Saturday, June 28, 2014

ನಮ್ಮಲ್ಲಿನ ಸ್ಥಳ ಪುರಾಣಾಗಳು(Myths) - 26

ಶೃಂಗೇರಿ (Sringeri)

Sri Sharadamba Devi
ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಸರಹದ್ದಿನ ಸಹ್ಯಾದ್ರಿಯ ಮಡಿಲಿನಲಿ ಪ್ರಕೃತಿ ಸೌಂದರ್ಯವು ತಾನೇ ತಾನಾಗಿ ಹರಡಿಕೊಂಡಿರುವ ದಿವ್ಯ ಸುಂದರವಾದ ಪರಿಸರದಲ್ಲಿದೆ ಶೃಂಗೇರಿ. ಕಳೆದ ಸುಮಾರು ೧೨೦೦ ವರ್ಷಗಳ ಹಿಂದೆ ಶ್ರೀ ಆದಿಶಂಕರಾಚಾರ್ಯರು ಈ ಒಂದು ಪ್ರಶಾಂತವಾದ ಪರಿಸರದಲ್ಲಿ ಕಾಶ್ಮೀರ ಪುರವಾಸಿಸಿ, ವಿದ್ಯಾಧಿದೇವತೆಯಾದ ಶ್ರೀ ಶಾರದಾಂಬೆಯನ್ನು ಪ್ರತಿಷ್ಠಾಪನೆ ಮಾಡಿದರು. ಅಲ್ಲದೆ ಹಿಂದೂ ಧರ್ಮ ಪೋಷಣೆಗಾಘಿ ಹಾಗೂ ತಮ್ಮ ಅದ್ವೈತ ತತ್ವ ಸಿದ್ದಾಂತದ ಪ್ರಚಾರಾರ್ಥವಾಗಿ ಶ್ರೀ ದಕ್ಷಿಣಾಮ್ನಾಯ ಶಾರದಾ ಪೀಠವನ್ನು ಸ್ಥಾಪಿಸಿ ತಮ್ಮದೇ ಗುರು ಪರಂಪರೆಯನ್ನು ಹುಟ್ಟುಹಾಕಿದರು.
ಅಂದಿನಿಂದ ಇಂದಿನವರೆವಿಗೂ ಅವರು ಹುಟ್ಟುಹಾಕಿದ ಈ ಗುರು ಪರಂಪರೆಯು ಹಾಗೆಯೇ ಬೆಳೆದು ಬಂದಿದ್ದು ಇಂದಿನ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಶ್ರೀ ಶಂಕರರ ಉದ್ದೇಶವನ್ನು ಸಮರ್ಥವಾಗಿ ನೆರವೇರಿಸುತ್ತಿದ್ದಾರೆ. ಇಂದು ತಾಯಿ ಶಾರದೆಯ ದರುಶನಕ್ಕಾಗಿ, ಜಗದ್ಗುರುಗಳ ಆಶೀರ್ವಾದ ಪಡೆಯುವುದಕ್ಕಾಗಿ ದಿನನಿತ್ಯ್ವೂ ಶೃಂಗೇರಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿದ್ದಾರೆ.

***

ವಿಭಾಂಡಕ ಮುನಿಗಳ ಪುತ್ರರಾದ ಋಷ್ಯಶೃಂಗ ಮುನಿಗಳ ಕಥೆಯು ರೋಚಕವಾದುದು. ವಿಭಾಂಡಕರಿಗೆ ಹುಟ್ಟಿದ ಮಗುವಿಗೆ ಹುಟ್ಟಿದಾಗಲೇ ಶಿರದ ಮೇಲೆ ಮೃಗ ಲಾಂಛನವಾದ ಶೃಂಗಿ(ಕೋಡು) ಇದ್ದ ಕಾರಣಾವಾಗಿ ‘ಋಷ್ಯಶೃಂಗ’ ಎನ್ನುವ ಹೆಸರು ಬಂದಿತು. ತಂದೆಯ ಆರೈಕೆಯಲ್ಲಿಯೇ ಬೆಳೆದು ವಿದ್ಯಾಭ್ಯಾಸಗಳನ್ನು ಪೂರೈಸಿ ತಾರುಣ್ಯಕ್ಕೆ ಕಾಲಿಟ್ಟ ಋಷ್ಯಶೃಂಗರಿಗೆ ಲೌಕಿಕ ಜಗತ್ತಿನ ಪರಿಚಯವೇ ಇರುವುದಿಲ್ಲ. ಸದಾ ಧ್ಯಾನ ತಪಸ್ಸುಗಳಾಲ್ಲಿ ಮಗ್ನರಾಗಿರುತ್ತಿದ್ದ ಋಷ್ಯಶೃಂಗರು ಮಹಾ ಮಹಿಮಾನ್ವಿತರಾಗಿದ್ದವರು.
ಇಂತಹಾ ಸಮಯದಲ್ಲಿ ಅಂಗ ದೇಶದಲ್ಲಿ ಭೀಕರವಾದ ಕ್ಷಾಮವು ತಲೆದೋರಿತು. ಆಗ ಅಲ್ಲಿನ ದೊರೆ ರೋಮಪಾದನು ತಾನು ಗುರು ಹಿರಿಯರೊಡನೆ ಸಮಾಲೋಚಿಸಿ ಋಷ್ಯಶೃಂಗರನ್ನು ತನ್ನ ರಾಜ್ಯಕ್ಕೆ ಬರಮಾಡಿಕೊಳ್ಳುತ್ತಾನೆ. ಮುನಿಗಳ ಆಗಮನ ಮಾತ್ರದಿಂದಲೇ ಅಂಗ ರಾಜ್ಯದಲ್ಲಿ ಸುಖ ಸಮೃದ್ದಿಗಳು ನೆಲೆಸುತ್ತವೆ.
Sri Sharadamba Temple, Sringeri
ಅಲ್ಲಿಂದ ಮುಂದೆ ಅಯೋಧ್ಯೆಗೆ ತೆರಳಿದ ಋಷ್ಯಶೃಂಗರು ಅಲ್ಲಿ ವಸಿಷ್ಟ, ವಾಮದೇವ ಇವರೇ ಮೊದಲಾದವರ ಸಮಕ್ಷಮದಲ್ಲಿ ದಶರಥನಿಗೆ ಸಂತಾನ ಪ್ರಾಪ್ತಿಗಾಗಿ ಪುತ್ರಕಾಮೇಷ್ಠಿ ಯಾಗವನ್ನು ಮಾಡಿಸುತ್ತಾರೆ. ಅದಾದ ಬಳಿಕ ಪುನಃ ಅಂಗದೇಶಕ್ಕೆ ಮರಳಿ ಬಂದ ಋಷ್ಯಶೃಂಗರಿಗೆ ಅಲ್ಲಿನ ರಾಜನಾದ ರೋಮಪಾದನು ತನ್ನ ಮಗಳನ್ನು ಕೊಟ್ಟು ವಿವಾಹವನ್ನು ನೆರವೇರಿಸುತ್ತಾನೆ. ಅದಾದ ಕೆಲ ಕಾಲಗಳ ಬಳಿಕ ಪುನಃ ತಮ್ಮ ಸ್ವಸ್ಥಾನಕ್ಕೆ ಹಿಂತಿರುಗಿದ ಮುನಿಗಳು ಈಗಿನ ಶೃಂಗೇರಿಗೆ ಆರು ಮೈಲಿಗಳ ದೂರದಲ್ಲಿರುವ ಕೀಳ್ಗಾ ಇಲ್ಲವೇ ಕಿಗ್ಗಾ ಎನ್ನುವಲ್ಲಿ  ಆಶ್ರಮವನ್ನು ಸ್ಥಾಪಿಸಿಕೊಂಡು ತಪಸ್ಸಿನಲ್ಲಿ ನಿರತರಾಗುತ್ತಾರೆ.
ತಂದೆ ವಿಭಾಂದಕ ಮುನಿಗಳು ತಾವು ಶೃಂಗೇರಿಯ ಮದ್ಯದಲ್ಲಿರುವ ಶ್ರೀ ಮಲಹಾನಿಕೇಶ್ವರ(ಮಲ್ಲಿಕಾರ್ಜುನ ಸ್ವಾಮಿ) ಬೆಟ್ತದಲ್ಲಿನ ಶಿವಲಿಂಗದ ಸಮೀಪ ಆಶ್ರಮ ಕಟ್ಟಿಕೊಂಡು ತಪಸ್ಸನ್ನಾಚರಿಸುತಲಿದ್ದು ಅಂತ್ಯದಲಿ ಅದೇ ಶಿವಲಿಂಗದಲ್ಲಿ ಐಕ್ಯ ಹೊಂದುತ್ತಾರೆ. ಇತ್ತ ಮಗನಾದ ಋಷ್ಯಶೃಂಗರು ತಾವು ತಪೋನಿರತರಾಗಿದ್ದ ಕಿಗ್ಗಾ ಆಶ್ರಮದಲ್ಲಿಯೇ ಶಿವಲಿಂಗ ಸ್ವರೂಪವನ್ನು ತಾಳುತ್ತಾರೆ.
ಈ ಋಷ್ಯಶೃಂಗ ಮುನಿಗಳಿಂದಾಗಿಯೇ ಈ ಪ್ರದೇಶಕ್ಕೆ ‘ಋಷ್ಯಶೃಂಗಪುರ’ / ‘ಶೃಂಗಗಿರಿ’ ಎಂಬ ಹೆಸರು ಬಂದಿದ್ದು ಕಾಲಕ್ರಮೇಣ ಜನರ ಬಾಯಿಗೆ ಸಿಕ್ಕು ಅದುವೇ ‘ಶೃಂಗೇರಿ’ ಆಗಿದೆ.

 

Saturday, June 21, 2014

‘ಶಿಕಾರಿ’ : ಮನುಷ್ಯ ಮನುಷ್ಯರನ್ನು ಬೇಟೆಯಾಡುವ ಕತೆ

“ನನ್ನ ಮಟ್ಟಿಗೆ ಇನ್ನೂ ಕಂಡಿರದ ಅಣ್ಣನನ್ನೂ, ಕಾಣೆಯಾದ ತಂಗಿಯನ್ನೂ, ಹುಡುಕಿ ತೆಗೆಯುವುದೇ ನನ್ನ ಇಂದು ಮುಂದಿನ ಆಯುಷ್ಯದ ಗುರಿಯಾಗಬೇಕು.”
- ನಾಗಪ್ಪ

Yashavantha Chittala's Novel 'Shikari' - Cover Page


ಹೇಳದೆ ಕೇಳದೆ ಎಂಬಂತೆ ಉದ್ಭವಿಸಿ ಧುತ್ ಎಂದು ಕಣ್ಣೆದುರಿಗೆ ಹಾಜರಾದ ಪರಿಸ್ಥಿತಿಯ ಅರ್ಥ ನಿಚ್ಚಳವಾಗುತ್ತಾ ಹೋದಹಾಗೆ ನಾಗಪ್ಪನಿಗೆ ತಾನು ಬಹಳ ವರ್ಷಗಳ ಹಿಂದೆ ಓದಿದ ಕಾಫ್ತಾನ ‘ತ್ರಾಯಲ್’ಕಾದಂಬರಿಯ ನಾಯಕ ‘ಕೆ’ ನೆನಪಿಗೆ ಬರಹತ್ತಿದ.; ಅವನ ಹಾಗೆ ನನ್ನ ಬಗೆಗೂ ಯಾರೋ ಚಾಡಿ ಹೇಳುತ್ತಿರಬೇಕು. ಇಲ್ಲವಾದರೆ ಇದ್ದಕ್ಕಿದ್ದಂತೆ ನಿನ್ನೆ ಬೆಳೆಗ್ಗೆ ಆಫೀಸಿಗೆ ಹೋಗುವ ತಯಾರಿ ಮಾಡುತ್ತಿದ್ದ ಹೊತ್ತಿನಲ್ಲೇ ಕಂಪನಿಯ ಪರ್ಸೋನಲ್ ಆಂಡ್ ಅದ್ಮಿನಿಸ್ಟ್ರೇಟರ ಮ್ಯಾನೇಜರರಿಂದ ಆ ದುಷ್ಟ ಆದೇಶ ಬರುತ್ತಿರಲಿಲ್ಲವೇನೋ ಎಂದೆನ್ನಿಸಿದಾಗ ಸಣ್ಣಗೆ ನಡುಗಿದ; ಒಂದು ಗಂಭೀರ ಆಪಾದನೆಯ ಕಾರಣದಿಂದ  ನಿನ್ನನ್ನು ಕೋಡಾಲೇ ಕೆಲಸದಿಂದ ಸಸ್ಪೆಂಡ್ ಮಾಡಬೇಕಾಗಿ ಬಂದಿದೆ. ಯಾಕೆ ಎನ್ನುವುದು ಆದಷ್ಟು ಬೇಗ ತಿಳಿಸುತ್ತೇವೆ. ಆ ವರೆಗೆ ಆಫಿಸಿಗೆ ಬರಕೂಡದು ಎನ್ನುವುದು ಆದೇಶದ ಮಜಕೂರಾಗಿತ್ತು. ಜತೆಗೆ ಒಂದು ಸಲಹೆ ಕೂಡ; ಆರೋಪ ಸುಳ್ಳಾದ ಪಕ್ಷದಲ್ಲಿ ನಿಮಗೆ ಯಾವುದೇ ರೀತಿಯಿಂದ ಹಾನಿಯಾಗಬಾರದು ಎನ್ನುವ ದೃಷ್ಟಿಯಿಂದ ಕೂಡಲೇ ಒಂದು ತಿಂಗಳ ರಜೆಯ ಬಗ್ಗೆ ಅರ್ಜಿ ಮಾಡುವುದು ಒಳ್ಳೆಯದು.

ಅರ್ಜಿಯನ್ನೇನೋ ಕಳಿಸಿದ್ದ; ಇದ್ದಕ್ಕಿದ್ದಂತೆ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿ ತಾನು ಮನೆಯಲ್ಲಿ ಇರಬೇಕಾಗಿ ಬಂದದ್ದರ ಹಿಂದಿನ ರಹಸ್ಯವನ್ನು ಕಾಪಾಡಿಕೊಳ್ಳುವ ಬೇರೆ ಉಪಾಯ ತಕ್ಷಣ  ಹೊಳೆಯದೆ ಇದ್ದುದರಿಂದ, ಆದರೆ ತನಗೆ ಬೇಡವಾದ ರಜೆಯ ಕಾರಣವಾದದ್ದರ ಬಗ್ಗೆ ಎಷ್ಟೆಲ್ಲಾ ರೀತಿಯಲ್ಲಿ ವಿಚಾರ ಮಾಡಿ ತಲೆ ಕೆಡಿಸಿಕೊಂಡರೂ ಯಾವುದೂ ಬಗೆಹರಿಯಲಿಲ್ಲ. ಈ ವಿಪತ್ತು ಎರಗಿದ್ದು ನನ್ನ ಮೇಲೇ ತಾನೆ ಎನ್ನುವುದರ ಬಗ್ಗೆ ಕೂಡ ಕೂಡಲೇ ವಿಶ್ವಾಸ ಮೂಡಲಿಲ್ಲ. ಯಾಕೆಂದರೆ ಇನ್ನು ಒಂದೆರಡು ತಿಂಗಳಲ್ಲಷ್ಟೇ ಹೆಚ್ಚಿನ ತರಬೇತಿಗಾಗಿ ಅಮೇರಿಕೆಗೆ ಹೋಗುವ ಅವನ ಇಷ್ಟು ವರ್ಷಗಳ ಕನಸು ನಿಜವಾಗುವ ಹವಣಿಕೆಯಲ್ಲಿತ್ತು.  ಅವನು ಸದ್ಯ ಬಹಳಾ ಖುಷಿಯಿಂದ ತೊಡಗಿಸಿಕೊಂಡದ್ದೇ ಈ ಪ್ರಯಾಣದ ಸಿದ್ದತೆಯಲ್ಲಾಗಿತ್ತು. ತನ್ನ ಪ್ರಯಾಣದ ಸಿದ್ದತೆಯೇ ಈ ಆಪತ್ತಿನ ಉದ್ಭವಕ್ಕೆ ಕಾರಣವಾಗಿರಲಿಕ್ಕಿಲ್ಲ ತಾನೆ ಎಂದು ಥಟ್ಟನೆ ಹೊಳೆದ ಒಂದು ವಿಚಾರ ಎಡೆಮಾಡಿಕೊಟ್ತ ಅನುಮಾನ ಹೊತ್ತು ಹೋದ ಹಾಗೆ ಗಟ್ಟಿಯಾಗಹತ್ತಿತು. ಕೊನೆಗೂ ಫಿರೋಜ್ ತನ್ನ ಬಗೆಗಿನ ವೈರವನ್ನು ಬಿಟ್ಟು ಕೊಟ್ಟಿಲ್ಲ. ಹಾಗಾದರೆ ಧೂರ್ತ ರಾಜಕಾರಣಿಯಾದ ಈ ದುಷ್ಟ ಒಂದೂ ಮಗನೇ ಹೂಡಿದ ಒಳಸಂಚಿನ ಅಂಗವಿದು. ಆರೋಪವಾದರೂ ಏನು ಎನ್ನುವುದು ಗೊತ್ತಾದರೆ ಎಲ್ಲವೂ ಸ್ಪಷ್ಟವಾಗಬಹುದಿತ್ತು. ಆದರೆ ಅದು ಗೊತ್ತಾಗಲು  ಪರ್ಸೋನಲ್ ಮ್ಯಾನೇಜರರು ಕಳಿಸುತ್ತೇನೆಂದ ಪತ್ರದ ದಾರಿಯನ್ನು ಕಾಯುವುದು ಬಿಟ್ಟು ಬೇರೆ ಗತಿಯಿರಲಿಲ್ಲ. ಆದರೆ ಕಾಯುವುದೇ ಅಸಾಧ್ಯವಾದಾಗ ನಾಗಪ್ಪನಿಗೆ ಯಾವುದೋ ಸೈಕಾಲಜಿ ಪುಸ್ತಕದಲ್ಲಿ ಓದಿದ್ದು ನೆನಪಾಗ ಹತ್ತಿತು;  One of the gratest problems of the humen mind is the structuring of Time.

***

ಇದು ಕನ್ನಡದ ಖ್ಯಾತ ಲೇಖಕ ಯಶವಂತ ಚಿತ್ತಾಲರ ‘ಶಿಕಾರಿ’ ಕಾದಂಬರಿಯ ಮೊದಲ ಪುಟ. ನಾನು ಸುಮಾರು ಹತ್ತರಿಂದ ಹನ್ನೆರಡು ವರ್ಷಗಳ ಕೆಳಗೆ ಒಮ್ಮೆ ಈ ಕಾದಂಬರಿಯನ್ನು ಓದಿದ್ದೆ. ಇದೀಗ ಮತ್ತೊಮ್ಮೆ ಆ ಪುಸ್ತಕವನ್ನು ತೆರೆದು ಓದಿದಾಗ ಹೊಸತೇ ಒಂದು ಆಲೋಚನೆ ಮೂಡಿಸುತ್ತದೆ. .ಪಾಶ್ಚಾತ್ಯರಲ್ಲಿ ಜನಪ್ರಿಯವಾದ ಮನೋವಿಶ್ಲೇಷಣೆಯ ಒಂದು ನಮೂನೆ ಶಿಕಾರಿಯ ಕಥಾ ಹಂದರದಲ್ಲಿ ಕಾಣಸಿಗುತ್ತದೆ. ಅದೇನೆಂದರೆ ವ್ಯಕ್ತಿಯ ಸದ್ಯದ ಪ್ರವೃತ್ತಿಗಳ ಕಾರಣವನ್ನು ಅವರ ಬಾಲ್ಯದ ಅನುಭವಗಳು ಮತ್ತು ತನ್ಮೂಲಕ ರೂಪಿತವಾದ ಅವರ ವ್ಯಕ್ತಿತ್ವದಲ್ಲಿ ಹುಡುಕುವುದು. ಈ ಕಥೆಯ ನಾಯಕ ನಾಗಪ್ಪ ತಾನು ತಾನು ಬಾಲ್ಯದಲ್ಲಿ ಗಳಿಸಿದ ಅನುಭವಗಳಿಂದ ರೂಪಿಸಿಕೊಂದ ವ್ಯಕ್ತಿತ್ವದಲ್ಲಿ ಸಿಲುಕಿಕೊಂಡು ಅದರಿಂದಾಗಿ ತೀವ್ರ ಹತಾಶೆ, ನೋವಿಗೆ ತುತ್ತಾದವನಾಗಿದ್ದಾನೆ. ತನ್ನ ವೃತ್ತಿ ಜೀವನದಲ್ಲಿ ಎದುರಾದ ಸವಾಲಿನಿಂದಾಗಿ ತನ್ನ ವ್ಯಕ್ತಿತ್ವವನ್ನು ಸ್ವಯಂ ಪರೀಕ್ಷೆಗೆ ಒಡ್ಡಿಕೊಂಡು ಹೊಸದೊಂದು ವ್ಯಕ್ತಿತ್ವವನ್ನು ಪಡೆಯುವುದಕ್ಕೆ ಹೊರಡುವುದು ಇಲ್ಲಿನ ಕಥೆಯ ಮುಖ್ಯ ಸಾರ.

Yashavantha Chittala
ಕನ್ನಡದ ಇನ್ನೊಬ್ಬ ಖ್ಯಾತ ವಿಮರ್ಷಕರಾದ ಡಾ. ಜಿ.ಎಸ್. ಅಮೂರರು ಹೇಳುವಂತೆ - “ಕಾದಂಬರಿಯ ಕೇಂದ್ರ ಪ್ರತಿಮೆ ‘ಬೇಟೆ’. ಇದು ಕಾದಂಬರಿಯ ಉದ್ದಕ್ಕೂ ಅನೇಕ ಸಂದರ್ಭಗಳಾಲ್ಲಿ ಕಾಣಿಸಿಕೊಳ್ಳುತ್ತದೆ…….. ಇಂದಿನ ಔದ್ಯೋಗೀಕೃತ ನಾಗರಿಕತೆಯಲ್ಲಿ ಎಲ್ಲಿಯೂ ನೋಡಸಿಗುವ ಮನುಷ್ಯನಿಂದ ಮನುಷ್ಯನ ಬೇಟೆ.....ಸ್ವಾರ್ಥ, ಸ್ವಹಿತ ರಕ್ಷಣೆಯ ಉದ್ದೇಶದಿಂದ ಒಂದಾದ ಬೇಟೆಗಾರರ ತಂಡವೇ ಅವನ(ನಾಗಪ್ಪ) ಬೆನ್ನು ಹತ್ತುತ್ತದೆ. ಅವನ ಅಸ್ತಿತ್ವದ ಬೇರುಗಳನ್ನೇ ಅಲುಗಾಡಿಸಿ ಅವನ ನಾಶಕ್ಕಾಗಿ ಹೊಂಚು ಹಾಕುತ್ತದೆ. ಇಂತಹಾ ಒಂದು ಸನ್ನಿವೇಶದಲ್ಲಿ ಮನುಷ್ಯನ ಬಾಳಿಗೆ ಅರ್ಥವಿದೆಯೆ? ಇದರಿಂದ ಪಾರಾಗಿ ಬದುಕುವ ಸಾಧ್ಯತೆಗಳಿವೆಯೆ? ಇಂತಹಾ ಸನ್ನಿವೇಶ ಹುಟ್ಟಿತಾದರೂ ಹೇಗೆ? ಇದಕ್ಕೆ ಹೊಣೆಗಾಗರು ಯಾರು? ಎಂಬ ಮೂಲಭೂತ ಪ್ರಶ್ನೆಗಳನ್ನು ಎತ್ತುವ್ವುದರ ಮೂಲಕ ‘ಶಿಕಾರಿ’ ನಮಗೆ ಅತ್ಯಂತ ಪ್ರಸ್ತುತವಾದ ಕೃತಿಯಾಗಿದೆ.”

ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮೂಡಿಬಂದ ಅತ್ಯಂತ ಶ್ರೇಷ್ಟ ಕಾದಂಬರಿಗಳಲ್ಲಿ ಇದೂ ಒಂದು. 1979 ರಲ್ಲಿ ಪ್ರಕಟವಾದ ಈ ಕೃತಿ ಇದುವರೆಗೆ ಒಂಭತ್ತು ಮುದ್ರಣಗಳನ್ನು ಕಂಡಿದೆ. ‘ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ’ ಹಾಗೂ ‘ವರ್ಧಮಾನ ಪ್ರಶಸ್ತಿ’ ಗಳಿಗೆ ಭಾಜನವಾದ ಈ ಕೃತಿಯನ್ನು ಪ್ರಸ್ತುತ ಸಾಹಿತ್ಯ ಭಂಡಾರ, ಬಳೆಪೇಟೆ, ಬೆಂಗಳೂರು ಇವರು ಪ್ರಕಟಿಸಿರುತ್ತಾರೆ. ಕನ್ನಡ ಸಾಹಿತ್ಯಾಭಿಮಾನಿಗಳು ತಾವೆಲ್ಲರೂ ಓದಲೇಬೇಕಾದ ಮಹತ್ವದ ಕೃತಿ ಇದೆನ್ನಲು ಯಾವುದೇ ಅಡ್ಡಿಯಿಲ್ಲ.

ತಾವುಗಳು ಸಹ ಈ ಒಂದು ಬರಹವನ್ನು ಓದಿದ ಬಳಿಕ ಪುಸ್ತಕ ಮಳಿಗೆಯಿಂದ/ಗ್ರಂಥಾಲಯಗಳಿಂದ ಈ ಕಾದಂಬರಿಯನ್ನು ತಂದು ಓದಬೇಕೆನ್ನುವ ಅಭಿಲಾಷೆ ನನ್ನದು.

ನಮಸ್ಕಾರ. 

Wednesday, June 18, 2014

ನಂದೂ ಒಂದು ಪುಸ್ತಕ ಓ(ಮೋ)ದಿ....!

ಇದೇ ಜೂನ್ 16 ನೇ ದಿನಾಂಕದಂದು ನಾನು ಬರೆದ ‘ನರೇಂದ್ರ ದಾಮೋದರದಾಸ್ ಮೋದಿ (ಜೀವನ ಚರಿತ್ರೆ)’ ಯು ವಾಸನ್ ಪಬ್ಲಿಕೇಷನ್ಸ್ ರವರಿಂದ ಪ್ರಕಟಿಸಲ್ಪಟ್ಟು ಇದೀಗ ರಾಜ್ಯಾದ್ಯಂತದ ಎಲ್ಲಾ ಪ್ರಮುಖ ಪುಸ್ತಕದಂಗಡಿಗಳಲ್ಲಿ ಲಭ್ಯವಿದೆ. ಈ ಹಿನ್ನೆಲೆಯಲ್ಲಿ ಪುಸ್ತಕದ ಲೇಖಕನಾದ ನಾನು ನನ್ನದೇ ಪುಸ್ತಕದ ಪರಿಚಯ ಮಾಡಿಕೊಡುವ ಸಣ್ಣ ಪ್ರಯತ್ನವನ್ನಿಲ್ಲಿ ಮಾಡಿದ್ದೇನೆ. ತಾವೆಲ್ಲರೂ ನನ್ನ ಪುಸ್ತಕವನ್ನು ಓದಿ ತಮ್ಮ ಸಲಹೆ ಸೂಚನೆಗಳನ್ನು ನೀಡುತ್ತೀರೆಂದು ನಂಬಿರುತ್ತೇನೆ.

My Book 'Nrendra Damodaradas Modi(Biography)' Cover Page


ಗೆಳೆಯರಿಗೆಲ್ಲಾ ನನ್ನ ನಮಸ್ಕಾರಗಳು,

ನರೇಂದ್ರ ಮೋದಿ ಇಂದು ಭಾರತದ ಪ್ರಧಾನಿಗಳಾಗಿದ್ದಾರೆ. ದೇಶದ ಯುವಜನತೆಯಲ್ಲಿ ಹೊಸದೊಂದು ಭಾರವಸೆಯನ್ನು ಮೂಡಿಸಿದ ಈ ವ್ಯಕ್ತಿ ಇಂದು ದೇಶದ ಆಡಳಿತ ವ್ಯವಸ್ಥೆಯ ಚುಕ್ಕಾಣಿ ಹಿಡಿಯುವ ಮುನ್ನ ಏನಾಗಿದ್ದರು, ಏನೇನು ಕಾರ್ಯಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೆನ್ನುವುದನ್ನು ಇಂದು ಎಲ್ಲರೂ ಬಲ್ಲರು. ನರೇಂದ್ರ ಮೋದಿಯವರ ಜೀವನ ಕುರಿತಂತೆ ಕನ್ನಡ, ಆಂಗ್ಲ ಭಾಷೆಯೂ ಸೇರಿದಂತೆ ದೇಶದ ನಾನಾ ಭಾಷೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪುಸ್ತಕಗಳು ಪ್ರಕಟವಾಗಿವೆ, ಆಗುತ್ತಿವೆ. ಅಲ್ಲದೆ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಈ ದಿನಗಳಲ್ಲಿ ಅಂತರ್ಜಾಲದಲ್ಲಿ ಸಹ ನರೇಂದ್ರ ಮೀದಿಯವರ ಬದುಕಿನ ಬಗ್ಗೆ ಸಾಕಷ್ಟು ಮಾಹಿತಿಗಳು ಲಭ್ಯವಿದೆ. (ಕಳೆದ ತಿಂಗಳಿನಲ್ಲಿ ಗೂಗಲ್ ಸರ್ಚ್ ನಲ್ಲಿ ನರೇಂದ್ರ ಮೋದಿಯವರು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಹುಡುಕಲ್ಪಡುತ್ತಿದ್ದ ವ್ಯಕ್ತಿಯಾಗಿದ್ದರು.)

ಆದರೆ ಸಹ ಇಂದಿಗೂ ನರೇಂದ್ರ ಮೋದಿಯವರ ಕುರಿತಂತೆ ತಿಳಿದುಕೊಳ್ಳುವ ಕುತೂಹಲವಿರುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅದರಲ್ಲಿ ಸಹ ನಮ್ಮ ಮುಂದಿನ ತಲೆಮಾರಿನವರಿಗೆ, ಇದೀಗ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ನಮ್ಮ ಇಂದಿನ ಪ್ರಧಾನಿಗಳ ಕುರಿತಂತೆ ತಿಳಿದುಕೊಳ್ಳುವ ಕುತೂಹಲವಿರುತ್ತದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಗಾಂಧಿ, ನೆಹರೂ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಚರಿತ್ರೆಗಳನ್ನು ಓದಿ ತಿಳಿದುಕೊಂಡಂತೆ ಇಂದಿನ ಯುವ ಮನಸ್ಸುಗಳಿಗೆ ಹತ್ತಿರವಾದ ಕಾರ್ಯ ದಕ್ಷತೆಯ ಮೂಲಕ ಅಭಿವೃದ್ದಿಯ ಮಾರ್ಗದಲ್ಲಿ ದೇಶವನ್ನು ಮುನ್ನಡೆಸಲು ಪಣ ತೊಟ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಜೀವನದ ಬಗೆಗೆ ಮಕ್ಕಳಲ್ಲಿ ಸಾಕಷ್ಟು ಪ್ರಶ್ನೆಗಳಿರುತ್ತವೆ.

ಅಂತಹಾ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ನಾನು ಇದೀಗ ಬರೆದಿರುವ ಪುಸ್ತಕ - ‘ನರೇಂದ್ರ ಮೋದಿ (ಜೀವನ ಚರಿತ್ರೆ}’ ಬಿಡುಗಡೆಯಾಗಿದೆ ಎಂದು ಹೇಳಲು ಸಂತೋಷಿಸುತ್ತೇನೆ.

ಕನ್ನಡ ಹಾಗೂ ಆಂಗ್ಲ ಭಾಷೆಯ ಪ್ರಖ್ಯಾತ ಪ್ರಕಾಶಕರುಗಳಲ್ಲಿ ಒಬ್ಬರಾದ ವಾಸನ್ ಪಬ್ಲಿಕೇಷನ್ಸ್ ರವರು ನನ್ನಿಂದ ಬರೆಸಿದ ನರೇಂದ್ರ ಮೋದಿಯವ 48 ಪುಟಗಳ ಈ ಜೀವನ ಚರಿತ್ರೆ ಪುಸ್ತಕದಲ್ಲಿ ನಾನು ನರೇಂದ್ರ ಮೋದಿಯವರ ಜನನ, ಬಾಲ್ಯದ ಕೆಲ ಪ್ರಮುಖ ಘಟನೆಗಳ್, ಅವರ ವಿದ್ಯಾಭ್ಯಾಸದ ವಿವರಗಳನ್ನು ನೀಡುವುದರೊಡನೆ ಅವರು ತಮ್ಮ ತಾರುಣ್ಯದಲ್ಲಿ ರಾಜಕೀಯದಲ್ಲಿ ಬೆಳೆದು ಬಂದ ರೀತಿ, ಅವರಲ್ಲಿನ ವಿಶೇಷ ವ್ಯಕ್ತಿತ್ವದ ಕುರಿತಾಗಿ ಬರೆದಿರುತ್ತೇನೆ.

My Book 'Nrendra Damodaradas Modi(Biography)' 1st Page

ಮಕ್ಕಳಿಗೆ ಇಷ್ಟವಾಗುವ ಹಾಗೂ ಅನೇಕರಿಗೆ ಬಹುಷಃ ತಿಳಿದಿರದ ಮೋದಿಯವರ ಸಾಮಾಜಿಕ ಕೆಲಸ ಕಾರ್ಯಗಳಲ್ಲಿನ ಕಳಕಳಿಗೆ ಕುರುಹಾಗಿರುವ ‘ಸಂಸ್ಕಾರ ಧಾಮ’ ಶಾಲೆಯ ಕುರಿತಾಗಿಯೂ ವಿಶೇಷ ವಿವರಗಳನ್ನು ನೀಡಿದ್ದೇನೆ. ಗುಜರಾತು ಮುಖ್ಯಮಂತ್ರಿಗಳಾಗಿದ್ದಾಗಿನ ಅವರ ಅಬೀವೃದ್ದಿ ಕೆಲಸಗಳು, ಅವರು ಪ್ರಾರಂಭಿಸಿದ ಹಲವಾರು ಸಂಖ್ಯೆಯ ಉತ್ತಮ ಯೋಜನೆಗಳಿಂದ ಗುಜರಾತು ಇಂದು ಮಾದರಿ ರಾಜ್ಯವಾಗಿರುವ ರೀತಿಯ ವಿವರಣೆ ನೀಡಿದ್ದೇನೆ.

ಹೀಗೆ ನರೇಂದ್ರ ಮೋದಿಯವರ ಬಾಲ್ಯದಿಂದ ಪ್ರಾರಂಭಿಸಿ 26 ಮೇ 2014 ರಂದು ಅವರು ಪ್ರಧಾನಿಗಳಗಿ ಪ್ರಮಾಣಾವಚನ ಸ್ವೀಕರಿಸುವವರೆಗಿನ ಅವರ ಜೀವನ ವಿವರಗಳು ಸಂಕ್ಷೇಪವಾಗಿ, ಮಕ್ಕಳಿಗೆ ಸುಲಭಗ್ರಾಹ್ಯವಾಗುವ ರೀತಿಯಲ್ಲಿ ಇಲ್ಲಿ ನಮೂದಿಸಿದ್ದೇನೆ. ಅಂದಹಾಗೆಯೇ ಮೋದಿಯವರ ರಾಜಕೀಯ ವೃತ್ತಿ ಬದುಕಿನಲ್ಲಿ ನಡೆದಿದ್ದ ಕೆಲ ದುರಂತಗಳು, ಅದರ ಹಿನ್ನೆಲೆಯಲ್ಲಿ ಭುಗಿಲೆದ್ದ ಕೆಲ ವಿವಾದಗಳನ್ನು, ಅವುಗಳಿಗೆ ಸಂಬಂಧಿಸಿದ ವಿವರಗಳನ್ನು ಇಲ್ಲಿ ಕೈಬಿಡಲಾಗಿದೆ. ಇದಕ್ಕೆ ಕಾರಣ, ಇದಕ್ಕೆ ಮೊದಲು ಹೇಳಿದಂತೆ ಇದು ಶಾಲಾ ಮಕ್ಕಳನ್ನು ದೃಷ್ಟಿಯಲ್ಲಿಟ್ಟು ರಚಿಸಲಾದ ಪುಸ್ತಕವಾಗಿರುವುದು. ಮಕ್ಕಳ ಮನಸ್ಸಿನಲ್ಲಿ ಗೊಂದಲಗಳಿಗೆ ಅವಕಾಶ ಮಾಡಿಕೊಡುವ ಇಂತಹಾ ವಿವರಗಳಿಂದ ಏನು ಪ್ರಯೋಜನವಾದೀತು? ಮಕ್ಕಳ ಮನಸ್ಸು ತಿಳಿಯಾಗಿರುವ ಕೊಳದ ನೀರಿನಂತಹುದು. ಅದಕ್ಕಾಗಿಯೇ ಅವರಿಗಿಷ್ಟವಾಗುವ, ಸುಲಲಿತ ಭಾಷೆಯಲ್ಲಿ ನರೇಂದ್ರ ಮೋದಿಯವರ ಜೀವನ ಚಿತ್ರಣವನ್ನು ಬಿಡಿಸಿದ್ದೇನೆ. ಇದು ಮಕ್ಕಳಿಗೂ, ಮಕ್ಕಳ ಪೋಷಕರು ಎಲ್ಲರೂ ಓದಬಹುದಾದ ಕೃತಿಯೆನ್ನುವುದು ನನ್ನ ಅಭಿಮತ.

ಇನ್ನು ಕೊನೆಯದಾಗಿ ನನ್ನ ಮೇಲೆ ವಿಶ್ವಾಸವಿಟ್ಟು ನನ್ನಿಂದ ಈ ಒಂದು ಕೃತಿಯನ್ನು ಬರೆಯಿಸಿದ ವಾಸನ್ ಪಬ್ಲಿಕೇಷನ್ಸ್ ನ ಮುಖ್ಯಸ್ಥರಾದ ಶ್ರೀ ವಾಸನ್ ಶ್ರೀನಿವಾಸರವರಿಗೆ ನಾನು ಆಭಾರಿಯಾಗಿದ್ದೇನೆ.

ಇದೀಗ ತಾನೆ ಹೊಸದಾಗಿ ಬರವಣಿಗೆಯ ಕ್ಷೇತ್ರಕ್ಕೆ ಕಾಲಿರಿಸುತ್ತಿರುವ ನನ್ನಂತಹಾ ಸಾವಿರಾರು ಮಂದಿ ಈ ಕನ್ನಡ ನೆಲದಲ್ಲಿದ್ದಾರೆ. ನನಗೂ, ನನ್ನಂತಹವರೆಲರಿಗೂ ಓದುಗರಾದ ತಮ್ಮಿಂದ ಉತ್ತಮ ಪ್ರೊತ್ಸಾಹ ದೊರಕುತ್ತದೆನ್ನುವುದು ಈ ಹೊತ್ತಿನ ನನ್ನ ಮಹದಭಿಲಾಷೆ. 

“ಪುಸ್ತಕಗಳನ್ನು ಕೊಳ್ಳಿರಿ,
ಪುಸ್ತಕಗಳನ್ನು ಓದಿರಿ,
ಪುಸ್ತಕಗಳನ್ನು ನೀಡಿರಿ.”


ಜೈ ಹಿಂದ್....!

Thursday, June 05, 2014

ನಮ್ಮಲ್ಲಿನ ಸ್ಥಳ ಪುರಾಣಾಗಳು(Myths) - 25


ನನ್ನೆಲ್ಲಾ ಆತ್ಮೀಯ ಗೆಳೆಯರಿಗೆ ನನ್ನ ನಮಸ್ಕಾರಗಳು,

ನಾನು ಈ ಒಂದು ವರ್ಷದ ಆಜುಬಾಜಿನಲ್ಲಿ ಪ್ರಾರಂಭಿಸಿದ ನಮ್ಮಲ್ಲಿನ ಸ್ಥಳ ಪುರಾಣಾಗಳು(Myths) ” ಅಂಕಣವು ಇದೀಗ 25 ನೇ ಅಂಕ ಪೂರೈಸಿದೆ ಎನ್ನುವುದಕ್ಕೆ ನನಗೆ ಬಹಳ ಖುಷಿಯಾಗುತ್ತಿದೆ. ನಿಮ್ಮೆಲ್ಲರ ಪ್ರೊತ್ಸಾಹವು ಹೀಗೆ ಮುಂದುವರಿದಲ್ಲಿ ಈ ಅಂಕಣವು ತನ್ನ 100 ನೇ ಅಂಕವನ್ನು ಸಹ ಯಶಸ್ವಿಯಾಗಿ ಪೂರ್ಣಗೊಳಿಸುತ್ತದೆನ್ನುವುದರಲ್ಲಿ ಸಂದೇಹವಿಲ್ಲ.

ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಪ್ರೀತಿಪೂರ್ವಕ ಧನ್ಯವಾದಗಳನ್ನು ತಿಳಿಸುತ್ತಾ....

ನಿಮ್ಮ ಪ್ರೀತಿಯ 
ರಾಘವೇಂದ್ರ ಅಡಿಗ ಎಚ್ಚೆನ್. 
***
ಕುರುಡುಮಲೆ (Kurudumale)
ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿನ ಮುಳಬಾಗಿಲು ತಾಲೂಕು ಕೇಂದ್ರದಿಂದ ಸುಮಾರು ೧೦ ಕಿ.ಮೀ. ದೂರದಲ್ಲಿರುವ ಶ್ರೀ ಕ್ಷೇತ್ರ ಕುರುಡುಮಲೆ ಅಲ್ಲಿನ ವಿನಾಯಕ ದೇವಾಲಯದಿಂದಾಗಿ ಜಗದ್ವಿಖ್ಯಾತವಾಗಿದೆ. ತ್ರಿಮೂರ್ತಿಗ್ಳು ಸೇರಿ ಸ್ಥಾಪಿಸಿದರೆನ್ನಲಾಗುವ ಈ ಕಾರಣಿಕ ಸ್ಥಳಕ್ಕೆ ದಿನನಿತ್ಯವೂ ಸಾವಿರಾರು ಭಕ್ತರು ಆಗಮಿಸುತ್ತಾರೆ. ಶ್ರೀ ಮಹಾಗಣಾಪತಿಯು ನಿಂತಿರುವ ಶೈಲಿಯಲ್ಲಿನ ಇಲ್ಲಿನ ವಿಗ್ರಹವು ನಹು ಪುರಾತನವೂ ಸುಂದರವೂ ಆಗಿದೆ.

Kurudumale Sri Siddi Vinayaka Swami 

***

ಕೃತಯುಗದಲ್ಲಿ ಲೋಕಕಂಟಕನಾಗಿದ್ದ ತ್ರಿಪುರಾಸುರನನ್ನು ಕೊಲ್ಲಕು ತ್ರಿಮೂರ್ತಿಗಳ ಸಹಿತ ಯಾರಿಂದಲೂ ಅಸಾಧ್ಯವಾಗಲು, ಆಗ ತ್ರಿಮೂರ್ತಿಗಳೂ ಸೇರಿದಂತೆ ಎಲ್ಲಾ ದೇವತೆಗಳೂ ಸೇರಿ ಗಣಪತಿಯನ್ನು ಪ್ರಾರ್ಥಿಸಲು ನಿಶ್ಚಯಿಸಿ ಹಾಗೆಯೇ ಮಾಡಿದರು. ತನ್ನ ಉಪಾಸಕನೇ ಆಗಿದ್ದ ಆ ಅಸುರನನ್ನು ನೇರವಾಗಿ ಸಂಹರಿಸುವುದಕ್ಕೆ ಗಣಪತಿಯ ಕೈಯಿಂದಲೂ ಸಾಧ್ಯವಾಗದೇ ಹೋಯಿತು. ಆಗ ಗಣಪತಿಯು ತನ್ನೊಂದು ದಂತವನ್ನು ಕಿತ್ತು ಇಂದ್ರನಿಗೆ ಕೊಡುವುದರ ಮೂಲಕ ಅದರ ಸಹಾಯದಿಂದ ರಾಕ್ಷಸನನ್ನು ಸಂಹರಿಸಲು ತಿಳಿಸಿದನು. ಅಂದಿನಿಂದ ಗಣಪತಿಯು “ಏಕದಂತ” ಎನ್ನುವ ವಿಶೇಷಣಕ್ಕೆ ಭಾಜನನಾದನು.

Sri Siddi Vinayaka Swami temple, Kurudumale
ಹಾಗೆ ಗಣಪತಿಯ ಅಣತಿಯಂತೆ ತ್ರಿಪುರಾಸುರನನ್ನು ಇಂದ್ರನು ಸಂಹರಿಸಿದ ಬಳಿಕ ಎಲ್ಲಾ ದೇವಾನುದೇವತೆಗಳೂ ಈ ಒಂದು ಗಿರಿಯ ಮೇಲೆ ಕೂಡಿಕೊಂಡು ಸಂಭ್ರಮ ಪಟ್ಟರು. ಹಾಗೆ ದೇವತೆಗಳೆಲ್ಲಾ ಒಂದೆಡೆ ಕೂಡಿದ್ದ ಈ ಸ್ಥಳವೇ “ಕೂಡುಮಲೆ” ಎಂದು ಖ್ಯಾತವಾಯಿತು. ಕಾಲಕ್ರಮೇಣ ಜನರ ಬಾಯಿಗೆ ಸಿಕ್ಕು ಈ “ಕೂಡುಮಲೆ” ಎನ್ನುವುದು “ಕುರುಡುಮಲೆ” ಎಂದು ನಾಮ ಪರಿವರ್ತನೆಯನ್ನು ಹೊಂದಿತು.

ಇದು ಕೌಂಡಿನ್ಯ ಕ್ಷೇತ್ರ.ಕೌಂಡಿನ್ಯ ಮಹರ್ಷಿಗಳು ಇಲ್ಲಿ ತಪವನ್ನಾಚರಿಸಿದ್ದರು ಎಂಬ ಉಲ್ಲೇಖವಿದೆ.  ಕೌಂಡಿನ್ಯ ನದಿ ಇಲ್ಲಿಯೇ ಹುಟ್ಟುವುದು. ಹೀಗಾಗೇ ಇದು ಪವಿತ್ರ ಕ್ಷೇತ್ರವೆಂದು ಪರಿಗಣಿಸಲ್ಪಟ್ಟಿದೆ.

ಕೃತಯುಗದಲ್ಲಿ, ದ್ವಾಪರದಲ್ಲಿ ಇದು `ಗಣೇಶಗಿರಿ' ಎನಿಸಿಕೊಂಡಿತ್ತು.