Sunday, November 29, 2015

ಜಗತ್ತಿನ ಕಿರಿಯ ವೆಬ್ ಡಿಸೈನರ್ ಶ್ರೀಲಕ್ಷ್ಮಿ ಸುರೇಶ್

ವೆಬ್ ಸೈಟುಗಳನ್ನು ರಚಿಸಲು ಸಾಕಷ್ಟು ಕಂಪ್ಯೂಟರ್ ಜ್ಞಾನ ಅಗತ್ಯ ಎನ್ನುವುದು ನಮಗೆಲ್ಲಾ ತಿಳಿದಿರುವ ಸಂಗತಿ. ಅದಕ್ಕಾಗಿಯೇ ಸಾಕಷ್ಟು ಕೋರ್ಸ್ ಗಳೂ ಇರುತ್ತವೆ. ಅಂತಹಾ ಕೋರ್ಸ್ ಮಾಡದೆಯೂ ವೆಬ್ ಸೈಟ್ ರಚಿಸಬಹುದು ಎನ್ನುವುದನ್ನು ಸಾಡಿಸಿ ತೋರಿಸಿದಾಕೆ ಶ್ರೀಲಕ್ಷ್ಮಿ ಸುರೇಶ್. ಹದಿನೇಳು ವರ್ಷದ ಶ್ರೀಲಕ್ಷ್ಮಿ ಕೇರಳದ ಕ್ಯಾಲಿಕಟ್ ನಗರದ ಸಂತ ಜೋಸೆಫ್ ಪದವಿ ಕಾಲೇಜಿನಲ್ಲಿ ಬಿಬಿಎ ಪ್ರಥಮ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದಾರೆ. ತಾವೇ ಸ್ಥಾಪಿಸಿದ-ಡಿಸೈನ್ ಟೆಕ್ನಾಲಜಿಸ್" ಹೆಸರಿನ ಸಂಸ್ಥೆಯ ಸಿಇಓ ಆಗಿರುವ ಇವರು ಜಗತ್ತಿನ ಕಿರಿಯ ಸಿಇಒ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.
ಕೇರಳ ಸರ್ಕಾರದ ಅಧಿಕೃತ ವೆಬ್ಸೈಟ್ ಸೇರಿದಂತೆ ಹಲವಾರು ಪ್ರಮುಖ ವೆಬ್ ಸೈಟ್ ಸೃಜಿಸಿರುವ ಶ್ರೀಲಕ್ಷ್ಮಿ, ಇದುವರೆಗೂ 100ಕ್ಕೂ ಅಧಿಕ ಗ್ರಾಹಕರಿಗಾಗಿ 150ಕ್ಕೂ ಮೇಲ್ಪಟ್ಟು ವೆಬ್ಸೈಟ್ ರೂಪಿಸಿದ್ದಾರೆ.
ತಾವು ಎಂಟರ ವಯಸ್ಸಿನಲ್ಲಿರುವಾಗಲೇ ತನ್ನ ಶಾಲೆಗೊಂದು ವೆಬ್ ಸೈಟ್ ರೂಪಿಸಿಕೊಟ್ಟ ಇವರು ಅಂದಿನಿಂದಲೂ ವೆಬ್ ಡಿಸೈನಿಂಗ್ ಹಾಗೂ ಎವಲಪ್ ಮೆಂಟ್ ನಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಇವರ ಈ ಅಸಾಮಾನ್ಯ ಸಾಧನೆಯನ್ನು ಗುರುತಿಸಿ ಅಮೆರಿಕನ್ ವೆಬ್ಮಾಸ್ಟರ್, ಸಂಸ್ಥೆಯ ಸದಸ್ಯತ್ವ, ಭಾರತ ಸರ್ಕಾರ ಕೊಡಮಾಡುವ ಅಸಾಧಾರಣ ಸಾಧನೆಗಾಗಿನ 2008ನೇ ಸಾಲಿನ ರಾಷ್ಟ್ರೀಯ ಮಕ್ಕಳ ಪ್ರಶಸ್ತಿ  ಸೇರಿದಂತೆ ಕೇರಳ ಸರ್ಕಾರದ ಪ್ರಶಸ್ತಿ, ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಶಸ್ತಿಗಳು ಒಲಿದು ಬಂದಿವೆ.
ಅಂತಹಾ ಅದ್ಭುತ ಪ್ರತಿಭಾವಂತೆಯನ್ನು ನಮ್ಮ ಓದುಗರಿಗೂ ಪರಿಚಯಿಸುವ ಸಲುವಾಗಿ "ಗೃಹಶೋಭಾ" ಅವರನ್ನು ಸಂಪರ್ಕಿಸಿ ನಡೆಸಿದ ಸಂದರ್ಶನದ ಮುಖ್ಯಾಂಶ  ಕೆಳಗಿನಂತಿದೆ.


ಪ್ರ. ನಿಮ್ಮ ಬಗ್ಗೆ ತಿಳಿಸಿರಿ.
ನಾನೊಬ್ಬ ಸಾಧಾರಣ ಹುಡುಗಿ. ನಾನು ಮಾಡಿದ ಕೆಲಸವನ್ನು ನನ್ನದೇ ವಯಸ್ಸಿನ ಯಾರು ಬೇಕಾದರೂ ಮಾಡಲು ಸಾಧ್ಯವಿದೆ. ನನ್ನ ಬಾಲ್ಯದ ದಿನಗಳಿಂದಲೇ ನನಗೆ ಕಂಪ್ಯೂಟರ್ ಬಳಸಲು ಅನುಮತಿ ಸಿಕ್ಕಿತ್ತು. ನಾನು ಮೊದಲಿಗೆ ಎಂಎಸ್ ಪೇಂಟ್ ಬಳಸಿಕೊಂಡು ಚಿತ್ರ ಬಿಡಿಸುವುದನ್ನು ಕಲಿತೆ. ಸಮಯದಲ್ಲಿ ನನ್ನ ಅಪ್ಪಾಜಿ ಒಬ್ಬ ಚಿಕ್ಕ ವಯಸ್ಸಿನ ಬಾಲಕ ರಚಿಸಿದ ವೆಬ್ ಸೈಟನ್ನು ತೋರಿಸಿದರು. ಅದು ನನಲ್ಲಿ ವಿಶೇಷವಾಗಿ ವೆಬ್ ಸೈಟ್ ವಿನ್ಯಾಸದತ್ತ ಆಸಕ್ತಿ ತಳೆಯುವಂತೆ ಮಾಡಿತು. ಮುಂದೆ ನಾನು ಎಂಎಸ್ ಫ್ರಂಟ್ ಪೇಜ್ ಬಳಸಿಕೊಂಡು ವೆಬ್ ಸೈಟ್ ರಚಿಸುವುದನ್ನು ಕಲಿತೆನು. ನನಗೆ ನಾನು ಒಳ್ಳೆಯ ವೆಬ್ ಸೈಟ್ ರೂಪಿಸಬಲ್ಲೆ ಎನ್ನುವ ನಂಬಿಕೆ ಹುಟ್ಟಿದ ಬಳಿಕ ನನ್ನ ಶಾಲೆಗಾಗಿ ನಾನೊಂದು ವೆಬ್ ಸೈಟ್ ರೂಪಿಸಲು ನಿರ್ಧರಿಸಿದೆ. ಆದರೆ ವಿಚಾರವನ್ನು ನನ್ನ ಮುಖ್ಯೋಪಾದ್ಯಾಯರ ಬಳಿ ಪ್ರಸ್ತಾಪಿಸಲು ನನಗೆ ಧೈರ್ಯವಾಗಲಿಲ್ಲ. ಅದಕ್ಕಾಗಿ ನಾನು ನನ್ನ ಅಪ್ಪಾಜಿಯ ನೆರವು ಬೇಡಿದೆ. ಅಪ್ಪಾಜಿ ಅದಕ್ಕೆ ಸಂತೋಷದಿಂದ ಒಪ್ಪಿ ತಾವೇ ಶಾಲೆಯ ಮುಖ್ಯೋಪಾದ್ಯಾಯಿನಿ ಬಳಿ ಮಾತನಾಡಿದರು. ಅವರ ಮಾತಿಗೆ ಒಪ್ಪಿಕೊಂಡ ನಮ್ಮ ಮುಖ್ಯೋಪಾದ್ಯಾಯಿನಿಯವರು ಶಾಲೆಯ ಸಿಬ್ಬಂದಿಯೊಬ್ಬರ ಮೂಲಕ ನನಗೆ ಬೇಕಾದ ಮಾಹಿತಿಗಳನ್ನೆಲ್ಲಾ ಒದಗಿಸಿದರು. ಹೀಗೆ ನಾನು ನಾಲ್ಕನೇ ತರಗತಿಯಲ್ಲಿ ಇದ್ದಾಗ ನನ್ನ ಶಾಲೆಗಾಗಿ ಒಂದು ವೆಬ್ ಸೈಟ್ ರೂಪಿಸಿ ಕೊಟ್ಟೆ. ಬಳಿಕ ನಾನು ಸಾಕಷ್ಟು ಸಂಘಟನೆಗಳಿಗೂ, ಕ್ಲಬ್ ಗಳಿಗೂ ವಿಬ್ ಸೈಟ್ ರಚಿಸಿ ಕೊಟ್ಟಿದ್ದೇನೆ. ನಾನು ಹತ್ತನೇ ವಯಸ್ಸಿನಲ್ಲಿರುವಾಗ ನನ್ನದೇ ಆದ ಡಿಸೈನ್ ಟೆಕ್ನಾಲಜೀಸ್ ಎನ್ನುವ ವೆಬ್ ಡಿಸೈನ್ ಸಂಸ್ಟೆಯೊಂದನ್ನು ಪ್ರಾರಂಭಿಸಿದೆ.

 ಪ್ರ ನಿಮ್ಮ ತಂದೆಯವರ ಬಗ್ಗೆ ಹೇಳಿರಿ.
ನನ್ನ ತಂದೆ ಸುರೇಶ್ ಮೆನನ್, ವೃತ್ತಿಯಲ್ಲಿ ವಕೀಲರು. ಅವರ ಬೆಂಬಲ, ಪ್ರೋತ್ಸಾಹದ ಫಲವಾಗಿಯೇ ನನಗಿಂದು ಈ ಸಾಧನೆ ಮಾಡಲು ಸಾಧ್ಯವಾಗಿದೆ.

ಪ್ರ ನಿಮ್ಮ ಸಂಸ್ಥೆಯ ಕುರಿತು ತಿಳಿಸಿ.
ನಾನು ಕಳೆದ ಏಳು ವರ್ಷಗಳಿಂದ ಸಂಸ್ಥೆಯನ್ನು ನಡೆಸುತ್ತಿದ್ದೇನೆಭಾರತವಷ್ಟೆ ಅಲ್ಲದೆ ಅಮೆರಿಕಾ, ಕೆನಡಾ, ಗಲ್ಫ್ ರಾಷ್ಟ್ರಗಳಿಂದಲೂ ನಮ್ಮ ಸಂಸ್ಥೆಗೆ ಆರ್ಡರ್ ಗಳು ಬರುತ್ತವೆ. ನನಗೆ ಕೆಲವು ಅಗತ್ಯ ಸಲಹೆ ಸೂಚನೆಗಳನ್ನು ನೀಡುವುದಕ್ಕಾಗಿ ಕೆಲವು ಅರೆಕಾಲಿಕ (ಪಾರ್ಟ್ ಟೈಮ್) ಸಿಬ್ಬಂದಿಗಳನ್ನು ನೇಮಿಸಿಕೊಂಡಿದ್ದೇನೆ. ನನ್ನ ವಿದ್ಯಾಭ್ಯಾಸ ಪೂರ್ಣಗೊಂಡ ಬಳಿಕ ಸಂಸ್ಥೆಯನ್ನು ಇನ್ನಷ್ಟು ವಿಸ್ತರಿಸುವ ಉದ್ದೇಶವಿದೆ.

ಪ್ರ ನಿಮ್ಮ ಕಲಿಕೆ ಹಾಗೂ ಸಂಸ್ಥೆಯ ಕೆಲಸಗಳೆರಡನ್ನೂ ನೀವು ಏಕಕಾಲದಲಿ ಹೇಗೆ ಸರಿದೂಗಿಸಿಕೊಂಡು ಹೋಗುತ್ತೀರಿ?
ಪ್ರತಿದಿನದ ನನ್ನ ಕಾಲೇಜಿನ ಹೋಮ್ ವರ್ಕ್ಸ್ ಮುಗಿಸಿದ ಬಳಿಕ ನಾನು ಡಿಸೈನಿಂಗ್ ಕೆಲಸಗಳಲ್ಲಿ ತೊಡಗುತ್ತೇನೆ. ದಿನವೊಂದರ ಎರಡು ತಾಸು ಡಿಸೈನಿಂಗ್ ಕೆಲಸ ಮಾಡುವುದು ನನಗೇನೂ ಸಮಸ್ಯೆ ಎನಿಸುತ್ತಿಲ್ಲ. ಇನ್ನು ರಜೆ ದಿನಗಳಲ್ಲಿ ಹೆಚ್ಚಿನ ಸಮಯವನ್ನು ಸಂಸ್ಥೆಯ ಕೆಲಸಕ್ಕಾಗಿ ಮೀಸಲಿರಿಸುತ್ತೇನೆ.

ಪ್ರ ಭವಿಷ್ಯದಲ್ಲಿ ನೀವು ಇನ್ನೇನು ಮಾಡಲು ನಿರ್ಧರಿಸಿದ್ದೀರಿ?
ನಿಸ್ಸಂದೇಹವಾಗಿ ನನ್ನ ಸಂಸ್ಥೆಯನ್ನು ಐಟಿ ಉದ್ಯಮದ ಮುಂಚೂಣಿ ಸಂಸ್ಥೆಯನ್ನಾಗಿಸಲು ಉದ್ದೇಶಿಸಿದ್ದೇನೆ. ಇದನ್ನು ಕಾರ್ಯರೂಪಕ್ಕಿಳಿಸಲು ಇನ್ನೂ ಹೆಚ್ಚಿನ ಗ್ರಾಹಕ ಸ್ನೇಹಿಯಾದ ಸಾಫ್ಟ್ ವೇರ್ ಗಳನ್ನು ರೂಪಿಸಲು ಯೋಜಿಸಿದ್ದೇನೆ.


ಪ್ರ ನಿಮ್ಮ "ರೋಲ್ ಮಾಡಲ್" ಯಾರು?
ಬಿಲ್ ಗೇಟ್ಸ್, ಅವರಿಂದಾಗಿಯೇ ನಾವಿಂದು ಇಷ್ಟು ಸುಲಭದಲ್ಲಿ ಕಂಪ್ಯೂಟರ್ ಬಳಸಲು ಸಾಧ್ಯವಾಗಿದೆ. ಕಂಪ್ಯೂಟರ್ ಇಷ್ಟೋಂದು ಜನಪ್ರಿಯವಾಗಲು ಅವರೇ ಕಾರಣರಾಗಿದ್ದಾರೆ. ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಬರುವುದಕ್ಕೆ ಮುನ್ನ ಕಂಪ್ಯೂಟರ್ ಬಳಕೆ ಅತ್ಯಂತ ಕಷ್ಟಕರವೆನಿಸಿತ್ತು

ಪ್ರ ಭಾರತದ ಯುವ ಪೀಳಿಗೆಗೆ ನೀವೇನು ಸಂದೇಶ ನೀಡಲು ಬಯಸುತ್ತೀರಿ?
ನೀವು ಆತ್ಮವಿಶ್ವಾಸದಿಂದ, ನಿಷ್ಠೆಯಿಂದ ಯಾವುದೇ ಕೆಲಸಕ್ಕೆ ಕೈ ಹಾಕಿದರೂ ನಿಮಗೆ ಜಯ ಲಭಿಸುತ್ತದೆ. ಅಸಾಧ್ಯವೆನ್ನುವುದು ಯಾವುದೂ ಇಲ್ಲ. ಸಹನೆ ಮತ್ತು ಸೃಜನಶೀಲತೆಯನ್ನು ರೂಢಿಸಿಕೊಳ್ಳಿ. ಅದುವೇ ನಿಮ್ಮನ್ನು ಜಯದತ್ತ ಕೊಂಡೊಯ್ಯುತ್ತದೆ.
ಯಶಸ್ವಿ ಯುವಪ್ರತಿಭೆ ಶ್ರೀಲಕ್ಷ್ಮಿಗೆ "ಗೃಹಶೋಭಾ" ಪರವಾಗಿ ಅಭಿನಂದನೆಗಳು! ಭವಿಷ್ಯದಲ್ಲಿ ಭಾರತದ ವೆಬ್ ಡಿಸೈನಿಂಗ್ ನ್ಫ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಲಿ ಎಂದು ಹಾರೈಸೋಣ.


(ಈ ಸಂದರ್ಶನವು ಕನ್ನದದ ಹೆಸರಾಂತ ಪತ್ರಿಕೆ "ಗೃಹಶೋಭಾ" ನವೆಂಬರ್ – 2015ರ ಸಂಚಿಕೆಯಲ್ಲಿ ಪ್ರಕಟಗೊಂಡಿದೆ.)

1 comment:

  1. ಅಡಿಗರಿಗೆ ನಮೋನ್ನಮಃ ! ಅಧ್ಭುತವಾಗಿ ಮೂಡಿಬಂದಿದೆ ತಮ್ಮ ಇಲ್ಲಿ ಮೂಡಿಸಿರುವ ಆ ಪ್ರತಿಭೆಯ ಸಂದರ್ಶನ. ಕಂಗ್ರಾಜುಲೇಷನ್ಸ್! :)

    ReplyDelete