Saturday, June 21, 2014

‘ಶಿಕಾರಿ’ : ಮನುಷ್ಯ ಮನುಷ್ಯರನ್ನು ಬೇಟೆಯಾಡುವ ಕತೆ

“ನನ್ನ ಮಟ್ಟಿಗೆ ಇನ್ನೂ ಕಂಡಿರದ ಅಣ್ಣನನ್ನೂ, ಕಾಣೆಯಾದ ತಂಗಿಯನ್ನೂ, ಹುಡುಕಿ ತೆಗೆಯುವುದೇ ನನ್ನ ಇಂದು ಮುಂದಿನ ಆಯುಷ್ಯದ ಗುರಿಯಾಗಬೇಕು.”
- ನಾಗಪ್ಪ

Yashavantha Chittala's Novel 'Shikari' - Cover Page


ಹೇಳದೆ ಕೇಳದೆ ಎಂಬಂತೆ ಉದ್ಭವಿಸಿ ಧುತ್ ಎಂದು ಕಣ್ಣೆದುರಿಗೆ ಹಾಜರಾದ ಪರಿಸ್ಥಿತಿಯ ಅರ್ಥ ನಿಚ್ಚಳವಾಗುತ್ತಾ ಹೋದಹಾಗೆ ನಾಗಪ್ಪನಿಗೆ ತಾನು ಬಹಳ ವರ್ಷಗಳ ಹಿಂದೆ ಓದಿದ ಕಾಫ್ತಾನ ‘ತ್ರಾಯಲ್’ಕಾದಂಬರಿಯ ನಾಯಕ ‘ಕೆ’ ನೆನಪಿಗೆ ಬರಹತ್ತಿದ.; ಅವನ ಹಾಗೆ ನನ್ನ ಬಗೆಗೂ ಯಾರೋ ಚಾಡಿ ಹೇಳುತ್ತಿರಬೇಕು. ಇಲ್ಲವಾದರೆ ಇದ್ದಕ್ಕಿದ್ದಂತೆ ನಿನ್ನೆ ಬೆಳೆಗ್ಗೆ ಆಫೀಸಿಗೆ ಹೋಗುವ ತಯಾರಿ ಮಾಡುತ್ತಿದ್ದ ಹೊತ್ತಿನಲ್ಲೇ ಕಂಪನಿಯ ಪರ್ಸೋನಲ್ ಆಂಡ್ ಅದ್ಮಿನಿಸ್ಟ್ರೇಟರ ಮ್ಯಾನೇಜರರಿಂದ ಆ ದುಷ್ಟ ಆದೇಶ ಬರುತ್ತಿರಲಿಲ್ಲವೇನೋ ಎಂದೆನ್ನಿಸಿದಾಗ ಸಣ್ಣಗೆ ನಡುಗಿದ; ಒಂದು ಗಂಭೀರ ಆಪಾದನೆಯ ಕಾರಣದಿಂದ  ನಿನ್ನನ್ನು ಕೋಡಾಲೇ ಕೆಲಸದಿಂದ ಸಸ್ಪೆಂಡ್ ಮಾಡಬೇಕಾಗಿ ಬಂದಿದೆ. ಯಾಕೆ ಎನ್ನುವುದು ಆದಷ್ಟು ಬೇಗ ತಿಳಿಸುತ್ತೇವೆ. ಆ ವರೆಗೆ ಆಫಿಸಿಗೆ ಬರಕೂಡದು ಎನ್ನುವುದು ಆದೇಶದ ಮಜಕೂರಾಗಿತ್ತು. ಜತೆಗೆ ಒಂದು ಸಲಹೆ ಕೂಡ; ಆರೋಪ ಸುಳ್ಳಾದ ಪಕ್ಷದಲ್ಲಿ ನಿಮಗೆ ಯಾವುದೇ ರೀತಿಯಿಂದ ಹಾನಿಯಾಗಬಾರದು ಎನ್ನುವ ದೃಷ್ಟಿಯಿಂದ ಕೂಡಲೇ ಒಂದು ತಿಂಗಳ ರಜೆಯ ಬಗ್ಗೆ ಅರ್ಜಿ ಮಾಡುವುದು ಒಳ್ಳೆಯದು.

ಅರ್ಜಿಯನ್ನೇನೋ ಕಳಿಸಿದ್ದ; ಇದ್ದಕ್ಕಿದ್ದಂತೆ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿ ತಾನು ಮನೆಯಲ್ಲಿ ಇರಬೇಕಾಗಿ ಬಂದದ್ದರ ಹಿಂದಿನ ರಹಸ್ಯವನ್ನು ಕಾಪಾಡಿಕೊಳ್ಳುವ ಬೇರೆ ಉಪಾಯ ತಕ್ಷಣ  ಹೊಳೆಯದೆ ಇದ್ದುದರಿಂದ, ಆದರೆ ತನಗೆ ಬೇಡವಾದ ರಜೆಯ ಕಾರಣವಾದದ್ದರ ಬಗ್ಗೆ ಎಷ್ಟೆಲ್ಲಾ ರೀತಿಯಲ್ಲಿ ವಿಚಾರ ಮಾಡಿ ತಲೆ ಕೆಡಿಸಿಕೊಂಡರೂ ಯಾವುದೂ ಬಗೆಹರಿಯಲಿಲ್ಲ. ಈ ವಿಪತ್ತು ಎರಗಿದ್ದು ನನ್ನ ಮೇಲೇ ತಾನೆ ಎನ್ನುವುದರ ಬಗ್ಗೆ ಕೂಡ ಕೂಡಲೇ ವಿಶ್ವಾಸ ಮೂಡಲಿಲ್ಲ. ಯಾಕೆಂದರೆ ಇನ್ನು ಒಂದೆರಡು ತಿಂಗಳಲ್ಲಷ್ಟೇ ಹೆಚ್ಚಿನ ತರಬೇತಿಗಾಗಿ ಅಮೇರಿಕೆಗೆ ಹೋಗುವ ಅವನ ಇಷ್ಟು ವರ್ಷಗಳ ಕನಸು ನಿಜವಾಗುವ ಹವಣಿಕೆಯಲ್ಲಿತ್ತು.  ಅವನು ಸದ್ಯ ಬಹಳಾ ಖುಷಿಯಿಂದ ತೊಡಗಿಸಿಕೊಂಡದ್ದೇ ಈ ಪ್ರಯಾಣದ ಸಿದ್ದತೆಯಲ್ಲಾಗಿತ್ತು. ತನ್ನ ಪ್ರಯಾಣದ ಸಿದ್ದತೆಯೇ ಈ ಆಪತ್ತಿನ ಉದ್ಭವಕ್ಕೆ ಕಾರಣವಾಗಿರಲಿಕ್ಕಿಲ್ಲ ತಾನೆ ಎಂದು ಥಟ್ಟನೆ ಹೊಳೆದ ಒಂದು ವಿಚಾರ ಎಡೆಮಾಡಿಕೊಟ್ತ ಅನುಮಾನ ಹೊತ್ತು ಹೋದ ಹಾಗೆ ಗಟ್ಟಿಯಾಗಹತ್ತಿತು. ಕೊನೆಗೂ ಫಿರೋಜ್ ತನ್ನ ಬಗೆಗಿನ ವೈರವನ್ನು ಬಿಟ್ಟು ಕೊಟ್ಟಿಲ್ಲ. ಹಾಗಾದರೆ ಧೂರ್ತ ರಾಜಕಾರಣಿಯಾದ ಈ ದುಷ್ಟ ಒಂದೂ ಮಗನೇ ಹೂಡಿದ ಒಳಸಂಚಿನ ಅಂಗವಿದು. ಆರೋಪವಾದರೂ ಏನು ಎನ್ನುವುದು ಗೊತ್ತಾದರೆ ಎಲ್ಲವೂ ಸ್ಪಷ್ಟವಾಗಬಹುದಿತ್ತು. ಆದರೆ ಅದು ಗೊತ್ತಾಗಲು  ಪರ್ಸೋನಲ್ ಮ್ಯಾನೇಜರರು ಕಳಿಸುತ್ತೇನೆಂದ ಪತ್ರದ ದಾರಿಯನ್ನು ಕಾಯುವುದು ಬಿಟ್ಟು ಬೇರೆ ಗತಿಯಿರಲಿಲ್ಲ. ಆದರೆ ಕಾಯುವುದೇ ಅಸಾಧ್ಯವಾದಾಗ ನಾಗಪ್ಪನಿಗೆ ಯಾವುದೋ ಸೈಕಾಲಜಿ ಪುಸ್ತಕದಲ್ಲಿ ಓದಿದ್ದು ನೆನಪಾಗ ಹತ್ತಿತು;  One of the gratest problems of the humen mind is the structuring of Time.

***

ಇದು ಕನ್ನಡದ ಖ್ಯಾತ ಲೇಖಕ ಯಶವಂತ ಚಿತ್ತಾಲರ ‘ಶಿಕಾರಿ’ ಕಾದಂಬರಿಯ ಮೊದಲ ಪುಟ. ನಾನು ಸುಮಾರು ಹತ್ತರಿಂದ ಹನ್ನೆರಡು ವರ್ಷಗಳ ಕೆಳಗೆ ಒಮ್ಮೆ ಈ ಕಾದಂಬರಿಯನ್ನು ಓದಿದ್ದೆ. ಇದೀಗ ಮತ್ತೊಮ್ಮೆ ಆ ಪುಸ್ತಕವನ್ನು ತೆರೆದು ಓದಿದಾಗ ಹೊಸತೇ ಒಂದು ಆಲೋಚನೆ ಮೂಡಿಸುತ್ತದೆ. .ಪಾಶ್ಚಾತ್ಯರಲ್ಲಿ ಜನಪ್ರಿಯವಾದ ಮನೋವಿಶ್ಲೇಷಣೆಯ ಒಂದು ನಮೂನೆ ಶಿಕಾರಿಯ ಕಥಾ ಹಂದರದಲ್ಲಿ ಕಾಣಸಿಗುತ್ತದೆ. ಅದೇನೆಂದರೆ ವ್ಯಕ್ತಿಯ ಸದ್ಯದ ಪ್ರವೃತ್ತಿಗಳ ಕಾರಣವನ್ನು ಅವರ ಬಾಲ್ಯದ ಅನುಭವಗಳು ಮತ್ತು ತನ್ಮೂಲಕ ರೂಪಿತವಾದ ಅವರ ವ್ಯಕ್ತಿತ್ವದಲ್ಲಿ ಹುಡುಕುವುದು. ಈ ಕಥೆಯ ನಾಯಕ ನಾಗಪ್ಪ ತಾನು ತಾನು ಬಾಲ್ಯದಲ್ಲಿ ಗಳಿಸಿದ ಅನುಭವಗಳಿಂದ ರೂಪಿಸಿಕೊಂದ ವ್ಯಕ್ತಿತ್ವದಲ್ಲಿ ಸಿಲುಕಿಕೊಂಡು ಅದರಿಂದಾಗಿ ತೀವ್ರ ಹತಾಶೆ, ನೋವಿಗೆ ತುತ್ತಾದವನಾಗಿದ್ದಾನೆ. ತನ್ನ ವೃತ್ತಿ ಜೀವನದಲ್ಲಿ ಎದುರಾದ ಸವಾಲಿನಿಂದಾಗಿ ತನ್ನ ವ್ಯಕ್ತಿತ್ವವನ್ನು ಸ್ವಯಂ ಪರೀಕ್ಷೆಗೆ ಒಡ್ಡಿಕೊಂಡು ಹೊಸದೊಂದು ವ್ಯಕ್ತಿತ್ವವನ್ನು ಪಡೆಯುವುದಕ್ಕೆ ಹೊರಡುವುದು ಇಲ್ಲಿನ ಕಥೆಯ ಮುಖ್ಯ ಸಾರ.

Yashavantha Chittala
ಕನ್ನಡದ ಇನ್ನೊಬ್ಬ ಖ್ಯಾತ ವಿಮರ್ಷಕರಾದ ಡಾ. ಜಿ.ಎಸ್. ಅಮೂರರು ಹೇಳುವಂತೆ - “ಕಾದಂಬರಿಯ ಕೇಂದ್ರ ಪ್ರತಿಮೆ ‘ಬೇಟೆ’. ಇದು ಕಾದಂಬರಿಯ ಉದ್ದಕ್ಕೂ ಅನೇಕ ಸಂದರ್ಭಗಳಾಲ್ಲಿ ಕಾಣಿಸಿಕೊಳ್ಳುತ್ತದೆ…….. ಇಂದಿನ ಔದ್ಯೋಗೀಕೃತ ನಾಗರಿಕತೆಯಲ್ಲಿ ಎಲ್ಲಿಯೂ ನೋಡಸಿಗುವ ಮನುಷ್ಯನಿಂದ ಮನುಷ್ಯನ ಬೇಟೆ.....ಸ್ವಾರ್ಥ, ಸ್ವಹಿತ ರಕ್ಷಣೆಯ ಉದ್ದೇಶದಿಂದ ಒಂದಾದ ಬೇಟೆಗಾರರ ತಂಡವೇ ಅವನ(ನಾಗಪ್ಪ) ಬೆನ್ನು ಹತ್ತುತ್ತದೆ. ಅವನ ಅಸ್ತಿತ್ವದ ಬೇರುಗಳನ್ನೇ ಅಲುಗಾಡಿಸಿ ಅವನ ನಾಶಕ್ಕಾಗಿ ಹೊಂಚು ಹಾಕುತ್ತದೆ. ಇಂತಹಾ ಒಂದು ಸನ್ನಿವೇಶದಲ್ಲಿ ಮನುಷ್ಯನ ಬಾಳಿಗೆ ಅರ್ಥವಿದೆಯೆ? ಇದರಿಂದ ಪಾರಾಗಿ ಬದುಕುವ ಸಾಧ್ಯತೆಗಳಿವೆಯೆ? ಇಂತಹಾ ಸನ್ನಿವೇಶ ಹುಟ್ಟಿತಾದರೂ ಹೇಗೆ? ಇದಕ್ಕೆ ಹೊಣೆಗಾಗರು ಯಾರು? ಎಂಬ ಮೂಲಭೂತ ಪ್ರಶ್ನೆಗಳನ್ನು ಎತ್ತುವ್ವುದರ ಮೂಲಕ ‘ಶಿಕಾರಿ’ ನಮಗೆ ಅತ್ಯಂತ ಪ್ರಸ್ತುತವಾದ ಕೃತಿಯಾಗಿದೆ.”

ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮೂಡಿಬಂದ ಅತ್ಯಂತ ಶ್ರೇಷ್ಟ ಕಾದಂಬರಿಗಳಲ್ಲಿ ಇದೂ ಒಂದು. 1979 ರಲ್ಲಿ ಪ್ರಕಟವಾದ ಈ ಕೃತಿ ಇದುವರೆಗೆ ಒಂಭತ್ತು ಮುದ್ರಣಗಳನ್ನು ಕಂಡಿದೆ. ‘ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ’ ಹಾಗೂ ‘ವರ್ಧಮಾನ ಪ್ರಶಸ್ತಿ’ ಗಳಿಗೆ ಭಾಜನವಾದ ಈ ಕೃತಿಯನ್ನು ಪ್ರಸ್ತುತ ಸಾಹಿತ್ಯ ಭಂಡಾರ, ಬಳೆಪೇಟೆ, ಬೆಂಗಳೂರು ಇವರು ಪ್ರಕಟಿಸಿರುತ್ತಾರೆ. ಕನ್ನಡ ಸಾಹಿತ್ಯಾಭಿಮಾನಿಗಳು ತಾವೆಲ್ಲರೂ ಓದಲೇಬೇಕಾದ ಮಹತ್ವದ ಕೃತಿ ಇದೆನ್ನಲು ಯಾವುದೇ ಅಡ್ಡಿಯಿಲ್ಲ.

ತಾವುಗಳು ಸಹ ಈ ಒಂದು ಬರಹವನ್ನು ಓದಿದ ಬಳಿಕ ಪುಸ್ತಕ ಮಳಿಗೆಯಿಂದ/ಗ್ರಂಥಾಲಯಗಳಿಂದ ಈ ಕಾದಂಬರಿಯನ್ನು ತಂದು ಓದಬೇಕೆನ್ನುವ ಅಭಿಲಾಷೆ ನನ್ನದು.

ನಮಸ್ಕಾರ. 

No comments:

Post a Comment