Sunday, October 30, 2016

ನಾಟ್ಯವನ್ನು “ನೃತ್ಯ ಯೋಗ” ವನ್ನಾಗಿಸಿದ ವಿದುಷಿ ಆಶಾ ಆಚಾರ್ಯ ಅಡಿಗ

ಯಾವುದೇ ಶ್ರೇಷ್ಠವಾದ ಕಲಾ ಪ್ರಕಾರಗಳು ಮಾನವನ ದೈಹಿಕ, ಭಾವನಾತ್ಮಕ, ಬೌದ್ದಿಕ ಹಾಗೂ ಆದ್ಯಾತ್ಮಿಕ ದೃಷ್ಟಿಕೋನಗಳನ್ನು ಸಂಯೋಜಿಸಲು ತಕ್ಕುದಾದ ಶಕ್ತಿ ಸಾಮರ್ಥ್ಯವನ್ನು ನೀಡುತ್ತವೆ.. ಹಾಗೆಯೇ ಕಲೆ, ಕಲಾ ಪ್ರಕಾರವೆನ್ನುವುದು ಕೇವಲ ಹವ್ಯಾಸ, ಪ್ರಸಿದ್ದಿಗಾಗಿ ಮಾತ್ರವಲ್ಲದೆ ಜೀವನದ ಉನ್ನತಿಗೂ ಮಾರ್ಗವಾಗಬಲ್ಲದು.“ - ಇದು ಪ್ರಖ್ಯಾತ ಭರತನಾಟ್ಯ ಕಲಾವಿದರಾದ ನಾಟ್ಯವನ್ನು "ನೃತ್ಯ ಯೋಗ"ವನ್ನಾಗಿಸಿದ ವಿದುಷಿ ಆಶಾ ಆಚಾರ್ಯ ಅಡಿಗ ಅವರ ಮಾತುಗಳು. ಮೂಲತಹ ಕರ್ನಾಟಕದ ದಾವಣಗೆರೆಯವರಾದ ಆಶಾ ಇದೀಗ ಅಮೆರಿಕಾದ ಷಿಕಾಗೋ ನಲ್ಲಿ ಆಚಾರ್ಯ ಪರ್ಫಾರ್ಮೆನ್ಸ್ ಆರ್ಟ್ಸ್ ಅಕಾಡಮಿಯ ಸಂಸ್ಥೆಯ ಮುಖೇನ ಅಲ್ಲಿನ ಯುವಜನತೆಗೆ ಭಾರತೀಯ ಸಂಸ್ಕೃತಿ, ಪರಂಪರೆಯ ಅರಿವು ಮೂಡಿಸುತ್ತಿದ್ದಾರೆ. ನೃತ್ಯವನ್ನು ತಮ್ಮ ಬದುಕಿನ ಒಂದು ಅಂಗವೆಂದು ಪರಿಭಾವಿಸಿರುವ ಆಶಾ ಅವರ ಕುರಿತ ಕಿರುಪರಿಚಯ ಇಲ್ಲಿದೆ.

ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಕಲಾ ಪ್ರಪಂಚದಲ್ಲಿ ಸಕ್ರಿಯರಾಗಿರುವ ಆಶಾವಿದ್ಯಾರ್ಥಿಯಾಗಿಯೂ, ಅಭಿನೇತ್ರಿಯಾಗಿಯೂ ಮಾತ್ರವಲ್ಲದೆುತ್ತಮ ತರಬೇತುದಾರರಾಗಿಯೂ ಹೆಸರಾದವರು.






ಶ್ರೀಮತಿ ಅಡಿಗ ಹಾಗೂ ದಿ.ಚಂದ್ರಶೇಖರ ಅಡಿಗ ಅವರ ಮಗಳಾದ ಆಶಾ ಅತ್ಯಂತ ಕಿರಿಯ ವಯಸ್ಸಿನಿಂದಲೂ ನೃತ್ಯ ಕುರಿತ ಆಸಕ್ತಿ ಒಡಮೂಡಿಸಿಕೊಂಡವರು. ಇವರ ತಂದೆ ತಾಯಿಗಳು ಸಹ ಸಮಾಜ ಸೇವಾ ಕ್ಷೇತ್ರದಲ್ಲಿ ಸಾಕಷ್ಟು ಹೆಸರಾಗಿದ್ದು ನಾನಾ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಹೀಗಾಗಿ ಅವರೆಂದಿಗೂ ಮಗಳ ಕಲಾಸಕ್ತಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಸಲಿಲ್ಲ. ಬದಲಾಗಿ  ಹುರಿದುಂಬಿಸಿದರು.


ಆಶಾ ತಮ್ಮ ಬಾಲ್ಯದಲ್ಲಿಯೇ ಮನೆಯ ಟಿವಿ, ರೇಡಿಯೋಗಳಲ್ಲಿ ಪ್ರಸಾರಗೊಳ್ಳುತ್ತಿದ್ದ ಸಂಗೀತಕ್ಕೆ ಹೆಜ್ಜೆ ಹಾಕುತ್ತಿದ್ದರು. ಅವರ ಹಿರಿಯ ಸೋದರಿಯಾದ ಉಷಾ ಅವರು ಸಹ ಭರತನಾಟ್ಯ ಪ್ರವೀಣರಾಗಿದ್ದು ಅವರು ನೃತ್ಯಾಭ್ಯಾಸಕ್ಕೆ ತೊಡಗಿದ್ದ ವೇಳೆ ಆಶಾ ಅವರಿಗೂ ಸಹ ನೃತ್ಯ ಕಲಿಯುವ ಬಯಕೆ ಮೊಳೆಯಿತು. ಅದಿನ್ನೂ ಮೂರು ವರ್ಷ ವಯಸ್ಸಿನವರಾಗಿದ್ದ್ವ ಆಶಾ ತನ್ನ ಅಕ್ಕನೊಂದಿಗೆ ನೃತ್ಯ ತರಬೇತಿಗೆ ಸೇರಿಕೊಂಡರು.

ವಿದ್ವಾನ್ ರಾಜಗೋಪಾಲ ಭಾಗವತ್ ಹಾಗೂ ವಿದುಷಿ ಪೂರ್ಣಿಮಾ ಭಾಗವತ್ ಅವರಿಂದ ವಿದ್ಯುಕ್ತವಾಗಿ ಭರತನಾಟ್ಯ ತರಬೇತಿಯನ್ನು ಹೊಂದಿದ ಆಶಾ "ಕಲಾಕ್ಷೇತ್ರ" ಶೈಲಿಯಲ್ಲಿ ವಿಶೇಷ ನೈಪುಣ್ಯ ಸಾಧಿಸಿದ್ದಾರೆ. ಭಾಗವತ್ ದಂಪತಿಗಳು ವಿದ್ವಾನ್ ಜನಾರ್ಧನ ಅವರ ಶಿಷ್ಯರಾಗಿದ್ದು ವಿದ್ವಾನ್ ಜನಾರ್ಧನರುಪ್ರೊ. ಎಂ.ಆರ್. ಕೃಷ್ಣ್ಮಮೂರ್ತಿಗಳ ಶಿಷ್ಯರಾಗಿದ್ದರು. ಎಂ.ಆರ್. ಕೃಷ್ಣ್ಮೂರ್ತಿಗಳು ಕಲಾಕ್ಷೇತ್ರದ ಮಾರು ನೃತ್ಯ ಕಲಾವಿದೆ ರುಕ್ಮಿಣಿ ದೇವಿ ಅರುಂಡೇಲ್ ಅವರಲ್ಲಿ ಶಾಸ್ತ್ರೀಯ ನೃತ್ಯಾಭ್ಯಾಸ ನಡೆಸಿದ್ದರು. ರೀತಿಯಲ್ಲಿ ನೋಡಿದ್ದಾದರೆ ಆಶಾ ಅವರು ರುಕ್ಮಿಣಿ ದೇವಿ ಅವರ ಶಿಷ್ಯ ಪರಂಪರೆಗೆ ಸೇರಿದವರಾಗಿದ್ದಾರೆ. ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ವಿದ್ವತ್ ಪದವಿಯನ್ನು ಪೂರ್ಣಗೊಳಿಸಿದ ಆಶಾ ಕರ್ನಾಟಕ ಸರ್ಕಾರ ನಡೆಸುವ ವಿದ್ವತ್ ಪರೀಕ್ಷೆಯಲ್ಲಿ ಮೂರನೇ ರ್ಯಾಂಕ್ ಪಡೆದಿದ್ದಾರೆ.


ಎಂಬಿಎ ವಿದ್ಯಾಭ್ಯಾಸ ಮಾಡಿದ್ದ ಆಶಾ ಕೆಲಕಾಲ ಮ್ಯಾನೇಜ್ ಮೆಂಟ್ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ಆದರೆ ನೃತ್ಯಕ್ಷೇತ್ರದತ್ತ ಅವರಿಗಿದ್ದ ಬಲವಾದ ಆಸಕ್ತಿಯಿಂದಾಗಿ ಕಲಾಕ್ಷೇತ್ರಕ್ಕೆ ಮರಳಿ ಅದರಲ್ಲಿಯೇ ಸಂಪೂರ್ಣವಾಗಿ ತೊಡಗಿಸಿಕೊಂಡರು. ಮುಂದೆ ಸಂದ್ಯಾ, ಕಿರಣ್ ಸುಬ್ರಹ್ಮಣ್ಯನ್ ಹಾಗೂ ಚೆನ್ನೈ ಕಲಾಕ್ಷೇತ್ರದ ಪ್ರೊ. ಸೂರ್ಯನಾರಾಯಣಮೂರ್ತಿ ಅವರ ಮಾರ್ಗದರ್ಶನದಲ್ಲಿ ತಮ್ಮ ಭರತನಾಟ್ಯ ಅಭ್ಯಾಸವನ್ನು ಮುಂದುವರಿಸಿದ್ದ ಆಶಾ ಮುಂದಿನ ದಿನಗಳಲ್ಲಿ ಭಾರ್ತೀಯ ಶಾಸ್ತ್ರೀಯ ನೃತ್ಯ ಸೇರಿದಂತೆ ಜನಪದ ನೃತ್ಯ ಶೈಲಿಗಳಲ್ಲಿಯೂ ಪರಿಣತಿ ಸಾಧಿಸಿದರು.

ದೇಶ-ವಿದೇಶಗಳಲ್ಲಿ ನೃತ್ಯ ಪ್ರದರ್ಶನ, ತರಬೇತಿ
ದಾವಣಗೆರೆಯ ವನಿತಾ ಸಮಾಜ ನಡೆಸುತ್ತಿದ್ದ ನಾಟಕ ಮಂಡಳಿ "ಭೂಮಿಕಾ" ಸಂಘದ ಮೂಲಕ ಆಶಾ ಆಚಾರ್ಯ ಅವರ ರಂಗ ಪ್ರವೇಶವಾಯಿತು. ಅದೇ ಸಮಯದಲ್ಲಿ "ನೀನಾಸಂ" ಮನುಲಾ ಬದಾಮಿ ಅವರಿಂದ ಹೆಚ್ಚಿನ ತರಬೇತಿ ಹೊಂದಿದ್ದರು.
ಆಶಾ ಅವರು ಕರ್ನಾಟಕದ ನಾನಾ ಭಾಗಗಳಲ್ಲಿ ಅಷ್ಟೇ ಅಲ್ಲದೆ ದೆಹಲಿಯ ರಾಜ ಭವನ, ತಿರುಪತಿ, ಆಗ್ರಾ, ಜೆಮ್ ಶೇಡ್ ಪುರ್, ಚೆನ್ನೈ, ಫ್ರಾನ್ಸ್ ಪ್ಯಾರೀಶ್, ಅಮೆರಿಕದ ನ್ಯೂ ಯಾರ್ಕ್, ನ್ಯೂ ಜರ್ಸಿ, ವಾಷಿಂಗ್ ಟನ್ ಮುಂತಾದ ಕಡೆಗಳಲ್ಲಿ ಏಕವ್ಯಕ್ತಿ ನೃತ್ಯ ಪ್ರದರ್ಶನ ಸೇರಿದಂತೆ ಸಮೂಹ ನೃತ್ಯ, ನೃತ್ಯ ರೂಪಕಗಳನ್ನು ಪ್ರದರ್ಶಿಸಿದ್ದಾರೆ.


ಇನ್ನು ತಮ್ಮ ಹಿರಿಯ ಸಹೋದರಿ ಉಷಾ ಅವರೊಂದಿಗೆ ಸೇರಿ ನಾನಾ ಕಡೆಗಳಲ್ಲಿ ನೀಡಿದ್ದ ನೃತ್ಯ ಪ್ರದರ್ಶನಗಳಿಂದ ಇವರನ್ನು ಜನರು "ಅಡಿಗ ಸೋದರಿಯರು" ಎಂದು ಸಾಮಾನ್ಯವಾಗಿ ಗುರುತಿಸುತ್ತಿದ್ದರು.

ಆಶಾ ಅವರು ತಾವು ಒಂಭತ್ತು ವರ್ಷದವರಿರುವಾಗ ತಿರುಪತಿ ಡ್ಯಾನ್ಸ್ ಅಕಾಡಮಿಯಿಂದ ನಡೆಯುತ್ತಿದ್ದ ನೃತ್ಯ ಕಾರ್ಯಾಗಾರಕ್ಕೆ ಆಯ್ಕೆಗೊಂಡಿದ್ದರು. ಮುಂದೆ ಅದೇ ಸಂಸ್ಥೆಯವರಿಂದ 1992ರಲ್ಲಿ ಫ್ರಾನ್ಸ್ ಪ್ಯಾರೀಸ್ ನಲ್ಲಿ ನೃತ್ಯ ರೂಪಕ ನಡೆಸುವಂತೆ ಆಹ್ವಾನ ಸಿಕ್ಕಿತ್ತು. ಇದರಿಂದ ಆಶಾ ಅವರ ನಾಟ್ಯದ ಕುರಿತಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರಚಾರ ದೊರಕಿತ್ತು. ಮುಂದೆ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಳ್ಳಲು ಇದರಿಂದ ಸಾಕ್ಷ್ಟು ನೆರವಾಯಿತು. ನಂತರದಲ್ಲಿ ಆಶಾ ಅವರು ಭಾರತದ ನಾನಾ ಪ್ರದೇಶಗಳಲ್ಲಿ ಮಾತ್ರವಲ್ಲ ಅಮೆರಿಕಾದ ನ್ಯೂ ಜರ್ಸಿ ಸೇರಿದಂತೆ ನಾನಾ ರಾಜ್ಯಗಳಲ್ಲಿ ತಾವು ನೃತ್ಯ ಪ್ರರ್ಶನ, ನಾಟ್ಯ ಶಾಸ್ತ್ರ ಕುರಿತಂತೆ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಿ ಯಶಸ್ವಿಯಾಗಿದ್ದಾರೆ.

ಇನ್ನು ಆಶಾ ಕೇವಲ ಭರತನಾಟ್ಯ ಪ್ರವೀಣೆ ಮಾತ್ರವಲ್ಲಿ ಇದರೊಡನೆಯೇ ಕೂಚುಪುಡಿ, ಕಥಕ್, ಯಕ್ಷಗಾನ, ಒಡಿಸ್ಸಿ ನೃತ್ಯ ಶೈಲಿಯಲ್ಲಿಯೂ ಪರೈಣತಿ ಸಾಧಿಸಿದ್ದಾರೆ. ತಿರುಪತಿಯ ಡಾ. ರಾಜು ಅವರಿಂದ ಕೂಚುಪುಡಿ ನೃತ್ಯ ಅಭ್ಯಸಿಸಿದ ಇವರು ರಾಮಕೃಷ್ಣ ಭಟ್ ಅವರಿಂದ ಕಥಕ್, ಹೆಮ್ಮಾಡಿ ರಾಮಚಂದ್ರ ಭಟ್ಟರಿಂದ ಯಕ್ಷಗಾನ ನೃತ್ಯ, ಅಮೆರಿಕಾದ ನ್ಯೂ ಜರ್ಸಿಯವರಾದ ಶ್ರೀಮತಿ ರಿಮ್ಲಿ ರಾಯ್ ಅವರಿಂದ ಒಡಿಸ್ಸಿ ನೃತ್ಯ ಅಭ್ಯಾಸ ನಡೆಸಿದ್ದರು. ಅಲ್ಲದೆ ದಾಂಡಿಯಾ ರಾಸ್, ಗರ್ಭಾ ನೃತ್ಯ, ಕಂಸಾಳೆ, ಕೋಲಾಟ, ಝುಮರ್ ನಾಚ್, ಲಾವಣಿ ಇದೇ ಮೊದಲಾದ ಜನಪದೀಯ ನೃತ್ಯ ಪ್ರಕಾರಗಳನ್ನೂ ಸಹ ಆಶಾ ಅವರು ಸ್ವತಹ ಅಭ್ಯಾಸ ಮಾಡಿ ಶೈಲಿಯ ನೃತ್ಯಗಳನ್ನೂ ಸಹ ಪ್ರದರ್ಶನ ನೀಡಿದ್ದಾರೆ.



ಆಶಾ ವಿವಾಹದ ನಂತರ ತಮ್ಮ ಪತಿ ಶ್ರೀನಿವಾಸ ಆಚಾರ್ಯ ಅವರೊಂದಿಗೆ ಅಮೆರಿಕಾದಲ್ಲಿ ನೆಲೆಲ್ಸಿದರು. ಅಮೆರಿಕಾದ ಶಿಕಾಗೋನಲ್ಲಿ ತಮ್ಮದೇ ಆಚಾರ್ಯ ಪರ್ಫಾರ್ಮೆನ್ಸ್ ಆರ್ಟ್ಸ್ ಅಕಾಡಮಿಯನ್ನು ಸ್ಥಾಪಿಸಿ ಅದರ ಮೂಲಕ ಭಾರ್ತೀಯ ಸಂಸ್ಕೃತೈ, ಪರಂಪರೆಯನ್ನು ಪರಿಚಯಿಸುತ್ತಿದ್ದಾರೆ. ಪಶ್ಚಿಮ ರಾಷ್ಟ್ರಗಳಲ್ಲಿಯೂ ನಮ್ಮ ದೇಶದ ವೈಭವದ ಪರಂಪರೆಯನ್ನು ಪಸರಿಸುವ ಮೂಲಕ ಭಾರತ ದೇಶದ ಸಾಂಸ್ಕೃತಿಕ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿದ್ದಾರೆ.

ಇನ್ನು ಇವರ ಪತಿ ಶ್ರೀನಿವಾಸ ಆಚಾರ್ಯ ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದರೂ ತಮ್ಮ ಪತ್ನಿಯ ಕಲಾಭಿಮಾನದಿಂದ ಸ್ಪೂರ್ತಿಗೊಂಡು ಅವರಿಂದಲೇ ನೃತ್ಯದ ಮಟ್ಟುಗಳನ್ನು ಕಲಿತದ್ದಲ್ಲದೆಿದೀಗ ಆಶಾ ನೀಡುವ ಅನೇಕ ಕಾರ್ಯಕ್ರಮಗಳಲ್ಲಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ!

ಕರ್ನಾಟಕ ಸಂಗೀತದಲ್ಲಿ ಸಾಧನೆ
ಆಶಾ ಆಚಾರ್ಯ ಅವರು ತಮ್ಮ ನೃತ್ಯ ಗುರುಗಳಾದ ವಿದ್ವಾನ್ ರಾಜಗೋಪಾಲ ಭಾಗವತ್ ಅವರಿಂದ ಕರ್ನಾಟಕ ಸಂಗೀತವನ್ನೂ ಸಹ ಅಭ್ಯಸಿಸಿದ್ದರು. ಹಲವು ವರ್ಷಗಳ ಕಾಲ ಇನ್ನೂ ಬೇರೆ ಬೇರೆ ಗುರುಗಳಲ್ಲಿ ಸಂಗೀತಾಭ್ಯಾಸ ನಡೆಸಿದ್ದ ಆಶಾ ಕರ್ನಾಟಕ ಸರ್ಕಾರ ನಡಿಸಿದ್ದ ಸಂಗೀತ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು. ಇವರು ದೇಶ ವಿದೇಶಗಳಲ್ಲಿ ಸಾಕಷ್ಟು ಸಂಖ್ಯೆಯೆ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುವುದಲ್ಲದೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸಿದ್ದಾರೆ.

ಕೊರಿಯೋಗ್ರಫಿ ಮತ್ತು ನಿರ್ದೇಶನ
ಆಶಾ ಆಚಾರ್ಯ ತಾವು ಹಲವಾರು ಭರತನಾಟ್ಯ, ಜನಪದ ನೃತ್ಯಗಳಗೆ ಕೊರಿಯೋಗ್ರಫಿ ಮಾಡಿದ್ದಾರೆ. ಇನ್ನು ಹೊಸ ಹೊಸ ನೃತ್ಯ ರೂಪಕಗಳನ್ನು ನಿರ್ಮಿಸಿ ನಿರ್ದೇಶಿಸಿರುವ ಇವರ "ಶಿವ ಲಲಾಟ ತಾಂಡವ", "ಕನಕದಾಸ-ಉಡುಪಿ ಕೃಷ್ಣ", "ಶ್ರೀ ಕೃಷ್ಣ ಬಾಲಲೀಲೆ", "ಶಿವ-ಶಕ್ತಿ", "ಪಂಚಭೂತಂ", "ಕರ್ನಾಟಕ ನೃತ್ಯ ವೈಭವ", "ಸ್ಥಿತಿ ಸ್ವರೂಪ", "ವಚನ ವೈಭವ" ಇದೇ ಮೊದಲಾದವು ಕೆಲವು ಜನಪ್ರಿಯ ನೃತ್ಯ ಸಂಯೋಜನೆಗಳಾಗಿವೆ.

ಪ್ರಶಸ್ತಿ ಗೌರವಗಳು
ಆಶಾ ಆಚಾರ್ಯ ಅವರೊಬ್ಬ ಅಮೋಘ ಪ್ರತಿಭೇವಂತೆಯಾಗಿದ್ದಾರೆ. ಅವರ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸಾಕಷ್ಟು ಸಂಖ್ಯೆಯ ಪ್ರಶಸ್ತಿಗಳು, ಗೌರವ ಪುರಸ್ಕಾರಗಳು ಸಂದಿವೆ. ಅವಉಗಳಲ್ಲಿ ಪ್ರಮುಖವಾದದ್ದನ್ನು ಕೆಳಗೆ ನೀಡಲಾಗಿದೆ.-
  • ·   ನೂಪುರ" ನೃತ್ಯ ಮಹೋತ್ಸವ ಕಾರ್ಯಕ್ರಮದಲ್ಲಿ ತಮ್ಮ ಗುರುಗಳಾದ ವಿದ್ವಾನ್ ರಾಜಗೋಪಾಲ ಭಾಗವತ್ ಅವರಿಂದ "ಶಾರದಾ ಪುರಸ್ಕಾರ"
  • ·         ಏರ್ ಇಂಡಿಯಾದ ರ್ಯಾಂಕ್ ಅವಾರ್ಡ್ 2006
  • ·      ಎಲ್. ಜಯಣ್ಣ ಅವರ ಸಂಪಾದಕತ್ವದಲ್ಲಿ ಬರುತ್ತಿದ್ದ "ಚಂಪಿಕಾ ಪತ್ರಿಕೆಯವರು ನೀಡಿದ್ದ "ಕಲಾ ಐಸಿರಿ ಪುರಸ್ಕಾರ 2006"
  • ·         ಜೆಸಿ ಕ್ಲಬ್ ವತಿಯಿಂದ ಔಟ್ ಸ್ಟಾಂಡಿಂಗ್ ಯಂಗ್ ಪರ್ಸನ್ ಅವಾರ್ಡ್
  • ·         ದಾವಣಗೆರೆಯ ಎವಿಕೆ ಕಾಲೇಜಿನವರು ನೀಡಿದ್ದ ಟ್ಯಾಲೆಂಟೆಡ್ ಸ್ಟೂಡೆಂಟ್ ಅವಾರ್ಡ್
  • ·         1999ರಲ್ಲಿ ನೀಡಿದ್ದ ಅತ್ಯದ್ಭುತ ನೃತ್ಯ ಪ್ರದರ್ಶನಕ್ಕೆ ಹರಿಯಾಣ ರಾಜ್ಯ ಸಕಾಋದ ಕಾರ್ಯದರ್ಶಿಗಳಾದ ಕೆ.ಸಿ. ಶರ್ಮಾ ಅವರಿಂದ ಗೌರವ.
  • ·         1999ರಲ್ಲಿ ಆಗ್ರಾ ದಲ್ಲಿ ನಡೆದ ರಾಷ್ಟ್ರ ಮಟ್ಟದ ಸಂಗೀತ ಹಾಗೂ ನೃತ್ಯ ಸ್ಪರ್ಧೆಗಳಲ್ಲಿ ಪ್ರಟಮ ಸ್ಥಾನ.
  • ·         2001ರಲ್ಲಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಗೀತ ನೃತ್ಯ ರೂಪಕಗಳನ್ನು ಪ್ರದರ್ಶನ ನೀಡಿರುವುದಷ್ಟೇ ಅಲ್ಲದೆ ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿಕೊಟ್ಟಿದ್ದಾರೆ.

ಇದಲ್ಲದೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ನಡೆದ ಹಲವಾರು ನೃತ್ಯ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಬಹುಮಾನಗಳನ್ನು ಪಡೆದಿದ್ದಾರೆ.

ಆಶಾ ಅವರ ಆಶಾ ನುಡಿಗಳು
ನಾಟ್ಯವೆನ್ನುವುದು ಕೇವಲ ಕಲೆ, ಅದು ಮನರಂಜನೆಗಾಗಿ ಮಾತ್ರವೆನ್ನುವುದು ತಪ್ಪು ಕಲ್ಪನೆ. ನಾಟ್ಯ ಮನಉಷ್ಯನ ಮಾನಸಿಕ ಸ್ಥಿತಿಯನ್ನು ಉನ್ನತಿಯತ್ತ ಕೊಂಡೊಯ್ಯಬಲ್ಲದು. ನೃತ್ಯ ಅಥವಾ ನಾಟ್ಯವು "ನೃತ್ಯ ಯೋಗ" ಎನಿಸಿಕೊಂಡಿದೆ. ಇದು ನಿಮಗೆ ಒಳ್ಳೆಯ ಆರೋಗ್ಯವನ್ನು ನೀಡಬಲ್ಲದು, ಮಾನಸಿಕ ಶಾಂತಿಯನ್ನು ತರಬಲ್ಲದು.

ಹೀಗಾಗಿ ಯಾರು ನೃತ್ಯವನ್ನು ಕಲಿಯಬಯಸಿದರೆ ಅಂತಹವರು ಅದನ್ನು ಕೇವಲ ಕಾಲಾಹರಣಕ್ಕಾಗಿ ಕಲಿಯದೆ ಅದನ್ನು ತಮ್ಮ ಆತ್ಮ ಸಂಗಾತಿ ಎಂದು ಪರಿಭಾವಿಸಿರಿ. ನಾನು ಶಾಲಾ ದಿನಗಳಲ್ಲಿದ್ದಾಗ ನನಗಿದ್ದ ಸ್ನೇಹಿತರ ಬಳಗವೇ ಬೇರೆ, ಕಾಲೇಜು ಸೇರಿದಾಗಿನ ವಾತಾವರಣವೇ ಬೇರೆ. ಇನ್ನು ಮದುವೆಯಾದ ಬಳಿಕ ನಾನು ಅಮೆರಿಕಾಗೆ ಬಂದು ನೆಲೆಸಿದ್ದು ಇಲ್ಲಿ ಭಾರತಕ್ಕಿಂತಲೂ ಸಂಪೂರ್ಣವಾಗಿ ಭಿನ್ನ ಸಂಸ್ಕೃತಿಯ ದೇಶವನ್ನು ನೋಡಿದೆ.ಆದರೆ ಅಂದಿನಿಂದ ಇಂದಿನವರೆಗೂ ನನ್ನಲ್ಲಿರುವ ಕಲಾಭಿರುಚಿ, ನೃತ್ಯ ಪ್ರತಿಭೆಯು ನನಗೆ ಅದ್ಭುತ ಶಕ್ತಿಯನ್ನು ನೀಡಿದೆ. ಹೀಗಾಗಿ ನಾನು ನೃತ್ಯವನ್ನು ನನ್ನ ಆತ್ಮ ಸಂಗಾತಿ ಎಂದು ಕರೆದಿದ್ದೇನೆ. ಹೇಗೆ ಧರ್ಮವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎನ್ನುವ ನಾಣ್ನುಡಿ ಇದೆಯೋ ಹಾಗೆಯೇ ಕಲೆಯನ್ನು ನೀವು ಅಭಿವ್ಯಕ್ತಿಗೊಳಿಸಿದರೆ ಅದು ನಿಮ್ಮನ್ನು ಅಭಿವ್ಯಕ್ತಿಗೊಳ್ಳುವುದಕ್ಕೆ ದಾರಿ ಮಾಡಿಕೊಡುತ್ತದೆ.

ಮುಗಿಸುವ ಮುನ್ನ...

ಭಾರತೀಯ ನೃತ್ಯ ಶೈಲಿಯಲ್ಲಿ ನಾನಾ ಪ್ರಯೋಗಗಳನ್ನು ನಡೆಸಿಕೊಂಡು ಬರುತ್ತಿರುವ, ಅಮೆರಿಕಾದಲ್ಲಿದ್ದೂ ಭಾರತೀಯ ಪರಂಪರೆಯನ್ನು ಬಿಡದೆ ಪೊಷಿಸುತ್ತಿರುವ ಆಚಾರ್ಯ ಪರ್ಫಾರ್ಮಿಂಗ್ ಆರ್ಟ್ಸ್ ಅಕಾಡಮಿಯ ರೂವಾರಿ ನಾಟ್ಯವನ್ನು "ನೃತ್ಯ ಯೋಗ"ವನ್ನಾಗಿಸಿದ ವಿದುಷಿ ಆಶಾ ಆಚಾರ್ಯ ಅಡಿಗ ಅವರ ಭವಿಷ್ಯದ ಯೋಜನೆಗಳು ಫಲಪ್ರದವಾಗಲಿ. ಅವರು ತಮ್ಮ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಿ ದೇಶಕ್ಕೆ ಕೀರ್ತಿ ಲಭಿಸುವಂತಾಗಲಿ ಎಂದು "ಗೃಹಶೋಭಾ" ಪ್ರೀತಿಯಿಂದ  ಹಾರೈಸುತ್ತದೆ.

(ಈ ನನ್ನ ಲೇಖನವು ಕನ್ನಡ   ಮಹಿಳಾ   ಮಾಸಪತ್ರಿಕೆ "ಗೃಹಶೋಭಾ" ಅಕ್ಟೋಬರ್ 2016 ರ ಸಂಚಿಕೆಯಲ್ಲಿ ಪ್ರಕಟವಾಗಿತ್ತು.)