Sunday, October 06, 2013

ನಮ್ಮಲ್ಲಿನ ಸ್ಥಳ ಪುರಾಣಗಳು(Myths) -8

ಕಾಳಿಘಟ್ಟ(Kalighat)
    ನಮಸ್ಕಾರ ಸ್ನೇಹಿತರೇ,
    ಮೊದಲಿಗೆ ತಮಗೆಲ್ಲರಿಗೂ ಶರನ್ನವರಾತ್ರಿಯ ಹಾರ್ದಿಕ ಶುಭಾಶಯಗಳು.
    ಭಾರತದಲ್ಲಿರುವ ಐವತ್ತೆರಡು ಶಕ್ತಿಪೀಠಗಳಲ್ಲಿ ಒಂದೆನಿಸಿದ ಇಂದಿನ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿರುವ ಕಾಳಿಘಟ್ಟದ ಕಾಳಿ ಮಂದಿರ ಬಹು ಪ್ರಸಿದ್ದ ಹಾಗೂ ಪುರಾತನ ಐತಿಹ್ಯವನ್ನು ಹೊಂದಿದ ದೇವಾಲಯವಾಗಿದೆ. ಇಲ್ಲಿನ ಕಾಳಿ ಮಾತೆಯಿಂದಾಗಿಯೇ ನಗರಕ್ಕೆ ‘ಕೋಲ್ಕತ್ತಾ’ ಎನ್ನುವ ಹೆಸರು ಬಂದಿದೆ ಎಂದು ಹೇಳಬಹುದು. ನಾಥ ಸಂಪ್ರದಾಯದವರ ಆರಾಧ್ಯ ದೇವರಾದ ಈ ಶಕ್ತಿದೇವತೆಯು ಇಂದಿಗೂ ತನ್ನ ಲಕ್ಷಾಂತರ ಭಕ್ತರನ್ನು ಸಲಹುತ್ತಾ ಅವರಿಂದ ಸೇವೆಯನ್ನು ಪಡೆಯುತ್ತಾ ಲೋಕವನ್ನು ಸಲಹುತ್ತಿದ್ದಾಳೆ.


    ಶಿವನ ಪತ್ನಿಯಾದ ಸತಿದೇವಿಯು ತಾನು ಸ್ವತಃ ಆತ್ಮಾಹುತಿ ಮಾಡಿಕೊಂಡಂತಹಾ ಸಮಯದಲ್ಲಿ ದೇಹವನ್ನು ಹೊತ ಶಿವನು ಮೂಲೋಕವನ್ನು ಸುತ್ತುತಿರಲು ಲೋಕ ಕಲ್ಯಾಣಾರ್ಥ ಮಹವಿಷ್ಣುವು ಸತಿಯ ದೇಹವನ್ನು ತುಂಡರಿಸುತ್ತಾನೆ. ದೇಹವು ಒಟ್ಟು ಐವತ್ತೆರಡು ತುಂಡುಗಳಾಗಿ ವಿವಿಧೆಡೇಗಳಲ್ಲಿ ಬೀಳುತ್ತದೆ. ಅಂತಹಾ ಕ್ಷೇತ್ರಗಳೆಲ್ಲ ಮುಂದೆ ಶಕ್ಥಿಪೀಠಗಳೆನ್ನಿಸಿಕೊಳ್ಳುತ್ತವೆ. ಕಾಳಿಘಟ್ಟದ ಈ ಪ್ರದೇಶದಲ್ಲಿ ಸತಿಯ ಬಲಗಾಲಿನ ಬೆರಳುಗಳು ಬಿದ್ದಿದ್ದವೆಂದು ನಂಬಲಾಗಿದ್ದು, ಇದು ಭಾರತದಲ್ಲಿನ ನಾಲ್ಕು ಪುರಾತನ ಶಕ್ತಿಪೀಠಗಳಲ್ಲಿ ಒಂದಾಗಿದೆ.
    ಈ ಹಿಂದೆಯೇ ಹೇಳಿದಂತೆ ಕಾಳಿಘಟ್ಟದ ಈ ಕಾಳಿ ಮಂದಿರವು ನಾಥಸಿದ್ದರ ಸಂಪ್ರದಾಯಕ್ಕೆ ಸೇರಿದ್ದಾಗಿದೆ. ನಾಥಸಿದ್ದರ ಪ್ರಸಿದ್ದ ಗುರು ಗೋರಕ್ಷನಾಥರ ಪ್ರಮುಖ ಶಿಷ್ಯರಲ್ಲಿ ಒಬ್ಬರಾದ ಚೌರಂಗಿನಾಥರು ಇಲ್ಲಿ ಶಿ ಶಕ್ತಿದೇವತೆಯ ಪೂಜೆಗೆ ಮೊದಲುಮಾಡಿದರೆಂದು ಹೇಳಲಾಗುತ್ತದೆ.
    ಒಮ್ಮೆ ಚೌರಂಗನಾಥರು ಗಂಗಾ ತಟದಲ್ಲಿ ಹೋಗುತ್ತಿರಲಾಗಿ ನದಿ ತಟಾಕದ ಒಂದು ಕಡೆಯಲ್ಲಿ ಪ್ರಕಾಶಮಾನವಾದ ಬೆಳಕು ಬರುತ್ತಿರುವುದನ್ನು ಕಂಡರು. ಅದನ್ನು ಕಂಡು ಕುತೂಹಲದಿಂದ ಆ ಬೆಳಕಿನ ಮೂಲವನ್ನು ಹುಡುಕ ಹೊರಟಾಗ ಭಾಗೀರತಿ ನದಿ ದಂಡೆಯಲ್ಲಿದ್ದ ಒಂದು ಕಲ್ಲಿನ ಪಾದಾಂಗುಲಿಗಳಿಂದ ಆ ಪ್ರಕಾಶವು ಹೊರಬರುತ್ತಿರುವುದು ತಿಳಿಯಿತು. ಹಾಗೆಯೇ ಅಲ್ಲೇ ಸನಿಹದಲ್ಲಿ ಸ್ವಯಂಭು ನಕುಲೇಶ್ವರ ಲಿಂಗವೊಂದು ಪತ್ತೆಯಾಯಿತು. ಈ ಪ್ರಕಾರವಾಗಿ ಪತ್ತೆಯಾದ ಕಲ್ಲಿನ ಪಾದಾಂಗುಲಿತು ಮಹಾಶಕ್ತಿ ಸತಿದೇವಿಯದೆನ್ನುವುದನ್ನು ಅರಿತ ಚೌರಂಗನಾಥರು ಅಲ್ಲಿಂದ ಆ ದಟ್ಟ ಕಾನನದ ನಡುವೆಯೇ ಕಾಳಿಯ ಉಪಾಸನೆಯನ್ನು ಮಾಡಲು ತೊಡಗಿದರು.
ಚೌರಂಗನಾಥರ ಹಿನ್ನೆಲೆ:
    ನಾಥಪಂಥದ ಪ್ರಮುಖರಾದ ಗೋರಕ್ಷನಾಥರ ಮುಖ್ಯ ಶಿಷ್ಯರಾಗಿದ್ದ ಚೌರಂಗನಾಥರು ಬಂಗಾಲದ ಮಹಾರಾಜನಾಗಿದ್ದ ದೇವಪಾಲನ ಮಗನಾಗಿದ್ದರು. ದೇವಪಾಲನ ಮೊದಲ ಪತ್ನಿಯು ಚೌರಂಗನಾಥರ ತಾಯಿಯು, ಚೌರಂಗನಾಥರು ಇನ್ನೂ ಸಣ್ಣವನಾಗಿದ್ದಾಗಲೇ ಮೃತಳಾಗಿದ್ದಳು. ತದನಂತರದಲ್ಲಿ ದೇವಪಾಲನು ತಾನು ಇನ್ನೊಂದು ವಿವಾಹವಾದನು. ಆದರೆ ಹಾಗೆ ವಿವಾಹವಾಗಿ ಬಂದಾಕೆಗೆ ಚೌರಂಗನಾಥರಲ್ಲಿ ಕಿಂಚಿತ್ತೂ ಪ್ರೀತಿಯಿರಲಿಲ್ಲ, ಬದಲಾಗಿ ತನಗೆ ಹುಟ್ಟುವ ಮಗನೇ ಮುಂದೆ ಸಿಂಹಾಸನಾಧಿಪತಿಯಾಗಬೇಕೆಂಬ ಹಂಬಲದೊಂದಿಗೆ ಚೌರಂಗಿನಾಥರ ಎರಡೂ ಕೈ ಮತ್ತು ಕಾಲುಗಳನ್ನು ಕತ್ತರಿಸಿ ದಟ್ಟವಾದ ಅರಣ್ಯದಲ್ಲಿ ಬಿಟ್ಟುಬಂದಳು.
    ಹೀಗೆ ಅಂಗವಿಹೀನನಾಗಿದ್ದ ಚೌರಂಗನಾಥರು ತಾವು ಅನೇಕ ವರ್ಷಗಳ ಕಾಲ ಅದೇ ಕಾಡಿನ ನಡುವೆ ಒಂಟಿಯಾಗಿ ಕಾಲಕಳೆದ ಮೇಲೆ ಒಂದು ದಿನ ನಾಥಪಂಥದ ಸಿದ್ದ ಪುರುಷರಾದ ಗೋರಕ್ಷನಾಥರ ಶಿಶ್ಯ ಮತ್ಸೇಂದ್ರನಾಥರ ಕಣ್ಣಿಗೆ ಬಿದ್ದರು. ಮತ್ಸೇಂದ್ರನಾಥರು ಈ ಅಂಗವಿಹೀನ ಸಣ್ಣ ಬಾಲಕನನ್ನು ನೋಡಿ ಕನಿಕರಗೊಂಡು ಆತನನ್ನು ತನ್ನ ಬಳಿಯೇ ಇರಿಸಿಕೊಂಡು ಆರೈಕೆಮಾಡತೊಡಗಿದರು. ಹೀಗೆ ಕೆಲಕಾಲ ಮತ್ಸೇಂದ್ರನಾಥರ ಆರೈಕೆಯಲ್ಲಿದ್ದ ಬಾಲಕ ಚೌರಂಗಿನಾಥರನ್ನು ಮತ್ಸೇಂದ್ರನಾಥರು ತಮ್ಮ ಗುರುಗಳಾದ ಗೋರಕ್ಷನಾಥರ ಸಾನ್ನಿಧ್ಯಕ್ಕೆ ಕರೆದೊಯ್ದರು. ಗೋರಕ್ಷನಾಥರು ಆ ಬಾಲಕನಿಗೆ ಯೋಗದೀಕ್ಷೆಯನ್ನು ನೀಡಿ ಯೋಗ ಶಿಕ್ಷಣವನ್ನು ನೀಡಲು ಮುಂದಾದರು. ಬಾಲಕರಾದ ಚೌರಂಗಿನಾಥ್ರು ಬಲು ನಿಷ್ಠೆ, ಶ್ರದ್ಧಾ ಭಕ್ತಿಗಳಿಂದ ಯೋಗಾಭ್ಯಾಸದಲ್ಲಿ ತೊಡಗಿಕೊಂಡರು. ಸತತ ಹನ್ನೆರಡುವ ಯೋಗ  ಸಾಧನೆಯ ಫಲವಾಗಿ ತಾವು ಬಾಲ್ಯದಲ್ಲಿ ಕಳೆದುಕೊಂಡಿದ್ದ ಎರಡು ಕೈ ಹಾಗೂ ಕಾಲುಗಳನ್ನು ಅತ್ಯಂತ ಆಶ್ಚರ್ಯಕರ ರೀತಿಯಲ್ಲಿ ತಿರುಗಿ ಪಡೆದುಕೊಂಡರು.
    ಹೀಗೆ ತಾವು ಕಳೆದುಕೊಂಡಿದ್ದ ನಾಲ್ಕು ಅಂಗಗಳನ್ನು ತಮ್ಮ ಯೋಗಬಲದಿಂದಲೇ ಹಿಂತಿರುಗಿ ಪಡೆದುಕೊಂಡ ಕಾರಣದಿಂದ ಆ ಸಿದ್ದಪುರುಷರಿಗೆ ‘ಚೌರಂಗಿನಾಥ’ ಎಂಬ ಹೆಸರು ಪ್ರಾಪ್ತವಾಯಿತು. ಹಾಗೆಯೇ ಚೌರಂಗಿನಾಥರು ತಾವು ನಡೆಸಿದ ಆ ಮಹಾ ಯೋಗತಂತ್ರಕ್ಕೆ ‘ಖಂಡ ಮುಂಡ ಯೋಗ’ ಎನ್ನುವ ಹೆಸರು ಸಂದಿತು.
    ಇಂತಹಾ ನಾಥಸಿದ್ದ ಪುರುಷರಾದ ಚೌರಂಗಿನಾಥರಿಂದ ಪೂಜಿಸಲ್ಪಟ್ಟ ಮಹಾಶಕ್ತಿ ಶ್ರೀ ಕಾಳಿ ಮಾತೆಯೇ ಯಿಂದಿಗೂ ಕೋಲ್ಕತ್ತದ ಕಾಳಿಘಟ್ಟದಲ್ಲಿ ನಮ್ಮೆಲ್ಲರಿಗೂ ದರ್ಶನ ನೀಡುತ್ತಿರುವ, ತನ್ನ ಭಕ್ತಕೋಟಿಯನ್ನು ಸಲಹುತ್ತಿರುವ ಜಗನ್ಮಾತೆಯಾಗಿದ್ದಾಳೆ.
ದಸರೆಯ ಈ ಶುಭ ಸಂದರ್ಭದಲ್ಲಿ ದುಷ್ಟ ಶಿಕ್ಷಾ ಶಿಷ್ಟ ರಕ್ಷಾ ಸ್ವರೂಪಿಣಿಯಾದ ಆ ಮಹಾತಾಯಿಯ ಪಾದಾರವಿಂದಗಳಿಗೆ ನಮಿಸುತ್ತಾ ನಾವೂ ಕೃತಾರ್ಥರಾಗೋಣ.
    ನಮಸ್ಕಾರ. 

No comments:

Post a Comment