Monday, January 06, 2014

ನಮ್ಮಲ್ಲಿನ ಸ್ಥಳ ಪುರಾಣಾಗಳು(Myths) -15

ಘಾಟಿ ಸುಬ್ರಹ್ಮಮಣ್ಯ(Ghat Subrahmanya)
       ನನ್ನೆಲ್ಲಾ ಆತ್ಮೀಯ ಗೆಳೆಯರಿಗೆ ನನ್ನ ನಮಸ್ಕಾರಗಳು,
    ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಮಣ್ಯ ದಕ್ಷಿಣ ಭಾರತದ ಸುಪ್ರಸಿದ್ದ ಯಾತ್ರಾ ಸ್ಥಳಗಳಾಲ್ಲಿ ಒಂದಾಗಿದೆ. ಶ್ರೀ ಸುಬ್ರಹ್ಮಮಣ್ಯ ಸ್ವಾಮಿಯು ಮುಂಭಾಗದಲ್ಲಿ ಪೂರ್ವಾಭಿಮುಖಾವಾಗಿ ಏಳು ಹೆಡೆಗಳ ಸರ್ಪ ಸ್ವರೂಪಿಯಾಗಿಯೂ, ಪಶ್ಚಿಮಾಭಿಮುಖವಾಗಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯಾಗಿಗೂ ಒಂದೇ ಶಿಲೆಯಲ್ಲಿ ಕಾಣಿಸಿಕೊಂಡಿರುತ್ತಾರೆ. ಸುಬ್ರಹ್ಮಣ್ಯನು ನೀಡಿದ ಅಭಯಕ್ಕೆ ಲಕ್ಷ್ಮಿ ನರಸಿಂಹ ಸ್ವಾಮಿಯು ಅಸ್ತು ಎನ್ನುವ ಮೂಲಕ ಭಕ್ತರ ಕೋರಿಕೆಗಳು ನೆರವೇರುತ್ತವೆನ್ನುವುದು ಇಲ್ಲಿನ ನಂಬಿಕೆ.
    ಕರ್ನಾಟಕ ರಾಜಧಾನಿಯಾದ ಬೆಂಗಳೂರು ಮಹಾನಗರದಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಶ್ರೀ ಕ್ಷೇತ್ರವು ದೊಡ್ದಬಳ್ಳಾಪುರ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿಕೊಂಡಿದೆ. ಬೆಂಗಳೂರಿನಿಂದ ಉತ್ತಮ ಗುಣಮಟ್ಟದ ರಸ್ತೆ ಸಂಪರ್ಕವನ್ನು ಹೊಂದಿರುವ ಶ್ರೀ ಕ್ಷೇತ್ರಕ್ಕೆ ನಿತ್ಯವೂ ಲಕ್ಷ ಸಂಖ್ಯೆಯ ಭಕ್ತಾದಿಗಳು ತಮ್ಮ ತಮ್ಮ ಕಷ್ಟಗಳಾನ್ನು ಸ್ವಾಮಿಯ ಸನ್ನಿಧಿಯಲ್ಲಿ ಅರುಹಿಕೊಂಡು ಅದಕ್ಕೆ ಪರಿಹಾರ ಕಾಣುವ ಸಲುವಾಗಿ ಇಲ್ಲಿಗೆ ಆಗಮಿಸುತ್ತಾರೆ. ಮುಖ್ಯವಾಗಿ ಕುಷ್ಟ ರೋಗ, ಮತ್ತಿತರೆ ನಾನಾ ನಮ್/ಉನೆಯ ಚರ್ಮರೋಗದ ಬಾಧೆಗಳಿಗೆ ಶ್ರೀ ಕ್ಷೇತ್ರಕ್ಕೆ ಬ್ಂದು ೧೨ ರಿಂದ ೧೮ ದಿನಗಳ ಕಾಲ ತಂಗಿದ್ದು ಸ್ವಾಮಿಯ ಸೇವೆಯನ್ನು ಶ್ರದ್ದೆ ಭಕ್ತಿಯಿಂದ ಮಾಡಿದ್ದಾದಲ್ಲಿ ವ್ಯಾಧಿಗಳು ಶಾಶ್ವತವಾಗಿ ಗುಣಹೊಂದುತ್ತವೆನ್ನುವುದಕ್ಕೆ ಇಲ್ಲಿ ಸಾಕಷ್ಟು ಐತಿಹ್ಯಗಳು ದೊರಕುತ್ತವೆ.
     ತಾರಕಾಸುರನ ಸಂಹಾರಕ್ಕೆಂದು ಅವತಾರವೆತ್ತಿದ ಕುಮಾರನು ತಾನು ಅರಿಷಡ್ವರ್ಗಗಳಿಂದ ಪೀಡಿತನಾಗಿ ಒಮ್ಮೆ ಬ್ರಹ್ಮದೇವನನ್ನು ಕಂಡು “ನೀನ್ಯಾರು?” ಎಂದು ಕೇಳಲು ಬ್ರಹ್ಮ್ದೇವರು “ತಾನು ಬ್ರಹ್ಮದೇವರು, ಜಗತ್ತಿನ ಸೃಷ್ಟಿಕರ್ತ. ಓಂಕಾರ ಸ್ವರೂಪಿಯು.” ಎನ್ನಲು ಅದಕ್ಕೆ ತೃಪ್ತನಾಗದ ಕುಮಾರಸ್ವಾಮಿಯು “ನೀನು ಓಂಕಾರ ಸ್ವರೂಪನಾದಲ್ಲಿ ನನಗೆ ಪ್ರಣವದ ಅರ್ಥವನ್ನು ತಿಳಿಸು.” ಎಂದು ಕೇಳಲು ಬ್ರಹ್ಮದೇವನು ಸ್ವಾಮಿಯನ್ನು ತಿರಸ್ಕಾರದಿಂದ ಕಂಡು ಮುಂದೆ ಸಾಗುತ್ತಾನೆ. ಅದರಿಂದ ಕೋಪಿಷ್ಟನಾದ ಕುಮಾರನು ತಾನು ಕಮಲ ಸಂಜಾತನನ್ನು ಬಂಧಿಸಿದನು.

    ಇದರಿಂದ ಸಪ್ತಲೋಕಗಳಲ್ಲಿನ ಸೃಷ್ಟಿ ಕಾರ್ಯವು ನಿಂತು ಅಲ್ಲೋಲ ಕಲ್ಲೋಲವುಂಟಾಗಲು ದೇವತೆಗಳೆಲ್ಲಾ ಭಗ್ರಸ್ತರಾದರು. ಒಮ್ಮೆ ನಾರದ ಮಹರ್ಷಿಗಳು ಸತ್ಯಲೋಕಕ್ಕೆ ಬಂದಾಗ ತಾಯಿ ಸರಸ್ವತಿಯಿಂದ ಬ್ರಹ್ಮದೇವರು ಕುಮ್ರನ ಕೈಯಲ್ಲಿ ಬಂಧಿಯಾಗಿರುವುದನ್ನು ತಿಳಿಯುತ್ತಾರೆ. ತಕ್ಷಣವೇ ತಾಯಿಯನ್ನು ಸಮಾಧಾನಗೊಳಿಸಿ ಕೈಲಾಸಕ್ಕೆ ತೆರಳಿದ ನಾರದರು ಪರಮೇಶ್ವರನ ಬಳಿ ನಡೆದ ಅಷ್ಟೂ ಸಂಗತಿಗಳನ್ನು ಅರಹುತ್ತಾರೆ. ಪರಮೇಶ್ವರನು ಈ ವಿಚಾರಗಳನ್ನು ಕೇಳಿ ಮಗನಿಂದಾದ ಅಕೃತ್ಯಕ್ಕೆ ಬಹಳವೇ ನೊಂದು ಬ್ರಹ್ಮನನ್ನು ಸೆರೆಯಿಂದ ಬಿಡಿಸಿ ಮಗನನ್ನು ಕರೆಸಿಕೊಂಡು “ ಬ್ರಹ್ಮದೇವರನ್ನು ಏಕಾಗಿ ಬಂಧಿಸಿದೆ?” ಎಂದು ಪ್ರಶ್ನಿಸಲು “ಪ್ರಣವದ ಅರ್ಥವನ್ನು ತಿಳಿಸಲು ಕೇಳಲಾಗಿ ಅದನ್ನು ತಿರಸ್ಕರಿಸಿ ಬ್ರಹ್ಮನು ತಾನು ಮುಂದೆ ನಡೆದನು ಅದರಿಂದ ಕೋಪಗೊಂಡು ನಾನ್ವರನ್ನು ಬಂಧಿಸಿದೆ.” ಎಂದು ಉತ್ತರಿಸ್ ಮತ್ತೆ ತಡೆದು “ತಂದೆಯೇ ನನಗೀಗಲೂ ಪ್ರಣವದ ಅರ್ಥವನ್ನು ತಿಳಿಯಬೇಕೆನ್ನುವ ಹಂಬಲವಿದೆ.ಎನ್ನಲು ಪರಮೇಶ್ವರನು ಬ್ರಹ್ಮದೇವರಿಗೆ ಆಜ್ಞೆ ಮಾಡಲಾಗಿ ಬ್ರಹ್ಮದೇವರು ಕುಮಾರನಿಗೆ ಒಂದು ಸಹಸ್ರ ವರ್ಷಗಳ ಕಾಲ ಪ್ರಣವದ ಅರ್ಥವನ್ನು ಉಪದೇಶಿಸುತ್ತಾನೆ. ಇದರಿಂದ ಕುಮಾರನಲ್ಲಿದ್ದ ಅರಿಷಡ್ವರ್ಗಗಳು ನಾಶವಾಗಿ ಶುದ್ದ ಜ್ಞಾನವು ಉದಯಿಸಿತು.
    ಆದರೆ ತಾನು ಮಾಡಿದ ತಪ್ಪಿಗಾಗಿ ಶಿಕ್ಷೆಯನ್ನು ಬೇಡಲು ಬ್ರಹ್ಮದೇವರು “ಕೌಮಾರ್ಯಾವಸ್ಥೆಯಲ್ಲಿ ಮಾಡಿದ ತಪ್ಪು ಸರಿಯಾದ ಶಿಕ್ಷಾರ್ಹವಲ್ಲ, ಅದಲ್ಲದೆ ತನ್ನ ತಪ್ಪು ತನಗೆ ತಿಳಿದು ಪಶ್ಚಾತ್ತಾಪವನ್ನು ಪಟ್ಟದ್ದರಿಂದಾಗಿ ಶಿಕ್ಷೆಯು ಸಲ್ಲದು.” ಎಂದನು. ಆದರೆ ಶೀಘ್ರ ಕೋಪಿಯಾದ ಕುಮಾರನು “ತನ್ನ ತಪ್ಪಿಗೆ ಶಿಕ್ಷೆಯಾಗಲೇ ಬೇಕು” ಎಂದು ತೀರ್ಮಾನಿಸಿ ತನ್ನನ್ನೆ ತಾನು “ಕ್ಷುದ್ರ ಸರ್ಪವಾಗು” ಎಂದು ಶಪಿಸಿಕೊಂಡನು. ನಂತರದಲ್ಲಿ ತಾಯಿ ಪಾರ್ವತಿ, ತಂದೆ ಪರಮೇಶ್ವರ, ಸೃಷ್ಟಿಕರ್ತ ಬ್ರಹ್ಮದೇವ ಮತ್ತು ಅಣ್ನ ವಿನಾಯಕರುಗಳಿಗೆ ವಂದಿಸಿ ತನ್ನ ಸರ್ಪರೂಪದಿಂದ ವಿಂದ್ಯಪರ್ವತಗಳನ್ನು ದಾಟಿಕೊಂಡು ದಕ್ಷಿಣದೆಡೆಗೆ ಪ್ರಯಾಣ ಬೆಳೆಸಿ ವಲ್ಮೀಕ ಕ್ಷೇತ್ರಕ್ಕೆ ಬಂದು ತಪಸ್ಸಿನಲ್ಲಿ ನಿರತನಾದನು.
    ಹೀಗೆ ಸಾವಿರಾರು ವರ್ಷಗಳು ಉರುಳಿದವು. ಅದಾಗೊಮ್ಮೆ ಕಷ್ಯಪ ಮಹರ್ಷಿಗಳಾ ಮಕ್ಕಳಾದ ಸರ್ಪ ಕುಲದವರಿಗೂ ಅವರ ಸೋದರ ಸಂಬಂಧಿಗಳಾದ ಗರುಡ ಕುಲದವರಿಗೂ ವೈರತ್ವವು ಉಂಟಾಗಲು ಗರುಡವು ಸರ್ಪಸಂಕುಲವನ್ನೆಲ್ಲಾ  ನಾಶಮಾಡಲು ಪಣ ತೋಟ್ಟಿತು. ಹಾಗೆ ತನ್ನ ಶಪಥದಂತೆ ಸರ್ಪಗಳನ್ನೆಲ್ಲಾ ಒಂದೊಂದಾಗಿ ನಾಶ ಮಾಡುತ್ತಾ ಬಂದ ಗರುಡನಿಂದಾಗಿ ಭಯಗ್ರಸ್ತರಾದ ಸರ್ಪಕುಲಜರು ದೇವಾನುದೇವತೆಗಳ ಮೊರೆಹೊಕ್ಕರೂ ಅವರಾರಿಗೂ ಇವರನ್ನು ಕಾಪಾಡಲಾಗದೇ ಹೋಯಿತು.
    ಅದಾಗ ಸರ್ಪಕುಲ ಸಂಜಾತರಾದ ತಕ್ಷಕ, ವಾಸುಕಿಗಳುಗೆ ಒಮ್ಮೆ ನಾರದರ ದರ್ಶನವಾಗಲು ಅವರೀರ್ವರೂ ನಾರದರಲ್ಲಿ ತಮ್ಮ ಅಳಲನ್ನು ತೋಡಿಕೊಂಡರು. ಅದಾಗ ನಾರದ ಮಹರ್ಷಿಗಳು- “ ಈಗ ಸರ್ಪ ಸ್ವರೂಪಿಯಾದ ಸುಬ್ರಹ್ಮಣ್ಯನು ವಲ್ಮೀಕ ಕ್ಷೇತ್ರದಲ್ಲಿರುವನು, ನೀವುಗಳು ಅಲ್ಲಿಗೆ ಹೋಗಿ ಆತನನ್ನು ಸ್ತೋತ್ರ ಮಾಡಿ ಎಚ್ಚರಗೊಳಿಸಿ ಅಭಯವನು ಬೇಡಿದರೆ ನಿಮ್ಮ ಬಾಧೆಯು ತಪ್ಪುವುದು” ಎಂದರು.
    ತಕ್ಷಣವೇ ವಾಸುಕೀ ಸಮೇತರಾದ ಸರ್ಪಗಳ ಒಂದು ಗುಂಪು ವಲ್ಮೀಕ ಕ್ಷೇತ್ರಕ್ಕೆ ಬಂದು ಸ್ವಾಮಿಯು ತಪಸ್ಸಿಗೆ ಕುಳಿತಿದ್ದ ಗುಹೆಯ ಮುಂದೆ ನಿಂತ್ ಸ್ತೋತ್ರಕ್ಕೆ ತೊಡಗಿದಾಗ ಸಂಪ್ರೀತಗೊಂಡ ಕುಮಾರನು ಬಹಿರ್ಮುಖನಾಗಿ ಅಭಯವನ್ನು ಕೊಡಲು ಅವರುಗಳು ಬಂದ ವಿಚಾರವನ್ನು ಕೇಳಿ ಕುಮಾರನಿಗೆ ಸಹ ಏನು ಮಾಡಬೇಕೆಂಬುದು ತೋಚದಾಯಿತು. ಕೊನೆಗೆ ಏನಾದರಾಗಲಿ ಎಂದು ಶ್ರೀ ಲಕ್ಷ್ಮಿಪತಿಯಾದ ಮಹಾವಿಷ್ಣುವನ್ನು ಕುರಿತು ಪ್ರಾರ್ಥಿಸಲು ಶ್ರೀ ಹರಿಯು ಕುಮಾರನಿದ್ದ ಗುಹೆಯ ಮುಂದೆ ಪ್ರಕಟಗೊಂಡು “ಕುಮಾರ..” ಎಂದು ಕೂಗಿದನು. ಆಗ ಭಾರೀ ಘಟಸರ್ಪವೊಂದು ಬಂದು ಎದುರಿಗೆ ನಿಲ್ಲಲು ಶ್ರೀಹರಿಯು ಅದನ್ನು ಆಲಂಗಿಸಿಕೊಳ್ಳಲಾಗಿ ಸ್ವಾಮಿಗೆ ನಿಜರೂಪವು ಪ್ರಾಪ್ತವಾಯಿತು.
    ಕುಶಲ ಪ್ರಶ್ನೆಗಳಾದ ಮೇಲೆ ಸ್ವಾಮಿಯು ತಾನು ಸರ್ಪಗಳಿಗೆ ಅಭಯವನ್ನು ನೀಡಿದ ವಿಚಾರವನ್ನು ಶ್ರೀಹರಿಗೆ ತಿಳಿಸಲಾಗಿ ಆಗ ಕಮಲಾಕ್ಷನು ಗರುಡನನ್ನು ಬರಮಾಡಿ ಸರ್ಪಗಳಿಗೆ ಅಭಯವನ್ನು ನೀಡಿದ್ದಲ್ಲದೆ “ನೀವಿರುವಲ್ಲಿ ನಾನು ಬೆಂಗಾವಲಾಗಿ ಲಕ್ಷ್ಮಿ ನರಸಿಂಹ ಸ್ವರೂಪದಲ್ಲಿ ಇರುವೆನು” ಎಂದು ಹೇಳಿ ಅಂತರ್ಧಾನನಾದನು. ಕುಮಾರನು ಸರ್ಪಗಳು ತನ್ನ ಮೊರೆಹೊಕ್ಕ ಕಾರಣಾದಿಂದಾಗಿ “ಎಲ್ಲಾ ಸರ್ಪಗಳಿಗೆ ತನ್ನ ಅಂಶವು ಬರಲಿ” ಎಂದು ಹರಸಿ ``ತನ್ನ ಹೆಸರಿನಲ್ಲಿ ಅಚಂದ್ರಾರ್ಕವಾಗಿ ಇಲ್ಲೇ ವಾಸಿಸುತ್ತಾ ಪೂಜೆ ತೆಗೆದುಕೊಳ್ಳಿ’’ ರೆಂದು ಆಶೀರ್ವದಿಸಿ ತಾನು ಪ್ರಯಾಣ ಉತ್ತರ ದಿಕ್ಕಿನೆಡೆ ಪ್ರಯಾಣ ಬೆಳೆಸಿದನು.
 
ಭಾಗ- 2

    ಇಂದಿನ ಬಳ್ಳಾರಿ ಜಿಲ್ಲೆಗೆ ಸೇರಿದ ಸಂಡೂರು ಹಿಂದೊಮ್ಮೆ ಘೋರ್ಪಡೆ ವಂಶಸ್ಥರ ರಾಜಧಾನಿಯಾಗಿದ್ದಿತು. ಮರಾಠರ ಉಚ್ಚ್ರಾಯ ಕಾಲವಾಗಿದ್ದ ಆ ಸಮಯದಲ್ಲಿ ದೊಡ್ದಬಳ್ಳಾಪುರವನ್ನು ಮಲ್ಲಭೈರೇಗೌಡ ಎನ್ನುವ ಪಾಳೇಗಾರರು ಆಳುತ್ತಿದ್ದರೆಂದು ಶಾಸನಗಳಲ್ಲಿ ಉಲ್ಲೇಖವಿದೆ. ಇಂದಿನ ಬೆಂಗಳೂರ್ನ ಯಶವಂತಪುರದ ವರೆವಿಗೂ ಹರಡಿಕೊಂಡಿದ್ದ ಮರಾಠಾ ರಾಜ್ಯದ ಆಡಳಿತವು ಸಂಡೂರಿನ ಘೋರ್ಪಡೆ ವಂಶಸ್ಥರ ಪೂರ್ವಿಕರಿಗೆ ಸೇರಿತ್ತು. ಅವರು ಬಹಳ ದೈವಭಕ್ತರೂ, ಆಚಾರ ವಿಚಾರಗಳ ಪಾಲನೆ ಮಾಡುವವರೂ ಆಗಿದ್ದರು.
    ಅದೊಂದು ದಿನ ಒಬ್ಬ ವೀಳ್ಯದೆಲೆಗಳಾನ್ನು ಮಾರುವ ವರ್ತಕನು ತನ್ನ ಸರಕನ್ನು ಮಾರಲು ಬೇರೆ ಬೇರೆ ಊರುಗಳಿಗೆ ಹೋಗುತ್ತಿರಲು ದಾರಿಮದ್ಯೆ ಯಾವಾಗಲೂ ಈ ಕ್ಷೇತ್ರದಲ್ಲಿ ತಂಗುತ್ತಿದ್ದನು. ಈಗ ಸ್ವಾಮಿಯು ಮೂಡಿರುವ ಅದೇ ಶಿಲೆಯ ಮೇಲೆ ಮಲಗಿ ದಣಿವಾರಿಸಿಕೊಳ್ಳುತ್ತಿದ್ದ ವರ್ತಕನಿಗೆ ಪ್ರತಿ ಬಾರಿಯೂ ಕನಸಿನಲ್ಲೆಂಬತೆ “ಮರದಡಿಯ ನೆರಳಾಗಿರುವ ಈ ಶಿಲೆಯ ಮೇಲೆ ಭಾರವಾಗಿ ಮಲಗಿದ್ದೀಯ, ಏಳು... ಏಳು...” ಎಂದಂತೆ ಅಶರೀರವಾಣಿಯೊಂದು ಕೇಳುತ್ತಿತ್ತು. ಮೊದಮೊದಲು ವರ್ತಕನು ಇದೊಂದು ಗಾಳಿ ಚೇಷ್ಟೆಯಿರಬೇಕೆಂದೆಣಿಸಿ ಸುಮ್ಮನಿದ್ದನು ಆದರೆ ಅದೊಂದು ದಿನ ಸ್ವಾಮಿಯು ಸ್ವಪ್ನದಲಿ ತನ್ನ ನಿಜಸ್ವರೂಪದಲ್ಲಿ ದರ್ಶನ ನೀಡಿ “ಇಲ್ಲೇ ಸಮೀಪದಲ್ಲಿ ನಾನು ವಾಸವಿದ್ದೇನೆ. ನನ್ನ ಮೂಲಸ್ಥಾನವು 20 ಗಜದ ಅಂತರದಲ್ಲಿದೆ. ನನ್ನ ಭಕ್ತರು ಸಂಡೂರಿನಲ್ಲಿದ್ದಾರೆ. ನಾಳೆ ಪ್ರಾತಃ ಕಾಲದಲ್ಲಿ ನಿನಗೆ ಸಹಾಯಕನಾಗಿ ಒಬ್ಬ ವಿಪ್ರನು ಬರುವನು, ಅವನ ಜತೆಗೆ ಹೋಗಿ ರಾಜರಿಗೆ ನಾನು ಇಲ್ಲಿರುವ ವಿಚಾರವನ್ನು ತಿಳಿಸು. ಆತನು ಬಂದು ಗುಡಿಯನ್ನು ಕಟ್ಟಿಸಿ, ಪೂಜಾದಿಗಳಿಗೆ ಅನುಕೂಲವನ್ನು ಮಾಡುವನು. ನಿನಗೆ ಈ ಜೀವನದ ನಂತರದಲ್ಲಿ ಮುಕ್ತಿಯನ್ನು ಕರುಣಿಸುತ್ತೇನೆ” ಎಂದು ನುಡಿದು ಸ್ವಾಮಿಯು ಅಂತರ್ಧಾನನಾದನು.
    ಅದೇ ಮರುದಿನ ಬೆಳೆಗ್ಗೆ ವರ್ತಕನು ಮುಖ ಮಾರ್ಜನವನ್ನು ಮಾಡಿ ದಾರಿಯಲ್ಲಿ ಹೋಗುತ್ತಿರಲು ಒಬ್ಬ ವಿಪ್ರನು ಕಣ್ಣಿಗೆ ಬಿದ್ದನು. ವರ್ತಕನು ಸ್ವಪ್ನದಲ್ಲಿ ನಡೆದುದನ್ನೆಲ್ಲಾ ಆ ವಿಪ್ರನಲ್ಲಿ ಭಿನ್ನವಿಸಿಕೊಳ್ಳಲು ಬ್ರಾಹ್ಮಣನು ಶಿಲೆಯ ಬಳಿ ಬರಲು ಸ್ವಾಮಿಯು ಕ್ಷಣಾ ಮಾತ್ರವೇ ಸರ್ಪಸ್ವರೂಪದಲಿ ದರ್ಶನ ನೀಡಿದನು. ನಂತರದಲ್ಲಿ ಈರ್ವರೂ ಸಂಡೂರಿನತ್ತ ಪ್ರಯಾಣಾ ಬೆಳೆಸಿದರು.
    ಹೀಗೆ ಹಲವು ದಿನಗಳ ಪ್ರಯಾಣದ ಬಳಿಕ ಸಂಡೂರು ತಲುಪಿದ ಆ ಇಬ್ಬರಿಗೂ ಅಲ್ಲಿನ ರಾಜರು ದರ್ಶನ ನೀಡಿ ಬಂದ ಕಾರಣಾವನ್ನು ಕೇಳಲಾಗಿ ಇಬ್ಬರೂ ತಮಗೆ ಸ್ವಾಮಿಯು ಅರುಹಿದ ಎಲ್ಲಾ ವಿಚಾರಗಳನ್ನೂ ಹೇಳಿದರು, ಮತ್ತು “ತಾವು ದಯವಿಟ್ಟು ಆ ಸ್ಥಳಕ್ಕೆ ಆಗಮಿಸಬೇಕು” ಎಂದು ಬೇಡಿಕೊಂಡರು. ಆದರೆ ರಾಜರು ಮಾತ್ರ “ನೋಡಿ ನಮಗಿರುವ ರಾಜಕಾರ್ಯಗಳನ್ನೆಲ್ಲಾ ಬಿಟ್ಟು ಇಷ್ಟು ಸಣ್ಣ ವಿಚಾರಕ್ಕೆ ಅಷ್ಟು ದೂರ ಬರಲು ಸಾಧ್ಯವಿಲ್ಲ. ತಮಗೆ ಈ ಕಾರ್ಯಕ್ಕೆ ಏನೇನು ಅನುಕೂಲಗಳು ಬೇಕೋ ಎಲ್ಲವನ್ನೂ ಮಾಡಿಕೊಡುತ್ತೇವೆ, ನೀವೇ ಆ ಕೆಲಸವನ್ನು ಮಾಡಿರಿ” ಎಂದು ಅಪ್ಪಣೆ ಕೊಡಿಸಿದರು. “ಸ್ವಾಮಿಯ ಕೆಲಸವನ್ನು ನಾವೇ ಮಾಡುವುದಾದಲ್ಲಿ ನಮ್ಮಲ್ಲಿ ಸಲಕರಣೆಗಳಿಲ್ಲವೆ? ಅದಕ್ಕಾಗಿ ನಿಮ್ಮಲ್ಲಿಗೆ ಬರಬೇಕಿದ್ದಿತೆ? ಸ್ವಾಮಿಯ ಇಚ್ಚೆ ನಿಮ್ಮಿಂದಲೇ ಆ ಕೆಲಸವಾಗಬೇಕೆಂದಿರುವಾಗ ನಮ್ಮಿಂದದು ಸಾಧ್ಯವೆ? ಬರುವುದಾದಲ್ಲಿ ಬನ್ನಿ, ಇಲ್ಲವೇ ನಿಮ್ಮ ಇಚ್ಚೆ, ನಮಗೆ ಅಪ್ಪಣೆ ಕೊಡಿ” ಎಂದು ಹೇಳಿದ ವರ್ತಕ ಹಾಗೂ ವಿಪ್ರರು ಅಲ್ಲಿಂದ ಹೊರಟರು.
    ಮತ್ತೆ ಅದೇ ರಾತ್ರಿ ರಾಜರ ಸ್ವಪ್ನದಲ್ಲಿ ಸ್ವಾಮಿಯು ಉಗ್ರ ರೂಪಿಯಾಗಿ ಕಾಣಿಸಿಕೊಂಡು “ನೀನು ನನ್ನನ್ನು ತಿರಸ್ಕರಿಸಿದ್ದೀಯೆ, ನಿನ್ನ ಇಡೀ ರಾಜ್ಯಕೋಶ, ಪುತ್ರ, ನಿತ್ರ, ಕಳಾತ್ರಾದಿಗಳು ಕಷ್ಟಕ್ಕೆ ಸಿಲುಕಿ ನಾಶವಾಗುತ್ತದೆ” ಎನ್ನಲು ರಾಜರಿಗೆ ಕೂಡಲೇ ಎಚ್ಚರವಾಗಿ ಸ್ವಾಮಿಯಲ್ಲಿ ಕ್ಷಮೆಯಾಚಿಸಿ ಆ ಈರ್ವರನ್ನು ಹುಡುಕಿಸಿ ಕರೆತಂದು ಇನ್ನೊಮ್ಮೆ ಅವರೀರ್ವರನ್ನು ಯಥೋಚಿತವಗಿ ಸತ್ಕರಿಸಿ ತಕ್ಷಣಾ ಅವರೊಡನೆ “ಪ್ರಯಾಣಕ್ಕೆ ಸಿದ್ದರಾಗಿ ಬರುವೆವು” ಎಂದರು.
    ಸರಿಸುಮಾರು ಮಧ್ಯಾಹ್ನ ಮೂರರ ಸುಮಾರಿಗೆ ಕ್ಷೇತ್ರವನ್ನು ತಲುಪಿದ ರಾಜ ಪರಿವಾರ ಸ್ವಾಮಿಯಿರುವ ಸ್ಥಳದ ಶೋಧನೆಯಲ್ಲಿ ತೊಡಗಿತು. ಆದರೆ ಎಲ್ಲಿ ನೋಡಿದರಲ್ಲಿ ಸರ್ಪಾಕೃತಿಯ ಕಲ್ಲುಗಳೇ ಕಾಣುತ್ತಿರಲಾಗಿ ಮೂಲ ಸ್ವಾಮಿಯ ನೆಲೆ ಹುಡುಕುವುದೇ ಬಹಳ ತ್ರಾಸವಾಯಿತು. ಪರಿವಾರದವರಿಗೆಲ್ಲಾ ಈ ಹುಡುಕಾಟದಿಂದಾಗಿ ಬಹಳ ದಣಿವಾಗಲು ತೊಡಗಿತು. ಕಡೆಗೆ ಸಂಜೆಯಾಗುತ್ತಿದ್ದಂತೆ ಹುಡುಕಾತಕ್ಕೆ ಅಲ್ಪವಿರಾಮವನ್ನು ನೀಡಿ ಅಡಿಗೆ ಮಾಡಲು ತೊಡಗಿದರು. ಅದಕ್ಕಾಗಿ ಒಂದು ದೊಡ್ದ ಕಲ್ಲು ಗುಂಡು ಇನ್ನೆರಡು ಸಣ್ಣ ಗುಂಡುಗಳನ್ನು ಸೇರಿಸಿ ಒಲೆಯನ್ನು ರಚಿಸಿ ಪದಾರ್ಥಗಳನ್ನು ಬೇಯಲು ಇಟ್ತರು. ಹೀಗೆ ಸ್ವಲ್ಪ ಸಮಯದ ಬಳಿಕ ಪದಾರ್ಥಗಳು ಬೆಂದಿವೆಯೇನೋ ಎಂದು ಪರೀಕ್ಷಿಸಲು ಮುಚ್ಚಿದ ತಟ್ಟೇಯನ್ನು ತೆಗೆದು ನೋಡಲು ಎಲ್ಲಾ ಆಹಾರವೂ ರಕ್ತವರ್ಣವಾಗಿದ್ದಿತು. ಇದರಿಂದ ಗಾಬರಿ ಹೊಂದಿದ ರಾಜರು ಇಲ್ಲಿಯೇ ಸ್ವಾಮಿಯು ಇರುವನೆಂಬ ನಿರ್ಧಾರಕ್ಕೆ ಬಂದು ಪರಿಶೀಲನೆಗೆ  ತೊಡಗಿದರು. ಅದಾಗ ಅಲ್ಲಿದ್ದ ಹುತ್ತದ ಕೋವಿಗಳ ದರ್ಶನವಾಯಿತು.
    ಇದೇ ಊರಿನಲ್ಲಿದ್ದ ಗೊಲ್ಲರ ಹುಡುಗನೋರ್ವ ತನ್ನ ಹಸುಗಳನ್ನು ಮೇಯಿಸಲು ಇಲ್ಲಿಗೆ ಬರುತ್ತಿರಲು ಸಂಜೆಯ ವೇಳೆ ದನಗಳನ್ನೆಲ್ಲಾ ಮನೆಗೆ ವಾಪಾಸು ಅಟ್ಟುವ ಸಮಯದಲ್ಲಿ ಒಂದು ಹಸುವು ಮಾತ್ರ ತನ್ನ ಗುಂಪಿನಿಂದ ಬೇರೆಯಾಗಿ ಈ ಹುತ್ತದ ಬಳಿ ಬಂದು ಹುತ್ತಕ್ಕೆ ಸರಿಯಾಗಿ ತನ್ನ ಕೆಚ್ಚ್ಚಲನ್ನು ಹಿಡಿದು ಹಾಲು ಸುರಿಸುತ್ತಿದ್ದಿತು. ಈ ಬಗೆಯಲ್ಲಿ ಹಸುವು ಹಾಲನ್ನೆರೆಯುವ ಕಾರ್ಯವು ಬಹಳ ದಿನಗಳಿಂದ ನಡೆಯುತ್ತಿರಲು ಆ ಊರಿನ ಗೊಲ್ಲರು ಸಹ ಹಸುವು ತನ್ನಲ್ಲಿನ ಹಾಲನ್ನು ಏನು ಮಾಡುತ್ತಿದೆ ಎನ್ನುವುದನ್ನು ಪರೀಕ್ಷಿಸುವ ಸಲುವಾಗಿ ಅದೇ ದಿನ ಅಲ್ಲಿಗೆ ಬಂದಿದ್ದರು. ಆ ದಿನದ ಸಂಜೆಯಲ್ಲಿಯೂ ಎಂದಿನಂತೆ ಆ ಹಸುವು ಹುತ್ತದ ಬಳಿ ಸಾರಿ ಅಲ್ಲಿ ಹಾಲನ್ನು ಸುರಿಸುತ್ತಿರಲು ಅದನ್ನು ನೋಡಿದ ರಾಜರೂ ಮಂತ್ರಮುಗ್ದರಾಗಿ ಭಕ್ತಿಯಿಂದ ಸ್ವಾಮಿಯನ್ನು ಸ್ತುತಿಸಿದರು.
    ಆ ದಿನ ರಾತ್ರಿ ರಾಜರ ಸ್ವಪ್ನದಲ್ಲಿ ದರ್ಶನವನ್ನಿತ್ತ ಕುಮಾರಸ್ವಾಮಿಯು “ನನ್ನ ಮೇಲಿರುವ ವಲ್ಮೀಕವನ್ನು ತೆಗೆ, ನಾನು ಇಲ್ಲಿ ಸರ್ಪ ಸ್ವರೂಪಿಯಾಗಿ ಲಕ್ಷ್ಮಿ ನರಸಿಂಹ ಸಮೇತನಾಗಿ ನೆಲೆಸಿದ್ಜ಼ೇನೆ” ಎಂದು ಆದೇಶಿಸಿದನು. ಅದಾದ ಮರುದಿನ ಗೊಲ್ಲರನ್ನೂ ಸೇರಿಸಿಕೊಂಡು ರಾಜರು ವಲ್ಮೀಕವನ್ನು ತೆಗೆಯಲು ಲಕ್ಷ್ಮೀನರಸಿಂಹ ಸಮೇತ ಸುಬ್ರಹ್ಮಣ್ಯ ಸ್ವಾಮಿಯ ದರ್ಶನವಾಯಿತು.
    ಇದಾದ ಬಳಿಕ ರಾಜರು ತಮ್ಮೆಲ್ಲಾ ಪರಿವಾರದವರೊಡಗೂಡಿ ಸ್ವಾಮಿಗೆ ದೇವಾಲಯವೊಂದನ್ನು ನಿರ್ಮಿಸಿ ಪೂಜಾದಿಗಳಿಗೆ ವ್ಯವಸ್ಥೆಯನ್ನು ಮಾಡಿಸಿದರು.
    ಅಂದಿನಿಂದಿಂದಿನವರೆವಿಗೆ ಸ್ವಾಮಿಯು ತನ್ನ ಭಕ್ತರಿಂದ ಸೇವೆಕೊಂಡು ಅವರವರ ಇಷ್ಟಾರ್ಥಗಳನ್ನು ಬೆರವೇರಿಸುತ್ತಾ ಬಂದಿರುತ್ತಾರೆ.
    ನಮಸ್ಕಾರ.

1 comment: