Wednesday, October 30, 2013

ನಮ್ಮಲ್ಲಿನ ಸ್ಥಳ ಪುರಾಣಗಳು(Myths)- 10

ಮಾತೃ ಗಯಾ(Mathru Gaya)

    ಗುಜರಾತ್ ರಾಜ್ಯದ ಉತ್ತರದಲ್ಲಿರುವ ಸಿದ್ದಾಪುರದ ಸಮೀಪವಿರುವ ಪವಿತ್ರ ಕ್ಷೇತ್ರ ಮಾತೃ ಗಯಾ. ಇಲ್ಲಿ ಪ್ರಧಾನವಾಗಿ ಯಾರು ತಮ್ಮ ತಾಯಿಯವರ ಶ್ರಾಧ್ದಾದಿ ಕರ್ಮಗಳನ್ನು ನೆರವೇರಿಸಿ ಪಿಂಡ ಪ್ರಧಾನವನ್ನು ಮಾಡುತ್ತಾರೋ ಅಂತಹಾ ತಾಯಂದಿರಿಗೆ ಮೋಕ್ಷವು ಲಭಿಸುತ್ತದೆನ್ನಲಾಗಿದೆ. ಇಲ್ಲಿರುವ ಬಿಂದು ಸರೋವರದಲ್ಲಿ ದಿನವೂ ಸಾವಿರಾರು ಮಂದಿ ಭಕ್ತರು ಮಿಂದು ತಮ್ಮ ತಮ್ಮ ತಾಯಿಯವರ ಕರ್ಮಗಳಾನ್ನು ನೆರವೇರಿಸುತ್ತಾರೆ.
    ಸೃಷ್ಟಿಯ ಆದಿಮ ಕಾಲದಲ್ಲಿ ಬ್ರಹ್ಮದೇವರ ಮಾನಸ ಪುತ್ರರಾದ ಕರ್ಧಮ ಋಷಿ ಹಾಗೂ ಭಗವಾನ್ ಮನುವಿನ ಮಗಳಾದ ದೇಹುತಿಯವರುಗಳು ವಿವಾಹವಾದರು. ಹೀಗೆ ವಿವಾಹವಾದ ಆ ದಂಪತಿಗಳಿಗೆ ಒಂಭತ್ತು ಜನ ಹೆಣ್ಣುಮಕ್ಕಳು ಜನಿಸಿದರು. ಆದರೆ ದಂಪತಿಗಳು ತಮಗೊಂದು ಗಂಡು ಸಂತಾನವಿಲ್ಲದುದಕ್ಕೆ ಸದಾ ಕಾಲ ಕೊರಗುತ್ತಿದ್ದರು. ಕಡೆಗೆ ಒಂದು ದಿನ ಈರ್ವರೂ ಭಗವಾನ್ ವಿಷ್ಣುವಿನ ಮೊರೆಹೋಗಲು ನಿರ್ಧರಿಸಿ ಸತತ ಹತ್ತು ವರ್ಷಗಳ ಕಾಲ ವಿಷ್ಣುವಿನ ಕುರಿತು ಘೋರ ತಪಸ್ಸನ್ನಾಚರಿಸಿದರು. ದಂಪತಿಗಳ ಭಕ್ತಿಗೆ ಮೆಚ್ಚಿದ ಮಹಾವಿಷ್ಣುವು ತಾನು ಸ್ವತಃ ಆ ದಂಪತಿಗಳೆದುರು ಪ್ರಕಟಗೊಂಡು ‘ತಮಗೇನು ವರವು ಬೇಕು?’ ಎನ್ನುವುದಾಗಿ ಕೇಳಲು ದೇಹುತಿಯು ‘ನಮಗೊಂದು ಗಂಡು ಮಗುವು ಬೇಕಾಗಿದೆ, ನೀನು ನನ್ನ ಗರ್ಭದಲ್ಲಿ ಹುಟ್ಟಿ ಬರಬೇಕು’ ಎಂದು ಬೇಡಿಕೊಳ್ಳಲು ಶ್ರೀ ಮಹಾವಿಷ್ಣುವು ಅದಕ್ಕೆ ಒಪ್ಪಿ ತಾನೇ ಸ್ವತಃ ದೇಹುತಿಯ ಗರ್ಭದಲ್ಲಿ ಕಪಿಲ ಮಹರ್ಷಿಯಾಗಿ ಜನ್ಮದಳೆಯುತ್ತಾನೆ.
    ಇದರಿಂದಾಗಿ ಸಂಪ್ರೀತಗೊಂಡ ಆ ದಂಪತಿಗಳು ತಾವು ಸಂತೋಷದಿಂದ ದಿನಗಳೆಯುತ್ತಾರೆ. ಹೀಗೆ ಹದಿನಾರು ವರುಷಗಳು ಕಳೆಯುತ್ತದೆ. ಅದಾಗ ಕಪಿಲ ಮಹರ್ಷಿಯು ಸಕಲ ಜ್ಞಾನ ಸಂಪನ್ನನಾಗುತ್ತಾನೆ ಮತ್ತು ತನ್ನ ತಾಯಿಗಾಗಿ ತಾನು ರಚಿಸಿದ ‘ಸಾಂಖ್ಯ ದ್ವಾರ ಸ್ತೋತ್ರ’ ವನ್ನು ತಾಯಿ ದೇಹುತಿಯ ಮುಂದೆ ವಾಚಿಸುತ್ತಾನೆ. ಅದರಿಂದ ಅತ್ಯಂತ ಆನಂದಗೊಂಡು ದೇಹುತಿಯ ಕಣ್ಣಾಲಿಗಳಲ್ಲಿ ನೀರು ತುಂಬಿಬರುತ್ತದೆ. ಹಾಗೆ ಆಕೆಯ ಕಣ್ಣೀರಿನ ಒಂದು ಹನಿ ಭೂಸ್ಪರ್ಷವಾಗಲಾಗಿ ಅಲ್ಲೊಂದು ಸರೋವರವು ನಿರ್ಮಾಣಗೊಳ್ಳುತ್ತದೆ.
    
    ಅದಾಗ ತಾಯಿ ದೇಹುತಿಯು ತನ್ನ ಮಗನನ್ನು ಹರಸುತ್ತಾ ‘ನೀನು ವಾಚಿಸಿದ ಈ ಸ್ತೋತ್ರದಿಂದ ನಾನು ಸಂಪ್ರೀತಗೊಂಡಿರುವೆನು, ನನ್ನ ಕಣ್ಣೀರಿನ ಹನಿಯಿಂದುಂಟಾದ ಈ ಸರೋವರವು ಮುಂದೆ “ಬಿಂದು ಸರೋವರ” ಎಂದು ಹೆಸರಾಗುವುದು. ಇಲ್ಲಿಗೆ ಬಂದು ಯಾರು ತಮ್ಮ ತಾಯಿಯವರ ಶ್ರಾಧ್ದ ಕರ್ಮಗಳನ್ನು ಮಾಡಿ ಪಿಂಡ ಪ್ರಧಾನವನ್ನು ನಡೆಸುತ್ತಾರೋ ಅಂತಹವರ ತಾಯಂದಿರಿಗೆ ಮೋಕ್ಷವು ಲಭಿಸಲಿದೆ. ಇದು ಯುಗ ಯುಗಾಂತರಗಳಿಗೂ ಸತ್ಯ,’  ಎನ್ನುತ್ತಾಳೆ.
    ಮುಂದೆ ಶ್ರೀವಿಷ್ಣು ತಾನು ಪರಷುರಾಮನ ಅವತಾರವೆತ್ತಿದ ಸಂದರ್ಭದಲ್ಲಿ ತಂದೆಯ ಮಾತಿನಂತೆ ತನ್ನ ಮಾತೃಶ್ರೀಯವರನ್ನು ಹತ್ಯೆ ಮಾಡಿದಾಗ ಅವರ ಶ್ರಾಧ್ದ ಕರ್ಮಗಳನ್ನು ಇದೇ ಬಿಂದು ಸರೋವರದಲ್ಲಿ ನಡೆಸಿ ಇಲ್ಲಿಯೇ ಪಿಂಡಪ್ರಧಾನಗೈದನೆಂದೆನ್ನಲಾಗಿದೆ.
    ಅಲ್ಲಿಂದ ಇಂದಿನವರೆಗೂವೇರಿಸಿ ಅವರ ದನವೂ ಸಾವಿರಾರು ಮಂದಿ ಇಲ್ಲಿಗೆ ಭೇಟಿ ನೀಡಿ ತಮ್ಮ ತಾಯಂದಿರ ಕರ್ಮಗಳನ್ನು ನೆರ್ವೇರಿಸುವುದರೊಂದಿಗೆ ತಮ್ಮ ತಮ್ಮ ತಾಯಂದಿರ ಮೋಕ್ಷಕ್ಕಾಗಿ ಪ್ರಾರ್ಥಿಸುತ್ತಾರೆ. 

Thursday, October 24, 2013

ದಾಸರ ದಾಸ ಸಂತ ಶ್ರೀ ಭದ್ರಗಿರಿ ಅಚ್ಯುತದಾಸರು

    ನಮಸ್ಕಾರ ಸ್ನೇಹಿತರೆ,
    ಕನ್ನಡ ಹರಿದಾಸ ಪರಂಪರೆ, ಕೀರ್ತನಾ ಲೋಕದ ಕೊಂಡಿಯೊಂದು ಕಳಚಿದೆ. ಸಂತ, ಹಿರಿಯ ಕೀರ್ತನೆಗಾರರಾದ ‘ಕೀರ್ತನ ಕೇಸರಿ’ ಭದ್ರಗಿರಿ ಅಚ್ಯುತದಾಸರು ತಮ್ಮ 83 ನೇ ವಯಸ್ಸಿನಲ್ಲಿ ತಾವು ಕಟ್ಟಿ ಬೆಳೆಸಿದ ಹರಿಕಥಾ ಪ್ರಪಂಚವನ್ನು ತೊರೆದು ಶ್ರೀಹರಿಯತ್ತ ನಡೆದಿದ್ದಾರೆ. ಕೀರ್ತನಾ ಕಲಾಪರಿಷತ್ ಗೌರವಾಧ್ಯಕ್ಷರಾಗಿದ್ದ ಸಂತ ಭದ್ರಗಿರಿ ಅಚ್ಯುತದಾಸರು ತಮ್ಮ ವಾಕ್ ಸಾಮರ್ಥ್ಯ, ಸಂಗೀತ, ಹಾಸ್ಯ ಚಟಾಕಿಗಳ ಮೂಲಕ ಜನಮಾನಸದಲ್ಲಿ ನೆಲೆಯೂರಿದ್ದರು. ಕನ್ನಡ, ಮರಾಠಿ, ಕೊಂಕಣಿ, ತುಳು ಹೀಗೆ ನಾನಾ ಭಾಷೆಗಳಾಲ್ಲಿ ಪ್ರೌಢಿಮೆ ಸಾಧಿಸಿದ್ದ ಸಂತ ಅಚ್ಯುತದಾಸರು ತಾವು ಹರಿವಂಶ, ಭಾಗವತ, ರಾಮಾಯಣ, ಮಹಾಭಾರತದ ತಾತ್ವಿಕ ಅಂಶಗಳನ್ನು ಸಾಮಾನ್ಯರ ಮನಮುಟ್ಟುವಂತೆ ವಿವರಿಸಿ ಹೇಳುವ ಸಾಮರ್ಥ್ಯವನ್ನು ಹೊಂದಿದ್ದರು.
    ಇಂದಿನ ಆಧುನಿಕ ಯುಗದಲ್ಲಿ ನಶಿಸುತ್ತಿರುವ ಸಂಕೀರ್ತನಾ ಕಲೆಯನ್ನು ಜನಪ್ರಿಯಗೊಳಿಸುವುದರಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದ ಅಚ್ಯುತದಾಸರು ತಮ್ಮ ಸಹೋದರ ದಿ. ಭದ್ರಗಿರಿ ಕೇಶವದಾಸರ ಜತೆಗೂಡಿ ಅನೇಕ ಹರಿಕಥಾ ಸಮ್ಮೇಳನಗಳಾನ್ನು ನಡೆಸಿದ್ದರು. ಅಣ್ಣ-ತಮ್ಮಂದಿರಿಬ್ಬರೂ ತಮ್ಮ ಸ್ವ ಪ್ರತಿಭೆಯಿಂದ ‘ಸಂತ’ ಪದವಿಗೆ ಭಾಜನರಾಗಿದ್ದರು. ಸಂತ ಭದ್ರಗಿರಿ ಕೇಶವ ದಾಸರು ವಿದೇಶಗಳಲ್ಲಿಯೂ ಆಂಗ್ಲ ಭಾಷೆಯಲ್ಲಿ ಸಂಕೀರ್ತನೆಗಳಾನ್ನು ನಡೆಸಿ ಪ್ರಸಿದ್ದರಾಗಿದ್ದರೆ ಸಂತ ಭದ್ರಗಿರಿ ಅಚ್ಯುತ ದಾಸರು ಭರತಖಂಡವ್ಯಾಪಿ ತಮ್ಮ ಹರಿಕಥಾ ಶ್ರವಣ ಮಾಡುವ ಮೂಲಕ ನಾಡಿನ ಮೂಲೆ ಮೂಲೆಗಳಾಲ್ಲಿ ಮನೆಮಾತಾಗಿದ್ದರು. 
ವ್ಯಕ್ತಿ ಪರಿಚಯ
    ಉಡುಪಿಯ ಸಮೀಪದ ಬ್ರಹ್ಮಾವರದ ಬಳಿಯಲ್ಲಿನ ಬೈಕಾಡಿ ಗ್ರಾಮದ ಪುಟ್ಟ ಹಳ್ಳಿಯಲ್ಲಿ ವೆಂಕಟರಮಣ ಪೈ ಹಾಗೂ ರುಕ್ಮಿಣಿಬಾಯಿ ದಂಪತಿಗಳಿಗೆ ನಾಲ್ಕನೆ ಮಗನಾಗಿ ಜನಿಸಿದ (1931 ಮಾರ್ಚ್ 31)ಸಂತ ಶ್ರೀ ಭದ್ರಗಿರಿ ಅಚ್ಯುತದಾಸರು ಬಾಲ್ಯದಿಂದಲೂ ಸಂಗೀತದ ಬಗ್ಗೆ ಒಲವಿದ್ದವರು. ಇದಕ್ಕೆ ಅವರು ಹುಟ್ತಿದ ಮನೆಯ ಪರಿಸರವೂ ಪೋಷಕವಾಗಿತ್ತು. ತ್ಂದೆ ವೆಂಕಟರಮಣಾ ಪೈಗಳು ಯಕ್ಷಗಾನದ ಬಗ್ಗೆ ಒಲವುಳ್ಳವರಾಗಿದ್ದರೆ ತಾಯಿ ರುಕ್ಮಿಣಿಬಾಯಿ ತಾವು ದೇವರ ಭಜನೆಗಳನ್ನು ಶುಶ್ರಾವ್ಯವಾಗಿ ಹಾಡಬಲ್ಲವರಾಗಿದ್ದರು.
    ಅಚ್ಯುತದಾಸರು ಕಲಿತದ್ದು ಕೇವಲ ಮೂರನೆ ತರಗತಿಯಾದರೂ ತಾವೇ ಕಂಡುಕೊಂಡ ಲೋಕಾನುಭವದ ಶಿಕ್ಷಣದಿಂದ ಅತ್ಯಂತ ಮಹತ್ವವಾದುದನ್ನು ಸಾಧಿಸಲಿಕ್ಕೆ ಸಾಧ್ಯವಾಯಿತು. ತಮ್ಮ ಬಾಲ್ಯದಿಂದಲೂ ಯಕ್ಷಗಾನ್ದಲ್ಲಿ ಆಸಕ್ತಿ ತಾಳಿದ ಅಚ್ಯುತದಾಸರು ತಾವು ತಾಳಮದ್ದಳೆಗಳಾಲ್ಲಿ ಅರ್ಥಧಾರಿಗಳಾಗಿದ್ದರು. ಮುಂದೆ ನಾಟಕಗಳಲ್ಲಿ ಪಾತ್ರವಹಿಸಿ ರಂಗಗೀತೆಗಳನ್ನು ಹಾಡುವುದರಲ್ಲಿ ತೊಡಗಿದರು. ಅಷ್ಟಲ್ಲದೆ ಭಾರತೀಯ ಸಂಸ್ಕೃತಿಯ ತಾಯಿ ಬೇರಾದ ರಾಮಾಯಣ. ಮಹಾಭಾರತಗಳನ್ನು ಅಮೂಲಾಗ್ರವಾಗಿ ತಿಳಿದುಕೊಂಡರು. ಕನ್ನಡದ ಪಂಪ, ರನ್ನ, ಕುಮಾರವ್ಯಾಸರನ್ನು ಓದಿಕೊಂಡ ಅಚ್ಯುತದಾಸರು ತಾವು ಭಾರತೀಯ ಸಂಸ್ಕೃತಿಯ ಹರಿಕಾರರೆನಿಸಿದರು.
    1951 ರಫೆಬ್ರವರಿ 23 ರಂದು ಭದ್ರಗಿರಿಯ ಕಾಮೇಶ್ವರ ದೇವಾಲಯದಲ್ಲಿ ಮಲ್ಪೆ ಶಂಕರನಾರಾಯಣಾ ಸಾಮಗರ ಹರಿಕಥಾ ಶ್ರವಣಾವು ಏರ್ಪಾಡಾಗಿತ್ತು. ಆದರೆ ಕಾರಣಾಂತರಗಳಿಂದ ಕಾರ್ಯಕ್ರಾಮಕ್ಕೆ ಸಾಮಗರು ಬರದೆ ಹೋದಾಗ ಅಚ್ಯುತದಾಸರು ತಾವು ಹರಿಕಥಾ ಕಾಲಕ್ಷೇಪವನ್ನು ನಡೆಸಿಕೊಟ್ತರು. ಅಂದಿನ ಹರಿಕಥೆಗೆ ಸೇರಿದ್ದ ನೂರಾರು ಜನ ಅಚ್ಯುತದಾಸರ ಹರಿಕಥೆಯ ಮೋಡಿಗೆ ಸಿಲುಕಿದರು. ಅಂದಿನಿಂದ ದಾಸರು ನಿರಂತರ ಹರಿಕಥಾ ಕಾಯಕದಲ್ಲಿ ತೊಡಗಿಕೊಂಡರು.
    1956 ರಲ್ಲಿ ಕಾಶೀ ಮಠದ ಸ್ವಾಮೀಜಿಗಳಾಗಿದ್ದ ಸುಧೀಂಧ್ರ ತೀರ್ಥ ಶ್ರೀಪಾದಂಗಳು ಉಡುಪಿಯಲ್ಲಿ ಚಾತುರ್ಮಾಸ ವ್ರತದಲ್ಲಿ ತೊಡಗಿದ್ದಾಗ ಅಚ್ಯುತದಾಸರು ನಿತ್ಯವೂ ಮಹಾಭಾರತದ ಕುರಿತು ಹರಿಕಥೆ ನಡೆಸಿಕೊಟ್ಟಿದ್ದರು. ಆ ಸಂದರ್ಭದಲ್ಲಿ ಶ್ರೀ ಗುರುಗಳು ಅಚ್ಯುತದಾಸರಿಗೆ ದಂಡಿಗೆ ಬೆತ್ತದ ಹಾಸ ದೀಕ್ಷೆಯನ್ನು ನೀಡಿ ಚಕ್ರಾಂಕಪೂರ್ವಕ ಮೂಲನಾರಾಯಣ ಎಂಬ ಅಂಕಿತವನ್ನು ನೀಡಿದ್ದರು. ಅದು ಕಾರಣವಾಗಿ ಮುಂದೆ ಮೂಲನಾರಾಯಣ ಅಂಕಿತನಾಮದಲ್ಲಿ ಸಾವಿರಾರು ಕೀರ್ತನೆ, ಸುಳಾದಿ, ಉಗಾಭೋಗಗಳನ್ನು ರಚಿಸಿದ ಅಚ್ಯುತದಾಸರ ಕನ್ನಡ, ತುಳು, ಕೊಂಕಣಿ ಕೀರ್ತನೆ ಹಾಗೂ ಸುಳಾದಿಗಳು ನಾಡಿನಾದ್ಯಂತದ ಸಾವಿರಾರು ಜನರ ನಾಲಿಗೆಯಲ್ಲಿ ಇಂದಿಗೂ ಹರಿದಾಡುತ್ತಿದೆ.
    ಕರ್ನಾಟಕದ ನಾನಾ ಕಡೆಯಲ್ಲಿ ನೆಲೆಸಿದ್ದ ಕೀರ್ತನಾಕಾರರನ್ನು ಒಟ್ಟು ಸೇರಿಸಿ ಅಖಿಲ ಕರ್ನಾಟಕ ಕೀರ್ತನ ಸಮ್ಮೇಳನವನ್ನು 1964 ರಲ್ಲಿ ಆಯೋಜಿಸಿದ್ದ ಕೀರ್ತಿ ಶ್ರೀ ಭದ್ರಗಿರಿ ಅಚ್ಯುತದಾಸರಿಗೆ ಸಲ್ಲಬೇಕು. ಅಲ್ಲದೆ 1965 ರಲ್ಲಿ ಭಾರತದಾದ್ಯಂತದ ಕೀರ್ತನಾಕಾರರನ್ನು ಒಟ್ಟುಗೂಡಿಸಿ ಅಖಿಲ ಭಾರತ ಜೀರ್ತನ ಸಮ್ಮೇಳಾನವನ್ನು ಬೆಂಗಳೂರಿನಲ್ಲಿ ಆಯೋಜಿಸಿದ್ದರು. ಆ ಸಮ್ಮೇಳನವನ್ನು ಭಾರತದ ಅಂದಿನ ರಾಷ್ಟ್ರಪತಿಗಳಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಉದ್ಘಾಟಿಸಿದ್ದರು. ಹೀಗೆ ದೇಶಾದ್ಯಂತದ ಕೀರ್ತನಾಕಾರರನ್ನು ಒಂದೆಡೆ ಸೇರಿಸಿ ಅವರ ಪರಸ್ಪರ ಪರಿಚಯ, ವಿಚಾರ ವಿನಿಮಯಕ್ಕೆ ವೇದಿಕೆಯೊಂದನ್ನು ಒದಗಿಸಿಕೊಟ್ಟ ಕೀರ್ತಿ ಶ್ರೀ ಅಚ್ಯುತದಾಸರದು.
    ಶ್ರೀಯುತರ ಜೀವನ ಸಾಧನೆಯನ್ನು ಗುರುತಿಸಿ ಅನೇಕ ಪ್ರಶಸ್ತಿ ಪುರಸ್ಕಾರಗಳು ಅವರನ್ನು ಅರಸಿ ಬಂದಿವೆ. ಅವುಗಳಲ್ಲಿ ಮುಖ್ಯವಾಗಿ ಕರ್ನಾಟಕ ಸರ್ಕಾರದ ‘ಕನಕ ಪುರಂದರ ಪ್ರಶಸ್ತಿ’ , ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ‘ನಾಡೋಜ’ ಗೌರವ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ಗೌರವ ಪ್ರಶಸ್ತಿಗಳು ಸಂದಿವೆ. ಕಾಶಿ ಮಠದವರು ನೀಡಿದ ‘ಕೀರ್ತನಾಗ್ರೇಸರ’ , ಗೋಕರ್ಣ ಪರ್ತಕಾಳಿ ಮಠದವರಿಂದ ‘ಕೀರ್ತನಾಚಾರ್ಯ’ , ಉಡುಪಿ ಪೇಜಾವರ ಮಠದಿಂದ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿಗೆ ಭಾಜನರಾಗಿದ್ದ ಭದ್ರಗಿರಿ ಅಚ್ಯುತದಾಸರು ಅದಮಾರು ಮಠದಿಂದ ಹರಿದಾಸ ಕುಲಭೂಷಣಾ ಪ್ರಶಸ್ತಿ ರಾಮಚಂದ್ರಾಪುರ ಮಠದಿಂದ ಪುರುಷೋತ್ತಮ ಪ್ರಶಸ್ತಿಗಳಿಂದಲೂ ಪುರಸ್ಕೃತರಾಗಿದ್ದರು.
    ಇಷ್ಟೇ ಅಲ್ಲದೆ ಮಾಡಿನಾದ್ಯಂತದ ವಿದ್ಯಾಸಂಸ್ಥೆಗಳು, ಸಂಘಟನೆಗಳೂ ಸಹ ಅಚ್ಯುತದಾಸರ ಪ್ರತಿಭೆಗೆ ಮನ್ನಣೆ ನೀಡಿ ಅನೇಕ ಬಗೆಯಲ್ಲಿ ಅವರನ್ನು ಸನ್ಮಾನಿಸಿವೆ, ಗೌರವಿಸಿವೆ.
    ಇಂತಹಾ ಸಂತರೋರ್ವರು ಇಂದು ನಮ್ಮನ್ನೆಲ್ಲಾ ಅಗಲಿದ್ದಾರೆ. ಹರಿದಾಸ ಪರಂಪರೆಯನ್ನು ಈ ವಿದ್ಯ್ನ್ಮಾನ ಮಾದ್ಯಮಗಳ ಭರಾಟೆಯ ಈ ದಿನಗಳಲ್ಲಿಯೂ ಮುಂದುವರಿಸಿಕೊಂಡು ಬಂದಿದ್ದ ಹಿರಿಯ ಚೇತನವೊಂದು ಬಾರದ ಲೋಕಕ್ಕೆ ತನ್ನ ಪಯಣವನ್ನು ಬೆಳೆಸಿದೆ.
    ಅವರು ಮಾಡಿದ ಕಾರ್ಯಗಳನ್ನು ನೆನೆಯುತ್ತಾ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿಯೂ ಅಳವಡಿಸಿಕೊಂಡು ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲರೂ ನಡೆದೆವಾದರೆ ಆ ದಿವ್ಯಾತ್ಮಕ್ಕೆ ಅದಕ್ಕಿಂತ ಸಂತೋಷವು ಬೇರೆಯಿರಲಾರದು.
    ನಮಸ್ಕಾರ. 

Tuesday, October 15, 2013

ನಮ್ಮಲ್ಲಿನ ಸ್ಥಳ ಪುರಾಣಗಳು(Myths)- 9

ತಳಿಪರಂಬ(Taliparamba)

    ದೇವರ ಸ್ವಂತ ನಾಡೆಂದು ಪ್ರಸಿದ್ದವಾದ ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬ ಒಂದು ಪ್ರಪ್ರಾಚೀನ ಹಿಂದೂ ಶಕ್ತಿಪೀಠವಾಗಿದ್ದು ಇಲ್ಲಿನ ಡ್ರೀ ರಾಜ ರಾಜೇಶ್ವರನು ತನ್ನ ಭಕ್ತಕೋಟಿಗೆ ಸದಾ ಒಳಿತು ಮಾಡುತ್ತಾ ತಾನು ಅವರಿಂದಿ ನಿತ್ಯವೂ ವಿವಿಧ ಬಗೆಯ ಸೇವೆ ಹೊಂದುತ್ತಿದ್ದಾನೆ. ಈ ಕ್ಷೇತ್ರಕ್ಕೆ ಕಾಲಿಟ್ಟೊಡನೆಯೇ ಪ್ರತಿಯೊಬ್ಬ ಭಕ್ತನಿಗೂ ಅಲ್ಲಿನ ಅದ್ಭುತ ಶಕ್ತಿಯ ಅನುಭವವಾಗುತ್ತದೆ. ತಮ್ಮ ದೇಹದ ಸುತ್ತಲೂ ಆ ಮಹಾಶಕ್ತಿಯ ಜ್ಯೋತಿರ್ವಲಯವೊಂದು ನಿರ್ಮಾಣವಾದಂತಹಾ ಅನುಭವವು ಆಗುವುದನ್ನು ಇಂದಿಗೂ ಇಲ್ಲಿಗೆ ಬರುವ ಸಾಮಾನ್ಯ ಭಕ್ತರು ಸ್ವತಃ ಅನುಭವಿಸಬಹುದು.

     ಒಮ್ಮೆ ಶ್ರೀ ಕ್ಷೇತ್ರಕ್ಕೆ ಭೇಟಿಕೊಟ್ತ ಶ್ರೀ ಪರಷುರಾಮರಿಗೆ ಕ್ಷೇತ್ರದಲ್ಲಿ ಉಂಟಾದ ಅತ್ಯಂತ ರೋಮಾಂಚಕ ಆಧ್ಯಾತ್ಮಿಕ ಶಕ್ತಿಯ ಅನುಭವವಾಗುತ್ತದೆ. ಇದರಿಂದ ಕುತೂಹಲಿಗಳಾದ ಪರಷುರಾಮರು ತಾವು ಕ್ಷೇತ್ರದ ಇತಿಹಾಸವನ್ನು ತಿಳಿಯಲು ಬಯಸುತ್ತಾರೆ. ಕೂಡಲೇ ತ್ರಿಲೋಕ ಸಂಚಾರಿಗಳಾದ ನಾರದರ ಬಳಿ ಸಾರಿದ ಪರಷುರಾಮರು ಶ್ರೀ ಕ್ಷೇತರ್ದ ಇತಿಹಾಶವನ್ನು ತಿಳಿಸುವಂತೆ ಕೇಳಲಾಗಿ ನಾರದರು ತಾವು ತಳಿಪರಂಬ ಶ್ರೀ ರಾಜರಾಜೇಶ್ವರನ ಮಹಿಮೆಯನ್ನು ಪರಷುರಾಮರಿಗೆ ಈ ಮುಂದಿನಂತೆ ತಿಳಿಸುತ್ತಾರೆ.
    ಸೃಷ್ಟಿಕರ್ತನಾದ ಬ್ರಹ್ಮನ ಮಕ್ಕಳಾದ ಸನಕಾ ಮತ್ತಿತರರು ವಿಶೇಷ ಮರಳು ಹಾಗೂ ಅಮೃತ ತತ್ವದಿಂದ ತಯಾರಿಸಿದ ಮೂರು ಜ್ಯೋತಿರ್ಲಿಂಗಗಳನ್ನು   ಬ್ರಹ್ಮದೇವನಿಗೆ ನೀಡಿದರು. ಆ ಮೂರು ಲಿಂಗಗಳನ್ನು ಬ್ರಹ್ಮದೇವನು ಪರಮೇಶ್ವರನ ಪತ್ನಿ ತಾಯಿ ಪಾರ್ವತಿದೇವಿಗೆ ಕೊಡುಗೆಯಾಗಿ ನೀಡಿದನು.
    ತ್ರೇತಾಯುಗದಲ್ಲಿ ಭಗವತಿಯ ಶ್ರೇಷ್ಠ ಭಕ್ತನಾದ ಮಾಂಧಾತ ಮತ್ತು ದ್ವಾಪರ ಯುಗದಲ್ಲಿ ಶ್ರೀಮಾತೆಯ ಆರಾಧಕರಾಗಿದ್ದ ಮುಚಕುಂದ ಹಾಗೂ ಶತಸೋಮನೆಂಬ ಮೂವರಿಗೆ ಶ್ರೀ ದೇವಿಯು ಆ ಅದ್ಭುತ ಲಿಂಗಗಗಳನ್ನು ನೀಡಿದ್ದಳು. ಹಾಗೆ ತಾನು ನೀಡಿದ ಲಿಂಗಗಳನ್ನು ಸೃಷ್ಟಿಯ ಯಾವುದೇ ಜೀವಜಂತುವು ಸಾವನ್ನಪ್ಪದ ಅಥವ ಯಾವುದೇ ನಿರ್ಜೀವ ಜೀವಿಯ ಭಾಗವು ಬೀಳದಿದ್ದಂತಹಾ ಸ್ಥಳದಲ್ಲಿ ಪ್ರತಿಷ್ಠೆ ಮಾಡುವಂತೆ ಸಲಹೆಯನ್ನಿತ್ತಳು.

    ತ್ರೇತಾ ಯುಗದಲ್ಲಿ ಈ ಅದ್ಭುತ ಲಿಂಗವನ್ನು ಪಡೆದಿದ್ದ ಮಾಂಧಾತನು ಈ ಲಿಂಗದ ಪ್ರತಿಷ್ಠೆಗಾಗಿ ಸಾಕಷ್ಟು ಸ್ಥಳದ ಹುಡುಕಾಟ ನಡೆಸಿದರೂ ದೇವಿ ಸಲಹೆಯಿತ್ತಂತಹಾ ಸ್ಥಳವು ಎಲ್ಲಿಯೂ ದೊರೆಯದಾಗಲು ಅಂತಿಮವಾಗಿ ಒಂದಿ ತಟ್ಟೆಯಲ್ಲಿ ಆ ಲಿಂಗವನ್ನು ಪ್ರತಿಷ್ಠಿಸಲಾಯಿತು. ಮಲಯಾಳದಲ್ಲಿ ತಟ್ಟೆಗೆ ‘ತಳಿಕ’ವೆಂದು ಕರೆಯುವುದರಿಂದ ದೈವಿ ಶಕ್ತಿಯ ಆ ಲಿಂಗವನ್ನು ಪ್ರತಿಷ್ಠಿಸಿದ ಆ ಪ್ರದೇಶಕ್ಕೆ ‘ತಳಿಪರಂಬ’ವೆಂಬ ಹೆಸರಾಯಿತು. ಹಾಗೆ ಹಲವು ಕಾಲಗಳ ನಂತರ ತ್ರೇತಾಯುಗದ ಅಂತ್ಯಕಾಲದಲ್ಲಿ ಆ ಜ್ಯೋತಿರ್ಲಿಂಗವು ಭೂಮಿಯಲ್ಲಿ ಅಂತರ್ಧಾನವಾಯಿತು. ಮತ್ತು ಆ ಸ್ಥಳದಲ್ಲಿ ಒಂದು ಅದ್ಭುತ ಶಕ್ತಿಯ ತರಂಗ ವರ್ತುಲವೊಂದು ಏರ್ಪಟ್ಟಿತು. ಮುಂದೆ ದ್ವಾಪರ ಯುಗದಲ್ಲಿ ಶ್ರೀ ದೇವಿಯಿಂದ ಎರಡನೆ ಜ್ಯೋತಿರ್ಲಿಂಗವನ್ನು ಪಡೆದ ಮುಚಕುಂದನು ತಾನು ಸಹ ಆ ಲಿಂಗ ಸ್ಥಾಪನೆಗೆ ಸೂಕ್ತ ಸ್ಥಳವನ್ನು ಅರಸುತ್ತಾ ಈ ಹಿಂದೆ ಮಾಂಧಾತ ಸ್ಥಾಪಿಸಿದ್ದ ಲಿಂಗವಿದ್ದ ಪ್ರದೇಶಕ್ಕೆ ಬಂದು ಅಲ್ಲೆ ತಾನು ಸಹ ಜ್ಯೋತಿರ್ಲಿಂಗವನ್ನು ಪ್ರತಿಷ್ಠಿಸಿದನು ಆ ಪ್ರದೇಶದಲ್ಲಿದ್ದ ಆದ್ಯಾತ್ಮಿಕ ಶಕ್ತಿವರ್ತುಲದ ಪರಿಣಾಮದಿಂದಾಗಿ ಆ ಜ್ಯೋತಿರ್ಲಿಂಗವೂ ತಾನು ಭೂಮಿಯಲ್ಲಿ ಅಂತರ್ಧಾನವಾಯಿತು. ಆ ನಂತರ ಶ್ರೀ ಮಾತೆಯಿಂದ ಮೂರನೆ ಜ್ಯೋತಿರ್ಲಿಂಗವನ್ನು ಪಡೆದಂತಹಾ ಶತಸೋಮನು ತಾನು ಸಹ ಈ ಹಿಂದೆ ಮಾಂಧಾತ, ಮುಚಕುಂದರು ತಾವು ಶಿವಲಿಂಗಗಳನ್ನು ಪ್ರತಿಷ್ಠಾಪಿಸಿದ್ದ ಅದೆ ಸ್ಥಳದಲ್ಲಿ ಪ್ರತಿಷ್ಠೆ ಮಾಡಿಸಿದನು. ಆದರೆ ಅಲ್ಲಿನ ಅದ್ಭುತ ವಿಶೇಷ ಶಕ್ತಿ ವರ್ತುಲದ ಪರಿಣಾಮ ಆ ಮೂರನೆ ಶಿವಲಿಂಗವೂ ಭೂಮಿಯಲ್ಲಿ ಅಂತರ್ಧಾನವಾಗುವುದಕ್ಕೆ ತೊಡಗಿತು.
    ಅದಾಗ ಶತಸೋಮನು ತಾನು ತಪಸ್ವಿಗಳಾದ ಅಗಸ್ತ್ಯ ಮಹರ್ಷಿಗಳಾ ಬಳಿ ಹೋಗಿ ತನಗೆ ಸಹಾಯ ಮಾಡುವಂತೆ ಕೋರಿದನು. ಅದಕ್ಕೊಪ್ಪಿದ ಅಗಸ್ತ್ಯರು ತಾವು ಆ ಜ್ಯೋತಿರ್ಲಿಂಗಗಳಿದ್ದ ಪ್ರದೇಶಕ್ಕೆ ಬಂದು ಅಲ್ಲೊಂದು ತುಪ್ಪದ ದೀಪವನ್ನು ಬೆಳಗಿ ತಾವು ಆ ಜ್ಯೋತಿರ್ಲಿಂಗಕ್ಕೆ ಹನ್ನೆರಡು ಬಾರಿ ಪ್ರದಕ್ಷಿಣೆ ಬಂದು ತಮ್ಮ ಹದಿಮೂರನೇ ಪ್ರದಕ್ಷಣೆಯಲ್ಲಿ ತೊಡಗಿದ್ದಾಗ ಜ್ಯೋತಿರ್ಲಿಂಗವು ಭೂಮಿಯಲ್ಲಿ ಸಧೃಢವಾಗಿ ನೆಲೆಸಿತು. ಆ ಪ್ರಕಾರವಾಗಿ ಆ ಜ್ಯೋತಿರ್ಲಿಂಗವಿದ್ದ ಪ್ರದೇಶದ ಸುತ್ತಲಿನ ಆಧ್ಯಾತ್ಮಿಕ ಪ್ರಭೆ ತಾನದು ಮೂರು ಪಟ್ಟು ಹೆಚ್ಚಿತು. (ರಾಜಾ ಶತಸೋಮನು ತಾನು ಮೂರನೆ ಜ್ಯೋತಿರ್ಲಿಂಗವನ್ನು ಅಲ್ಲಿ ಸ್ಥಾಪಿಸಿದ್ದನು. ) ಅಂದು ಅಗಸ್ತ್ಯ ಮಹಾಮುನಿಗಳು ತಾವು ಬೆಳಗಿದ ತುಪ್ಪದ ದೀಪ ಯುಗಯುಗಾಂತರದಿಂದಲೂ ನಂದಾದೀಪದಂತೆ ಬೆಳಗುತ್ತಿರುವುದನ್ನು ನಾವು ಇಂದೂ ಸಹ ಕಾಣಾಬಹುದಾಗಿದೆ.


Wednesday, October 09, 2013

‘ಕಡಲ ತಡಿಯ ಭಾರ್ಗವ’ ನ ಕಡಲನು ಮೀರಿಸಿದ ಬದುಕು

ಇದೇ ಅಕ್ಟೋಬರ್ ೧೦ ಕನ್ನಡ ಕರಾವಳಿಯ ದೈತ್ಯ ಪ್ರತಿಭೆ ಕೋಟ ಶಿವರಾಮ ಕಾರಂತರ ಜನ್ಮ ದಿನ. ನೆವದಲ್ಲಿಕಡಲ ತಡಿಯ ಭಾರ್ಗವನಡೆಸಿದ ಕಡಲಿಗೂ ಮೀರಿದ ಬದುಕಿನತ್ತ ಒಂದು ನೋಟ.
    ‘ಕಾಣದ ಕಡಲಿಗೆ ಹಂಬಲಿಸಿದೆ ಮನ
    ಕಾಣಬಲ್ಲೆನೆ ಒಂದು ದಿನ,
    ಕಡಲನು ಕೂಡಬಲ್ಲೆನೆ ಒಂದು ದಿನ....’
    ಕನ್ನಡದ ರಾಷ್ಟ್ರಕವಿ ಜಿ.ಎಸ್.ಎಸ್. ರವರ ಈ ಕವಿತೆ ನಮಗೆಲ್ಲರಿಗೂ ತಿಳಿದಿರತಕ್ಕದ್ದೆ, ಆದರೆ ನಮ್ಮ ನಡುವೆಯೇ ಇದ್ದ ಹುಟ್ಟಿನಿಂದ ಕಡಲ ತಡಿಯಲ್ಲಿಯೇ ಬೆಳೆದು ಕಡಲನ್ನೂ ಮೀರಿದ ಬದುಕು ನಡೆಸಿದ ವ್ಯಕ್ತಿಯ ಕುರಿತು ಇಂದು ನಾವೊಂದಿಷ್ಟು ನೆನೆಯೋಣವೆ?
    ಹೌದು ಸ್ನೇಹಿತರೆ, ನಿಮ್ಮ ಊಹೆ ಸರಿ, ನಾನು ಹೇಳ ಹೊರಟಿರುವುದು ‘ಕಡಲ ತಡಿಯ ಭಾರ್ಗವ’ ಎಂದೇ ಖ್ಯಾತರಾದ ಶ್ರೀ ಕೋಟ ಶಿವರಾಮ ಕಾರಂತರ ಬಗ್ಗೆ. ಇದೇ ಅಕ್ಟೋಬರ್ ಹತ್ತು ಅವರ ಜನ್ಮದಿನವಾದ ಹಿನ್ನೆಲೆಯಲ್ಲಿ ಕನ್ನಡ ಕರಾವಳಿಯ ದೈತ್ಯ ಪ್ರತಿಭೆ ಕಾರಂತರು, ಅವರ ಸಾಹಿತ್ಯ, ವಿಚಾರಧಾರೆಗಳ ಕುರಿತಾಗಿ ಹಾಗೆ ಸುಮ್ಮನೆ ನಿಮ್ಮೊಡನೆ ನನ್ನದಷ್ಟು ವಿಚಾರ ಹಂಚಿಕೊಳ್ಳುವ ಇಚ್ಚೆಯಿಂದ ಬರೆಯಹೊರಟಿದ್ದೇನೆ. ಇದು ತಮಗೂ ಇಷ್ಟವಾಗಬಹುದೆನ್ನುವುದು ನನ್ನ ಅನಿಸಿಕೆ.  
    ಕೋಟ ಶಿವರಾಮ ಕಾರಂತ
    ಈ ವ್ಯಕ್ತಿ ಮಾಡಿದ ಕೆಲಸ, ಬರೆದ ಬರಹಗಳನ್ನು ನೋಡಿದಾಗ ಯಾರಿಗಾದರೂ ದಿಗ್ಭ್ರಮೆಯಾಗದಿರದು. ಒಬ್ಬ ವ್ಯಕ್ತಿ ಒಂದು ಬದುಕಿನಲ್ಲಿ ಇಷ್ಟೆಲ್ಲವನ್ನೂ ಮಾಡಲು ಹೇಗೆ ಸಾಧ್ಯವೆಂಬ ಪ್ರಶ್ನೆ ಮೂಡಿದರೆ ಆಶ್ಚರ್ಯಪಡಬೇಕಿಲ್ಲ. ಆದರೆ ಕಾರಂತರು ತಾವು ಬದುಕಿದ ಅಷ್ಟೂ ದಿನಗಳು ನವಯುವಕನಂತೆ ಊರೂರು ಅಲೆದು, ಎಲ್ಲಾ ಸಮುದಾಯದ ಜನರೊಡನೆ ಬೆರೆತು  ಬಾಳಿ ತೋರಿಸಿದವರು.
    ನಿರಂತರ ಸಾಧನೆಯ ಛಲ, ಎಲ್ಲವನ್ನೂ ಪರೀಕ್ಷಿಸಿದ ನಂತರವೇ ಸ್ವೀಕರಿಸುವ ಇಲ್ಲವೆ ಬಿಡುವ ಸ್ವಭಾವ, ನಿರಂತರ ಅಧ್ಯಯನ, ಏನೇ ಹೊಸ ವಿಚಾರಗಳಲ್ಲಿನ ಕುತೂಹಲ ಈ ಎಲ್ಲಾ ಗುಣಗಳೂ ಕಾರಂತರಲ್ಲಿ ಬಾಲ್ಯದಿಂದಲೇ ಬೆಳೆದು ಬಂದಿತ್ತು. ಇಂತಹಾ ವ್ಯಕ್ತಿತ್ವದ ಫಲವಾಗಿಯೇ ಕಾರಂತರು ಕೇವಲ ಸಾಹಿತಿ ಮಾತ್ರವಾಗದೆ ಯಕ್ಷಗಾನ ಕಲಾವಿದ, ಸಮಾಜ ಸುಧಾರಕ, ವಿಜ್ಞಾನ ವಿಲಾಸಿ,ಅಲೆಮಾರಿಪತ್ರಕರ್ತ ಪುಸ್ತಕ ಪ್ರಕಾಶಕ, ಚಲನಚಿತ್ರ ನಿರ್ಮಾಪಕ, ಸ್ವಾತಂತ್ರ್ಯ ಹೋರಾಟಗಾರಭಾಷಾ ಶಾಸ್ತ್ರಜ್ಞ ಪರಿಸರ ಹೋರಾಟಗಾರ... ಹೀಗೆ ನಾನಾ ವಿಧದ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಅವರಿಗೆ ಸಾಧ್ಯವಾಯಿತು.
    ಹೀಗೆ ನಡೆದಾಡುವ ವಿಶ್ವಕೋಶದಂತಿದ್ದ ಕಾರಂತರು ಕನ್ನಡದ ಗಾದೆ ಮಾತಾದ ‘ದೇಶ ಸುತ್ತು ಕೋಶ ಓದು’ ಎನ್ನುವ ಮಾತಿಗೆ ಅನ್ವರ್ಥರಾದವರಂತೆ ಬದುಕಿದ್ದವರು. ತಾವು ಬದುಕಿನುದ್ದಕ್ಕೂ ಸದಾ ಕಾಲ ಒಂದಿಲ್ಲೊಂದು ಕಡೆ ಸಂಚಾರಿಸುತ್ತಿದ್ದ ಕಾರಂತರು ತಾವೇ ತಮ್ಮ ಈ ಪರಿಯ ತಿರುಗಾಟದ ಬಗ್ಗೆ ಹೀಗೆ ಹೇಳಿಕೊಂಡಿದ್ದಾರೆ- ‘‘...ಸಂಚಾರ ನನ್ನ ಬದುಕಿಗೆ ಅವಿರತವಾಗಿ ಬೆರೆತದ್ದುಪುಟಕೊಟ್ಟಿದ್ದುಸೂರ್ತಿಕೊಟ್ಟಿದ್ದುಬಾಹ್ಯ ಜಗತ್ತಿನ ಅನುಭವಕ್ಕೆ ಹೆದ್ದಾರಿಯಾದದ್ದು. ... ಆ ಸಂಚಾರದ ಅನುಭವಗಳೇ ನನ್ನ ಸಾಹಿತ್ಯಕ್ಕೆ ಜೀವಕಳೆಯನ್ನು ಒದಗಿಸಬೇಕು. ಸಾಹಿತ್ಯಕ್ಕೆ ಬೇಕಾದ ವಸ್ತುವನ್ನು ಸ್ವಯಂಸೂರ್ತಿಯಿಂದಲೇ ಸೃಷ್ಟಿ ಮಾಡಿಕಲ್ಪನಾವಿಲಾಸದಿಂದಲೇ ಅಲಂಕರಿಸಿ ಯಾರನ್ನೂ ಮೆಚ್ಚಿಸುವುದಕ್ಕೆ ಹೋಗಲಾರೆ. .... ಸಂಚಾರ ನನ್ನ ಪಾಲಿಗೆ ನಿತ್ಯದ ವಿದ್ಯಾಭ್ಯಾಸ.
    ತನಗೆ ಸರಿಕಂಡದ್ದನ್ನು ಮಾಡಲು ಹಿಂದೆ ಮುಂದೆ ನೋಡದ ಕಾರಂತರು ತಾವು ಮಂಗಳೂರಿನ ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ಮಹಾತ್ಮ ಗಾಂಧಿಯವರ ಅಸಹಕಾರ ಚಳವಳಿಯ ಕುರಿತು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಅದನ್ನು ಓದಿ ಸ್ಪೂರ್ತಿಗೊಂಡ ಕಾರಂತರು ತಡಮಾಡಲಿಲ್ಲ, ತಕ್ಷಣವೇ ತಮ್ಮ ಕಾಲೇಜು ಪ್ರಾಂಶುಪಾಲರಿಗೆ- “I want to non-co-operate with your education system” ಎಂದು ಚೀಟಿ ನೀಡಿ ಹೊರಬಂದರು. ಮುಂದೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದ ಕಾರಂತರು ಗಾಂಧಿವಾದದಿಂದ ಸಾಕಷ್ಟು ಪ್ರಭಾವಿತರಾಗಿದ್ದರು. ಆದರೆ ಅದಕ್ಕೇ ಜೋತುಬೀಳದೆ ತಾವು ಪುನಃ ಬದುಕಿನ ವೈವಿಧ್ಯತೆಯ ಕಡೆ ಮುಖಮಾಡಿದರು. ತಮ್ಮ ಜೀವನ ಶೈಲಿಗೆ ಯಾವುದೇ ಕಟ್ಟುಗಳನ್ನು ಅಳವಡಿಸಿಕೊಳ್ಳಲು ಬಯಸದ ಕಾರಂತರಿಗೆ ಗಾಂಧಿಜಿ ಆದರ್ಶ, ಪರಮಹಂಸರಲ್ಲಿ ಭಕ್ತಿಭಾವವನ್ನು ತಾಳುವುದಕ್ಕೆ ಸಾಧ್ಯವಾಯಿತು.
    ಕಾರಂತರಲ್ಲಿನ ಲೋಕದೃಷ್ಟಿ ಅತ್ಯಂತ ವಿಶಾಲವಾದುದಾಗಿತ್ತು. ಕಾರಂತರ ದೃಷ್ಟಿಯಲ್ಲಿ ಯಾವೊಬ್ಬ ವ್ಯಕ್ತಿಯೂ ಶ್ರೇಷ್ಠನಲ್ಲ, ಕಾರಣಾವೆಂದರೆ `ಒಬ್ಬ ವ್ಯಕ್ತಿ ತಾನು ಇಡೀ ಮನುಕುಲದೊಂದಿಗೆ ಮಾತ್ರವಲ್ಲ, ಇಡೀ ಜೀವಸಂಕುಲದೊಂದಿಗೆ ಈ ಬ್ರಹ್ಮಾಂಡಲ್ಲಿ ಬಾಳಬೇಕು. ಒಂದು ಜೀವ ಘಟಕವಾದ ಮನುಷ್ಯ ತನ್ನನು ಇಡೀ ಬ್ರಹ್ಮಾಂಡದೊಂದಿಗೆ ಸಮೀಕರಿಸಿ ನೋಡಿದಾಗ ಮಾತ್ರ ತನ್ನ ಮಿತಿಯನ್ನು ಅರಿತುಕೊಳ್ಳುತ್ತಾನೆ. ತಾನು ಬದುಕಿಗೆ ನೀಡುವುದಕ್ಕಿಂತ ಬದುಕು ತನಗೆ ನೀಡಿದ್ದು ಹೆಚ್ಚು ಎಂದು ತಿಳಿದುಕೊಳ್ಳುತ್ತಾನೆ. ಇದರಿಂದ ಅವನಲ್ಲಿ ಕೀಳರಿಮೆ ಮೂಡಬೇಕಿಲ್ಲ; ವಿನೀತಭಾವ ಬೆಳೆಯಬೇಕು. ಎಲ್ಲದರ ಬಗ್ಗೆ ಕುತೂಹಲ ಹುಟ್ಟಬೇಕು. ಎಲ್ಲವನ್ನೂ ತಿಳಿಯುವಲ್ಲಿ, ಹಂಚಿಕೊಳ್ಳುವಲ್ಲಿ, ಬದುಕನ್ನು ಮತ್ತಷ್ಟು ಸುಂದರ, ಸಮೃದ್ಧಗೊಳಿಸುವಲ್ಲಿ ಸಾರ್ಥಕ್ಯ ಪಡೆಯಬೇಕು.’ ……..` ಮರ ತಾನಾಗಿ ಬೆಳೆಯುತ್ತದೆ. ಆ ರೀತಿ ಮನುಷ್ಯ ಬೆಳೆಯಲಾರ. ನಮ್ಮ ಬದುಕು ಆರಂಭವಾಗುವುದಕ್ಕೆ ಸಾವಿರಾರು ವರ್ಷಗಳ ಮೊದಲೇ ಜೀವರಾಶಿ ಇಲ್ಲಿತ್ತು ಎಂಬುದನ್ನು ತಿಳಿದರೆ ಸಾಕು.’ ಇದು ಮಾನವ ಜೀವನದ ಬಗ್ಗೆ ಕಾರಂತರ ನಿಲುವು.
    ಇನ್ನು ಕಾರಂತರು ತಾವು ಆದರ್ಶವಾದಿಗಳಾಗಿದ್ದರಲ್ಲದೆ, ವಾಸ್ತವವಾದಿಗಳೂ, ನಿರಂತರ ಪ್ರಯೋಗಶೀಲರೂ ಆಗಿದ್ದರು. ಇದರ ಪ್ರತಿಫಲವೆಂಬಂತೆ ತಾವೇ ಖುದ್ದಾಗಿ ನಿಂತು ವಿಧವಾ ವಿವಾಹ, ವೇಶ್ಯೆಯರ ವಿವಾಹಗಳನ್ನು ಮಾಡಿಸಿದ್ದರು. ಅಲ್ಲದೆ ಕರಾವಳಿಯ ಗಂಡುಕಲೆಯಾದ ಯಕ್ಷಗಾನವನ್ನು ದೇಶ ವಿದೇಶಗಳಲ್ಲಿ ಪ್ರಚುರಪಡಿಸಲು ತಂಡಗಳಾನ್ನು ಕಟ್ಟಿಕೊಂಡು ದೇಶ ವಿದೇಶಗಳನ್ನು ಸುತ್ತಿದ್ದರು. ಯಕ್ಷಗಾನದ ಉಳಿವಿಗೆ ಪ್ರಯತ್ನಿಸಿ, ಅದರಲ್ಲಿ ಹಲವು ಪ್ರಯೋಗಗಳನ್ನು ಮಾಡಿದ್ದರು. ತಾವೇ ಸ್ವತಃ ನೃತ್ಯವನ್ನು ಕಲಿತು, ಬ್ಯಾಲೆಯಲ್ಲೂ ಗಂಭೀರ ಪ್ರಯೋಗ ಮಾಡಿದ್ದರು.ಪುಟಾಣಿ ಮಕ್ಕಳಲ್ಲಿದ್ದ ಸುಪ್ತ ಪ್ರತಿಭೆಗಳನ್ನು ಹೊರತರುವ ಉದ್ದೇಶದಿಂದ ಪುತ್ತೂರಿನಲ್ಲಿ ‘ಬಾಲವನ’ ಎಂಬ ಹೆಸರಿನ ಅಸಾಂಪ್ರದಾಯಿಕ ಶೈಕ್ಷಣಿಕ ಕೇಂದ್ರವನ್ನು ಪ್ರಾರಂಭಿಸಿದ್ದ ಕಾರಂತರು ತಾವೇ ಒಂದು ಮುದ್ರಣಾಲಯವನ್ನು ತೆರೆದು ತಮ್ಮ ಪುಸ್ತಕಗಳನ್ನು ಸ್ವತಃ ಮುದ್ರಿಸುತ್ತಿದ್ದರು. ಅಲ್ಲದೆ ಇನ್ನೊಂದು ವಿಶೇಷವೆಂದರೆ ತಮ್ಮ ಹಲವು ಕಾದಂಬರಿಗಳಿಗೆ ತಾವೆ ಮುಖಪುಟದ ಚಿತ್ರಗಳನ್ನೂ ಬರೆದು ಮುದ್ರಿಸಿದ ಬಹುಮುಖ ಪ್ರತಿಭೆ ಕಾರಂತರದು!

    ಚಲನಚಿತ್ರ ರಂಗದಲ್ಲಿಯೂ ಕೈಯಯಾಡಿಸಿದ್ದ ಕಾರಂತರು ‘ಡೊಮಿಂಗೋ’ ಮತ್ತು ‘ಭೂತ ರಾಜ್ಯ’ ಎನ್ನುವ ಎರಡು ಮೂಕಿಚಿತ್ರಗಳನ್ನು ತಯಾರಿಸಿದ್ದರು. ಅದರಲ್ಲಿಯೂ ‘ಡೊಮಿಂಗೋ’ ಚಿತ್ರವನ್ನು ಸ್ವತಃ ತಾವೇ ಚಿತ್ರೀಕರಿಸಿ, ಅಭಿನಯಿಸಿದ್ದಲ್ಲದೆ ತಾವೇ ಸ್ವಯಂ ನಿರ್ದೇಶನವನ್ನೂ ಮಾಡಿದ್ದರು. ಪರಿಸರ ಹೋರಾಟಗಾರರೂ ಆಗಿದ್ದ ಕಾರಂತರು ಪರಿಸರವಾದಿಯಾಗಿಯೇ ಲೋಕಸಭೆ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದರು. ಅಲ್ಲದೆ ಕೈಗಾ ಅಣುವಿದ್ಯುತ್ ಸ್ಥಾವರದ ವಿರುದ್ಧದ ಹೋರಾಟಕ್ಕೆ ನಾಯಕತ್ವವನ್ನು ವಹಿಸಿದ್ದರು. 
    ಇನ್ನು ಕಾರಂತರ ಬರಹಗಳ ಬಗ್ಗೆ ಹೇಳುವುದಾದಲ್ಲಿ ಮಕ್ಕಳಿಂದ ಮೊದಲ್ಗೊಂಡು ವಯೋವೃದ್ದರವರೆಗೂ ಎಲ್ಲರಿಗೂ ರುಚಿಸುವಂತಹಾ ಸಾಹಿತ್ಯವನ್ನು ಕಾರಂತರು ರಚಿಸಿದ್ದಾರೆ. ಹಾಗೆಯೇ ಕಾರಂತರು ತಾವು ಇಂಥದೇ ಸಾಹಿತ್ಯ ಪಂಥವೊಂದಕ್ಕೆ ಸೇರಿಕೊಂಡವರಲ್ಲ. ನವೋದಯ, ನವ್ಯ, ಬಂಡಾಯ, ದಲಿತ, ನವ್ಯೋತ್ತರ ಹೀಗೆ ಅನೇಕ ಸಾಹಿತ್ಯಿಕ ಚಳವಳಿಗಳು ಕನ್ನಡದಲ್ಲಿ  ಬಂದು ಹೋಗಿದ್ದರೂ ಕಾರಂತರು ಈ ಯಾವ ಚಳವಳಿಯ ಭಾಗವಾಗಿರಲಿಲ್ಲ. ಬಹುಷಃ ಇದೇ ಅವರ ಶ್ರೇಷ್ಠತೆಗೆ ಕಾರಣವಾಗಿರಲಿಕ್ಕೂ ಸಾಕು. ಜೀವನವೇ ಎಲ್ಲಕ್ಕಿಂತಲೂ ದೊಡ್ಡದು ಎಂದು ನಂಬಿದ್ದವರು ಕಾರಂತರು. ತಾವು ಬದುಕಿನುದ್ದಕ್ಕೂ ಸುಮಾರು ನಾಲ್ಕು ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದ ಕಾರಂತರು ಒಟ್ಟು ನಲವತ್ತೇಳು ಕಾದಂಬರಿಗಳನ್ನು ಬರೆದಿದ್ದಾರೆ. ಆದರೆ ತಾನು ದೊಡ್ಡ ವ್ಯಕ್ತಿ. ಸಮಾಜದ ಗಣ್ಯ ಲೇಖಕ ಎಂಬ ಬಿಗುಮಾನ ಕಿಂಚಿತ್ತೂ ಇರಲಿಲ್ಲ. ಅವರೆ ಒಂದು ಕಡೆ ಸಾಹಿತಿಗಳ ಕುರಿತಾಗಿ ಹೀಗೆ ಹೇಳಿಕೊಂಡಿದ್ದಾರೆ- ` ಸಾಹಿತಿಗಳಿಗೆ ಸಮಾಜದಲ್ಲಿ ಬೇರೇ ಪಾತ್ರವೇನೂ ಇಲ್ಲ. ಸಾಹಿತಿ ಲೋಕೋದ್ಧಾರಕ ಎಂಬ ಭಾವನೆ ಏನೂ ಬೇಡ. ಆತನೂ ನಿಮ್ಮ ಹಾಗೆ ಮನುಷ್ಯ. ಬದುಕಿನ ಬಗ್ಗೆ ತನ್ನ ಅನುಭವವನ್ನು ಮಾತ್ರ ಹೇಳುತ್ತಾನೆ. ಪರಿಹಾರ ಸೂಚಿಸುವುದಲ್ಲ. ಆತ ಬರೆದ ಮಾತ್ರಕ್ಕೆ ಮಹಾನುಭಾವ ಆಗೋಲ್ಲ. ಬರೆಯದವರೂ ದೊಡ್ಡ ಕೆಲಸಗಳನ್ನು ಮಾಡಿದ್ದಾರೆ.’`,ಬರಹಗಾರ ತನ್ನ ಜನಗಳ ಸಲುವಾಗಿ ಶ್ರಮಿಸಬೇಕು. ಅವರ ಬದುಕಿನ ಮೂಕ ಜೀವನಕ್ಕೆ ನಾಲಿಗೆಯಾಗಬೇಕು, ಅವರ ತಿಳಿವಿನ ಅಂಧಕಾರಕ್ಕೆ ಆತ ಬೆಳಕಾಗಬೇಕು ಮತ್ತು ಅವರ ಜೀವನದ ಚಿತ್ತಭಿತ್ತಿಯಾಗಬೇಕು’ ಎನ್ನುತ್ತಿದ್ದವರು ಕಾರಂತರು.
    ‘ಚೋಮನ ದುಡಿ’, ‘ಬೆಟ್ಟದ ಜೀವ’, ‘ಮರಳಿ ಮಣ್ಣಿಗೆ’, ‘ಅಳಿದ ಮೇಲೆ’, ‘ಕನ್ನಡಿಯಲ್ಲಿ ಕಂಡಾತ’, ‘ಮೈ ಮನಗಳ ಸುಳಿಯಲ್ಲಿ’, ‘ಕುಡಿಯರ ಕೂಸು’, ‘ಮೂಕಜ್ಜಿಯ ಕನಸುಗಳು’  ಇವೇ ಮೊದಲಾದ ಕಾದಂಬರಿಗಳು ಕನ್ನಡದಲ್ಲಿ ಮಾತ್ರವಲ್ಲ ಭಾರತೀಯ ಭಾಷಾ ಸಾಹಿತ್ಯದಲ್ಲಿಯೇ ಅತ್ಯಂತ ಉತ್ಕೃಷ್ಠವೆನ್ನಬಹುದಾದ ಕೃತಿಗಳಾಗಿವೆ. ‘ಬೆಟ್ಟದ ಜೀವ’, ‘ಅಳಿದ ಮೇಲೆ’ ಕೃತಿಗಳಲ್ಲಿ ಕಾರಂತರೇ ಸ್ವತಃ ನಿರೂಪಕರಾಗಿರುವುದನ್ನು ಕಾಣುತ್ತೇವೆ. ಸನ್ಯಾಸಿಯ ಬದುಕು’, ‘ಜಗದೋದ್ಧಾರನಾ’, ‘ಕಣ್ಣಿದ್ದೂ ಕಾಣರು’, ‘ಕೇವಲ ಮನುಷ್ಯರು’, ‘ಕನ್ಯಾ ಬಲಿ’ ಇಂತಹಾ ನಾಟಕಗಳಲ್ಲಿ ಕಾರಂತರು ತಮ್ಮ ಸಮಾಜದಲ್ಲಿನ ಮೌಢ್ಯತೆಯನ್ನು ಎತ್ತಿ ತೋರಿಸಿರುವುದಲ್ಲದೆ ಜನರು ಆ ಮೌಢ್ಯದಿಂದ ಹೊರಬರಬೇಕೆಂಬ ಆಶಯವನ್ನೂ ವ್ಯಕ್ತಪಡಿಸಿದ್ದಾರೆ.
    ಕಾರಂತರು ಈ ಮೊದಲೇ ಹೇಳಿದಂತೆ ತಮ್ಮ ಬದುಕಿಗೆ ಯಾವುದೇ ಪರಿಧಿಯನ್ನು ಹ್ಕಟ್ತಿಕೊಂಡವರಲ್ಲ. ಹಾಗೆಯೇ ತಮ್ಮ ಬರವಣಿಗೆಯೂ ಕೂಡ ಯಾವುದೇ ಒಂದು ಪ್ರಕಾರಕ್ಕೆ ಸೀಮಿತವಾಗಿರುವುದನ್ನು ಅವರು ಬಯಸುತ್ತಿರಲಿಲ್ಲ. ಅವರು ಬರೆದ ‘ಬಾಲ ಪ್ರಪಂಚ’ ಮತ್ತು ‘ವಿಜ್ಞಾನ ಪ್ರಪಂಚ’ ಮಾಲಿಕೆಗಳು ಒಂದು ವಿಶ್ವವಿದ್ಯಾನಿಲಯವು ಮಾಡಬಹುದಾದ ಕೆಲಸವಾಗಿತ್ತು. ಅಂತಹಾ ಒಂದು ಕೆಲಸವನ್ನು ಕಾರಂತರೊಬ್ಬರೇ ಕೈಕೊಂಡು ಸಾಧಿಸಿದರೆಂದರೆ ಆ ವ್ಯಕ್ತಿಯೊಳಗಣ ದೈತ್ಯ ಪ್ರತಿಭಾಶಕ್ತಿಯ ದರ್ಶನವು ನಮಗಾಗುತ್ತದೆ.
   ‘ಅಬೂನಿಂದ ಬರಾಮಕ್ಕೆ’, ‘ಅಪೂರ್ವ ಪಶ್ಚಿಮ’, ‘ಪೂರ್ವದಿಂದ ಅತ್ಯಪೂರ್ವಕ್ಕೆ’ ಇವು ಕಾರಂತರ ಪ್ರವಾಸಿ ಕಥನಗಳು. ಇವುಗಳಿಂದ ನಾವು ಪಡೆಯಬಹುದಾದ ಮಾಹಿತಿಯು ಅಗಾಧ ಸ್ವರೂಪದ್ದು. ಒಂದು ಪ್ರದೇಶದ ಭೌಗೋಳಿಕ, ಚಾರಿತ್ರಿಕ, ಸಾಂಸ್ಕೃತಿಕ ಹಿನ್ನೆಲೆಗಳು, ಅಲ್ಲಿನ ಸಸ್ಯ, ಪ್ರಾಣಿ ಸಂಕುಲಗಳ ವಿವರಗಳು, ಅಲ್ಲಿನ ಜನಸಂಸ್ಕೃತಿ ಈ ಎಲ್ಲವನ್ನೂ ಕಾರಂತರು ತಮ್ಮ ಕಥನದಲ್ಲಿ ಹಿಡಿದಿರಿಸಿದ್ದಾರೆ.
     ಕಾರಂತರು ತಾವು ದೇವರನ್ನು ಮೊದಲಿನಿಂದಲೂ ನಂಬಿದವರಲ್ಲ. ದೈವ, ದೇವರುಗಳ ಬಗ್ಗೆ ಅವರಲ್ಲಿ ಯಾವ ಬಗೆಯ ಮನೋಭಾವವಿತ್ತೆನ್ನುವುದಕ್ಕೆ ಅವರೇ ಹೇಳಿರುವ ಈ ಮಾತುಗಳು ಸಾಕ್ಷಿ- ` ನಾನು ದೇವರನ್ನು ನಂಬುವುದಿಲ್ಲ. ಏಕೆಂದರೆ ನಾನು ನೋಡಿಲ್ಲ. ನನಗೆ ಯಾವುದು ಗೊತ್ತಿಲ್ಲವೋ ಅದನ್ನು ನಂಬುವುದಿಲ್ಲ. ರಾಮಕೃಷ್ಣ ಪರಮಹಂಸರು ನಂಬಿದ್ದರು. ಅದನ್ನು ತಪಸ್ಸಿನಿಂದ ಕಂಡುಕೊಂಡರು. ನನಗೆ ರಾಮ ಎಂದರೆ ರಾಜಾ ರವಿವರ್ಮ ಅವರ ಚಿತ್ರ. ಕೃಷ್ಣ ಎಂದರೆ ಗುಬ್ಬಿ ವೀರಣ್ಣ ನವರ ಕೃಷ್ಣ ಲೀಲಾ  ನೆನಪಿಗೆ ಬರುತ್ತದೆ.’ ಆದರೆ ಹಾಗೆಂದ ಮಾತ್ರಕ್ಕೆ ಇನ್ನೊಬ್ಬರ ನಂಬಿಕೆಗೆ ಅವರೆಂದಿಗೂ ಘಾಸಿಗೊಳಿಸಿದವರಲ್ಲ. ಅಷ್ಟೇ ಏಕೆ ಒಮ್ಮೆ ಕೊಲ್ಲೂರಿನ ಮೂಕಾಂಬಿಕಾ ದೇವಾಲಯದಲ್ಲಿ ಅಮೂಲ್ಯವಾದ ಒಡವೆಗಳು ಕಳ್ಳತನವಾದಾಗ ತಾವೇ ದೇವಾಲಯದ ಆಡಳಿತದವರನ್ನು ಒಪ್ಪಿಸಿ ನ್ಯಾಯಾಲಯಕ್ಕೆ ರಿಟ್ ಸಲ್ಲಿಸಿದ್ದರು.
    ಪರಂಪರೆಯಿಂದ ಬಂದ ಕೆಲ ಮೌಲ್ಯಗಳು ಮಾನವನಿಗೆ ತನ್ನ ಎಲ್ಲಾ ಕಷ್ಟ ಕಾರ್ಪಣ್ಯಗಳ ನಡುವೆಯೂ ಬದುಕುವ ಸ್ಥೈರ್ಯವನ್ನು ನೀಡುತ್ತವೆ ಎನ್ನುವುದನ್ನು ಕಾರಂತರಿಗೆ ಅರಿವಿತ್ತು. ಅವರು ಸಂಪ್ರದಾಯಗಳನ್ನು ಧಿಕ್ಕರಿಸುತ್ತಿದ್ದರಾದರೂ ಹಬ್ಬ ಹರಿದಿನಗಳು, ಜಾತ್ರೆ, ಉತ್ಸವಗಳು, ದೇವಾಲಯದಲ್ಲಿನ ಶಿಲ್ಪಗಳು, ಚಿತ್ರಭಿತ್ತಿಗಳು ಇವುಗಳಲ್ಲಿ ಕಾರಂತರಿಗೆ ಅಪಾರ ಕುತೂಹಲವಿತ್ತು. ಕಾರಂತ ಕಾದಂಬರಿಗಳಲ್ಲಿ ಬರುವ ಮೂಕಜ್ಜಿಯಂತಹಾ ಪಾತ್ರಗಳಲ್ಲಿ ಕಾರಂತರ ದೈವ ನಂಬಿಕೆಗಳ ಕುರಿತಾದ ಸ್ಪಷ್ಟ ಚಿತ್ರಣಾವನ್ನು ನಾವು ಕಾಣುತ್ತೇವೆ. ಜೀವನಕ್ಕೆ ಸ್ಪೂರ್ತಿಯನ್ನು ತುಂಬಬಲ್ಲ ಪಾತ್ರ ಮೂಕಜ್ಜಿಯದು. ಆಕೆ ಜೀವನವನ್ನು ಅರ್ಥೈಸುವ ರೀತಿ ಬಲು ವಿಶಿಷ್ಟವಾದುದು ಎನ್ನಬೇಕು. ಆಕೆಯೂ ಸೇರಿದಂತೆ ಕಾರಂತ ಕಾದಂಬರಿಯಲ್ಲಿನ ಹಿರಿಯರ ಪಾತ್ರಗಳು  ತೋರುವ ಘನತೆ, ಜೀವನ ಶ್ರದ್ಧೆ ಅಸಾಧಾರಣವಾದುದು.
    ಕಾರಂತರ ಬರವಣಿಗೆಗಳ ಕುರಿತಾಗಿ ಕನ್ನಡದ ಮತ್ತೊಬ್ಬ ಶ್ರೇಷ್ಠ ವಿದ್ವಾಂಸರಾದ ತೀ. ನಂ. ಶ್ರೀಕಂಠಯ್ಯನವರ ಅಭಿಪ್ರಾಯ ಸಹ ಈ ಸಂದರ್ಭದಲ್ಲಿ  ಇಲ್ಲಿ ಉಲ್ಲೇಖಾರ್ಹವಾದುದು. ‘ನಿಸರ್ಗವೇ ನಮ್ಮ ಎದುರಿಗೆ ಸುರುಳಿ ಬಿಚ್ಚಿಕೊಂಡು ಸಾಗುತ್ತಿದ್ದರೆ ಉಂಟಾಗಬಹುದಾದ ಅನುಭವ ಕಾರಂತರ ಕೃತಿಗಳನ್ನು ಓದುತ್ತಿರುವಾಗ ನನಗೆ ಅನೇಕ ವೇಳೆ ಲಭಿಸಿದೆ. ಅವರ ಬರಹದಲ್ಲಿ ಒಟ್ಟಿನ ಮೇಲೆ ಕಲೆಯ ನಿರ್ಮಿತಿಗಿಂತ ನಿಸರ್ಗದ ಆವಿಷ್ಕೃತಿ ಹೆಚ್ಚು. ಇಲ್ಲಿ ನಿಸರ್ಗವೆಂದರೆ ಕಡಲು, ಬೆಟ್ಟ, ಹೊಳೆ, ಕಾಡು ಮೊದಲಾದ ಅಚೇತನ ಪ್ರಕೃತಿ ಮಾತ್ರವಲ್ಲ, ವಿವಿಧ ವಿಚಿತ್ರವಾದ ಮಾನವಪ್ರಕೃತಿಯೂ ಅವರಲ್ಲಿ ಹಾಸುಹೊಕ್ಕಾಗಿ ಸೇರುತ್ತದೆ. ಕಾರಂತರ ಬರವಣಿಗೆ ಬೆಳೆದಂತೆಲ್ಲ ಅವರ ಸಹಾನುಭೂತಿ ಶಕ್ತಿಯೂ ಬೆಳೆದು ಬಂದಿರುವಂತೆ ಕಾಣುತ್ತದೆ. ದುಡಿಮೆ ದುಃಖ ಇವೇ ತಮ್ಮ ಬಾಳಿನ ಸಾರವಾದರೂ ಅಚಲ ಶ್ರದ್ಧೆಯನ್ನು ಭದ್ರವಾಗಿ ನೆಮ್ಮಿ ನಿಲ್ಲುವ ಸ್ತ್ರೀಪಾತ್ರಗಳಲ್ಲಂತೂ ಕಾರಂತರಿಗೆ ಅಪಾರ ಗೌರವ. ಇಂಥ ಪಾತ್ರಗಳಿಂದಲೇ ಅವರ ಮಹಾಕೃತಿ ಮರಳಿ ಮಣ್ಣಿಗೆ, ನಂಬಿದವರ ನಾಕ-ನರಕ ಮೊದಲಾದವು ಅಮರವಾಗಿರುವುದು. ವಿಚಾರಪರರಾದ ಕಾರಂತರ ದೃಷ್ಟಿಯಲ್ಲಿ ಬಾಳ್ವೆಯೇ ಬೆಳಕು. ಆದರೆ ಅನ್ಯರ ಬದುಕನ್ನು ಅರ್ಥಮಾಡಿಕೊಳ್ಳಬೇಕಾದರೆ ಅವರ ಸಾಂಪ್ರದಾಯಿಕವಾದ ನಂಬಿಕೆಗಳನ್ನು -ಅವು ತಮ್ಮವಲ್ಲದಿದ್ದರೂ- ಅರ್ಥಮಾಡಿಕೊಳ್ಳಬೇಕು ಎಂಬುದು ಕಾರಂತರ ಧೃಡತತ್ವ. ಡಾಂಭಿಕವರ್ತನೆಯನ್ನು, ಆಷಾಡಭೂತಿ ವಿದ್ಯೆಯನ್ನು ಕಂಡರೆ ಮಾತ್ರ ಅವರಿಗೆ ಎಂದಿಗೂ ಆಗದು. ಅದನ್ನು ವ್ಯಂಗ್ಯವಾಗಿ ವಾಚ್ಯವಾಗಿ ಅವರು ಖಂಡಿಸುತ್ತಲೇ ಇರುತ್ತಾರೆ. ಇಷ್ಟಾದರೂ ಬದುಕಿನ ಅನಂತ ವಿವಿಧತೆಯನ್ನು ಅವರು ಚೆನ್ನಾಗಿ ಮನಗಂಡವರು; 'ಹಳ್ಳಿಯ ಹತ್ತು ಸಮಸ್ತರು' ಎಂಬ ಅಪೂರ್ವ ಕೃತಿ ಇದಕ್ಕೆ ಉತ್ತಮ ಸಾಕ್ಷಿ. ಕಾದಂಬರಿಯ ತಂತ್ರದ ಕಡೆ ಕಾರಂತರ ಗಮನ ಕಡಿಮೆ. ಆದರೆ ಮನಸ್ಸು ಮಾಡಿದರೆ ಅದರಲ್ಲಿ ಎಂಥ ಸಿದ್ಧಿಯನ್ನು ಅವರು ಮುಟ್ಟಬಲ್ಲರೆಂಬುದನ್ನು ಅವರ 'ಅಳಿದ ಮೇಲೆ' ಸಾರುತ್ತದೆ.’
    ಹೀಗೆ ಒಟ್ತಾರೆ ತೊಂಭತ್ತಾರು ವರ್ಷಗಳ ಕಾಲ ತುಂಬು ಜೀವನ ನಡೆಸಿದ ಕಾರಂತರು ತಾವು ಬಯಸಿದಂತೆ ಬದುಕಿದವರು, ಹೊರತಾಗಿ ಇನ್ನೊಬ್ಬರಿಗಾಗಿ ಅಲ್ಲ. ಅವರು ಬದುಕಿದ ರೀತಿಯಲ್ಲಿ ಅವರಿಗೆ ಸಂತೃಪ್ತಿ ಇತ್ತು. ಇಂತಹಾ ಬಹುಮುಖಿ ವ್ಯಕ್ತಿತ್ವದ ಕಾರಂತರ ಬಗ್ಗೆ ಎಷ್ಟು ಬರೆದರೂ ಸಾಕೆನ್ನಿಸುವುದಿಲ್ಲ. ಅದೇ ಅವರ ಬದುಕಿನ ಅಗಾಧತೆ ಮತ್ತು ವೈವಿದ್ಯಮಯ ವ್ಯಕ್ತಿತ್ವಕ್ಕೆ ಸಾಕ್ಷಿ.  ಕಾರಂತರು ತಾವು ನಡೆಸಿದ ಮತ್ತು ಎಂದಿಗೂ ಬಯಸುತ್ತಿದ್ದ ಕ್ರಿಯಾಶೀಲ ಜೀವನವೇ ನಮಗೆಲ್ಲ ದಾರಿದೀಪವಾಗಬೇಕಿದೆ. ಅಂತಹಾ ಅಪೂರ್ವ ಧೀಮಂತ ಸಾಹಿತಿ ಶಿವರಾಮ ಕಾರಂತರ ದಿವ್ಯ ಚೇತನಕ್ಕೆ ಅವರ ಜನುಮ ದಿನದ ಈ ಸಂದರ್ಭದಲ್ಲಿ ಈ ಅಲ್ಪನ ಭಾವಪೂರ್ಣ ನಮನಗಳು.
    ನಮಸ್ಕಾರ.

Sunday, October 06, 2013

ನಮ್ಮಲ್ಲಿನ ಸ್ಥಳ ಪುರಾಣಗಳು(Myths) -8

ಕಾಳಿಘಟ್ಟ(Kalighat)
    ನಮಸ್ಕಾರ ಸ್ನೇಹಿತರೇ,
    ಮೊದಲಿಗೆ ತಮಗೆಲ್ಲರಿಗೂ ಶರನ್ನವರಾತ್ರಿಯ ಹಾರ್ದಿಕ ಶುಭಾಶಯಗಳು.
    ಭಾರತದಲ್ಲಿರುವ ಐವತ್ತೆರಡು ಶಕ್ತಿಪೀಠಗಳಲ್ಲಿ ಒಂದೆನಿಸಿದ ಇಂದಿನ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿರುವ ಕಾಳಿಘಟ್ಟದ ಕಾಳಿ ಮಂದಿರ ಬಹು ಪ್ರಸಿದ್ದ ಹಾಗೂ ಪುರಾತನ ಐತಿಹ್ಯವನ್ನು ಹೊಂದಿದ ದೇವಾಲಯವಾಗಿದೆ. ಇಲ್ಲಿನ ಕಾಳಿ ಮಾತೆಯಿಂದಾಗಿಯೇ ನಗರಕ್ಕೆ ‘ಕೋಲ್ಕತ್ತಾ’ ಎನ್ನುವ ಹೆಸರು ಬಂದಿದೆ ಎಂದು ಹೇಳಬಹುದು. ನಾಥ ಸಂಪ್ರದಾಯದವರ ಆರಾಧ್ಯ ದೇವರಾದ ಈ ಶಕ್ತಿದೇವತೆಯು ಇಂದಿಗೂ ತನ್ನ ಲಕ್ಷಾಂತರ ಭಕ್ತರನ್ನು ಸಲಹುತ್ತಾ ಅವರಿಂದ ಸೇವೆಯನ್ನು ಪಡೆಯುತ್ತಾ ಲೋಕವನ್ನು ಸಲಹುತ್ತಿದ್ದಾಳೆ.


    ಶಿವನ ಪತ್ನಿಯಾದ ಸತಿದೇವಿಯು ತಾನು ಸ್ವತಃ ಆತ್ಮಾಹುತಿ ಮಾಡಿಕೊಂಡಂತಹಾ ಸಮಯದಲ್ಲಿ ದೇಹವನ್ನು ಹೊತ ಶಿವನು ಮೂಲೋಕವನ್ನು ಸುತ್ತುತಿರಲು ಲೋಕ ಕಲ್ಯಾಣಾರ್ಥ ಮಹವಿಷ್ಣುವು ಸತಿಯ ದೇಹವನ್ನು ತುಂಡರಿಸುತ್ತಾನೆ. ದೇಹವು ಒಟ್ಟು ಐವತ್ತೆರಡು ತುಂಡುಗಳಾಗಿ ವಿವಿಧೆಡೇಗಳಲ್ಲಿ ಬೀಳುತ್ತದೆ. ಅಂತಹಾ ಕ್ಷೇತ್ರಗಳೆಲ್ಲ ಮುಂದೆ ಶಕ್ಥಿಪೀಠಗಳೆನ್ನಿಸಿಕೊಳ್ಳುತ್ತವೆ. ಕಾಳಿಘಟ್ಟದ ಈ ಪ್ರದೇಶದಲ್ಲಿ ಸತಿಯ ಬಲಗಾಲಿನ ಬೆರಳುಗಳು ಬಿದ್ದಿದ್ದವೆಂದು ನಂಬಲಾಗಿದ್ದು, ಇದು ಭಾರತದಲ್ಲಿನ ನಾಲ್ಕು ಪುರಾತನ ಶಕ್ತಿಪೀಠಗಳಲ್ಲಿ ಒಂದಾಗಿದೆ.
    ಈ ಹಿಂದೆಯೇ ಹೇಳಿದಂತೆ ಕಾಳಿಘಟ್ಟದ ಈ ಕಾಳಿ ಮಂದಿರವು ನಾಥಸಿದ್ದರ ಸಂಪ್ರದಾಯಕ್ಕೆ ಸೇರಿದ್ದಾಗಿದೆ. ನಾಥಸಿದ್ದರ ಪ್ರಸಿದ್ದ ಗುರು ಗೋರಕ್ಷನಾಥರ ಪ್ರಮುಖ ಶಿಷ್ಯರಲ್ಲಿ ಒಬ್ಬರಾದ ಚೌರಂಗಿನಾಥರು ಇಲ್ಲಿ ಶಿ ಶಕ್ತಿದೇವತೆಯ ಪೂಜೆಗೆ ಮೊದಲುಮಾಡಿದರೆಂದು ಹೇಳಲಾಗುತ್ತದೆ.
    ಒಮ್ಮೆ ಚೌರಂಗನಾಥರು ಗಂಗಾ ತಟದಲ್ಲಿ ಹೋಗುತ್ತಿರಲಾಗಿ ನದಿ ತಟಾಕದ ಒಂದು ಕಡೆಯಲ್ಲಿ ಪ್ರಕಾಶಮಾನವಾದ ಬೆಳಕು ಬರುತ್ತಿರುವುದನ್ನು ಕಂಡರು. ಅದನ್ನು ಕಂಡು ಕುತೂಹಲದಿಂದ ಆ ಬೆಳಕಿನ ಮೂಲವನ್ನು ಹುಡುಕ ಹೊರಟಾಗ ಭಾಗೀರತಿ ನದಿ ದಂಡೆಯಲ್ಲಿದ್ದ ಒಂದು ಕಲ್ಲಿನ ಪಾದಾಂಗುಲಿಗಳಿಂದ ಆ ಪ್ರಕಾಶವು ಹೊರಬರುತ್ತಿರುವುದು ತಿಳಿಯಿತು. ಹಾಗೆಯೇ ಅಲ್ಲೇ ಸನಿಹದಲ್ಲಿ ಸ್ವಯಂಭು ನಕುಲೇಶ್ವರ ಲಿಂಗವೊಂದು ಪತ್ತೆಯಾಯಿತು. ಈ ಪ್ರಕಾರವಾಗಿ ಪತ್ತೆಯಾದ ಕಲ್ಲಿನ ಪಾದಾಂಗುಲಿತು ಮಹಾಶಕ್ತಿ ಸತಿದೇವಿಯದೆನ್ನುವುದನ್ನು ಅರಿತ ಚೌರಂಗನಾಥರು ಅಲ್ಲಿಂದ ಆ ದಟ್ಟ ಕಾನನದ ನಡುವೆಯೇ ಕಾಳಿಯ ಉಪಾಸನೆಯನ್ನು ಮಾಡಲು ತೊಡಗಿದರು.
ಚೌರಂಗನಾಥರ ಹಿನ್ನೆಲೆ:
    ನಾಥಪಂಥದ ಪ್ರಮುಖರಾದ ಗೋರಕ್ಷನಾಥರ ಮುಖ್ಯ ಶಿಷ್ಯರಾಗಿದ್ದ ಚೌರಂಗನಾಥರು ಬಂಗಾಲದ ಮಹಾರಾಜನಾಗಿದ್ದ ದೇವಪಾಲನ ಮಗನಾಗಿದ್ದರು. ದೇವಪಾಲನ ಮೊದಲ ಪತ್ನಿಯು ಚೌರಂಗನಾಥರ ತಾಯಿಯು, ಚೌರಂಗನಾಥರು ಇನ್ನೂ ಸಣ್ಣವನಾಗಿದ್ದಾಗಲೇ ಮೃತಳಾಗಿದ್ದಳು. ತದನಂತರದಲ್ಲಿ ದೇವಪಾಲನು ತಾನು ಇನ್ನೊಂದು ವಿವಾಹವಾದನು. ಆದರೆ ಹಾಗೆ ವಿವಾಹವಾಗಿ ಬಂದಾಕೆಗೆ ಚೌರಂಗನಾಥರಲ್ಲಿ ಕಿಂಚಿತ್ತೂ ಪ್ರೀತಿಯಿರಲಿಲ್ಲ, ಬದಲಾಗಿ ತನಗೆ ಹುಟ್ಟುವ ಮಗನೇ ಮುಂದೆ ಸಿಂಹಾಸನಾಧಿಪತಿಯಾಗಬೇಕೆಂಬ ಹಂಬಲದೊಂದಿಗೆ ಚೌರಂಗಿನಾಥರ ಎರಡೂ ಕೈ ಮತ್ತು ಕಾಲುಗಳನ್ನು ಕತ್ತರಿಸಿ ದಟ್ಟವಾದ ಅರಣ್ಯದಲ್ಲಿ ಬಿಟ್ಟುಬಂದಳು.
    ಹೀಗೆ ಅಂಗವಿಹೀನನಾಗಿದ್ದ ಚೌರಂಗನಾಥರು ತಾವು ಅನೇಕ ವರ್ಷಗಳ ಕಾಲ ಅದೇ ಕಾಡಿನ ನಡುವೆ ಒಂಟಿಯಾಗಿ ಕಾಲಕಳೆದ ಮೇಲೆ ಒಂದು ದಿನ ನಾಥಪಂಥದ ಸಿದ್ದ ಪುರುಷರಾದ ಗೋರಕ್ಷನಾಥರ ಶಿಶ್ಯ ಮತ್ಸೇಂದ್ರನಾಥರ ಕಣ್ಣಿಗೆ ಬಿದ್ದರು. ಮತ್ಸೇಂದ್ರನಾಥರು ಈ ಅಂಗವಿಹೀನ ಸಣ್ಣ ಬಾಲಕನನ್ನು ನೋಡಿ ಕನಿಕರಗೊಂಡು ಆತನನ್ನು ತನ್ನ ಬಳಿಯೇ ಇರಿಸಿಕೊಂಡು ಆರೈಕೆಮಾಡತೊಡಗಿದರು. ಹೀಗೆ ಕೆಲಕಾಲ ಮತ್ಸೇಂದ್ರನಾಥರ ಆರೈಕೆಯಲ್ಲಿದ್ದ ಬಾಲಕ ಚೌರಂಗಿನಾಥರನ್ನು ಮತ್ಸೇಂದ್ರನಾಥರು ತಮ್ಮ ಗುರುಗಳಾದ ಗೋರಕ್ಷನಾಥರ ಸಾನ್ನಿಧ್ಯಕ್ಕೆ ಕರೆದೊಯ್ದರು. ಗೋರಕ್ಷನಾಥರು ಆ ಬಾಲಕನಿಗೆ ಯೋಗದೀಕ್ಷೆಯನ್ನು ನೀಡಿ ಯೋಗ ಶಿಕ್ಷಣವನ್ನು ನೀಡಲು ಮುಂದಾದರು. ಬಾಲಕರಾದ ಚೌರಂಗಿನಾಥ್ರು ಬಲು ನಿಷ್ಠೆ, ಶ್ರದ್ಧಾ ಭಕ್ತಿಗಳಿಂದ ಯೋಗಾಭ್ಯಾಸದಲ್ಲಿ ತೊಡಗಿಕೊಂಡರು. ಸತತ ಹನ್ನೆರಡುವ ಯೋಗ  ಸಾಧನೆಯ ಫಲವಾಗಿ ತಾವು ಬಾಲ್ಯದಲ್ಲಿ ಕಳೆದುಕೊಂಡಿದ್ದ ಎರಡು ಕೈ ಹಾಗೂ ಕಾಲುಗಳನ್ನು ಅತ್ಯಂತ ಆಶ್ಚರ್ಯಕರ ರೀತಿಯಲ್ಲಿ ತಿರುಗಿ ಪಡೆದುಕೊಂಡರು.
    ಹೀಗೆ ತಾವು ಕಳೆದುಕೊಂಡಿದ್ದ ನಾಲ್ಕು ಅಂಗಗಳನ್ನು ತಮ್ಮ ಯೋಗಬಲದಿಂದಲೇ ಹಿಂತಿರುಗಿ ಪಡೆದುಕೊಂಡ ಕಾರಣದಿಂದ ಆ ಸಿದ್ದಪುರುಷರಿಗೆ ‘ಚೌರಂಗಿನಾಥ’ ಎಂಬ ಹೆಸರು ಪ್ರಾಪ್ತವಾಯಿತು. ಹಾಗೆಯೇ ಚೌರಂಗಿನಾಥರು ತಾವು ನಡೆಸಿದ ಆ ಮಹಾ ಯೋಗತಂತ್ರಕ್ಕೆ ‘ಖಂಡ ಮುಂಡ ಯೋಗ’ ಎನ್ನುವ ಹೆಸರು ಸಂದಿತು.
    ಇಂತಹಾ ನಾಥಸಿದ್ದ ಪುರುಷರಾದ ಚೌರಂಗಿನಾಥರಿಂದ ಪೂಜಿಸಲ್ಪಟ್ಟ ಮಹಾಶಕ್ತಿ ಶ್ರೀ ಕಾಳಿ ಮಾತೆಯೇ ಯಿಂದಿಗೂ ಕೋಲ್ಕತ್ತದ ಕಾಳಿಘಟ್ಟದಲ್ಲಿ ನಮ್ಮೆಲ್ಲರಿಗೂ ದರ್ಶನ ನೀಡುತ್ತಿರುವ, ತನ್ನ ಭಕ್ತಕೋಟಿಯನ್ನು ಸಲಹುತ್ತಿರುವ ಜಗನ್ಮಾತೆಯಾಗಿದ್ದಾಳೆ.
ದಸರೆಯ ಈ ಶುಭ ಸಂದರ್ಭದಲ್ಲಿ ದುಷ್ಟ ಶಿಕ್ಷಾ ಶಿಷ್ಟ ರಕ್ಷಾ ಸ್ವರೂಪಿಣಿಯಾದ ಆ ಮಹಾತಾಯಿಯ ಪಾದಾರವಿಂದಗಳಿಗೆ ನಮಿಸುತ್ತಾ ನಾವೂ ಕೃತಾರ್ಥರಾಗೋಣ.
    ನಮಸ್ಕಾರ. 

Tuesday, October 01, 2013

ಜಗಜಟ್ಟಿಗಳ ಜಗದೊಳಗೆ...... ನೆನಪುಗಳ ಮೆರವಣಿಗೆ.....

ದಸರಾ ಬಂತೆಂದರೆ ನಮಗೆಲ್ಲಾ ನೆನಪಾಗುವುದು ಮೈಸೂರು, ಅಲ್ಲಿನ ವೈಭವದ ಜಂಬೂ ಸವಾರಿ. ಆದರೆ ಮೈಸೂರಿನ ಮಣ್ಣಿನಲ್ಲೇ ಒಂದಾದಂತಿರುವ ಹಿಂದೊಮ್ಮೆ ರಾಜಾಶ್ರಯ ಪಡೆದು ತನ್ನ ವೈಭವದ ದಿನಗಳನ್ನು ಕಂಡಿದ್ದ ಗಂಡು ಕಲೆ ಕುಸ್ತಿಯ ವಿಚಾರ ನಮ್ಮಲ್ಲೆಷ್ಟು ಮಂದಿಗೆ ತಿಳಿದಿದೆ? ದಸರೆಯ ವೈಭವದ ದಿನಗಳು ಮರಳಿ ಬರಲು ಕೆಲವೇ ದಿನಗಳು ಮಾತ್ರವೇ ಇರುವ ಈ ಸಮಯದಲ್ಲಿ ದಸರೆಯ ಭಾಗವಾಗಿರುವ ಕುಸ್ತಿಯ ಕುರಿತು ಒಂದಿಷ್ಟು ವಿಚಾರಗಳನ್ನು ತಿಳಿಸುವ ಸಣ್ಣ ಪ್ರಯತ್ನವಿದು.
    
    ನನ್ನೆಲ್ಲಾ ಆತ್ಮೀಯ ಸ್ನೇಹಿತರಿಗೂ ನನ್ನ ನಮಸ್ಕಾರಗಳು.
    ಇನ್ನೇನು ದಸರಾ ಹತ್ತಿರದಲ್ಲಿಯೇ ಇದೆ. ದಸರಾ ಎಂದೊಡನೆ ನಮಗೆಲ್ಲಾ ನೆನಪಾಗುವುದು ಮೈಸೂರು, ಅಲ್ಲಿನ ರಾಜವೈಭೋಗದ ಜಂಬೂ ಸವಾರಿ, ಅರಮನೆ, ಚಾಮುಂಡೇಶ್ವರಿ ತಾಯಿಯ ವೈಭವಗಳು. ಆದರೆ ದಸರೆಯೆಂದರೆ ಇಷ್ಟೇ ಅಲ್ಲ, ಮೈಸೂರು ದಸರೆಯಲ್ಲಿ ಇನ್ನೂ ಏನೇನೋ ಇವೆ, ಮತ್ತು ಅವೆಲ್ಲಕ್ಕೂ ಅವುಗಳದೇ ಆದ ಪರಂಪರೆಯೂ ಇದೆ. ಅಂಥವುಗಳಾಲ್ಲಿ ಒಂದು ಮೈಸೂರಿನಲ್ಲಿ ನಡೆಯುವ ಕುಸ್ತಿ ಕಾಳಗ.
     ಕುಸ್ತಿ,
    ಇದೊಂದು ಪ್ರಾಚೀನ ಭಾರತೀಯ ಕಲೆ. ಇದರಲ್ಲಿ ನಾನಾ ಪ್ರಕಾರಗಳಿದ್ದು ಹಿಂದೆ ರಾಜ ಮಹಾರಾಜರ ಕಾಲಗಳಾಲ್ಲಿ ರಾಜಾಶ್ರಯವನ್ನು ಹೊಂದಿದ್ದ ಈ ಕುಸ್ತಿಯೆಂಬ ಕ್ರೀಡೆ ಇಂದು ಸಾಕಷ್ಟು ಪ್ರೋತ್ಸಾಹವಿಲ್ಲದೆ ಸೊರಗಿದೆಯಾದರೂ ಇಂದಿಗೂ ದಸರೆ ಬಂತೆಂದರೆ ಮೈಸೂರಿನ ಮಲ್ಲರಿಗೆ ಹಬ್ಬ! ಈ ಸಂದರ್ಭದಲ್ಲಿ ಮೈಸೂರಿನ ಸ್ಥಳೀಯ ಕುಸ್ತಿಪಟುಗಳೊಂದಿಗೆ ರಾಜ್ಯದ ಉತ್ತರ ಭಾಗ ಬೆಳಗಾವಿ, ಬಿಜಾಪುರ ಸೇರಿದಂತೆ ನಾನಾ ಕಡೆಯ ಜಟ್ಟಿಗಳೂ ಮೈಸೂರಿಗೆ ದೌಡಾಯಿಸುತ್ತಾರೆ. ಅವರೆಲ್ಲರೂ ತಮ್ಮ ಅಪೂರ್ವ ಪ್ರತಿಭೆಯನ್ನು ಪಣಕ್ಕಿಟ್ಟು ಅಖಾಡದಲ್ಲಿ ಎದುರಾಳಿಗಳಾನ್ನು ಮಣ್ಣ ಮುಕ್ಕಿಸುವ ಆ ರೋಮಾಂವನಕಾರಿ ಕ್ಷಣಗಳಾನ್ನು ನೋಡಿಯೇ ಅನುಭವಿಸಬೇಕು.
    ಗೋಪಾಲಸ್ವಾಮಿ ಗರಡಿ, , ಮಹಲಿಂಗೇಶ್ವರ ಮಠದ ಗರಡಿ, ಹತ್ತೂ ಜನರ ಗರಡಿ, ಫಕೀರ್ ಅಹಮದ್ ಗರಡಿ, ಈಶ್ವರ ರಾಯನ ಗರಡಿ.......  ಹೀಗೆ ಮೈಸೂರಿನಲ್ಲಿ ಇಂದಿಗೂ ನಾವು ನೂರರಿಂದ ಐನೂರು ಗರಡಿ ಮನೆಗಳನ್ನು ಕಾಣುತ್ತೇವೆ. ಈ ಎಲ್ಲಾ ಗರಡಿ ಮನೆಗಳಲ್ಲಿ ಇಂದಿಗೂ ಸಾಕಶ್ಟು ಜಟ್ಟಿಗಳು ಕುಸ್ತಿ ಕಲೆಯ ಅಭ್ಯಾಸದಲ್ಲಿ ತೊಡಗಿದ್ದಾರೆ. ಆದರೆ ಈ ಹಿಂದಿನ ರಾಜ ಮಹಾರಾಜರ ಕಾಲದ ವೈಭವ , ಪ್ರೋತ್ಸಾಹವನ್ನು ಇಂದು ನಾವು ಕಾಣುವುದಿಲ್ಲ.

ಜಗಜಟ್ಟಿಗಳ ಕಾಳಗ ಪರಂಪರೆ
    ಮೈಸೂರಿನ ಕುಸ್ತಿಗೆ ಅದರದೇ ಆದ ಹಿನ್ನೆಲೆ ಇದೆ. ಈ ಕುಸ್ತಿಯ ತವರೂರು ಗುಜರಾತ್. ಅಲ್ಲಿನ ಮೊದೇರಾ ಪ್ರದೇಶದ ಮೊದಮಲ್ಲ ಬ್ರಾಹ್ಮಣ ಸಮುದಾಯ ಇಂದಿನ ಕುಸ್ತಿ ಅಥವಾ ಮಲ್ಲಯುದ್ದದ ಮೂಲ ಜನಾಂಗವೆನ್ನಲಾಗಿದ್ದು ಕ್ರಮೇಣ ಈ ಜನಾಂಗದವರು ದಕ್ಷಿಣ ಭಾರತವೂ ಸೇರಿದಂತೆ ನಾನಾ ಕಡೆಯಲ್ಲಿ ತಮಗೆ ದೊರಕಿದ ರಾಜಾಶ್ರಯದಡಿಯಲ್ಲಿ ನೆಲೆನಿಂತು ತಮ್ಮಲ್ಲಿನ ಕಲೆಯನ್ನು ಪೋಷಿಸುತ್ತಾ ಬಂದರು. ಇಂತಹಾ ಕುಸ್ತಿಯಾಡುವವರನ್ನು ದೇಶದ ನಾನಾ ಕಡೆಗಳಲ್ಲಿ ‘ಜಟ್ಟಿ’, ‘ಮಲ್ಲ’, ‘ಜೇಧಿ’ ಎಂಬ ನಾನಾವಿಧದ ಹೆಸರುಗಳಿಂದ ಕರೆಯುತ್ತಾರೆ.
    ಇಂತಹಾ ಜಟ್ಟಿಗಳಿಗೆ ಆಶ್ರಯ ನೀಡಿದವರಲ್ಲಿ ಪ್ರಮುಖರಾಗಿ ಕಾಣಿಸುವವರು ವಿಜಯನಗರದ ದೊರೆಗಳು ಹಾಗೂ ಮೈಸೂರಿನ ಒಡೆಯರುಗಳು. ವಿಜಯನಗರಕ್ಕೆ ಭೇಟಿ ಇತ್ತಿದ್ದ ಪೋರ್ಚುಗೀಸ್ ಪವಾಸಿ ಡೊಮಿಂಗೋ ಪಯಾಸ್ ತನ್ನ ಪ್ರವಾಸಿ ಕಥನದಲ್ಲಿ ಜಟ್ಟಿಗಳ ಮಲ್ಲಯುದ್ದ, ಕುಸ್ತಿ ಕಾಳಗದ ಬಗ್ಗೆ ವಿವರಣೆ ನೀಡುತ್ತಾರೆ. ಇನ್ನು ‘ಮಾನಸೋಲ್ಲಾಸ’ವೆಂಬ ಗ್ರಂಥದಲ್ಲಿಯೂ ‘ಜಟ್ಟಿಗಳನ್ನು ಆಮಂತ್ರಿಸಲು ವಿಶೇಷ ಅಧಿಕಾರಿಗಳು ನೇಮಿಸಲ್ಪಡುತ್ತಿದ್ದರು, ಅವರೊಡನೆ ಚಿನ್ನದ ಸರವನ್ನು ಕೊಟ್ಟು ಆಮಂತ್ರಿಸುವ ಪರಿಪಾಠವಿತ್ತು’ ಎಂದು ವಿವರಿಸಲಾಗಿದೆ. ಮಲ್ಲರುಗಳು ತಮಗಾಶ್ರಯ ನೀಡಿದ ದೊರೆಗಳಿಗೆ ನಿಷ್ಠರಾಗಿರುತ್ತಿದ್ದರಲ್ಲದೆ ಮಹಾರಾಜರ ಅಂಗರಕ್ಷಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.
    ವಿಜಯನಗರದ ಪತನಾನಂತರ ಕುಸ್ತಿ ಕಲೆಗೆ ಪ್ರಮುಖವಾಗಿ ಪ್ರೋತ್ಸಾಹ ಮತ್ತು ನೆಲೆ ದೊರಕಿಸಿಕೊಟ್ಟವರೆಂದರೆ ಮೈಸೂರ ಅರಸರು. ಕಂಠೀರವ ನರಸಿಂಹರಾಜ ಒಡೆಯರ್ ನಂತಹಾ ಕೆಲ ಒಡೆಯರು ತಾವುಗಳೆ ಸ್ವತಃ ಕುಸ್ತಿಮಲ್ಲರಾಗಿದ್ದುದು ವಿಶೇಷ. ರಾಜರುಗಳು ಮಾರುವೇಷದಲ್ಲಿ ನೆರೆರಾಜ್ಯಗಳಿಗೆ ಹೋಗಿ ಅಲ್ಲಿನ ಮಲ್ಲರಿಗೆ ಸವಾಲೆಸೆದು ಮಣಿಸಿದ ಘಟನೆಗಳನ್ನು ಇಂದಿಗೂ ಮೈಸೂರು ಸುತ್ತಮುತ್ತಲ ಹಿರಿಯರು ಮೆಲುಕು ಹಾಕುತ್ತಾರೆ. ಕುಸ್ತಿ ಮಲ್ಲರುಗಳು ತಾವು ಹುಲಿ, ಸಿಂಹ, ಆನೆಗಳಂತಹಾ ವನ್ಯಮೃಗಗಳನ್ನು ಮಣಿಸುವ ಮೂಲಕ ಮಹಾರಾಜರುಗಳಿಂದ ಬಿರುದು ಬಾವಲಿಗಳ್ನ್ನು ಪಡೆಯುತ್ತಿದ್ದರು. ಅಲ್ಲದೆ ಹಲವು ಸಂದರ್ಭಗಳಲ್ಲಿ ಈ ಹಿಂದೆ ತಿಳಿಸಿದಂತೆ ರಾಜರುಗಳ ಅಂಗರಕ್ಷಕರಾಗಿರುತ್ತಿದ್ದ ಜಟ್ಟಿಗಳು ರಾಜರ ಪ್ರಾಣ ಉಳಿಸಿದಂತಹಾ ಪ್ರಸಂಗಗಳೂ ಸಾಕಷ್ಟಿವೆ. ಒಮ್ಮೆ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರುಗಳು ಬೇಟೆಗೆ ಹೋಗಿದ್ದಾಗ ಕರಡಿಯೊಂದರ ಧಾಳಿಗೆ ತುತ್ತಾದರು. ಆಗ ಅವರ ಜತೆಯಲ್ಲಿದ್ದ ಸದಾನಂದ ಸುಬ್ಬಾ ಜಟ್ಟಪ್ಪನೆಂಬುವವರು ಮಹಾರಾಜರನ್ನು ತೊಂದರೆಯಿಂದ ಪಾರುಮಾಡಿದರು. ಇದರಿಂದ ಸಂಪ್ರೀತಗೊಂಡ ಮಹಾರಾಜರು ಸದಾನಂದ ಜಟ್ಟಪ್ಪನವರಿಗೆ ಮೈಸೂರಿನ ನಜರಾಬಾದ್ ನಲ್ಲಿ ಗರಡಿಮನೆಯನ್ನಾರಂಭಿಸಲು  ವಿಶಾಲಜಾಗವನ್ನು ನೀಡಿದರು. ಈ ಪ್ರದೇಶದಲ್ಲಿಯೆ ಮುಂದೆ ಅನೇಕ ಜಟ್ಟಿಗ ಮನೆತನಗಳು ನೆಲೆಸಿದವು. ಇಂದಿಗೂ ಈ ಗಾಡಿಮನೆಯು ನಿಂಬಜಾದೇವಿ ಮಂದಿರ ಹಾಗೂ ಕಲ್ಯಾಣಮಂಟಪದ ಪ್ರದೇಶವಾಗಿರುವುದನ್ನು ನಾವು ಕಾಣುತ್ತೇವೆ.
    ಗಂಗಾಧರ ಜಟ್ಟಪ್ಪನೆಂಬ ಇನ್ನೊಬ್ಬ ಕುಸ್ತಿ ಮಲ್ಲನು ತಾನು ಹುಲಿಯನ್ನು ಪಳಗಿಸುವುದರಲ್ಲಿ ನಿಸ್ಸೀಮನೆನಿಸಿಕೊಂಡಿದ್ದನು. ಒಮ್ಮೆ ಆಂಗ್ಲ ಅಧಿಕಾರಿಯೊಬ್ಬ ಕಾಡಿನಿಂದ ಹುಲಿಯೊಂದನ್ನು ತರಿಸಿ ಕಾಳಗಕ್ಕೆ ಜಟ್ಟಪ್ಪನನ್ನು ಕಾಳಗಕ್ಕೆ ಆಹ್ವಾನಿಸಿದಾಗ ಈತನು ಆ ಹುಲಿಯನ್ನು ಸಲೀಸಾಗಿ ಮಣಿಸುತ್ತಾನೆ. ಇದರಿಂದ ಸಂಪ್ರೀತರಾದ ಅಂದಿನ ಮೈಸೂರು ಒಡೆಯರು ತಮ್ಮ ಪಟ್ತದ ಆನೆ ‘ಗಂಗಾಧರ’ನ ಮೇಲೆ ಜಟ್ತಿಯನ್ನು ಮೆರವಣಿಗೆ ಮಾಡಿಸಿದ್ದಲ್ಲದೆ ‘ಗಂಗಾಧರ ಸುಬ್ಬಾ ಜಟ್ಟಪ್ಪ’ ಎನ್ನುವುದಾಗಿ ನಾಮಧೇಯವನ್ನಿತ್ತಿದ್ದರೆನ್ನುವುದು ಈಗ ಇತಿಹಾಸ.
    ವೆಂಕಾಜೆಟ್ಟಿ ಎನ್ನುವ ಉಸ್ತಾದ್ ಓರ್ವರಿಗೆ ರಾಜಾ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರು ನೀಡಿದ ಬೆಳ್ಳಿತಟ್ಟೆಯನ್ನು ಅವರ ವಂಶಜರು ಇಂದಿಗೂ ಕಾಪಾಡಿಕೊಂಡು ಬಂದಿದ್ದು ಅದನ್ನು ‘ವೆಂಕಾಜೆಟ್ಟಿ ತಟ್ಟೆ’ ಎಂದೇ ಇಂದಿಗೂ ಗುರುತಿಸಲಾಗುತ್ತಿದೆ.

ಗರಡಿಮನೆಗಳ  ಒಳಹೊರಗೆ
    ಕುಸ್ತಿ ಅಭ್ಯಾಸಿಗಳಿಗೆ ದೈಹಿಕ ದೃಅಢತೆ ಅತ್ಯಂತ ಅಗತ್ಯವಾದುದು. ನಮ್ಮ ಹಿರಿಯರು ದಾಇಹಿಕ ಕಸರತ್ತಿಗೆ ಅತ್ಯಂತ ಹೆಚ್ಚು ಪ್ರಾಧಾನ್ಯ ನೀಡಿದ್ದ ಕಾರಣ ನಾಡಿನ ಹಳ್ಳಿ ಹಳ್ಳಿಗಳಲ್ಲಿಯೂ ಹನುಮಾನ್ ಗುಡಿಯ ಪಕ್ಕದಲ್ಲಿ ಗರಡಿ ಮನೆಗಳೂ, ವ್ಯಾಯಾಮ ಶಾಲೆಗಳೂ ತಲೆಯೆತ್ತಿದ್ದವು. ಊರಿನ ಕಟ್ಟುಮಸ್ತಾದ ಯುವಕರೆಲ್ಲರೂ ಗರಡಿಮನೆಗೆ ಹೋಗಿ ಸಾಮು ಮಾಡುವುದು ಅಂದಿನ ಕಾಲದಲ್ಲಿ ಸಾಮಾನ್ಯವಿತ್ತು. ಸತತ ಸಾಧಬೆಯಿಂದ ಗಟ್ಟಿಮುಟ್ಟಾದ ದೇಹ, ಎದುರಾಳಿಗಳನ್ನು ನೋಟದಿಂದಲೇ ತಿವಿಯಬಹುದಾದ ಕಣ್ಣೋಟ, ಪ್ರತಿಸ್ಪರ್ಧಿಗಳನ್ನು ಕ್ಷಣಾರ್ಧದಲ್ಲಿ ಮಣ್ಣು ಮುಕ್ಕಿಸುವ ಮಟ್ಟುಗಳನ್ನು ಕರಗತ ಮಾಡಿಕೊಂಡ ಆ ಜಗಜಟ್ಟಿಗಳ ಕಾಳಗವನ್ನು ನೋಡುವುದೇ ಕಣ್ಣಿಗೊಂದು ಹಬ್ಬವಿದ್ದಂತೆ
    ಇನ್ನು ಹೀಗೆ ಅಖಾಡದಲ್ಲಿ ಮದವೇರಿದ ಸಲಗಗಳಂತೆ ಸೆಣೆಸುವ ಈ ಪೈಲ್ವಾನರುಗಳ ದಿನಚರಿಯೂ ಸಹ ವಿಭಿನ್ನವಾದದ್ದು. ದಿನವೂ ಮುಂಜಾನೆ ಯೆದ್ದು ಗರಡಿಮನೆಯತ್ತ ಬರುವ ಪೈಲ್ವಾನರುಗಳು ಕಲ್ಲುಗುಂಡು, ಬಳೆ, ಗದೆ, ಕೊಂತ ಇವೇ ಮುಂತಾದ ಪರಿಕರಗಳನ್ನು ಬಳಸಿಕೊಂಡು ಕಸರತ್ತು ನಡೆಸುವುದಲ್ಲದೆ ಅವರಲ್ಲೆ ಪರಸ್ಪರ ಕಾದಾಡುತ್ತಾ ತಮ್ಮ ಅಭ್ಯಾಸವನ್ನು ನಡೆಸುತ್ತಾರೆ. ಇದೇ ಸಮಯದಲ್ಲಿ ಹುಲಿಹೆಜ್ಜೆ, ಹನುಮಾನ್ ದಂಡೆ, ಕಟಾಪ್, ಚಪ್ಪಡಿದಂಡೆ, ಸುತ್ತಂಡೆ, ನಿಕಾಲ್, ಉಕಾಡ್, ಜರಾಸಂಧಿ, ಭೀಮಸೇನಿ ಪಟ್ಟು ಇವೇ ನಾನಾವಿಧದ ತಾಲೀಮಿನಲ್ಲಿ ನಿರತರಾಗುತ್ತಾರೆ. ನಾನಾ ನಮೂನೆಯ ಪಟ್ಟುಗಳನ್ನು ಹಾಕುವುದು ಹೇಗೆ ಎನ್ನುವುದನ್ನು ಹೇಳಿಕೊಡುವುದೇ ಒಂದು ಕಾಯಕ. ಗರಡಿಯ ಮಲ್ಲರಿಗೆ ಜಗಜಟ್ತಿಗಳಾ ವಜ್ರಕಾಯ ರೂಪಿಸುವಲ್ಲಿ ಗರಡಿಯ ಖಲೀಫರೂ(ಗರಡಿಮನೆಯ ಮುಖ್ಯ ಗುರುಗಳು) ಉಸ್ತಾದರೂ ಸಾಕಷ್ಟು ಆಸ್ಥೆವಹಿಸುತ್ತಿದ್ದರು. ಕುಸ್ತಿಯಾಳುಗಳು ಬಳಸುತ್ತಿದ್ದ ಉಪಕರಣಗಳೂ, ಅವರು ಧರಿಸುತ್ತಿದ್ದ ಉಡುಗೆಗಳೂ ತಮ್ಮದೇ ಆದ ವೈಶಿಷ್ಟ್ಯವನ್ನು ಹೊಂದಿದ್ದವು. ಕರೇಲಾ(ಮರದ ಗದೆ), ಗರ್ದನ್ ಕಲ್ಲು, ಮಲ್ಲಂತಿಗೆ(ಜಟ್ಟಿಗಳು ತೊಡುತ್ತಿದ್ದ ನಡುಕಟ್ಟು), ಹನುಮಾನ್ ಕಾಚಾ ಇವುಗಳಲ್ಲಿ ಹೆಸರಿಸಬಹುದಾದ ಕೆಲವು ವಿಶೇಷ ಸಲಕರಣೆಗಳಾಗಿವೆ.
    ಸ್ನೇಹಿತರೇ ಗರಡಿಮನೆಯೆಂದರೆ ಕುಸ್ತಿಯಾಳುಗಳಿಗೆ ದೇವಾಲಯದಂತೆ. ಅಲ್ಲಿನ ಕರೇಲಾ, ಮಲ್ಲಕಂಬಗಳು ದೈವವಿದ್ದಂತೆ. ಇನ್ನು ಇಲ್ಲಿ  ಇನ್ನೊಂದು ಮುಖ್ಯವಾದ ಅಂಶವೆಂದರೆ ಗರಡಿಮನೆಗಳಲ್ಲಿನ ಘಮ್ ಎಂದು ಸುವಾಸನೆ ಬೀರುವ ಕೆಮ್ಮಣ್ಣು. ಈ ಕೆಮ್ಮಣ್ಣಿನ ರಾಶಿಯೇ ಕುಸ್ತಿಪಟುಗಳ ವಜ್ರಕಾಯಕ್ಕೆ ಭದ್ರ ನೆಲೆಯಾಗಿರುತ್ತದೆ. ಅರಿಶಿನ. ಕುಂಕುಮ, ತುಪ್ಪ ಮಿಶ್ರಿತವಾಗಿರುವ ಈ ಮಣ್ಣಿನಲ್ಲಿ ಸಾಕಷ್ಟು ಔಷ್ಧಿಯ ಸತವವಿದ್ದು ಈ ಮಣ್ಣಿನಲ್ಲಿ ಮಿಂದೇಳುವುದರಿಂದ ಮೈ ಹಗುರಾಗುವುದಲ್ಲದೆ ಚರ್ಮವ್ಯಾಧಿಯೂ ದೂರವಾಗುತ್ತದೆ. ಮುಂಜಾನೆಯೆದ್ದು ಗರಡಿಮನೆಗೆ ಬರುವ ಗರಡಿಯಾಳು ಈ ಮಣ್ಣನ್ನು ಸನಿಕೆಯಿಂದ ಒಂದೆಡೆಯಿಂದ ಇನ್ನೊಂದೆಡೆಗೆ ಹಾಕಬೇಕು. ಇದರಿಂದ ಸ್ನಾಯುಗಳ ಧೃಢತೆ ಹೆಚ್ಚುವುದಲ್ಲದೆ ದೇಹದ ನಾನಾ ಅಂಗಗಳ ಸದೃಢತೆಗೆ ನೆರವಾಗುತ್ತದೆ. ಬಹುವಾಗಿ ದಣಿದು ಇಲ್ಲವೇ ಒತ್ತಡಕ್ಕೆ ಸಿಲುಕಿದ ಸಂದರ್ಭದಲ್ಲಿ ಈ ಮಣ್ಣನ್ನು ಹೊದ್ದು ಮಲಗಿದರೆ ನೋವು ಹuEಠಾತ್ ಮಾಯವಾಗುತ್ತದೆ. ಇನ್ನು ಕುಸ್ತಿಯ ಅಭ್ಯಾಸದ ವೇಳೆ ಬೆನ್ನು, ಕೈ ಕಾಲುಗಳೇನಾದರೂ ಉಳುಕಿದರೆ ಈ ಮಣ್ಣಿನಲ್ಲಿ ಮಸಾಜ್ ಮಾಡಿಸಿಕೊಂಡೆವಾದರೆ ನೋವು ಉಪಶಮನವಾಗುತ್ತದೆ.
    ಇಷ್ಟೆಲ್ಲಾ ಹೇಳಿದ ಮೇಲೆ ಇಂತಹಾ ಮಲ್ಲರು ನಿತ್ಯ ಸೇವಿಸುವ ಆಹಾರದ ಕುರಿತಾಗಿಯೂ ಹೇಳಲೇಬೇಕು. ಕುಸ್ತಿಯಾಳುಗಳ ಪಟ್ಟುಗಳು, ಅವರು ಎದುರಾಳಿಗಳನ್ನು ಮಣ್ಣು ಮುಕ್ಕಿಸುವ ಪರಿ ಇವೆಲ್ಲದರ ಹಿಂದೆ ಅವರ ಸತತ ಅಭ್ಯಾಸದಂತೆಯೇ ಅವರು ದಿನನಿತ್ಯ ಸೇವಿಸುವ ಆಹಾರದ ಪಾತ್ರವೂ ಇದೆ. ಬಾದಾಮಿ ಮಿಶ್ರಿತವಾದ ಲೀಟರ್ ಗಟ್ಟಲೆ ಹಾಲು, ಬೆಲ್ಲ ಮತ್ತು ರವೆಯಿಂದ ಮಾಡಿದ ಸಿಹಿ ಪದಾರ್ಥ, ಬೆಣ್ಣೆ, ಚಪಾತಿ, ರಾಗಿಮುದ್ದೆ, ಹಾಲು, ಹಣ್ಣು ಹಂಪಲುಗಳು (ಇನ್ನು ಕುಸ್ತಿಯಾಳುಗಳೇನಾದರೂ ಮಾಂಸಾಹಾರಿಗಳಾಗಿದ್ದಲ್ಲಿ ಒಂದು ಕೆಜಿಯಷ್ಟು ಮಟನ್ ಇಲ್ಲವೇ ಒಂದಿಡೀ ಕೋಳಿ ಅವರ ಹೊಟ್ಟೆಗೆ ಸೇರಬೇಕು). ಹೀಗೆ ಪೌಷ್ಟಿಕ ಆಹಾರವನ್ನು ಸೇವಿಸುವುದರ ಮೂಲಕ ಕಸರತ್ತಿನಿಂದ ದಣಿದ ದೇಹಕ್ಕೆ ಶಕ್ತಿತುಂಬುತ್ತಾರೆ.
    ಇನ್ನು ಈ ಗರಡಿಮನೆಯಲ್ಲಿನ ಅಭ್ಯಾಸಿಗಳು ಸ್ತ್ರೀಯರಿಂದ ಆದಷ್ಟು ದೂರವಿರಬೇಕು. ಸದಾ ಕಟ್ಟುನಿಟ್ಟಿನ ಬ್ರಹ್ಮಚರ್ಯ ಪಾಲನೆ ಅಗತ್ಯ. ದೇಹದ ಕಟ್ಟುಮಸ್ತಿನೊಂದಿಗೆ ಮನೋದೃಢತೆಯಿದ್ದರೆ ಮಾತ್ರ ಎದುರಾಳಿಗಳನ್ನು ಹಣಿಯಲು ಸಾಧ್ಯವೆನ್ನುವ ಸತ್ಯ ನಮ್ಮ ಹಿರಿಯರಿಗೆ ಅಂದೇ ಮನವರಿಕೆಯಾಗಿತ್ತು. ಅದೇ ಕಾರಣ ಸ್ತ್ರೀ ಸಗದಿಂದ ದೂರವಿದ್ದು ಮನಸ್ಸಿನ ಸ್ಥಿರತೆಯನ್ನು ಹೆಚ್ಚಿಸಿಕೊಂಳ್ಳುವ ಮೂಲಕ, ಸಂಯಮವನ್ನು ಪಾಲಿಸುವುದರ ಮೂಲಕ ಏಕಾಗ್ರತೆಯನ್ನು ಸಾಧಿಸುವುದು ಸಾಧ್ಯವೆಂದು ಅವರು ತಿಳಿದಿದ್ದರು. ಅದಕ್ಕಾಗಿ ಗರಡಿಮನೆಯಲ್ಲಿ ಪುರುಷರಿಗೆ ಮಾತ್ರವೇ ಪ್ರವೇಶವಿತ್ತು. ಅಭ್ಯಾಸದ ಜಾಗದ ಸುತ್ತಲೂ ಹೊರ ಪ್ರದೇಶದ ಜನಗಳಿಗೆ ಕಾಣದಂತೆ ದಪ್ಪನೆಯ ತಡಿಕೆಗಳು ಆವೃತವಾಗಿರುತ್ತಿದ್ದವು. (ಇಷ್ಟಾಗಿಯೂ ಅಪ್ಪಿ ತಪ್ಪಿ ಯಾರಾದರೂ ಹೆಣ್ಣೊಬ್ಬಳು ಗರಡಿಮನೆಯೊಳಗೆ ಕಾಲಿಟ್ತಳೆಂದರೆ ಅವಳ ತಲೆಗೂದಲು ಉದುರುವುದೆಂಬ ನಂಬಿಕೆ ಇತ್ತು!)

ವಜ್ರಮುಷ್ಠಿಯ ವರಸೆ
    ಸ್ನೇಹಿತರೆ, ಮೈಸೂರಿನ ದಸರಾ ಕುಸ್ತಿಯ ಬಗ್ಗೆ ಹೇಳುವಾಗ ಅದರೊಡನೆ ಕುಸ್ತಿಯಲ್ಲೇ ಒಂದು ಭಾಗವಾಗಿರುವ ವಜ್ರಮುಷ್ಠಿ ಕಾಳಗದ ಕುರಿತಾಗಿ ಹೇಳದೆ ಹೋದರೆ ಅದು ಆಭಾಸವಾಗುತ್ತದೆ. ವಜ್ರಮುಷ್ಠಿ ಕಾಳಗವೆಂದರೆ ಅದು ಬರಿಯ ಸೋಲು ಗೆಲುವಿನ ಸೆಣಾಸಾಟವಲ್ಲ, ಬದಲಾಗಿ ನೆತ್ತರು ಚಿಮ್ಮುವವರೆಗಿನ ಸೆಣಸು. ಅದೇ ಇದರ ವೈಶಿಷ್ಟ್ಯ. ಹೋರಾಟಕ್ಕೆ ಕಳೆ ಏರುವುದೇ ಮಲ್ಲರುಗಳ ನೆತ್ತಿಯಿಂದ ರಕ್ತ ಚಿಮ್ಮಿದ ಬಳಿಕ! ಅದುವೇ ಸೋಲು-ಗೆಲುವಿನ ನಿರ್ಣಾಯಕ ಘಟ್ಟ!


    ಈ ವಜ್ರಮುಷ್ಠಿ ಕಾಳಗನಿರತ ಜಟ್ಟಿಗಳು ತಾವು ‘ವಜ್ರನಖ’ವೆಂಬ ಚೂಪಾದ ಆಯುಧವನ್ನು ಮುಷ್ಠಿಗೆ ಕಟ್ಟಿಕೊಂಡು ಸೆಣಸುತ್ತಾರೆ. ಸತತ ಅಭ್ಯಾಸದಿಂದ ಹುರಿಗಟ್ಟಿದ ದೇಹದವರಾದ ಈ ಮಲ್ಲರುಗಳು ತಲೆಯನ್ನು ಬೋಳಿಸಿಕೊಂಡಿರುತ್ತಾರೆ. ಹೂವು ಹಾಕಿ ಪೂಜಿಸಿದಂತಹಾ ಅಖಾಡದಲ್ಲಿ ಇವರುಗಳ ಕಾದಾಟವು ಏರ್ಪಡುತ್ತದೆ.
    ವಜ್ರಮುಷ್ಠಿ ಕಾಳಗಕ್ಕೆ ಬಳಸುವ ‘ವಜ್ರನಖ’ಗಳನ್ನು ಮೊದಲೆಲ್ಲಾ ಆನೆಯ ದಂತಗಳಿಂದ ತಯಾರಿಸುತ್ತಿದ್ದರು. ಈ ವಜ್ರನಖವು ಮುಷ್ಠಿಯ ನಾಲ್ಕು ಬೆರಳುಗಳಿಗೆ ತಾಕುವಂತಿರುತ್ತಿತ್ತು. ಕ್ರಮೇಣ ಅಂತಹಾ ನಖಗಳಾನ್ನು ಇತರೆ ಪ್ರಾಣಿಗಳ ಕೊಂಬಿನಿಂದಲೂ, ಕಬ್ಬಿಣದಿಂದಲೂ ತಯಾರಿಸಲು ಮೊದಲು ಮಾಡಿದರು. ಇದರ ಮುಂದಿನ ತುದಿಭಾಗವು ಉಗುರಿನಂತೆ ಮೊನಚಾಗಿರುತ್ತದೆ. ಇದರ ಹೊಡೆತಕ್ಕೆ ಸಿಕ್ಕಿದ ಎದುರಾಳಿಯ ಮುಖಾದ ಚಹರೆಯೇ ಬದಲಾಯಿಸುವಷ್ಟರ ಮಟ್ಟಿನ ತಾಖತ್ತು ಈ ನಖಕ್ಕೆ ಇದೆ.ಮರಾಠಾ ಚಕ್ರವರ್ತಿ ಶಿವಾಜಿ ಮಹಾರಜರು ತಮ್ಮ ವೈರಿಗಳಾನ್ನು ಕೊಲ್ಲಲು ಬಳಸುತ್ತಿದ್ದ ವ್ಯಾಘ್ರ ನಖವು ಸಹ ಇದೇ ಮಾದರಿಯದಾಗಿತ್ತೆಂದು ಮರಾಠಾ ಗ್ರಂಥಗಳಿಂದ ತಿಳಿದುಬರುತ್ತದೆ.
    ಈ ವಜ್ರಮುಷ್ಠಿ ಕಾಳಗವು ಇಂದಿನ ದಿನಗಳಲ್ಲಿ ವಿಜಯದಶಮಿಯ ದಿನ ಕೇವಲ ಸಾಂಕೇತಿಕವಾಗಿ ಹಾಗೂ ಯದುರಾಜರ ಸಾಂಪ್ರದಾಯಿಕ ವಿಧಾನಗಳಿಗೆ ಸೀಮಿತವಾಗಿದೆ.

ಕುಸ್ತಿಯ ಇಂದಿನ ಗತಿ-ಸ್ಥಿತಿ
    ರಾಜರ ಕಾಲದಲ್ಲಿ ತನ್ನದೇ ವೈಭೋಗದಿಂದ ಮೆರೆದಿದ್ದ ಕುಸ್ತಿ ಇಂದು ಅಕ್ಷರಷಃ ಮೂಲೆಗುಂಪಾಗಿದೆ ಎನ್ನಬೇಕು. ದೇಶವು ಸ್ವಾತಂತ್ರ್ಯ ಪಡೆದು ರಾಜರ ಆಡಳಿತವೆಲ್ಲ ಕೊನೆಯಾಗಿ ಪ್ರಜಾಪ್ರಭುತ್ವ ಸ್ಥಾಪನೆಯಾದ ಬಳಿಕ ಕುಸ್ತಿಯೂ ಸೇರಿದಂತೆ ಅಂದಿನ ಅದೆಷ್ಟೋ ಗ್ರಾಮೀಣ ಕ್ರೀಡೆಗಳಿಗೆ ದೊರಕುತ್ತಿದ್ದ ಪ್ರೋತ್ಸಾಹವು ನಿಂತುಹೋಯಿತು. ಅಂತೆಯೇ ಇಂದಿನ ಆಧುನೀಕತೆಯ ಭರಾಟೆಯಲ್ಲಿ ಎಲ್ಲೆಲ್ಲೂ ತಲೆಯೆತ್ತಿರುವ ಜಿಮ್, ಏರೋಬಿಕ್ಸ್ ನಂತಹಾ ಆಧುನಿಕ ತಾಣಗಳತ್ತ ಯುವಕರು ಹೆಚ್ಚೆಚ್ಚು ವಾಲುತ್ತಿದ್ದಾರೆ. ‘ಸಿಕ್ಸ್ ಪ್ಯಾಕ್’ ಎನ್ನುವ ಮೋಹಕ್ಕೆ ಒಳಗಾಗಿರುವ ಯುವಜನತೆ ಅಲ್ಲಿನ ಉಪಕರಣಗಳನ್ನು ಬಳಸಿ ಕಸರತ್ತಿನ್ನು ನಡೆಸುತ್ತಾ ತಮ್ಮ ನೆಲದ ಸಂಪ್ರದಾಯಿಕ ಕಲೆಯಾದ ಕುಸ್ತಿಯಿಂದ ದೂರಾಗುತ್ತಿದ್ದಾರೆ. ಹೀಗಾಗಿ ಆರೋಗ್ಯದ ಜತೆಗೆ ಶ್ರದ್ದೆ, ಶಿಸ್ತು, ಭಕ್ತಿಯನ್ನು ಕಲಿಸುತ್ತಿದ್ದ ದೇಸೀ ಪರಂಪರೆಯ ಕುಸ್ತಿ ಹಾಗೂ ಗರಡಿ ಮನೆಗಳು ನಿಧಾನವಾಗಿ ನೇಪಥ್ಯಕ್ಕೆ ಸರಿಯುತ್ತಿವೆ.
    ಇಂದಿನ ಯುವಜನತೆಯ ಈ ತೆರನಾದ ನಡೆಗಳಿಂದ ಹಿಂದೆಲ್ಲಾ ನೂರೈವತ್ತಕ್ಕೂ ಹೆಚ್ಚಿದ್ದ ಗರಡಿಮನೆಗಳ ಸಂಖ್ಯೆ ಇಂದು ಅರವತ್ತಕ್ಕೆ ಬಂದು ನಿಂತಿದೆ. ವೈಜ್ಞಾನಿಕ ಆವಿಷ್ಕಾರಗಳು ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯ ಅದೆಷ್ಟೋ ಕಲೆಗಳಾನ್ನು ಬಲಿಪಡೆದಂತೆ ಗರಡಿಮನೆಯ ಮೇಲೆಯೂ ತನ್ನ ಪ್ರಭಾವವನ್ನು ಬೀರಿದೆ. ಇಂದಿನ ಅದೆಷ್ಟೋ ಯುವಕರಿಗೆ ಗರಡಿಮನೆಗಳ ಪರಿಚಯವೇ ಇಲ್ಲದಾಗಿದೆ. ಇನ್ನು ಗರಡಿ ಮನೆ, ಗರಡಿಯಾಳುಗಳ ಬಗ್ಗೆ ಹಿಂದೆ ಜನರಲ್ಲಿದ್ದ ಗೌರವಯುತ ಭಾವನೆಗಳೂ ಇಂದು ನಶಿಸಿವೆ. ಇಷ್ಟಾಗಿಯೂ ಕೆಲ ಯುವಕರು ಗರಡಿಮನೆಯತ್ತ ಬಂದು ಅಭ್ಯಾಸ ನಡೆಸುವುದಕ್ಕೆ ಪ್ರಾರಂಭಿಸಿದರೂ ಇಂದಿನ ದಿನಗಳಾಲ್ಲಿ ಮಾಮೂಲಿಯಾಗಿರುವ ಸಮಯದ ಅಭಾವ, ಕೆಲಸದ ಒತ್ತಡದ ನೆವ ಹೇಳಿ ಅರ್ಧಕ್ಕೆ ಬಿಟ್ಟು ಹೋಗಿಬಿಡುತ್ತಾರೆ.
    ಇನ್ನು ಇಂದಿನ ದಿನಗಳಲ್ಲಿ ಕುಸ್ತಿ ಮಲ್ಲರಿಗೆ ಪ್ರೋತ್ಸಾಹ ನೀಡುವವರೇ ಇಲ್ಲವಾಗಿದೆ. ಹಿಂದೆಲ್ಲಾ ವಾರ ವಾರವೂ ಕುಸ್ತಿ ಪಂದ್ಯಾವಳಿಗಳು ನಡೆಯುತ್ತಿದ್ದವು. ರಾಜರು, ಪೌರ ಮಹಾಜನಗಳು ತಾವು ಇಂತಹಾ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದರು. ಇಂದು ವರುಷಕ್ಕೊಮ್ಮೆ ಕುಸ್ತಿ ಪಂದ್ಯಾವಳಿ ಆಯೋಜಿಸುದೂ ಇಲ್ಲವೆಂಬಂತಾಗಿದೆ. ಇಷ್ಟೇ ಅಲ್ಲ್ದೆ ಗರಡಿಯಾಳುಗಳು ಸಾಕಷ್ಟು ಪೌಷ್ಟಿಕ ಆಹಾರವನ್ನು ಅಪೇಕ್ಷಿಸುತ್ತಾರೆ. ಲೀಟರ್ ಗಟ್ತಲೆ ಬಾದಾಮಿ, ಕೇಸರಿ ಮಿಶ್ರಿತ ಹಾಲು, ಬೆಲ್ಲ್, ರವೆಯಿಂದ ಮಾಡಿದ ಸಿಹಿ, ಹಣ್ಣು ಹಂಪಲುಗಳು ಇವೆಲ್ಲವೂ ಒಬ್ಬ ಸಾಮಾನ್ಯ ಗರಡಿಯಾಳಿನ ನಿತ್ಯದ ಅಗತ್ಯವಾಗುತ್ತದೆ. ಆದರೆ ಇಂದಿನ ದಿನಗಳಲ್ಲಿ ಆಹಾರ ಪದಾರ್ಥಗಳ ಬೆಲೆಯನ್ನೇನಾದರೂ ಗಮನಿಸಿದ್ದಾರೆ ಸಾಮಾನ್ಯ ಜನರ ಊಟಕ್ಕೇ ಕಷ್ಟ ಪಡುವ ವೇಳೆಯಲ್ಲಿ ಇನ್ನು ಗರಡಿಯಾಳುಗಳ ಗತಿಯೇನುಎನ್ನೋಣ?
    ಇಷ್ಟೇ ಅಲ್ಲ ಸ್ನೇಹಿತರೆ, ಇಂದು ಈ ಗರಡಿಮನೆಗಳಿಗೆ ಬರುವ ಅಭ್ಯಾಸಿಗಳು ಬಳಸುವ ಉಪಕರಣಗಳು, ಅವರು ಉಡುವ ಉಡುಗೆಗಳು ಸಹ ದೊರೆಯುವುದು ಕಷ್ಟ. ಕಸರತ್ತು ಅಭ್ಯಾಸಿಗಳು ಧರಿಸುವ ಹನುಮಾನ್ ಕಾಚಾ ಅಥವಾ ಲಂಗೋಟಿಗೆ ಅದರದ್ದೇ ಆದ ಮಹತ್ವವಿದೆ. ಆದರೆ ಇಂದು ಈ ಹನುಮಾನ್ ಕಾಚಾಗಳಾನ್ನು ಹೊಲಿದು ಕೊಡುವವರೆ ಇಲ್ಲವಾಗಿದ್ದಾರೆ. ಈಗಿನವರಿಗೆ ಇಂತಹಾ ವಿನ್ಯಾಸದ ಉಡುಪನ್ನು ಹೊಲಿಯಲೂ ಬರುವುದಿಲ್ಲವಾದ ಕಾರಣ ದೂರ ಪ್ರದೇಶಗಳಿಂದ ಅಂತಹಾ ಉಡುಪನ್ನು ತರಬೇಕಾಗುತ್ತದೆ. ಹೀಗೆ ಪರಿಕರಗಳ ಕೊರತೆ ಇಲ್ಲವೇ ಅಲಭ್ಯತೆಗಳೂ ಕುಸ್ತಿ ಕಲೆ ಯಂತಹಾ ಮಹತ್ವದ ಕಲೆಯೊಂದು  ನೇಪಥ್ಯಕ್ಕೆ ಸರಿಯಲು ಕಾರಣವೆಂದರೆ ತಪ್ಪಾಗಲಾರದು.
    ಹೀಗೆ ಒಟ್ಟಾರೆಯಾಗಿ ಇಂದು ಭಾರತದ ಅದರಲ್ಲಿಯೂ ಮೈಸೂರಿನ ಮಣ್ಣಿನಲ್ಲಿ ಒಂದಾಗಿದ್ದ ಕುಸ್ತಿ ಕಲೆ ಆಧುನೀಕತೆಯ ಭರಾಟೆ, ಸರ್ಕಾರ, ಜನಸಾಮಾನ್ಯರ ಪ್ರೋತ್ಸಾಹದ ಕೊರತೆಯಂತಹಾ ನಾನಾ ಕಾರಣಗಳಿಂದ ನಿಧಾನವಾಗಿ ನಶಿಸುತ್ತಿದೆ. ಈ ರೀತಿಯಾಗಿ ಆಧುನೀಕತೆಯ ಹುಚ್ಚು ಅಲೆಗೆ ಕೊಚ್ಚಿ ಹೋದ ಅನೇಕ ಜನಪದ ಕಲೆಗಳನ್ನು ನಾವಿಂದು ಸ್ಮರಿಸಬಹುದು. ಇಂದು ಕುಸ್ತಿಯೂ ಅದನ್ನು ಹೇಳಿಕೊಡುವ ಗರಡಿಮನೆಗಳು ಸಹ ಅದೇ ಸಾಲಿನಲ್ಲಿದೆ. ಇನ್ನಾದರೂ ನಾವುಗಳು ಎಚ್ಚೆತ್ತುಕೊಳ್ಳದೆ ಹೋದರೆ ನಮ್ಮ ಮುಂದಿನ ತಲೆಮಾರಿನವರಿಗೆ ಕುಸ್ತಿಯೆಂದರೆ ಕೇವಲ ಪುಸ್ತಕ, ಚಿನಿಮಾಗಳಲ್ಲಿ ನೋಡುವಂತಹಾ ದುರ್ಗತಿಯು ಬಂದರೂ ಆಶ್ಚರ್ಯವಿಲ್ಲ!
    ಹೀಗಾಗಿ ದಸರೆಯು ಸಮೀಪಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಸರ್ಕಾರ ಹಾಗೂ ಸಾರ್ವಜನಿಕರು ಇನ್ನಾದರೂ ಇತ್ತ ಗಮನಹರಿಸಿ ನಮ್ಮ ಮಣ್ಣಿನ ಸಂಸ್ಕೃತಿಯ ಭಾಗವಾಗಿರುವ ಕುಸ್ತಿ ಕಲೆಯನ್ನು ಉಳಿಸಿ ಬೆಳೆಸಲು ಮುಂದಾಗಬೇಕಿದೆ. ಕುಸ್ತಿ ಕಲಿತವರಿಗೂ ಅದನ್ನು ಹೇಳಿಕೊಡುವ ಗರಡಿಮನೆಯಂತಹಾ ಸ್ಥಳಗಳಿಗೂ ಸಾಕಷ್ಟು ಅನುಕೂಲಗಳಾನ್ನು ಮಾಡಿಕೊಟ್ಟು ಆ ಮುಖೇನ ನಮ್ಮ ಮುಂದಿನ ಜನಾಂಗಕ್ಕೆ ನಮ್ಮ ದೇಸೀ ಕುಸ್ತಿಯನ್ನು ಕಲಿಯುವುದಕ್ಕೆ ಪ್ರೋತ್ಸಾಹ ನೀಡಬೇಕಿದೆ.
    ನಮಸ್ಕಾರ.