Wednesday, October 30, 2013

ನಮ್ಮಲ್ಲಿನ ಸ್ಥಳ ಪುರಾಣಗಳು(Myths)- 10

ಮಾತೃ ಗಯಾ(Mathru Gaya)

    ಗುಜರಾತ್ ರಾಜ್ಯದ ಉತ್ತರದಲ್ಲಿರುವ ಸಿದ್ದಾಪುರದ ಸಮೀಪವಿರುವ ಪವಿತ್ರ ಕ್ಷೇತ್ರ ಮಾತೃ ಗಯಾ. ಇಲ್ಲಿ ಪ್ರಧಾನವಾಗಿ ಯಾರು ತಮ್ಮ ತಾಯಿಯವರ ಶ್ರಾಧ್ದಾದಿ ಕರ್ಮಗಳನ್ನು ನೆರವೇರಿಸಿ ಪಿಂಡ ಪ್ರಧಾನವನ್ನು ಮಾಡುತ್ತಾರೋ ಅಂತಹಾ ತಾಯಂದಿರಿಗೆ ಮೋಕ್ಷವು ಲಭಿಸುತ್ತದೆನ್ನಲಾಗಿದೆ. ಇಲ್ಲಿರುವ ಬಿಂದು ಸರೋವರದಲ್ಲಿ ದಿನವೂ ಸಾವಿರಾರು ಮಂದಿ ಭಕ್ತರು ಮಿಂದು ತಮ್ಮ ತಮ್ಮ ತಾಯಿಯವರ ಕರ್ಮಗಳಾನ್ನು ನೆರವೇರಿಸುತ್ತಾರೆ.
    ಸೃಷ್ಟಿಯ ಆದಿಮ ಕಾಲದಲ್ಲಿ ಬ್ರಹ್ಮದೇವರ ಮಾನಸ ಪುತ್ರರಾದ ಕರ್ಧಮ ಋಷಿ ಹಾಗೂ ಭಗವಾನ್ ಮನುವಿನ ಮಗಳಾದ ದೇಹುತಿಯವರುಗಳು ವಿವಾಹವಾದರು. ಹೀಗೆ ವಿವಾಹವಾದ ಆ ದಂಪತಿಗಳಿಗೆ ಒಂಭತ್ತು ಜನ ಹೆಣ್ಣುಮಕ್ಕಳು ಜನಿಸಿದರು. ಆದರೆ ದಂಪತಿಗಳು ತಮಗೊಂದು ಗಂಡು ಸಂತಾನವಿಲ್ಲದುದಕ್ಕೆ ಸದಾ ಕಾಲ ಕೊರಗುತ್ತಿದ್ದರು. ಕಡೆಗೆ ಒಂದು ದಿನ ಈರ್ವರೂ ಭಗವಾನ್ ವಿಷ್ಣುವಿನ ಮೊರೆಹೋಗಲು ನಿರ್ಧರಿಸಿ ಸತತ ಹತ್ತು ವರ್ಷಗಳ ಕಾಲ ವಿಷ್ಣುವಿನ ಕುರಿತು ಘೋರ ತಪಸ್ಸನ್ನಾಚರಿಸಿದರು. ದಂಪತಿಗಳ ಭಕ್ತಿಗೆ ಮೆಚ್ಚಿದ ಮಹಾವಿಷ್ಣುವು ತಾನು ಸ್ವತಃ ಆ ದಂಪತಿಗಳೆದುರು ಪ್ರಕಟಗೊಂಡು ‘ತಮಗೇನು ವರವು ಬೇಕು?’ ಎನ್ನುವುದಾಗಿ ಕೇಳಲು ದೇಹುತಿಯು ‘ನಮಗೊಂದು ಗಂಡು ಮಗುವು ಬೇಕಾಗಿದೆ, ನೀನು ನನ್ನ ಗರ್ಭದಲ್ಲಿ ಹುಟ್ಟಿ ಬರಬೇಕು’ ಎಂದು ಬೇಡಿಕೊಳ್ಳಲು ಶ್ರೀ ಮಹಾವಿಷ್ಣುವು ಅದಕ್ಕೆ ಒಪ್ಪಿ ತಾನೇ ಸ್ವತಃ ದೇಹುತಿಯ ಗರ್ಭದಲ್ಲಿ ಕಪಿಲ ಮಹರ್ಷಿಯಾಗಿ ಜನ್ಮದಳೆಯುತ್ತಾನೆ.
    ಇದರಿಂದಾಗಿ ಸಂಪ್ರೀತಗೊಂಡ ಆ ದಂಪತಿಗಳು ತಾವು ಸಂತೋಷದಿಂದ ದಿನಗಳೆಯುತ್ತಾರೆ. ಹೀಗೆ ಹದಿನಾರು ವರುಷಗಳು ಕಳೆಯುತ್ತದೆ. ಅದಾಗ ಕಪಿಲ ಮಹರ್ಷಿಯು ಸಕಲ ಜ್ಞಾನ ಸಂಪನ್ನನಾಗುತ್ತಾನೆ ಮತ್ತು ತನ್ನ ತಾಯಿಗಾಗಿ ತಾನು ರಚಿಸಿದ ‘ಸಾಂಖ್ಯ ದ್ವಾರ ಸ್ತೋತ್ರ’ ವನ್ನು ತಾಯಿ ದೇಹುತಿಯ ಮುಂದೆ ವಾಚಿಸುತ್ತಾನೆ. ಅದರಿಂದ ಅತ್ಯಂತ ಆನಂದಗೊಂಡು ದೇಹುತಿಯ ಕಣ್ಣಾಲಿಗಳಲ್ಲಿ ನೀರು ತುಂಬಿಬರುತ್ತದೆ. ಹಾಗೆ ಆಕೆಯ ಕಣ್ಣೀರಿನ ಒಂದು ಹನಿ ಭೂಸ್ಪರ್ಷವಾಗಲಾಗಿ ಅಲ್ಲೊಂದು ಸರೋವರವು ನಿರ್ಮಾಣಗೊಳ್ಳುತ್ತದೆ.
    
    ಅದಾಗ ತಾಯಿ ದೇಹುತಿಯು ತನ್ನ ಮಗನನ್ನು ಹರಸುತ್ತಾ ‘ನೀನು ವಾಚಿಸಿದ ಈ ಸ್ತೋತ್ರದಿಂದ ನಾನು ಸಂಪ್ರೀತಗೊಂಡಿರುವೆನು, ನನ್ನ ಕಣ್ಣೀರಿನ ಹನಿಯಿಂದುಂಟಾದ ಈ ಸರೋವರವು ಮುಂದೆ “ಬಿಂದು ಸರೋವರ” ಎಂದು ಹೆಸರಾಗುವುದು. ಇಲ್ಲಿಗೆ ಬಂದು ಯಾರು ತಮ್ಮ ತಾಯಿಯವರ ಶ್ರಾಧ್ದ ಕರ್ಮಗಳನ್ನು ಮಾಡಿ ಪಿಂಡ ಪ್ರಧಾನವನ್ನು ನಡೆಸುತ್ತಾರೋ ಅಂತಹವರ ತಾಯಂದಿರಿಗೆ ಮೋಕ್ಷವು ಲಭಿಸಲಿದೆ. ಇದು ಯುಗ ಯುಗಾಂತರಗಳಿಗೂ ಸತ್ಯ,’  ಎನ್ನುತ್ತಾಳೆ.
    ಮುಂದೆ ಶ್ರೀವಿಷ್ಣು ತಾನು ಪರಷುರಾಮನ ಅವತಾರವೆತ್ತಿದ ಸಂದರ್ಭದಲ್ಲಿ ತಂದೆಯ ಮಾತಿನಂತೆ ತನ್ನ ಮಾತೃಶ್ರೀಯವರನ್ನು ಹತ್ಯೆ ಮಾಡಿದಾಗ ಅವರ ಶ್ರಾಧ್ದ ಕರ್ಮಗಳನ್ನು ಇದೇ ಬಿಂದು ಸರೋವರದಲ್ಲಿ ನಡೆಸಿ ಇಲ್ಲಿಯೇ ಪಿಂಡಪ್ರಧಾನಗೈದನೆಂದೆನ್ನಲಾಗಿದೆ.
    ಅಲ್ಲಿಂದ ಇಂದಿನವರೆಗೂವೇರಿಸಿ ಅವರ ದನವೂ ಸಾವಿರಾರು ಮಂದಿ ಇಲ್ಲಿಗೆ ಭೇಟಿ ನೀಡಿ ತಮ್ಮ ತಾಯಂದಿರ ಕರ್ಮಗಳನ್ನು ನೆರ್ವೇರಿಸುವುದರೊಂದಿಗೆ ತಮ್ಮ ತಮ್ಮ ತಾಯಂದಿರ ಮೋಕ್ಷಕ್ಕಾಗಿ ಪ್ರಾರ್ಥಿಸುತ್ತಾರೆ. 

No comments:

Post a Comment