Tuesday, September 09, 2014

ನಮ್ಮಲ್ಲಿನ ಸ್ಥಳ ಪುರಾಣಗಳು(Myths) – 30

ಕುಕ್ಕೆ ಸುಬ್ರಹ್ಮಣ್ಯ (Kukke Subrahmanya)
ಭಾಗ - 1

ಪರಶುರಾಮ ಕ್ಷೇತ್ರವೆಂದು ಪ್ರಸಿದ್ದವಾದ ಕರ್ನಾಟಕ ಕರಾವಳಿ ಭಾಗದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ಶ್ರೀ ಕ್ಷೇತ್ರವು ನಂಬಿದ ಭಕ್ತರಿಗೆ ಸುಖ ಶಾಂತಿಯನ್ನು ಕರುಣಿಸುತ್ತಿರುವ ಪರಮ ಪಾವನ ಕ್ಷೇತ್ರವಾಗಿದೆ. ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ಕೋಟ್ಯಾಂತರ ಭಕ್ತರ ಅಭೀಷ್ಠದಾಯಕನಾಗಿ ಈ ಸ್ಥಳದಲ್ಲಿ ನೆಲೆ ನಿಂತಿದ್ದಾನೆ. ಹಿಂದೆಲ್ಲಾ ಈ ಪ್ರದೇಶ “ಕುಕ್ಕೆ ಗ್ರಾಮ” ಎಂದೇ ಹೆಸರಾಗಿತ್ತು. ಅದಾಗ ಸುಮಾರು ಒಂದು ಲಕ್ಷ ಮನೆಗಳು ಇಲ್ಲಿದ್ದವು ಎನ್ನಲಾಗುತ್ತದೆ. ಈ ಸ್ಥಳದಲ್ಲಿ ಸುಮಾರು 8 ನೇ ಶತಮಾನದಲ್ಲಿ ಶ್ರೀ ಸುಬ್ರಹ್ಮಣ್ಯ ದೇವಾಲಯವು ಸ್ಥಾಪಿತವಾಯಿತು. ನಯನ ಮನೋಹರವಾದ ಸಹ್ಯಾದ್ರಿ ಬೆಟ್ಟ ಸಾಲು, ಪಕ್ಕದಲ್ಲಿಯೇ ಹರಿವ ಕುಮಾರಧಾರಾ ನದಿ ಹಾಗೂ ದರ್ಪಣ ತೀರ್ಥಗಳಿಂದ ಶೋಭಿಸುವ ಶ್ರೀ ಕ್ಷೇತ್ರಕ್ಕೆ ವರ್ಷದ ಎಲ್ಲಾ ದಿನಗಳಲ್ಲಿಯೂ ಸರ್ಪ ಸಂಸ್ಕಾರ, ಆಶ್ಲೇಷಾ ಬಲಿ ಇತ್ಯಾದಿ ಸೇವೆ, ಹರಕೆಗಳನ್ನು ಮಾಡಿಸಲು ಅಲ್ಲದೆ ತಾವು ನಂಬಿದ ದೇವನ ವಿಶೆಷ ಕೃಪೆಗೆ ಪಾತ್ರವಾಗುವ ಸಲುವಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಕನ್ನಡ ನಾಡಿನ ಸುಪ್ರಸಿದ್ದ ಕ್ಷೇತ್ರವೆನಿಸಿದ ಕುಕ್ಕೆ ಸುಬ್ರಹ್ಮಣ್ಯವು ಕರ್ನಾಟಕದ ಅತ್ಯಂತ ಶ್ರೀಮಂತ ದೇವಾಲಯವೂ ಹೌದು. ಅತ್ಯಂತ ಪ್ರಾಚೀನ ಐತಿಹ್ಯಗಳನ್ನು, ಪೌರಾಣಿಕ ಹಿನ್ನೆಲೆಗಳನ್ನೂ ಹೊಂದಿರುವ ಶ್ರೀ ಕ್ಷೇತ್ರದ ಪುರಾಣ ಹಿನ್ನೆಲೆಯನ್ನು ನಾವೀಗ ತಿಳಿದುಕೊಳ್ಳೋಣ....
 
Sri Kukke Subrahmanya 


***
ಅನಾದಿ ಕಾಲದಲ್ಲಿ ಅನೇಕ ದೇವರ್ಷಿಗಳು ಶಿವಲಿಂಗಗಳನ್ನಿ ಈ ಸ್ಥಳದಲ್ಲಿ ಸ್ಥಾಪನೆ ಮಾಡಿದ್ದರು. ಸರ್ಪರಾಜನಾದ ವಾಸುಕಿಯು ತಾನೂ ಸಹ ಒಂದು ಶಿವಲಿಂಗವನ್ನು ತಾನು ವಾಸಿಸುವ ಗುಹಾ ದ್ವಾರದಲ್ಲಿ ಸ್ಥಾಪಿಸಿ ಸುಬ್ರಹ್ಮಣ್ಯ ಸ್ವಾಮಿ ಅಥವಾ ಸ್ಕಂದ ಸ್ವಾಮಿಯ ಅಂಶದೊಡನೆ ಗುಹೆಯಲ್ಲಿ ವಾಸಿಸುತ್ತಿದ್ದಾನೆ. “ಕುಕ್ಷೀ” ಎಂಬ ಸಂಸ್ಕೃತ ಶಬ್ದವು ಕನ್ನಡಕ್ಕೆ ಬಂದಾಗ “ಕುಕ್ಕೆ” ಎಂದಾಗಿ ಕುಕ್ಕೆಯಲ್ಲಿ ಸ್ಥಾಪಿತವಾದ ಲಿಂಗವೇ “ಕುಕ್ಕೆ ಲಿಂಗ” ಎಂದೆನಿಸಿತು. ಅದೇ ಮುಂದೆ “ಕುಕ್ಕೆ ಸುಬ್ರಹ್ಮಣ್ಯ” ಎಂದು ಕರೆಯಲ್ಪಟ್ಟಿತು.

***
ಕುಕ್ಕುಟ ಧ್ವಜಧಾರಿಯಾದ ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ಇಲ್ಲಿ ನೆಲೆಸಿರುವುದರಿಂದಲೂ, ಆತನೇ ಸ್ಥಾಪಿಸಿದ ಲಿಂಗವಾದುದರಿಂದಲೂ ಈ ಸ್ಥಳವು “ಕುಕ್ಕೆ ಲಿಂಗ” ಎಂದೂ ಆ ಪದದಿಂದಲೇ “ಕುಕ್ಕೆ ಸುಬ್ರಹ್ಮಣ್ಯ” ಎಂದೂ ಪ್ರಸಿದ್ದಿಯನ್ನು ಹೊಂದಿತು.

***
ಅತ್ಯಂತ ಪ್ರಾಚೀನ ಕಾಲದಲ್ಲಿ ಈ ಪರಿಸರದಲ್ಲಿದ್ದ ಲಿಂಗಗಳಿಗೆ ರಕ್ಷಣೆ ನೀಡುವುದಕ್ಕಾಗಿ ಬಿದಿರು, ಬೆತ್ತಗಳಿಂದ ತಯಾರಿಸಿದ ಬುಟ್ಟಿಗಳನ್ನು ಕವುಚಿ ಹಾಕುತ್ತಿದ್ದ ಕ್ರಮವಿತ್ತು. ಅದಾಗೆಲ್ಲಾ ಸರಿಯಾದ ಕಟ್ಟಡಗಳು ಇನ್ನೂ ನಿರ್ಮಾಣ ವಾಗಿಲ್ಲದಿದ್ದ ಸಮಯದಲ್ಲಿ ಹೀಗೆ ಮಾಡಿ ತಮ್ಮಯ ಆರಾಧನಾ ಮೂರ್ತಿಗಳನ್ನು ರಕ್ಷಿಸಿಕೊಳ್ಳುವ ಪದ್ದತಿ ಇತ್ತು. ಪೂಜಾ ಸಮಯದಲ್ಲಿ ಮಾತ್ರ ಅವುಗಳಾನ್ನು ಎತ್ತಿಟ್ಟು ಪೂಜೆ ನೆರವೇರಿಸುತ್ತಿದ್ದರು. ಇದರಿಂದಾಗಿಯೂ ಸಹ ಈ ಸ್ಥಳಕ್ಕೆ “ಕುಕ್ಕೆ ಸುಬ್ರಹ್ಮಣ್ಯ’ಎಂಬ ಹೆಸರು ಪ್ರಾಪ್ತವಾಯಿತು ಎನ್ನಲಾಗಿದೆ. ಅದಕ್ಕೆ ಸರಿಯಾಗಿ ಬುಟ್ಟಿ ತಯಾರಿಸಲು ಅಗತ್ಯವಾದ ಬಿದಿರು, ಬೆತ್ತಗಳು ಇಂದಿಗೂ ಈ ಪ್ರದೇಶಗಳಾಲ್ಲಿ ಹೇರಳವಾಗಿದ್ದು ಇಲ್ಲಿನ ಮೂಲ ನಿವಾಸಿಗಳೆಂದು ಹೇಳಿಕೊಳ್ಳುವ ಅದೇಷ್ಟೋ ಮಂದಿ ಇಂದೂ ಸಹ ತಮ್ಮ ಬುಟ್ಟಿ ತಯಾರಿಕೆ ಕಸುಬನು ನಂಬಿಕೊಂಡು ನಡೆಸುತ್ತಾ ಬಂದಿದ್ದಾರೆ.

***
ಅತಿಯಾದ ಭೂಭಾರದಿಂದ ಪೀಡಿತನಾದ ಮಹಾಶೇಷನು ಶ್ರೀ ಹರಿಯನ್ನು ಪ್ರಾರ್ಥಿಸಲಾಗಿ ಶ್ರೀ ಹರಿಯು ಪ್ರತ್ಯಕ್ಷನಾದನು. ಅದಾಗ ಮಹಾಶೇಷನು ತನ್ನ ಮನೋಗತವನ್ನು ಶ್ರೀ ಹರಿಯ ಮುಂದೆ ಹೀಗೆ ಅರುಹಿದನು - “ಅದೆಷ್ಟೋ ಕಾಲದಿಂದ ಈ ಭೂಮಿಯನ್ನು ಹೊತ್ತು ಬಳಲಿದ್ದೇನೆ. ಇನ್ನು ಮುಂದೆ ನನಗೆ ಇದರಿಂದ ಮುಕ್ತಿಯನ್ನು ನೀಡು. ನಾನು ಸುಖವಾಗಿ ಸಂಚರಿಸಬೇಕೆಂದಿರುವೆನು.” ಅದಕ್ಕೆ ಶ್ರೀ ಹರಿಯು ಹೀಗೆಂದನು - “ನಾನು ಕೂರ್ಮ ರೂಪಿಯಾಗಿ ಭೂಭಾರವನ್ನು ಹೊತ್ತು ಕಾಪಾಡುವೆನು ನೀನು ನಿನ್ನ ಅಪೇಕ್ಷೆಯಂತೆ ಸಂಚರಿಸುತ್ತಲಿರು.” ಆ ಬಳಿಕ ಶ್ರೀ ಹರಿಯು ಕೂರ್ಮ ರೂಪವನ್ನು ತಾಳಿ ಪಾತಾಳದಡಿಗೆ ಹೋಗಿ ಸೇರಿದನು. ಆಗ ಮಹಾಶೇಷನು ತಾನು ಭೂಮಿಯ ಪರ್ವತ ಶ್ರೇಷ್ಠರಲ್ಲಿ ಸುಬ್ರಹ್ಮಣ್ಯನೆನಿಸಿ ಬಹಳ ಪರ್ವತಗಳಲ್ಲಿ ಇದ್ದನು. ಇದೇ ಸಮಯದಲ್ಲಿ ಕಾತ್ಯಾಯಿನೀ ದೇವಿಯು ಪುತ್ರ ಸಂತಾನಕ್ಕಾಗಿ ಹಲವು ದೇವತೆಗಳಾನ್ನು ಪ್ರಾರ್ಥಿಸುತ್ತಾ ವ್ರತಗಳಾನ್ನು ಆಚರಿಸುತ್ತಿದ್ದಳು. ಆಗ ಶೇಷದೇವನಾದ ಮಹಾಶೇಷನು ಕಾತ್ಯಾಯಿನಿ ದೇವಿಗೆ ಒಲಿದುದಲ್ಲದೆ ಅವಳಿಗೆ ಪುತ್ರ ಸಂತಾನವನ್ನು ಕರುಣಿಸಿ ತಾನು ತನ್ನ ಶಕ್ತಿಯನ್ನು ಆ ಸಂತಾನದಲ್ಲಿ ತುಂಬಿದನು.
ಹಿಂದೊಮ್ಮೆ ಅಗ್ನಿ ದೇವನು ಪರಮೇಶ್ವರ ಅಂಶವನ್ನು ತಾನು ಧರಿಸುವ ವರವನ್ನು ರುದ್ರದೇವರಿಂದಲೇ ಪಡೆದುಕೊಂಡಿದ್ದನು. ಅದರಂತೆಯೇ ಪಾರ್ವತಿ ದೇವಿಯಲ್ಲಿ ಆರು ಮುಖಗಳುಳ್ಳ ಸುಂದರ ಬಾಲಕನ ಸ್ವರೂಪದಲ್ಲಿ ಜನ್ಮಿಸಿದನು. ಆ ಬಾಲಕ ಷಣ್ಮುಖನು ಮಾತಾ ಪಿತರಾದ ಪಾರ್ವತಿ-ಪರಮೇಶ್ವರರಿಗೆ ವಂದಿಸಿ ಅವರ ಅಪ್ಪಣೆ ಪಡೆದು ಪಶ್ಚಿಮ ದಿಕ್ಕಿಗೆ ಹೊರಟು ಪರಶುರಾಮನ ತಪಃಕ್ಷೇತ್ರವಾದ ಋಷ್ಯಶೃಂಗ ಮುನಿಗಳ ಆಶ್ರಮವಿದ್ದ ಸ್ಥಳಕ್ಕೆ ಬಂದನು. ಅಲ್ಲಿನ ಪವಿತ್ರ ಜಲದಲ್ಲಿ ಮಿಂದು ಶೇಷದೇವರ ಅನುಗ್ರಹಕ್ಕಾಗಿ ತಪಸ್ಸನ್ನಾಚರಿಸತೊಡಗಿದನು. ಷಣ್ಮುಖ ಸ್ವಾಮಿಯು ಕುಮಾರ ರೂಪದಲ್ಲಿ ತಪಸ್ಸನ್ನಾಚರಿಸಿದ ಈ ಸ್ಥಳವು ಮುಂದೆ “ಕುಮಾರ ಪರ್ವತ” ಎನಿಸಿತು. ಈ ಬೆಟ್ಟದ ತಪ್ಪಲಿನಿಂದ ಹೊರಟಂತಹಾ ಪವಿತ್ರ ನದಿಯು “ಕುಮಾರಧಾರೆ” ಎಂಬ ಹೆಸರನ್ನು ಹೊಂದಿತು. ಆ ಪುಣ್ಯಕ್ಷೇತ್ರದಲ್ಲಿದ್ದ ಶಿವಲಿಂಗವು ಸಹ “ಕುಕ್ಕೆ ಲಿಂಗ” ಎನ್ನುವ ಹೆಸರು ಪಡೆಯಿತು.

***
ತ್ರೇತಾಯುಗದಲ್ಲಿ ಸಹಸ್ರಬಿಂದು ಎನ್ನುವವನು ಋಷ್ಯಶೃಂಗ ಪರ್ವತದಲ್ಲಿ ವಿಶೇಷವಾದ ತಪಸ್ಸನ್ನಾಚರಿಸಿದ್ದನು. ಗ್ರೀಷ್ಠ ಋತುವಿನಲ್ಲಿ ಸೂರ್ಯನ ಮೇಲೆ ಕಣ್ಣಿಟ್ಟೂ, ವರ್ಷ ಋತುವಿನಲ್ಲಿ ಮಳೆಯಲ್ಲಿ ಸಂಪೂರ್ಣ ನೆನೆದೂ, ಹೇಮಂತ ಋತುವಿನಲ್ಲಿ ಹಿಮದಲ್ಲಿಯೇ ನಿಂತು ತಪಸ್ಸು ಆಚರಿಸಿದ್ದನು. ಆತಾ ಕುತ್ತಿಗೆಯಲ್ಲಿದ್ದ ಸರದಲ್ಲಿ ಹಿಮವು ಜೋತಾಡುತ್ತಾ ಕೆಳಕ್ಕೆ ಬಿದ್ದು ನದಿಯಾಗಿ ಹರಿಯಿತು. ಅದುವೆ ಮುಂದೆ “ಕುಮಾರ ಧಾರೆ” ಎನಿಸಿಕೊಂಡಿತು.
ಹಾಗೆ ಕಠಿಣ ತಪಸ್ಸನ್ನಾಚರಿಸಿದ ಸಹಸ್ರಬಿಂದುವಿಗೆ ಸೂರ್ಯದೇವನು ಪ್ರತ್ಯಕ್ಷನಾಗಿ ವರವನ್ನು ಕೇಳುವಂತೆ ಕೋರಲು ಸಹಸ್ರಬಿಂದುವು “ಪುತ್ರಪ್ರಾಪ್ತಿಯಾಗುವಂತೆ ಅನುಗ್ರಹಿಸು” ಎಂದು ಬೇಡಿಕೊಂಡನು. ಅದಕ್ಕೆ ಒಪ್ಪಿದ ಸೂರ್ಯದೇವನು “ನಿನ್ನ ಪುತ್ರನು ನದಿಯ ರೂಪದಲ್ಲಿರುತ್ತಾನೆ. ಈ ಕ್ಷೇತ್ರದ ನದಿಯಾಗಿ ನಿನ್ನ ದೇಹದಲ್ಲಿದ್ದ ಹಿಮಬಿಂದುವಿನಿಂದ ಹುಟ್ಟಿದ ಕಾರಣದಿಂಅದ ಕುಮಾರಧಾರೆ ಎಂದು ಪ್ರಖ್ಯಾತವಾದ ಈ ನದಿ ಬುದ್ದಿಶಾಲಿಯಾಗಿರುವನು. ಅವನು ಶತಬಿಂದು ಎಂದು ಪ್ರಸಿದ್ದಿ ಹೊಂದುವನು.” ಎಂದು ವರವನ್ನು ಕರುಣಿಸಿ ಅಲ್ಲಿಯೇ ಅದೃಷ್ಯನಾದನು.
Sri Kshethra Kukke Subrahmany Temple
ಹಾಗೆ ಜನಿಸಿದ ಶತಬಿಂದುವು ತಾನು ಅಗ್ನಿದೇವನ ಕೃಪೆಯನ್ನು ಗಳಿಸುವುದಕ್ಕಾಗಿ ತಪಸ್ಸಿನಲ್ಲಿ ನಿರತನಾದನು. ಆತನ ಭಯಂಕರವಾದ ತಪಸ್ಸಿನ ತೇಜಸ್ಸು ಸೂರ್ಯ ಮಂಡಲವನ್ನು ತಲುಪಿತು. ಇದರಿಂದ ಸಮಸ್ತ ದೇವಾನುದೇವತೆಗಳೂ, ಪಿತೃಗಳೂ, ಸಿದ್ದರೂ ಸಂಕಟವನ್ನು ಅನುಭವಿಸಿದರು. ಶ್ತಬಿಂದುವಿನ ತಪೋ ತೇಜಸ್ಸಿನ ಪ್ರಭಾವದಿಂದ ಭೂಮಿ. ಆಕಾಶ ಮಾರ್ಗಗಳಲ್ಲಿ ದೇವಾನು ದೇವತೆಗಳಿಗೂ ಸಂಚರಿಸುವುದು ಸಾಧ್ಯವಾಗದೇ ಹೋಗಲು ಸಪ್ತರ್ಷಿಗಳು ತಾವು ಶತಬಿಂದುವಿನ ಬಳಿ ಸಾರಿ ಪ್ರತ್ಯೇಕ ಪ್ರತ್ಯೇಕವಾಗಿ ವಿನಂತಿಯನ್ನು ಮಾಡಿಕೊಂಡರು. “ಎಲೈ ಬ್ರಾಹ್ಮಣನೇ ಅತ್ಯಂತ ಕಠಿಣವಾದ ತಪಸ್ಸಿನಿಂದ ಅದೇಕೆ ಕಷ್ಟವನ್ನು ಅನುಭವಿಸುತ್ತಿರುವೆ? ಎಂದಾದರೂ ಸಜ್ಜನರು ಪರರಿಗೆ ಉಪಟಳವನ್ನು ನೀಡಬಾರದು. ಈ ನಿನ್ನ ತಪಸ್ಸು ಲೋಕಕ್ಕೆ ಉಪಟಳಾವನ್ನು ನೀಡುತ್ತಿದೆ.” ಎನ್ನುತ್ತಿದಂತೆಯೇ ಆತನ ತಪೋ ತೇಜಸ್ಸಿನ ಜ್ವಾಲೆ ಆ ಮುನಿಗಳನ್ನೂ ಸಹ ಆವರಿಸಿತು. ಅದಾಗ ಶತಬಿಂದುವು ಮಹರ್ಷಿಗಳ್ ಮಾತಿನಂತೆ ತಪಸ್ಸನ್ನು ನಿಲ್ಲಿಸಲು ಆತನ ದೇಹದ ಬೆವರು ಅದರಿಂದುಂಟಾದ ನೀರು ನದಿಯಾಗಿ ಅತಿಯಾದ ವೇಗದಿಂದ ಸುತ್ತಲೂ ಹರಿಯಿತು. ಸಹಸ್ರಬಿಂದುವಿನಿಂದ ಹುಟ್ಟಿದ ನದಿಯು “ಕನಿಷ್ಕೆ” ಎಂದು ವಿಖ್ಯಾತಳಾದಳು.
ಅದೇ ವೇಳೆಯಲ್ಲಿ ಅಗ್ನಿದೇವನು ತಾನು ಪ್ರತ್ಯಕ್ಷನಾಗಿ ಆಮುನಿಗೆ “ನೀನ್ಯಾವ ವರವನ್ನು ಅಪೇಕ್ಷಿಸುವೆ?” ಎಂದು ಕೇಳಲಾಗಿ “ಮಹಾತ್ಮನೇ ನಾನಪೇಕ್ಷಿಸುವ ವರ ಅದು ಲೋಕೋದ್ದಾರಕವಾಗಿರಬೇಕು. ನನ್ನ ದೇಹದಿಂದ ಜನಿಸಿದ ಗಂಗೆಯು ಕಲಿಯುಗದಲ್ಲಿ ಖ್ಯಾತಳಾಗಲಿ. ಗೋಹತ್ಯೆ ಮಾಡಿದವರು, ಕೃತಘ್ನರು, ಗರ್ಭನಾಶವನ್ನು ಮಾಡಿದವರು, ಗುರುಪತ್ನಿ ಸಂಪರ್ಕ ಮಾಡಿದವರು, ಸ್ತ್ರೀ, ಬಾಲ ಘಾತುಕರು ಹೀಗೆ ಯಾವುದೇ ಮಹಾ ಪಾತಕವನ್ನೆಸಗಿದವ್ರೂ ಈ ನದಿಯ ಸ್ನಾನದಿಂದ ಸರ್ವ ಪಾಪವನ್ನು ಕಳೆದುಕೊಳ್ಳಲಿ, ಈ ಬಗೆಯ ವರವನ್ನು ನೀಡಿ ನನ್ನನ್ನು ಉದ್ದರಿಸು.” ಎಂದು ಬೇಡಿದನು. “ಅಂತೆಯೇ ಹೇಮಂತ ಋತುವಿನ ಮಾರ್ಗಶಿರ ಮಾಸದ ಷಷ್ಠಿ ತಿಥಿಯ ಪುಣ್ಯದಿನದಲ್ಲಾಗಲೀ, ಪಂಚಮಿ ಅಥವಾ ಚತುರ್ಥಿಯ ದಿನಗಳಲ್ಲಾಗಲೀ ಈ ನದಿಯಲ್ಲಿ ಮಿಂದವರಿಗೆ ಕುಷ್ಟರೋಗಗಳಿದ್ದಲ್ಲಿ ಅದು ಸಹ ನಿವಾರಣೆಯಾಗಬೇಕು.” ಎಂದು ಪ್ರಾರ್ಥಿಸಿದನು. ಅದಾಗ ಅಗ್ನಿದೇವನು “ಹಾಗೆಯೇ ಆಗಲಿ.” ಎಂದು ಹೇಳಿ ಅದೃಷ್ಯನಾದನು. ಶತಬಿಂದುವು ತಾನು ಎದ್ದು ನಿಂತು ಅಗ್ನಿದೇವನನ್ನು ಸ್ತುತಿಸಿ ಅವನ ಅನುಗ್ರಹದಿಂದ ಇಹ ಸುಖಗಳನ್ನು ಭೋಗಿಸಿ ಸ್ವರ್ಗಕ್ಕೆ ನಡೆದನು. ಹೀಗೆ ಸಹಸ್ರ ಬಿಂದು ಹಾಗೂ ಶತಬಿಂದುಗಳಿಂದ ಹುಟ್ಟಿದ “ಜೇಷ್ಠೆ” ಹಾಗೂ “ಕನಿಷ್ಠೆ” ಗಳೇ ಮುಂದೆ “ಕುಮಾರಧಾರಾ” ಎನ್ನುವ ಹೆಸರಿನೊಂದಿಗೆ ಪ್ರಖ್ಯಾತವಾಗಿ ಶ್ರೀ ಸುಬ್ರಹ್ಮಣ್ಯ್ ದೇವರ ಮುಂದೆ ಪಾಪನಾಶಿನಿಯಾಗಿ ಇಂದಿಗೂ ಶೋಭಿಸುತ್ತಿದೆ.


(ಇನ್ನಷ್ಟು ಪುರಾಣ ಐತಿಹ್ಯಗಳು ಮುಂದಿನ ಸಂಚಿಕೆಯಲ್ಲಿ............) 

No comments:

Post a Comment