Friday, September 30, 2016

ಬೋಳುವಾರರ ಮಾನವೀಯ ಪ್ರವಾದಿಯೊಬ್ಬನ ಚಿತ್ರಣ - ಓದಿರಿ

"ಓದಿರಿ"

ಮತ್ತೊಮ್ಮೆ ಕೇಳಿಸಿತ್ತು! ನೇರವಾಗಿ ಆಕಾಶದಿಂದ ಭೂಮಿಗೆ ಇಳಿದು ಬಂದಂತಿದ್ದ ಆ ದ್ವನಿ.
ಸಂಶಯವೇ ಇಲ್ಲ. ಆರು ತಿಂಗಳ ಹಿಂದೆ ಇದೇ "ಹಿರಾ" ಗುಹೆಯೊಳಗಿನ ಕತ್ತಲಲ್ಲಿ ಕುಳಿತು ದ್ಯಾನಿಸುತ್ತಿದ್ದಾಗ, ಎದೆ ಝಲ್ಲೆನ್ನಿಸುವಂತೆ ಬೆಚ್ಚಿ ಬೀಳಿಸಿದ್ದ ಅದೇ ಕಂಚಿನ ಕಂಠದ ದ್ವನಿ.
"ನನಗೆ ಓದಲು ತಿಳಿಯದು."

ನಲವತ್ತರ ಹೊಸ್ತಿಲಲ್ಲಿ ನಿಂತಿದ್ದ ಮಹಮ್ಮದರು ಗಾಬರಿಯಿಂದಲೇ ತೊದಲಿದ್ದರು. ಅದು ನಿಜವೂ ಆಗಿತ್ತು.

ಹುಟ್ಟುವ ಮೊದಲೇ ತಂದೆಯನ್ನೂ, ಎಂಟು ವರ್ಷ ತುಂಬುವ ಮೊದಲೇ ತಾಯಿಯನ್ನೂ ಕಳೆದುಕೊಂಡ ನಿರ್ಗತಿಕ ಬಾಲಕನೊಬ್ಬ, ಅನಂತರದ ಮೊದಲೆರಡು ವರ್ಷ ಬದುಕಿದ್ದು ತಾತ ಅಬ್ದುಲ್ ಮತ್ತಲೀಬರ ಆಶ್ರಯದಲ್ಲಿ. ತಾತನ ಮರಣದ ಬಳಿಕ ಸೇರಿಕೊಂಡದ್ದು ದೊಡ್ಡಪ್ಪ ಅಬೂತಾಲೀಬರ ಮನೆಗೆ. ಹೀಗೆ, ಬಾಲ್ಯವನ್ನು ದೊಡ್ಡಪ್ಪನವರ ಆಡುಗಳನ್ನು ಮೇಯಿಸುವ ಆಳುಮಗನಾಗಿ ಮುಂದೆ ಅವರದೇ ವ್ಯಾಪಾರಿ ಮಳಿಗೆಯಲ್ಲಿ ಸಹಾಯಕನಾಗಿ ದುಡಿಯುತ್ತಾ ಯೌವ್ವನವನ್ನೆಲ್ಲಾ ಕಳೆದುಕೊಂಡಿದ್ದರೆ ಓದುವುದಾದರೂ ಹೇಗೆ? ಅಕ್ಷರವನ್ನುಳಿದು ಮಿಕ್ಕೆಲ್ಲಾ ವಿದ್ಯೆಗಳನ್ನು ಕಲಿಸಲು ಹಠ ಹಿಡಿದವನಂತಿದ್ದ ದೊಡ್ಡಪ್ಪ ಅಬೂತಾಲೀಬರು ತಮ್ಮ ಸೋದರಪುತ್ರನಿಗೆ ಹನ್ನೆರಡಾಗುತ್ತಿದ್ದಂತೆಯೇ ತಮ್ಮ ವರ್ತಕ ತಂಡದಲ್ಲಿ ಸಹಾಯಕನಂತೆ ಇರಿಸಿಕೊಂಡು ಪರದೇಶಗಳಿಗೆ ಕರೆದುಕೊಂಡು ಹೋಗಲಾರಂಭಿಸಿದ್ದರೆ ಬರಹ ಕಲಿಯುವುದಾದರೂ ಹೇಗೆ?

***




ಕನ್ನಡದ ಸೃಜನಶೀಲ ಬರಹಗಾರರಾದ ಬೋಳುವಾರು ಮಹಮದ್ ಕುಂಞಿ ಅವರ ಮೂರನೇ ಕಾದಂಬರಿ - "ಓದಿರಿ" ಪ್ರಥಮ ಪುಟದ ಸಾಲುಗಳಿವು. ಪ್ರವಾದಿಯ ಜೀವನ ಕುರಿತು ಭಾವಾವೇಶಪೂರಿಯ್ಬತವಾದ, ಐತಿಹಾಸಿಕ ಅಂಶವನ್ನೊಳಗೊಂಡ ಹಲವಾರು ಬರಹಗಳು ಕನ್ನಡ ಸೇರಿ ಎಲ್ಲಾ ಭಾಷೆಗಳಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿ ಬಂದಿದೆ. ಆದರೆ ಇಲ್ಲಿ ಬೋಳುವಾರು ಅವರು ಪ್ರವಾದಿ ಮಹಮದರ ಜೀವನವನ್ನು ಜನಪದ ನಾಯಕನೋರ್ವನ ಜೀವನದ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ, ಮೂಲಕ ಇದು ಬೇರೆಲ್ಲಾಕೃತಿಗಳಿಗಿಂತ ಭಿನ್ನವಾಗಿರುತ್ತದೆ ಹಾಗೂ ಮುಖ್ಯವಾಗುತ್ತದೆ. ಪ್ರವಾದಿ ಮಹಮದರ ಜೀವನ ಅರಿತವರಷ್ಟೇ ಹೊಸಬರೂ ಸಹ ಸುಲಭವಾಗಿ ಅರ್ಥೈಸಿಕೊಳ್ಳಬಹುದಾದ ರೀತಿಯಲ್ಲಿ ಕಾದಂಬರಿ ಮೂಡಿ ಬಂದಿದೆ. ಪೂರ್ಣವಾಗಲ್ಲದಿದ್ದರೂ ಪ್ರವಾದಿಯನ್ನು ತುಸು ಮಟ್ಟಿಗಾದರೂ ಕನ್ನಡದ ಓದುಗರಿಗೆ ಪರಿಚಯಿಸುವ ಹತ್ತಿರವಾಗಿಸುವ ಕೆಲಸವನ್ನು ಓದಿರಿ ಮಾಡುತ್ತದೆ.

ಇಲ್ಲಿ ನಾವು ಗಮನಿಸಬೇಕಾದುದೇನೆಂದರೆ ದು ಶುದ್ಧಾನುಶುದ್ಧ ಕಾದಂಬರಿಯೇ ಹೊರತು ಧಾರ್ಮಿಕ ಪ್ರಜ್ಞೆಯ ಭಾರದಿಂದ ರೂಪಿತವಾಗಿರುವ ಪುಸ್ತಕವಲ್ಲ. ಬೋಳುವಾರರ ಕಥೆಗಳು ಯಾವ ರೀತಿಯಿಂದ ಓದಿಸಿಕೊಳ್ಳುವ ಗುಣವನ್ನಳವಡಿಸಿಕೊಂಡಿವೆಯೋಓದಿರಿಕೂಡ ಸರಾಗವಾಗಿ ಓದಿಸಿಕೊಳ್ಳುತ್ತದೆ ಎನ್ನುವುದು. "ಅಂತರಂಗ", "ಬಹಿರಂಗ" ಮತ್ತು "ಚದುರಂಗ" ಎನ್ನುವ ಮೂರು ವಿಭಾಗಗಳಲ್ಲಿ ಕಾದಂಬರಿ ಹರಡಿಕೊಂಡಿದೆ. ಬಾಲಕ ಮುಹಮ್ಮದರಲ್ಲಿ ನಿಧಾನಕ್ಕೆ ರೂಪುಗೊಳ್ಳುವ ಪ್ರವಾದಿತನದ ಬಗ್ಗೆ, ಮಹಮದ ಒಳಗಿನ ಚಿಂತನೆ, ಆಲೋಚನೆಗಳ ಸಂಘರ್ಷವನ್ನು ಅಂತರಂಗದಲ್ಲಿ ತಿಳಿಸಿದರೆ ತಾನೇ ಅಂತಿಮ ಪ್ರವಾದಿ ಎನ್ನುವುದನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸುವ ಮಹಮದರ ಚಿತ್ರ, ಅದರ ನಂತರದಲ್ಲಿ ಇತರೇ ಧರ್ಮೀಯರು ಮಹಮದರನ್ನು ಣೋಡುವ ರೀತಿಯ ಕುರಿತು ಬಹಿರಂಗದಲ್ಲಿ ಪ್ರಸ್ತಾಪಿಸಲಾಗಿದೆ. ಮಹಮದರು ಕಂಡುಕೊಂಡ ಸತ್ಯದ ಅನುಷ್ಠಾನಕ್ಕಾಗಿ ಅವರು ನಡೆಸುವ ಹೋರಾಟದ ಚಿತ್ರಣ ಮೂರನೇ ಹಾಗೂ ಅಂತಿಮ ಭಾಗ ಚದುರಂಗದಲ್ಲಿ ಪಡಿಮೂಡಿದೆ.
ಆದರೆ ಕಾದಂಬರಿಯ ಅಂತಿಮ ಬಾಗದಲ್ಲಿ ಪ್ರವಾದಿಯ ಸತ್ಯವೇ ಸತ್ಯ ಎಂದು ಪ್ರತಿಪಾದಿಸುವ ಬೋಳುವಾರರ ಬರಹ ಮೊದಲೆರಡು ಭಾಗಗಳಲ್ಲಿದ್ದ ವಿಮರ್ಶಾತ್ಮಕತೆಯ ದೃಷ್ಟಿಯಿಂದ ಹೊರತಾಗಿದೆ ಎನ್ನಬಹುದು. ಆದರೆ ಇದುವರೆಗೂ ನಮಗೆ ಪರಿಚಯವಿಲ್ಲದ ಪರಿಸರದಲ್ಲಿ ನಡೆಯುವ ಕಥೆಯನ್ನು ಇಷ್ಟು ಸರಳವಾಗಿ ಹೇಳಿರುವುದು ಬೋಳುವಾರು ಅವರ ಹೆಚ್ಚುಗಾರಿಕೆಯೇ ಸರಿ.
ಬುದ್ದ, ಬಸವಣ್ಣ, ಏಸು ಕ್ರಿಸ್ತ, ಅವರಂತೆಯೇ ಅಂಧಾಚರಣೆಯ ವಿರುದ್ಧದ ಹೋರಾಟದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡ ಮಹಮದರ ಕಥೆ ಮನಸ್ಸಿಗೆ ತಟ್ಟುತ್ತದೆ. ಆದರೆ ಕಾಲ ಸರಿದಂತೆಲ್ಲಾ ಅಂದು ಅವರು ಪ್ರಾರಂಭಿಸಿದ ಧರ್ಮ ಇಂದಿಗೂ ಸರಿಯಾದ ದಾರಿಯಲ್ಲಿ ಸಾಗಿದೆಯೆ ಎಂದು ನೋಡಿದಾಗ ನಿರಾಸೆಯಾಗುವುದು ಸತ್ಯ. ಬಹುದೈವತ್ವವನ್ನು, ಮನುಷ್ಯ ರೂಪಿತ ದೇವಾರಾಧನೆಯನ್ನು ವಿರೋಧಿಸಿದ ಪ್ರವಾದಿ ಮುಹಮ್ಮದ್ ಮಕ್ಕಾದ ಕಅಬಾವನ್ನು, ಮದೀನಾವನ್ನು ಪವಿತ್ರ ಸ್ಥಳ ಮಾಡಿಬಿಡುತ್ತಾರೆ. ಮನುಷ್ಯ ರೂಪಿತ ದೈವದ ಜಾಗವನ್ನು ಮನುಷ್ಯ ನಿರ್ಮಿತ ಮಸೀದಿಗಳು ಆಕ್ರಮಿಸಿಕೊಳ್ಳುತ್ತವೆ. ಯಾವ ಕಾಲದ ಯಾವ ಪ್ರವಾದಿಯಾದರೂ ಆಗ ಪ್ರಚಲಿತದಲ್ಲಿದ್ದ ಅಂಧಾಚರಣೆಗಳ ವಿರುದ್ಧ ಹೋರಾಡುತ್ತ ಹೊಸ ಧರ್ಮವನ್ನು ಹುಟ್ಟುಹಾಕುತ್ತಾರೆ. ಕಾಲ ಸವೆದಂತೆ ಹೊಸ ಧರ್ಮವೂ ಕೂಡ ಅಂಧಾಚರಣೆಯ ಕೂಪದಲ್ಲಿ ಬಿದ್ದು ಬಿಡುವುದು ಕೂಡ ಕಾಲದ ಮಹಿಮೆಯೇ ಆಗಿದೆ!
ಒಟ್ತಾರೆಯಾಗಿ ಮುಸ್ಲಿಂ ಧರ್ಮ, ಮಹಮ್ಮದರ ಕುರಿತಂತೆ ತಿಳಿಯದಿದ್ದವರೂ ಸಹ ತಿಳಿಯಬಹುದಾದಷ್ಟು ಸರಳ ಸುಂದರವಾಗಿ ಪ್ರವಾದಿ ಮಹಮ್ಮದರ ಜೀವನವನ್ನು ಮಾನವೀಯತೆಯ ನೆಲೆಗಟ್ಟಿನಲ್ಲಿ ಬೋಳುವಾರು ತಮ್ಮ ಕಾದಂಬರಿ "ಓದಿರಿ" ಯಲ್ಲಿ ಕಟ್ಟಿಕೊಟ್ಟಿದ್ದಾರೆ. ಬೋಳುವಾರು ಅವರು ತಮ್ಮ ಪ್ರಸ್ತಾವನೆಯಲ್ಲಿ ಹೇಳಿಕೊಳ್ಳುವಂತೆ ಯಾವುದೇ ಒಂದು ಧರ್ಮವನ್ನು ಅಥವಾ ಧರ್ಮ ಗ್ರಂಥವನ್ನು ಸಮರ್ಥಿಸುವ ಅಥವಾ ವಿರೋಧಿಸುವ ಮೊದಲು ಕನಿಷ್ಟ ಒಂದು ಬಾರಿಯಾದರೂ ಓದಿಕೊಳ್ಳುವುದು ಒಳಿತು ಎಂಬುದು ನನ್ನ ನಂಬಿಕೆ. ಹೀಗೆ ಓದಿಕೊಂಡು ಅಲ್ಪ ಸ್ವಲ್ಪವಾದರೂ ಪರಸ್ಪರ ಪರಿಚಿತರಾದರೆ ನಮ್ಮೆಲ್ಲರ ಸಣ್ಣ ಪುಟ್ಟ ದೋಷಗಳು ಾಲ್ಪಸ್ವಲ್ಪವಾದರೂ ಮನ್ನಿಸಲ್ಪಡಭುದೇನೋ ಎಂಬುದು ನನ್ನ ಆಸೆ. ಮನ್ನಿಸಲ್ಪಡಲಿ.

ಆದ್ದರಿಂದ ದಯವಿಟ್ಟು ಓದಿರಿ.

Saturday, September 03, 2016

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 76

ಗುಡ್ಡಟ್ಟು  (Guddattu)
ನನ್ನೆಲ್ಲಾ ಸ್ನೇಹಿತರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಇದು ನಮ್ಮಲ್ಲಿನ ಸ್ಥಳ ಪುರಾಣಗಳು ಸರಣಿಯ ಎಪ್ಪತ್ತಾರನೇ ವಿಶೇಷ ಬರಹ. ಗಣೇಶ ಚತುರ್ಥಿಯ ಈ ಸಮಯದಲ್ಲಿ ನಿಸರ್ಗದತ್ತವಾಗಿ ಮೂಡಿಬಂದ ಗಣೇಶನ ಸನ್ನಿಧಿಯೊಂದರ ಕಿರು ಪರಿಚಯ ಹಾಗೂ ಸ್ಥಳ ಮಹಿಮೆಯನ್ನು ತಿಳಿಸಿಕೊಡುವ ಉದ್ದೇಶದಿಂದ ಕುಂದಾಪುರದ ಸಮೀಪವಿರುವ ಗುಡ್ಡಟ್ಟು ಸ್ಥಳ ಪುರಾಣವನ್ನು ಇಲ್ಲಿ ನೀಡುತ್ತಿದ್ದೇನೆ. 
***

ಉಡುಪಿ  ಜಿಲ್ಲೆಯ  ಕುಂದಾಪುರ ತಾಲೂಕಿನಲ್ಲಿರುವ ಗುಡ್ಡಟ್ಟು  ಗ್ರಾಮ  ಮಹಾಗಣಪತಿ ನೆಲೆಸಿರುವ  ಪಾವನ ಪುಣ್ಯ ಕ್ಷೇತ್ರವಾಗಿದೆ.ಸುಂದರ, ಹಚ್ಚ ಹಸಿರಿನ ನಡುವೆ ಇರುವ ಬೃಹದಾಕಾರದ ಬಂಡೆಯೇ ಗಣೇಶನ ಆವಾಸ ಸ್ಥಾನ. ಇದೊಂದು ನಿಸರ್ಗ ಸೃಷ್ಟಿಯಾಗಿರುವುದರಿಂದ ನೋಡಲು ಅಾತ್ಯಾಕರ್ಷಕವೂ ಆಗಿದೆ.ಬೃಹತ್ ಬಂಡೆಯಲ್ಲಿ  ಪೂರ್ವಾಭಿಮುಖವಾಗಿ  ತೆೆರೆದಿರುವ  ಮಡುವಿನಲ್ಲಿ  ಸುಮಾರು 3 ಅಡಿ ಎತ್ತರದ ಕಪ್ಪು ಶಿಲೆಯಲ್ಲಿರುವ,  ಕಾಲು  ಮಡಚಿ, ಸೊಂಡಿಲು  ತಿರುಚಿ ಕುಳಿತಿರುವ  ಈ  ಗಣಪತಿಯ  ಸ್ವಯಂಭೂ ವಿಗ್ರಹವಾಗಿದ್ದುವಿಗ್ರಹವು ಕಂಠ ಪ್ರಮಾಣದವರೆಗೆ ಸದಾ ನೀರಿನಲ್ಲಿ ಮುಳುಗಿರುವುದು ಇಲ್ಲಿನ ವಿಶೇಷ. 




ದೇವಾಲಯದ ಗರ್ಭಗುಡಿ  ಪ್ರಾಕೃತಿಕವಾದರೂ ತೀರ್ಥಮಂಟಪ, ಹೆಬ್ಟಾಗಿಲುಗಳನ್ನು ನಂತರ ನಿರ್ಮಿಸಲಾಗಿದೆಉಡುಪಿಯಿಂದ 35 ಕಿ.ಮೀ, ಕುಂದಾಪುರದಿಂದ 15 ಕಿ.ಮೀ ಅಂತರದಲ್ಲಿರುವ ಈ ಕ್ಷೇತ್ರಕ್ಕೆ ಬಸ್  ಅಥವಾ ಕ್ಯಾಬ್ಗಳ ಮೂಲಕ ಸುಲಭವಾಗಿ ತಲುಪಬಹುದು. ಗಣೇಶ ಚತುರ್ಥಿಯಂತಹಾ ಮಹತ್ವದ ಹಬ್ಬದ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆರೆಯುವ ಭಕ್ತಾದಿಗಳು ಇಲ್ಲಿ ನಡೆಯುವ ಆಯುರ್ಕೊಡ ಸೇವೆಯನ್ನು ನೋಡಿ ಕಣ್ತುಂಬಿಕೊಂಡು ಪಾವನರಾಗುತ್ತಾರೆ.
***

Sri Siddivinayaka Temple, Guddattu
ತ್ರಿಪುರಾಸುರ ಎಂಬ ರಾಕ್ಷಸನ  ಸಂಹಾರ ಕಾಲದಲ್ಲಿ  ಈಶ್ವರನು  ಯುದ್ಧಕ್ಕೆ  ಹೋಗುವಾಗ  ಪ್ರಮಾದವಶಾತ್ ಗಣಪತಿಯನ್ನು   ಸ್ಮರಿಸದೇ  ತೆರಳುತ್ತಾನೆ.  ಆದರೆ ಜಯ ಲಭಿಸದೇ   ಪರದಾಡುವ  ಪರಿಸ್ಥಿತಿ ಬಂದಾಗ  ತನ್ನ  ಮಗನಿಂದಲೇ ತನಗೆ  ವಿಘ್ನ  ಬಂದಿದೆ  ಎಂದು ಅರಿತ  ಪರಶಿವನು ಕೋಪಗೊಂಡು  ಗಣಪತಿಯ ಮೇಲೆ  ಆಗ್ನೇಯಾಸ್ತ್ರವನ್ನು  ಪ್ರಯೋಗಿಸುತ್ತಾನೆ.   ಆದರೆ ಯಾವ  ಅಸ್ತ್ರವೂ   ಗಣಪತಿಯನ್ನು  ಏನೂ ಮಾಡಲು ಸಾಧ್ಯವಿಲ್ಲ.  ಅದೇ  ರೀತಿಯಾಗಿ  ಶಿವನು ಪ್ರಯೋಗಿಸಿದ   ಅಸ್ತ್ರ ಹುಸಿಯಾಗಲೂ  ಸಾಧ್ಯವಿಲ್ಲ. ಈ ಒಂದು ಸಂದಿಗ್ದ ಪರಿಸ್ಥಿತಿಯಲ್ಲಿ ಆ ಅಸ್ತ್ರವು  ಗಣಪತಿಯನ್ನು  ಹೊತ್ತೂಯ್ದು   ಮಧುಸಾಗರದಲ್ಲಿ   ಕೆಡುವುತ್ತದೆ. ಮಧು ಎಂದರೆ ಜೇನು  ತುಪ್ಪ. ತನಗೆ  ಅತ್ಯಂತ  ಪ್ರಿಯವಾದ ಜೇನುತುಪ್ಪದಲ್ಲಿ   ಬಿದ್ದ   ಗಣಪತಿ  ಯಥೇತ್ಛವಾಗಿ  ಮಧುಪಾನ   ಮಾಡಿ  ತೃಪ್ತಿ  ಹೊಂದುತ್ತಾನೆ. ತನ್ನನ್ನು ಇಲ್ಲಿ  ತಂದು   ಹಾಕಿದವರ ಕಾರ್ಯ  ಜಯವಾಗಲೆಂದು   ಹರಸುತ್ತಾನಂತೆ. ಆಗ ಈ  ವರದ ಪರಿಣಾಮ  ಶಿವನು  ತ್ರಿಪುರಾಸುರನನ್ನು   ಸಂಹಾರಮಾಡಿ   ಜಯ ಶಾಲಿಯಾಗುತ್ತಾನೆ. ಇತ್ತ ಗಣಪತಿಗೆ ಅತಿಯಾದ  ಮಧು  ಸೇವನೆಯಿಂದ  ದೇಹದಲ್ಲಿ   ಉಷ್ಣ  ಹೆಚ್ಚಾಗಿ   ಉರಿ  ಭಾದೆ  ತಾಳಲಾರದೇ   ಒದ್ದಾಡುತ್ತಿರುತ್ತಾನೆ. ಇದನ್ನು ಗಮನಿಸಿದ  ಶಿವನು   ಗಣಪತಿಯ ಉರಿಶಮನಕ್ಕಾಗಿ   ನರಸಿಂಹ  ತೀರ್ಥದ  ಪಕ್ಕದಲ್ಲಿ  ಜಲಾದಿವಾಸವಾಗಿರು ಎಂದು ಈ ಸ್ಥಾನವನ್ನು   ಗಣಪತಿಗೆ  ಅನುಗ್ರಹಿಸುತ್ತಾನೆ , ಅಂದಿನಿಂದ  ಇಂದಿನವರೆಗೂ ಇಲ್ಲಿ   ಹರಿಯುವ   ನರಸಿಂಹ  ತೀರ್ಥ ಎಂಬ ನದಿಯ  ಪಕ್ಕದಲ್ಲಿ   ಇರುವ  ಬೃಹತ್  ಬಂಡೆಯ  ಮಡುವಿನಲ್ಲಿ  ಜಲಾದಿವಾಸವಾಗಿ  ನೆಲೆಸಿ  ಗಣಪತಿಯು  ಭಕ್ತರನ್ನು ಉದ್ಧರಿಸುತ್ತಿದ್ದಾನೆ