Thursday, January 09, 2014

ನಮ್ಮಲ್ಲಿನ ಸ್ಥಳ ಪುರಾಣಾಗಳು(Myths) -16

ತಿರುವನಂತಪುರ(Tiruvanantapuram)
    ನನ್ನೆಲ್ಲಾ ಆತ್ಮೀಯ ಸ್ನೇಹಿತರಿಗೂ ನನ್ನ ನಮಸ್ಕಾರಗಳು
    ‘ದೇವರ ಸ್ವಂತ ನಾಡು’ ಕೇರಳದ ರಾಜಧಾನಿ ಶ್ರೀ ಕ್ಷೇತ್ರ ತಿರುವನಂತಪುರ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಪ್ರಸಿದ್ದ ಯಾತ್ರಾಸ್ಥಳವೆನಿಸಿದೆ. ಕಳೆದ ವರ್ಷಗಳಲ್ಲಿ ಅನಂತ ಪದ್ಮನಾಭಸ್ವಾಮಿಯ ಸನ್ನಿಧಿಯಲ್ಲಿ ಸಾಕಷ್ಟು ಪ್ರಮಾಣದ ನಿಧಿಯು ಸಿಕ್ಕಿದ ಮೇಲೆ ಶ್ರೀ ಕ್ಷೇತ್ರಕ್ಕೆ ಇನ್ನಷ್ಟು ಮಹತ್ವವು ಬಂದಿದೆ.  ತಿರುವಾಂಕೂರು ಸಂಸ್ಥಾನದ ದೊರೆಗಳಿಂದ ನಿರ್ಮಾಣಗೊಂಡ ಈ ಭವ್ಯ ದೇವಾಲಯಕ್ಕೆ ಅದರದೇ ಆದ ಐತಿಹ್ಯವಿದೆ. ತುಳು ಭಾಷಿಗರಲ್ಲಿ ಜನಜನಿತವಾಗಿರುವ ದಿವಾಕರ ಮುನಿಗಳ ಕಥೆಯು ಒಂದಾದರೆ, ನಂಬೂದರಿ ಬ್ರಾಹ್ಮಣರ ಮೂಲ ಪುರುಷರೆನಿಸಿದ ಬಿಲ್ವಮಂಗಳ ಸ್ವಾಮಿಗಳ ಕಥೆಯೂ ಕೂಡ  ಇದಕ್ಕೆ ಸೇರಿಕೊಂಡಿದೆ.
    ಈಗ ಕೇರಳದ ಉತ್ತರದ ತುದಿಯಲ್ಲಿರುವ ಕಾಸರಗೋಡು ಜಿಲ್ಲೆಯಲ್ಲಿನ ಶ್ರೀ ಅನಂತಪುರ ಕ್ಷೇತ್ರವು ಶ್ರೀ ಕ್ಷೇತ್ರ ತಿರುವನಂತಪುರದ ಮೂಲ ಕ್ಷೇತ್ರವೆನ್ನಲಾಗಿದೆ. ಶ್ರೀ ಅನಂತಪದ್ಮನಾಭ ಸ್ವಾಮಿಯು ಮೂಲದಲ್ಲಿ ಅನಂತಪುರದಲ್ಲಿ ನೆಲೆಸಿರುವವನು ನಂತರದಲ್ಲಿ ಅಲ್ಲಿಂದ ದಕ್ಷಿಣ ದಿಕ್ಕಿನೆಡೆ ಬಂದು ಈಗಿನ ತಿರುವನಂತಪುರದಲ್ಲಿ ನೆಲೆಯಾದನೆಂದು ನಂಬಲಾಗಿದೆ.



ಶ್ರೀ ದಿವಾಕರ ಮುನಿಗಳ ಕಥೆ
    ಶ್ರೀ ದಿವಾಕರನೆಂಬ ಹೆಸರಿನ ಮುನಿಕುಲೋತ್ತಮರು ತಾವು ಬಹು ದೊಡ್ಡ ವಿಷ್ಣು ಭಕ್ತರಾಗಿದ್ದರು. ದಿನವೂ ಬಹಳ ನೇಮ ನಿಷ್ಟೆಗಳಿಂದ ಶ್ರೀ ಮಹಾವಿಷ್ಣುವಿನ ಸೇವೆಯನ್ನು ನೆರವೇರಿಸುತ್ತಾ ಈಗಿನ ಅನಂತಪುರದಲ್ಲಿ ವಾಸವಿದ್ದರು. ಹೀಗಿರಲು ಅದೊಂದು ದಿನ ಮಹಾವಿಷ್ಣುವು ತಾನು ಬಹಳ ಸುಂದರವಾದ ಒಂದು ಮಗುವಿನ ರೂಪದಲ್ಲಿ ಆ ತಪಸ್ವಿಗಳೆದುರು ಕಾಣಿಸಿಕೊಂಡಾನು. ದಿವಾಕರ ಮುನಿಗಳಿಗೆ ಆ ಮಗುವನ್ನು ಕಂಡು ಬಹಳ ಸಂತೋಷವಾಗಿ ತಮ್ಮೊಡನೆಯೇ ಇರುವಂತೆ ಕೇಳಿಕೊಂಡರು. ಆಗ ಆ ಶಿಶುವು “ನಾನು ನಿಮ್ಮೊಂದಿಗಿರಲು ನನ್ನದೇನೂ ಅಭ್ಯಂತರವಿಲ್ಲ, ಆದರೆ ನಾನೇನೇ ಚೇಷ್ಟೆಗಳನ್ನು ಮಾಡಿದರೂ ನನ್ನನ್ನು ಪ್ರಶ್ನಿಸುವುದಾಗಲೀ, ದಂಡಿಸುವುದಾಗಲೀ ಮಾಡಕೂಡದು” ಎಂದಿತು. ಈ ಷರತ್ತಿಗೆ ಒಪ್ಪಿಕೊಂಡ ಮುನಿಗಳ ಆಶ್ರಮದ ಪರಿಸರವ್ದಲ್ಲೇ ಆ ಮಗುವು ಆಟಾವಾಡಿಕೊಂಡು ಇರತೊಡಗಿತು.
    ಹೀಗೆ ದಿನಗಳು, ತಿಂಗಳುಗಳು, ಉರುಳುತ್ತಿರಲು ಅದೊಂದು ದಿನ ಮುನಿಗಳು ಎಂದಿನಂತೆ ತಮ್ಮ ಸ್ನಾನಾದಿಗಳನ್ನು ಪೂರೈಸಿಕೊಂಡು ಶ್ರೀ ಮಹಾವಿಷ್ಣುವಿನ ಪೂಜೆಯಲ್ಲಿ ನಿರತರಾಗಿದ್ದರು. ಪೂಜೆಯ ಭಾಗವಾಗಿ ಶ್ರೀ ದೇವರ ನೈವೇದ್ಯವಾಗಿ ತೆಗೆದಿರಿಸಿದ್ದ ಫಲಗಳನ್ನು ತೆಗೆದುಕೊಂಡ ಆ ಮಗುವು ಒಂದರಲ್ಲಿನ ಒಂದು ಫಲವನ್ನು ತಾನು ನೈವೇದ್ಯಕ್ಕೆ ಮೊದಲೇ ಭಂಜಿಸಿತು, ಅಷ್ಟೇ ಅಲ್ಲದೆ ತಾನು ಅರ್ಧ ತಿಂದಂತಹಾ ಹಣ್ಣಿನ ಚೂರೊಂದನ್ನು ಥಟ್ತನೆ ನೈವೇದ್ಯದ ಪಾತ್ರೆಗೆ ಉಗುಳಿತು. ಇದರಿಂದಾಗಿ ಕುಪಿತಗೊಂಡ ಶ್ರೀ ದಿವಾಕರ ಮುನಿಗಳು ತಾವು ಪೂಜೆಯಲ್ಲಿ ತೊಡಗಿರುವಂತೆಯೇ ತಮ್ಮ ಎಡ ಮೊಣಕೈಯ್ಯಿಂದ ಒಂದೇಟು ಹಾಕಿದರು. ಇದರಿಂದ ಬೇಸರಗೊಂಡ ಆ ಶಿಶುವು “ನೀವಿಂದು ನಿಮ್ಮ ಷರತ್ತನ್ನು ಉಲ್ಲಂಘಿಸಿದ್ದೀರಿ, ನಾನಿನ್ನು ನಿಮ್ಮೊಡನಿರಲು ಸಾಧ್ಯವಿಲ್ಲ” ಎನ್ನುತ್ತಲೇ ಅಲ್ಲೇ ಸನಿಹದಲ್ಲಿದ್ದ ಗುಹೆಯೊಂದರಲ್ಲಿ ಅಂತರ್ಧಾನವಾಯಿತು. ಇದರಿಂದ ಬಲು ಬೇಸರಗೊಂಡ ಮುನಿಗಳು ಪರಿಪರಿಯಾಗಿ ನೊಂದುಕೊಂಡರು.
    ಅದಾಗಿ ಸ್ವಲ್ಪ ಸಮಯದ ಬಳಿಕ ಮುನಿಗಳೊಂದು ಅಶರೀರವಾಣಿಯನ್ನು ಆಲಿಸಿದರು. ಅದರಂತೆ “ಹೇ ಮುನಿವರ್ಯಾ, ನಾನಿನ್ನು ನಿನಗೆ ಈ ಸ್ಥಳದಲ್ಲಿ ದೊರೆಯಲಾರೆ, ನನ್ನನ್ನು ನೋಡಬೇಕೆಂದರೆ ಈ ಗುಹಾಮಾರ್ಗವಾಗಿ ಅನಂತನಕಾಡಿಗೆ(ಇಂದಿನ ತಿರುವನಂತಪುರ)  ಬಾ. ಅಲ್ಲಿ ನಾನು ನಿನಗೆ ದರ್ಶನ ನೀಡುವೆನು” ಎಂದಂತಾಯಿತು. ಇದರಿಂದ ಬಹಳವೇ ಆಶ್ಚರ್ಯಗೊಂಡ ಮುನಿಗಳು ಇಷ್ಟು ದಿನ ನಮ್ಮೊಂದಿಗಿದ್ದ ಆ ಶಿಶುವು ಬೇರಾರೂ ಆಗಿರದೇ ಸ್ವತಃ ತಾವು ಆರಾಧಿಸುವ ಶ್ರೀ ಮಹಾವಿಷ್ಣುವೇ ಆಗಿದ್ದನೆನ್ನುವುದನ್ನು ಅರಿತರು. ಮತ್ತೆ ತಡಮಾಡದೆ ಅಶರೀರವಾಣಿಯ ಸಲಹೆಯಂತೆ ಮಗುವು ಅಂತರ್ಧಾನವಾಗಿದ್ದ ಆ ಗುಹೆಯ ಮಾರ್ಗವಾಗಿಯೇ ‘ಅನಂತನಕಾಡು’ ವಿನ ಮಾರ್ಗವನ್ನು ಹಿಡಿದರು.
    ಹಲವು ದಿನಗಳ ಪಯಣದ ಬಳಿಕ ದಕ್ಷಿಣ ಸಮುದ್ರ ತೀರದಲ್ಲಿನ ಮಾವಿನಮರಗಳಿಂದ ಕೂಡಿದ ದಟ್ಟ ಕಾಡಿನ ಬಳಿ ಬಂದು ಸೇರಿದ ದಿವಾಕರ ಮುನಿಗಳಿಗೆ ಮತ್ತೆ ಅದೇ ಶಿಶುವು ಕಾಣಿಸಿಕೊಂಡಿತು. ಇದರಿಂದ ಬಹಳ ಆನಂದ ತುಂದಿಲರಾದ ಮುನಿಗಳು ಆ ಶಿಶುಸ್ವರೂಪದ ಮಹವಿಷ್ಣುವನ್ನು ಮನಃಪೂರ್ತಿಯಾಗಿ ಸ್ತುತುಸಿದರು. ಹೀಗೆ ಸ್ತುತಿಸಿದ ಬಳಿಕ ಆ ಶಿಶುವು ಅಲ್ಲಿದ್ದ ಒಂದು ಮಾವಿನ ಮರದ ಪೊದೆಯೊಂದರೊಳಗೆ ಐಕ್ಯವಾಯಿತು. ಮತ್ತೆ ಅದೇ ಸ್ಥಳದಲ್ಲಿ ಶ್ರೀ ಮುನಿಗಳಿಗೊಂದು ಮಹಾವಿಷ್ಣುವಿನ ಮೂರ್ತಿಯು ಕಂಡಿತು. ಮುನಿಗಳು ಇದರಿಂದ ಸಂಪ್ರೀತಗೊಂಡು ತಾವು ತಮ್ಮ ಜೀವನದ ಅಂತ್ಯದವರೆಗೂ ಅಲ್ಲೇ ನಿಂತು ಆ ಮೂರ್ತಿಯಲ್ಲೇ ಶ್ರೀ ಮಹಾವಿಷ್ಣುವನ್ನು ಕಾಣುತ್ತಾ ನಿತ್ಯವೂ ಶ್ರದ್ದಾ ಭಕ್ತಿಗಳಿಂದ ಆರಾಧಿಸುತ್ತಾ ನಡೆದರು.

ಬಿಲ್ವಮಂಗಳ ಸ್ವಾಮಿಗಳ ಕಥೆ
    ಬಿಲ್ವಮಂಗಳ ಸ್ವಾಮಿಗಳು ಅಥವಾ ವಿಲ್ವಮಂಗಲನಾಥ ಸ್ವಾಮಿಗಳು ಎಂದು ಸಂಬೋಧಿಸಲ್ಪಡುವ ಮುನಿಗಳು ಮಹಾನ್ ವಿಷ್ಣುಭಕ್ತರಾಗಿದ್ದರು. ಈ ಮುನಿಗಳಿಗೂ ಸಹ ಮೇಲಿನ ಕಥೆಯಲ್ಲಿ ಉಲ್ಲೇಖವಾದಂತೆ ಶ್ರೀ ಮಹಾವಿಷ್ಣುವು ಶಿಶುವಿನ ಸ್ವರೂಪದಲ್ಲಿ ಕಾಣಿಸಿಕೊಂಡನು. ಹಾಗೆಯೇ ಮುಂದೊಂದು ದಿನ ಆ ಶಿಶುವಿನಲ್ಲೆನ ಪರಮಾತ್ಮನ ಅಂಶವಿ ಬಿಲ್ವಮಂಗಳಾ ಸ್ವಾಮಿಗಳ ದಿವ್ಯದೃಷ್ಟಿಗೆ ಗೋಚರಿಸಿತು. ಅಲ್ಲದೆ ಸ್ವಾಮಿಗಳಿಗೆ ಶ್ರೀ ಮಹಾವಿಷ್ಣುವು ತಾನು ಅನಂತಶಯನನ ಸ್ವರೂಪದಲ್ಲಿ ದರ್ಶನ ನೀಡಿದನು.
    ಮಹಾವಿಷ್ಣುವಿನ ಅನಂತಶಯನ ಸ್ವರೂಪದ ದರ್ಶನದಿಂದ ಸಂತುಷ್ಟರದ ಬಿಲ್ವಮಂಗಳ ಸ್ವಾಮಿಗಳು ತಾವು ಅಲ್ಲೇ ಬಿದ್ದಿದ್ದ ಮಾವಿನ ಹಣ್ಣುಗಳನ್ನು ತೆಂಗಿನ ಗೆರಟೆಯಲ್ಲಿಟ್ಟು ಶ್ರೀ ಹರಿಗೆ ಸಮರ್ಪಿಸಿದರು. ಮತ್ತು ಅಲ್ಲಿನ ಆಡಳಿತವನ್ನು ನಡೆಸುತ್ತಿದ್ದ ರಾಜರುಗಳ ಸಹಕಾರದೊಂದಿಗೆ ಶ್ರೀ ಸ್ವಾಮಿಗೆ ದೇವಾಲಯವನ್ನು ನಿರ್ಮಿಸಿ ಶಾಶ್ವತ ಪೂಜೆಗೆ ವ್ಯವಸ್ಥೆಯನ್ನು ಮಾಡಿದರು.
    ಅಲ್ಲಿಂದ ಇಂದಿನವರೆವಿಗೂ ದೇವಾಲಯದಲ್ಲಿ ಮಾವಿನ ಹಣ್ಣಿನ ನ್ನೈವೇದ್ಯವನ್ನು ನಡೆಸಿಕೊಂಡು ಬರಲಾಗುತ್ತಿದೆ. ಮಾವಿನ ಹಣ್ಣು ಸಿಗದೇ ಇದ್ದ ಸಮಯಗಳಲ್ಲಿ ಮಾವಿನ ಚಿಕ್ಕ ಗಾತ್ರದ ಕಾಯಿಯನ್ನಾದರೂ ನೈವೇದ್ಯಕ್ಕಾಗಿ ಉಪಯೋಗಿಸಲಾಗುತ್ತದೆ.
    ಮುಂದೆ ತಿರುವಾಂಕೂರು ಸಂಸ್ಥಾನದ ಆಡಳಿತದ ಅವಧಿಯಲ್ಲಿ ದೇವಾಲಯವು ಸಾಕಷ್ಟು ಅಭಿವೃದ್ದಿಯನ್ನು ಕಂಡಿತು. ಇಲ್ಲ್ ಮುಖ್ಯವಾಗಿ ಗಮನಿಸಬೇಕಾದುದೆಂದರೆ ತಿರುವಾಂಕೂರಿನ ಅರಸರಾರೂ ತಾವು ನೇರವಾಗಿ ಆಡಳಿತ ನಡೆಸುತ್ತಿರಲಿಲ್ಲ ಬರದಿಗೆ ಶ್ರೀ ಅನಂತಪದ್ಮನಾಭಸ್ವಾಮಿಯ ಹೆಸರಿನಲ್ಲೇ ಆಳ್ವಿಕೆ ಸಾಗುತ್ತಿತ್ತು. ಅಂದಹಾಗೆಯೇ ಅಂದು ಬಿಲ್ವಮಂಗಳ ಸ್ವಾಮಿಗಳಿಗೆ ದೊರಕಿದ್ದ ಮೂಲ ವಿಗ್ರಹವನ್ನು ದೇವಾಲಯದ ಸಂಪತ್ತಿನ ರಕ್ಷಕನಾದ ಶ್ರೀ ನರಸಿಂಹ ದೇವರ ಪೀಠದ ತಳದಲ್ಲಿ ಭೂಗತವನ್ನಾಗಿಸಲಾಗಿದೆ. ಮತ್ತು ಈಗಿನ ಗರ್ಭಗೃಹದಲ್ಲಿರುವ ಸುಮಾರು 21 ಅಡಿ ಉದ್ದದ ಶ್ರೀ ಅನಂತಪದ್ಮನಾಭ ವಿಗ್ರಹವು ಕಟು ಷರ್ಕರ ಮೂಲದ್ರವ್ಯಗಳಿಂದ ಕೂಡಿದ್ದಾಗಿದ್ದು ಈ ವಿಗ್ರಹಕ್ಕೆ ಯಾವುದೇ ಬಗೆಯ ಅಭಿಷೇಕ ಪೂಜೆಗಳಿರುವುದಿಲ್ಲ. ಇದರ ಬದಲಾಗಿ ಉತ್ಸವ ಮೂರ್ತಿಗೆ ಅದನ್ನು ನೆರವೇರಿಸಲಾಗುವುದು.
    ಬಿಲ್ವಮಂಗಲ ಸ್ವಾಮಿಗಳಿಂದ ಆರಂಭಗೊಂಡ ಅರ್ಚಕ ಪರಂಪರೆಯೇ ಇಂದಿಗೂ ಮುಂದುವರಿದುಕೊಂಡು ಬರುತ್ತಿದ್ದು ಇಂದಿನ ಮುಖ್ಯ ಅರ್ಚಕರು ಸಹ ನಂಬೂದರಿ ಬ್ರಾಹ್ಮಣರಾಗಿರುವುದು ದಾಖಲಾರ್ಹ ಸಂಗತಿ.
    ಇಂದು ಭಾರತದಲ್ಲಿ ಅತ್ಯಂತ ಶ್ರೀಮಂತ ದೇವಾಲಯವೆನ್ನುವ ಗರಿಮೆಗೆ ಪಾತ್ರವಾಗಿರುವ ಶ್ರೀ ಅನಂತಪದ್ಮನಾಭ ಸ್ವಾಮಿಯ ದರ್ಶನಕ್ಕೆ ದಿನನಿತ್ಯವೂ ದೇಶದ ನಾನಾ ಮೂಲೆಗಳಿಂದ ಲಕ್ಷ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಆಗಮಿಸುತ್ತಾರೆ. ಹೀಗೆ ಬಂದ ತನ್ನ ಯಾರೊಬ್ಬ ನಿಜ ಭಕ್ತನಿಗೂ ಶ್ರಿ ಅನಂತಪದ್ಮನಾಭನು ನಿರಾಶೆ ಮಾಡದೆ ಅವರವರ ಕೋರಿಕೆಯನ್ನು ನಡೆಸಿಕೊಡುತ್ತಾ ವಿರಾಜಮಾನನಾಗಿದ್ದಾನೆ.
    ನಮಸ್ಕಾರ.

No comments:

Post a Comment