Sunday, January 23, 2022

ಇತ್ತೀಚೆಗೆ ನಾನು ಓದಿದ ಮೂರು ಮಹತ್ವದ ಕೃತಿಗಳು

ನಿವೃತ್ತ ಡಿಜಿಪಿ  ಪ್ರಮುಖ ಲೇಖಕರಲ್ಲಿ ಒಬ್ಬರಾಗಿರುವ ಡಿವಿ ಗುರುಪ್ರಸಾದ್ ವರ "ಪ್ರತೀಕಾರ" ಪುಸ್ತಕ ನಾನು ಇತ್ತೀಚೆಗೆ ಓದಿದ ಪುಸ್ತಕಗಳ ಪೈಕಿ ಗಮನ ಸೆಳೆದ ಪುಸ್ತಕವಾಗಿದೆ. ಇಸ್ರೇಲಿನ ಗೂಢಚಾರಿ ಸಂಸ್ಥೆ ಮೊಸಾದ್ ಹಾಗೂ ಅದರ ಕಾರ್ಯಾಚರಣೆಗಳ ಕುರಿತಂತೆ ಕನ್ನಡದಲ್ಲಿ ಇಷ್ಟು ವಿಸ್ಕೃತವಾಗಿ ಬೇರಾವ ಲೇಖಕರೂ ಇದುವರೆಗೆ ಬರೆದಿಲ್ಲ ಎಂದು ನಾನು ಭಾವಿಸಿದ್ದೇನೆ. 

ತನ್ನ ಸುತ್ತಲೂ ಬದ್ದ ವೈರಿ ರಾಶ್ಃಟ್ರಗಳನ್ನು ಹೊಂದಿದ್ದರೂ ಒಂದೆ ದೇಶ ತನ್ನ ರಕ್ಷಣೆಯನ್ನು ಮಾಡಿಕೊಳ್ಳುವುದರೊಡನೆಯೇ ತನ್ನ ವಿರುದ್ಧ ನಡೆದ ಎಲ್ಲಾ ಪಿತೂರಿಗಳಿಗೂ ಯಾವ ರೀತಿಯಲ್ಲಿ ನೇರಾ ನೇರ ಪ್ರತೀಕಾರ ತೆಗೆದುಕೊಳ್ಳುತ್ತದೆ ಎನ್ನಲು ಇಸ್ರೇಲ್ ನಮ್ಮ ಮುಂದಿರುವ ಸ್ಪಷ್ಟ ಉದಾಹರಣೆ. ಇಸ್ರೇಲ್ ತಾನು ಒಂದು ಪುಟ್ಟ ದೇಶವಾಗಿದ್ದರೂ ತನ್ನ ಕೆಲಸಗಳ ಮೂಲಕ ವಿಶ್ವದ ಅಗ್ರ ದೇಶಗಳ ಸಾಲಿನಲ್ಲಿ ನಿಲ್ಲಬಲ್ಲ ಸಾಮರ್ಥ್ಯವನ್ನು ತೋರಿಸಿದೆ. ಅಲ್ಲಿನ ಗೂಢಚರ ವ್ಯವಸ್ಥೆ ಎಷ್ಟು ಬಲವಾಗಿದೆ ಎಂದರೆ ಯಾವುದೇ ರಾಷ್ಟ್ರ ಅದರ ವಿರುದ್ಧ ಪಿತೂರಿ ನಡೆಸುವ ಮುನ್ನ ಎರಡೆರಡು ಬಾರಿ ಯೋಚಿಸಬೇಕಿದೆ. 

ಗುರುಪ್ರಸಾದ್ ಅವರು ತಮ್ಮ "ಪ್ರತೀಕಾರ" ದಲ್ಲಿ ವಿಶ್ವದ ಪ್ರಸಿದ್ಧ ಗೂಢಚಾರಿ ಸಂಘಟನೆ ಮೊಸಾದ್ ಮಾಡಿದ ಆಪರೇಷನ್ ರಾತ್ ಅಪ್ ಗಾಡ್,  ಆತಂಕವಾದಿ ನಾಯಕರ ಹತ್ಯೆ, ಇರಾನ್ ಇರಾಕ್, ಸಿರಿಯಾ ಅನುಸ್ಥಾವರಗಳ ಮೇಲಿನ ದಾಳಿಗಳು, ಮ್ಯೂನಿಕ್ ಒಲಂಪಿಕ್ ನಲ್ಲಿ ನಡೆದ ಇಸ್ರೇಲಿ ಕ್ರೀಡಾಪಟುಗಳು ಮೇಲಿನ ದಾಳಿ ಆ ನಂತರ ನಡೆದ ಮೊಸಾದ್ ಕಾರ್ಯಾಚರಣೆಗಳ ಬಗೆಗೆ ವಿವರವಾಗಿ ಬರೆದಿದ್ದಾರೆ.  ಅಲ್ಲದೆ ಮೊಸಾದ್ ನ. ಗೂಡಚಾರಿ  ಎಲಿ ಕೋಹೆನ್ .ಪಿ ಎಲ್ ಓ .  / ಬಿ.ಎಸ್.ಓ ಹಾಗೂ ಪಿ.ಎಫ್.ಎಲ್.ಪಿ. ಉಗ್ರ ಸಂಘಟನೆಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

 ಇಂತಹಾ ಇಸ್ರೇಲ್ ನಿಂದ ನಾವು (ಭಾರತ ಹಾಗೂ ಭಾರತೀಯರು) ಕಲಿಬಹುದಾದ ಸಾಕಷ್ಟು ಅಂಶಗಳಿದೆ ಎನ್ನುವುದರ ಬಗ್ಗೆ ಸಹ ಲೇಖಕರು ಸೂಚಿಸಿದ್ದಾರೆ. ಉದಾಹರಣೆಗೆ ಕಂದಹಾರ್ ವಿಮಾನ ಅಪಹರಣವಾಗಿದ್ದಾಗ ಭಾರತ ಸರ್ಕಾರ ತೆಗೆದುಕೊಂಡ ನಿಲುವು ಹಾಗೂ ಇಸ್ರೇಲ್ ಗೆ ಸೇರಿದ್ದ ವಿಮಾನಗಳ ಸಾಲು ಸಾಲು ಅಪಹರಣ ನಡೆದಾಗ ಆ ರಾಷ್ಟ್ರ  ತೆಗೆದುಕೊಂಡ ತೀರ್ಮಾನಗಳು ಹೇಗೆ ಭಿನ್ನವಾಗಿದೆ ಎನ್ನುವುದನ್ನು ನಾವು ಕಲಿಯಬಹುದು. 

ಒಟ್ಟೂ ೧೩ ಅಧ್ಯಾಯಗಳಲ್ಲಿ ಇಸ್ರೇಲ್ ರಾಷ್ಟ್ರ ಹಾಗೂ ಮೊಸಾದ್ ಕುರಿತ ಕಿರುಪರಿಚಯದಿಂದ ಪ್ರಾರಂಭಿಸಿ ಮೊಸಾದ್ ಗೆ ಮುಖಭಂಗವಾಗಿದ್ದ ಎರಡು ಕಾರ್ಯಾಚರಣೆಗಳ ವರೆಗೆ ಸಾಕಷ್ಟು ಮಾಹಿತಿಗಳಿದೆ. ಅವುಗಳಲ್ಲಿ "ಅಡಾಲ್ಫ್ ಐಕ್ ಮನ್ ಮೇಲಿನ ಪ್ರತೀಕಾರ", "ಎಲಿ ಕೊಹೇನ್", "ಮ್ಯೂನಿಚ್ ಒಲಂಪಿಕ್ ಘಟನೆ". "ಆಪರೇಷನ್ ಎಂಟಬೇ" ಸೇರಿದಂತೆ ಹಲವಾರು ಪ್ರಮುಖ ಅಧ್ಯಾಯಗಳಿದ್ದು ಇವೆಲ್ಲವೂ ಒಂದು ರೀತಿಯಲ್ಲಿ ಇಸ್ರೇಲ್ ನ ಇತಿಹಾಸದ ಜತೆಜತೆಗೆ ೧೯೪೫ರ ಎರಡನೇ ವಿಶ್ವ ಯುದ್ಧದ ನಂತರದ ಜಾಗತಿಕ ಇತಿಹಾಸದ ಮೇಲೂ ಬೆಳಕು ಚೆಲ್ಲುತ್ತದೆ. ಏಕೆಂದರೆ ಗುರುಪ್ರಸಾದ್ ಅವರ ಪುಸ್ತಕದಲ್ಲಿ ೧೯೪೫ರಿಂದ ಹಿಡಿದು ೨೦೨೧ರವರೆಗೆ(ಇರಾನ್ ಅಣುಸ್ಥಾವರಗಳ ಮೇಲಿನ ಇಸ್ರೇಲ್ ದಾಳಿ) ವರೆಗೆ ಎಲ್ಲಾ ವಿವರಗಳಿದೆ..

ಇನ್ನು ಗುರುಪ್ರಸಾದ್ ಅವರು ಈ ಪುಸ್ತಕ ಬರೆಯುವ ಮುನ್ನ ತಾವು ನಡೆಸಿದ್ದ ಅಧ್ಯಯನ ಆಳ ವಿಸ್ತಾರಗಳ ಬಗ್ಗೆ ಹೇಳಲೇ ಬೇಕು. ಸ್ವತಃಅ ಅವರೇ ಇಸ್ರೇಲ್, ಪ್ಯಾಲಸ್ತೈನ್, ಜೆರುಸಲೆಂ ಸೇರಿ ನಾನಾ ಪ್ರದೇಶಗಳಲ್ಲಿ ಸುತ್ತಾಡಿ ಮಾಹಿತಿ ಸಂಗ್ರಹಿಸಿ ಬರೆದ ಪುಸ್ತಕವಾಗಿರುವುದರಿಂದ ಕನ್ನಡ ಸಾಹಿತ್ಯಕ್ಕೆ, ಪುಸ್ತಕ ಲೋಕಕ್ಕೆ ಇದೊಂದು ಅಮೂಕ್ಲ್ಯ ಕೊಡುಗೆ ಆಗಬಲ್ಲದು. ಇನ್ನು ಪುಸ್ತಕ ಓದುತ್ತಿದ್ದರೆ ಅದೊಂದು ಪತ್ತೇದಾರಿ ಕಥಾನಕದಂತೆ ಭಸವಾಗುವುದರಿಂದ ಓದುವವರಿಗೆ ಯಾವ ಕಾರಣಕ್ಕೂ ಸುದ್ದಿ ವರದಿಯ ಆಧಾರಿತ ಲೇಖನ ಓದಿದ ಅನುಭವವಾಗುವುದಿಲ್ಲ ಅಬ್ದಲಿಗೆ ಒಂದು ಉತ್ತಮ ಕಥೆ ಓದಿದ ಅನುಭವವಾಗುತ್ತದೆ. ಆ ಪ್ರಕಾರವಾಗಿ ಪುಸ್ತಕ ಸಾಮಾನ್ಯ ಓದುಗ ಸಹ ಸುಲಭವಾಗಿ ಓದಿಸಿಕೊಂಡು ಹೋಗುವ ಪುಸ್ತಕ ಎನಿಸಿದೆ.

ಇದೇ ವೇಳೆ ನಾನು ಇತ್ತೀಚೆಗೆ ಓದಿದ ಇನ್ನೆರಡು ಪುಸ್ತಕಗಳ ಬಗ್ಗೆ ಎರಡು ಮಾತುಗಳನ್ನಿಲ್ಲಿ ಹೇಳಬಯಸುತ್ತೇನೆ. ಅದರಲ್ಲಿ ಒಂದು ಸಂತೋಷ್ ಕುಮಾರ್ ಮೆಹಂದಳೆ ಅವರ "ಅಬೋಟ್ಟಾಬಾದ್" ಹಾಗೂ ಇನ್ನೊಂದು ಎಸ್. ಉಮೇಶ್ ಅವರ "ಸಿಯಾಚಿನ್" ಈ ಮೇಲಿನ ಎರಡೂ ಪುಸ್ತಕಗಳು ಕನ್ನಡದ ಮಟ್ಟಿಗೆ ಮಹತ್ವದ ಪುಸ್ತಕಗಳೆಂದು ನಾನು ಭಾವಿಸುತ್ತೇನೆ. "ಅಬೋಟ್ಟಾಬಾದ್" ನಲ್ಲಿ ಉಗ್ರ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಜೀವನ ಕೇಂದ್ರವಾಗಿರಿಸಿಕೊಂಡು ಬರೆಯಲಾದ ಕಥೆ ಇದ್ದರೂ ಜಗತ್ತಿನಲ್ಲಿ ಮುಸ್ಲಿಂ ಉಗ್ರವಾದ ಬೆಳೆದು ಬಂದ ರೀತಿಯನ್ನು ಸುವಿವರ ಆಗಿ ಕಟ್ಟಿಕೊಡಲಾಗಿದೆ. ಜತೆಗೆ ಲಾಡೆನ್ ನನ್ನು ಹಣಿಯಲು ಅಮೆರಿಕಾ ಪಡೆ ನಡೆಸಿದ ಕಾರ್ಯಾಚರ್ಣೆ ತಂತ್ರಗಳ ವಿವರಣೆಗಳು ಸಹ ಅತ್ಯಂತ ಸ್ಪಷ್ಟ ಹಾಗೂ ಸುಂದರವಾಗಿ ಮೂಡಿ ಬಂದಿದೆ. ಇನ್ನು "ಸಿಯಾಚಿನ್" ನಲ್ಲಿ ಉಮೇಶ್ ಅವರು ತಾವು ಭಾರತೀಯ ಸೈನಿಕರು ಸಿಯಾಚಿನ್ ಎಂಬ ಏನೂ ಬೆಳೆಯದ ಬರಡುಭೂಮಿಯ ರಕ್ಷಣೆಗಾಗಿ ಹೇಗೆ ಹಗಲಿರುಳು ಹೆಣಗುತ್ತಾರೆ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಅಲ್ಲದೆ ಕರುನಾಡ ಹೆಮ್ಮೆ ಹನುಮಂತಪ್ಪ ಕೊಪ್ಪದ್ ಅವರ ವೀರತ್ವದ ಬಗ್ಗೆ ಸಹ ವಿವರವಾಗಿ ಮಾಹಿತಿ ನೀಡಿದ್ದಾರೆ, ಯಾರೇ ಆದರೂ ಈ ಪುಸ್ತಕವನ್ನೊಮ್ಮೆ ಓದಿದರೆ ನಮಗೇ ಸಿಯಾಚಿನ್ ಗೆ ಹೋಗಿ ಬಂದಷ್ಟು ಅನುಅಭವವಾಗುವುದಲ್ಲದೆ ಭಾರತೀಯ ಸೈನಿಕರು, ಸೇನೆಯ ಮೇಲೆ ಅಪಾರ ಗೌರವ ಮೂಡುತ್ತದೆ. ನಾವು ಭಾರತೀಯರೆಂದು ಹೇಳಿಕೊಳ್ಲಲು ಹೆಮ್ಮೆ ಎನಿಸುತ್ತದೆ.

ಒಟ್ಟಾರೆ ಇಂತಹಾ ಪುಸ್ತಕಗಳನ್ನು ನೀಡೀದ ಮೂವರು ಲೇಖಕರಿಗೆ ನನ್ನ ಅನಂತ ನಮಸ್ಕಾರಗಳು.



Thursday, January 13, 2022

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 112

ಗಾಣಗಾಪುರ(Ganagapura)

 ಶ್ರೀ ಕ್ಷೇತ್ರ ಗಾಣಗಾಪುರ ಕರ್ನಾಟಕದ ಸುಪ್ರಸಿದ್ಡ ಧಾರ್ಮಿಕ ಕ್ಷೇತ್ರ. ಶ್ರೀ ಕ್ಷೇತ್ರ ಗಾಣಗಾಪುರವು ಕಲಬುರ್ಗಿಯಿಂದ 37.7 ಕಿ.ಮೀ ದೂರದಲ್ಲಿದೆ. ದತ್ತಸಂಪ್ರದಾಯದ ಒಂದು ಪವಿತ್ರ ತೀರ್ಥಕ್ಷೇತ್ರ ಇದಾಗಿದ್ದು ಪುಣೆ - ರಾಯಚೂರು ರೈಲುಮಾರ್ಗದಲ್ಲಿರುವ ಗಾಣಗಾಪುರ ರೈಲುನಿಲ್ದಾಣದಿಂದ  22 ಕಿಮೀ ದೂರದಲ್ಲಿ ಭೀಮಾ- ಅಮರಜ ನದಿಗಳ ಸಂಗಮವಾಗುವ ಈ ಕ್ಷೇತ್ರದಲ್ಲಿ ಹಿಂದೆ ಯಜ್ಞಕಾರ್ಯಗಳು ನೆರವೇರುತ್ತಿದ್ದು ಆ ಯಜ್ಞಬೂದಿಯನ್ನು ಒಂದು ಕಡೆ ಗುಡ್ಡೆ ಮಾಡಲಾಗಿದೆಯೆಂದು ಪ್ರತೀತಿ ಇದ್ದು ಇಂದೂ ಸಹ ಭಸ್ಮದ ರಾಶಿ ನೋಡಬಹುದು. ಭಾವುಕ ಭಕ್ತರು ಸ್ನಾನಮಾಡಿದ ಅನಂತರ ಈ ಭಸ್ಮವನ್ನು ಲೇಪಿಸಿಕೊಳ್ಳುವರು. ಸಂಗಮೇಶ್ವರ ದೇವಾಲಯದ ಎದುರು ಶ್ರೀನರಸಿಂಹ ಸರಸತ್ವಿಯವರ ತಪೋಭೂಮಿ ಇದೆ. ಸಂಗಮದಿಂದ ಊರಿಗೆ ಬರುವ ದಾರಿಯಲ್ಲಿ ಷಟ್ಕುಲತೀರ್ಥ, ನರಸಿಂಹತೀರ್ಥ, ಭಾಗೀರಥೀತೀರ್ಥ, ಪಾಪವಿನಾಶಿತೀರ್ಥ, ಕೋಟಿತೀರ್ಥ, ರುದ್ರಪಾದತೀರ್ಥ, ಚಕ್ರತೀರ್ಥ ಮತ್ತು ಮನ್ಮಥತೀರ್ಥ ಎಂಬ ಎಂಟು ತೀರ್ಥಗಳಿವೆ. ಇಲ್ಲಿನ ತೀರ್ಥಗಳಲ್ಲಿ ಸ್ನಾನಮಾಡಿದರೆ ಅನೇಕ ಫಲಗಳು ಪ್ರಾಪ್ತಿಯಾಗುತ್ತವೆ ಎಂಬ ನಂಬಿಕೆ.



ಗಾಣಗಾಪುರದ ಜಾತ್ರೆ ಸಮಾರಂಭದ ವಿಷಯವನ್ನು ಹೇಳುವುದಾದರೆ ಶ್ರೀದತ್ತಜಯಂತಿ ಮತ್ತು ಶ್ರೀನರಸಿಂಹ ಸರಸ್ವತಿಯವರ ಪುಣ್ಯತಿಥಿ - ಇವೆರಡು ವಿಶೇಷ ಮಹತ್ತ್ವದವು. ಶ್ರೀಗುರುವಿನ ಜೀವನಕಾರ್ಯ ಇಲ್ಲಿಯೇ ನಡೆದುದರಿಂದ ಈಗ ಸು. 500 ವರ್ಷಗಳಿಂದ ಇದು ಭಕ್ತರಿಗೆ ಜಾಗೃತ ಸ್ಥಾನವಾಗಿದೆ. ಗಾಣಗಾಪುರದಲ್ಲಿರುವ ನಿರ್ಗುಣ ಮಠ ಶ್ರೀ ನಸಿಂಹ ಸರಸ್ವತಿಯವರಿಗೆ ಮೀಸಲಾಗಿದೆ.ಇಲ್ಲಿಗೆ ಬರುವ ಭಕ್ತರು ವಿಶೇಷವಾಗಿ ನಿರ್ಗುಣ ಪಾದುಕೆಗಳ ಪೂಜೆಯನ್ನು ಮಾಡುತ್ತಾರೆ. ಸ್ವತಃ ಸ್ವಾಮಿಯವರು ಹೇಳಿರುವಂತೆ ಇಂದಿಗೂ ಅವರು ಮುಂಜಾನೆಯ ವೇಳೆಗೆ ಸಂಗಮದಲ್ಲಿ ಮಿಂದು ಮಧ್ಯಾಹ್ನದ ಸಮಯದಲ್ಲಿ ಭೀಕ್ಷಾಟನೆ ಮಾಡಿ ಭಕ್ತರ ಪಾದುಕಾ ಪೂಜೆಯನ್ನು ಸ್ವಕರಿಸುತ್ತಾರೆ. ಹಾಗಾಗಿ ಇಲ್ಲಿಗೆ ಬರುವ ಭಕ್ತರು ವಿಶಿಷ್ಟವಾದ ಮಧುಕರಿ ಆಚರಣೆಯನ್ನು ಪಾಲಿಸುತ್ತಾರೆ. ಮಧುಕರಿ ಎಂದರೆ ಭೀಕ್ಷೆ ಬೇಡುವುದಾಗಿದೆ. ರೂಢಿಯಲ್ಲಿರುವಂತೆ ಭಕ್ತರು ಮೊದಲು ಸಂಗಮ ಸ್ಥಳದಲ್ಲಿ ಸ್ನಾನ ಮಾಡಿ ನಂತರ ಗಾಣಗಾಪುರದಲ್ಲಿರುವ ಮನೆಗಳ ಪೈಕಿ ಕನಿಷ್ಠ ಐದು ಮನೆಗಳಲ್ಲಿ ಭೀಕ್ಷೆ ಬೇಡಿ ನಂತರ ಪಾದುಕೆಯ ಪೂಜೆಯನ್ನು ನಿರ್ಗುಣ ಮಠದಲ್ಲಿ ನೆರವೇರಿಸುತ್ತಾರೆ.ಈ ರೀತಿ ಮಾಡುವುದರಿಂದ ದತ್ತಾತ್ರೇಯರ ಕೃಪೆ ಉಂಟಾಗಿ ಭಕ್ತರ ಎಲ್ಲ ಬಯಕೆಗಳು ನಿಖರವಾಗಿ ಈಡೇರುತ್ತವೆಂದು ಅಚಲವಾಗಿ ನಂಬಲಾಗುತ್ತದೆ.

ಆಧಿವ್ಯಾಧಿಗಳಿಂದ ಬಳಲುವ ಅನೇಕ ಜನ ತಮ್ಮ ದುಃಖನಿವಾರಣೆಗಾಗಿ ಇಲ್ಲಿಗೆ ಬಂದು ಸೇವೆಮಾಡಿ ಶ್ರೀಗುರುಚರಿತ್ರೆ ಪಾರಾಯಣಮಾಡಿ ಭಿಕ್ಷಾ ಜೀವನವನ್ನು ನಡೆಸುವರು. ಶ್ರೀಗುರುಚರಿತ್ರೆಯಲ್ಲಿನ ಚಮತ್ಕಾರಿ ಕಥೆಗಳನ್ನೋದುವುದರಿಂದ ಶ್ರದ್ಧಾಜೀವನವನ್ನನುಸರಿಸುವುದರಲ್ಲಿ ವಿಶ್ವಾಸ ಹುಟ್ಟುತ್ತದೆ. ಮಠದಲ್ಲಿ ಮಧ್ಯಾಹ್ನ ಮಹಾನೈವೇದ್ಯ ನಡೆಯುತ್ತದೆ. ಅನಂತರ ಸೇವಾಕರ್ತರು ಮಧುಕರಿ ಬೇಡಲು ಹೋಗುತ್ತಾರೆ. ಧನಿಕರಾದ ಅನೇಕ ದತ್ತಭಕ್ತರು ಸೇವಾಕರ್ತರಿಗೆ ಧನಧಾನ್ಯ ಸಹಾಯ ಒದಗಿಸುತ್ತಿದ್ದಾರೆ. ದತ್ತವ್ರತದ ಪ್ರಕಾರ ಪ್ರತಿಯೊಬ್ಬ ಯಾತ್ರಿಕನೂ ಕನಿಷ್ಠಪಕ್ಷ ಐದು ಮನೆಗಳಿಗಾದರೂ ಹೋಗಿ ಬೇಡಬೇಕು ಎಂಬುದು ನಿಯಮ. ಭಾವುಕ ಭಕ್ತರು ಈ ನಿಯಮವನ್ನು ಅತ್ಯಂತ ಶ್ರದ್ಧೆಯಿಂದ ಪಾಲಿಸುತ್ತಾರೆ.

ದತ್ತಾತ್ರೇಯ ಮಂದಿರ ಗಾಣಿಗಾಪುರ ಕಲಬುರಗಿ

***

ದತ್ತಾತ್ರೇಯನನ್ನು ಮೂರು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಶಿವನ ರೂಪವೆಂದು ಪರಿಗಣಿಸಲಾಗುತ್ತದೆ. ದತ್ತಾತ್ರೇಯ  ವಿಷ್ಣುವಿನ ಆರನೇ ಅವತಾರವೆಂದು ಪರಿಗಣಿಸಲಾಗಿದೆ. ಮೂರು ರೂಪಗಳನ್ನು ಹೊಂದಿದ್ದರಿಂದ ಭಗವಾನ್ ದತ್ತಾತ್ರೇಯನನ್ನು ಕಲಿಯುಗದ ದೇವರು ಎಂದು ಪರಿಗಣಿಸಲಾಗುತ್ತದೆ. ಹಸು ಮತ್ತು ನಾಯಿ ಎರಡೂ ಅವನ ವಾಹನವಾಗಿದೆ. ದತ್ತಾತ್ರೇಯ   ಆಜನ್ಮ ಬ್ರಹ್ಮಚಾರಿ ಮತ್ತು ಸನ್ಯಾಸಿ ಎಂದು ಗುರುತಿಸಲಾಗುತ್ತದೆ.  ದತ್ತ ಶಬ್ದದ ಅರ್ಥ "ಕೊಟ್ಟಿದ್ದು", ತ್ರಿಮೂರ್ತಿಗಳು ತಮ್ಮನ್ನು ತಾವೇ ಋಷಿ ದಂಪತಿಗಳಾದ ಅತ್ರಿ ಮತ್ತು ಅನಸೂಯೆಯರಿಗೆ ಪುತ್ರನ ರೂಪದಲ್ಲಿ ಅರ್ಪಿಸಿದ್ದರಿಂದ ದತ್ತನೆಂದು ಕರೆಯಲ್ಪಡುತ್ತಾನೆ. ಅವನು ಅತ್ರಿಯ ಪುತ್ರ, ಹಾಗಾಗಿ "ಆತ್ರೇಯ"ನೆಂಬ ಹೆಸರು. ದತ್ತಾತ್ರೇಯ ಸ್ವಾರೋಚಿಷ ಮನ್ವಂತರದ ಸಪ್ತರ್ಷಿಗಳಲ್ಲಿ ಒಬ್ಬ. ದೂರ್ವಾಸ ಮುನಿ ಈತನ ಸಹೋದರ. ನಿಮಿ ಋಷಿ ಈತನ ಮಗ. ಏಳನೆಯ ದಿವಸದಲ್ಲಿಯೇ ಈತ ತಾಯಿಯ ಗರ್ಭದಲ್ಲಿ ಪ್ರಕಟವಾಗಿ ತಂದೆಗೆ ಸಹಾಯ ಮಾಡಿದನೆಂದು ಕಥೆಯಿದೆ.

ಒಮ್ಮೆ ಮಾತಾ ಪಾರ್ವತಿ, ಲಕ್ಷ್ಮಿ ಮತ್ತು ಸರಸ್ವತಿ ತಮ್ಮ ವಾಸ್ತವತೆಯ ಬಗ್ಗೆ ಬಹಳ ಹೆಮ್ಮೆಪಟ್ಟರು. ಅವರ ಅಹಂಕಾರಕ್ಕೆ ಪೆಟ್ಟು ನೀಡಲು ತ್ರಿಮೂರ್ತಿಗಳು ಲೀಲೆಯೊಂದನ್ನು ಯೋಜಿಸಿದರು. ತ್ರಿಮೂರ್ತಿಗಳ ಉಪಾಯದಂತೆ, ನಾರದರು ಒಂದು ದಿನ ತ್ರಿದೇವತೆಗಳ ಬಳಿ ಬಂದು ನಿಮ್ಮ ರೂಪ ಮತ್ತು ಗುಣಗಳು ಋಷಿ ಅತ್ರಿರವರ ಪತ್ನಿ ಅನುಸೂಯಾ ಅವರ ಮುಂದೆ ಏನೂ ಇಲ್ಲ ಎಂದು ಹೇಳಿದರು. ಆಗ ತ್ರಿದೇವತೆಗಳು ತ್ರಿಮೂರ್ತಿಗಳ ಬಳಿ ಹೋಗಿ ನೀವು ಅತ್ರಿ ಮಹರ್ಷಿಯ ಪತ್ನಿ ಅನುಸೂಯಾಳ ಬಳಿ ಹೋಗಿ ಆಕೆಯ ಗುಣಗಳನ್ನು, ಪತಿ ನಿಷ್ಠೆಯನ್ನು ಪರೀಕ್ಷಿಸಬೇಕೆಂದು ಒತ್ತಾಯಿಸುತ್ತಾರೆ. ತಮ್ಮ ಹೆಂಡತಿಯರ ಒತ್ತಾಯಕ್ಕೆ ಒಪ್ಪಿಕೊಂಡ ಶಿವ, ವಿಷ್ಣು ಮತ್ತು ಬ್ರಹ್ಮರು ಸಾಧು ವೇಷ ಧರಿಸಿ ಭಿಕ್ಷೆ ಬೇಡಲು ಸತಿ ಅನುಸೂಯಿಯ ಆಶ್ರಮಕ್ಕೆ ಹೋದರು. ಆ ಸಮಯದಲ್ಲಿ ಅತ್ರಿ ಮಹರ್ಷಿಗಳು ಆಶ್ರಮದಲ್ಲಿ ಇರುವುದಿಲ್ಲ. ಮೂವರು ಸತಿ ಅನುಸೂಯಾಳ ಬಳಿ ಭಿಕ್ಷೆ ಕೇಳಿದರು ಆಗ ಸತಿ ಅನುಸೂಯ ತನ್ನ ಬಳಿ ಇದ್ದ ಧಾನ್ಯಗಳನ್ನು ಭಿಕ್ಷೆ ನೀಡಲು ಹೊರಟಾಗ ಅದನ್ನು ತ್ರಿಮೂರ್ತಿಗಳು ತಿರಸ್ಕರಿಸುತ್ತಾರೆ. ಅನುಸೂಯಾಳನ್ನು ಕುರಿತು ನಮಗೆ ಎದೆಹಾಲನ್ನೇ ಭಿಕ್ಷೆಯಾಗಿ ನೀಡಬೇಕೆಂದು ಹೇಳುತ್ತಾರೆ. ಇದನ್ನು ಕೇಳಿ ಸತಿ ಅನುಸೂಯಾ ಗಾಬರಿಯಾದರು, ಆದರೆ ಸಾಧುಗಳನ್ನು ಅವಮಾನಿಸಲಾಗುವುದಿಲ್ಲ ಎಂಬ ಭಯದಿಂದ ಅವಳು ತನ್ನ ಗಂಡನನ್ನು ನೆನಪಿಸಿಕೊಳ್ಳುವ ಮೂಲಕ ತನ್ನ ಸತಿ ಧರ್ಮದ ಪ್ರಮಾಣವಚನ ಸ್ವೀಕರಿಸಿದಳು. ನನ್ನ ಸತಿ ಧರ್ಮ ನಿಜವಾಗಿದ್ದರೆ, ಮೂವರೂ 6 ತಿಂಗಳ ವಯಸ್ಸಿನ ಶಿಶುಗಳಾಗುತ್ತಾರೆ ಎಂದು ಅವಳು ಬೇಡಿಕೊಂಡರು. ಅನುಸೂಯಾ ಅಂದುಕೊಂಡಂತೆ ಮೂವರು ದೇವರುಗಳು 6 ತಿಂಗಳ ಶಿಶುಗಳಾದರು ಮತ್ತು ಸತಿ ಅನುಸೂಯಾ ಅವರನ್ನು ತಾಯಿಯಂತೆ ಎದೆಹಾಲನ್ನು ನೀಡುತ್ತಾಳೆ.

ಗಂಡಂದಿರು ಹಿಂತಿರುಗದಿದ್ದಾಗ, ತ್ರಿದೇವತೆಗಳು ಚಿಂತೆ ಮಾಡಲು ಪ್ರಾರಂಭಿಸಿದರು. ಆಗ ನಾರದರು ಬಂದು ಇಡೀ ವಿಷಯವನ್ನು ಹೇಳಿದರು. ನಂತರ ಮೂವರು ದೇವತೆಗಳು ಸತಿ ಅನುಸೂಯಾ ಅವರ ಬಳಿ ಹೋಗಿ ಕ್ಷಮೆಯಾಚಿಸಿ ತಮ್ಮ ಗಂಡನನ್ನು ಮರಳಿ ನೀಡುವಂತೆ ಕೇಳಿಕೊಂಡರು. ಅನುಸೂಯಾ ತ್ರಿಮೂರ್ತಿಗಳನ್ನು ಮತ್ತೆ ಅವರ ಸ್ವರೂಪಕ್ಕೆ ಮರಳಿ ತಂದಳು. ಅನುಸೂಯೆಯ ಸತಿ ಧರ್ಮದಿಂದ ಸಂತಸಗೊಂಡ ತ್ರಿದೇವರು, ನಾವು ಮೂವರು ನಿಮ್ಮ ಭಾಗವಾಗಿ ಜನಿಸುತ್ತೇವೆ ಎಂಬ ವರವನ್ನು ನೀಡಿದರು. ನಂತರ ಬ್ರಹ್ಮ ಭಾಗದಿಂದ ಚಂದ್ರ, ವಿಷ್ಣುವಿನ ಭಾಗದಿಂದ ದತ್ತಾತ್ರೇಯ ಮತ್ತು ನಂತರ ಋಷಿ ದುರ್ವಾಸರು ಶಿವನ ಭಾಗದಿಂದ ಜನಿಸಿದರು. ಪೌರಾಣಿಕ ನಂಬಿಕೆಗಳ ಪ್ರಕಾರ, ಭಗವಾನ್ ದತ್ತಾತ್ರೇಯನನ್ನು ಮೂರು ದೇವರುಗಳ ರೂಪವೆಂದು ಪರಿಗಣಿಸಲಾಗುತ್ತದೆ.

***

‘ದತ್ತ’ ಮತ್ತು ‘ ಆತ್ರೇಯ’ ಎರಡು ಪದಗಳು ಸೇರಿದ ದತ್ತಾತ್ರೇಯ ಆಗಿದೆ. ಅಂದರೆ ದತ್ತನು ಅತ್ರಿಯ ಮಗ ಆತ್ರೇಯ. ದತ್ತ ಎಂದರೆ ಕೊಡುವುದು ಎಂದರ್ಥ. ಇಲ್ಲಿ ದತ್ತನು ತನ್ನನ್ನು ತಾನೇ ಅತ್ರಿ-ಅನುಸೂಯರಿಗೆ ಕೊಟ್ಟುಕೊಂಡು ದತ್ತನಾದನು. ಅತ್ರಿ ಒಬ್ಬ ಋಷಿ. ಈತ ಬ್ರಹ್ಮನ ಏಳು ಮಕ್ಕಳಲ್ಲಿ ಒಬ್ಬ. ಈ ಜಗತ್ತಿನ ಸೃಷ್ಟಿಗಾಗಿ ತಪಸ್ಸು ಮಾಡುತ್ತಿದ್ದವನು. ಈತನ ಹೆಂಡತಿ ಅನಸೂಯೆ ಮಹಾ ಪತಿವ್ರತೆ. ಪ್ರತಿಷ್ಠಾನ (ಈಗಿನ ಪೈಠಣ- ಮಹಾರಾಷ್ಟ್ರದಲ್ಲಿದೆ)ದಲ್ಲಿ ಇಂಥಹದೇ ಇನ್ನೊಬ್ಬ ಪತಿವ್ರತೆ ಇದ್ದಳು. ಅವಳ ಹೆಸರು ಸುಮತಿ. ಅವಳ ಗಂಡ ಕೌಶಿಕ. ಅವನು ತಪ್ಪುದಾರಿ ಹಿಡಿದು ಸುಮತಿಯನ್ನು ಬಿಟ್ಟು ಹೊರಟು ಹೋಗುತ್ತಾನೆ. ಹಾಗಿರಲು ಒಮ್ಮೆ ವಿಪರೀತ ಖಾಯಿಲೆ ಬಂದು ಮೈಯಲ್ಲಾ ಹುಣ್ಣಾಗುತ್ತದೆ. ಮತ್ತೆ ಸುಮತಿಯ ಬಳಿಗೇ ಬರುತ್ತಾನೆ. ಅವಳು ತುಂಬಾ ಒಳ್ಳೆಯವಳು ಕ್ಷಮಾಶೀಲೆ. ಅವನ ಹುಣ್ಣುಗಳನ್ನು ತೊಳೆದು ಔಷಧ ಹಾಕಿ, ಒಳ್ಳೆಯ ಆಹಾರ ಕೊಡುತ್ತಾಳೆ. ಅವನಿಗೆ ನಡೆಯಲೂ ಆಗದಿದ್ದಾಗ ಒಂದು ಸಂಜೆ ಸುಮತಿ ಅವನನ್ನು ಹೆಗಲ ಮೇಲೆ ಕುಳ್ಳಿರಿಸಿಕೊಂಡು ಹೊರಡುತ್ತಾಳೆ. ಇದೇ ಸಮಯದಲ್ಲಿ ಆ ಊರಿನಲ್ಲಿ ಘಟನೆಯೊಂದು ನಡೆದಿತ್ತು. ದೊಡ್ಡ ಅಪರಾಧ ಮಾಡಿದವನೊಬ್ಬನಿಗೆ ಮರಣದಂಡನೆ ವಿಧಿಸಿದ್ದರು. ಆದರೆ ಆ ಅಪರಾಧಿ, ತಪ್ಪಿಸಿಕೊಂಡು ಪರಾರಿಯಾಗುತ್ತಾನೆ. ಅಪರಾಧಿಯಂತೆ ಕಂಡ ಇನ್ನೊಬ್ಬನನ್ನ ರಾಜಭಟರು ಕರೆತಂದು ರಾಜನ ಎದುರು ನಿಲ್ಲಿಸಿದಾಗ ಹಿಂದು ಮುಂದು ಆಲೋಚಿಸದೇ ರಾಜ ಅವನ್ನು ಶೂಲಕ್ಕೇರಿಸುವಂತೆ ಅಪ್ಪಣೆ ಮಾಡುತ್ತಾನೆ. ರಾಜಾಜ್ಞೆಯಂತೆ ಆತನನ್ನು ಶೂಲಕ್ಕೆ ಏರಿಸಲಾಗುತ್ತದೆ. ಆದರೆ ಆತ ನಿಜವಾದ ಅಪಾರಾಧಿಯೇ ಅಲ್ಲ. ಆತ ಮಾಂಡವ್ಯನೆಂಬ ಋಷಿ. ಆತನ ಯೋಗಬಲದಿಂದ ಶೂಲದ ಮೇಲೆ ಸಾಯದೇ ನೇತಾಡುತ್ತಿರುತ್ತಾನೆ.[೧] ಅದೇ ಮಾರ್ಗವಾಗಿ ಪತಿಯನ್ನು ಹೊತ್ತು ಸುಮತಿ ಬರುವಾಗ ಕತ್ತಲೆಯಲ್ಲಿ ಕೌಶಿಕನ ಕಾಲು ಶೂಲಕ್ಕೆ ತಾಗುತ್ತದೆ. ಇದರಿಂದಕುಪಿತಗೊಂಡ ಋಷಿ “ಈ ಶೂಲಕ್ಕೆ ಕಾಲು ತಾಗಿಸಿಕೊಂಡವನು ಸೂರ್ಯ ಹುಟ್ಟಿದೊಡನೆ ಸಾಯಲಿ" ಎಂದು ಶಪಿಸುತ್ತಾನೆ. ಇದನ್ನು ಕೇಳಿಸಿಕೊಂಡ ಸುಮತಿ ಪತಿಯೇ ಸರ್ವಸ್ವ ಎಂದು ನಂಬಿದ ಆಕೆ “ಎಲೈ ಸೂರ್ಯನೇ, ನೀನು ಉದಯಿಸಬೇಡ. ನನ್ನ ಮಾತು ಮೀರಿದರೆ ನೀನು ಸುಟ್ಟು ಬೀಳುವೆ" ಎನ್ನುತ್ತಾಳೆ. ಪತಿವ್ರತೆಯ ಶಕ್ತಿ ಮಹತ್ತಾದುದು. ಅವಳ ಶಾಪಕ್ಕೆ ಹೆದರಿ ಸೂರ್ಯ ಹುಟ್ಟಲೇ ಇಲ್ಲ. ಜಗತ್ತೆಲ್ಲ ಕತ್ತಲಾಯಿತು. ಗಿಡ ಮರ ಬಳ್ಳಿಗಳು ಬೆಳೆಯುವುದು ನಿಂತು ಹೋಯಿತು. ಎಲ್ಲಾ ಕೆಲಸ ಕಾರ್ಯಗಳು ನಿಂತು ಹೋದವು. ಜನರ ಸಂಕಷ್ಟ ನೋಡಿ ದೇವತೆಗಳಿಗೆ ಮರುಕ ಹುಟ್ಟಿತು. ಅವರು ಈ ಕಷ್ಟವನ್ನು ನಿವಾರಿಸುವಂತೆ ಬ್ರಹ್ಮನಲ್ಲಿ ಮೊರೆಹೋದರು. ಅದಕ್ಕೆ ಬ್ರಹ್ಮ ಪತಿವ್ರತೆಯು ಶಾಪವಿತ್ತಿದ್ದರಿಂದ ಆಕೆಯ ಬಳಿಗೆ ಹೋಗೋಣ ಎನ್ನುತ್ತಾನೆ. ಬ್ರಹ್ಮಾದಿ ದೇವತೆಗಳೆಲ್ಲ ಪ್ರತಿಷ್ಠಾನಗರದ ಬಳಿ ಇದ್ದ ಅತ್ರಿ ಋಷಿಯ ಆಶ್ರಮದ ಬಳಿ ಬರುತ್ತಾರೆ. ಅನುಸೂಯಾ ದೇವಿಯನ್ನು ಕಂಡು ವಂದಿಸುತ್ತಾರೆ. ಋಷಿ ದಂಪತಿಗಳಿಗೆ ಆಶ್ಚರ್ಯ. ಬ್ರಹ್ಮ, ಇಂದ್ರ ಮೊದಲಾದ ದೇವತೆಗಳು ಇಳಿದು ಬಂದಿದ್ದಾರೆಂದು. ಕಾರಣ ಕೇಳುವ ಮೊದಲೇ “ತಾಯಿ, ಕೌಶಿಕನ ಪತ್ನಿ ಸುಮತಿಯ ಶಾಪದಿಂದ ಲೋಕವೆಲ್ಲ ಅಸ್ತವ್ಯಸ್ತವಾಗಿದೆ. ಜನರು, ಪಶು ಪಕ್ಷಿಗಳು ಹಾಹಾಕಾರ ಮಾಡುತ್ತಿವೆ. ಆದ್ದರಿಂದ ನೀನು ಪ್ರಸನ್ನಳಾಗಿ ಸುಮತಿಗೆ ತಿಳಿ ಹೇಳಬೇಕು. ಇದರಿಂದ ನಾವು ಉಪಕೃತರಾಗುವೆವು” ಎನ್ನುತ್ತಾರೆ. ಅತ್ರಿ ಅನಸೂಯೆಯರು ದೇವತೆಗಳೊಡನೆ ಸುಮತಿಯ ಮನೆಗೆ ತೆರಳುತ್ತಾರೆ ಮತ್ತು ತಾವು ಬಂದ ಕಾರಣವನ್ನು ತಿಳಿಸುತ್ತಾರೆ. 'ಇದು ದೇವಕಾರ್ಯ ನೀನು ಮಾಡಿಕೊಡಬೇಕು. ಸೂರ್ಯನಿಗೆ ಕೊಟ್ಟ ಶಾಪವನ್ನು ಹಿಂದೆ ತೆಗೆದುಕೊಂಡು ಲೋಕವನ್ನು ಉಳಿಸು' ಎನ್ನುತ್ತಾರೆ. ಅದಕ್ಕೆ ಸುಮತಿ, "ನಿಜ ಆದರೆ ಸೂರ್ಯನು ಉದಯಿಸಿದರೆ ನನ್ನ ಗಂಡನು ಮರಣ ಹೊಂದುತ್ತಾನೆ. ಆತ ಹೋದರೆ ನನ್ನ ಸರ್ವಸ್ವವೇ ಹೋದ ಹಾಗೆ. ಶಾಪವನ್ನು ಹಿಂದೆ ತೆಗೆದುಕೊಳ್ಳಲಾರೆ" ಎಂದು ಬಿಟ್ಟಳು. ಆಗ ಅನಸೂಯ, ತಂಗಿ ಸುಮತಿ ನಿನ್ನ ಶಾಪವನ್ನು ಹಿಂಪಡೆ. ನಾನು ನನ್ನ ಶಕ್ತಿಯಿಂದ ನಿನ್ನ ಗಂಡನನ್ನು ಮತ್ತೆ ಬದುಕಿಸಿ ಕೊಡುವೆ" ಎಂದಳು. ಆಗ ಸುಮತಿ ಶಾಪವನ್ನು ಹಿಂಪಡೆಯುತ್ತಾಳೆ. ಅನಸೂಯ ಕೊಟ್ಟ ಮಾತಿನಂತೆ ಮತ್ತೆ ಕೌಶಿಕನನ್ನು ಬದುಕಿಸುತ್ತಾಳೆ. ಎಲ್ಲರಿಗೂ ಸಂತೋಷವಾಗುತ್ತದೆ. ದೇವತೆಗಳು ಅನಸೂಯೆಯನ್ನು ಹೊಗಳಿ ಕೊಂಡಾಡುತ್ತಾರೆ. ಮಾತೆ ನೀನು ದೇವಕಾರ್ಯವನ್ನು ಮಾಡಿಕೊಟ್ಟೆ. ನಾವು ಸಂತುಷ್ಟರಾಗಿದ್ದೇವೆ ಬೇಕಾದ ವರ ಬೇಡಿಕೋ ಎನ್ನುತ್ತಾರೆ. ಆಗ ಅನಸೂಯೆ, ಹರಿ ಹರ ಬ್ರಹ್ಮರು ನನ್ನ ಮಕ್ಕಳಾಗಲಿ ಎಂದು ಬೇಡಿಕೊಳ್ಳುತ್ತಾಳೆ. ಹಾಗೆಯೇ ಆಗಲಿ ಎಂದು ದೇವತೆಗಳೂ ಹರಸುತ್ತಾರೆ. ಅದರಂತೆ ಬ್ರಹ್ಮನ ಅಂಶದಲ್ಲಿ ಚಂದ್ರನೂ, ವಿಷ್ಣುವಿನ ಅಂಶದಲ್ಲಿ ದತ್ತನೂ, ಈಶ್ವರನ ಅಂಶದಿಂದ ದುರ್ವಾಸನೂ ಹುಟ್ಟಿದರು. ಹೀಗೆ ಅನಸೂಯಾದೇವಿ ಮೂವರು ಮಕ್ಕಳನ್ನು ಪಾಲಿಸಿದಳು. ಮಕ್ಕಳು ಬೆಳೆದು ದೊಡ್ಡವರಾದರು. ನಂತರ ತಂದೆ ತಾಯಿಯರ ಅಪ್ಪಣೆ ಪಡೆದು ಚಂದ್ರ ಚಂದ್ರಮಂಡಲಕ್ಕೆ ಹೋದನು. ದುರ್ವಾಸನು ನೆನೆದಾಗ ಬರುವೆನೆಂದು ತಪಸ್ಸಿಗೆ ಹೋದನು. ದತ್ತನು ತಂದೆ ತಾಯಿಯರ ಸೇವೆಯಲ್ಲೇ ಉಳಿದನು.

***

ಶ್ರೀ ಗುರು ಚರಿತ್ರ ಗ್ರಂಥದಲ್ಲಿ ನರಸಿಂಹ ಸರಸ್ವತಿ ಸ್ವಾಮಿಯವರು ಗುರು ದತ್ತ ಕ್ಷೇತ್ರದ ಮಹಿಮೆ ಕುರಿತು ಹಾಗೂ ತಾವು ಸದಾ ಈ ಕ್ಷೇತ್ರದಲ್ಲೆ ಜಾಗೃತವಾಗಿ ನೆಲೆಸಿರುವುದರ ಕುರಿತು ಉಲ್ಲೇಖಿಸಿದ್ದಾರೆ. ಭೀಮಾ ಹಾಗೂ ಅಮರ್ಜಾ ನದಿಗಳ ಸಂಗಮ ಕ್ಷೇತ್ರದಲ್ಲಿರುವುದರಿಂದ ಗಾಣಗಾಪುರಕ್ಕೆ ಇನ್ನೂ ಹೆಚ್ಚಿನ ವಿಶೇಷವಿದೆ.

ನಾಥ ಸಂಪ್ರದಾಯದ ಆದಿ ಗುರು ಅಂದರೆ ಮೊದಲ ಗುರುವಾಗಿ ದತ್ತಾತ್ರೇಯರನ್ನು ಆರಾಧಿಸಲಾಗುವುದು. ಹಾಗಾಗಿ ಗುರುಗಳ ಗುರು, ಯೋಗಿಯಾಗಿ ದತ್ತ ಆರಾಧನೆ ನಡೆಯುತ್ತದೆ. ಇದಲ್ಲದೆ ದತ್ತಾತ್ರೆಏಯ ಸ್ವಾಮಿಯ ಮರು ಅವತಾರವೆನ್ನಲಾದ ಶ್ರೀ ನರಸಿಂಹ ಸರಸ್ವತಿ ಸ್ವಾಮಿಯವರು ನೆಲೆಸಿರುವ ಕ್ಷೇತ್ರವೆ ಶ್ರೀಕ್ಷೇತ್ರ ಗಾಣಗಾಪುರ.

***

ಸಂಕ್ಷಿಪ್ತ ಶ್ರೀ ಗುರುಚರಿತ್ರೆ:-

ಸರಸ್ವತಿ ಗಂಗಾಧರ ಗುರು ಭಕ್ತನಿಗೊಲಿದು ಬಂದನಾ ಶ್ರೀದತ್ತ !

ಪರಿಪರಿ ತಾಪವ ಕ್ಲೇಶವ ಕಳೆಯುತ ನಿಜ ಸುಖವಿತ್ತನು ಶ್ರೀ ದತ್ತ


ಕಷ್ಟದಿಂದ ಕಂಗೆಡುವ ಬಾಲಕನ ಕಂಡ ಸಿದ್ಧಮುನಿ ಶ್ರೀ ದತ್ತ!

ದುಷ್ಟ ಭಾವನೆಯ ಬಿಟ್ಟು ಭಜಿಸಿದರೆ ಕೊಟ್ಟು ಕಾಯುವನು ಶ್ರೀ ದತ್ತ


ನಿಂತು ನುಡಿವ ಯೋಗಿಂದ್ರನಂಘ್ರಿಯನು ಪಿಡಿದು ಕೇಳಿದ ಶ್ರೀ ದತ್ತ!

ಇಂತು ಕರುಣೆಯದು ಕೊನೆಗೆ ಬಂದಿತೇ ಪಾಲಿಸು ಪಾಲಿಸು ಶ್ರೀದತ್ತ


ಆಲಿಸು ಕುವರನೆ ಶ್ರೀಗುರು ಚರಿತೆಯ ಭವತಾರಕನವ ಶ್ರೀದತ್ತ !

ತೇಲುವ ಎಲ್ಲವ ಹಸಿವನು ಹಿಂಗಿಸಿ ಹರುಷದಿ ಕಾಯುವ ಶ್ರೀ ದತ್ತ


ಇವನೇ ದತ್ತನು ಅನುಸೂಯಾತ್ಮಜ ವಿಶ್ವನಿಯಾಮಕ ಶ್ರೀ ದತ್ತ!

ಭವತಿಯ ನೆವದಲಿ ವಿಪ್ರನ ಮಡದಿಗೆ ಸುತನಾದನು ತಾ ಶ್ರೀ ದತ್ತ


ಶ್ರೀಪಾದ ಶ್ರೀವಲ್ಲಭ ನಾಮದಿ ಕುಲ ಉದ್ದರಿಸಿದ ಶ್ರೀ ದತ್ತ!

ಕಾಪಿಡೇ ನಡೆದನು ಭಾರತ ಜನವನು ಯಾತ್ರೆಯ ನೆವದಿಂ ಶ್ರೀ ದತ್ತ


ತೀರ್ಥಕ್ಷೇತ್ರಗಳ ಸುತ್ತಿ ಪತಿತರನು ಪಾವನಗೊಳಿಸಿದ ಶ್ರೀ ದತ್ತ!

ಸಾರ್ಥಕವಾದ ಗೋಕರ್ಣವ ನೋಡುತ ಕುರವದಿ ನಿಂತನು ಶ್ರೀ ದತ್ತ


ಮಂದಮತಿ ಅಂಬಾ ಕುಮಾರನಿಗೆ ಜ್ಞಾನದಾತನು ಶ್ರೀ ದತ್ತ!

ಮಂದವಾಸರದ ಪ್ರದೋಷ ಪೂಜೆಯ ಮಹಿಮೆಯ ಹೇಳಿದ ಶ್ರೀ ದತ್ತ


ಅಗಸಗ ಮುಂದಣ ಜನುಮದಿ ರಾಜ್ಯದ ಭೋಗವನಿತ್ತನು ಶ್ರೀ ದತ್ತ!

ಅಗಲದಂತಿರಲು ವಲ್ಲಭೇಶನ ಸಂಕಟ ಕಳೆದನು ಶ್ರೀ ದತ್ತ


ವಚನದಂತೆ ಅಂಬಾ ಮಾಧವರಿಗೆ ಬಾಲಕನಾದನು ಶ್ರೀ ದತ್ತ !

ಉಚಿತ ಸಮಯ ಬರೆ ನಾಲ್ಕೂ ವೇದದ ಸಾರವ ಹೇಳಿದ ಶ್ರೀ ದತ್ತ


ಅವಳೀತನಯರ ತಾಯಿಗೆ ಕರುಣಿಸಿ ಕಾಶಿಗೆ ಬಂದನು ಶ್ರೀ ದತ್ತ!

ನವ ಸಂವತ್ಸರವಿರೆ ಸನ್ಯಾಸವ ಸ್ವೀಕರಿಸಿದನು ಶ್ರೀಧತ್ತ!


ಮೂವತ್ತಬುಧವ ದಾಟಿ ಬಂದು ತಾಯ್ತಂದೆಯ ನೋಡಿದ ಶ್ರೀ ದತ್ತ¡

ಆವುದನೆಲ್ಲವ ನೀಡಿ ಹರಸುತ ಪಯಣವ ಬೆಳೆಸಿದ ಶ್ರೀಧತ್ತ


ಉದರಶೂಲೆಯ ವಿಪ್ರನ ಜನ್ಮವನುಳಿಸಿ ಕಾಯ್ದನು ಶ್ರೀಧತ್ತ !

ಮುದದಿ ಪೂಜಿಸುವ ಸತಿ-ಪತಿಯರನು ಕಂಡು ನಲಿದನು ಶ್ರೀ ದತ್ತ


ಸಾಯನದೇವನ ಸಾವನು ತಪ್ಪಿಸಿ ಯವನನಂಜಿಸಿದ ಶ್ರೀ ದತ್ತ!

ಧ್ಯೇಯ ಸಾಧನೆಗೆ ಯಾತ್ರೆಯ ಮಾಡಲು ಶಿಷ್ಯನ ಕಳುಹಿದ ಶ್ರೀ ದತ್ತ


ಗುಪ್ತವಾಗಿರಲು ಗುರುನಿಂದಕನಿಗೆ ಭೋಧವ ಮಾಡಿದ ಶ್ರೀ ದತ್ತ !

ಸುಪ್ತ ಚೇತನೆಯ ಚಾಲಿಪ ಶಕ್ತಿಯು ಗುರುವಿಗಿದೆಂದನು ಶ್ರೀ ದತ್ತ


ದೇವಿಯ ಬಳಿಯಲಿ ನಾಲಿಗೆ ಕೊಯ್ದಗೆ ಮತಿಯ ಪಾಲಿಸಿದ ಶ್ರೀಧತ್ತ!

ಭಾವದಿ ಭಿಕ್ಷೆಯ ನೀಡಿದ ವಿಪ್ರಗೆ ಸಂಚಿತ ತೋರಿದ ಶ್ರೀಧತ್ತ


ಯೋಗಿನಿಯರ ಸಹವಾಸದಿ ಇರುವನು ನರಸಿಂಹ ಸರಸ್ವತಿ ಶ್ರೀಧತ್ತ !

ಸಾಗಿ ಶೋಧಿಸಿದ ಅಂಬಿಗರವನಿಗೆ ಗುಪಿತವ ಹೇಳಿದ ಶ್ರೀಧತ್ತ


ಹರಕೆಯ ಕುವರನ ಹರಣವ ಬರೆಸಿದ ಔದುಂಬರದಿ ಶ್ರೀ ದತ್ತ !

ಬರುತ ಅಮರಜಾ ಭೀಮಾ ಸಂಗಮ ಕ್ಷೇತ್ರದಿ ತಂಗಿದ ಶ್ರೀ ದತ್ತ


ಬರಡೆಮ್ಮೆಯನು ಕರೆಯಿಸಿ ಜನರಿಗೆ ಕೌತುಕ ತೋರಿದ ಶ್ರೀ ದತ್ತ!

ಹರುಷದಿ ಕರೆಯಲು ಗಾಣಗಾಪುರಕೆ ನೆಲೆಸಬಂದನಾ ಶ್ರೀದತ್ತ


ದೂರಮಾಡಿದ ಬ್ರಹ್ಮರಾಕ್ಷಸನ ಕುಮಸಿಗೆ ನಡೆದನು ಶ್ರೀ ದತ್ತ!

ತೋರಿದ ತ್ರಿವಿಕ್ರಮ ಭಾರತಿಗೆ ವಿಶ್ವರೂಪವನು ಶ್ರೀ ದತ್ತ


ವಾದಿಸ ಬಂದಿಹ ಸೊಕ್ಕಿದ ವಿಪ್ರರ ಗರ್ವವ ಕಳೆದನು ಶ್ರೀ ದತ್ತ!

ವೇದದಸಾರ ನಿರೂಪಣ ಮಾಡುತ ಅದ್ಭುತ ಹೇಳಿದ ಶ್ರೀ ದತ್ತ


ತಿಳಿಯದ ವಿಪ್ರರು ವಾದವ ಬೆಳೆಸಲು ಹೊಲೆಯನ ಕರೆದನು ಶ್ರೀ ದತ್ತ !

ಬಳಿದು ಬಸ್ಮವ ಕೃಪೆಯನು ಮಾಡುತ ವಾದಿಸ ಹೇಳಿದ ಶ್ರೀ ದತ್ತ


ಪಾಪಿಗಳಾಗಲೇ ಅಂಜಿ ನಡುಗಿದರು ಶಾಪವ ಕೊಟ್ಟನು ಶ್ರೀ ದತ್ತ!

ಪಾಪ-ಪುಣ್ಯದ ಸಂಚಿತ ಕರ್ಮದ ಫಲವನುಸುರಿದ ಶ್ರೀಧತ್ತ


ಭಸ್ಮ ಮಹಾತ್ಮೆಯ ತಿಳಿಹೇಳಿದನು ವಾಮದೇವನು ಶ್ರೀ ದತ್ತ!

ವಿಸ್ಮಯ ಗೊಂಡಿಹ ರಾಕ್ಷಸ ಜನುಮಕೆ ಮೋಕ್ಷವನಿತ್ತನು ಶ್ರೀಧತ್ತ


ಸತಿ ಸಾವಿತ್ರಿಯ ಪತಿ ಮೃತನಾಗಲು ಅಳುವುದ ಕಂಡನು ಶ್ರೀ ದತ್ತ!

ಸತಿ ಧರ್ಮದ ಇತಿಹಾಸದ ಹೇಳುತ ಸತಿ ಹೋಗೆಂದನು ಶ್ರೀ ದತ್ತ


ಹೋಗುವ ಮುನ್ನ ಕ್ಷೇತ್ರಕ್ಕೆ ಬಂದ ಬಾಲೆಯ ಹರಸಿದ ಶ್ರೀ ದತ್ತ!

ಹೋಗದು ಜೀವ ಎನ್ನಯ ನುಡಿಯಿದು ಮಂಗಳ ವೆಂದನು ಶ್ರೀದತ್ತ


ಚೇತರಿಸಿತು ಶವ ಅಭಿಷಿತ ಜಲದಿಂ ಪ್ರೋಕ್ಷಣೆ ಮಾಡಲು ಶ್ರೀ ದತ್ತ!

ಆತುರದಿಂ ದಂಪತಿಗಳು ಬಾಗಲು ಆಶೀರ್ವದಿಸಿದ ಶ್ರೀಧತ್ತ


ರುದ್ರಾಧ್ಯಾಯದ ರುದ್ರಾಕ್ಷಿಯ ಕಥೆ ಹೇಳಿದನವರಿಗೆ ಶ್ರೀ ದತ್ತ!

ಭದ್ರೆ ಸೀಮಂತಿನಿ ಮಾಡಿದ ಚಂದಿರ ವಾರದ ವ್ರತವನು ಶ್ರೀ ದತ್ತ


ಬೆಳಗಿನಿಂದಲಿ ರಾತ್ರಿಯವರೆಗಿನ ವಿಹಿತಕರ್ಮವನು ಶ್ರೀ ದತ್ತ!

ತಿಳಿಯಪಡಿಸಿದ ವಿಪ್ರನ ಮಡದಿಗೆ ಪರಾನ್ನದೋಷವ ಶ್ರೀ ದತ್ತ


ಮೂವರ ಭೋಜನ ಅಕ್ಷಯವಾಗಿಸಿ ದಾಸಗೋಲಿದನುಶ್ರೀ ದತ್ತ!

ಸಾವ ಸಮೀಪದ ಗಂಗಾ ಮಾತೆಗೆ ಮಕ್ಕಳ ಕೊಟ್ಟನು ಶ್ರೀಧತ್ತ


ಒಣಮರ ಚಿಗುರಿಸಿ ನರಹರಿ ವಿಪ್ರನ ಕುಷ್ಠವು ಕಳೆದನು ಶ್ರೀ ದತ್ತ!

ಅಣುಕದಿ ಅಂಜಿಕೆ ತೋರುತ ಶಿಷ್ಯನ ಪರೀಕ್ಷೆ ಮಾಡಿದ ಶ್ರೀದತ್ತ


ಕಾಶಿ ಕ್ಷೇತ್ರದ ಮಹಿಮೆಯ ತೋರಿದ ಸಾಯನ ದೇವಗೆ ಶ್ರೀ ದತ್ತ!

ತೋಷ ದೊಲವನು ಹಾಡುತಲೆಂದನು ಹರಿಹರ ಬ್ರಹ್ಮನು ಶ್ರೀ ದತ್ತ


ಅನಂತನಾವ್ರತ ಮಹಿಮೆಯ ಹೇಳುತ ವ್ರಥ ಮಾಡಿಸಿದನು ಶ್ರೀ ದತ್ತ!

ಅನಂತಕೋಟೆಯು ಅನಂತರೂಪನು ಅನಂತ ಮಹಿಮನು ಶ್ರೀ ದತ್ತ


ನೇಕಾರಗೆ ಶ್ರೀಶೈಲದ ಯಾತ್ರೆಯ ಮಾಡಿಸಿದನು ತಾ ಶ್ರೀದತ್ತ !

ಸಾಕಾರದಿ ಶಿವರಾತ್ರಿ ಮಹಾತ್ಮೆಯ ಹೇಳಿದನಾತಗೆ ಶ್ರೀ ದತ್ತ


ದೇವಿಯ ಭಕ್ತನ ಕುಷ್ಟ ನಿವಾರಿಸಿ ಜ್ಞಾನವ ಕೊಟ್ಟನು ಶ್ರೀದತ್ತ !

ಕವಿಯಾದ ಕಲ್ಮೇಶ ಅರ್ಚಕನ ಶಿಷ್ಯನ ಮಾಡಿದ ಶ್ರೀದತ್ತ


ಹಸುಳರೆಲ್ಲರನು ಮೆಚ್ಚಿಸಿ ಧರಿಸಿದ ಎಂಟು ರೂಪವನ್ನು ಶ್ರೀ ದತ್ತ!

ಕೃಷಿಕನ ಮೌನಾರ್ಚನೆಗೊಲಿದಿತ್ತನು ನೂರ್ಮಡಿ ಧಾನ್ಯವ ಶ್ರೀದತ್ತ


ಪುರಜನರಿಂ ಸಹ ಸಕಲ ತೀರ್ಥಗಳ ಯಾತ್ರೆಯ ಮಾಡಿದ ಶ್ರೀದತ್ತ!

ಪೂರ್ವಾಶ್ರಮದ ಭಗಿನಿಯ ಪಾಪಕ್ಷಾಲನೆ ಮಾಡಿದ ಶ್ರೀಧತ್ತ


ಹರುಷದಿ ಹೇಳಿದ ಗುರು ಗೀತೆಯನು ನಾಮಧಾರಕಗೆ ಶ್ರೀ ದತ್ತ!

ನೆರೆ ನಂಬುವರನು ಪರಿಪಾಲಿಸುವುದು ನಿಶ್ಚಿತವೆಂದನು ಶ್ರೀ ದತ್ತ


ಯಾಕೋ ರಜಕ ಎನ್ನುತ್ತಾ ಯವನರ ರಾಜನ ಕರೆದನು ಶ್ರೀ ದತ್ತ!

ಕಾಕುಗೊಂಡಿಹ ರಾಜನ ಮಂಡಿಯ ರೋಗವ ಕಳೆದನು ಶ್ರೀ ದತ್ತ


ಯವನರಕಾಟಕೆ ಕದಳೀವನಕೆ ಹೋಗುವೆನೆಂದನು ಶ್ರೀದತ್ತ !

ಅವಸರದಿಂ ಬಲು ಶೋಕಿಸಬೇಡಿರಿ ಇಲ್ಲಿಹೆನೆಂದನು ಶ್ರೀದತ್ತ


ಹಾಡಿರಿ ಹಾಡಿರಿ ಮತ್ತು ಆರತಿ ಮಾಡಿರಿ ಎಂದನು ಶ್ರೀದತ್ತ!

ಬೇಡಿದ ಕೊಡುವೆನು ಭಾವುಕ ಜನರಿಗೆ ಸತ್ಯವು ಎಂದನು ಶ್ರೀ ದತ್ತ


ಅತಿ ಸಂಕ್ಷೇಪದ ಗುರುಚರಿತೆಯ ದಿನವೂ ಹಾಡುವ ಕೆಳ್ವರಿಗೆ !

ಅತಿ ಆನಂದವು ಮೇಣ್ ಸುಖಸಂಪದ ಪಾಲಿಸುವನು ಶ್ರೀ ದತ್


ಮಂದಮತಿ ನಾ ತೊದಲ್ನುಡಿಯಿಂದಲೇ ಹಾಡಿದೆನು ಶ್ರೀ ದತ್ತ!

ವಂದಿಸುತಲಿ ನಾ ಅರ್ಪಣ ಮಾಡುವೆ ನಿನ್ನಡಿಗಳಿಗೆ ಶ್ರೀಧತ್ತ

ಮಂಗಳ ಮಂಗಳ ನಿತ್ಯ ಸುಮಂಗಳ ಮಂಗಲಮಯ ಶ್ರೀ ದತ್ತ!

ಗಂಗೆ ಮಾಳಾಂಬಿಕೆ ಕಾಂತಸ್ವರೂಪನು ಸಚ್ಚಿದಾನಂದಮಯ ಶ್ರೀ ದತ್ತ

ಸಿದ್ಧಾಂತ ಅವಧೂತ ಚಿಂತನ ಶ್ರೀ ಗುರುದೇವ ದತ್ತ!

ಶ್ರೀಕೃಷ್ಣಾರ್ಪಣಮಸ್ತು!

***

ಶ್ರೀ ನರಸಿಂಹ ಸರಸ್ವತಿ ಮಹಾರಾಜ್
ಶ್ರೀ ನರಸಿಂಹ ಸರಸ್ವತಿ ಸ್ವಾಮಿಗಳು ಕ್ರಿ.ಶ. 1378 ರಿಂದ 1459ರ ಅವಧಿಯಲ್ಲಿ ಭೌತಿಕವಾಗಿ ಕಾಣಿಸಿಕೊಂಡಿದ್ದರು. (ಶಕ 1300 ರಿಂದ ಶಕ 1380) ಇವರು ಮಹಾರಾಷ್ಟ್ರದ ವಿದರ್ಭ ಪ್ರದೇಶದ ಭಾಗವಾಗಿರುವ ವಾಶಿಮ್ ಜಿಲ್ಲೆಯ ಕಾರಂಜಾಪುರ, ಆಧುನಿಕ ಕಾಲದ ಲಾಡ್-ಕರಂಜಾ (ಕಾರಂಜಾ) ನಲ್ಲಿ ಒಂದು ದೇಶಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತಂದೆ ಮಾಧವ ಹಾಗೂ ತಾಯಿ ಅಂಬಾ ಭವಾನಿ. ಬಾಲ್ಯದಲ್ಲಿ ಇವರಿಗೆ ಕಾಳೆ ಎಂಬ ಕುಟುಂಬದ ಹೆಸರಿನೊಡನೆ ನರಹರಿ ಅಥವಾ ಶಾಲಿಗ್ರಾಮದೇವ ಎಂಬ ಹೆಸರಿಡಲಾಗಿತ್ತು. 

ಶ್ರೀ ನರಸಿಂಹ ಸರಸ್ವತಿಯನ್ನು ದತ್ತಾತ್ರೇಯರ ಎರಡನೇ ಅವತಾರವೆಂದು ಪರಿಗಣಿಸಲಾಗುತ್ತದೆ, ಮೊದಲ ಅವತಾರ ಶ್ರೀಪಾದ ಶ್ರೀವಲ್ಲಭರಾಗಿದ್ದು ಅವರು ಅಂಬಾ ಭವಾನಿಗೆ ಆಶೀರ್ವದಿಸಿದ್ದರು.ಅಲ್ಲದೆ ಆಕೆ ಶಿವಪೂಜೆ ನಡೆಸುವಂತೆ ಸಲಹೆ ನೀಡಿದ್ದರು. ತರ ಅವನು ಅವಳ ಮುಂದಿನ ಜನ್ಮದಲ್ಲಿ ಕಲಿಯುಗದಲ್ಲಿ ಸನಾತನ ಧರ್ಮವನ್ನು ಉದ್ದರಿಸಲು ತಾವು ನರಸಿಂಹ ಸರಸ್ವತಿಗಳಾಗಿ ಜನಿಸುತ್ತೇವೆ. ಎಂದು ಅಭಯ ನೀಡಿದ್ದರು. ಅದರಂತೆ ನರಸಿಂಹ ಸರಸ್ವತಿಯವರ ಜನನವಾಗಿತ್ತು.

ಬಾಲ್ಯದಲ್ಲಿ ನರಸಿಂಹ ಸರಸ್ವತಿ ಶಾಂತ ಸ್ವಭಾವದವನಾಗಿದ್ದ.ಹೆಚ್ಚು ಮಾತನಾಡುತ್ತಿರಲಿಲ್ಲ. ಇದು ಅವನು ಮಾತನಾಡುತ್ತಾನೋ ಇಲ್ಲವೋ ಎಂಬುದರ ಬಗ್ಗೆ ಹೆತ್ತವರಿಗೆ ಚಿಂತೆ ಹತ್ತಿಸಿತ್ತು. ಅದಾಗ್ಯೂ ಬಾಲಕ ನರಸಿಂಹ ಸರಸ್ವತಿ ಒಮ್ಮೆ ಬ್ರಹ್ಮೋಪದೇಶ ಹೊಂದಿದ ನಂತರ ಮಾತನಾಡಲು ಪ್ರಾರಂಭಿದುವುದಾಗಿ ಕೈ ಸನ್ನೆಗಳ ಮೂಲಕ ತೋರಿಸಿದ. ಉಪನಯನದ ನಂತರ ಬಾಲಕ ನರಸಿಂಹ ಸರಸ್ವತಿಗಳು  ವೇದಗಳನ್ನು ಪಠಿಸಲು ಪ್ರಾರಂಭಿಸಿದರು, ಇದು ಹಳ್ಳಿಯಲ್ಲಿನ ಬ್ರಾಹ್ಮಣರನ್ನು ತುಂಬಾ ಮೆಚ್ಚಿಸಿತು, ಹಿರಿಯ ವಿದ್ವಾಂಸರು ಅವರಲ್ಲಿ ವೇದಗಳ ಕಲಿಯಲು ಆಗಮಿಸುತ್ತಿದ್ದರು.

ನರಸಿಂಹ ಸರಸ್ವತಿ 1386 ರಲ್ಲಿ ತನ್ನ 8 ನೇ ವಯಸ್ಸಿನಲ್ಲಿ ಏಕಾಂಗಿಯಾಗಿ ಮನೆಯನ್ನು ತೊರೆದು ಕಾಲ್ನಡಿಗೆಯಲ್ಲಿ ಕಾಶಿಗೆ ಹೊರಟರು. ಅವರು ಶ್ರೀ ಕೃಷ್ಣ ಸರಸ್ವತಿಯಿಂದ ಕಾಶಿಯಲ್ಲಿ ಸನ್ಯಾಸ ಪಡೆದರು. ಅವರ ಹೆಸರಿನ ಎರಡನೇ ಭಾಗ ೯ಸರಸ್ವತಿ) ನಾಮಧೇಯ ಈ ಗುರುಗಳ ಕಾಣಿಕೆಯಾಗಿದೆ.  ಅವರು ಅಂತಿಮವಾಗಿ ಅವರಿಗೆ ಶ್ರೀ ನರಸಿಂಹ ಸರಸ್ವತಿ ಎಂದು ಹೆಸರಿಸಿ ದೀಕ್ಷೆ ನೀಡಿದರು. 

ಸನ್ಯಾಸಿಯಾದ ನಂತರ, ನರಸಿಂಹ ಸರಸ್ವತಿಯವರು  ತನ್ನ ಹೆತ್ತವರನ್ನು ಭೇಟಿಯಾಗಲು 30 ನೇ ವಯಸ್ಸಿನಲ್ಲಿ ಕಾರಂಜಾಗೆ ಹಿಂದಿರುಗುವ ಮೊದಲು ಹಲವಾರು ಪವಿತ್ರ ಸ್ಥಳಗಳಿಗೆ ಭೇಟಿ ನೀಡಿದರು. ಅವರು ತಮ್ಮ ಜೀವನದ ಕೊನೆಯ 20 ವರ್ಷಗಳ ಕಾಲ ಗಾಣಗಾಪುರದಲ್ಲಿದ್ದರು. ಅದಕ್ಕೆ ಮುನ್ನ ಸಹ ಅವರು ಅನೇಕ ಕ್ಷೇತ್ರಗಳನ್ನು ಸಂದರ್ಶಿಸಿದ್ದರು. ಜೀವನದ ಅಂತ್ಯದ ವೇಳೆಗೆ, ನರಸಿಂಹ ಸರಸ್ವತಿ ಅವರು ಬೀದರ್‌ನ ಮುಸ್ಲಿಂ ರಾಜ (ಸುಲ್ತಾನ್) ರನ್ನು ಭೇಟಿಯಾದರು, ಅವರು ಆ ಸಮಯದಲ್ಲಿ ಆ ಪ್ರದೇಶದ ಆಡಳಿತಗಾರರಾಗಿದ್ದ ಬಹಮನಿ ಸುಲ್ತಾನರ ಮಹಮೂದ್ ಷಾ ಬಹಮನಿ ಸುಲ್ತಾನ್ ಆಗಿದ್ದನು.

ತಮ್ಮ ಜೀವನ ಅಂತ್ಯವಾಗುವುದನ್ನು ಅರಿತ ಶ್ರೀಗಳ್:ಉ ತಾವು ಸಮಾಧಿ ಹೊಂದಲು ತೀರ್ಮಾನಿಸಿದ್ದರು.ವರು ಕದಳಿ (ಶ್ರೀಶೈಲಂ ಬಳಿಯ ಕದಳಿ ವನಂ) ಕಾಡಿಗೆ ಹೊರಟರು. ಅವರು ಅಲ್ಲಿ ಶ್ರೀ ನಿಜಗುಣಾನಂದರ ರೀತಿಯಲ್ಲಿ ಸಮಾದಿ ಹೊಂದಿದರು.