Sunday, August 27, 2017

ಐಎಎಸ್ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ಕನ್ನಡ ಕುವರಿ ಕೆ.ಆರ್. ನಂದಿನಿ



ಶ್ರಮ, ಶ್ರದ್ಧೆ ಮತ್ತು ಛಲ ಇದ್ದರೆ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಯಶಸ್ಸು ಕಾಣಬಹುದು. ಅದಕ್ಕೆ ನೀವು ಯಾವ ಊರಲ್ಲಿದ್ದೀರಿ ಎನ್ನುವುದು ಮುಖ್ಯವಾಗುವುದಿಲ್ಲ. ಏಕಾಗ್ರತೆಯಿಂದ ಅಭ್ಯಾಸ ಮಾಡಿದರೆ ಯಾರೂ ಕೂಡ ಪರೀಕ್ಷೆಯಲ್ಲಿ ಯಶಸ್ಸು ಕಾಣಬಹುದು. ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸಾಗಲು ದೆಹಲಿಯಲ್ಲೇ ಇದ್ದು ವಿಶೇಷ ತರಬೇತಿ ಪಡೆಯಬೇಕು ಎಂದೇನಿಲ್ಲ. ನಾನು ಪ್ರತಿನಿತ್ಯ ಎಂಟರಿಂದ ಹತ್ತು ಗಂಟೆಗಳ ಕಾಲ ಅಭ್ಯಾಸ ನಡೆಸುತ್ತಿದ್ದೆ. ನಿರಂತರ ಅದ್ಯಯನವೇ ಇಂದು ಫಲ ನೀಡಿದೆ.' 
ಇದು ಬಾರಿ ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್ಸಿ) ನಡೆಸಿದ ನಾಗರಿಕ ಸೇವಾ ಪರೀಕ್ಷೆ ಐಎಎಸ್ ನಲ್ಲಿ ಪ್ರಥಮ ರ್ಯಂಕ್ ಗಳಿಸಿ ಕರ್ನಾಟಕಕ್ಕೆ ಕೀರ್ತಿ ತಂದ ಕೆ.ಆರ್. ನಂದಿನಿ ಅವರ ನುಡಿಗಳು.
ಇತ್ತೀಚೆಗೆ ಯುಪಿಎಸ್ಸಿ ಪ್ರಕಟಿಸಿದ ಐಎಎಸ್ ಪರೀಕ್ಷಾ ಫಲಿತಾಂಶದಲ್ಲಿ ಇಡೀ ರಾಷ್ಟ್ರಕ್ಕೆ ಪ್ರಥಮ ಸ್ಥಾನಿಯಾಗಿ ಹೊರ ಹೊಮ್ಮಿದ ನಂದಿನಿ ಅವರದ್ದು ನಿಜಕ್ಕೂ ದೊಡ್ಡ ಸಾಧನೆಯೇ ಸರಿ. ಕೋಲಾರ ಜಿಲ್ಲೆ ಕೆಂಬೋಡಿ ಗ್ರಾಮದವರಾದ ನಂದಿನಿ ತಂದೆ ಕೆ..ರಮೇಶ್ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದರೆ ತಾಯಿ ವಿಮಲಾ ಸಹ ಉತ್ತಮ ಗೃಹಿಣಿಯಾಗಿದ್ದಾರೆ. ಮನೆಯಲ್ಲಿನ ತಾಯಿ ತಂದೆಯರ ಪ್ರೋತ್ಸಾಹದೊಂದಿಗೆ ಕೋಲಾರದ ಪರಿಸರವೂ ಇವರ ಐಎಎಸ್ ಆಸೆಗೆ ನೀರೆದಿದಿದೆ.
ನಂದಿನಿ ಐದನೇ ತರಗತಿಯಲ್ಲಿದ್ದಾಗಲೇ ಅವರಿಗೆ ತಾವು ಮುಂದೆ ಜಿಲ್ಲಾಧಿಕಾರಿಯಾಗಬೇಂದು ಕನಸು ಚಿಗುರಿತ್ತು. ತಂದೆ ರಮೇಶ್ ಅವರೊಡನೆ ಕೋಲಾರ ಜಿಲ್ಲೆಯ ವಿವಿಧ ಗ್ರಾಮಗಳಿಗೆ ತೆರಳಿ ಸಾಕ್ಷರತಾ ಆಂದೋಲನದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ನಂದಿನಿಗೆ ಕಾರ್ಯಕ್ರಮದಲ್ಲಿ ಅವರೊಡನೆ ಭಾಗವಹಿಸುತ್ತಿದ್ದ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳನ್ನು ಹತ್ತಿರದಿಂದ ಗಮನಿಸುವ ಅವಕಾಶ ಸಿಕ್ಕಿತ್ತು. ಅದನ್ನು ಉತ್ತಮವಾಗಿ ಬಳಸಿಕೊಂಡ ನಂದಿನಿ ಅವರ ಕಾರ್ಯವೈಖರಿಗಳನ್ನು ಗಮನಿಸುತ್ತಿದ್ದು ಮುಂದೊಂದು ದಿನ ತಾನೂ ಅವರಂತೆಯೇ ಾಧಿಕಾರಿಯಾಗಬೇಕೆಂದು ಕನಸು ಕಟ್ಟಿದ್ದರು.
ಕೋಲಾರದ ಚಿನ್ಮಯ ವಿದ್ಯಾಲಯದಲ್ಲಿ 1 ರಿಂದ 10 ನೇ ತರಗತಿವರೆಗೆ ಓದಿದ ನಂದಿನಿ   2006 ರಲ್ಲಿ 10 ನೇ ತರಗತಿ ವಿದ್ಯಾಭ್ಯಾಸ ಮುಗಿಸಿದ್ದರು ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ನಡೆಸಿದ್ದರು. 2008 ರಲ್ಲಿ ದ್ವಿತೀಯ ಪಿಯು ಮುಗಿಸಿ ಬೆಂಗಳೂರಿನ ಎಂ.ಎಸ್. ರಾಮಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಷಯದಲ್ಲಿ ಪದವಿ ಪಡೆದರು. ಪದವಿ ಮುಗಿಸಿದ ನಂದಿನಿ ಕೆಲವು ಕಾಲ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಐಎಎಸ್ ಅಧಿಕಾರಿ ಆಗಬೇಕೆಂಬ ಹಂಬಲ ಅವರನ್ನು ದೆಹಲಿಗೆ ತೆರಳುವಂತೆ ಮಾಡಿತು. ಅಲ್ಲಿ ಕರ್ನಾಟಕ ಭವನದಲ್ಲಿ ಸಹಾಯಕ ಇಂಜಿನಿಯರ್ ಆಗಿ ಸೇರಿಕೊಂಡರು.
2014 ರಲ್ಲಿ ಪ್ರಥಮ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದಿದ್ದ ನಂದಿನಿ 849 ನೇ ರ್ಯಾಂಕ್ ಪಡೆದಿದ್ದರು. ರ್ಯಾಂಕಿಂಗ್ ಕಡಿಮೆ ಇದ್ದ ಕಾರಣ ಭಾರತೀಯ ಕಂದಾಯ ಸೇವೆ (ಐಆರ್ ಎಸ್) ವಿಭಾಗದಲ್ಲಿ ಆಯ್ಕೆ ಆಗಿದ್ದರು. ಆದರೆ ಐಎಎಸ್ ಆಗುವ ಆಸೆ ಬತ್ತಿರಲಿಲ್ಲ. ಅದಕ್ಕಾಗಿ ದೆಹಲಿಯಲ್ಲಿ ಕೆಲ ತಿಂಗಳು ತರಬೇತಿ ಪಡೆದಿದ್ದು ಬೆಂಗಳೂರಿನ ವಿಜಯನಗರದ ‘ಇನ್ಸೈಟ್ ಐಎಎಸ್ ಸಂಸ್ಥೆಯಲ್ಲಿ 10 ತಿಂಗಳು ಅಧ್ಯಯನ ನಡೆಸಿದ್ದರು. ಎಂದರೆ ಅದು ಯಾವುದೇ ಬಗೆಯ ವಿಶೇಷ ತರಬೇತಿ ಆಗಿರದೆ ಪರೀಕ್ಷೆಗೆ ಅಗತ್ಯವಾದ ಅದ್ಯಯನ ಸಾಮಗ್ರಿಗಳಷ್ಟೇ ದೊರೆಯುವ ತಾಣವಾಗಿತ್ತು. 



ಹೀಗೆ ತರಬೇತಿ, ಅದ್ಯಯನ ನಡೆಸಿದ್ದ ನಂದಿನಿ ಮತ್ತೆ 2016 ರಲ್ಲಿ  ಐಎಎಸ್ ಪರೀಕ್ಷೆ ಬರೆದಿದ್ದರು. ಹಾಗೆ ಬರೆದ ಪರೀಕ್ಷೆಯಲ್ಲಿ ಮೊದಲನೇ ರ್ಯಾಂಕ್ ಪಡೆದು ಸಾಧನೆ ಮಾಡಿ ಎಲ್ಲರಿಗೂ ಮಾದರಿ ಆಗಿದ್ದಾರೆ.
'ಹುಟ್ಟಿನಿಂದಲೇ ಯಾರೂ ಬುದ್ದಿವಂತರಾಗಿರುವುದಿಲ್ಲ. ನಾನೂ ಅದಕ್ಕೆ ಹೊರತಾಗಿಲ್ಲ' ಎನ್ನುವ ನಂದಿನಿಗೆ ಗಣಿತವೆಂದರೆ ಅತ್ಯಂತ ಕಷ್ಟದ ವಿಷಯ  ಅದು 'ಕಬ್ಬಿಣದ ಕಡಲೆ' ಎನ್ನುವ ಇವರು ಶಾಲಾ ದಿನಗಳಿಂದಲೇ ಗಣಿತ ಹೊರತುಪಡಿಸಿ ಎಲ್ಲಾ ವಿಷಯದಲ್ಲೂ ಟಾಪ್ ಬರುತ್ತಿದ್ದರು. ಗಣಿತ ಏಕೆ ಕಷ್ಟವಾಗುತಿತ್ತು ಎಂಬುದು ಇಂದಿಗೂ ನನಗೆ ಯಕ್ಷಪ್ರಶ್ನೆಯಾಗೆಯೇ ಉಳಿದಿದೆ. ಎನ್ನುತ್ತಾರೆ.
ಕನ್ನಡ ಸಾಹಿತ್ಯ ಎಂದರೆ ನಂದಿನಿಗೆ ಅಚ್ಚು ಮೆಚ್ಚಾಗಿದ್ದು ಐಎಎಸ್ ಪರೀಕ್ಷೆಯಲ್ಲಿಯೂ ಇದನ್ನೇ ಐಚ್ಚಿಕ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದರು. ಬಿಡುವಿನ ಸಮಯದಲ್ಲಿ ಕನ್ನಡ ಸಾಹಿತ್ಯಗಳನ್ನು ಓದುತ್ತೇನೆ. ನನ್ನ ಜೀವನದ ಮೇಲೆ ಕನ್ನಡ ಸಾಹಿತ್ಯ ಸಾಕಷ್ಟು ಪ್ರಭಾವ ಬೀರಿದೆ. ಎನ್ನುವ ಇವರು ಪ್ರೊ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಬಳಿ ಕನ್ನಡ ವಿಷಯದ ತರಬೇತಿ ಪಡೆದಿದ್ದರು.
ಪ್ರಸ್ತುತ ನಂದಿನಿ ಹರಿಯಾಣದ ಫರೀದಾಬಾದ್ನ ನ್ಯಾಷನಲ್ ಅಕಾಡೆಮಿ ಆಫ್ ಕಸ್ಟಮ್ಸ್, ಎಕ್ಸೈಸ್ ಅಂಡ್ ನಾರ್ಕೊಟಿಕ್ಸ್ನಲ್ಲಿ ತರಬೇತಿ ಪಡೆಯುತ್ತಿದ್ದು ಹೀಗೆ ತರಬೇತಿಯಲ್ಲಿದ್ದಾಗಲೇ ಇನ್ನೊಮ್ಮೆ ಪರೀಕ್ಷೆ ಬರೆದು ಪ್ರಥಮ ರ್ಯಾಂಕ್ ಗಳಿಸಿ ಸಾಧನೆ ತೋರಿದ್ದಾರೆ.
 “ಐಎಎಸ್ ಅಧಿಕಾರಿಯಾಗಿ ಭಾರತೀಯರ ಸೇವೆ ಮಾಡಬೇಕೆಂಬುದೇ ನನ್ನ ಮಹದಾಸೆ. ಐಎಫ್ಎಸ್ ಸೇವೆ ಸೇರುವುದಿಲ್ಲ. ಐಎಎಸ್ ಅಧಿಕಾರಿಯಾಗಿ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಜನ ಸೇವೆ ಮಾಡಲಿದ್ದೇನೆ. ದೇಶದ ಎಲ್ಲಾ ಕ್ಷೇತ್ರಗಳೂ ಅಭಿವೃದ್ದಿಯಾಗಬೇಕಿದೆ. ಹೀಗಾಗಿ ಇಂಥದೇ ಕ್ಷೇತ್ರವೆಂದು ಹೇಳಲಾರೆ. ಯಾವುದೇ ವಲಯದಲ್ಲಿಯೂ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಿಕೊಂಡು ಶ್ರದ್ದೆಯಿಂದಲೂ, ಖುಷಿಯಿಂದಲೂ ಕರ್ತವ್ಯ ನಿರ್ವಹಿಸುವುದು ನನ್ನ ಯೋಜನೆಯಾಗಿದೆ.” ಎಂದೆನ್ನುವ ನಂದಿನಿ ಗಳಿಸಿದ್ದು ಪರೀಕ್ಷೆಯಲ್ಲಿ ಗಳಿಸಿದ್ದು  ಶೇ.55.3 ಅಂಕಗಳನ್ನು ಎಂದರೆ ಎಂತಹವರಿಗೂ ಅಚ್ಚರಿ ಆಗದಿರದು. ಮುಖ್ಯ ಲಿಖಿತ ಪರೀಕ್ಷೆ ಹಾಗೂ  ಇಂಟರ್ವ್ಯೂವ್ ಸೇರಿದಂತೆ ಒಟ್ಟು 2,025 ಅಂಕಗಳಿಗೆ ನಂದಿನಿ 1,120 ಅಂಕಗಳನ್ನು ಪಡೆದಿದ್ದಾರೆ. ಕೇಂದ್ರ ಲೋಕಸೇವಾ ಆಯೋಗ ಬಿಡುಗಡೆ ಮಾಡಿದ ಅಧಿಕೃತ ಅಂಕಪಟ್ಟಿಯಲ್ಲಿ ಅಂಶ ತಿಳಿಸಲಾಗಿದೆ.
ಭವಿಷ್ಯದಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ನಂದಿನಿ ನೀಡುವ ಸೂಚನೆಗಳು ಹೀಗಿದೆ-
ನಮ್ಮಲ್ಲಿ ಸಾಧಿಸಬೇಕೆನ್ನುವ ಸ್ಪಷ್ಟ ಛಲವಿರಬೇಕು. ಅದಕ್ಕೆ ಬೇಕಾದ ಮಾರ್ಗದಲ್ಲಿ ಸೂಕ್ತ ಮಾರ್ಗದರ್ಶನ ಪಡೆದು ಸಾಗಿದರೆ ಗುರಿ ತಲುಪುವುದು ಖಚಿತ. ಗ್ರಾಮೀಣ ಪ್ರದೇಶದ ರೈತಾಪಿ ಕುಟುಂಬದಿಂದ ಬಂದ ಮಧ್ಯಮ ವರ್ಗದ ಅಭ್ಯರ್ಥಿಗಳಿಗೆ ಆರಂಭದಲ್ಲಿ ಪರೀಕ್ಷೆಗಳ ಬಗ್ಗೆ ಮಾಹಿತಿ ಗೊತ್ತಿರದ ಕಾರಣಕ್ಕೆ ಕಠಿಣ ಎನಿಸುತ್ತವೆ. ಅದಕ್ಕೆ ಕೆಲ ಕಾಲ ಸೂಕ್ತ ಮಾರ್ಗದರ್ಶನ ಪಡೆದು ತರಬೇತಿ ಕೇಂದ್ರಗಳಿಗೆ ಹೋಗಿ ಪರೀಕ್ಷಾ ತಯಾರಿ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಮಾಡಿದಾಗ ಅವರಿಗೂ ಪರೀಕ್ಷೆಗಳು ಸುಲಭವಾಗುತ್ತದೆ.
“ಇಂಜಿನಿಯರಿಂಗ್ ಮತ್ತು ವೈದ್ಯಕೀಯ  ಹಿನ್ನೆಲೆ ಇರುವವರಿಗೆ ಗಣಿತ, ವಿಜ್ಞಾನ, ಇಂಗ್ಲಿಷ್ ಭಾಷೆ ಮತ್ತು ಸಂವಹನದ ಮೇಲೆ ಹಿಡಿತ ಇರುತ್ತದೆ. ಇವು ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಹಾಗೂ ಕಲಾ ವಿಭಾಗದವರಿಗೆ ಸ್ವಲ್ಪ ಕಷ್ಟವಾಗಬಹುದು. ಆದರೆ ಛಲ, ಆತ್ಮವಿಶ್ವಾಸವಿದ್ದಲ್ಲಿ ಯಾವುದೂ ಅಸಾಧ್ಯವಲ್ಲ. ಅಧ್ಯಯನ ಸಾಮಗ್ರಿಗಳನ್ನು ಸಿದ್ಧವಾಗಿಟ್ಟುಕೊಂಡು ಓದುವುದನ್ನೇ ಕಾಯಕ ಮಾಡಿಕೊಳ್ಳಬೇಕು. ಯಾವುದೇ ಒಂದು ವಿಭಾಗ ಅಥವಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಅತ್ಯುತ್ತಮ ನಿರ್ವಹಣೆ ತೋರಲು ಪ್ರಯತ್ನಿಸಬೇಕು. ಇದೆಲ್ಲದರೊಡನೆ ಸೋಲು, ಗೆಲುವನ್ನು ಸಮಾನ ಭಾವನೆಯಿಂದ ಸ್ವೀಕರಿಸುವ ಚಿಂತನೆ ಬೆಳೆಸಿಕೊಳ್ಳಬೇಕು.
“ಮಹಿಳೆಯರ ವಿಚಾರಕ್ಕೆ ಬರುವುದಾದರೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಪುರುಷರಷ್ಟು ಪ್ರಮಾಣದಲ್ಲಿ ಮಹಿಳೆ ಯಶಸ್ಸು ಸಾಧಿಸಿಲ್ಲ ಎನ್ನುವುದನ್ನು ಒಪ್ಪಬೇಕಾಗುತ್ತದೆ. ಇದಕ್ಕೆ ಸಮಾಜದಲ್ಲಿ ಮಹಿಳೆಯರಿಗಿರುವ ಕಟ್ಟುಪಾಡುಗಳು ಪ್ರಮುಖ ಕಾರಣ ಎನ್ನಬಹುದು. ಆದರೆ ಇತ್ತೀಚೆಗೆ ಪರೀಕ್ಷೆಗಳಲ್ಲಿ ಆಯ್ಕೆಯಾಗುವವರಲ್ಲಿ ಮಹಿಳೆಯರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಎನ್ನಲೇಬೇಕು. ಹಿಂದೆಯೇ ಹೇಳಿದಂತೆ ಸಾಧಿಸುವ ಛಲವಿದ್ದಲ್ಲಿ ಸ್ಥಳ, ಜಾತಿ, ಲಿಂಗ ತಾರತಮ್ಯಗಳು ಅಡ್ಡಿ ಬರಲಾರವು.”


ಕೆ.ಆರ್. ನಂದಿನಿ ಕುರಿತಂತೆ ಕೆಲವು ಕಿರು ಮಾಹಿತಿಗಳು

ಪೂರ್ಣ ಹೆಸರು - ಕೆಂಬೋಡಿ ರಮೇಶ್ ನಂದಿನಿ (ಕೆ.ಆರ್. ನಂದಿನಿ)
ಹುಟ್ಟಿದ ದಿನಾಂಕ ಮತ್ತು  ಸ್ಥಳ -  10-09-1990 ,  ಕೋಲಾರದ ಕೆಂಬೋಡಿ
ತಂದೆ-ತಾಯಿ ಕುಟುಂಬ ವರ್ಗ  - ಕೆ. ರಮೇಶ್ ಹಾಗೂ ವಿಮಲ (ತರುಣ್ ಪಟೇಲ್ ಹೆಸರಿನ ಓರ್ವ ತಮ್ಮನಿದ್ದಾನೆ)
10 ನೇ ತರಗತಿ -ಚಿನ್ಮಯ ವಿದ್ಯಾಲಯ, ಕೋಲಾರ (2006 ರಲ್ಲಿ 96.8 ಅಂಕಗಳೊಂದಿಗೆ ತೇರ್ಗಡೆ)
ದ್ವಿತೀಯ ಪಿಯು - ಆಳ್ವಾಸ್ ಪಿಯು ಕಾಲೇಜು, ಮೂಡಬಿದಿರೆ (2008 ರಲ್ಲಿ 94.8 ಅಂಕಗಳೊಂದಿಗೆ ತೇರ್ಗಡೆ)
ಪದವಿ - ಎಂ.ಎಸ್. ರಾಮಯ್ಯ ಇಂಜಿನಿಯರಿಂಗ್ ಕಾಲೇಜು, ಬೆಂಗಳೂರು (ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ)
ಹುದ್ದೆ - ಐಆರ್ ಎಸ್ ಅಧಿಕಾರಿ (ಪ್ರಸ್ತುತ ಹರಿಯಾಣದ ಫರೀದಾಬಾದ್ನ ನ್ಯಾಷನಲ್ ಅಕಾಡೆಮಿ ಆಫ್ ಕಸ್ಟಮ್ಸ್, ಎಕ್ಸೈಸ್ ಅಂಡ್ ನಾರ್ಕೊಟಿಕ್ಸ್ನಲ್ಲಿ ತರಬೇತಿ ಪಡೆಯುತ್ತಿದ್ದಾರೆ)
ಐಎಎಸ್ ಪರೀಕ್ಷೆಯಲ್ಲಿ ಗಳಿಸಿದ್ದ ಅಂಕಗಳು – 1120 (ಮುಖ್ಯ ಪರೀಕ್ಷೆಯಲ್ಲಿ 927, ಇಂಟರ್ ವ್ಯೂವ್ ನಲ್ಲಿ 193) ಒಟ್ಟಾರೆ ಶೇ.55.3
ಐಎಎಸ್ ಪರೀಕ್ಷೆಯಲ್ಲಿ ಆಯ್ಕೆ ಮಾಡಿಕೊಂಡ ಐಚ್ಚಿಕ ವಿಷಯ - ಕನ್ನಡ ಸಾಹಿತ್ಯ
2014 ರಲ್ಲಿ ಪ್ರಥಮ ಬಾರಿಗೆ ಪರೀಕ್ಷೆ ಬರೆದಿದ್ದಾಗ ಪಡೆದ ರ್ಯಾಂಕ್ – 849
ಕರ್ನಾಟಕದಿಂದ ಯುಪಿಎಸ್ಸಿ ಪರೀಕ್ಷೆ ಬರೆದು ಪ್ರಥಮ ರ್ಯಾಂಕ್ ಗಳಿಸಿದವರಲ್ಲಿ ನಂದಿನಿ ಎರಡನೆಯವರಾಗಿದ್ದಾರೆ. ಇದಕ್ಕೂ ಮುನ್ನ 16 ವರ್ಷಗಳ ಹಿಂದೆ  2001 ರಲ್ಲಿ ವಿಜಯಲಕ್ಷ್ಮಿ ಬಿದರಿ ಸಾಧನೆ ಮಾಡಿದ್ದರು.
 
(ಈ ಲೇಕನವು ಆಗಸ್ಟ್ 2017 ರ 'ಗೃಹಶೋಭಾ' ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ.)