Saturday, August 29, 2015

ಸಲ್ಲೇಖನ ಮರಣ ಆತ್ಮಹತ್ಯೆಯ ಇನ್ನೊಂದು ರೂಪವೆ?

ಜೈನ ಧರ್ಮ ಪವಿತ್ರ ಆಚರಣೆಯಾದ ಸಲ್ಲೇಖನ ವ್ರತಕ್ಕೆ ನಿಷೇಧ ಹೇರಿ ರಾಜಸ್ಥಾನ ಹೈಕೋರ್ಟ್ ಆದೇಶಿಸಿದೆ. ಸಲ್ಲೇಖನ ವ್ರತ ಆತ್ಮಹತ್ಯೆಗೆ ಸಮಾನವಾದದು, ಅದನ್ನು ನಿಷೇಧಿಸಬೇಕು ಎಂದು ನಿಖಿಲ್ ಸೋನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ರಾಜಸ್ಥಾನ ಹೈಕೋರ್ಟ್ ನ್ಯಾಯಾಧೀಶ ಸುನೀಲ್ ಅಂಬ್ಬಾವಿ ನೇತೃತ್ವದ ಖಂಡ ಪೀಠ ಐಪಿಸಿ ಸೆಕ್ಷನ್ 306(ಆತ್ಮಹತ್ಯೆಗೆ ಪ್ರೇರಣೆ), 309( ಆತ್ಮಹತ್ಯೆಗೆ ಯತ್ನ) ಪ್ರಕಾರ ಕಾನೂನು ಬಾಹಿರ. ಈ ವ್ರತ ಅನುಸರಿಸಲು ಮುಂದಾದಲ್ಲಿ ಅವರ ಮೇಲೆ ಎಫ್ಐಆರ್ ದಾಖಲಿಸಲಾಗುವುದು ಎಂದು ಜೈನರ ಆಚರಣಾ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಿದೆ. ಈ ತಿರ್ಪು ಜೈನ ಮತ್ತು ಹಿಂದು ಸಂಘಟನೆಗಳ ಕೋಪಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ತಲೆತಲಾಂತರಗಳಿಂದ ಅನುಸರಿಸಿಕೊಂಡು ಬಂದ ಈ ಸಂಪ್ರದಾಯಕ್ಕೆ ಈಗ ನಿಷೇಧ ಹೇರುತ್ತಿರುವುದೇಕೆ? ಸಲ್ಲೇಖನ ವ್ರತವನ್ನು ಯಾರು ಕೈಗೊಳ್ಳುತ್ತಾರೆ? ಈ ಆಚರಣೆಯ ಹಿಂದಿನ ಉದ್ದೇಶವೇನು? ಎನ್ನುವುದರ ಸಣ್ಣ ವಿಶ್ಲೇಷಣೆ ಇಲ್ಲಿದೆ.



"ಸಲ್ಲೇಖನ" ಪದ
ಸತ್‌ (ಶ್ಲಾಘನೀಯ), ಲೇಖನಾ (ಕಾರ್ಯಕ್ಲೇಷ) ಎಂಬ 2 ಪದಗಳು ಸಲ್ಲೇಖನವನ್ನು ವಿಧಿ ವಿಧಾನ ಸಾಧನೆ ತಪಸ್ಸು, ಯೋಗ ಎಂದೆಲ್ಲ ಗುರುತಿಸಲಾಗಿದೆ. ಇಂದ್ರಿಯ ನಿಗ್ರಹ, ಮಲವಿನಾಶ, ಕರ್ಮಕಳಂಕದಿಂದ ಮುಕ್ತಿ ಪಡೆದುಕೊಂಡು ಆತ್ಮದತ್ತ ಮನಸ್ಸನ್ನು ಕೇಂದ್ರೀಕರಿಸುವುದು.
ಸಲ್ಲೇಖನ ವ್ರತವನ್ನು ಉಲ್ಲೇಖಿಸುವ ಅತಿ ಪೂರ್ವಕಾಲದ ಕನ್ನಡ ಶಾಸನವು ಹರಪನಹಳ್ಳಿ ಜಿಲ್ಲೆಯ ಯರಂಬಳ್ಳಿಯಲ್ಲಿ ದೊರಕಿದೆ. 8ನೆಯ ಶತಮಾನದಲ್ಲಿ ಬಾದಾಮಿಯಿಂದ ಚಾಲುಕ್ಯ ಸತ್ಯಾಶ್ರಯನು ಆಳುತ್ತಿದ್ದಾಗ, ಸಿದ್ಧಣಂದಿ, ಶಿವಣಂದಿ ಮತ್ತು ಜಯಣಂದಿ ಎಂಬ ಮೂವರು ಮುನಿಗಳು ಥಾಣಿ ಆಚಾರ್ಯನ ಸನ್ನಿಧಿಯಲ್ಲಿ ಸಲ್ಲೇಖನಗೆಯ್ದು, ಮಡಿದು ಸತ್ತ ವಿವರ ಇದರಲ್ಲಿದೆ.
12ನೆಯ ಶತಮಾನಕ್ಕಿಂತ ಮುಂಚೆ ಈ ಪದವು ಶ್ರವಣಬೆಳಗೊಳದ ಶಾಸನಗಳಲ್ಲಿ ಬಳಕೆಯಾಗಿಲ್ಲ. ಆವರೆಗೂ ಪ್ರಚಾರದಲ್ಲಿದ್ದ ವ್ರತಮರಣಗಳನ್ನು ಇಲ್ಲಿಯ ಶಾಸನಗಳು ‘ಆರಾಧನಾ, ‘ಸನ್ಯಸನ, ‘ಸಮಾಧಿ, ಪದಗಳಿಂದ, ಒಂದುಬಾರಿ ಮಾತ್ರ ‘ಪಾಉಗ್ಗಮಣ ಪದದಿಂದ ಗುರುತಿಸಿರುವುವು. 13ನೆಯ ಶತಮಾನದಲ್ಲಿ ಒಮ್ಮೆ, 15ನೆಯ ಶತಮಾನದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡು, ಸಲ್ಲೇಖನ ಪದವು ದಾಖಲೆಗಳಿಂದ ಕಣ್ಮರೆಯಾಗಿಬಿಡುವುದು. ಶಾಸನಗಳಲ್ಲಿ ವ್ರತಮರಣವನ್ನು ಹೆಚ್ಚುಬಾರಿ ಗುರುತಿಸಿರುವುದು ‘ಸನ್ಯಸನ ಮತ್ತು ‘ಸಮಾಧಿ ಎಂಬ ಪದಗಳಿಂದ. ಇತಿಹಾಸದಲ್ಲಿ ಪಂಡಿತಮರಣವನ್ನು ಬರಮಾಡಿಕೊಂಡ ಏಕೈಕ ವ್ಯಕ್ತಿಯಂದರೆ, ಶಾಂತಲೆಯ ತಾಯಿ ಮಾಚಿಕಬ್ಬೆ. ಕ್ರಿ. ಶ. 1131ರಲ್ಲಿ, ತನ್ನ ಮಗಳ ಮರಣವಾರ್ತೆಯನ್ನು ಕೇಳಿ ವೈರಾಗ್ಯಕ್ಕೊಳಗಾಗಿ, ಸಲ್ಲೇಖನ ವ್ರತವನ್ನು ಸ್ವೀಕರಿಸಿ, ಅವಳು ಪಂಡಿತಮರಣ ಪಡೆದ ಕಲ್ಬರಹವಿದೆ.

ಸಲ್ಲೇಖನ ವ್ರತ
ಜೈನ ಧರ್ಮದಲ್ಲಿ ದೀಕ್ಷೆ ಪಡೆದ ವ್ಯಕ್ತಿ ತನ್ನ ಸ್ವಇಚ್ಛೆಯಿಂದ ನೀರು ಆಹಾರವನ್ನು ಬಿಟ್ಟು ಕ್ರಮಬದ್ದವಾದ ಉಪವಾಸ ಕೈಗೊಳ್ಳುತ್ತಾರೆ. ಆಹಾರ ಕ್ರಮಾಧಿಗಳನ್ನು ಬಿಡುತ್ತಾ ದೇಹದ ಮೇಲಿನ ಮಮತೆಯನ್ನು ಕಳೆದುಕೊಂಡು, ಕೊನೆ ಕ್ಷಣದವರೆಗೂ ಸಾವನ್ನು ಬಹಳ ಖುಷಿಯಿಂದಲೇ ಸ್ವೀಕರಿಸುವುದೇ ಸಲ್ಲೇಖನ ವ್ರತ.ದೇಹದಲ್ಲಿ ಬಂಧಿಸಲ್ಪಟ್ಟಿರುವ ‘ಆತ್ಮವನ್ನು ಬಿಡುಗಡೆಮಾಡಿ, ಅದನ್ನು ‘ಪರಮಾತ್ಮ ಸ್ಥಾನಕ್ಕೇರಿಸುವುದು, ಆ ಮೂಲಕ ಜನನಮರಣ ಚಕ್ರದಿಂದ ಮುಕ್ತಿ ಪಡೆದು­ಕೊಳ್ಳುವುದು, ಈ ಸಿದ್ಧಾಂತದ ಗುರಿ.
ಜೈನಸಿದ್ಧಾಂತದಲ್ಲಿ  ದೇಹತ್ಯಾಗವನ್ನು ಗುರುತಿಸುವ ಸುಮಾರು 48 ಪದಗಳಿವೆ. ಅವುಗಳೆಲ್ಲವೂ ಜೀವಿಯು ಮರಣದೆಡೆಗೆ ಹಾಕುವ  ಹೆಜ್ಜೆಗಳನ್ನು ಗುರುತಿಸುತ್ತದೆ.

ಸಲ್ಲೇಖನವನ್ನು ಏಕೆ ಕೈಗೊಳ್ಳಬೇಕು?
ಜೈನರ ಪ್ರಕಾರ, ಪ್ರತಿಯೊಂದು ಕ್ರಿಯೆ (ಆಹಾರ ಸೇವನೆಯನ್ನೂ ಸೇರಿ) ಅದು ಕರ್ಮಕ್ಕೆ ಸಂಬಂಧಿಸಿದ್ದಾಗಿದೆ. ಜೈನರು ಶುದ್ಧ ಸಸ್ಯಾಹಾರಿಗಳು, ಆದರೆ, ಸಸ್ಯಗಳಿಗೂ ಜೀವವಿದೆ ಎಂದು ನಂಬಿರುವ ಜೈನರು ತರಕಾರಿ, ಹಣ್ಣು ಮತ್ತು ಎಲೆಗಳನ್ನು ತಿನ್ನುವುದರಿಂದಲೂ ಅವುಗಳಿಗೆ ನೋವಾಗುತ್ತದೆ ಎಂದು ಭಾವಿಸತ್ತಾರೆ. ಹೀಗಾಗಿ ಅವುಗಳ ಸೇವನೆಯೂ ನಕಾರಾತ್ಮಕ ಕರ್ಮಕ್ಕೆ ಸಮಾನ. ಅವುಗಳಲ್ಲಿಯೂ ಜೀವಾಣುಗಳಿರುತ್ತವೆ. ಹೀಗಾಗಿ ಆಹಾರ ಸೇವನೆ ಸಸ್ಯಾಹಾರ ಸೇವನೆಯಿಂದ ಮರಗಳಿಗೆ ನೋವನ್ನು ಉಂಟು ಮಾಡಿದಂತೆ. ಅಷ್ಟೇ ಅಲ್ಲ ನೀರಿನಲ್ಲಿಯೂ ಸೂಕ್ಷ್ಮಾಣು ಜೀವಿಗಳು ಇರುತ್ತವೆ. ನೀರು ಕುಡಿಯುವುದು ಕೂಡ ನಕಾರಾತ್ಮಕ ಕರ್ಮಕ್ಕೆ ಕಾರಣ ಎಂಬುದು ಜೈನರ ನಂಬಿಕೆ. ದೇಹ ತ್ಯಾಗದ ವೇಳೆ ಹಳೆಯ ಕರ್ಮದ ಪಾಪದಿಂದ ದೇಹವನ್ನು ಶುದ್ಧೀಕರಿಸಿ ಮೋಕ್ಷ ಸಾಧಿಸಲು ಜೈನರು ಸಲ್ಲೇಖನ ವ್ರತ ಕೈಗೊಳ್ಳುತ್ತಾರೆ.

ಸಲ್ಲೇಖನ ಆತ್ಮಹತ್ಯೆಯಲ್ಲ
ಜೈನ ಮುನಿಗಳು ಮೊಕ್ಷ ಹಾಗೂ ಪುನರ್ಜನ್ಮಕ್ಕಾಗಿ ಸಲ್ಲೇಖನ ವ್ರತವನ್ನಾಚರಿಸುತ್ತಾರೆ. ಈ ಆಚರಣೆಯು 2500 ವರ್ಷಗಳಷ್ಟು ಪುರಾತನವಾಗಿದ್ದು, ಭಗವಾನ್ ಮಹಾವೀರನ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಅಲ್ಲದೆ, ಇದೊಂದು ಆತ್ಮಹತ್ಯೆಯ ಯತ್ನವಲ್ಲ. ಆತ್ಮಹತ್ಯೆ ಮಹಾಪಾಪ ಎಂದು ಎಲ್ಲಾ ಧರ್ಮಗಳು ಹೇಳುತ್ತವೆ. ಅದೇ ರೀತಿ, ಜೈನ ಧರ್ಮದಲ್ಲಿಯೂ ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪೆಂದು ಹೇಳಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ಮಾಡಿದ ಕರ್ಮಫ‌ಲಗಳು ಸಾವಿನ ಬಳಿಕವೂ ಹಾಗೆಯೇ ಉಳಿದುಕೊಳ್ಳುತ್ತವೆ. ಇದರಿಂದ ಜನ್ಮ ಮತ್ತು ಮರು ಹುಟ್ಟಿನಿಂದ ಪಾರಾಗಿ ಮುಕ್ತಿಹೊಂದಲು ಸಾಧ್ಯವಿಲ್ಲ. ಸಲ್ಲೇಖನ ವ್ರತದ ಬೆಂಬಲಿಗಳು ಈ ವಿಧಾನವನ್ನು ಆತ್ಮಹತ್ಯೆ ಎಂದು ಪರಿಗಣಿಸಬಾರುದು ಎಂದು ಹೇಳುತ್ತಾರೆ. 
ಇಷ್ಟಲ್ಲದೆ ಆತ್ಮಹತ್ಯೆಯಲ್ಲಿ ಹೋಗುವಂತೆ ಅರೆ ಕ್ಷಣದಲ್ಲಿ ವ್ಯಕ್ತಿಯ ಜೀವ ಹೋಗುವುದಿಲ್ಲ. ಸಲ್ಲೇಖನ ವ್ರತ ಸಂಪೂರ್ಣಗೊಳ್ಳಲು 30 ದಿನವಾದರೂ ಬೇಕು.ವ್ರತ ಕೈಗೊಳ್ಳುವ ವ್ಯಕ್ತಿ ಯಾವ ಬಗೆಯ ಮಾನಸಿಕ ಖನ್ನತೆಗೆ ಒಳಗಾಗಿ ಅಥವಾ ಭರವಸೆಯನ್ನು ಕಳೆದುಕೊಂಡಿರುವುದಿಲ್ಲ.
ಸಲ್ಲೇಖನ ವ್ರತ ಇಚ್ಛಾ ಮರಣಾಥವಾ ದಯಾ ಮರಣವಲ್ಲ. ಗುಣಪಡಿಸಲಾಗದ ನೋವಿನಿಂದ ಪರಾಗುವ ಸಲುವಾಗಿ ಉದ್ದೇಶ ಪೂರ್ವಕವಾಗಿ ಸಾವಿಗೆ ಶರಣಾಗುವುದು ಇಚ್ಛಾಮರಣವಾಗಿದೆ. ಆದರೆ, ಸಲ್ಲೇಖನ ವ್ರತ ಪ್ರಜ್ಞಾಪೂರ್ವಕವಾಗಿಯೇ ನಡೆಯುವ ಕ್ರಿಯೆಯಾಗಿದೆ. 

Saturday, August 22, 2015

ಎಚ್ಚೆಸ್ಕೆ ನೆನಪು

ಮಹಾನ್ ಅಂಕಣಕಾರ, ಕನ್ನಡ ಸಂಸ್ಕೃತಿಯ ಶ್ರೇಷ್ಠ ಸಂವಾಹಕರಾದ ಎಚ್ಚೆಸ್ಕೆ ಅವರು ನಮ್ಮೊಡನೆ ಇದ್ದಿದ್ದರೆ ಅದೇ ಮೊನ್ನೆ ಆಗಸ್ಟ್ 20ಕ್ಕೆ   95ನೇ ಹುಟ್ಟು ಹಬ್ಬ ಆಚರಿಸಿಕೊಳ್ಳಬೇಕಿತ್ತು.ಕನ್ನಡ ಪತ್ರಿಕೋದ್ಯಮದಲ್ಲಿ ಎಚ್ಚೆಸ್ಕೆ ಅವರಷ್ಟು ಸುದೀರ್ಘ ಅವಧಿಯವರೆಗೆ, ಬಹು ವ್ಯಾಪ್ತಿಯಲ್ಲಿ ಅಂಕಣದ ಕೆಲಸ ಮಾಡಿದವರು ಕಾಣಸಿಗುವುದು ಅಪರೂಪವೇ ಸರಿ. ಇಂತಹಾ ಅಪರೂಪದ ಅಂಕಣ ಬರಹಗಾರರ ಜೀವನ ಕುರಿತ ಒಂದು ಕಿರುಪರಿಚಯ ಇಲ್ಲಿದೆ.


ಎಚ್.ಎಸ್ . ಕೃಷ್ಣಸ್ವಾಮಿ ಅಯ್ಯಂಗಾರ್  (ಆಗಸ್ಟ್  20, 1920  -  ಆಗಸ್ಟ್  29, 2008)

ಎಚ್ಚೆಸ್ಕೆ ಎಂದೇ ಖ್ಯಾತರಾಗಿದ್ದ  ಹಿರಿಯ ಸಾಹಿತಿ, ಅರ್ಥಶಾಸ್ತ್ರಜ್ಞ,ಅಂಕಣಕಾರ ಎಚ್.ಎಸ್ . ಕೃಷ್ಣಸ್ವಾಮಿ ಅಯ್ಯಂಗಾರ್ ಮೈಸೂರು ಜಿಲ್ಲೆ ಕೃಷ್ಣರಾಜನಗರ ತಾಲೂಕಿನ ಹಳೆಯೂರಿನಲ್ಲಿ 1920 ರ ಆ. 20 ರಂದು ಜನಿಸಿದ್ದರು.ಅಲ್ಲೇ ಪ್ರಾಥಮಿಕ ಹಾಗೂ ಪ್ರೌಢ ವ್ಯಾಸಂಗ ಮುಗಿಸಿದರು. ನಂತರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಟರ್ ಮೀಡಿಯಟ್, ಮೈಸೂರು ವಿವಿಯಿಂದ ಎಲ್ ಕಾಂ ಮತ್ತು ಬಿ.ಕಾಂ., ಬನಾರಸ್ ವಿವಿಯಿಂದ ಎಂಎ ಪದವಿ ಗಳಿಸಿದರು. ಪತ್ರಿಕಾ ಬರಹದಲ್ಲಿ ಆಸಕ್ತಿ ಬೆಳೆಸಿಕೊಂಡು ಬೆಂಗಳೂರಿನ ದೇಶ ಬಂದು 'ಪತ್ರಿಕೆಯಲ್ಲಿ ಕೆಲ ಸಕ್ಕೆ ಸೇರಿದರು. ಅಲ್ಲಿಂದಲೇ ಪತ್ರಿಕೋದ್ಯ ಮವನ್ನು ವೃತ್ತಿಯನ್ನಾಗಿ ಸ್ವೀಕರಿಸಿದರು. ತೀ.ತಾ. ಶರ್ಮ ಅವರ ವಿಶ್ವಕರ್ನಾಟಕ' ಪತ್ರಿಕೆಯಲ್ಲಿ ಕೆಲಸ ಮಾಡಿದರು. ಬೆಂಗಳೂರಿನಲ್ಲಿ 20 ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಕೆಲಸ ನಿರ್ವಹಿಸಿದರು. ಆಗಿನ ಬೆಂಗಳೂರು ಜನಜೀವನದ ಕುರಿತೂ ಅವರು ಸಾಕಷ್ಟು ಬರಹಗಳನ್ನು ಬರೆದಿದ್ದಾರೆ.

ಅಂಕಣ ಬರಹಗಳಿಗೆ ಸಾಹಿತ್ಯ ರೂಪಕೊಟ್ಟವರು
ಕಣ ಬರಹಗಳಿಗೆ ಸಾಹಿತ್ಯ ರೂಪಕೊಟ್ಟವರು ಪ್ರೊ.ಎಚ್ಚೆಸ್ಕೆ  ಎಚ್ಚೆಸ್ಕೆ ಅವರು, ಸಾಹಿತ್ಯಕ್ಕಿಂತ ಹೆಚ್ಚಾಗಿ ನಾಡಿನ ವಿವಿಧ ಪತ್ರಿಕೆಗಳ ಮೂಲಕ ಅಂಕಣ ಬರಹಗಳಿಗೆ ಹೆಸರಾದವರು. ಅಲ್ಲದೆ ಅವರು ಅಂಕಣ ಬರಹಕ್ಕೆ ವ್ಯಕ್ತಿ, ಪರಿಸರ, ರಾಜಕೀಯ ಹಾಗೂ ರೂಪಕಗಳ ಮೂಲಕ ಸಾಹಿತ್ಯ ನೆಲೆಗಟ್ಟನ್ನು ಹಾಕಿಕೊಟ್ಟವರು ಅವರ ಬರಹಗಳಲ್ಲಿ ವೈಜ್ಞಾನಿಕ ರೀತಿಯನ್ನು ಕಾಣಬಹುದಾಗಿತ್ತು. ಅಲ್ಲದೆ, ಆಡಳಿತ ಕನ್ನಡ, ಕವಿತೆಗಳು, ಸಣ್ಣ ಕಥೆಗಳನ್ನು ಕೂಡ ಅವರು ರಚಿಸಿದ್ದಾರೆ. ಕನ್ನಡ ವಿಶ್ವಕೋಶ ರಚನೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸಿದ್ದ ಎಚ್ಚೆಸ್ಕೆ ವಾಣಿಜ್ಯಶಾಸ್ತ್ರ ಬೋಧಕರಾಗಿ, ಸಾಹಿತಿಗಳಾಗಿ, ಅಂಕಣ ಬರಹಗಾರರಾಗಿ, ಅನುವಾದಕರಾಗಿ ಸಾಹಿತ್ಯ ಲೋಕಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ.

ನಾಡಿನ ಅನೇಕ ದಿನಪತ್ರಿಕೆಗಳು, ವಾರಪತ್ರಿಕೆಗಳಲ್ಲಿ ವಾಣಿಜ್ಯ, ವ್ಯಕ್ತಿ ವಿಷಯಕ್ಕೆ ಸಂಬಂಧಿಸಿದ ಅಂಕಣ ಬರಹಗಳು, ಆರ್ಥಿಕ ಚಿಂತನೆಗಳು, ಸಾಹಿತ್ಯ ವಿಮರ್ಶೆ, ಚುಟುಕ, ಪ್ರಬಂಧಗಳನ್ನು ಬರೆದಿದ್ದಾರೆ. ತಮ್ಮ ಇಳಿವಯಸ್ಸಿನಲ್ಲೂ ತೀರಾ ಇತ್ತೀಚಿನವರೆಗೂ ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿ ಅಂಕಣವನ್ನು ಬರೆಯುತ್ತಿದ್ದರು. 1957ರಲ್ಲಿ ಮೈಸೂರಿಗೆ ಮರಳಿ, ಬನುಮಯ್ಯ ಕಾಲೇಜಿನ ಲ್ಲಿ ವಾಣಿಜ್ಯಶಾಸ್ತ್ರದಲ್ಲಿ ಅಧ್ಯಾಪಕರಾಗಿ ಕೆಲಸಕ್ಕೆ ಸೇರಿದರು. ನಿವೃತ್ತರಾಗುವವರೆಗೂ ಅವರು ಅಲ್ಲಿಯೇ ಕೆಲಸ ನಿರ್ವಹಿಸಿದರು. ಮೈಸೂರು ವಿವಿ ದೇಜಗೌ ಕುಲಪತಿಯಾಗಿದ್ದಾಗ ವಿಶ್ವಕೋಶ ಸಂಪುಟಗಳ ಮಾನವಿಕ ವಿಭಾಗಕ್ಕೆ' ಕೆಲಸಕ್ಕೆ ಸೇರಿದರು. 36 ವರ್ಷ ಸುಧಾ' ವಾರ ಪತ್ರಿಕೆಗೆ ಒಂದು ವಾರವೂ ತಪ್ಪದೆ ವ್ಯಕ್ತಿವಿಷಯವನ್ನು ಬರೆದರು. ಪ್ರೊ. ಎಚ್ಚೆಸ್ಕೆ ಅವರು ಕನ್ನಡ ಸಾಹಿತ್ಯಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಕನ್ನಡದಲ್ಲಿ ವಿಡಂಬನಾ ಸಾಹಿತ್ಯ ' ಎಂಬ ಅವರ ವಿಮರ್ಶಾತ್ಮಕ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್‌ನ ಭಾಸ್ಕರ್ ರಾವ್ ಸ್ಮಾರಕ ' ಬಹುಮಾನ ಲಭಿಸಿದೆ. ಧವನದ ಕೊನೆ', ಬಯಕೆಯ ಬಲೆ' ಮತ್ತು ಕಳ್ಳ ಹೊಕ್ಕ ಮನೆ' ಅವರ ಮೂರು ಪ್ರಸಿದ್ಧ ಕಾದಂಬರಿಗಳು. ಮಾನವನ ಐಹಿಕಾಭ್ಯುದ್ಯಯ' ಮತ್ತು ನಮ್ಮ ಶರೀರದ ರಚನೆ' ಅವರ ಭಾಷಾಂತರ ಕೃತಿಗಳು.

ಸಾಹಿತಿಯಾಗಿ ಎಚ್ಚೆಸ್ಕೆ
ಎಚ್ಚೆಸ್ಕೆ  ಪ್ರಮುಖ ಸಾಹಿತ್ಯ ಕೃತಿಗಳನ್ನು ಹೀಗೆ ಪಟ್ಟಿ ಮಾಡಬಹುದು. -ಕಾದಂಬರಿಗಳು-ಮುಕ್ತಿಮಾರ್ಗ, ಬಯಕೆಯ ಬಲೆ, ಕುರುಕ್ಷೇತ್ರ. ಕವನ ಸಂಕಲನ-ದವನದಕೊನೆ. ಲಲಿತ ಪ್ರಬಂಧ-ಕಳ್ಳ ಹೊಕ್ಕ ಮನೆ, ಜೇಡರ ಬಲೆ, ಸುರಹೊನ್ನೆ, ಚಂದ್ರಕಾಂತಿ, ಮೇಘಲಹರಿ, ಹವಳದ ಸರ. ಜೀವನಚರಿತ್ರೆ, ವ್ಯಕ್ತಿಚಿತ್ರ-ಶ್ರೀರಾಮಾನುಜ, ಎತ್ತರದ ವ್ಯಕ್ತಿಗಳು, ಡಾ. ವಿ.ಕೆ.ಆರ್.ವಿ. ರಾವ್, ಬದುಕು-ಬೆಳಕು, ಬೆಳಕು ಚೆಲ್ಲಿದ ಬದುಕು, ಲಾಲ್ ಬಹದ್ದೂರ್ ಶಾಸ್ತ್ರಿ, ಬಿ.ಆರ್. ಅಂಬೇಡ್ಕರ್, ಬಿ.ಆರ್. ಪಂತುಲು, ಯಮುನಾಚಾರ್ಯ, ಜಯಪ್ರಕಾಶ್ ನಾರಾಯಣ್. ಅರ್ಥಶಾಸ್ತ್ರ, ವಾಣಿಜ್ಯಶಾಸ್ತ್ರ-ವ್ಯಾವಹಾರಿಕ ಕನ್ನಡ, ವಾಣಿಜ್ಯ ಶಾಸ್ತ್ರ ಪರಿಚಯ, BUSINESS ENGLISH, ಬ್ಯಾಂಕಿಂಗ್ ಹೆಜ್ಜೆ ಗುರುತುಗಳು. ಹಲವಾರು ಸಂಪಾದಿತ ಕೃತಿಗಳು. ಇವರ ಹಲವಾರು ಕೃತಿಗಳು ಪಿ.ಯು. ಮತ್ತು ಪದವಿ ತರಗತಿಗಳಿಗೆ ಪಠ್ಯಪುಸ್ತಕಗಳಾಗಿ ಆಯ್ಕೆಯಾಗಿವೆ.

ಕನ್ನಡ ಸಾಹಿತ್ಯ ಲೋಕ ಎಚ್ಚೆಸ್ಕೆ ಅವರನ್ನು ಸರಿಯಾಗಿ ಪುರಸ್ಕರಿಸಿಲ್ಲ ಎಂಬ ಕೊರಗು ಅವರ ಅಭಿಮಾನಿಗಳದ್ದು. ಆದರೆ ಎಚ್ಚೆಸ್ಕೆ ಎಂದೂ ಪ್ರಶಸ್ತಿಗಾಗಿ ಹಾತೊರೆದವರಲ್ಲ. ನಾಡು ನುಡಿಗಾಗಿ ತಮಗೆ ತಿಳಿದ ರೀತಿಯಲ್ಲಿ ದುಡಿದವರು. ಅಮೂಲ್ಯವಾದ ಬರಹಗಳನ್ನು ನೀಡಿದವರು. ಆ. 26 ರಂದು ಮೈಸೂರಿನ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ವತಿಯಿಂದ ಎಚ್ಚೆಸ್ಕೆ ಅವರಿಗೆ ಅಭಿನಂದನೆ ಹಾಗೂ ಅವರ ಜನ್ಮದಿನ ಆಚರಣೆ ಮಾಡಿ, ಅವರ ಸಮಗ್ರ ಪ್ರಬಂಧ ಕೃತಿ ಅನಾವರಣಗೊಳಿಸಲಾಯಿತು.

ಅವರಿಗೆ ಸಂದ ಪ್ರಮುಖ ಪ್ರಶಸ್ತಿಗಳನ್ನು ಹೀಗೆ ಪಟ್ಟಿ ಮಾಡಬಹುದು.-

ಹಾ.ಮಾ.ನಾ. ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕರ್ನಾಟಕ ಸರಕಾರದ ಬಹುಮಾನ, ಕ.ಸಾ.ಪ. ಭಾಸ್ಕರರಾಯ ಸ್ಮಾರಕ ಬಹುಮಾನ ಮುಂತಾದುವು. ಹಿತೈಷಿಗಳು ಅರ್ಪಿಸಿದ ಷಷ್ಟ್ಯಬ್ದಿಗ್ರಂಥ-ಎಚ್ಚೆಸ್ಕೆಯವರ ಆಯ್ದ ಬರಹಗಳು. 75ರ ಅಭಿನಂದ ಗ್ರಂಥ ‘ಸಮದರ್ಶಿ.’

ತಮ್ಮನ್ನು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಸದಾ ಗುರುತಿಸಿಕೊಂಡು ಸರಳ ಜೀವನ ನಡೆಸುತ್ತಿದ್ದ ಎಚ್ಚೆಸ್ಕೆ ಅವರನ್ನು ಅಂದು ನಡೆಯುತ್ತಿದ್ದ ಬೆಂಗಳೂರು, ಮೈಸೂರಿನ ಯಾವುದೇ ಸಾಂಸ್ಕೃತಿಕ ಸಮಾರಂಭಗಳಲ್ಲಿ ಕಾಣುವುದು ಸಾಮಾನ್ಯವಿತ್ತು.

ಇಂತಹಾ ಮಹಾನ್ ಅಂಕಣಕಾರರೂ, ಕನ್ನಡ ಸೇವಕರೂ ಆದ ಎಚ್ಚೆಸ್ಕೆ ತಮ್ಮ 89ನೇ ವಯಸ್ಸಿನಲ್ಲಿ ಆಗಸ್ಟ್  29, 2008ರಂದು ಇಹಲೋಕ ಯಾತ್ರೆಯನ್ನು ಸಮಾಪ್ತಿಗೊಳಿಸಿದ್ದರು.

ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಮತ್ತೊಮ್ಮೆ ಕನ್ನಡದ ವಾರಪತ್ರಿಕೆ, ದಿನಪತ್ರಿಕೆಗಳಲ್ಲಿ, ಅವರು ಬರೆದ ಅನೇಕ ಕೃತಿಗಳನ್ನು ಆಸ್ಥೆಯಿಂದ ಓದಿ,ಎಚ್ಚೆಸ್ಕೆ ಯವರಿಗೆ, ಅವರ ಕೆಲಸಗಳಿಗೆ ಗೌರವ ಸೂಚಿಸೋಣ....

Saturday, August 15, 2015

ಕಲಾಂ: ಮರೆಯಾದರೂ ಮರೆಯಲಾಗದ ಕರ್ಮಯೋಗಿ

ಮಾನವೀಯತೆಯ ಪ್ರತಿರೂಪದಂತಿದ್ದ ಮಾಜಿ ರಾಷ್ಟ್ರಪತಿ, ಭಾರತ ರತ್ನ, ಅವುಲ್ ಫಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಂ   (83) ಇಂದು ನಮ್ಮೊಡನಿಲ್ಲ.ಭಾರತ ಸ್ವಾತಂತ್ರ್ಯ ದಿನವಾದ ಇಂದು ಅವರ ನೆನಪೇಕೋ ಬಹಳ ಕಾಡುತ್ತಲಿದೆ.ಸಾರ್ವಜನಿಕ ಜೀವನದಲ್ಲಿ ಸಾಧನೆಯ ಉತ್ತುಂಗ ಶಿಖರವನ್ನೇರಿ, ಜನಸಾಮಾನ್ಯರ ಮನದಾಳದಲ್ಲಿ ಶಾಶ್ವತವಾದ ಸ್ಥಾನ ಪಡೆಯುವ ಯಾವುದೇ ವ್ಯಕ್ತಿ  ಸ್ವತಂತ್ರ ಭಾರತದ ಚರಿತ್ರೆಯಲ್ಲಿ ವಿರಳ. ಅಂತಹ ಮೇಧಾವಿಗಳ ಪೈಕಿ ಭಾರತ ರತ್ನ ಡಾ ಕೆ ಪಿ ಜೆ ಅಬ್ದುಲ್ ಕಲಾಂ ಒಬ್ಬರೆನ್ನಬೇಕು. ಶ್ರದ್ಧೆ, ಬದ್ಧತೆ, ಪ್ರಾಮಾಣಿಕತೆ, ನಿಷ್ಠೆ, ಸರಳತೆ ಮತ್ತು ಪಾರದರ್ಶಕತೆ ಇವೆಲ್ಲವೂ ಎಲ್ಲದರಿಂದ ಮೇಳವೆತ್ತಿದ್ದ ವ್ಯಕ್ತಿತ್ವ ಅವರದ್ದು. ದೇಶದ ಯುವ ಜನತೆಗೆ ಪ್ರಾಮಾಣಿಕತೆ ಮತ್ತು ಶ್ರದ್ಧಾಭಕ್ತಿಗಳ ಪಾಠ ಕಲಿಸಲು ಅವಿರತ ಯತ್ನಿಸಿದ ಕಲಾಂ ಅಭಿವೃದ್ಧಿ ಅಥವಾ ಪ್ರಗತಿಯನ್ನು ಆಢಳಿತ ವ್ಯವಸ್ಥೆಯ ಚೌಕಟ್ಟಿನಲ್ಲೇ ವ್ಯಾಖ್ಯಾನಿಸಿದರು.

ಅವುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ (1931 - 2015)


ಅವುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂರವರು  ತಮಿಳುನಾಡು ರಾಜ್ಯದ ರಾಮೇಶ್ವರಂನಲ್ಲಿ, ೧೫ ಅಕ್ಟೋಬರ್ ೧೯೩೧ ರಂದು ತಮಿಳು ಮುಸ್ಲಿಂ ಕುಟುಂಬದಲ್ಲಿ ಜನಿಸಿದರು.ಅವರ ತಂದೆ  ಜೈನುಲಬ್ದೀನ್, ಅವರು ದೋಣಿ ಮಾಲೀಕರಾಗಿದ್ದರು ಮತ್ತು ಅವನ ತಾಯಿ ಅಶಿಮಾ ಒಬ್ಬ ಗೃಹಿಣಿ. ಕಲಾಂ ಅವರ ತಂದೆ, ಈಗ ನಿರ್ನಾಮವಾದ ಧನುಷ್ಕೋಡಿ ಮತ್ತು ರಾಮೇಶ್ವರಂ ನಡುವೆ ತಮ್ಮ ದೋಣಿಯಲ್ಲಿ ಹಿಂದು ಭಕ್ತಾದಿಗಳನ್ನು ಕರೆದುಕೊಂಡು ಹೋಗುತ್ತಿದ್ದರು.ಕಲಾಂಅವರು ಕುಟುಂಬದ ನಾಲ್ಕು ಜನ ಸಹೋದರರು ಮತ್ತು ಒಬ್ಬ ಸಹೋದರಿಯಲ್ಲಿ ಅತ್ಯಂತ ಕಿರಿಯರಾಗಿದ್ದರು. ಅವರು ಬಡ ಹಿನ್ನೆಲೆಯಿಂದ ಬಂದವರು ಮತ್ತು ತನ್ನ ಕುಟುಂಬಕ್ಕೆ ಆರ್ಥಿಕವಾಗಿ ಬೆಂಬಲಿಸುವ ಸಲುವಾಗಿ, ಕಿರಿಯ ವಯಸ್ಸಿನಲ್ಲೇ ಕೆಲಸ ಆರಂಭಿಸಿದರು. ತಮ್ಮ ತಂದೆಗೆ ಆರ್ಥಿಕವಾಗಿ ಸಹಾಯ ಮಾಡಲು, ಅವರು ಶಾಲೆಯ ನಂತರ ತಮ್ಮ ಸಂಸೂದ್ದಿನ ಕಲಾಂ ಜೊತೆಗೆ ಪತ್ರಿಕೆಗಳನ್ನು ವಿತರಣೆ ಮಾಡುತ್ತಿದ್ದರು. ಇವರ ಬಾಲ್ಯವು ಬಹಳ ಆರ್ಥಿಕ ಬಡತನದಿಂದ ಸಾಗಿತ್ತು. ಮುಂಜಾನೆ :೦೦ ಘಂಟೆಗೆ ಎದ್ದು ದಿನದ ಪಾಠಗಳನ್ನು ಓದಿ ಶಾಲೆಗೆ ಹೋಗುತ್ತಿದ್ದರು. ಅವರು ಶಾಲೆಯಲ್ಲಿ ದ್ದಾಗ ಒಬ್ಬ ಸಾಧಾರಣ ವಿಧ್ಯಾರ್ಥಿಯಾಗಿದ್ದರು, ಆದರೆ ಚುರುಕಾದ ಮತ್ತು ಕಠಿಣ ಶ್ರಮ ಪಡುವ ವಿಧ್ಯಾರ್ಥಿಯಾಗಿದ್ದರು. ಅವರಿಗೆ ಗಣಿತದಲ್ಲಿ ವಿಶೇಷ ಆಸಕ್ತಿ ಇತ್ತು, ಅವರು ಗಣಿತವನ್ನು ಗಂಟೆಗಳ ಅಧ್ಯಯನ ಮಾಡುತ್ತಿದ್ದರು. ಅವರು ರಾಮನಾಥಪುರಂ ಶ್ವಾರ್ಟ್ಜ್ ಮೆಟ್ರಿಕ್ಯುಲೇಷನ್ ಶಾಲೆಯಲ್ಲಿ ಶಿಕ್ಷಣ ಮುಗಿಸಿದ ನಂತರ ತಿರುಚಿರಾಪಳ್ಳಿಯಲ್ಲಿ ಕಲಾಂ ಸೇಂಟ್ ಜೋಸೆಫ್ಸ್ ಕಾಲೇಜಿಗೆ ಸೇರಿಕೊಂಡರು. ೧೯೫೪ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಪದವಿಯನ್ನು ಪಡೆದರು. ಕೋರ್ಸ್ ಕೊನೆಯಲ್ಲಿ ಅವರಿಗೆ ವಿಷಯದ ಬಗ್ಗೆ ಉತ್ಸಾಹ ಕಡಿಮೆಯಾಗುತ್ತಾ ಬಂತು ಮತ್ತು ವಿಷಯವನ್ನು ನಾಲ್ಕು ವರುಷಗಳ ಕಾಲ ಅಧ್ಯಯನ ಮಾಡಿದಕ್ಕೆ ಆಮೇಲೆ ಪಶ್ಚಾತಾಪ ಪಟ್ಟರು. ಅವರು ಮದ್ರಾಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತರಿಕ್ಷಯಾನ ಇಂಜಿನಿಯರಿಂಗ್ ಓದಲು ಮದ್ರಾಸ್ ಗೆ ತೆರಳಿದರು. ಕಲಾಂ ಅವರು ಕೆಲಸ ಮಾಢುತಿದ್ದಾ ಹಿರಿಯ ವರ್ಗದ ಯೋಜನೆಯ ಪ್ರಗತಿ ಬಗ್ಗೆ ಡೀನ್ ಅವರು ಅತೃಪ್ತಿ ವ್ಯಕ್ತಪಡಿಸಿ, ಇನ್ನೂ ಮೂರು ದಿನಗಳಲ್ಲಿ ಯೋಜನೆ ಮುಗಿಸದ್ದಿದರೆ, ಅವರ ವಿದ್ಯಾರ್ಥಿವೇತನ ರದ್ದು ಮಾಡುವ ಬೆದೆರಿಕೆ ಹಾಕಿದರು, ಕಲಾಂ ಅವರು ಡೀನ್ ಕೊಟ್ಟ ಗಡುವಿನಲ್ಲಿ ಯೋಜನೆ ಪೂರೈಸಿದರು. ಅವರ ಕೆಲಸದಿಂದ ಪ್ರಭಾವಿತರಾದ ಡೀನ್ ಅವರು "ನಾನು ನಿನ್ನ ಮೇಲೆ ಹೆಚ್ಚು ಒತ್ತಡ ಹಾಕಿ ಕಠಿಣವಾದ ಗಡುವಿನಲ್ಲಿ ಕೆಲಸ ಪೂರೈಸಲು ಹೇಳಿದ್ದೆ" ಎಂದು ಹೇಳಿದರು. ಎಂಟು ಸ್ಥಾನಗಳು ಖಾಲಿ ಇದ್ದ ಭಾರತೀಯ ವಾಯುಪಡೆಯಾ ಅರ್ಹತಾ ಸುತ್ತಿನಲ್ಲಿ ಒಂಬತ್ತೆನೆಯ ಸ್ಥಾನ ಪಡೆದುದ್ದರಿಂದ, ಯುದ್ದ ವಿಮಾನದ ಚಾಲಕನಾಗುವ ಅವರ ಕನಸಿನ ಅವಕಾಶ ತಪ್ಪಿಹೋಯಿತು.
ಮುಂದಿನದೆಲ್ಲಾ ಇತಿಹಾಸ. ದೇಶಕ್ಕಾಗಿ ಅವಿರತ ದುಡಿದ ಈ ಮಿಸೈಲ್ ಮ್ಯಾನ್,  ಮಾನವತಾವಾದಿ ಮೇಷ್ಟ್ರು ನಮ್ಮನ್ನೆಲ್ಲಾ ಬಿಟ್ಟು ನಡೆದಿದ್ದಾರೆನ್ನುವುದನ್ನು ಈಗಲೂ ನಂಬಲು ಕಷ್ಟವಾಗುತ್ತಿದೆ.
ಈ ಮುಂದೆ ಕಲಾಂ ಬದುಕಿನ ಪುಟಗಳಲ್ಲಿ ಘಟಿಸಿದ ಒಂದೆರಡು ಘಟನೆಗಳನ್ನು ನಾನಿಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತದ್ದೇನೆ.

ಘಟನೆ
ಅದು ಮೈಸೂರಿನ ಖಾಸಗಿ ವಿದ್ಯಾಸಂಸ್ಥೆಯೊಂದರ ಸಮಾರಂಭ. ಅಂದಿನ ರಾಷ್ಟ್ರಪತಿ ಡಾ.. ಪಿ.ಜೆ.ಅಬ್ದುಲ್ ಕಲಾಂ ಅವರೇ ಸಮಾರಂಭದ ಕೇಂದ್ರ ಬಿಂದು. ಎಂದಿನಂತೆ ನಿಗದಿತ ಸಮಯಕ್ಕೆ ಕಲಾಂ ವೇದಿಕೆ ಏರಿ, ಕಣ್ಮುಂದಿನ ಸಭಾಸದರಿಗೆ ಕೈ ಬೀಸಿ, ಮುಗುಳ್ನಗೆ ಮೂಲಕ ಶುಭ ಹಾರೈಸಿದರು.
15 ರಿಂದ 30ರೊಳಗಿನ ಕಿಶೋರ/ಕಿಶೋರಿಯರು, ತರುಣ/ತರುಣಿಯರು ಪ್ರತಿಯಾಗಿ ತಮ್ಮ ಮಂದಾಸ್ಮಿತ ಹೂ ನಗೆಯೊಂದಿಗೆ ರೋಮಾಂಚನದ ಭಾವವನ್ನು ಅಭಿವ್ಯಕ್ತಗೊಳಿಸಿದರು !
ಬೆನ್ನಲ್ಲಿಯೇ, ರಾಷ್ಟ್ರಗೀತೆ ಜನಗಣ ಮನ ಶುರುವಾಯಿತು. ಅದೇಕೋ ಏನೋ ಕೆಲ ಸೆಕೆಂಡ್ ಗಳಲ್ಲಿ ಮೈಕ್ ಕೈ ಕೊಟ್ಟಿತೆಂದು ಕಾಣುತ್ತೆ. ಪಂಜಾಬ ಸಿಂಧು ಗುಜರಾತ ಮರಾಠಸಾಲು ಕ್ಷೀಣವಾಗಲಾರಂಭಿಸಿತು. ಮುಂದೇನಾಗಬಹುದು ಎಂದು ಉಳಿದವರು ಚಿಂತಿಸುವ ವೇಳೆಯಲ್ಲಿಯೇ, ವೇದಿಕೆಯ ನಟ್ಟ ನಡುವೆ ನಿಂತಿದ್ದ ಕಲಾಂ ತಾತ, …ದ್ರಾವಿಡ ಉತ್ಕಲ ವಂಗಾ./ ವಿಂಧ್ಯ ಹಿಮಾಚಲ ಯಮುನಾ ಗಂಗಾಎಂದು ಗೀತೆಗೆ ಕಂಠವಾಗಿದ್ದರು. ಮಾತ್ರವಲ್ಲ, ಹಾಡಿಗೆ ರಾಗ ಸಂಯೋಜಿಸುವಾಗ ಆರ್ಕೇಸ್ಟ್ರಾ ತಂಡದ ಮುಖ್ಯಸ್ಥ ಸ್ಟೈಲಿನಲ್ಲಿ ನಮ್ಮ ಎರಡೂ ಕೈಗಳನ್ನು ಅಗಲಿಸಿ, ಉಳಿದ ಸಭಿಕರಿಗೆ ಗೀತೆಗೆ ಸಾಥ್ ನೀಡುವಂತೆ ಹುರಿದುಂಬಿಸುತ್ತಿದ್ದರು. ಪರಿಣಾಮ, ಉಳಿದವರೂ ಗೀತೆಗೆ ದನಿಯಾಗಿ ರಾಷ್ಟ್ರಗೀತೆಯನ್ನು ಮುಂದುವರಿಸಿದರು !

ಘಟನೆ
ಕಲಾಂ ರಾಷ್ಟ್ರಪತಿಗಳಾಗಿದ್ದ ಸಮಯದಲ್ಲಿ ಒಮ್ಮೆ ಗಲ್ಲುಶಿಕ್ಷೆಗೆ ಸಂಬಂಧಿಸಿದಂತೆ ಕಲಾಂ ಅವರು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು ಸೇರಿದಂತೆ ಹಲವು ಕಾನೂನು ಪರಿಣಿತರೊಂದಿಗೆ ಸಮಾಲೋಚನೆ ನಡೆಸಿದ್ದರು. ಪಕ್ಕದ ರೂಮಿನಲ್ಲಿ ಕುಳಿತಿರುವಂತೆ ನನಗೆ (ಕಲಾಂ ಅವರು ರಾಷ್ಟ್ರಪತಿಗಳಾಗಿದ್ದ ಅವಧಿಯಲ್ಲಿ ಅವರ ಕಾರ್ಯದರ್ಶಿಯಾಗಿದ್ದ ಪಿ ಎಂ ನಾಯರ್ ) ಸೂಚಿಸಲಾಗಿತ್ತು. ಹದಿನೈದು ನಿಮಿಷಗಳ ನಂತರ ಬೆಲ್ ಸದ್ದಾಯಿತು ಸಹಾಯಕ ಬಂದು 'ಸರ್  ನಿಮ್ಮನ್ನು ಕರೆಯುತ್ತಿದ್ದಾರೆ ಬರಬೇಕಂತೆ' ಎಂದ.
ನಾನು ಒಳ ಹೋದೆ. ರಾಷ್ಟ್ರಪತಿ ಹಾಗೂ ಅವರ ಗೆಸ್ಟ್ ಸೋಫಾದಲ್ಲಿ ಕುಳಿತಿದ್ದರು. ನಾನು ಅವರ ಮುಂದಿನ ಆಸನದಲ್ಲಿ ಕುಳಿತೆ. ಗೆಸ್ಟ್ ಹೇಳಿದರು 'ಮಿಸ್ಟರ್ ನಾಯರ್ ಗಲ್ಲು ಶಿಕ್ಷೆ ಬಗ್ಗೆ  ಚರ್ಚಿಸುತ್ತಿದ್ದೇವೆ.  ರಾಷ್ಟ್ರಪತಿಯವರು ಈ ಬಗ್ಗೆ ಸ್ಪಷ್ಟ ನಿಲುವು ಹೊಂದಿದ್ದಾರೆ ಹಾಗೂ ಅದೆನೆಂಬುದು ನಿಮಗೂ ಗೊತ್ತಿದೆ. ರಾಷ್ಟ್ರಪತಿಯವರ ನಿಲುವಿಗೆ ನಾನು ಸಮ್ಮತಿ ಸೂಚಿಸುತ್ತೇನೆ. ನಿಮ್ಮ ಅನಿಸಿಕೆ ಏನು?'
ನಾನು ಕಲಾಂ ಅವರನ್ನು ನೋಡಿದೆ. ನಾನೇನು ಹೇಳುತ್ತೆನೆಂಬುದು ಅವರಿಗೆ ಗೊತ್ತಿತ್ತು. ಅವರು ಮುಗುಳ್ನಕ್ಕರು. 'ಸರ್ ನಾನು ನನ್ನ ಅನಿಸಿಕೆ ಹೇಳಬಹುದೇ?' ಎಂದೆ. ಕಲಾಂ ತಲೆಯಾಡಿಸಿದರು. ಗೌರವಯುತವಾಗಿ ನಾನು ನನ್ನ ಅಭಿಪ್ರಾಯ ತಿಳಿಸಿದೆ. ನನ್ನ ಮಾತು ಕೇಳಿ ಆ ಕಾನೂನು ಪರಿಣಿತರಿಗೆ ಬಹಳ ಅಚ್ಚರಿಯಾಯಿತು. ಆ  ಚರ್ಚೆ ಅಲ್ಲಿಗೇ ಮುಗಿಯಿತು. ನಾನು ಅವರನ್ನು ಕಳಿಸಲು  ಹೊರಟೆ. ಕಾರನ್ನೇರುವ ಮೊದಲು ಕಾನೂನು ಪರಿಣಿತರು ನನ್ನನ್ನು ನೋಡಿ 'ಭಾರತದ ರಾಷ್ಟ್ರಪತಿಯವರೊಂದಿಗೆ ನೀವು ಈ ರೀತಿ ಮಾತನಾಡಬಹುದಾ?' ಎಂದು ಕೇಳಿದರು.
'ಹೌದು ಸರ್ ಅದರಲ್ಲೇನು ಬಂತು? ಅದು ಅವರ ತಾಕತ್ತು ಹಾಗೂ ನನ್ನ ತಾಕತ್ತೂ ಹೌದು' ಎಂದೆ. ಕಾರು ಹೊರಟಿತು.
ಒಬ್ಬ ಅಧಿಕಾರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಲಾಂ ದೊರಕಿಸಿಕೊಟ್ಟಿದ್ದರು.
ಕೊನೆಯದಾಗಿ ಭಾರತದ ಸ್ವಾತಂತ್ರ್ಯ ದಿನದ ಈ ಶುಭ ಸಮಯದಲ್ಲಿ ನೆನೆಯುವಂತೆ, ನಮ್ಮ ಹಿಂದಿನ ತಲೆಮಾರು ಗಾಂಧೀಜಿಯ ಆದರ್ಶವನ್ನು ಉದಾಹರಿಸುತ್ತಿದ್ದಂತೆಯೇ ನಾವುಗಳು ಅಬ್ದುಲ್ ಕಲಾಂ ಆದರ್ಶ ಜೀವನವನ್ನು ನಮ್ಮ ಮುಂದಿನ ತಲೆಮಾರಿಗೆ ಧಾರಾಳವಾಗಿ ಉದಾಹರಿಸಬಹುದಾಗಿದೆ. ಏನೆನ್ನುತ್ತೀರಿ?
ಎಲ್ಲಾ ಸ್ನೇಹಿತರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು.
ಜೈ ಹಿಂದ್.... ಜೈ ಭಾರತಾಂಬೆ!

Sunday, August 09, 2015

ಕಯ್ಯಾರ ಕಣ್ಮರೆ

ಗಡಿನಾಡ ಹನ್ನಡಿಗ, ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರ್ರೂ ಆಗಿದ್ದ ಶತಾಯು‍ಷಿ ಕಯ್ಯಾರ ಕಿಞ್ಞಣ್ಣ ರೈ ವಿಧಿವಶರಾಗಿದ್ದಾರೆ. ಈ ಮುಖೇನ ‘ಶತಮಾನದ ಗಾನ’ ಮೌನತಾಳಿದಂತಾಗಿದೆ. ಕಾಸರಗೋಡು ಕನ್ನಡಿಗರ ಗಟ್ಟಿ ದನಿಯೊಂದು ಮರೆಯಾಗಿದೆ.

ಹಿರಿಯ ಜೀವವು ೯೯ ವಸಂತಗಳನ್ನು ಪೂರೈಸಿ ೧೦೦ನೇ ವಸಂತಕ್ಕೆ ಕಾಲಿಟ್ಟ ಸಮಯದಲ್ಲಿ ನಾನು ನನ್ನ ಬ್ಲಾಗಿನಲ್ಲಿ ಬರೆದುಕೊಂಡ ಲೇಖನವನ್ನು ಇಂದಿನ ಅವರ ಅಗಲಿಕೆಯ ಸಮಯದಲ್ಲಿ ಇನ್ನೊಮ್ಮೆ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. 

***

೯೯ನೇ ವಸಂತಕ್ಕೆ ಕಾಲಿಟ್ಟ ನಾಡೋಜ ಕೈಯ್ಯಾರ ಕಿಞ್ಜಣ್ಣ ರೈ

 
  "ಏರುತಿಹುದು ಹಾರುತಿಹುದು ನೋಡಿ ನಮ್ಮ ಬಾವುಟ" ಗೀತೆ ಯಾರಿಗೆ ತಾನೆ ನೆನೆಪಿಲ್ಲ ಹೇಳಿ? ಇಂತಹಾ ಗೀತೆಯೊಂದನ್ನ ಬರೆದು ಕನ್ನಡ ತಾಯಿಗೆ ಸಮರ್ಪಿಸಿದ ಶ್ರೀ ಕೈಯ್ಯಾರರು ಮೊನ್ನೆ ತಾನೆ ೯೯ರ ನವ ವಸಂತಕ್ಕೆ ಕಾಲಿಟ್ಟಿದ್ದಾರೆ. 

     ಮೂಲತಹ ಕರ್ನಾಟಕದ ಭಾಗವಾಗಿದ್ದ ಕಾಸರಗೋಡಿನವರಾದ ಕೈಯ್ಯಾರರು ಕನ್ನಡ ನಾಡು ಕಂಡ ಅತ್ಯಂತ ಉಜ್ವಲ ಪ್ರತಿಭೆ. ಕನ್ನಡ ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಸಾಕಷ್ಟಿದ್ದು ಜೊತೆಗೆ ಕನ್ನಡ ಪರ ಹೋರಾಟಗಳಲ್ಲಿಯೂ ಮುಂಚೂಣಿಯಲ್ಲಿ ಕೇಳಿಬರುವ ಹೆಸರು ಇವರದು. ಅದರಲ್ಲಿಯೂ ಮುಖ್ಯವಾಗಿ ಕಾಸರಗೋಡು ಪ್ರದೇಶ ಕರ್ಣಾಟಕಕ್ಕೆ ಸೇರಬೇಕೆಂದು ಅಂದಿನಿಂದಿಂದಿನವರೆಗೂ ಹೋರಾಡುತ್ತಲೆ ಬ್ಂದಿರುವುದನ್ನು ಕನ್ನಡಿಗರಾದ ನಾವ್ಯಾರೂ ಮರೆಯಲು ಸಾಧ್ಯವಿಲ್ಲ. 

ಕಾಸರಗೋಡು ಕರ್ನಾಟಾಕಕ್ಕೆ ಸೇರಿಸಬೇಕೆಂಬ ಹೋರಾಟ ತನ್ನ ಉಚ್ಚ್ರಾಯ ಸ್ಥಿತಿಯಲ್ಲಿದ್ದ ಆ ಕಾಲಘಟ್ಟದಲ್ಲಿ "ಮನೆಗೆ ಬೆಂಕಿ ಬಿದ್ದಿದೆ ಏಳಿ ಎದ್ದೇಳಿ" ಎನ್ನುತ್ತಾ ಹೋರಾಟದ ಕಿಚ್ಚು ಹಚ್ಚಿದ್ದ ಕೈಯ್ಯಾರರ ತನುವಿಗೀಗ ೯೯ ರ ಹರೆಯವಾದರೂ ಮನಸ್ಸಿನ್ನೂ ೨೦ ರಷ್ಟೇ ಚೈತನ್ಯದಾಯಕವಾಗಿರುವುದನ್ನು ಕಾಣಬಹುದು. 

    "ತುಳು ಭಾಷೆ ತನ್ನ ಹೆತ್ತ ತಾಯಾದರೆ ಕನ್ನಡ ಸಾಕು ತಾಯಿ" ಎನ್ನುವ ಕೈಯ್ಯಾರರು ತಾನಿರುವಾಗಲೇ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ಬಯಸುತ್ತಾರೆ. 





ವ್ಯಕ್ತಿ ಪರಿಚಯ: 

    ಈಗ ಕೇರಳದಲ್ಲಿರುವ ಕಾಸರಗೋಡಿನ ಪೆರಿಯಾಲ ಗ್ರಾಮದಲ್ಲಿ ೧೯೧೫ ಜೂನ್ ೮ ರಂದು ಜನಿಸಿದ ಕೈಯ್ಯಾರ ಕಿಞ್ಜಣ್ಣ ರೈ ಕನ್ನಡದ ಹಿರಿಯ ಸಾಹಿತಿಗಳೂ ಬಹುಭಾಷಾ ವಿದ್ವಾಂಸರೂ ಹೌದು. 

    ಶ್ರೀಮುಖ, ಐಕ್ಯಗಾನ, ಕೊರಗ, ಪುನರ್ನವ, ಶತಮಾನದ ಗಾನ ಇದೇ ಮೊದಲಾದ ಕವನ ಸಂಕಲನಗಳನ್ನಲ್ಲದೆ ಕಾರ್ನಾಡು ಸದಾಶಿವರಾಯರು ಮೊದಲಾದವರ ಬಗೆಗೆ ಜೀವನ ಚರಿ
ತ್ರೆಗಳನ್ನು ಸಹ ಬರೆದು ಪ್ರಕಟಿಸಿರುವ ಕೈಯ್ಯಾರರು ರಷ್ಟ್ರಕವಿ ಗೋವಿಂದ ಪೈಗಳ ಕುರಿತಾದ ೩ ಗ್ರಂಥಗಳನ್ನು ಹೊರತಂದಿದ್ದಾರೆ. ಇಷ್ಟಲ್ಲದೆ ಇವರು ಅನುವಾದ, ಮಕ್ಕಳ ಸಾಹಿತ್ಯ ಪ್ರಕಾರಗಳಲ್ಲಿಯೂ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. "ಪ್ರಭಾತ", "ರಾಷ್ಟ್ರ ಬಂಧು", "ಸ್ವದೇಶಾಭಿಮಾನಿ" ಎನ್ನುವ ಪತ್ರಿಕೆಗಳ ಸಂಪಾದಕರಾಗಿ ಸೇವೆ ಸಲ್ಲಿಸಿರುವ ರೈಯವರು "ದುಡಿಮೆಯೇ ನನ್ನ ದೇವರು" ಎನ್ನುವ ಶ್ತ್ಮಕಥನವನ್ನು ಬರೆದು ಪ್ರಕಟಿಸಿದ್ದಾರೆ. 

    ಇಂತಹಾ ಕೈಯ್ಯಾರರ ಕಾಹಿತ್ಯ ಸೇವೆ ಗುರುತಿಸಿ ಸಾಕಷ್ಟು ಪ್ರಶಸ್ತಿಗಳು ಸಂದಿವೆ, ಅವುಗಳಲ್ಲಿ ಪ್ರಮುಖವಾಗಿ ಕರ್ನಾಟಕ ಸಾಹಿತ್ಯ ಅಕಾಡಮಿ ಪಶಸ್ತಿ, ಹಂಪಿ ವಿಶ್ವವಿದ್ಯಾನಿಲಯದ ನಾಡೋಜ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸುವರ್ಣ ಕರ್ನಾಟಕ ಏಕೀಕರಣ ಪುರಸ್ಕಾರ ಮುಂತಾದವು. ಅಲ್ಲದೆ ೨೦೦೫ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಗೆ ಭಾಜನರಾಗಿದ್ದ ರೈಗಳು ೧೯೯೭ರಲ್ಲಿ ಮಂಗಳೂರಿನಲ್ಲಿ ನಡೆದಿದ್ದ ೬೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.