Wednesday, January 22, 2014

ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್

ಭಾರತ ದೇಶ ಕಂಡ ಅಪ್ರತಿಮ ದೇಶಭಕ್ತ, ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್. ಈ ಮಹಾನ್ ರಾಷ್ಟ್ರ ನಾಯಕನ ಜೀವನದ ಘಟನೆಗಳ ಮೆಲುಕೇ ಸ್ಪೂರ್ತಿಯುತವಾದುದು. ಅಂಡಮಾನ್ ನಿಕೋಬಾರ್ ಪ್ರದೇಶಗಳನ್ನು ವಶಕ್ಕೆ ತೆಗೆದುಕೊಂಡು ದೇಶವನ್ನು ಪ್ರಥಮ ಬಾರಿಗೆ ದಾಸ್ಯಮುಕ್ತವನ್ನಾಗಿ ಮಾಡಿದ್ದ ಭರತಮಾತೆಯ ಈ ಧೀರ ಕುವರನ ಜನುಮ ದಿನ (ಜನವರಿ 23) ದಂದು ಸದಾ ಕ್ರಿಯಾಶಿಲರಾಗಿದ್ದ ದೇಶಕ್ಕಾಗಿ ತಮ್ಮ ಬದುಕನ್ನೇ ಮುಡುಪಿಟ್ಟ ಆ ಮಹಾನ್ ಚೇತನವನ್ನು ನಾವೆಲ್ಲ ಒಂದಾಗಿ ಸ್ಮರಿಸೋಣ.

ನನ್ನೆಲ್ಲಾ ಆತ್ಮೀಯ ಸ್ನೇಹಿತರಿಗೆ ನನ್ನ ನಮಸ್ಕಾರಗಳು.
ಇಂದು (ಜನವರಿ 23)  ಭಾರತ ಕಂಡ ವೀರ ಸೇನಾನಿ, ಅಪ್ರತಿಮ ದೇಶಭಕ್ತ ಸುಭಾಷ್ ಚಂದ್ರ ಬೋಸ್ ರ ಹುಟ್ಟುಹಬ್ಬ.
Give me blood and I will give you freedom’   ಎನ್ನುತ್ತಿದ್ದ ಅಂಡಮಾನ್ ನಿಕೋಬಾರ್ ಪ್ರದೇಶಗಳನ್ನು ವಶಕ್ಕೆ ತೆಗೆದುಕೊಂಡು ದೇಶವನ್ನು ಪ್ರಥಮ ಬಾರಿಗೆ ದಾಸ್ಯಮುಕ್ತವನ್ನಾಗಿ ಮಾಡಿದ್ದ ಭರತಮಾತೆಯ ಈ ಧೀರ ಕುವರನ ಜನುಮ ದಿನವಾದ ಇಂದು ಅವರ ಜೀವನಗಾಥೆಯ ಮೇಲೊಂದು ಕ್ಷ-ಕಿರಣಾ ಬೀರುವ ಸಣ್ಣ ಪ್ರಯತ್ನವನ್ನಿಲ್ಲಿ ನಾನು ಮಾಡಿದ್ದೇನೆ. ಸ್ನೇಹಿತರಾದ ನಿಮಗೆಲ್ಲರಿಗೂ ಇದು ಇಷ್ಟವಾಗಬಹುದೆನ್ನುವುದು ನನ್ನ ಅನಿಸಿಕೆ....
ಭಾರತೀಯರೆಲ್ಲರ ಪ್ರೀತಿಯ “ನೇತಾಜಿ”ಯಾಗಿದ್ದ ಸುಭಾಷ್ ಚಂದ್ರ ಬೋಸ್ ಹುಟ್ಟಿದ್ದು 1897 ಜನವರಿ 23 ರಂದು ಒರಿಸ್ಸಾದ ಕಟಕ್ ನಲ್ಲಿ. ಜಾನಕಿನಾಥ ಬೋಸ್ ಮತ್ತು ಪ್ರಭಾವತಿ ದಂಪತಿಗಳ ಒಂಭತ್ತು ಜನ ಮಕ್ಕಳಲ್ಲಿ ಸುಭಾಷ್ ಆರನೆಯವರು. ಕಟಕ್ ನಲ್ಲಿಯೇ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿದ ಬೋಸ್ ಸಣ್ಣ ವಯಸ್ಸಿನಲ್ಲಿಯೇ ಸ್ವಾಮಿ ವಿವೇಕಾನಂದ, ಮಹರ್ಷಿ ಅರವಿಂದರ ಸಾಹಿತ್ಯಗಳಿಂದ ಪ್ರಭಾವಿತರಾಗಿದ್ದರು. 1919 ರಲ್ಲಿ ತತ್ವಶಾಸ್ತ್ರ ವಿಷಯದಲ್ಲಿ ಬಿ.ಎ. ಪದವಿ ಪಡೆದ ಬೋಸ್ 1920 ರ ಸಪ್ಟೆಂಬರ್ ನಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ಐ.ಸಿ.ಎಸ್. ಪರೀಕ್ಷೆಯಲ್ಲಿ  ನಾಲ್ಕನೆ ಸ್ಥಾನದೊಂದಿಗೆ ಉತ್ತೀರ್ಣರಾದರು.
ವಿದೇಶದಲ್ಲಿ ಕೆಲಸ ಮಾಡಲು ಒಪ್ಪದ ಬೋಸ್ ತಾವು ಗಳಿಸಿದ್ದ ಐ.ಸಿ.ಎಸ್. ಪದವಿಯನ್ನೇ ತಿರಸ್ಕರಿಸಿ 1921 ಜುಲೈ 16 ರಂದು ಭಾರತಕ್ಕೆ ವಾಪಾಸಾದರು. ಅದಾಗ ದೇಶದಲ್ಲಿ ಕಾವೇರಿದ್ದ ಸ್ವಾತಂತ್ರ್ಯ ಸಂಗ್ರಾಮದ ಮುಂದಾಳತ್ವವನ್ನು ವಹಿಸಿದ್ದ ಗಾಂಧೀಜಿಯವವರನ್ನು ಭೇಟಿಯಾದ ಬೋಸ್ ತಾವು ಸಹ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. 1921 ರ ಆಗಸ್ಟ್ ನಿಂದ ಚಿತ್ತರಂಜನ್ ದಾಸ್ ರವರ ಮಾರ್ಗದರ್ಶನದಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವ ಸಲುವಾಗಿ ಯುವಕರನ್ನು ಸಂಘಟಿಸುವಲ್ಲಿ ನಿರತರಾದರು.  ಬ್ರಿಟೀಷರನ್ನು ಕುರಿತಂತೆ ಕಾಂಗ್ರೆಸ್ ಪಕ್ಷವು ತಾಳಿದ್ದ ದ್ವಂದ್ವ ನೀತಿಗಳಿಂದ ಬೇಸತ್ತ ಬೋಸ್ ತಾವು ಚಿತ್ತರಂಜನ್ ದಾಸ್ ರವರ ಜತೆಗೂಡಿ “ಸ್ವರಾಜ್ಯ ಪಕ್ಷ”ದ ಸ್ಥಾಪನೆ ಮಾಡಿದರು. 1923 ರ ಅಕ್ತೋಬರ್ ನಲ್ಲಿ ಚಿತ್ತರಂಜನ್ ದಾಸ್ ರವರು ಆರಂಭಿಸಿದ “ಫಾರ್ವರ್ಡ್” ದಿನಪತ್ರಿಕೆಯ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತ ಬೋಸ್ 1925 ಜೂನ್ 16 ರಂದು ಚಿತ್ತರಂಜನ್ ದಾಸ್ ನಿಧನದ ಬಳಿಕ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡರು.
1927 ನವೆಂಬರ್ ನಲ್ಲಿ ಬಂಗಾಳದ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಜೆಗೊಂಡ ಬೋಸ್ ಅಲ್ಲಿಯೂ ಸಹ ಹತ್ತಾರು ವಿಧದ ಚಳುವಳಿಗಳ ನೇತೃತ್ವ ವಹಿಸಿದರು. ಅಲ್ಲದೆ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ನ ಅಧ್ಯಕ್ಷರಾಗಿಯೂ ಆಯ್ಕೆಯಾದರು. ಆದರೆ ಗಾಂಧಿ ಮತ್ತು ಅವರ ಹಿಂಬಾಲಕರುಗಳಿಗೆ ಸುಭಾಷ್ ಚಂದ್ರ ಬೋಸ್ ಅನುಸರಿಸುತ್ತಿದ್ದ ಕ್ರಾಂತಿಕಾರಿ ಕಾರ್ಯನೀತಿಯು ಅಷ್ಟಾಗಿಸರಿಬರದ ಕಾರಣ ಬೋಸ್ ಪಕ್ಷದಿಂದ ಕ್ರಮೇಣ ದೂರಾಗಬೇಕಾಯಿತು.
19833 ಫೆಬ್ರವರಿ 23 ಕ್ಕೆ ಯುರೋಪ್ ಪ್ರವಾಸ ಪ್ರಂರಂಭಿಸಿದ ಬೋಸ್ ಇಂಗ್ಲೆಂಡ್, ಆಸ್ಟ್ರಿಯಾ, ವಿಯೆನ್ನಾ, ಇಟಲಿ ದೇಶಗಳಿಗೆ ಭೇಟಿಯಿತ್ತರು. ಜೊಕೊಸ್ಲೋವಾಕಿಯಾ, ಪೋಲೆಂಡ್, ಜರ್ಮನಿಗಳಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ಕುರಿತಾಗಿ ಪ್ರಚಾರ ನಡೆಸಿದ ಬೋಸ್ ಇಟಲಿಯ ಸರ್ವಾಧಿಕಾರಿಯಾಗಿದ್ದ ಬೆನೆಟ್ಟೋ ಮುಸಲೋನಿಯ ಜತೆಯಲ್ಲಿ ಚರ್ಚೆ ನಡೆಸಿದ್ದರು. 1936 ಏಪ್ರಿಲ್ 8 ರಂದು ಭಾರತಕ್ಕೆ ಮರಳ್ ಬಂದ ಬೋಸ್ ರನ್ನು ಇಲ್ಲಿನ ಬ್ರಿಟೀಷ ಸರ್ಕಾರ ಬಂಧಿಸಿತು. ಇದಾದ ಸ್ವಲ್ಪ ದಿನಗಳ ಬಳಿಕ ಬಿಡುಗಡೆಗೊಂಡ ಬೋಸ್ 1937 ರಲ್ಲಿ ಮತ್ತೆ ಆಸ್ಟ್ರಿಯಾಕ್ಕೆ ಪ್ರಯಾಣ ಕೈಗೊಂಡರು.
Portrait of Netaji Subhas Chandra Bose - 1945
1938 ರ ಫೆಬ್ರವರಿಯಲ್ಲಿ ಹರಿಪುರದಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಮಹಾಧಿವೇಶನದ ಅಧ್ಯಕ್ಶರಾಗಿ ಆಯ್ಕೆಗೊಂಡ ಬೋಸ್ ರಿಂದ ಅದೇ ಫೆಬ್ರವರಿ 18 ರಂದು ಐತಿಹಾಸಿಕ ಅಧ್ಯಕ್ಷ ಭಾಷಣವನ್ನು ಮಾಡಿದ್ದರು. ಹಲವಾರು ದೇಶಗಳನ್ನು ಸುತ್ತಿ ಪಡೆದ ರಾಜಕೀಯ ಅನುಭವ, ಒಳನೋತಗಳಿಂದ ಬ್ರಿಟೀಷರ ಒಡೆದು ಆಳುವ ನೀತಿಯ ಕುರಿತು ಕ್ಷಾತ್ರತೇಜದಿಂದ ಮಾಡಿದ ಅಂದಿನ ಭಾಷಣಾವು ಭಾರತದ ಇತಿಹಾಸದಲ್ಲೇ ಒಂದು ಅಸ್ಭುತವಾದ ಭಾಷಣವಾಗಿತ್ತು. ಬೋಸ್ ರವರು ನೀಡಿದ ದೇಶ ವಿಭಜನೆಯ ಬ್ರಿಟೀಷರ ತಂತ್ರದ ಸೂಚನೆಯು ಮುಂದಿನ ಒಂಭತ್ತು ವರ್ಷಗಳಲ್ಲಿಯೇ ನಿಜವಾಯಿತು! ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಧ್ಯೇಯ ಮತ್ತು ಕಾರ್ಯನೀತಿಗಳಾನ್ನು ಕುರಿತು ಬಹಳವೇ ಮೆಚ್ಚುಗೆ ಹೊಂದಿದ್ದ ಬೋಸ್ ರವರಿಗೆ ಸಂಘವು ತನ್ನ ಸಂಘ ``ಶಿಕ್ಷಾ ವರ್ಗ ಶಿಬಿರ’’ ಕ್ಕೆ ಬರಲು ಆಹ್ವಾನಿಸಿತ್ತು. ಬೋಸ್ ಆ ಆಹ್ವಾನವನ್ನು ಪುರಸ್ಕರಿಸಿದ್ದರಾದರೂ ಕಾರಣಾಂತರಗಳಿಂದ ಆ ಭೇಟಿ ಸಾಧ್ಯಾವಾಗಲಿಲ್ಲ. ಕಾಂಗ್ರೆಸ್ ಪಕ್ಷದ ಅಧ್ಯಕ್ಷಗಿರಿಗೆ ನಡೆದ ಪ್ರಥಮ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬೋಸ್ ತಮ್ಮ ಎದುರಾಳಿ ಪಟ್ತಾಭಿ ಸೀತಾರಾಮಯ್ಯನವರಿಗಿಂದ ೨೧೫ ಮತಗಳನ್ನು ಹೆಚ್ಚು ಒಅಡೆಯುವ ಮೂಲಕ ಭಾರೀ ವಿಜಯವನ್ನು ಗಳಿಸಿದ್ದರು. ಆದರೆ ತಮ್ಮ ವಿರುದ್ಧ ಹಲವಾರು ಟೀಕೆಗಳು, ಅನಗತ್ಯ ಋಣಾತ್ಮಕ ಮಾತುಗಳು ಗಾಂಧೀಜಿಯಿಂದ. ಸ್ವಾತಂತ್ರ್ಯದ ಮೋಡಗಳು ಸಮೀಪ ಇರುವಂತೆಯೇ ಬ್ರಿಟಿಷ್ ಸರ್ಕಾರದ ಜತೆ ದುರ್ಬಲ ಕಾಂಗ್ರೆಸ್‌ನ ತಾರ್ಕಿಕ ನಡೆಗಳಿಂದ ಬೇಸತ್ತು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದರು. ಹೀಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ತಮ್ಮದೇ ಫಾರ್ವರ್ಡ್ ಬ್ಲಾಕ್ ಪಕ್ಷವನ್ನು ಸ್ಥಾಪಿಸಿದ ನೇತಾಜಿ ಸುಭಾಶ್ ಚಂದ್ರ ಬೋಸ್ ರವರ ಕ್ರಾಂತಿಕಾರಿ ಚಟುವಟಿಕೆಗಳು ಮುಂದುವರಿದವು. ಇದರಿಂದ ಕೆರಳಿದ ಬ್ರಿಟೀಷ್ ಸರ್ಕಾರ ಮತ್ತೆ ಸುಭಾಷ್ ಚಂದ್ರ ಬೋಸ್ ರನ್ನು ಬಂಧಿಸಿ ಕಾರಾಗ್ರಹಕ್ಕೆ ತಳ್ಳಿತು.
ಆದರೆ 1941 ಜನವರಿ 26 ಕ್ಕೆ ಜೈಲಿನಿಂದ ತಪ್ಪಿಸಿಕೊಂಡು ಕಾಬೂಲ್ ಮಾರ್ಗವಾಗಿ ಬರ್ಲಿನ್ ಸೇರಿದ ಬೋಸ್ ಸೈನಿಕ ಕಾರ್ಯಾಚರಣೆಗೆ ತೊಡಗಿದರು. 1941 ನವೆಂಬರ್ 2 ಕ್ಕೆ ‘ಫ್ರೀ ಇಂಡಿಯಾ ಸೆಂಟರ್’ ನ್ನು ಉದ್ಘಾಟಿಸಿದ ಬೋಸ್ “ಆಜಾದ್ ಹಿಂದ್” ಲಾಂಛನವನ್ನು ಬಿಡುಗಡೆಗೊಳಿಸಿದರು. ಅಲ್ಲಿಂದ ಮುಂದೆ ಬರ್ಲಿನ್ ನಲ್ಲಿಯೇ ಇದ್ದು ತಮ್ಮ ಸೈನಿಕರಿಗೆ ಸೇನಾ ತರಬೇತಿಯನ್ನಿ ಕೊಡಲು ಪ್ರಾರಂಭಿಸಿದ ಬೋಸ್ ಬರ್ಲಿನ್ ರೇಡಿಯೋದಲ್ಲಿ ಆಗಾಗ ಭಾಷಣಾಗಳನ್ನು ಮಾಡುತ್ತಿದ್ದರು. ಅಲ್ಲಿಂದ ಮುಂದೆ ಜಪಾನ್ ಗೆ ತೆರಳಿದ ಬೋಸ್ ಅಲ್ಲಿ ಭರತ ದೇಶದ ಪೂರ್ವಗಡಿಗಳಲ್ಲಿ ಸೈನ್ಯವನ್ನು ಸಜ್ಜುಗೊಳಿಸಲು ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಮುಖಾಂತರ ಭೂಗತ ಚಟುವಟಿಕೆಯಲ್ಲಿ ನಿರತರಾದರು. ಮುಂದೆ ಅಪ್ರತಿಮ ಬಲಿಷ್ತ ಸೈನ್ಯವಾಗಿ ಬೆಳೆದ ಆಜಾದ್ ಹಿಂದ್ ಫೌಜ್ ಗೆ ಭಾರತ ಮತ್ತು ಇತರೇ ಬ್ರಿಟೀಷ್ ವಸಾಹತು ದೇಶಗಳಲ್ಲಿನ ಸೈನ್ಯದಲ್ಲಿದ್ದ ನಿವೃತ್ತ ಯುದ್ದಕೈದಿಗಳು ಸಾಕಷ್ಟು ಸಂಖ್ಯೆಯಲ್ಲಿ ಸೇರಿಕೊಂಡರು.
ಮುಂದೆ ಅತ್ಯಂದ ದಕ್ಷ ಸೈನ್ಯವಾಗಿ ರೂಪುಗೊಂಡ ಆಜಾದ್ ಹಿಂದ್ ಸೇನೆ ಇಂಡಿಯನ್ ನ್ಯಾಷನಲ್ ಆರ್ಮಿ(I.N.A.)ಯಾಗಿ ರೂಪುಗೊಂಡಿತು. ಮತ್ತೆ ಬೋಸ್ ಪೂರ್ವ ಏಷ್ಯಾ ರಾಷ್ಟ್ರಗಳನ್ನೆಲ್ಲಾ ಸುತ್ತಿ ಸ್ವರಾಜ್ಯ ಹೋರಾಟಕ್ಕೆ ಅಗಾಧವಾದ ಬೆಂಬಲವನ್ನು ಗಳಿಸಿಕೊಂಡರು. ತಮ್ಮ ಕೆಚ್ಚೆದೆಯ ಹೋರಾಟದಿಂದ ಬ್ರಿಟಿಷರ ಅಧೀನದಲ್ಲಿದ್ದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹವನ್ನು ವಶಪಡಿಸಿಕೊಂಡ ಬೋಸ್ ಅದಕ್ಕೆ “ಷಹೀದ್ ಸ್ವರಾಜ್” ಎಂದು ಕರೆದು  “ಅರ್ಜೆ-ಹುಕುಮಂತ್-ಎ-ಆಜಾದ್ ಹಿಂದ್”(ಸ್ವತಂತ್ರ ಭಾರತದ ಹಂಗಾಮಿ ಸರ್ಕಾರ)ನ್ನು ಸ್ಥಾಪಿಸಿದರು ಮತ್ತು  I.N.A.ನ ಕಮಾಂಡರ್ ಇನ್ ಚೀಫ್ ಆಗಿ ನೇಮಕಗೊಂದರು.

ಸುಭಾಶ್ ಸಾವಿನ ಸುತ್ತ.....
ಇಂತಹಾ ಧೀಮಂತ ರಾಷ್ಟ್ರ ನಾಯಕರಾದ ನೇತಾಜಿಯವರು 1945 ಆಗಸ್ಟ್ 18 ರಂದು ದಕ್ಷಿಣ ವಿಯೆಟ್ನಾಂ ನ ಸೈಗಾನ್ ನಿಂದ ಟೋಕಿಯೋದತ್ತ ವಿಮಾನದಲ್ಲಿ ಪ್ರಯಾಣಿಸುತ್ತಿರಬೇಕಾದರೆ ಅವರಿದ್ದ ವಿಮಾನ ಸ್ಪೋಟಗೊಂಡ ಪರಿಣಾಮ ಸಾವನ್ನಪ್ಪಿದರೆನ್ನಲಾಗುತ್ತದೆ. ಆದರೆ ಬೋಸ್ ರವರ ಸಾವಿನ ಕುರಿತಂತೆ ಇಂದಿಗೂ ಖಚಿತವಾದ ಆಧಾರಗಳು ಲಭ್ಯವಿಲ್ಲ. 1945 ಆಗಸ್ಟ್ 23 ನೇ ದಿನಾಂಕದಂದು ಜಪಾನ್ ನ ‘ರೇಡಿಯೋ ಟೋಕಿಯೋ’ ಪ್ರಥಮ ಬಾರಿಗೆ ಈ ಸುದ್ದಿಯನ್ನು ಪ್ರಸಾರ ಮಾಡಿದಾಗಿನಿಂದ ಇವತ್ತಿನ ವರೆವಿಗೂ ಸುಭಾಷ್ ಚಂದ್ರ ಬೋಸ್ ರ ಸಾವಿನ ವಿಚಾರವು ನಿಗೂಢವಾಗಿಯೇ ಉಳಿದಿದೆ.
ಅಂದು ರೇಡಿಯೋದಲ್ಲಿನ ವಾರ್ತಾ ವಾಚಕರು ಹೇಳಿದ್ದೆಂದರೆ- “ವಿಮಾನ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡ ಮಿಸ್ಟರ್ ಸುಭಾಶ್ಚಂದ್ರ ಬೋಸ್ ಜಪಾನಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು. ಭಾರತದ ‘ಆಜಾದ್ ಹಿಂದ್‌’ ಪ್ರಾಂತೀಯ ಸರ್ಕಾರದ ಮುಖ್ಯಸ್ಥರಾಗಿದ್ದ ಮಿ. ಬೋಸ್ ಆಗಸ್ಟ್ ಹದಿನಾರನೇ ತಾರೀಕಿನಂದು ವಿಮಾನದ ಮೂಲಕ ಸಿಂಗಾಪುರದಿಂದ ಜಪಾನಿಗೆ ಪ್ರಯಾಣಿಸುತ್ತಿದ್ದರು. ಜಪಾನಿನ ರಾಜಧಾನಿ ಟೋಕಿಯೋದಲ್ಲಿ ಅಲ್ಲಿನ ಜಪಾನೀ ಸರಕಾರದ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಲಿಕ್ಕಾಗಿ ಹೋಗುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಯಿತು. ಆಗಸ್ಟ್ ಹದಿನೆಂಟರ ಹದಿನಾಲ್ಕು ಗಂಟೆಗೆ (ಪೂರ್ವಾಹ್ನ ಎರಡು ಗಂಟೆಗೆ) ತೈಹೋಕು ವಿಮಾನ ನಿಲ್ದಾಣದ ಸಮೀಪ ಈ ಅಪಘಾತ ಸಂಭವಿಸಿತು. ತೀವ್ರವಾಗಿ ಗಾಯಗೊಂಡ ಬೋಸ್‌ರನ್ನು ಜಪಾನಿನ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಆತ ಮಧ್ಯರಾತ್ರಿ ಸಾವನ್ನಪ್ಪಿದರು. ಬೋಸ್ ಅವರ ಜೊತೆಗೆ ಪ್ರಯಾಣಿಸುತ್ತಿದ್ದ ಲೆಫ್ಟಿನೆಂಟ್ ಜನರಲ್ ತ್ಸುನಾಮಸಾ ಶಿಡೈ ಅವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಸುಭಾಶ್ಚಂದ್ರ ಬೋಸ್ ಅವರ ಸೇನೆಯ ಅಧಿಕಾರಿ ಹಾಗೂ ಆಪ್ತ ಹಬೀಬರ್ ರೆಹಮಾನ್ ಮತ್ತಿತರ ನಾಲ್ಕು ಮಂದಿ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ’’
ಆದರೆ ಅಂದಿನ ಆ ಪಘಾತದ ಕುರಿತಂತೆ ಜಪಾನ್ ಸರ್ಕಾರವಾಗಲೀ, ಅಲ್ಲಿನ ಸೈನ್ಯದ ಮುಖ್ಯಸ್ಥರಾಗಲೀ ಯಾವುದೇ ಅಧಿಕೃತ ಘೋಷಣೆ ಮಾದಿಲ್ಲ. ಇದೇ ಕಾರಣಾದಿಂದಾಗಿ ಅಂದು ಏನು ನಡೆಯಿತು? ಅಂದು ನಿಜವಾಗಿಯೂ ನೇತಾಜಿಯವರಿದ್ದ ವಿಮಾನ ಅಪಘಾತಕ್ಕೀಡಾಗಿತ್ತೆ? ಎನ್ನುವ ಬಗ್ಗೆ ಇಂದಿಗೂ ಅನುಮಾನಗಳುಳಿದುಕೊಂಡಿವೆ.
1947 ಆಗಸ್ಟ್ 15 ರಂದು ಭಾರತವು ಬ್ರಿಟೀಷರ ದಾಸ್ಯದಿಂದ ಬಿಡುಗಡೆಗೊಂಡು ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿತು.
ಅಂದಿನಿಂದ ಇಂದಿನವರೆಗೆ ಕೇಂದ್ರದಲ್ಲಿ ಆಳ್ವೆಕೆ ನಡೆಸಿದ ಸರ್ಕಾರಗಳು ನೇತಾಜಿಯವರ ಸಾವಿನ ಕುರಿತಂತೆ ಸತ್ಯವನ್ನು ಬಹಿರಂಗಪಡಿಸುವ ಸಲುವಾಗಿ ಮೂರು ತನಿಖಾ ಸಮಿತಿಗಳಾನ್ನು ರಚಿಸಿದ್ದವು. ಅದರಲ್ಲಿ ಎರಡು ನೆಹರೂ ಮತ್ತು ಅವರ ಪುತ್ರಿ ಇಂದಿರಾಗಂಧಿಯವರ ಸರ್ಕಾರಗಳು ರಚಿಸಿದ್ದರೆ ಇನ್ನೊಂದು ವಾಜಪೇಯಿಯವರ ನೇತೃತ್ವದ ಎನ್.ಡಿ.ಎ. ಸರ್ಕಾರ ರಚನೆ ಮಾಡಿತ್ತು. ಇವುಗಳಲ್ಲಿ ಮೊದಲೆರಡು ಸಮಿತಿಗಳು ನೇತಾಜಿಯವರು “ವಿಮಾನಾಪಘಾತದಲ್ಲಿ ಮಡಿದರು” ಎನ್ನುವುದಾಗಿ ವರದಿ ಮಾಡಿದರೆ ೧೯೯೯ ರಲ್ಲಿ ರಚಿಸಲಾದ ಸುಪ್ರೀಂ ಕೋರ್ಟ್ ಮಿವೃತ್ತ ನ್ಯಾಯಮೂರ್ತಿ ಮನೋಜ್ ಮುಖರ್ಜಿಯವರ ಸಮಿತಿ ಮಾತ್ರ ವಿಭಿನ್ನ ವರದಿಯನ್ನು ನೀಡಿತ್ತು! ಸುಭಾಷ್ ಚಂದ್ರ ಬೋಸ್ ಈಗ ಬದುಕಿಲ್ಲ, ಆದರೆ 1945 ಆಗಸ್ಟ್ 18ರಂದು ತೈವಾನಿನ ತೈಹೋಕು ಬಳಿ ನಡೆದ ವಿಮಾನ ಅಪಘಾತದಲ್ಲಿ ಮಡಿದರು ಎನ್ನಲು ಅಂಥದ್ದೊಂದು ಅಪಘಾತವೇ ನಡೆದಿಲ್ಲ, ಆ ವಿಮಾನ ಮರುದಿನವೂ ಹಾರಾಟ ನಡೆಸಿತ್ತು ಅಷ್ಟೇ ಅಲ್ಲ, ಜಪಾನಿನ ರೆಂಕೋಜಿ ದೇವಾಲಯದಲ್ಲಿರುವ ಚಿತಾಭಸ್ಮ ಕೂಡ ನೇತಾಜಿವರದ್ದಲ್ಲ ಎಂಬ ಕಠೋರ ಸತ್ಯವನ್ನು ಬಹಿರಂಗ ಮಾಡಿತ್ತು!
2006 ರಲ್ಲಿ ಮುಖರ್ಜಿ ಸಮಿತಿಯು ಈ ವರದಿಯನ್ನು ಸರ್ಕಾರಕ್ಕೆ ನೀಡಿದಾಗ ಕೇಂದ್ರದಲ್ಲಿನ ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಸರ್ಕಾರ ಮಾತ್ರ ಆ ವರದಿಯನ್ನೇ ತಿರಸ್ಕರಿಸಿತ್ತು!!
ಬೋಸ್ ಬದುಕು-ಸಾವಿಗೆ ಸಂಬಂಧಿಸಿದ “33 ಗೌಪ್ಯ ದಾಖಲೆ”ಗಳನ್ನು ನೀಡುವಂತೆ ಬೋಸ್ ಕುಟುಂಬದ 30 ಸದಸ್ಯರು ಮಾಹಿತಿ ಹಕ್ಕಿನ ಮೂಲಕ ಮನವಿ ಮಾಡಿದರೂ ಕೇಂದ್ರದ ಕಾಂಗ್ರೆಸ್ ಸರ್ಕಾರ ತಿರಸ್ಕಾರ ಮಾಡಿದೆ!
ಇದೆಲ್ಲದರಿಂದ ನಾವು ತಿಳಿಯಬಹುದಾದುದೇನು? ನಮ್ಮ ಘನ ಸರ್ಕಾರಕ್ಕೆ, ಅದರಲ್ಲಿಯೂ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಸುಭಾಷ್ ಚಂದ್ರ ಬೋಸ್ ರವರ ಸಾವಿನ ಕುರಿತಾದ ಸತ್ಯ ಬಹಿರಂಗವಾಗುವುದೇ ಬೇಕಿಲ್ಲ! ಹೀಗಾಗಿಯೇ ಅವರುಗಳು ಸತ್ಯ ಹೇಳಿದ್ದ ಮುಖರ್ಜಿ ಆಯೋಗದ ವರದಿಯನ್ನು ತಿರಸ್ಕರಿಸಿದ್ದು. ಮತ್ತು ಅದಕ್ಕೂ ಮೊದಲು ತಮ್ಮದೇ ಸರ್ಕಾರಗಳು ರಚಿಸಿದ್ದ ಸಮಿತಿಗಳು ನೀಡಿದ “ವಿಮಾನಾಪಘಾತದಲ್ಲಿ ನೇತಾಜಿಯವರು ಸಾವನ್ನಪ್ಪಿದರು” ಎನ್ನುವ ಹಳೆಯ ಸುಳ್ಳಿಗೇ ಜೋತು ಬಿದ್ದುದು.
ಇದೇನೇ ಇರಲಿ, ಎಲ್ಲರಿಂದಲೂ ‘ನೇತಾಜಿ’ ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಸುಭಾಷ್ ಚಂದ್ರ ಬೋಸ್ ರವರ ವ್ಯಕ್ತಿತ್ವ ನಿಷ್ಕ್ರಿಯ ಹಾಗು ಪರಮ ಸ್ವಾರ್ಥಿಗಳಾದ ಗಾಂಧೀಜಿ-ನೆಹರುಗಳಿಗಿಂತ ಯಾವಾಗಲೂ ಎತ್ತರದ ಸ್ಥಾನದಲ್ಲಿ ನಿಲ್ಲುವಂತಹುದು. ಬೋಸ್ ನಾಡುಕಂಡ ಶ್ರೇಷ್ಠ ಸ್ವರಾಜ್ಯ ಹೋರಾಟಗಾರರಲ್ಲಿ ಒಬ್ಬರು. ಭಾರತದ ಸೈನ್ಯಬಲದ ಕುರಿತು, ಗಡಿ ರಕ್ಷಣೆ ಕುರಿತು ಅವರಿಗಿದ್ದ ದೃಷ್ಟಿಕೋನ ಇಂದಿನವರೆಗೂ ಯಾವುದೇ ರಕ್ಷಣಾ ಸಚಿವರಿಗೆ ಅರ್ಥವಾಗಿಲ್ಲ. ಬೋಸ್‌ರಂತಹ ಮಹಾನ್ ರಾಷ್ಟ್ರನಾಯಕನ ಜೀವನದ ಘಟನೆಗಳ ಮೆಲುಕೇ ಸ್ಫೂರ್ತಿಯುತ. ಕಲಿಯಬೇಕಾದ ಪಾಠಗಳೂ ಹತ್ತಾರು. ಅತ್ಯುತ್ತಮ ರಾಜತಾಂತ್ರಿಕ ಸಂಬಂಧ ಹೊಂದಿದ್ದ ಬೋಸರು ರಾಷ್ಟಕ್ಕೇ ದಿಗ್ದರ್ಶನ ಮಾಡಿದವರು. ಇಂತಹಾ ಮಹಾತ್ಮ ನೇತಾಜಿ ಸುಭಾಷ್ ಚಂದ್ರ ಬೋಸ್ ರನ್ನು ಅವರ ಜನ್ಮದಿನವಾದ ಇಂದಾದರೂ ನೆನೆಯೋಣ. ನೆನೆದು ಧನ್ಯರಾಗೋಣ………
ಜೈ ಹಿಂದ್....! 

Friday, January 17, 2014

“ಮಹಾನ್” ಇತಿಹಾಸಕಾರರೆಂಬ “ಮಹಾತ್ಮ”ರ ಸನ್ನಿಧಿಯಲ್ಲಿ....


ಇಂದಿಗೂ ನಮ್ಮ ಮಕ್ಕಳು ಪ್ರಾಥಮಿಕ ಹಂತದಿಂದ ಪದವಿ, ಸ್ನಾತಕೋತ್ತರ ಪದವಿಯವರೆವಿಗೂ     “ಸೆಕ್ಯೂಲ್ರಿಸ್ಟ್” ಇತಿಹಾಸಜಾರರೆಂದು ತಮ್ಮನ್ನು ತಾವು ಘೋಷಿಸಿಕೊಂಡ ಇವರುಗಳು ಬರೆದಿದ್ದನೇ ಓದಬೇಕಾಗಿದೆ. ಇವರುಗಳು ``ತಮಗೆ ಸರಿಹೊಂದುವಂತೆ’’ ರಚಿಸಿಕೊಂಡ ಇತಿಹಾಸವನ್ನೇ ನಮ್ಮ ಮಕ್ಕಳು ಭಾರತದ ಇತಿಹಾಸವೆಂಬಂತೆ ತಿಳಿಯುತ್ತಾರೆ. ಮುಂದೆ ಇದೇ ಅವರ ಚಿಂತನೆ, ದೇಶದ ಇತಿಹಾಸ, ಸಂಸ್ಕೃತಿಗಳ ಬಗೆಗಿನ ಅವರ ದೃಷ್ಟಿಕೋನವನ್ನು ನಿರ್ಧರಿಸುತ್ತದೆ! 

   ನಮಸ್ಕಾರ ಸ್ನೇಹಿತರೇ,
    ಇತ್ತೀಚೆಗೆ ಬೆಂಗಳೂರಿನ ಟೀಚರ್ಸ್ ಕಾಲೇಜು ಸಭಾಂಗಣದಲ್ಲಿ ಒಂದು ಅಪರೂಪದ ಪುಸ್ತಕಗಳ ಬಿಡುಗಡೆ ಸಮಾರಂಭ ಏರ್ಪಾಡಾಗಿತ್ತು. ಕನ್ನಡದ  ಖ್ಯಾತ ಲೇಖಕರಾದ ಡಾ. ಎಸ್.ಎಲ್. ಭೈರಪ್ಪನವರು ಭಾಗವಹಿಸಿದ್ದ ಆ ಕಾರ್ಯಕ್ರಾಮಕ್ಕೆ ಬಹಳ ನಿರೀಕ್ಷೆಗಳನ್ನಿಟ್ಟುಕೊಂಡು ನನ್ನಂತಹ ಸಾಕಷ್ಟು ಜನರು ಬಂದಿದ್ದರು. ಅಸಲಿಗೆ ಅಲ್ಲಿ ಬಿಡುಗಡೆಯಾಗುತ್ತಿದ್ದ ಪುಸ್ತಕಳು ಸಹ ಅಷ್ಟೇ ಕುತೂಹಲ ಹುಟ್ಟಿಸುವಂತಿದ್ದವು. ಸ್ವತಂತ್ರ  ಭಾರತದ ಖ್ಯಾತ ಪತ್ರಿಕಾ ಬರಹಗಾರ, ಸಂಶೋಧಕ ಅರುಣ್ ಶೌರಿಯವರ ಪುಸ್ತಕದ ಬಿಡುಗಡೆ ಕಾರ್ಯಕ್ರಾಮವದಾಗಿತ್ತು.
ಮೂಲ ಲೇಖಕರಾದ ಶ್ರೀ ಅರುಣ್ ಶೌರಿ
    ಅರುಣ್ ಶೌರಿ ಅವರೊಬ್ಬ ಪತ್ರಕರ್ತ, ಪತ್ರಿಕಾ ಸಂಪಾದಕ, ಧೀಮಂತ ರಾಜಕಾರಣಿ, ಸತ್ಯನಿಷ್ಟ ಬರಹಗಾರರಾಗಿ ಭಾರತದಾದ್ಯಂತ ಹೆಸರು ಮಾಡಿದವರು. ಕೇಂದ್ರದಲ್ಲಿ ಎನ್.ಡಿ.ಎ. ಸರ್ಕಾರವಿದ್ದ ಸಂದರ್ಭದಲ್ಲಿ ಸಮಾಚಾರ ಮತ್ತು ಪ್ರಸಾರ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಶೌರಿಯವರು ಸರ್ಕಾರಿ ಕೆಲಸ ಹಾಗೂ ಪತ್ರಿಕಾ ರಂಗ ಎರಡರಲ್ಲಿಯೂ ಒಳ್ಳೆಯ ಹೆಸರನ್ನು ಗಳಿಸಿಕೊಂಡಿರುವವರು.      ಭಾರತದ ಪ್ರಸಿದ್ದ ಆಂಗ್ಲ ದೈನಿಕ “ಇಂಡಿಯನ್ ಎಕ್ಸ್ ಪ್ರೆಸ್”ನಲ್ಲಿ ಸಾಕಷ್ಟು ವರ್ಷ ಕೆಲಸ ಮಾಡಿದ್ದ ಶೌರಿಯವರು ಆ ಸಮಯದಲ್ಲಿ ಸಾಕಷೃ  ಭ್ರಷ್ಟಾಚರಗಳನ್ನು, ಹಗರಣಗಳಾನ್ನೂ ಬೆಳಕಿಗೆ ತಂದಿದ್ದರು. ಇವರ ಕೆಲಸ, ಸಮಾಜ ಸೇವೆಗೆ ಮೆಚ್ಚಿ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ,  ದಾದಾಭಾಯಿ ನವರೋಜಿ ಪುರಸ್ಕಾರ, ಫ್ರೀಡಮ್ ಟು ಪಬ್ಲಿಷ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ.
    ಮೊದಲಿನಿಂದಲೂ ಅಧ್ಯಯನ, ಸಂಶೊಧನೆಗಳಲ್ಲಿ ಆಸಕ್ತಿ ತಳೆದಿದ್ದ ಅರುಣ್ ಶೌರಿಯವರು ತಾವೇ ಖುದ್ದಾಗಿ ಸಾಕಷ್ಟು ಪುಸ್ತಕಗಳನ್ನು  ರಚಿಸಿದ್ದಾರೆ. “The Only Fatherland’’, ``The World of Fatwas’’, ``Eminent Historians’’, `` Does He know a Mother’s Heart?’’ ಇವೇ ಮೊದಲಾದ ಕೃತಿಗಳನ್ನು ರಚಿಸಿರುವ ಶೌರಿ ಈ ಒಂದೊಂದರಲ್ಲಿಯೂ ಸಾಕಷ್ಟು ಮಾಹಿತಿಯನ್ನು ಓದುಗರೊದನೆ ಹಂಚಿಕೊಂಡಿದ್ದಾರೆ.  ಅರುಣ್ ಶೌರಿಯವರ ಬರಹಗಳನ್ನು ಅರ್ಥ ಮಾಡಿಕೊಳ್ಳುವುದು ತುಸು ತ್ರಾಸದಾಯಕವದ ಕೆಲಸ.  ಅವರಷ್ಟು ಚಿಂತನೆಗೆ ಹಚ್ಚುವ  ಬರಹಗಾರರು ಮತ್ತೊಬ್ಬರು ಸಿಕ್ಕುವುದು ತೀರಾ ಅಪರೂಪವೆನ್ನಬೇಕು. ಅಂತಹಾ ಶೌರಿಯವರ ಪುಸ್ತಕವೊಂದು ಕನ್ನಡಕ್ಕೆ ಬಂದಿದೆ   ಅರುಣ್ ಶೌರಿಯವರ ``Eminent Historians’’ಕೃತಿಯನ್ನು “ಮಹಾನ್” ಇತಿಹಾಸಕಾರರು ಎನ್ನುವ ಹೆಸರಿನಲ್ಲಿ ಮಂಜುನಾಥ ಅಕ್ಕಂಪುರ ರವರು ಕನ್ನದಕ್ಕೆ ಅನುವಾದಿಸಿ ನಮ್ಮ ಕೈಗಿತ್ತಿದ್ದಾರೆ. ಇತಿಹಾಸದ ಬಗ್ಗೆ  ಆಸಕ್ತಿ ಇರುವ ಪ್ರತಿಯೊಬ್ಬರಿಗೂ ಇಷ್ಟವಾಗುವ ಕೃತಿ ಇದು ಎಂದರೆ ತಪ್ಪಾಗಲಾರದು.
     ಇಲ್ಲಿ ಅರುಣ್ ಶೌರಿಯವರು ತಾವು ಯಾವುದೇ ಹಿಂಜರಿಕೆಯಿಲ್ಲದೆ ಸತ್ಯವನ್ನು ಹೊರಹಾಕುವುದನ್ನು ಕಾಣುತ್ತೇವೆ. ವಿದ್ವಾಂಸರೆಂದರೆ ನಾವುಗಳು ಮಾತ್ರವೇ ಎಂದು ಸದಾ ಪ್ರಚಾರದಲ್ಲಿ ತೊಡಗಿರುವ ವಾಮಪಂಥೀಯರು ಮಾಡಿರುವ ಇತಿಹಾಸದ ವಿಕೃತಿಗಳನ್ನು ಆಧಾರ ಸಮೇತ ರುಜುವಾತುಪಡಿಸಿರುವ ಶೌರಿಯವರ ಬರಹವನ್ನು ಓದಿದ ಯಾರೇ ಆದರೂ ನಮ್ಮ ದೇಶದಲ್ಲಿನ ಈ “ಮಹಾನ್” ಇತಿಹಾಸಕಾರರ ಬಗ್ಗೆ ರೇಜಿಗೆ ಪಟ್ಟುಕೊಳ್ಳದಿರಲಾರರು.
ಆಂಗ್ಲಭಾಷೆಯಲ್ಲಿನ ಮೂಲ ಕೃತಿ ``Eminent Historians’’
    ಒಟ್ಟು ಮೂರು ಭಾಗಗಳಲ್ಲಿ 21 ಅಧ್ಯಾಯಗಳಲ್ಲಿ ಹರಡಿಕೊಂಡಿರುವ ಈ ಕೃತಿಯಲ್ಲಿ ಶೌರಿಯವರು ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ (ICHR).  ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (‌NCERT).  ನಂತಹಾ  ಗುರುತರವಾದ, ಮುಂದಿನ ಪೀಳಿಗೆಯ ಬೌದ್ಧಿಕ ವಿಕಾಸದ ಮೇಲೆ ಪರಿಣಾಮ ಬೀರಬಲ್ಲಂಥ ಅಪರಿಮಿತ ಶಕ್ತಿಯನ್ನು ಹೊಂದಿರುವ ಸಂಸ್ಥೆಗಳಲ್ಲಿ ನ ಆಯಕಟ್ಟಿನ ಹುದ್ದೆಗಳಲ್ಲಿರುವ ಹೊಣೆಗೇಡಿ ಬುದ್ದಿಜೀವಿಗಳ ಬಣ್ಣ ಬಯಲು ಮಾಡಿದ್ದಾರೆ. ಮೊಹಮದ್ ಹಬೀಬ್, ಬಿಪನ್ ಚಂದ್ರ, ಆರ್.ಎಸ್.ಶರ್ಮಾ, ರೋಮಿಲಾ ಥಾಪರ್, ತಸ್ನೀಮ್ ಅಹ್ಮದ್, ಸತೀಶ್ ಚಂದ್ರ, ಇವರೇ ಮುಂತಾದ ಬುದ್ದಿಜೀವಿಗಳೆನಿಸಿದ “ಮಹಾನ್” ಇತಿಹಾಸಕಾರರು ತಾವುಗಳು ತಮ್ಮ ಮೂಗಿನ ನೇರಕ್ಕೆ ಬರೆದುದನ್ನೇ ಇತಿಹಾಸವೆಂದು ನಂಬಿಸುತ್ತಾ ಬರುತ್ತಿರುವ ರೀತಿಯನ್ನು ಯಥಾವತ್ ಬೆಳಕಿಗೆ ತರುವ ಪ್ರಯತ್ನವನ್ನು ನಾವಿಲ್ಲಿ ಕಾಣುತ್ತೇವೆ.
    “ಸೆಕ್ಯೂಲ್ರಿಸ್ಟ್” ಇತಿಹಾಸಜಾರರೆಂದು ಖ್ಯಾತಿ ಗಳಿಸಿರುವ ಇತಿಹಾಸಕಾರರು ಈ ದೇಶದ ಇತಿಹಾಸ ಸಂಬಂಧಿತ ಸಂಸ್ಥೆಗಳನ್ನು ಅದ್ಯಾವ ಹಂತಕ್ಕೆ ತಂದು ನಿಲ್ಲಿಸಿದ್ದಾರೆನ್ನುವುದನ್ನು ಶೌರಿಯವರ ಈ ಪುಸ್ತಕದಲ್ಲಿ ನಾವು ಎಳೆ ಎಳೆಯಾಗಿ ನೋಡುತ್ತೇವೆ. ಇಂತಹಾ ಇತಿಹಾಸಕಾರರಲ್ಲಿ ನಾವು ಮುಖ್ಯವಾಗಿ ಸಾಂಸ್ಕೃತಿಕ ವಿಕೃತಿ ಹಾಗು ಬೌದ್ದಿಕ ಅಪ್ರಮಾಣಿಕತೆಯನ್ನು ಗುರುತಿಸಬಹುದು. ವಸಾಹತುಷಾಹಿಯ ಮನೋಭಾವದವರಾದ ಇವರು ಸತ್ಯಕ್ಕೆ ಬೆಲೆಕೊಡದ ಸಾರ್ವಜನಿಕ ಹಣವನ್ನು ಪೋಲು ಮಾಡುವ ಇವರುಗಳ ಬಣ್ಣವನ್ನು ಶೌರಿಯವರ ಈ ಕೃತಿ ಬಯಲು ಮಾಡಿದೆ. ಈ “ಮಹಾನ್” ಇತಿಹಾಸಕಾರರು ತಾವುಗಳು ಸಂಶೊಧನೆ ಹೆಸರಿನಲ್ಲಿ ಮಾಡುವ ಕೃತಿ ಚೌರ್ಯವಿರಬಹುದು, ಭ್ರಷ್ಟಚಾರವಿರಬಹುದು ಅದಕ್ಕೆ ಲೆಕ್ಕವಿಲ್ಲ. ಅಷ್ಟೇ ಅಲ್ಲದೆ ಇವರುಗಳು ತಾವು ಮಾಡುವ ಈ ಬಗೆಯ ಸಂಶೋಧನೆಗಾಗಿ ಸರ್ಕಾರದಿಂದ ಪಡೆದುಕೊಂಡ ಹಣವನ್ನೂ ಸಹ ನ್ಯಾಯಯುತ ಕೆಲಸಕ್ಕೆ ಬಳಸದೆ ಸುಮ್ಮನೆ ಪೋಲು ಮಾಡಿರುವುದಕ್ಕೆ ಶೌರಿಯವರು ಈ ಪುಸ್ತಿಕೆಯಲ್ಲಿ ಸಾಕಶ್ಟು ಉದಾಹರಣೆಗಳನ್ನು ನೀಡಿದ್ದಾರೆ.
    ಇನ್ನೂ ಕೆಲವೊಮ್ಮೆ ಕೆಲವು ನೈಜ ದೃಷ್ಟಿಕೋನದ ಇತಿಹಾಸಕಾರರು ತಾವು ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನಾಗಲೀ, ಮದ್ಯಯುಗದ ಭಾರತದ ಇತಿಹಾಸವನ್ನಾಗಲೀ ದಾಖಲಿಸಲು ಹೊರಟರೆಂದರೆ ಅದನ್ನು ಕೂಡ ಕೆಂದ್ರ ಸರ್ಕಾರದಲ್ಲಿರುವ ಪ್ರಭಾವಿಗಳು ವಿಫಲಗೊಳಿಸುತ್ತಾರೆ. ಏಕೆಂದರೆ ಕೇಂದ್ರದಲ್ಲಿನ ನಾಯಕರುಗಳಿಗೆ “ತಮಗೆ ಸರಿಹೊಂದುವಂತಹಾ” ಇತಿಹಾಸವನ್ನು ರಚಿಸಲು ಇಂತಹಾ ನೈಜ ದೃಷ್ಟಿಕೋನದ ಇತಿಹಾಸಕಾರರು ಒಪ್ಪುವುದಿಲ್ಲ. ಆಗ ಮತ್ತೆ ಅದೇ ಪ್ರಭಾವಿಗಳು ಯಾರು “ತಮಗೆ ಸರಿಹೊಂದುವಂತೆ” ಇತಿಹಾಸವನ್ನು ತಿರುಚಿ ಬರೆಯಬಲ್ಲರೋ ಅಂಥವರೇ ಸಂಶೊಧನೆ ನಡೆಸಲು, ಪುಸ್ತಕಗಳನ್ನು ರಚಿಸಲು ಆದೇಶಿಸುತ್ತಾರೆ.
    ಅರುಣ್ ಶೌರಿಯವರು ಇಲ್ಲಿ ಪ್ರಸ್ತಾಪಿಸುವ ಇನ್ನೊಂದು ಪ್ರಮುಖ ವಿಚಾರವೆಂದರೆ ಈ “ಮಹಾನ್” ಇತಿಹಾಸಕಾರರು ತಾವುಗಳು ಹಿಂದೂ ಧರ್ಮದ ಮೇಲೆ, ಇಸ್ಲಾಂ ಪೂರ್ವ ಇತಿಹಾಸದ ಮೇಲೆ ಯಾವೆಲ್ಲ ರೀತಿಯಲ್ಲಿ ಧಾಳಿ ನಡೆಸಿದ್ದಾರೆ ಎನ್ನುವುದು. ಈ ಎಲ್ಲಾ “ಮಹಾನ್” ಇತಿಹಾಸಕಾರರೂ ತಾವುಗಳು ಇತಿಹಾಸವನ್ನು ಇಸ್ಲಾಂನ ದೃಷ್ಟಿಕೋನದಿಂದ ನೊಡುತ್ತಾರೆ. ಎಂದರೆ ಇವರೆಲ್ಲರಿಗೂ ಇಸ್ಸ್ಲಾಂ ಪೂರ್ವದ ಇತಿಹಾಸದ ಅವಧಿ ಅದು ಗಾಢ ಅಂಧಕಾರದ ಅವಧಿಯಾಗಿರುತ್ತದೆ. ಹಿಂದೂ ಎನ್ನುವ ಎಲ್ಲವಕ್ಕೂ ಅಪಾರ್ಥವನ್ನು ಕಲ್ಪಿಸಲು ಮುಂದಾಗುವ ಇಂತಹವರುಗಳು ಕೇವಲ ವಾಮಪಂಥೀಯ ಇತಿಹಾಸಕಾರರಷ್ಟೇ ಅಲ್ಲ ಇವರುಗಳು ಹಿಂದೂ ಧರ್ಮದ ವಿರೋಧಿಗಳು ಕೂಡಾ ಹೌದು. ಇವರೆಲ್ಲರ ಬರವಣಿಗೆಗಳಲ್ಲಿ ಇರುವುದು ಹಿಂದೂ ವಿರೋಧಿ, ಭಾರತ ವಿರೋಧಿ ಭಾವನೆಗಳೇ. ತುಂಬಿ ತುಳುಕುತ್ತಿರುವುದನ್ನು, ಭಾರತ ವಿರೋಧಿ ಆದ ಎಲ್ಲವನ್ನೂ ವೈಭವದಿಂದ ಚಿತ್ರಿಸಿಸ್ರುವ ಇವರ ರೀತಿಯನ್ನು ಶೌರಿಯವರು “ಮಹಾನ್” ಇತಿಹಾಸಕಾರರು ಕೃತಿಯಲ್ಲಿ ದಾಖಲೆ ಸಮೇತ ಬಯಲು ಮಾಡಿದ್ದಾರೆ.
    ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ (ICHR) ನಂತಹಾ ಸಂಸ್ಥೆಗಳಲ್ಲಿ ಕಳೆದ ಐವತ್ತು ವರ್ಷಗಳಿಂದ ಇರುವ ಇಂತಹಾ ವಿದ್ವಾಂಸರು ಮಾಡಿರುವ ಕೆಲಸಗಳು ನಿಜಕ್ಕೂ ಖೇದಕರ. ಇಂದು ಭಾರತದಲ್ಲಿ ಇತಿಹಾಸ ಸಂಶೋಧನಾ ಕ್ಷೇತ್ರಗಳಲ್ಲಿ ಸಾಕಷ್ಟು ಬೆಳವಣಿಗೆಗಳಾಗಿವೆ. ಅನೇಕ ಮಹತ್ವದ ಸಂಶೊಧನೆಗಳು ನಡೆದಿವೆ. ಆದರೆ ಅವೆಲ್ಲವೂ ನಡೆದಿರುವುದು ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ (ICHR) ಸಂಸ್ಥೆಯ ಹೊರಗಡೆಯಲ್ಲಿ. ಎನ್ನುವುದು ವಿಪರ್ಯಾಸ. ಈ “ಮಹಾನ್” ಇತಿಹಾಸಕಾರರುಗಳ ದುಷ್ಟ ಕೂಟ ನಡೆಸಿರುವ ಭ್ರಷ್ಟಾಚಾರ, ಕೃತಿಚೌರ್ಯ ಇತ್ಯಾದಿಗಳನ್ನು ಗಮನಿಸಿದಾಗ ಎಂಥವರಿಗೂ ಒಂದು ಕ್ಷಣ ಗಾಬರಿಯಾಗದೇ ಇರದು. ಅಷ್ಟೇ ಅಲ್ಲ ದೇಶದ ಚರಿತ್ರೆಗೇ, ಸ್ವಾಭಿಮಾನಕ್ಕೆ ಘಾಸಿಮಾಡಲು ಹೊರಟಿರುವ ಇವರ ಕೆಲಸವನ್ನು ಕಂಡರೆ ಬಹಳವೇ ವಿಷಾದವೆನಿಸುತ್ತದೆ.  “ಇತಿಹಾಸವನ್ನು ಅರಿಯದವನು ಇತಿಹಾಸವನ್ನು ನಿರ್ಮಿಸಲಾರ” ಎನ್ನುವುದೊಂದು ಹಳೆಯ ಮಾತು. ಆದರೆ ಈ “ಮಹಾನ್” ಇತಿಹಾಸಕಾರರ ಇತಿಹಾಸವನ್ನು ನೋಡಿದಾಗ ಇತಿಹಾಸವನ್ನು ಅರಿಯದೆಯೂ, ಇಲ್ಲವೇ ಇತಿಹಾಸವನ್ನು ತಮಗೆ ಬೇಕಾದಂತೆ ಬರೆದುಕೊಂಡೂ ಸಹ ಇತಿಹಾಸವನ್ನು ನಿರ್ಮಿಸಬಹುದೇನೋ(ಅದು ಕೆಟ್ಟ ಇತಿಹಾಸವೇ ಆದರೂ)  ಎನಿಸುತ್ತದೆ!      
    ದುರಂತವೆಂದರೆ ಇಂದಿಗೂ ನಮ್ಮ ಮಕ್ಕಳು ಪ್ರಾಥಮಿಕ ಹಂತದಿಂದ ಪದವಿ, ಸ್ನಾತಕೋತ್ತರ ಪದವಿಯವರೆವಿಗೂ     “ಸೆಕ್ಯೂಲ್ರಿಸ್ಟ್” ಇತಿಹಾಸಜಾರರೆಂದು ತಮ್ಮನ್ನು ತಾವು ಘೋಷಿಸಿಕೊಂಡ ಇವರುಗಳು ಬರೆದಿದ್ದನೇ ಓದಬೇಕಾಗಿದೆ. ಇವರುಗಳು ``ತಮಗೆ ಸರಿಹೊಂದುವಂತೆ’’ ರಚಿಸಿಕೊಂಡ ಇತಿಹಾಸವನ್ನೇ ನಮ್ಮ ಮಕ್ಕಳು ಭಾರತದ ಇತಿಹಾಸವೆಂಬಂತೆ ತಿಳಿಯುತ್ತಾರೆ. ಮುಂದೆ ಇದೇ ಅವರ ಚಿಂತನೆ, ದೇಶದ ಇತಿಹಾಸ, ಸಂಸ್ಕೃತಿಗಳ ಬಗೆಗಿನ ಅವರ ದೃಷ್ಟಿಕೋನವನ್ನು ನಿರ್ಧರಿಸುತ್ತದೆ!
    ಈ ನಿಟ್ತಿನಲ್ಲಿ ಅರುಣ್ ಶೌರಿಯವರು ಬರೆದ ಈ ಕೃತಿಯು ಬಹಳವೇ ಮಹತ್ವಪೂರ್ಣವಾದುದು. ನಾವು-ನೀವುಗಳೂ ಸೇರಿದಂತೆ ದೇಶದ ಯುವಜನಾಂಗ ಕಲಿತಿರುವ, ಕಲಿಯುತ್ತಿರುವ ಇತಿಹಾಸ ಪಠ್ಯವು ಅದಷ್ಟು ನಿಖರವಾದುದು ಎನ್ನುವುದರ ಬಗ್ಗೆ ತಿಳಿಸಿಕೊಟ್ಟಿರುವ ಈ ಕೃತಿಯು ತೋರಿಸಿಕೊಟ್ಟಿದೆ.  ಇಂತಹಾ ಪುಸ್ತಕಗಳಿಗೆ ಸಾರ್ವಜನಿಕ ವಲಯಗಳಲ್ಲಿ ದೊರೆಯಬೇಕಾದ ಪ್ರಚಾರವೇನಾದರೂ ದೊರೆತದ್ದೇ ಆದರೆ ಆಗಲಾದರೂ ಇಂತಹಾ “ಸೆಕ್ಯೂಲರ್” ಇತಿಹಾಸಕಾರರ ಬಣ್ನ ಬಯಲಾಗಿ ತಮ್ಮ ಜೀವಮಾನದುದ್ದಕ್ಕೂ ತಾವು ಮಾಡಿಕೊಂಡು ಬಂದ ಇತಿಹಾಸದ ವಿಕೃತಿಗೆ ಬೆಲೆತೆರಬೇಕಾಗುತ್ತದೆ. ‘
    ಕಡೆಯದಾಗಿ ಈ ಕೃತಿಯಲ್ಲಿನ ಪ್ರಸ್ತಾವನೆಯಲ್ಲಿ ಡಾ. ಎಸ್. ಎಲ್.  ಭೈರಪ್ಪನವ್ರು ಅಭಿಪ್ರಾಯಪ್ಡುವಂತೆ “ವಾದಗಳಿಗೆ ಬಲಿಬೀಳದೆ ಬೇರವಾಗಿ ವಾಸ್ತವತೆಯನ್ನೂ factನ್ನು ನೋಡುವ ಅವಕಾಶ ಇರಬೇಕು.......” ಇಂತಹಾ ವಾಸ್ತವತೆಯನ್ನು ತೆರೆದು ತೋರಿಸುವಂತಹಾ ಪುಸ್ತಕಗಳು ಇನ್ನೂ ಸಾಕಷ್ಟು ಸಂಖ್ಯೆಯಲ್ಲಿ ಕನ್ನಡಕ್ಕೆ ಬರುವಂತಾಗಬೇಕು.  ಇಂತಹುಗಳಿಂದ ಪ್ರೇರಣೆಗೊಂಡು ಕನ್ನಡಿಗರು ತಾವೇ ಮೂಲ ಆಕರಗಳನ್ನು ಶೋಧಿಸಿ ಸ್ವತಂತ್ರವಾದ ಕೃತಿಗಳನ್ನು ರಚಿಸುವಂತಾದರೆ ಅದಕ್ಕಿಂತ ಒಳ್ಳೆಯ ಬೆಳವಣಿಗೆ ಬೇರೆ ಇರಲಾರದು.
    ನಮಸ್ಕಾರ.

Monday, January 13, 2014

ನಮ್ಮಲ್ಲಿನ ಸ್ಥಳ ಪುರಾಣಗಳು(Myths)- 17

ಗಂಗಾ ಸಾಗರ(Ganga Sagar)
    ಭಾರತೀಯರಿಗೆ ಪವಿತ್ರ ದೈವ ಸಮಾನವಾದ ನದಿ ಗಂಗಾ. ‘ಗಂಗಾ ಮಾತೆ’ ಎನ್ನುವುದಾಗಿ ಕರೆಯಿಸಿಕೊಳ್ಳುವ ಈ ನದಿ ಉತ್ತರದ ಕಾಶ್ಮೀರದಿಂದ ದಕ್ಷಿಣದ ತುದಿಯ ಕನ್ಯಾಕುಮಾರಿಯವ್ರೆಗಿನ ಸರ್ವ ಹಿಂದೂ ಧರ್ಮೀಯರಿಗೂ ಪೂಜನೀಯವಾದುದು. ಇಂತಹಾ ನದಿಯು ಉತ್ತರಕಾಶಿಯ ಸಮೀಪದ ಗಂಗೋತ್ರಿಯಲ್ಲಿ ಹುಟ್ಟಿ ನೂರಾರು ಮೈಲು ಹರಿದು ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ದಕ್ಷಿಣದಲ್ಲಿ ಸುಮಾರು 100 ಕಿಲೋಮೀಟರ್ ಅಂತರದಲ್ಲಿರುವ ಗಂಗಾಸಾಗರವೆನ್ನುವಲ್ಲಿ ಸಮುದ್ರವನ್ನು ಸೇರುತ್ತದೆ. ಗಂಗೆಯು ಸಮುದ್ರ ಸಂಗಮವಾಗುವ ಈ ಗಂಗಾ ಸಾಗರ ಕ್ಷೇತ್ರಕ್ಕೆ ಸಹ ಗಂಗೆಯ ಜನ್ಮಸ್ಥಳ ಗಂಗೋತ್ರಿಯಷ್ಟೆ ಪಾವಿತ್ರ್ಯತೆ ಇದೆ. ಹಿಂದೂ ಪುರಾಣಗಳಲ್ಲಿ ಗಂಗಾ ಸಾಗರದ ಮಹಿಮೆಯನ್ನು ನಾನಾ ವಿಧಗಳಲ್ಲಿ ಕೊಂಡಾಡಲಾಗಿದೆ.
    ಅಯೋಧ್ಯಾಪುರವನ್ನಾಳುತ್ತಲಿದ್ದ ಸಗರ ಚಕ್ರವರ್ತಿಗೆ ಕೇಶಿನಿ ಮತ್ತು ಸುಮತಿಯರೆನ್ನುವ ಇಬ್ಬರು ಮಡದಿಯರಿದ್ದರು. ಒಮ್ಮೆ ಔರವ ಮಹರ್ಷಿಗಳು ಸಗರನ ಆಸ್ಥಾನಕ್ಕೆ ಭೇಟಿಯಿತ್ತ ಸಮಯದಲ್ಲಿ ಅಲ್ಲಿನ ಅತಿಥಿ ಸತ್ಕಾರಕ್ಕೆ ಮೆಚ್ಚಿ ಸಗರನ ರಾಣಿಯರೀರ್ವರಿಗೆ ಎರಡು ವರಗಳನ್ನು ಅನುಗ್ರಹಿಸಿದರು. ಅದರಂತೆ ಬಹಳ ಗುಣಶಾಲಿ, ಬಲಶಾಲಿಯೂ ಆದ ಓರ್ವ ಪುತ್ರ ಸಂತಾನ , ಆತನು ಮುಂದೆ ಸಗರನ ಸಾಮ್ರಾಜ್ಯಕ್ಕೆ ಚಕ್ರವರ್ತಿಯಾಗುವ ಎಲ್ಲಾ ಗುಣಲಕ್ಷಣಾವನ್ನು ಹೊಂದಿರುತ್ತಾನೆ. ಇನ್ನೊಂದು ವರದಂತೆ ಹದಿನಾರು ಸಾವಿರ ಪುತ್ರರು.  ಈ ಎರಡು ವರಗಳಲ್ಲಿ ಯಾವ ರಾಣಿಗೆ ಯಾವ ವರವು ಬೇಕಿದೆಯೋ ಅದನ್ನು ಆಯ್ಕೆ ಮಾಡಿಕೊಳ್ಳಿರೆನ್ನಲು ಹಿರಿಯ ರಾಣಿಯಾದ ಕೇಶಿನಿದೇವಿಯು ತಾನು ಮೊದಲನೆಯ ವರವನ್ನು ಆಯ್ಕೆ ಮಾಡಿಕೊಳ್ಲುತ್ತಾಳೆ. ಮತ್ತು ಎರಡನೆ ರಾಣಿಯಾದ ಸುಮತಿದೇವಿಯು ತಾನು ಹದಿನಾರು ಸಾವಿರ ಮಕ್ಕಳಿಗೆ ಜನ್ಮ ನೀಡುತ್ತಾಳೆ.

    ಹೀಗೆ ಕಾಲವು ಸರಿದಂತೆ ಸುಮತಿಯಲ್ಲಿ ಜನಿಸಿದ ಆ ಹದಿನಾರು ಸಾವಿರ ಮಕ್ಕಳು ತಾವು ಸಗರನ ಉತ್ತಮ ಶಾಂತಿಯುತ ಆಡಳಿತಕ್ಕೆ ಭಂಗ ತರುವ ಕಾರ್ಯದಲ್ಲಿ ನಿರತರಾಗುತ್ತಾರೆ. ಅವರ ಉಪಟಳಗಳಿಂದ ಇಂದ್ರಾದಿ ದೇವತೆಗಳಿಂದ ಹಿಡಿದು ಭೂಲೋಕ ವಾಸಿಗಳಾದ ಸಾಮಾನ್ಯ ಜನರೂ ತಾವು ಸುಖದಿಂದ ಬದುಕು ನಡೆಸುವುದು ಕಷ್ಟವೆನ್ನಿಸುತ್ತದೆ.
    ಆಗ ದೇವೇಂದ್ರನು “ಈ ಸಮಸ್ಯೆಯಿಂದ ತಾವು ಪಾರಾಗುವುದು ಹೇಗೆ?” ಎನ್ನುವುದಾಗಿ ಮಹಾ ತಪಸ್ವಿಗಳಾದ ಕಪಿಲ ಮಹರ್ಷಿಗಳ ಬಳಿಯಲ್ಲಿ ಸಲಹೆ ಕೇಳುತ್ತಾನೆ. ಆಗ ಕಪಿಲ ಮುನಿಗಳು ಇದಕ್ಕೊಂದು ಉಪಾಯವನ್ನು ಹೂಡಿ ಅದರಂತೆ ತಾವು ಸಗರ ಚಕ್ರವರ್ತಿಯನ್ನು ಭೇಟಿ ಮಾಡಿ “ಹೇ ರಾಜನ್ ನಿನ್ನ ರಾಜ್ಯವು ಇಂದು ಉತ್ತಮ ಆಡಳಿತದಿಂದ ಮೂಲೋಕಗಳಲ್ಲಿಯೂ ಹೆಸರು ಗಳಿಸಿದೆ. ಇಂತಹಾಸಾಮ್ರಾಜ್ಯದ ಕೀರ್ತಿ ಇನ್ನಷ್ಟು ಎತ್ತರಕ್ಕೇರಬೇಕೆಂದರೆ ನೀನೊಂದು ಅಶ್ವಮೇಧ ಯಾಗವನ್ನು ಮಾಡಬೇಕು” ಎನ್ನುವ ಸಲಹೆಯನ್ನು ನೀಡಿದರು. ಮಹರ್ಷಿಗಳ ಸಲಹೆಯನ್ನು ಶಿರಸಾ ಪಾಲಿಸುವುದಾಗಿ ತಿಳಿಸಿದ ಸಗರ ಚಕ್ರವರ್ತಿಯು ಅದರಂತೆ ಅಶ್ವಮೇಧ ಯಾಗಕ್ಕಾಗಿ ಸಕಲ ಸಿದ್ದತೆಯಲ್ಲಿ ತೊಡಗಿದನು. ಒಳ್ಳೆಯ ದಷ್ಟ ಪುಷ್ಟವಾದ ಕುದುರೆಯೊಂದನ್ನು ಯಾಗಕ್ಕಾಗಿ ಆರಿಸಿಕೊಂಡು ತನ್ನ ಹದಿನಾರು ಸಾವಿರ ಮಕ್ಕಳಿಗೆ ಅದರ ರಕ್ಶಣೆಯ ಭಾರವನ್ನು ವಹಿಸಿಕೊಟ್ಟನು.
    ಅದರಂತೆ ಆ ಹದಿನಾರು ಸಾವಿರ ಜನರ ರಕ್ಷಣೆಯಲ್ಲಿ ಕುದುರೆಯು ನಾನಾ ದೇಶಗಳನ್ನು ಹಾದು ಹೋಯಿತು. ಸಗರ ಚಕ್ರವರ್ತಿಯ ಮೇಲಿನ ಗೌರವ ಹಾಗೂ ಭಯದ ಕಾರಣಾದಿಂದ ಯಾವುದೇ ದೇಶದ ರಾಜರೂ ಈ ಯಜ್ಞದ ಕುದುರೆಯನ್ನು ಕಟ್ಟಿ ಹಾಕುವ ದಾರ್ಷ್ಟ್ಯವನ್ನು ತೋರಲಿಲ್ಲ.
    ಹೀಗಿರಲು ಅದೊಂದು ದಿನ ದೇವೇಂದ್ರನು ತಾನು ಆ ಯಜ್ಞಾಶ್ವವನ್ನು ತನ್ನ ಕುಟಿಲತನದಿಂದ ಅಪಹರಿಸಿ ಕಪಿಲ ಮುನಿಗಳ ಆಶ್ರಮದ ಆವರಣಾದಲ್ಲಿ ಕಟ್ಟಿ ಹಾಕಿದನು. ಕಪಿಲ ಮುನಿಗಳು ತಾವು ಧ್ಯಾನದಲ್ಲಿ ತಲ್ಲೀನರಾಗಿದ್ದ ಸಂದರ್ಭದಲ್ಲಿ ಸಗರನ ಆ ಹದಿನಾರು ಸಾವಿರ ಪುತ್ರರು ತಮ್ಮ ನಡುವಿದ್ದ ಯಜ್ಞಾಶ್ವಕ್ಕಾಗಿ ಹುಡುಕುತ್ತಾ ಆ ಆಶ್ರಮದ ಬಳಿ ಸಾರಲು ಆಶ್ರಮದ ಆವರಣಾದಲ್ಲಿ ಬಂಧಿಯಾಗಿರುವ ಯಜ್ಞ ಹಯವು ಅವರಿಗೆ ಗೋಚರವಾಯಿತು. ಇದರಿಂದಾಗಿ ಸಹಜವಾಗಿ ಕೆರಳಿ ಕೆಂಡದಂತಾದ ಆ ಸಗರ ಕುಮಾರರು “ಎಲಾ ಈ ಮುನಿಗದೆಷ್ಟು ಧೈರ್ಯ? ಯಾವ ವೀರ ಕ್ಷತ್ರಿಯ ರಾಜ, ಮಹಾರಾಜರೂ ತಮ್ಮ ಯಜ್ಞಾಶ್ವವನ್ನು ಕಟ್ಟಿ ಹಾಕಲು ಹಿಂಜರಿದಿದ್ದ ಸಮಯದಲ್ಲಿ ಈ ಸಾಮಾನ್ಯ ಸಾಧುವೋರ್ವನು ಈ ಕುದುರೆಯನ್ನು ಕಟ್ಟಿ ಹಾಕಿರುವನಲ್ಲ?” ಎಂದುಕೊಳ್ಳುತ್ತಲೇ ಕ್ರೋಧತುಂದಿಲರಾಗಿ ಆಶ್ರಮವನ್ನು ಪ್ರವೇಶಿಸಿ ಧ್ಯಾನದಲ್ಲಿದ್ದ ಮುನಿಗಳ ಬಳಿ ಸಾರಿ ನಾನಾ ವಿಧದಲ್ಲಿ ಹಿಂಸಿಸಲು ಆರಂಭಿಸಿದರು. ಈ ಕೃತ್ಯದಿಂದ ಧ್ಯಾನ ಭಂಗವಾಗಿ ಎಚ್ಚರಗೊಂಡ ಕಪಿಲ ಮಹರ್ಷಿಗಳು ತಾವು ಕಡುಕೋಪಗೊಂಡು ತಮ್ಮ ಕಣ್ಣುಗಳನ್ನು ತೆರೆದಾಗ ಅವರ ಆ ನೇತ್ರಗಳಿಂದ ಬಂದ ಶಾಖ ಪೂರಿತ ಪ್ರಭೆಗೆ ಸಗರ ಚಕ್ರವರ್ತಿಯ ಪುತ್ರರಾದ ಆ ಹದಿನಾರು ಸಾವಿರ ಮಂದಿಯೂ ಸುಟ್ಟು ಭಸ್ಮವಾಗಿ ಹೋದರು.
    ಈ ಸುದ್ದಿಯನ್ನು ತಿಳಿದ ಸಗರ ಚಕ್ರವರ್ತಿಯು ತಾನು ಕುಪಿತಗೊಂಡು ತಕ್ಷಣವೇ ಕಪಿಲರ ಆಶ್ರಮದತ್ತ ಧಾವಿಸಿ ಬಂದು ಅವರಲ್ಲಿ ಆದ ತಪ್ಪಿಗಾಗಿ ಕ್ಷಮೆ ಯಾಚಿಸಲು ಮಹರ್ಷಿಗಳು “ತನ್ನಿಂದಾದ ಕೃತ್ಯಕ್ಕಾಗಿ ನಾನು ಸಹ ಪರಿತಪಿಸುತ್ತೇನೆ. ಆದರೆ ನಿನ್ನ ಪುತ್ರರನ್ನು ಪುನಃ ಮೊದಲಿನಂತೆ ಮಾಡಲು ಸಾಧ್ಯವಿಲ್ಲ. ಬದಲಾಗಿ ನಿಮ್ಮ ವಂಶದಲ್ಲಿ ಮುಂದೆ ಭಗೀರತನೆನ್ನುವವನು ಹುಟ್ಟಲಿದ್ದು ಅವನಿಂದ ದೇವಲೋಕದಲ್ಲಿನ ಗಂಗೆಯು ಭೂಲೋಕಕ್ಕೆ ಬರುವವಳಿದ್ದಾಳೆ ಅವಳ ಆಗಮನ ಮತ್ತು ಅವಳ ಸ್ಪರ್ಷ ಮಾತ್ರದಿಂದ ನಿನ್ನ ಈ ಹದಿನಾರು ಸಾವಿರ ಪುತ್ರರಿಗೆ ಶಾಶ್ವತ ಮೋಕ್ಷವು ಪ್ರಾಪ್ತಿಸುತ್ತದೆ” ಎಂದು ನುಡಿದರು. 
    ಅದರಂತೆ ಹಲವು ನೂರು ವರುಷಗಳ ತರುವಾಯ ಸಗರನ ವಂಶದಲ್ಲಿ ಜನ್ಮಿಸಿದ ಭಗೀರತ ಮಹಾರಾಜನು ತಾನು ವಿಷ್ಣು ಮತ್ತು ಪರಮೇಶ್ವರರನ್ನು ಕುರಿತು ಗಾಢವಾದ ತಪಸ್ಸನ್ನಾಚರಿಸಿ ಅವರಿಂದ ದೇವಲೋಕದಲ್ಲಿದ್ದ ಗಂಗೆಯನ್ನು ಭೂಲೋಕಕ್ಕೆ ತಂದು ತನ್ನ ಪೂರ್ವಜರು ಶಾಶ್ವತ ಮೋಕ್ಷವನ್ನು ಹೊಂದುವಂತೆ ಮಾಡಿದನು.
    ಅಂದು ಕಪಿಲರ ಆಶ್ರಮವಿದ್ದ ಸ್ಥಳವೇ ಇಂದಿನ ಗಂಗಾ ಸಾಗರವೆನ್ನುವುದಾಗಿ ತಿಳಿಯಲಾಗಿದೆ. ಮತ್ತು ಗಂಗಾ ನದಿಯು ತಾನು ಸಮುದ್ರದೊಂದಿಗೆ ಸಂಗಮಿಸುವ ಈ ಸ್ಥಳವು ಹಿಂದೂಗಳಾ ಪಾಲಿನ ಪವಿತ್ರ ಕ್ಷೇತ್ರವೆನಿಸಿದೆ.
    ಇಲ್ಲಿ ನಡೆಯುವ ಮಹಾ ಕುಂಭಮೇಳದ ಸಂದರ್ಭ ಸೇರಿದಂತೆ ಅನೇಕ ಪುಣ್ಯ ದಿನಗಳಲ್ಲಿ ಲಕ್ಷ ಸಂಖ್ಯೆಯ ಭಕ್ತಾದಿಗಳು ನೆರೆದು ಈ ಪಾವನ ಸಂಗಮ ತೀರ್ಥದಲ್ಲಿ ಮಿಂದು ಧನ್ಯತಾ ಭಾವ ತಾಳುತ್ತಾರೆ. 

Thursday, January 09, 2014

ನಮ್ಮಲ್ಲಿನ ಸ್ಥಳ ಪುರಾಣಾಗಳು(Myths) -16

ತಿರುವನಂತಪುರ(Tiruvanantapuram)
    ನನ್ನೆಲ್ಲಾ ಆತ್ಮೀಯ ಸ್ನೇಹಿತರಿಗೂ ನನ್ನ ನಮಸ್ಕಾರಗಳು
    ‘ದೇವರ ಸ್ವಂತ ನಾಡು’ ಕೇರಳದ ರಾಜಧಾನಿ ಶ್ರೀ ಕ್ಷೇತ್ರ ತಿರುವನಂತಪುರ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಪ್ರಸಿದ್ದ ಯಾತ್ರಾಸ್ಥಳವೆನಿಸಿದೆ. ಕಳೆದ ವರ್ಷಗಳಲ್ಲಿ ಅನಂತ ಪದ್ಮನಾಭಸ್ವಾಮಿಯ ಸನ್ನಿಧಿಯಲ್ಲಿ ಸಾಕಷ್ಟು ಪ್ರಮಾಣದ ನಿಧಿಯು ಸಿಕ್ಕಿದ ಮೇಲೆ ಶ್ರೀ ಕ್ಷೇತ್ರಕ್ಕೆ ಇನ್ನಷ್ಟು ಮಹತ್ವವು ಬಂದಿದೆ.  ತಿರುವಾಂಕೂರು ಸಂಸ್ಥಾನದ ದೊರೆಗಳಿಂದ ನಿರ್ಮಾಣಗೊಂಡ ಈ ಭವ್ಯ ದೇವಾಲಯಕ್ಕೆ ಅದರದೇ ಆದ ಐತಿಹ್ಯವಿದೆ. ತುಳು ಭಾಷಿಗರಲ್ಲಿ ಜನಜನಿತವಾಗಿರುವ ದಿವಾಕರ ಮುನಿಗಳ ಕಥೆಯು ಒಂದಾದರೆ, ನಂಬೂದರಿ ಬ್ರಾಹ್ಮಣರ ಮೂಲ ಪುರುಷರೆನಿಸಿದ ಬಿಲ್ವಮಂಗಳ ಸ್ವಾಮಿಗಳ ಕಥೆಯೂ ಕೂಡ  ಇದಕ್ಕೆ ಸೇರಿಕೊಂಡಿದೆ.
    ಈಗ ಕೇರಳದ ಉತ್ತರದ ತುದಿಯಲ್ಲಿರುವ ಕಾಸರಗೋಡು ಜಿಲ್ಲೆಯಲ್ಲಿನ ಶ್ರೀ ಅನಂತಪುರ ಕ್ಷೇತ್ರವು ಶ್ರೀ ಕ್ಷೇತ್ರ ತಿರುವನಂತಪುರದ ಮೂಲ ಕ್ಷೇತ್ರವೆನ್ನಲಾಗಿದೆ. ಶ್ರೀ ಅನಂತಪದ್ಮನಾಭ ಸ್ವಾಮಿಯು ಮೂಲದಲ್ಲಿ ಅನಂತಪುರದಲ್ಲಿ ನೆಲೆಸಿರುವವನು ನಂತರದಲ್ಲಿ ಅಲ್ಲಿಂದ ದಕ್ಷಿಣ ದಿಕ್ಕಿನೆಡೆ ಬಂದು ಈಗಿನ ತಿರುವನಂತಪುರದಲ್ಲಿ ನೆಲೆಯಾದನೆಂದು ನಂಬಲಾಗಿದೆ.



ಶ್ರೀ ದಿವಾಕರ ಮುನಿಗಳ ಕಥೆ
    ಶ್ರೀ ದಿವಾಕರನೆಂಬ ಹೆಸರಿನ ಮುನಿಕುಲೋತ್ತಮರು ತಾವು ಬಹು ದೊಡ್ಡ ವಿಷ್ಣು ಭಕ್ತರಾಗಿದ್ದರು. ದಿನವೂ ಬಹಳ ನೇಮ ನಿಷ್ಟೆಗಳಿಂದ ಶ್ರೀ ಮಹಾವಿಷ್ಣುವಿನ ಸೇವೆಯನ್ನು ನೆರವೇರಿಸುತ್ತಾ ಈಗಿನ ಅನಂತಪುರದಲ್ಲಿ ವಾಸವಿದ್ದರು. ಹೀಗಿರಲು ಅದೊಂದು ದಿನ ಮಹಾವಿಷ್ಣುವು ತಾನು ಬಹಳ ಸುಂದರವಾದ ಒಂದು ಮಗುವಿನ ರೂಪದಲ್ಲಿ ಆ ತಪಸ್ವಿಗಳೆದುರು ಕಾಣಿಸಿಕೊಂಡಾನು. ದಿವಾಕರ ಮುನಿಗಳಿಗೆ ಆ ಮಗುವನ್ನು ಕಂಡು ಬಹಳ ಸಂತೋಷವಾಗಿ ತಮ್ಮೊಡನೆಯೇ ಇರುವಂತೆ ಕೇಳಿಕೊಂಡರು. ಆಗ ಆ ಶಿಶುವು “ನಾನು ನಿಮ್ಮೊಂದಿಗಿರಲು ನನ್ನದೇನೂ ಅಭ್ಯಂತರವಿಲ್ಲ, ಆದರೆ ನಾನೇನೇ ಚೇಷ್ಟೆಗಳನ್ನು ಮಾಡಿದರೂ ನನ್ನನ್ನು ಪ್ರಶ್ನಿಸುವುದಾಗಲೀ, ದಂಡಿಸುವುದಾಗಲೀ ಮಾಡಕೂಡದು” ಎಂದಿತು. ಈ ಷರತ್ತಿಗೆ ಒಪ್ಪಿಕೊಂಡ ಮುನಿಗಳ ಆಶ್ರಮದ ಪರಿಸರವ್ದಲ್ಲೇ ಆ ಮಗುವು ಆಟಾವಾಡಿಕೊಂಡು ಇರತೊಡಗಿತು.
    ಹೀಗೆ ದಿನಗಳು, ತಿಂಗಳುಗಳು, ಉರುಳುತ್ತಿರಲು ಅದೊಂದು ದಿನ ಮುನಿಗಳು ಎಂದಿನಂತೆ ತಮ್ಮ ಸ್ನಾನಾದಿಗಳನ್ನು ಪೂರೈಸಿಕೊಂಡು ಶ್ರೀ ಮಹಾವಿಷ್ಣುವಿನ ಪೂಜೆಯಲ್ಲಿ ನಿರತರಾಗಿದ್ದರು. ಪೂಜೆಯ ಭಾಗವಾಗಿ ಶ್ರೀ ದೇವರ ನೈವೇದ್ಯವಾಗಿ ತೆಗೆದಿರಿಸಿದ್ದ ಫಲಗಳನ್ನು ತೆಗೆದುಕೊಂಡ ಆ ಮಗುವು ಒಂದರಲ್ಲಿನ ಒಂದು ಫಲವನ್ನು ತಾನು ನೈವೇದ್ಯಕ್ಕೆ ಮೊದಲೇ ಭಂಜಿಸಿತು, ಅಷ್ಟೇ ಅಲ್ಲದೆ ತಾನು ಅರ್ಧ ತಿಂದಂತಹಾ ಹಣ್ಣಿನ ಚೂರೊಂದನ್ನು ಥಟ್ತನೆ ನೈವೇದ್ಯದ ಪಾತ್ರೆಗೆ ಉಗುಳಿತು. ಇದರಿಂದಾಗಿ ಕುಪಿತಗೊಂಡ ಶ್ರೀ ದಿವಾಕರ ಮುನಿಗಳು ತಾವು ಪೂಜೆಯಲ್ಲಿ ತೊಡಗಿರುವಂತೆಯೇ ತಮ್ಮ ಎಡ ಮೊಣಕೈಯ್ಯಿಂದ ಒಂದೇಟು ಹಾಕಿದರು. ಇದರಿಂದ ಬೇಸರಗೊಂಡ ಆ ಶಿಶುವು “ನೀವಿಂದು ನಿಮ್ಮ ಷರತ್ತನ್ನು ಉಲ್ಲಂಘಿಸಿದ್ದೀರಿ, ನಾನಿನ್ನು ನಿಮ್ಮೊಡನಿರಲು ಸಾಧ್ಯವಿಲ್ಲ” ಎನ್ನುತ್ತಲೇ ಅಲ್ಲೇ ಸನಿಹದಲ್ಲಿದ್ದ ಗುಹೆಯೊಂದರಲ್ಲಿ ಅಂತರ್ಧಾನವಾಯಿತು. ಇದರಿಂದ ಬಲು ಬೇಸರಗೊಂಡ ಮುನಿಗಳು ಪರಿಪರಿಯಾಗಿ ನೊಂದುಕೊಂಡರು.
    ಅದಾಗಿ ಸ್ವಲ್ಪ ಸಮಯದ ಬಳಿಕ ಮುನಿಗಳೊಂದು ಅಶರೀರವಾಣಿಯನ್ನು ಆಲಿಸಿದರು. ಅದರಂತೆ “ಹೇ ಮುನಿವರ್ಯಾ, ನಾನಿನ್ನು ನಿನಗೆ ಈ ಸ್ಥಳದಲ್ಲಿ ದೊರೆಯಲಾರೆ, ನನ್ನನ್ನು ನೋಡಬೇಕೆಂದರೆ ಈ ಗುಹಾಮಾರ್ಗವಾಗಿ ಅನಂತನಕಾಡಿಗೆ(ಇಂದಿನ ತಿರುವನಂತಪುರ)  ಬಾ. ಅಲ್ಲಿ ನಾನು ನಿನಗೆ ದರ್ಶನ ನೀಡುವೆನು” ಎಂದಂತಾಯಿತು. ಇದರಿಂದ ಬಹಳವೇ ಆಶ್ಚರ್ಯಗೊಂಡ ಮುನಿಗಳು ಇಷ್ಟು ದಿನ ನಮ್ಮೊಂದಿಗಿದ್ದ ಆ ಶಿಶುವು ಬೇರಾರೂ ಆಗಿರದೇ ಸ್ವತಃ ತಾವು ಆರಾಧಿಸುವ ಶ್ರೀ ಮಹಾವಿಷ್ಣುವೇ ಆಗಿದ್ದನೆನ್ನುವುದನ್ನು ಅರಿತರು. ಮತ್ತೆ ತಡಮಾಡದೆ ಅಶರೀರವಾಣಿಯ ಸಲಹೆಯಂತೆ ಮಗುವು ಅಂತರ್ಧಾನವಾಗಿದ್ದ ಆ ಗುಹೆಯ ಮಾರ್ಗವಾಗಿಯೇ ‘ಅನಂತನಕಾಡು’ ವಿನ ಮಾರ್ಗವನ್ನು ಹಿಡಿದರು.
    ಹಲವು ದಿನಗಳ ಪಯಣದ ಬಳಿಕ ದಕ್ಷಿಣ ಸಮುದ್ರ ತೀರದಲ್ಲಿನ ಮಾವಿನಮರಗಳಿಂದ ಕೂಡಿದ ದಟ್ಟ ಕಾಡಿನ ಬಳಿ ಬಂದು ಸೇರಿದ ದಿವಾಕರ ಮುನಿಗಳಿಗೆ ಮತ್ತೆ ಅದೇ ಶಿಶುವು ಕಾಣಿಸಿಕೊಂಡಿತು. ಇದರಿಂದ ಬಹಳ ಆನಂದ ತುಂದಿಲರಾದ ಮುನಿಗಳು ಆ ಶಿಶುಸ್ವರೂಪದ ಮಹವಿಷ್ಣುವನ್ನು ಮನಃಪೂರ್ತಿಯಾಗಿ ಸ್ತುತುಸಿದರು. ಹೀಗೆ ಸ್ತುತಿಸಿದ ಬಳಿಕ ಆ ಶಿಶುವು ಅಲ್ಲಿದ್ದ ಒಂದು ಮಾವಿನ ಮರದ ಪೊದೆಯೊಂದರೊಳಗೆ ಐಕ್ಯವಾಯಿತು. ಮತ್ತೆ ಅದೇ ಸ್ಥಳದಲ್ಲಿ ಶ್ರೀ ಮುನಿಗಳಿಗೊಂದು ಮಹಾವಿಷ್ಣುವಿನ ಮೂರ್ತಿಯು ಕಂಡಿತು. ಮುನಿಗಳು ಇದರಿಂದ ಸಂಪ್ರೀತಗೊಂಡು ತಾವು ತಮ್ಮ ಜೀವನದ ಅಂತ್ಯದವರೆಗೂ ಅಲ್ಲೇ ನಿಂತು ಆ ಮೂರ್ತಿಯಲ್ಲೇ ಶ್ರೀ ಮಹಾವಿಷ್ಣುವನ್ನು ಕಾಣುತ್ತಾ ನಿತ್ಯವೂ ಶ್ರದ್ದಾ ಭಕ್ತಿಗಳಿಂದ ಆರಾಧಿಸುತ್ತಾ ನಡೆದರು.

ಬಿಲ್ವಮಂಗಳ ಸ್ವಾಮಿಗಳ ಕಥೆ
    ಬಿಲ್ವಮಂಗಳ ಸ್ವಾಮಿಗಳು ಅಥವಾ ವಿಲ್ವಮಂಗಲನಾಥ ಸ್ವಾಮಿಗಳು ಎಂದು ಸಂಬೋಧಿಸಲ್ಪಡುವ ಮುನಿಗಳು ಮಹಾನ್ ವಿಷ್ಣುಭಕ್ತರಾಗಿದ್ದರು. ಈ ಮುನಿಗಳಿಗೂ ಸಹ ಮೇಲಿನ ಕಥೆಯಲ್ಲಿ ಉಲ್ಲೇಖವಾದಂತೆ ಶ್ರೀ ಮಹಾವಿಷ್ಣುವು ಶಿಶುವಿನ ಸ್ವರೂಪದಲ್ಲಿ ಕಾಣಿಸಿಕೊಂಡನು. ಹಾಗೆಯೇ ಮುಂದೊಂದು ದಿನ ಆ ಶಿಶುವಿನಲ್ಲೆನ ಪರಮಾತ್ಮನ ಅಂಶವಿ ಬಿಲ್ವಮಂಗಳಾ ಸ್ವಾಮಿಗಳ ದಿವ್ಯದೃಷ್ಟಿಗೆ ಗೋಚರಿಸಿತು. ಅಲ್ಲದೆ ಸ್ವಾಮಿಗಳಿಗೆ ಶ್ರೀ ಮಹಾವಿಷ್ಣುವು ತಾನು ಅನಂತಶಯನನ ಸ್ವರೂಪದಲ್ಲಿ ದರ್ಶನ ನೀಡಿದನು.
    ಮಹಾವಿಷ್ಣುವಿನ ಅನಂತಶಯನ ಸ್ವರೂಪದ ದರ್ಶನದಿಂದ ಸಂತುಷ್ಟರದ ಬಿಲ್ವಮಂಗಳ ಸ್ವಾಮಿಗಳು ತಾವು ಅಲ್ಲೇ ಬಿದ್ದಿದ್ದ ಮಾವಿನ ಹಣ್ಣುಗಳನ್ನು ತೆಂಗಿನ ಗೆರಟೆಯಲ್ಲಿಟ್ಟು ಶ್ರೀ ಹರಿಗೆ ಸಮರ್ಪಿಸಿದರು. ಮತ್ತು ಅಲ್ಲಿನ ಆಡಳಿತವನ್ನು ನಡೆಸುತ್ತಿದ್ದ ರಾಜರುಗಳ ಸಹಕಾರದೊಂದಿಗೆ ಶ್ರೀ ಸ್ವಾಮಿಗೆ ದೇವಾಲಯವನ್ನು ನಿರ್ಮಿಸಿ ಶಾಶ್ವತ ಪೂಜೆಗೆ ವ್ಯವಸ್ಥೆಯನ್ನು ಮಾಡಿದರು.
    ಅಲ್ಲಿಂದ ಇಂದಿನವರೆವಿಗೂ ದೇವಾಲಯದಲ್ಲಿ ಮಾವಿನ ಹಣ್ಣಿನ ನ್ನೈವೇದ್ಯವನ್ನು ನಡೆಸಿಕೊಂಡು ಬರಲಾಗುತ್ತಿದೆ. ಮಾವಿನ ಹಣ್ಣು ಸಿಗದೇ ಇದ್ದ ಸಮಯಗಳಲ್ಲಿ ಮಾವಿನ ಚಿಕ್ಕ ಗಾತ್ರದ ಕಾಯಿಯನ್ನಾದರೂ ನೈವೇದ್ಯಕ್ಕಾಗಿ ಉಪಯೋಗಿಸಲಾಗುತ್ತದೆ.
    ಮುಂದೆ ತಿರುವಾಂಕೂರು ಸಂಸ್ಥಾನದ ಆಡಳಿತದ ಅವಧಿಯಲ್ಲಿ ದೇವಾಲಯವು ಸಾಕಷ್ಟು ಅಭಿವೃದ್ದಿಯನ್ನು ಕಂಡಿತು. ಇಲ್ಲ್ ಮುಖ್ಯವಾಗಿ ಗಮನಿಸಬೇಕಾದುದೆಂದರೆ ತಿರುವಾಂಕೂರಿನ ಅರಸರಾರೂ ತಾವು ನೇರವಾಗಿ ಆಡಳಿತ ನಡೆಸುತ್ತಿರಲಿಲ್ಲ ಬರದಿಗೆ ಶ್ರೀ ಅನಂತಪದ್ಮನಾಭಸ್ವಾಮಿಯ ಹೆಸರಿನಲ್ಲೇ ಆಳ್ವಿಕೆ ಸಾಗುತ್ತಿತ್ತು. ಅಂದಹಾಗೆಯೇ ಅಂದು ಬಿಲ್ವಮಂಗಳ ಸ್ವಾಮಿಗಳಿಗೆ ದೊರಕಿದ್ದ ಮೂಲ ವಿಗ್ರಹವನ್ನು ದೇವಾಲಯದ ಸಂಪತ್ತಿನ ರಕ್ಷಕನಾದ ಶ್ರೀ ನರಸಿಂಹ ದೇವರ ಪೀಠದ ತಳದಲ್ಲಿ ಭೂಗತವನ್ನಾಗಿಸಲಾಗಿದೆ. ಮತ್ತು ಈಗಿನ ಗರ್ಭಗೃಹದಲ್ಲಿರುವ ಸುಮಾರು 21 ಅಡಿ ಉದ್ದದ ಶ್ರೀ ಅನಂತಪದ್ಮನಾಭ ವಿಗ್ರಹವು ಕಟು ಷರ್ಕರ ಮೂಲದ್ರವ್ಯಗಳಿಂದ ಕೂಡಿದ್ದಾಗಿದ್ದು ಈ ವಿಗ್ರಹಕ್ಕೆ ಯಾವುದೇ ಬಗೆಯ ಅಭಿಷೇಕ ಪೂಜೆಗಳಿರುವುದಿಲ್ಲ. ಇದರ ಬದಲಾಗಿ ಉತ್ಸವ ಮೂರ್ತಿಗೆ ಅದನ್ನು ನೆರವೇರಿಸಲಾಗುವುದು.
    ಬಿಲ್ವಮಂಗಲ ಸ್ವಾಮಿಗಳಿಂದ ಆರಂಭಗೊಂಡ ಅರ್ಚಕ ಪರಂಪರೆಯೇ ಇಂದಿಗೂ ಮುಂದುವರಿದುಕೊಂಡು ಬರುತ್ತಿದ್ದು ಇಂದಿನ ಮುಖ್ಯ ಅರ್ಚಕರು ಸಹ ನಂಬೂದರಿ ಬ್ರಾಹ್ಮಣರಾಗಿರುವುದು ದಾಖಲಾರ್ಹ ಸಂಗತಿ.
    ಇಂದು ಭಾರತದಲ್ಲಿ ಅತ್ಯಂತ ಶ್ರೀಮಂತ ದೇವಾಲಯವೆನ್ನುವ ಗರಿಮೆಗೆ ಪಾತ್ರವಾಗಿರುವ ಶ್ರೀ ಅನಂತಪದ್ಮನಾಭ ಸ್ವಾಮಿಯ ದರ್ಶನಕ್ಕೆ ದಿನನಿತ್ಯವೂ ದೇಶದ ನಾನಾ ಮೂಲೆಗಳಿಂದ ಲಕ್ಷ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಆಗಮಿಸುತ್ತಾರೆ. ಹೀಗೆ ಬಂದ ತನ್ನ ಯಾರೊಬ್ಬ ನಿಜ ಭಕ್ತನಿಗೂ ಶ್ರಿ ಅನಂತಪದ್ಮನಾಭನು ನಿರಾಶೆ ಮಾಡದೆ ಅವರವರ ಕೋರಿಕೆಯನ್ನು ನಡೆಸಿಕೊಡುತ್ತಾ ವಿರಾಜಮಾನನಾಗಿದ್ದಾನೆ.
    ನಮಸ್ಕಾರ.

Monday, January 06, 2014

ನಮ್ಮಲ್ಲಿನ ಸ್ಥಳ ಪುರಾಣಾಗಳು(Myths) -15

ಘಾಟಿ ಸುಬ್ರಹ್ಮಮಣ್ಯ(Ghat Subrahmanya)
       ನನ್ನೆಲ್ಲಾ ಆತ್ಮೀಯ ಗೆಳೆಯರಿಗೆ ನನ್ನ ನಮಸ್ಕಾರಗಳು,
    ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಮಣ್ಯ ದಕ್ಷಿಣ ಭಾರತದ ಸುಪ್ರಸಿದ್ದ ಯಾತ್ರಾ ಸ್ಥಳಗಳಾಲ್ಲಿ ಒಂದಾಗಿದೆ. ಶ್ರೀ ಸುಬ್ರಹ್ಮಮಣ್ಯ ಸ್ವಾಮಿಯು ಮುಂಭಾಗದಲ್ಲಿ ಪೂರ್ವಾಭಿಮುಖಾವಾಗಿ ಏಳು ಹೆಡೆಗಳ ಸರ್ಪ ಸ್ವರೂಪಿಯಾಗಿಯೂ, ಪಶ್ಚಿಮಾಭಿಮುಖವಾಗಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯಾಗಿಗೂ ಒಂದೇ ಶಿಲೆಯಲ್ಲಿ ಕಾಣಿಸಿಕೊಂಡಿರುತ್ತಾರೆ. ಸುಬ್ರಹ್ಮಣ್ಯನು ನೀಡಿದ ಅಭಯಕ್ಕೆ ಲಕ್ಷ್ಮಿ ನರಸಿಂಹ ಸ್ವಾಮಿಯು ಅಸ್ತು ಎನ್ನುವ ಮೂಲಕ ಭಕ್ತರ ಕೋರಿಕೆಗಳು ನೆರವೇರುತ್ತವೆನ್ನುವುದು ಇಲ್ಲಿನ ನಂಬಿಕೆ.
    ಕರ್ನಾಟಕ ರಾಜಧಾನಿಯಾದ ಬೆಂಗಳೂರು ಮಹಾನಗರದಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಶ್ರೀ ಕ್ಷೇತ್ರವು ದೊಡ್ದಬಳ್ಳಾಪುರ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿಕೊಂಡಿದೆ. ಬೆಂಗಳೂರಿನಿಂದ ಉತ್ತಮ ಗುಣಮಟ್ಟದ ರಸ್ತೆ ಸಂಪರ್ಕವನ್ನು ಹೊಂದಿರುವ ಶ್ರೀ ಕ್ಷೇತ್ರಕ್ಕೆ ನಿತ್ಯವೂ ಲಕ್ಷ ಸಂಖ್ಯೆಯ ಭಕ್ತಾದಿಗಳು ತಮ್ಮ ತಮ್ಮ ಕಷ್ಟಗಳಾನ್ನು ಸ್ವಾಮಿಯ ಸನ್ನಿಧಿಯಲ್ಲಿ ಅರುಹಿಕೊಂಡು ಅದಕ್ಕೆ ಪರಿಹಾರ ಕಾಣುವ ಸಲುವಾಗಿ ಇಲ್ಲಿಗೆ ಆಗಮಿಸುತ್ತಾರೆ. ಮುಖ್ಯವಾಗಿ ಕುಷ್ಟ ರೋಗ, ಮತ್ತಿತರೆ ನಾನಾ ನಮ್/ಉನೆಯ ಚರ್ಮರೋಗದ ಬಾಧೆಗಳಿಗೆ ಶ್ರೀ ಕ್ಷೇತ್ರಕ್ಕೆ ಬ್ಂದು ೧೨ ರಿಂದ ೧೮ ದಿನಗಳ ಕಾಲ ತಂಗಿದ್ದು ಸ್ವಾಮಿಯ ಸೇವೆಯನ್ನು ಶ್ರದ್ದೆ ಭಕ್ತಿಯಿಂದ ಮಾಡಿದ್ದಾದಲ್ಲಿ ವ್ಯಾಧಿಗಳು ಶಾಶ್ವತವಾಗಿ ಗುಣಹೊಂದುತ್ತವೆನ್ನುವುದಕ್ಕೆ ಇಲ್ಲಿ ಸಾಕಷ್ಟು ಐತಿಹ್ಯಗಳು ದೊರಕುತ್ತವೆ.
     ತಾರಕಾಸುರನ ಸಂಹಾರಕ್ಕೆಂದು ಅವತಾರವೆತ್ತಿದ ಕುಮಾರನು ತಾನು ಅರಿಷಡ್ವರ್ಗಗಳಿಂದ ಪೀಡಿತನಾಗಿ ಒಮ್ಮೆ ಬ್ರಹ್ಮದೇವನನ್ನು ಕಂಡು “ನೀನ್ಯಾರು?” ಎಂದು ಕೇಳಲು ಬ್ರಹ್ಮ್ದೇವರು “ತಾನು ಬ್ರಹ್ಮದೇವರು, ಜಗತ್ತಿನ ಸೃಷ್ಟಿಕರ್ತ. ಓಂಕಾರ ಸ್ವರೂಪಿಯು.” ಎನ್ನಲು ಅದಕ್ಕೆ ತೃಪ್ತನಾಗದ ಕುಮಾರಸ್ವಾಮಿಯು “ನೀನು ಓಂಕಾರ ಸ್ವರೂಪನಾದಲ್ಲಿ ನನಗೆ ಪ್ರಣವದ ಅರ್ಥವನ್ನು ತಿಳಿಸು.” ಎಂದು ಕೇಳಲು ಬ್ರಹ್ಮದೇವನು ಸ್ವಾಮಿಯನ್ನು ತಿರಸ್ಕಾರದಿಂದ ಕಂಡು ಮುಂದೆ ಸಾಗುತ್ತಾನೆ. ಅದರಿಂದ ಕೋಪಿಷ್ಟನಾದ ಕುಮಾರನು ತಾನು ಕಮಲ ಸಂಜಾತನನ್ನು ಬಂಧಿಸಿದನು.

    ಇದರಿಂದ ಸಪ್ತಲೋಕಗಳಲ್ಲಿನ ಸೃಷ್ಟಿ ಕಾರ್ಯವು ನಿಂತು ಅಲ್ಲೋಲ ಕಲ್ಲೋಲವುಂಟಾಗಲು ದೇವತೆಗಳೆಲ್ಲಾ ಭಗ್ರಸ್ತರಾದರು. ಒಮ್ಮೆ ನಾರದ ಮಹರ್ಷಿಗಳು ಸತ್ಯಲೋಕಕ್ಕೆ ಬಂದಾಗ ತಾಯಿ ಸರಸ್ವತಿಯಿಂದ ಬ್ರಹ್ಮದೇವರು ಕುಮ್ರನ ಕೈಯಲ್ಲಿ ಬಂಧಿಯಾಗಿರುವುದನ್ನು ತಿಳಿಯುತ್ತಾರೆ. ತಕ್ಷಣವೇ ತಾಯಿಯನ್ನು ಸಮಾಧಾನಗೊಳಿಸಿ ಕೈಲಾಸಕ್ಕೆ ತೆರಳಿದ ನಾರದರು ಪರಮೇಶ್ವರನ ಬಳಿ ನಡೆದ ಅಷ್ಟೂ ಸಂಗತಿಗಳನ್ನು ಅರಹುತ್ತಾರೆ. ಪರಮೇಶ್ವರನು ಈ ವಿಚಾರಗಳನ್ನು ಕೇಳಿ ಮಗನಿಂದಾದ ಅಕೃತ್ಯಕ್ಕೆ ಬಹಳವೇ ನೊಂದು ಬ್ರಹ್ಮನನ್ನು ಸೆರೆಯಿಂದ ಬಿಡಿಸಿ ಮಗನನ್ನು ಕರೆಸಿಕೊಂಡು “ ಬ್ರಹ್ಮದೇವರನ್ನು ಏಕಾಗಿ ಬಂಧಿಸಿದೆ?” ಎಂದು ಪ್ರಶ್ನಿಸಲು “ಪ್ರಣವದ ಅರ್ಥವನ್ನು ತಿಳಿಸಲು ಕೇಳಲಾಗಿ ಅದನ್ನು ತಿರಸ್ಕರಿಸಿ ಬ್ರಹ್ಮನು ತಾನು ಮುಂದೆ ನಡೆದನು ಅದರಿಂದ ಕೋಪಗೊಂಡು ನಾನ್ವರನ್ನು ಬಂಧಿಸಿದೆ.” ಎಂದು ಉತ್ತರಿಸ್ ಮತ್ತೆ ತಡೆದು “ತಂದೆಯೇ ನನಗೀಗಲೂ ಪ್ರಣವದ ಅರ್ಥವನ್ನು ತಿಳಿಯಬೇಕೆನ್ನುವ ಹಂಬಲವಿದೆ.ಎನ್ನಲು ಪರಮೇಶ್ವರನು ಬ್ರಹ್ಮದೇವರಿಗೆ ಆಜ್ಞೆ ಮಾಡಲಾಗಿ ಬ್ರಹ್ಮದೇವರು ಕುಮಾರನಿಗೆ ಒಂದು ಸಹಸ್ರ ವರ್ಷಗಳ ಕಾಲ ಪ್ರಣವದ ಅರ್ಥವನ್ನು ಉಪದೇಶಿಸುತ್ತಾನೆ. ಇದರಿಂದ ಕುಮಾರನಲ್ಲಿದ್ದ ಅರಿಷಡ್ವರ್ಗಗಳು ನಾಶವಾಗಿ ಶುದ್ದ ಜ್ಞಾನವು ಉದಯಿಸಿತು.
    ಆದರೆ ತಾನು ಮಾಡಿದ ತಪ್ಪಿಗಾಗಿ ಶಿಕ್ಷೆಯನ್ನು ಬೇಡಲು ಬ್ರಹ್ಮದೇವರು “ಕೌಮಾರ್ಯಾವಸ್ಥೆಯಲ್ಲಿ ಮಾಡಿದ ತಪ್ಪು ಸರಿಯಾದ ಶಿಕ್ಷಾರ್ಹವಲ್ಲ, ಅದಲ್ಲದೆ ತನ್ನ ತಪ್ಪು ತನಗೆ ತಿಳಿದು ಪಶ್ಚಾತ್ತಾಪವನ್ನು ಪಟ್ಟದ್ದರಿಂದಾಗಿ ಶಿಕ್ಷೆಯು ಸಲ್ಲದು.” ಎಂದನು. ಆದರೆ ಶೀಘ್ರ ಕೋಪಿಯಾದ ಕುಮಾರನು “ತನ್ನ ತಪ್ಪಿಗೆ ಶಿಕ್ಷೆಯಾಗಲೇ ಬೇಕು” ಎಂದು ತೀರ್ಮಾನಿಸಿ ತನ್ನನ್ನೆ ತಾನು “ಕ್ಷುದ್ರ ಸರ್ಪವಾಗು” ಎಂದು ಶಪಿಸಿಕೊಂಡನು. ನಂತರದಲ್ಲಿ ತಾಯಿ ಪಾರ್ವತಿ, ತಂದೆ ಪರಮೇಶ್ವರ, ಸೃಷ್ಟಿಕರ್ತ ಬ್ರಹ್ಮದೇವ ಮತ್ತು ಅಣ್ನ ವಿನಾಯಕರುಗಳಿಗೆ ವಂದಿಸಿ ತನ್ನ ಸರ್ಪರೂಪದಿಂದ ವಿಂದ್ಯಪರ್ವತಗಳನ್ನು ದಾಟಿಕೊಂಡು ದಕ್ಷಿಣದೆಡೆಗೆ ಪ್ರಯಾಣ ಬೆಳೆಸಿ ವಲ್ಮೀಕ ಕ್ಷೇತ್ರಕ್ಕೆ ಬಂದು ತಪಸ್ಸಿನಲ್ಲಿ ನಿರತನಾದನು.
    ಹೀಗೆ ಸಾವಿರಾರು ವರ್ಷಗಳು ಉರುಳಿದವು. ಅದಾಗೊಮ್ಮೆ ಕಷ್ಯಪ ಮಹರ್ಷಿಗಳಾ ಮಕ್ಕಳಾದ ಸರ್ಪ ಕುಲದವರಿಗೂ ಅವರ ಸೋದರ ಸಂಬಂಧಿಗಳಾದ ಗರುಡ ಕುಲದವರಿಗೂ ವೈರತ್ವವು ಉಂಟಾಗಲು ಗರುಡವು ಸರ್ಪಸಂಕುಲವನ್ನೆಲ್ಲಾ  ನಾಶಮಾಡಲು ಪಣ ತೋಟ್ಟಿತು. ಹಾಗೆ ತನ್ನ ಶಪಥದಂತೆ ಸರ್ಪಗಳನ್ನೆಲ್ಲಾ ಒಂದೊಂದಾಗಿ ನಾಶ ಮಾಡುತ್ತಾ ಬಂದ ಗರುಡನಿಂದಾಗಿ ಭಯಗ್ರಸ್ತರಾದ ಸರ್ಪಕುಲಜರು ದೇವಾನುದೇವತೆಗಳ ಮೊರೆಹೊಕ್ಕರೂ ಅವರಾರಿಗೂ ಇವರನ್ನು ಕಾಪಾಡಲಾಗದೇ ಹೋಯಿತು.
    ಅದಾಗ ಸರ್ಪಕುಲ ಸಂಜಾತರಾದ ತಕ್ಷಕ, ವಾಸುಕಿಗಳುಗೆ ಒಮ್ಮೆ ನಾರದರ ದರ್ಶನವಾಗಲು ಅವರೀರ್ವರೂ ನಾರದರಲ್ಲಿ ತಮ್ಮ ಅಳಲನ್ನು ತೋಡಿಕೊಂಡರು. ಅದಾಗ ನಾರದ ಮಹರ್ಷಿಗಳು- “ ಈಗ ಸರ್ಪ ಸ್ವರೂಪಿಯಾದ ಸುಬ್ರಹ್ಮಣ್ಯನು ವಲ್ಮೀಕ ಕ್ಷೇತ್ರದಲ್ಲಿರುವನು, ನೀವುಗಳು ಅಲ್ಲಿಗೆ ಹೋಗಿ ಆತನನ್ನು ಸ್ತೋತ್ರ ಮಾಡಿ ಎಚ್ಚರಗೊಳಿಸಿ ಅಭಯವನು ಬೇಡಿದರೆ ನಿಮ್ಮ ಬಾಧೆಯು ತಪ್ಪುವುದು” ಎಂದರು.
    ತಕ್ಷಣವೇ ವಾಸುಕೀ ಸಮೇತರಾದ ಸರ್ಪಗಳ ಒಂದು ಗುಂಪು ವಲ್ಮೀಕ ಕ್ಷೇತ್ರಕ್ಕೆ ಬಂದು ಸ್ವಾಮಿಯು ತಪಸ್ಸಿಗೆ ಕುಳಿತಿದ್ದ ಗುಹೆಯ ಮುಂದೆ ನಿಂತ್ ಸ್ತೋತ್ರಕ್ಕೆ ತೊಡಗಿದಾಗ ಸಂಪ್ರೀತಗೊಂಡ ಕುಮಾರನು ಬಹಿರ್ಮುಖನಾಗಿ ಅಭಯವನ್ನು ಕೊಡಲು ಅವರುಗಳು ಬಂದ ವಿಚಾರವನ್ನು ಕೇಳಿ ಕುಮಾರನಿಗೆ ಸಹ ಏನು ಮಾಡಬೇಕೆಂಬುದು ತೋಚದಾಯಿತು. ಕೊನೆಗೆ ಏನಾದರಾಗಲಿ ಎಂದು ಶ್ರೀ ಲಕ್ಷ್ಮಿಪತಿಯಾದ ಮಹಾವಿಷ್ಣುವನ್ನು ಕುರಿತು ಪ್ರಾರ್ಥಿಸಲು ಶ್ರೀ ಹರಿಯು ಕುಮಾರನಿದ್ದ ಗುಹೆಯ ಮುಂದೆ ಪ್ರಕಟಗೊಂಡು “ಕುಮಾರ..” ಎಂದು ಕೂಗಿದನು. ಆಗ ಭಾರೀ ಘಟಸರ್ಪವೊಂದು ಬಂದು ಎದುರಿಗೆ ನಿಲ್ಲಲು ಶ್ರೀಹರಿಯು ಅದನ್ನು ಆಲಂಗಿಸಿಕೊಳ್ಳಲಾಗಿ ಸ್ವಾಮಿಗೆ ನಿಜರೂಪವು ಪ್ರಾಪ್ತವಾಯಿತು.
    ಕುಶಲ ಪ್ರಶ್ನೆಗಳಾದ ಮೇಲೆ ಸ್ವಾಮಿಯು ತಾನು ಸರ್ಪಗಳಿಗೆ ಅಭಯವನ್ನು ನೀಡಿದ ವಿಚಾರವನ್ನು ಶ್ರೀಹರಿಗೆ ತಿಳಿಸಲಾಗಿ ಆಗ ಕಮಲಾಕ್ಷನು ಗರುಡನನ್ನು ಬರಮಾಡಿ ಸರ್ಪಗಳಿಗೆ ಅಭಯವನ್ನು ನೀಡಿದ್ದಲ್ಲದೆ “ನೀವಿರುವಲ್ಲಿ ನಾನು ಬೆಂಗಾವಲಾಗಿ ಲಕ್ಷ್ಮಿ ನರಸಿಂಹ ಸ್ವರೂಪದಲ್ಲಿ ಇರುವೆನು” ಎಂದು ಹೇಳಿ ಅಂತರ್ಧಾನನಾದನು. ಕುಮಾರನು ಸರ್ಪಗಳು ತನ್ನ ಮೊರೆಹೊಕ್ಕ ಕಾರಣಾದಿಂದಾಗಿ “ಎಲ್ಲಾ ಸರ್ಪಗಳಿಗೆ ತನ್ನ ಅಂಶವು ಬರಲಿ” ಎಂದು ಹರಸಿ ``ತನ್ನ ಹೆಸರಿನಲ್ಲಿ ಅಚಂದ್ರಾರ್ಕವಾಗಿ ಇಲ್ಲೇ ವಾಸಿಸುತ್ತಾ ಪೂಜೆ ತೆಗೆದುಕೊಳ್ಳಿ’’ ರೆಂದು ಆಶೀರ್ವದಿಸಿ ತಾನು ಪ್ರಯಾಣ ಉತ್ತರ ದಿಕ್ಕಿನೆಡೆ ಪ್ರಯಾಣ ಬೆಳೆಸಿದನು.
 
ಭಾಗ- 2

    ಇಂದಿನ ಬಳ್ಳಾರಿ ಜಿಲ್ಲೆಗೆ ಸೇರಿದ ಸಂಡೂರು ಹಿಂದೊಮ್ಮೆ ಘೋರ್ಪಡೆ ವಂಶಸ್ಥರ ರಾಜಧಾನಿಯಾಗಿದ್ದಿತು. ಮರಾಠರ ಉಚ್ಚ್ರಾಯ ಕಾಲವಾಗಿದ್ದ ಆ ಸಮಯದಲ್ಲಿ ದೊಡ್ದಬಳ್ಳಾಪುರವನ್ನು ಮಲ್ಲಭೈರೇಗೌಡ ಎನ್ನುವ ಪಾಳೇಗಾರರು ಆಳುತ್ತಿದ್ದರೆಂದು ಶಾಸನಗಳಲ್ಲಿ ಉಲ್ಲೇಖವಿದೆ. ಇಂದಿನ ಬೆಂಗಳೂರ್ನ ಯಶವಂತಪುರದ ವರೆವಿಗೂ ಹರಡಿಕೊಂಡಿದ್ದ ಮರಾಠಾ ರಾಜ್ಯದ ಆಡಳಿತವು ಸಂಡೂರಿನ ಘೋರ್ಪಡೆ ವಂಶಸ್ಥರ ಪೂರ್ವಿಕರಿಗೆ ಸೇರಿತ್ತು. ಅವರು ಬಹಳ ದೈವಭಕ್ತರೂ, ಆಚಾರ ವಿಚಾರಗಳ ಪಾಲನೆ ಮಾಡುವವರೂ ಆಗಿದ್ದರು.
    ಅದೊಂದು ದಿನ ಒಬ್ಬ ವೀಳ್ಯದೆಲೆಗಳಾನ್ನು ಮಾರುವ ವರ್ತಕನು ತನ್ನ ಸರಕನ್ನು ಮಾರಲು ಬೇರೆ ಬೇರೆ ಊರುಗಳಿಗೆ ಹೋಗುತ್ತಿರಲು ದಾರಿಮದ್ಯೆ ಯಾವಾಗಲೂ ಈ ಕ್ಷೇತ್ರದಲ್ಲಿ ತಂಗುತ್ತಿದ್ದನು. ಈಗ ಸ್ವಾಮಿಯು ಮೂಡಿರುವ ಅದೇ ಶಿಲೆಯ ಮೇಲೆ ಮಲಗಿ ದಣಿವಾರಿಸಿಕೊಳ್ಳುತ್ತಿದ್ದ ವರ್ತಕನಿಗೆ ಪ್ರತಿ ಬಾರಿಯೂ ಕನಸಿನಲ್ಲೆಂಬತೆ “ಮರದಡಿಯ ನೆರಳಾಗಿರುವ ಈ ಶಿಲೆಯ ಮೇಲೆ ಭಾರವಾಗಿ ಮಲಗಿದ್ದೀಯ, ಏಳು... ಏಳು...” ಎಂದಂತೆ ಅಶರೀರವಾಣಿಯೊಂದು ಕೇಳುತ್ತಿತ್ತು. ಮೊದಮೊದಲು ವರ್ತಕನು ಇದೊಂದು ಗಾಳಿ ಚೇಷ್ಟೆಯಿರಬೇಕೆಂದೆಣಿಸಿ ಸುಮ್ಮನಿದ್ದನು ಆದರೆ ಅದೊಂದು ದಿನ ಸ್ವಾಮಿಯು ಸ್ವಪ್ನದಲಿ ತನ್ನ ನಿಜಸ್ವರೂಪದಲ್ಲಿ ದರ್ಶನ ನೀಡಿ “ಇಲ್ಲೇ ಸಮೀಪದಲ್ಲಿ ನಾನು ವಾಸವಿದ್ದೇನೆ. ನನ್ನ ಮೂಲಸ್ಥಾನವು 20 ಗಜದ ಅಂತರದಲ್ಲಿದೆ. ನನ್ನ ಭಕ್ತರು ಸಂಡೂರಿನಲ್ಲಿದ್ದಾರೆ. ನಾಳೆ ಪ್ರಾತಃ ಕಾಲದಲ್ಲಿ ನಿನಗೆ ಸಹಾಯಕನಾಗಿ ಒಬ್ಬ ವಿಪ್ರನು ಬರುವನು, ಅವನ ಜತೆಗೆ ಹೋಗಿ ರಾಜರಿಗೆ ನಾನು ಇಲ್ಲಿರುವ ವಿಚಾರವನ್ನು ತಿಳಿಸು. ಆತನು ಬಂದು ಗುಡಿಯನ್ನು ಕಟ್ಟಿಸಿ, ಪೂಜಾದಿಗಳಿಗೆ ಅನುಕೂಲವನ್ನು ಮಾಡುವನು. ನಿನಗೆ ಈ ಜೀವನದ ನಂತರದಲ್ಲಿ ಮುಕ್ತಿಯನ್ನು ಕರುಣಿಸುತ್ತೇನೆ” ಎಂದು ನುಡಿದು ಸ್ವಾಮಿಯು ಅಂತರ್ಧಾನನಾದನು.
    ಅದೇ ಮರುದಿನ ಬೆಳೆಗ್ಗೆ ವರ್ತಕನು ಮುಖ ಮಾರ್ಜನವನ್ನು ಮಾಡಿ ದಾರಿಯಲ್ಲಿ ಹೋಗುತ್ತಿರಲು ಒಬ್ಬ ವಿಪ್ರನು ಕಣ್ಣಿಗೆ ಬಿದ್ದನು. ವರ್ತಕನು ಸ್ವಪ್ನದಲ್ಲಿ ನಡೆದುದನ್ನೆಲ್ಲಾ ಆ ವಿಪ್ರನಲ್ಲಿ ಭಿನ್ನವಿಸಿಕೊಳ್ಳಲು ಬ್ರಾಹ್ಮಣನು ಶಿಲೆಯ ಬಳಿ ಬರಲು ಸ್ವಾಮಿಯು ಕ್ಷಣಾ ಮಾತ್ರವೇ ಸರ್ಪಸ್ವರೂಪದಲಿ ದರ್ಶನ ನೀಡಿದನು. ನಂತರದಲ್ಲಿ ಈರ್ವರೂ ಸಂಡೂರಿನತ್ತ ಪ್ರಯಾಣಾ ಬೆಳೆಸಿದರು.
    ಹೀಗೆ ಹಲವು ದಿನಗಳ ಪ್ರಯಾಣದ ಬಳಿಕ ಸಂಡೂರು ತಲುಪಿದ ಆ ಇಬ್ಬರಿಗೂ ಅಲ್ಲಿನ ರಾಜರು ದರ್ಶನ ನೀಡಿ ಬಂದ ಕಾರಣಾವನ್ನು ಕೇಳಲಾಗಿ ಇಬ್ಬರೂ ತಮಗೆ ಸ್ವಾಮಿಯು ಅರುಹಿದ ಎಲ್ಲಾ ವಿಚಾರಗಳನ್ನೂ ಹೇಳಿದರು, ಮತ್ತು “ತಾವು ದಯವಿಟ್ಟು ಆ ಸ್ಥಳಕ್ಕೆ ಆಗಮಿಸಬೇಕು” ಎಂದು ಬೇಡಿಕೊಂಡರು. ಆದರೆ ರಾಜರು ಮಾತ್ರ “ನೋಡಿ ನಮಗಿರುವ ರಾಜಕಾರ್ಯಗಳನ್ನೆಲ್ಲಾ ಬಿಟ್ಟು ಇಷ್ಟು ಸಣ್ಣ ವಿಚಾರಕ್ಕೆ ಅಷ್ಟು ದೂರ ಬರಲು ಸಾಧ್ಯವಿಲ್ಲ. ತಮಗೆ ಈ ಕಾರ್ಯಕ್ಕೆ ಏನೇನು ಅನುಕೂಲಗಳು ಬೇಕೋ ಎಲ್ಲವನ್ನೂ ಮಾಡಿಕೊಡುತ್ತೇವೆ, ನೀವೇ ಆ ಕೆಲಸವನ್ನು ಮಾಡಿರಿ” ಎಂದು ಅಪ್ಪಣೆ ಕೊಡಿಸಿದರು. “ಸ್ವಾಮಿಯ ಕೆಲಸವನ್ನು ನಾವೇ ಮಾಡುವುದಾದಲ್ಲಿ ನಮ್ಮಲ್ಲಿ ಸಲಕರಣೆಗಳಿಲ್ಲವೆ? ಅದಕ್ಕಾಗಿ ನಿಮ್ಮಲ್ಲಿಗೆ ಬರಬೇಕಿದ್ದಿತೆ? ಸ್ವಾಮಿಯ ಇಚ್ಚೆ ನಿಮ್ಮಿಂದಲೇ ಆ ಕೆಲಸವಾಗಬೇಕೆಂದಿರುವಾಗ ನಮ್ಮಿಂದದು ಸಾಧ್ಯವೆ? ಬರುವುದಾದಲ್ಲಿ ಬನ್ನಿ, ಇಲ್ಲವೇ ನಿಮ್ಮ ಇಚ್ಚೆ, ನಮಗೆ ಅಪ್ಪಣೆ ಕೊಡಿ” ಎಂದು ಹೇಳಿದ ವರ್ತಕ ಹಾಗೂ ವಿಪ್ರರು ಅಲ್ಲಿಂದ ಹೊರಟರು.
    ಮತ್ತೆ ಅದೇ ರಾತ್ರಿ ರಾಜರ ಸ್ವಪ್ನದಲ್ಲಿ ಸ್ವಾಮಿಯು ಉಗ್ರ ರೂಪಿಯಾಗಿ ಕಾಣಿಸಿಕೊಂಡು “ನೀನು ನನ್ನನ್ನು ತಿರಸ್ಕರಿಸಿದ್ದೀಯೆ, ನಿನ್ನ ಇಡೀ ರಾಜ್ಯಕೋಶ, ಪುತ್ರ, ನಿತ್ರ, ಕಳಾತ್ರಾದಿಗಳು ಕಷ್ಟಕ್ಕೆ ಸಿಲುಕಿ ನಾಶವಾಗುತ್ತದೆ” ಎನ್ನಲು ರಾಜರಿಗೆ ಕೂಡಲೇ ಎಚ್ಚರವಾಗಿ ಸ್ವಾಮಿಯಲ್ಲಿ ಕ್ಷಮೆಯಾಚಿಸಿ ಆ ಈರ್ವರನ್ನು ಹುಡುಕಿಸಿ ಕರೆತಂದು ಇನ್ನೊಮ್ಮೆ ಅವರೀರ್ವರನ್ನು ಯಥೋಚಿತವಗಿ ಸತ್ಕರಿಸಿ ತಕ್ಷಣಾ ಅವರೊಡನೆ “ಪ್ರಯಾಣಕ್ಕೆ ಸಿದ್ದರಾಗಿ ಬರುವೆವು” ಎಂದರು.
    ಸರಿಸುಮಾರು ಮಧ್ಯಾಹ್ನ ಮೂರರ ಸುಮಾರಿಗೆ ಕ್ಷೇತ್ರವನ್ನು ತಲುಪಿದ ರಾಜ ಪರಿವಾರ ಸ್ವಾಮಿಯಿರುವ ಸ್ಥಳದ ಶೋಧನೆಯಲ್ಲಿ ತೊಡಗಿತು. ಆದರೆ ಎಲ್ಲಿ ನೋಡಿದರಲ್ಲಿ ಸರ್ಪಾಕೃತಿಯ ಕಲ್ಲುಗಳೇ ಕಾಣುತ್ತಿರಲಾಗಿ ಮೂಲ ಸ್ವಾಮಿಯ ನೆಲೆ ಹುಡುಕುವುದೇ ಬಹಳ ತ್ರಾಸವಾಯಿತು. ಪರಿವಾರದವರಿಗೆಲ್ಲಾ ಈ ಹುಡುಕಾಟದಿಂದಾಗಿ ಬಹಳ ದಣಿವಾಗಲು ತೊಡಗಿತು. ಕಡೆಗೆ ಸಂಜೆಯಾಗುತ್ತಿದ್ದಂತೆ ಹುಡುಕಾತಕ್ಕೆ ಅಲ್ಪವಿರಾಮವನ್ನು ನೀಡಿ ಅಡಿಗೆ ಮಾಡಲು ತೊಡಗಿದರು. ಅದಕ್ಕಾಗಿ ಒಂದು ದೊಡ್ದ ಕಲ್ಲು ಗುಂಡು ಇನ್ನೆರಡು ಸಣ್ಣ ಗುಂಡುಗಳನ್ನು ಸೇರಿಸಿ ಒಲೆಯನ್ನು ರಚಿಸಿ ಪದಾರ್ಥಗಳನ್ನು ಬೇಯಲು ಇಟ್ತರು. ಹೀಗೆ ಸ್ವಲ್ಪ ಸಮಯದ ಬಳಿಕ ಪದಾರ್ಥಗಳು ಬೆಂದಿವೆಯೇನೋ ಎಂದು ಪರೀಕ್ಷಿಸಲು ಮುಚ್ಚಿದ ತಟ್ಟೇಯನ್ನು ತೆಗೆದು ನೋಡಲು ಎಲ್ಲಾ ಆಹಾರವೂ ರಕ್ತವರ್ಣವಾಗಿದ್ದಿತು. ಇದರಿಂದ ಗಾಬರಿ ಹೊಂದಿದ ರಾಜರು ಇಲ್ಲಿಯೇ ಸ್ವಾಮಿಯು ಇರುವನೆಂಬ ನಿರ್ಧಾರಕ್ಕೆ ಬಂದು ಪರಿಶೀಲನೆಗೆ  ತೊಡಗಿದರು. ಅದಾಗ ಅಲ್ಲಿದ್ದ ಹುತ್ತದ ಕೋವಿಗಳ ದರ್ಶನವಾಯಿತು.
    ಇದೇ ಊರಿನಲ್ಲಿದ್ದ ಗೊಲ್ಲರ ಹುಡುಗನೋರ್ವ ತನ್ನ ಹಸುಗಳನ್ನು ಮೇಯಿಸಲು ಇಲ್ಲಿಗೆ ಬರುತ್ತಿರಲು ಸಂಜೆಯ ವೇಳೆ ದನಗಳನ್ನೆಲ್ಲಾ ಮನೆಗೆ ವಾಪಾಸು ಅಟ್ಟುವ ಸಮಯದಲ್ಲಿ ಒಂದು ಹಸುವು ಮಾತ್ರ ತನ್ನ ಗುಂಪಿನಿಂದ ಬೇರೆಯಾಗಿ ಈ ಹುತ್ತದ ಬಳಿ ಬಂದು ಹುತ್ತಕ್ಕೆ ಸರಿಯಾಗಿ ತನ್ನ ಕೆಚ್ಚ್ಚಲನ್ನು ಹಿಡಿದು ಹಾಲು ಸುರಿಸುತ್ತಿದ್ದಿತು. ಈ ಬಗೆಯಲ್ಲಿ ಹಸುವು ಹಾಲನ್ನೆರೆಯುವ ಕಾರ್ಯವು ಬಹಳ ದಿನಗಳಿಂದ ನಡೆಯುತ್ತಿರಲು ಆ ಊರಿನ ಗೊಲ್ಲರು ಸಹ ಹಸುವು ತನ್ನಲ್ಲಿನ ಹಾಲನ್ನು ಏನು ಮಾಡುತ್ತಿದೆ ಎನ್ನುವುದನ್ನು ಪರೀಕ್ಷಿಸುವ ಸಲುವಾಗಿ ಅದೇ ದಿನ ಅಲ್ಲಿಗೆ ಬಂದಿದ್ದರು. ಆ ದಿನದ ಸಂಜೆಯಲ್ಲಿಯೂ ಎಂದಿನಂತೆ ಆ ಹಸುವು ಹುತ್ತದ ಬಳಿ ಸಾರಿ ಅಲ್ಲಿ ಹಾಲನ್ನು ಸುರಿಸುತ್ತಿರಲು ಅದನ್ನು ನೋಡಿದ ರಾಜರೂ ಮಂತ್ರಮುಗ್ದರಾಗಿ ಭಕ್ತಿಯಿಂದ ಸ್ವಾಮಿಯನ್ನು ಸ್ತುತಿಸಿದರು.
    ಆ ದಿನ ರಾತ್ರಿ ರಾಜರ ಸ್ವಪ್ನದಲ್ಲಿ ದರ್ಶನವನ್ನಿತ್ತ ಕುಮಾರಸ್ವಾಮಿಯು “ನನ್ನ ಮೇಲಿರುವ ವಲ್ಮೀಕವನ್ನು ತೆಗೆ, ನಾನು ಇಲ್ಲಿ ಸರ್ಪ ಸ್ವರೂಪಿಯಾಗಿ ಲಕ್ಷ್ಮಿ ನರಸಿಂಹ ಸಮೇತನಾಗಿ ನೆಲೆಸಿದ್ಜ಼ೇನೆ” ಎಂದು ಆದೇಶಿಸಿದನು. ಅದಾದ ಮರುದಿನ ಗೊಲ್ಲರನ್ನೂ ಸೇರಿಸಿಕೊಂಡು ರಾಜರು ವಲ್ಮೀಕವನ್ನು ತೆಗೆಯಲು ಲಕ್ಷ್ಮೀನರಸಿಂಹ ಸಮೇತ ಸುಬ್ರಹ್ಮಣ್ಯ ಸ್ವಾಮಿಯ ದರ್ಶನವಾಯಿತು.
    ಇದಾದ ಬಳಿಕ ರಾಜರು ತಮ್ಮೆಲ್ಲಾ ಪರಿವಾರದವರೊಡಗೂಡಿ ಸ್ವಾಮಿಗೆ ದೇವಾಲಯವೊಂದನ್ನು ನಿರ್ಮಿಸಿ ಪೂಜಾದಿಗಳಿಗೆ ವ್ಯವಸ್ಥೆಯನ್ನು ಮಾಡಿಸಿದರು.
    ಅಂದಿನಿಂದಿಂದಿನವರೆವಿಗೆ ಸ್ವಾಮಿಯು ತನ್ನ ಭಕ್ತರಿಂದ ಸೇವೆಕೊಂಡು ಅವರವರ ಇಷ್ಟಾರ್ಥಗಳನ್ನು ಬೆರವೇರಿಸುತ್ತಾ ಬಂದಿರುತ್ತಾರೆ.
    ನಮಸ್ಕಾರ.

Thursday, January 02, 2014

ಹಿಂತಿರುಗಿ ನೋಡಿದಾಗ....

    ನನ್ನೆಲ್ಲಾ ಆತ್ಮೀಯ ಗೆಳೆಯರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
    ಇದೇನಪ್ಪಾ ಇವ್ನು ಹೊಸ ವರ್ಷ ಬಂದು ಒಂದೆರಡು ದಿನ್ ಕಳೆದ್ಮೇಲೆ ಹೊಸ ವರ್ಷದ ಶುಭಾಶಯ್ ಹೇಳ್ತಿದಾನೆ ಅಂದ್ಕೊಂಡ್ರಾ? ಹೌದು, ಹೊಸ ವರ್ಷ ಬಂದು ಆಗ್ಲೇ ಎರಡು ದಿನಗಳು ಕಳೆದು ಹೋಗಿಯಾಯ್ತು. ಕಾಲವೇ ಹಾಗೆ ಎಂದಿಗೂ ನಿಲ್ಲೋದಿಲ್ಲ. ಒಂದೇ ಸಮನೆ ಓಡ್ತಾನೇ ಇರೋದೇ ಅದ್ರ ಕೆಲ್ಸನೇನೋ? ಆದ್ರೆ ನಾವು-ನೀವು ಮನುಷ್ಯರು ನೋಡಿ, ಕಾಲ ಮುಂದೋಡ್ತಿದ್ರೂ ನಮಗೆ ಮಾತ್ರ ಸರಿದ ಕಾಲದದಲ್ಲಿ ನಮ್ಮಗಳ ಸುತ್ತ ನಡೆದ ಘಟನೆಗಳ ನೆನಪುಗಳು ಮಾತ್ರ ಮಾಸದಂತೆ ನಮ್ಮೊಂದಿಗಿರುತ್ತವೆ.
    ಎಲ್ಲಾ ವರ್ಷಗಳಂತೆ 2013 ನೇ ವರ್ಷವೂ ಇಂತಹಾ ಸಾಕಷ್ಟು ಘಟನೆಗಳ ನೆನಪುಗಳನ್ನು ನಮ್ಮಲ್ಲಿ ಉಳಿಸಿ ಹೋಗಿದೆ, ಹೌದಲ್ಲ?
ಇಂತಹಾ ಹಲವಾರು ಘಟನೆಗಳಾಲ್ಲಿ ಕೆಲವೊಂದಷ್ಟನ್ನು ನಮ್ಮ ಪ್ರೀತಿಯ ಕನ್ನಡ ದಿನಪತ್ರಿಕೆಗಳಾದ ‘ವಿಜಯವಾಣಿ’ ಹಾಗೂ ‘ಉದಯವಾಣಿ’ ಯಲ್ಲಿನ ಸ್ನೇಹಿತರು ನಮಗಾಗಿ ಹಂಚಿಕೊಂಡಿದ್ದಾರೆ. ಅಂತಹಾ ಕೆಲವು ಪುಟಗಳಾನ್ನು ನಾನಿಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಚಿಸಿದ್ದೇನೆ,
ನಿಮಗೂ ಇದು ಇಷ್ಟವಾಗಬಹುದೆನ್ನುವುದು ನನ್ನ ಅನಿಸಿಕೆ.

    ಸರಿ ಹಾಗಾದರೆ ಇನ್ನು ತಡವೇಕೆ ಇಲ್ಲಿನ ಪುಟಗಳಾನ್ನು ಒಂದೋಂದನ್ನೇ ತಿರುವಿ ಹಾಕುತ್ತಾ ನಾವುಗಳು ಕಳೆದ ವರ್ಷಾವಧಿಯಲ್ಲಿ ಕಂಡಂತಹಾ ವ್ಯಕ್ತಿಗಳು, ಘಟನೆಗಳನ್ನು ಇನ್ನೊಮ್ಮೆ ಮೆಲುಕು ಹಾಕೋಣ....

‘ವಿಜಯವಾಣಿ’-  


















 ‘ಉದಯವಾಣಿ’ 



    ಕಳೆದ ಕಾಲದಲ್ಲಿ ನಾವು ಅನುಭವಿಸಿದ ಸಿಹಿ-ಕಹಿ ಘಟನೆಗಳನ್ನೆಲ್ಲಾ ನೆನೆದು ಮನಸ್ಸು ಒದ್ದೆಯಾಗಿರುವ ಈ ಸಮಯದಲ್ಲಿ ಮತ್ತೆ ನಾವೀಗ ಇನ್ನೊಂದು ಹೊಸ ವರ್ಷದ ಪ್ರಾರಂಭದಲ್ಲಿದ್ದೇವೆ.
    ಈ 2014 ನಮ್ಮೆಲ್ಲರ ಬಾಳಿನಲ್ಲಿ ಸಾಕಷ್ಟು ಸಿಹಿಯನ್ನೇ ನೀಡಲಿ, ಕಹಿಯ ಪ್ರಮಾಣ ಆದಷ್ಟು ಕಡಿಮೆ ಇರಲಿ ಎಂದು ಹಾರೈಸುತ್ತಾ...
ನಿಮಗೆಲ್ಲಾ ಇನ್ನೊಮ್ಮೆ ಹೊಸವರ್ಷದ ಶುಭಾಶಯಗಳು.
    ನಮಸ್ಕಾರ.