Saturday, September 03, 2016

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 76

ಗುಡ್ಡಟ್ಟು  (Guddattu)
ನನ್ನೆಲ್ಲಾ ಸ್ನೇಹಿತರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಇದು ನಮ್ಮಲ್ಲಿನ ಸ್ಥಳ ಪುರಾಣಗಳು ಸರಣಿಯ ಎಪ್ಪತ್ತಾರನೇ ವಿಶೇಷ ಬರಹ. ಗಣೇಶ ಚತುರ್ಥಿಯ ಈ ಸಮಯದಲ್ಲಿ ನಿಸರ್ಗದತ್ತವಾಗಿ ಮೂಡಿಬಂದ ಗಣೇಶನ ಸನ್ನಿಧಿಯೊಂದರ ಕಿರು ಪರಿಚಯ ಹಾಗೂ ಸ್ಥಳ ಮಹಿಮೆಯನ್ನು ತಿಳಿಸಿಕೊಡುವ ಉದ್ದೇಶದಿಂದ ಕುಂದಾಪುರದ ಸಮೀಪವಿರುವ ಗುಡ್ಡಟ್ಟು ಸ್ಥಳ ಪುರಾಣವನ್ನು ಇಲ್ಲಿ ನೀಡುತ್ತಿದ್ದೇನೆ. 
***

ಉಡುಪಿ  ಜಿಲ್ಲೆಯ  ಕುಂದಾಪುರ ತಾಲೂಕಿನಲ್ಲಿರುವ ಗುಡ್ಡಟ್ಟು  ಗ್ರಾಮ  ಮಹಾಗಣಪತಿ ನೆಲೆಸಿರುವ  ಪಾವನ ಪುಣ್ಯ ಕ್ಷೇತ್ರವಾಗಿದೆ.ಸುಂದರ, ಹಚ್ಚ ಹಸಿರಿನ ನಡುವೆ ಇರುವ ಬೃಹದಾಕಾರದ ಬಂಡೆಯೇ ಗಣೇಶನ ಆವಾಸ ಸ್ಥಾನ. ಇದೊಂದು ನಿಸರ್ಗ ಸೃಷ್ಟಿಯಾಗಿರುವುದರಿಂದ ನೋಡಲು ಅಾತ್ಯಾಕರ್ಷಕವೂ ಆಗಿದೆ.ಬೃಹತ್ ಬಂಡೆಯಲ್ಲಿ  ಪೂರ್ವಾಭಿಮುಖವಾಗಿ  ತೆೆರೆದಿರುವ  ಮಡುವಿನಲ್ಲಿ  ಸುಮಾರು 3 ಅಡಿ ಎತ್ತರದ ಕಪ್ಪು ಶಿಲೆಯಲ್ಲಿರುವ,  ಕಾಲು  ಮಡಚಿ, ಸೊಂಡಿಲು  ತಿರುಚಿ ಕುಳಿತಿರುವ  ಈ  ಗಣಪತಿಯ  ಸ್ವಯಂಭೂ ವಿಗ್ರಹವಾಗಿದ್ದುವಿಗ್ರಹವು ಕಂಠ ಪ್ರಮಾಣದವರೆಗೆ ಸದಾ ನೀರಿನಲ್ಲಿ ಮುಳುಗಿರುವುದು ಇಲ್ಲಿನ ವಿಶೇಷ. 




ದೇವಾಲಯದ ಗರ್ಭಗುಡಿ  ಪ್ರಾಕೃತಿಕವಾದರೂ ತೀರ್ಥಮಂಟಪ, ಹೆಬ್ಟಾಗಿಲುಗಳನ್ನು ನಂತರ ನಿರ್ಮಿಸಲಾಗಿದೆಉಡುಪಿಯಿಂದ 35 ಕಿ.ಮೀ, ಕುಂದಾಪುರದಿಂದ 15 ಕಿ.ಮೀ ಅಂತರದಲ್ಲಿರುವ ಈ ಕ್ಷೇತ್ರಕ್ಕೆ ಬಸ್  ಅಥವಾ ಕ್ಯಾಬ್ಗಳ ಮೂಲಕ ಸುಲಭವಾಗಿ ತಲುಪಬಹುದು. ಗಣೇಶ ಚತುರ್ಥಿಯಂತಹಾ ಮಹತ್ವದ ಹಬ್ಬದ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆರೆಯುವ ಭಕ್ತಾದಿಗಳು ಇಲ್ಲಿ ನಡೆಯುವ ಆಯುರ್ಕೊಡ ಸೇವೆಯನ್ನು ನೋಡಿ ಕಣ್ತುಂಬಿಕೊಂಡು ಪಾವನರಾಗುತ್ತಾರೆ.
***

Sri Siddivinayaka Temple, Guddattu
ತ್ರಿಪುರಾಸುರ ಎಂಬ ರಾಕ್ಷಸನ  ಸಂಹಾರ ಕಾಲದಲ್ಲಿ  ಈಶ್ವರನು  ಯುದ್ಧಕ್ಕೆ  ಹೋಗುವಾಗ  ಪ್ರಮಾದವಶಾತ್ ಗಣಪತಿಯನ್ನು   ಸ್ಮರಿಸದೇ  ತೆರಳುತ್ತಾನೆ.  ಆದರೆ ಜಯ ಲಭಿಸದೇ   ಪರದಾಡುವ  ಪರಿಸ್ಥಿತಿ ಬಂದಾಗ  ತನ್ನ  ಮಗನಿಂದಲೇ ತನಗೆ  ವಿಘ್ನ  ಬಂದಿದೆ  ಎಂದು ಅರಿತ  ಪರಶಿವನು ಕೋಪಗೊಂಡು  ಗಣಪತಿಯ ಮೇಲೆ  ಆಗ್ನೇಯಾಸ್ತ್ರವನ್ನು  ಪ್ರಯೋಗಿಸುತ್ತಾನೆ.   ಆದರೆ ಯಾವ  ಅಸ್ತ್ರವೂ   ಗಣಪತಿಯನ್ನು  ಏನೂ ಮಾಡಲು ಸಾಧ್ಯವಿಲ್ಲ.  ಅದೇ  ರೀತಿಯಾಗಿ  ಶಿವನು ಪ್ರಯೋಗಿಸಿದ   ಅಸ್ತ್ರ ಹುಸಿಯಾಗಲೂ  ಸಾಧ್ಯವಿಲ್ಲ. ಈ ಒಂದು ಸಂದಿಗ್ದ ಪರಿಸ್ಥಿತಿಯಲ್ಲಿ ಆ ಅಸ್ತ್ರವು  ಗಣಪತಿಯನ್ನು  ಹೊತ್ತೂಯ್ದು   ಮಧುಸಾಗರದಲ್ಲಿ   ಕೆಡುವುತ್ತದೆ. ಮಧು ಎಂದರೆ ಜೇನು  ತುಪ್ಪ. ತನಗೆ  ಅತ್ಯಂತ  ಪ್ರಿಯವಾದ ಜೇನುತುಪ್ಪದಲ್ಲಿ   ಬಿದ್ದ   ಗಣಪತಿ  ಯಥೇತ್ಛವಾಗಿ  ಮಧುಪಾನ   ಮಾಡಿ  ತೃಪ್ತಿ  ಹೊಂದುತ್ತಾನೆ. ತನ್ನನ್ನು ಇಲ್ಲಿ  ತಂದು   ಹಾಕಿದವರ ಕಾರ್ಯ  ಜಯವಾಗಲೆಂದು   ಹರಸುತ್ತಾನಂತೆ. ಆಗ ಈ  ವರದ ಪರಿಣಾಮ  ಶಿವನು  ತ್ರಿಪುರಾಸುರನನ್ನು   ಸಂಹಾರಮಾಡಿ   ಜಯ ಶಾಲಿಯಾಗುತ್ತಾನೆ. ಇತ್ತ ಗಣಪತಿಗೆ ಅತಿಯಾದ  ಮಧು  ಸೇವನೆಯಿಂದ  ದೇಹದಲ್ಲಿ   ಉಷ್ಣ  ಹೆಚ್ಚಾಗಿ   ಉರಿ  ಭಾದೆ  ತಾಳಲಾರದೇ   ಒದ್ದಾಡುತ್ತಿರುತ್ತಾನೆ. ಇದನ್ನು ಗಮನಿಸಿದ  ಶಿವನು   ಗಣಪತಿಯ ಉರಿಶಮನಕ್ಕಾಗಿ   ನರಸಿಂಹ  ತೀರ್ಥದ  ಪಕ್ಕದಲ್ಲಿ  ಜಲಾದಿವಾಸವಾಗಿರು ಎಂದು ಈ ಸ್ಥಾನವನ್ನು   ಗಣಪತಿಗೆ  ಅನುಗ್ರಹಿಸುತ್ತಾನೆ , ಅಂದಿನಿಂದ  ಇಂದಿನವರೆಗೂ ಇಲ್ಲಿ   ಹರಿಯುವ   ನರಸಿಂಹ  ತೀರ್ಥ ಎಂಬ ನದಿಯ  ಪಕ್ಕದಲ್ಲಿ   ಇರುವ  ಬೃಹತ್  ಬಂಡೆಯ  ಮಡುವಿನಲ್ಲಿ  ಜಲಾದಿವಾಸವಾಗಿ  ನೆಲೆಸಿ  ಗಣಪತಿಯು  ಭಕ್ತರನ್ನು ಉದ್ಧರಿಸುತ್ತಿದ್ದಾನೆ  

No comments:

Post a Comment