Monday, April 29, 2024

ಸಮಯ ಟಿವಿ ಬೃಹತ್ ಆಲದ ಮರದ ರೀತಿ ಬೆಳೆಯಲಿ: ಹೊಸ ಚಾನೆಲ್ ಉದ್ಘಾಟಿಸಿ ರಮೇಶ್ ಅರವಿಂದ್ ಶುಭ ಹಾರೈಕೆ

ಲೋಚಿಸುವ ರೀತಿ, ಸಮಯದ ಸದ್ಬಳಕೆ ಜೀವನದ ಎರಡು ಪ್ರಮುಖಾಂಶಗಳು: ರಮೇಶ್ ಅರವಿಂದ್

ರಾಮನಗರದಲ್ಲಿ ನೀವು ದೊಡ್ಡ ಆಲದ ಮರ ನೋಡುತ್ತೀರಿ, ಅದೆಷ್ಟು ದೊಡ್ಡದಾಗಿದೆ ಎಂದರೆ ಇಡೀ ಏರಿಯಾವನ್ನು ಆವರಿಸಿದೆ. ಪಕ್ಕದಲ್ಲೇ ಅದರ ಬೀಜ ಮಾರಾಟಕ್ಕಿದ್ದು ಅದು ನೋಡಲು ಅತ್ಯಂತ ಚಿಕ್ಕದಾಗಿರುತ್ತದೆ. ಆ ಒಂದು ಚಿಕ್ಕ ಬೀಜದಿಂದ ಇಷ್ಟು ದೊಡ್ಡ ಆಲದ ಮರ ಮುಂದೆ ಆಗುತ್ತದೆ ಎನ್ನುವುದನ್ನು ಯಾರೂ ಊಹೆ ಮಾಡಲು ಸಾಧ್ಯವಿಲ್ಲ. ಅದೇ ರೀತಿಯಲ್ಲಿ ಸಮಯ ಟಿವಿ ಮುಂದೊಂದು ದಿನ ದೊಡ್ಡ ಆಲದ ಮರದ ರೀತಿ ನಾವೆಲ್ಲ ಆಶ್ಚರ್ಯ ಪಡುವ ರೀತಿಯಲ್ಲಿ ದೊಡ್ಡ ಸಕ್ಸಸ್ ಸ್ಟೋರಿ ಬರುವಂತಾಗಲಿ ಎಂದು ನಟ ರಮೇಶ್ ಅರವಿಂದ್ ಹಾರೈಸಿದ್ದಾರೆ. 

ಡಿಜಿಟಲ್ ಸ್ವರೂಪದಲ್ಲಿ ಹೊಸ ರೂಪದೊಂದಿಗೆ ಪ್ರಾರಂಭವಾಗಿರುವ ಸಮಯ ಟಿವಿ ಚಾನೆಲ್ ಉದ್ಘಾಟಿಸಿ ಅವರು ಮಾತನಾಡಿದರು.

ಮಂಜುನಾಥ್ ಹಾಗೂ ಬಾಲಾಜಿಯವರ ನೇತೃತ್ವದಲ್ಲಿ ಹೊಸದಾಗಿ ಪ್ರಾರಂಭವಾದ ಸಮಯ ಟಿವಿ ಡಿಜಿಟಲ್ ಚಾನೆಲ್ ಉದ್ಘಾಟನೆ ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಅದ್ದೂರಿಯಾಗಿ ನೆರವೇರಿತು.  ಸಂಸದರಾದ ಲೆಹರ್ ಸಿಂಗ್, ನಟಿ ಮೇಘನಾ ರಾಜ್, ಚಲನಚಿತ್ರ ವಾಣಿಹ್ಯ ಮಂಡಳಿ ಅಧ್ಯಕ್ಷ ಎಂ.ಎನ್.ಸುರೇಶ್, ಡಿಎಸ್ ಮ್ಯಾಕ್ಸ್ ಸಂಸ್ಥೆಯ ಮ್ಮುಖ್ಯಸ್ಥರಾದ ದಯಾನಂದ್, ಲಹರಿ ಸಂಸ್ಥೆಯ ಲಹರಿ ವೇಲು ಸೇರಿದಂತೆ ಅನೇಕ ಗಣ್ಯ ಮಾನ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಮಯ ಟಿವಿ ಇದೊಂದು ಹೊಸ ಆರಂಭ, ಹೊಸ ಆರಂಭ ಯಾವತ್ತೂ ನಿರೀಕ್ಷೆ ಹುಟ್ಟಿಸುತ್ತದೆ ಎಂದ ರಮೇಶ್ ಹೊಸ ನಿರ್ದೆಶಕ, ನಟ ಬಂದಾಗ ಹೇಗೆ ನಿರೀಕ್ಷೆ ಹುಟ್ಟುತ್ತದೆಯೋ ಅದೇ ರೀತಿಯಲ್ಲಿ "ಸಮಯ ನ್ಯೂಸ್" ಸಹ ನಿರೀಕ್ಷೆ ಹುಟ್ಟು ಹಾಕಿದೆ ಎಂದರು. 

ನನ್ನ ಟೆಲಿವಿಷನ್ ಜರ್ನಿ ಮೊದಲಾಗಿದ್ದೇ ಬಾಲಾಜಿಯವರಿಂದ ಎಂದ ರಮೇಶ್ ತಮ್ಮ ಪ್ರಾರಂಭದ ದಿನಗಳನ್ನು ಮೆಲುಕು ಹಾಕಿದರು.  ವೀಕೆಂಡ್ ವಿತ್ ರಮೇಶ್ ಗೆ ಮುನ್ನ ರಾಜ ರಾಣಿ ರಮೇಶ್ ಮಾಡಿದ್ದೆ, ಅದಕ್ಕೆ ಮುನ್ನ ಪ್ರೀತಿಯಿಂದ ರಮೇಶ್ ಅನ್ನುವ ಶೋ ಬಂದಿತ್ತು. ಅದು ಕಸ್ತೂರಿ ಚಾನೆಲ್ ನಲ್ಲಿ ಪ್ರಸಾರವಾಗಿದ್ದು ಅದಕ್ಕೆ ಕಾರಣ ಬಾಲಾಜಿಯವರಾಗಿದ್ದರು.  ನಾನು ವೇದಿಕೆಯಲ್ಲಿ ಮಾತನಾಡುವುದನ್ನು ಕಂಡು ಬಾಲಾಜಿಯವರು ಕಸ್ತೂರಿಗೆ ಕರೆದು ಒಂದು ಶೋ ಮಾಡಬೇಕೆಂದು ಒತ್ತಾಯಿಸಿ ನನ್ನಿಂದ ಶೋ ಮಾಡಿಸಿದರು. ಅದುವೇ ಪ್ರೀತಿಯಿಂದ ರಮೇಶ್. ನನ್ನ ಕಿರುತೆರೆ ಪ್ರಯಾಣ ಅಲ್ಲಿಂದ ಮೊದಲಾಗಿತ್ತು ಎಂದರು.

ನಾವು ಯೋಚಿಸುವ ರೀತಿ ಹಾಗೂ ನಾವು ಸಮಯವನ್ನು ಹೇಗೆ ಉಪಯೋಗಿಸಿಕೊಳ್ಳುತ್ತೇವೆ ಎನ್ನುವ ವಿಷಯ - ಈ ಎರಡು ವಿಷಯಗಳು ಜೀವನದಲ್ಲಿ ಬಹಳ ಮುಖ್ಯವಾಗಿದೆ. ನಿಮ್ಮ ಬದುಕಿನಲ್ಲಿ ಎಲ್ಲವೂ ಅಂತಿಮವಾಗಿ ಬರುವುದು ಈ ಎರಡಕ್ಕೆ.. ನಾವೇನು ಮಾಡುತ್ತಿದ್ದೇವೆ, ಸಮಯವನ್ನು ಹೇಗೆ ಉಪಯೋಗಿಸುತ್ತಿದ್ದೇವೆ?  ಸಮಯ ಟಿವಿಯವರು ಸಮಯ ಎಂದು ತಮ್ಮ ಹೆಸರಿನಲ್ಲೇ ಇರಿಸಿಕೊಂಡಿದ್ದಾರೆ. ಅವರು ಹೇಳಿದ್ದಾರೆ "ಪ್ರತಿಕ್ಷಣ ಹೊಸತನ" ಇದಕ್ಕಿಂತ ಈ ಕ್ಷಣಕ್ಕೆ ಹೊಸತನ್ನು ಹೇಳಲು ಸಾಧ್ಯವಿಲ್ಲ ಎನ್ನುವುದು ನನ್ನ ಅನಿಸಿಕೆ ಎಂದಿರುವ ನಟ ಮಾಧ್ಯಮ ಲೋಕದಲ್ಲಿ ಮೂರು ಅಂಶಗಳು ಅತ್ಯಂತ ಮುಖ್ಯ ಮೊದಲನೆಯದು - ಎಲ್ಲದಕ್ಕಿಂತ ದಿ ಬೆಸ್ಟ್ ಆಗಿರುವುದು ಎರಡನೆಯದು ನಂಬಿಕೆಗೆ ಅರ್ಹವಾಗಿರುವುದು ಹಾಗೆ ಮೂರನೆಯದು ನಮಗೆ ಸಂಬಂಧಪಟ್ಟ ವಿಚಾರದಲ್ಲಿ ತುಂಬಾ ಕಾಳಜಿ ವಹಿಸುವುದು ಎಂದು ಸೂಚಿಸಿದರು.

ನಟಿ ಮೇಘನಾ ರಾಜ್ ಮಾತನಾಡಿ "ಸಮಯ ನ್ಯೂಸ್" ಚಾನೆಲ್ ಮುಂದೆ ಚಿರಂಜೀವಿಯಾಗಿ ಬೆಳೆಯಲಿ ಎಂದು ಹಾರೈಸಿದರು


No comments:

Post a Comment