Monday, February 24, 2014

“ಇದು ಶಿವ ಮೆಚ್ಚುವಂತೆ ಬದುಕಿದವರ ಕತೆ”

ಸ್ನೇಹಿತರಿಗೆಲ್ಲಾ ನಮಸ್ಕಾರ.
ಸರ್ವರಿಗೂ ಮಹಾಶಿವರಾತ್ರಿಯ ಶುಭಾಶಯಗಳು,
ಸ್ನೇಹಿತರೇ, ನಾನು ಇತ್ತೀಚೆಗೆ ಓದಿದ “ಉದಾರಚರಿತರು ಉದಾತ್ತ ಪ್ರಸಂಗಗಳು” ಎಂಬ ಒಂದು ಉತ್ತಮ ಪುಸ್ತಕದ ಕುರಿತು ಈ ಸಮಯದಲ್ಲಿ  ನಾಲ್ಕು ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸುತ್ತಿದೆ.  ಕನ್ನಡದ ಅಗ್ರ ಸಂಶೋಧಕ, ಹಳೆಗನ್ನಡ ವ್ಯಾಕರಣ, ಛಂದಸ್ಸು ಸೇರಿದಂತೆ ಅನೇಕ ವಿಚಾರಗಳ ಕುರಿತು ಸಾಕಷ್ಟು ಅಧ್ಯಯನ ನಡೆಸಿರುವ ವಿದ್ವಾಂಸರಾದ ಟಿ.ವಿ. ವೆಂಕಟಾಚಲ ಶಾಸ್ತ್ರಿಗಳು ಬರೆದು ಸಂಕಲಿಸಿದ ಈ ಕೃತಿ ಕನ್ನಡ ಸಾಹಿತ್ಯ ಲೋಕದ  ಅಮೂಲ್ಯ ಕೃತಿಗಳಲ್ಲಿ ಒಂದಾಗಿದೆ.
ಒಟ್ಟು ನೋರೈವತ್ತೊಂದು ಪ್ರಸಂಗಗಳಿಂದ ಕೂಡಿದ ಈ ಕೃತಿಯು ಲೇಖಕರೇ ಹೇಳುವಂತೆ “ಈಚೆನ ದಿನಗಳಲ್ಲಿ ಪ್ರಭಾಷೆ, ಸಂಸ್ಕೃತಿಗಳ ಅನುಕರಣೆ...... ಕ್ಲಬ್ಬು, ಪಾರ್ಟಿಗಳ ಸ್ವಚ್ಚಂದ, ಸಾಂಘಿಕ ಜೀವನ......ಇವು ಹೆಚ್ಚಾಗುತ್ತಿವೆ.ಇವಕ್ಕೇನಾದರೂ ಚಿಕಿತ್ಸೆಯುಂಟೆ? ಅಂತಹಾ ಚಿಕಿತ್ಸೆಯನ್ನು ಸಕಾಲದಲ್ಲಿ ಮಾಡುವುದು ಸಾಮಾಜಿಕರ ಕರ್ತವ್ಯವಲ್ಲವೆ? ನಮ್ಮ ಯುವಪೀಳಿಗೆಗೆ ಮಾದರಿಗಳೆನ್ನಬಹುದಾದ ಉದಾತ್ತ ಪ್ರಸಂಗಗಳನ್ನು ತಿಳಿಸಿದರೆ, ಅವರು ಆ ದಿಕ್ಕಿನಲ್ಲಿ ಯೋಚಿಸುವುದು, ಸಾಗುವುದು, ಕೆಲಮಟ್ಟಿಗಾದರೂ ಸಾಧ್ಯವಾಗಬಹುದು.”  ಹೀಗಿರುವಲ್ಲಿ, ಈ ಮಹಾಶಿವರಾತ್ರಿಯು ಸನಿಹದಲ್ಲಿರುವ ಸಂದರ್ಭದಲ್ಲಿ ಶಿವ ಮೆಚ್ಚುವಂತೆ ಬದುಕಿದ ನಮ್ಮ ಹಿರಿಯರ ಆದರ್ಶ ಜೀವನವನ್ನು ನಾವೂ ತಿಳಿಯೋಣ, ಅನುಸರಿಸೋಣ ಎಂಬ ಆಶಯದೊಡನೆ ಆ ಪುಸ್ತಕದಲ್ಲಿ ನನಗಿಷ್ಟವಾದ 2 ಪ್ರಸಂಗಗಳನ್ನು ಇಲ್ಲಿ ನಿಮಗಾಗಿ ನೀಡಿದ್ದೇನೆ.  ಇದು ನಿಮಗೂ ಇಷ್ಟವಾಗುತ್ತದೆನ್ನುವ ಭರವಸೆ ನನಗಿದೆ.
……………………………
‘ಅದು ಹೋಗಬೇಕಾದ ಜಾಗಕ್ಕೆ ಹೋಯಿತು’
ಪರೋಪಕಾರಿಗಳಾಗಿದ್ದ ಬೆಂಗಳೂರು ಎಲೆ ಮಲ್ಲಪ್ಪ ಶೆಟ್ಟರು ಮಹಾ ಶ್ರೀಮಂತರು ,ಆದರೆ ಕೊನೆಗಾಲಕ್ಕೆ ಕಷ್ಟಗಳಿಗೆ ಸಿಕ್ಕಿದರು, ಬಡತನ ಆಡಿಸಿತು. ಇವರ ಕೊಡುಗೈ ದಾನದ ದುರುಪಯೋಗ ತಪ್ಪಿಸಲು ಮನೆಯವರು ಶೆಟ್ಟರು ಹೆಚ್ಚಾಗಿ ಕಾಲ ಕಳೆಯುತ್ತಿದ್ದ ಮಹಡಿಯ ಮೇಲಕ್ಕೆ ಅಪರಿಚಿತರನ್ನೆಲ್ಲಾ ಬಿಡದ ಹಾಗೆ ಕಾವಲು ಹಾಕಿದ್ದರು. ಒಂದು ದಿನ ಶೆಟ್ಟರ ಆರೋಗ್ಯ ಸಾಕಷ್ಟು ಚೆನ್ನಾಗಿರಲಿಲ್ಲ. ಮಹಡಿಯ ಮೇಲೆ ತಮ್ಮ ಕೋಣೆಯಲ್ಲಿ ಮಲಗಿ ವಿಶ್ರಮಿಸುತ್ತಿದ್ದರು.  
ಒಬ್ಬ ಬ್ರಾಹ್ಮಣ ಗೃಹಸ್ಥನು ಕಾವಲುಗಾರನ ಕಣ್ಣು ತಪ್ಪಿಸಿ ಹೇಗೋ ನುಸುಳಿಕೊಂಡು ಶೆಟ್ಟರ ಮಹಡಿ ಕೋಣೆಗೆ ಬಂದನು. “ಯಾರಪ್ಪ ನೀನು? ಯಾಕೆ ಬಂದೆ?” ಎಂದು ಶೆಟ್ತರು ಪ್ರಶ್ನಿಸಿದರು. ಆತನು ಅಳುತ್ತಾ ಮಾತ್ನಾಡದೆ ಅವರ ಕಾಲು ಹಿಡಿದುಕೊಂಡನು.  “ಬೇಡಪ್ಪ, ಬೇಡ.. ಕಾಲು ಹಿಡಿಯಬೇಡ, ಕೂತುಕೋ. ಏನು ವಿಚಾರ ಹೇಳು?” ಎಂದು ಪ್ರಶ್ನಿಸಿ ತಮ್ಮ ಮಂಚದ ಬದಿಗೆ ಆತನನ್ನು ಕೂರಿಸಿಕೊಂಡರು. “ಏನು ಹೇಳಲಿ ಶೆಟ್ಟರೆ, ಮಾತನಾಡಲು ನನಗೆ ಬಾಯಿ ಬರುತ್ತಿಲ್ಲ, ನಿಮ್ಮ ಸ್ಥಿತಿ ತಿಳಿದಿದ್ದೂ ವಿಧಿಯಿಲ್ಲದೆ ಬಂದಿದ್ದೇನೆ”  ಎಂದು ಅಲವತ್ತುಕೊಂಡನು. “ವಿಷಯವೇನೆಂದು ಹೇಳಲೇ ಇಲ್ಲವಲ್ಲ?” ಎಂದರು ಶೆಟ್ತರು.
ಬ್ರಾಹ್ಮಣ ಗೃಹಸ್ಥ ಅಳುತ್ತಾ ಹೇಳಿದನು, “ನಾನು ಬಡವ, ಹಿಂದೆ ಎಷ್ಟೋ ಸಲ ತಾವು ನನಗೆ ಸಹಾಯ ಮಾಡಿದ್ದೀರಿ. ತಮಗೆ ನನ್ನಂತವರು ಎಷ್ಟೋ ಜನ, ತಮಗೆ ಮರೆತು ಹೋಗಿರುತ್ತದೆ. ತಾವು ಕೊಡುಗೈ ದೊರೆ, ತಮಗೆ ತೊಂದರೆಯಿದ್ದೂ ಬೇಡುವ ಅನಿವಾರ್ಯ ನನಗೆ ಬಂದಿದೆ. ನನ್ನ ಮಗಳ ಮದುವೆ ನಿಶ್ಚಯವಾಗಿದೆ. ಕಷ್ಟಪಟ್ಟು ಹೊಂದಿಸಿರುವ್ ಸಂಬಂಧ, ಹಣಾದ ಕೊರತೆಯಿಂದ ನಿಂತುಹೋಗುವ ಭಯ ಬಂದಿದೆ. ತಾವು ಸಹಾಯ ಮಾಡಿ ಪುಣ್ಯ ಕಟ್ಟಿಕೊಳ್ಳಬೇಕು”
ಮಲ್ಲಪ್ಪ ಶೆಟ್ಟರು ಚಿಂತಾಕ್ರಾಂತರಾದರು. “ನನ್ನಲ್ಲಿ ಕೊಡ್ಲು ಏನೂ ಉಳಿದಿಲ್ಲವಲ್ಲಪ್ಪ” ಎಂದರು. ‘ಕಷ್ಟ’ಎಂದು ಬೇಡಲು ಬಂದವರಿಗೆ ಏನೂ ಕೊಡಲಾಗದಂತೆ ಕೈ ಕಟ್ಟಿ ಹಾಕಿದೆಯಲ್ಲ ಶಿವನೇ ಎಂದು ಕೊರಗಿದರು. ಹೀಗೆನ್ನುತ್ತಾ ತಮ್ಮ ಕೈಯೆರಡಾನ್ನೂ ತಮಗೆ ತಿಳಿಯದಂತೆ ಎದೆಯ ಮೇಲಿಟ್ಟುಕೊಂಡರು. ಅವರ ಕೈಗಳಿಗೆ ಶಿವಪೂಜೆಯ ಕರಡಿಗೆ ಸೋಕಿತು. ಅವರಿಗೆ ಕೂಡಲೇ ಮಿಂಚು ಹೊಳೆದಂತಾಯಿತು!
ತತ್ ಕ್ಷಣ ಎದ್ದು ಕುಳಿತರು. “ಇಲ್ಲೇ ಕುಳಿತಿರಿ, ಈಗಲೇ ಬಂದು ಬಿಡುತ್ತೇನೆ” ಎಂದು ಹೇಳಿ ಬೇಗ ಬೇಗ ಮೆಟ್ಟಿಲಿಳಿದು ಬಚ್ಚಲುಮನೆಗೆ ಹೋಗಿ ಕೈಕಾಲು ಮುಖ ತೊಳೆದುಕೊಂಡರು. ದೇವರ ಮನೆಗೆ ಹೋದರು. ಅಲ್ಲಿ ಮಡಿಯಾಗಿದ್ದ ಒಂದು ಕೆಂಪು ವಸ್ತ್ರ ತೆಗೆದುಕೊಂಡರು. ತಮ್ಮ ಬಂಗಾರದ ಕರಡಿಗೆಯಲ್ಲಿದ್ದ ಲಿಂಗವನ್ನು ಆ ವಸ್ತ್ರದಲ್ಲಿ ಸುತ್ತಿ ಕಟ್ಟಿ ಕೊರಳಿಗೆ ಕಟ್ಟಿಕೊಂಡರು. ಬಂಗಾರದ ಕರಡಿಗೆ ತೆಗೆದುಕೊಂಡು ಪುನಃ ಮಹಡಿ ಏರಿದರು.
ಆ ಬಂಗಾರದ ಕರಡಿಗೆ ಆ ಕಾಲದಲ್ಲಿ ಬಳಕೆಯಲ್ಲಿದ್ದ ತೊಟ್ಟಿಲು ಆಕಾರದಲ್ಲಿದ್ದು, ಸುಮಾರು ಒಂದೂವರೆ ಸೇರು ತೂಕ ತೂಗುತ್ತಿತ್ತು. ಅದನ್ನು ಒಂದು ಬಟ್ಟೆಯಲ್ಲಿ ಸುತ್ತಿ ಬ್ರಾಹ್ಮಣ ಗೃಹಸ್ಥನ ಕೈಯ್ಯಲ್ಲಿಟ್ಟು ಹೇಳಿದರು, “ಅಪ್ಪ ಯಾರಿಗೂ ತೋರಿಸದೆ ತೆಗೆದುಕೊಂಡು ಹೋಗು, ಯಾರಾದರೂ ನೋಡಿದರೆ ಕಿತ್ತುಕೊಂಡಾರು. ಜೋಪಾನ, ಬೇಗ ಹೊರಟುಬಿಡು.  ಮಗಳ ಮದುವೆ ಚೆನ್ನಾಗಿ ನಡೆಯಲಿ, ದಂಪತಿಗಳು ನೂರ್ಕಾಲ ಚೆನ್ನಾಗಿರಲಿ”
ಮುಂದೆ ಕೆಲ ದಿನಗಳು ಕರಡಿಗೆ ಕಾಣೆಯಾದ ವಿಷಯ ಮನೆಯವರಿಗೆ ತಿಳಿಯದ ಹಾಗೆ ಸದಾ ವಲ್ಲಿಯನ್ನು ಹೊದ್ದು ಓಡಾಡಿದರು. 15 ದಿನಗಳ ಮೇಲೆ ವಸ್ತ್ರದ ಲಿಂಗ ಕಟ್ಟಿಕೊಂಡಿದ್ದದ್ದು ಮಗಳ ಕಣ್ಣಿಗೆ ಬಿತ್ತು. “ಇದೇಕೆ ಅಪ್ಪಾಜಿ, ವಸ್ತ್ರದಲ್ಲಿ ಲಿಂಗ ಕಟ್ಟಿಕೊಂಡಿದ್ದೀರಿ, ಕರಡಿಗೆ ಎಲ್ಲಿ?” ಎಂದು ಕೇಳಿದಳು. ಶೆಟ್ಟರು ನಗುತ್ತಾ “ಅದು ಹೋಗಬೇಕಾದ ಜಾಗಕ್ಕೆ ಹೋಯಿತು” ಎಂದರು.
ಆಧಾರ: ಜಯಾ ರಾಜಶೇಖರ್ ಬರೆದಿರುವ ‘ಎಲೆ ಮಲ್ಲಪ್ಪ ಶೆಟ್ತರು’ ಪುಸ್ತಕದ ಪುಟ 48-52

‘ನೋಡಿ ಆ ಬಸವಣ್ಣಗಳು ಬಿಸಿಲಿನಲ್ಲಿ ದುಡಿಯುತ್ತಿಲ್ಲವೆ?’
ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲೂಕು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಸ್ವಾಮೀಜಿ ಶ್ರೀ ರಾಘವೇಂದ್ರ ಸ್ವಾಮಿಗಳು ಆಗಾಗ ಹತ್ತಿರದ ಹಳ್ಳಿಗಳಲ್ಲಿ ತಮ್ಮ ಶಿಷ್ಯರೊಂದಿಗೆ ಯೋಗಪ್ರದರ್ಶನ ಕೊಡುತ್ತಿದ್ದರು. ಹೀಗೆಯೇ ಒಮ್ಮೆ ಅಂತಹಾ ಪ್ರದರ್ಶನ ಚೆನ್ನಗಿರಿ ತಾಲೂಕು ಕಛೇರಿಯ ಮುಂಭಾಗದಲ್ಲಿ ಸಹ ನಡೆದಿತ್ತು. ಅದು ‘1948-49 ರಲ್ಲಿ, ಆಗದನ್ನು ನೋಡಿ ಅಚ್ಚರಿ ಪಟ್ಟಿದ್ದ ಜಿ. ಗೋವಿಂದರಾಜು ಎನ್ನುವವರು 1963-64 ರ ಸುಮಾರಿನಲ್ಲಿ ತಾವು ಉಪಾಧ್ಯಾಯರಾಗಿದ್ದ ಅವಧಿಯಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ಆಶ್ರಮಕ್ಕೆ ಭೇಟಿಕೊಟ್ತರು.
ಮಧ್ಯಾಹ್ನ 12 ರಸಮಯ, ರಾಘವೇಂದ್ರ ಸ್ವಾಮಿಗಳು ಒಬ್ಬಿಬ್ಬರು ಕೆಲಸಗಾರರೊಂದಿಗೆ ಕಣದಲ್ಲಿ ಹುಲ್ಲು ಎತ್ತಿ ಹಾಕುತ್ತಾ ಎತ್ತುಗಳ ಜೊತೆಗೆ ತಾವೂ ದುಡಿಯುತ್ತಿದ್ದರು. ಪರಸ್ಥಳದಿಂದ ಬಂದ ಅತಿಥಿಗಳನ್ನು ಕಾಣುತ್ತಲೇ ಕೆಲಸದ ಸ್ಥಳದಿಂದ ಜಿಂಕೆಯಂತೆ ಓಡುತ್ತಾ ಬಂದರು. ಅವರು ಆ ಉರಿಬಿಸಿಲಲ್ಲಿ ಹಾಗೆ ಕೆಲಸ ಮಾಡುತ್ತಿದ್ದುದು ಕಂಡು, ಮೈಯಲ್ಲಿ ಬೆವರಿಳಿಯುತ್ತಿದ್ದುದು ಕಂಡು, ಗೋವಿಂದರಾಜು ಸಹಾನುಭೂತಿ ಮಾತು ಹೇಳಬೇಕೆಂದು ಯೋಚಿಸಿದರು. “ಸ್ವಾಮೀಜಿ, ವಿಪರೀತ ಬಿಸಿಲು, ತಾವು ಈ ಬಿಸಿಲಲ್ಲೇ ಹೀಗೆ.....” ಎಂದೇನೋ ಹೇಳಲು ಹೊರಟರು. ತಕ್ಷಣವೇ ಸ್ವಾಮೀಜಿ “ಏನಂದಿರಿ, ನನಗೊಬ್ಬನಿಗೇ ಬಿಸಿಲೇ? ನೋಡಿ ಆ ಬಸವಣ್ಣಗಳು ಬಿಸಿಲಲ್ಲಿ ದುಡಿಯುತ್ತಿಲ್ಲವೆ?” ಎಂದರು.
ಒಂದೆರಡು ವರ್ಷಗಳ ಈಚೆಗೆ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾಸ್ ಆಸ್ಪತ್ರೆಯನ್ನು ಸ್ವಾಮೀಜಿ ಸೇರಿದ್ದರು. ಗೋವಿಂದರಾಜು ಮತ್ತು ಅವರ ಸ್ನೇಹಿತರು ಸ್ವಾಮೀಜಿಯನ್ನು ನೋಡಿ ಹೋಗಲು ಆಸ್ಪತ್ರೆಗೆ ಬಂದರು. ವಿಶೇಷ ವಾರ್ಡಿನಲ್ಲಿರುವುದು ತಿಳಿಯಿತು. ಹೋಗಿ ನೋಡಿದಾಗ, ಕೊಠಡಿಯನ್ನು ಅಗರಬತ್ತಿಯ ಕಂಪು ಆವರಿಸಿತ್ತು; ಸ್ವಾಮೀಜಿ ಪದ್ಮಾಸನದಲ್ಲಿ ಕುಳಿತು ಧ್ಯಾನಸ್ಥರಾಗಿದ್ದರು. ಅವರು ಸ್ವಲ್ಪ ಹೊತ್ತಿನ ಮೇಲೆ ಕಣ್ಣು ತೆರೆದು ಬಂದವರೊಡನೆ ನಗುತ್ತಾ ಮಾತನಾಡಿದರು. ಆಗ “ಇದೇನು ಸ್ವಾಮೀಜಿ, ತಮಗೆ ತೀವ್ರವಾಗಿ ಹೀಗೆ ಅನಾರೋಗ್ಯವಾಗಿದ್ದರೂ ಧ್ಯಾನದ ಚಿಂತೆಯೇಕೆ?” ಎಂಬುದಾಗಿ ಪ್ರಶ್ನಿಸಿದರು. ಅವರು ಮುಗುಳು ನಗುತ್ತಾ, “ಹಾಗೇನಿಲ್ಲ ಪಕ್ಕದ ಕೊಠಡಿಯಲ್ಲಿ ಒಂದು ಹೆಣ್ಣುಮಗು ಹೊಟ್ಟೆನೋವಿನಿಂದ ತುಂಬಾ ಒದ್ದಾಡುತ್ತಿದೆ, ಈಗ ತಾನೆ ನೋಡಿ ಬಂದೆ, ‘ ಮಗುವಿನ ಸಂಕಟ ದೂರವಾಗಲಿ’ ಎಂಬುದಾಗಿ ಪರಮೇಶ್ವರನನ್ನು ಧ್ಯಾನಿಸುತ್ತಾ ಕುಳಿತಿದ್ದೆ” ಎಂದರು.
ಆಧಾರ: ತ.ಸು. ಶಾಮರಾಯ ಸಂಪಾದಿತ ‘ನಂದನವನ’ ಪುಟ 119-120

1 comment:

  1. ನಮಸ್ಕಾರ ಅಡಿಗರೇ,

    ನೀವು ಇಲ್ಲಿ ಉಧಾಹರಿಸಿದ ಎರಡೂ ಪ್ರಸಂಗಗಳು ಬಹಳ ಇಷ್ಟಾಆಯ್ತು, ಪರೋಪಕಾರ ಹಾಗೂ ನಿಸ್ವಾರ್ಥ ಮನೋಭಾವಕ್ಕೆ ಉತ್ತಮ ನಿದರ್ಶನ ನೀಡಿದ್ದೀರಿ. ನಾವು ಕೂಡ ಈ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ :)

    ನಿಮಗೂ ಕೂಡ ಮಹಾ ಶಿವರಾತ್ರಿಯ ಶುಭಾಶಯಗಳು :)

    ಹರ ಹರಾ ಮಹಾದೇವ...

    ReplyDelete