Thursday, February 27, 2014

ನಮ್ಮಲ್ಲಿನ ಸ್ಥಳ ಪುರಾಣಗಳು (Myths)- 19

ಗಯಾ(Gaya)
ಬಿಹಾರದಲ್ಲಿನ ಶ್ರೀ ಕ್ಷೇತ್ರ ಗಯಾ ಹಿಂದೂಗಳ ಪಾಲಿನ ಅತ್ಯಂತ ಪವಿತ್ರ ತೀರ್ಥಕ್ಷೇತ್ರವಾಗಿದೆ. ಇಲ್ಲಿ ಯಾರಾದರೂ ತಮ್ಮ ಪಿತೃಗಳಿಗೆ ಪಿಂಡಪ್ರಧಾನವನ್ನು ಮಾಡಿದ್ದಾದರೆ ಅಂತಹಾ ಪಿತೃಗಳು ಶಾಶ್ವತ ಮೋಕ್ಷಕ್ಕೆ ಸಲ್ಲುತ್ತಾರೆ ಎನ್ನುವುದು ಪುರಾಣ ಕಾಲದಿಂದ ಬಂದ ನಂಬಿಕೆ. ಅಂದಿನಿಂದ ಇಂದಿನವರೆಗೆ ದಿನನಿತ್ಯವೂ ಇಲ್ಲಿರುವ ಶ್ರೀ ವಿಷ್ಣುಪಾದ ಕ್ಷೇತ್ರದಲ್ಲಿ ಸಾವಿರಾರು ಮಂದಿ ಶ್ರಾದ್ದಾದಿ ಕರ್ಮಗಳನ್ನು ಮಾಡಿಸುತ್ತಾ ಬಂದಿದ್ದಾರೆ. ಹೀಗೆ ಗಯಾ ಭಾರತದ ಒಂದು ಪವಿತ್ರ ಯಾತ್ರಾ ಸ್ಥಳವಾಗಿ ಮಾರ್ಪಟ್ಟಿದೆ. ಇಂತಹಾ ಶ್ರೀ ಕ್ಷೇತ್ರ ಗಯಾದ ಮಹಿಮೆಯನ್ನು ‘ವಾಯು ಪುರಾಣ’ ದಲ್ಲಿ ಈ ಕೆಳಕಂಡಂತೆ ವರ್ಣಿಸಲಾಗಿದೆ,


ಭಾಗ -1
ಅತ್ಯಂತ ಪ್ರಾಚೀನ ಕಾಲದಲ್ಲಿ ಗಯಾಸುರನೆಂಬ ಒಬ್ಬ ದೈತ್ಯನಿದ್ದನು. ಇವನು ಕೊಲಾಹಲವೆಂಬ ಪರ್ವತದಲ್ಲಿ ಬ್ರಹ್ಮನನ್ನು ಕುರಿತು ತಪಸ್ಸನ್ನು ಮಾಡಿ ಬ್ರಹ್ಮನಿಂದ ಎರಡು ವರಗಳನ್ನು ಕೇಳಿದನು. “ ನಾನು ಮೂರು ಲೋಕದಲ್ಲಿದ್ದವರಿಗೆಲ್ಲರಿಗೂ ಮಹಾ ಪವಿತ್ರನಾಗಿರಬೇಕು ಮತ್ತು ನಾನು ಸ್ಪರ್ಶಮಾಡಿದ ವಸ್ತುಗಳು, ಜೀವಿಗಳು ಮುಕ್ತಿಗೆ ಹೋಗಲು ಯೋಗ್ಯರಾಗಬೇಕು.” ಎಂದು .ಬ್ರಹ್ಮನು ಈ ಎರಡು ವರಗಳನ್ನು ಕೊಟ್ಟನು.ವರಗಳ ಪ್ರಕಾರ ಇವನನ್ನು ಮುಟ್ಟಿದವರೆಲ್ಲಾ ಮುಕ್ತಿ ಯೋಗ್ಯರಾಗುತ್ತಿದ್ದರು. ಇದರ ಪರಿಣಾಮದಿಂದ ಧರ್ಮ ದಾನ ಪಿತೃ ಕಾರ್ಯ ಎಲ್ಲಾ ಕಮ್ಮಿಯಾಗುತ್ತಾ ಬಂತು . ಏಕೆಂದರೆ ಇವನನ್ನೇ ಎಲ್ಲರೂ ಸ್ಪರ್ಶಿಸಿ ಮುಕ್ತಿಪದ ಪಡೆಯುತ್ತಿದ್ದರು.ಯಮಲೊಕ, ಸ್ವರ್ಗ ನರಕ ಎಲ್ಲವೂ ಬಿಕೋ ಎನಿಸಿದವು. ಇದರಿಂದ ಪ್ರಕೃತಿಯ ನಿಯಮವೂ ಬದಲಾಯಿತು.ನಿತ್ಯ ಆಚರಣೆಯೂ ನಿಂತುಹೊಯಿತು.ಎಲ್ಲ ದೇವತೆಗಳು ಬ್ರಹ್ಮನ ಸಮೀಪ ಹೋಗಿ ಪ್ರಾರ್ಥಿಸಿದರು. ದೇವತೆಗಳ ಸಹಿತ ಬ್ರಹ್ಮ ದೇವರು ಅನಾದಿಯಾದ ವಿಷ್ಣುವಿನ ಸಮೀಪಕ್ಕೆ ಹೋದರು. ವಿಷ್ಣುವನ್ನು ಪ್ರಾರ್ಥಿಸಿದರು. ಆಗ ವಿಷ್ಣುವು ದೇವತೆಗಳ ಹಾಗೂ ಬ್ರಹ್ಮ ದೇವರ ಪ್ರಾರ್ಥನೆಯನ್ನು ಕೇಳಿ  “ ನೀವು ಗಯಾಸುರನ ಸಮೀಪಕ್ಕೆ ಹೋಗಿ ಅವನ ಶರೀರವನ್ನೇ ಯಜ್ನಕ್ಕಾಗಿ ಬೇಕೆಂದು ಕೇಳಿರಿ ” ಎಂದನು.
ಶ್ರೀ ಭಗವಾನ್ ವಿಷ್ಣುವಿನ ಉಪಾಯವನ್ನು ಕೇಳಿದ ಬ್ರಹ್ಮ ಸಹಿತ ದೇವತೆಗಳೆಲ್ಲರೂ ಗಯಾಸುರನ ಸಮೀಪಕ್ಕೆ ಹೋದರು. ದೇವತೆಗಳಿಂದ ಸಹಿತವಾಗಿ ಬಂದಿರುವ ಬ್ರಹ್ಮನನ್ನು ನೋಡಿ ಬಲು ಸಂತೋಷಪಟ್ಟ ಗಯಾಸುರನು ಅಘ್ಯಪಾದ್ಯಾದಿಗಳನ್ನು ಕೊಟ್ಟು  - “ತಾವು ಬಂದಿರುವ ಕಾರಣವೇನು ? ನನಗೆ ಯಾವ ಅನುಗ್ರಹ ಮಾಡಲು ಬಂದಿರುವಿರಿ ?” ಎಂದು ವಿನಮ್ರತೆಯಿಂದ ಕೇಳಿದನು.ಅದಕ್ಕೆ ಬ್ರಹ್ಮದೇವರು ಹೀಗೆ ಹೇಳಿದರು “ಹೇ ಗಯಾಸುರ ಇಡೀ ಪ್ರಪಂಚದಲ್ಲಿ ನಾನು ಯಜ್ಞಕ್ಕೆ ಪವಿತ್ರವಾದ ಸ್ಥಳವನ್ನು ಹುಡುಕಿದೆ ಆದರೆ ನಿನ್ನ ಶರೀರದಷ್ಟು ಪವಿತ್ರವಾದ ಸ್ಥಳ ನನಗೆ ಮತ್ತೊಂದಿಲ್ಲವೆಂದು ತಿಳಿದು ಯಜ್ಞಕ್ಕಾಗಿ ನಿನ್ನ ದೇಹವನ್ನು ಕೇಳಲು ಬಂದಿದ್ದೇನೆ ”ಎಂದರು. ಬ್ರಹ್ಮನ ಈ ಮಾತನ್ನು ಕೇಳುತ್ತಿರುವಾಗಲೇ ಗಯಾಸುರನು ನಾನೇ ಧನ್ಯ ಎಂದುಕೊಂಡು ತನ್ನ ಶರೀರವನ್ನು  ಯಜ್ಞಕ್ಕಾಗಿ ಕೊಡಲು ಒಪ್ಪಿ ಉತ್ತರಕ್ಕೆ ತನ್ನ ತಲೆಯನ್ನು ಇಟ್ಟು ದಕ್ಷಿಣಕ್ಕೆ ತನ್ನ ಕಾಲುಗಳನ್ನು ಚಾಚಿ ಮಲುಗಿದನು.ಅದು ಎಷ್ಟು ದೂರ ಹೋಯಿತೆಂದರೆ ೫ ಕ್ರೋಶದವರೆಗೆ ಕೈ ಕಾಲುಗಳು ಹಬ್ಬಿದವು.ಒಂದು ಕ್ರೋಶದವರೆಗೆ ತಲೆ ಮಾತ್ರ ಹಬ್ಬಿತ್ತು. ಅಂದರೆ ಸುಮಾರು ೨೦ ಮೈಲಿ ದೊರದವರೆಗೆ ಹಬ್ಬಿತ್ತು. ಆ ಶರೀರದ ಮೇಲೆಯೇ ಬ್ರಹ್ಮದೇವರು  ಯಜ್ಞ ಪ್ರಾರಂಭಿಸಿದರು. ದರ್ಬೆಗಳನ್ನು ಅಭಿಮಂತ್ರಿಸಿ ಬ್ರಾಹ್ಮಣರನ್ನು ಸೃಷ್ಟಿಸಿದರು. ಹೀಗೆ ಸೃಷ್ಟಿಸಿದ ಬ್ರಾಹ್ಮಣರಿಗೆ ಯಜ್ಞವೇ ಮೊದಲಾದ ಕ್ರಿಯೆಗಳಿಗೆ ಅಧಿಕಾರವನ್ನು ಕೊಟ್ಟರು. ಯಜ್ಞ ಆರಂಭವಾಯಿತು. ಗಯಾಸುರನ ಎದೆಯಮೇಲೆ ಯಜ್ಞ ಆರಂಭವಾದಾಗ ಗಯಾಸುರನು ಬಿಸಿ ತಾಳದೆ ಅಲುಗಾಡಲು ಪ್ರಾರಂಭಿಸಿದನು.ಆಗ ಬ್ರಹ್ಮನು ಯಮಧರ್ಮ ರಾಜನಿಗೆ “ಹೇ ಧರ್ಮರಾಜ,ನಿನ್ನಲ್ಲಿರುವ ದೇವಮಯವಾದ ಶಿಲೆ ಏನಿದೆ ಅದನ್ನು ಈ ದಾನವನ ಶರೀರದ ಮೇಲೆ ಇಡು ಆಗ ಈ ಕಂಪನ ನಿಲ್ಲುತ್ತದೆ” ಎಂದು . ಧರ್ಮ ರಾಜ ಹಾಗೆಯೇ ಮಾಡಿದಮೇಲೂ ಕಂಪನ ನಿಲ್ಲಲ್ಲಿಲ್ಲ. ಅಲ್ಲಿದ್ದ ದೇವತೆಗಳೂ ಒಟ್ಟಾಗಿ ತಮ್ಮ ಬಲವನ್ನೆಲ್ಲಾ  ಹಾಕಿ ಒತ್ತಿ ಹಿಡಿದರು.  ಆದರೂ ನಿಲ್ಲಲ್ಲಿಲ್ಲ. ಆಗ ಹೇ ವಿಷ್ಣುವೇ ನೀನೇ ಗತಿ ಯಜ್ಞ ಮುಗಿಯಬೇಕಾದರೆ ಈ ಕಂಪನ ನಿಲ್ಲಬೇಕು ಎಂದು ಪ್ರಾರ್ಥಿಸಿದರು. ಆಗ ಆ ದೇವತೆಗಳ ಈ ದೀನ  ಅವಸ್ಥೆಯನ್ನು  ಕಂಡ ಶ್ರೀ ವಿಷ್ಣುವು ತಾನೇ ಗದಾಧಾರೀ ರೂಪದಲ್ಲಿ ಧರ್ಮ ಶಿಲಾದ ಮೇಲೆ  ಪ್ರಕಟನಾದನು . ಆಗ ಕಂಪನವು ಶಾಂತವಾಯಿತು. ಆಗ ಆ ಗಧಾದರನು ಪ್ರಸನ್ನನಾಗಿ ಗಯಾಸುರನಿಗೆ ವರ ಕೇಳಲು ಹೇಳಿದನು.ಗಯಾಸುರನು ಪ್ರಾರ್ಥಿಸಿದನು. ಹೇ ದೇವ ತಮ್ಮ ಕೃಪೆಯಿಂದ ನಾನು ಕೃತಾರ್ಥನಾಗಿದ್ದೇನೆ. ತಾವು ನನ್ನ ಮೇಲೆ ಪ್ರಸನ್ನರಾಗಿದ್ದರೆ ಈ ಗದಾಧರನ ರೂಪದಿಂದಲೇ ನನ್ನ ಶರೀರದ ಮೇಲೆ ಯಾವಾಗಲೂ ವಿರಾಜಿಸುತ್ತಿರು,  ಅಲ್ಲದೆ, ನನ್ನನ್ನು ಪವಿತ್ರನನ್ನಾಗಿರಿಸುವುದಲ್ಲದೇ ನನ್ನ ಶರೀರದ ಮೇಲೆ ಎಲ್ಲಾ ದೇವತೆಗಳು ವಾಸವಾಗಿರಲಿ. ವಿಶೇಷವಾಗಿ ನನ್ನ ಶರೀರದ ಮೇಲೆ ಪಿತೃ ಕಾರ್ಯಕ್ಕಾಗಿ ನನ್ನ ಶರೀರದ ಮೇಲೆ ನಿನ್ನ ಪಾದವಿಡು. ಪಿತೃ ಕಾರ್ಯಕ್ಕಾಗಿ ಈ ನನ್ನ ಶರೀರದ ಮೇಲಿರುವ ನಿನ್ನ ಪಾದ ಚಿಹ್ನೆ ಇರುವ ಧರ್ಮ ಶಿಲಾದ ಮೇಲೆ ಯಾರು ಪಿಂಡದಾನ ಮಾಡುತ್ತಾರೋ ಅವರ ಪಿತೃ ದೇವತೆಗಳಿಗೆ ಅಕ್ಷಯ ಲೋಕ ಪ್ರಾಪ್ತವಾಗಲಿ ಮತ್ತು ನಿತ್ಯ ಪಿತೃ ಕಾರ್ಯ ನಡೆಯುತ್ತಿರಲಿ ಎಂದು ವರವನ್ನು ಕೇಳಿದ್ದರಿಂದ ಇವತ್ತಿನವರೆಗೂ ಭಗವಂತ ಗದಾಧರನ ರೂಪದಿಂದ ಗಯಾ ಕ್ಷೇತ್ರದಲ್ಲಿದ್ದು ಆ  ಸ್ಥಳ ವಿಷ್ಣು ಪಾದ  ಕ್ಷೇತ್ರವಾಗಿದ್ದು ಪಿತೃಗಳಿಗೆ ಮುಕ್ತಿ ಕೊಡುವ ಕೃಪೆ ಮಾಡುತ್ತಿದ್ದಾನೆ.
ಬ್ರಹ್ಮದೇವನು ತಾನು ಮಾಡುತ್ತಿದ್ದ  ಯಜ್ಞವನ್ನು ಪೂರ್ಣ ಮುಗಿಸಿದ ಮೇಲೆ ತನ್ನ ಮಾನಸ ಪುತ್ರರೆನಿಸಿದ್ದ ಅರ್ಥಾತ್ ಯಜ್ಞದ ಕಾರ್ಯಕ್ಕಾಗಿ ಸೃಷ್ಟರಾದ ಬ್ರಾಹ್ಮಣರಿದ್ದರು  .ಅವರನ್ನುದ್ದೇಶಿಸಿ “ ಈ ಯಜ್ಞದಲ್ಲಿ ಬಂದಿರುವ ದೇವ ದುರ್ಲಭವಾದ ಧನ, ಧಾನ್ಯದಿಂದ ಈ ಭೂಮಿ ಅಳಿಯಲು ಅಶಕ್ಯವಾದ ಧನ ಸಂಪತ್ತಿನಿಂದ ತುಂಬಿ ತುಳುಕುತ್ತಿರುವುದು.ಹಾಲು,ಮೊಸರು ತುಪ್ಪ ಇವುಗಳ ನದಿಯೇ ಹರಿಯುತ್ತಿದೆ. ಬಂಗಾರ ಬೆಳ್ಳಿಗಳ ಪರ್ವತವೇ ಕಾಣುತ್ತಿದೆ.ಇಂತಹ ಅಸದೃಶ ಸಂಪತ್ತು ನಿಮ್ಮೆದುರು ಇದ್ದರೂ ಯಾವುದೇ ಯಜ್ಞ ನಿಮಿತ್ತದಿಂದ ದಾನ ತೆಗೆದುಕೊಳ್ಳಬಾರದು” ಎಂದು ಹೇಳಿ ಅಂತರ್ಧಾನರಾದರು.
ಕೆಲವು ಕಾಲದ ನಂತರ ಧರ್ಮರಾಜನು ಒಂದು ಯಜ್ಞವನ್ನು ಪ್ರಾರಂಭಿಸಿದನು . ಯಜ್ಞದ ಪೂರ್ಣ ಫಲ ಪ್ರಾಪ್ತಿಗಾಗಿ ಬ್ರಾಹ್ಮಣರಿಗೆ ಬಂಗಾರವನ್ನು ದಾನ ಮಾಡಿದನು. ಬ್ರಹ್ಮ ಸೃಷ್ಟರಾದ ಆ ಬ್ರಾಹ್ಮಣರು ಅಜ್ಞಾನ ಮೋಹಿತರಾಗಿ  ಈ ದಾನವನ್ನು ಸ್ವೀಕರಿಸಿದರು. ಇನ್ನೊಬ್ಬರಲ್ಲಿ ದಾನಕ್ಕಾಗಿ ಕೈ ಚಾಚಿದ್ದಕ್ಕೆ ಬ್ರಹ್ಮನು ಕೋಪಗೊಂಡು ನೀವೆಲ್ಲಾ ದರಿದ್ರರಾಗಿರಿ ಎಂದು ಅವರಿಗೆ ಶಾಪವಿತ್ತನು. ಕಾಲಾಂತರದಲ್ಲಿ ಈ ಎಲ್ಲಾ ಬಂಗಾರದ ರಾಶಿ ಶಿಲಾ ರೂಪತಾಳಿ ಪರ್ವತಗಳಾಗಿ ಬಿದ್ದವು. ಭೂ ಮಂಡಲವೇ ಐಶ್ವರ್ಯ ಹೀನವಾಗಿ ಕಾಣುತ್ತಿತ್ತು. ಈ ಬ್ರಹ್ಮಣರು ತಮ್ಮ ತಪ್ಪಿಗಾಗಿ ಪಶ್ಚಾತ್ತಾಪ ಪಡುತ್ತಾ ಬಹು ದೈನ್ಯದಿಂದ ಬ್ರಹ್ಮನನ್ನು ಪ್ರಾರ್ಥಿಸಿದರು. ಆಗ ಬ್ರಹ್ಮನು  ಇವರ ಮೇಲೆ ದಯೆತೋರಿ ಈ ತೀರ್ಥದಲ್ಲಿ ನಡೆಯತ್ತಕ್ಕ ಪಿತೃ ಯಜ್ಞವೇ ಮೊದಲಾದ  ಕಾರ್ಯಗಳು ನೀವು ಸಂತುಷ್ಟರಾದ ಮೇಲೆಯೇ ಪೊರ್ತಿಯಾಗುತ್ತದೆ. ಆದ್ದರಿಂದ ಇಲ್ಲಿ ಪಿತೃಕಾರ್ಯವನ್ನು ಮಾಡುವವರು ನಿಮ್ಮನ್ನು ಗೌರವಿಸಬೇಕು. ಹಾಗೆ ಮಾಡಿದಾಗ ಮಾತ್ರ ಅವರ ಪಿತೃದೇವತೆಗಳಿಗೆ ತೃಪ್ತಿಯುಂಟಾಗುತ್ತದೆ ಎಂದು ಹೇಳಿ ಜನಗಳು ಸಂತುಷ್ಟರಾಗಿ ನಿಮಗೆ ದಾನಮಾಡುವರು. ನೀವು ಅವರ ಪಿತೃಗಳ ಮುಕ್ತಿಗಾಗಿ ತೃಪ್ತರಾಗುವುದು . ಈ ರೀತಿ ನಿಮಗೆ ಜೀವನ ಸಾಧನೆಯೂ ಆಗುತ್ತದೆ ಎಂದು ವರವನ್ನು ಕೊಟ್ಟು ಅಂತರ್ಧಾನ ಹೊಂದಿದರು.

ಭಾಗ -2
ಧರ್ಮರಾಜನಿಗೆ ವಿಶ್ವರೂಪ ನಾಮಕಳಾದ ಹೆಂಡತಿಯಲ್ಲಿ ಅತ್ಯಂತ ಸುಂದರಿಯಾದ ಒಬ್ಬಳು ಮಗಳು ಹುಟ್ಟಿದಳು. ಅವಳ ಹೆಸರು “ಧರ್ಮವ್ರತಾ” ಎಂದು.. ಈ ಧರ್ಮವ್ರತೆಯ ವಿವಾಹಕ್ಕಾಗಿ ವರವನ್ನು ಹುಡುಕುತ್ತಿದ್ದನು. ಎಷ್ಟು ಹುದುಕಿದರೂ ತಕ್ಕನಾದ ವರ ಸಿಗಲಿಲ್ಲ.ಕೊನೆಗೆ ಧರ್ಮರಾಯನು ತಾನೇ ಹೇಳಿದನು - ಹೇ ಧರ್ಮವ್ರತೆಯೇ ನಿನಗೆ ಉತ್ತಮವಾದ ವರ ದೊರೆಯಲು ನೀನು ತಪಸ್ಸನ್ನು ಮಾಡು ಎಂದು. ತಂದೆಯ ಮಾತಿನಂತೆ ಧರ್ಮವ್ರತೆಯು ನಿರ್ಜನವಾದ ಅರಣ್ಯದಲ್ಲಿ ಘೋರ  ತಪಸ್ಸನ್ನು ಆಚರಿಸುತ್ತಿದ್ದಳು.ತಪಸ್ಸಿನ ಬಲದಿಂದಾಗಿ ಅವಳ ತೇಜಸ್ಸು ಇಮ್ಮಡಿಯಾಗಿತ್ತು. ಇವಳ ತೇಜಸ್ಸು,ಲಾವಣ್ಯ  ತಪಸ್ಸಿನಲ್ಲಿ ಏಕಾಗ್ರತೆಯನ್ನು ನೋಡಿ ಮರೀಚಿ ಋಷಿಗಳು ಮುಗ್ದರಾಗಿ ಕೇಳಿದರು. ನೀನು ಯಾರು ? ಇಂತಹ ಘೋರವಾದ ಅರಣ್ಯದಲ್ಲಿ ತಪಸ್ಸನ್ನು ಏಕೆ ಮಾದುತ್ತಿದ್ದೀಯ ? ಎಂದು.ಮಹರ್ಷಿ ಮರೀಚಿಗಳ  ಶಬ್ಧಗಳನ್ನು ಕೇಳಿಸಿಕೊಂಡ  ಧರ್ಮವ್ರತೆಯು ಕಣ್ಣು ತೆರೆದು ನೋಡಿ  ಗೌರವದಿಂದ ನಮಸ್ಕರಿಸಿ ಹೇಳಿದಳು.ವಿಪ್ರೊತ್ತಮರೇ ನಾನು ಧರ್ಮರಾಜನ ಪುತ್ರಿ ಧರ್ಮವ್ರತ. ನನ್ನ ತಂದೆಯ  ಆಜ್ಞಾನುಸಾರ ನಾನು ಉತ್ತಮನಾದ ಪತಿಯನ್ನು ಪಡೆಯಲು ತಪಸ್ಸನ್ನು ಆಚರಿಸುತ್ತಿರುವೆ ಎಂದು.ಈ ಮಾತನ್ನು ಕೇಳಿ ಮರೀಚಿ ಮಹರ್ಷಿಯು ತನ್ನೊಡನೆ ವಿವಾಹ ಆಗುವಂತೆ ಹೇಳಿದರು.ಆಗ ಧರ್ಮವ್ರತೆಯು ಹೇಳಿದಳು . ತಾವು ದಯಮಾಡಿ ನನ್ನ ತಂದೆಯವರನ್ನು ಒಪ್ಪಿಸಿರಿ ನಾನು ಸ್ವತಂತ್ರಳಲ್ಲ ಎಂದು.ಮಹರ್ಷಿ ಮರೀಚಿಗಳು ಧರ್ಮರಾಜನಿಗೆ ಹೇಳಿ ಅವನನ್ನು ಒಪ್ಪಿಸಿ ಧರ್ಮವ್ರತೆಯನ್ನು ವಿವಾಹವಾದರು. ಅತ್ಯಂತ ಗುಣವತಿ ಶೀಲವತಿಯಾದ ಈ ಧರ್ಮವ್ರತೆಯು ಪತಿಯಾದ ಮರೀಚಿಯೊಡನೆ ಅವರ ಆಶ್ರಮದಲ್ಲಿ ವಾಸಿಸಲಾರಂಭಿಸಿದಳು
ಒಂದು ದಿನ  ಮಹರ್ಷಿ ಮರೀಚಿಗಳು ಒಂದು ಯಜ್ಞ ಕಾರ್ಯದಲ್ಲಿ  ತುಂಬಾ ಬಳಲಿದವರಾಗಿ ಆಶ್ರಮಕ್ಕೆ ಬಂದರು.ಬಂದ ತಕ್ಷಣ ಶ್ರಮವಾಗಿದ್ದರಿಂದ ಒಂದು ಕಡೆ ಹೋಗಿ ನಿದ್ರೆ ಹೋದರು. ಆಗ ಧರ್ಮವ್ರತೆಯು ಅವರ ಪಾದಸೇವಾದಲ್ಲಿ ಆಸಕ್ತಳಾದಳು. ಅದೇ ಸಮಯಕ್ಕೆ ಮರೀಚಿಗಳ ತಂದೆಯಾದ ಬ್ರಹ್ಮದೇವರು ಅಲ್ಲಿಗೆ ಬಂದರು.ಆಗ ಪತಿ ಸೇವೆಯನ್ನು ಬಿಡಬೇಕೊ ಬಂದಿರುವ ಮಾವನವರಾದ ಬ್ರಹ್ಮದೇವರನ್ನು ಗೌರವಿಸಬೇಕೋ ಎಂಬುದರಲ್ಲಿ ಸಂದೇಹಗ್ರಸ್ತಳಾಗಿ ವಿಚಾರಿಸುತ್ತಾ ಬಂದಿರುವ ಬ್ರಹ್ಮನನ್ನು ಸ್ವಾಗತಿಸಿದಳು.ಇದೇ ಸಮಯಕ್ಕೆ ಸರಿಯಾಗಿ ಪತಿಯಾದ ಮರೀಚಿ ಮಹರ್ಷಿಗಳು ಕಣ್ತೆರೆದು ನೋಡಿ ಸೇವಾವನ್ನು ಮಧ್ಯದಲ್ಲೇ ಬಿಟ್ಟುದುದಕ್ಕೆ ಕೋಪಗೊಂಡರು. ಆಗ ಬ್ರಹ್ಮನ ಉಪಚಾರದಲ್ಲಿದ್ದ ಧರ್ಮವ್ರತೆಯನ್ನು “ನೀನು ಶಿಲೆಯಾಗು ” ಎಂದು ಶಪಿಸಿದರು.ಧರ್ಮವ್ರತೆ ಬಂದು ಬಹಳ ನಮ್ರತೆಯಿಂದ ಸಮಾದಾನ ಪಡಿಸಲು ಬಹು ಪ್ರಯತ್ನಪಟ್ಟಳು ಮತ್ತು ನಿಮ್ಮ ತಂದೆಯೇ ಆದ ಬ್ರಹ್ಮದೇವರು ಬಂದಿದ್ದರು . ನಾನು ನಿಮ್ಮ ಸೇವೆಯನ್ನು ಬಿಟ್ಟು ಅವರ ಸೇವೆಗೆ ತೊಡಗಿದೆ. ಮನೆಗೆ ಬಂದವರನ್ನು ಸತ್ಕರಿಸುವುದು ಗೃಹಿಣೀ ಧರ್ಮ . ಈ ವಿಷಯದಲ್ಲಿ ನನ್ನದೇನೂ ತಪ್ಪಿಲ್ಲವೆಂದು ಪ್ರಾರ್ಥಿಸಿದಳು. ನಾನು ನಿರ್ದೋಷಿ ಎಂದಳು.ಆಶ್ರಮದಲ್ಲಿ ಬಂದಿದ್ದ ಬ್ರಹ್ಮದೇವನನ್ನು ನೋಡಿ ಮರೀಚಿ ಋಷಿಗಳು ನಿಜವಾದ ಸಂಗತಿಯನ್ನು ತಿಳಿದು ಪೇಚಿಗೆ ಸಿಕ್ಕಿಕೊಂಡರು. ನಾನು ನಿರ್ದೊಷಿಯಾದವಳಿಗೆ ಸುಮ್ಮನೆ ಶಾಪ ಕೊಟ್ಟೆನೆಂದು ಮರುಗಿದರು. ಆದರೇನು ಕೊಟ್ಟ ಶಾಪ ಹಿಂತೆಗೆದುಕೊಳ್ಳ ಲಾಗದು . ಎಷ್ಟು ಪ್ರಾರ್ಥಿಸಿದರೂ ಶಾಪ ಹಿಂತೆಗೆದುಕೊಳ್ಳಲಾಗದ್ದಿದ್ದರಿಂದ ಧರ್ಮವ್ರತೆಯೂ ಪತಿಗೆ ಶಾಪ ಕೊಟ್ಟಳು. ನೀನು ಯೋಚಿಸದೇ ಶಾಪಕೊಟ್ಟಿದ್ದಕ್ಕಾಗಿ ಮುಂದೆ ಮಹಾದೇವನು ನಿನಗೆ ಶಾಪ ಕೊಡುವನು ಎಂದು ಹೇಳಿ ಘೋರವಾದ ತಪಸ್ಸಿನಲ್ಲೇ ತೊಡಗಿದಳು. ಇವಳ ತಪಸ್ಸಿನ ಜ್ವಾಲೆಯಿಂದ ಬೆಂದ ಇಂದ್ರಾದಿ ದೇವತೆಗಳು ಭಯ ಕಂಪಿತರಾದರು. ತಮ್ಮನ್ನು ರಕ್ಷಿಸಬೇಕೆಂದು ಶ್ರೀ ವಿಷ್ಣುವಿಗೆ ಶರಣಾಗತರಾಗಿ ವಿಜ್ಞಾಪಿಸಿಕೊಂಡರು. “ಪ್ರಭೋ, ಧರ್ಮವ್ರತೆಯ ತಪಸ್ಸಿನ ಜ್ವಾಲೆಯಿಂದ ನಮ್ಮನ್ನು ರಕ್ಷಿಸು” ಎಂದು. ಇವರ ಪ್ರಾರ್ಥನೆಯನ್ನು ಕೇಳಿದ ಶ್ರೀ ಮಹಾವಿಷ್ಣುವು ಧರ್ಮವ್ರತೆಯ ಸಮೀಪಕ್ಕೆ ಬಂದು ಪ್ರಕಟನಾಗಿ ಏನು ಬೇಕೆಂದು ಕೇಳಿದನು. ತನ್ನೆದುರಿನಲ್ಲೇ ಪ್ರಕಟನಾದ ವಿಷ್ಣುವನ್ನು ಕುರಿತು  ಧರ್ಮವ್ರತೆಯು ವಿಷ್ಣುವಿಗೆ ನಮಸ್ಕರಿಸಿ ಪತಿಯ ಶಾಪದಿಂದ ಮುಕ್ತಳನ್ನಾಗಿಸು ಎಂದು ಕೇಳಿಕೊಂಡಳು.ಆಗ ವಿಷ್ಣುವು ದೇವೀ , ಪತಿಯ ಶಾಪದಿಂದ ಮುಕ್ತಳನ್ನಾಗಿ ಮಾಡುವುದು ಕಷ್ಟ. ಆದ್ದರಿಂದ ನಿನಗೆ ಬೇಕಾದ ಬೇರೆ ವರವನ್ನು ಕೇಳಿಕೋ ಎಂದನು. ಆಗ ಧರ್ಮವ್ರತೆಯು ಹಾಗಾದರೆ ಪ್ರಭೋ ನನ್ನನ್ನು ಯಾರು ಸ್ಪರ್ಷ ಮಾಡುತ್ತಾರೋ ಅವರು ಸರ್ವ ಶಾಪದಿಂದ ಮುಕ್ತರಾಗಬೇಕು ಮತ್ತು ಅವರಿಗೆ ಮುಕ್ತಿ ದೊರೆಯಬೇಕು. ಎಲ್ಲಾ ದೇವತೆಗಳು ನನ್ನಲ್ಲೇ ವಾಸಮಾಡಿಕೊಂಡಿರಬೇಕು ಎಂದು ಕೇಳಿದಳು.ಅತ್ಯಂತ ದಯಾಮಯನಾದ ಪರಮಾತ್ಮನು ಧರ್ಮವ್ರತೆ ಕೇಳಿದುದೆಲ್ಲವನ್ನು ಕೊಟ್ಟು  ಅಂತರ್ಧಾನ ಹೊಂದಿದನು
ಧರ್ಮವ್ರತೆಯು ಈ ರೀತಿ ವರ ಪಡೆದು ಧರ್ಮಶಿಲಾ ಎಂದಾದಳು. ಗಯಾಸುರನ ಮೇಲೆ ಇರುವ ಈ ಶಿಲೆಗಳೇ ಧರ್ಮವ್ರತೆ. ಇನ್ನೋಂದು ವಿಷೇಷವೆಂದರೆ ಗಯಾಸುರನ ಮೇಲೆ ಜನಾರ್ಧನ ರೂಪಿ ಭಗವಂತ ತಾನು ಪೂರ್ಣ ಸನ್ನಿಧಾನದಿಂದ ಇರುವೆನೆಂದು ತಿಳಿಸಲು ತನ್ನ ಬಲ ಪಾದವನ್ನು ಗಯಾಸುರನ ದೇಹದ ಮೇಲಿಟ್ಟಿರುವನು. ಆ ಪಾದದ ಮೇಲೆಯೇ ಎಲ್ಲರೊ ಪಿತೃವಿನ ಪಿಂಡವನ್ನು ಅರ್ಪಿಸುತ್ತಾರೆ. ಆದ್ದರಿಂದ ಪಿತೃಗಳು ಮುಕ್ತಿಹೊಂದುತ್ತಾರೆ ಅರ್ಪಿಸಿದವನಿಗೂ ಅನಂತ ಪುಣ್ಯ ಐಶ್ವರ್ಯಾದಿಗಳು ಪ್ರಾಪ್ತವಾಗುತ್ತದೆ. ಒಂದು ಸಾರಿ ಯಮನು ಬ್ರಹ್ಮನ ಸಮೀಪಕ್ಕೆ ಹೋಗಿ ಹೇ ಬ್ರಹ್ಮದೇವ ಧರ್ಮವ್ರತೆಯ ಪ್ರಭಾವದಿಂದಾಗಿ ನಮ್ಮ ಪಟ್ಟಣವೆಲ್ಲಾ ಬರಿದಾಗಿದೆ ಎಂದನು. ಅದಕ್ಕೆ ಬ್ರಹ್ಮದೇವರು ಧರ್ಮಶಿಲೆಯನ್ನೇ ನಿನ್ನ ಲೋಕದಲ್ಲಿಟ್ಟುಕೊ ಎಂದನು. ಇದೇ ಧರ್ಮಶಿಲಾನೇ ಗಯಾಸುರನ ಮೇಲಿಟ್ಟಿದೆ ಆದ್ದರಿಂದ ಎಲ್ಲಾ ತೀರ್ಥಗಳು ಹಾಗೂ ಸರ್ವ ದೇವತೆಗಳ ಸನ್ನಿಧಾನ ಮತ್ತು  ಸಾಕ್ಷಾತ್ ಗದಾಧರ ರೂಪೀ ವಿಷ್ಣುವಿನ ಸನ್ನಿಧಾನವೂ ಅಲ್ಲಿ ಇವೆ.
ಪತ್ನಿಯಾದ ಧರ್ಮವ್ರತೆಯ ಶಾಪ ಪಡೆದು ಸಂಚರಿಸುತ್ತಿದ್ದ ಮರೀಚಿ ಮುನಿಗಳು ಒಂದು ಅರಣ್ಯವನ್ನು ಪ್ರವೇಶಿಸಿದರು.ಅಲ್ಲಿ ಪಾರ್ವತಿ ಸಹಿತ ಶೀ ಮಹಾದೇವನು ವಿಶ್ರಾಂತಿಯನ್ನು ಪಡೆಯುತ್ತಿದ್ದರು. ಏಕಾಂತದಲ್ಲಿ  ಮಹಾದೇವನಿಗೆ ಆಕಸ್ಮಿಕವಾಗಿ ಮರೀಚಿಗಳ ಆಗಮನದಿಂದ ಕೋಪ ಬಂದು “ನಿನ್ನ ಶರೀರ ಕಪ್ಪಾಗಲಿ” ಎಂದು ಶಪಿಸಿದರು.ಮಹಾದೇವನನ್ನು ಸಮಾಧಾನ ಪಡಿಸಿದ ಮೇಲೆ ,ಆ ಮಹಾದೇವನು ಗಯಾ ದರ್ಶನದಿಂದ  ನಿಮಗೆ ಮುಕ್ತಿಯಾಗುತ್ತದೆಂದು ಸೊಚಿಸಿ ಅದೃಶ್ಯರಾದರು. ಮರೀಚಿ ಮುನಿಗಳು ಗಯಾಕ್ಕೆ ಹೋಗಿ ಅಲ್ಲಿರುವ ಗದಾಧರನ ದರ್ಶನ ವಿಷ್ಣುಪಾದದ ದರ್ಶನದಿಂದ ಕಪ್ಪು ಕಳೆಯನ್ನು ಹೋಗಿಸಿಕೊಂಡು ಮೊದಲಿನಂತೆ ಕಾಂತಿಯುಕ್ತರಾಗಿ ವಿರಾಜಿಸುತ್ತಿದ್ದರು.ಒಂದು ಸಮಯದಲ್ಲಿ ಮಹರ್ಷಿ ವಸಿಷ್ಟರು ಶೀ ರುದ್ರದೇವರನ್ನು ಕುರಿತು ತಪಸ್ಸು ಮಾಡಿದರು ರುದ್ರದೇವರು ಪ್ರಸನ್ನರಾಗಿ ನಿನಗೆ ಏನುಬೇಕೆಂದು ಕೇಳಿದ್ದಕ್ಕೆ ತಾವು ಯಾವಾಗಲೂ ಗಯಾದಲ್ಲೇ ವಾಸಿಸಬೇಕೆಂದು ಕೇಳಿಕೊಂಡರು. ಆದ್ದರಿಂದ ಇಂದಿಗೂ ಈ ಕ್ಷೇತ್ರದಲ್ಲಿ ರುದ್ರದೇವರ ಸನ್ನಿದಾನವಿದೆ.ಗದಾಧರ ದೇವರ ಸಮೀಪ ಇರುವುದು.


ಭಾಗ -3
ಹಿಂದೆ ಗದಾ ಎಂಬ ದಾನವನೊಬ್ಬನಿದ್ದ.  ಭಗವಾನ್ ವಿಷ್ಣುವು ಅವನನ್ನು ಸಂಹಾರ ಮಾಡಿದ. ಮರಣಹೊಂದಿದ ಆ ಗದಾಸುರನ ಮೂಳೆಯಿಂದ ವಿಷ್ವಕರ್ಮನು ಒಂದು ಗದಾವನ್ನು ಮಾಡಿ ಇಟ್ಟುಕೊಂಡಿದ್ದನು.ಇದೇ ಸಮಯದಲ್ಲಿ “ಹೋತಾ” ಎಂಬ ದೈತ್ಯನೊಬ್ಬ ಒಂದು ಸಾವಿರ ವರ್ಷ ತಪಸ್ಸನ್ನುಮಾಡಿ, ನನಗೆ ಚಕ್ರ , ಶಂಖ ಮುಂತಾದವುಗಳಿಂದ ವಧೆಯಾಗಬಾರದೆಂದು ವರವನ್ನು ಪಡೆದುಕೊಂಡು ದೇವತೆಗಳನ್ನು ಬಹುವಾಗಿ ಪೀಡಿಸುತ್ತಿದ್ದನು. ಇವನಿಂದ ಪೀಡಿತರಾದ ದೇವತೆಗಳು ಶೀ ವಿಷ್ಣುವನ್ನು ಮೊರೆಹೊಕ್ಕರು. ಶೀ ವಿಷ್ಣುವು ದೇವತೆಗಳಿಗೆ ಹೀಗೆಂದನು ಹೇ ದೇವತೆಗಳೇ ಇವನು ಚಕ್ರಾದಿಗಳಿಂದ ವಧ್ಯನಲ್ಲ. ಅಪರೂಪವಾದ ಅಸ್ತ್ರದಿಂದ ಅವನನ್ನು ಸಂಹರಿಸಬೇಕು. ಈ ಮಾತನ್ನು ಕೇಳಿ ವಿಶ್ವಕರ್ಮನು ತಾನು ರಚಿಸಿ ಇಟ್ಟಿದ್ದ ಗದೆಯನ್ನು ತಂದು ಕೊಟ್ಟನು.ಅದನ್ನು ತೆಗೆದುಕೊಂಡು ಆ ಹೋತಾ ಎಂಬ ದೈತ್ಯನನ್ನು ಸಂಹಾರಮಾಡಿದ ವಿಶ್ವಕರ್ಮನ ಪ್ರಾರ್ಥನಾನುಸಾರ ಆ ಗದಾಸುರನ ಮೂಳೆಯಿಂದಾದ ಗದಾ ಧರಿಸಿದ ಪ್ರಯುಕ್ತ ಇವನಿಗೆ ಗದಾಧರ ಎಂಬ ಹೆಸರು ಬಂದಿದೆ,
ಸಂಹಾರದ ನಂತರ ಗದೆಯನ್ನು ವಿಶ್ವಕರ್ಮನಿಗೆ ಕೊಟ್ಟು ತನ್ನ ನಿಜವಾದ ಪ್ರಾಚೀನವಾದ ಶುದ್ದ ಸತ್ವಭರಿತ ಗದಾ ಧರಿಸಿದನೆಂದು ಹೆಸರು ಮೊದಲಿನಿಂದಲೂ ಇದೆ ಇಂತಹ ಗದಾಧರನೇ ಗಯಾಸುರನ ಮೇಲೆ ಇರುವನು
ಯಾವಾಗ ಗಯಾಸುರನ ಮೇಲೆ ಗದಾಧರ ಬಂದು ನಿಂತನೋ ಆಗ ಬ್ರಹ್ಮ ದೇವರು ದೇವತೆಗಳು ಸ್ತುತಿಸಿ ಹೇ ವಿಷ್ಣುವೇ ನೀನು ಇನ್ನು ಮುಂದೆ ಇಲ್ಲೇ ಸನ್ನಿಹಿತನಾಗಿರಬೇಕೆಂದು ಕೇಳಿಕೊಂಡನು.ಆಗ ಶೀ ವಿಷ್ಣುವು ಅವರನ್ನು ಕುರಿತು ಯಾವ ಮನುಷ್ಯನು ತನ್ನ ಪಿತೃಗಳನ್ನು ಉದ್ದೇಶಿಸಿ ಶ್ರಾದ್ದ ಪಿಂಡಾದಿಗಳನ್ನು ಇಲ್ಲಿಗೆ ಬಂದು ಮಾಡುತ್ತಾನೋ ಅವನ ಕುಲ ಉದ್ದಾರವಾಗುತ್ತದೆ.ಏಳು ಕುಲಗಳು ಉದ್ದಾರವಾಗುತ್ತವೆ. ಈ ಪುಣ್ಯ ಭೂಮಿ ಮೇಲೆ ಯಾವ ವ್ಯಕ್ತಿ ತಿಲಯುಕ್ತ ಪಿಂಡದಾನ ಮಾಡುತ್ತಾನೋ ಅವನ ಪಿತೃಗಳ ಉದ್ದಾರವಾಗುತ್ತದೆ. ಕಪ್ಪು ಎಳ್ಳಿನಿಂದ ತರ್ಪಣ ಕೊಡುವುದರಿಂದ ರಾಕ್ಷಸರ ಬಾಧೆಯಾಗುವುದಿಲ್ಲ. ಗಯಾ ಕ್ಷೇತ್ರದಲ್ಲಿ ಪಿಂಡದಾನ ಮಾಡುವುದರಿಂದ ಅಶ್ವಮೇಧ ಯಜ್ಞದ ಫಲ ಪ್ರಾಪ್ತವಾಗುತ್ತದೆ. ಪಿತೃಗಳಿಗೆ ದೀರ್ಘಕಾಲೀನವಾದ ತೃಪ್ತಿಯಾಗುತ್ತದೆ.
ವಿಶಾಲನೆಂಬ ರಾಜನು ಸಂತಾನ ಹೀನನಾಗಿದ್ದು ಗಯಾ ಕ್ಷೇತ್ರಕ್ಕೆ ಬಂದು ಪಿಂಡ ದಾನಾದಿಗಳನ್ನು ಮಾಡಿ ಅಲ್ಲಿರುವ ಬ್ರಾಹ್ಮಣರನ್ನು  ಧನ ಹಿರಣ್ಯಾದಿಗಳಿಂದ ತೃಪ್ತಿಪಡಿಸಿದನಾದ ಪ್ರಯುಕ್ತ ಅವನಿಗೆ ಸಂತಾನ ಪ್ರಾಪ್ತಿಯಾಯಿತು.  ಇದು ಗಯಾ ಗದಾಧರನ ಮಹಿಮೆ.
ಈ ಗಯಾ ಕ್ಷೇತ್ರದಲ್ಲಿ ಸ್ನಾನ , ದಾನ, ಜಪ , ಹೋಮ , ಪಿತೃ ಯಜ್ಞಾದಿಗಳನ್ನು ಮಾಡಿದರೆ ಪುಣ್ಯ ಬರುವುದಲ್ಲದೇ ಅಕ್ಷಯ ಲೋಕಗಳು ಪ್ರಾಪ್ತವಾಗುತ್ತದೆ

Monday, February 24, 2014

“ಇದು ಶಿವ ಮೆಚ್ಚುವಂತೆ ಬದುಕಿದವರ ಕತೆ”

ಸ್ನೇಹಿತರಿಗೆಲ್ಲಾ ನಮಸ್ಕಾರ.
ಸರ್ವರಿಗೂ ಮಹಾಶಿವರಾತ್ರಿಯ ಶುಭಾಶಯಗಳು,
ಸ್ನೇಹಿತರೇ, ನಾನು ಇತ್ತೀಚೆಗೆ ಓದಿದ “ಉದಾರಚರಿತರು ಉದಾತ್ತ ಪ್ರಸಂಗಗಳು” ಎಂಬ ಒಂದು ಉತ್ತಮ ಪುಸ್ತಕದ ಕುರಿತು ಈ ಸಮಯದಲ್ಲಿ  ನಾಲ್ಕು ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸುತ್ತಿದೆ.  ಕನ್ನಡದ ಅಗ್ರ ಸಂಶೋಧಕ, ಹಳೆಗನ್ನಡ ವ್ಯಾಕರಣ, ಛಂದಸ್ಸು ಸೇರಿದಂತೆ ಅನೇಕ ವಿಚಾರಗಳ ಕುರಿತು ಸಾಕಷ್ಟು ಅಧ್ಯಯನ ನಡೆಸಿರುವ ವಿದ್ವಾಂಸರಾದ ಟಿ.ವಿ. ವೆಂಕಟಾಚಲ ಶಾಸ್ತ್ರಿಗಳು ಬರೆದು ಸಂಕಲಿಸಿದ ಈ ಕೃತಿ ಕನ್ನಡ ಸಾಹಿತ್ಯ ಲೋಕದ  ಅಮೂಲ್ಯ ಕೃತಿಗಳಲ್ಲಿ ಒಂದಾಗಿದೆ.
ಒಟ್ಟು ನೋರೈವತ್ತೊಂದು ಪ್ರಸಂಗಗಳಿಂದ ಕೂಡಿದ ಈ ಕೃತಿಯು ಲೇಖಕರೇ ಹೇಳುವಂತೆ “ಈಚೆನ ದಿನಗಳಲ್ಲಿ ಪ್ರಭಾಷೆ, ಸಂಸ್ಕೃತಿಗಳ ಅನುಕರಣೆ...... ಕ್ಲಬ್ಬು, ಪಾರ್ಟಿಗಳ ಸ್ವಚ್ಚಂದ, ಸಾಂಘಿಕ ಜೀವನ......ಇವು ಹೆಚ್ಚಾಗುತ್ತಿವೆ.ಇವಕ್ಕೇನಾದರೂ ಚಿಕಿತ್ಸೆಯುಂಟೆ? ಅಂತಹಾ ಚಿಕಿತ್ಸೆಯನ್ನು ಸಕಾಲದಲ್ಲಿ ಮಾಡುವುದು ಸಾಮಾಜಿಕರ ಕರ್ತವ್ಯವಲ್ಲವೆ? ನಮ್ಮ ಯುವಪೀಳಿಗೆಗೆ ಮಾದರಿಗಳೆನ್ನಬಹುದಾದ ಉದಾತ್ತ ಪ್ರಸಂಗಗಳನ್ನು ತಿಳಿಸಿದರೆ, ಅವರು ಆ ದಿಕ್ಕಿನಲ್ಲಿ ಯೋಚಿಸುವುದು, ಸಾಗುವುದು, ಕೆಲಮಟ್ಟಿಗಾದರೂ ಸಾಧ್ಯವಾಗಬಹುದು.”  ಹೀಗಿರುವಲ್ಲಿ, ಈ ಮಹಾಶಿವರಾತ್ರಿಯು ಸನಿಹದಲ್ಲಿರುವ ಸಂದರ್ಭದಲ್ಲಿ ಶಿವ ಮೆಚ್ಚುವಂತೆ ಬದುಕಿದ ನಮ್ಮ ಹಿರಿಯರ ಆದರ್ಶ ಜೀವನವನ್ನು ನಾವೂ ತಿಳಿಯೋಣ, ಅನುಸರಿಸೋಣ ಎಂಬ ಆಶಯದೊಡನೆ ಆ ಪುಸ್ತಕದಲ್ಲಿ ನನಗಿಷ್ಟವಾದ 2 ಪ್ರಸಂಗಗಳನ್ನು ಇಲ್ಲಿ ನಿಮಗಾಗಿ ನೀಡಿದ್ದೇನೆ.  ಇದು ನಿಮಗೂ ಇಷ್ಟವಾಗುತ್ತದೆನ್ನುವ ಭರವಸೆ ನನಗಿದೆ.
……………………………
‘ಅದು ಹೋಗಬೇಕಾದ ಜಾಗಕ್ಕೆ ಹೋಯಿತು’
ಪರೋಪಕಾರಿಗಳಾಗಿದ್ದ ಬೆಂಗಳೂರು ಎಲೆ ಮಲ್ಲಪ್ಪ ಶೆಟ್ಟರು ಮಹಾ ಶ್ರೀಮಂತರು ,ಆದರೆ ಕೊನೆಗಾಲಕ್ಕೆ ಕಷ್ಟಗಳಿಗೆ ಸಿಕ್ಕಿದರು, ಬಡತನ ಆಡಿಸಿತು. ಇವರ ಕೊಡುಗೈ ದಾನದ ದುರುಪಯೋಗ ತಪ್ಪಿಸಲು ಮನೆಯವರು ಶೆಟ್ಟರು ಹೆಚ್ಚಾಗಿ ಕಾಲ ಕಳೆಯುತ್ತಿದ್ದ ಮಹಡಿಯ ಮೇಲಕ್ಕೆ ಅಪರಿಚಿತರನ್ನೆಲ್ಲಾ ಬಿಡದ ಹಾಗೆ ಕಾವಲು ಹಾಕಿದ್ದರು. ಒಂದು ದಿನ ಶೆಟ್ಟರ ಆರೋಗ್ಯ ಸಾಕಷ್ಟು ಚೆನ್ನಾಗಿರಲಿಲ್ಲ. ಮಹಡಿಯ ಮೇಲೆ ತಮ್ಮ ಕೋಣೆಯಲ್ಲಿ ಮಲಗಿ ವಿಶ್ರಮಿಸುತ್ತಿದ್ದರು.  
ಒಬ್ಬ ಬ್ರಾಹ್ಮಣ ಗೃಹಸ್ಥನು ಕಾವಲುಗಾರನ ಕಣ್ಣು ತಪ್ಪಿಸಿ ಹೇಗೋ ನುಸುಳಿಕೊಂಡು ಶೆಟ್ಟರ ಮಹಡಿ ಕೋಣೆಗೆ ಬಂದನು. “ಯಾರಪ್ಪ ನೀನು? ಯಾಕೆ ಬಂದೆ?” ಎಂದು ಶೆಟ್ತರು ಪ್ರಶ್ನಿಸಿದರು. ಆತನು ಅಳುತ್ತಾ ಮಾತ್ನಾಡದೆ ಅವರ ಕಾಲು ಹಿಡಿದುಕೊಂಡನು.  “ಬೇಡಪ್ಪ, ಬೇಡ.. ಕಾಲು ಹಿಡಿಯಬೇಡ, ಕೂತುಕೋ. ಏನು ವಿಚಾರ ಹೇಳು?” ಎಂದು ಪ್ರಶ್ನಿಸಿ ತಮ್ಮ ಮಂಚದ ಬದಿಗೆ ಆತನನ್ನು ಕೂರಿಸಿಕೊಂಡರು. “ಏನು ಹೇಳಲಿ ಶೆಟ್ಟರೆ, ಮಾತನಾಡಲು ನನಗೆ ಬಾಯಿ ಬರುತ್ತಿಲ್ಲ, ನಿಮ್ಮ ಸ್ಥಿತಿ ತಿಳಿದಿದ್ದೂ ವಿಧಿಯಿಲ್ಲದೆ ಬಂದಿದ್ದೇನೆ”  ಎಂದು ಅಲವತ್ತುಕೊಂಡನು. “ವಿಷಯವೇನೆಂದು ಹೇಳಲೇ ಇಲ್ಲವಲ್ಲ?” ಎಂದರು ಶೆಟ್ತರು.
ಬ್ರಾಹ್ಮಣ ಗೃಹಸ್ಥ ಅಳುತ್ತಾ ಹೇಳಿದನು, “ನಾನು ಬಡವ, ಹಿಂದೆ ಎಷ್ಟೋ ಸಲ ತಾವು ನನಗೆ ಸಹಾಯ ಮಾಡಿದ್ದೀರಿ. ತಮಗೆ ನನ್ನಂತವರು ಎಷ್ಟೋ ಜನ, ತಮಗೆ ಮರೆತು ಹೋಗಿರುತ್ತದೆ. ತಾವು ಕೊಡುಗೈ ದೊರೆ, ತಮಗೆ ತೊಂದರೆಯಿದ್ದೂ ಬೇಡುವ ಅನಿವಾರ್ಯ ನನಗೆ ಬಂದಿದೆ. ನನ್ನ ಮಗಳ ಮದುವೆ ನಿಶ್ಚಯವಾಗಿದೆ. ಕಷ್ಟಪಟ್ಟು ಹೊಂದಿಸಿರುವ್ ಸಂಬಂಧ, ಹಣಾದ ಕೊರತೆಯಿಂದ ನಿಂತುಹೋಗುವ ಭಯ ಬಂದಿದೆ. ತಾವು ಸಹಾಯ ಮಾಡಿ ಪುಣ್ಯ ಕಟ್ಟಿಕೊಳ್ಳಬೇಕು”
ಮಲ್ಲಪ್ಪ ಶೆಟ್ಟರು ಚಿಂತಾಕ್ರಾಂತರಾದರು. “ನನ್ನಲ್ಲಿ ಕೊಡ್ಲು ಏನೂ ಉಳಿದಿಲ್ಲವಲ್ಲಪ್ಪ” ಎಂದರು. ‘ಕಷ್ಟ’ಎಂದು ಬೇಡಲು ಬಂದವರಿಗೆ ಏನೂ ಕೊಡಲಾಗದಂತೆ ಕೈ ಕಟ್ಟಿ ಹಾಕಿದೆಯಲ್ಲ ಶಿವನೇ ಎಂದು ಕೊರಗಿದರು. ಹೀಗೆನ್ನುತ್ತಾ ತಮ್ಮ ಕೈಯೆರಡಾನ್ನೂ ತಮಗೆ ತಿಳಿಯದಂತೆ ಎದೆಯ ಮೇಲಿಟ್ಟುಕೊಂಡರು. ಅವರ ಕೈಗಳಿಗೆ ಶಿವಪೂಜೆಯ ಕರಡಿಗೆ ಸೋಕಿತು. ಅವರಿಗೆ ಕೂಡಲೇ ಮಿಂಚು ಹೊಳೆದಂತಾಯಿತು!
ತತ್ ಕ್ಷಣ ಎದ್ದು ಕುಳಿತರು. “ಇಲ್ಲೇ ಕುಳಿತಿರಿ, ಈಗಲೇ ಬಂದು ಬಿಡುತ್ತೇನೆ” ಎಂದು ಹೇಳಿ ಬೇಗ ಬೇಗ ಮೆಟ್ಟಿಲಿಳಿದು ಬಚ್ಚಲುಮನೆಗೆ ಹೋಗಿ ಕೈಕಾಲು ಮುಖ ತೊಳೆದುಕೊಂಡರು. ದೇವರ ಮನೆಗೆ ಹೋದರು. ಅಲ್ಲಿ ಮಡಿಯಾಗಿದ್ದ ಒಂದು ಕೆಂಪು ವಸ್ತ್ರ ತೆಗೆದುಕೊಂಡರು. ತಮ್ಮ ಬಂಗಾರದ ಕರಡಿಗೆಯಲ್ಲಿದ್ದ ಲಿಂಗವನ್ನು ಆ ವಸ್ತ್ರದಲ್ಲಿ ಸುತ್ತಿ ಕಟ್ಟಿ ಕೊರಳಿಗೆ ಕಟ್ಟಿಕೊಂಡರು. ಬಂಗಾರದ ಕರಡಿಗೆ ತೆಗೆದುಕೊಂಡು ಪುನಃ ಮಹಡಿ ಏರಿದರು.
ಆ ಬಂಗಾರದ ಕರಡಿಗೆ ಆ ಕಾಲದಲ್ಲಿ ಬಳಕೆಯಲ್ಲಿದ್ದ ತೊಟ್ಟಿಲು ಆಕಾರದಲ್ಲಿದ್ದು, ಸುಮಾರು ಒಂದೂವರೆ ಸೇರು ತೂಕ ತೂಗುತ್ತಿತ್ತು. ಅದನ್ನು ಒಂದು ಬಟ್ಟೆಯಲ್ಲಿ ಸುತ್ತಿ ಬ್ರಾಹ್ಮಣ ಗೃಹಸ್ಥನ ಕೈಯ್ಯಲ್ಲಿಟ್ಟು ಹೇಳಿದರು, “ಅಪ್ಪ ಯಾರಿಗೂ ತೋರಿಸದೆ ತೆಗೆದುಕೊಂಡು ಹೋಗು, ಯಾರಾದರೂ ನೋಡಿದರೆ ಕಿತ್ತುಕೊಂಡಾರು. ಜೋಪಾನ, ಬೇಗ ಹೊರಟುಬಿಡು.  ಮಗಳ ಮದುವೆ ಚೆನ್ನಾಗಿ ನಡೆಯಲಿ, ದಂಪತಿಗಳು ನೂರ್ಕಾಲ ಚೆನ್ನಾಗಿರಲಿ”
ಮುಂದೆ ಕೆಲ ದಿನಗಳು ಕರಡಿಗೆ ಕಾಣೆಯಾದ ವಿಷಯ ಮನೆಯವರಿಗೆ ತಿಳಿಯದ ಹಾಗೆ ಸದಾ ವಲ್ಲಿಯನ್ನು ಹೊದ್ದು ಓಡಾಡಿದರು. 15 ದಿನಗಳ ಮೇಲೆ ವಸ್ತ್ರದ ಲಿಂಗ ಕಟ್ಟಿಕೊಂಡಿದ್ದದ್ದು ಮಗಳ ಕಣ್ಣಿಗೆ ಬಿತ್ತು. “ಇದೇಕೆ ಅಪ್ಪಾಜಿ, ವಸ್ತ್ರದಲ್ಲಿ ಲಿಂಗ ಕಟ್ಟಿಕೊಂಡಿದ್ದೀರಿ, ಕರಡಿಗೆ ಎಲ್ಲಿ?” ಎಂದು ಕೇಳಿದಳು. ಶೆಟ್ಟರು ನಗುತ್ತಾ “ಅದು ಹೋಗಬೇಕಾದ ಜಾಗಕ್ಕೆ ಹೋಯಿತು” ಎಂದರು.
ಆಧಾರ: ಜಯಾ ರಾಜಶೇಖರ್ ಬರೆದಿರುವ ‘ಎಲೆ ಮಲ್ಲಪ್ಪ ಶೆಟ್ತರು’ ಪುಸ್ತಕದ ಪುಟ 48-52

‘ನೋಡಿ ಆ ಬಸವಣ್ಣಗಳು ಬಿಸಿಲಿನಲ್ಲಿ ದುಡಿಯುತ್ತಿಲ್ಲವೆ?’
ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲೂಕು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಸ್ವಾಮೀಜಿ ಶ್ರೀ ರಾಘವೇಂದ್ರ ಸ್ವಾಮಿಗಳು ಆಗಾಗ ಹತ್ತಿರದ ಹಳ್ಳಿಗಳಲ್ಲಿ ತಮ್ಮ ಶಿಷ್ಯರೊಂದಿಗೆ ಯೋಗಪ್ರದರ್ಶನ ಕೊಡುತ್ತಿದ್ದರು. ಹೀಗೆಯೇ ಒಮ್ಮೆ ಅಂತಹಾ ಪ್ರದರ್ಶನ ಚೆನ್ನಗಿರಿ ತಾಲೂಕು ಕಛೇರಿಯ ಮುಂಭಾಗದಲ್ಲಿ ಸಹ ನಡೆದಿತ್ತು. ಅದು ‘1948-49 ರಲ್ಲಿ, ಆಗದನ್ನು ನೋಡಿ ಅಚ್ಚರಿ ಪಟ್ಟಿದ್ದ ಜಿ. ಗೋವಿಂದರಾಜು ಎನ್ನುವವರು 1963-64 ರ ಸುಮಾರಿನಲ್ಲಿ ತಾವು ಉಪಾಧ್ಯಾಯರಾಗಿದ್ದ ಅವಧಿಯಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ಆಶ್ರಮಕ್ಕೆ ಭೇಟಿಕೊಟ್ತರು.
ಮಧ್ಯಾಹ್ನ 12 ರಸಮಯ, ರಾಘವೇಂದ್ರ ಸ್ವಾಮಿಗಳು ಒಬ್ಬಿಬ್ಬರು ಕೆಲಸಗಾರರೊಂದಿಗೆ ಕಣದಲ್ಲಿ ಹುಲ್ಲು ಎತ್ತಿ ಹಾಕುತ್ತಾ ಎತ್ತುಗಳ ಜೊತೆಗೆ ತಾವೂ ದುಡಿಯುತ್ತಿದ್ದರು. ಪರಸ್ಥಳದಿಂದ ಬಂದ ಅತಿಥಿಗಳನ್ನು ಕಾಣುತ್ತಲೇ ಕೆಲಸದ ಸ್ಥಳದಿಂದ ಜಿಂಕೆಯಂತೆ ಓಡುತ್ತಾ ಬಂದರು. ಅವರು ಆ ಉರಿಬಿಸಿಲಲ್ಲಿ ಹಾಗೆ ಕೆಲಸ ಮಾಡುತ್ತಿದ್ದುದು ಕಂಡು, ಮೈಯಲ್ಲಿ ಬೆವರಿಳಿಯುತ್ತಿದ್ದುದು ಕಂಡು, ಗೋವಿಂದರಾಜು ಸಹಾನುಭೂತಿ ಮಾತು ಹೇಳಬೇಕೆಂದು ಯೋಚಿಸಿದರು. “ಸ್ವಾಮೀಜಿ, ವಿಪರೀತ ಬಿಸಿಲು, ತಾವು ಈ ಬಿಸಿಲಲ್ಲೇ ಹೀಗೆ.....” ಎಂದೇನೋ ಹೇಳಲು ಹೊರಟರು. ತಕ್ಷಣವೇ ಸ್ವಾಮೀಜಿ “ಏನಂದಿರಿ, ನನಗೊಬ್ಬನಿಗೇ ಬಿಸಿಲೇ? ನೋಡಿ ಆ ಬಸವಣ್ಣಗಳು ಬಿಸಿಲಲ್ಲಿ ದುಡಿಯುತ್ತಿಲ್ಲವೆ?” ಎಂದರು.
ಒಂದೆರಡು ವರ್ಷಗಳ ಈಚೆಗೆ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾಸ್ ಆಸ್ಪತ್ರೆಯನ್ನು ಸ್ವಾಮೀಜಿ ಸೇರಿದ್ದರು. ಗೋವಿಂದರಾಜು ಮತ್ತು ಅವರ ಸ್ನೇಹಿತರು ಸ್ವಾಮೀಜಿಯನ್ನು ನೋಡಿ ಹೋಗಲು ಆಸ್ಪತ್ರೆಗೆ ಬಂದರು. ವಿಶೇಷ ವಾರ್ಡಿನಲ್ಲಿರುವುದು ತಿಳಿಯಿತು. ಹೋಗಿ ನೋಡಿದಾಗ, ಕೊಠಡಿಯನ್ನು ಅಗರಬತ್ತಿಯ ಕಂಪು ಆವರಿಸಿತ್ತು; ಸ್ವಾಮೀಜಿ ಪದ್ಮಾಸನದಲ್ಲಿ ಕುಳಿತು ಧ್ಯಾನಸ್ಥರಾಗಿದ್ದರು. ಅವರು ಸ್ವಲ್ಪ ಹೊತ್ತಿನ ಮೇಲೆ ಕಣ್ಣು ತೆರೆದು ಬಂದವರೊಡನೆ ನಗುತ್ತಾ ಮಾತನಾಡಿದರು. ಆಗ “ಇದೇನು ಸ್ವಾಮೀಜಿ, ತಮಗೆ ತೀವ್ರವಾಗಿ ಹೀಗೆ ಅನಾರೋಗ್ಯವಾಗಿದ್ದರೂ ಧ್ಯಾನದ ಚಿಂತೆಯೇಕೆ?” ಎಂಬುದಾಗಿ ಪ್ರಶ್ನಿಸಿದರು. ಅವರು ಮುಗುಳು ನಗುತ್ತಾ, “ಹಾಗೇನಿಲ್ಲ ಪಕ್ಕದ ಕೊಠಡಿಯಲ್ಲಿ ಒಂದು ಹೆಣ್ಣುಮಗು ಹೊಟ್ಟೆನೋವಿನಿಂದ ತುಂಬಾ ಒದ್ದಾಡುತ್ತಿದೆ, ಈಗ ತಾನೆ ನೋಡಿ ಬಂದೆ, ‘ ಮಗುವಿನ ಸಂಕಟ ದೂರವಾಗಲಿ’ ಎಂಬುದಾಗಿ ಪರಮೇಶ್ವರನನ್ನು ಧ್ಯಾನಿಸುತ್ತಾ ಕುಳಿತಿದ್ದೆ” ಎಂದರು.
ಆಧಾರ: ತ.ಸು. ಶಾಮರಾಯ ಸಂಪಾದಿತ ‘ನಂದನವನ’ ಪುಟ 119-120

Wednesday, February 19, 2014

ನಮ್ಮಲ್ಲಿನ ಸ್ಥಳ ಪುರಾಣಾಗಳು(Myths) -18

ಅಹೋಬಿಲ(Ahobilam)
ನಮಸ್ಕಾರ ಗೆಳೆಯರೆ,
ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯಲ್ಲಿನ ಶ್ರೀ ಕ್ಷೇತ್ರ ಅಹೋಬಿಲಮ್ ಅಲ್ಲಿನ ಮಹಾವಿಷ್ಣುವಿನ ಸಾಕ್ಷಾತ್ ಅವತಾರವಾದ ಶ್ರೀ ನರಸಿಂಹಸ್ವಾಮಿಯಿಂದಾಗಿ ಜಗತ್ಪ್ರಸಿದ್ದಿ ಹೊಂದಿದಂತಹಾ ಕ್ಷೇತ್ರ. ಬಹು ಪುರಾತನವಾದ ಐತಿಹ್ಯಗಳನ್ನು ಒಳಗೊಂಡ ಈ ಕ್ಷೇತ್ರಕ್ಕೆ ಅದರದೇ ಆದ ಪಾವಿತ್ರ್ಯತೆ ಇದೆ. ಇಲ್ಲಿಗೆ ದಿನನಿತ್ಯವೂ ದೇಶದ ನಾನಾ ಭಾಗಗಳಿಂದ ಬರುವ ಸಾವಿರಾಅರು ಸಂಖ್ಯೆಯ ಭಕ್ತಾದಿಗಳು ಶ್ರೀ ದೇವರ ದರ್ಶನವನ್ನು ಹೊಂದಿ ತಮ್ಮ ಜನ್ಮ ಪಾವನಗೊಂಡಿತೆಂದು ಭಾವಿಸುತ್ತಾರೆ.
ಅಹೋಬಿಲ ಉಗ್ರ ನರಸಿಂಹ ಉದ್ಭವ ಮೂರ್ತಿ
 ಪುರಾಣ ಕಾಲದಲ್ಲಿ ವೈಕುಂಠದ ದ್ವಾರಪಾಲಕರಾಗಿದ್ದ ಜಯ ವಿಜಯರು ಒಮ್ಮೆ ಕಾರಣಾಂತರಗಳಿಂದ ಭೂಮಿಯಲ್ಲಿ ಮಾನವರಾಗಿ ಜನ್ಮಿಸಬೇಕಾಗಿ ಬರುತ್ತದೆ. ಆಗ ಶ್ರೀ ಮನ್ಮಹಾವಿಷ್ಣುವು ಅವರಿಗೆ ಹೀಗೆಂದು ಕೇಳುತ್ತಾನೆ “ನೀವುಗಳು ಸದಾ ಕಾಲ ನನ್ನ ಭಕ್ತರಾಗಿದ್ದು ನನ್ನಿಂದ ಮೋಕ್ಷ ಹೊಂದುವವರಗಿ ಸತತ ಏಳು ಜನ್ಮಗಳನ್ನು ಕಳೆಯಬಯಸುವಿರೋ, ಇಲ್ಲವೆ ನನ್ನ ಬದ್ದ ವೈರಿಗಳಾಗಿ ನನ್ನಿಂದಲೇ ವಧಿಸಲ್ಪಟ್ಟು ಮೂರು ಜನ್ಮದಲ್ಲಿಯೇ ಶಾಪವಿಮೋಚನೆಯನ್ನು ಹೊಂದುವಿರೋ ಹೇಳಿ”. ಅದಕ್ಕೆ ಜಯ ವಿಜಯರು “ತಾವು ಮೂರು ಜನಮ್ಗಳ ಕಾಲ ನಿನ್ನ ವೈರಿಗಳಾಗಿದ್ದು ಶಾಪ ವಿಮೋಚನೆ ಹೊಂದುತ್ತೇವೆ, ಏಳು ಜನಮ್ಗಳಕಾಲಾವಧಿಯು ಬಹಳ ಅಧಿಕವಾಯಿತು.” ಎಂದುತ್ತರ್ರಿಸುತ್ತಾರೆ. ಅದಕ್ಕೊಪ್ಪಿದ ಮಹಾ ವಿಷ್ಣುವು “ತಥಾಸ್ತು” ಎನ್ನುತ್ತಲೇ ಅವರೀರ್ವರೂ ಭೂಮಿಯಲ್ಲಿ ರಕ್ಕಸರಾಗಿ ಹುಟ್ಟುತ್ತಾರೆ. ಹಾಗೆ ಜನ್ಮದಳೆದವರು ತಾವು ಹಿರಣ್ಯಾಕ್ಷ ಹಾಗ್ಜ಼್ಜ಼್ಜ಼್ಜ಼್ಜ಼ು ಹಿರಣ್ಯ ಕಷಿಪು ಎನ್ನುವ ಹೆಸರಿನೊಂದಿಗೆ ಸೋದರರಾಗಿ ಹುಟ್ಟಿ ಹರಿಯ ವದ್ದ ವಿರೋಧಿಗಳಾಗಿ ಲೋಕಕಂಟಕರಾಗಿ ಮೆರೆದಾಡುತ್ತಾರೆ. ಅದರಲ್ಲಿ ಹಿರಣ್ಯಾಕ್ಷನನ್ನು ಶ್ರೀ ಹರಿಯು ವರಾಹ ಅವತಾರವೆತ್ತಿ ಸಂಹರಿಸುತ್ತಾನೆ. ಅದೇ ಹಿರಣ್ಯಾಕ್ಷನ ಸಹೋದರನಾದ ಹಿರಣ್ಯ ಕಷಿಪ್ವಿಗೆ ಶ್ರೀ ಹರಿಯ ಮೇಲೆ ಮತ್ತಷ್ಟು ಕೋಪ ಉಕ್ಕಲು ಕಾರಣವಾಗುತ್ತದೆ. ಅದಾಗ ಹಿರಣ್ಯ ಕಷಿಪುವು ಬ್ರಹ್ಮನನ್ನು ಕುರಿತಂತೆ ಘೋರ ತಪಸ್ಸನ್ನಾಚರಿಸಿ ಅವನಿಂದ ಈ ಕೆಳಕಂಡಂತೆ ವರವನ್ನು ಪಡೆಯುತ್ತಾನೆ-

``ತನ್ನ ಮರಣವು ಮನುಷ್ಯನಿಂದಾಗಲಿ ಪ್ರಾಣಿಗಳಿಂದಾಗಲಿ ಬರಕೂಡದು, ಹಗಲು ಅಥವಾ ರಾತ್ರಿ ಬರಬಾರದು, ಮನೆಯಲ್ಲಿ ಅಥವಾ ಮನೆಯ ಹೊರಗೆ ಬರಬಾರದು’’ ಮತ್ತು “ತನಗೆ ದೊರೆತ ಈ ವರದಿಂದ ತಾನು ತ್ರಿಮೂರ್ತಿಗಳಿಗಿಂತಲೂ ದೊಡ್ಡವನು, ನನ್ನನ್ನಿನ್ನು ಯಾರಿಂದಲೂ ಏನೂ ಮಾಡಲು ಸಾಧ್ಯವಿಲ್ಲ.” ಎನ್ನುವುದಾಗಿ ಅಹಂಕಾರದಿಂದ ಬೀಗುತ್ತಾನೆ.
ಹೀಗೆ ಕೆಲ ಕಾಲ ಸರಿಯಿತು. ಕಯಾಲು ಎಂಬ ರಾಜಕುಮಾರಿಯೊಂದಿಗೆ ಹಿರಣ್ಯ ಕಷಿಪುವಿನ ವಿವಾಹವಾಯಿತು. ಅವರಿಬ್ಬರಿಗೂ ಮುದ್ದಾದ ಒಂದು ಗಂಡುಮಗುವು ಜನ್ಮಿಸಿತು ಅದಕ್ಕೆ ‘ಪ್ರಹ್ಲಾದ’ ನೆಂಬುದಾಗಿ ನಾಮಕರಣವನ್ನು ಮಾಡಲಾಯಿತು.
ದಿನ ದಿನಕ್ಕೂ ಪ್ರಹ್ಲಾದ ಕುಮಾರನು ಬಹು ಸೊಂಪಾಗಿಯೂ, ಚೂಟಿಯಾಗಿಯೂ ಬೆಳೆಯುತ್ತಿದ್ದನು. ವಿಪರ್ಯಾಸವೆಂದರೆ ಪ್ರಹ್ಲಾದನ ತಂದೆ ಹಿರಣ್ಯ ಕಷಿಪುವು ಮೂಲೋಕದಲ್ಲಿ ಭಯವನ್ನು ಹುಟ್ಟಿಸುವ ದೈತ್ಯನಾಗಿದ್ದವನು. ಆದರೆ ಆತನ ಧರ್ಮಪತ್ನಿಯಾಗಿದ್ದ ಕಯಾಲು ಮಾತ್ರ ತಾನು ಮಹಾನ್ ದೈವ ಭಕ್ತೆಯಾಗಿದ್ದವಳು. ಅಂತೆಯೇ ದಿನನಿತ್ಯವೂ ಮುಂಜಾನೆ ಮತ್ತು ಸಂದ್ಯಾ ಸಮಯದಲ್ಲಿ ತಪ್ಪದೆ ಪರಮೇಶ್ವರನನ್ನು ಆರಾಧಿಸುತ್ತಿದ್ದಳು.  ಇದರಿಂದಲೋ ಏನೋ ಎಂಬಂತೆ ಪ್ರಹ್ಲಾದ ಕುಮಾರನೂ ಸಹ ತಾಯಿಯಂತೆಯೇ ಮಹಾನ್ ದೈವಭಕ್ತನಾದನು. ಅದರಲ್ಲಿಯೂ ತಂದೆಯು ಪರಮ ವೈರಿ ಎಂದೇ ಬಗೆದಿದ್ದ ಶ್ರೀ ಹರಿಯ ಕುರಿತು ಅಪಾರ ಪ್ರೇಮಪೂರಿತ ಭಕ್ತಿಯನ್ನು ತಾಳಿದ್ದನು.
ತನ್ನ ತಂದೆಗೆ ತಾನು ನಾರಾಯಣನ ಸ್ಮರಣೆ ಮಾಡುವುದು ಇಷ್ಟವಿಲ್ಲವೆನ್ನುವುದು ಪ್ರಹ್ಲಾದ ಕುಮಾರನಿಗೂ ತಿಳಿದಿತ್ತಾದರೂ ಅವನಿಂದ ಶ್ರೀ ಹರಿಯ ಸ್ಮರಣೆ ಮಾಡದಿರಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಕುಮಾರನು ಆದಷ್ಟು ತಂದೆಯ ಎದುರು ಕಾಣಿಸಿಕೊಳ್ಳುವುದರಿಂದ ತಪ್ಪಿಸಿಕೊಳ್ಳುತ್ತಿದ್ದನು. ಆದರೂ ಒಮ್ಮೊಮ್ಮೆ ಪ್ರಹ್ಲಾದನಿಗೆ ರಾಜನ ಭೇಟಿಯಾಗುತ್ತಿತ್ತು. ಆಗೆಲ್ಲಾ ಹಿರಣ್ಯನು ಮಗನ ‘ನಾರಾಯಣಾ.. ನಾರಾಯಣಾ..’ ಎಂಬ ನಾಮಸ್ಮರಣೆಯನ್ನು ಕೇಳಿ ಕ್ರೋಧದಿಂದ ಕುದಿಯುತ್ತಿದ್ದನು. ಮತ್ತು ಮಗನಿಗೆ ಸಾಕಷ್ಟು ದೊಡ್ಡ ಶಿಕ್ಷೆ ವಿಧಿಸುವಂತೆ ಸೇವಕರಿಗೆ ಆಜ್ಞೆ ಮಾಡುತ್ತಿದ್ದನು. ಆ ಕಾರಣಾದಿಂದಲಾದರೂ ಮಗನು ಶ್ರೀ ಹರಿಯ ನಾಮಸ್ಮರಣೆಯನ್ನು ನಿಲ್ಲಿಸುತ್ತಾನೆಂಬುವುದು ಹಿರಣ್ಯನ ಎಣಿಕೆಯಾಗಿತ್ತು.
ಆದರೆ ಆದದ್ದೇ ಬೇರೆ, ಹಿರಣ್ಯ ಕಷಿಪುವು ತನ್ನನ್ನು ಸಾಕಷ್ಟು ದೊಡ್ಡ ಶಿಕ್ಷೆಗೆ ಗುರಿ ಮಾಡಿದಂತೆಲ್ಲಾ ಪ್ರಹ್ಲಾದನಲ್ಲಿ ಶ್ರೀ ಹರಿಯ ಮೇಲಿನ ಭಕ್ತಿ ಇಮ್ಮಡಿ ಮುಮ್ಮಡಿಯಾಗಿ ಹೆಚ್ಚುತ್ತಾ ಹೋಯಿತಲ್ಲದೆ ಕಡಿಮೆಯಾಗಲಿಲ್ಲ! ಹೀಗಿರಲು ಅದೊಂದು ದಿನ ಹರಿನಾಮ ಭಜನೆಯಲ್ಲಿ ನಿರತನಾಗಿದ್ದ ಪ್ರಹ್ಲಾದ ಕುಮಾರನಿಗೆ ತನ್ನ ತಂದೆ ಅತ್ತ ಬಂದುದೇ ತಿಳಿಯಲಿಲ್ಲ. ಹಿರಣ್ಯ ಕಷಿಪುವು ಪ್ರಹ್ಲಾದ ಕುಮಾರನ ಹರಿ ಭಜನೆಯನ್ನು ಕೇಳಿಸಿಕೊಂಡು ಕ್ರೋಧ ತತ್ಪರನಾಗಿ ತಕ್ಷಣವೇ ತನ್ನ ಸೇವಕರಲ್ಲಿ “ರಾಜಕುಮಾರನನ್ನು ಸಾಕಷ್ಟು ಎತ್ತರದ ಭಾಗದಿಂದ ಆಳವಾದ ಕಂದರಕ್ಕೆ ನೂಕಿ ಬಂದು ನನಗೆ ತಿಳಿಸಿರಿ” ಎನ್ನುವುದಾಗಿ ಆಜ್ಞೆ ಮಾಡಿದನು. ಸೇವಕರು ತಾನೆ ಏನು ಮಾಡಿಯಾರು? ಅವರು ರಾಜಾಜ್ಞೆಯನ್ನು ಪಾಲಿಸಿ ಬಂದು ರಾಜರಿಗೆ ತಿಳಿಸಿದರು. ಆದರೆ ಇದಾದ ಸ್ವಲ್ಪ ಸಮಯದಲ್ಲಿಯೇ ಮಹಡಿಯ ಮೇಲಿದ್ದ ರಾಜನಿಗೆ ದೂರದಲ್ಲಿ ಪ್ರಹ್ಲಾದ ಕುಮಾರನು ಅರಮನೆಯತ್ತ ಬರುತ್ತಿರುವುದು ಕಾಣಿಸಿತು. ತನ್ನ ಮಗನು ಜೀವದಿಂದಿರುವುದನ್ನು ಕಂಡು ಕುಪಿತಗೊಂಡ ಹಿರಣ್ಯ ಕಷಿಪುವು ಏನು ನಡೆಯಿತೆನ್ನುವ ಬಗ್ಗೆ ಮಗನನ್ನೇ ವಿಚಾರಿಸಬೇಕೆಂದು ನಿರ್ಧರಿಸಿ ಅರಮನೆಗೆ ಬಂದ ಪ್ರಹ್ಲಾದನನ್ನು ನೇರವಾಗಿ ತನ್ನಲ್ಲಿಗೆ ಬರಲು ಹೇಳಿಕಳಿಸಿದನು. ಪ್ರಹ್ಲಾದ ಕುಮಾರನು ತಾನು ತಂದೆ ಎದುರು ಬಂದು ವಿನಮ್ರವಾಗಿ ನಿಲ್ಲಲು “ಸೇವಕರು ನಿನ್ನನ್ನು ಬೆಟ್ಟದ ಮೇಲಿನಿಂದ ನೂಕಿದರಲ್ಲವೆ?” ಎಂದು ಕೇಳಲು ಪ್ರಹ್ಲಾದನು “ಹೌದು ತಂದೆಯೇ ಹಾಗೆಯೇ ಮಾಡಿದರು” ಎಂದನು. ಅದಕ್ಕೆ ಪುನಃ ರಾಜ ಹಿರಣ್ಯನು “ ಹಾಗಾದರೆ ಮತ್ತೆ ನೀನಿಲ್ಲಿಗೆ ಹೇಗೆ ಬಂದೆ?” ಎನ್ನಲು ಪ್ರಹ್ಲಾದನು ನಗುತ್ತಾ “ತಂದೆಯೇ ನಾನೊಂದು ಮರದ ಮೇಲೆ ನಿಧಾನವಾಗಿ ಬಿದ್ದೆನು ಆ ಮರದಿಂದ ಇಳಿಯುತ್ತಲೇ ಒಂದು ಎತ್ತಿನ ಗಾಡಿ ಇತ್ತ ಹೊರಟಿತ್ತು ಅದರಲ್ಲಿ ಕುಳಿತು ಅರಮನೆಯ ಈ ದಾರಿಯವರೆಗೂ ತಲುಪಿದೆನು” ಎಂದುತ್ತರಿಸಿದನು. ಈ ಉತ್ತರದಿಂದ ನಿರಾಸೆಗೊಂಡ್ ಹಿರಣ್ಯನು ಅಲ್ಲಿಂದ ತೆರಳಿದನು.
ಕೆಲದಿನಗಳು ಉರುಳಿದವು, ಪ್ರಹ್ಲಾದನಲ್ಲಿ ಮೂಡಿದ್ದ ಶ್ರೀ ಹರಿಯ ಮೇಲಿನ ಪರಮ ಭಕ್ತಿಯು ದಿನ ದಿನಕ್ಕೂ ಹೆಚ್ಚುತ್ತಾ ಹೋಯಿತು. ಇದೇ ಕಾರಣದಿಂದಾಗಿ ತಂದೆ-ಮಗನ ನಡುವೆ ಅಂತರ ಹೆಚ್ಚುತ್ತಾ ಬಂತು. ಹಿರಣ್ಯ ಕಷಿಪುವಿಗೆ ಮಗನ ಈ ವ್ರ್ತನೆ ಕಂಡು ಕಡು ಕೋಪವು ಉಂಟಾಯಿತು. ಇದೇ ಕಾರಣಾದಿಂದೊಮ್ಮೆ ತಾನು ಹೆತ್ತ ಮಗನೆನ್ನುವುದನ್ನೂ ಲೆಕ್ಕಿಸದೆ ಅವ್ನನ್ನು ಆನೆಯ ಕಾಲಿನಡಿ ನುಸುಳಿಸಿ ಮದಭರಿತ ಗಜಪಡೆಗಳಿಂದ ತುಳಿಸುವ ಶಿಕ್ಷೆ ವಿಧಿಸಿದನು ಆದರೆ ಶ್ರೀ ಮಹಾವಿಷ್ಣುವಿನ ಕೃಪೆಯಿಂದ ಅವನದರಿಂದ ಪಾರಾಗಿ ಬ್ಂದನು. ಹಾಗೆಯೇ ಇನ್ನೊಮ್ಮೆ ಪ್ರಹ್ಲಾದ್ ಕುಮಾರನನ್ನು ಕುದಿಯುತ್ತಿದ್ದ ಎಣ್ಣೆಯ ಬಾಣಲೆಗೆ ಝಾಕಿಸಿದನು. ಆದರೆ ಅದರಲ್ಲಿಯೂ ಪ್ರಹ್ಲಾದ ಕುಮಾರನು ಪವಾಡ ಸದೃಶ ರೀತಿಯಲ್ಲಿ ಪಾರಾದನು. ಹೀಗೆಯೇ ನಾನಾ ವಿಧದಲ್ಲಿ ಮಗನನ್ನು ಶಿಕ್ಷಿಸುತ್ತಾ, ದಂಡಿಸುತ್ತಾ ಅವನನ್ನು ಕತ್ತಲೆ ಕೋಣೆಯೊದರಲ್ಲಿ ಕೂಡಿ ಹಾಕಿದ್ದನು. ಇಷ್ಟಾದರೂ ಪ್ರಹ್ಲಾದನಲ್ಲಿನ ಶ್ರೀ ಹರಿಯ ಮೇಲಿನ ಭಕ್ತಿ ಅದು ಕಿಂಚಿತ್ತು ಸಹ ಕಡಿಮೆಯಾಗಲಿಲ್ಲ, ಬದಲಿಗೆ ದಿನದಿಂದ ದಿನಕ್ಕೆ ಅಧಿಕವಾಗುತ್ತಾ ಹೋಯಿತು.
ತಂದೆಯಾದ ರಕ್ಕಸ ಹಿರಣ್ಯ ಕಷಿಪು ಹಾಗೂ ಮಗ ಪ್ರಹ್ಲಾದ ಕುಮಾರನ ಮಧ್ಯೆ ಇಷ್ಟೆಲ್ಲಾ ನಡೆಯುತ್ತಿದ್ದಾಗ ಹಿರಣ್ಯನ ಧರ್ಮಪತ್ನಿಯೂ ಪ್ರಹ್ಲಾದನ ತಾಯಿಯೂ ಆದ ಕಯಾಲು ದೇವಿಯು ಮಾತ್ರ ತಾನು ಅಂತಃಪುರದ್ಲ್ಲಿ ಕುಳಿತು ಒಬ್ಬಳೇ ರೋಧಿಸುತ್ತಿದ್ದಳು. ಅವಳ ಏಕಾಂತಾ ಕೋಣೆಯಲ್ಲಿದ್ದ ಇಷ್ಟದೇವರ ಮುಂದೆ ಕುಳಿತು ಬಿಕ್ಕಿ ಬಿಕ್ಕಿ ಅತ್ತು ತನ್ನ ಕಷ್ಟಗಳಾನ್ನು ಕಳೆಯಪ್ಪಾ... ಎಂದು ದಯಾರ್ದ್ರುಳಾಗಿ ಬೇಡಿಕೊಳ್ಳುವುದಲ್ಲದೆ ಅವಳಿಗೇನೂ ಮಾಡಲು ಸಾಧ್ಯವಿರಲಿಲ್ಲ.
ಹೀಗಿರಲು ಅದೊಂದು ದಿನ ರಾಜಾ ಹಿರಣ್ಯ ಕಷಿಪುವು ತನ್ನ ಪಟ್ತದರಸಿಯಾದ ಕಯಾಲುವಲ್ಲಿಗೆ ಬಂದನು. ಅದಾಗ ಅಲ್ಲೆಲ್ಲಾ ಆಟವಾಡಿಕೊಳ್ಳುತ್ತಿದ್ದ ಪ್ರಹ್ಲಾದ ಕುಮಾರನೂ ಭಯಗೊಂಡು ಮುಂದೆ ನನಗೇನು ಶಿಕ್ಷೆ ಕಾದಿದೆಯೋ ಎಂದು ಭೀತಿ ಪಡುತ್ತಾ ತಾಯಿಯ ಹಿಂದೆ ಅಡಗಿಕೊಂಡನು. ಅದಾಗ ರಾಜನು “ನಾನು ನಿನ್ನೊಂದಿಗೆ ಏಕಾಂತವಾಗಿ ಕೆಲ ಹೊತ್ತು ಕಳೆಯಬೇಕಾಗಿದೆ, ಒಪ್ಪಿಗೆಯೇ?” ಎನ್ನಲು ಕಯಾಲುವು “ಪತಿದೇವರು ತಮ್ಮ ಧರ್ಮ ಪತ್ನಿಯೊಂದಿಗೆ ಸಮಯ ಕಳೆಯಲು ಅಪ್ಪಣೆ ಕೇಳಬೇಕೇನು? ಖಂಡಿತಾ ಆಗಬಹುದು” ಎನ್ನುತ್ತಾ ಪ್ರಹ್ಲಾದನನ್ನು ಹೊರಗೆ ಆಟವಾಡಲು ಕಳುಹಿಸಿ ಕೊಟ್ತಳು.
ಶ್ರೀ ಕ್ಷೇತ್ರ ಅಹೋಬಿಲ ಶ್ರೀ ನರಸಿಂಹ ಸ್ವಾಮಿ ದೇವಾಲಯ
ಪ್ರಹ್ಲಾದನು ಅತ್ತ ಹೋಗುತ್ತಲೇ ಹಿರಣ್ಯ ಕಷಿಪುವು ತನ್ನ ಪತ್ನಿಯ ಇನ್ನಷ್ಟು ಸನಿಹಕ್ಕೆ ಬಂದು, “ಕಯಾಲು, ನಾನೆಂದರೆ ನಿನಗೆ ಪ್ರೀತಿಯಲ್ಲವೆ? ನನ್ನ ಮೇಲೆ ನಿನಗೆ ನಿಜವಾಗಿಯೂ ಅಪಾರವಾದ ಪ್ರೇಮವಿದೆ ತಾನೆ? ನಾನು ಏನೇ ಹೇಳಿದರೂ ಅದನ್ನು ನೀನು ಶಿರಸಾ ವಹಿಸಿ ಮಾಡುವೆ ಹೌದು ತಾನೆ?” ಎಂದು ಕೇಳಲು ಅದಕ್ಕೆ ಕಯಾಲು ದೇವಿಯು “ಪತಿದೇವ, ಇಂದು ನಿಮಗೇನಾಗಿದೆ? ಏಕೆ ಹೀಗೆಲ್ಲಾ ಕೇಳುತ್ತಿದ್ದೀರಿ?  ನಾನೆಷ್ಟೆಂದರೂ ನಿಮ್ಮವಳು, ನಿಮ್ಮ ಅರ್ಧಾಂಗಿ, ಎಂದಮೇಲೆ ನೀವು ತೋರಿದ ಮಾರ್ಗ ಅದು ಏನೇ ಆದರೂ ಅದುವೇ ನನಗೆ ಹೂವಿನ ಹಾಸಿದ್ದಂತೆ, ಸತಿಯಾದವಳಿಗೆಂದೆಂದಿಗೂ ಪತಿಯೇ ಪರಮ ದೈವ. ಹೇಳಿ ನನ್ನಿಂದೇನಾಗಬೇಕು, ಅಪ್ಪಣೆ ಕೊಡಿಸಿ” ಎನ್ನುತ್ತಾಳೆ. ತನ್ನ ರಾಣಿಯಾಡಿದ ಮಾತಿನಿಂದ ಹರ್ಷತುಂದಿಲನಾದ ರಾಜ ಹಿರಣ್ಯ ಕಷಿಪುವು “ಕಯಾಲು ನೀನೆಂದರೆ ನನ್ನ ಪ್ರಾಣ. ನನಗೆ ಗೊತ್ತು ನಾನೇನೆಂದರೂ ಅದಕ್ಕೆ ನೀನೊ ಪ್ರತಿಯಾಡದೆ ಒಪ್ಪಿ ಅದರಂತೆಯೇ ನಡೆಯುತ್ತೀ ಎಂದು, ಆದರೆ ಈಗ ನಾನು ಹೇಳುವ ವುಚಾರವು ತುಸು ಗಂಭೀರವಾದುದು. ನಿನಗೂ ಇದನ್ನು ನೆರವೇರಿಸುವುದು ಸ್ವಲ್ಪ ಕಷ್ಟವಾಗುತ್ತದೆ ಎನ್ನುವುದನ್ನು ನಾನು ಬಲ್ಲೆ, ಆದರೆ ಈ ಕೆಲಸ ನಿನ್ನಿಂದಾಗಲೇ ಬೇಕು. ಇದನ್ನು ಮತ್ತಾರೂ ಮಾಡುವುದಕ್ಕೆ ಕೂಡದು.” ಎನ್ನುತ್ತಾನೆ. ಆಗ “ “ಸ್ವಾಮೀ ನಿಮ್ಮ ಪತ್ನಿಯಾದ ನಾನು ನಮ್ಮಿಬ್ಬರ ಪ್ರೀತಿಯ ಮಗನಾದ ರಾಜಕುಮಾರನ ಸಾಕ್ಷಿಯಾಗಿ ಹೇಳುತ್ತಿದ್ದೇನೆ, ನೀವೇನೇ ಕರ್ತವ್ಯವನ್ನು ನೀಡಿದರೂ ಅದನ್ನು ಶಿರಸಾ ವಹಿಸಿ ಮಾಡುವುದೇ ನನ್ನ ಕಾರ್ಯ. ಇದರಲ್ಲಿ ಯಾವುದೇ ಕೊಂಕು ಇಲ್ಲ ಮಹಾಸ್ವಾಮಿ, ಏನಾಗಬೇಕೆಂದು ಅಪ್ಪಣೆ ಮಾಡಿ” ಎನ್ನುತಾಳೆ.  ಆಗ ಹಿರಣ್ಯನು ತಾನು ಮಂದಹಾಸವನ್ನು ಬೀರುತ್ತಾ ದೃಡವಾದ ಸ್ವರದಿಂದ “ ಸರಿ ಹಾಗಾದರೆ, ನಿನ್ನ ಪ್ರೀತಿಯ ಮಗನಿಗೆ ನೀನು ಇದನ್ನು ಕುಡಿಸಬೇಕು” ಎನ್ನುತ್ತಾ ಒಂದು ಬಟ್ಟಲಿನಲ್ಲಿ ತಾನು ತಂದಿದ್ದ ವಿಷವನ್ನು ಕಯಾಲುವಿನ ಮುಂದೆ ಹಿಡಿಯುತ್ತಾನೆ. “ಅರೆ! ಇದೇನು?” ಎಂದು ಪ್ರಶ್ನಿಸಲು, “ ನನ್ನ ಕುಲವೈರಿಯಾದ ಶ್ರೀ ಹರಿಯನ್ನು ಧ್ಯಾನಿಸುತ್ತಾ ನನ್ನ ಏಳಿಗೆಗೆ ಕಂತಕನಾದ್ ಆ ಕುಟಿಲ ನಾರಾಯಣನನ್ನು ಸ್ಮರಿಸುತ್ತಿರು ಆ ನಿನ್ನ ಕುವರ ಪ್ರಹ್ಲಾದನಿಗೆಂದು ನಾನು ವಿಶೇಷ ಪಂಡಿತರಿಂದ ಹೇಳಿ ತರಿಸಿರುವ ಕಾರ್ಕೋಟಕ ವಿಷ!!” ಎನ್ನುತ್ತಲೇ ಅದನ್ನು ಕೇಳಿ ಆಘಾತಗೊಂಡ ರಾಣಿ ಕಯಾಲು ದೇವಿಯು ತಾನು ಅಲ್ಲೇ ಕುಸಿದು ಬೀಳುತ್ತಾಳೆ.
ಇದರಿಂದ ಸ್ಠಂಭಿತನಾದ ರಾಜಾ ಹಿರಣ್ಯನು ಅಲ್ಲಿದ್ದ ರಾಣಿಯ ಸಖಿಯರಿಗೆ ಕರೆ ಕಳಿಸುತ್ತಾನೆ. ಅವರ ಶುಶ್ರೂಷೆಗಳಿಂದ ಪ್ರಜ್ಞೆ ತಿಳಿದೆದ್ದ ಕಯಾಲುವು “ಇದೇನು ಸ್ವಾಮಿ ತಾವಾಡುತ್ತಿರುವ ಮಾತು, ಹೆತ್ತ ತಾಯಿಯು ತನ್ನ ಮಗನಿಗೆ ವಿಷ ಪ್ರಾಶನ ಮಾಡಿಸಬೇಕೆ? ಇದು ನನ್ನಿಂದಾಗದ ಕಾರ್ಯ” ಎನ್ನುತ್ತಲೇ ಹಿರಣ್ಯನು “ಕಯಾಲು... ಮೊದಲು ನೀನು ನನ್ನ ಧರ್ಮ ಪತ್ನಿ, ಆ ಬಳಿಕವಷ್ಟೇ ಪ್ರಹ್ಲಾದನ ತಾಯಿ ಎನ್ನುವುದನ್ನು ನೀನು ಮರೆಯುತ್ತಿದ್ದೀಯೆ, ಇದಕ್ಕೆ ಕೆಲ ಕ್ಷಣಗಳಾ ಹಿಂದೆ ನೀನು ನನಗಿತ್ತ ಮಾತು ಮರೆತೆಯಾ? ಎಲ್ಲಾದ್ರೂ ನೀನು ಈ ಮಾತಿಗೆ ತಪ್ಪಿದೆಯಾದರೆ ಪತಿಯಾಜ್ಞೆಯನ್ನು ಧಿಕ್ಕರಿಸಿ ನಡೆದ ಹೆಣ್ಣೆಂಬ ಲೋಕಾಪವಾದಕ್ಕೆ ಸಿಲುಕುತ್ತಿಯೆ” ಎಂದು ಆರ್ಭಟಿಸಲು ಆಗಲೂ ಕಯಾಲುವು ತನ್ನ ನಿಲುವಿನಿಂದ ಹಿಂದೆ ಸರಿಯುವುದಿಲ್ಲ. ಗ ಮತ್ತೆ ಹಿರಣ್ಯ ಕಷಿಪುವು ಅಂತಿಮವಾಗಿ ಎನ್ನುವಂತೆ ಹೀಗೆ ಹೇಳುತ್ತಾನೆ- “ಕಯಾಲು.. ಇಂದು ರಾತ್ರಿಯ ಒಳಗಾಗಿ ನಿನ್ನ ಪ್ರಿಯ ಕುಮಾರನಿಗೆ ನೀನೀ ವಿಷವನ್ನು ಕುಡಿಸಬೇಕು! ಇದು ನಾನು, ಈ ಮೂಲೋಕದ ಒಡೆಯನಾದ ಹಿರಣ್ಯ ಕಷಿಪುವಿನ ರಾಜಾಜ್ಞೆ!!” ಎಂದು ತಡಮಾಡದೆ ಅಲ್ಲಿಂದ ಹೊರಡುತ್ತಾನೆ. ಕಯಾಲು ದೇವಿಗೆ ದಿಕ್ಕು ತೋಚದಂತಾಗುತ್ತದೆ.
ಇಷ್ಟೆಲ್ಲಾ ಆದ ಕೆಲ ಸಮಯದ ಬಳಿಕ ಪ್ರಹ್ಲಾದ ಕುಮಾರನು ತಾನು ತಾಯಿಯ ಬಳಿ ಬರುತ್ತಾನೆ. ತಾಯಿಯ ಕಳೆಗುಂದಿದ ಮುಖವನ್ನು ನೋಡಿ “ಅಮ್ಮಾ.. ಏನಾಯಿತು, ಏಕೆ ಹೀಗೆ ಬೇಸರದಿಂದಿರುವಿ?” ಎನ್ನಲು ಕಯ್ಲುವು ಉಕ್ಕಿ ಬಂದ ದುಃಖದಲ್ಲಿ ಮಗನನ್ನು ತಬ್ಬಿ ಹಿಡಿದು “ ನಿನ್ನ ತಂದೆ ಬಂದಿದ್ದರು..” ಎನ್ನುತ್ತಾ ತಂದೆ ಹೇಳಿದ ಅಷ್ಟೂ ವಿಚಾರ್ಗಳನ್ನು ತಿಳಿಸುತ್ತಾಳೆ. ಅದಕ್ಕೆ ಪ್ರಹ್ಲಾದನು ತಾನು ಯಾವುದೇ ಬಗೆಯ ಆತಂಕಕ್ಕೆ ಒಳಗಾಗದೆ “ಇಷ್ಟೇ ಏನಮ್ಮಾ... ಎಲ್ಲಿ ತಂದೆ ಕೊಟಿರುವ ಆ ಪಾತ್ರೆಯನ್ನಿಲ್ಲಿ ತಾ..” ಎನ್ನುತ್ತಾನೆ. ಮತ್ತು ಹಾಗೆನ್ನುತ್ತಲೇ ತಾನೇ ಮುಂದೊತ್ತಿ ಹೋಗಿ ಆ ಪಾತ್ರೆಯತ್ತ ಧಾವಿಸಿ ಕೈಗೆತ್ತಿಕೊಡವನೇ ತಾಯಿಯ ರೋಧನ, ಚಡವಡಿಕೆಗಳಾನ್ನು ಸಹ ಗಣಿಸದೇ “ನಾರಾಯಣಾ... ನಾರಾಯಣಾ... ” ಎನ್ನುತ್ತಾ ಅದರಲ್ಲಿದ್ದ ಅಷ್ಟು ವಿಷವನ್ನೂ ಗಟಗಟನೆ ಕುಡಿದು ಬಿಡುತ್ತಾನೆ. ಕಯಾಲುವು ತನ್ನ ಮಗನ ಈ ಕಾರ್ಯವನ್ನು ಕಂಡು ಆಘಾತಗೊಂಡು ಇನ್ನೊಮ್ಮೆ ಮೂರ್ಛಿತಳಾಗುತ್ತಳೆ. ಆಗ ಪ್ರಹ್ಲಾದನೇ ತಾನು ಅಲ್ಲಿ ಪಾತ್ರೆಯೊಂದರಲ್ಲಿದ್ದ ನೀರನ್ನು ತಾಯಿಯ ಮುಖಕ್ಕೆ ಚಿಮುಕಿಸಿ ಅವಳಾನ್ನು ಎಚ್ಚರಗೊಳಿಸುತ್ತಾನೆ. ಹಾಗೆ ಎಚ್ಚರಗೊಂಡ ಕಯಾಲುವು ಕುಮಾರನನ್ನು ತಬ್ಬಿ ಹಿಡಿಯುತ್ತಾ “ಮಗನೇ.. ನಿನಗೇನೂ ಆಗಿಲ್ಲವಷ್ಟೇ...?” ಎನ್ನುತ್ತಾ ಮತ್ತೆ ರೋಧಿಸುತ್ತಾಳೆ. ಅದಕ್ಕೆ ಪ್ರಹ್ಲಾದನು “ಇಲ್ಲಮ್ಮಾ... ನನಗೇನೂ ಆಗಲಿಲ್ಲ.. ಯಾರು ಶ್ರೀ ಹರಿಯನ್ನು ಬಲವಾಗಿ ಆರಾಧಿಸಿ ಅವನಲ್ಲಿಯೇ ಶರಣಾಗುವರೋ ಅಂಥವರನ್ನು ಆ ಹರಿಯು ಎಂದೆಂದಿಗೂ ಕೈ ಬಿಡಲಾರ” ಎನ್ನುತ್ತಾನೆ. ಆಗಲೂ ಕಯಾಲುವು ತಾನು ಮಗನನ್ನು ಮತ್ತಷ್ಟು ಬಿಗಿಯಾಗಿ ಅಪ್ಪಿಕೊಂಡು ಬಿಕ್ಕುತ್ತಾಳೆ.
ಅಂತಃಪುರದ ದೂತಿಯಿಂದ ಪ್ರಹ್ಲಾದ ಕುಮಾರನು ವಿಷವನ್ನು ಕುಡಿದೂ ಬ್ದುಕುಳಿದ ಸುದ್ದಿ ರಾಜಾ ಹಿರ್ಣ್ಯನಿಗೆ ತಲುಪುತ್ತಲೇ ಆತನು ಇನ್ನಷ್ಟು ಉಗ್ರ ಕೋಪವನ್ನು ತಾಳುತ್ತಾನೆ. ಮತ್ತು ‘ಆ ಕಪಟಿ ಶ್ರೀ ಹರಿಯ ಮಾಯಾಜಾಲದಿಂದ ತನ್ನ ಮಗನನ್ನು ಹೇಗೆ ಹೊರತರುವುದೆನ್ನುವ ಬಗ್ಗೆ’ ಚಿಂತಾಕ್ರಾಂತನಾಗುತ್ತಾನೆ.
ಇದಾಗಿ ಕೆ ದಿನಗಳುರುಳಿದವು. ಅದೊಮ್ಮೆ ಪ್ರಹ್ಲಾದನನ್ನು ಕಂಡ ಹಿರಣ್ಯ ಕಷಿಪುವು ಮಗನನ್ನು ಹೀಗೆಂದು ಪ್ರಶ್ನಿಸಿದನು- “ನೀನೆಷ್ಟೆಂದರೂ ಆ ಕಪಟಿಯ ಸ್ಮರಣೆ ಮಾಡುವುದನ್ನು ಬಿಡುತ್ತಿಲ್ಲವಲ್ಲ, ಹಾಗಾದರೆ ನಿಜವಾಗಿಯೂ ಎಲ್ಲಿರುವನು ಆ ನಿನ್ನ ಹರಿ?” ಅದಕ್ಕೆ ಪ್ರಹ್ಲಾದನು ತಾನು ಶಾಂತನಾಗಿ “ಎಲ್ಲೆಲ್ಲಿಯೂ ಇದ್ದಾನೆ ತಂದೆಯೇ” ಎಂದುತ್ತರಿಸಲು ಹಿರಣ್ಯನಿಗೆ ಮತ್ತೂ ರೇಗಿ ಹೋಯಿತು ಅದಾಗ “ಹಾಗಾದರೆ ಆಕಾಶ, ಭೂಮಿಯಲ್ಲಿ, ಬೆಟ್ಟ ಗುಡ್ಡಗಳಾಲ್ಲಿ, ನದಿಗಳಾಲ್ಲಿ ಇರುವನೋ?” ಎಂದು ಕೇಳಲು ಅದಕ್ಕೂ ಪ್ರಹ್ಲಾದನು “ಹೌದು ತಂದೆಯೇ.. ಇದ್ದಾನೆ” ಎಂದುತ್ತರವಿತ್ತನು. ಹಿರಣ್ಯನು ಅಷ್ಟಕ್ಕೆಯೇ ಬಿಡದೆ ಮತ್ತೆ “ಹಾಗಾದರೆ ಈ ಅರಮನೆಯಲ್ಲಿರುವನೋ? ಈ ದೊಡ್ಡ ಕಂಭದಲ್ಲಿ....?” ಎನ್ನುತ್ತಲೇ ಅಲ್ಲಿದ್ದ ಒಂದು ಬೃಹತ್ ಕಂಬವನ್ನು ತೋರಿಸಿದ್ನು. ಪ್ರಹ್ಲಾದನು ಅದಕ್ಕೂ “ಹೌದು ಇದ್ದಾನೆ” ಎಂದುತ್ತರಿಸಿದ್ದೇ ತಾನು ತನ್ನ್ ಬಲವ್ದ ಗಧೆಯಿಂದ ಆ ಕಂಭವನ್ನು ಒಡೆದನು. ಅದೇ ಕ್ಷಣದಲ್ಲಿ ಶ್ರೀ ಮಹಾವಿಷ್ಣುವು ತಾನು ನರಸಿಂಹನ್ ಅವತಾರದಲ್ಲಿ ಕಂಭದೊಳಗಿನಿಂದ ಪ್ರಕಟಾವಾದನು. ಇವನೇ ಆ ಶ್ರೀ ಹರಿ ಯೆಂದು ತಿಳಿಯುತ್ತಲೇ ಹಿರಣ್ಯ ಕಷಿಪುವು ತಾನು ಅಟ್ಟಹಾಸಗೈಯ್ಯುತ್ತಾ ಅವನೊಡನೆ ಯುದ್ದಕ್ಕೆ ಮುಂದಾದನು. ಅತ್ತ ಪ್ರಹ್ಲಾದ ಕುಮಾರನು ತನ್ನ ಆರಾಧ್ಯದೇವ ಶ್ರೀ ಹರಿಯ ಈ ಘನಘೋರ ರೂಪವನ್ನು ತಾಳಿ ಬಂದುದು ಕಂಡು ನಡುಗುತ್ತಾ “ನಾರಾಯಣಾ... ನಾರಾಯಣಾ...” ಎನ್ನುತ್ತಾ ಮೂಲೆಯೊಂದರಲ್ಲಿ ನಿಂತನು. ಹಿರಣ್ಯನಿಗೂ ನರಸಿಂಹನಿಗೂ ಬಹುಕಾಲದವರೆಗೆ ಯುದ್ದವು ನಡೆಯಿತು. ಅದಾಗ ಸಂದ್ಯಾ ಸಮಯ ಹತ್ತಿರವಾಗುತ್ತಿತ್ತು. ಅದನ್ನೇ ನಿರೀಕ್ಷಿಸುತ್ತಿದ್ದ ನರಸಿಂಹಾವತಾರಿ ಶ್ರೀ ಹರಿಯು ತಾನು ಹಿರಣ್ಯನನ್ನು ಅನಾಮತ್ತಾಗಿ ಎತ್ತಿಕೊಂಡು ಅರಮನೆಯ ಹೊಸಿಲ ಮೇಲೆ ಹತ್ತಿ ಕುಳಿತು ತನ್ನೆರಡೂ ಕೈಗಳಿಂದ ಹಿರಣ್ಯ ಕಷಿಪುವಿನ ಹೊಟ್ಟೆಯನ್ನು ಸೀಳಿ ಕರುಳನ್ನು ಹೊರತೆಗೆದು ಮಾಲೆಯಂತೆ ಧರಿಸಿದನು. ಮತ್ತು ಆ ಪ್ರಕಾರವಾಗಿ ದುಷ್ಟ ರಕ್ಕಸನಾದ ಹಿರಣ್ಯ ಕಷಿಪುವನ್ನು ಸಂಹರಿಸಿದನು. 
ಶ್ರೀ ನರಸಿಂಹ ಸ್ವಾಮಿಯು ಅವತಾರವೆತ್ತಿದ ಸ್ಥಳ: ಉಗ್ರ ಸ್ಥಂಭ
ಅದರಿಂದಾಚೆಗೂ ಸಹ ಪ್ರಹ್ಲಾದ ಕುಮಾರ್ನು ತಾನು ಎಂದೆಂದೂ ಹರಿ ದ್ಯಾನ ಮಾಡುವುದನ್ನು ನಿಲ್ಲಿಸಲಿಲ್ಲ. ತಾನು ಪ್ರಾಪ್ತವಯಸ್ಕನಾಗಿ ತನಗೆ ಪ್ರಾಪ್ತಿಯಿದ್ದ ರಾಜ್ಯವನ್ನು ದಕ್ಷತೆಯಿಂದ ಧರ್ಮ ನಿಷ್ಠನಾಗಿ ಆಳ್ವಿಕೆ ನಡೆಸಿ ಹೆಸರು, ಕೀರ್ತಿ ಗಳಿಸಿದ ಪ್ರಹ್ಲಾದನ ತಪೋಭೂಮಿಯೇ ಇಂದಿನ ಅಹೋಬಿಲಂ ಪ್ರದೇಶವಾಗಿದ್ದು. ನರಸಿಂಹಾವತಾರ ಸ್ವರೂಪಿಯಾದ ಶ್ರೀ ವಿಷ್ಣುವು ಅಂದಿನಿಂದಿಂದಿನವರೆಗೂ ತನ್ನ ಭಕ್ತಾದಿಗಳೆಲ್ಲರೂ ಒಳಿತು ಮಾಡುತ್ತಾ, ದುಷ್ಟ ಶಿಕ್ಷಕ, ಶಿಷ್ಟ ರಕ್ಷಕನಾಗಿ ವಿರಾಜಮಾನನಾಗಿದ್ದಾನೆ.
ಇಂದಿಲ್ಲಿ ಶ್ರೀ ಸ್ವಾಮಿಯು ತಾನು ನವ (ಒಂಭತ್ತು) ರೂಪಗಳಲ್ಲಿ ನೆಲೆಸಿದ್ದಾನೆ. ಅವುಗಳೆಂದರೆ-
ಶ್ರೀ ಜ್ವಾಲಾ ನರಸಿಂಹ, ಶ್ರೀ ಅಹೋಬಿಲ ನರಸಿಂಹ, ಶ್ರೀ ಮಾಲೋಲ ನರಸಿಂಹ, ಶ್ರೀ ಕ್ರೋದಕರ(ವರಾಹ) ನರಸಿಂಹ, ಶ್ರೀ ಕಾರಂಜ ನರಸಿಂಹ, ಶ್ರೀ ಭಾರ್ಗವ ನರಸಿಂಹ, ಶ್ರೀ ಯೋಗಾನಂದ ನರಸಿಂಹ, ಶ್ರೀ ಚತ್ರವಾತ ನರಸಿಂಹ ಮತ್ತು ಶ್ರೀ ಪಾವನ ನರಸಿಂಹ. ಇಷ್ಟೇ ಅಲ್ಲದೆ ಅಂದು ಕಂಭವೊಂದರಿಂದ ನರಸಿಂಹಾವತಾರವಾಯಿತಷ್ಟೆ, ಆ ಕಂಭದ ಕುರುಹು ಇಂದಿಗೂ ಅಲ್ಲಿದ್ದು ಅಹೋಬಿಲ ದಿಂದ ಎಂಟು ಕಿಲೋಮೀಟರ್ ದೂರದಲ್ಲಿ ``ಉಗ್ರ ಸ್ಥಂಭ’’ ವೆನ್ನುವ ಹೆಸ್ಸರಿನೊಂದಿಗಿನ್ ಬೃಹತ್ ಕಲ್ಲಿನ ಬೆಟ್ಟವೊಂದನ್ನು ನ್ವಿಂದು ನೋಡುತ್ತೇವೆ, ಅದುವೇ ನರಸಿಂಹಾವತಾರವೆತ್ತಲು ಕಾರಣವಾದ ಕಂಭವೆನ್ನಲಾಗುತ್ತಿದೆ.
ಅಂತಿಮವಾಗಿ ಶ್ರೀದೇವರು ನಮಗೆಲ್ಲರಿಗೂ ಸನ್ಮಂಗಳಾವನ್ನುಂಟುಮಾಡಲಿ ಎಂದು ಹಾರೈಸುತ್ತಾ....
ನಮಸ್ಕಾರ. 

Friday, February 14, 2014

ರಂಗಲೋಕದ ಹಿರಿಯಣ್ಣ: ಮಾಸ್ಟರ್ ಹಿರಣ್ಣಯ್ಯ

ಕರ್ನಾಟಕ ಕಂಡ ಅದ್ಭುತ ಕಲಾವಿದ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ. ಇದೇ ಶನಿವಾರ (ಫೆಬ್ರವರಿ 15)  ಹಿರಣ್ಣಯ್ಯನವರ 80 ನೇ ಹುಟ್ಟಿದ ಹಬ್ಬ. ಮತ್ತು ಹಿರಣ್ಣಯ್ಯನವರ ಕಂಪನಿಯಿಂದ ಮೂಡಿಬಂದು ದಾಖಲೆ ಬರೆದ ನಾಟಕ “ಲಂಚಾವತಾರ” ಕ್ಕೆ 50 ವರ್ಷಗಳ ಸಂಭ್ರಮ. ಇದೆಲ್ಲದರ ಹಿನ್ನೆಲೆಯಲ್ಲಿ ರಂಗದ ಮೇಲಿನ ಮಾಸ್ಟರ್ ಹಿರ(ಅ)ಣ್ಣಯ್ಯನವರ ಜೀವನದಮೇಲೊಂದು ಹೊರಳು ನೋಟ ಇಲ್ಲಿದೆ.
ನನ್ನೆಲ್ಲಾ ಆತ್ಮೀಯ ಸ್ನೇಹಿತರಿಗೆ ನನ್ನ ನಮಸ್ಕಾರಗಳು,
ಕರ್ನಾಟಕ ಕಂಡ ಅದ್ಭುತ ಕಲಾವಿದ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ. ಇದೇ ಶನಿವಾರ (ಫೆಬ್ರವರಿ 15)  ಹಿರಣ್ಣಯ್ಯನವರ 80 ನೇ ಹುಟ್ಟಿದ ಹಬ್ಬ. ಮತ್ತು ಹಿರಣ್ಣಯ್ಯನವರ ಕಂಪನಿಯಿಂದ ಮೂಡಿಬಂದು ದಾಖಲೆ ಬರೆದ ನಾಟಕ “ಲಂಚಾವತಾರ” ಕ್ಕೆ 50 ವರ್ಷಗಳ ಸಂಭ್ರಮ. ಇದೆಲ್ಲದರ ಹಿನ್ನೆಲೆಯಲ್ಲಿ ರಂಗದ ಮೇಲಿನ ಮಾಸ್ಟರ್ ಹಿರ(ಅ)ಣ್ಣಯ್ಯನವರ ಜೀವನದಮೇಲೊಂದು ಹೊರಳು ನೋಟ ಇಲ್ಲಿದೆ.
ಹೌದು ಸ್ನೇಹಿತರೆ, ಹಿರಣ್ಣಯ್ಯನವರ ಬದುಕೇ ಒಂದು ಸಾಹಸಗಾಥೆ. ಇಂದಿನ ಯುವ ಕಲಾವಿದರಿಗೆ ಸ್ಪೂರ್ತಿಯಾಗಬಹುದಾದ ಸಾಕಷ್ಟು ಸಂಗತಿಗಳು, ಘಟನೆಗಳಿಂದ ಕೂಡಿದ ಅವರ ಬದುಕಿನ ಪುಟ ಪುಟಗಳೂ ರೋಚಕ! ಹಿರಣ್ಣಯ್ಯನವರೊಬ್ಬ ಹುಟ್ಟು ಕಲಾವಿದರಾಗಿದ್ದು ಅವರು ಬೆಳೆದು ಬಂದ ಪರಿಸರ, ನಡೆಸಿದ ಹೋರಾಟ, ಅವರಲ್ಲಿದ್ದ ನಿಷ್ಟೆ, ತಪಸ್ಸು, ಅವರು ಮಾಡಿದ ತ್ಯಾಗ ಅದರಿಂದ ಅವರು ಏರಿದಂತಹಾ ಎತ್ತರವಿದೆಯಲ್ಲ ಅದು ನಿಜಕ್ಕೂ ಅದ್ಭುತವಾದುದು.
ಮಾಸ್ಟರ್ ಹಿರಣ್ಣಯ್ಯ.
ನಾಡಿನ ಅದೆಷ್ಟೋ ರಾಜಕಾರಣಿಗಳು ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಇವರ ನಾಟಕಗಳನ್ನು ನಿಲ್ಲಿಸುವ ಸಲುವಾಗಿ ನ್ಯಾಯಾಲಯದ ಮೆಟ್ಟಿಲನ್ನೂ ಹತ್ತಿ ಸೋತಿರುವುದಿದೆ ಎಂದರೆ ಆಶ್ಚರ್ಯವಾಗಬಹುದು. ಹಿರಣ್ಣಯ್ಯನವರಲ್ಲಿದ್ದ ಸಾಮಾಜಿಕ ಕಳಕಳಿ, ನಿರ್ದಾಕ್ಷಿಣ್ಯ ಮನೋಧರ್ಮದಿಂದ ಅಂದಿನಿಂದ ಇಂದಿನವರೆಗೂ ಅವರು ಜನಮಾನಸದಲ್ಲಿ ಚಿರಸ್ಮರಣೀಯರಾಗಿದ್ದಾರೆ. ಇವರಿಂದ ರಚನೆಯಾದ ನಾಟಕಗಳೊಂದೊಂದೂ ನೂತನ ದಾಖಲೆಯನ್ನೆ ನಿರ್ಮಾಣ ಮಾಡಿದವು. “ಲಂಚಾವತಾರ”, ನಡುಬೀದಿ ನಾರಾಯಣಾ”, “ಕಪಿಮುಷ್ಟಿ”, “ಭ್ರಷ್ಟಾಚಾರ”, “ಕಲ್ಕ್ಯಾವತಾರ”, “ಮುಖ್ಯಮಂತ್ರಿ”, ಮುಂತಾದವೆಲ್ಲವೂ ಜನರನ್ನು ಅಯಸ್ಕಾಂತದಂತೆ ತನ್ನತ್ತ ಸೆಳೆದುದಲ್ಲದೆ ನಾಡಿನಾದ್ಯಂತದ ಜನರನ್ನು ತಲುಪಿ ಅವರೆಲ್ಲರ ಮನದಲ್ಲಿ ಎಂಎಂದೂ ಮಾಸದ ನೆನಪುಗಳನ್ನು ಉಳಿಸಿದವು. ಅದರಲ್ಲಿಯೂ “ಲಂಚಾವತಾರ” ನಾಟಕವೊಂದೇ ಹತ್ತು ಸಾವಿರಕ್ಕೂ ಹೆಚ್ಚಿನ ಪ್ರದರ್ಶನವನ್ನು ಕಂಡು ಇಂದಿಗೂ ಯಶಸ್ವಿಯಾಗಿ ಮುಂದುವರಿಯುತ್ತಿರುವುದು ಅವರ ನಾಟಕದ ಜನಪ್ರಿಯತೆಗೊಂದು ನಿದರ್ಶನ.
ಇಂತಹಾ ನಟ ರತ್ನಾಕರ ಮಾಸ್ಟರ್ ಹಿರಣ್ಣಯ್ಯನವರು ಜನಿಸಿದ್ದು 1934 ಫೆಬ್ರವರಿ 15 ರಂದು ಮೈಸೂರಿನಲ್ಲಿ. ಇವರ ತಂದೆ ಕಲ್ಚರ್ಡ್ ಕಮಿಡಿಯನ್ ಕೆ. ಹಿರಣ್ಣಯ್ಯ, ತಾಯಿ ಶಾರದಮ್ಮ. ಇಂಟರ್ ಮೀಡಿಯಟ್ ವ್ಯಾಸಂಗ ಮುಗಿಸಿದ ಬಳಿಕ ತಂದೆಯವರೊಡನೆ ಕೂಡಿಕೊಂಡು ಅವರಿಂದಲೇ ರಂಗ ಶಿಕ್ಷಣವನ್ನು ಪಡೆದರು.
ಹಿರಣ್ಣಯ್ಯನವರು ತಾವು ಬಾಳಿನುದ್ದಕ್ಕೂ ಸಾಕಶ್ಟು ನೋವುಂಡವರು. ತಾವು ನೊಂದರೂ ಜನರನ್ನು ನಗಿಸುತ್ತಲೇ ಬಂದ ಅವರ ಆತ್ಮಬಲವನ್ನು ಮೆಚ್ಚುವಂತಹುದು. ಅವರ ಬಾಳಿನಲ್ಲಿ ನಡೆದ ಅದೆಷ್ಟೋ ಕಹಿ ಪ್ರಸಂಗಗಳನ್ನು ಅವರು ಯಾರೊದನೆಯೂ ಹಂಚಿಕೊಂಡಿಲ್ಲವಾದರೂ ತಮ್ಮ ತಂದೆಯವರ ಸಾವಿನ ಸಂದರ್ಭವನ್ನು ಮಾತ್ರ ಅವರೇ ಒಂದೆಡೆ ಹೀಗೆ ಹೇಳಿಕೊಂಡಿದ್ದಾರೆ-
``ಮಡಿಕೇರಿಯಲ್ಲಿ ಕ್ಯಾಂಪ್‌. ನನ್ನ ತಂದೆಯವರು ಜೊತೆಗಿದ್ದರು. ಅವರ ಆರೋಗ್ಯ ತೀರ ಹದೆಗೆಟ್ಟಿತ್ತು. ಮನೆಯಲ್ಲಿ ಮಲಗಿದ್ದರು. ಮಡಿಕೇರಿಯಲ್ಲಿ ಮಕಮಲ್‌ ಟೋಪಿ ನಾಟಕವಾಡುತ್ತಿದ್ದೆ. ನಾಣಿ ಪಾತ್ರದಲ್ಲಿ ಜನರನ್ನು ನಗಿಸುತ್ತಿದ್ದೆ. ಇನ್ನೂ ಎರಡು ಸೀನ್‌ ಇತ್ತು. ಆವಾಗ ಮನೆಯಿಂದ ಹಿರಣ್ಣಯ್ಯನವರು ತೀರಿಕೊಂಡರು ಎಂಬ ಸುದ್ಧಿ ಬಂತು. ಏನ್‌ ಮಾಡಲಿ, ನನ್ನ ಪಾತ್ರ ರೆಡಿಯಾಗಿದೆ. ಸೀನ್‌ಗೆ ಹೋಗಬೇಕು. ಮನಸ್ಸಿನಲ್ಲಿ ನೋವು. ಏನೂ ತೋಚಲಿಲ್ಲ. ಎರಡು ನಿಮಿಷ ಕಣ್ಣುಮುಚ್ಚಿ ‘ಲಕ್ಷ್ಮೀ ನರಸಿಂಹಾ’ ಎಂದು ದೇವರಿಗೆ ಕೈ ಮುಗಿದೆ. ಸ್ಟೇಜಿನ ಮೇಲೆ ಹೋಗಿ ಡೈಲಾಗ್‌ ಶುರು ಮಾಡಿದೆ. ಸಭೆಯಲ್ಲಿ ತುಂಬಿದ್ದ ಜನರೆಲ್ಲಾ ಎದ್ದು ‘ಹಿರಣ್ಣಯ್ಯನವರೇ ನೀವು ಹೋಗಿ’ ಎಂದರು. ಮನೆಯ ಹತ್ತಿರ ಹೋದೆ. ನನ್ನ ತಂದೆಯ ಹೆಣ ಎತ್ತಲು ನನ್ನ ಕೈಯಲ್ಲಿ ಹಣವಿರಲಿಲ್ಲ. ಅಂದು ನೂರ ಐವತ್ತು ರೂ ಕಲೆಕ್ಷನ್‌ ಆಗಿತ್ತು. ನನ್ನ ಗ್ರಹಚಾರಕ್ಕೆ ಗಲ್ಲಾಪೆಟ್ಟಿಗೆ ಒಡೆದು ಅದನ್ನೂ ಯಾರೋ ಪುಣ್ಯಾತ್ಮ ಕದ್ದೊಯ್ದಿದ್ದ. ಕೈಯಲ್ಲಿ ಬಿಡಿಗಾಸಿಲ್ಲ.
ರಾತ್ರಿ ಹನ್ನೊಂದು ಗಂಟೆಗೆ ನಮ್ಮ ತಂದೆಯವರು ಸತ್ತಿದ್ದು. ನಾನು ಏನೂ ತೋಚದೆ ಕೂತೇ ಇದ್ದೆ. ನಮ್ಮ ಮನೆಯ ಎದುರಿಗೆ ಗಣೇಶ್‌ ಸಾವ್ಕಾರ್‌ ಎಂಬುವರಿದ್ದರು. ಅವರು ಬೆಳಿಗ್ಗೆ ಆರು ಗಂಟೆಗೆ ಏನ್‌ ಹಿರಣ್ಣಯ್ಯನವರೇ ಬಾಗಿಲು ಹಾರೆ ಹೊಡೆದಿದೆ ಎನ್ನುತ್ತಾ ಬಂದರು. ನಾನು, ಸಾರ್‌ ದುಡ್ದಿಲ್ಲ-ನಮ್ಮ ತಂದೆಯ ಹೆಣ ಎತ್ತೋಕೆ ಎಂದು ಅತ್ತೆ. ತಕ್ಷಣ ಹಿಂದು ಮುಂದು ನೋಡದೆ ಎಷ್ಟು ಬೇಕಾಗಿತ್ತು ಎಂದು ಕೇಳಿ ನೂರು ರೂ ತಂದುಕೊಟ್ಟರು. ನನ್ನ ತಂದೆಯ ಹೆಣ ಎತ್ತಲು ಏರ್ಪಾಡು ಮಾಡಿದರು. ಅಂದು ಮಡಿಕೇರಿಯ ಜನ ನನ್ನ ಬೆನ್ನೆಲುಬಾಗಿ ನಿಂತರು’’ (ಈ ಘಟನೆ ನಡೆದದ್ದು 1953 ಮಾರ್ಚ್ 21 ರಂದು)
ಆದರೆ ಸ್ವಭಾವತಃ ಹೋರಾಟಗಾರರಾಗಿದ್ದ ಹಿರಣ್ಣಯ್ಯ ಎಂತಹಾ ಸಮಯದಲ್ಲಿಯೂ ಎದೆಗುಂದದೆ ತಂದೆಯವರ ಸಾವಿನ ಬಳಿಕ ತಂದೆಯವರ ಕನಸಿನ ಕೂಸು ‘ಕೆ. ಹಿರಣ್ಣಯ್ಯ ಮಿತ್ರ ಮಂಡಳಿ’ ಯನ್ನು ತಾವೇ ವಹಿಸಿಕೊಂಡು ನಟ, ನಿರ್ದೇಶಕ, ಮಾಲೀಕ, ನಾಟಕಕಾರರಾಗಿ ತಮ್ಮ ಇಡೀ ಜೀವನವನ್ನೆ ರಂಗಭೂಮಿಯ ಸೇವೆಗಾಗಿ, ಸಮಾಜದ ಒಳಿತಿಗಾಗಿ ಮುಡುಪಾಗಿಟ್ಟು ತಂದೆಗೆ ತಕ್ಕ ಮಗನೆಂಬ ಕೀರ್ತಿಗೆ ಭಾಜನರಾಗಿ ಬದುಕುತ್ತಿದ್ದಾರೆ.ಇಂದು ತಮ್ಮ ಈ ಎಂಭತ್ತರ ಪ್ರಾಯದಲ್ಲಿಯೂ ಅದೇ ಸಿಡಿಗುಂಡಿನ ಮಾತುಗಾರನಾಗಿ, ಸಾಮಾಜಿಕ ಕಳಕಳಿಯನ್ನು ಮೆರೆಯುತ್ತಿರುವ ಹಿರಣ್ಣಯ್ಯನವರ ಅದ್ಭುತ ವ್ಯಕ್ತಿತ್ವಕ್ಕೆ ಯಾರಾದರೂ ತಲೆದೂಗಲೇ ಬೇಕು.
ಇನ್ನು ಹಿರಣ್ಣಯ್ಯನವರು ಕನ್ನಡಿಗರೆಲ್ಲರಿಗೂ ಏಕಿಷ್ಟು ಹತ್ತಿರವಾಗುತ್ತಾರೆ> ಏಕಿಷ್ಟು ಪ್ರಿಯರಾಗುತ್ತಾರೆ ಎಂದು ನೋಡುವುದಾದರೆ  ಇವರ ನಾಟಕದಲ್ಲಿ ಆಡುವ ಸಂಭಾಷಣೆಗಳಾಲ್ಲಿ ಸತ್ಯವಿರುತ್ತದೆ. ನಾಟಕವೆಂದರೆ ಅದಕ್ಕೊಂದು ಚೌಕಟ್ಟಿರುತ್ತದೆ, ಂತಹುದೇ ಸಂಭಾಷಣೆ, ಇದೇ ದೃಷ್ಯವೆಂಬುದು ನಿರ್ಧಾರವಾಗಿ ಬಿಟ್ಟಿರುತ್ತದೆ. ಆದರೆ ಹಿರಣ್ಣಯ್ಯನವರ ನಾಟಕಗಳಲ್ಲಿ ಹಾಗಿಲ್ಲ. ಅವರ ನಾಟಕದ ಸಂಭಾಷಣೆ ದಿನ ದಿನಕ್ಕೂ ಬದಲಾಗುತ್ತಿರುತ್ತದೆ! ಆಯಾ ಪ್ರದೇಶದಲ್ಲಿ, ಆಯಾ ಸಮಯಕ್ಕೆ ಸರಿಯಾದ ಸಂಭಾಷಣೆಯನ್ನು ಅವರ ನಾಟಕ ಅಳವಡಿಸಿಕೊಳ್ಳುತ್ತದೆ. ಇನ್ನು ”ಲಂಚಾವತಾರ“, “ಭ್ರಷ್ಠಾಚಾರ” ದಂತಹಾ ಸಾಮಾಜಿಕ ಕಳಕಳಿಯ ನಾಟಕಗಳನ್ನು ಮಾಡಿ ರಾಜಕಾರಣಿ, ಅಧಿಕಾರಿಗಳಿಗೆ ಮುಲಾಜಿಲ್ಲದೆ ಬೈಯ್ಯುವ ಅವರ ದಾಷ್ಟ್ಯ ಎಂಥವರಿಗೂ ಬೆರಗು ಹುಟ್ಟಿಸುವಂತಹುದು.
ಹಿರಣ್ಣಯ್ಯನವರಂತಹಾ ನಟ ರತ್ನಾಕರರಿಗೆ ಅವರ ಸಾಧನೆ, ಪರಿಶ್ರಮಕ್ಕೆ ಮೆಚ್ಚುಗೆಯಾಗಿ ಅನೇಕ ಗೌರವ ಪುರಸ್ಕಾರಗಳು ದೊರೆತಿವೆ. 1962 ರಲ್ಲಿ ಅಂದಿನ ಮೈಸೂರು ಮಹಾರಜರಾಗಿದ್ದ ಜಯಚಾಮರಾಜ ಒಡೆಯರ್ ಸಮ್ಮುಖದಲ್ಲಿ ೧೪ ನಾಟಕಗಳನ್ನಾಡಿ ಅವರಿಂದ ಮೈಸೂರು ದಸರಾ ದರ್ಬಾರಿನಲ್ಲಿ ನವರತ್ನ ಖಚಿತವಾದ ಗಂಡಭೇರುಂಡ ಪದಕ ಸಹಿತವಾದ ಬಂಗಾರದ ಸರ ಮತ್ತು “ನಟನಾ ಕಲಾಚತುರ” ಎಂಬ ಬಿರುದು ಪಡೆದರು.
1984  ರಲ್ಲಿ ಉತ್ತರ ಅಮೇರಿಕಾದಲ್ಲಿ ಜರುಗಿದ ‘ತ್ರಿವೇಣಿ ಕನ್ನಡ ಕಾನ್ಫರೆನ್ಸ್’ ಅಧ್ಯಕ್ಷರಾಗಿದ್ದ ಹಿರಣ್ಣಯ್ಯನವರು ಅಲ್ಲಿನ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ನಾಟಕ ಹಾಗೂ ಉಪನ್ಯಾಸಗಳನ್ನು ನೀಡಿ ಅಲ್ಲಿನವರಿಂದ ಪ್ರಶಸ್ತಿ, ಪ್ರಶಂಸೆಗಳನ್ನು ಗಳಿಸಿದ್ದಾರೆ. ಅಲ್ಲದೆ ಆಸ್ಟ್ರೇಲಿಯಾ, ಸಿಂಗಾಪುರ್, ನ್ಯೂಜಿಲ್ಯಾಂಡ್, ಇಂಗ್ಲೆಂಡ್ ನಂತಹಾ ದೇಶಗಳನ್ನೆಲ್ಲಾ ಸುತ್ತಿ ಅಲ್ಲಿ ನಾಟಕ ಉಪನ್ಯಾಸಗಳಿಂದ ಅಲ್ಲಿನ ಜನತೆಯ   ಮನಸೂರೆಗೊಂಡಿದ್ದಾರೆ.
‘ನತ ರತ್ನಾಕರ’, ‘ಕಲಾ ಗಜಸಿಂಹ’, ‘ಅಭಿನಯ ಸರ್ವಜ್ಞ’, ಮುಂತಾದ ಬಿರುದುಗಳಿಗೆ ಭಾಜನರಾಗಿರುವ ಹಿರಣ್ಣಯ್ಯನವರಿಗೆ ೧೯೮೪ ರಲ್ಲಿ ಕರ್ನಾಟಕ ರಾಜ್ಯದ ರಾಜ್ಯ ಸರ್ಕಾರದ ಪ್ರಶಸ್ತಿ, 1988 ರಲ್ಲಿ ಕರ್ನಾಟಕ ನಾಟಕ ಅಕಾಡಮಿಯ ‘ರಂಗಭೂಮಿ ಪ್ರಶಸ್ತಿ’ಗಳು ಲಭಿಸಿವೆ. ಅಲ್ಲದೆ 1991 ರಲ್ಲಿ ಮಂಡ್ಯದ ‘ಶ್ರೀ ಶಂಕರಗೌಡ ಪ್ರತಿಷ್ಠಾನ ಪ್ರಶಸ್ತಿ’, 1994 ರಲ್ಲಿ ರಾಜ್ಯ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ‘ಗುಬ್ಬಿ ವೀರಣ್ಣ ಪ್ರಶಸ್ತಿ’ಯನ್ನು ತಮ್ಮದಾಗಿಸಿಕೊಂಡ ಕೀರ್ತಿ ಇವರದು.1999 ರಲ್ಲಿ ‘ನವರತ್ನರಾಮ್ ಪ್ರಶಸ್ತಿ’, 2002 ರಲ್ಲಿ ‘ವಿದ್ಯಾರತ್ನ ಪ್ರಶಸ್ತಿ’ಯೂ ಇವರ ಪಾಲಗಿರುವುದು ಇವರ ಅಗಾಧ ಕಲಾ ಪ್ರೌಢಿಮೆಗೆ ನಿದರ್ಶನ.
ಇದೆಲ್ಲದರ ಜತೆಯಲ್ಲಿ ಇಲ್ಲಿ ಪ್ರಸ್ತಾಪಿಸಲೇ ಬೇಕಾದ ಹಿರಣ್ಣಯ್ಯನವರ ವ್ಯಕ್ತಿತ್ವದ ಇನ್ನೊಂದು ಮುಖವೆಂದರೆ ಅವರ ದಾನಶೀಲತೆ. 1962  ರಲ್ಲಿ ನಡೆದ ಭಾರತ- ಚೀನಾ ಯುದ್ಧದ ಸಮಯದಲ್ಲಿ ತಮ್ಮ ತೂಕದಷ್ಟು ಬೆಳ್ಳಿಯನ್ನು ಪ್ರಧಾನಿ ನೆಹರೂ ರವರ ರಕ್ಷಣಾ ನಿಧಿಗೆ ನೀಡಿ ತಮ್ಮ ರಾಷ್ಟ್ರ ಪ್ರೇಮವನ್ನು ಮೆರೆದವರು ಹಿರಣ್ಣಯ್ಯ. ಅಲ್ಲದೆ ರೋಟರಿ, ಲಯನ್ಸ್ ಕ್ಲಬ್ ಗಳಂತಹಾ ಸಂಘಟನೆಗಳಿಗೆ, ಶಾಲಾ ಕಟ್ಟಡಗಳಿಗೆ, ಪೋಲೀಸ್ ಕ್ಷೇಮ ನಿಧಿ, ಮುಖ್ಯಮಂತ್ರಿಗಳ ಬರ ಪರಿಹಾರ ನಿಧಿ ಸಹಾಯಾರ್ಥದ ಪ್ರದರ್ಶನಗಳ ಮುಖೇನ ಅಗಣಿತ ಧನ ಸಂಗ್ರಹಕ್ಕೆ ಕಾರಣರಾದವರು ಮಾಸ್ಟರ್ ಹಿರಣ್ಣಯ್ಯ
ಹೀಗೆ ಒಟ್ಟು ಕನ್ನಡ ನಾಡಿನ ಧೀಮಂತ ಕಲಾ ಪ್ರತಿಭೆ ಮಾಸ್ಟರ್ ಹಿರಣ್ಣಯ್ಯನಂತಹವರು ನಮ್ಮೊಂದಿಗಿರುವುದೇ ನಮಗೆಲ್ಲಾ ಸಂಭ್ರಮದ ಸಂಗತಿ. ಅವರ ೮೦ ನೇ ಹುಟ್ಟು ಹಬ್ಬದ ಈ ಸಮಯದಲ್ಲಿ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯ ಕೋರುತ್ತಾ ಒಂದು ಸಾಂದರ್ಭಿಕ ಲೇಖನದಲ್ಲಿ ಖ್ಯಾತ ಅಂಕಣಕಾರರಾದ ಮಣಿಕಾಂತ್ ರವರು ಹೇಳುವಂತೆ- ``ಸರ್‌, ವಿಶ್ವ ಇರುವಷ್ಟೂ ದಿನ ರಂಗಭೂಮಿ ಇರುತ್ತದೆ. ರಂಗಭೂಮಿ ಇರುವಷ್ಟೂ ದಿನ ನೀವು ನಮ್ಮೊಂದಿಗಿರುತ್ತೀರಿ- ಎಚ್ಚರದ ದನಿಯಾಗಿ! ಸಾಕಲ್ಲವೇ? ……  ಮುಂದೆ, ನೂರು ವರ್ಷದ ಸಂಭ್ರಮ ನಿಮ್ಮದಾಗಲಿ. …… . ಮತ್ತೆ ಆಗ ನಾಲ್ಕು ಮಾತು ಬರೆವ ಸರದಿ ನನ್ನದಾಗಲಿ.’’
ನಮಸ್ಕಾರ. 

Saturday, February 08, 2014

ಪ್ರೀತಿಯ ದೀಪ ಹಚ್ಚಿದ ಕವಿ: ಪರಮೇಶ್ವರ ಭಟ್

ಕನ್ನಡ ನಾಡು ಕಂಡ ಅತ್ಯಂತ ಮಹತ್ವದ ಕವಿಗಳು, ಅನುವಾದಕರು, ಸಹೃದಯ ವಿಮರ್ಶಕರೂ ಆಗಿದ್ದ ಬಹುಮುಖ ಪ್ರತಿಭಾಶಾಲಿ ಪ್ರೊಫೆಸರ್ ಎಸ್.ವಿ. ಪರಮೇಶ್ವರ ಭಟ್ಟರ 101 ನೇ ಜನುಮ ದಿನ (ಫೆಬ್ರವರಿ 8) ದ ಅಂಗವಾಗಿ ಅವರ ದೊಡ್ದ ವ್ಯಕ್ತಿತ್ವವನ್ನು ಪರಿಚಯಿಸುವ ಒಂದು ಕಿರು ಪ್ರಯತ್ನ


ನನ್ನೆಲ್ಲಾ ಆತ್ಮೀಯ ಸ್ನೇಹಿತರಿಗೂ ನನ್ನ ಹೃದಯಪೂರ್ವಕ ನಮಸ್ಕಾರಗಳು,
ವಾರ ಕನ್ನಡ ಕಟ್ಟಾಳುಗಳಾಲ್ಲಿ ಒಬ್ಬರಾದ ಹಿರಿಯ ವಿದ್ವಾಂಸ, ವಾಗ್ಮಿ, ಸಹೃದಯ ಲೇಖಕರಾಗಿದ್ದ ಶೃಂಗೇರಿ ವಿದ್ಯಾರಣ್ಯಪುರ ಪರಮೇಶ್ವರ ಭಟ್ಟರ 101 ನೇ ಹುಟ್ಟಿದ ಹಬ್ಬ(ಫೆಬ್ರವರಿ 8).
ಹೀಗೆಂದರೆ ಬಹುಷಃ ಅನೇಕರಿಗೆ ಅವರ ಪರಿಚಯ ಸಿಗಲಿಕ್ಕಿಲ್ಲ. ಅದೇ ಎಸ್.ವಿ. ಪರಮೇಶ್ವರ ಭಟ್ಟರು ಎಂದರೆ ತಕ್ಷಣ ತಿಳಿಯುತ್ತದೆ ಹೌದು ಸ್ನೇಹಿತರೆ, ಇಂದು ಭಟ್ಟರು ನಮ್ಮೊಂದಿಗಿಲ್ಲದಿರಬಹುದು. ಆದರೆ ಅವರು ಮಾಡಿಟ್ಟು ಹೋದ ಕೆಲಸದ ಮುಖಾಂತರ ನಾವೆಂದೆಂದೂ ಅವರನ್ನು ನೆನೆಯಬಹುದು..
ಪರಮೇಶ್ವರ ಭಟ್ಟರು ಹುಟ್ಟಿದ್ದು 1914 ಫೆಬ್ರವರಿ 8 ರಂದು ಶಿವಮೊಗ್ಗದ ತೀರ್ಥಹಳ್ಳಿಯ ಮಾಳೂರಿನಲ್ಲಿ. ಇವರ ತಂದೆ ಸದಾಶಿವರಾಯರು, ತಾಯಿ ಲಕ್ಷ್ಮಮ್ಮ. ಇಬ್ಬರು ಅಕ್ಕಂದಿರಿದ್ದು ಮನೆಯಲ್ಲಿ ಇವರೇ ಕಿರಿಯವರಾಗಿದ್ದರು. ಆದರೆ ದುರದೃಷ್ಟವಶಾತ್ ಭಟ್ಟರು ಹುಟ್ಟಿದ ಎರಡೇ ವರ್ಷದಲ್ಲಿ ತಾಯಿಯವರನ್ನು ಕಳೆದುಕೊಳ್ಳಬೇಕಾಯಿತು. ಮುಂದೆ ತಂದೆ ಸದಾಶಿವರಾಯರ ಆರೈಕೆಯಲ್ಲಿಯೇ ಮೂವರು ಮಕ್ಕಳೂ ಬೆಳೆದರು.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲೇ ಮುಗಿಸಿದ್ದ ಭಟ್ಟರಿಗೆ ಪ್ರೌಢಶಾಲೆಯಲ್ಲಿ ಪಂಡಿತ ಕಮಕೋಡು ನರಸಿಂಹ ಶಾಸ್ತ್ರಿಗಳು ಗುರುಗಳಾಗಿ ದೊರಕಿದರು. ಆಧುನಿಕ ದೃಷ್ಟಿಕೋನವನ್ನು ಹೊಂದಿ, ಕನ್ನಡದ ಘನ ಪಂಡಿತರಾಗಿದ್ದ ಶಾಸ್ತ್ರಿಗಳ ಪಾಠ ಪ್ರವಚನಗಳು ಪರಮೇಶ್ವರ ಭಟ್ಟರಲ್ಲಿ ಸಹಜವಾಗಿಯೇ ಸಾಹಿತ್ಯಾಸಕ್ತಿಯನ್ನು ಕೆರಳಿಸಿದವು.
ಮುಂದೆ ಇಂಟರ್ ವಿದ್ಯಾಭ್ಯಾಸದ ಅವಧಿಯಲ್ಲಿ ಸಹ .ಆರ್. ಕೃಷ್ಣಶಾಸ್ತ್ರಿಗಳು, ವಿ. ಸೀತಾರಾಮಯ್ಯನವರು, ಡಿ.ವಿ. ಶೇಷಗಿರಿರಾಯರು ಇವರೇ ಮೊದಲಾದ ಗುರುವರೇಣ್ಯರ ಶಿಶ್ಯರಾಗಿದ್ದ ಭಟ್ಟರಿಗೆ ಅಲ್ಲಿಯೂ ಸಾಹಿತ್ಯದ ವಾತಾವರಣಾವು ಸುಲಭದಲ್ಲಿ ದಕ್ಕಿತು. 1938 ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಿಂದ ಕನ್ನಡ ಎಮ್.. ಪದವಿಯನ್ನು ಪಡೆದ ಪರಮೇಶ್ವರ ಭಟ್ಟರು ಅನಂತರ ಅಲ್ಲಿಯೇ ಕನ್ನಡ ಅದ್ಯಾಪಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. 1940 ರಲ್ಲಿ ರಾಜಲಕ್ಷ್ಮಿಯವರೊಡನೆ ವಿವಾಹವಾದ ಪರಮೇಶ್ವರ ಭಟ್ಟರಿಗೆ ಭಡ್ತಿಯೊಂದಿಗೆ ತುಮಕೂರಿಗೆ ವರ್ಗವಾಯಿತು. ಅಲ್ಲಿಂದ 1942 ರಲ್ಲಿ ಪುನಃ ಶಿವಮೊಗ್ಗಕ್ಕೆ ವರ್ಗವಾಯಿತು. ಕಾಲೇಜಿನ ಪಾಠ ಪ್ರವಚನಗಳೊಂದಿಗೆ ಅಲ್ಲಿನ ಕರ್ನಾಟಕ ಸಂಘದ ಕಾರ್ಯ ಕಲಾಪಗಳಲ್ಲಿಯೂ ಭಾಗಿಯಾಗಿದ್ದ ಭಟ್ಟರ ಬೊಧಪ್ರದವಾದ ಭಾಷಣ ಶೈಲಿಗೆ ಮಲೆನಾಡಿಗರೆಲ್ಲಾ ಮಾರುಹೋದರು.
ಅಲ್ಲಿಂದಾಚೆಗೆ 1968 ರವರೆಗೆ ಮೈಸೂರಿನಲ್ಲೇ ಇದ್ದ ಪರಮೇಶ್ವರ ಭಟ್ತರು 1968 ರಲ್ಲಿ ಮಂಗಳೂರು ಸ್ನಾತಕೋತ್ತ್ರ ಕೇಂದ್ರದ ನಿರ್ದೇಶಕರಾಗಿ ನೇಮಕಗೊಂಡರು. ಅಲ್ಲಿಂದ 1974 ರಲ್ಲಿ ತಾವು ನಿವೃತ್ತಿಯಾಗುವವರೆಗೆ  ಮಂಗಳೂರು ವಿಶ್ವವಿದ್ಯಾನಿಲಯದಲ್ಲೇ ತಮ್ಮ ವೃತ್ತಿ ಬದುಕನ್ನು ನಡೆಸಿದ್ದ ಭಟ್ಟರು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ಪ್ರಾದ್ಯಾಪಕ ಮುಖ್ಯಸ್ಥರಾಗಿ ಸರಿಸುಮಾರು ಆರು ವರ್ಷಗಳ ಕಾಲ ಮಂಗಳೂರನ್ನೇ ತಮ್ಮ ಸಾಹಿತ್ಯಕೇಂದ್ರವಾಗಿ ಮಾಡಿಕೊಂಡಿದ್ದರು.
ಎಸ್.ವಿಪರಮೇಶ್ವರ ಭಟ್ಟ
ಇನ್ನು ಭಟ್ಟರ ಪಾಠದ ಶೈಲಿಗೆ ಮಾರುಹೋಗದವರಿರಲಿಲ್ಲ. ಇವರ ಪಾಠವನ್ನು ಕೇಳಲಿಕ್ಕಾಗಿ ಅನ್ಯ ತರಗತಿಯಿಂದಲೂ ವಿದ್ಯಾರ್ಥಿಗಳು ಬರುತ್ತಿದ್ದರು. ಹೀಗಾಗಿ ತರಗತಿಯ ಕೋಣೆ ವಿದ್ಯಾರ್ಥಿಗಳಿಂದಲೇ ತುಂಬಿ ಹೋಗಿರುತ್ತಿತ್ತು. ಇವರ ಪಾಠ ಹೇಳುವ ರೀತಿಯ ಬಗ್ಗೆ ಭಟ್ಟರ ಶಿಷ್ಯವೃಂದದಲ್ಲಿ ಪ್ರಮುಖರಾದ ಡಾ. ಬಿ.. ವಿವೇಕ ರೈಗಳು ತಾವು ಹೀಗೆ ನೆನೆಯುತ್ತಾರೆ-  ``ಪಾಠ ಅದೊಂದು ರಸಲೋಕದ ಯಾತ್ರೆಯಂತೆ. ಹದಿನಾರು ಮಂದಿಯ ತರಗತಿಯಾಗಲಿ , ಸಾವಿರ ಮಂದಿಯ ಸಭೆಯಾಗಲಿ , ಮಾತಿನ ರೀತಿ , ರೂಪಕಗಳ ಸರಮಾಲೆ , ತಮ್ಮ ಗುರು ಪರಂಪರೆಯ ಸಂಬಂಧದ ಅನುಭವಗಳನ್ನು ಬಿಚ್ಚುತ್ತಿದ್ದ ವೈಖರಿ , ವಿಷಯದ ಮಂಡನೆಯೊಂದಿಗೆ ಜೋಡಣೆಗೊಳ್ಳುತ್ತಿದ್ದ ನೂರಾರು ಅನುಭವದ ತುಣುಕುಗಳುಹೀಗೆ ಒಂದು ಗಂಟೆ ಮುಗಿಯುವುದರೊಳಗೆ ಒಂದು ರಸ ವಿಶ್ವಕೋಶದ  ಒಳಗಡೆ ತಿರುಗಾಟದ ಸುಖ ದೊರೆಯುತ್ತಿತ್ತು.’’
ಎಸ್.ವಿ. ಪರಮೇಶ್ವರ ಭಟ್ಟ್ರರೆಂದರೆ ಇಷ್ಟೇ ಅಲ್ಲ ಸ್ನೇಹಿತರೆ, ಅವರು ಕವಿಗಳು, ಸಂಸ್ಕೃತ ವಿದ್ವಾಂಸರು, ಸದಾ ಕನ್ನಡಕ್ಕಾಗಿ ತುಡಿಯುವ ಮಿಡಿಯುವ ಮನವುಳ್ಳವರು., ಹೀಗೆ ಹೇಳುತ್ತಾ ಹೋದರೆ ಅವರ ವ್ಯಕ್ತಿತ್ವದ ಒಂದೊಂದು ಮುಖವನ್ನು ವಿವರಿಸಲೂ ಒಂದೊಂದು ಲೇಖನವನ್ನೇ ಬರೆಯಬೇಕಾಗಬಹುದು. ಮಂಗಳೂರು ವಿಶ್ವವಿದ್ಯಾನಿಲಯದಿಂದ ನಿವೃತ್ತರಾದ ಮೇಲೆ ಮೈಸೂರಿನಲ್ಲಿ ನೆಲೆಸಿದ ಪರಮೇಶ್ವರ ಭಟ್ಟರಿಗೆ ಯುಜಿಸಿ ಪ್ರಾಯೋಜಿತ ಪ್ರಾಧ್ಯಾಪಕರಾಗಿ ಮಾನಸ ಗಂಗೋತ್ರಿಯಲ್ಲಿ ಕೆಲಸ ಮಾಡುವ ಅವಕಾಶವು ದೊರೆಯುತ್ತದೆ. ಅದಾಗ ಅವರು ಯಾವುದಾದರೊಂದು ವಿಷಯದ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಪ್ರಕಟಿಸಬೇಕಾದಾಗ  ಭಟ್ಟ್ರೌ ಆರಿಸಿಕೊಂಡ ವಿಷಯ  ಯಾವುದು ಗೊತ್ತೆ? ಕುವೆಂಪು ಅವರ ಕಾವ್ಯ! “ರಸಋಷಿ ಕುವೆಂಪುಹೆಸರಿನ ಬೃಹತ್ ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ ಮುಗಿಸಿದ ಭಟ್ಟರ ಕೆಲಸವನ್ನು ಕಂಡ ಕುವೆಂಪು ತಾವು ಪರಮೇಶ್ವರ ಭಟ್ತ್ರಿಗೆ ಹೀಗೊಂದು ಪತ್ರವನ್ನು ಬರೆಯುತ್ತಾರೆ-
"ನೀವು ಆರಿಸಿಕೊಂಡಿರುವ ವಿಷಯಕ್ಕೆ ನಿಮಗಿಂತಲೂ ಉತ್ತಮತರ ಅಧಿಕಾರಿ ದೊರೆಯುವುದು ಕಷ್ಟ! ನನ್ನಂತೆಯೇ ನೀವೂ ಹುಟ್ಟಿ, ಬೆಳೆದು, ಬಾಲ್ಯದಲ್ಲಿ ಮಲೆಕಾಡುಗಳ ಸಾನ್ನಿಧ್ಗದ ದಿವ್ಯಸೌಂದರ್ಯದ ಪೀಯೂಷವನ್ನು ಆಸ್ವಾದಿಸಿದ್ದೀರಿ. ಭಾಷಾ ಪಾಂಡಿತ್ಯದಲ್ಲಿ ನನ್ನೆಲ್ಲ ವಾಚ್ಯ ಲಕ್ಷ್ಯ ವ್ಯಂಗ್ಯಗಳನ್ನು ತಲಸ್ಪರ್ಶಿಯಾಗಿ ಅರಿಯುವ ಸಾಮಾರ್ಥ್ಯವನ್ನು ಪಡೆದಿದ್ದೀರಿ. ನೀವು ಇದುವರೆಗೆ ಪ್ರಕಟಿಸಿರುವ ವಿಮರ್ಶೆ ಲೇಖನಗಳನ್ನು ನೋಡಿರುವ ನನಗೆ ನನ್ನ ಕೃತಿಗಳ ದರ್ಶನ ಧ್ವನಿಯನ್ನು ದರ್ಶನವನ್ನು ಗ್ರಹಿಸುವ ಗಗನ್ನೋನ್ನತಿ ಧೀಶಕ್ತಿಯ ಕೃಪೆಗೂ ನೀವು ಪಾತ್ರರಾಗಿದ್ದೀರಿ. ನೀವೇ ಬರೆದಿರುವಂತೆ 'ನನ್ನ ಸಾಹಿತ್ಯಜೀವನದ ಕಾರ್ಯಕಲಾಪಗಳಲ್ಲಿ ಗ್ರಂಥ ಕಟ್ಟಕಡೆಯದಾಗಿ ಮಕುಟಪ್ರಾಯವಾದದ್ದಾಗಿ ರಾರಾಜಿಸಬೇಕು ಎಂಬುದು ನನ್ನ ಅಪೇಕ್ಷೆ' ಎಂಬುದು ಖಂಡಿತವಾಗಿಯೂ ಸಫಲವಾಗುತ್ತದೆ ಎಂಬುದು ನನ್ನ ಆಶೆ ಮತ್ತು ಅನಿಸಿಕೆ.
ಆದರೆ ಒಂದು ಹೆದರಿಕೆ!
ಜನರು ನಿಮ್ಮ ಗ್ರಂಥವನ್ನೇ ಓದಿ ತೃಪ್ತರಾಗಿ ನನ್ನ ಕೃತಿಗಳನ್ನು ಎಲ್ಲಿ ಓದದೇ ಹೋಗುತ್ತಾರೋ ಎಂದು!
ಹಾಗಾದರೂ ಆಗಿಹೋಗಲಿ! ನಷ್ಟವೇನಿಲ್ಲ! ಭಟ್ಟ ಪರಮೇಶ್ವರನಿಗೆ ಜಯವಾಗಲಿ.
ಕುವೆಂಪುರವರ ಮಾತುಗಳು ಶ್ರಿಯುತ ಎಸ್.ವಿ. ಪರಮೇಶ್ವರ ಭಟ್ಟರಲ್ಲಿದ್ದ ಅಗಾಧವಾದ ಪ್ರತಿಭಾ ಶಕ್ತಿಗೊಂದು ನಿದರ್ಶನ.
ಭಟ್ಟರ ಸಾಹಿತ್ಯ ವಿರಚನೆಗಳ ವಿಚಾರಕ್ಕೆ ಬಂದರೆ 1940 ರಲ್ಲಿ ಅವರ ಪ್ರಥಮ ಕವನ ಸಂಕಲನರಾಗಿಣಿಪ್ರಕಟವಾಯಿತು. ಮುಂದೆಉಪ್ಪು ಕಡಲು”, “ಇಂದ್ರ ಚಾಪ”, “ಇಂದ್ರ ಗೋಪ”, “ಅಂಚೆ ಪೆಟ್ಟಿಗೆ”, “ಜಹನಾರ”, “ಗಗನಚುಕ್ಕಿಇವು ಅವರ ಪ್ರಮುಖ ಕವನ ಸಂಕಲನಗಳಾಗಿವೆ. ``ಗಾಥಾಸಪ್ತಶತಿ’’, ``ಚಂದ್ರವೀಧಿ’’ ಮತ್ತು ``ಕೃಷ್ಣಮೇಧ’’ ಇವರ ಸಾಂಗತ್ಯ ಕೃತಿಗಳು. ``ಸೀಳು ನೋಟ’’ ಪರಮೇಶ್ವರ ಭಟ್ಟರ ವಿಮರ್ಶನಾ ಗ್ರಂಥವಾದರೆ ಮುದ್ದಣ ಕವಿಯ ``ಶ್ರೀರಾಮ ಪಟ್ಟಾಭಿಷೇಕಂ’’, ಮುದ್ದಣ ಕವಿಯ ``ಅದ್ಭುತ ರಾಮಾಯಣಂ’’, ``ಭೂಮಿ ಮತ್ತು ಧೂಮಕೇತು’’, ``ಕಣ್ಣುಮುಚ್ಚಾಲೆ-ಮಕ್ಕಳ ಸಾಹಿತ್ಯ ರಚನೆಗಳು’’ ಇವು ಅವರು ಸಂಪಾದಿಸಿದ ಕೃತಿಗಳಾಗಿವೆ.  ಬಹುಶ್ರುತ ವಿದ್ವಾಂಸರಾಗಿದ್ದ ಪರಮೇಶ್ವರ ಭಟ್ಟರು `ಕನ್ನಡ ಕಾಳಿದಾಸಎಂಬ ಖ್ಯಾತಿ ಪಡೆದವರು. ``ಕನ್ನಡ ಕಾಳಿದಾಸ ಮಹಾ ಸಂಪುಟ’’, ``ಕನ್ನಡ ಭಾಸ ಮಹಾ ಸಂಪುಟ``, ``ಕನ್ನಡ ಹರ್ಷ ಮಹಾ ಸಂಪುಟ’’, ``ಕನ್ನಡ ಬುದ್ಧ ಚರಿತೆ’’, ``ಕನ್ನಡಗಾಥಾ ಸಪ್ತಶತಿ’’, ``ಕನ್ನಡ ಗೀತಗೋವಿಂದ’’, ``ಕನ್ನಡ ಕವಿ ಕೌಮುದಿ’’, ``ಕನ್ನಡ ಅಮರ ಶತಕ’’ ಎಂಬ ಹೆಸರಿನಲ್ಲಿ ಸಂಸ್ಕೃತದ ಮಹಾಕಾವ್ಯಗಳನ್ನು ಅನುವಾದಿಸಿದ ಪರಮೇಶ್ವರ ಭಟ್ಟರು ಕಾಲಿದಾಸ, ಭಾಸ, ಹರ್ಷ ಇವರುಗಳನ್ನು ಕನ್ನಡಕ್ಕೆ ಅನುವಾದಿಸಿದವರಲ್ಲಿ ಮೊದಲಿಗರಾಗಿದ್ದಾರೆ
ಪರಮೇಶ್ವರ ಭಟ್ತರ ಇಂತಹಾ ಅಗಾಧ ಪಾಂಡಿತ್ಯಕ್ಕೆ ಗೌರವ ಸೂಚಕವಾಗಿ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳೂ ಅವರನ್ನು ಅರಸಿಕೊಂಡು ಬಂದಿವೆ. ಅವರ ``ಕಾಳಿದಾಸ ಮಹಾಸಂಪುಟ’’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಭಾಷಾಂತರ ಪ್ರಶಸ್ತಿ ನೀಡಿದೆ. ಮೈಸೂರು ಮತ್ತು ಕುವೆಂಪು ವಿಶ್ವವಿದ್ಯಾಲಯಗಳಿಂದ ಗೌರವ ಡಿ.ಲಿಟ್ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವಗಳು ಅವರಿಗೆ ದೊರೆತಿವೆಜೊತೆಗೆ, ತಮ್ಮ ಅಪಾರ ಶಿಷ್ಯವೃಂದ ಹಾಗೂ ಸಾಹಿತ್ಯಾಭಿಮಾನಿಗಳಿಂದ  'ಪೂರ್ಣಕುಂಭ' ಎಂಬ ಅಭಿನಂದನ ಗ್ರಂಥವೂ ಸಮರ್ಪಣೆಯಾಗಿದೆ.
ಇಷ್ಟಾಗಿಯೂ ಭಟ್ಟರು ತಾವೆಂದೂ ಸಜ್ಜನಿಕೆಯ, ಸರಳ ಜೀವಿಯಾಗಿಯೇ ಇದ್ದವರು. ಬಿ.. ವಿವೇಕ ರೈಗಳು ಹೇಳುವಂತೆ `` ತಾನು ನಗುವುದರೊಂದಿಗೆ ಇತರರನ್ನೂ ನಗಿಸುವ ಪ್ರೊಫೆಸರ್…...  ನೂರು ನೋವುಗಳ ನಡುವೆಯೂ ಸಾವಿರ ಬಗೆಯ  ನಗೆ ಚೆಲ್ಲಿದ ಪ್ರೊಫೆಸರ್ ಅವರ ವಿದ್ವತ್ತು ಸಾಧನೆಗಳು , ಬಹಳ ಮಂದಿಗೆ ಕಾಣದೆ ಹೋದದ್ದು ಕನ್ನಡ ಸಾಹಿತ್ಯ ಚರಿತ್ರೆಯ  ಒಂದು ವ್ಯಂಗ್ಯ……  ತಮ್ಮೊಡನೆ ಇರುವವರನ್ನೆಲ್ಲ ಸಂತೋಷ ಪಡುವಂತೆ ಮಾಡುತ್ತಿದ್ದರು.ಹಾಗೆ ನೋಡಿದರೆ ಅವರಿಗೆ ದೊರೆತಿರುವ ಪ್ರಶಸ್ತಿಗಳು ಬಹಳವೇನೂ ಇಲ್ಲ.ಸಣ್ಣ ಸಣ್ಣ ಊರುಗಳಲ್ಲಿ ತಮಗೆ ಮಾಡಿದ ಸನ್ಮಾನಗಳನ್ನು ಅವರು ಸಂಭ್ರಮದಿಂದ ಹೇಳಿಕೊಳ್ಳುತ್ತಿದ್ದರು. ಜನರ ಪ್ರೀತಿಯನ್ನು ಬಹಳ ದೊಡ್ಡ ಗೌರವ ಎಂದು ಭಾವಿಸುತ್ತಿದ್ದರು. ಅರ್ಥದಲ್ಲೂ ಪರಮೇಶ್ವರ ಭಟ್ಟರು  ಕನ್ನಡದ ಅಪೂರ್ವ ಸಾಹಿತಿ.’’
ಇಂತಹಾ ಅಪೂರ್ವ ಚೇತನವೊಂದು ಅಕ್ಟೋಬರ್ 27 2000 ಕ್ಕೆ ನಮ್ಮನ್ನೆಲ್ಲಾ ಕಣ್ಣೀರ ಕಡಲಲ್ಲಿ ಮುಳುಗಿಸಿ ಮರೆಯಾಯಿತು.
ಭಟ್ಟರಂತಹಾ ಅಪರೂಪದ ಪ್ರತಿಭೆ ಇನ್ನೊಮ್ಮೆ ಕನ್ನಡ ನಾಡಿನಲ್ಲಿ ಹುಟ್ತಿ ಬರಲಿ, ಹುಟ್ಟಿ ಬಂದು ಕನ್ನಡ ತಾಯಿಯ ಸೇವೆಯಲ್ಲಿ ನಿರಂತರವಾಗಿ ತೊಡಗುವಂತಾಗಲಿ ಎಂದು ಆಶಿಸುತ್ತಾ ಶತಮಾನದ ಜನುಮ ದಿನದ ಶುಭ ಸಮಯದಲ್ಲಿ ಅವರದೇ ಕವನದ ಕೆಳಗಿನ ಸಾಲುಗಳ ಗುನುಗುತ್ತಾ, ದಿವ್ಯ ಚೇತನಕ್ಕೆ ನಮಿಸೋಣ…..
`'ಪ್ರೀತಿಯ ಕರೆ ಕೇಳಿ
ಆತ್ಮನ ಮೊರೆ ಕೇಳಿ
ನೀ ಬಂದು ನಿಂದಿಲ್ಲಿ
ದೀಪ ಹಚ್ಚಾ'’
ನಮಸ್ಕಾರ.