Sunday, September 03, 2017

ಹಲವು ಪ್ರಥಮಗಳ ಮಹಿಳೆ ಶಾಂತಾ ರಂಗಸ್ವಾಮಿ



“ನಾವು ಭಾರತದಲ್ಲಿ ಮಹಿಳಾ ಕ್ರಿಕೆಟ್ ಗೆ ಭದ್ರ ಬುಮಾದಿ ಹಾಕಿಕೊಟ್ಟೆವು. ಭಾರತ ಮಹಿಳಾ ಕ್ರಿಕೆಟ್ಟಿನ ಸ್ಥಾಪಕ ತಂಡದ ಸದಸ್ಯರು ಎನ್ನುವ ಹೆಮ್ಮೆ ನನಗಿದೆ. ಈಗ ಜೀವಮಾನ ಸಾಧನೆ ಪುರಸ್ಕಾರ ಲಭಿಸಿರುವುದು ಸಹ ಮಹಿಳಾ ಕ್ರಿಕೆಟ್ಟಿಗೆ ಸಿಕ್ಕ ಗೌರವವಾಗಿದೆ. ಇಷ್ಟು ತಡವಾಗಿಯಾದರೂ ಬಿಸಿಸಿಐ ಮಹಿಳಾ ಕ್ರಿಕೆಟಿಗರನ್ನು ಜೀವಮಾನ ಸಾಧನೆ ಗೌರವಕ್ಕೆ ಪರಿಗಣಿಸಿತಲ್ಲ ಎನ್ನುವುದೇ ಸಂತಸದ ವಿಚಾರ. ಅದು ನನ್ನಿಂದಲೇ ಪ್ರಾರಂಭವಾದದ್ದು ಇನ್ನೂ ಖುಷಿ.”  ಇದು ಇತ್ತೀಚೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ನಿಂದ ಜೀವಮಾನ ಸಾಧನೆ ಪುರಸ್ಕಾರಕ್ಕೆ ಭಾಜನರಾದ ಕರ್ನಾಟಕದ ಹೆಮ್ಮೆಯೆ ಮಹಿಳಾ ಕ್ರಿಕೆಟ್ ಆಟಗಾರ್ತಿ ಶಾಂತಾ ರಂಗಸ್ವಾಮಿಯವರ ಮನದ ಮಾತುಗಳು.
ಸಿ.ವಿ. ರಂಗಸ್ವಾಮಿ ಹಾಗೂ ರಾಜಲಕ್ಷ್ಮಿಯವರ ಮಗಳಾದ ಶಾಂತಾ ಹುಟ್ಟಿದ್ದು ಚೆನ್ನೈನಲ್ಲಿ ಆದರೂ ಬೆಳೆದದ್ದೆಲ್ಲಾ ಬೆಂಗಳೂರಿನಲ್ಲಿ. ಕ್ರಿಕೆಟಿಗರಾದ ಮೇಲೆಯೂ ಆಡಿದ್ದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಗೆ ಮಾತ್ರ. ಹೀಗಾಗಿ ಇವರು ಅಪ್ಪಟ ಕನ್ನಡಿಗರೇ ಎನ್ನುವುದು ನಿರ್ವಿವಾದ. ಏಳು ಜನ ಸಹೋದರಿಯರಲ್ಲಿ ಶಾಂತಾ ಮೂರನೇಯವರಾಗಿದ್ದು ಪದವಿ ವ್ಯಾಸಂಗ ಮಾಡಿ ಮುಗಿಸುವ ವೇಳೆಗೆ ಕೆನರಾ ಬ್ಯಾಂಕಿನಲ್ಲಿ ನೌಕರಿ ದೊರಕಿತ್ತು. ಮುಂದೆ ಅದರಲ್ಲಿಯೇ ಜನರಲ್ ಮ್ಯಾನೆಜರ್ ಹುದ್ದೆಗೇರಿ ನಿವೃತ್ತರಾದರು.



ಕೂಡು ಕುಟುಂಬದ ಹಿನ್ನೆಲೆಯಿಂದ ಬಂದ ಶಾಂತಾ ಅವರ ಮನೆಯಲ್ಲಿಯೇ ಇಪ್ಪತ್ತು ಮಕ್ಕಳಿದ್ದರು.ದರಲ್ಲಿಯೂ ಹುಡುಗಿಯರೇ ಹೆಚ್ಚು! ಮಹಿಳಾ ಸೇವಾ ಸಮಆಜದಲ್ಲಿ ಎಲ್ಲರೂ ಕೂಡಿ ಕ್ರಿಕೆಟ್ ಆಡುತ್ತಾ ಬಾಲ್ಯ ಕಳೆದಿದ್ದ ಶಾಂತಾ ಅವರಿಗೆ ಬಾಲ್ಯದಲ್ಲಿಯೇ ಕ್ರಿಕೆಟ್ ಕುರಿತಂತೆ ತೀವ್ರ ಆಸಕ್ತಿ ಮೂಡಿತ್ತು. ಶಾಲೆ, ಕಾಲೇಜು ದಿನಗಳಿಂದಲೂ ಕ್ರಿಕೆಟ್ ಆಡುತ್ತಿದ್ದ ಶಾಂತಾ ಕರ್ನಾಟಕ ರಾಜ್ಯ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿ ಆಯ್ಕೆಯಾದರು. ಆಗೆಲ್ಲಾ ಮಹಿಳಾ ಕ್ರಿಕೆಟಿಗರಿಗೆ ಈಗಿನಂತೆ ಸೂಕ್ತ ಅನುಕೂಲಗಳಿರಲಿಲ್ಲ ಎಂದು ನೆನಪಿಸಿಕೊಳ್ಳುವ ಶಾಂತಾ ಅವರು “ನಾನು ಕೆ.ಆರ್. ರಸ್ತೆಯಲ್ಲಿದ್ದ ನನ್ನ ಮನೆಯಿಂದ ಸೆಂಟ್ರಲ್ ಕಾಲೇಜು ಮೈದಾನಕ್ಕೆ ನಡೆದುಕೊಂಡು ಹೋಗಿ ಅಭ್ಯಾಸ ನಡೆಸುತ್ತಿದ್ದೆ. ಕಂಠೀರವ ಸ್ಟೇಡಿಯಂ, ನ್ಯಾಷನಲ್ ಹೈಸ್ಕೂಲು ಮೈದಾನದಲ್ಲಿಯೂ ನಾವು ಕ್ರಿಕೆಟ್ ಪ್ರಾಕ್ಟೀಸ್ ಮಾಡುತ್ತಿದ್ದೆವು.” ಎನ್ನುತ್ತಾರೆ.
ಇದಕ್ಕೂ ಮುನ್ನ ಶಾಂತಾ ಬಾಲ್ ಬಾಡ್ಮಿಂಟನ್ ಕ್ರೀಡೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರು ತಮ್ಮ ಕಾಲೇಜು ದಿನಗಳಲ್ಲಿ ಸಾಫ್ಟ್ ಬಾಲ್ ಕ್ರೀಡಾ ತಂಡದ ನಾಯಕಿಯೂ ಆಗಿದ್ದರು ಎನ್ನುವುದು ಗಮನಾರ್ಹ. ಆ ನಂತರ ಕ್ರಿಕೆಟ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡುದಲ್ಲದೆ 1976 ರಲ್ಲಿ  ಪ್ರಥಮ ಮಹಿಳಾ ಕ್ರಿಕೆಟ್ ರಾಷ್ಟ್ರೀಯ ತಂಡದ ನಾಯಕಿಯಾಗಿಯೂ ಆಯ್ಕೆಯಾದರು.
ಮುಂದಿನದೆಲ್ಲವೂ ಇತಿಹಾಸ.  ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ವಿದೇಶೀ ನೆಲದಲ್ಲಿ ಶತಕ ಬಾರಿಸಿದ ಮೊದಲ ಮಹಿಳೆ, ಹಾಗೆಯೇ ಟೆಸ್ಟ್ ಪಂದ್ಯ ಗೆದ್ದ ಪ್ರಥಮ ನಾಯಕಿ ಸಹ ಇವರಾಗಿದ್ದಾರೆ. ಬಲಗೈ ಬ್ಯಾಟ್ಸ್ ಮನ್ ಮತ್ತು ಆಲ್ ರೌಂಡರ್  ಆಗಿದ್ದ ಶಾಂತಾ ಅವರು ಒಟ್ಟು 16 ಟೆಸ್ಟ್ ಹಾಗೂ 19 ಏಕದಿನ ಪಂದ್ಯಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಆಡಿದ್ದು ಟೆಸ್ಟ್ ನಲ್ಲಿ 750 ಮತ್ತು ಏಕದಿನ ಪಂದ್ಯದಲ್ಲಿ 287 ರನ್ನುಗಳನ್ನು ಗಳಿಸಿದ್ದಾರೆ 8-1-1977 ರಲ್ಲಿ ನ್ಯೂ ಝಿಲ್ಯಾಂಡಿನ ಡ್ಯುನೆಡಿನ್ ನಲ್ಲಿ ನಡೆದ ನ್ಯೂ ಝಿಲ್ಯಾಂಡಿನ ವಿರುದ್ದ ಟೆಸ್ಟ್ ಪಂದ್ಯದಲ್ಲಿ 108 ರನ್ ಗಳಿಸಿ ಈ ಸಾಧನೆ ಮಾಡಿದ ಪ್ರಥಮ ಭಾರತೀಯ ಮಹಿಳೆ ಎನಿಸಿದ್ರು. 1976 ರಲ್ಲಿ ಪುಣೆಯಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ದ ಪಂದ್ಯದಲ್ಲಿ ಮ್ಯಾಚ್  ಆಫ್ ದಿ ವುಮನ್ ಗೌರವಕ್ಕೆ ಪಾತ್ರರಾಗಿದ್ದರು.
ಏಕದಿನ ಮಹಿಳಾ ವಿಶ್ವಕಪ್ ಸರಣಿಯು ರಲ್ಲಿ ನ್ಯೂ ಝಿಲ್ಯಾಂಡಿನಲ್ಲಿ ನಡೆದಿದ್ದ ಸಮಯದಲ್ಲಿ ಶಾಂತಾ ತಮ್ಮ ಕ್ರೀಡಾ ಬದುಕಿನ ಅತ್ಯಂತ ಶ್ರೇಷ್ಠ ಬ್ಯಾಂಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನ ನೀಡಿದ್ದರು. ಇನ್ನೊಮ್ಮೆ ಆಕೆ ದಕ್ಷಿಣ ವಲಯ ಪರವಾಗಿ ಕ್ರಿಕೆಟ್ ಆಡುತ್ತಿದ್ದಾಗ ತಮ್ಮ ಬೆರಳಿನ ಮೂಳೆ ಮುರಿತಕ್ಕೆ ಒಳಗಾಗಿದ್ದರೂ ಆಟವಾಡಿ ತಂಡದ ಆತ್ಮವಿಶ್ವಾಸ ಹೆಚ್ಚಿಸಿದ್ದರು.
ಎಪ್ಪತ್ತರ ದಶಕದಲ್ಲಿ ಮಹಿಳೆಯರು ಕ್ರಿಕೆಟ್ ಆಡುವುದು ಎಂದರೆದು ಸಾಧಾರಣ ವಿಚಾರವಾಗಿರಲಿಲ್ಲ. ಜನರು ಅಚ್ಚರಿಯಿಂದ ಕಾಣುತ್ತಿದ್ದರು. ಅಲ್ಲದೆ 'ಇವರೆಂತಹಾ ಗಂಡುಬೀರಿಗಳು' ಎಂದು ಮೂಗು ಮುರಿಯುತ್ತಿದ್ದರು. ಇಂತಹಾ ಸನ್ನಿವೇಶದಲ್ಲಿ 'ಶಾಂತಾ ಇದ್ದರೇ ಗೆಲುವು' ಎನ್ನುವಂತೆ ಆಡಿದ್ದ ಶಾಂತಾ ರಂಗಸ್ವಾಮಿ ಕ್ರಿಕೆಟ್ ಗೆ ನೀಡಿದ ಕಾಣಿಕೆ ಅದು ಬೆಲೆ ಕಟ್ಟಲಾರದ್ದು. ತೊಂಭತ್ತರ ದಶಕದಲ್ಲಂತೂ ಕ್ರಿಕೆಟ್ ನಲ್ಲಿ ಹೆಸರುವಾಸಿಯಾಗಿದ್ದ ಈಕೆ ಮಹಿಳಾ ಕ್ರಿಕೆಟ್ ಎಂದಾಕ್ಷಣ ಶಾಂತಾ ಎನ್ನುವಷ್ಟರ ಮಟ್ಟಿಗೆ ಪ್ರಸಿದ್ದಿಗೆ ಬಂದಿದ್ದರು. ‘1976 ನನ್ನ ಪಾಲಿನ ಸುವರ್ಣ ವರ್ಷ ಎನ್ನುವ ಶಾಂತಾ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಸೆಂಚುರಿ ಬಾರಿಸ್ದೆ. ಟಿಕೆಟ್‌ ಇತ್ತು. 35 ಸಾವಿರ ಜನ ಸೇರಿದ್ರು ಎಂದು ನೆನೆಸಿಕೊಳ್ಳುತ್ತಾರೆ.
ತಮ್ಮ ಕ್ರೀಡಾ ಜೀವನದ ನೆನಪುಗಳು ಮತ್ತು ಇಂದಿನ ಭಾರತೀಯ ಮಹಿಳಾ ಕ್ರಿಕೆಟಿನ ಕುರಿತಂತೆ ಮಾತನಾಡುವ ಶಾಂತಾ ರಂಗಸ್ವಾಮಿ ‘ನನಗಿಂದಿಗೂ ನೋವು ಉಂಟು ಮಾಡುವ ಸಂಗತಿ ಎಂದರೆ ಕರ್ನಾಟಕಕ್ಕೆ ನ್ಯಾಷನಲ್ ಚಾಂಪಿಯನ್ ಶಿಪ್ ಗೆಲ್ಲಿಸಿ ಕೊಡಲು ನನ್ನಿಂದ ಸಾಧ್ಯವಾಗಿಲ್ಲ. ವಾರಣಾಸಿಯಲ್ಲಿ ನಡೆದ ಪಂದ್ಯದಲ್ಲಿ ನಾನು ಎಪ್ಪತ್ತಾರು ರನ್ ಗೆ ಔಟಾದೆ. ಇನ್ನೂ ಇಪ್ಪತ್ತು ರನ್ ಬಂದಿದ್ದಲ್ಲಿ ನಾವೇ ಜಯ ಗಳಿಸುತ್ತಿದ್ದೆವು. ಈ ಸೋಲು ನನ್ನನ್ನು ಇಂದಿಗೂ ಕಾಡುತ್ತಿದೆ.
ಇಂದು ಮಹಿಳಾ ಕ್ರಿಕೆಟ್ ಬಹಳಷ್ಟು ಸುಧಾರಿಸಿದೆ. ಆದರೂ ಇಂದಿಗೂ ನಾಯಕಿಯನ್ನು ಅವಲಂಬಿಸುವ ಅನಿವಾರ್ಯತೆ ಇನ್ನೂ ಉಳಿದಿದೆ. ಪುರುಷರ ಕ್ರಿಕೆಟಿನಲ್ಲಿರುವಂತೆ ತಂಡದ ಸದಸ್ಯರು ತಮ್ಮ ಸ್ವಂತ ಪ್ರದರ್ಶನದಿಂದ ಗುರುತಿಸಿಕೊಳ್ಳುವಷ್ಟು ಇನ್ನೂ ಬೆಳೆದಿಲ್ಲ. ಅ<ದು ನನ್ನನ್ನೇ ಅವಲಂಬಿಸಿದ್ದು ಇವತ್ತೂ ಸಹ ಮಿಥಾಲಿಯನ್ನೇ ನೆಚ್ಚಿಕೊಂಡಿರುವುದನ್ನು ಕಾಣುತ್ತೇವೆ, ಈ ನಿಟ್ಟಿನಲ್ಲಿ ಮಹಿಳಾಕ್ರಿಕೆಟ್ ಇನ್ನಷ್ಟು ಸುಧಾರಣೆ ಹೊಂದಬೇಕಿದೆ.
 ಪುರುಷ ಕ್ರಿಕೆಟಿನಂತೆ ಮಹಿಳಾ ಕ್ರಿಕೆಟರ್ ಗಳಿಗೂ ಐಪಿ ಎಲ್ ನಂತಹಾ ಪಂದ್ಯವಾಡಲು ಅವಕಾಶ ಸಿಕ್ಕರೆ ಉತ್ತಮ. ಹತ್ತು ತಂಡಗಳಲ್ಲಿ ನೂರು ಜನ ಆಡಿದಾಗ ಅದರಲ್ಲಿ ಹನ್ನೊಂದು ಮಂದಿಯಾದರೂ ನಮ್ಮವರಿದ್ದರೆ ಒಳ್ಳೆಯದಲ್ಲವೆ? ಇನ್ನು ಆರ್ಥಿಕ ಸ್ವಾವಲಂಬನೆಗೂ ಇದು ಸಹಾಯವಾಗಬಲ್ಲದು ಎನ್ನುವುದು ಸಹ ನಿಜ ಸಂಗತಿ. ಎನ್ನುತ್ತಾರೆ.
ತಂಡದ ನಾಯಕಿಯಾಗಿ ಆಟವಾಡಿದ ಕುರಿತು ವಿವರಿಸುವ ಶಾಂತಾ ನಾನು ಆಡಿದ ಬಹುತೇಕ ಪಂದ್ಯಗಳಲ್ಲಿ ತಂದದ ನಾಯಕತ್ವ ನನ್ನ ಪಾಲಿಗೆ ಬಂದದ್ದೊಂದು ಒಳ್ಳೆಯ ಸಂಗತಿ. ಇಡಿ  ತಂಡವನ್ನು ಮುನ್ನಡೆಸುವ ಸಲುವಾಗಿ ಇದ್ದ ಒತ್ತಡವೇ ನನ್ನನ್ನು ಇನ್ನಷ್ಟು ಉತ್ತಮವಾಗಿ ಆಡುವಂತೆ ಪ್ರೇರಣೆ ಕೊಟ್ಟಿತು. ಹೀಗಾಗಿ ಒತ್ತಡ ನನಗೊಂದು ಸಮಸ್ಯೆಯಾಗಿ ಯಾವತ್ತೂ ಕಾಣಿಸಲಿಲ್ಲ.  ಎಂದು ಹೇಳುತ್ತಾರೆ.
ಇದೀಗ ಕರ್ನಾಟಕ ರಾಜ್ಯ ಕ್ರಿಕೆಟ್ ಮಂದಳಿಯ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಶಾಂತಾ ಕ್ರಿಕೆಟ್ ಕ್ಷೇತ್ರಕ್ಕೆ  ಇನ್ನೂ ಏನಾದರೂ ಕೊಡುಗೆ ನೀಡಬೇಕು ಎನ್ನುವ ಹುಮ್ಮಸ್ಸಿನಲ್ಲಿದ್ದಾರೆ. ಕ್ರಿಕೆಟ್ ಅನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕೆಂದು ಬಯಸುತ್ತಾರೆ.  ಇಂದಿನ ಯುವತಿಯರು ಆಟದ ಮೇಲೆ ನಿಜವಾದ ಆಸಕ್ತಿ ಇದ್ದರೆ ಶ್ರದ್ದೆಯಿಂದ, ನಿಯತ್ತಾಗಿ ಆಡಬೇಕು. ಫಲಿತಾಂಶ ಅದಾಗಿಯೇ ಬರುತ್ತದೆ. ಪ್ರಾಮಾಣಿಕತೆ ಹಾಗೂ ಸಮರ್ಪಣಾ ಮನೋಭಾವ ಇಲ್ಲಿ ಮುಖ್ಯವಾಗುತ್ತದೆ. ಇವುಗಳಿದ್ದಲ್ಲಿ ಯಾರೂ ಯಾವ ಎತ್ತರಕ್ಕಾದರೂ ತಲುಪುವುದು ಅಸಾಧ್ಯವಲ್ಲ. ಹೀಗೆಂದು ಯುವ ಕ್ರೀಡಾಪಟುಗಳಿಗೆ ಸಂದೇಶ ತಿಳಿಸುವ ಶಾಂತಾ ರಂಗಸ್ವಾಮಿ ತಮ್ಮ ಆಟ ಮತ್ತು ಅದರಲ್ಲಿ ತಾವು ತೋರಿದ ಅದ್ಭುತ ಸಾಧನೆಗಳಿಂದ ಮಹಿಳಾ ಕ್ರಿಕೆಟಿಗರಿಗೆಲ್ಲಾ ಪ್ರೇರಣಾ ಶಕ್ತಿ ಎನಿಸಿದ್ದಾರೆ.




ಶಾಂತಾ ರಗಸ್ವಾಮಿ ಸಂಕ್ಷಿಪ್ತ ವಿಚಾರಗಳು
ಜನನ: ಜನವರಿ 1, 1954
ಸ್ಥಳ: ಚೆನ್ನೈ
ತಂದೆತಾಯಿ:ಸಿ.ವಿ. ರಂಗಸ್ವಾಮಿ, ರಾಜಲಕ್ಷ್ಮಿ
ಒಡಹುಟ್ಟಿದವರು: ಏಳು ಸಹೋದರಿಯರು
ಶಿಕ್ಷಣ: ಮಹಿಳಾ ಸೇವಾ ಸಮಾಜ, ನ್ಯಾಷನಲ್‌ ಹೈಸ್ಕೂಲ್‌, ಕಾಲೇಜಿನಲ್ಲಿ ಪದವಿ ವ್ಯಾಸಂಗ
ವೃತ್ತಿ: ಕೆನರಾ ಬ್ಯಾಂಕ್‌, ಪ್ರಧಾನ ವ್ಯವಸ್ಥಾಪಕಿಯಾಗಿ ನಿವೃತ್ತಿ
***
ಮಹಿಳಾ ಕ್ರಿಕೆಟರ್ ಆಗಿ ಶಾಂತಾ ಅವರ ಸಾಧನೆ
ಬಲಗೈ ಬ್ಯಾಟ್ಸ್‌ಮನ್‌, ಆಲ್‌ರೌಂಡರ್‌
1976ರಿಂದ 1991: ರಣಜಿ, ಅಂತರರಾಷ್ಟ್ರೀಯ ಏಕದಿನ, ಟೆಸ್ಟ್‌ ಪಂದ್ಯಗಳಲ್ಲಿ ಸಕ್ರಿಯ
1976–1983: ರಾಷ್ಟ್ರೀಯ ತಂಡದ ನಾಯಕಿ
1976: ಅರ್ಜುನ ಪ್ರಶಸ್ತಿ
16 ಟೆಸ್ಟ್‌ ಪಂದ್ಯಗಳಲ್ಲಿ 750 ರನ್‌ ಬ್ಯಾಟಿಂಗ್‌ ರೇಟಿಂಗ್‌: 32.6
ಬೌಲಿಂಗ್‌ ರೇಟಿಂಗ್‌: 31.61
ಮಹಿಳಾ ಕ್ರಿಕೆಟರ್‌ಗಳಲ್ಲಿ ಶತಕ ಬಾರಿಸಿದವರಲ್ಲಿ ಮೊದಲ ಭಾರತೀಯರು
19 ಏಕದಿನ ಪಂದ್ಯಗಳಲ್ಲಿ 287 ರನ್‌, 12 ವಿಕೆಟ್‌
1982: ಮಹಿಳಾ ಕ್ರಿಕೆಟ್‌ ವರ್ಲ್ಡ್‌ ಕಪ್‌ನಲ್ಲಿ  (ನ್ಯೂಜಿಲೆಂಡ್‌) ಜೀವಮಾನದ ಸಾಧನೆ
ಪುರುಷರ ಪಂದ್ಯಕ್ಕೆ ಕಾಮೆಂಟರಿ, ರಾಷ್ಟ್ರೀಯ ಮಹಿಳಾ ಆಯ್ಕೆ ಸಮಿತಿ ಅಧ್ಯಕ್ಷೆಯಾಗಿ 2013ರಲ್ಲಿ ನಿವೃತ್ತಿ,  ಕ್ರಿಕೆಟ್‌ ಬರಹಗಾರರು.
2017: ಬಿಸಿಸಿಐ ನಿಂದ ಜೀವಮಾನ ಸಾಧನೆ ಪುರಸ್ಕಾರ
  

ಭಾರತ ಮಹಿಳಾ ಕ್ರಿಕೆಟ್ ತಂದದ ನಾಯಕಿಯಾಗಿದ್ದ ಹಿರಿಯ ಕ್ರಿಕೆಟ್ ಆಟಗಾರ್ತಿ ಶಾಂತಾ ರಂಗಸ್ವಾಮಿ ಅವರೊಡನೆ ನಡೆಸಿದ ಸಂದರ್ಶನ ಲೇಖನ.  ಈ ನನ್ನ ಲೇಖನವು ಗೃಹಶೋಭಾ ಮಾಸಪತ್ರಿಕೆ ಆಗಸ್ಟ್ 2017ರ ಸಂಚಿಕೆಯಲ್ಲಿ ಪ್ರಕಟವಾಗಿತ್ತು.