/95559)


Thursday, August 14, 2014

ಯೋಗಿ ಶ್ರೀ ಅರವಿಂದರ ಸ್ವಾತಂತ್ರ್ಯ ಹೋರಾಟ - ಒಂದು ಪರಿಚಯ

ಆಗಸ್ಟ್ 15 ಭಾರತ ಮಾತೆ ಇನ್ನೂರು ವರ್ಷಗಳ ಬ್ರಿಟೀಷರ ದಾಸ್ಯದಿಂದ ಬಿಡುಗಡೆ ಹೊಂದಿದ ದಿನ. ಗಾಂಧಿ, ಪಟೇಲ್, ನೇತಾಜಿ, ಟ್ಯಾಗೂರರಂತಹಾ ಮುಂಚೂಣಿ ನಾಯಕರಲ್ಲದೆ  ಲಕ್ಷಗಳ ಸಂಖ್ಯೆಯ ಯೋಧರು, ನಾಯಕರು, ಜನಸಾಮಾನ್ಯರ ರಕ್ತದ ಕೋಡಿ ಹರಿಸಿನಮಗೆ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟರು. ಅದೇ ಆಗಸ್ಟ್ 15 ರಂದು ಭಾರತಮಾತೆಯ ಅಪ್ರತಿಮ ದೇಶಭಕ್ತ, ಮಹಾನ್ ಯೋಗಿ, ದಿವ್ಯ ಚೇತನರಾದ ಶ್ರೀ ಅರವಿಂದರ ಜನುಮದಿನ. ಆಗಸ್ಟ್ 15, 1872 ರಂದು ಜನಿಸಿದ ಅರವಿಂದರು ಪಾಂಡಿಚೇರಿಯಲ್ಲಿ ನೆಲೆಸಿ ಜಗತ್ತಿನ ಶ್ರೇಷ್ಠ ಮಹಾಕಾವ್ಯಗಳಾಲ್ಲಿ ಒಂದೆನಿಸಿದ “ಸಾವಿತ್ರಿ” ಯನ್ನು ರಚಿಸಿದವರೂ, ಆದ್ಯಾತ್ಮಿಕ ಸಾಧನೆ, ಯೋಗಗಳಿಂದ ಅಪಾರ ಸಿದ್ದಿಯನ್ನು ಪಡೆದವರೆನ್ನುವುದೂ ನಮಗೆಲ್ಲಾ ಚಿರಪರಿಚಿತ ಸಂಗತಿ. ಅದೇ ಅರವಿಂದರು ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಸಕ್ರಿಯವಾದ ಪಾತ್ರ ವಹಿಸಿದ್ದರೆನ್ನುವುದು ಬಹುಷಃ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಶ್ರೀ ಅರವಿಂದರು ಜನಿಸಿ ಇದೇ ಆಗಸ್ಟ್ 15 ಕ್ಕೆ 142 ವರ್ಷಗಳಾಗುತ್ತಿದೆ. ಸಮಯದಲ್ಲಿ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅರವಿಂದರ ಪಾತ್ರವೇನೆನ್ನುವುದರ ಕುರಿ ತು ತಿಳಿಸಿಕೊಡುವ ಚಿಕ್ಕ ಪ್ರಯತ್ನವಿದು....

Sri Aurobindo Ghosh (15 August 1872 - 05 December 1950)

ಆಗಸ್ಟ್ 15, 1872 ರಂದು ಜನಿಸಿದ ಅರವಿಂದರು ತಮ್ಮ ವಿದ್ಯಾಭ್ಯಾಸವನ್ನು ಅವರ ತಂದೆ ಡಾ. ಕೃಷ್ಣಧರ ಘೋಷ್ ರವರ ಒತ್ತಾಸೆಯಂತೆ ಇಂಗ್ಲೆಂಡಿನಲ್ಲಿ ಪೂರೈಸಿದರು. ಶ್ರೀ ಅರವಿಂದರ ತಂದೆ ಕೃಷ್ಣ್ ಧರ ಘೋಷ್ ರವರಿಗೆ ಮಕ್ಕಳು ಭಾರತೀಯ ಸಂಸ್ಕೃತಿ, ಸಂಪ್ರದಾಯಗಳನ್ನು, ಇಲ್ಲಿನ ಭಾಷೆಯನ್ನೂ ಕಲಿಯುವುದು ಇಷ್ಟವಿಲ್ಲದ ಕಾರಣ ಅವರನ್ನು ಚಿಕ್ಕ ವಯಸ್ಸಿನಲ್ಲಿಯೇ ದೂರದೇಶಕ್ಕೆ ಕಳಿಸಿದ್ದರು. ಆದರೆ ಭಾರತಮಾತೆಯ ಅಪೇಕ್ಷೆಯೋ, ವಿಧಿಯ ಲೀಲೆಯೋ ಎನ್ನುವಂತೆ ಅರವಿಂದರು ಇಂಗ್ಲೆಂಡಿನಲ್ಲಿಯೇ ಇದ್ದರೂ ಅವರಿಗೆ ಜನ್ಮಭೂಮಿಯ ಸೆಳೆತ ತಪ್ಪಲಿಲ್ಲ. ಬಿಳಿ ದೊರೆಗಳು ತಾವು ಭಾರತದಲ್ಲಿ ನಡೆಸುತ್ತಿದ್ದ ಸತತ ದಬ್ಬಾಳಿಕೆಯ ವರದಿಯನ್ನು ಅಲ್ಲಿದ್ದುಕೊಂಡೇ ತಿಳಿಯುತ್ತಿದ್ದ ಅರವಿಂದರ ಮನಸ್ಸಿಗೆ ಬಹಳವೇ ನೋವಾಗುತ್ತಲಿದ್ದಿತು. ಬ್ರಿಟೀಷರ ದಾಸ್ಯದಿಂದ ನಮ್ಮ ತಆಯಿಯನ್ನು ಬಿಡುಗಡೆಗೊಳಿಸುವುದಕ್ಕಾಗಿ ನಾನೇನಾದರೂ ಮಾಡಲೇಬೇಕು ಎನ್ನುವ ಸಂಕಲ್ಪವನ್ನು ಅವರೌ ಅಂದೇ ಮಾಡಿದ್ದರು. ಇದಕ್ಕಾಗಿಯೇ ಪ್ರತಿಷ್ಠಿತ .ಸಿ.ಎಸ್. ಪರೀಕ್ಷೆಯಲ್ಲಿ ಹನ್ನೊಂದನೇ ರ್ಯಾಂಕ್ ಪಡೆದಿದ್ದ ಅರವಿಂದರು .ಸಿ.ಎಸ್. ಹುದ್ದೆಯನ್ನು ತಿರಸ್ಕರಿಸಿ ದೇಶಸೇವೆಗಾಗಿ ತಮ್ಮ ಜೀವನವನ್ನು ಮುಡುಪಿಟ್ಟರು!
ಸಮಯದಲ್ಲಿ ಇಂಗ್ಲೆಂಡಿನಲ್ಲಿದ್ದ ಭಾರತೀಯ ವಿದ್ಯಾರ್ಥಿಗಳುಇಂಡಿಯನ್ ಮಜಲೀಸ್ಎನ್ನುವ ಸಂಘವನ್ನು ಸ್ಥಾಪಿಸಿ ಅದರ ಮೂಲಕ ಭಾರತದ ಸ್ವಾತಂತ್ರ್ಯ ಸಂಪಾದನೆಗೆ ಪ್ರಯತ್ನಿಸುತ್ತಿದ್ದರು. ಸಂಘಟನೆಯ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ಅರವಿಂದರು ಬಹುಬೇಗನೇ ಅದರ ಮುಖ್ಯ ಕಾರ್ಯನಿರ್ವಾಹಕರಾದರು. ಆದರೆ ಸಂಘಟನೆಯವರು ನಡೆಸುತ್ತಿದ್ದ ತೀರಾ ಸಾವಧಾನಕರ ಪ್ರತಿಭಟನೆಗಳಿಂದ ಮಾತ್ರವೇ ಭಾರತ ಸ್ವಾತಂತ್ರ್ಯ ಹೊಂದುವುದಿಲ್ಲವೆನ್ನುವುದನ್ನು ಅರಿತುಕೊಂಡ ಅರವಿಂದರು ಅದಕ್ಕಾಗಿ ಸಶಸ್ತ್ರ ಹೋರಾಟದ ಅಗತ್ಯವನ್ನು ಮನಗಂಡರು. ಅದೇ ಸಮಯದಲ್ಲಿ ತಮ್ಮಂತೆಯೇ ನಂಬಿಕೆ ಹೊಂದಿದ್ದ ತಲೆಮಾರಿನ ಕೆಲವು ಯುವಕರನ್ನು ಸೇರಿಸಿಕೊಂಡು ಒಂದು ಉಗ್ರಗಾಮಿಗಳ ಗುಂಪು ರಚಿಸಿಕೊಂಡರುಮತ್ತು ಗುಂಪಿಗೆ “Lotus and Dagger (ಕಮಲ ಮತ್ತು ಕಠಾರಿ)” ಎಂಬ ಹೆಸರು ನೀಡಿದರು. ಗುಂಪು ಗುಪ್ತವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಬಾಂಬ್ ಗಳ ತಯಾರಿಕೆಯ ಕುರಿತಾಗಿ ಕಲಿಯುವುದು, ಪರದೇಶಗಳಿಂದ ಬಾಂಬ್ ಗಳು, ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಸಾಗಿಸುವುದು ಇದರ ಕಾರ್ಯಗಳಾಗಿದ್ದವು. ಗುಂಪಿನ ಸದಸ್ಯರು ಭಾರತದ ಸ್ವಾತಂತ್ರಕ್ಕಾಗಿ ಏನಾದರೂ ಮಾಡಲು ಸಿದ್ದ ಎನ್ನುವುದಾಗಿ ಪ್ರತಿಜ್ಜೆಗೈಯ್ಯಬೇಕಿತ್ತು. ಅರವಿಂದರು ತಾವೂ ಕೂಡ ಅಂತಹಾ ಪ್ರತಿಜ್ಞೆಯನ್ನು ಕೈಗೊಂಡು 1893 ಫೆಬ್ರವರಿಯಲ್ಲಿ ಭಾರತಕ್ಕೆ ಬಂದಿಳಿದರು.
ಅರವಿಂದರು ಭಾರತ್ಕ್ಕೆ ಹಿಂತಿರುಗುವ ವೇಳೆಯಲ್ಲಿ ಅವರ ತಂದೆ ಕೃಷ್ಣ್ಧರ ಘೋಷ್ ದೈವಾಧೀನರಾಗಿದ್ದರು. ಅರವಿಂದರಿಗೆ ತಾವು ಜೀವನ ನಡೆಸಲಿಕ್ಕಾಗಿ ಏನಾದರೂ ಕೆಲಸ ಹುಡುಕಬೇಕಿತ್ತು. ಪಾಲಿಗೆ ಬಂದಿದ್ದ .ಸಿ.ಎಸ್. ಅಧಿಕಾರಿ ಹುದ್ದೆಯನ್ನು ಕಾಲಿನಿಂದ ತುಳಿದು ಬಂದುದಾಗಿತ್ತು. ಅಂತಹಾ ಸಮಯದಲ್ಲಿ ದೈವ ಸಂಕಲ್ಪವೆನ್ನುವಂತೆ ಬರೋಡಾದ ಮಹಾರಾಜರಿಗೆ ತಮ್ಮಲ್ಲಿನ ಆಡಳಿತ ನೋಡಿಕೊಳ್ಲಲು ಒಬ್ಬ ದಕ್ಷ ಅಧಿಕಾರಿಯು ಬೇಕಾಗಿದ್ದಿತು. ಅದೇ ಸಮಯದಲ್ಲಿ ಅವರ ಸಂಪರ್ಕಕ್ಕೆ ಬಂದ ಅರವಿಂದರಿಗೆ ಹುದ್ದೆ ದೊರೆಯಿತು. ಹೀಗೆ ಅರವಿಂದರು ಫೆಬ್ರವರಿ 8, 1893 ರಿಂದ ಬರೋಡಾ ಮಹಾರಾಜರ ಸೇವೆಗಾಗಿ ನಿಂತರು. ಪ್ರಾರಂಭದ ಎರಡು ವರ್ಷಗಳು 1893 ರಿಂದ 1895 ನಡುವೆ ಬರೋಡಾದ ಸರ್ವೆ ಸೆಟ್ಲಮೆಂಟ್ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದ ಅರವಿಂದರು 1895 ರಲ್ಲಿ ಬರೋಡಾ ಕಾಲೇಜಿನಲ್ಲಿ ಫ್ರೆಂಚ್ ಭಾಷಾ ಶಿಕ್ಷಕರಾಗಿ ನೇಮಕಗೊಂಡರು. ಬಳಿಇಕ 1899 ರಲ್ಲಿ ಅರವಿಂದರನ್ನು ಅದೇ ಕಾಲೇಜಿನ ಆಂಗ್ಲ ಭಾಷಾ ಪ್ರದ್ಯಾಪಕ ಹುದ್ದೆಗೆ ಖಾಯಂ ಆಗಿ ನೇಮಿಸಲಾಯಿತು. ಕ್ರಮೇಣ ತಮ್ಮ ಹುದ್ದೆಗಳಲ್ಲಿ ಮುಂಭಡ್ತಿ ಪಡೆದುಕೊಳ್ಳುತ್ತಾ ಸಾಗಿದ್ದ ಅರವಿಂದರು 1906 ರಲ್ಲಿ ಬರೋಡಾ ಸರ್ಕಾರದ ಹುದ್ದೆಗೆ ರಾಜೀನಾಮೆ ನೀಡುವಾಗ ಅಲ್ಲಿನ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಅರವಿಂದರು ತಾವು ಬರೋಡಾದಲ್ಲಿದ್ದಷ್ಟು ಸಮಯದಲ್ಲಿ ತಮ್ಮ ತಾಯ್ನುಡಿಯಾದ ಬಂಗಾಳಿ ಹಾಗೂ ಭಾರತೀಯರ ದೈವ ಭಾಶೆ ಸಂಸ್ಕೃತದಲಿ ಪಾಂಡಿತ್ಯವನ್ನು ಗಳಿಸಿದರು. ಇದರೊಡನೆ ಭಾರತೀಯ ಪರಂಪರೆ, ಸಂಸ್ಕೃತಿ, ಪುರಾಣ ಎಲ್ಲದರ ಆಳ ಅಧ್ಯಯನ ನಡೆಸಿದರು. ಎಲ್ಲದರಿಂದಾಗಿ ಅರವಿಂದರಲ್ಲಿ ಭಾರತದ ಕುರಿತ ಸ್ಪಷ್ಟ ಕಲ್ಪನೆಯೊಂದು ಉದಯವಾಯಿತು. ಅಲ್ಲದೆ ತಾಯ್ನೆಲಕ್ಕಾಗಿ ಹೋರಾಡುವ ಬಯಕೆ ದುಪ್ಪಟ್ಟಾಯಿತು.
ಅರವಿಂದರದು ಮೊದಲೇ ಹೇಳಿದಂತೆ ತೀವ್ರಗಾಮಿ ಚಿಂತನೆಯಾಗಿತ್ತು. 1885 - 1905 ನಡುವೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುಖಂಡರು ಅನುಸರಿಸುತ್ತಾ ಬಂದಿದ್ದ ದೀನತೆಯ ಧೋರಣೆಯನ್ನು ಖಂಡಿಸಿದ ಅರವಿಂದರು ಮುಂಬೈನಿಂದ ಪ್ರಕಟಗೊಳ್ಳುತ್ತಿದ್ದಇಂದು ಪ್ರಕಾಶಪತ್ರಿಕೆಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ದ ಕಟುವಾಗಿ ಟೀಕಿಸಿ ಒಂದು ಲೇಖನವನ್ನು ಬರೆದರು. “ಅಖಂಡ ಸ್ವಾತಂತ್ರ್ಯವೇ ನಮ್ಮ ಗುರಿಯಾಗಬೇಕು.” ಎಂದು ಮೊತ್ತ ಮೊದಲಿಗೆ ಪ್ರತಿಪಾದಿಸಿದವರಿ ಶ್ರೀ ಅರವಿಂದರು! ಅಖಂಡ ಭಾರತ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನಗಳಾಗಬೇಕು. ಇದು ಇತಿಹಾಸ ಕಲಿಸಿದ ಪಾಠ. ಇದಕ್ಕಾಗಿ ಅರವಿಂದರು ಫ್ರೆಂಚ್ ಕ್ರಾಂತಿಯನ್ನು ಉದಾಹರಿಸಿದರು. ಫ್ರಾನ್ಸ್ ಕ್ರಾಂತಿಯಲ್ಲಿ ಭಾಗವಹಿಸಿದ ಹೆಚ್ಚಿನ ಸಂಖ್ಯೆಯ ಜನರು ಕೃಷಿಕರಾಗಿದ್ದರು. ಸಾಮಾನ್ಯ ಅನಕ್ಷರಸ್ಥ ವರ್ಗದವರಾಗಿದ್ದರು ಎಂದ ಅರವಿಂದರು ಕೃಷಿ ಕಾರ್ಮಿಕರೇ ಭವ್ಯ ಸ್ವಂತಂತ್ರ ಭಾರತದ ಭವಿಷ್ಯದ ನಿಕವಾದ ಕೀಲಿಕೈ ಯಾರು ನಮ್ಮ ದೇಶದ ಕೃಷಿ ಕಾರ್ಮಿಕರಲ್ಲಿನ ಬಲವನ್ನು ಅವರಿಗೆ ತಿಳಿಸಿ ಅವರನ್ನು ಎಚ್ಚರಿಸುವರೋ ಅವರೇ ಭವಿತವ್ಯದ ನಾಯಕರಾಗುತ್ತಾರೆ ಎನ್ನುವ ಮೂಲಕ ಕೃಷಿ ಕಾರ್ಮಿಕರ ಶಕ್ತಿಯನ್ನು ಗುರುತಿಸಿದವರು ಅರವಿಂದರು.
ತ್ಯಾಗ, ಬಲಿದಾನ, ರಕ್ತಪಾತಗಳಿಲ್ಲದೆ ಸ್ವಾತಂತ್ರ್ಯ ಮರೀಚಿಕೆಯಾಗುವುದೆನ್ನುವ ನಂಬಿಕೆ ಹೊಂದಿದ್ದ ಅರವಿಂದರು ಅದಕ್ಕಾಗಿಭವಾನಿ ಮಂದಿರ ಪರಿಕಲ್ಪನೆಯೊಂದನ್ನು ರೂಪಿಸಿದರು. ಬಂಕಿಮ ವಂದ್ರರಆನಂದ ಮಠಕಾದಂಬರಿಯಲ್ಲಿ ಬರುವಂತೆ ಆರಾಧಕರಾದವರಿಗೆ ಆರಾಧಿಸಲು ಒಂದು ದೇವಿಯು ಬೇಕು. ಭಾರತಾಂಬೆಯೇ ತಾಯಿ. ಜನ್ಮಭೂಮಿಯ ಮುಕ್ತಿಗಾಗಿ ಸರ್ವತ್ಯಾಗಕ್ಕೂ ಸಿದ್ದರಾಗಿರಿ ಎನ್ನುವುದಾಗಿ ಕರೆ ನೀಡಿದ ಅರವಿಂದರು ಭಾರ್ತ ಮಾತೆಯೇ ಭವಾನಿ ಎನ್ನುವುದಾಗಿ ಬಿಂಬಿಸಿ ಭವಾನಿ ಮಂದಿರಯೋಜನೆ ರೂಪಿಸಿದರು. 1899 ರಲ್ಲಿ ಅರವಿಂದರ ಸಂಪರ್ಕಕ್ಕೆ ಬಂದ ಜತೀಂದ್ರನಾಥ ಬ್ಯಾನರ್ಜಿ ಎನ್ನುವ ಯುವಕರೋರ್ವರಿಗೆ ಬರೋಡಾಸಂಸ್ಥಾನದ ಸೈನ್ಯದಲ್ಲಿ ಸೇರಿಕೊಳ್ಲಲು ತಿಳಿಸಿ ಅಲ್ಲಿ ಅವರಿಗೆ ಸೈನ್ಯದ ಬಗ್ಗೆ ಸಾಕಷ್ಟು ತಿಳುವಳಿಕೆ ಬರುವ/ಮ್ತೆ ಮಾಡಿದರು. ಭವಿಷ್ಯದಲ್ಲಿ ತಾವು ಕಟ್ತಬೇಕೆಂದಿದ್ದ ಸೈನ್ಯದಲ್ಲಿ ಭಾಗಿಯಾಗುವಂತೆ ಪ್ರೊತ್ಸಾಹ ನೀಡಿದರು. ಇದಕ್ಕೆ ಒಪ್ಪಿದ ಜತೀಂದ್ರರು ಶ್ರೀ ಅರವಿಂದರ ನಿಷ್ಠೆಯ ಅನುಯಾಯಿಗಳಾದರು. ಆಗಾಗ ಕಲ್ಕತ್ತೆಗೆ ಹೋಗಿ ಬರುತ್ತಲಿದ್ದ ಜತೀಂದ್ರನಾಥರು ಅಲ್ಲಿ ಶ್ರೀ ಅರವಿಂದರ ಆದೇಶದಂತೆ ಬಾರತ ಮಾತೆಯನ್ನು ದಾಸ್ಯದಿಂದ ಬಿಡಿಸುವ ಉದ್ದೇಶದಿಂದ ರೂಪುಗೊಳ್ಳಬೇಕಾದ ಕ್ರಾಂತಿಗಾಗಿ ಜನ, ಧನ ಬಲಗಳನ್ನು ಸಂಚಯಿಸತೊಡಗಿದರು. ಅದೇ ಸಮಯದಲ್ಲಿ ಬರೋಡಾಗೆ ಆಗಮಿಸಿದ ಅರವಿಂದರ ಸಹೋದರರಾದ ಬಾರೀಂದ್ರ ಪ್ರಸಾದ್ ರವರನ್ನು ಸಹ ತಮ್ಮ ಕಾರ್ಯಯೋಜನೆಯಲ್ಲಿ ಪಾಲ್ಗೊಳ್ಳುವದಕ್ಕೆ ಮನವೊಲಿಸಿದರು. ಅವರ ಮೂಲಕಭವಾನಿ ಮಂದಿರಸ್ಥಾಪನೆಗಾಗಿ ನಿರ್ಜನವಾಗಿರುವ ಸೂಕ್ತ ಸ್ಥಳವನ್ನು ಗೊತ್ತು ಮಾದಿದರು.
ಮಹಾರಾಷ್ಟ್ರದ ಥಾಣೆಯಲ್ಲಿ ಸಮಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬಂಗಾಳದ .ಸಿ.ಎಸ್. ಅಧಿಕಾರಿ ಚಾರುಚಂದ್ರ ದತ್ತರ ಪರಿಚಯವು ಶ್ರೀ ಅರವಿಂದರಿಗೆ ಒದಗಿಭವಾನಿ ಮಂದಿರಯೋಜನೆಯ ಭವಿಷ್ಯದ ರೂಪುರೇಷೆಗೆ ಸಾಕಷ್ಟು ಸಹಕಾರ ಒದಗಿತು. ದತ್ತರವರು ತಾವು ಬ್ರಿಟೀಷ್ ಸರ್ಕಾರದ ಸೇವೆಯಲ್ಲಿದ್ದೂ ಅರವಿಂದರ ಸಿದ್ದಾಂತಕ್ಕೆ ಸಂಪೂರ್ಣ್ ಬೆಂಬಲಿಸಿದರು. ಇನ್ನು ದತ್ತರವರ ಭಾವನವರಾದ ಶ್ರೀಮಂತರಾಗಿದ್ದ ರಾಣಾ ಸುಬೋಧ ಮಲಿಕ್ ರವರ ಬೆಂಬಲವೂ ಅರವಿಂದರಿಗೆ ದೊರಕಿತು. ಮಹಾರಾಷ್ಟ್ರದಲ್ಲಿ ಜನಪ್ರಿಯ ನಾಯಕರಾಗಿದ್ದ ಲೋಕಮಾನ್ಯ ಬಾಲಗಂಗಾಧರ ತಿಲಕರನ್ನು ಸಂಧಿಸಿದ ಅರವಿಂದರು ತಾವು ರೂಪಿಸಿಕೊಂಡ ಯೋಜನೆಯ ವಿವರಗಳನ್ನು ತಿಲಕರಿಗೆ ನೀಡಲಾಗಿ ಅವರು ಯೋಜನೆಗೆ ತಮ್ಮದೇ ಶೈಲಿಯಲ್ಲಿ ಸ್ಪಷ್ಟ ಸ್ವರೂಪವನ್ನು ನೀಡಿದರು. ಹೀಗೆ ಮಹಾರಾಷ್ಟ್ರದಲ್ಲಿಭವಾನಿ ಮಂದಿರಚಳುವಳಿ ಬಲವಾಗುವುದಕ್ಕೆ ಕಾರಣಾರಾದರು.
ಇತ್ತ ಬಂಗಾಳದಲ್ಲಿಯೂ ಕಲ್ಕತ್ತಾ, ದೇವಘಡ, ಮಿಡ್ನಾಪುರ ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಒಟ್ಟು ಆರು ಕ್ರಾಂತಿಕಾರಿ ಚಳುವಳಿ ಕೇಂದ್ರಗಳನ್ನು ಸ್ಥಾಪನೆ ಮಾಡಿದರು. ಅರವಿಂದರ ನಿಕಟವರ್ತಿಗಳಾಗಿದ್ದ ಜತೀಂದ್ರದಾಸ್ ಬ್ಯಾನರ್ಜಿಯವರು ತಾವೂ ಬಗೆಯ ಕೇಂದ್ರವನ್ನು ಸ್ಥಾಪಿಸುತ್ತಲಿದ್ದು ತಮ್ಮ ಮೇಲಾಧಿಕಾರಿಗಳ ಕಚೇರಿ ಕಂಪೌಂಡಿನಲ್ಲಿಯೇ ಅಂತಹುದೊಂದು ಕೇಂದ್ರವನ್ನು ಸ್ಥಾಪನೆ ಮಾಡಿದ್ದರು!
ದಿನಗಳೆದಂತೆಲ್ಲಾ ಅರವಿಂದರ ಗುಪ್ತ ಕ್ರಾಂತಿ ಚಳುವಳಿ ಬಂಗಾಳ ಸೇರಿದಂತೆ ದೇಶಾದ್ಯಂತ ವ್ಯಾಪಕವಾಗಿ ಹಬ್ಬಿತು. ದೊಡ್ಡ ಉನ್ನತ ಸರ್ಕಾರಿ ಹುದ್ದೆಗಳಲ್ಲಿ ಇದ್ದವರೂ ಸಹ ಅರವಿಂದರ ಸಿದ್ದಾಂತಗಳನ್ನು ಅಂಗೀಕರಿಸಿ ಭಾರತಮಾತೆಗಾಗಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದರು. ಅದೇ ವೇಳೆಯಲ್ಲಿ ಲೋಕಮಾನ್ಯ ತಿಲಕರು ಹಾಗೂ ಅರವಿಂದರ ಮೈತ್ರಿ ಗಾಡವಾಗಿ ಬೆಳೆಯಿತು. ಇಬ್ಬರದೂ ಏಕಮಾತ್ರಗುರಿ – ‘’ಸಂಪೂರ್ಣ ಸ್ವಾರಂತ್ರ್ಯ’’ ಆಗಿದ್ದುದರಿಂದ ಇಬ್ಬರ ಯೋಜನೆಗಳೂ ಏಕಪ್ರಕಾರವಾಗಿ ಸಾಗಿದ್ದವು.
ಹೀಗಿರಲು 1907 ಸೂರತ್ ಕಾಂಗ್ರೆಸ್ ಅಧಿವೇಶನದ ವೇಳೆಯಲ್ಲಿ ಬಂಗಾಳ ಹಾಗೂ ಮಹಾರಾಷ್ಟ್ರದಿಂದ ಅನೇಕ ತೀವ್ರಗಾಮಿಗಳು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಪರಿಣಾಮವಾಗಿ ಅಂದಿನವರೆಗೂ ಮಂದಗಾಮಿಗಳ ಪ್ರಾಬಲ್ಯವಿದ್ದ ಕಾಂಗ್ರೆಸ್ ಪಕ್ಷವು ತಿಲಕರು ಹಾಗೂ ಅರವಿಂದ ಮಾರ್ಗದರ್ಶನ, ನಾಯಕತ್ವದೊಡನೆ ಪ್ರಥಮ ಬಾರಿಗೆ ತೀವ್ರಗಾಮಿಗಳ ವಶವಾಯಿತು.
1900 ಪ್ರಾರಂಭದ ವರ್ಷಗಳು ನಮ್ಮ ಭರತಭೂಮಿ ಸಾಕಷ್ಟು ಕ್ರಾಂತಿಗಳು, ಬದಲಾವಣೆಯನ್ನು ಕಾಣುವಂತಾಯಿತು. ಅದರಲ್ಲಿಯೂ 1905 ರಲ್ಲಾದ ಬಂಗಾಳ ವಿಭಜನೆಯು ದೇಶಾದ್ಯಂತ ಜನರಲ್ಲಿ ಬ್ರಿಟೀಷರ ವಿರುದ್ದ ರೋಷದ ಜ್ವಾಲೆಯನ್ನೇ ಪಸರಿಸಿತು. ಅದೇ ಸಮಯದಲ್ಲಿ ಅರವಿಂದರ ಸಹೋದರ ಬಾರೀಂದ್ರರು 1906 ಮಾರ್ಚ್ ನಲ್ಲಿಯುಗಾಂತರಎನ್ನುವ ವಾರಪತ್ರಿಕೆಯೊಂದನ್ನು ಪ್ರಾರಂಭ ಮಾಡಿದರು. ಪತ್ರಿಕೆಯಲಿ ಪ್ರಕಟವಾಗುತ್ತಿದ್ದ ಅರವಿಂದರ ಲೇಖನಗಳು ಕ್ರಾಂತಿಗೆ ಇನ್ನಷ್ಟು ಸ್ಪೂರ್ತಿ ನೀಡುತ್ತಿದ್ದವು.
ಏತನ್ಮಧ್ಯೆ 1906 ರಲ್ಲಿ ಬರೋಡಾ ಸರ್ಕಾರದ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದ ಅರವಿಂದರು ಅದಾಗ ಬಂಗಾಳ ನಾಯಕರಾಗಿದ್ದ ಬಿಪಿನ್ ಚಂದ್ರ ಪಾಲ್ ನಡೆಸುತ್ತಿದ್ದ ಆಂಗ್ಲ ವಾರಪತ್ರಿಕೆವಂದೇ ಮಾತರಂಸಂಪಾದಕತ್ವವನ್ನು ವಹಿಸಿಕೊಂಡರು. ಮುಂದೆ ಅರವಿಂದರು ಪತ್ರಿಕೆಯಲ್ಲಿ ಬರೆದ ಒಂದೊಂದು ಲೇಖನವೂ ಬ್ರಿಟೀಷ್ ಸರ್ಕಾರದ ವಿರುದ್ದ ಬೆಂಕಿಯುಂಡೆಗಳನ್ನುಗುಳುವಂತಿದ್ದವು. “ಏಟಿಗೆ ಏಟಿ! ಮುಯ್ಯಿಗೆ ಮುಯ್ಯಿ!!” ಎನ್ನುವಂತಹಾ ಧೋರಣೆಯ ಲೇಖನಗಳಿಂದ ಬಂಗಾಳವಷ್ಟೇ ಅಲ್ಲದೆ ದೇಶದ ನಾನಾ ಕಡೆಗಳಲ್ಲಿ ಕ್ರಾಂತಿಕಾರಿ ಚಟುವಟಿಕೆಗಳು ಬಿರುಸುಗೊಂಡವು. ಇಂತಹಾ ಸಮಯದಲ್ಲಿ ಶ್ರೀ ಅರವಿಂದರನ್ನು ಬಂಧಿಸಬೇಕು, ರಾಜದ್ರೋಹದ ಆಪಾದನೆಯೊಂದಿಗೆ ಅವರಿಗೆ ಶಿಕ್ಷೆ ವಿಧಿಸಬೇಕೆಂದು ಬ್ರಿಟೀಷ್ ಸರ್ಕಾರದ ಅಧಿಕಾರಿಗಳು ನಾನಾ ವಿಧದಲ್ಲಿ ಪ್ರಯತ್ನ ಮಾಡುತ್ತಿದ್ದರು. ಆದರೆ ಅವರಿಗೆಅರವಿಂದರ ವಿರುದ್ದ ಯಾವುದೇ ರೀತಿಯ ಸಾಕ್ಷ್ಯವು ದೊರೆಯದ ಕಾರಣ ಕೈ ಕೈ ಹಿಸುಕಿಕೊಳ್ಳುವಂತಾಗಿತ್ತು!
ಶ್ರೀ ಅರವಿಂದರ ಸಹೋದರ ಬಾರೀಂದ್ರರು ಮಾಣಿಕ್ ತೋರಾ ಎನ್ನುವಲ್ಲಿ ತೋಟದ ಮನೆಯೊಂದನ್ನು ಬಾಡಿಗೆಗ್ ಪಡೆದು ಅಲ್ಲಿ ಭವಾನಿ ಮಂದಿರದ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಅದೇ ಸಮಯದಲಿ ಖುದಿರಾಂ ಬೋಸ್ ಎನ್ನುವ ಕ್ರಾಂತಿಕಾರಿಯೋರ್ವರು ಪಪುಲ್ಲ ಜಾಕಿ ಎನ್ನುವ ಇನ್ನೋರ್ವರೊಡನೆ ಕೂಡಿ ನಡೆಸಿದ ಬಂಬ್ ಧಾಳಿಯಲ್ಲಿ ಬ್ರಿಟೀಷ್ ಮಹಿಳೆಯೋರ್ವರು ಮೃತರಾದರು. ಸಂಬಂಧದಲ್ಲಿ ಖುದಿರಾಂ ಬೋಸ್ ಗೆ ಗಲ್ಲುಶಿಕ್ಷೆಯಾಯಿತು. ಅದೇ ಸಮಯದಲ್ಲಿ ಬಂಗಾಳದ ಪೋಲೀಸರು ತಮಗೆ ಅನುಮಾನ ಹುಟ್ಟಿಸುವ ಚಿಕ್ಕ ದೊಡ್ದ ಮನೆಗಳೆಲ್ಲದರ ಮೇಲೆ ಧಾಳಿಗೆ ಮುಂದಾದರು. ಹಾಗೆಯೇ ಬಾರೀಂದ್ರರ ತೋಟದ ಮನೆಯೂ ಜಪ್ತಿಯಾಗಿ ಅಲ್ಲಿ ಸಾಕ್ಷ್ಟು ಪ್ರಮಾಣದ ಬಾಂಬ್ ಗಳು ಶಸ್ತ್ರಾಸ್ತ್ರಗಳೂ ದೊರಕಿದಾಗ ಸಮಯದಲ್ಲಿ ಮನೆಯಲ್ಲಿದ್ದ ಬಾರೀಂದ್ರ, ಅರವಿಂದರೂ ಸೇರಿದಂತೆ ಅನೇಕ ಜನರನ್ನು ಸುಪರ್ದಿಗೆ ತೆಗೆದುಕೊಂಡ ಪೋಲೀಸರು ಎಲ್ಲರ ಮೇಲೆಯೂ ಬಹು ದೊಡ್ಡ ಪ್ರಮಾಣದ ಆರೋಪವನ್ನು ಹೊರಿಸಿದರು.
ಪ್ರಕರಣದಲ್ಲಿ ಶ್ರೀ ಅರವಿಂದರು 1908 ಮೇ 4 ರಂದು ಪೋಲೀಸರಿಂದ ಬಂಧಿಸಲ್ಪಟ್ಟಿದ್ದರು. 1909 ಏಪ್ರಿಲ್ 13 ರವ್ರೆಗೆ ವಿಚಾರಣೆ ನಡೆಯಿತು. 777 ಸಾಕ್ಷಿಗ್ಳ ಹೇಳಿಕೆಗಳು, 4000 ಪುತಗಳ ದಸ್ತಾವೇಜು ದಾಖಲಾದವು. ಅರವಿಂದರ ಪರವಾಗಿ ಅಂದಿನ ಪ್ರಖ್ಯಾತ ವಕೀಲರಾದ ಚಿತ್ತರಂಜನ್ ದಾಸ್ ರವರು ಸತತ ಒಂಭತ್ತು ದಿನಗಳ ಕಾಲ ವಾದ ಮಂಡಿಸಿದರು. ಶ್ರೀ ಅರವಿಂದರನ್ನು ಬಂಧಿಸಿದ ವರ್ಷದ ಮೇಲೆ ಎರಡು ದಿನಗಳ ತರುವಾಯ ಸೆಷೆನ್ಸ್ ನ್ಯಾಯಾಲಯದ ನ್ಯಾಯಾಧೀಶರು ಅರವಿಂದರು ನಿರ್ದೋಷಿಗಳೆಂದು ತೀರ್ಪು ಬರೆದು ಪ್ರಕರಣಕ್ಕೆ ಮುಕ್ತಾಯ ಹಾಡಿದರು.
ಜೈಲಿನಲ್ಲಿದ್ದಷ್ಟೂ ಕಾಲದೇವರು ನನ್ನನ್ನು ಪರೀಕ್ಷೆಗೊಡ್ಡಿದ್ದಾನೆ... ಅವನೇ ಎಲ್ಲದಕ್ಕೂ ಕಾರಣನು.” ಎಂದು ನಿಶ್ಚಲವಾಗಿ ನಂಬಿದ್ದ ಅರವಿಂದರು ತಾವು ಯಾವುದೇ ಉದ್ವೇಗ, ಆವೇಶ್ಗಳಿಗೆ ಸಿಲುಕದೆ ನಿರ್ಲಿಪ್ತರಾಗಿದ್ದರು. ಜೈಲಿನಿಂದ ಹೊರಬಂದ ಬಳಿಕವೂ ದೇಶಸೇವೆಯನ್ನೇ ಮುಂದುವರಿಸಿದ ಅರವಿಂದರುಕರ್ಮಯೋಗಿಹಾಗೂಧರ್ಮಎನ್ನುವ ಪತ್ರಿಕೆಗಳ ಮೂಲಕ ತಮ್ಮ ರಾಜಕೀಯ ನಿಲುವನ್ನು ಪ್ರಚುರಪಡಿಸುತ್ತಿದ್ದರು. ಅವರು ಬರೆಯುತ್ತಿದ್ದ ಉಗ್ರ ಲೇಖನಗಳಿಂದ ಜನರು ಸ್ಪೂರ್ತಿಗೊಂಡು ಸ್ವತಂತ್ರ್ಯ ಚಳುವಳಿಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ಇದು ಕಾರಣವಾಗಿ ಅಂದಿನ ಬ್ರಿಟೀಷ್ ಸತ್ತೆ ಮತ್ತೆ ಪುನಃ ಅರವಿಂದರನ್ನು ಬಂಧಿಸಿ ಸೆರೆಮನೆಗಟ್ತಬೇಕೆಂದು ಯೋಚಿಸಿತು. ವಿಚಾರವನ್ನು ಸೋದರಿ ನಿವೇದಿತಾರವರು ಶ್ರೀ ಅರವಿಂದರಿಗೆ ತಿಳಿಸಿದಾಗ ಅವರು ಮತ್ತೆ ತಡ ಮಾಡದೆಯೇ ಕಲ್ಕತ್ತಾವನ್ನು ತೊರೆದು ಚಂದ್ರನಗರವೆಂಬಲ್ಲಿಗೆ ಹೋದರು. ಅಲ್ಲಿ ಒಂದು ತಿಂಗಳ ಕಾಲ ನೆಲೆಸಿದ್ದ ಅರವಿಂದರು 1910 ಏಪ್ರಿಲ್ 1 ರಂದು ಅಲ್ಲಿಂದ ಹೊರಟು ಏಪ್ರಿಲ್ 4 ಕ್ಕೆ ಪಾಂಡಿಚೇರಿಗೆ ಬಂದು ತಲುಪಿದರು. ಅಲ್ಲಿಂದ ಮುಂದೆ ಶ್ರೀ ಅರವಿಂದರು ರಾಜಕೀಯದಿಂದ ಶಾಶ್ವತವಾಗಿ ದೂರ ಸರಿದರು. 1950 ಡಿಸೆಂಬರ್ 5 ರಂದು ತಾವು ದೇಹತ್ಯಾಗ ಮಾಡುವ ದಿನದ ವರೆವಿಗೂ ಪಾಂಡಿಚೇರಿಯನ್ನು ಬಿಟ್ಟು ಹೊರಬರಲಿಲ್ಲ.
ಸ್ನೇಹಿತರೆ, ಇದು ಮಹರ್ಷಿ ಅರವಿಂದರ ಸ್ವಾತಂತ್ರ್ಯ ಹೋರಾಟಗಾಥೆ. ಇಂದು ನಾವೆಲ್ಲಾ ಆಚರಿಸುತ್ತಿರುವ ಸ್ವಾತಂತ್ರ್ಯೋತ್ಸವದಂದೇ ಶ್ರೀ ಅರವಿಂದರ ಜನ್ಮದಿನವೂ ಆಗಿದ್ದು ಅವರು ಭರತ ಭೂಮಿಗೆ ಸಲ್ಲಿಸಿದ ಸೇವೆ, ಮಾಡಿದ ತ್ಯಾಗವನ್ನು ನೆನೆಯುತ್ತಾ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸೋಣ........
ಜೈ ಹಿಂದ್....!