Wednesday, June 07, 2017

ಪಾರ್ವತಮ್ಮ ರಾಜ್ ಕುಮಾರ್ ಎನ್ನುವ ವಜ್ರೇಶ್ವರಿ ಭಾಗ - 1

ಪಾರ್ವತಮ್ಮ ರಾಜ್ ಕುಮಾರ್

ಇತ್ತೀಚೆಗೆ ನಮ್ಮನ್ನಗಲಿದ ಪಾರ್ವತಮ್ಮ ರಾಜ್ ಕುಮಾರ್ ಕನ್ನಡ ಚಿತ್ರರಂಗ ಕಂಡ ಅತ್ಯಂತ ಯಶಸ್ವಿ ನಿರ್ಮಾಪಕಿ ಮಾತ್ರವಲ್ಲ ಡಾ.ರಾಜ್ ಕುಮಾರ್ ಓರ್ವ ವ್ಯಕ್ತಿಯಾಗಿ, ನಟರಾಗಿ, ನಟಸಾರ್ವಭೌಮರಾಗಿ, ಅಭಿಮಾನಿಗಳ ಪಾಲಿಗೆ ಅಣ್ಣಾವ್ರು ಆಗಿ ರೂಪುಗೊಳ್ಳಲು ಪಾರ್ವತಮ್ಮ ಅವರ ಕಾಣಿಕೆ ದೊಡ್ಡದು. ರಾಜ್ ಕುಮಾರ್ ಅವರಿಗೆ ಪಾರ್ವತಮ್ಮ ಕೇವಲ ಪತ್ನಿಯಾಗಿ ಮಾತ್ರವಲ್ಲ, ಗೆಳತಿ, ಮಾರ್ಗದರ್ಶಕಿ ಹಾಗೂ ವ್ಯಕ್ತಿತ್ವ ರೂಪಕಿ ಆಗಿದ್ದರು. ''ಪಾರ್ವತಿ ನನ್ನ ಪತ್ನಿ ಮಾತ್ರವಲ್ಲ, ನನ್ನ ತಾಯಿ ಎಂದು ಸ್ವತಃ ರಾಜ್ ಕುಮಾರ್ ಅವರೇ ಹಲವು ಬಾರಿ ಹೇಳಿಕೊಂಡಿದ್ದರು.



ಡಿಸೆಂಬರ್ 06, 1939ರಲ್ಲಿ ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿ ಪಾರ್ವತಮ್ಮ ಜನಿಸಿದರು. ಇವರ ತಂದೆ ಅಪ್ಪಾಜಿ ಗೌಡ ಶಾಲಾ ಶಿಕ್ಷಕರಾಗಿದ್ದರು. ಮತ್ತು ತಾಯಿ ಲಕ್ಷ್ಮಮ್ಮ. 8 ಜನ ಮಕ್ಕಳಲ್ಲಿ ಪಾರ್ವತಮ್ಮ ಎರಡನೇಯವರು.
ಸಿಂಗಾನಲ್ಲೂರು ಪುಟ್ಟಸ್ವಾಮಿಯ್ಯ ಹಾಗೂ ಪಾರ್ವತಮ್ಮ ಕುಟುಂಬದವರು ಸಂಬಂಧಿಕರೇ ಆಗಿದ್ದರು. ಪಾರ್ವತಮ್ಮ ಹುಟ್ಟಿದ ಸಮಯದಲ್ಲಿ ಮನೆಗೆ ಬಂದಿದ್ದ ಸಿಂಗಾನಲ್ಲೂರು ಪುಟ್ಟಸ್ವಾಮಿಯ್ಯನವರು ''ಇವಳೇ ನನ್ನ ಸೊಸೆ'' ಎಂದು ಅಂದೇ ನಿರ್ಧರಿಸಿದ್ದರಂತೆ. ಇನ್ನು ರಾಜ್ ಕುಮಾರ್ ಅವರು ಕೂಡ ಸಂಗೀತ ಕಲಿಯಲು ಪಾರ್ವತಮ್ಮ ಅವರ ಮನೆಗೆ ಹೋಗುತ್ತಿದ್ದರಂತೆ. ಆಗಲೇ ಇಬ್ಬರಲ್ಲಿ ಪರಿಚಯ ಮೂಡಿತ್ತು



1953 ಜೂನ್ 25 ರಂದು ರಾಜ್ ಕುಮಾರ್ ಅವರೊಂದಿಗೆ ಪಾರ್ವತಮ್ಮ ಅವರು ವಿವಾಹವಾದರು. ಆಗ ಅವರ ವಯಸ್ಸು ಕೇವಲ 14. ರಾಜ್ ಕುಮಾರ್ ಅವರ ವಯಸ್ಸು 24 ವರ್ಷ. ನಂಜನಗೂಡಿನ ರಾಣಪ್ಪ ಛತ್ರದಲ್ಲಿ ಇವರಿಬ್ಬರ ಮದುವೆ ನೆರವೇರಿತ್ತು. ದುರಾದೃಷ್ಟವಶತ್ ರಾಜ್ ಕುಮಾರ್ ಅವರ ತಂದೆ ಈ ಮದುವೆಗೂ ಮುಂಚೆ ವಿಧಿವಶರಾಗಿದ್ದರು
ರಾಜ್ ಕುಮಾರ್ ಅವರನ್ನ ಪಾರ್ವತಮ್ಮ ಮದುವೆಯಾದಾಗ ರಾಜ್ ಅವರು ರಂಗಭೂಮಿ ಕಲಾವಿದರಾಗಿದ್ದರು ಅಷ್ಟೇ. ಆದ್ರೆ, ಮದುವೆಯ ನಂತರ ರಾಜ್ ಕುಮಾರ್ ಅವರಿಗೆ ಅದೃಷ್ಟ ಒಲಿಯುತ್ತೆ. ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಸಿಗುತ್ತೆ. ಅದು 1954 ರಲ್ಲಿ 'ಬೇಡರ ಕಣ್ಣಪ್ಪ' ಚಿತ್ರ. ಅಲ್ಲಿವರೆಗೂ ಮುತ್ತುರಾಜ್ ಆಗಿದ್ದವರು ರಾಜ್ ಕುಮಾರ್ ಆಗಿ ಬದಲಾದರು.
ಗಾಂಧಿನಗರದಲ್ಲಿ ಸಿನಿಮಾ ಮಾಡಿ ಹಣ ಕಳೆದುಕೊಂಡೆ, ಜೀವನ ಕಳೆದುಕೊಂಡೆ ಎಂದು ಹೇಳುವ ನಿರ್ಮಾಪಕರು ಕಾಣುತ್ತಾರೆ. ಆದ್ರೆ, ಸಿನಿಮಾನೇ ಪ್ರಾಣ, ಸಿನಿಮಾನೇ ಉಸಿರು, ಸಿನಿಮಾದಿಂದಲೇ ಬದುಕು ಎಂದು ಬದುಕುತ್ತಾ, ಸಿನಿಮಾದಿಂದಲೇ ಎಲ್ಲವೂ ಸಿಕ್ಕಿದೆ ಎಂದು ಹೇಳಿಕೊಂಡ ದಿಟ್ಟ ಮಹಿಳೆ ಪಾರ್ವತಮ್ಮ ರಾಜ್ ಕುಮಾರ್. ಅದೇ ರೀತಿ ಯಶಸ್ವಿ ಸಿನಿಮಾಗಳನ್ನ ನಿರ್ಮಾಣ ಮಾಡಿ ಕನ್ನಡ ಚಿತ್ರರಂಗದ ದಿಟ್ಟೆ ನಿರ್ಮಾಪಕಿ ಎನಿಸಿಕೊಂಡಿದ್ದರು



ಅದೊಂದು ಕಾಲ. ರಾಜ್ ಕುಮಾರ್ ಅವರ ಜೊತೆ ಸಿನಿಮಾ ಮಾಡಿದ್ರೆ, ನಿರ್ಮಾಪಕರಿಗೆ ನಷ್ಟವಾಗುತ್ತೆ ಎಂಬ ಮಾತು ಕೇಳಿ ಬಂತು. ಇದರಿಂದ ರಾಜ್ ಕುಮಾರ್ ಅವರು ಬೇಸರಗೊಂಡು, ನಮಗೆ ಸಿನಿಮಾ ಬೇಡ, ಊರಿಗೆ ಹೋಗಿ ಕೃಷಿ ಮಾಡಿ ಬದುಕೋಣ ಎಂದು ನಿರ್ಧರಿಸಿದ್ದರಂತೆ. ಇಂತಹ ಸಮಯದಲ್ಲಿ ರಾಜ್ ಕುಮಾರ್ ಅವರಿಗೆ ಸಮಾಧಾನ ಪಡಿಸಿದ ಪಾರ್ವತಮ್ಮ ಅವರು ದಿಟ್ಟ ನಿರ್ಧಾರವನ್ನ ತೆಗೆದುಕೊಂಡರು. ಅದರ ಪರಿಣಾಮವೇ ಮೂಡಿ ಬಂದಿದ್ದು 'ತ್ರಿಮೂರ್ತಿ' ಚಿತ್ರ.
ಆರಂಭದಲ್ಲಿ ನಿರ್ದೇಶಕರಿಗೆ, ನಿರ್ಮಾಪಕರಿಗೆ ಕಥೆಗಳನ್ನ ಸೂಚಿಸುತ್ತಿದ್ದ ಪಾರ್ವತಮ್ಮ ರಾಜ್ ಕುಮಾರ್, 'ತ್ರಿಮೂರ್ತಿ' ಚಿತ್ರದ ಮೂಲಕ ಮೊಟ್ಟ ಮೊದಲ ಬಾರಿಗೆ ನಿರ್ಮಾಪಕರಾದರು. ಪೂರ್ಣಿಮಾ ಎಂಟರ್ ಪ್ರೈಸಸ್ ಸಂಸ್ಥೆಯನ್ನ ಹುಟ್ಟುಹಾಕಿದರು. ರಾಜ್ ಕುಮಾರ್ ಅವರ ಜೊತೆ ಸಿನಿಮಾ ಮಾಡಿದ್ರೆ, ನಷ್ಟವಾಗುತ್ತೆ ಎಂದು ಹೇಳಿದ್ದವರಿಗೆ 'ತ್ರಿಮೂರ್ತಿ' ಸಿನಿಮಾ ಮಾಡಿ ದಿಟ್ಟೆದೆಯಿಂದ ಉತ್ತರ ಕೊಟ್ಟರು

'ತ್ರಿಮೂರ್ತಿ' ಚಿತ್ರದಿಂದ ಶುರುವಾದ ಪಾರ್ವತಮ್ಮ ಅವರ ಸಿನಿಪಯಣ 'ಗಿರಿಕನ್ಯೆ', 'ಶಂಕರ್ ಗುರು', 'ತಾಯಿಗೆ ತಕ್ಕ ಮಗ', 'ವಸಂತ ಗೀತೆ', 'ಭಾಗ್ಯವಂತ', 'ಕವಿರತ್ನ ಕಾಳಿದಾಸ', 'ಹೊಸ ಬೆಳಕು', 'ಹಾಲು ಜೇನು', 'ಚಲಿಸುವ ಮೋಡಗಳು', 'ಅಪೂರ್ವ ಸಂಗಮ', 'ಒಂದು ಮುತ್ತಿನ ಕಥೆ', 'ಶ್ರುತಿ ಸೇರಿದಾಗ', 'ಆನಂದ್', 'ಅಪ್ಪು', 'ನಂಜುಂಡಿ ಕಲ್ಯಾಣ' ಹೀಗೆ ಸಾಲು ಸಾಲು ಸೂಪರ್ ಹಿಟ್ ಚಿತ್ರಗಳನ್ನ ನಿರ್ಮಾಣ ಮಾಡಿದರು. ಸುಮಾರು 80ಕ್ಕು ಅಧಿಕ ಚಿತ್ರಗಳನ್ನ ನಿರ್ಮಾಣ ಮಾಡಿರುವ ಪಾರ್ವತಮ್ಮ ಇಂದಿಗೂ ಸೋಲಿಲ್ಲದ ನಿರ್ಮಾಪಕಿ ಆಗಿ ಉಳಿದಿದ್ದಾರೆ

ಪಾರ್ವತಮ್ಮ ಅವರು ಕೇವಲ ರಾಜ್ ಕುಮಾರ್ ಅವರಿಗೆ ಮಾತ್ರ ಶಕ್ತಿ ಆಗಿರಲಿಲ್ಲ. ತಮ್ಮ ಮೂವರು ಮಕ್ಕಳಿಗೂ ಕೂಡ ಪಾರ್ವತಮ್ಮ ಯಶಸ್ಸಿನ ಮೆಟ್ಟಿಲು ಆಗಿದ್ದರು. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಎಂಬ ಮೂರು ರತ್ನಗಳನ್ನ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು

ಕನ್ನಡ ಚಿತ್ರರಂಗದ ಮಾರುಕಟ್ಟೆಗೆ ಬದಲಾವಣೆ ಮಾಡಿದ್ದು ವಜ್ರೇಶ್ವರಿ ಕಂಬೈನ್ಸ್. ಮುಂಬೈ ಕರ್ನಾಟಕ, ಮೈಸೂರು ಕರ್ನಾಟಕ, ಹೈದರಬಾದ್ ಕರ್ನಾಟಕ ಹೀಗೆ ಕನ್ನಡ ಸಿನಿಮಾಗಳಿಗೆ ಪ್ರಾಂತೀಯ ಆಧಾರದಲ್ಲಿ ವಿತರಣೆ ಮೌಲ್ಯವನ್ನ ತಂದುಕೊಟ್ಟ ಹೆಗ್ಗಳಿಕೆ ವಜ್ರೇಶ್ವರಿ ಕಂಬೈನ್ಸ್ ಗೆ ಸಲ್ಲುತ್ತೆ.


ಪಾರ್ವತಮ್ಮ ಅವರ ಆಶೀರ್ವಾದದಿಂದ ಅನೇಕ ಪ್ರತಿಭೆಗಳು ಇಂಡಸ್ಟ್ರಿಗೆ ಪರಿಚಯವಾಗಿದ್ದಾರೆ. ಸುಧಾರಾಣಿ, ಸರಳ, ವೀಣಾ, ವಿದ್ಯಾಶ್ರೀ, ಮಾಲಾಶ್ರೀ, ಮೋಹಿನಿ, ಮಮತಾಶ್ರೀ, ಪ್ರೇಮಾ, ಶಿಲ್ಪಾ, ಅನು ಪ್ರಭಾಕರ್, ರಕ್ಷಿತಾ, ರಮ್ಯಾ ಹೀಗೆ ಇನ್ನು ಹಲವು ನಟಿಯರನ್ನ ಚಿತ್ರಜಗತ್ತಿಗೆ ಪರಿಚಯಿಸಿದ್ದೇ ಪಾರ್ವತಮ್ಮ ರಾಜ್ ಕುಮಾರ್.

ರಾಜ್ ಕುಮಾರ್ ಅವರ ಕುಟುಂಬದಲ್ಲಿ ಸುಮಾರು 40 ಜನ ಇದ್ದರು. ಇನ್ನು ಮನೆಗೆ ಯಾರೇ ಬಂದರು ಅವರನ್ನ ನಗುನಗುತ್ತಾ, ಅವರ ಕಷ್ಟಗಳನ್ನ ಬಗೆಹರಿಸುತ್ತಿದ್ದರು ಪಾರ್ವತಮ್ಮ. ರಾಜ್ ಕುಮಾರ್ ಅವರ ಸಿನಿಮಾ ಅಂತ ಬ್ಯುಸಿಯಾಗಿದ್ದರು. ಈ ವೇಳೆ ಮನೆ, ಮಕ್ಕಳು ಹೀಗೆ ಎಲ್ಲವನ್ನೂ ನಿಭಾಯಿಸಿದ್ದು ಪಾರ್ವತಮ್ಮ ಅವರು. ಒಂದೇ ಮಾತಿನಲ್ಲಿ ಹೇಳಬೇಕಂದ್ರೆ ದೊಡ್ಮನೆಗೆ ಇವರು ಸಾರಥಿ ಆಗಿದ್ದರು.

ಕನ್ನಡ ಚಿತ್ರರಂಗದಲ್ಲಿ ಪಾರ್ವತಮ್ಮ ಅವರ ಸುದೀರ್ಘ ಸಾಧನೆಯನ್ನ ಗುರುತಿಸಿ, ಪಾರ್ವತಮ್ಮ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ. ದಶಕಗಳ ಕಾಲ ಕನ್ನಡ ಚಿತ್ರರಂಗಕ್ಕಾಗಿ ದುಡಿದಿರುವ ಪಾರ್ವತಮ್ಮ ಕೇವಲ ರಾಜ್ ಕುಮಾರ್ ಕುಟುಂಬಕ್ಕೆ ಮಾತ್ರ ಅಮ್ಮನಾಗಿರಲಿಲ್ಲ, ಇಡೀ ಇಂಡಸ್ಟ್ರಿಗೆ ಅಮ್ಮ ಆಗಿದ್ದರು. ಆದ್ರೆ, ಇಂದು (ಮೇ 31) ಎಲ್ಲರನ್ನ ಅಗಲಿ ಅಣ್ಣಾವ್ರನ್ನ ಸೇರಿಕೊಂಡಿದ್ದಾರೆ.

(ಇದು ಫಿಲ್ಮ್ ಬೀಟ್ ಜಾಲತಾಣದಲ್ಲಿ ಪಾರ್ವತಮ್ಮನವರ ಕುರಿತು ನೀಡಿದ್ದ ವ್ಯಕ್ತಿ ಚಿತ್ರ)

No comments:

Post a Comment