Saturday, August 22, 2015

ಎಚ್ಚೆಸ್ಕೆ ನೆನಪು

ಮಹಾನ್ ಅಂಕಣಕಾರ, ಕನ್ನಡ ಸಂಸ್ಕೃತಿಯ ಶ್ರೇಷ್ಠ ಸಂವಾಹಕರಾದ ಎಚ್ಚೆಸ್ಕೆ ಅವರು ನಮ್ಮೊಡನೆ ಇದ್ದಿದ್ದರೆ ಅದೇ ಮೊನ್ನೆ ಆಗಸ್ಟ್ 20ಕ್ಕೆ   95ನೇ ಹುಟ್ಟು ಹಬ್ಬ ಆಚರಿಸಿಕೊಳ್ಳಬೇಕಿತ್ತು.ಕನ್ನಡ ಪತ್ರಿಕೋದ್ಯಮದಲ್ಲಿ ಎಚ್ಚೆಸ್ಕೆ ಅವರಷ್ಟು ಸುದೀರ್ಘ ಅವಧಿಯವರೆಗೆ, ಬಹು ವ್ಯಾಪ್ತಿಯಲ್ಲಿ ಅಂಕಣದ ಕೆಲಸ ಮಾಡಿದವರು ಕಾಣಸಿಗುವುದು ಅಪರೂಪವೇ ಸರಿ. ಇಂತಹಾ ಅಪರೂಪದ ಅಂಕಣ ಬರಹಗಾರರ ಜೀವನ ಕುರಿತ ಒಂದು ಕಿರುಪರಿಚಯ ಇಲ್ಲಿದೆ.


ಎಚ್.ಎಸ್ . ಕೃಷ್ಣಸ್ವಾಮಿ ಅಯ್ಯಂಗಾರ್  (ಆಗಸ್ಟ್  20, 1920  -  ಆಗಸ್ಟ್  29, 2008)

ಎಚ್ಚೆಸ್ಕೆ ಎಂದೇ ಖ್ಯಾತರಾಗಿದ್ದ  ಹಿರಿಯ ಸಾಹಿತಿ, ಅರ್ಥಶಾಸ್ತ್ರಜ್ಞ,ಅಂಕಣಕಾರ ಎಚ್.ಎಸ್ . ಕೃಷ್ಣಸ್ವಾಮಿ ಅಯ್ಯಂಗಾರ್ ಮೈಸೂರು ಜಿಲ್ಲೆ ಕೃಷ್ಣರಾಜನಗರ ತಾಲೂಕಿನ ಹಳೆಯೂರಿನಲ್ಲಿ 1920 ರ ಆ. 20 ರಂದು ಜನಿಸಿದ್ದರು.ಅಲ್ಲೇ ಪ್ರಾಥಮಿಕ ಹಾಗೂ ಪ್ರೌಢ ವ್ಯಾಸಂಗ ಮುಗಿಸಿದರು. ನಂತರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಟರ್ ಮೀಡಿಯಟ್, ಮೈಸೂರು ವಿವಿಯಿಂದ ಎಲ್ ಕಾಂ ಮತ್ತು ಬಿ.ಕಾಂ., ಬನಾರಸ್ ವಿವಿಯಿಂದ ಎಂಎ ಪದವಿ ಗಳಿಸಿದರು. ಪತ್ರಿಕಾ ಬರಹದಲ್ಲಿ ಆಸಕ್ತಿ ಬೆಳೆಸಿಕೊಂಡು ಬೆಂಗಳೂರಿನ ದೇಶ ಬಂದು 'ಪತ್ರಿಕೆಯಲ್ಲಿ ಕೆಲ ಸಕ್ಕೆ ಸೇರಿದರು. ಅಲ್ಲಿಂದಲೇ ಪತ್ರಿಕೋದ್ಯ ಮವನ್ನು ವೃತ್ತಿಯನ್ನಾಗಿ ಸ್ವೀಕರಿಸಿದರು. ತೀ.ತಾ. ಶರ್ಮ ಅವರ ವಿಶ್ವಕರ್ನಾಟಕ' ಪತ್ರಿಕೆಯಲ್ಲಿ ಕೆಲಸ ಮಾಡಿದರು. ಬೆಂಗಳೂರಿನಲ್ಲಿ 20 ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಕೆಲಸ ನಿರ್ವಹಿಸಿದರು. ಆಗಿನ ಬೆಂಗಳೂರು ಜನಜೀವನದ ಕುರಿತೂ ಅವರು ಸಾಕಷ್ಟು ಬರಹಗಳನ್ನು ಬರೆದಿದ್ದಾರೆ.

ಅಂಕಣ ಬರಹಗಳಿಗೆ ಸಾಹಿತ್ಯ ರೂಪಕೊಟ್ಟವರು
ಕಣ ಬರಹಗಳಿಗೆ ಸಾಹಿತ್ಯ ರೂಪಕೊಟ್ಟವರು ಪ್ರೊ.ಎಚ್ಚೆಸ್ಕೆ  ಎಚ್ಚೆಸ್ಕೆ ಅವರು, ಸಾಹಿತ್ಯಕ್ಕಿಂತ ಹೆಚ್ಚಾಗಿ ನಾಡಿನ ವಿವಿಧ ಪತ್ರಿಕೆಗಳ ಮೂಲಕ ಅಂಕಣ ಬರಹಗಳಿಗೆ ಹೆಸರಾದವರು. ಅಲ್ಲದೆ ಅವರು ಅಂಕಣ ಬರಹಕ್ಕೆ ವ್ಯಕ್ತಿ, ಪರಿಸರ, ರಾಜಕೀಯ ಹಾಗೂ ರೂಪಕಗಳ ಮೂಲಕ ಸಾಹಿತ್ಯ ನೆಲೆಗಟ್ಟನ್ನು ಹಾಕಿಕೊಟ್ಟವರು ಅವರ ಬರಹಗಳಲ್ಲಿ ವೈಜ್ಞಾನಿಕ ರೀತಿಯನ್ನು ಕಾಣಬಹುದಾಗಿತ್ತು. ಅಲ್ಲದೆ, ಆಡಳಿತ ಕನ್ನಡ, ಕವಿತೆಗಳು, ಸಣ್ಣ ಕಥೆಗಳನ್ನು ಕೂಡ ಅವರು ರಚಿಸಿದ್ದಾರೆ. ಕನ್ನಡ ವಿಶ್ವಕೋಶ ರಚನೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸಿದ್ದ ಎಚ್ಚೆಸ್ಕೆ ವಾಣಿಜ್ಯಶಾಸ್ತ್ರ ಬೋಧಕರಾಗಿ, ಸಾಹಿತಿಗಳಾಗಿ, ಅಂಕಣ ಬರಹಗಾರರಾಗಿ, ಅನುವಾದಕರಾಗಿ ಸಾಹಿತ್ಯ ಲೋಕಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ.

ನಾಡಿನ ಅನೇಕ ದಿನಪತ್ರಿಕೆಗಳು, ವಾರಪತ್ರಿಕೆಗಳಲ್ಲಿ ವಾಣಿಜ್ಯ, ವ್ಯಕ್ತಿ ವಿಷಯಕ್ಕೆ ಸಂಬಂಧಿಸಿದ ಅಂಕಣ ಬರಹಗಳು, ಆರ್ಥಿಕ ಚಿಂತನೆಗಳು, ಸಾಹಿತ್ಯ ವಿಮರ್ಶೆ, ಚುಟುಕ, ಪ್ರಬಂಧಗಳನ್ನು ಬರೆದಿದ್ದಾರೆ. ತಮ್ಮ ಇಳಿವಯಸ್ಸಿನಲ್ಲೂ ತೀರಾ ಇತ್ತೀಚಿನವರೆಗೂ ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿ ಅಂಕಣವನ್ನು ಬರೆಯುತ್ತಿದ್ದರು. 1957ರಲ್ಲಿ ಮೈಸೂರಿಗೆ ಮರಳಿ, ಬನುಮಯ್ಯ ಕಾಲೇಜಿನ ಲ್ಲಿ ವಾಣಿಜ್ಯಶಾಸ್ತ್ರದಲ್ಲಿ ಅಧ್ಯಾಪಕರಾಗಿ ಕೆಲಸಕ್ಕೆ ಸೇರಿದರು. ನಿವೃತ್ತರಾಗುವವರೆಗೂ ಅವರು ಅಲ್ಲಿಯೇ ಕೆಲಸ ನಿರ್ವಹಿಸಿದರು. ಮೈಸೂರು ವಿವಿ ದೇಜಗೌ ಕುಲಪತಿಯಾಗಿದ್ದಾಗ ವಿಶ್ವಕೋಶ ಸಂಪುಟಗಳ ಮಾನವಿಕ ವಿಭಾಗಕ್ಕೆ' ಕೆಲಸಕ್ಕೆ ಸೇರಿದರು. 36 ವರ್ಷ ಸುಧಾ' ವಾರ ಪತ್ರಿಕೆಗೆ ಒಂದು ವಾರವೂ ತಪ್ಪದೆ ವ್ಯಕ್ತಿವಿಷಯವನ್ನು ಬರೆದರು. ಪ್ರೊ. ಎಚ್ಚೆಸ್ಕೆ ಅವರು ಕನ್ನಡ ಸಾಹಿತ್ಯಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಕನ್ನಡದಲ್ಲಿ ವಿಡಂಬನಾ ಸಾಹಿತ್ಯ ' ಎಂಬ ಅವರ ವಿಮರ್ಶಾತ್ಮಕ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್‌ನ ಭಾಸ್ಕರ್ ರಾವ್ ಸ್ಮಾರಕ ' ಬಹುಮಾನ ಲಭಿಸಿದೆ. ಧವನದ ಕೊನೆ', ಬಯಕೆಯ ಬಲೆ' ಮತ್ತು ಕಳ್ಳ ಹೊಕ್ಕ ಮನೆ' ಅವರ ಮೂರು ಪ್ರಸಿದ್ಧ ಕಾದಂಬರಿಗಳು. ಮಾನವನ ಐಹಿಕಾಭ್ಯುದ್ಯಯ' ಮತ್ತು ನಮ್ಮ ಶರೀರದ ರಚನೆ' ಅವರ ಭಾಷಾಂತರ ಕೃತಿಗಳು.

ಸಾಹಿತಿಯಾಗಿ ಎಚ್ಚೆಸ್ಕೆ
ಎಚ್ಚೆಸ್ಕೆ  ಪ್ರಮುಖ ಸಾಹಿತ್ಯ ಕೃತಿಗಳನ್ನು ಹೀಗೆ ಪಟ್ಟಿ ಮಾಡಬಹುದು. -ಕಾದಂಬರಿಗಳು-ಮುಕ್ತಿಮಾರ್ಗ, ಬಯಕೆಯ ಬಲೆ, ಕುರುಕ್ಷೇತ್ರ. ಕವನ ಸಂಕಲನ-ದವನದಕೊನೆ. ಲಲಿತ ಪ್ರಬಂಧ-ಕಳ್ಳ ಹೊಕ್ಕ ಮನೆ, ಜೇಡರ ಬಲೆ, ಸುರಹೊನ್ನೆ, ಚಂದ್ರಕಾಂತಿ, ಮೇಘಲಹರಿ, ಹವಳದ ಸರ. ಜೀವನಚರಿತ್ರೆ, ವ್ಯಕ್ತಿಚಿತ್ರ-ಶ್ರೀರಾಮಾನುಜ, ಎತ್ತರದ ವ್ಯಕ್ತಿಗಳು, ಡಾ. ವಿ.ಕೆ.ಆರ್.ವಿ. ರಾವ್, ಬದುಕು-ಬೆಳಕು, ಬೆಳಕು ಚೆಲ್ಲಿದ ಬದುಕು, ಲಾಲ್ ಬಹದ್ದೂರ್ ಶಾಸ್ತ್ರಿ, ಬಿ.ಆರ್. ಅಂಬೇಡ್ಕರ್, ಬಿ.ಆರ್. ಪಂತುಲು, ಯಮುನಾಚಾರ್ಯ, ಜಯಪ್ರಕಾಶ್ ನಾರಾಯಣ್. ಅರ್ಥಶಾಸ್ತ್ರ, ವಾಣಿಜ್ಯಶಾಸ್ತ್ರ-ವ್ಯಾವಹಾರಿಕ ಕನ್ನಡ, ವಾಣಿಜ್ಯ ಶಾಸ್ತ್ರ ಪರಿಚಯ, BUSINESS ENGLISH, ಬ್ಯಾಂಕಿಂಗ್ ಹೆಜ್ಜೆ ಗುರುತುಗಳು. ಹಲವಾರು ಸಂಪಾದಿತ ಕೃತಿಗಳು. ಇವರ ಹಲವಾರು ಕೃತಿಗಳು ಪಿ.ಯು. ಮತ್ತು ಪದವಿ ತರಗತಿಗಳಿಗೆ ಪಠ್ಯಪುಸ್ತಕಗಳಾಗಿ ಆಯ್ಕೆಯಾಗಿವೆ.

ಕನ್ನಡ ಸಾಹಿತ್ಯ ಲೋಕ ಎಚ್ಚೆಸ್ಕೆ ಅವರನ್ನು ಸರಿಯಾಗಿ ಪುರಸ್ಕರಿಸಿಲ್ಲ ಎಂಬ ಕೊರಗು ಅವರ ಅಭಿಮಾನಿಗಳದ್ದು. ಆದರೆ ಎಚ್ಚೆಸ್ಕೆ ಎಂದೂ ಪ್ರಶಸ್ತಿಗಾಗಿ ಹಾತೊರೆದವರಲ್ಲ. ನಾಡು ನುಡಿಗಾಗಿ ತಮಗೆ ತಿಳಿದ ರೀತಿಯಲ್ಲಿ ದುಡಿದವರು. ಅಮೂಲ್ಯವಾದ ಬರಹಗಳನ್ನು ನೀಡಿದವರು. ಆ. 26 ರಂದು ಮೈಸೂರಿನ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ವತಿಯಿಂದ ಎಚ್ಚೆಸ್ಕೆ ಅವರಿಗೆ ಅಭಿನಂದನೆ ಹಾಗೂ ಅವರ ಜನ್ಮದಿನ ಆಚರಣೆ ಮಾಡಿ, ಅವರ ಸಮಗ್ರ ಪ್ರಬಂಧ ಕೃತಿ ಅನಾವರಣಗೊಳಿಸಲಾಯಿತು.

ಅವರಿಗೆ ಸಂದ ಪ್ರಮುಖ ಪ್ರಶಸ್ತಿಗಳನ್ನು ಹೀಗೆ ಪಟ್ಟಿ ಮಾಡಬಹುದು.-

ಹಾ.ಮಾ.ನಾ. ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕರ್ನಾಟಕ ಸರಕಾರದ ಬಹುಮಾನ, ಕ.ಸಾ.ಪ. ಭಾಸ್ಕರರಾಯ ಸ್ಮಾರಕ ಬಹುಮಾನ ಮುಂತಾದುವು. ಹಿತೈಷಿಗಳು ಅರ್ಪಿಸಿದ ಷಷ್ಟ್ಯಬ್ದಿಗ್ರಂಥ-ಎಚ್ಚೆಸ್ಕೆಯವರ ಆಯ್ದ ಬರಹಗಳು. 75ರ ಅಭಿನಂದ ಗ್ರಂಥ ‘ಸಮದರ್ಶಿ.’

ತಮ್ಮನ್ನು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಸದಾ ಗುರುತಿಸಿಕೊಂಡು ಸರಳ ಜೀವನ ನಡೆಸುತ್ತಿದ್ದ ಎಚ್ಚೆಸ್ಕೆ ಅವರನ್ನು ಅಂದು ನಡೆಯುತ್ತಿದ್ದ ಬೆಂಗಳೂರು, ಮೈಸೂರಿನ ಯಾವುದೇ ಸಾಂಸ್ಕೃತಿಕ ಸಮಾರಂಭಗಳಲ್ಲಿ ಕಾಣುವುದು ಸಾಮಾನ್ಯವಿತ್ತು.

ಇಂತಹಾ ಮಹಾನ್ ಅಂಕಣಕಾರರೂ, ಕನ್ನಡ ಸೇವಕರೂ ಆದ ಎಚ್ಚೆಸ್ಕೆ ತಮ್ಮ 89ನೇ ವಯಸ್ಸಿನಲ್ಲಿ ಆಗಸ್ಟ್  29, 2008ರಂದು ಇಹಲೋಕ ಯಾತ್ರೆಯನ್ನು ಸಮಾಪ್ತಿಗೊಳಿಸಿದ್ದರು.

ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಮತ್ತೊಮ್ಮೆ ಕನ್ನಡದ ವಾರಪತ್ರಿಕೆ, ದಿನಪತ್ರಿಕೆಗಳಲ್ಲಿ, ಅವರು ಬರೆದ ಅನೇಕ ಕೃತಿಗಳನ್ನು ಆಸ್ಥೆಯಿಂದ ಓದಿ,ಎಚ್ಚೆಸ್ಕೆ ಯವರಿಗೆ, ಅವರ ಕೆಲಸಗಳಿಗೆ ಗೌರವ ಸೂಚಿಸೋಣ....

No comments:

Post a Comment