Wednesday, June 21, 2017

ಮ್ಮಲ್ಲಿನ ಸ್ಥಳ ಪುರಾಣಗಳು (Myths) - 84

ಪಾತಾಳ ಭುವನೇಶ್ವರ (Pathala Bhuvaneshwara)

ಉತ್ತರಾಖಂಡ ಮೂಲತಃ ದೇವಭೂಮಿ ಎಂದೇ ಕರೆಯಲ್ಪಡುವ ನಾಡು. ಅಲ್ಲಿನ ಪಿತೌರಾಗಢ ಜಿಲ್ಲೆಯಲ್ಲಿನ ಪಾತಾಳ ಭುವನೇಶ್ವರ ಸಹ ಒಂದು ಪವಿತ್ರ ಯಾತ್ರಾ ಸ್ಥಳವಾಗಿದೆ. .ಇದು  ಒಂದು ಚಿಕ್ಕ ಹಳ್ಳಿಯಾಗಿದ್ದು ಸಮುದ್ರ ಮಟ್ಟದಿಂದ 1350 ಮೀಟರ್ ಎತ್ತರದಲ್ಲಿದೆ. ಇದು ಪುರಾತನ ಶೈವ ಕ್ಷೇತ್ರವಾಗಿದ್ದು  ಗುಹಾಂತರ ದೇವಾಲಯ ಇಲ್ಲಿದೆ.

ಈ ಗುಹೆಗೆ ಹೋಗಬೇಕಾದರೆ 2 ರಿಂದ 3 ಕಿ,ಮೀ ನಡೆಯಬೇಕಾಗುತ್ತದೆ. ಆದರೆ ಇಲ್ಲಿ ಕೇವಲ ಒಂದು ಗುಹೆ ಮಾತ್ರವೇ ಇರುವುದಲ್ಲ. ಬದಲಾಗಿ ಇದೊಂದು ಗುಹಾಲಯದ ಸಮುದಾಯವಾಗಿದೆ. ಇಲ್ಲಿ ಶಿವನ ಜಟಾಝಟಂ, ಶಿವನಿಗೆ ಸುತ್ತುವರಿದ ನಾಗರ ಹಾವು, ಐರಾವತ, ಕಲ್ಪ ವೃಕ್ಷ, ಕಾಮದೇನು, ಬ್ರಹ್ಮ, ವಿಷ್ಣು, ಮಹೇಶ್ವರ ಹಾಗೂ 33 ಕೋಟಿ ದೇವತೆಗಳ ಆಕಾರಗಳನ್ನು ಕಾಣಬಹುದಾಗಿದೆ. ದೇವಾಲಯವು ಗಂಗೋಳಿಹಟ್‌ನಿಂದ 16 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿಂದ ರಾಜಾರಾಂಭ, ಪಂಚಚೂಳಿ, ನಂದಾದೇವಿ ಮತ್ತು ನಂದಾಕಟ್ಸ್‌ ಮೊದಲಾದ ಗಿರಿ ಶೃಂಗಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.


ಗುಹೆಯು ಸುಮಾರು 90 ಅಡಿಗಳಷ್ಟು ಆಳವಿದೆ. ಇಲ್ಲಿನ ಗುಹೆಯೊಂದರಲ್ಲಿ ಗಣೇಶನ ರುಂಡದ ಶಿಲಾಮೂರ್ತಿ ಇದ್ದು ಆ ಮೂರ್ತಿಯ ಮೇಲೆ ನೂರ ಎಂಟು ದಳದ ಬ್ರಹ್ಮ ಕಮಲವಿದೆ. ಜತೆಗೆ ಶಂಕರಾಚಾರ್ಯರು ಸ್ಥಾಪಿಸಿದ ತಾಮ್ರದ ಶಿವಲಿಂಗವೂ ಇಲ್ಲಿದೆ. ಇಲ್ಲಿ ನಾಲ್ಕು ಯುಗಗಳನ್ನು ಸೂಚಿಸುವ ನಾಲ್ಕು ಕಲ್ಲುಗಳಿದ್ದು ಅದರಲ್ಲಿ ಒಂದು ಕಲ್ಲು ಮಾತ್ರವೇ ಇಂದಿಗೂ ಬೆಳೆಯುತ್ತಲಿದೆ. ಅದನ್ನು ಕಲಿಯುಗದ ಪ್ರತೀಕವಾಗಿರುವ ಕಲ್ಲೆಂದು ಹೇಳಲಾಗುತ್ತದೆ. ಕಲ್ಲು ಎಂದಿಗೆ ಗೋಡೆಯನ್ನು ತಲುಪುವುದೋ ಅಂದು ಕಲಿಯುಗದ ಅಂತ್ಯವೆಂದು ನಂಬಲಾಗುತ್ತದೆ.

***

ಶಿವ ಪಾವರ್ತಿಗೆ ಹುಟ್ಟಿದ್ದ ಮೊದಲ ಮಗು ವಿನಾಯಕ.

ಪಾವರ್ತಿಯು ಅದೊಂದು ದಿನ ಸ್ನಾನ ಮಾಡುವಾಗ ತನ್ನ ಮೈಗೆ ಹಾಕಿ ಕೊಂಡಿದ್ದ ಅರಿಶಿಣವನ್ನು ತನ್ನ ದೇಹದಿಂದ ಸ್ವಲ್ಪ ಸ್ವಲ್ಪವೇ ತೆಗೆದು ಒಂದು ಮಾನವಾಕೃತಿಯನ್ನು ಮಾಡಿದಳು. ಈ ಮಾನವಾಕೃತಿಯೇ ಬಾಲಕ ಗಣೇಶ.

ಒಮ್ಮೆ ಶಿವನು ಕೈಲಾಸದಲ್ಲಿ ಇಲ್ಲದ ವೇಳೆಯಲ್ಲಿ ಸ್ನಾನಕ್ಕೆ ಹೊರಟ ಪಾರ್ವತಿ ಬಾಲಕನನ್ನು ಸ್ನಾನ ಗೃಹದ ಕಾವಲು ಕಾಯಲು ಹೇಳಿ ಒಳಗೆ ಹೊರಟಳು. ತನ್ನ ತಾಯಿಯ ಆಜ್ಞೆಯನ್ನು ಶಿರಸಾವಹಿಸಿ ಬಾಲಕನು ಕಾವಲು ಕಾಯುತ್ತಿರಲು ಶಿವನು ಹೊರಗಿನಿಂದ ಬಂದ.  ಪರಶಿವನನ್ನು ಬಾಲಕನು, ತಾಯಿಯ ಆಜ್ಞೆಯಂತೆ ಅಡ್ಡಗಟ್ಟಿದನು ಶಿವನು ಬಾಲಕನನ್ನು ತಾನು ಒಳ ಹೋಗಲು ಬಿಡೆಂದು ಕೇಳುತ್ತಾನೆ.  ಆದರೆ ಬಾಲ ಗಣೇಶ ಅದಕ್ಕೆ ಅನುಮತಿ ನಿರಾಕರಿಸುತ್ತಾನೆ. ಆಗ ತನ್ನ ಮನೆಯಲ್ಲೇ ತನ್ನನ್ನು ಅಡ್ಡಗಟ್ಟಿದ್ದ ಹುಡುಗನನ್ನು ಕಂಡು ಶಿವನಿಗೆ ಉಗ್ರ ಕೋಪ ಬರುತ್ತದೆ. ರೋಷಕ್ಕೆ ತ್ರಿಶೂಲದಿಂದ ಬಾಲಕನ ತಲೆಯನ್ನೇ ಕಡಿದು ಹಾಕಿದ್ದ ಪರಮೇಶ್ವರ.

ಅದಾಗಿ ಸ್ವಲ್ಪ ಸಮಯದಲ್ಲಿ  ಸ್ನಾನ ಮುಗಿಸಿ ಬಂದ ಪಾರ್ವತಿ ಮಗ ಸತ್ತು ಬಿದ್ದಿರುವುದನ್ನು ಕಂಡು ದುಃಖಿಸಲು ಪ್ರಾರಂಭಿಸುತ್ತಾಳೆ. ಶಿವನಿಗೂ ಇದೀಗಲೇ ತಾನು ಶಿರಚ್ಚೇಧ ಮಾಡಿದ್ದವನೇ ತನ್ನ ಮಗ ಎನ್ನುವುದು ತಿಳಿಯುತ್ತದೆ. ನಂತರ ತನ್ನ ಗಣರಿಗೆ, ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗಿರುವ ಯಾರದೇ ತಲೆಯನ್ನು ತನ್ನಿರೆಂದು ಹೇಳಲು, ಅವರುಗಳು ಆನೆಯ ತಲೆಯನ್ನು ತಂದುಕೊಟ್ಟರು. ರುಂಡವಿಲ್ಲದ ಮುಂಡಕ್ಕೆ ಆನೆಯ ತಲೆಯ ಜೋಡಿಸಿ, ಪ್ರಾಣ ತುಂಬಲು ಗಣೇಶ ಜನ್ಮ ತಳೆದ.

ಹೀಗೆ ಅಂದು ಶಿವನು ಕಡಿದು ಹಾಕಿದ್ದ ಗಣೇಶನ ರುಂಡವೇ ಇಂದು ಪಾತಾಳ ಭುವನೇಶ್ವರದ ಗುಹೆಯಲ್ಲಿದೆ! ಇಲ್ಲಿನ ನೂರ ಎಂಟು ದಳದ ಕಮಲವನ್ನೂ ಶಿವನೇ ಗಣೇಶನಿಗಾಗಿ ಇಲ್ಲಿ ಇರಿಸಿದ್ದಾನೆ. ಈ ಗುಹೆಯಿಂದ ಕೈಲಾಸ ಪರ್ವತಕ್ಕೆ ದಾರಿ ಇದೆ. ಆದರೆ ಆಮ್ಲಜನಕದ ಕೊರತೆಯಿರುವ ಕಾರಣ ಮಾರ್ಗದಲ್ಲಿ ನಡೆದು ಹೋಗುವುದು ಅತ್ಯಂತ ಕಠಿಣವಾಗಿದೆ.

ಇಂದಿಗೂ ಸಹ ಶಿವನಿಂದ ಛೇಧಿಸಲ್ಪಟ್ತ ಗಣೇಶನ ಶಿರವನ್ನು ಕಾಣಲು ಭಕ್ತರು ತಂಡ ತಂಡವಾಗಿ ಇಲ್ಲಿಗೆ ಆಗಮಿಸುತ್ತಾರೆ. ಶಿವನ ಜಟೆಯನ್ನು ಹೋಲುವ ಕಲ್ಲುಗಳೂ ಇಲ್ಲಿರುವುದು ಇನ್ನೂ ವಿಶೇಷವಾಗಿದೆ.



Tuesday, June 13, 2017

ಮ್ಮಲ್ಲಿನ ಸ್ಥಳ ಪುರಾಣಗಳು (Myths) - 83

ಕೋಟ ಅಮೃತೇಶ್ವರಿ 

ಅಮೃತೇಶ್ವರಿ ವಸ್ಥಾನವು ರಾಷ್ಟ್ರೀಯ ಹೆದ್ದಾರಿ 66 (ರಾ.ಹೆ.17)ರ ಕುಂದಾಪುರ ತಾಲೂಕಿನ ಕೋಟ ಎನ್ನುವ ಗ್ರಾಮದಲ್ಲಿ ಇರುತ್ತದೆ. ಪೇಟೆಯಿಂದ ಪಶ್ಚಿಮ ಭಾಗದಲ್ಲಿ ಸಮುದ್ರದ ಕಿನಾರೆಗೆ ಹೋಗುವ ರಸ್ತೆಯ ಅಂಚಿನಲ್ಲಿ ರಾ.ಹೆ. 66 ರಿಂದ ಕೇವಲ 20 ಮೀಟರ್ ದೂರದಲ್ಲಿ ಇದೆ. ದೇವಸ್ಥಾನದ ಗರ್ಭಗುಡಿಯ ಹೊರಭಾಗದ ಒಳಸುತ್ತಿನಲ್ಲಿ 3 ಕಡೆಯಲ್ಲಿ ಶಿವಾಲಿಂಗಾಕಾರದ ಲಿಂಗಗಳು ತನ್ನಿಂದ ತಾನೆ ಉದ್ಭವಿಸುತ್ತದೆ. ಈ ರೀತಿಯ ವಿಶೇಷತೆ ದೇಶದ ಇತರ ಭಾಗಗಳ ದೇವಸ್ಥಾನಗಳಲ್ಲಿ ಕಂಡುಬರುವುದಿಲ್ಲ. ಸಂತಾನ ಪ್ರಾಪ್ತಿಗಾಗಿ ದೇಶದ ಇತರ ಭಾಗಗಳಿಂದ ಭಕ್ತಾದಿಗಳು ಈ ದೇವಸ್ಥಾನಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ. 

ಸಂತಾನ ಭಾಗ್ಯ ಪಡೆಯುವ ಬಗ್ಗೆ “ಬೆಳಕಿನ ಸೇವೆ (ಯಕ್ಷಗಾನ ಬಯಲಾಟ) ಇಲ್ಲಿನ ವೈಶಿಷ್ಟ್ಯ. ಹಲವಾರು ಭಕ್ತಾದಿಗಳ ಬಯಕೆಯನ್ನು ಶ್ರೀದೇವಿ ಈಡೇರಿಸಿರುತ್ತಾಳೆ. ದೇವಸ್ಥಾನದ ಮುಂಭಾಗದಲ್ಲಿ ವರುಣ ತೀರ್ಥ ಎಂಬ ವಿಶಾಲ ಕೆರೆ ಇದೆ. ಕೋಟ ಹೋಬಳಿಯ 14 ಗ್ರಾಮದವರು ಮನೆಯಲ್ಲಿ ಜನಿಸಿದ ಮಗುವನ್ನು ಪ್ರಪ್ರಥಮವಾಗಿ ಈ ದೇವಸ್ಥಾನಕ್ಕೆ ಕರೆದುಕೊಂಡು ಬಂದು ಪೂಜೆ ಸಲ್ಲಿಸಿ ನಂತರ ಇತರ ಕಡೆ ಹೋಗುವ ಸಂಪ್ರದಾಯ ಇಂದಿಗೂ ಈ ಪರಿಸರದಲ್ಲಿ ಇದೆ. 

***

ಈ ಹಿಂದೆ ರಾವಣನ ಬಂಧುವಾದ ಖರನೆಂಬ ಮಹಾಸುರನು ಶಿವನಿಗೆ ಸಮಾನವಾದ ಪರಾಕ್ರಮ ಉಳ್ಳವನಾಗಿ ದಂಡಕಾರಣ್ಯದಲ್ಲಿ ವಾಸವಾಗಿದ್ದನು. ಆತನ ಪತ್ನಿಯಾದ ಕುಂಭಮುಖಿಯಿಂದಲೂ ತಂಗಿಯಾದ ಶೂರ್ಪನಖಿಯಿಂದಲೂ ದೂಷಣ ತ್ರಿಶಿರಾದಿ ಅನುಚರರಿಂದಲೂ ಕೂಡಿಕೊಂಡು ತನ್ನ ಆಣ್ಣನಾದ ರಾವಣನ ಅಪ್ಪಣೆಯಂತೆ ಲಂಕಾನಗರಿಗೆ ಉತ್ತರದಿಕ್ಕಿನ ಈ ದಂಡಕಾರಣ್ಯವನ್ನು ಪಾಲಿಸುತ್ತಿದ್ದನು. 

ಈ ಖರಾಸುರನು ರಾಕ್ಷಸನಾಗಿದ್ದರೂ, ಧರ್ಮಿಷ್ಠನೂ, ಪರಾಕ್ರಮಿಯೂ ಆಗಿದ್ದನಲ್ಲದೇ ಸದಾ ಕಾಲವು ತನ್ನ ಕುಲದೇವನಾದ ಶಂಕರನನ್ನು ಪೂಜಿಸುತ್ತಾ ಇರುತ್ತಿದ್ದನು. ಈತನ ಪತ್ನಿಯಾದ ಕುಂಭಮುಖಿಯೂ ಸಹ ಪತಿವ್ರತಾ ಪಾರಾಯಣಳು, ಸಾಧು ಸ್ವಭಾವದವಳು ಆಗಿದ್ದು ಸದಾ ಕಾಲ ತನ್ನ ಪತಿಯ ಜೊತೆಯಲ್ಲಿ ಪಾರ್ವತಿ ಪರಮೇಶ್ವರರ ಸೇವೆಯಲ್ಲಿ ತಲ್ಲೀನಳಾಗಿದ್ದಳು. 




ಹೀಗಿರಲು ಒಮ್ಮೆ ವಿಹಾರಕ್ಕಾಗಿ ಶೂರ್ಪನಖಿಯನ್ನು ಕೂಡಿಕೊಂಡು ಕುಂಭಮುಖಿಯು ವನದಲ್ಲಿ ಸಂಚಾರ ಮಾಡುತ್ತಿರಲು ಮಧುಮಾಸದ ವನಸಿರಿಗೆ ಮನಸೋತ ಅವರೀರ್ವರು ಪುಷ್ಪ ಸಂಗ್ರಹ ಹಾಗೂ ಮಧು ಸಂಗ್ರಹ ಮಾಡುತ್ತಾ ಬೇರೆ ಬೇರೆ ಮಾರ್ಗದಲ್ಲಿ ಹೋದರು. ಆಗ ಇದೇ ಮಾರ್ಗದಲ್ಲಿ ಏಕಮುಖಿ ಮಹರ್ಷಿಗಳ ಪತ್ನಿಯಾದ ಅತಿಪ್ರಭೆ ಎನ್ನುವವಳು ತನ್ನ ಪತಿಯು ನಿಧನ ಹೊಂದಿದುದರಿಂದ ವೈರಾಗ್ಯದಿಂದ ಕೂಡಿದವಳಾಗಿ, ಪ್ರಾಯ ಪ್ರಬುದ್ದನೂ, ಸುಂದರನೂ, ವಿದ್ಯಾವಂತನೂ ಆದ ತನ್ನ ಮಗ ಬಹುಶ್ರುತ ಎಂಬವನೊಂದಿಗೆ ತೀರ್ಥಯಾತ್ರೆಗಾಗಿ ಕಾಶಿ ಕ್ಷೇತ್ರಕ್ಕೆ ಪ್ರಯಾಣ ಮಾಡುತ್ತಿದ್ದಳು. 

ಹೀಗಿರಲು ಬಾಲವಿಧವೆಯೂ, ಸ್ವಭಾವತಃ ಅತಿ ಕಾಮುಕಳೂ ಆಗಿರುವ ಶೂರ್ಪನಖಿಯು ಅತಿಪ್ರಭೆಯ ಮಗನಾದ ಆ ಋಷಿ ಕುಮಾರನನ್ನು ನೋಡಿ ಮೋಹಿತಳಾಗಿ ಪರಿಪರಿಯಾಗಿ ಬೇಡಿದರೂ, ಆತನು ಒಪ್ಪದಿರಲು ಶೂರ್ಪನಖಿಯು ಬಲತ್ಕಾರದಿಂದ ಆತನನ್ನು ಸಂಹರಿಸಿದಳು. ತನ್ನ ಏಕಮಾತ್ರ ಪುತ್ರನ ಮರಣದಿಂದ ಅತಿಪ್ರಭೆಯು ದುಃಖದಿಂದ ರೋಧಿಸುತ್ತಿರುವಾಗ,ಈ ಶಬ್ಧವನ್ನು ಕೇಳಿದ ಕುಂಭಮುಖಿಯು ಅಲ್ಲಿಗೆ ಬಂದಳು. ಶೋಕಾಂಧಳಾದ ಅತಿಪ್ರಭೆಯು ಈ ಕುಂಭಮುಖಿಯನ್ನೇ ತನ್ನ ಮಗನನ್ನು ಸಂಹರಿಸಿದ ಶೂರ್ಪನಖಿ ಎಂದು ತಿಳಿದು, ನಿನಗೆ ಮಕ್ಕಳು ಹುಟ್ಟದೇ ಹೋಗಲಿ ಎಂದು ಶಾಪ ಕೊಟ್ಟಳು. ನಂತರ ತನ್ನ ಮಗನ ಮರಣಕ್ಕೆ ಕಾರಣಳಾದವಳು ಕುಂಭಮುಖಿ ಅಲ್ಲವೆಂದು ತಿಳಿದು, ನಿಜಕ್ಕೂ ಮಗನನ್ನು ಸಂಹರಿಸಿದ ಶೂರ್ಪನಖಿಗೆ “ ಎಲೈ ಶೂರ್ಪನಖಿಯೇ! ನೀನು ಪುನಃ ರೂಪವಂತನನ್ನು ಮೋಹಿಸಿ ಮಾನಭಂಗ ಹೊಂದಿದವಳಾಗಿ ನಿನ್ನ ವಂಶಕ್ಕೆ ಮೃತ್ಯ ಸ್ವರೂಪಳಾಗೆಂದು “ ಶಾಪಕೊಟ್ಟು ಸಮೀಪದಲ್ಲಿರುವ ಪ್ರಪಾತಕ್ಕೆ ಹಾರಿ ಪ್ರಾಣ ಕಳೆದುಕೊಂಡಳು. ಈ ರೀತಿ ಯಷಿ ಪತ್ನಿಯ ಶಾಪದಿಂದ ದುಃಖತಪ್ತಳಾದ ಕುಂಭಮುಖಿಯು ನಡೆದ ವಿಚಾರವನ್ನು ತನ್ನ ಪತಿಯಾದ ಖರನಿಗೆ ತಿಳಿಸಿದಳು. ಖರಾಸುರನು ತನ್ನ ಪತ್ನಿಯಾದ ಕುಂಭಮುಖಿಯನ್ನು ಅನೇಕ ವಿಧವಾಗಿ ಸಂತೈಸಿ, ಈ ಶಾಪವು ನಿವಾರಣೆಯಾಗಿ ಮಕ್ಕಳನ್ನು ಪಡೆಯಲು ಮುಂದೇನು ಮಾಡಬೇಕೆಂದು ಯೋಚಿಸಿ ತನ್ನ ಕುಲ ಪುರೋಹಿತರಾದ ಶುಕ್ರಾಚಾರ್ಯರಲ್ಲಿ ಮೊರೆಹೋದನು. ವಿಷಯವನ್ನು ತಿಳಿದ ಶುಕ್ರಾಚಾರ್ಯರು ಎಲೈ ಖರಾಸುರನೇ, ನೀನು ಮಾಯಾಸುರನಿಂದ ನಿರ್ಮಿತವಾದ ಜ್ಯೇಷ್ಥ ಲಿಂಗವನ್ನು ತಂದು ಒಂದು ವರ್ಷ ಪರ್ಯಂತ ದೀಕ್ಷಿತನಾಗಿ ಆ ಲಿಂಗವನ್ನು ಪೂಜಿಸಬೇಕೆಂದು, ನಿನ್ನ ಪತ್ನಿಯಾದ ಕುಂಭಮುಖಿಯು ಕೂಡಾ ನಿಷ್ಠೆಯಿಂದ ಜಗದಂಬಿಕೆಯಾದ ಅಮ್ರತೇಶ್ವರೀ ದೇವಿಯನ್ನು ಪೂಜಿಸಬೇಕೆಂದು ತಿಳಿಸಿದರು. 

ಖರಾಸುರನು ಮಾಯಾಸುರನಿದ್ದಲ್ಲಿಗೆ ಹೋಗಿ ಶುಕ್ರಚಾರ್ಯರು ಹೇಳಿದ ಆ ಜ್ಯೇಷ್ಠ ಲಿಂಗವನ್ನು ತಂದು, ಮನೋಹರವಾದ ಶುಕಪುರ ಎಂಬ ಸ್ಥಳದಲ್ಲಿ (ಗಿಳಿಯಾರು, ಹರ್ತಟ್ಟು) ಪ್ರತಿಷ್ಠಿಸಿದನಲ್ಲದೇ ಸಮೀಪದಲ್ಲಿಯೇ ಜಗನ್ಮಾತೆಯಾದ ಅಮೃತೇಶ್ವರೀ ದೇವಿಯನ್ನು ಪ್ರತಿಷ್ಠಿಸಿ ದಂಪತಿಗಳೀರ್ವರು ಶುಕ್ರಚಾರ್ಯರು ತಿಳಿಸಿದಂತೆ ಉಮಾಮಹೇಶ್ವರರನ್ನು ಪೂಜಿಸುತ್ತಿದ್ದರು. 

ನಿದ್ರಾಹಾರಗಳನ್ನು ತ್ಯಜಿಸಿ ಅತ್ಯಂತ ಶ್ರದ್ಧೆಯಿಂದ ತಪಸ್ಸನ್ನಾಚರಿಸುತ್ತಿದ್ದ ದಂಪತಿಗಳಿಗೆ ಶಿವನು ಪ್ರತ್ಯಕ್ಷನಾಗಿ ಜ್ಞಾನೋಪದೇಶ ಮಾಡಿದನಲ್ಲದೇ “ ಕೆಲವು ಕಾಲಗಳ ನಂತರ ಶ್ರೀ ಮಹಾವಿಷ್ಣುವಿನ ಅವತಾರ ರೂಪನಾದ ಶ್ರೀ ರಾಮಚಂದ್ರನು ಈ ದಂಡಕಾರಣ್ಯಕ್ಕೆ ಬಂದಾಗ ಅವನೊಡನೆ ಯುದ್ಧ ಮಾಡಿ ಮುಕ್ತಿ ಹೊಂದುವಿ ” ಎಂದು ವರವನ್ನು ಅನುಗ್ರಹಿಸಿ, “ ಅಲ್ಲಿಯವರೆಗೆ ಇದೇ ಸ್ಥಳದಲ್ಲಿ ನೀನು ಪ್ರತಿಷ್ಠಿಸಿದ ಜ್ಯೇಷ್ಠಲಿಂಗವನ್ನು ಅರ್ಚಿಸುತ್ತಾ ಇರು.ಅಲ್ಲದೇ ನಿನ್ನ ನಿತ್ಯಕರ್ಮಾನುಷ್ಠಾನಗಳ ಅನುಕೂಲಕ್ಕಾಗಿ ಸರ್ವತೀರ್ಥ ಸಾನಿಧ್ಯ ಉಳ್ಳ ಸರೋವರವನ್ನು ನಿರ್ಮಿಸುತ್ತೇನೆಂದು ತಿಳಿಸಿದನಲ್ಲದೇ ಈ ಸರೋವರದಲ್ಲಿ ಗಂಗಾದಿ ಸಕಲ ತೀರ್ಥಗಳು ಸನ್ನಿಹಿತವಾಗಿರುತ್ತವೆ. ಇನ್ನು ಮುಂದೆ ಈ ಸರೋವರವು “ ವರುಣ ತೀರ್ಥವೆಂದು ಪ್ರಸಿದ್ಧವಾಗಲಿ “ ಎಂದು ಹರಸಿ ಅಂತರ್ಧಾನ ಹೊಂದಿದನು. 

ಇದೇ ರೀತಿ ಕುಂಭಮುಖಿಯ ತಪಸ್ಸಿಗೆ ಮೆಚ್ಚಿದ ಅಮೃತೇಶ್ವರಿಯು ಮನೋಹರವೂ, ಕಾಂತಿಯುಕ್ತವೂ ಆದ ರೂಪಾತಿಶಯದಿಂದ ಆಕೆಗೆ ಪ್ರತ್ಯಕ್ಷಳಾಗಿ “ ಕುಂಭಮುಖಿಯೇ! ಬೇಕಾದ ವರಗಳನ್ನು ಕೇಳು “ ಎನ್ನಲು ದೇವಿಯ ದಿವ್ಯಸ್ವರೂಪ ದರ್ಶನದಿಂದ ಉಂಟಾದ ಸಂತೋಷಾತಿಶಯದಿಂದಲೂ ಋಷಿ ಪತ್ನಿಯ ಶಾಪ ಪ್ರಭಾವದಿಂದಲೂ ಭಾಂತಳಾಗಿ “ ತಾಯೇ ನೀನು ನಿತ್ಯ ಯೌವನೆಯಗಿ ಶಿವನಂತಹ ಪುತ್ರರನ್ನು ಬಹಳ ಕಾಲದವರೆಗೆ ಪಡೆ” ಎಂದು ಬೇಡಿದಳು. 

ಮಂದಸ್ಮಿತೆಯಾದ ಅಮೃತೇಶ್ವರೀ ದೇವಿಯು ತಥಾಸ್ತು ಎಂದಳು. ಅಲ್ಲದೇ ಎಲೈ ಕುಂಭಮುಖಿಯೇ ! ಋಷಿ ಶಾಪದಿಂದ ನಿನಗೆ ಮಕ್ಕಳನ್ನು ಪಡೆಯುವ ಭಾಗ್ಯ ಇಲ್ಲ. ಆ ಕಾರಣದಿಂದಲೇ “ ನಾನು ಮಕ್ಕಳನ್ನು ಪಡೆಯುವಂತೆ ಅನುಗ್ರಹಿಸು “ ಎಂದು ಕೇಳುವ ಬದಲು “ ನೀನು ಮಕ್ಕಳನ್ನು ಪಡೆ” ಎಂದು ಕೇಳಿಕೊಂಡಿರುತ್ತೀ. ಆದರೂ ಚಿಂತಿಸಬೇಡ. ಇನ್ನು ಕೆಲವೇ ಸಮಯದ ನಂತರ ಇಲ್ಲಿಗೆ ಆಗಮಿಸುವ ಶ್ರೀ ರಾಮಚಂದ್ರನಿಂದ ನಿನ್ನ ಪತಿಯಾದ ಖರಾಸುರನಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಆಗ ನೀನು ಕೂಡಾ ಅನಾಯಾಸವಾಗಿ ಇಲ್ಲಿಯೇ ನೆಲೆಸಿರುವ ನನ್ನಲ್ಲಿ ಐಕ್ಯವನ್ನು ಹೊಂದುವಿ. ಅನಂತರ ಇದೇ ಸ್ಥಳದಲ್ಲಿ ಶಿವಲಿಂಗ ಸದೃಶ್ಯವಾದ ಲಿಂಗಗಳು ಆಗಾಗ ಉತ್ಪತ್ತಿಯಾಗುತ್ತವೆ. ಇವರೇ ನಿನ್ನ ಮಕ್ಕಳೆಂತ ತಿಳಿ. ಅನಂತರ ನಾನು “ ಹಲವು ಮಕ್ಕಳ ತಾಯಿ “ ಎಂಬ ಹೆಸರಿನಿಂದ ಪ್ರಸಿದ್ಧಿ ಹೊಂದಿದವಳಾಗಿ ಭಕ್ತರಿಗೆ ಅನುಗ್ರಹವನ್ನುಂಟು ಮಾಡುತ್ತಾ ಇಲ್ಲಿ ನೆಲೆಸಿರುತ್ತೇನೆ “ ಎಂದು ತಿಳಿಸಿ ಅಲ್ಲಿಯೇ ಅಂತರ್ಧಾನ ಹೊಂದಿದಳು. ಕೆಲವು ಕಾಲಗಳ ನಂತರ ಸೀತಾ ಸಹಿತನಾದ ಶ್ರೀ ರಾಮಚಂದ್ರನು ವನವಾಸಕ್ಕೆ ಬಂದಾಗ ಶೂರ್ಪನಖಿಯ ನಿಮಿತ್ತವಾಗಿ ಖರಾಸುರನಿಗೂ ಶ್ರೀ ರಾಮನಿಗೂ ಯುದ್ಧವಾಯಿತು. 



ಶಿವನ ವರಪ್ರಸಾದದಿಂದ ಶ್ರೀ ರಾಮನೇ ಮಹಾವಿಷ್ಣುವಿನ ಅವತಾರವೆಂದು ತಿಳಿದು ಖರಾಸುರನು ಯುದ್ಧ ಮಾಡಿ ಮುಕ್ತಿಯನ್ನು ಹೊಂದಿದನು. ಕುಂಭಮುಖಿಯು ಶ್ರೀ ದೇವಿಯನ್ನು ಧ್ಯಾನ ಮಾಡುತ್ತಾ ಅಮೃತೇಶ್ವರೀ ದೇವಿಯಲ್ಲಿ ಐಕ್ಯ ಹೊಂದಿದಳು. ಅಂದಿನಿಂದ ಶ್ರೀ ಅಮೃತೇಶ್ವರೀ ದೇವಿಯ ಸನ್ನಿಧಿಯಲ್ಲಿ ಶಿವಲಿಂಗವು ಉದ್ಭವಿಸತೊಡಗಿತು. ಆದುದರಿಂದ ಶ್ರೀ ಅಮೃತೇಶ್ವರೀ ದೇವಿಯನ್ನು “ ಹಲವು ಮಕ್ಕಳ ತಾಯಿ “ ಎಂದು ಕರೆಯಲಾರಂಭಿಸಿದರು. ಈಗ ಈ ಹೆಸರೇ ಪ್ರಸಿದ್ಧವಾಗಿದೆ. 

***

ಶ್ರೀ ರಾಮಚಂದ್ರನು ದಂಡಕಾರಣ್ಯದಲ್ಲಿದ್ದ ಖರ ದೂಷಣಾದಿ ರಾಕ್ಷಸರನ್ನು ಸಂಹರಿಸಿದ ನಂತರ ಋಷಿಮುನಿಗಳು ನಿರ್ಭೀತರಾಗಿ ಅಲ್ಲಲ್ಲಿ ಆಶ್ರಮಗಳನ್ನು ಸ್ಥಾಪಿಸಿಕೊಂಡು ಯಜ್ಞಯಾಗಾದಿ ಕರ್ಮಗಳನ್ನು ಮಾಡಿಕೊಂಡಿದ್ದರು. ಆಗ ಶೂರ್ಪನಖಿಯಿಂದ ಅಕಾಲ ಮರಣಕ್ಕೆ ತುತ್ತಾದ ಅತಿಪ್ರಭೆಯ ಮಗನಾದ ಬಹುಶ್ರುತನು ಪೂರ್ವಾಜಿತ ಪಾಪಶೇಷಗಳಿಂದ ಬ್ರಹ್ಮರಾಕ್ಷಸನಾಗಿ ಇದೇ ಸ್ಥಳದಲ್ಲಿದ್ದು ಇಲ್ಲಿನ ಋಷಿಗಳನ್ನು, ಬ್ರಾಹ್ಮಣರನ್ನು ಪೀಡಿಸುತ್ತಾ ಇದ್ದನು. ಒಮ್ಮೆ ಶ್ರೀ ಅಮೃತೇಶ್ವರೀ ಸನ್ನಿಧಿಯಲ್ಲಿ ಋಷಿಗಳು ಯಜ್ಞವನ್ನು ನಡೆಸುತ್ತಿರುವಾಗ ಮಾಯಾರೂಪದಿಂದ ಬಂದು ಯಜ್ಞಶಿಷ್ಟವನ್ನು ಅಪಹರಿಸಿಕೊಂಡು ಹೋದನು. ತಮ್ಮ ಯಾಗಾದಿಗಳು ಈ ರೀತಿ ಹಾಳಾಗಿ ಹೋಗುವುದನ್ನು ನೋಡಿದ ಋಷಿಗಳು ಬ್ರಹ್ಮರಾಕ್ಷಸನ ಕೃತ್ಯವೇ ಇರಬಹುದೆಂದು ಊಹಿಸಿ ಈ ಬ್ರಹ್ಮರಾಕ್ಷಸನ ಸಂಹಾರಕ್ಕೆ ಶ್ರೀ ದೇವಿಯು ಸಮರ್ಥಳೆಂದು ತಿಳಿದು ಅನೇಕ ವಿಧವಾಗಿ ಶ್ರೀ ಅಮೃತೇಶ್ವರಿಯನ್ನು ಸ್ತೋತ್ರ ಮಾಡಿದರು. ಋಷಿಗಳ ಭಕ್ತಿಗೆ ಮೆಚ್ಚಿದ ಶ್ರೀ ದೇವಿಯು ಪ್ರತ್ಯಕ್ಷಳಾಗಿ “ ನಿಮಗೆ ಬೇಕಾದ ವರಗಳನ್ನು ಕೇಳಿರಿ “ ಎಂದು ಹೇಳಿದಳು. ಆಗ ಋಷಿಗಳು ’ಹೇ ದೇವಿಯೇ, ನಮ್ಮ ಯಜ್ಞಯಾಗಾದಿಗಳನ್ನು ನಾಶ ಮಾಡುವ ಈ ಬ್ರಹ್ಮರಾಕ್ಷಸನನ್ನು ನೀನು ಸಂಹರಿಸಿ ನಮಗೆ ರಕ್ಷಣೆಯನ್ನುಂಟು ಮಾಡಬೇಕು “ ಎಂದು ಪ್ರಾರ್ಥಿಸಿಕೊಂಡರು. ಆಗ ದೇವಿಯು ಋಷಿಗಳಿಗೆ ಅಭಯವನ್ನು ನೀಡುತ್ತಾ “ ಈ ಬ್ರಹ್ಮರಾಕ್ಷಸನನ್ನು ನಾನು ಮಹಾಮಾರಿ ಸ್ವರೂಪಿಣಿಯಾಗಿ ನಾಶಪಡಿಸಿ ನಿಮ್ಮ ಯಜ್ಞ ಯಾಗದಿಗಳನ್ನು ಸಾಂಗವಾಗಿ ನೆರವೇರುವಂತೆ ಅನುಗ್ರಹಿಸುತ್ತೇನೆ. ನೀವು ಇನ್ನು ಮುಂದೆ ಮಹಾ ’ ಮಾರೀ ’ ಸ್ವರೂಪಳಾದ ನನ್ನನ್ನು ಮದ್ಯ ಮಾಂಸಾದಿಗಳಿಂದ ಅರ್ಚಿಸಿರಿ. ನಾನು “ ಸಾತ್ವಿಕರೂಪಿಣಿಯಾದ “ ಅಮೃತೇಶ್ವರೀಯಾಗಿಯೂ “, “ ತಾಮಸರೂಪಿಣಿಯಾದ ಮಾರಿಯಾಗಿಯೂ “ ಇಲ್ಲಿ ನೆಲೆಸಿ ಇಲ್ಲಿಯ ಜನರ ಸಕಲ ಸಂಕಷ್ಟಗಳನ್ನು ಪರಿಹರಿಸುತ್ತಾ ಇರುತ್ತೇನೆಂದು “ ಅಭಯಕೊಟ್ಟು ಅಂತರ್ಧಾನ ಹೊಂದಿದಳು. 

ಶ್ರೀ ದೇವಿಯು “ ಮಾರಿ ” ಸ್ವರೂಪದಿಂದ ಬ್ರಹ್ಮರಾಕ್ಷಸನನ್ನು ನಾಶ ಮಾಡಿ ಅದಕ್ಕೆ ಮುಕ್ತಿಯನ್ನು ಕರಣಿಸಿ ಇದೇ ಸನ್ನಿಧಿಯಲ್ಲಿ ನೆಲೆಸಿ ಭಕ್ತರ ಸಮಸ್ತ ರೋಗಾದಿಗಳನ್ನು ಭೂತಪ್ರೇತಾದಿ ಬಾಧೆಗಳನ್ನು ಪರಿಹರಿಸುತ್ತಾ ಜಗತ್ತಿಗೆ ಮಂಗಲವನ್ನುಂಟುಮಾಡುತ್ತಾ ಒಂದಂಶದಿಂದ “ ಮಾರಿ “ ದೇವತೆಯಾಗಿಯೂ, ಇನ್ನೊಂದಂಶದಿಂದ “ ಅಮೃತೇಶ್ವರೀ” ಯಾಗಿಯೂ ವಿರಾಜಿಸುತ್ತಾಳೆ. 

Saturday, June 10, 2017

ಪಾರ್ವತಮ್ಮ ರಾಜ್ ಕುಮಾರ್ ಎನ್ನುವ ವಜ್ರೇಶ್ವರಿ ಭಾಗ - 4

ಒಬ್ಬ ಗಟ್ಟಿಗಿತ್ತಿಯ ನಿರ್ಗಮನ

***

ಗಾಂಧಿನಗರದ ಹೆಡ್ಡಾಫಿಸಿನಂತಿದ್ದ ಸದಾಶಿವನ ಗರದ ಗಟ್ಟಿಗಿತ್ತಿ ಹೆಣ್ಣು ಮಗಳು ಪಾರ್ವತಮ್ಮ ರಾಜ್‌ಕುಮಾರ್ ಇನ್ನಿಲ್ಲ ಎನ್ನುವ ಮೂಲಕ ಒಂದಿಡೀ ಗಾಂಧಿನಗರವೇ ಸೊರಗಿದಂತಿದೆ. ರಾಜ್ ಕುಟುಂಬದ ಆಧಾರ ಸ್ತಂಭವಾಗಿದ್ದ, ಗಾಂಧಿನಗರದ ಹಿರಿಮಗಳಂತಿದ್ದ ಪಾರ್ವತಮ್ಮನವರು ಇತ್ತೀಚೆಗೆ ಬ್ರೆಸ್ಟ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಸಹಜವಾಗಿಯೇ ಬಹು ಅಂಗಾಂಗಗಳ ವೈಫಲ್ಯತೆ ಅವರನ್ನು ಹೈರಾಣಾಗಿಸಿತ್ತು. ಪ್ರತಿ ಆರು ಗಂಟೆ ಗೊಮ್ಮೆ ಡಯಾಲಿಸಿಸ್ ಮಾಡಲಾಗು ತ್ತಿತ್ತು. ಎಂ.ಎಸ್.ರಾಮಯ್ಯ ಆಸ್ಪತ್ರೆ ಯಲ್ಲಿ ಕಳೆದ ಎರಡು ವಾರಗಳಿಂದ ತೀವ್ರ ನಿಗಾ ಘಟಕದಲ್ಲಿದ್ದ ಪಾರ್ವತಮ್ಮ ನವರು ನೆನ್ನೆ ಬುಧವಾರ ಬೆಳಗಿನ ಜಾವ ನಾಲ್ಕು-ನಾಲ್ಕುವರೆಗೆ ಶಾಶ್ವತ ವಾಗಿ ಕಣ್ಣು ಮುಚ್ಚುವುದರ ಮೂಲಕ ಈ ಲೋಕದಿಂದಲೇ ನಿರ್ಗಮಿಸಿದ್ದಾರೆ. ಕಾಕತಾಳೀಯ ವೆಂದರೆ ರಾಜ್ ಹಾಗೂ ವರದಪ್ಪ ಕೂಡ ಬುಧವಾರ ದಂದೇ ನಿರ್ಗಮಿಸಿದ್ದರು.

(ಪಾರ್ವತಮ್ಮ ರಾಜ್ ಕುಮಾರ್ ಕುರಿತಂತೆ ಖ್ಯಾತ ಪತ್ರಕರ್ತರಾದ ರವಿ ಬೆಳೆಗೆರೆ ತಮ್ಮ ಪತ್ರಿಕೆ 'ಹಾಯ್ ಬೆಂಗಳೂರು' ನಲ್ಲಿ  ಬರೆದುಕೊಂಡ ಲೇಖನದ ಸಾಲುಗಳು)






















Friday, June 09, 2017

ಪಾರ್ವತಮ್ಮ ರಾಜ್ ಕುಮಾರ್ ಎನ್ನುವ ವಜ್ರೇಶ್ವರಿ ಭಾಗ - 3

ಬಡತನದಲ್ಲೂ ನಮ್ಮ ಪ್ರೀತಿ ಚೆನ್ನಾಗಿತ್ತು
----------------------------------------

ಚಿತ್ರೋದ್ಯಮದಲ್ಲಿ ನಾವು ನಡೆದು ಬಂದ ಹಾದಿ ಹೂವಿನ ಹಾಸಿಗೆಯೇನೂ ಆಗಿರಲಿಲ್ಲ. ಕಷ್ಟ ಇತ್ತು, ಜೊತೆಗೇ ಸುಖವೂ ಇತ್ತು. ಕಷ್ಟದಲ್ಲೇ ಹೆಚ್ಚಿನ ಸುಖ ಇರುತ್ತೋ ಏನೋ? ನನಗೆ ಎಷ್ಟೋ ಸಲ ಹಾಗನ್ನಿಸಿದೆ.


ಆಗೆಲ್ಲ ಮನೆ ನೋಡ್ಕೋತಿದ್ದವಳು ನಾನೇ. ಕೈಯಲ್ಲಿ ದುಡ್ಡಿಲ್ಲದ ಬಡತನದ ದಿನಗಳಲ್ಲೇ ನಾವು ಸುಖವಾಗಿದ್ವೋ ಏನೋ? ಒಂದೊಂದು ಸಾರಿ ಹಾಗನ್ನಿಸುತ್ತೆ. ಆಗ ವಾರಕ್ಕೊಂದು ಸಲ ಎಲೆಕ್ಟ್ರಿಕ್ ಟ್ರೇನ್ ಹತ್ತಿ ಬೀಚಿಗೆ ಹೋಗ್ತಾ ಇದ್ವಿ. ತಿಂಗಳಿಗೆ ಒಂದು ಸಲ ತಿರುಪತಿಗೆ ಹೋಗ್ತಿದ್ವಿ. ಎಲ್ಲರೂ ಒಟ್ಟಿಗೆ ಕೂತು ಊಟ ಮಾಡ್ತಿದ್ವಿ. ಆಗ ನಾವೆಲ್ಲ ಏನೇ ಆದ್ರೂ ಊಟ ಮಾತ್ರ ಒಟ್ಟಿಗೇ ಮಾಡ್ತಿದ್ವಿ. ಎಲ್ಲರೂ ನೆಲದಲ್ಲಿ ಕುಳಿತು ಊಟ ಮಾಡೋದು. ನಾನೇ ಎಲ್ಲರಿಗೂ ಕೈತುತ್ತು ಹಾಕಿದ್ದೆ.

ಆಮೇಲಾಮೇಲೆ ಶೂಟಿಂಗಿಗೂ ನಾನು ಹೋಗ್ತಿದ್ದೆ. ನನಗೆ ತುಂಬ ಮೆಚ್ಚುಗೆಯಾದೋರು ಪಂಡರಿಬಾಯಿ. ಅವರನ್ನು ನಾವು ಇವತ್ತಿಗೂ ನೆನಸ್ಕೋಬೇಕು. ನಮ್ಮೆಜಮಾನ್ರಿಗೆ ಅಷ್ಟು ಇಂಗ್ಲಿಷ್ ಗೊತ್ತಿರಲಿಲ್ಲ. ಸೆಟ್‌ನಲ್ಲಿ ಡೈರೆಕ್ಟರ್ ಏನೋ ಸೂಚನೆ ಕೊಟ್ಟಾಗ ಅದನ್ನು ಪಂಡರಿಬಾಯಿ ಮೆತ್ತಗೆ ಯಜಮಾನರಿಗೆ ಅರ್ಥವಾಗೋ ಹಾಗೇ ಹೇಳ್ತಿದ್ರು. ಅವರೂ ಅದನ್ನು ನೆನಪಿಸ್ಕೋತಾರೆ.

ಆಗೆಲ್ಲ ನಮಗೆ ಕೆಲಸ ಇರ್ತಿರಲಿಲ್ಲ. ಯಾಕೆಂದರೆ ಬರೀ ಡಬ್ಬಿಂಗ್ ಸಿನಿಮಾಗಳೇ ಬರ್ತಿದ್ವು. ನಾವೆಲ್ಲ ಕೆಲಸ ಇಲ್ಲದಾಗ ‘ಕನ್ನಡ ಚಲನಚಿತ್ರ ಕಲಾವಿದರ ಸಂಘ, ಮದ್ರಾಸು’ ಅನ್ನೋ ಹೆಸರಿನ ನಾಟಕ ಕಂಪೆನಿ ಮಾಡಿಕೊಂಡು ಕರ್ನಾಟಕದಲ್ಲಿ ನಾಟಕ ಆಡ್ತಾ ಇದ್ವಿ. ಅಲ್ಲಿ ಆಡ್ತಿದ್ದದ್ದು ಮೂರೇ ನಾಟಕ; ಕಣ್ಣಪ್ಪ, ಸಾಹುಕಾರ ಮತ್ತು ಎಚ್ಚಮನಾಯ್ಕ, ಅದರಲ್ಲಿ ಸುಮಾರು ಮೂವತ್ತು ಮಂದಿ ಇದ್ರು. ಅದವಾನಿ ಲಕ್ಷ್ಮೀದೇವಿ, ರಮಾದೇವಿ, ಮೈಸೂರು ಲಕ್ಷ್ಮೀ, ಕುಳ್ಳಿ ಜಯ, ಅಶ್ವತ್ಥ ಕೃಷ್ಣಶಾಸ್ತ್ರಿ, ರಾಮಚಂದ್ರ ಶಾಸ್ತ್ರಿ, ಜಿವಿ ಅಯ್ಯರ್, ಬಾಲಣ್ಣ, ನರಸಿಂಹರಾಜು.. ಅಷ್ಟೂ ಮಂದಿಗೂ ಆ ನಾಟಕ ಕಂಪೆನಿಯಿಂದಲೇ ಊಟ.


ಕರ್ನಾಟಕದ ಎಲ್ಲಾ ಕಡೆಯಲ್ಲೂ ನಾಟಕ ಮಾಡ್ತಾ ಇದ್ವಿ. ಆದರೆ ಮಂಗಳೂರಲ್ಲಿ ನಾಟಕ ಮಾಡಿದಾಗ ಮಾತ್ರ ಕಾಸು ಹುಟ್ಟಲಿಲ್ಲ. ಕೊನೆಗೆ ಬೆಳಗಾವಿಯಲ್ಲಿ ನಾಟಕ ಮಾಡಿ ಆ ಹಣದಲ್ಲಿ ಮಂಗಳೂರಿನ ಸಾಲ ತೀರಿಸಿದ ಪ್ರಮೇಯವೂ ಬಂದಿತ್ತು.
ಅದಾದ ಮೇಲೆ ‘ಮಹಿಷಾಸುರ ಮರ್ದಿನಿ’ ಸಿನಿಮಾದಲ್ಲಿ ಅವಕಾಶ ಸಿಕ್ತು. ಐದು ಸಾವಿರಕ್ಕೆಲ್ಲ ಒಪ್ಕೋಬೇಡ, ಹತ್ತು ಸಾವಿರ ತಗೋ ಅಂತ ಪ್ರಭಾಕರ ಶಾಸ್ತ್ರಿಗಳು ಹತ್ತು ಸಾವಿರ ಕೊಡಿಸಿದರು. ಅದಾದ ಮೇಲೆ ತುಕಾರಾಂ ಅಂತ ಒಂದು ಸಿನಿಮಾ. ಬಹುಶಃ ೧೯೬೨ರಲ್ಲಿ ಇರಬೇಕು. ಅದೇ ವರ್ಷ ಶಿವಣ್ಣ ಹುಟ್ಟಿದ್ದು. ಆಗ ಒಮ್ಮೆಗೇ ಕೈಗೆ ಐದು ಸಾವಿರ ಅಡ್ವಾನ್ಸು ಬಂತು. ಅಷ್ಟು ದುಡ್ಡು ಒಟ್ಟಿಗೆ ನೋಡಿದ್ದೇ ಆಗ.

ಆಮೇಲೂ ಪರಿಸ್ಥಿತಿಯೇನೂ ತುಂಬಾ ಸುಧಾರಿಸಲಿಲ್ಲ. ಬಂಗಾರದ ಮನುಷ್ಯ ಚಿತ್ರಕ್ಕೆ ಸಿಕ್ಕ ಸಂಭಾವನೆ ಮೂವತ್ತು ಸಾವಿರ ಮಾತ್ರ. ಆಗೆಲ್ಲ ಎಷ್ಟು ಕೊಡ್ತಾರೋ ಅಷ್ಟು ಅನ್ನೋ ಮನೋಭಾವ. ನಾನು ಬಂದ ಮೇಲೇ ವರುಷಕ್ಕೆ ಇಂತಿಷ್ಟು ಜಾಸ್ತಿ ಮಾಡೋಕೆ ಶುರುಮಾಡಿದ್ದು.

ಆಗೆಲ್ಲ ಎಷ್ಟು ಚೆನ್ನಾಗಿತ್ತು ಅನ್ನೋದಕ್ಕೆ ಇನ್ನೊಂದು ಉದಾಹರಣೆ ಕೊಡ್ತೀನಿ. ‘ರಣಧೀರ ಕಂಠೀರವ’ ಸಿನಿಮಾ ಮಾಡಿದಾಗ ತಗೊಳ್ಳೋರೇ ಇರಲಿಲ್ಲ. ಪ್ರಿಂಟ್ ಹಾಕಿಸೋಕೆ ದುಡ್ಡು ಕೊಡಿ ಅಂತ ಥಿಯೇಟರ್ ಥಿಯೇಟರ್ ಅಲೆಯೋದೇ ಆಗಿತ್ತು. ಆಗ ಭಾರತ್ ಟಾಕೀಸ್‌ನ ಷರೀಫ್ ಕರೆದು ಥಿಯೇಟರ್ ಕೊಟ್ಟರು ಆ ಥಿಯೇಟರ್ ಇರೋ ತನಕ ಅದರಲ್ಲಿ ಬರೀ ಕನ್ನಡ ಸಿನಿಮಾನೇ ಹಾಕ್ತಿದ್ರು. ಆ ಅಭಿಮಾನ ಈಗ ಯಾರಿಗಿದೆ?

* * *

ನನಗೆ ಆಗಿಂದಲೂ ಕಾದಂಬರಿಗಳನ್ನು ಓದೋ ಅಭ್ಯಾಸ. ಬಂಗಾರದ ಮನುಷ್ಯ, ಹೊಸ ಬೆಳಕು, ಎರಡು ಕನಸು, ಮಯೂರ, ಸಮಯದ ಗೊಂಬೆ ಮುಂತಾದ ಕಾದಂಬರಿಗಳನ್ನು ನಾನೇ ಓದಿ ಸಿನಿಮಾ ಮಾಡಿ ಅಂತ ಹೇಳಿದ್ದು. ನಾಗರಹಾವು ಕತೆಯನ್ನೂ ಇವರೇ ಮಾಡಬೇಕು ಅಂತ ನಂಗೆ ಆಸೆ ಇತ್ತು. ನಾನು ಓದಿದ ಮತ್ತೊಂದಷ್ಟು ಕತೆಗಳು ಇವತ್ತಿಗೂ ನೆನಪಿವೆ. ಅವನ್ನು ಸಿನಿಮಾ ಮಾಡಬೇಕು ಅನ್ನೋ ಆಸೆ ಈಗಲೂ ಇದೆ. ನೃಪತುಂಗ, ಅಂಬರೀಷ, ಕರ್ಣ, ಶಂಕರಾಚಾರ್ಯ, ವಿವೇಕಾನಂದ- ಇವೆಲ್ಲವೂ ಸಿನಿಮಾ ಆಗಬೇಕು.


ಬುದ್ಧನ ಪಾತ್ರದಲ್ಲಿ ರಾಜ್‌ಕುಮಾರ್ ನಟಿಸಬೇಕು ಅಂತ ತುಂಬ ಜನ ಹೇಳಿದ್ರು. ಆದರೆ ನನಗೆ ಅದರಲ್ಲಿ ಆಸಕ್ತಿ ಇಲ್ಲ. ಚಿಕ್ಕ ಪ್ರಾಯದ ಹೆಂಡತಿಯನ್ನೂ ಮಗನನ್ನು ಬಿಟ್ಟು ಹೋಗೋ ಗಂಡನ ಪಾತ್ರ ಅದು. ಅದು ನನಗೆ ಇಷ್ಟ ಆಗಲಿಲ್ಲ. ಒಬ್ಬೊಬ್ಬರು ಒಂದೊಂದು ಥರ ಯೋಚನೆ ಮಾಡ್ತಾರೆ ಅನ್ನಿ, ನನ್ನ ಯೋಚನೆ ಆ ದಿಕ್ಕಿನಲ್ಲಿತ್ತು. ಅದೇ ಕಾರಣಕ್ಕೆ ಮಾಸ್ತಿಯವರ ‘ಸುಬ್ಬಣ್ಣ’ ಕಾದಂಬರೀನ ರಾಜ್‌ಕುಮಾರ್ ಮಾಡಬೇಕು ಅಂದಾಗ ನಾನು ಬೇಡ ಅಂದೆ. ಅದರಲ್ಲೂ ಮನೆ ಬಿಟ್ಟು ಹೋಗೋ ಸಂದರ್ಭ ಇದೆ. ಎಚ್.ಎಲ್. ನಾಗೇಗೌಡರ ಒಂದು ಕಾದಂಬರಿಯಲ್ಲೂ ಹೆಂಡ್ತೀನ ಬಿಟ್ಟು ಹೋಗಿ ಮತ್ತೊಬ್ಬಳನ್ನು ಕಟ್ಟಿಕೊಂಡು ದೊಡ್ಡ ಮನುಷ್ಯ ಆಗೋ ಕತೆ ಇತ್ತು. ಕಟ್ಟಿಕೊಂಡ ಹೆಂಡ್ತೀನ ಬಿಟ್ಟು ಹೋದೋನು ದೊಡ್ಡ ಮನುಷ್ಯ ಹೇಗಾಗ್ತಾನೆ ಅಂತ ನಾನು ಒಪ್ಪಲಿಲ್ಲ. ಅಂಥ ಪಾತ್ರ ಮಾಡಿದರೆ ರಾಷ್ಟ್ರ ಪ್ರಶಸ್ತಿ ಬರುತ್ತೆ ಅಂತ ಯಾರೋ ಹೇಳಿದ್ರು. ಅದು ಬೇಕಾಗಿಲ್ಲ ಅಂದೆ ನಾನು.

ಮೊನ್ನೆ ಮೊನ್ನೆ ಯಾರೋ ‘ಜೋಗಿ’ ಸಿನಿಮಾ ನಿಮ್ಮ ಬ್ಯಾನರ್‌ನಲ್ಲಿ ಬರಬೇಕಿತ್ತು ಅಂದ್ರು. ಯಾವ ಬ್ಯಾನರಿನಲ್ಲಿ ಬಂದ್ರೇನಂತೆ. ಅದೂ ನಮ್ಮ ಸಿನಿಮಾನೇ ಅಂತ ಹೇಳಿದೆ ನಾನು. ಮೊದಲೆಲ್ಲ ‘ನಾವು ಹಾಗೇ ಯೋಚನೆ ಮಾಡ್ತಿದ್ವಿ. ಯಾರು ಮಾಡಿದ್ರೂ ಅದೂ ರಾಜ್‌ಕುಮಾರ್ ಸಿನಿಮಾ. ನಮ್ಮನೆಯಲ್ಲಿರೋ ಪಾತ್ರೆ, ಫರ್ನೀಚರ್ ಎಲ್ಲಾನೂ ನಾನು ಸಿನಿಮಾಕ್ಕೆ ಕೊಟ್ಟುಬಿಡ್ತಿದ್ದೆ. ಯಾಕೆಂದರೆ ಸಿನಿಮಾ ಚೆನ್ನಾಗಿ ಬರಬೇಕು ಅಂತ ನಮ್ಮ ಯೋಚನೆ.

* * *

ನನಗೆ ಪತ್ರಕರ್ತರನ್ನು ಕಂಡರಾಗೋಲ್ಲ. ಅವರನ್ನು ನಾನು ದೂರ ಇಡ್ತೀನಿ ಅಂತೆಲ್ಲ ಹೇಳ್ತಾರೆ. ಆದ್ರೆ ನನಗೆ ಅವರ ಮೇಲೆ ಅಂಥ ಸಿಟ್ಟೇನೂ ಇಲ್ಲ. ಯಾರೇ ಆಗ್ಲಿ ತಪ್ಪು ಮಾಡಿದಾಗ ಸಿಟ್ಟು ಬರುತ್ತೆ. ಸುಮ್ಮನೆ ಏನೇನೋ ಬರೆದಾಗ ಸಿಟ್ಟು ಬರುತ್ತೆ. ಅಂಥದ್ದೇ ಒಂದು ಪ್ರಸಂಗ ‘ಗಂಧದ ಗುಡಿ’ ಸಂದರ್ಭದಲ್ಲಿ ಆಯ್ತು. ರಾಜ್‌ಕುಮಾರ್ ಮತ್ತು ವಿಷ್ಣುವರ್ಧನ್ ಜೊತೆಯಲ್ಲಿರೋ ಫೋಟೋ ಅದು. ಅದರಲ್ಲಿ ರಾಜ್‌ಕುಮಾರ್ ನಗುತ್ತಾ ಕೈ ಮುಗಿದು ನಿಂತಿದ್ದರು. ಆ ಫೋಟೋ ಪ್ರಕಟಿಸಿದ ಪತ್ರಕರ್ತರೊಬ್ಬರು ಅದರ ಕೆಳಗೆ ಹೀಗೆ ಬರೆದಿದ್ದರು:


‘ರಾಜ್‌ಕುಮಾರ್ ನಗುತ್ತಿರುವುದು ಯಾಕೆ? ತನ್ನ ಪಾತ್ರ ಚೆನ್ನಾಗಿ ಬರಲಿ ಅಂತಾನಾ? ವಿಷ್ಣು ಪಾತ್ರವೇ ಚೆನ್ನಾಗಿ ಬರಲಿ ಅಂತಾನಾ? ತನ್ನ ಪಾತ್ರ ಕೆಟ್ಟು ಹೋದರೂ ಪರವಾಗಿಲ್ಲ, ವಿಷ್ಣು ಪಾತ್ರ ಚೆನ್ನಾಗಿ ಬರಲಿ ಅಂತಾನಾ?

ಇದನ್ನು ಓದಿದ ಯಾರಿಗೇ ಆದ್ರೂ ಸಿಟ್ಟು ಬರುತ್ತೋ ಇಲ್ವೋ ಹೇಳಿ. ಇದು
ಬರೆಯೋ ರೀತೀನಾ? ಹೀಗೆ ಯಾರಾದ್ರೂ ಬರೀತಾರಾ?

ಇದಾದ ಕೆಲವೇ ದಿನಗಳ ನಂತರ ನಾನು ಮೈಸೂರಿಗೆ ಹೋದೆ. ಜೊತೆಗೆ ಚಿ. ಉದಯಶಂಕರ್ ಕೂಡ ಬಂದಿದ್ದರು. ಅಲ್ಲಿ ಹೋಟೆಲಿನಲ್ಲಿ ಕುಳಿತಿರಬೇಕಾದರೆ ಆ ಪತ್ರಕರ್ತರು ಸಿಕ್ಕಿದರು. ನಾನು ಅವರನ್ನು ಸ್ವಲ್ಪ ಮಾತಾಡಬೇಕಿದೆ, ಬನ್ನಿ ಅಂತ ಕರೆದೆ.

(ಇದು ಖ್ಯಾತ ಪತ್ರಕರ್ತ ಜೋಗಿ ಅವರು ನಿರೂಪಿಸಿದ ಪಾರ್ವತಮ್ಮನವರ ಬದುಕಿನ ಅನುಭವಗಳು.)

Wednesday, June 07, 2017

ಪಾರ್ವತಮ್ಮ ರಾಜ್ ಕುಮಾರ್ ಎನ್ನುವ ವಜ್ರೇಶ್ವರಿ ಭಾಗ - 1

ಪಾರ್ವತಮ್ಮ ರಾಜ್ ಕುಮಾರ್

ಇತ್ತೀಚೆಗೆ ನಮ್ಮನ್ನಗಲಿದ ಪಾರ್ವತಮ್ಮ ರಾಜ್ ಕುಮಾರ್ ಕನ್ನಡ ಚಿತ್ರರಂಗ ಕಂಡ ಅತ್ಯಂತ ಯಶಸ್ವಿ ನಿರ್ಮಾಪಕಿ ಮಾತ್ರವಲ್ಲ ಡಾ.ರಾಜ್ ಕುಮಾರ್ ಓರ್ವ ವ್ಯಕ್ತಿಯಾಗಿ, ನಟರಾಗಿ, ನಟಸಾರ್ವಭೌಮರಾಗಿ, ಅಭಿಮಾನಿಗಳ ಪಾಲಿಗೆ ಅಣ್ಣಾವ್ರು ಆಗಿ ರೂಪುಗೊಳ್ಳಲು ಪಾರ್ವತಮ್ಮ ಅವರ ಕಾಣಿಕೆ ದೊಡ್ಡದು. ರಾಜ್ ಕುಮಾರ್ ಅವರಿಗೆ ಪಾರ್ವತಮ್ಮ ಕೇವಲ ಪತ್ನಿಯಾಗಿ ಮಾತ್ರವಲ್ಲ, ಗೆಳತಿ, ಮಾರ್ಗದರ್ಶಕಿ ಹಾಗೂ ವ್ಯಕ್ತಿತ್ವ ರೂಪಕಿ ಆಗಿದ್ದರು. ''ಪಾರ್ವತಿ ನನ್ನ ಪತ್ನಿ ಮಾತ್ರವಲ್ಲ, ನನ್ನ ತಾಯಿ ಎಂದು ಸ್ವತಃ ರಾಜ್ ಕುಮಾರ್ ಅವರೇ ಹಲವು ಬಾರಿ ಹೇಳಿಕೊಂಡಿದ್ದರು.



ಡಿಸೆಂಬರ್ 06, 1939ರಲ್ಲಿ ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿ ಪಾರ್ವತಮ್ಮ ಜನಿಸಿದರು. ಇವರ ತಂದೆ ಅಪ್ಪಾಜಿ ಗೌಡ ಶಾಲಾ ಶಿಕ್ಷಕರಾಗಿದ್ದರು. ಮತ್ತು ತಾಯಿ ಲಕ್ಷ್ಮಮ್ಮ. 8 ಜನ ಮಕ್ಕಳಲ್ಲಿ ಪಾರ್ವತಮ್ಮ ಎರಡನೇಯವರು.
ಸಿಂಗಾನಲ್ಲೂರು ಪುಟ್ಟಸ್ವಾಮಿಯ್ಯ ಹಾಗೂ ಪಾರ್ವತಮ್ಮ ಕುಟುಂಬದವರು ಸಂಬಂಧಿಕರೇ ಆಗಿದ್ದರು. ಪಾರ್ವತಮ್ಮ ಹುಟ್ಟಿದ ಸಮಯದಲ್ಲಿ ಮನೆಗೆ ಬಂದಿದ್ದ ಸಿಂಗಾನಲ್ಲೂರು ಪುಟ್ಟಸ್ವಾಮಿಯ್ಯನವರು ''ಇವಳೇ ನನ್ನ ಸೊಸೆ'' ಎಂದು ಅಂದೇ ನಿರ್ಧರಿಸಿದ್ದರಂತೆ. ಇನ್ನು ರಾಜ್ ಕುಮಾರ್ ಅವರು ಕೂಡ ಸಂಗೀತ ಕಲಿಯಲು ಪಾರ್ವತಮ್ಮ ಅವರ ಮನೆಗೆ ಹೋಗುತ್ತಿದ್ದರಂತೆ. ಆಗಲೇ ಇಬ್ಬರಲ್ಲಿ ಪರಿಚಯ ಮೂಡಿತ್ತು



1953 ಜೂನ್ 25 ರಂದು ರಾಜ್ ಕುಮಾರ್ ಅವರೊಂದಿಗೆ ಪಾರ್ವತಮ್ಮ ಅವರು ವಿವಾಹವಾದರು. ಆಗ ಅವರ ವಯಸ್ಸು ಕೇವಲ 14. ರಾಜ್ ಕುಮಾರ್ ಅವರ ವಯಸ್ಸು 24 ವರ್ಷ. ನಂಜನಗೂಡಿನ ರಾಣಪ್ಪ ಛತ್ರದಲ್ಲಿ ಇವರಿಬ್ಬರ ಮದುವೆ ನೆರವೇರಿತ್ತು. ದುರಾದೃಷ್ಟವಶತ್ ರಾಜ್ ಕುಮಾರ್ ಅವರ ತಂದೆ ಈ ಮದುವೆಗೂ ಮುಂಚೆ ವಿಧಿವಶರಾಗಿದ್ದರು
ರಾಜ್ ಕುಮಾರ್ ಅವರನ್ನ ಪಾರ್ವತಮ್ಮ ಮದುವೆಯಾದಾಗ ರಾಜ್ ಅವರು ರಂಗಭೂಮಿ ಕಲಾವಿದರಾಗಿದ್ದರು ಅಷ್ಟೇ. ಆದ್ರೆ, ಮದುವೆಯ ನಂತರ ರಾಜ್ ಕುಮಾರ್ ಅವರಿಗೆ ಅದೃಷ್ಟ ಒಲಿಯುತ್ತೆ. ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಸಿಗುತ್ತೆ. ಅದು 1954 ರಲ್ಲಿ 'ಬೇಡರ ಕಣ್ಣಪ್ಪ' ಚಿತ್ರ. ಅಲ್ಲಿವರೆಗೂ ಮುತ್ತುರಾಜ್ ಆಗಿದ್ದವರು ರಾಜ್ ಕುಮಾರ್ ಆಗಿ ಬದಲಾದರು.
ಗಾಂಧಿನಗರದಲ್ಲಿ ಸಿನಿಮಾ ಮಾಡಿ ಹಣ ಕಳೆದುಕೊಂಡೆ, ಜೀವನ ಕಳೆದುಕೊಂಡೆ ಎಂದು ಹೇಳುವ ನಿರ್ಮಾಪಕರು ಕಾಣುತ್ತಾರೆ. ಆದ್ರೆ, ಸಿನಿಮಾನೇ ಪ್ರಾಣ, ಸಿನಿಮಾನೇ ಉಸಿರು, ಸಿನಿಮಾದಿಂದಲೇ ಬದುಕು ಎಂದು ಬದುಕುತ್ತಾ, ಸಿನಿಮಾದಿಂದಲೇ ಎಲ್ಲವೂ ಸಿಕ್ಕಿದೆ ಎಂದು ಹೇಳಿಕೊಂಡ ದಿಟ್ಟ ಮಹಿಳೆ ಪಾರ್ವತಮ್ಮ ರಾಜ್ ಕುಮಾರ್. ಅದೇ ರೀತಿ ಯಶಸ್ವಿ ಸಿನಿಮಾಗಳನ್ನ ನಿರ್ಮಾಣ ಮಾಡಿ ಕನ್ನಡ ಚಿತ್ರರಂಗದ ದಿಟ್ಟೆ ನಿರ್ಮಾಪಕಿ ಎನಿಸಿಕೊಂಡಿದ್ದರು



ಅದೊಂದು ಕಾಲ. ರಾಜ್ ಕುಮಾರ್ ಅವರ ಜೊತೆ ಸಿನಿಮಾ ಮಾಡಿದ್ರೆ, ನಿರ್ಮಾಪಕರಿಗೆ ನಷ್ಟವಾಗುತ್ತೆ ಎಂಬ ಮಾತು ಕೇಳಿ ಬಂತು. ಇದರಿಂದ ರಾಜ್ ಕುಮಾರ್ ಅವರು ಬೇಸರಗೊಂಡು, ನಮಗೆ ಸಿನಿಮಾ ಬೇಡ, ಊರಿಗೆ ಹೋಗಿ ಕೃಷಿ ಮಾಡಿ ಬದುಕೋಣ ಎಂದು ನಿರ್ಧರಿಸಿದ್ದರಂತೆ. ಇಂತಹ ಸಮಯದಲ್ಲಿ ರಾಜ್ ಕುಮಾರ್ ಅವರಿಗೆ ಸಮಾಧಾನ ಪಡಿಸಿದ ಪಾರ್ವತಮ್ಮ ಅವರು ದಿಟ್ಟ ನಿರ್ಧಾರವನ್ನ ತೆಗೆದುಕೊಂಡರು. ಅದರ ಪರಿಣಾಮವೇ ಮೂಡಿ ಬಂದಿದ್ದು 'ತ್ರಿಮೂರ್ತಿ' ಚಿತ್ರ.
ಆರಂಭದಲ್ಲಿ ನಿರ್ದೇಶಕರಿಗೆ, ನಿರ್ಮಾಪಕರಿಗೆ ಕಥೆಗಳನ್ನ ಸೂಚಿಸುತ್ತಿದ್ದ ಪಾರ್ವತಮ್ಮ ರಾಜ್ ಕುಮಾರ್, 'ತ್ರಿಮೂರ್ತಿ' ಚಿತ್ರದ ಮೂಲಕ ಮೊಟ್ಟ ಮೊದಲ ಬಾರಿಗೆ ನಿರ್ಮಾಪಕರಾದರು. ಪೂರ್ಣಿಮಾ ಎಂಟರ್ ಪ್ರೈಸಸ್ ಸಂಸ್ಥೆಯನ್ನ ಹುಟ್ಟುಹಾಕಿದರು. ರಾಜ್ ಕುಮಾರ್ ಅವರ ಜೊತೆ ಸಿನಿಮಾ ಮಾಡಿದ್ರೆ, ನಷ್ಟವಾಗುತ್ತೆ ಎಂದು ಹೇಳಿದ್ದವರಿಗೆ 'ತ್ರಿಮೂರ್ತಿ' ಸಿನಿಮಾ ಮಾಡಿ ದಿಟ್ಟೆದೆಯಿಂದ ಉತ್ತರ ಕೊಟ್ಟರು

'ತ್ರಿಮೂರ್ತಿ' ಚಿತ್ರದಿಂದ ಶುರುವಾದ ಪಾರ್ವತಮ್ಮ ಅವರ ಸಿನಿಪಯಣ 'ಗಿರಿಕನ್ಯೆ', 'ಶಂಕರ್ ಗುರು', 'ತಾಯಿಗೆ ತಕ್ಕ ಮಗ', 'ವಸಂತ ಗೀತೆ', 'ಭಾಗ್ಯವಂತ', 'ಕವಿರತ್ನ ಕಾಳಿದಾಸ', 'ಹೊಸ ಬೆಳಕು', 'ಹಾಲು ಜೇನು', 'ಚಲಿಸುವ ಮೋಡಗಳು', 'ಅಪೂರ್ವ ಸಂಗಮ', 'ಒಂದು ಮುತ್ತಿನ ಕಥೆ', 'ಶ್ರುತಿ ಸೇರಿದಾಗ', 'ಆನಂದ್', 'ಅಪ್ಪು', 'ನಂಜುಂಡಿ ಕಲ್ಯಾಣ' ಹೀಗೆ ಸಾಲು ಸಾಲು ಸೂಪರ್ ಹಿಟ್ ಚಿತ್ರಗಳನ್ನ ನಿರ್ಮಾಣ ಮಾಡಿದರು. ಸುಮಾರು 80ಕ್ಕು ಅಧಿಕ ಚಿತ್ರಗಳನ್ನ ನಿರ್ಮಾಣ ಮಾಡಿರುವ ಪಾರ್ವತಮ್ಮ ಇಂದಿಗೂ ಸೋಲಿಲ್ಲದ ನಿರ್ಮಾಪಕಿ ಆಗಿ ಉಳಿದಿದ್ದಾರೆ

ಪಾರ್ವತಮ್ಮ ಅವರು ಕೇವಲ ರಾಜ್ ಕುಮಾರ್ ಅವರಿಗೆ ಮಾತ್ರ ಶಕ್ತಿ ಆಗಿರಲಿಲ್ಲ. ತಮ್ಮ ಮೂವರು ಮಕ್ಕಳಿಗೂ ಕೂಡ ಪಾರ್ವತಮ್ಮ ಯಶಸ್ಸಿನ ಮೆಟ್ಟಿಲು ಆಗಿದ್ದರು. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಎಂಬ ಮೂರು ರತ್ನಗಳನ್ನ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು

ಕನ್ನಡ ಚಿತ್ರರಂಗದ ಮಾರುಕಟ್ಟೆಗೆ ಬದಲಾವಣೆ ಮಾಡಿದ್ದು ವಜ್ರೇಶ್ವರಿ ಕಂಬೈನ್ಸ್. ಮುಂಬೈ ಕರ್ನಾಟಕ, ಮೈಸೂರು ಕರ್ನಾಟಕ, ಹೈದರಬಾದ್ ಕರ್ನಾಟಕ ಹೀಗೆ ಕನ್ನಡ ಸಿನಿಮಾಗಳಿಗೆ ಪ್ರಾಂತೀಯ ಆಧಾರದಲ್ಲಿ ವಿತರಣೆ ಮೌಲ್ಯವನ್ನ ತಂದುಕೊಟ್ಟ ಹೆಗ್ಗಳಿಕೆ ವಜ್ರೇಶ್ವರಿ ಕಂಬೈನ್ಸ್ ಗೆ ಸಲ್ಲುತ್ತೆ.


ಪಾರ್ವತಮ್ಮ ಅವರ ಆಶೀರ್ವಾದದಿಂದ ಅನೇಕ ಪ್ರತಿಭೆಗಳು ಇಂಡಸ್ಟ್ರಿಗೆ ಪರಿಚಯವಾಗಿದ್ದಾರೆ. ಸುಧಾರಾಣಿ, ಸರಳ, ವೀಣಾ, ವಿದ್ಯಾಶ್ರೀ, ಮಾಲಾಶ್ರೀ, ಮೋಹಿನಿ, ಮಮತಾಶ್ರೀ, ಪ್ರೇಮಾ, ಶಿಲ್ಪಾ, ಅನು ಪ್ರಭಾಕರ್, ರಕ್ಷಿತಾ, ರಮ್ಯಾ ಹೀಗೆ ಇನ್ನು ಹಲವು ನಟಿಯರನ್ನ ಚಿತ್ರಜಗತ್ತಿಗೆ ಪರಿಚಯಿಸಿದ್ದೇ ಪಾರ್ವತಮ್ಮ ರಾಜ್ ಕುಮಾರ್.

ರಾಜ್ ಕುಮಾರ್ ಅವರ ಕುಟುಂಬದಲ್ಲಿ ಸುಮಾರು 40 ಜನ ಇದ್ದರು. ಇನ್ನು ಮನೆಗೆ ಯಾರೇ ಬಂದರು ಅವರನ್ನ ನಗುನಗುತ್ತಾ, ಅವರ ಕಷ್ಟಗಳನ್ನ ಬಗೆಹರಿಸುತ್ತಿದ್ದರು ಪಾರ್ವತಮ್ಮ. ರಾಜ್ ಕುಮಾರ್ ಅವರ ಸಿನಿಮಾ ಅಂತ ಬ್ಯುಸಿಯಾಗಿದ್ದರು. ಈ ವೇಳೆ ಮನೆ, ಮಕ್ಕಳು ಹೀಗೆ ಎಲ್ಲವನ್ನೂ ನಿಭಾಯಿಸಿದ್ದು ಪಾರ್ವತಮ್ಮ ಅವರು. ಒಂದೇ ಮಾತಿನಲ್ಲಿ ಹೇಳಬೇಕಂದ್ರೆ ದೊಡ್ಮನೆಗೆ ಇವರು ಸಾರಥಿ ಆಗಿದ್ದರು.

ಕನ್ನಡ ಚಿತ್ರರಂಗದಲ್ಲಿ ಪಾರ್ವತಮ್ಮ ಅವರ ಸುದೀರ್ಘ ಸಾಧನೆಯನ್ನ ಗುರುತಿಸಿ, ಪಾರ್ವತಮ್ಮ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ. ದಶಕಗಳ ಕಾಲ ಕನ್ನಡ ಚಿತ್ರರಂಗಕ್ಕಾಗಿ ದುಡಿದಿರುವ ಪಾರ್ವತಮ್ಮ ಕೇವಲ ರಾಜ್ ಕುಮಾರ್ ಕುಟುಂಬಕ್ಕೆ ಮಾತ್ರ ಅಮ್ಮನಾಗಿರಲಿಲ್ಲ, ಇಡೀ ಇಂಡಸ್ಟ್ರಿಗೆ ಅಮ್ಮ ಆಗಿದ್ದರು. ಆದ್ರೆ, ಇಂದು (ಮೇ 31) ಎಲ್ಲರನ್ನ ಅಗಲಿ ಅಣ್ಣಾವ್ರನ್ನ ಸೇರಿಕೊಂಡಿದ್ದಾರೆ.

(ಇದು ಫಿಲ್ಮ್ ಬೀಟ್ ಜಾಲತಾಣದಲ್ಲಿ ಪಾರ್ವತಮ್ಮನವರ ಕುರಿತು ನೀಡಿದ್ದ ವ್ಯಕ್ತಿ ಚಿತ್ರ)