Sunday, November 29, 2015

ಜಗತ್ತಿನ ಕಿರಿಯ ವೆಬ್ ಡಿಸೈನರ್ ಶ್ರೀಲಕ್ಷ್ಮಿ ಸುರೇಶ್

ವೆಬ್ ಸೈಟುಗಳನ್ನು ರಚಿಸಲು ಸಾಕಷ್ಟು ಕಂಪ್ಯೂಟರ್ ಜ್ಞಾನ ಅಗತ್ಯ ಎನ್ನುವುದು ನಮಗೆಲ್ಲಾ ತಿಳಿದಿರುವ ಸಂಗತಿ. ಅದಕ್ಕಾಗಿಯೇ ಸಾಕಷ್ಟು ಕೋರ್ಸ್ ಗಳೂ ಇರುತ್ತವೆ. ಅಂತಹಾ ಕೋರ್ಸ್ ಮಾಡದೆಯೂ ವೆಬ್ ಸೈಟ್ ರಚಿಸಬಹುದು ಎನ್ನುವುದನ್ನು ಸಾಡಿಸಿ ತೋರಿಸಿದಾಕೆ ಶ್ರೀಲಕ್ಷ್ಮಿ ಸುರೇಶ್. ಹದಿನೇಳು ವರ್ಷದ ಶ್ರೀಲಕ್ಷ್ಮಿ ಕೇರಳದ ಕ್ಯಾಲಿಕಟ್ ನಗರದ ಸಂತ ಜೋಸೆಫ್ ಪದವಿ ಕಾಲೇಜಿನಲ್ಲಿ ಬಿಬಿಎ ಪ್ರಥಮ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದಾರೆ. ತಾವೇ ಸ್ಥಾಪಿಸಿದ-ಡಿಸೈನ್ ಟೆಕ್ನಾಲಜಿಸ್" ಹೆಸರಿನ ಸಂಸ್ಥೆಯ ಸಿಇಓ ಆಗಿರುವ ಇವರು ಜಗತ್ತಿನ ಕಿರಿಯ ಸಿಇಒ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.
ಕೇರಳ ಸರ್ಕಾರದ ಅಧಿಕೃತ ವೆಬ್ಸೈಟ್ ಸೇರಿದಂತೆ ಹಲವಾರು ಪ್ರಮುಖ ವೆಬ್ ಸೈಟ್ ಸೃಜಿಸಿರುವ ಶ್ರೀಲಕ್ಷ್ಮಿ, ಇದುವರೆಗೂ 100ಕ್ಕೂ ಅಧಿಕ ಗ್ರಾಹಕರಿಗಾಗಿ 150ಕ್ಕೂ ಮೇಲ್ಪಟ್ಟು ವೆಬ್ಸೈಟ್ ರೂಪಿಸಿದ್ದಾರೆ.
ತಾವು ಎಂಟರ ವಯಸ್ಸಿನಲ್ಲಿರುವಾಗಲೇ ತನ್ನ ಶಾಲೆಗೊಂದು ವೆಬ್ ಸೈಟ್ ರೂಪಿಸಿಕೊಟ್ಟ ಇವರು ಅಂದಿನಿಂದಲೂ ವೆಬ್ ಡಿಸೈನಿಂಗ್ ಹಾಗೂ ಎವಲಪ್ ಮೆಂಟ್ ನಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಇವರ ಈ ಅಸಾಮಾನ್ಯ ಸಾಧನೆಯನ್ನು ಗುರುತಿಸಿ ಅಮೆರಿಕನ್ ವೆಬ್ಮಾಸ್ಟರ್, ಸಂಸ್ಥೆಯ ಸದಸ್ಯತ್ವ, ಭಾರತ ಸರ್ಕಾರ ಕೊಡಮಾಡುವ ಅಸಾಧಾರಣ ಸಾಧನೆಗಾಗಿನ 2008ನೇ ಸಾಲಿನ ರಾಷ್ಟ್ರೀಯ ಮಕ್ಕಳ ಪ್ರಶಸ್ತಿ  ಸೇರಿದಂತೆ ಕೇರಳ ಸರ್ಕಾರದ ಪ್ರಶಸ್ತಿ, ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಶಸ್ತಿಗಳು ಒಲಿದು ಬಂದಿವೆ.
ಅಂತಹಾ ಅದ್ಭುತ ಪ್ರತಿಭಾವಂತೆಯನ್ನು ನಮ್ಮ ಓದುಗರಿಗೂ ಪರಿಚಯಿಸುವ ಸಲುವಾಗಿ "ಗೃಹಶೋಭಾ" ಅವರನ್ನು ಸಂಪರ್ಕಿಸಿ ನಡೆಸಿದ ಸಂದರ್ಶನದ ಮುಖ್ಯಾಂಶ  ಕೆಳಗಿನಂತಿದೆ.


ಪ್ರ. ನಿಮ್ಮ ಬಗ್ಗೆ ತಿಳಿಸಿರಿ.
ನಾನೊಬ್ಬ ಸಾಧಾರಣ ಹುಡುಗಿ. ನಾನು ಮಾಡಿದ ಕೆಲಸವನ್ನು ನನ್ನದೇ ವಯಸ್ಸಿನ ಯಾರು ಬೇಕಾದರೂ ಮಾಡಲು ಸಾಧ್ಯವಿದೆ. ನನ್ನ ಬಾಲ್ಯದ ದಿನಗಳಿಂದಲೇ ನನಗೆ ಕಂಪ್ಯೂಟರ್ ಬಳಸಲು ಅನುಮತಿ ಸಿಕ್ಕಿತ್ತು. ನಾನು ಮೊದಲಿಗೆ ಎಂಎಸ್ ಪೇಂಟ್ ಬಳಸಿಕೊಂಡು ಚಿತ್ರ ಬಿಡಿಸುವುದನ್ನು ಕಲಿತೆ. ಸಮಯದಲ್ಲಿ ನನ್ನ ಅಪ್ಪಾಜಿ ಒಬ್ಬ ಚಿಕ್ಕ ವಯಸ್ಸಿನ ಬಾಲಕ ರಚಿಸಿದ ವೆಬ್ ಸೈಟನ್ನು ತೋರಿಸಿದರು. ಅದು ನನಲ್ಲಿ ವಿಶೇಷವಾಗಿ ವೆಬ್ ಸೈಟ್ ವಿನ್ಯಾಸದತ್ತ ಆಸಕ್ತಿ ತಳೆಯುವಂತೆ ಮಾಡಿತು. ಮುಂದೆ ನಾನು ಎಂಎಸ್ ಫ್ರಂಟ್ ಪೇಜ್ ಬಳಸಿಕೊಂಡು ವೆಬ್ ಸೈಟ್ ರಚಿಸುವುದನ್ನು ಕಲಿತೆನು. ನನಗೆ ನಾನು ಒಳ್ಳೆಯ ವೆಬ್ ಸೈಟ್ ರೂಪಿಸಬಲ್ಲೆ ಎನ್ನುವ ನಂಬಿಕೆ ಹುಟ್ಟಿದ ಬಳಿಕ ನನ್ನ ಶಾಲೆಗಾಗಿ ನಾನೊಂದು ವೆಬ್ ಸೈಟ್ ರೂಪಿಸಲು ನಿರ್ಧರಿಸಿದೆ. ಆದರೆ ವಿಚಾರವನ್ನು ನನ್ನ ಮುಖ್ಯೋಪಾದ್ಯಾಯರ ಬಳಿ ಪ್ರಸ್ತಾಪಿಸಲು ನನಗೆ ಧೈರ್ಯವಾಗಲಿಲ್ಲ. ಅದಕ್ಕಾಗಿ ನಾನು ನನ್ನ ಅಪ್ಪಾಜಿಯ ನೆರವು ಬೇಡಿದೆ. ಅಪ್ಪಾಜಿ ಅದಕ್ಕೆ ಸಂತೋಷದಿಂದ ಒಪ್ಪಿ ತಾವೇ ಶಾಲೆಯ ಮುಖ್ಯೋಪಾದ್ಯಾಯಿನಿ ಬಳಿ ಮಾತನಾಡಿದರು. ಅವರ ಮಾತಿಗೆ ಒಪ್ಪಿಕೊಂಡ ನಮ್ಮ ಮುಖ್ಯೋಪಾದ್ಯಾಯಿನಿಯವರು ಶಾಲೆಯ ಸಿಬ್ಬಂದಿಯೊಬ್ಬರ ಮೂಲಕ ನನಗೆ ಬೇಕಾದ ಮಾಹಿತಿಗಳನ್ನೆಲ್ಲಾ ಒದಗಿಸಿದರು. ಹೀಗೆ ನಾನು ನಾಲ್ಕನೇ ತರಗತಿಯಲ್ಲಿ ಇದ್ದಾಗ ನನ್ನ ಶಾಲೆಗಾಗಿ ಒಂದು ವೆಬ್ ಸೈಟ್ ರೂಪಿಸಿ ಕೊಟ್ಟೆ. ಬಳಿಕ ನಾನು ಸಾಕಷ್ಟು ಸಂಘಟನೆಗಳಿಗೂ, ಕ್ಲಬ್ ಗಳಿಗೂ ವಿಬ್ ಸೈಟ್ ರಚಿಸಿ ಕೊಟ್ಟಿದ್ದೇನೆ. ನಾನು ಹತ್ತನೇ ವಯಸ್ಸಿನಲ್ಲಿರುವಾಗ ನನ್ನದೇ ಆದ ಡಿಸೈನ್ ಟೆಕ್ನಾಲಜೀಸ್ ಎನ್ನುವ ವೆಬ್ ಡಿಸೈನ್ ಸಂಸ್ಟೆಯೊಂದನ್ನು ಪ್ರಾರಂಭಿಸಿದೆ.

 ಪ್ರ ನಿಮ್ಮ ತಂದೆಯವರ ಬಗ್ಗೆ ಹೇಳಿರಿ.
ನನ್ನ ತಂದೆ ಸುರೇಶ್ ಮೆನನ್, ವೃತ್ತಿಯಲ್ಲಿ ವಕೀಲರು. ಅವರ ಬೆಂಬಲ, ಪ್ರೋತ್ಸಾಹದ ಫಲವಾಗಿಯೇ ನನಗಿಂದು ಈ ಸಾಧನೆ ಮಾಡಲು ಸಾಧ್ಯವಾಗಿದೆ.

ಪ್ರ ನಿಮ್ಮ ಸಂಸ್ಥೆಯ ಕುರಿತು ತಿಳಿಸಿ.
ನಾನು ಕಳೆದ ಏಳು ವರ್ಷಗಳಿಂದ ಸಂಸ್ಥೆಯನ್ನು ನಡೆಸುತ್ತಿದ್ದೇನೆಭಾರತವಷ್ಟೆ ಅಲ್ಲದೆ ಅಮೆರಿಕಾ, ಕೆನಡಾ, ಗಲ್ಫ್ ರಾಷ್ಟ್ರಗಳಿಂದಲೂ ನಮ್ಮ ಸಂಸ್ಥೆಗೆ ಆರ್ಡರ್ ಗಳು ಬರುತ್ತವೆ. ನನಗೆ ಕೆಲವು ಅಗತ್ಯ ಸಲಹೆ ಸೂಚನೆಗಳನ್ನು ನೀಡುವುದಕ್ಕಾಗಿ ಕೆಲವು ಅರೆಕಾಲಿಕ (ಪಾರ್ಟ್ ಟೈಮ್) ಸಿಬ್ಬಂದಿಗಳನ್ನು ನೇಮಿಸಿಕೊಂಡಿದ್ದೇನೆ. ನನ್ನ ವಿದ್ಯಾಭ್ಯಾಸ ಪೂರ್ಣಗೊಂಡ ಬಳಿಕ ಸಂಸ್ಥೆಯನ್ನು ಇನ್ನಷ್ಟು ವಿಸ್ತರಿಸುವ ಉದ್ದೇಶವಿದೆ.

ಪ್ರ ನಿಮ್ಮ ಕಲಿಕೆ ಹಾಗೂ ಸಂಸ್ಥೆಯ ಕೆಲಸಗಳೆರಡನ್ನೂ ನೀವು ಏಕಕಾಲದಲಿ ಹೇಗೆ ಸರಿದೂಗಿಸಿಕೊಂಡು ಹೋಗುತ್ತೀರಿ?
ಪ್ರತಿದಿನದ ನನ್ನ ಕಾಲೇಜಿನ ಹೋಮ್ ವರ್ಕ್ಸ್ ಮುಗಿಸಿದ ಬಳಿಕ ನಾನು ಡಿಸೈನಿಂಗ್ ಕೆಲಸಗಳಲ್ಲಿ ತೊಡಗುತ್ತೇನೆ. ದಿನವೊಂದರ ಎರಡು ತಾಸು ಡಿಸೈನಿಂಗ್ ಕೆಲಸ ಮಾಡುವುದು ನನಗೇನೂ ಸಮಸ್ಯೆ ಎನಿಸುತ್ತಿಲ್ಲ. ಇನ್ನು ರಜೆ ದಿನಗಳಲ್ಲಿ ಹೆಚ್ಚಿನ ಸಮಯವನ್ನು ಸಂಸ್ಥೆಯ ಕೆಲಸಕ್ಕಾಗಿ ಮೀಸಲಿರಿಸುತ್ತೇನೆ.

ಪ್ರ ಭವಿಷ್ಯದಲ್ಲಿ ನೀವು ಇನ್ನೇನು ಮಾಡಲು ನಿರ್ಧರಿಸಿದ್ದೀರಿ?
ನಿಸ್ಸಂದೇಹವಾಗಿ ನನ್ನ ಸಂಸ್ಥೆಯನ್ನು ಐಟಿ ಉದ್ಯಮದ ಮುಂಚೂಣಿ ಸಂಸ್ಥೆಯನ್ನಾಗಿಸಲು ಉದ್ದೇಶಿಸಿದ್ದೇನೆ. ಇದನ್ನು ಕಾರ್ಯರೂಪಕ್ಕಿಳಿಸಲು ಇನ್ನೂ ಹೆಚ್ಚಿನ ಗ್ರಾಹಕ ಸ್ನೇಹಿಯಾದ ಸಾಫ್ಟ್ ವೇರ್ ಗಳನ್ನು ರೂಪಿಸಲು ಯೋಜಿಸಿದ್ದೇನೆ.


ಪ್ರ ನಿಮ್ಮ "ರೋಲ್ ಮಾಡಲ್" ಯಾರು?
ಬಿಲ್ ಗೇಟ್ಸ್, ಅವರಿಂದಾಗಿಯೇ ನಾವಿಂದು ಇಷ್ಟು ಸುಲಭದಲ್ಲಿ ಕಂಪ್ಯೂಟರ್ ಬಳಸಲು ಸಾಧ್ಯವಾಗಿದೆ. ಕಂಪ್ಯೂಟರ್ ಇಷ್ಟೋಂದು ಜನಪ್ರಿಯವಾಗಲು ಅವರೇ ಕಾರಣರಾಗಿದ್ದಾರೆ. ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಬರುವುದಕ್ಕೆ ಮುನ್ನ ಕಂಪ್ಯೂಟರ್ ಬಳಕೆ ಅತ್ಯಂತ ಕಷ್ಟಕರವೆನಿಸಿತ್ತು

ಪ್ರ ಭಾರತದ ಯುವ ಪೀಳಿಗೆಗೆ ನೀವೇನು ಸಂದೇಶ ನೀಡಲು ಬಯಸುತ್ತೀರಿ?
ನೀವು ಆತ್ಮವಿಶ್ವಾಸದಿಂದ, ನಿಷ್ಠೆಯಿಂದ ಯಾವುದೇ ಕೆಲಸಕ್ಕೆ ಕೈ ಹಾಕಿದರೂ ನಿಮಗೆ ಜಯ ಲಭಿಸುತ್ತದೆ. ಅಸಾಧ್ಯವೆನ್ನುವುದು ಯಾವುದೂ ಇಲ್ಲ. ಸಹನೆ ಮತ್ತು ಸೃಜನಶೀಲತೆಯನ್ನು ರೂಢಿಸಿಕೊಳ್ಳಿ. ಅದುವೇ ನಿಮ್ಮನ್ನು ಜಯದತ್ತ ಕೊಂಡೊಯ್ಯುತ್ತದೆ.
ಯಶಸ್ವಿ ಯುವಪ್ರತಿಭೆ ಶ್ರೀಲಕ್ಷ್ಮಿಗೆ "ಗೃಹಶೋಭಾ" ಪರವಾಗಿ ಅಭಿನಂದನೆಗಳು! ಭವಿಷ್ಯದಲ್ಲಿ ಭಾರತದ ವೆಬ್ ಡಿಸೈನಿಂಗ್ ನ್ಫ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಲಿ ಎಂದು ಹಾರೈಸೋಣ.


(ಈ ಸಂದರ್ಶನವು ಕನ್ನದದ ಹೆಸರಾಂತ ಪತ್ರಿಕೆ "ಗೃಹಶೋಭಾ" ನವೆಂಬರ್ – 2015ರ ಸಂಚಿಕೆಯಲ್ಲಿ ಪ್ರಕಟಗೊಂಡಿದೆ.)

Wednesday, November 18, 2015

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 61

ಬಾಸರಾ (Basara)

ತೆಲಂಗಾಣ ರಾಜ್ಯದ ಅಡಿಲಾಬಾದ್ ಜಿಲ್ಲೆಯಲ್ಲಿರುವ ಬಾಸರಾ ಸರಸ್ವತಿ ದೇವಾಲಯವು ದೇಶದಲ್ಲಿನ ಪ್ರಾಚೀನ ಸರಸ್ವತಿ ದೇವಾಲಯವಾಗಿದ್ದು ಸರಸ್ವತಿದೇವಿಗಾಗಿ ಇರುವ ಏಕೈಕ ಮಂದಿರವೂ ಹೌದು. ಇಲ್ಲಿ ಮಹಾಲಕ್ಷ್ಮಿ ಹಾಗೂ ಸರಸ್ವತಿ ದೇವಿಯರು ಒಟ್ಈಗೆ ಒಂದೇ ಗರ್ಭಗೃಹದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವುದು ಇನ್ನೊಂದು ಗಮನಾರ್ಹ ಸಂಗತಿಯಾಗಿದೆ. ಸದಾ ಕಾಲವೂ ದೇಶದ ನಾನಾ ಭಾಗಗಳ ಭಕ್ತರು ಇಲ್ಲಿ ಬಂದು ತಾಯಿಯ ದರ್ಶನ ಪಡೆಯುವುದನ್ನು ನಾವು ನೋಡುತ್ತೇವೆ. ಜತೆಗೆ ಮಕ್ಕಳಿಗೆ ಅಕ್ಷರಾಭ್ಯಾಸ ಸೇವೆಯೂ ಇಲ್ಲಿ ಸದಾಕಾಲ ನಡೆಯುತ್ತಿರುತ್ತದೆ. ನವರಾತ್ರಿ, ಮಹಾ ಶಿವರಾತ್ರಿ, ವ್ಯಾಸ ಪೂರ್ಣಿಮಾ ಹಾಗೂ ವಸಂತ ಪಂಚಮಿಗಳಂದು ವಿಶೇಷ ಪೂಜೆ, ಮಹಾ ನೈವೇದ್ಯಗಳಾನ್ನಿಲ್ಲಿ ಆಚರಿಸುತ್ತಾರೆ.

***

Sri Gnana Saraswathi Devi, Basara


Sri Gnana Saraswathi Devi Temple, Basara
ಮಹಾಭಾರತ ಕುರುಕ್ಷೇತ್ರ ಯುದ್ಧದ ತರುವಾಯ ಮಹರ್ಷಿ ವೇದವ್ಯಾಸರು ಮಹಃಶಾಂತಿಗಾಗಿ ಪ್ರಶಾಂತವಾದ ಸ್ಥಳವನ್ನರಸುತ್ತಾ ಬರಲುದಂಡಕಾರಣ್ಯದ ನಡುವೆ ಈ ಸ್ಥಳವು ಅವರಿಗೆ ಗೋಚರಿಸುತ್ತದೆ ತಮ್ಮ ಧ್ಯಾನಕ್ಕೆ ಇದೇ ತಕ್ಕುದಾದ ಸ್ಥಳ ಎಂದರಿತ ವ್ಯಾಸರು ಗೋದಾವರಿ ನದಿದಂಡೆಯ ಗುಹಾಲಯದಲ್ಲಿ ತಪಸ್ಸನ್ನಾಚರಿಸಲು ತೊಡಗಿದರು. ಹಾಗೆ ನಿತ್ಯವೂ ಗೋದಾವರಿ ತಟದಲ್ಲಿ ತಪವನಾಚರಿಸುತ್ತಿದ್ದ ವ್ಯಾಸರಿಗೆ ಸರಸ್ವತಿದೇವಿಯು ಪ್ರತ್ಯಕ್ಷಳಾಗಿ ಆಶೀರ್ವದಿಸಿದಳು. "ಪ್ರತಿನಿತ್ಯವೂ ತಪಸ್ಸಿಗೆ ಕುಳಿತುಕೊಳ್ಳುವ ಮುನ್ನ ನದಿಯಿಂದ ಒಂದು ಬೊಗಸೆಯಷ್ಟು ಮರಳನ್ನು ತಂದು ಈ ಗುಹೆಯಲ್ಲಿ ಮೂರು ಭಾಗದಲ್ಲಿ ರಾಶಿ ಹಾಕಬೇಕು." ಎಂದು ಆದೇಶಿಸಿದಳು. ಅದರಂತೆಯೇ ವ್ಯಾಸರು ನಿತ್ಯವೂ ತಾವು ತಪಸ್ಸಿಗೆ ಕುಳಿತುಕೊಳಳ್ಳುವ ಮುನ್ನ ನದಿಯಿಂದ ಮರಳನ್ನು ತಂದು ಗುಹೆಯ ಮೂರು ಭಾಗಗಳಲ್ಲಿ ಸಂಗ್ರಹಿಸುತ್ತಿದ್ದರು. ಹೀಗೆ ಸಂಗ್ರಹಿಸಿದ ಮರಳಿನ ರಾಶಿಯಲ್ಲಿಯೇ ಮಂದೆ ಮಹಾಲಕ್ಷ್ಮಿ, ಮಹಾ ಸರಸ್ವತಿ ಹಾಗೂ ಮಹಾಕಾಳಿ ವಿಗ್ರಹಳು ಸೃಷ್ಟಿಸಲ್ಪಟ್ಟವು.  ಇವುಗಳಿಳಿಗೆ ಅದೇ ನದಿ ದಂಡೆಯ ಮೇಲೆ ದೇವಾಲಯವೂ ನಿರ್ಮಾಣವಾಯಿತು.
ಈ ವಿಗ್ರಹಗಳಿಗೆ ಪ್ರಾಣ ಪ್ರತಿಷ್ಠಾಪನೆಯನ್ನು ಸಹ ವೇದವ್ಯಾಸರೇ ನೆರವೇರಿಸಿದರು. ವೇದವ್ಯಾಸರು ಇಲ್ಲಿ ಸಾಕಷ್ಟು ಕಾಲ ತಂಗಿದ್ದ ಕಾರಣಕ್ಕಾಗಿ ಈ ಸ್ಥಳವನ್ನು ವ್ಯಾಸರ ಹೆಸರಿನಲ್ಲಿಯೇ ಕರೆಯಲಾಗುತ್ತಿತ್ತು. ಅದೇ ಮುಂದೆ ಜನಗಳ ಬಾಯಿಯಲ್ಲಿ ಬಾಸರಾ ಎಂದಾಗಿರುತ್ತದೆ. ಇಂದೂ ಸಹ ಶ್ರೀದೇವಿಗೆ ನಡೆಯುವ ಬೆಳಗಿನ ರುದ್ರಾಭಿಷೇಕದ ಸಮಯದಲ್ಲಿ ವ್ಯಾಸ ಪ್ರತಿಷ್ಠಾಪಿತವಾದ ಮರಳಿನ ಸರಸ್ವತಿ ವಿಗ್ರಹವನ್ನು ನಾವು ಕಾಣಬಹುದು.





Sunday, November 01, 2015

ನಾನೋದಿದ "ನನ್ನಿ"

ಕರಣಂ ಪವನ್ ಪ್ರಸಾದ್ ಎರ್ಡನೇ ಕಾದಂಬರಿ "ನನ್ನಿ. ಕನ್ನಡದಲ್ಲಿ ಮಹತ್ವದ, ಉತ್ತಮವಾದ ಸಾಹಿತ್ಯ ರಚನೆ ಕಡಿಮೆಯಗುತ್ತಿದೆ. ಕುವೆಂಪು, ಬೇಂದ್ರೆ, ಮಾಸ್ತಿ ನಂತರದಲ್ಲಿ ಭೈರಪ್ಪ, ಕುಂವೀ ಯಂತಹಾ ಬೆರಳೇಣಿಕೆಯ ಕೆಲವರ ಹೊರತೂ ಇನ್ಯಾರೂ ಸಾರ್ವತ್ರಿಕವಾಗಿ ಕನ್ನಡ ಓದುಗರನ್ನು ತಲುಪಲು ಸಾಧ್ಯವಾಗಿಲ್ಲ ಎನ್ನುವ ಕೊರಗಿರುವಾಗಲೇ ಕರಣಂ ಪವನ್ ಪ್ರಸಾದ್ ಕಾದಂಬರಿ ಲೋಕದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ "ಕರ್ಮ" ಕನ್ನಡದಲ್ಲಿ ಮಾತ್ರವಲ್ಲ ಆಂಗ್ಲ ಭಾಷೆಗೂ ಅನುವಾದಗೊಂಡು ಸಾಕಷ್ಟು ಓದುಗರನ್ನು ಸೆಳೆದಿದೆ. ಇದೀಗ ಬಂದಿರುವ "ನನ್ನಿ" ಸಹ ಓರ್ವ ನನ್ ಕಥೆ ಎನಿಸಿದರೂ ಅದಕ್ಕೂ ಹೊರತಾಗಿ ಮಾನವೀಯ ಗುಣದೋಷಗಳ ಕುರಿತಂತೆ ಸಾಕಷ್ಟು ಮಹತ್ವದ ಒಳನೋಟಗಳನ್ನು ಕಾದಂಬರಿಕಾರರು ಇಲ್ಲಿ ತೆರೆದಿಟ್ಟಿದ್ದಾರೆ.ಇಲ್ಲಿ ನಾನು ಕಾದಂಬರಿಯ ವಿಮರ್ಶೆ ಮಾಡಹೊರಡುವುದಿಲ್ಲ, ಬದಲಾಗಿ K P Mahesh Kashyap  Priya Bhat , Manushree Jois, ಇವರೇ ಮೊದಲಾದ  ಬೇರೆ ಬೇರೆ ಗೆಳೆಯರು ತಾವು ಕಾದಂಬರಿಯನ್ನು ಓದಿ ತಮ್ಮ ಫೇಸ್ ಬುಕ್ಕಿನ ಗೋಡೆಗಳ ಮೇಲೆ ಹೇಳಿಕೊಂದ ಅಭಿಪ್ರಾಯಗಳನ್ನಷ್ಟೆ ಸಂಗ್ರಹಿಸಿ ಕೊಟ್ಟಿರುತ್ತೇನೆ.
ನೀವೂ ಕಾದಂಬರಿಯನ್ನುೋದಿ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಿ.
ಕನ್ನಡದ ಉದಯೋನ್ಮುಖ ಕಾದಂಬರಿಕಾರನನ್ನು ಪ್ರೊತ್ಸಾಹಿಸಿ.

ಎಲ್ಲಾ ಸ್ನೇಹಿತರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.....
***
ಇವತ್ತು ಕರಣಂ ಪವನ್ ಪ್ರಸಾದರ ಹೊಸ ಕಾದಂಬರಿ "ನನ್ನಿ"ಯನ್ನು ಓದಿ ಮುಗಿಸಿದೆ... ತುಂಬಾ ಗಟ್ಟಿ ಕಥಾ ಹಂದರವುಳ್ಳ ಕಾದಂಬರಿ. ಕಾದಂಬರಿ ಓದಿದ ಮೇಲೆ ಲೇಖಕರು ಕಥಾವಸ್ತುವಿನ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ ಎಂದೆನಿಸಿತು. ನನ್ ಪಾತ್ರಧಾರಿಯಾದ ರೋಣಾಳು ಸತ್ಯದ ಹುಡುಕಾಟದಲ್ಲಿ ತಾನು ಯಾವುದು ಸತ್ಯವೆಂದು ನಂಬಿದ್ದಾಳೋ ಅದು ಸತ್ಯ ಅಲ್ಲವೆಂದು ತಿಳಿದಾಗ ಸತ್ಯದ ಬಗ್ಗೆ ಅಸಹ್ಯಗೊಂಡು ಅದರಿಂದ ವಿಮುಖಗೊಳ್ಳವುದೇ ಕಾದಂಬರಿಯ ಕಥಾವಸ್ತು. ಕಾದಂಬರಿಯ ಕಥಾನಕ ಹರವಾದ ವಿಸ್ತಾರವನ್ನು ಹೊಂದಿ ದಟ್ಟವಾದ ಅನುಭವವನ್ನು ಓದುಗರಿಗೆ ನೀಡುವುದರೊಂದಿಗೆ ನೈಜತೆಗೆ ಹತ್ತಿವಾಗಿರುವಂತೆ ಕಾಣಲಾರಂಭಿಸಿ , ಓದಿದ ನಂತರವೂ ಕಾಡುವ ಗುಂಗನ್ನು ಹೊಂದಿದೆ..



***
ಅಸತ್ಯದ ತಮಸ್ಸಿನಿಂದ ಸತ್ಯದ ತೇಜಸ್ಸಿನೆಡೆಗೆ ದಾರಿ ತೋರುವನನ್ನಿ
ಕಾರಣಾಂತರಗಳಿಂದಾಗಿ ನಾನು ನನ್ನ ಹೈಸ್ಕೂಲ್ಅನ್ನು (, ಮತ್ತು ೧೦ನೆಯ ತರಗತಿ) ಓದಿದ್ದು ಕ್ರಿಶ್ಚನ್ ಸಂಸ್ಥೆಯೊಂದರಲ್ಲಿಯೇ. ಮೊತ್ತ ಮೊದಲಬಾರಿ ನನ್ನದಲ್ಲದ ಧರ್ಮವೊಂದರ ಪರಿಚಯವಾಗಿದ್ದು ಅಲ್ಲಿಯೇ ನನಗೆ. ನಾನು ಅಲ್ಲಿ ಯಾವ ಪೂರ್ವಾಗ್ರಹಗಳಿಲ್ಲದೇ ಬೆರೆತದ್ದು, ಕಲಿತದ್ದು, ನಲಿದದ್ದು. ನನ್ನ ಹೆತ್ತವರು ಯಾವುದನ್ನೂ, ಯಾವತ್ತೂ ತಲೆಗೆ ತುಂಬಿಸಿರಲೂ ಇಲ್ಲ. ಮೂರುವರುಷಗಳಲ್ಲಿ ನಾನು ಅಲ್ಲಿಂದ ಪಡೆದದ್ದು ಅಸಂಖ್ಯಾತ! ಪ್ರತಿ ದಿವಸ ಪ್ರಾರ್ಥನೆಗೆ ಹಾಡುತ್ತಿದ್ದಅಗಣಿತ ತಾರಾಗಣಗಳ ನಡುವೆ..’ ಹಾಡನ್ನು ಇಂದೂ ಗುನುಗುತ್ತಿರುತ್ತೇನೆ. ದಿನಗಳು ನಿಸ್ಸಂಶಯವಾಗಿಯೂ ಮಧುರ ನೆನಪುಗಳಿಂದ ತುಂಬಿದ ನನ್ನ ಅವಿಸ್ಮರಣೀಯ ಕಾಲಘಟ್ಟವಾಗಿವೆ. ಕಿನ್ನಿಗೋಳಿಯ ಲಿಟ್ಲ್ಫ್ಲವರ್ ಹೈಸ್ಕೂಲ್ ನನಗೆ ನನ್ನನ್ನು ಪರಿಚಯಿಸಿದ, ನನ್ನೊಳಗೆ ಚಿಗುರುತ್ತಿದ್ದ ಪ್ರತಿಭೆಯನ್ನು ಗುರುತಿಸಿದ ತಾಣ. ಸತ್ಯಕ್ಕೆ ಯಾವ ಬಣ್ಣವೂ ಇಲ್ಲವೆಂಬುದನ್ನು ಇಂದು ನನಗೆ ಮನಗಾಣಿಸಲು ಕಾರಣವಾದ ಜಾಗವೂ ಹೌದು. ಹಾಗಾಗಿ ನನಗೆ ಕಲಿಸಿದ ಅಲ್ಲಿಯ ಎಲ್ಲಾ ಸಿಸ್ಟರ್ಸ್ಗಳಿಗೂ ನಾನು ಸದಾ ಚಿರ ಋಣಿ. ಗುರುಭ್ಯೋ ನಮಃ ಎಂದೇ ಅಕ್ಷರ ತಿದ್ದಿಸಿದ ನನ್ನ ಅಪ್ಪನ ಬುನಾದಿಯಡಿ ನನ್ನ ಬಾಲ್ಯ, ಹದಿವಯಸ್ಸು ಅರಳಿದ್ದೂ ಇದಕ್ಕೆ ಕಾರಣವೆನ್ನಬಹುದು

ರೀತಿಯ ನನ್ನ ಪೀಠಿಕೆಗೆ ಒಂದು ಬಲವಾದ ಕಾರಣವಿದೆ. ‘ನನ್ನಿ’ ಎಂದರೆ ನನ್ ಓರ್ವಳ ಸತ್ಯಾನ್ವೇಷಣೆಯ ಕಥೆ ಎಂಬುದಷ್ಟೇ ನನಗೆ ಗೊತ್ತಿದ್ದುದು ಓದುವ ಮೊದಲು. ನಾನು ಹೈಸ್ಕೂಲ್ ಕಲಿತ ನನ್ನ ಶಾಲೆ, ಸಿಸ್ಟರ್ಸ್ಗಳೊಂದಿಗೆ ಒಡನಾಡಿದ್ದು, ಅಲ್ಲಿಯ ಆಶ್ರಮದಲ್ಲಿ ಓದುತ್ತಿದ್ದ ಕ್ರಿಶ್ಚನ್ ಗೆಳತಿಯರ ಒಳಗುದಿಯನ್ನು, ಅನಿಸಿಕೆಗಳನ್ನು ಕೇಳಿದ್ದು ಎಲ್ಲವೂ ಗಟ್ಟಿಯಾಗಿ ಇನ್ನೂ ಸ್ಮೃತಿಯಲ್ಲಿ ಉಳಿದುಕೊಂಡಿವೆ.. ಆಗಾಗ ನೆನಪಾಗಿ ನನ್ನ ಮತ್ತೆ ಗತಕಾಲಕ್ಕೆಳೆಯುತ್ತಿರುತ್ತವೆ. ದಿನಗಳ ನನ್ನ ಅನುಭವವೇ ಇಂದು ಕೃತಿಯನ್ನು ಮತ್ತಷ್ಟು ಆಪ್ತವಾಗಿ ಓದಿಸಿಕೊಳ್ಳಲು, ತೀರ ಭಿನ್ನವಲ್ಲದ ಪರಿಸರದೊಳಗೆ (ಕಾದಂಬರಿಯಲ್ಲಿ ಬರುವ) ನನ್ನನ್ನು ಸಮೀಕರಿಸಿಕೊಂಡು, ಹೆಚ್ಚು ತಾದಾತ್ಮ್ಯತೆಯಿಂದ ಒಳಗೆಳೆದುಕೊಳ್ಳಲು ಸಾಧ್ಯವಾಯಿತು ಎನ್ನಬಹುದು. ಅಂತೆಯೇ ಓದಲು ತೆಗೆದುಕೊಂಡಾಗಲೂ, ಓದುವಾಗಲೂ ಯಾವುದೇ ಪೂರ್ವಾಗ್ರಹವಿಲ್ಲದೇ ಓದಿದ್ದೇನೆ.. ವಿಶ್ಲೇಷಿಸಿದ್ದೇನೆ.. ಗಂಟೆಗಟ್ಟಲೇ ಚಿಂತಿಸಿದ್ದೇನೆ ಮತ್ತು ಸಂಶಯವಿದ್ದ ವಿಷಯಗಳ ಗುರುತು ಹಾಕಿಕೊಂಡು, ಕಾದಂಬರಿಯನ್ನೋದಿ ಮುಗಿಸಿದ ಮೇಲೆ, ಲೇಖಕರ ಪರಿಚಯ ಮಾಡಿಕೊಂಡು ಅವರೊಂದಿಗೇ ಖುದ್ದಾ ನನ್ನ ಸಂದೇಹಗಳನ್ನು ಕೇಳಿ ನಿವಾರಿಸಿಕೊಂಡಿದ್ದೇನೆ. ಇದು ಹಾಗೇ.. ಇದು ಹೀಗೇ.. ಇದು ಅದೇ... ಎಂಬೆಲ್ಲಾ ಸ್ವಯಂ ನಿರ್ಧಾರಕ್ಕೆ ಬರದೇ ಪರಾಮರ್ಶಿಸಿ ಅರಿಯಲು, ತಿಳಿಯಲು ಯತ್ನಿಸಿದ್ದು. ಹಾಗಾಗಿ ಅಷ್ಟೇ ವಸ್ತುನಿಷ್ಠವಾಗಿ ಪುಟ್ಟ ವಿಮರ್ಶೆಯನ್ನೂ ಬರೆಯಲು ಪ್ರಯತ್ನಿಸುತ್ತಿದ್ದೇನೆ

ಮೊದಲು ಕಥೆಯ ಸ್ಥೂಲ ಚಿತ್ರಣ : ‘ಸಿಸ್ಟರ್ ರೋಣಾಳಿಂದ ಆರಂಭವಾಗುವ ಕಥೆರೋಣಾಳೊಂದಿಗೆ ಕೊನೆಯಾಗುವುದು. ರೋಣಾಳಿಂದ ಸಿಸ್ಟರ್ ರೋಣಾಳಾಗುವ ಪ್ರಕ್ರಿಯೆ... ಅದಕ್ಕಿರುವ ಹಿನ್ನಲೆ... ಆನಂತರ ಆಕೆ ಸ್ವಯಂ ವಿಮರ್ಶೆಗೆ, ವಿಶ್ಲೇಷಣೆಗೆ ಹೊರಟು, ಅಚಾನಕ್ಕಾಗಿ ಸಿಗುವ ಯುರೋಪ್ ಲೇಖಕ ಎಡಿನ್ ಬರ್ಗ್ ಪುಸ್ತಕಗಳ ಪ್ರಭಾವಕ್ಕೆ ಸಿಲುಕಿ ಸತ್ಯಾನ್ವೇಷಣೆಗೆ ಹೊರಟು.. ಪಥದಲ್ಲಿ ತನ್ನ ಸಹಜ ಗುಣ ಧರ್ಮದಿಂದ ಅದೇ ಸತ್ಯ ಅವಳನ್ನು ಸುಟ್ಟು, ಘಾಸಿಗೊಳಿಸಿ, ತಪದಲ್ಲಿ ಬೆಂದು ಬೆಳಗುವ ಚಿನ್ನದಂತೇ ಆಕೆ ಮತ್ತೆ ಎಲ್ಲಾ ಕಳಚಿ ರೋಣಳಾಗುವ ಕಥೆ. ಕಥೆ ಆರಂಭದಿದ್ದ, ಅಂತ್ಯದವರೆಗೂ ಬರುವ ಮತ್ತೊಂದು ಪಾತ್ರವಿದೆ. ಮೊದ ಮೊದಲು ಪಾತ್ರವೇ ಪ್ರಧಾನ ಪಾತ್ರವೆಂಬಂತೇ ಭಾಸವಾಗುವ.. ಕಥೆಯುದ್ದಕ್ಕೂ ಸುಳ್ಳಿಗೂ, ಸತ್ಯಕ್ಕೂ ಇರುವ ಅಂತರ ಅಂದರೆ ಬ್ಲಾಕ್ ಆಂಡ್ ವೈಟ್ಅನ್ನು ಸ್ಪಷ್ಟವಾಗಿ ಓದುಗರಿಗೆ ಕಾಣಿಸುವಂಥ ಪಾತ್ರ! ಅದೇ ಮದರ್ ಎಲಿಸಾರದ್ದು. ಮೂರು ಪ್ರಮುಖ ಪಾತ್ರಗಳಲ್ಲದೇ ಇನ್ನೂ ಹಲವು ಪಾತ್ರಗಳು ತಮಗೊದಗಿಸುವ ಅತ್ಯಗತ್ಯ ಕಾರ್ಯವನ್ನು ಮಾಡಿ, ತಮ್ಮ ತಮ್ಮ ಕೆಲಸದಾನಂತರ ಸತ್ಯಾನ್ವೇಷಣೆಗೆ ರೋಣಾಳನ್ನು ಇನ್ನಷ್ಟು ಉತ್ತೇಜಿಸಿ ಮಾಯವಾಗುತ್ತವೆ. (ಅತಿ ಕ್ಲುಪ್ತವಾಗಷ್ಟೇ ಕಥೆ ಹೇಳುತ್ತಿದ್ದೇನೆ. ಪೂರ್ತಿ ತಿಳಿಯಲುನನ್ನಿ ಓದೊಂದೇ ದಾರಿ.)

ನನ್ನ ಪ್ರಕಾರ ಪ್ರತಿ ಕಾದಂಬರಿಯ ಒಂದೊಂದು ಪಾತ್ರವೂ ಕಾದಂಬರಿಯ ಜೀವಂತಿಕೆಯೇ ಆಗಿರುತ್ತದೆ. ಹೀಗಾಗಿ, ಆಯಾ ಕಾದಂಬರಿಯು ಅದರ ಓದುಗ ಓದುವಷ್ಟು ಹೊತ್ತೂ ಕಣ್ಮುಂದೆ ನಡೆವ ಒಂದು ತುಂಬು ಜೀವನವೆನಿಸಿಕೊಂಡು ಬಿಡುತ್ತದೆ. ನನ್ನಿಯ ಕೆಲವು ಓದುಗರಿಗೆ ಮದರ್ ಎಲಿಸಾರೋ, ‘ಸಿ.ರೋಣಾಳೊಅಥವಾ ಕೇವಲ ರೋಣಾಳೋ, ಮಿಲ್ಟನ್ ಫಾಬ್ರಿಗಾಸ್ನೋ, ತೇಗೂರಿನ ರಾಯಪ್ಪನೋ ಕಾದಂಬರಿಯ ಜೀವಾಳದಂತೇ, ಪ್ರಮುಖ ಪಾತ್ರ ಅಂದರೆ ಹೀರೋ/ಸೆಂಟರ್ ಎಂದು ಅನಿಸಿರಬಹುದು. ಆದರೆ ನನಗೆ ಮಾತ್ರನನ್ನಿಕಾದಂಬರಿಯ ಜೀವನದೊಳಗಿನ ಸೆಂಟರ್ ಆಫ್ ಅಟ್ರಾಕ್ಷನ್, ಪ್ರಮುಖ ಪಾತ್ರಧಾರಿ ಎಂದೆನಿಸಿಕೊಂಡವ ಎರಿಕ್ ಬರ್ಗ್ನೇ. ಎರಿಕ್ ಯುರೋಪಿನಲ್ಲೆಲ್ಲೋ ಇರುವವನೆಂದು ಹೇಳುವ ಕಾದಂಬರಿ, ಅವನ ಮೂಲಕ ಹೇಳಿಸುವ ಕಟು ವಾಸ್ತಿವಿಕತೆಯನ್ನು ಬಿಚ್ಚಿ, ಎಳೆಯೆಳೆಯಾಗಿ ಹರವಿ, ಬೆಚ್ಚಿ ಬೀಳುವಂತಹ ಸತ್ಯ ಶೋಧನೆಯನ್ನು ಮಾಡಿಸುತ್ತದೆ. ಎರಿಕ್ ಬರೆದಿದ್ದು ಎನ್ನಲ್ಲಾಗುವ "ಸತ್ಯ ದಯೆ ಮತ್ತು ಸೇವೆ" ಹಾಗೂ "ಮಾನವ ಜಗತ್ತಿನ ಅಪಮೌಲ್ಯಗಳು" ಎಂಬೆರೆಡು ಪುಸ್ತಕಗಳೊಳಗಿನ ವಾಸ್ತವಿಕ ಅಂಶಗಳ ಮಂಥನದಿಂದ ಹೊರ ಬರುವ ಕಟು ಸತ್ಯಗಳು ಓದುಗರಿಗೆ ಜೀರ್ಣಿಸಿಕೊಳ್ಳಲು ತುಸು ತ್ರಾಸದಾಯಕವೂ ಆಗುವುದು. ನಿಟ್ಟಿನಲ್ಲಿ ಆಮೂಲಾಗ್ರವಾಗಿ ಇಂತಹ ಒಂದು ಸತ್ಯ ಶೋಧನೆಯತ್ತ ದಿಟ್ಟ ಹೆಜ್ಜೆಯನ್ನಿಟ್ಟ ಕರಣಂ ಪವನ್ ಪ್ರಸಾದ್ ಅವರಈ ಅಪೂರ್ವ ಪುಸ್ತಕನನ್ನಿ’ ಎಂದರೆ ಖಂಡಿತ ಉತ್ಪ್ರೇಕ್ಷೆಯೆನಿಸದು.

ಕಾದಂಬರಿಯಲ್ಲಿ ಬರುವ ಪಾತ್ರಗಳಲ್ಲೊಂದಾದ ಎರಿಕ್ ಬರ್ಗ್ ಎಂಬ ಯುರೋಪಿಯನ್ ಸತ್ಯಶೋಧಕನಷ್ಟೇ ನನ್ನ ಕಾಡಿದ ಪಾತ್ರವೆಂದರೆ, ತೇಗೂರಿನ ರಾಯಪ್ಪ. ಕ್ರಿಶ್ಚನ್ ವಳಿಗನಾಗಿ ಬಾಳಿದ, ಬದುಕಲು ಹೆಣಗಾಡಿದ, ತಾ ಸಾಯುತ್ತಲೇ ತನ್ನ ಪೋಲಿಯೋ ಪೀಡಿತ ಮಗಳಿಗಾಗಿ ದುಡಿದು ದಣಿದ, ಆತನ ಬೆಚ್ಚಿ ಬೀಳಿಸುವ ಕೊನೆಯ ಎಣಿಸುವಾಗೆಲ್ಲಾ ಎದೆ ಝಿಲ್ಲೆನಿಸುತ್ತದೆ. ಪಾತ್ರದ ಕುರಿತು ನಾನು ಏನೇ ಹೇಳಿದರೂ ಅದು ಓದುಗರ ಓದುವ ಸುಖವನ್ನು ಕಸಿದುಕೊಂಡಂತಾಗುವುದು. ಪಾತ್ರ ಚಿತ್ರಣವನ್ನಷ್ಟೇ ಅಲ್ಲಾ, ಕಾದಂಬರಿಯ ಬೇರಾವ ಪಾತ್ರವನ್ನೂ ಹೆಚ್ಚು ವಿಶ್ಲೇಷಿಸಹೋಗುವುದು ನಿಟ್ಟಿನಲ್ಲಿ ಸಮಂಜಸವೆನಿಸದು. ಹಾಗಾಗಿ ನಾನು ಓದಿದಾಗಿನಿಂದ ನನ್ನ ಬಿಟ್ಟೂ ಬಿಟ್ಟೂ ಕಾಡುತಿಹ ನನ್ನಿಷ್ಟದ ಪಾತ್ರ, ಕಥೆಯ ಜೀವಾಳನಾಗಿರುವ (ನನ್ನ ವೈಯಕ್ತಿಕ ಅನಿಸಿಕೆಯಂತೇ) ಎಡಿನ್ ಬರ್ಗ್ ಕೆಲವು ಸಾರ್ವಕಾಲಕ ಸತ್ಯ ದರ್ಶನವನ್ನು, ರೋಣಾಳ ಮಂಥನವನ್ನು ಕಾದಂಬರಿಯಲ್ಲಿದ್ದ ಹಾಗೇ ಇಲ್ಲಿ ಹಂಚಿಕೊಳ್ಳಬಯಸುತ್ತಿದ್ದೇನೆ.   ಕೆಳಗಿನ ಪ್ರತಿ ಸಾಲೂ ಹೊಸ ಚಿಂತನೆಗಳಿಗೆ, ಹೊಳಹುಗಳಿಗೆ, ಮಂಥನಕ್ಕೆ ನಮ್ಮನ್ನೆಳೆಸುವಂತಿದ್ದು, ಓದುಗರನ್ನೂ ಸತ್ಯಾನ್ವೇಷಣೆಗೆ, ಸ್ವ ವಿಮರ್ಶೆಗೆ ಖಚಿತವಾಗಿಯೂ ಎಳೆಸುತ್ತವೆ ಎಂಬುದು ನನ್ನ ವಿಶ್ವಾಸ.

) ಪ್ರಚಾರ ಹೇಗೆ ಪಡೀಬೇಕು ಅನ್ನೋದು ಮುಖ್ಯವೇ ಹೊರತು, ಪ್ರಚಾರಕ್ಕಾಗಿ ಏನು ಮಾಡಿದೆವು ಅನ್ನೋದಲ್ಲ. ನಾನು ಪ್ರಚಾರಕ್ಕೆ ಇಳಿದಿದ್ದೇನೆ ಎಂದು ಪ್ರಚಾರಕ್ಕೆ ಇಳಿದವನಿಗೂ ಗೊತ್ತಾಗಬಾರದು. ಹಾಗೆ ನೋಡಿಕೊಳ್ಳೋದು ಜಾಣತನ. (ಫಾಬ್ರಿಗಸ್ ಹೇಳುವ ಮೇಲಿನ ಮಾತೊಳಗಿನ ಮೊನಚು, ವ್ಯಂಗ್ಯ.. ಅದರೊಳಗಿನ ವರ್ತಮಾನದ (ಪ್ರಸ್ತುತ) ಕಟು ವಾಸ್ತವ ಎಷ್ಟು ದಿಟ ಎಂದೆನಿಸಿತು.)


) "ಹೇಳಿಕೊಳ್ಳದ ತ್ಯಾಗಗಳಿಗೆ ಬೆಲೆ ಇರೋಲ್ಲ. ಹೇಳಿಕೊಂಡ ತ್ಯಾಗಗಳನ್ನು ನಂಬೋಕೆ ಆಗಲ್ಲ." 

) ಯಾವುದು ತಪ್ಪು ಎನ್ನಿಸುತ್ತದೋ ಆಗ ಅದನ್ನು ಸರಿಯೊಂದಿಗಿನ ಯಾವುದೋ ಒಂದು ಅಂಶದೊಂದಿಗೆ ಕೂಡಿಸಿ ತಪ್ಪನ್ನು ಸರಿ ಎನ್ನಿಸುವ ಕುಚೋದ್ಯ ಪ್ರಯತ್ನ ಇಲ್ಲಿ ಪುನರಾವರ್ತನೆ ಆಗುತ್ತಿಲ್ಲವೇ? (ರೋಣಾಳ ಜಿಜ್ಞಾಸೆ)

) ಕಾರಣ ಅಶುದ್ಧವಾದ ಮೇಲೆ ಕ್ರಿಯೆಯೂ ಅಶುದ್ಧವೇ, ಕ್ರಿಯೆಗಳಿಂದ ಕಾರಣ ಹುಟ್ಟುವುದಿಲ್ಲ. ಕಾರಣಗಳಿಂದಲೇ ಕ್ರಿಯೆ ಹುಟ್ಟುತ್ತದೆ. ಅದರಲ್ಲೂ ಕಾರಣವಿರುವ ಸೇವೆ!? ಇದರ ಆಳಕ್ಕೆ ಹೋಗಲು ಆಗುತ್ತಿಲ್ಲ. ಹೌದು ಜಗತ್ತಿನಲ್ಲಿ ಯಾವುದೂ ಸೇವೆಯಲ್ಲ. ಸಹಕಾರವಷ್ಟೇ ನಿಜ.

) ಮಾನವನು ಪ್ರಾರಂಭಿಸುವ ಪ್ರತಿಯೊಂದು ಸತ್ಕಾರ್ಯಗಳು ಮೂಲದಲ್ಲಿ ನಿಸ್ವಾರ್ಥ ಸೇವೆಯೇ ಆಗಿದ್ದು, ಅನಂತರ ಇಷ್ಟಾರ್ಥಕಾಮವಾಗೇ ಕೊನೆಗೊಳ್ಳುತ್ತದೆ.

) ಪ್ರಕೃತಿ ಯಾವುದನ್ನು ಹಿಡಿತದಲ್ಲಿಟ್ಟು, ಯಾವುದನ್ನು ಬೆಳೆಸಬೇಕು ಎಂದು ಆಲೋಚಿಸಿಯೇ ಪ್ರತಿ ಜೀವಿಗೂ ಗುಣಗಳನ್ನು ನೀಡಿದೆ. ಆದರೆ ಮಾನವನು ತನ್ನ ಪಾಕೃತಿಕ ಗುಣಗಳಿಂದ ದೂರವಾಗಿ, ವಿವೇಚನೆಯ ಹೆಸರಿನಲ್ಲಿ ಸಹಜೀವಿ, ಜಗತ್ತನ್ನೇ, ಹತೋಟಿಗೆ ತೆಗೆದುಕೊಂಡು ಹಾಳುಮಾಡುತ್ತಿದ್ದಾನೆ. ಮಾನವನ ಮೂಲ ಗುಣವೇ ಸ್ವಾರ್ಥ. ತನ್ನೆಲ್ಲಾ ಅಪಾಕೃತಿಕ ಗುಣಗಳನ್ನು ಹತೋಟಿಯಲ್ಲಿಟ್ಟುಕೊಂಡು, ಪ್ರಕೃತಿಯ ಜೊತೆ ಸಹಬಾಳ್ವೆ ನಡೆಸುತ್ತಿದ್ದ ಮಾನವ ಜನಾಂಗ ಮರೆಯಾಗುತ್ತಿದೆ. ಈಗಿರುವುದು ಮಿತಿಯನ್ನು ಮೀರಿದ ಕ್ರೂರ ಜೀವ ಸಂತತಿ....

) ಮನುಷ್ಯ ಹುಲಿಯನ್ನು ಕೊಂದರೆ ಶೌರ್ಯ, ಆದರೆ ಹುಲಿ ಮನುಷ್ಯನನ್ನು ಕೊಂದರೆ ಕ್ರೌರ್ಯ! (ಜಾರ್ಜ್ ಬರ್ನಾಡ್ ಶಾ) ನನ್ನ ಪ್ರಕಾರ ಪ್ರಾಣ ರಕ್ಷಣೆಗೆ ಹೊರತಾದ ಎಲ್ಲಾ ತರಹದ ಪ್ರಾಣಿಹತ್ಯೆಯೂ ಕ್ರೌರ್ಯವೇ... ಆದರೆ ಮನುಷ್ಯ ಕಾಡನ್ನು ನೆಲಸಮ ಮಾಡಿ, ಪ್ರಾಣ ರಕ್ಷಣೆಯೆಂದು ಆಗಲೂ ಪ್ರಾಣಿಹತ್ಯೆ ಮಾಡುತ್ತಾನೆ. ಮನುಷ್ಯನಿಗೆ ವಿಕೃತಿ ತೋರಲು ಕಾರಣ ಬೇಕು, ಅಷ್ಟೇ.

ನಾನಿಲ್ಲಿ ಕೊಟ್ಟಿರುವುದುನನಿಯಲ್ಲಿ ದಾಖಲಾಗಿರುವ ಕೆಲವೇ ಕೆಲವು ನನ್ನಿಗಳನ್ನು. ಅವುಗಳ ಪೂರ್ಣ ಪಾಠಕ್ಕೆ ಕಾದಂಬರಿಯ ಸಮಗ್ರ ಓದು, ಚಿಂತನೆ ಅತ್ಯಗತ್ಯ. ಇಲ್ಲಿ ಕಾಣ ಸಿಗುವ, ಕುಕ್ಕುವ, ಕರಗಿಸುವ, ಬೆಚ್ಚಿಸುವ, ಕಣ್ಮುಚ್ಚಿ ದಿಟ್ಟಿ ಹೊರಳಿಸಲು, ನಿರ್ಲಕ್ಷಿಸಿ ತಾತ್ಕಾಲಿಕ ನೆಮ್ಮದಿ ಪಡೆಯಲು ಪ್ರೇರೇಪಿಸುವ ಸತ್ಯವು ನಿಜವಾಗಿಯೂ ಉರಿವ ಸೂರ್ಯನಂತೇ. ಹತ್ತಿರ ಹೋದರೂ ಸಾವು, ದೂರ ಹೋದರೂ ಸಾವೇ. ಕಾದಂಬರಿಯಲ್ಲೆಲ್ಲೋ ಬರುವಂತೇ.. ‘ಇಲ್ಲಿ ನಾವು ವಿಮರ್ಶಿಸಬೇಕಾದದ್ದು ಸತ್ಯಕ್ಕೆ ಯಾರು ಹತ್ತಿರವಿದ್ದಾರೆ ಎಂದೇ ಹೊರತು ಸತ್ಯವನ್ನು ಮುಟ್ಟಿದವರು ಯಾರು ಎಂದಲ್ಲ.’  ಅಂತಹ ಸತ್ಯವನ್ನು ಜಾಗೃತಿಯಲ್ಲೇ, ಜಾಗೃತೆಯಿಂದ ತಡವುವ, ಕೊಂಚ ವಿಶಾದದೊಂದಿಗೇ ಸ್ವೀಕರಿಸುವ ಸಣ್ಣ ಅವಕಾಶ ಓದುಗರಾದ ನಮಗೆ ಕಲ್ಪಿಸುತ್ತದೆನನ್ನಿ’. 

***

"ನನ್ನೀ" ಓದಾಯಿತು, ವಿಮರ್ಶೆ ಬರೆಯುವಷ್ಟು ದೊಡ್ಡವನಲ್ಲ ನಾನು ಆದರೂ ಕೃತಿಯ ಬಗ್ಗೆ ಬರೆಯಲೇಬೇಕು ಅನಿಸಿದ್ದಕ್ಕೆ ಬರೆಯುತ್ತಿದ್ದೇನೆ - ಪವನ್ ಪ್ರಾಸದ್ ಅವರ ಮೊದಲ ಕೃತಿ "ಕರ್ಮ" ಕಾದಂಬರಿಯನ್ನು ಒಂದೇ ಸಮನೆ ಓದಿ ಮುಗಿಸಿದ್ದೆ ಆದರೆ "ನನ್ನೀ" ಹಾಗೆ ಒಂದೇ ಗುಟಿಕಿನಲ್ಲಿ ಓಡಿಬಿಡುವ ಕಾದಂಬರಿ ಅಲ್ಲ ಇದರ ವಸ್ತು ನಮ್ಮನ್ನು ಆಳವಾದ ಚಿಂತನೆಯಲ್ಲಿ ಮುಳುಗಿಸುತ್ತದೆ .... ಸತ್ಯ ಎಂದರೆ ಸೂರ್ಯನಿದ್ದಂತೆ ಹತ್ತಿರ ಹೋದರೂ ಸಾವು ದೂರ ಹೋದರೂ ಸಾವು ಕೃತಿಯ ಮುಖ್ಯ ಪಾತ್ರಧಾರಿ ಸಿಸ್ಟರ್ ರೋಣ ಸತ್ಯದ ಹುಡುಕಾಟದಲ್ಲಿ ಕಂಡುಕೊಳ್ಳುವ ಸತ್ಯ ... ಸಮಕಾಲಿನವಲ್ಲದ ವಸ್ತುವನ್ನು ಇಷ್ಟು ಪರಿಣಾಮಕಾರಿಯಾಗಿ ಮತ್ತು ಅಷ್ಟೇ ಸೊಗಸಾಗಿ ಚಿತ್ರಿಸಲಾಗಿದೆ ಇದು ವಸ್ತುವಿನ ಮೇಲೆ ಲೇಖಕರ ಸಂಶೋಧನೆ ಮತ್ತು ಅಧ್ಯಯನವನ್ನು ತೋರುತ್ತದೆ. ಇಲ್ಲಿ ಬರುವ ಚಾರಿಟಿ ಮಿಶನ್, ಮದರ್ ಎಲಿಸಾ ,ಸಿಸ್ಟರ್ ರೋಣ ಹಾಗು ಅಲ್ಲಿ ನಡೆಯುವ ಘಟನೆಗಳು ಗೌಪ್ಯಗಳು ಸತ್ಯದ ಅನಾವರಣ ಕೇವಲ ಪಾತ್ರಗಳಿಗೆ ಸೀಮಿತವಲ್ಲ ಇಲ್ಲಿ ಸಿಸ್ಟರ್ ರೋಣ ಮೂಲಕ ಪ್ರತಿ ಓದುಗ ಮಾನವನ ಮೂಲಭೂತವನ್ನು ಹುಡುಕಿಕೊಳ್ಳುತ್ತಾನೆ ಒಂದು ಹಂತದಲ್ಲಿ ಇದರಲ್ಲಿ ಬರುವ "ಎರಿಕ್ ಬರ್ಗ್" ಅವರ ಚಿಂತನೆ ಹುಟ್ಟಿಸುವ ಸಾಲುಗಳು ಬಹಳ ಅದ್ಬುತವಾಗಿ ಮೂಡಿಬಂದಿದೆ ಕೊನೆಯಲ್ಲಿ ಫಾಬ್ರಿಗಾಸನೇ ಎರಿಕ್ ಬರ್ಗ್ ಎನ್ನುವುದು ಬೆಚ್ಚಿಬೀಳಿಸುವ ಮತ್ತೊಂದು ಸತ್ಯ. ನನ್ನ ಪ್ರಕಾರ ಕಾದಂಬರಿಗಳಲ್ಲಿ ಎರಡು ವಿಧ ಮನರಂಜನೆ ಮತ್ತು ಶುದ್ಧಸಾಹಿತ್ಯ ... ಮನರಂಜನೆಯನ್ನು ಕೇಂದ್ರವಾಗಿಸಿಕೊಂಡು ಬರೆಯುವವರು ನಮ್ಮಲ್ಲಿ ಹೆಚ್ಚು ಆದರೆ ಒಂದು ಕಾದಂಬರಿ ಚಿಂತನೆಗಳನ್ನು ಹುಟ್ಟಿಸುವಲ್ಲಿ ಮತ್ತು "ಚರ್ಚೆ" ಹುಟ್ಟುಹಾಕುವಲ್ಲಿ ಯಶಸ್ವಿಯಾಗುವ ಕಾದಂಬರಿ ಶುದ್ದ ಸಾಹಿತ್ಯವಾಗುತ್ತದೆ 
***

ಯಾವುದೇ ಪೂರ್ವಾಗ್ರಹಗಳಿಲ್ಲದೆ ನನ್ನಿ ಓದಿ ಮುಗಿಸಿದೆ. ಓದಿದ ನಂತರ ಕೆಲವು ಸಾಲುಗಳನ್ನು ಹೇಳಿಕೊಳ್ಳಬೇಕಿರುವುದು ಓದುಗನ ಆದ್ಯ ಕರ್ತವ್ಯ..
***
ಬರೆಯುವಾಗ ಕರಣಂ ಪವನ್ ಪ್ರಸಾದ್ ಎಷ್ಟು
ಶ್ರಮಪಟ್ಟಿದ್ದರು ಅನ್ನುವುದು ನನ್ನಿಯ ಪ್ರತಿ ಪುಟಗಳಲ್ಲಿ ವ್ಯಕ್ತವಾಗುತ್ತದೆ. ಕಲ್ಕತ್ತಾದ ಕಾಳಿ ಘಾಟ್ ದ್ನಾರಾಪುರ ಸ್ಲಮ್ ಹಾಗೂ ಬೆಂಗಳೂರಿನ ತೇಗೂರು ವಳಿಗರು ಹಾಗೂ ಹಲಸೂರು ಚರ್ಚ್ ನಡುವೆ ಕಲ್ಪಿಸಲಾಗಿರುವ ಸಂಪರ್ಕ ಓದುಗರಿಗೆ ಇಷ್ಟವಾಗುತ್ತದೆ
***
ಸಿಸ್ಟರ್ ರೋಣ, ಸಿಸ್ಟರ್ ಶುಭ, ಸಿಸ್ಟರ್ ಸೂಫಿ, ಮದರ್ ಎಲಿಸಾ, ಮಿಲ್ಟನ್ ಫ್ಯಾಬ್ರಿಗಾಸ್, ಡೋರಾ, ಫಾದರ್ ರಾಜನ್, ಸಿಸ್ಟರ್ ಕ್ಲಾಡಿಯಾ, ಸೋಮಶೇಖರ್, ವಿಜಯಮ್ಮ, ವನಿತಾ, ವೀಣಾ, ಪ್ರಸನ್ನ, ಶೇಷಾಚಲ ರಾಯರು, ಮುಖ್ಯವಾಗಿ ಜಾರ್ಜ್ ರಾಯಪ್ಪ, ಸಗಾಯ್ ಮೇರಿ ಹಾಗೂ ಕ್ಯಾಥರಿನ್ ಓದಿನುದ್ದಕ್ಕೂ ಗಾಂಭಿರ್ಯದಲ್ಲೇ ಕಾಣಿಸಿಕೊಳ್ತಾರೆ. ಯಾವ ಪಾತ್ರಗಳೂ ಹೆಚ್ಚು ಕಡಿಮೆಯಾಗದಂತೆ ನಿರೂಪಿಸಲ್ಪಟ್ಟಿವೆ. ಸನ್ನಿವೇಶ ಹಾಗೂ ಸಂಸ್ಕ್ರತಿಗಳನ್ನು ಬ್ಯಾಲನ್ಸ್ ಮಾಡುವಲ್ಲಿ ಕರಣಂ ಸಫಲರಾಗಿದ್ದಾರೆ.
***
ಸಿಸ್ಟರ್ ರೋಣ ಪಾತ್ರದ ಮೂಲಕ ಹೆಣ್ಣಿನ ಆಂತರಿಕ ತುಮುಲಗಳನ್ನು ಪವನ್ ಮನೋಜ್ಞವಾಗಿ ಮನಕಲಕುವಂತೆ ಚಿತ್ರಿಸಿದ್ದಾರೆ. ಕಲ್ಕತ್ತಾದ ಸೇವಾ ಸಂಸ್ಥೆಯಲ್ಲಿ ರೋಣ ಅಲಿಯಾಸ್ ದುರ್ಗಾ ಅನುಭವಿಸಿದ ನರಕದ ನಿಜದರ್ಶನ ಓದುಗರಿಗೂ ಆಗುತ್ತದೆ. ಸೇವೆಗೂ ಸ್ವಾರ್ಥಕ್ಕೂ ಇರುವ ವ್ಯತ್ಯಾಸವನ್ನು ಹುಡುಕಿಕೊಳ್ಳುವ ರೋಣಾಗೆ ಮಿಲ್ಟನ್ ಫ್ಯಾಬ್ರಿಗಾಸನ ನೆರವು ಬೇಕಾಗುತ್ತದೆ. ನನ್ ಒಬ್ಬಳು ತನ್ನ ಪತಿ ಕ್ರಿಸ್ತನನ್ನು ತನ್ನದೇ ಭಾವನಾತ್ಮಕ ಕೋನಗಳಿಂದ ಚಿತ್ರಿಸುವ ಪರಿ ನಿಜಕ್ಕೂ ಅದ್ಭುತ. ಇಲ್ಲಿ ಪವನ್ ಪ್ರಸಾದ್ ಸೃಜನಶೀಲತೆ ಕ್ರಿಯಾತ್ಮಕ ಕೆಲಸ ಮಾಡಿದೆ. ವಾಸ್ತವವನ್ನು ಸಮರ್ಪಕವಾಗಿ ಕಟ್ಟಿಕೊಡುವ ಲೇಖಕ ಎರಿಕ್ ಬರ್ಗ್ ಹಾಗೂ ಮಿಲ್ಟನ್ ಫ್ಯಾಬ್ರಿಗಾಸ್ ನಡುವಿನ ಸಂಬಂಧ ಕಾದಂಬರಿಯ ಕೊನೆಯಲ್ಲಿ ಓದುಗರ ಹುಬ್ಬೇರಿಸುತ್ತದೆ..
***
ಗಾಂಧಿಯ ಸತ್ಯಾನ್ವೇಷಣೆ ವೈಯಕ್ತಿಕ ನೆಲಗಟ್ಟಿಗೆ ಸಂಂಬಂಧಪಟ್ಟಿದ್ದರೇ, ಸಿಸ್ಟರ್ ರೋಣಾಳ ಬದುಕಿನ ಸತ್ಯಾನ್ವೇಷಣೆಯ ಪ್ರಯತ್ನ ಒಂದಿಡೀ ಸಮುದಾಯದ ನಂಬಿಕೆಯ ದೃಢ ತಳಹದಿಗೆ ಸಂಬಂಧಪಟ್ಟಿದ್ದು. ಕಾದಂಬರಿಯಲ್ಲಿ ಧರ್ಮ ಜಿಜ್ಞಾಸೆ ಹಾಗೂ ವ್ಯಾಟಿಕನ್ ರಾಜಕಾರಣದ ನಿರ್ವಿವಾದಿತ ಸೂಕ್ಷ್ಮ ಅವಲೋಕನಗಳಿವೆ.
***
ಕರ್ಮ ಕಾದಂಬರಿ ಬರೆದ ನಂತರ ಎರಡನೆಯ ಪ್ರಯತ್ನವೆಂಬಂತೆ ನನ್ನಿ ಬಿಡುಗಡೆಗೊಳಿಸಿದ ಪವನ್ ಪ್ರಸಾದ್ ಮೇಲೆ ಓದುಗರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ನಿರೀಕ್ಷೆಯನ್ನು ಪವನ್ ಹುಸಿಗೊಳಿಸಿಲ್ಲ. ಕಾದಂಬರಿಯ ವಾಸ್ತವ ಸತ್ಯಗಳ ಹುಡುಕಾಟದಲ್ಲಿಯೇ ಸಾಕಷ್ಟು ಗಟ್ಟಿತನವಿದೆ.. ಎರಡನೇ ಕಾದಂಬರಿಯಲ್ಲಿ ತಮ್ಮದೇ ಸ್ವಂತ ನಿರೂಪಣಾ ಶೈಲಿ ಬೆಳೆಸಿಕೊಳ್ಳಲು ಪವನ್ ಯತ್ನಿಸಿದ್ದು ಕಂಡುಬರುತ್ತದೆ. ಆದರೆ ಪ್ರಸಾದ್ ಇನ್ನೂ ಬೈರಪ್ಪನವರ ಪ್ರಭಾವದಿಂದ ಹೊರಬಂದಿಲ್ಲ ಅನ್ನುವುದಕ್ಕೆ ಕಾದಂಬರಿಯನ್ನು ಅವರು ಮುಗಿಸಿರುವುದೇ ಸಾಕ್ಷಿ..
***
ಸ್ವತಃ ಕರಣಂ ಹೇಳುವಂತೆ ಕೇವಲ ಟೈಂ ಪಾಸ್ ಗೆ ಮಾತ್ರವಲ್ಲದೇ ಒಂದು ಪ್ರಬುದ್ಧ ವಿಚಾರ ಅರಿಯಲು ನನ್ನಿ ಓದಬೇಕಿದೆ.. ಓದಿದ ನಂತರ ಒಂದು ಆರೋಗ್ಯಕರ ಚರ್ಚೆ ನಡೆಸುವುದಾದರೆ ನನ್ನಿಯ ಕಥಾವಸ್ತು ಉತ್ತಮ ವಿಷಯ..
-ವಿಭಾ
***

ಚಳಿಯ ಕೊರೆಯುವ ದಿನಗಳಲ್ಲಿ, ತಣ್ಣನೆಯ ನೀರಲ್ಲಿ ಕಾಲಿಟ್ಟು ಬಿಟ್ಟರೆ ಒಮ್ಮೆಲೇ ಮಿಂಚು ಸಂಚಾರವಾದಂತಾಗಿ ಹಿಂತೆಗೆದುಕೊಂಡು ಬಿಡೋಣ ಅನಿಸುತ್ತದೆ. ಆದರೆ ಹಾಗೆಯೇ ಮುಂದುವರಿದು ಒಂದೆರಡು ಹೆಜ್ಜೆ ಇಟ್ಟು ಮುಂದುವರಿದು ಅಪ್ಪಿಕೊಂಡರೆ ಬೆಚ್ಚನೆಯ ಅನುಭವವಾಗುತ್ತದೆ. ‘ನನ್ನಿಯಲ್ಲಿ ನನಗೆ ಕಂಡದ್ದು ಹಾಗೆಯೇ…. ಅಪರಿಚಿತ,ಅಪರೂಪದ ಕಥಾಹಂದರದಲ್ಲಿ ಓದುಗನನ್ನು ಕೂರಿಸುತ್ತದೆ. ನನ್ ಒಬ್ಬರ ಮನದಾಳಕ್ಕಿಳಿದು ನೋಡುವ ಚರ್ಚಿನ,ಮಿಷನರಿಗಳ ನೋಟ ಅಚ್ಚರಿಯೆನಿಸುತ್ತದೆ. ಸೇವೆಯ ವಿವಿಧ ಮುಖಗಳು, ಸೇವಾಕೇಂದ್ರದ ಒಳಹೊರಗನ್ನು ಬಿಚ್ಚಿಡುವ ಕಥೆ ಕುತೂಹಲಕಾರಿಯಾಗಿದೆ. ಸತ್ಯಾನ್ವೇಷಣೆಯೇ ಮೂಲವಾಗಿರುವ ಕಾದಂಬರಿ ನನ್ ಮಾತ್ರವಲ್ಲದೆ ಪ್ರತಿಯೊಬ್ಬರ ಜೀವನದ ತತ್ವಗಳ ಮೇಲೆ ಪ್ರಶ್ನೆಯೆತ್ತುತ್ತದೆ. ಸತ್ಯಕ್ಕೆ ಹತ್ತಿರವಾದರೂ ,ದೂರವಾದರೂ ಸಾವು ಎಂಬ ತರ್ಕಕ್ಕೆ ಒಡ್ಡುತ್ತದೆ.
ಕಾಳಿಘಾಟಿನಲ್ಲಿ ಬಡತನದ ಚಿತ್ರಣ ಮತಾಂತರವಾದ ಸಮಯದ ಬಗೆಗಿನ ಕಲ್ಪನೆ ನೀಡುತ್ತದೆ. ದೇವರ ಹೆಸರಿನಲ್ಲಿ ನಡೆಯುವ ವ್ಯವಸ್ಥೆಯ ಹುಳುಕನ್ನು, ಒಳಗಿನ ಆಚಾರಗಳನ್ನು ಇದು ದಿಟ್ಟವಾಗಿ ಬಿಂಬಿಸಿದೆ. ‘ಫಾಬ್ರಿಗಾಸ್ಪಾತ್ರದ ಚಿತ್ರಣದಲ್ಲಿ ಸತ್ಯಾನ್ವೇಷಣೆಯ ದಿಕ್ಕನ್ನು ನಿಷ್ಠುರವಾಗಿ ಮತ್ತು ನಿಷ್ಪಕ್ಷಪಾತವಾಗಿ ತೆಗೆದುಕೊಂಡು ಹೋಗಿರುವುದು ಶ್ಲಾಘನೀಯ.ಮುಖ್ಯಪಾತ್ರವನ್ನು ನಾಯಕಿಯಂತಲ್ಲದೇ ದೌರ್ಬಲ್ಯಗಳನ್ನು ಕೂಡಿಸಿ ರೂಪಿಸಿರುವುದು ಕಾದಂಬರಿಯು ಮನಸಿಗೆ ಹತ್ತಿರವಾಗುತ್ತದೆ. ಧಾರ್ಮಿಕ ಸಂಘಟನೆಗಳಲ್ಲಿರುವ ಮೂಢನಂಬಿಕೆಗಳು ಅದರಲ್ಲಿನ ಅಸಹಾಯಕ ಕ್ಷಣಗಳು ಇದರ ಉತ್ತಮ ಅಂಶ.
ನನ್ನಿಯನ್ನು ಸತ್ಯದ ನೆಲೆಯಲ್ಲಿ ಬರೆಯಲಾಗಿದೆ ಎಂದು ಹಿನ್ನುಡಿಯಲ್ಲಿ ಸ್ಪಷ್ಟ ಪಡಿಸಿರುವುದರಿಂದ ಇದೊಂದು ಓದಿ ಮರೆಯುವ ಸಾಮಾನ್ಯ ಕಥೆ ಅನಿಸುವುದಿಲ್ಲ. ಕಥೆಯ ಭೂಮಿಕೆ ವಿಭಿನ್ನವಾಗಿರುವದರಿಂದಲೋ, ಇಂಗ್ಲಿಷ್ ನೆರಳಿನಿಂದಲೋ ಓದುವಾಗ ನಿರೂಪಣೆಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಮುಗಿದಾಗ ಪ್ರಶ್ನೆಗಳು, ಅಚ್ಚರಿಗಳು ತುಂಬಿ ಸರಿತಪ್ಪುಗಳ ತುಲನೆಯಲ್ಲಿ ಜಾರುತ್ತೇವೆ.
ಕರ್ಮ ಅನುಭೂತಿಯಿಂದ ನಿರೀಕ್ಷೆ ಹೆಚ್ಚಿಸಿದ ಕೃತಿಯಾದರೂ ಅದರ ಯಾವುದೇ ಎಳೆಯೂ ಕಾಣದೆ ಸಂಪೂರ್ಣ ವಿಭಿನ್ನವಾಗಿ ಸ್ವತಂತ್ರವಾಗಿದೆ. ಚರ್ಚಿನ ಕಿಟಕಿಯಲ್ಲಿ ಇಣುಕಿ ಅಲ್ಲಿನ ನೈಜತೆ ಹೇಳಿ, ಅದರೊಂದಿಗೆ ಮನಸಿನಾಳದ ಸತ್ಯಾನ್ವೇಷಣೆಗೆ ತೊಡಗಿ ಸಾಕಷ್ಟು ಪ್ರಶ್ನೆ ಮೂಡಿಸುವ ಕೃತಿ ಚೆನ್ನಾಗಿದೆ. ಯಾವುದೇ ನಿಲುವಿಗೆ ಅಂಟಿಕೊಳ್ಳದೆ ಅನ್ವೇಷಣೆಯ ದಾರಿಯಲ್ಲಿ ಸಾಗುತ್ತದೆ ನನ್ನಿಯ ಜೊತೆಗಿನ ಪಯಣ. ಕನ್ನಡದ ಓದುಗರಿಗೆ ಒಳ್ಳೆಯ, ಹೊಚ್ಚ ಹೊಸ ಕಾದಂಬರಿಯೊಂದು ಕಳೆದು ಹೋಗಲು, ಚಿಂತಿಸಲು ದೊರಕಿದೆ.
***
"ನನ್ನಿ" ಕರ್ಮ ಕಾದಂಬರಿಯ ಲೇಖಕರಾದ ಶ್ರೀ Karanam Pavan Prasad
ಅವರಿಂದ ನಿರೀಕ್ಷಿಸಲ್ಪಟ್ಟ ಉತ್ತಮ ಕಾದಂಬರಿ. ಓದಿ ಮುಗಿಸಿದ ಕ್ಷಣದಲ್ಲಿ ಹಂಚಿಕೊಳ್ಳಬಹುದಾದ ತತ್ಕ್ಷಣದ ಅನಿಸಿಕೆಗಳಿಷ್ಟು ..
ಕಾದಂಬರಿ ಕುರಿತು ಹೇಳಬೇಕೆಂದರೆ ವಿಷಯದ ವ್ಯಾಪ್ತಿ ದೊಡ್ಡದು. ಒಂದು ಮುಖವನ್ನಷ್ಟೇ ಎತ್ತಿಕೊಂಡಿದ್ದರೂ ಕಥೆಗೆ ಪೂರಕವಾದ ಮಾಹಿತಿಗಳಿವೆ. ಅಧ್ಯಯನಾಸಕ್ತರು ಕುಳಿತು ಓದುತ್ತಾರೆ. ಫಾಬ್ರಿಗಾಸನ ಮೂಲಕ ಹೇಳಲು ಹೊರಟಿರುವ ಅನೇಕ ವಿಷಯಗಳು ಮನಸ್ಸನ್ನು ಕಲಕುತ್ತವೆ. ವಿಚಾರಕ್ಕೆ ಹಚ್ಚುತ್ತದೆ. ಮಂಥನದ ನಡುವೆ ವೈಚಾರಿಕತೆ ಇದೆ. ಇವನ್ನೆಲ್ಲ ಓದುವಾಗ ಒಮ್ಮೊಮ್ಮೆ ವಿಷಯದ ಗಹನತೆ ಎಲ್ಲೋ ಗಂಭೀರ ಅನ್ನಿಸಿದರೂ ಮತ್ತೆ ಕಥೆಗೆ ಮರಳುವಾಗ ಸಹಜವಾಗುತ್ತದೆ. ಅದು ತುಂಬಾ ದೀರ್ಘಕಾಲದವರೆಗೆ ಎಳೆದುಕೊಳ್ಳುವುದಿಲ್ಲ. ಕಥೆಯಿಂದ ಓದುಗನನ್ನು ಹೊರಗಿಡುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಕಥೆಯ ಚಿಂತನೆಗಳು ಕೇವಲ ಕ್ರಿಶ್ಚಿಯಾನಿಟಿಗೆ ಸೀಮಿತವಾದುದಲ್ಲ. ಅದು ಮನುಕುಲದ ವಿಚಾರ. ಓದುಗ ಧರ್ಮದ ಸೀಮಿತತೆಯಿಂದ ಹೊರಬಂದು ಓದಿಕೊಳ್ಳಬೇಕು. ಇದು ಎಷ್ಟುಜನರಿಗೆ ಅರ್ಥವಾಗುತ್ತೋ ದೇವರೇ ಬಲ್ಲ.
ಉಳಿದಂತೆ ಒಂದು ಧರ್ಮದ ಹೆಸರಿನಲ್ಲಿ ನಡೆಯುವ ನಡೆಸುತ್ತಿರವ ಅದು ಹಬ್ಬಿರುವ ಎಲ್ಲ ವಿಚಾರಗಳನ್ನೂ ಕಾದಂಬರಿ ಅತ್ಯಂತ ಸೂಕ್ಷ್ಮವಾಗಿ ನಿರೂಪಿಸುತ್ತದೆ. ಕಥೆಗೆ ಪೂರಕವಾಗಿ ಬಂದಿರುವುದರಿಂದ ಅದರ ವಿಮಶರ್ೆಗೆ ಬಹಳಷ್ಟು ವಿಸ್ತಾರವಿರುವುದರಿಂದ ವಿಷಯ ಇಲ್ಲಿ ತೆಗೆದುಕೊಳ್ಳುವುದಿಲ್ಲ.
ಸಿಸ್ಟರ್ ರೋಣ ಒಂದು ವ್ಯವಸ್ಥೆಯ ಕನ್ನಡಿಯಂತೆ ಹೊರಮುಖವಾಗಿ ತೋರಿದರೂ ನನಗೆ ಕಂಡಿದ್ದು ಅವಳ ಒಳಮುಖ. ಹಲವು ಸಲ ಅವಳು ಸಿಟ್ಟಿಗೇಳುತ್ತಾಳೆ.ರೋಧಿಸುತ್ತಾಳೆ. ಅಳುತ್ತಾಳೆ. ಅಷ್ಟೇ ಅಲ್ಲ ತನ್ನನ್ನು ತಾನು ನಿಯಂತ್ರಿಸಿಕೊಳ್ಳುವ ಪ್ರಯತ್ನ ಮಾಡುತ್ತಾಳೆ. ಸಹಜವಾದ ಪಾತ್ರಾಭಿವ್ಯಕ್ತಿ. ತುಂಬಾ ಸ್ಮಾರ್ಟ ಅನ್ನಬಹುದು.
ನನಗೆ ಇಷ್ಟವಾದದ್ದು. ಅವಳು ಕ್ರಿಸ್ತನೇ ಗಂಡ ಅನ್ನುತ್ತಲೂ ಫಾಬ್ರಿಗಾಸನ ಪ್ರೇಮವನ್ನು ಮನಸ್ವೀ ಒಪ್ಪಿಕೊಂಡು ಅಪ್ಪಿಕೊಂಡು ನಿಂತುಬಿಡುವುದು. ಎಲ್ಲಕ್ಕಿಂತ ಹೆಚ್ಚಾಗಿ ಇಷ್ಟೆಲ್ಲದರ ನಡುವೆ ಅವಳೆಲ್ಲೋ ಆದರ್ಶಗಳ ಮೂಟೆ ಹೊತ್ತು ಅನಾಮತ್ತು ಏನೂ ಮಾಡದೇ ನನ್ ಆಗಿ ಸಿಸ್ಟರ್ ಆಗಿ ಅದೇ ವಲಯದಲ್ಲಿ ಬದುಕನ್ನು ಮತ್ತೆ ಮತ್ತೆ ಹುಡುಕುವುದು.
ಮನುಷ್ಯ ತನಗೆ ಗೊತ್ತಿಲ್ಲದ ಏನನ್ನೋ ಮಾಡಿಬಿಡುವುದು ಅಸಹಜ ಅನ್ನಿಸುತ್ತದೆ. ಅವನು ಸ್ವಲ್ಪ ಆಕಡೆ ಈಕಡೆ ಅನ್ನಿಸಿದರೂ ತನಗೆ ಗೊತ್ತಿರುವ ಬಗೆಯಲ್ಲೇ ಬದುಕು ಹುಡುಕುವ ಪ್ರಯತ್ನ ಮಾಡುತ್ತಾನೆ. ಆದರೆ ರಾಯಪ್ಪನ ಕೊನೆಯಲ್ಲಿ ಫಾದರ್ ಮಾಂಸ ಭಕ್ಷಣೆ ಮನಸ್ಸಿಗೆ ಕಷ್ಟವೆನ್ನಿಸಿತು. ರಾಯಪ್ಪನ ಪೂರ್ಣ ಚಿತ್ರಣದಲ್ಲಿ ಅವನೊಬ್ಬ
ಅತ್ಯುತ್ತಮ ಅಪ್ಪ. ಅವನೊಬ್ಬ ಸಹೃದಯವಂತ. ಅವನ ಮಗಳಿಗಾಗಿ ವನಿತಳಿಗಾಗಿ ಅವನಲ್ಲಿ ತಾಯಿಯಂತ ಅಂತಃಕರಣವಿತ್ತು. ಮನುಷ್ಯನ ಚಿತ್ರಣದಲ್ಲಿ ಅಲ್ಲೆಲ್ಲೋ ಮಾಂಸ ಭಕ್ಷಣೆಯ ವಿಷಯ ಬಂದರೂ ಅದೊಂದು ವಿಕ್ಷಿಪ್ತ ವಿಷಯದಂತೆ ಹೊರಗೇ ಉಳಿದುಬಿಡುತ್ತದೆ. ಆದರೆ ಕೊನೆಯ ಅಂಕ ಮಾತ್ರ ಯಾಕೋ ಮನಸಿಗೆ ಕಷ್ಟವೆನ್ನಿಸುತ್ತದೆ.
ಸಲಿಂಗ ಕಾಮದ ಕುರಿತಾಗಿ ನಾನು ಬರೆಯುವುದಿಲ್ಲ. ಪ್ರಪಂಚದ ಬಹಳಷ್ಟು ವಿಕೃತಿಗಳು ಸಹಜ ಎಂಬಂತೆ ನಡೆದುಹೋಗುತ್ತವೆ ಎನ್ನುವ ನಿಮ್ಮದೇ ಮಾತನ್ನು ತುಂಬ ಚಂದವಾಗಿ ಕಟ್ಟಿಕೊಟಿದ್ದೀರಿ. ಕ್ಷಣಕ್ಕೆ ಇಷ್ಟು ಅನಿಸಿಕೆಗಳು. ಮನಸಿಗೆ ತಾಕಿದ ಹಲವು ಅಂಶಗಳು ಮಥನವಾಗುತ್ತಿರುತ್ತವೆ. ಒಂದೊಳ್ಳೆಯ ಓದಿಗೆ ಚಿಂತನೆಗೆ ಅತ್ಯುತ್ತಮ ಕಾದಂಬರಿ. ಕೊಂಡು ಓದುವ ಎಲ್ಲರಿಗೂ ಖುಷಿಕೊಡುವ ತಾಜಾತನದ ಬರವಣಿಗೆ.

'ನನ್ನಿ' ಕಥೆಯ ಬಗ್ಗೆ ಹೇಳಿದರೆ ಓದುಗರಿಗೆ ತಾಜಾತನ ಮತ್ತು ಕುತೂಹಲ ಕಡಿಮೆ ಆದಂತೆ ನನ್ನ ಭಾವನೆ, ಆದ್ದರಿಂದ ಇಲ್ಲಿ ನಾನು ಬರೀ ಲೇಖಕರ ಬಗ್ಗೆಯೇ ಒಂದೆರಡು ಮಾತು ಹೇಳುತ್ತೇನೆ. 'ಕರ್ಮ' ದಲ್ಲೇ ಓದುಗರ ಆಕರ್ಷಿಸಿದ್ದ ಲೇಖಕ Karanam Pavan Prasad ಪ್ರಥಮ ಪಂದ್ಯದಲ್ಲೇ ಶತಕ ಹೊಡೆದು ಬಹಳ ನಿರೀಕ್ಷೆ ಮೂಡಿಸಿದಂತಹ ಯುವ ಲೇಖಕ. ತಮ್ಮ ಎರಡನೇ ಕಾದಂಬರಿಯಲ್ಲಿ ಬೇರೆಯೇ ವಸ್ತುವಿನ ಬಗ್ಗೆ ಬಹಳ ಆಳವಾದ ಅಧ್ಯಯನ, ನಿರೂಪಣಾ ಶೈಲಿ, ಓದುಗರನ್ನೇ ಸಹ ಪಾತ್ರಧಾರಿಯಾಗಿಸುವಂತಹ ಅವರ ರಂಗಭೂಮಿಯ ಅನುಭವ ಇಲ್ಲಿ ಬಹಳ ಉಪಯೋಗವಾಗಿದೆ. 'ನನ್ನಿ' ಶೀರ್ಷಿಕೆಯೇ ಬಹಳ ಚೆಂದ ಮತ್ತು ಕುತೂಹಲ ಮೂಡಿಸುತ್ತದೆ!
ಕಾದಂಬರಿಯ ಕಾಲಘಟ್ಟವನ್ನು ದೃಢೀಕರಿಸಲು ಉಪಯೋಗಿಸಿರುವ ಉದಾಹರಣೆಗಳು ತುಂಬಾ ವಿಭಿನ್ನವಾಗಿವೆ, ಅದರಲ್ಲೂ ನಾ ಕಂಡ ನನ್ನ ಹಳೆಯ ಬೆಂಗಳೂರನ್ನು ನೆನಪಿಸುವ ಪ್ರಸಂಗಗಳು ನನ್ನ ಬಾಲ್ಯದ ನೆನಪಿಗೆ ಜಾರಿಸಿ ಕಥೆಯಲ್ಲಿ ಇನ್ನೂ ಆಳವಾಗಿ ಪ್ರವೇಶಿಸುವಂತೆ ಮಾಡಿತು. ಕಾದಂಬರಿಯ ಯಾವ ಪಾತ್ರವೂ ಅನಗತ್ಯವೆನಿಸದೆ ಕಥೆಯ ಓಟಕ್ಕೆ ಪೂರಕವಾಗಿವೆ.
ಯುವ ಸಾಹಿತಿಗಳ ಕೊರತೆಯನ್ನು ನೀಗಿಸುವಲ್ಲಿ ಹಾಗೂ ಗಟ್ಟಿ ಕಥಾ ವಸ್ತುವಿನ ಆಯ್ಕೆಯಲ್ಲಿ ಆಳವಾದ ಅಧ್ಯಯನ ಮಾಡುವ ಯುವಕರಿದ್ದಾರೆ ಎಂಬುದೇ ಒಂದು ಸಂತಸದ ಸುದ್ದಿ, ಕರಣಂ ಅವರ ಕೃತಿಗೆ ನನ್ನ ಮೆಚ್ಚುಗೆ ಸೂಚಿಸುತ್ತಾ ಹಾಗೂ ಮುಂದಿನ ಅವರ ಕೃತಿಗಳಿಗೆ ಶುಭಕೋರುತ್ತೇನೆ