Saturday, June 28, 2014

ನಮ್ಮಲ್ಲಿನ ಸ್ಥಳ ಪುರಾಣಾಗಳು(Myths) - 26

ಶೃಂಗೇರಿ (Sringeri)

Sri Sharadamba Devi
ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಸರಹದ್ದಿನ ಸಹ್ಯಾದ್ರಿಯ ಮಡಿಲಿನಲಿ ಪ್ರಕೃತಿ ಸೌಂದರ್ಯವು ತಾನೇ ತಾನಾಗಿ ಹರಡಿಕೊಂಡಿರುವ ದಿವ್ಯ ಸುಂದರವಾದ ಪರಿಸರದಲ್ಲಿದೆ ಶೃಂಗೇರಿ. ಕಳೆದ ಸುಮಾರು ೧೨೦೦ ವರ್ಷಗಳ ಹಿಂದೆ ಶ್ರೀ ಆದಿಶಂಕರಾಚಾರ್ಯರು ಈ ಒಂದು ಪ್ರಶಾಂತವಾದ ಪರಿಸರದಲ್ಲಿ ಕಾಶ್ಮೀರ ಪುರವಾಸಿಸಿ, ವಿದ್ಯಾಧಿದೇವತೆಯಾದ ಶ್ರೀ ಶಾರದಾಂಬೆಯನ್ನು ಪ್ರತಿಷ್ಠಾಪನೆ ಮಾಡಿದರು. ಅಲ್ಲದೆ ಹಿಂದೂ ಧರ್ಮ ಪೋಷಣೆಗಾಘಿ ಹಾಗೂ ತಮ್ಮ ಅದ್ವೈತ ತತ್ವ ಸಿದ್ದಾಂತದ ಪ್ರಚಾರಾರ್ಥವಾಗಿ ಶ್ರೀ ದಕ್ಷಿಣಾಮ್ನಾಯ ಶಾರದಾ ಪೀಠವನ್ನು ಸ್ಥಾಪಿಸಿ ತಮ್ಮದೇ ಗುರು ಪರಂಪರೆಯನ್ನು ಹುಟ್ಟುಹಾಕಿದರು.
ಅಂದಿನಿಂದ ಇಂದಿನವರೆವಿಗೂ ಅವರು ಹುಟ್ಟುಹಾಕಿದ ಈ ಗುರು ಪರಂಪರೆಯು ಹಾಗೆಯೇ ಬೆಳೆದು ಬಂದಿದ್ದು ಇಂದಿನ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಶ್ರೀ ಶಂಕರರ ಉದ್ದೇಶವನ್ನು ಸಮರ್ಥವಾಗಿ ನೆರವೇರಿಸುತ್ತಿದ್ದಾರೆ. ಇಂದು ತಾಯಿ ಶಾರದೆಯ ದರುಶನಕ್ಕಾಗಿ, ಜಗದ್ಗುರುಗಳ ಆಶೀರ್ವಾದ ಪಡೆಯುವುದಕ್ಕಾಗಿ ದಿನನಿತ್ಯ್ವೂ ಶೃಂಗೇರಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿದ್ದಾರೆ.

***

ವಿಭಾಂಡಕ ಮುನಿಗಳ ಪುತ್ರರಾದ ಋಷ್ಯಶೃಂಗ ಮುನಿಗಳ ಕಥೆಯು ರೋಚಕವಾದುದು. ವಿಭಾಂಡಕರಿಗೆ ಹುಟ್ಟಿದ ಮಗುವಿಗೆ ಹುಟ್ಟಿದಾಗಲೇ ಶಿರದ ಮೇಲೆ ಮೃಗ ಲಾಂಛನವಾದ ಶೃಂಗಿ(ಕೋಡು) ಇದ್ದ ಕಾರಣಾವಾಗಿ ‘ಋಷ್ಯಶೃಂಗ’ ಎನ್ನುವ ಹೆಸರು ಬಂದಿತು. ತಂದೆಯ ಆರೈಕೆಯಲ್ಲಿಯೇ ಬೆಳೆದು ವಿದ್ಯಾಭ್ಯಾಸಗಳನ್ನು ಪೂರೈಸಿ ತಾರುಣ್ಯಕ್ಕೆ ಕಾಲಿಟ್ಟ ಋಷ್ಯಶೃಂಗರಿಗೆ ಲೌಕಿಕ ಜಗತ್ತಿನ ಪರಿಚಯವೇ ಇರುವುದಿಲ್ಲ. ಸದಾ ಧ್ಯಾನ ತಪಸ್ಸುಗಳಾಲ್ಲಿ ಮಗ್ನರಾಗಿರುತ್ತಿದ್ದ ಋಷ್ಯಶೃಂಗರು ಮಹಾ ಮಹಿಮಾನ್ವಿತರಾಗಿದ್ದವರು.
ಇಂತಹಾ ಸಮಯದಲ್ಲಿ ಅಂಗ ದೇಶದಲ್ಲಿ ಭೀಕರವಾದ ಕ್ಷಾಮವು ತಲೆದೋರಿತು. ಆಗ ಅಲ್ಲಿನ ದೊರೆ ರೋಮಪಾದನು ತಾನು ಗುರು ಹಿರಿಯರೊಡನೆ ಸಮಾಲೋಚಿಸಿ ಋಷ್ಯಶೃಂಗರನ್ನು ತನ್ನ ರಾಜ್ಯಕ್ಕೆ ಬರಮಾಡಿಕೊಳ್ಳುತ್ತಾನೆ. ಮುನಿಗಳ ಆಗಮನ ಮಾತ್ರದಿಂದಲೇ ಅಂಗ ರಾಜ್ಯದಲ್ಲಿ ಸುಖ ಸಮೃದ್ದಿಗಳು ನೆಲೆಸುತ್ತವೆ.
Sri Sharadamba Temple, Sringeri
ಅಲ್ಲಿಂದ ಮುಂದೆ ಅಯೋಧ್ಯೆಗೆ ತೆರಳಿದ ಋಷ್ಯಶೃಂಗರು ಅಲ್ಲಿ ವಸಿಷ್ಟ, ವಾಮದೇವ ಇವರೇ ಮೊದಲಾದವರ ಸಮಕ್ಷಮದಲ್ಲಿ ದಶರಥನಿಗೆ ಸಂತಾನ ಪ್ರಾಪ್ತಿಗಾಗಿ ಪುತ್ರಕಾಮೇಷ್ಠಿ ಯಾಗವನ್ನು ಮಾಡಿಸುತ್ತಾರೆ. ಅದಾದ ಬಳಿಕ ಪುನಃ ಅಂಗದೇಶಕ್ಕೆ ಮರಳಿ ಬಂದ ಋಷ್ಯಶೃಂಗರಿಗೆ ಅಲ್ಲಿನ ರಾಜನಾದ ರೋಮಪಾದನು ತನ್ನ ಮಗಳನ್ನು ಕೊಟ್ಟು ವಿವಾಹವನ್ನು ನೆರವೇರಿಸುತ್ತಾನೆ. ಅದಾದ ಕೆಲ ಕಾಲಗಳ ಬಳಿಕ ಪುನಃ ತಮ್ಮ ಸ್ವಸ್ಥಾನಕ್ಕೆ ಹಿಂತಿರುಗಿದ ಮುನಿಗಳು ಈಗಿನ ಶೃಂಗೇರಿಗೆ ಆರು ಮೈಲಿಗಳ ದೂರದಲ್ಲಿರುವ ಕೀಳ್ಗಾ ಇಲ್ಲವೇ ಕಿಗ್ಗಾ ಎನ್ನುವಲ್ಲಿ  ಆಶ್ರಮವನ್ನು ಸ್ಥಾಪಿಸಿಕೊಂಡು ತಪಸ್ಸಿನಲ್ಲಿ ನಿರತರಾಗುತ್ತಾರೆ.
ತಂದೆ ವಿಭಾಂದಕ ಮುನಿಗಳು ತಾವು ಶೃಂಗೇರಿಯ ಮದ್ಯದಲ್ಲಿರುವ ಶ್ರೀ ಮಲಹಾನಿಕೇಶ್ವರ(ಮಲ್ಲಿಕಾರ್ಜುನ ಸ್ವಾಮಿ) ಬೆಟ್ತದಲ್ಲಿನ ಶಿವಲಿಂಗದ ಸಮೀಪ ಆಶ್ರಮ ಕಟ್ಟಿಕೊಂಡು ತಪಸ್ಸನ್ನಾಚರಿಸುತಲಿದ್ದು ಅಂತ್ಯದಲಿ ಅದೇ ಶಿವಲಿಂಗದಲ್ಲಿ ಐಕ್ಯ ಹೊಂದುತ್ತಾರೆ. ಇತ್ತ ಮಗನಾದ ಋಷ್ಯಶೃಂಗರು ತಾವು ತಪೋನಿರತರಾಗಿದ್ದ ಕಿಗ್ಗಾ ಆಶ್ರಮದಲ್ಲಿಯೇ ಶಿವಲಿಂಗ ಸ್ವರೂಪವನ್ನು ತಾಳುತ್ತಾರೆ.
ಈ ಋಷ್ಯಶೃಂಗ ಮುನಿಗಳಿಂದಾಗಿಯೇ ಈ ಪ್ರದೇಶಕ್ಕೆ ‘ಋಷ್ಯಶೃಂಗಪುರ’ / ‘ಶೃಂಗಗಿರಿ’ ಎಂಬ ಹೆಸರು ಬಂದಿದ್ದು ಕಾಲಕ್ರಮೇಣ ಜನರ ಬಾಯಿಗೆ ಸಿಕ್ಕು ಅದುವೇ ‘ಶೃಂಗೇರಿ’ ಆಗಿದೆ.

 

No comments:

Post a Comment