Tuesday, April 16, 2024

ಕರುನಾಡ ಕುಳ್ಳ, ನಟ ನಿರ್ಮಾಪಕ ಹಾಸ್ಯ ದಿಗ್ಗಜ ದ್ವಾರಕೀಶ್ ಸಾಹಸಮಯ ಜೀವನ ಒಂದು ಇಣುಕು ನೋಟ

ಕನ್ನಡ‌ಚಿತ್ರರಂಗದ ಹಿರಿಯ ಕೊಂಡಿ‌ ಕಳಚಿದೆ, ಕರುನಾಡ ಕುಳ್ಳ ಪ್ರಚಂಡ ಕುಳ್ಳ, ನಟ ನಿರ್ಮಾಪಕ ಹಾಸ್ಯ ದಿಗ್ಗಜ ದ್ವಾರಕೀಶ್ ಇಂದು ವಿಧಿವಶರಾಗಿದ್ದಾರೆ. ದ್ವಾರಕೀಶ್ ಯುಗಾಂತ್ಯವಾಗಿದೆ. ಕನ್ನಡ ಚಿತ್ರರಂಗ ಕಂಡ ಅಪರೂಪದ ಕಲಾವಿದ ನಿರ್ದೇಶಕ ನಿರ್ಮಾಪಕ, ಕರ್ನಾಟಕದ ಕುಳ್ಳ ಕಣ್ಮರೆಯಾಗಿದ್ದಾರೆ. ಕಾಕತಾಳೀಯ ಏನೋ ತನ್ನಿಷ್ಟದ ಹಾಸ್ಯ ಚಕ್ರವರ್ತಿ ಚಾರ್ಲಿ ಚಾಪ್ಲಿನ್ 135ನೇ ಜನ್ಮೋತ್ಸವದಂದೇ ದ್ವಾರಕೀಶ್ ಕೊನೆಯುಸಿರೆಳೆದಿದ್ದಾರೆ. ಅಷ್ಟೇ ಅಲ್ಲ, ಪತ್ನಿ ಅಂಬುಜ ಸಾವಿನ ದಿನದಂದೇ ಚಿರನಿದ್ರೆಗೆ ಜಾರಿದ್ದಾರೆ.  ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ದ್ವಾರಕೀಶ್ ನೇತ್ರದಾನ   ಮಾಡುವ ಮೂಲಕ ಯುವಜನತೆಗೆ ಮಾದರಿಯಾಗಿದ್ದಾರೆ. ಡಾ.ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ನೇತ್ರದಾನ ಮಾಡಿದ್ದರು. ಈಗ ದ್ವಾರಕೀಶ್ ಕೂಡ ತಮ್ಮ ಸಾವಿನ ನಂತರ ಇತರರ ಬಾಳಿಗೆ ಬೆಳಕಾಗಿದ್ದಾರೆ. ದ್ವಾರಕೀಶ್ ಅವರು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದ್ದಾರೆ. ಅವರ ನಿರ್ಧಾರದಂತೆ ಕುಟುಂಬ ಕೂಡ ಸಮ್ಮತಿ ನೀಡಿದೆ. ಕೆಲವೇ ಕ್ಷಣಗಳಲ್ಲಿ ಡಾ.ಶೈಲಜಾ ನೇತೃತ್ವದಲ್ಲಿ ನೇತ್ರ ಕಸಿ ಕಾರ್ಯ ನಡೆಯಲಿದೆ. 


ಬಂಗ್ಲೆ ಶಾಮ ರಾವ್ ದ್ವಾರಕನಾಥ್ ಉರುಫ್ ದ್ವಾರಕೀಶ್ 

ದ್ವಾರಕೀಶ್ ಅವರ ಪೂರ್ಣ ಹೆಸರು ಬಂಗ್ಲೆ ಶಾಮ ರಾವ್ ದ್ವಾರಕನಾಥ್. ಇವರಿಗೆ ದ್ವಾರಕೀಶ್ ಎಂದು ಹೆಸರಿಟ್ಟಿದ್ದು  ಚಿತ್ರ ನಿರ್ಮಾಪಕ, ನಿರ್ದೇಶಕ ಸಿ.ವಿ ಶಿವಶಂಕರ್. ಸಿನಿಮಾರಂಗದಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಆಸೆಯೊಂದಿಗೆ  ಬಣ್ಣದ ಪ್ರಪಂಚಕ್ಕೆ ಬಂದ ದ್ವಾರಕೀಶ್, ಸಿನಿಮಾ ರಂಗದ ನಾನಾ ವಿಭಾಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡವರು. ಕೇವಲ ನಟರಾಗಿ ಮಾತ್ರ ಉಳಿಯದೇ ನಿರ್ದೇಶಕರಾಗಿ, ನಿರ್ಮಾಪಕರಾಗಿ ಅನೇಕ ಕಲಾವಿದರನ್ನು ಚಿತ್ರೋದ್ಯಮಕ್ಕೆ ಪರಿಚಯಿಸಿದವರು.. ದ್ವಾರಕೀಶ್​ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ 1942 ಆಗಸ್ಟ್ 19ರಂದು ಜನಿಸಿದರು.  ಅವರ ತಂದೆ ಶಾಮರಾವ್ ಮತ್ತು ತಾಯಿ ಜಯಮ್ಮ. ಶಾರದ ವಿಲಾಸ್ & ಬನುಮ್ಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಫ್ರೌಡಶಿಕ್ಷಣದ ನಂತರ ಸಿಪಿಸಿ ಪಾಕಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಗ್ರಿ ಪಡೆದರು. ಬಳಿಕ ಸಹೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಅನ್ನು ದ್ವಾರಕೀಶ್​ ಆರಂಭಿಸಿದರು. ನಂತರ ಇಟ್ಟಿಗೆ ವ್ಯಾಪಾರ ಕಾರ್ಖಾನೆ ಪ್ರಾರಂಭಿಸಿದರು. 

ಸಿನಿಮಾ ನಿರ್ಮಾಣ, ನಿರ್ದೇಶನ, ನಟನೆ


ದ್ವಾರಕೀಶ್ ಅವರ ಚಿಕ್ಕಪ್ಪ ಹುಣಸೂರು ಕೃಷ್ಣಮೂರ್ತಿ ಅವರನ್ನು ಒಪ್ಪಿಸುವ ಮೂಲಕ 1963ರಲ್ಲಿ ದ್ವಾರಕೀಶ್ ಸಿನಿಮಾ ರಂಗವನ್ನು ಪ್ರವೇಶ ಮಾಡಿದರು. 1964ರಲ್ಲಿ ವೀರ ಸಂಕಲ್ಪ ಎಂಬ ಸಿನಿಮಾ ಮೂಲಕ ದ್ವಾರಕೀಶ್​ ಚಿತ್ರರಂಗಕ್ಕೆ ಬಂದವರು. 'ವೀರಸಂಕಲ್ಪ' ಸಿನಿಮಾದ ತದನಂತರ 'ಪರೋಪಕಾರಿ','ಸತ್ಯ ಹರಿಶ್ಚಂದ್ರ', 'ಕ್ರಾಂತಿ ವೀರ', 'ಮೇಯರ್ ಮುತ್ತಣ್ಣ', 'ದೂರದ ಬೆಟ್ಟ', 'ಗಾಂಧೀನಗರ', 'ಬಾಳು ಬೆಳಗಿತು', 'ಬಂಗಾರದ ಮನುಷ್ಯ', 'ಬಹದ್ದೂರ್ ಗಂಡು' ಹೀಗೆ ಹಲವು ಸಿನಿಮಾಗಳಲ್ಲಿ ಡಾ. ರಾಜ್‌ಕುಮಾರ್ ಜೊತೆ ದ್ವಾರಕೀಶ್‌ ಬಣ್ಣ ಹಚ್ಚಿದ್ದರು. ದ್ವಾರಕೀಶ್‌ ತಮ್ಮ ನ್ಯೂನ್ಯತೆಗಳ ಮೂಲಕ ಸಿನಿರಂಗದಲ್ಲಿ ಗೆದ್ದರು.  1966ರಲ್ಲಿ ಮಮತೆಯ ಬಂಧನ ಸಿನಿಮಾ ನಿರ್ಮಾಣ ಮಾಡುವ ಮೂಲಕ ನಿರ್ಮಾಪಕರಾದ ದ್ವರಕೀಶ್ 1969ರಲ್ಲಿ ಮೇಯರ್ ಮುತ್ತಣ್ಣ ಚಿತ್ರವನ್ನು ತಮ್ಮದೇ ದ್ವಾರಕಾ ಫಿಲ್ಮ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದರು. ಈ ಸಿನಿಮಾದಲ್ಲಿ ಡಾ.ರಾಜ್ ಕುಮಾರ್ ಹೀರೋ, ಭಾರತಿ ನಾಯಕಿ. ಇದು ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು. 'ಕುಳ್ಳ ಏಜೆಂಟ್ 000' ಸಿನಿಮಾವನ್ನು ನಿರ್ಮಿಸಿ ತಾವೇ ಆ ಚಿತ್ರಕ್ಕೆ ದ್ವಾರಕೀಶ್‌ ನಾಯಕನಟರಾದರು.  ದ್ವಾರಕೀಶ್  ಇದು ವರೆಗೂ 40ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕರಾಗಿ ಹಲವು ಪ್ರತಿಭೆಗಳನ್ನು ಕನ್ನಡಿಗರಿಗೆ ಪರಿಚಯಿಸಿದ್ದಾರೆ. .  ಅಲ್ಲದೆ ಕನ್ನಡ ಮಾತ್ರವಲ್ಲದೇ, ತಮಿಳು, ಹಿಂದಿ ಸಿನಿಮಾಗಳನ್ನು ಕೂಡ ದ್ವಾರಕೀಶ್‌ ನಿರ್ಮಿಸಿದ್ದಾರೆ. 

ಇನ್ನು 1985 ರಲ್ಲಿ ದ್ವಾರಕೀಶ್ ಸಿನಿಮಾ ನಿರ್ದೇಶಕನಾಗಿ ಭಡ್ತಿ ಪಡೆದರು.  ʻನೀ ಬರೆದ ಕಾದಂಬರಿʼ ಎಂಬ ಚಿತ್ರವನ್ನು ನಿರ್ದೇಶಿಸುವ ಮೂಲಕ  ದ್ವಾರಕೀಶ್ ನಿರ್ದೇಶನಕ್ಕಿಳಿದರು. ಡಾನ್ಸ್ ರಾಜ ಡಾನ್ಸ್, ಶ್ರುತಿ, ಶ್ರುತಿ ಹಾಕಿದ ಹೆಜ್ಜೆ, ರಾಯರು ಬಂದರು ಮಾವನ ಮನೆಗೆ‌ ಹೀಗೆ 15ಕ್ಕೂ ಹೆಚ್ಚು ಚಿತ್ರಗಳನ್ನು ದ್ವಾರಕೀಶ್‌ ನಿರ್ದೇಶಿಸಿದ್ದಾರೆ. 

ನಟರಾಗಿ ಜನ್ಮ ರಹಸ್ಯ, ಮಂಕುತಿಮ್ಮ, ಪೆದ್ದ ಗೆದ್ದ, ಕಿಟ್ಟು ಪುಟ್ಟಿ, ಸಿಂಗಾಪುರದಲ್ಲಿ ರಾಜಾಕುಳ್ಳ, ಮನೆ ಮನೆ ಕಥೆ, ಆಫ್ರಿಕಾದಲ್ಲಿ ಶಿಲಾ, ಆಪ್ತಮಿತ್ರ, ಭಲೇ ಹುಡುಗ, ಬಂಗಾರದ ಮನುಷ್ಯ, ಗಲಾಟೆ ಸಂಸಾರ, ಪ್ರಪಂಚ ಕುಳ್ಳ, ಗುರು ಶಿಷ್ಯರು, ಕಳ್ಳ ಕಳ್ಳು ಮೊದಲಾದ ಸಿನಿಮಾಗಳಲ್ಲಿ ನಟಿಸಿರುವ ದ್ವಾರಕೀಶ್ 1974ರಲ್ಲಿ ವಿಷ್ಣುವರ್ಧನ್ ಅವರ ಜೊತೆಯಾಗಿ ಕಳ್ಳ ಕುಳ್ಳ ಸಿನಿಮಾ ಮಾಡಿದ್ದ ದ್ವಾರಕೀಶ್ ಅಲ್ಲಿಂದಾಚೆಗೆ ಆಪ್ತಮಿತ್ರ ಚಿತ್ರದ ತನಕ ಹಲವಾರು ಸಿನಿಮಾ ಜೊತೆಯಾಗಿ ಅಭಿನಯಿಸಿದ್ದರು.  ದ್ವಾರಕೀಶ್ ಎನ್ನುವ ನಟ ಸೋತಾಗ ಕುಗ್ಗದೇ ಗೆದ್ದಾಗ ಹಿಗ್ಗದೇ ಚಿತ್ರರಂಗಕ್ಕೆ ಅಪೂರ್ವ ಕೊಡುಗೆಯನ್ನೇ ನೀಡಿದ್ದಾರೆ. ಇವರು ಕಿಶೋರ್ ಕುಮಾರ್ ಅಂತಹ ಗಾಯಕನನ್ನು ಕನ್ನಡ ಸಿನಿರಂಗಕ್ಕೆ ಪರಿಚಯಿಸಿದರು. ದ್ವಾರಕೀಶ್‌ 'ಆಟಗಾರ', 'ಚೌಕ', 'ಅಮ್ಮ ಐ ಲವ್ ಯು' ಅಂತಹ 50ಕ್ಕೂ ಅಧಿಕ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಇಲ್ಲಿಯವರೆಗೂ 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ ಮತ್ತು 17ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. 

ನೋಡಲು ವಾಮನ, ಸಾಧನೆ ತ್ರಿವಿಕ್ರಮ

ದ್ವಾರಕೀಶ್ ಕನ್ನಡದ ಕುಳ್ಳ ಎಂದೇ ಮನೆಮಾತಾಗಿದ್ದವರು. ಸಿನಿಮಾ ಹೀರೋ ಆಗಲು, ನಟ ಆಗಲು ಹೈಟು ಕೇವಲ ಅಂಕಿ ಅಷ್ಟೇ ಎಂದು ಇವರು ಸಾಧಿಸಿ ತೋರಿಸಿದರು. ಆನ್‌ಲೈನ್‌ನಲ್ಲಿ ಲಭ್ಯವಿರುವ ಮಾಹಿತಿಗಳ ಪ್ರಕಾರ ದ್ವಾರಕೀಶ್‌ 4.1 ಅಡಿ ಎತ್ತರವಿದ್ದರು. ಅಂದರೆ 125 ಸೆಂಟಿಮೀಟರ್‌ ಎತ್ತರ ಇದ್ದರು. ಕೇವಲ 4.1 ಅಡಿ ಎತ್ತರವಿದ್ದರೂ 85ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹೀರೋ ಆಗಿದ್ದರು. ಇವರು ಕೇವಲ ನಟನಲ್ಲ. ನಿರ್ದೇಶಕರು, ಚಲನಚಿತ್ರ ಸಂಭಾಷಣೆ ಬರಹಗಾರ, ನಿರ್ಮಾಪಕರಾಗಿಯೂ ಹೆಸರು ಮಾಡಿದ್ದರು.

ಅಣ್ಣಾವ್ರಿಗೆ 2 ಸಿನಿಮಾ ನಿರ್ಮಿಸಿದ ದ್ವಾರಕೀಶ್

ದ್ವಾರಕೀಶ್​ ನಿರ್ಮಾಣದ ಎರಡು ಸಿನಿಮಾಗಳಲ್ಲಿ ಮಾತ್ರ ರಾಜ್​ಕುಮಾರ್​ ನಟಿಸಿದರು. ಡಾ. ರಾಜ್​ಕುಮಾರ್ ಅವರ ಕಾಲ್​ಶೀಟ್​ ಸಿಗುವುದು ಎಂದರೆ ಸುಲಭದ ಮಾತಲ್ಲ. 1960ರ ದಶಕದಲ್ಲಿ ಅವರು ಅಷ್ಟು ಬ್ಯುಸಿ ಆಗಿದ್ದರು. ದ್ವಾರಕೀಶ್​ ಅವರು ಆಗತಾನೇ ನಿರ್ಮಾಪಕನಾಗಿದ್ದರು. ದ್ವಾರಕೀಶ್ ಆಗಿನ್ನೂ 25-26ರ ಪ್ರಾಯದ ಯುವಕ. ಅದಾಗಲೇ ರಾಜ್​ಕುಮಾರ್​ ಜೊತೆ ನಟಿಸಿ ಫೇಮಸ್​ ಆಗಿದ್ದರು ಅವರು ನಿರ್ಮಾಪಕನಾಗಿ ಡೇಟ್ಸ್​ ಪಡೆಯುವುದು ಸಲಭ ಆಗಿರಲಿಲ್ಲ. ಹೇಗೋ ಡೇಟ್ಸ್​ ಪಡೆದ ಅವರು ‘ಮೇಯರ್​ ಮುತ್ತಣ್ಣ’ ಸಿನಿಮಾ ಮಾಡಿ ಯಶಸ್ಸು ಕಂಡರು. ಬಳಿಕ ದ್ವಾರಕೀಶ್​ ಅವರು ಡಾ. ರಾಜ್​ಕುಮಾರ್ ನಟನೆಯ ‘ಭಾಗ್ಯವಂತರು’ ಸಿನಿಮಾವನ್ನು ನಿರ್ಮಿಸಿದರು. ಅದಾದ ಬಳಿಕ ಮತ್ತೆ ಡಾ. ರಾಜ್​ಕುಮಾರ್​ ಸಿನಿಮಾಗಳಿಗೆ ದ್ವಾರಕೀಶ್​ ಬಂಡವಾಳ ಹೂಡಲು ಸಾಧ್ಯವಾಗಲಿಲ್ಲ. ಯಾಕೆಂದರೆ, ಅದಾಗಲೇ ಪಾರ್ವತಮ್ಮ ರಾಜ್​ಕುಮಾರ್​ ಅವರು ತಮ್ಮದೇ ‘ವಜ್ರೇಶ್ವರಿ ಕಂಬೈನ್ಸ್’ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದರು. ರಾಜ್​ಕುಮಾರ್​ ಅವರ ಎಲ್ಲ ಸಿನಿಮಾಗಳು ‘ವಜ್ರೇಶ್ವರಿ ಕಂಬೈನ್ಸ್​’ ಮೂಲಕವೇ ನಿರ್ಮಾಣವಾಗಲು ಆರಂಭವಾದವು. ಹಾಗಾಗಿ ದ್ವಾರಕೀಶ್​ ಅವರಿಗಾಗಲಿ ಅಥವಾ ಬೇರೆ ನಿರ್ಮಾಪಕರಿಗಾಗಲಿ ಅಣ್ಣಾವ್ರ ಕಾಲ್​ಶೀಟ್​ ಸಿಗದಾಯಿತು.

ವಿಷ್ಣು ಮತ್ತು ದ್ವಾಕರೀಶ್ ಫ್ರೆಂಡ್ ಶಿಪ್-ಬ್ರೇಕಪ್


ದ್ವಾರಕೀಶ್ ಮತ್ತು ವಿಷ್ಣವರ್ಧನ್ ಸ್ನೇಹ ಚಂದನವನದಲ್ಲಿ ಭಾರೀ ಸದ್ದು ಮಾಡಿತ್ತು. ಇವರಿಬ್ಬರು ಜೊತೆಯಾಗಿ ನಟಿಸಿದ ಚಿತ್ರಗಳೆಲ್ಲಾ ಹಿಟ್ ಸಿನಿಮಾಗಳಾಗಿದ್ದವು.  ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿಯ ಚೊಚ್ಚಲ ಸಿನಿಮಾ `ಕಳ್ಳ ಕುಳ್ಳ’  `ಕಳ್ಳ ಕುಳ್ಳ’ ಚಿತ್ರ. 1975ರಲ್ಲಿ ತೆರೆಕಂಡು  ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಗೆದ್ದಿತು. ಕನ್ನಡ ಸಿನಿಮಾ ರಂಗದ `ಕಳ್ಳ ಕುಳ್ಳ ಜೋಡಿ’ ಎಂದೇ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಅವರನ್ನು ಕರೆಯುವಂತೆ ಮಾಡಿತ್ತು. ಅಲ್ಲಿಂದ ಶುರುವಾದ ಈ ಜೋಡಿಯ ಪಯಣ 1986ರ ಹೊತ್ತಿಗೆ ಒಂದು ಡಜನ್‌ನಷ್ಟು ಸಿನಿಮಾಗಳನ್ನು ಮಾಡಿಸಿತು. ಕಿಟ್ಟು ಪುಟ್ಟು, ಭಲೇ ಹುಡುಗ, ಸಿಂಗಪುರ್‌ನಲ್ಲಿ ರಾಜಾಕುಳ್ಳ, ಅವಳ ಹೆಜ್ಜೆ, ಗುರು ಶಿಷ್ಯರು, ಪೆದ್ದಗೆದ್ದ, ಜಿಮ್ಮಿಗಲ್ಲು, ಇಂದಿನ ರಾಮಾಯಣ, ಮದುವೆ ಮಾಡು ತಮಾಷೆ ನೋಡು… ಹೀಗೆ ಒಂದರ ನಂತರ ಒಂದು ಸಿನಿಮಾ   ಪಟ್ಟಿ ಬೆಳೆಯುತ್ತಾ ಹೋಯಿತು. ದ್ವಾರಕೀಶ್ ಮಾಡಿದ 50 ಚಿತ್ರಗಳಲ್ಲಿ 19 ಸಿನಿಮಾಗಳಲ್ಲಿ ವಿಷ್ಣುವರ್ಧನ್ ನಟಿಸಿದ್ದರು. ‘ರಾಯರು ಬಂದರು ಮಾವನ ಮನೆಗೆ’ ಸಿನಿಮಾ ಮಾಡಲು ವಿಷ್ಣುವರ್ಧನ್ ಡೇಟ್ಸ್​​​ಗಾಗಿ ನಾಲ್ಕು ವರ್ಷ ಕಾದಿದ್ದರು ದ್ವಾರಕೀಶ್. ರಕ್ತ ಸಂಬಂಧಕ್ಕಿಂತ ದೊಡ್ಡದಾಗಿತ್ತು ಇವರ ಸಂಬಂಧ. ವಿಷ್ಣುವರ್ಧನ್ ಮೇಲೆ ದ್ವಾರಕೀಶ್ ಅವರಿಗೆ ಎಷ್ಟು ನಂಬಿಕೆ ಬಂತೆಂದರೆ ವಿಷ್ಣುವಿದ್ದರೆ ಗಲ್ಲಾಪೆಟ್ಟಿಗೆ ತುಂಬುವುದರಲ್ಲಿ ಅನುಮಾನವಿಲ್ಲ ಎನ್ನುವಷ್ಟರ ಮಟ್ಟಿಗೆ ನಂಬಿದ್ದರು. ಅದು ನಿಜವೂ ಆಗಿತ್ತು. ಈ ಧೈರ್ಯದಿಂದಲೇ ಅವರು `ರಾಜಾ ಕುಳ್ಳ’ ಸಿನಿಮಾವನ್ನು ಸಿಂಗಾಪುರದಲ್ಲಿ ಚಿತ್ರೀಕರಣ ಮಾಡಲು ಮುಂದಾದರು. ದ್ವಾರಕೀಶ್ ಪ್ರಪ್ರಥಮವಾಗಿ ತಮ್ಮ ಸಿನಿಮಾವನ್ನು ಸಿಂಗಾಪುರದಲ್ಲಿ ಶೂಟಿಂಗ್ ಮಾಡಲು ನಿರ್ಧರಿಸಿದ್ದರು.  ದ್ವಾರಕೀಶ್. ಕನ್ನಡ ಚಿತ್ರರಂಗದಲ್ಲೇ ಸಿಂಗಾಪುರದಲ್ಲಿ ಶೂಟಿಂಗ್ ಆದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ `ರಾಜಾ ಕುಳ್ಳ’ ಪಾತ್ರವಾಯಿತು. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅದೊಂದು ಮೈಲಿಗಲ್ಲಾಯಿತು. ನಿರ್ಮಾಪಕರಾಗಿ ಸಾಕಷ್ಟು ಹೆಸರು ಮಾಡಿದ ದ್ವಾರಕೀಶ್, 1985ರಲ್ಲಿ ತೆರೆಕಂಡ ವಿಷ್ಣುವರ್ಧನ್ ಮತ್ತು ಭವ್ಯ ಜೊತೆಯಾಗಿ ನಟಿಸಿದ್ದ `ನೀ ಬರೆದ ಕಾದಂಬರಿ’ ಸಿನಿಮಾದ ಮೂಲಕ ನಿರ್ದೇಶಕರಾಗಿಯೂ ಯಶಸ್ಸಿನ ತುತ್ತ ತುದಿಯಲ್ಲಿ ಕೂತರು. ದ್ವಾರಕೀಶ್ ಗೆಲುವಿನ ಹಿಂದೆ ಶಕ್ತಿಯಾಗಿ ನಿಂತದ್ದು ಇದೇ ವಿಷ್ಣುವರ್ಧನ್. ಆದರೆ, ಈ ಜೋಡಿಯ ಮಧ್ಯೆಯೂ ಬಿರುಕುಂಟಾಯಿತು.

ವಿಷ್ಣು ಬೇರೆ ನಿರ್ದೇಶಕ, ನಿರ್ಮಾಪಕರಿಗೆ ಕಾಲ್‌ಶೀಟ್ ಕೊಟ್ಟಾಗ ದ್ವಾರಕೀಶ್ ಗೆ ಕೊಪ ಬಂದಿತ್ತು. ನನ್ನಿಂದ ಬೆಳೆದ ಹುಡುಗ, ನನ್ನ ವಿರುದ್ಧವೇ ಜಿದ್ದಿಗೆ ಬಿದ್ದ  ಎಂದು ತಪ್ಪಾಗಿ ಭಾವಿಸಿದ ದ್ವಾರಕೀಶ್ ಗೆಳೆತನದ ನಡುವೆ   ವ್ಯಾಪಾರವನ್ನೂ ಎಳೆತಂದರು. ಅದು ವಿಷ್ಣುವರ್ಧನ್ ಅವರಿಗೆ ಇಷ್ಟವಾಗಲಿಲ್ಲ. ದ್ವಾರಕೀಶ್ ಹಾಗೂ ವಿಷ್ಣು ಗೆಳೆತನ ದೂರವಾಯಿತು.  ಪರಸ್ಪರ ಕಿತ್ತಾಡಿಕೊಂಡರು. ದ್ವಾರಕೀಶ್ ಅವರಿಂದ ದೂರವೇ ಆದರು.  ವಿಷ್ಣು ಅವರನ್ನು ದೂರವಿಟ್ತು ದ್ವಾರಕೀಶ್ ಹಲವಾರು ಸಿನಿಮಾ ಮಾಡಿದರು. ಆದರೆ ಗೆಲುವು ಕಂಡಿದ್ದು ಮಾತ್ರ ಎರಡೋ, ಮೂರೋ ಸಿನಿಮಾ ಮಾತ್ರ. ಸತತವಾಗಿ 18 ಫ್ಲಾಪ್ ಆಯಿತು.  ದ್ವಾರಕೀಶ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು. ಆದರೆ ಹಿರಿಯ ಕಲಾವಿದ, ನಿರ್ಮಾಪಕ ದ್ವಾರಕೀಶ್ ಕಷ್ಟ ಕಂಡು ವಿಷ್ಣುವರ್ಧನ್ ಮರುಗಿದರು. ತಮ್ಮ ಸ್ನೇಹಿತನನ್ನು ಮತ್ತೆ ಕೈ ಹಿಡಿದ ವಿಷ್ಣುವರ್ಧನ್  ಮತ್ತೆ ಕಾಲ್‌ಶೀಟ್ ಕೊಟ್ಟರು. ದ್ವಾರಕೀಶ್ ಮಾಡಿದ್ದ ಅಷ್ಟೂ ಸಾಲವನ್ನು `ಆಪ್ತಮಿತ್ರ’ ಸಿನಿಮಾ ತೀರಿಸಿತು.

ಇನ್ನು ಈ ಕುರಿತ್ಂತೆ ವೆಂಕಟೇಶ್ ನಾರಾಯಣಸ್ವಾಮಿ ಎನ್ನುವವರು ಸ್​ಬುಕ್​ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದು ಅದು ಹೀಗಿದೆ-

‘ನೀ ತಂದ ಕಾಣಿಕೆ’ ಸಿನಿಮಾ ಬಿಡುಗಡೆ ಆಗಿ ಸೋತಿತ್ತು. ‘ದ್ವಾರಕೀಶ್ ನಂಬಿಕೆಗೆ ಅರ್ಹನಲ್ಲ’ ಎಂದು ವಿಷ್ಣುವರ್ಧನ್ ಹೇಳಿರುವುದಾಗಿ ಪತ್ರಿಕೆಯಲ್ಲಿ ವರದಿ ಆಗಿತ್ತು. ಇದರಿಂದ ದ್ವಾರಕೀಶ್ ಸಿಟ್ಟಾದರು. ಆಗ ಅವರು ದೀರ್ಘ ಪತ್ರಿಕಾ ಪ್ರಕಟಣೆ ಹೊರಡಿಸಿದ್ದರು. ಅದರಲ್ಲಿ ‘ಮೊದಮೊದಲು, ಅಂಕಲ್ ಅನ್ನುತ್ತಿದ್ದಮ ನಂತರ ಸರ್ ಎನ್ನುತ್ತಿದ್ದ, ಆ ನಂತರ ಏನೋ ದ್ವಾರ್ಕಿ… ಎಂದು ನನ್ನ ಹೆಗಲ ಮೇಲೆಯೇ ಕೈ ಹಾಕುವಷ್ಟು ಸಲುಗೆ ಬೆಳಸಿಕೊಂಡ. ನಾನೂ ಕೂಡಾ, ಹುಡುಗ ಬೆಳ್ಳಗೆ ಹ್ಯಾಂಡ್ಸಮ್ ಆಗಿದ್ದಾನೆ, ನನ್ನ ಚಿತ್ರಗಳಿಗೆ ಸೂಕ್ತವಾದ ನಾಯಕನಾಗುತ್ತಾನೆ ಎಂದು ಎಲ್ಲವನ್ನೂ ಸಹಿಸಿಕೊಂಡೆ. ಆದರೆ ಆತನ ನಕರಾಗಳು ದಿನೇ ದಿನೇ ನನ್ನ ತಾಳ್ಮೆಯನ್ನು ಪರೀಕ್ಷಿಸುವಂತೆ ಮಾಡುತ್ತಿತ್ತು.. ರಜನಿಕಾಂತ್ ನಂತೆ ನನಗೂ ಒಂದು ತಮಿಳು ಚಿತ್ರವನ್ನು ಮಾಡು ಎಂದು ಪೀಡಿಸುತ್ತಾನೆ.  ರಜನೀಕಾಂತ್ ಎಲ್ಲಿ ಇವನೆಲ್ಲಿ. ಇವನಿಗಾಗಿ ನಾನು ಎಷ್ಟೆಲ್ಲಾ ಮಾಡಿದ್ದೇನೆ. ಸ್ವಲ್ಪವೂ ಕೃತಜ್ಞತೆ ಇಲ್ಲ’ ಎಂದು ದ್ವಾರಕೀಶ್ ಹೇಳಿದ್ದರು. ‘ನಾನು ರಜನೀಕಾಂತ್ ಶ್ರೀದೇವಿ ಯಂತಹ ಸ್ಟಾರ್ ಕಲಾವಿದರನ್ನು ಹಾಕಿಕೊಂಡು ಹಿಂದಿ, ತಮಿಳು ಸಿನಿಮಾಗಳನ್ನು ಮಾಡಿದ ಪ್ರೊಡ್ಯೂಸರ್. ಇವನಿಲ್ಲದೆಯೂ ನಾನು ಸಿನಿಮಾ ಮಾಡಿ ಗೆಲ್ಲ ಬಲ್ಲೆ. ಆದರೆ ನನ್ನಂತಹ ನಿರ್ಮಾಪಕನನ್ನು ಎದುರು ಹಾಕಿಕೊಂಡು ಇವನು ಇಂಡಸ್ಟ್ರಿಯಲ್ಲಿ ಹೇಗೆ ನಿಲ್ಲುತ್ತಾನೋ ನೋಡೋಣ. ಅವನು ನನಗೆ ಮಾಡಿದ ದ್ರೋಹವನ್ನೇ ಕಥಾವಸ್ತುವನ್ನಾಗಿ ಇಟ್ಟುಕೊಂಡು ಸ್ಕ್ರಿಪ್ಟ್ ಮಾಡಿಸುತ್ತಿದ್ದೇನೆ ಸ್ಕ್ರಿಪ್ಟ್ ರೈಟರ್ ಕ್ಲೈಮ್ಯಾಕ್ಸ್ ನಲ್ಲಿ ಬೆನ್ನಿಗೆ ಚೂರಿ ಹಾಕುವಂತೆ ಮಾಡಿದ್ದಾರೆ. ಇಲ್ಲ, ನೇರವಾಗಿ ಎದೆಗೇ ಚುಚ್ಚುವಂತೆ ಬದಲಾಯಿಸುತ್ತಿದ್ದೇನೆ. ಚಿತ್ರಕಥೆ ಫೈನಲ್ ಆದ ನಂತರ ಕಲಾವಿದರು ಮತ್ತು ತಾಂತ್ರಿಕ ವರ್ಗದ ಪಟ್ಟಿಯನ್ನು ಬಿಡುಗಡೆ ಮಾಡುತ್ತೇನೆ’ ಎಂದು ದ್ವಾರಕೀಶ್ ಹೇಳಿದ್ದರು. ಪೋಸ್ಟರ್ ಕೂಡ ಬಿಡುಗಡೆ ಮಾಡಿದ್ದರು.

51 ನೇ ವಯಸ್ಸಿಗೆ 2 ನೇ ಮದುವೆ!


ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್‌ ಮೊದಲ ಮದುವೆ ಚಿಕ್ಕ ವಯಸ್ಸಿನಲ್ಲಿಯೇ ನಡೆದಿತ್ತು. ದ್ವಾರಕೀಶ್‌ ಮೊದಲ ಪತ್ನಿ ಹೆಸರು ಅಂಬುಜಾ.  ಅಂಬುಜಾ ಅವರು ದ್ವಾರಕೀಶ್‌ ಗಿಂತ ದೊಡ್ಡವರು. ದ್ವಾರಕೀಶ್‌ ಅವರ ಸಂಬಂಧಿಯೂ ಆಗಿದ್ದ ಅಂಬುಜಾ ಅವರನ್ನ ಪ್ರೀತಿಸಿ ಮದುವೆಯಾದರು.  ಅಂಬುಜಾ ಹಾಗೂ ದ್ವಾರಕೀಶ್‌ ಅವರಿಗೆ ಐವರು ಮಕ್ಕಳು. ಅಂಬುಜಾ ಅವರು ದ್ವಾರಕೀಶ್‌ ಅವರ ಬೆನ್ನೆಲುಬಾಗಿದ್ದರು. ಪ್ರತಿ ಏಳು ಬೀಳಿನಲ್ಲೂ ಅವರ ಜೊತೆಗಿದ್ದರು.   ಮೊದಲ ಪತ್ನಿ ಅಂಬುಜಾ ಅವರು ದ್ವಾರಕೀಶ್ ದೂರದ ಸಂಬಂಧಿ. ಚಿತ್ರದುರ್ಗ ಅವರ ಊರಾಗಿತ್ತು. ಅಂಬುಜನಾ ಪ್ರೀತಿಸುತ್ತಿದ್ದರು ದ್ವಾರಕೀಶ್. ಇದನ್ನು ಪತ್ರದ ಮೂಲಕ ಹೇಳಿಕೊಂಡಿದ್ದರು. ದ್ವಾರಕೀಶ್ ಪ್ರೀತಿಯನ್ನು ಅವರು ಒಪ್ಪಿದ್ದರು. ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಅಂಬುಜಾ ಬಳಿ ಹೇಳಿಕೊಂಡಿದ್ದರು ದ್ವಾರಕೀಶ್. ಇದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು ಅಂಬುಜಾ. ಮದುವೆ ಆದ ಬಳಿಕ ದ್ವಾರಕೀಶ್ ಅವರ ಸಣ್ಣ ಸಣ್ಣ ಆಸೆಯನ್ನೂ ಅಂಬುಜಾ ಈಡೇರಿಸುತ್ತಿದ್ದರಂತೆ. ದಯಾನಂದ ಕಾಲೇಜಿನಲ್ಲಿ ಅಂಬುಜಾ ಪ್ರೊಫೆಸರ್ ಆಗಿದ್ದರು. 62 ವರ್ಷ ಇವರು ಸಂಸಾರ ನಡೆಸಿದ್ದರು.

ಆದರೆ ದ್ವಾರಕೀಶ್‌ ತಮ್ಮ 51 ನೇ ವಯಸ್ಸಿನಲ್ಲಿ ಎರಡನೇ ಮದುವೆ ಆದರು. ಈ ಸಂಬಂಧ ಅವರ ಜೀವನದಲ್ಲಿ ಸಾಕಷ್ಟು ವಿವಾದಗಳಿಗೆ ಕಾರಣವಾಯಿತು. ನಟ ದ್ವಾರಕೀಶ್‌ ಅವರಿಗೆ ಶೈಲಜಾ ಅವರು ತಮ್ಮ ಅಕ್ಕನ ಮಗಳಿಗೆ ಅವಕಾಶ ಕೇಳಿಕೊಂಡು ಬಂದಿರುತ್ತಾರೆ. ಆಗ ದ್ವಾರಕೀಶ್‌ ಅವರಿಗೆ ಶೈಲಜಾ ಮೇಲೆ ಪ್ರೀತಿ ಹುಟ್ಟುತ್ತದೆ.  ಈ ಸಮಯದಲ್ಲಿ ದ್ವಾರಕೀಶ್ ಗೌರಿ ಕಲ್ಯಾಣ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದರು. ಇವರದ್ದೇ ಬ್ಯಾನರ್ ನಲ್ಲಿ ಮೂಡಿ ಬಂದಿದ್ದ ಶ್ರುತಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ದ್ವಾರಕೀಶ್ ಅವರ ನಿರ್ಮಾಣದಲ್ಲಿ ಮತ್ತೊಂದು ಸಿನಿಮಾ ಬರುತ್ತಿದೆ ಎಂದಾಗ, ಆ ಸಿನಿಮಾದಲ್ಲಿ ತನ್ನ ತಂಗಿಗೆ ಅವಕಾಶ ಕೇಳಲು ಬಂದವರು ಶೈಲಜಾ.  ಶೈಲಜಾ ಅವರು ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನಲ್ಲಿ ಕೆಲಸ ಮಾಡುತ್ತಿರುತ್ತಾರೆ. ಶೈಲಜಾ ಮತ್ತು ದ್ವಾರಕೀಶ್‌ ಅವರ ನಡುವೆ ಸ್ನೇಹ ಬೆಳೆಯಿತು. ಬಳಿಕ ಈ ಸ್ನೇಹ ಪ್ರೇಮವಾಯಿತು. ನಟ ದ್ವಾರಕೀಶ್‌ ಈ ವಿಚಾರವನ್ನು ಮೊದಲ ಪತ್ನಿ ಅಂಬುಜಾ ಬಳಿ ಹೇಳಿಕೊಂಡಾಗ ಅವರು ಸಹ ಎರಡನೇ ಮದುವೆಗೆ ಒಪ್ಪಿಕೊಳ್ಳುತ್ತಾರಂತೆ. ಬಳಿಕ ಶೈಲಜಾ ಮತ್ತು ದ್ವಾರಕೀಶ್‌ ಮದುವೆ ಆಗುತ್ತಾರೆ. ಇದು ಸಾಕಷ್ಟು ವಿವಾದಗಳಿಗೆ ಕಾರಣವಾಗುತ್ತದೆ.  ದ್ವಾರಕೀಶ್‌ ಅವರಿಗೆ ಒಟ್ಟು ಆರು ಜನ ಗಂಡು ಮಕ್ಕಳು. ಮೊದಲ ಪತ್ನಿ ಅಂಬುಜ ಅವರಿಗೆ 5 ಗಂಡು ಮಕ್ಕಳು ಮತ್ತು ಎರಡನೇ ಹೆಂಡತಿ ಶೈಲಜಾಗೆ ಒಂದು ಗಂಡು ಮಗ. ಕಾಕತಾಳೀಯ ಎನ್ನುವಂತೆ ಪತ್ನಿಯನ್ನು ಕಳೆದುಕೊಂಡ ದಿನವೇ ನಟ ದ್ವಾರಕೀಶ್ ಕೂಡ ಇಹಲೋಕ ತ್ಯಜಿಸಿದ್ದಾರೆ. ದ್ವಾರಕೀಶ್ ಪತ್ನಿ ಅಂಬುಜಾ  16 ಜುಲೈ 2021ರಂದು ನಿಧನರಾಗಿದ್ದರು . ದ್ವಾರಕೀಶ್ ಕೂಡ ಇದೇ ದಿನ ಕಣ್ಮುಚ್ಚಿದ್ದಾರೆ. ಮುಂಜಾನೆ 9.45ಕ್ಕೆ ಅಂಬುಜಾ ಅವರು ಪ್ರಾಣಬಿಟ್ಟಿದ್ದರೆ, ದ್ವಾರಕೀಶ್ ಕೂಡ ಅದೇ ಹೊತ್ತಿಗೆ ಉಸಿರು ನಿಲ್ಲಿಸಿದ್ದರು.

ರಿಷಬ್ ಶೆಟ್ಟಿಗೆ ಮನೆ ಮಾರಿದ್ದ ದ್ವಾರಕೀಶ್

ನಟ ನಿರ್ಮಾಪಕ ದ್ವಾರಕೀಶ್ ಬದುಕಿನಲ್ಲಿ ಸಾಕಷ್ತು ಏಳು ಬೀಳು ಕಂಡವರು. ಬಿ. ಗಣಪತಿಯವರು ತಮ್ಮ ಯೂಟ್ಯೂಬ್​​​ ಚಾನಲ್​​​ನಲ್ಲಿ ದ್ವಾರಕೀಶ್ ಸಂದರ್ಶನ ಮಾಡಿದ್ದಾಗ ದ್ವಾರಕೀಶ್ ತಾವು ಮನೆ ಮಾರಿದ್ದ ವಿಷಯ ಕುರಿತು ಮಾತನಾಡಿದ್ದಾರೆ. ಬೆಂಗಳೂರಿನ ಎಚ್​​ಆರ್​ಎಸ್​​ ಲೇಔಟ್​​​ನಲ್ಲಿರುವ ಮನೆಯನ್ನು ಮಾರಾಟದ ಹಿಂದಿರುವ ಸತ್ಯ ತೆರೆದಿಟ್ಟಿದ್ದಾರೆ. ಅದರಂತೆ ಬೆಂಗಳೂರಿನ ಎಚ್​​ಆರ್​ಎಸ್​​ ಲೇಔಟ್​​ನಲ್ಲಿರುವ ಸೈಟ್​​​ನ್ನು ಮಾಜಿ ಮುಖ್ಯಮಂತ್ರಿ ಎಸ್​​​.ಎಮ್​​ ಕೃಷ್ಣ ಅವರ ಸರ್ಕಾರ ನೀಡಿತ್ತು. ಅಲ್ಲಿಯೇ ಮನೆ ನಿರ್ಮಾಣ ಮಾಡಲಾಗಿತ್ತು. ಆದರೆ ಅದು ತುಂಬಾ ದೊಡ್ಡದಾಗಿತ್ತು. ನಾವು ಮೂರುಜನಕ್ಕೆ ಅಷ್ಟು ದೊಡ್ಡ ಮನೆ ಬೇಕಾಗಿರಲಿಲ್ಲ. ಇದರ ಜತೆಗೆ ಆ ಮನೆ ನಿರ್ಮಾಣಕ್ಕೆ ಬ್ಯಾಂಕ್​​ ಲೋನ್​​​ ಕೂಡ ಮಾಡಲಾಗಿತ್ತು. ಜತೆಗೆ ಇತರ ಸಾಲಗಳು ಇದ್ದ ಕಾರಣ ನಾನು ಆ ಮನೆಯನ್ನು ಮಾರಾಟ ಮಾಡಬೇಕಾಯಿತು ಎಂದಿದ್ದರು. ನಮಗೆ ಚಿಕ್ಕ ಮನೆ ಸಾಕಿತ್ತು, ಜತೆಗೆ ನಮಗೆ ಮನೆ ಮುಖ್ಯವಲ್ಲ ಸುಖವಾದ ನಿದ್ದೆ ಬರಬೇಕು. ಅಷ್ಟು ದೊಡ್ಡ ಮನೆಯಲ್ಲಿ ನನಗೆ ಭಯ ಆಗುತ್ತಿತ್ತು. ಅದಕ್ಕಾಗಿ ಆ ಮನೆಯನ್ನು ಮಾರಾಟ ಮಾಡಿದ್ದೇವೆ. ಆ ಬಗ್ಗೆ ಯಾವುದೇ ನೋವಿಲ್ಲ. ನಾನು ಬಗ್ಗೆ ಇಂತಹ ಗೊಂದಲಗಳು ಅಭಿಮಾನಿಗಳಿಗೆ ಬೇಡ, ನಾನು ದೇವರಲ್ಲಿ ಕೇಳಿಕೊಳ್ಳುವುದು ನನ್ನ ಒಳ್ಳೆಯ ನಿರ್ಮಾಪಕ ಮಾಡು ಎಂದು ಕೇಳಿದೆ. ಹಾಗೆ ನನಗೆ ನೀಡಿದ್ದಾನೆ ಎಂದಿದ್ದರು. 

ಇನ್ನು ಇದೇ ಮನೆಯನ್ನು "ಕಾಂತಾರ" ಖ್ಯಾತಿಯ ರಿಷಬ್ ಶೆಟ್ತಿ ದ್ವಾರಕೀಶ್ ಅವರಿಂದ ಖರೀದಿಸಿದ್ದರು. 2021ರಲ್ಲಿ ಎಚ್​ಎಸ್​ಆರ್​ ಲೇಔಟ್​ನ ಮನೆಯನ್ನು ನಿರ್ದೇಶಕ ರಿಷಬ್​ ಶೆಟ್ಟಿಯವರು ಆ ಮನೆಯನ್ನು ಖರೀದಿದ್ದರು.ದ್ವಾರಕೀಶ್​​ ನಿರ್ಮಾಣದಲ್ಲಿ ‘ಆಯುಷ್ಮಾನ್​ಭವ’ ಸಿನಿಮಾ ಮೂಡಿ ಬಂದಿತ್ತು. ಆದರೆ ಈ ಸಿನಿಮಾ ದೊಡ್ಡ ಯಶಸ್ಸು ಕಾಣಲಿಲ್ಲ. ಹೀಗಾಗಿ ಅವರ ಪುತ್ರ ಯೋಗೀಶ್​ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದರು. ಹೀಗಾಗಿ ತಮ್ಮ ಮನೆಯನ್ನು ಮಾರಾಟ ಮಾಡಿದ್ದಾರೆ ಎಂದು ಆಗ ಮಾಧ್ಯಮಗಳಲ್ಲಿ ವರದಿಯಾಗಿತ್ತು. 

No comments:

Post a Comment