Tuesday, August 26, 2014

ನಮ್ಮಲ್ಲಿನ ಸ್ಥಳ ಪುರಾಣಾಗಳು(Myths) – 29

ಅಯೋಧ್ಯೆ (Ayodhya)
ಭಾರತದ ಏಳು ಪರಮ ಪವಿತ್ರ ಸ್ಥಳ (ಅಯೋಧ್ಯೆ, ಮಥುರಾ, ಹರಿದ್ವಾರ, ವಾರಣಾಸಿ, ಕಂಚಿ, ಉಜ್ಜೈನಿ ಹಾಗೂ ದ್ವಾರಕೆ) ಗಳಲ್ಲಿ ಒಂದೆನಿಸಿದ ಅಯೋಧ್ಯೆ ಉತ್ತರ ಪ್ರದೇಶದ ಫೈಝಾಬಾದ್ ಜಿಲ್ಲೆಯಲ್ಲಿದೆ. ಸರಯೂ ನದಿದಂಡೆಯ ಮೇಲಿರುವ ಈ ನಗರವನ್ನು ಆಯುಧ್ ಎನ್ನುವ ಅರಸನ ನೆನಪಿಗಾಗಿ “ಅಯೋಧ್ಯೆ” ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ. ರಾಮಾಯಣ ಸೇರಿದಂತೆ ವೇದಗಳು ಈ ಅಯೋಧ್ಯೆ ನಗರವನ್ನು ಸ್ಥಾಪಿಸಿದಾತನು ಹಿಂದೂ ನ್ಯಾಯಶಾಸ್ತ್ರದ ಪಿತಾಮಹ ಮನು ಎನ್ನುವುದಾಗಿ ಉಲ್ಲೇಖಿಸುತ್ತವೆ. ನಾರಾಯಣನ ಅವತಾರವೆಂದೆನಿಸಿದ ಶ್ರೀ ರಾಮನ ಅವತಾರವಾದ ಸ್ಥಳ ಅಯೋಧ್ಯೆಯಾಗಿದ್ದು ಪುರಾಣ ಕಾಲದಿಂದ ಇಂದಿನ ವರೆಗೂ ಆ ನಗರವು ಜನವಸತಿಯನ್ನು ಹೊಂದಿತ್ತು. ಹಲವಾರು ಶತಮಾನಗಳ ಕಾಲ ರಘುವಂಶಜರ/ಸೂರ್ಯ ವಂಶದವರ ಆಳ್ವಿಕೆಗೆ ಒಳಪಟ್ಟಿದ್ದ ಈ ಅಯೋಧ್ಯಾ ನಗರವನ್ನು ಇಕ್ಷ್ಯಾಕು, ಸತ್ಯಕ್ಕೆ ಹೆಸರಾದ ಹರಿಶ್ಚಂದ್ರ, ಗಂಗೆಯನ್ನು ಭೂಮಿಗೆ ತಂದಂತಹಾ ಭಗೀರಥ, ರಘುವಂಶದ ಸ್ಥಾಪಕನಾದ ರಘು ಹಾಗೂ ಶ್ರೀರಾಮನ ತಂದೆ ದಶರಥ ಮಹಾರಾಜರುಗಳು ಆಳಿದ್ದಾರೆ. ದಶರಥನ ಕಾಲದಲ್ಲಿ ಈ ನಗರವು ಸುಖ ಸಮೃದ್ದಿಯಿಂದ ಕೂಡಿದ್ದು “ಕೋಸಲದೇಶ” ಎಂದು ಹೆಸರಾಗಿತ್ತು.
Lord Sri Rama, Seethadevi, Laksmana and Hanuman


ರಾಮಾಯಣದ ಕಥೆ
ದಶರಥ ಮಹಾರಾಜನಿಗೆ ಕೌಸಲ್ಯೆ, ಸುಮಿತ್ರಾ ಹಾಗೂ ಕೈಕೆಯಿ ಎನ್ನುವ ಮೂವರು ಮಹಾರಾಣಿಯರಿದ್ದು ಪುತ್ರ ಸಂತಾನವಿಲ್ಲದ ಕಾರಣದಿಂದ ಪುತ್ರ ಕಾಮೇಷ್ಟಿ ಯಾಗವನ್ನು ಮಾಡಿದನು. ಅದರ ಫಲವಾಗಿ ಶ್ರೀರಾಮ, ಲಕ್ಷ್ಮಣ, ಭರತ ಹಾಗೂ ಶತ್ರುಘ್ನರ ಜನನವಾಯಿತು. ಶ್ರೀರಾಮನು ದಶರಥನ ಜೇಷ್ಠ ಪುತ್ರನಾಗಿದ್ದು ಆತನು ಪ್ರಾಯಪ್ರಬುದ್ದನಾದಾಗ ಅವನನ್ನೇ ಪಟ್ಟದರಸನನ್ನಾಗಿಸಲು ಯೋಚಿಸಿದ ದಶರಥನಿಗೆ ಆತನ ಕಿರಿಯ ಪತ್ನಿ, ಭರತನ ತಾಯಿಯಾದ ಕೈಕೇಯಿಯು ತನ್ನ ಮಗನಿಗೆ ಪಟ್ಟವಾಗಬೇಕೆನ್ನುವ ಆಸೆಯಿಂದ ದಶರಥನಲ್ಲಿ ತನ್ನ ಮಗನನ್ನೇ ಯುವರಾಜ ಪದವಿಗೇರಿಸಬೇಕು, ಶ್ರೀರಾಮನನ್ನು ಹದಿನಾಲ್ಕು ವರ್ಷಗಳ ಕಾಲ ವನವಾಸಕ್ಕೆ ಕಳಿಸಬೇಕೆನ್ನುವ ವರಗಳನ್ನು ಬೇಡುತ್ತಾಳೆ. ತಾಯಿ ತಂದೆಯ ಮೇಲಿನ ಅಪಾರ ಗೌರವದಿಂದ ಶ್ರೀರಾಮನು ತನ್ನ ಪತ್ನಿ ಸೀತಾದೇವಿ ಹಾಗೂ ತಮ್ಮ ಲಕ್ಷ್ಮಣನೊಡನೆ ತಾನು ವನವಾಸಕ್ಕೆ ಹೋಗಲು ಸಮ್ಮತಿಸುತ್ತಾನೆ. ಶ್ರೀರಾಮ, ಸೀತಾದೇವಿ, ಲಕ್ಷ್ಮಣರು ಹಾಗೆ ವನವಾಸದಲ್ಲಿ ಇರಲು ಲಂಕಾಧಿಪತಿಯಾಗಿದ್ದ ರಾವಣನು ಸೀತಾದೇವಿಯನ್ನು ಅಪಹರಿಸಿಕೊಂಡು ಹೋಗಿ ತನ್ನ ಅರಮನೆಯಲ್ಲಿನ ಅಶೋಕವನದಲ್ಲಿರಿಸುತ್ತಾನೆ. ಶ್ರೀರಾಮ ಲಕ್ಷ್ಮಣರು ತಾವು ಹನುಮಂತ ಹಾಗೂ ಸುಗ್ರೀವ ಸೇರಿದಂತೆ ಲಕ್ಷಗಳ ಸಂಖ್ಯೆಯ ವಾನರ ಸೈನ್ಯದ ನೆರವಿನಿಂದ ಲಂಕಾನಗರಕ್ಕೆ ಮುತ್ತಿಗೆ ಹಾಕಿ ರಾವಣನನ್ನು ಸಂಹರಿಸಿ ಸೀತಾದೇವಿಯನ್ನು ಪುನಃ ಜೊತೆಗೂಡುತ್ತಾನೆ.
ಇತ್ತ ಭರತನು ತನ್ನ ತಾಯಿಯಿಂದ ಶ್ರೀರಾಮನಿಗಾದ ಕೇಡನ್ನು ನೆನೆದು ನೊಂದುಕೊಳ್ಳುವುದಲ್ಲದೆ ತಾನು ರಾಜ್ಯಭಾರವನ್ನು ವಹಿಸಿಕೊಳ್ಳಲು ಬಯಸದೆಯೇ ಶ್ರೀರಾಮನು ವನವಾಸ ಸಂಪೂರ್ಣಗೊಳಿಸಿ ಬರುವವರೆಗೂ ಶ್ರೀರಾಮನ ಹೆಸರಿನಲ್ಲಿಯೇ ರಾಜ್ಯಭಾರವನ್ನು ನಡೆಸುತ್ತಾ ಇರುತ್ತಾನೆ. ವನವಾಸ ಮುಗಿಸಿ ರಾವಣ ಸಂಹಾರವನ್ನು ನಡೆಸಿದ ಬಳಿಕ ಅಯೋಧ್ಯೆಗೆ ಹಿಂತಿರುಗಿದ ಶ್ರೀರಾಮ ಹಾಗೂ ಸೀತಾದೇವಿಯರು ತಾವು ಭರತನು ವಹಿಸಿಕೊಟ್ಟ ಆಡಳಿತ ಸೂತ್ರವನ್ನು ಕೈಗೆತ್ತಿಕೊಂಡು ಸತ್ಯ, ತ್ಯಾಗ, ನ್ಯಾಯಮಾರ್ಗಗಳಿಂದಲೂ ಪ್ರಜೆಗಳಾನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುವಂತೆ ಆಳ್ವಿಕೆ ನಡೆಸುತ್ತಾರೆ.
Lord Sri Rama temple, Ayodhya

ಶ್ರೀರಾಮನ ಇಂತಹಾ ನ್ಯಾಯನಿಷ್ಠುರ ಆಳ್ವಿಕೆಯಲ್ಲಿಯೂ ಅದೊಮ್ಮೆ ಒಬ್ಬ ಅಗಸನು ಸೀತಾದೇವಿಯ ಕುರಿತಾಗಿ ಸಂದೇಹದ ಮಾತುಗಳನ್ನಾಡುತಾನೆ. ವನವಾಸದಲ್ಲಿ, ರಾವಣನಿಂದ ಅಪಹೃತಳಾದಾಗಲೂ ತಾನು ಕಾಯಾ ವಾಚಾ ಮನಸಾ ಶ್ರೀರಾಮನ ಧರ್ಮಪತ್ನಿಯಾಗಿದ್ದೆನೆಂದು ನಿರೂಪಿಸಲು ಅದಾಗಲೇ ಒಮ್ಮೆ ಅಗ್ನಿಪ್ರವೇಶವನ್ನೂ ಮಾಡಿದ್ದ ಸೀತಾದೇವಿಯನ್ನು ಶ್ರೀರಾಮನು ಪುನಃ ಕಾಡಿಗಟ್ಟುತ್ತಾನೆ. ಪತಿವ್ರತಾ ಶಿರೋಮಣಿಯಾಗಿದ್ದ ಸೀತಾದೇವಿಯು ತಾನು ವಾಲ್ಮೀಕಿ ಮಹರ್ಷಿಗಳ ಆಶ್ರಮದಲ್ಲಿ ಆಶ್ರಯವನ್ನು ಪಡೆದುಕೊಳ್ಳುವಳಾಲ್ಲದೆಯೇ ಅಲ್ಲಿಯೇ ಲವ ಕುಶರೆನ್ನುವ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾಳೆ. ಅದಾಗಿ ಕೆಲವಾರು ವರ್ಷಗಳ ಬಳಿಕ ಲವ ಕುಶರು ಸಕಲ ಶಾಸ್ತ್ರ, ಶಸ್ತ್ರ ಪಾರಂಗತರಾಗಿದ್ದು ಪ್ರಾಯಪ್ರಬುದ್ದರಾದ ಸಮಯದಲ್ಲಿ ಶ್ರೀರಾಮನಿಗೆ ತಾನು ತನ್ನ ಮಡದಿ ಸೀತಾದೇವಿಗೆ ಅನ್ಯಾಯ ಮಡಿದೆ ಎಂದೆನ್ನಿಸುತ್ತದೆ. ಆತ ನೇರವಾಗಿ ವಾಲ್ಮೀಕಿಗಳ ಆಶ್ರಮಕ್ಕೆ ತೆರಳಿ ಸೀತಾದೇವಿಯನ್ನು ಕಂಡು ಅಯೋಧ್ಯೆಗೆ ಮರಳುವಂತೆ ಕೇಳಿಕೊಳ್ಳುತ್ತಾನೆ. ಆದರೆ ಸೀತಾದೇವಿಯು ತಾನಿನ್ನೆಂದಿಗೂ ಅಲ್ಲಿಗೆ ಮರಳಲಾರೆನೆಂದು ಹೇಳಿದುದಲ್ಲದೆ ಶ್ರೀರಾಮನಿಂದ ಜನ್ಮಿಸಿದ ಆ ಅವಳಿ ಮಕ್ಕಳಾದ ಲವ ಕುಶರನ್ನು ಶ್ರೀರಾಮನಿಗೆ ಒಪ್ಪಿಸಿ ತಾನು ಹುಟ್ಟಿದ ಸ್ಥಳವಾದ ಭೂಮಿಯಲ್ಲಿಯೇ ಅಡಗಿ ಹೋಗುತ್ತಾಳೆ. ಈ ಕಾರಣದಿಂದ ಅತೀವ ದುಃಖದೊದನೆ ಅಯೋಧ್ಯೆಗೆ ಹಿಂತಿರುಗಿದ ಶ್ರೀರಾಮನು ತನ್ನ ಮಕ್ಕಳಾದ ಲವನಿಗೆ ಯುವರಾಜ ಪಟ್ಟವನ್ನು ಕಟ್ಟಿ ತಾನೂ ಸಹ ತನ್ನ ವತಾರವನ್ನು ಪರಿಸಮಾಪ್ತಿಗೊಳಿಸುತ್ತಾನೆ.
ಹೀಗೆ ಶ್ರೀರಾಮ ಹಾಗೂ ಸೀತಾದೇವಿಯರು ಆದರ್ಶವಾಗುತ್ತಾರೆ. ಅವಒಡನೆ ಸದಾ ಸಹಚರ್ಯವನ್ನು ಹೊಂದಿದ್ದ ಲಕ್ಷ್ಮಣ, ಹನುಮಂತರೂ ಕೃತಾರ್ಥರಾಗುತ್ತಾರೆ. ಶ್ರೀ ಮಹಾವಿಷ್ಣುವಿನ ಅವತಾರವೆನಿಸಿದ ರಾಮನು ಹಿಂದೂಗಳ ಪಾಲಿನ ಆರಾದ್ಯ ದೈವನಾಗುತ್ತಾನೆ. ಶ್ರೀರಾಮನೇ ಅಲ್ಲದೆ ‘’ರಾಮಾಯಣ’’ ಮಹಾಕಾವ್ಯದಲ್ಲಿ ಬರುವ ಪ್ರಮುಖ ವ್ಯಕ್ತಿಗಳೆಲ್ಲರೂ ಪೂಜನೀಯರಾಗುತ್ತಾರೆ. ರಾಮಾಯಣ ಮಹಾಕಾವ್ಯವು ಪರಮ ಪಾವನ ಪುರಾಣ ಕಾವ್ಯವೆನಿಸಿಕೊಳ್ಳುತ್ತದೆ. ಆ ಮೂಲಕ ವಾಲ್ಮೀಕಿಯು ಕಾವ್ಯ ಪ್ರಪಂಚದ ‘’ಆದಿಕವಿ’’ಯಾಗುತ್ತಾನೆ.

No comments:

Post a Comment