Monday, April 29, 2024

ಸಮಯ ಟಿವಿ ಬೃಹತ್ ಆಲದ ಮರದ ರೀತಿ ಬೆಳೆಯಲಿ: ಹೊಸ ಚಾನೆಲ್ ಉದ್ಘಾಟಿಸಿ ರಮೇಶ್ ಅರವಿಂದ್ ಶುಭ ಹಾರೈಕೆ

ಲೋಚಿಸುವ ರೀತಿ, ಸಮಯದ ಸದ್ಬಳಕೆ ಜೀವನದ ಎರಡು ಪ್ರಮುಖಾಂಶಗಳು: ರಮೇಶ್ ಅರವಿಂದ್

ರಾಮನಗರದಲ್ಲಿ ನೀವು ದೊಡ್ಡ ಆಲದ ಮರ ನೋಡುತ್ತೀರಿ, ಅದೆಷ್ಟು ದೊಡ್ಡದಾಗಿದೆ ಎಂದರೆ ಇಡೀ ಏರಿಯಾವನ್ನು ಆವರಿಸಿದೆ. ಪಕ್ಕದಲ್ಲೇ ಅದರ ಬೀಜ ಮಾರಾಟಕ್ಕಿದ್ದು ಅದು ನೋಡಲು ಅತ್ಯಂತ ಚಿಕ್ಕದಾಗಿರುತ್ತದೆ. ಆ ಒಂದು ಚಿಕ್ಕ ಬೀಜದಿಂದ ಇಷ್ಟು ದೊಡ್ಡ ಆಲದ ಮರ ಮುಂದೆ ಆಗುತ್ತದೆ ಎನ್ನುವುದನ್ನು ಯಾರೂ ಊಹೆ ಮಾಡಲು ಸಾಧ್ಯವಿಲ್ಲ. ಅದೇ ರೀತಿಯಲ್ಲಿ ಸಮಯ ಟಿವಿ ಮುಂದೊಂದು ದಿನ ದೊಡ್ಡ ಆಲದ ಮರದ ರೀತಿ ನಾವೆಲ್ಲ ಆಶ್ಚರ್ಯ ಪಡುವ ರೀತಿಯಲ್ಲಿ ದೊಡ್ಡ ಸಕ್ಸಸ್ ಸ್ಟೋರಿ ಬರುವಂತಾಗಲಿ ಎಂದು ನಟ ರಮೇಶ್ ಅರವಿಂದ್ ಹಾರೈಸಿದ್ದಾರೆ. 

ಡಿಜಿಟಲ್ ಸ್ವರೂಪದಲ್ಲಿ ಹೊಸ ರೂಪದೊಂದಿಗೆ ಪ್ರಾರಂಭವಾಗಿರುವ ಸಮಯ ಟಿವಿ ಚಾನೆಲ್ ಉದ್ಘಾಟಿಸಿ ಅವರು ಮಾತನಾಡಿದರು.

ಮಂಜುನಾಥ್ ಹಾಗೂ ಬಾಲಾಜಿಯವರ ನೇತೃತ್ವದಲ್ಲಿ ಹೊಸದಾಗಿ ಪ್ರಾರಂಭವಾದ ಸಮಯ ಟಿವಿ ಡಿಜಿಟಲ್ ಚಾನೆಲ್ ಉದ್ಘಾಟನೆ ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಅದ್ದೂರಿಯಾಗಿ ನೆರವೇರಿತು.  ಸಂಸದರಾದ ಲೆಹರ್ ಸಿಂಗ್, ನಟಿ ಮೇಘನಾ ರಾಜ್, ಚಲನಚಿತ್ರ ವಾಣಿಹ್ಯ ಮಂಡಳಿ ಅಧ್ಯಕ್ಷ ಎಂ.ಎನ್.ಸುರೇಶ್, ಡಿಎಸ್ ಮ್ಯಾಕ್ಸ್ ಸಂಸ್ಥೆಯ ಮ್ಮುಖ್ಯಸ್ಥರಾದ ದಯಾನಂದ್, ಲಹರಿ ಸಂಸ್ಥೆಯ ಲಹರಿ ವೇಲು ಸೇರಿದಂತೆ ಅನೇಕ ಗಣ್ಯ ಮಾನ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಮಯ ಟಿವಿ ಇದೊಂದು ಹೊಸ ಆರಂಭ, ಹೊಸ ಆರಂಭ ಯಾವತ್ತೂ ನಿರೀಕ್ಷೆ ಹುಟ್ಟಿಸುತ್ತದೆ ಎಂದ ರಮೇಶ್ ಹೊಸ ನಿರ್ದೆಶಕ, ನಟ ಬಂದಾಗ ಹೇಗೆ ನಿರೀಕ್ಷೆ ಹುಟ್ಟುತ್ತದೆಯೋ ಅದೇ ರೀತಿಯಲ್ಲಿ "ಸಮಯ ನ್ಯೂಸ್" ಸಹ ನಿರೀಕ್ಷೆ ಹುಟ್ಟು ಹಾಕಿದೆ ಎಂದರು. 

ನನ್ನ ಟೆಲಿವಿಷನ್ ಜರ್ನಿ ಮೊದಲಾಗಿದ್ದೇ ಬಾಲಾಜಿಯವರಿಂದ ಎಂದ ರಮೇಶ್ ತಮ್ಮ ಪ್ರಾರಂಭದ ದಿನಗಳನ್ನು ಮೆಲುಕು ಹಾಕಿದರು.  ವೀಕೆಂಡ್ ವಿತ್ ರಮೇಶ್ ಗೆ ಮುನ್ನ ರಾಜ ರಾಣಿ ರಮೇಶ್ ಮಾಡಿದ್ದೆ, ಅದಕ್ಕೆ ಮುನ್ನ ಪ್ರೀತಿಯಿಂದ ರಮೇಶ್ ಅನ್ನುವ ಶೋ ಬಂದಿತ್ತು. ಅದು ಕಸ್ತೂರಿ ಚಾನೆಲ್ ನಲ್ಲಿ ಪ್ರಸಾರವಾಗಿದ್ದು ಅದಕ್ಕೆ ಕಾರಣ ಬಾಲಾಜಿಯವರಾಗಿದ್ದರು.  ನಾನು ವೇದಿಕೆಯಲ್ಲಿ ಮಾತನಾಡುವುದನ್ನು ಕಂಡು ಬಾಲಾಜಿಯವರು ಕಸ್ತೂರಿಗೆ ಕರೆದು ಒಂದು ಶೋ ಮಾಡಬೇಕೆಂದು ಒತ್ತಾಯಿಸಿ ನನ್ನಿಂದ ಶೋ ಮಾಡಿಸಿದರು. ಅದುವೇ ಪ್ರೀತಿಯಿಂದ ರಮೇಶ್. ನನ್ನ ಕಿರುತೆರೆ ಪ್ರಯಾಣ ಅಲ್ಲಿಂದ ಮೊದಲಾಗಿತ್ತು ಎಂದರು.

ನಾವು ಯೋಚಿಸುವ ರೀತಿ ಹಾಗೂ ನಾವು ಸಮಯವನ್ನು ಹೇಗೆ ಉಪಯೋಗಿಸಿಕೊಳ್ಳುತ್ತೇವೆ ಎನ್ನುವ ವಿಷಯ - ಈ ಎರಡು ವಿಷಯಗಳು ಜೀವನದಲ್ಲಿ ಬಹಳ ಮುಖ್ಯವಾಗಿದೆ. ನಿಮ್ಮ ಬದುಕಿನಲ್ಲಿ ಎಲ್ಲವೂ ಅಂತಿಮವಾಗಿ ಬರುವುದು ಈ ಎರಡಕ್ಕೆ.. ನಾವೇನು ಮಾಡುತ್ತಿದ್ದೇವೆ, ಸಮಯವನ್ನು ಹೇಗೆ ಉಪಯೋಗಿಸುತ್ತಿದ್ದೇವೆ?  ಸಮಯ ಟಿವಿಯವರು ಸಮಯ ಎಂದು ತಮ್ಮ ಹೆಸರಿನಲ್ಲೇ ಇರಿಸಿಕೊಂಡಿದ್ದಾರೆ. ಅವರು ಹೇಳಿದ್ದಾರೆ "ಪ್ರತಿಕ್ಷಣ ಹೊಸತನ" ಇದಕ್ಕಿಂತ ಈ ಕ್ಷಣಕ್ಕೆ ಹೊಸತನ್ನು ಹೇಳಲು ಸಾಧ್ಯವಿಲ್ಲ ಎನ್ನುವುದು ನನ್ನ ಅನಿಸಿಕೆ ಎಂದಿರುವ ನಟ ಮಾಧ್ಯಮ ಲೋಕದಲ್ಲಿ ಮೂರು ಅಂಶಗಳು ಅತ್ಯಂತ ಮುಖ್ಯ ಮೊದಲನೆಯದು - ಎಲ್ಲದಕ್ಕಿಂತ ದಿ ಬೆಸ್ಟ್ ಆಗಿರುವುದು ಎರಡನೆಯದು ನಂಬಿಕೆಗೆ ಅರ್ಹವಾಗಿರುವುದು ಹಾಗೆ ಮೂರನೆಯದು ನಮಗೆ ಸಂಬಂಧಪಟ್ಟ ವಿಚಾರದಲ್ಲಿ ತುಂಬಾ ಕಾಳಜಿ ವಹಿಸುವುದು ಎಂದು ಸೂಚಿಸಿದರು.

ನಟಿ ಮೇಘನಾ ರಾಜ್ ಮಾತನಾಡಿ "ಸಮಯ ನ್ಯೂಸ್" ಚಾನೆಲ್ ಮುಂದೆ ಚಿರಂಜೀವಿಯಾಗಿ ಬೆಳೆಯಲಿ ಎಂದು ಹಾರೈಸಿದರು


Tuesday, April 16, 2024

ಕರುನಾಡ ಕುಳ್ಳ, ನಟ ನಿರ್ಮಾಪಕ ಹಾಸ್ಯ ದಿಗ್ಗಜ ದ್ವಾರಕೀಶ್ ಸಾಹಸಮಯ ಜೀವನ ಒಂದು ಇಣುಕು ನೋಟ

ಕನ್ನಡ‌ಚಿತ್ರರಂಗದ ಹಿರಿಯ ಕೊಂಡಿ‌ ಕಳಚಿದೆ, ಕರುನಾಡ ಕುಳ್ಳ ಪ್ರಚಂಡ ಕುಳ್ಳ, ನಟ ನಿರ್ಮಾಪಕ ಹಾಸ್ಯ ದಿಗ್ಗಜ ದ್ವಾರಕೀಶ್ ಇಂದು ವಿಧಿವಶರಾಗಿದ್ದಾರೆ. ದ್ವಾರಕೀಶ್ ಯುಗಾಂತ್ಯವಾಗಿದೆ. ಕನ್ನಡ ಚಿತ್ರರಂಗ ಕಂಡ ಅಪರೂಪದ ಕಲಾವಿದ ನಿರ್ದೇಶಕ ನಿರ್ಮಾಪಕ, ಕರ್ನಾಟಕದ ಕುಳ್ಳ ಕಣ್ಮರೆಯಾಗಿದ್ದಾರೆ. ಕಾಕತಾಳೀಯ ಏನೋ ತನ್ನಿಷ್ಟದ ಹಾಸ್ಯ ಚಕ್ರವರ್ತಿ ಚಾರ್ಲಿ ಚಾಪ್ಲಿನ್ 135ನೇ ಜನ್ಮೋತ್ಸವದಂದೇ ದ್ವಾರಕೀಶ್ ಕೊನೆಯುಸಿರೆಳೆದಿದ್ದಾರೆ. ಅಷ್ಟೇ ಅಲ್ಲ, ಪತ್ನಿ ಅಂಬುಜ ಸಾವಿನ ದಿನದಂದೇ ಚಿರನಿದ್ರೆಗೆ ಜಾರಿದ್ದಾರೆ.  ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ದ್ವಾರಕೀಶ್ ನೇತ್ರದಾನ   ಮಾಡುವ ಮೂಲಕ ಯುವಜನತೆಗೆ ಮಾದರಿಯಾಗಿದ್ದಾರೆ. ಡಾ.ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ನೇತ್ರದಾನ ಮಾಡಿದ್ದರು. ಈಗ ದ್ವಾರಕೀಶ್ ಕೂಡ ತಮ್ಮ ಸಾವಿನ ನಂತರ ಇತರರ ಬಾಳಿಗೆ ಬೆಳಕಾಗಿದ್ದಾರೆ. ದ್ವಾರಕೀಶ್ ಅವರು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದ್ದಾರೆ. ಅವರ ನಿರ್ಧಾರದಂತೆ ಕುಟುಂಬ ಕೂಡ ಸಮ್ಮತಿ ನೀಡಿದೆ. ಕೆಲವೇ ಕ್ಷಣಗಳಲ್ಲಿ ಡಾ.ಶೈಲಜಾ ನೇತೃತ್ವದಲ್ಲಿ ನೇತ್ರ ಕಸಿ ಕಾರ್ಯ ನಡೆಯಲಿದೆ. 


ಬಂಗ್ಲೆ ಶಾಮ ರಾವ್ ದ್ವಾರಕನಾಥ್ ಉರುಫ್ ದ್ವಾರಕೀಶ್ 

ದ್ವಾರಕೀಶ್ ಅವರ ಪೂರ್ಣ ಹೆಸರು ಬಂಗ್ಲೆ ಶಾಮ ರಾವ್ ದ್ವಾರಕನಾಥ್. ಇವರಿಗೆ ದ್ವಾರಕೀಶ್ ಎಂದು ಹೆಸರಿಟ್ಟಿದ್ದು  ಚಿತ್ರ ನಿರ್ಮಾಪಕ, ನಿರ್ದೇಶಕ ಸಿ.ವಿ ಶಿವಶಂಕರ್. ಸಿನಿಮಾರಂಗದಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಆಸೆಯೊಂದಿಗೆ  ಬಣ್ಣದ ಪ್ರಪಂಚಕ್ಕೆ ಬಂದ ದ್ವಾರಕೀಶ್, ಸಿನಿಮಾ ರಂಗದ ನಾನಾ ವಿಭಾಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡವರು. ಕೇವಲ ನಟರಾಗಿ ಮಾತ್ರ ಉಳಿಯದೇ ನಿರ್ದೇಶಕರಾಗಿ, ನಿರ್ಮಾಪಕರಾಗಿ ಅನೇಕ ಕಲಾವಿದರನ್ನು ಚಿತ್ರೋದ್ಯಮಕ್ಕೆ ಪರಿಚಯಿಸಿದವರು.. ದ್ವಾರಕೀಶ್​ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ 1942 ಆಗಸ್ಟ್ 19ರಂದು ಜನಿಸಿದರು.  ಅವರ ತಂದೆ ಶಾಮರಾವ್ ಮತ್ತು ತಾಯಿ ಜಯಮ್ಮ. ಶಾರದ ವಿಲಾಸ್ & ಬನುಮ್ಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಫ್ರೌಡಶಿಕ್ಷಣದ ನಂತರ ಸಿಪಿಸಿ ಪಾಕಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಗ್ರಿ ಪಡೆದರು. ಬಳಿಕ ಸಹೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಅನ್ನು ದ್ವಾರಕೀಶ್​ ಆರಂಭಿಸಿದರು. ನಂತರ ಇಟ್ಟಿಗೆ ವ್ಯಾಪಾರ ಕಾರ್ಖಾನೆ ಪ್ರಾರಂಭಿಸಿದರು. 

ಸಿನಿಮಾ ನಿರ್ಮಾಣ, ನಿರ್ದೇಶನ, ನಟನೆ


ದ್ವಾರಕೀಶ್ ಅವರ ಚಿಕ್ಕಪ್ಪ ಹುಣಸೂರು ಕೃಷ್ಣಮೂರ್ತಿ ಅವರನ್ನು ಒಪ್ಪಿಸುವ ಮೂಲಕ 1963ರಲ್ಲಿ ದ್ವಾರಕೀಶ್ ಸಿನಿಮಾ ರಂಗವನ್ನು ಪ್ರವೇಶ ಮಾಡಿದರು. 1964ರಲ್ಲಿ ವೀರ ಸಂಕಲ್ಪ ಎಂಬ ಸಿನಿಮಾ ಮೂಲಕ ದ್ವಾರಕೀಶ್​ ಚಿತ್ರರಂಗಕ್ಕೆ ಬಂದವರು. 'ವೀರಸಂಕಲ್ಪ' ಸಿನಿಮಾದ ತದನಂತರ 'ಪರೋಪಕಾರಿ','ಸತ್ಯ ಹರಿಶ್ಚಂದ್ರ', 'ಕ್ರಾಂತಿ ವೀರ', 'ಮೇಯರ್ ಮುತ್ತಣ್ಣ', 'ದೂರದ ಬೆಟ್ಟ', 'ಗಾಂಧೀನಗರ', 'ಬಾಳು ಬೆಳಗಿತು', 'ಬಂಗಾರದ ಮನುಷ್ಯ', 'ಬಹದ್ದೂರ್ ಗಂಡು' ಹೀಗೆ ಹಲವು ಸಿನಿಮಾಗಳಲ್ಲಿ ಡಾ. ರಾಜ್‌ಕುಮಾರ್ ಜೊತೆ ದ್ವಾರಕೀಶ್‌ ಬಣ್ಣ ಹಚ್ಚಿದ್ದರು. ದ್ವಾರಕೀಶ್‌ ತಮ್ಮ ನ್ಯೂನ್ಯತೆಗಳ ಮೂಲಕ ಸಿನಿರಂಗದಲ್ಲಿ ಗೆದ್ದರು.  1966ರಲ್ಲಿ ಮಮತೆಯ ಬಂಧನ ಸಿನಿಮಾ ನಿರ್ಮಾಣ ಮಾಡುವ ಮೂಲಕ ನಿರ್ಮಾಪಕರಾದ ದ್ವರಕೀಶ್ 1969ರಲ್ಲಿ ಮೇಯರ್ ಮುತ್ತಣ್ಣ ಚಿತ್ರವನ್ನು ತಮ್ಮದೇ ದ್ವಾರಕಾ ಫಿಲ್ಮ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದರು. ಈ ಸಿನಿಮಾದಲ್ಲಿ ಡಾ.ರಾಜ್ ಕುಮಾರ್ ಹೀರೋ, ಭಾರತಿ ನಾಯಕಿ. ಇದು ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು. 'ಕುಳ್ಳ ಏಜೆಂಟ್ 000' ಸಿನಿಮಾವನ್ನು ನಿರ್ಮಿಸಿ ತಾವೇ ಆ ಚಿತ್ರಕ್ಕೆ ದ್ವಾರಕೀಶ್‌ ನಾಯಕನಟರಾದರು.  ದ್ವಾರಕೀಶ್  ಇದು ವರೆಗೂ 40ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕರಾಗಿ ಹಲವು ಪ್ರತಿಭೆಗಳನ್ನು ಕನ್ನಡಿಗರಿಗೆ ಪರಿಚಯಿಸಿದ್ದಾರೆ. .  ಅಲ್ಲದೆ ಕನ್ನಡ ಮಾತ್ರವಲ್ಲದೇ, ತಮಿಳು, ಹಿಂದಿ ಸಿನಿಮಾಗಳನ್ನು ಕೂಡ ದ್ವಾರಕೀಶ್‌ ನಿರ್ಮಿಸಿದ್ದಾರೆ. 

ಇನ್ನು 1985 ರಲ್ಲಿ ದ್ವಾರಕೀಶ್ ಸಿನಿಮಾ ನಿರ್ದೇಶಕನಾಗಿ ಭಡ್ತಿ ಪಡೆದರು.  ʻನೀ ಬರೆದ ಕಾದಂಬರಿʼ ಎಂಬ ಚಿತ್ರವನ್ನು ನಿರ್ದೇಶಿಸುವ ಮೂಲಕ  ದ್ವಾರಕೀಶ್ ನಿರ್ದೇಶನಕ್ಕಿಳಿದರು. ಡಾನ್ಸ್ ರಾಜ ಡಾನ್ಸ್, ಶ್ರುತಿ, ಶ್ರುತಿ ಹಾಕಿದ ಹೆಜ್ಜೆ, ರಾಯರು ಬಂದರು ಮಾವನ ಮನೆಗೆ‌ ಹೀಗೆ 15ಕ್ಕೂ ಹೆಚ್ಚು ಚಿತ್ರಗಳನ್ನು ದ್ವಾರಕೀಶ್‌ ನಿರ್ದೇಶಿಸಿದ್ದಾರೆ. 

ನಟರಾಗಿ ಜನ್ಮ ರಹಸ್ಯ, ಮಂಕುತಿಮ್ಮ, ಪೆದ್ದ ಗೆದ್ದ, ಕಿಟ್ಟು ಪುಟ್ಟಿ, ಸಿಂಗಾಪುರದಲ್ಲಿ ರಾಜಾಕುಳ್ಳ, ಮನೆ ಮನೆ ಕಥೆ, ಆಫ್ರಿಕಾದಲ್ಲಿ ಶಿಲಾ, ಆಪ್ತಮಿತ್ರ, ಭಲೇ ಹುಡುಗ, ಬಂಗಾರದ ಮನುಷ್ಯ, ಗಲಾಟೆ ಸಂಸಾರ, ಪ್ರಪಂಚ ಕುಳ್ಳ, ಗುರು ಶಿಷ್ಯರು, ಕಳ್ಳ ಕಳ್ಳು ಮೊದಲಾದ ಸಿನಿಮಾಗಳಲ್ಲಿ ನಟಿಸಿರುವ ದ್ವಾರಕೀಶ್ 1974ರಲ್ಲಿ ವಿಷ್ಣುವರ್ಧನ್ ಅವರ ಜೊತೆಯಾಗಿ ಕಳ್ಳ ಕುಳ್ಳ ಸಿನಿಮಾ ಮಾಡಿದ್ದ ದ್ವಾರಕೀಶ್ ಅಲ್ಲಿಂದಾಚೆಗೆ ಆಪ್ತಮಿತ್ರ ಚಿತ್ರದ ತನಕ ಹಲವಾರು ಸಿನಿಮಾ ಜೊತೆಯಾಗಿ ಅಭಿನಯಿಸಿದ್ದರು.  ದ್ವಾರಕೀಶ್ ಎನ್ನುವ ನಟ ಸೋತಾಗ ಕುಗ್ಗದೇ ಗೆದ್ದಾಗ ಹಿಗ್ಗದೇ ಚಿತ್ರರಂಗಕ್ಕೆ ಅಪೂರ್ವ ಕೊಡುಗೆಯನ್ನೇ ನೀಡಿದ್ದಾರೆ. ಇವರು ಕಿಶೋರ್ ಕುಮಾರ್ ಅಂತಹ ಗಾಯಕನನ್ನು ಕನ್ನಡ ಸಿನಿರಂಗಕ್ಕೆ ಪರಿಚಯಿಸಿದರು. ದ್ವಾರಕೀಶ್‌ 'ಆಟಗಾರ', 'ಚೌಕ', 'ಅಮ್ಮ ಐ ಲವ್ ಯು' ಅಂತಹ 50ಕ್ಕೂ ಅಧಿಕ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಇಲ್ಲಿಯವರೆಗೂ 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ ಮತ್ತು 17ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. 

ನೋಡಲು ವಾಮನ, ಸಾಧನೆ ತ್ರಿವಿಕ್ರಮ

ದ್ವಾರಕೀಶ್ ಕನ್ನಡದ ಕುಳ್ಳ ಎಂದೇ ಮನೆಮಾತಾಗಿದ್ದವರು. ಸಿನಿಮಾ ಹೀರೋ ಆಗಲು, ನಟ ಆಗಲು ಹೈಟು ಕೇವಲ ಅಂಕಿ ಅಷ್ಟೇ ಎಂದು ಇವರು ಸಾಧಿಸಿ ತೋರಿಸಿದರು. ಆನ್‌ಲೈನ್‌ನಲ್ಲಿ ಲಭ್ಯವಿರುವ ಮಾಹಿತಿಗಳ ಪ್ರಕಾರ ದ್ವಾರಕೀಶ್‌ 4.1 ಅಡಿ ಎತ್ತರವಿದ್ದರು. ಅಂದರೆ 125 ಸೆಂಟಿಮೀಟರ್‌ ಎತ್ತರ ಇದ್ದರು. ಕೇವಲ 4.1 ಅಡಿ ಎತ್ತರವಿದ್ದರೂ 85ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹೀರೋ ಆಗಿದ್ದರು. ಇವರು ಕೇವಲ ನಟನಲ್ಲ. ನಿರ್ದೇಶಕರು, ಚಲನಚಿತ್ರ ಸಂಭಾಷಣೆ ಬರಹಗಾರ, ನಿರ್ಮಾಪಕರಾಗಿಯೂ ಹೆಸರು ಮಾಡಿದ್ದರು.

ಅಣ್ಣಾವ್ರಿಗೆ 2 ಸಿನಿಮಾ ನಿರ್ಮಿಸಿದ ದ್ವಾರಕೀಶ್

ದ್ವಾರಕೀಶ್​ ನಿರ್ಮಾಣದ ಎರಡು ಸಿನಿಮಾಗಳಲ್ಲಿ ಮಾತ್ರ ರಾಜ್​ಕುಮಾರ್​ ನಟಿಸಿದರು. ಡಾ. ರಾಜ್​ಕುಮಾರ್ ಅವರ ಕಾಲ್​ಶೀಟ್​ ಸಿಗುವುದು ಎಂದರೆ ಸುಲಭದ ಮಾತಲ್ಲ. 1960ರ ದಶಕದಲ್ಲಿ ಅವರು ಅಷ್ಟು ಬ್ಯುಸಿ ಆಗಿದ್ದರು. ದ್ವಾರಕೀಶ್​ ಅವರು ಆಗತಾನೇ ನಿರ್ಮಾಪಕನಾಗಿದ್ದರು. ದ್ವಾರಕೀಶ್ ಆಗಿನ್ನೂ 25-26ರ ಪ್ರಾಯದ ಯುವಕ. ಅದಾಗಲೇ ರಾಜ್​ಕುಮಾರ್​ ಜೊತೆ ನಟಿಸಿ ಫೇಮಸ್​ ಆಗಿದ್ದರು ಅವರು ನಿರ್ಮಾಪಕನಾಗಿ ಡೇಟ್ಸ್​ ಪಡೆಯುವುದು ಸಲಭ ಆಗಿರಲಿಲ್ಲ. ಹೇಗೋ ಡೇಟ್ಸ್​ ಪಡೆದ ಅವರು ‘ಮೇಯರ್​ ಮುತ್ತಣ್ಣ’ ಸಿನಿಮಾ ಮಾಡಿ ಯಶಸ್ಸು ಕಂಡರು. ಬಳಿಕ ದ್ವಾರಕೀಶ್​ ಅವರು ಡಾ. ರಾಜ್​ಕುಮಾರ್ ನಟನೆಯ ‘ಭಾಗ್ಯವಂತರು’ ಸಿನಿಮಾವನ್ನು ನಿರ್ಮಿಸಿದರು. ಅದಾದ ಬಳಿಕ ಮತ್ತೆ ಡಾ. ರಾಜ್​ಕುಮಾರ್​ ಸಿನಿಮಾಗಳಿಗೆ ದ್ವಾರಕೀಶ್​ ಬಂಡವಾಳ ಹೂಡಲು ಸಾಧ್ಯವಾಗಲಿಲ್ಲ. ಯಾಕೆಂದರೆ, ಅದಾಗಲೇ ಪಾರ್ವತಮ್ಮ ರಾಜ್​ಕುಮಾರ್​ ಅವರು ತಮ್ಮದೇ ‘ವಜ್ರೇಶ್ವರಿ ಕಂಬೈನ್ಸ್’ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದರು. ರಾಜ್​ಕುಮಾರ್​ ಅವರ ಎಲ್ಲ ಸಿನಿಮಾಗಳು ‘ವಜ್ರೇಶ್ವರಿ ಕಂಬೈನ್ಸ್​’ ಮೂಲಕವೇ ನಿರ್ಮಾಣವಾಗಲು ಆರಂಭವಾದವು. ಹಾಗಾಗಿ ದ್ವಾರಕೀಶ್​ ಅವರಿಗಾಗಲಿ ಅಥವಾ ಬೇರೆ ನಿರ್ಮಾಪಕರಿಗಾಗಲಿ ಅಣ್ಣಾವ್ರ ಕಾಲ್​ಶೀಟ್​ ಸಿಗದಾಯಿತು.

ವಿಷ್ಣು ಮತ್ತು ದ್ವಾಕರೀಶ್ ಫ್ರೆಂಡ್ ಶಿಪ್-ಬ್ರೇಕಪ್


ದ್ವಾರಕೀಶ್ ಮತ್ತು ವಿಷ್ಣವರ್ಧನ್ ಸ್ನೇಹ ಚಂದನವನದಲ್ಲಿ ಭಾರೀ ಸದ್ದು ಮಾಡಿತ್ತು. ಇವರಿಬ್ಬರು ಜೊತೆಯಾಗಿ ನಟಿಸಿದ ಚಿತ್ರಗಳೆಲ್ಲಾ ಹಿಟ್ ಸಿನಿಮಾಗಳಾಗಿದ್ದವು.  ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿಯ ಚೊಚ್ಚಲ ಸಿನಿಮಾ `ಕಳ್ಳ ಕುಳ್ಳ’  `ಕಳ್ಳ ಕುಳ್ಳ’ ಚಿತ್ರ. 1975ರಲ್ಲಿ ತೆರೆಕಂಡು  ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಗೆದ್ದಿತು. ಕನ್ನಡ ಸಿನಿಮಾ ರಂಗದ `ಕಳ್ಳ ಕುಳ್ಳ ಜೋಡಿ’ ಎಂದೇ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಅವರನ್ನು ಕರೆಯುವಂತೆ ಮಾಡಿತ್ತು. ಅಲ್ಲಿಂದ ಶುರುವಾದ ಈ ಜೋಡಿಯ ಪಯಣ 1986ರ ಹೊತ್ತಿಗೆ ಒಂದು ಡಜನ್‌ನಷ್ಟು ಸಿನಿಮಾಗಳನ್ನು ಮಾಡಿಸಿತು. ಕಿಟ್ಟು ಪುಟ್ಟು, ಭಲೇ ಹುಡುಗ, ಸಿಂಗಪುರ್‌ನಲ್ಲಿ ರಾಜಾಕುಳ್ಳ, ಅವಳ ಹೆಜ್ಜೆ, ಗುರು ಶಿಷ್ಯರು, ಪೆದ್ದಗೆದ್ದ, ಜಿಮ್ಮಿಗಲ್ಲು, ಇಂದಿನ ರಾಮಾಯಣ, ಮದುವೆ ಮಾಡು ತಮಾಷೆ ನೋಡು… ಹೀಗೆ ಒಂದರ ನಂತರ ಒಂದು ಸಿನಿಮಾ   ಪಟ್ಟಿ ಬೆಳೆಯುತ್ತಾ ಹೋಯಿತು. ದ್ವಾರಕೀಶ್ ಮಾಡಿದ 50 ಚಿತ್ರಗಳಲ್ಲಿ 19 ಸಿನಿಮಾಗಳಲ್ಲಿ ವಿಷ್ಣುವರ್ಧನ್ ನಟಿಸಿದ್ದರು. ‘ರಾಯರು ಬಂದರು ಮಾವನ ಮನೆಗೆ’ ಸಿನಿಮಾ ಮಾಡಲು ವಿಷ್ಣುವರ್ಧನ್ ಡೇಟ್ಸ್​​​ಗಾಗಿ ನಾಲ್ಕು ವರ್ಷ ಕಾದಿದ್ದರು ದ್ವಾರಕೀಶ್. ರಕ್ತ ಸಂಬಂಧಕ್ಕಿಂತ ದೊಡ್ಡದಾಗಿತ್ತು ಇವರ ಸಂಬಂಧ. ವಿಷ್ಣುವರ್ಧನ್ ಮೇಲೆ ದ್ವಾರಕೀಶ್ ಅವರಿಗೆ ಎಷ್ಟು ನಂಬಿಕೆ ಬಂತೆಂದರೆ ವಿಷ್ಣುವಿದ್ದರೆ ಗಲ್ಲಾಪೆಟ್ಟಿಗೆ ತುಂಬುವುದರಲ್ಲಿ ಅನುಮಾನವಿಲ್ಲ ಎನ್ನುವಷ್ಟರ ಮಟ್ಟಿಗೆ ನಂಬಿದ್ದರು. ಅದು ನಿಜವೂ ಆಗಿತ್ತು. ಈ ಧೈರ್ಯದಿಂದಲೇ ಅವರು `ರಾಜಾ ಕುಳ್ಳ’ ಸಿನಿಮಾವನ್ನು ಸಿಂಗಾಪುರದಲ್ಲಿ ಚಿತ್ರೀಕರಣ ಮಾಡಲು ಮುಂದಾದರು. ದ್ವಾರಕೀಶ್ ಪ್ರಪ್ರಥಮವಾಗಿ ತಮ್ಮ ಸಿನಿಮಾವನ್ನು ಸಿಂಗಾಪುರದಲ್ಲಿ ಶೂಟಿಂಗ್ ಮಾಡಲು ನಿರ್ಧರಿಸಿದ್ದರು.  ದ್ವಾರಕೀಶ್. ಕನ್ನಡ ಚಿತ್ರರಂಗದಲ್ಲೇ ಸಿಂಗಾಪುರದಲ್ಲಿ ಶೂಟಿಂಗ್ ಆದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ `ರಾಜಾ ಕುಳ್ಳ’ ಪಾತ್ರವಾಯಿತು. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅದೊಂದು ಮೈಲಿಗಲ್ಲಾಯಿತು. ನಿರ್ಮಾಪಕರಾಗಿ ಸಾಕಷ್ಟು ಹೆಸರು ಮಾಡಿದ ದ್ವಾರಕೀಶ್, 1985ರಲ್ಲಿ ತೆರೆಕಂಡ ವಿಷ್ಣುವರ್ಧನ್ ಮತ್ತು ಭವ್ಯ ಜೊತೆಯಾಗಿ ನಟಿಸಿದ್ದ `ನೀ ಬರೆದ ಕಾದಂಬರಿ’ ಸಿನಿಮಾದ ಮೂಲಕ ನಿರ್ದೇಶಕರಾಗಿಯೂ ಯಶಸ್ಸಿನ ತುತ್ತ ತುದಿಯಲ್ಲಿ ಕೂತರು. ದ್ವಾರಕೀಶ್ ಗೆಲುವಿನ ಹಿಂದೆ ಶಕ್ತಿಯಾಗಿ ನಿಂತದ್ದು ಇದೇ ವಿಷ್ಣುವರ್ಧನ್. ಆದರೆ, ಈ ಜೋಡಿಯ ಮಧ್ಯೆಯೂ ಬಿರುಕುಂಟಾಯಿತು.

ವಿಷ್ಣು ಬೇರೆ ನಿರ್ದೇಶಕ, ನಿರ್ಮಾಪಕರಿಗೆ ಕಾಲ್‌ಶೀಟ್ ಕೊಟ್ಟಾಗ ದ್ವಾರಕೀಶ್ ಗೆ ಕೊಪ ಬಂದಿತ್ತು. ನನ್ನಿಂದ ಬೆಳೆದ ಹುಡುಗ, ನನ್ನ ವಿರುದ್ಧವೇ ಜಿದ್ದಿಗೆ ಬಿದ್ದ  ಎಂದು ತಪ್ಪಾಗಿ ಭಾವಿಸಿದ ದ್ವಾರಕೀಶ್ ಗೆಳೆತನದ ನಡುವೆ   ವ್ಯಾಪಾರವನ್ನೂ ಎಳೆತಂದರು. ಅದು ವಿಷ್ಣುವರ್ಧನ್ ಅವರಿಗೆ ಇಷ್ಟವಾಗಲಿಲ್ಲ. ದ್ವಾರಕೀಶ್ ಹಾಗೂ ವಿಷ್ಣು ಗೆಳೆತನ ದೂರವಾಯಿತು.  ಪರಸ್ಪರ ಕಿತ್ತಾಡಿಕೊಂಡರು. ದ್ವಾರಕೀಶ್ ಅವರಿಂದ ದೂರವೇ ಆದರು.  ವಿಷ್ಣು ಅವರನ್ನು ದೂರವಿಟ್ತು ದ್ವಾರಕೀಶ್ ಹಲವಾರು ಸಿನಿಮಾ ಮಾಡಿದರು. ಆದರೆ ಗೆಲುವು ಕಂಡಿದ್ದು ಮಾತ್ರ ಎರಡೋ, ಮೂರೋ ಸಿನಿಮಾ ಮಾತ್ರ. ಸತತವಾಗಿ 18 ಫ್ಲಾಪ್ ಆಯಿತು.  ದ್ವಾರಕೀಶ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು. ಆದರೆ ಹಿರಿಯ ಕಲಾವಿದ, ನಿರ್ಮಾಪಕ ದ್ವಾರಕೀಶ್ ಕಷ್ಟ ಕಂಡು ವಿಷ್ಣುವರ್ಧನ್ ಮರುಗಿದರು. ತಮ್ಮ ಸ್ನೇಹಿತನನ್ನು ಮತ್ತೆ ಕೈ ಹಿಡಿದ ವಿಷ್ಣುವರ್ಧನ್  ಮತ್ತೆ ಕಾಲ್‌ಶೀಟ್ ಕೊಟ್ಟರು. ದ್ವಾರಕೀಶ್ ಮಾಡಿದ್ದ ಅಷ್ಟೂ ಸಾಲವನ್ನು `ಆಪ್ತಮಿತ್ರ’ ಸಿನಿಮಾ ತೀರಿಸಿತು.

ಇನ್ನು ಈ ಕುರಿತ್ಂತೆ ವೆಂಕಟೇಶ್ ನಾರಾಯಣಸ್ವಾಮಿ ಎನ್ನುವವರು ಸ್​ಬುಕ್​ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದು ಅದು ಹೀಗಿದೆ-

‘ನೀ ತಂದ ಕಾಣಿಕೆ’ ಸಿನಿಮಾ ಬಿಡುಗಡೆ ಆಗಿ ಸೋತಿತ್ತು. ‘ದ್ವಾರಕೀಶ್ ನಂಬಿಕೆಗೆ ಅರ್ಹನಲ್ಲ’ ಎಂದು ವಿಷ್ಣುವರ್ಧನ್ ಹೇಳಿರುವುದಾಗಿ ಪತ್ರಿಕೆಯಲ್ಲಿ ವರದಿ ಆಗಿತ್ತು. ಇದರಿಂದ ದ್ವಾರಕೀಶ್ ಸಿಟ್ಟಾದರು. ಆಗ ಅವರು ದೀರ್ಘ ಪತ್ರಿಕಾ ಪ್ರಕಟಣೆ ಹೊರಡಿಸಿದ್ದರು. ಅದರಲ್ಲಿ ‘ಮೊದಮೊದಲು, ಅಂಕಲ್ ಅನ್ನುತ್ತಿದ್ದಮ ನಂತರ ಸರ್ ಎನ್ನುತ್ತಿದ್ದ, ಆ ನಂತರ ಏನೋ ದ್ವಾರ್ಕಿ… ಎಂದು ನನ್ನ ಹೆಗಲ ಮೇಲೆಯೇ ಕೈ ಹಾಕುವಷ್ಟು ಸಲುಗೆ ಬೆಳಸಿಕೊಂಡ. ನಾನೂ ಕೂಡಾ, ಹುಡುಗ ಬೆಳ್ಳಗೆ ಹ್ಯಾಂಡ್ಸಮ್ ಆಗಿದ್ದಾನೆ, ನನ್ನ ಚಿತ್ರಗಳಿಗೆ ಸೂಕ್ತವಾದ ನಾಯಕನಾಗುತ್ತಾನೆ ಎಂದು ಎಲ್ಲವನ್ನೂ ಸಹಿಸಿಕೊಂಡೆ. ಆದರೆ ಆತನ ನಕರಾಗಳು ದಿನೇ ದಿನೇ ನನ್ನ ತಾಳ್ಮೆಯನ್ನು ಪರೀಕ್ಷಿಸುವಂತೆ ಮಾಡುತ್ತಿತ್ತು.. ರಜನಿಕಾಂತ್ ನಂತೆ ನನಗೂ ಒಂದು ತಮಿಳು ಚಿತ್ರವನ್ನು ಮಾಡು ಎಂದು ಪೀಡಿಸುತ್ತಾನೆ.  ರಜನೀಕಾಂತ್ ಎಲ್ಲಿ ಇವನೆಲ್ಲಿ. ಇವನಿಗಾಗಿ ನಾನು ಎಷ್ಟೆಲ್ಲಾ ಮಾಡಿದ್ದೇನೆ. ಸ್ವಲ್ಪವೂ ಕೃತಜ್ಞತೆ ಇಲ್ಲ’ ಎಂದು ದ್ವಾರಕೀಶ್ ಹೇಳಿದ್ದರು. ‘ನಾನು ರಜನೀಕಾಂತ್ ಶ್ರೀದೇವಿ ಯಂತಹ ಸ್ಟಾರ್ ಕಲಾವಿದರನ್ನು ಹಾಕಿಕೊಂಡು ಹಿಂದಿ, ತಮಿಳು ಸಿನಿಮಾಗಳನ್ನು ಮಾಡಿದ ಪ್ರೊಡ್ಯೂಸರ್. ಇವನಿಲ್ಲದೆಯೂ ನಾನು ಸಿನಿಮಾ ಮಾಡಿ ಗೆಲ್ಲ ಬಲ್ಲೆ. ಆದರೆ ನನ್ನಂತಹ ನಿರ್ಮಾಪಕನನ್ನು ಎದುರು ಹಾಕಿಕೊಂಡು ಇವನು ಇಂಡಸ್ಟ್ರಿಯಲ್ಲಿ ಹೇಗೆ ನಿಲ್ಲುತ್ತಾನೋ ನೋಡೋಣ. ಅವನು ನನಗೆ ಮಾಡಿದ ದ್ರೋಹವನ್ನೇ ಕಥಾವಸ್ತುವನ್ನಾಗಿ ಇಟ್ಟುಕೊಂಡು ಸ್ಕ್ರಿಪ್ಟ್ ಮಾಡಿಸುತ್ತಿದ್ದೇನೆ ಸ್ಕ್ರಿಪ್ಟ್ ರೈಟರ್ ಕ್ಲೈಮ್ಯಾಕ್ಸ್ ನಲ್ಲಿ ಬೆನ್ನಿಗೆ ಚೂರಿ ಹಾಕುವಂತೆ ಮಾಡಿದ್ದಾರೆ. ಇಲ್ಲ, ನೇರವಾಗಿ ಎದೆಗೇ ಚುಚ್ಚುವಂತೆ ಬದಲಾಯಿಸುತ್ತಿದ್ದೇನೆ. ಚಿತ್ರಕಥೆ ಫೈನಲ್ ಆದ ನಂತರ ಕಲಾವಿದರು ಮತ್ತು ತಾಂತ್ರಿಕ ವರ್ಗದ ಪಟ್ಟಿಯನ್ನು ಬಿಡುಗಡೆ ಮಾಡುತ್ತೇನೆ’ ಎಂದು ದ್ವಾರಕೀಶ್ ಹೇಳಿದ್ದರು. ಪೋಸ್ಟರ್ ಕೂಡ ಬಿಡುಗಡೆ ಮಾಡಿದ್ದರು.

51 ನೇ ವಯಸ್ಸಿಗೆ 2 ನೇ ಮದುವೆ!


ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್‌ ಮೊದಲ ಮದುವೆ ಚಿಕ್ಕ ವಯಸ್ಸಿನಲ್ಲಿಯೇ ನಡೆದಿತ್ತು. ದ್ವಾರಕೀಶ್‌ ಮೊದಲ ಪತ್ನಿ ಹೆಸರು ಅಂಬುಜಾ.  ಅಂಬುಜಾ ಅವರು ದ್ವಾರಕೀಶ್‌ ಗಿಂತ ದೊಡ್ಡವರು. ದ್ವಾರಕೀಶ್‌ ಅವರ ಸಂಬಂಧಿಯೂ ಆಗಿದ್ದ ಅಂಬುಜಾ ಅವರನ್ನ ಪ್ರೀತಿಸಿ ಮದುವೆಯಾದರು.  ಅಂಬುಜಾ ಹಾಗೂ ದ್ವಾರಕೀಶ್‌ ಅವರಿಗೆ ಐವರು ಮಕ್ಕಳು. ಅಂಬುಜಾ ಅವರು ದ್ವಾರಕೀಶ್‌ ಅವರ ಬೆನ್ನೆಲುಬಾಗಿದ್ದರು. ಪ್ರತಿ ಏಳು ಬೀಳಿನಲ್ಲೂ ಅವರ ಜೊತೆಗಿದ್ದರು.   ಮೊದಲ ಪತ್ನಿ ಅಂಬುಜಾ ಅವರು ದ್ವಾರಕೀಶ್ ದೂರದ ಸಂಬಂಧಿ. ಚಿತ್ರದುರ್ಗ ಅವರ ಊರಾಗಿತ್ತು. ಅಂಬುಜನಾ ಪ್ರೀತಿಸುತ್ತಿದ್ದರು ದ್ವಾರಕೀಶ್. ಇದನ್ನು ಪತ್ರದ ಮೂಲಕ ಹೇಳಿಕೊಂಡಿದ್ದರು. ದ್ವಾರಕೀಶ್ ಪ್ರೀತಿಯನ್ನು ಅವರು ಒಪ್ಪಿದ್ದರು. ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಅಂಬುಜಾ ಬಳಿ ಹೇಳಿಕೊಂಡಿದ್ದರು ದ್ವಾರಕೀಶ್. ಇದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು ಅಂಬುಜಾ. ಮದುವೆ ಆದ ಬಳಿಕ ದ್ವಾರಕೀಶ್ ಅವರ ಸಣ್ಣ ಸಣ್ಣ ಆಸೆಯನ್ನೂ ಅಂಬುಜಾ ಈಡೇರಿಸುತ್ತಿದ್ದರಂತೆ. ದಯಾನಂದ ಕಾಲೇಜಿನಲ್ಲಿ ಅಂಬುಜಾ ಪ್ರೊಫೆಸರ್ ಆಗಿದ್ದರು. 62 ವರ್ಷ ಇವರು ಸಂಸಾರ ನಡೆಸಿದ್ದರು.

ಆದರೆ ದ್ವಾರಕೀಶ್‌ ತಮ್ಮ 51 ನೇ ವಯಸ್ಸಿನಲ್ಲಿ ಎರಡನೇ ಮದುವೆ ಆದರು. ಈ ಸಂಬಂಧ ಅವರ ಜೀವನದಲ್ಲಿ ಸಾಕಷ್ಟು ವಿವಾದಗಳಿಗೆ ಕಾರಣವಾಯಿತು. ನಟ ದ್ವಾರಕೀಶ್‌ ಅವರಿಗೆ ಶೈಲಜಾ ಅವರು ತಮ್ಮ ಅಕ್ಕನ ಮಗಳಿಗೆ ಅವಕಾಶ ಕೇಳಿಕೊಂಡು ಬಂದಿರುತ್ತಾರೆ. ಆಗ ದ್ವಾರಕೀಶ್‌ ಅವರಿಗೆ ಶೈಲಜಾ ಮೇಲೆ ಪ್ರೀತಿ ಹುಟ್ಟುತ್ತದೆ.  ಈ ಸಮಯದಲ್ಲಿ ದ್ವಾರಕೀಶ್ ಗೌರಿ ಕಲ್ಯಾಣ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದರು. ಇವರದ್ದೇ ಬ್ಯಾನರ್ ನಲ್ಲಿ ಮೂಡಿ ಬಂದಿದ್ದ ಶ್ರುತಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ದ್ವಾರಕೀಶ್ ಅವರ ನಿರ್ಮಾಣದಲ್ಲಿ ಮತ್ತೊಂದು ಸಿನಿಮಾ ಬರುತ್ತಿದೆ ಎಂದಾಗ, ಆ ಸಿನಿಮಾದಲ್ಲಿ ತನ್ನ ತಂಗಿಗೆ ಅವಕಾಶ ಕೇಳಲು ಬಂದವರು ಶೈಲಜಾ.  ಶೈಲಜಾ ಅವರು ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನಲ್ಲಿ ಕೆಲಸ ಮಾಡುತ್ತಿರುತ್ತಾರೆ. ಶೈಲಜಾ ಮತ್ತು ದ್ವಾರಕೀಶ್‌ ಅವರ ನಡುವೆ ಸ್ನೇಹ ಬೆಳೆಯಿತು. ಬಳಿಕ ಈ ಸ್ನೇಹ ಪ್ರೇಮವಾಯಿತು. ನಟ ದ್ವಾರಕೀಶ್‌ ಈ ವಿಚಾರವನ್ನು ಮೊದಲ ಪತ್ನಿ ಅಂಬುಜಾ ಬಳಿ ಹೇಳಿಕೊಂಡಾಗ ಅವರು ಸಹ ಎರಡನೇ ಮದುವೆಗೆ ಒಪ್ಪಿಕೊಳ್ಳುತ್ತಾರಂತೆ. ಬಳಿಕ ಶೈಲಜಾ ಮತ್ತು ದ್ವಾರಕೀಶ್‌ ಮದುವೆ ಆಗುತ್ತಾರೆ. ಇದು ಸಾಕಷ್ಟು ವಿವಾದಗಳಿಗೆ ಕಾರಣವಾಗುತ್ತದೆ.  ದ್ವಾರಕೀಶ್‌ ಅವರಿಗೆ ಒಟ್ಟು ಆರು ಜನ ಗಂಡು ಮಕ್ಕಳು. ಮೊದಲ ಪತ್ನಿ ಅಂಬುಜ ಅವರಿಗೆ 5 ಗಂಡು ಮಕ್ಕಳು ಮತ್ತು ಎರಡನೇ ಹೆಂಡತಿ ಶೈಲಜಾಗೆ ಒಂದು ಗಂಡು ಮಗ. ಕಾಕತಾಳೀಯ ಎನ್ನುವಂತೆ ಪತ್ನಿಯನ್ನು ಕಳೆದುಕೊಂಡ ದಿನವೇ ನಟ ದ್ವಾರಕೀಶ್ ಕೂಡ ಇಹಲೋಕ ತ್ಯಜಿಸಿದ್ದಾರೆ. ದ್ವಾರಕೀಶ್ ಪತ್ನಿ ಅಂಬುಜಾ  16 ಜುಲೈ 2021ರಂದು ನಿಧನರಾಗಿದ್ದರು . ದ್ವಾರಕೀಶ್ ಕೂಡ ಇದೇ ದಿನ ಕಣ್ಮುಚ್ಚಿದ್ದಾರೆ. ಮುಂಜಾನೆ 9.45ಕ್ಕೆ ಅಂಬುಜಾ ಅವರು ಪ್ರಾಣಬಿಟ್ಟಿದ್ದರೆ, ದ್ವಾರಕೀಶ್ ಕೂಡ ಅದೇ ಹೊತ್ತಿಗೆ ಉಸಿರು ನಿಲ್ಲಿಸಿದ್ದರು.

ರಿಷಬ್ ಶೆಟ್ಟಿಗೆ ಮನೆ ಮಾರಿದ್ದ ದ್ವಾರಕೀಶ್

ನಟ ನಿರ್ಮಾಪಕ ದ್ವಾರಕೀಶ್ ಬದುಕಿನಲ್ಲಿ ಸಾಕಷ್ತು ಏಳು ಬೀಳು ಕಂಡವರು. ಬಿ. ಗಣಪತಿಯವರು ತಮ್ಮ ಯೂಟ್ಯೂಬ್​​​ ಚಾನಲ್​​​ನಲ್ಲಿ ದ್ವಾರಕೀಶ್ ಸಂದರ್ಶನ ಮಾಡಿದ್ದಾಗ ದ್ವಾರಕೀಶ್ ತಾವು ಮನೆ ಮಾರಿದ್ದ ವಿಷಯ ಕುರಿತು ಮಾತನಾಡಿದ್ದಾರೆ. ಬೆಂಗಳೂರಿನ ಎಚ್​​ಆರ್​ಎಸ್​​ ಲೇಔಟ್​​​ನಲ್ಲಿರುವ ಮನೆಯನ್ನು ಮಾರಾಟದ ಹಿಂದಿರುವ ಸತ್ಯ ತೆರೆದಿಟ್ಟಿದ್ದಾರೆ. ಅದರಂತೆ ಬೆಂಗಳೂರಿನ ಎಚ್​​ಆರ್​ಎಸ್​​ ಲೇಔಟ್​​ನಲ್ಲಿರುವ ಸೈಟ್​​​ನ್ನು ಮಾಜಿ ಮುಖ್ಯಮಂತ್ರಿ ಎಸ್​​​.ಎಮ್​​ ಕೃಷ್ಣ ಅವರ ಸರ್ಕಾರ ನೀಡಿತ್ತು. ಅಲ್ಲಿಯೇ ಮನೆ ನಿರ್ಮಾಣ ಮಾಡಲಾಗಿತ್ತು. ಆದರೆ ಅದು ತುಂಬಾ ದೊಡ್ಡದಾಗಿತ್ತು. ನಾವು ಮೂರುಜನಕ್ಕೆ ಅಷ್ಟು ದೊಡ್ಡ ಮನೆ ಬೇಕಾಗಿರಲಿಲ್ಲ. ಇದರ ಜತೆಗೆ ಆ ಮನೆ ನಿರ್ಮಾಣಕ್ಕೆ ಬ್ಯಾಂಕ್​​ ಲೋನ್​​​ ಕೂಡ ಮಾಡಲಾಗಿತ್ತು. ಜತೆಗೆ ಇತರ ಸಾಲಗಳು ಇದ್ದ ಕಾರಣ ನಾನು ಆ ಮನೆಯನ್ನು ಮಾರಾಟ ಮಾಡಬೇಕಾಯಿತು ಎಂದಿದ್ದರು. ನಮಗೆ ಚಿಕ್ಕ ಮನೆ ಸಾಕಿತ್ತು, ಜತೆಗೆ ನಮಗೆ ಮನೆ ಮುಖ್ಯವಲ್ಲ ಸುಖವಾದ ನಿದ್ದೆ ಬರಬೇಕು. ಅಷ್ಟು ದೊಡ್ಡ ಮನೆಯಲ್ಲಿ ನನಗೆ ಭಯ ಆಗುತ್ತಿತ್ತು. ಅದಕ್ಕಾಗಿ ಆ ಮನೆಯನ್ನು ಮಾರಾಟ ಮಾಡಿದ್ದೇವೆ. ಆ ಬಗ್ಗೆ ಯಾವುದೇ ನೋವಿಲ್ಲ. ನಾನು ಬಗ್ಗೆ ಇಂತಹ ಗೊಂದಲಗಳು ಅಭಿಮಾನಿಗಳಿಗೆ ಬೇಡ, ನಾನು ದೇವರಲ್ಲಿ ಕೇಳಿಕೊಳ್ಳುವುದು ನನ್ನ ಒಳ್ಳೆಯ ನಿರ್ಮಾಪಕ ಮಾಡು ಎಂದು ಕೇಳಿದೆ. ಹಾಗೆ ನನಗೆ ನೀಡಿದ್ದಾನೆ ಎಂದಿದ್ದರು. 

ಇನ್ನು ಇದೇ ಮನೆಯನ್ನು "ಕಾಂತಾರ" ಖ್ಯಾತಿಯ ರಿಷಬ್ ಶೆಟ್ತಿ ದ್ವಾರಕೀಶ್ ಅವರಿಂದ ಖರೀದಿಸಿದ್ದರು. 2021ರಲ್ಲಿ ಎಚ್​ಎಸ್​ಆರ್​ ಲೇಔಟ್​ನ ಮನೆಯನ್ನು ನಿರ್ದೇಶಕ ರಿಷಬ್​ ಶೆಟ್ಟಿಯವರು ಆ ಮನೆಯನ್ನು ಖರೀದಿದ್ದರು.ದ್ವಾರಕೀಶ್​​ ನಿರ್ಮಾಣದಲ್ಲಿ ‘ಆಯುಷ್ಮಾನ್​ಭವ’ ಸಿನಿಮಾ ಮೂಡಿ ಬಂದಿತ್ತು. ಆದರೆ ಈ ಸಿನಿಮಾ ದೊಡ್ಡ ಯಶಸ್ಸು ಕಾಣಲಿಲ್ಲ. ಹೀಗಾಗಿ ಅವರ ಪುತ್ರ ಯೋಗೀಶ್​ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದರು. ಹೀಗಾಗಿ ತಮ್ಮ ಮನೆಯನ್ನು ಮಾರಾಟ ಮಾಡಿದ್ದಾರೆ ಎಂದು ಆಗ ಮಾಧ್ಯಮಗಳಲ್ಲಿ ವರದಿಯಾಗಿತ್ತು. 

Tuesday, April 09, 2024

ರಾಜಸ್ಥಾನದಲ್ಲಿ ಥಾರ್ ಮರುಭೂಮಿಯನ್ನು ಸೃಷ್ಟಿಸಿದವನು ಶ್ರೀರಾಮ!

 ರಾಮಾಯಣದ ನಾಯಕನಾದ ರಾಮನು ತನ್ನ ಉರಿಯುವ ಕ್ಷಿಪಣಿಯನ್ನು (ಅಸ್ತ್ರ) ಹಿಂದೂ ಮಹಾಸಾಗರದ ಉತ್ತರಕ್ಕೆ ತಿರುಗಿಸಿ, ರಾಜಸ್ಥಾನದಲ್ಲಿ ಮಾರು (ಮರುಭೂಮಿ) ವನ್ನು ಸೃಷ್ಟಿಸಿದನು. ರಾಮನು ರಾಜಸ್ಥಾನದ ಮರುಭೂಮಿಯನ್ನು ಸೃಷ್ಟಿಸಿದನು ಅಜ್ಞಾನಿ ಭಾಷಾಂತರಕಾರರು ಇತಿಹಾಸವನ್ನು ಪುರಾಣ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.  ಪುರಾಣವು ಪುರಾಣಗಳು ಮತ್ತು ಕಥೆಗಳೊಂದಿಗೆ ವ್ಯವಹರಿಸುತ್ತದೆ, ಆದರೆ ಇತಿಹಾಸ ಎಂದರೆ ಇತಿ-ಹಾ-ಆಸಾ ಇದು ಹೀಗೆ ಸಂಭವಿಸಿತು ಎಂದರ್ಥ ರಾಮಾಯಣ ಮತ್ತು ಮಹಾಭಾರತ ಎರಡನ್ನೂ ಇತಿಹಾಸಗಳು ಎಂದು ಕರೆಯಲಾಗುತ್ತಿತ್ತು, ಏಕೆಂದರೆ ಅರ ಬರಹಗಾರರಾದ ವಾಲ್ಮೀಕಿ ಮತ್ತು ವ್ಯಾಸರು ಆ ಕಾಲದ ಸಮಕಾಲೀನರಾಗಿದ್ದರು ಮತ್ತು ಇತಿಹಾಸವು ಹೇಗೆ ಸಂಭವಿಸಿತು ಎಂಬುದನ್ನು ದಾಖಲಿಸಿದ್ದಾರೆ. (ಅವುಗಳಲ್ಲಿ ಅವರ ಪಾತ್ರಗಳೂ ಸೇರಿವೆ.)


ಭೂಮಿಯ ಮೇಲಿನ ಮೊದಲ ಕಾವ್ಯವಾದ  ರಾಮಾಯಣದ ಯುದ್ಧ ಕಾಂಡ (ಯುದ್ಧದ ಭಾಗ) , ಭಗವಾನ್ ರಾಮನು ತನ್ನ ಸೈನ್ಯವು ಲಂಕೆಯನ್ನು ತಲುಪಲು ಒಂದು ಮಾರ್ಗವನ್ನು ಸೃಷ್ಟಿಸುವ ಸಲುವಾಗಿ ತನ್ನ ಅಸ್ತ್ರದಿಂದ (ಕ್ಷಿಪಣಿ) ಸಾಗರವನ್ನು  ನಿರ್ಜಲವಾಗಿಸುವ ಪರಿಸ್ಥಿತಿಯನ್ನು ವಿವರಿಸುತ್ತದೆ. ಆಗ ಸಮುದ್ರದೇವನು ವಾನರ ಸೇನೆ ನಿಂತಿರುವ ಸ್ಥಳದಲ್ಲಿ ನೀರಿನ ಬಲವನ್ನು ಕಡಿಮೆ ಮಾಡುವ ಮೂಲಕ ದಾರಿ ಮಾಡಿಕೊಡುತ್ತಾನೆ ಮತ್ತು ಅವರು ದಾಟಲು ಸಮರ್ಥರಾಗುತ್ತಾರೆ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಲು ಸಹಾಯ ಮಾಡುವುದಾಗಿ ಭರವಸೆ ನೀಡಿದರು.

ನಂತರ, ರಾಮನು ತನ್ನ ಮಹಾನ್ ಅಸ್ತ್ರವು ವ್ಯರ್ಥವಾಗಬಾರದು ಎಂದು ಹೇಳುತ್ತಾನೆ. ಅದು ಯಾವ ಪ್ರದೇಶದಲ್ಲಿ ಇಳಿಯಬೇಕುಂದು ಕೇಳಿದಾಗಾ ಸಮುದರದೇವ ಹೀಗೆ ಹೇಳುತ್ತಾನೆಃ

उत्तरेणावकाशोऽस्ति कश्चित्पुण्यतरो मम || -२२-३१
द्रुमकुल्य इति ख्यातो लोके ख्यातो यथा भवान् |

उग्रदर्शनकर्माणो बहवस्तत्र दस्यवः || -२२-३२
आभीरप्रमुखाः पापाः पिबन्ति सलिलम् मम |

तैर्न तत्स्पर्शनम् पापम् सहेयम् पापकर्मभिः || -२२-३३
अमोघः क्रियताम् राम तत्र तेषु शरोत्तमः
|

(ನನ್ನ ಉತ್ತರ ಭಾಗದ ಕಡೆಗೆ, ನೀವು ಈ ಜಗತ್ತಿಗೆ ಚೆನ್ನಾಗಿ ತಿಳಿದಿರುವಂತೆಯೇ, ಡ್ರುಮಾತುಲ್ಯ ಎಂದು ಕರೆಯಲ್ಪಡುವ ಒಂದು ಪವಿತ್ರ ಸ್ಥಳವಿದೆ.  ಪಾಪಿ ಅಭಿರರನ್ನು ತಮ್ಮ ಮುಖ್ಯಸ್ಥರನ್ನಾಗಿ ಹೊಂದಿರುವ ಹಲವಾರು ದರೋಡೆಕೋರರು, ಅಲ್ಲಿ ನನ್ನ ನೀರನ್ನು ಕುಡಿಯುತ್ತಾರೆ.  ಆ ದುಷ್ಟ ಜನರ, ದುಷ್ಟ ಕೃತ್ಯಗಳನ್ನು ಮಾಡುವವರ ಆ ಸ್ಪರ್ಶವನ್ನು ಸಹಿಸಲು ನನಗೆ ಸಾಧ್ಯವಾಗುತ್ತಿಲ್ಲ, ಓ ರಾಮ! ಈ ಅದ್ಭುತವಾದ ಆಯುಧವನ್ನು ವ್ಯರ್ಥ ಮಾಡದೆ ಅವರ ಕಡೆಗೆ ಪ್ರಯೋಗಿಸಿ)

ಈ ಮಾತುಗಳನ್ನು ಕೇಳಿದ ರಾಮನು ತನ್ನ ಆಯುಧವನ್ನು ಆ ದಿಕ್ಕಿನಲ್ಲಿ  ಪ್ರಯೋಗಿಸಿದನು.

तेन तन्मरुकान्तारम् प्^इथिव्याम् किल विश्रुतम् || २-२२-३५
विपातितः शरो यत्र वज्राशनिसमप्रभः
|

(ಗುಡುಗು ಮತ್ತು ಸಿಡಿಲಿನ ಹೊಳಪನ್ನು ಹೋಲುವ ಆಯುಧವು ರಾಮನಿಂದ ಪ್ರಯೋಗಿಸಲ್ಪಟ್ಟ ಸ್ಥಳ, ಆ ಸ್ಥಳವು ಈ ಭೂಮಿಯ ಮೇಲೆ ಮಾರು (ಇಂದಿನ ಮಾರ್ವಾಡ) ಮರುಭೂಮಿ ಎಂದು ಪ್ರಸಿದ್ಧವಾಗಿದೆ.)

ननाद च तदा तत्र वसुधा शल्यपीडिता || २-२२-३६
तस्माद्बाणमुखात्तोयमुत्पपात रसातलात् |

स बभूव तदा कूपो व्रण इत्येव विश्रुतः || २-२२-३७
सततम् चोत्थितम् तोयम् समुद्रस्येव दृश्यते |

अवदारणशब्दश्च दारुणः समपद्यत || २-२२-३८
तस्मात्तद्बाणपातेन अपः कुक्षिष्वशोषयत् |

विख्यातम् त्रिषु लोकेषु मधुकान्तारमेव च || २-२२-३९
शोषयित्वा तु तम् कुक्षिम् रामो दशरथात्मजः |
वरम् तस्मै ददौ विद्वान्मरवेऽमरविक्रमः || २-२२-४०

(ರಾಮನ ಕ್ಷಿಪಣಿ ಬಿದ್ದು ನೆಲವನ್ನು ಚುಚ್ಚಿದ ಭೂಮಿಯು ಒಂದು ಭಾರೀ  ಶಬ್ದವನ್ನು ಹೊರಸೂಸಿತು.  ಭೂಗತ ಪ್ರದೇಶದ ಕೊನೆಯ ಭಾಗದ ನೀರು ಆ ಬಿರುಕಿನ ಬಾಯಿಯಿಂದ ಹೊರಬಂದಿತು.  ವ್ರಣ ಎಂದು ಕರೆಯಲ್ಪಡುವ ಒಂದು ಟೊಳ್ಳಾದ (ಸರೋವರ) ರಚನೆಯಾಯಿತು ಮತ್ತು ಅದರಿಂದ ಹೊರಹೊಮ್ಮುವ ನೀರು ನಿರಂತರವಾಗಿ ಸಮುದ್ರದ ನೀರನ್ನು ಹೋಲುತ್ತದೆ.  ರಾಮನ ಕ್ಷಿಪಣಿಯಿಂದ ಉಂಟಾದ ಭೀಕರ ಧ್ವನಿಯ ನಂತರ, ಆ ಪ್ರದೇಶದಲ್ಲಿ ನೀರು ಒಣಗಿಹೋಯಿತು.
ಮಾರುವಿನ ಈ ಮರುಭೂಮಿಯು ಮೂರು ಲೋಕಗಳಲ್ಲಿ ಪ್ರಸಿದ್ಧವಾಯಿತು. ರಾಮ (ದಶರಥನ ಮಗ) ಒಬ್ಬ ಬುದ್ಧಿವಂತ ಮತ್ತು ಆಕಾಶವನ್ನು ಹೋಲುವ ಧೈರ್ಯಶಾಲಿ ವ್ಯಕ್ತಿಯಾಗಿದ್ದು, ಆ ಕುಹರವನ್ನು ಒಣಗಿಸಿ ಮರುವಿನ ಮರುಭೂಮಿಗೆ ವರವನ್ನು ನೀಡಿದನು.)

पशव्यश्चाल्परोगश्च फलमूलरसायुतः |
बहुस्नेहो बहुक्षीरः सुगन्धिर्विविधौषधिः || २-२२-४१
एवमेतैर्गुणैर्युक्तो बहिभिः सम्युतो मरुः |
रामस्य वरदानाच्च शिवः पन्था बभूव ह || २-२२-४२

ರಾಮನ ವರದಿಂದಾಗಿ, ಮಾರು ಮರುಭೂಮಿಯು ಜಾನುವಾರು ಸಾಕಣೆಗೆ ಅತ್ಯಂತ ಅನುಕೂಲಕರವಾದ ಸ್ಥಳವಾಯಿತು, ಸ್ವಲ್ಪ ಬರಡಾದ ಸ್ಥಳ, ರುಚಿಯಾದ ಹಣ್ಣುಗಳು ಮತ್ತು ನಾರು ಬೇರುಗಳನ್ನು ಉತ್ಪಾದಿಸುವ ಸ್ಥಳ, ಸಾಕಷ್ಟು ಬೆಣ್ಣೆ, ಸಾಕಷ್ಟು ಹಾಲು ಮತ್ತು ವಿವಿಧ ರೀತಿಯ ಸಿಹಿ,  ಸುವಾಸನೆಯುಳ್ಳ ಗಿಡಮೂಲಿಕೆಗಳನ್ನು ಹೊಂದಿತ್ತು.
ಈ ರೀತಿಯಾಗಿ ರಾಮನು ಥಾರ್ ಮರುಭೂಮಿಯನ್ನು ಸೃಷ್ಟಿಸಿದನು ಮತ್ತು ರಾಜಸ್ಥಾನವನ್ನು ಆಶೀರ್ವದಿಸಿದನು.

 

 

 

 

 

 

 

 

 

 

 

 

 

ಭಾರತದ ದೇವಾಲಯಗಳು ಕೃತಿಗೆ ಜಗದೀಶ ಶರ್ಮ ಸಂಪ ಅವರ ಮುನ್ನುಡಿ

ಇದು ಅಕ್ಷರ ತೀರ್ಥಯಾತ್ರೆ. ಇದನ್ನು ಓದತೊಡಗಿದಂತೆ ನೀವೊಂದು ಪಯಣ ಆರಂಭಿಸುತ್ತೀರಿ. ಅದು ನಿಮ್ಮನ್ನು ಭಾರತದ ಉದ್ದಗಲಗಳಿಗೆ ಕರೆದೊಯ್ಯುತ್ತದೆ. ನಿಮ್ಮ ಸನಿಹದ ತೀರ್ಥಕ್ಷೇತ್ರದಿಂದ ಆರಂಭಿಸಿ ದೂರದೂರದ ಕ್ಷೇತ್ರಗಳಿಗೆ ಭೇಟಿ ಮಾಡಿಸುತ್ತದೆ.


ಆಯಾ ತೀರ್ಥಕ್ಷೇತ್ರಗಳಿಗೆ ಹೋಗಿ ದೇವರ ದರ್ಶನ ಮಾಡಿದಾಗ ವಿಶಿಷ್ಟವಾದ ಫಲ ಸಿಗುತ್ತದೆ ಎನ್ನುವುದು ಪ್ರಾಚೀನರ ಅಭಿಮತ. ಅಲ್ಲಿಯದೇ ಆದ ತೀರ್ಥವಿಧಿಗಳನ್ನು ಮಾಡಿದಾಗ ಬಯಸಿದ್ದು ಸಿಗುತ್ತದೆ ಎನ್ನುತ್ತಾರೆ ಅವರು. ಆದರೆ ಆಯಾ ಕ್ಷೇತ್ರಗಳ ಕುರಿತು ಕೇಳಿದರೂ ಸಾಕು, ಓದಿದರೂ ಸಾಕು ಫಲ ಸಿಗುತ್ತದೆ ಎನ್ನುವ ಮಾತುಗಳನ್ನೂ ಹಿರಿಯರು ಆಡುತ್ತಾರೆ. ‘ಶ್ರವಣಾದೇವ ಮೋಕ್ಷದಮ್, ಪಠನಾದೇವ ಮೋಕ್ಷದಮ್ಎನ್ನುವ ಮಾತುಗಳು ಅಲ್ಲಲ್ಲಿ ಕೇಳಿಬರುತ್ತವೆ. ತೀರ್ಥಕ್ಷೇತ್ರದ ದರ್ಶನ ಮತ್ತು ಅಲ್ಲಿ ನಡೆಸುವ ಕ್ರಿಯೆಗಳು ಅಂತರಂಗದ ಅನುಭವವಾದಾಗ ಫಲ ಎನ್ನುವುದು ತಾತ್ತ್ವಿಕತೆ. ಆ ಅನುಭವ ಕೇಳಿದಾಗಲೂ ಓದಿದಾಗಲೂ ಸಾಧ್ಯವಾಗುವುದಾದರೆ ಮೇಲಿನ ಮಾತು ಅರ್ಥವತ್ತಾಗುತ್ತದೆ. ನೀವು ಇದನ್ನು ಓದುತ್ತಿದ್ದಾಗ ನಿಮಗೆ ಆ ಅನುಭವವಾಗುತ್ತದೆ. ಓದುತ್ತಾ ಓದುತ್ತಾ ನೀವು ಸುತ್ತತೊಡಗುತ್ತೀರಿ. ಒಂದು ಮಾನಸ ಯಾತ್ರೆ ನಡೆಸುತ್ತೀರಿ.

ಯಾವುದೇ ಓದು ಒಳಗೊಂದು ಅನುಭವವನ್ನು ಕಟ್ಟಿಕೊಡಬೇಕು. ಅದು ಆಯಾ ವಸ್ತುವಿನ ಅನುಪಸ್ಥಿಯಲ್ಲಿಯೂ ನಡೆಯಬೇಕು. ಎಂದರೆ ರಾಮಾಯಣವನ್ನೋ ಮಹಾಭಾರತವನ್ನೋ ಓದಿದಾಗ ರಾಮನ ವನವಾಸ, ಪಾಂಡವರ ವನವಾಸ, ಸೀತೆಯ ನೋವು, ದ್ರೌಪದಿಯ ಅವಮಾನ ಇದೆಲ್ಲ ನಮ್ಮದಾಗಬೇಕು. ನಮ್ಮೊಳಗೆ ಅವೆಲ್ಲ ಘಟಿಸಬೇಕು. ಇದು ಸಾಹಿತ್ಯದ ಓದಿಗಿರುವ ಪರಿಣಾಮ. ಈ ಕೃತಿಯನ್ನು ಓದುವಾಗ ನೀವೊಂದು ಭಾವಯಾನಕ್ಕೆ ಸಿದ್ಧರಾದರೆ ಕ್ಷೇತ್ರಗಳನ್ನು ಕಂಡ ಭಾವ ನಿಮ್ಮದಾಗುತ್ತದೆ.

ಜಗತ್ತಿನ ಎಲ್ಲ ಮತಗಳಲ್ಲೂ ತೀರ್ಥಯಾತ್ರೆ ಇದೆ. ಆದರೆ ಸನಾತನಿಗಳಲ್ಲಿ ಅದು ಬಹಳ ಪ್ರಧಾನ. ಇಲ್ಲಿ ಅದು ಒಂದೆರಡು ಕ್ಷೇತ್ರಗಳ ದರ್ಶನಕ್ಕೆ ಮುಗಿಯುವುದಿಲ್ಲ. ಸಾವಿರ ಸಾವಿರ ಕ್ಷೇತ್ರಗಳಿವೆ. ಭಾರತದ ಎಲ್ಲೆಡೆಯನ್ನು ಅವು ತುಂಬಿವೆ. ಇಂಥದೊಂದು ಪ್ರದೇಶದಲ್ಲಿ ತೀರ್ಥಕ್ಷೇತ್ರಗಳಿಲ್ಲ ಎನ್ನಲಾಗದು. ಅಷ್ಟು ವ್ಯಾಪಕತೆ ಅವುಗಳದ್ದು.


ನಮ್ಮವರು ಹರಿಯುವ ನದಿಯಲ್ಲಿ, ಆಕಾಶಕ್ಕೆ ಮುಖ ಮಾಡಿ ನಿಂತ ಗಿರಿಗಳಲ್ಲಿ, ಬಟ್ಟಬಯಲಲ್ಲಿ ಎಲ್ಲೆಡೆಯೂ ದೇವರನ್ನು ಕಂಡವರು. ಮಣ್ಣು, ಮರ, ಕಲ್ಲು, ನೀರು ಎಲ್ಲದರಲ್ಲೂ ಪಾವಿತ್ರ್ಯ ಅರಸಿದವರು. ಅವರ ಆ ಹುಡುಕಾಟದ ಪರಿಣಾಮವೇ ಇಷ್ಟೊಂದು ತೀರ್ಥಕ್ಷೇತ್ರಗಳು.

ಅಲ್ಲೆಲ್ಲ ದೈವ ಸಾನ್ನಿಧ್ಯ ಬರಲು ಅಥವಾ ಪ್ರಕಟಗೊಳ್ಳಲು ಅದರದ್ದೇ ಆದ ಕಾರಣಗಳಿರುತ್ತವೆ. ಅವುಗಳೇ ಸ್ಥಳ ಪುರಾಣಗಳು. ಪ್ರತಿ ಕ್ಷೇತ್ರದ ಆವಿರ್ಭಾವದ ಕಾರಣವನ್ನು ಅವು ತಿಳಿಸುತ್ತವೆ. ಅವುಗಳಲ್ಲಿ ಅದ್ಭುತಗಳಿವೆ, ಅಸಂಭಾವ್ಯಗಳಿವೆ, ಕಾರುಣ್ಯವಿದೆ, ದುಷ್ಟಶಿಕ್ಷಣವಿದೆ, ಶಿಷ್ಟಪರಿಪಾಲನೆಯಿದೆ. ಹೀಗೆ ಪ್ರತಿ ಸ್ಥಳಪುರಾಣವೂ ಅದರದ್ದೇ ಆದ ಕಾರಣಕ್ಕೆ ವಿಶಿಷ್ಟವೆನಿಸುತ್ತದೆ.

ಸ್ಥಳ ಪುರಾಣಗಳನ್ನು ನಂಬಲಾಗದು ಎನ್ನುವರುಂಟು. ಅವೆಲ್ಲ ಕಪೋಲ ಕಲ್ಪಿತ ಎನ್ನುವರುಂಟು. ದಂತಕಥೆಗಳು ಎನ್ನುವರುಂಟು. ಹಾಗೆಯೇ ಅವೆಲ್ಲವೂ ಸತ್ಯಸ್ಯ ಸತ್ಯ ಎಂದು ನಂಬುವವರೂ ಉಂಟು. ನಂಬಿಕೆ ಅಪನಂಬಿಕೆಗಳ ವಿಷಯ ಅದೇನೇ ಇದ್ದರೂ ಸ್ಥಳ ಪುರಾಣಗಳಲ್ಲಿ ಮನುಷ್ಯನಿಗೆ ಒಂದು ಭರವಸೆಯ ಭಾವವಿರುವುದನ್ನು ಗಮನಿಸಬಹುದು. ಮುಂದೇನು ಎಂದು ಕಂಗಾಲಾದ ಸ್ಥಿತಿಗೆ ಅಲ್ಲಿ ಪರಿಹಾರವಿದೆ. ತೀರ್ಥಯಾತ್ರೆಯ ಪರಿಣಾಮವಲ್ಲ, ಆ ಕಥೆಗಳೇ ಬದುಕಿನ ಅನಾಥ ಪ್ರಜ್ಞೆಯನ್ನು ದೂರಮಾಡುತ್ತವೆ. ಇದೊಂದೇ ಕಾರಣ ಸಾಕು ಸ್ಥಳ ಪುರಾಣಗಳ ವೈಶಿಷ್ಟ್ಯಕ್ಕೆ.

ರಾಘವೇಂದ್ರ ಅಡಿಗರು ಸಹಜವಾಗಿ ಬರೆಯುತ್ತಾರೆ. ಹಾಗಾಗಿ ಇದೊಂದು ಸರಳವಾದ ಓದಿನ ಅನುಭವ ಕೊಡುತ್ತದೆ. ಅವರು ಕೇಳಿದ, ಓದಿದ ಸಂಗತಿಗಳನ್ನು ಹಾಗೆಯೇ ನಿರೂಪಿಸುತ್ತಾರೆ. ‘ಹಾಗಿದೆ, ಅಷ್ಟು ಹೇಳಿದ್ದೇನೆಎನ್ನುವಂತೆ ಬರೆಯುತ್ತಾರೆ. ಆ ಕೇಳಿದ ಕಥೆಗಳ ಒಳಗೆ ಹೊಕ್ಕು ಅವರೇನೂ ಮಾಡುವುದಿಲ್ಲ. ಹೀಗೆ ವಸ್ತುವಿನ ಹೊರಗೆ ನಿಂತು ಬರೆಯುವುದು ಕಷ್ಟ. ‘ಇದು ಹೀಗಿರಬಹುದಾ, ಹೀಗೆ ಸಂಭವವಾ, ಇದಕ್ಕೆ ಸಾಕ್ಷ್ಯಾಧಾರಗಳಿವೆಯಾಎನ್ನುವ ಯಾವ ಪ್ರಶ್ನೆಗಳನ್ನೂ ಅವರು ಹಾಕಿಕೊಳ್ಳದೇ ಬರೆದಿದ್ದಾರೆ. ಅದರಿಂದಾಗಿಯೇ ಈ ಸ್ಥಳ ಪುರಾಣಗಳು ಅಧಿಕೃತತೆಯನ್ನು ಉಳಿಸಿಕೊಂಡಿವೆ. ಹಾಗಾಗಿಯೇ ಇದು ಪ್ರಾಮಾಣಿಕ ಬರಹವೂ ಆಗಿದೆ. ಇದೇ ಕಾರಣಕ್ಕೆ ಪ್ರತಿಯೊಂದು ಪ್ರತೀತಿಯೂ ವಿಸ್ಮಯವನ್ನು ಹೊತ್ತಿದೆ.

ಒಂದೆಡೆ ದಾಖಲಿಸಿದ್ದಕ್ಕೆ, ಪ್ರಾಮಾಣಿಕವಾಗಿ ಬರೆದಿದ್ದಕ್ಕೆ, ಸರಳತೆಗೆ ಅಡಿಗರು ಪ್ರಶಂಸಾರ್ಹರು. ಅವರ ಅಕ್ಷರಯಾನ ನಿರಂತರವಾಗಿ ನಡೆಯಲಿ ಎನ್ನುವುದು ಹಾರೈಕೆ.

-ಜಗದೀಶಶರ್ಮಾ ಸಂಪ