Monday, September 15, 2014

ನಮ್ಮಲ್ಲಿನ ಸ್ಥಳ ಪುರಾಣಗಳು(Myths) – 31

ಕುಕ್ಕೆ ಸುಬ್ರಹ್ಮಣ್ಯ (Kukke Subrahmanya)
ಭಾಗ – 2

ಪರಶುರಾಮ ಕ್ಷೇತ್ರವೆಂದು ಪ್ರಸಿದ್ದವಾದ ಕರ್ನಾಟಕ ಕರಾವಳಿ ಭಾಗದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ಶ್ರೀ ಕ್ಷೇತ್ರವು ನಂಬಿದ ಭಕ್ತರಿಗೆ ಸುಖ ಶಾಂತಿಯನ್ನು ಕರುಣಿಸುತ್ತಿರುವ ಪರಮ ಪಾವನ ಕ್ಷೇತ್ರವಾಗಿದೆ. ಪ್ರಾಚೀನ ಐತಿಹ್ಯಗಳನ್ನು, ಪೌರಾಣಿಕ ಹಿನ್ನೆಲೆಗಳನ್ನೂ ಹೊಂದಿರುವ ಶ್ರೀ ಕ್ಷೇತ್ರದ ಇನ್ನಷ್ಟು ಪುರಾಣ ಹಿನ್ನೆಲೆಯನ್ನು ನಾವೀಗ ತಿಳಿದುಕೊಳ್ಳೋಣ....

***
ಒಂದು ಕಾಲದಲ್ಲಿ ಕೇರಳ ದೇಶದಲ್ಲಿ ಭೀಕರ ಕ್ಷಾಮವು ಹುಟ್ಟಿತು. ಅದಾಗ ಅಲ್ಲಿನ ರಾಜನಾಗಿದ್ದ ಸುಬಾಹು ಎನ್ನುವವನು ತತ್ವಜ್ಞಾನ ಹಾಗೂ ನಿಶ್ಚಲ ಮನಸ್ಸುಳ್ಳ, ನಿಶ್ಚಲ ಬುದ್ದಿಯನ್ನು ಹೊಂದಿದ ಯಾರು ಮಹಾಪುರುಷರಿದ್ದಾರೆಯೋ ಅವರನ್ನು ಇಲ್ಲಿಗೆ ಕರೆದು ತಂದು ನೆಲೆಸಲು ಹೇಳುವೆನು, ಅದರಿಂದಾಗಿ ನಾಡಿಗೆ ಬಂದಕ್ಷಾಮ ಪೀಡೆಯು ತೊಲಗುವುದೆಂದು ಆಲೋಚಿಸಿದನು. ಅದಾಗ ಆ ನಾಡಿನಲ್ಲಿದ್ದ ಓರ್ವ ಬ್ರಾಹ್ಮಣನು “ಮಹಾರಾಜನೇ, ನೀನು ಹೇಳಿದ ಸಕಲ ಗುಣಗಳಿರುವ ಯೋಗಿಯೂ ತಪಸ್ವಿಗಳೂ ಆದ ಋಷ್ಯಶೃಂಗ ಮಹರ್ಷಿಗಳು ತುಂಗಭದ್ರಾ ನದಿದಂಡೆಯಲ್ಲಿರುವ ಮಾರ್ಕಾಂಡೇಯ ಕ್ಷೇತ್ರದಲ್ಲಿ ನೆಲೆಸಿದ್ದಾರೆ.” ಎನ್ನಲು ಮಹಾರಾಜನು ತಾನು ಋಷ್ಯಶೃಂಗರ ಆಶ್ರಮಕ್ಕೆ ತೆರಳಿ ವ್ರತನಿಷ್ಠರಾಗಿದ್ದ ಮುನಿಗಳನ್ನು ಸ್ತುತಿಸಿ “ಮುನಿವರ್ಯರೇ, ನಮ್ಮ ನಾಡಿನಲ್ಲಿ ಭೀಕರ ಬರಗಾಲದಿಂದಾಗಿ ಜನರು ತತ್ತರಿಸಿದ್ದಾರೆ, ತಾವುಗಳು ನಮ್ಮ ನಾಡಿಗೆ ದಯಮಾಡಿ ನಮ್ಮನ್ನು ಕ್ಷಾಮಬಾಧೆಯಿಂದ ಉದ್ದರಿಸಬೇಕು.” ಎಂದು ಬೇಡಲು ಋಷ್ಯಶೃಂಗರು ಸಂತೋಷದಿಂದೊಪ್ಪಿ ಸುಬಾಹುವಿನ ರಾಜ್ಯಕ್ಕೆ ಬಂದು ಅಲ್ಲಿನ ಪೂರ್ವ ಭಾಗದ ಸಸ್ಯಪರ್ವತದ ಸರೋವರದ ಬಳಿಯಲ್ಲಿ ನಿಂತು ಆ ನಾಡಿನ ಸುಖ ಸಮೃದ್ದಿಗಾಗಿ ಅನೇಕ ಯುಗಗಳ ಕಾಲ ತಪವನ್ನು ಆಚರಿಸಿದರು. ಇದರಿಂದಾಗಿ ಆ ಪರ್ವತ ಶಿಖರವು “ಋಷ್ಯಶೃಂಗ ಪರ್ವತ” ಎನಿಸಿಕೊಂಡಿತು.
ಮುಂದಿನ ಅನೇಕ ವರುಷಗಳಾ ಬಳಿಕ ಈ ಒಂದು ಋಷ್ಯಶೃಂಗ ಪರ್ವತದ ಮಹಿಮೆಯನ್ನರಿತ ಸುಬ್ರಹ್ಮಣ್ಯ ಸ್ವಾಮಿಯು ತಾನು ಕುಮಾರ ಸ್ವರೂಪದಲ್ಲಿ ಈ ಸ್ಥಳದಲ್ಲಿಯೇ ನಿಂತು ದೀರ್ಘವಾದ, ಕಠೋರವಾದ ತಪಸ್ಸನ್ನಾಚರಿಸುತ್ತಾನೆ. ಸ್ಕಂದ ಸ್ವಾಮಿಯ ತಪಸ್ಸಿಗೆ ಮೆಚ್ಚಿದ ರುದ್ರದೇವರು ಪ್ರತ್ಯಕ್ಷನಾಗಿ ನಿನಗೇನು ವರವು ಬೇಕೆನ್ನಲು “ಇಲ್ಲಿ ನಿತ್ಯವೂ ಅನ್ನದಾನ ಸೇವೆಯು ನಡೆಯುವಂತಾಗಲಿ.” ಎಂದು ಕೇಳಿಕೊಳ್ಳುತ್ತಾನೆ. ದರಂತೆ ಅಂದಿನಿಂದಲೂ ಈ ಪರ್ವತ ಸೀಮೆಗೆ “ಕುಮಾರ ಪರ್ವತ” ಎನ್ನುವ ಹೆಸರು ಬಂದಿರುತ್ತದೆ.

***
ತೌಳವ ದೇಶದಲ್ಲಿದ್ದ ದೇವಜ್ಞ ಬ್ರಾಹ್ಮಣ ನೋರ್ವನು ತಾನು ಕುಷ್ಟ ರೋಗದಿಂದ ಬಾಧೆಪಡುತ್ತಿರಲು ಅನೇಕ ಬಗೆಯ ಔಷಧೋಪಚಾರಗಳಿಂದಲೂ ಆ ರೋಗವು ಗುಣಮುಖವಾಗಲಿಲ್ಲ. ಅದಾಗ ಮಾರ್ಗಶಿರ ಮಾಸದ ಆದಿಭಾಗದಲ್ಲಿ ಆ ಬ್ರಾಹ್ಮಣನು ಕೇರಳ ದೇಶಕ್ಕೆ ಬರಲು ಅಲ್ಲಿನ ಬ್ರಾಹ್ಮಣರು ತಾವು ಸುಬ್ರಹ್ಮಣ್ಯಕ್ಕೆ ಹೊರಟುದನ್ನು ತಿಳಿದು ಅಲ್ಲಿನ ವಿಶೇಷತೆಗಳನ್ನು ಅರಿತವನಾಗಿ ತಾನೂ ಅವರೊಡನೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಂದನು. ಬ್ರಾಹ್ಮಣನು ತಾನು ಶ್ರೀ ಸ್ವಾಮಿಯ ದರ್ಶನವನ್ನು ಮಾಡಿದುದಲ್ಲದೆ ಅವನನ್ನು ನಾನಾ ವಿಧದಲ್ಲಿ ಸ್ತುತಿಸಲು ಸ್ವಾಮಿಯು ಪ್ರಸನ್ನನಾಗಿ “ಎಲೈ ವ್ರತನಿಷ್ಠನಾದ ಬ್ರಾಹ್ಮಣಾನೇ ನಿನಗೇನು ವರಬೇಕೆಂದು ಕೇಳು. ಒಂದು ವರ್ಷದ ಕಾಲ ಇಲ್ಲಿಯೇ ವಾಸಮಾಡು, ವರ್ಷಾಂತ್ಯದಲ್ಲಿ ನಿನ್ನ ರೋಗಬಾಧೆಯನ್ನು ಗುಣಪಡಿಸುವೆನು” ಎನ್ನುತ್ತಾನೆ. ಅದಾಗ ಆ ನುಡಿಗಳಾಂತೆಯೇ ವರ್ಷಪೂರ್ತಿ ಸುಬ್ರಹ್ಮಣ್ಯದಲಿಯೇ ನೆಲೆಸಿದ ಆ ಬ್ರಾಹ್ಮಣಾನು ಕೊಂಚವೂ ಆಲಸ್ಯವಿಲ್ಲದೆ ನಿತ್ಯವೂ ಸ್ವಾಮಿಯ ಸೇವೆಯನ್ನು ಶ್ರದ್ದಾಪೂರ್ವಕವಾಗಿ ಮಾಡುತ್ತಾಬರಲು ವರ್ಷಾಂತ್ಯದ ವೇಳೆಗೆ ಅವನ ದೇಹದಲ್ಲಿದ್ದ ಕುಷ್ಟದ ಹುಣ್ಣುಗಳೆಲ್ಲವೂ ಕಳೆಯಿತು. ಆದರ ಬಳಿಕದ ದಿವ್ಯ ದೇಹರೂಪಿಯಾದ ಬ್ರಾಹ್ಮಣನು ಪುನಃ ತನ್ನ ಸ್ವಂತ ನಾಡಾದ ತೌಳವ ದೇಶಕ್ಕೆ ಮರಳಿ ಅಲ್ಲಿನ ಜನರಿಂದ ಸನ್ಮಾನಿತಗೊಂಡು ಸುಖದಿಂದಿದ್ದನು.
ಇತ್ತ ತೌಳವ ದೇಶದ ಬ್ರಾಹ್ಮಣ ಸಮಾಜದಲ್ಲೆಲ್ಲಾ ಆ ದೇವಜ್ಞ ಬ್ರಾಹ್ಮಣನಿಗೆ ಕುಷ್ಟರೋಗ ನಿವಾರಣೆಯಾದ ಕಥೆಯು ಕಾಳ್ಗಿಚ್ಚಿನಂತೆ ಹರಡಿತಲ್ಲದೆ ಮಿಕ್ಕ ಸಮಾಜ ಬಾಂಧವರೆಲ್ಲರೂ ತಾವುಗಳು ತಮ್ಮ ತಮ್ಮ ಪಾಪ ಪ್ರಾಯಶ್ಚಿತ್ತಕ್ಕಾಗಿ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ದಯಮಾಡಿಸಲಾರಂಭಿಸಿದರು. ಅದಾಗ ಮೂಲದಲ್ಲಿ ಅಲ್ಲಿಯೇ ನೆಲೆಸಿದ್ದ ಬ್ರಾಹ್ಮಣರಿಗೆ ‘೦ತಮ್ಮ ಅತಿಥಿಗಳ ಹೊಟ್ಟೆ ತುಂಬುವಷ್ಟು ಅನ್ನದಾನವನ್ನು ಒದಗಿಸುವುದು ಹೇಗೆ?’ ಎನ್ನುವ ಚಿಂತೆಯು ಕಾಡಲು ತೊಡಗಿದಾಗ ಸ್ವತಃ ಸ್ಕಂದ ಸ್ವಾಮಿಯು ಬ್ರಾಹ್ಮಣ ವೇಶವನ್ನು ಧರಿಸಿ ಬಂದು ಹೀಗೆಂದನು -  “ಬಾಳೆಕಾಯಿಗಳ ರಾಶಿಯನ್ನು ಮೆಟ್ಟುಗತ್ತಿಯಲ್ಲಿ ಪಲ್ಯಕ್ಕಾಗಿ ಹೆಚ್ಚಿ ತಾಮ್ರದ ದೊಡ್ದ ಬಾಂಡದಲ್ಲಿ ಆ ತುಂಡುಗಳಾನ್ನು ಹಾಕಿ ನೀರು ಹೊಯ್ದು, ಕೊಯ್ದ ಭಾಗ ಮೇಲಿರುವ ತುಂಡುಗಳನ್ನೆಣಿಸಿ ಒಂದಕ್ಕೆ ಒಂದು ಸಹಸ್ರವೆಂದು ಲೆಖ್ಖ ಮಾಡಿ ಇಷ್ಟು ಜನರೆಂದು ಊಹಿಸಿ ಅದಕ್ಕೆ ತಕ್ಕಷ್ಟು ಅಕ್ಕಿ ಹಾಕಿ ಅಡುಗೆ ಮಾದಬೇಕು. ಅಷ್ಟು ಅನ್ನಕ್ಕೆ ತಕ್ಕಷ್ಟು ಸಕ್ಕರೆ, ತುಪ್ಪದ ಪಾಕಮಾಡಿ ಅನ್ನದ ರಾಶಿ ಮಾಡಿ ಅದಕ್ಕೆ ಸ್ವಾಮಿಯ ಮಂತ್ರಜಲವನ್ನು ಪ್ರೋಕ್ಷಿಸಿದರೆ ಆ ಅನ್ನವು ನಿಶ್ಚಯವಾಗಿಯೂ ಅಕ್ಷಯವಾಗುತ್ತದೆ. ಅದನ್ನು ಸ್ವಾಮಿಗೆ ನೈವೇದ್ಯ ಮಾಡಿ ಅದರ ಭಾಗದಿಂದ ವೈಶ್ವದೇವಮಾಡಿ ಸಮರ್ಪಿಸಿದ ಅಂಗವನ್ನು ಅನ್ನದ ರಾಶಿಯಲ್ಲಿಡಬೇಕು. ಆಗ ಅದು ವೃದ್ದಿಯಾಗಿ ಎಷ್ಟು ಜನ ಬಂದರೂ ಸಾಕಾಗುವಷ್ಟು ಅನ್ನವಿರುತ್ತದೆ.” ಹೀಗೆ ಅಪ್ಪಣೆ ಇತ್ತ ಸ್ವಾಮಿ ಸುಬ್ರಹ್ಮಣ್ಯನು ಬಳಿಕದಲ್ಲಿ ತಾನು ಸರ್ಪ ರೂಪವನ್ನು ಧರಿಸಿ ಗುಹೆಯನ್ನು ಹೊಕ್ಕು ಅಂತರ್ಧಾನನಾದನು.

***
ಲವಣ ಸಮುದ್ರ ಬಳಿಯಲ್ಲಿನ ದೇಶದಲ್ಲಿಯ ಒಬ್ಬ ವೈಶ್ಯನು ವ್ಯಾಪಾರದಿಂದ ಧನವಂತನಾಗಿ ವಜ್ರ ವೈಢೂರ್ಯ ಮೊದಲಾದ ಮುಂತಾದ ರತ್ನಗಳನ್ನೂ, ಚಿನ್ನ ಬೆಳ್ಳಿಯೇ ಮೊದಲಾದ ಲೋಹಗಳನ್ನು ವಾಹನದಲಿ ಹೊರಿಸಿಕೊಂಡು ಶ್ರೇಷ್ಠವಾದ ಪಟ್ತಣಕ್ಕೆ ತೆರಳಿ ಅಲ್ಲಿ ಅವುಗಳನ್ನು ಮಾರಾಟ ಮಾಡಿ ದ್ರವ್ಯವನ್ನು ಪಡೆದು ಅಲ್ಲಿಂದ ಬೇಗನೆ ತನ್ನ ದೇಶಕ್ಕೆ ಬರಲು ಹೊರಟನು. ಅಷ್ಟರಲ್ಲಿಯೇ ಅಲ್ಲಿ ಬಂದ ಯತಿಗಳೋರ್ವರನ್ನು ವಂದಿಸಿ “ಸ್ವಾಮಿ ನನಗೆ ಸಂತಾನವಿಲ್ಲ, ದಯಮಾಡಿ ತಮ್ಮ ಆಶೀರ್ವಾದವನ್ನು ಬೇಡಿಕೊಳ್ಳುತ್ತೇನೆ.” ಎಂದು ಪ್ರಾರ್ಥಿಸಿದುದಲ್ಲದೆ “ನಾನು ನನ್ನ ದೇಶ್ಕ್ಕೆ ಹೊರಡುತ್ತಿದ್ದೇನೆ, ತಾವುಗಳು ಯಾವ ಕಡೆಗೆ ಹೊರಟಿರುವುದು?” ಎಂದು ಕೇಳಲಾಗಿ ಯತಿಗಳು “ನಾನು ಕುಮಾರ ಪರ್ವತಕ್ಕಾಗಿ ಹೊರಟಿದ್ದೇನೆ, ಅಲ್ಲಿಯ ಸುಬ್ರಹ್ಮಣ್ಯನನ್ನು ಸಂದರ್ಶಿಸಲಿಕ್ಕಾಗಿ ಹೋಗುತ್ತಿದ್ದೇನೆ.” ಎನ್ನಲಾಗಿ ಅದರಿಂದ ಕುತೂಹಲಗೊಂಡ ಆ ವೈಶ್ಯೋತ್ತಮನು “ಸುಬ್ರಹ್ಮಣ್ಯ ಕ್ಷೇತ್ರದ ಮಹಿಮೆಯನ್ನು ತಿಳಿಸಿಕೊಡಬೇಕೆಂದು ಕೇಳಿದನು. ಅವನಿಚ್ಚೆಯತೆಯೇ ಸ್ವಾಮಿಯ, ಹಾಗೂ ಕ್ಷೇತ್ರದ ಮಹಿಮೆಯನ್ನು ಯತಿಗಳು ತಿಳಿಸಲಾಗಿ ವೌಶ್ಯೋತ್ತಮನು ತಾನೂ ಸಹ ಕ್ಷೇತ್ರಕ್ಕೆ ದಯಮಾಡಿಸಿ ಅಲ್ಲಿನ ಕುಮಾರಧಾರೆಯಲ್ಲಿ ಮಿಂದು ಶ್ರೀ ಸ್ವಾಮಿಯ ದರ್ಶನವನ್ನು ಮಾಡಿ ಸೇವೆಗೈದನು. ಈ ಕಾರಣದಿಂದಾಗಿ ಪ್ರಸನ್ನನಾದ ಸ್ವಾಮಿಯು ಆ ವೈಶ್ಯ ವರ್ತಕನಿಗೆ ಶ್ರೇಷ್ಠ ಸಂತಾನಗಳನ್ನು ಅನುಗ್ರಹಿಸಿದನು. ಮತ್ತೆ ಆ ಜನ್ಮದಲ್ಲಿ ಎಲ್ಲಾ ಬಗೆಯ ಐಹಿಕ ಭೋಗಗಳಾನ್ನನುಭವಿಸಿ ಜನ್ಮಾಂತರದಲ್ಲಿ ಸಾರ್ವಭೌಮನಾಗಿ ಹುಟ್ಟಿ ರುದ್ರದೇವರ ಸಂದನು.
 
Sri Kukke Subrahmanya Swami, Kukke Subrahmanya, Dakshina Kannada, Karnataka
***
ಕೃತಯುಗದಲ್ಲಿ ತೌಳವ ದೇಶದಲ್ಲಿನ ಕೇಶವಸ್ವಾಮಿ ಎಂಬತಕ್ಕ ಬ್ರಾಹ್ಮಣಾನು ಕೃಷಿ ಮಾಡುತ್ತಾ, ವಿದ್ವಾಂಸನೂ, ಧನವಂತನೂ, ಧರ್ಮಿಷ್ಠನೂ ಆಗಿದ್ದನು. ಈತನು ತಾನು ಸುಬ್ರಹ್ಮಣ್ಯ ಸ್ವಾಮಿಯಲ್ಲಿ ದೃಢವಾದ ಭಕ್ತಿಯನ್ನು ಹೊಂದಿ ಪ್ರತಿಯೊಂದು ಶುಕ್ಲಪಕ್ಷದ ಸೃಷ್ಟಿಯಂದು ಶ್ರದ್ದಾ ಭಕ್ತಿಯಿಂದ ಸ್ವಾಮಿಯ ಕೈಕರ್ಯವನ್ನು ಮಾಡುತ್ತಾ ಮೂವತ್ತು ವರ್ಷಗಳನ್ನು ಕಳೆದನು. ಈ ಪ್ರಕಾರವಾಗಿ ವ್ರತವನ್ನಾಚರಿಸಲು ಪ್ರಸನ್ನನಾದ ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ಕೇಶವಸ್ವಾಮಿಗೆ ಕಾಣಿಸಿಕೊಳ್ಳಲು ಕೇಶವನು “ನೀನೆಲ್ಲಿ ಜನ್ಮವೆತ್ತಿದೆ? ಎಲ್ಲಿಂದ ಬಂದೆ?” ಎಂದು ಕೇಳುತ್ತಾನೆ. ಅದಕ್ಕೆ ಉತ್ತರವಾಗಿ ಸ್ಕಂದನು “ ನಾನು ಅಗ್ನಿಯ ಪುತ್ರ, ನಾನು ಕ್ರೌಂಚಧಾರಣನೆಂಬ ಹೆಸರುಳ್ಳವನು. ಎಲೈ ಬ್ರಾಹ್ಮಣಾನೇ ನನ್ನ ಮಾತುಗಳನ್ನು ಕೇಳು, ಕರ್ಮಕಾಂದದ ಪ್ರಕಾರ ನಡೆವ ನಿನಗೆ ಜ್ಞಾನಮಾರ್ಗವನ್ನು ತೋರುವೆನು. ಜ್ಞಾನದಿಂದ ಮೋಕ್ಷವು ಲಭಿಸುವುದು, ಅದು ಸರ್ವಫಲಗಳಿಗೂ ಮಿಗಿಲಾದುದು. ಆದುದರಿಂದ ಪುಂದರೀಕಾಕ್ಷನನ್ನು ಚೆನ್ನಾಗಿ ಸೇವಿಸಿ ಮೋಕ್ಷಮಾರ್ಗವನ್ನು ಸೇರು.” ಎಂದು ಸ್ವಾಮಿಯು ಅಲ್ಲಿಯೇ ಅದೃಷ್ಯನಾದನು. ಮುಂದೆ ಕೇಶವಸ್ವಾಮಿಯು ಸುಬ್ರಹ್ಮಣ್ಯ ಸ್ವಾಮಿಯ ಉಪದೇಶದಂತೆಯೇ ತ್ರಿಕಾಲಗಳಲ್ಲಿ ಶ್ರೀ ಹರಿಯನ್ನು ಧ್ಯಾನಿಸಿ ಮೋಕ್ಷವನ್ನು ಹೊಂದಿದನು.

***
ಸೌದವನೆಂಬ ಶೂದ್ರನು ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಉದ್ಯಾನವೊಂದನ್ನು ರಚಿಸಿಕೊಂಡು ವಾಸಿಸುತ್ತಿದ್ದನು. ಅಲ್ಲಿ ಬೂದುಗುಂಬಳವನ್ನು ಬೆಳೆಸಿ ಸುಬ್ರಹ್ಮಣ್ಯ ಯಾತ್ರೆಗೆ ಬಂದ ಭಕ್ತರಿಗೆ ಅದನ್ನು ಮಾರಲಿಕ್ಕಾಗಿ ಬಂಡಿಗಳಾಲ್ಲಿ ಹೇರಿಕೊಂಡು ಹಾಗೆ ಮಾರಿದ ಹಣವನ್ನು ಗಳಿಸುವುದರೊಡನೆ ಸುಬ್ರಹ್ಮಣ್ಯ ಸ್ವಾಮಿಗೆ ಕೈಜೋಡಿಸಿ ಪ್ರಾರ್ಥಿಸಿದನು “ಸುಬ್ರಹ್ಮಣ್ಯನೇ ನನಗೆ ಪುತ್ರನನ್ನು ಕರುಣಿಸು, ನೀನನಗೆ ಪುತ್ರನನ್ನು ಕರುಣಿಸಿದ್ದಾದಲ್ಲಿ ಬೆಳ್ಳಿಯ ತೊಟ್ಟಿಲು, ಚಿನ್ನದ ಸರಪಣಿಯಿಂದ ಕಟ್ಟಿ ಒಂದು ಮುಷ್ಟಿ ಚಿನ್ನವನ್ನು ಅದರಲ್ಲಿಟ್ಟು ನಿನಗೊಪ್ಪಿಸುವೆನು.” ಎಂದು ಬೇಡಲು ಕಾಲಕ್ರಮದಲ್ಲಿ ಆತನ ಮಡದಿಯು ಗರ್ಭವತಿಯಾಗಿ ಪುತ್ರ ಸಂತಾನವಾಯಿತು. ಹೀಗಾಗಲು ವೃದ್ದಿ ಸೂಚಕವಾದ ಅಶುಚಿಗಳೆಲ್ಲ ಕಳೆದ ಮೇಲೆ ತಾನು ಹರಕೆ ಕಟ್ಟಿಕೊಂಡಂತೆಯೇ ತೊಟ್ಟಿಲನ್ನು, ಚಿನ್ನವನ್ನೂ ಸ್ವಾಮಿಗೆ ದಾನ ನೀಡಿ ಕಿತಾರ್ಥನಾದನು. ಮುಂದೆ ಆ ಬಾಲಕನೂ ಸಹ ಸುಂದರನೂ, ಗುಣವಂತನೂ, ಸಮೃದ್ದಿವಂತನಾಗಿ ಭೂಲೋಕದ ಸುಖಭೋಗಗಳಾನ್ನೆಲ್ಲ ಅನುಭವಿಸಿ ಮೋಕ್ಷದತ್ತ ಸಾಗಿದನು.

***
ಅನಾದಿ ಕಾಲದಲ್ಲೊಮ್ಮೆ ತೌಳವ ದೇಶದಲ್ಲಿ ಭೀಕರ ಕ್ಷಾಮ ತಲೆದೋರಲು ಅಲ್ಲಿದ್ದ ಮಂದಿಗಳೆಲ್ಲಾ ಆಶ್ರಯವನ್ನು ಬಯಸಿ ಶ್ರೀ ಕ್ಷೇತ್ರ ಸುಬ್ರಹ್ಮಣ್ಯಕ್ಕೆ ಬರಲು ಅವರ ನಡುವೆ ಒಬ್ಬ ಕುರುಡನಾಗಿದ್ದ ಬ್ರಾಹ್ಮಣಾನೂ ಬಂದಿದ್ದನು. ದೇವ ದರ್ಶನಾರ್ಥಿಯಾಗಿ ಬಂದ ಆತನು “ದೇವಶ್ರೇಷ್ಠನೇ ನಿನ್ನ ದಯಾದೃಷ್ಟಿಯಿಂದ ನನ್ನನ್ನು ಕಾಪಾಡು, ನಾನು ಕಣ್ಣಿಲ್ಲದವನಿದ್ದೇನೆ.” ಎಂದು ಭಕ್ತಿಯಿಂದ ಬೇಡಿಕೊಳ್ಳಲಾಗಿ ಆತನಿಗೆ ಸ್ವಾಮಿಯು ಕೃಪೆದೋರಿ ದೃಷ್ಟಿಯನ್ನು ನೀಡಿದನು. ಅದರಿಂದಾಗಿ ಆನಂದಿತನಾದ ಆ ಭಕ್ತನು “ನೀನೇ ಜಗದ ಪತಿಯು... ನಿನ್ನ ಅನುಗ್ರಹದಿಂದ ನಾಣು ದೃಷ್ಟಿಯನ್ನು ಹೊಂದಿದೆನು.... ಪ್ರತಿ ಯುಗದಲ್ಲಿಯೂ ನಿನ್ನ ಸೇವಕನೆಂದು ತಿಳಿಸಲಾಗಿ “ಸುಬ್ರಹ್ಮಣ್ಯ” ಎಂಬ ನಿನ್ನ ನಾಮದೊಡನೆ ಹುಟ್ಟುವೆನು.” ಎಂದು ಪ್ರಾರ್ಥಿಸಿ ತನ್ನ ದೇಶಕ್ಕೆ ವಾಪಾಸಾದನು.

(ಇನ್ನಷ್ಟು ಪುರಾಣ ಐತಿಹ್ಯಗಳು ಮುಂದಿನ ಸಂಚಿಕೆಯಲ್ಲಿ............) 

No comments:

Post a Comment