Saturday, February 08, 2014

ಪ್ರೀತಿಯ ದೀಪ ಹಚ್ಚಿದ ಕವಿ: ಪರಮೇಶ್ವರ ಭಟ್

ಕನ್ನಡ ನಾಡು ಕಂಡ ಅತ್ಯಂತ ಮಹತ್ವದ ಕವಿಗಳು, ಅನುವಾದಕರು, ಸಹೃದಯ ವಿಮರ್ಶಕರೂ ಆಗಿದ್ದ ಬಹುಮುಖ ಪ್ರತಿಭಾಶಾಲಿ ಪ್ರೊಫೆಸರ್ ಎಸ್.ವಿ. ಪರಮೇಶ್ವರ ಭಟ್ಟರ 101 ನೇ ಜನುಮ ದಿನ (ಫೆಬ್ರವರಿ 8) ದ ಅಂಗವಾಗಿ ಅವರ ದೊಡ್ದ ವ್ಯಕ್ತಿತ್ವವನ್ನು ಪರಿಚಯಿಸುವ ಒಂದು ಕಿರು ಪ್ರಯತ್ನ


ನನ್ನೆಲ್ಲಾ ಆತ್ಮೀಯ ಸ್ನೇಹಿತರಿಗೂ ನನ್ನ ಹೃದಯಪೂರ್ವಕ ನಮಸ್ಕಾರಗಳು,
ವಾರ ಕನ್ನಡ ಕಟ್ಟಾಳುಗಳಾಲ್ಲಿ ಒಬ್ಬರಾದ ಹಿರಿಯ ವಿದ್ವಾಂಸ, ವಾಗ್ಮಿ, ಸಹೃದಯ ಲೇಖಕರಾಗಿದ್ದ ಶೃಂಗೇರಿ ವಿದ್ಯಾರಣ್ಯಪುರ ಪರಮೇಶ್ವರ ಭಟ್ಟರ 101 ನೇ ಹುಟ್ಟಿದ ಹಬ್ಬ(ಫೆಬ್ರವರಿ 8).
ಹೀಗೆಂದರೆ ಬಹುಷಃ ಅನೇಕರಿಗೆ ಅವರ ಪರಿಚಯ ಸಿಗಲಿಕ್ಕಿಲ್ಲ. ಅದೇ ಎಸ್.ವಿ. ಪರಮೇಶ್ವರ ಭಟ್ಟರು ಎಂದರೆ ತಕ್ಷಣ ತಿಳಿಯುತ್ತದೆ ಹೌದು ಸ್ನೇಹಿತರೆ, ಇಂದು ಭಟ್ಟರು ನಮ್ಮೊಂದಿಗಿಲ್ಲದಿರಬಹುದು. ಆದರೆ ಅವರು ಮಾಡಿಟ್ಟು ಹೋದ ಕೆಲಸದ ಮುಖಾಂತರ ನಾವೆಂದೆಂದೂ ಅವರನ್ನು ನೆನೆಯಬಹುದು..
ಪರಮೇಶ್ವರ ಭಟ್ಟರು ಹುಟ್ಟಿದ್ದು 1914 ಫೆಬ್ರವರಿ 8 ರಂದು ಶಿವಮೊಗ್ಗದ ತೀರ್ಥಹಳ್ಳಿಯ ಮಾಳೂರಿನಲ್ಲಿ. ಇವರ ತಂದೆ ಸದಾಶಿವರಾಯರು, ತಾಯಿ ಲಕ್ಷ್ಮಮ್ಮ. ಇಬ್ಬರು ಅಕ್ಕಂದಿರಿದ್ದು ಮನೆಯಲ್ಲಿ ಇವರೇ ಕಿರಿಯವರಾಗಿದ್ದರು. ಆದರೆ ದುರದೃಷ್ಟವಶಾತ್ ಭಟ್ಟರು ಹುಟ್ಟಿದ ಎರಡೇ ವರ್ಷದಲ್ಲಿ ತಾಯಿಯವರನ್ನು ಕಳೆದುಕೊಳ್ಳಬೇಕಾಯಿತು. ಮುಂದೆ ತಂದೆ ಸದಾಶಿವರಾಯರ ಆರೈಕೆಯಲ್ಲಿಯೇ ಮೂವರು ಮಕ್ಕಳೂ ಬೆಳೆದರು.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲೇ ಮುಗಿಸಿದ್ದ ಭಟ್ಟರಿಗೆ ಪ್ರೌಢಶಾಲೆಯಲ್ಲಿ ಪಂಡಿತ ಕಮಕೋಡು ನರಸಿಂಹ ಶಾಸ್ತ್ರಿಗಳು ಗುರುಗಳಾಗಿ ದೊರಕಿದರು. ಆಧುನಿಕ ದೃಷ್ಟಿಕೋನವನ್ನು ಹೊಂದಿ, ಕನ್ನಡದ ಘನ ಪಂಡಿತರಾಗಿದ್ದ ಶಾಸ್ತ್ರಿಗಳ ಪಾಠ ಪ್ರವಚನಗಳು ಪರಮೇಶ್ವರ ಭಟ್ಟರಲ್ಲಿ ಸಹಜವಾಗಿಯೇ ಸಾಹಿತ್ಯಾಸಕ್ತಿಯನ್ನು ಕೆರಳಿಸಿದವು.
ಮುಂದೆ ಇಂಟರ್ ವಿದ್ಯಾಭ್ಯಾಸದ ಅವಧಿಯಲ್ಲಿ ಸಹ .ಆರ್. ಕೃಷ್ಣಶಾಸ್ತ್ರಿಗಳು, ವಿ. ಸೀತಾರಾಮಯ್ಯನವರು, ಡಿ.ವಿ. ಶೇಷಗಿರಿರಾಯರು ಇವರೇ ಮೊದಲಾದ ಗುರುವರೇಣ್ಯರ ಶಿಶ್ಯರಾಗಿದ್ದ ಭಟ್ಟರಿಗೆ ಅಲ್ಲಿಯೂ ಸಾಹಿತ್ಯದ ವಾತಾವರಣಾವು ಸುಲಭದಲ್ಲಿ ದಕ್ಕಿತು. 1938 ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಿಂದ ಕನ್ನಡ ಎಮ್.. ಪದವಿಯನ್ನು ಪಡೆದ ಪರಮೇಶ್ವರ ಭಟ್ಟರು ಅನಂತರ ಅಲ್ಲಿಯೇ ಕನ್ನಡ ಅದ್ಯಾಪಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. 1940 ರಲ್ಲಿ ರಾಜಲಕ್ಷ್ಮಿಯವರೊಡನೆ ವಿವಾಹವಾದ ಪರಮೇಶ್ವರ ಭಟ್ಟರಿಗೆ ಭಡ್ತಿಯೊಂದಿಗೆ ತುಮಕೂರಿಗೆ ವರ್ಗವಾಯಿತು. ಅಲ್ಲಿಂದ 1942 ರಲ್ಲಿ ಪುನಃ ಶಿವಮೊಗ್ಗಕ್ಕೆ ವರ್ಗವಾಯಿತು. ಕಾಲೇಜಿನ ಪಾಠ ಪ್ರವಚನಗಳೊಂದಿಗೆ ಅಲ್ಲಿನ ಕರ್ನಾಟಕ ಸಂಘದ ಕಾರ್ಯ ಕಲಾಪಗಳಲ್ಲಿಯೂ ಭಾಗಿಯಾಗಿದ್ದ ಭಟ್ಟರ ಬೊಧಪ್ರದವಾದ ಭಾಷಣ ಶೈಲಿಗೆ ಮಲೆನಾಡಿಗರೆಲ್ಲಾ ಮಾರುಹೋದರು.
ಅಲ್ಲಿಂದಾಚೆಗೆ 1968 ರವರೆಗೆ ಮೈಸೂರಿನಲ್ಲೇ ಇದ್ದ ಪರಮೇಶ್ವರ ಭಟ್ತರು 1968 ರಲ್ಲಿ ಮಂಗಳೂರು ಸ್ನಾತಕೋತ್ತ್ರ ಕೇಂದ್ರದ ನಿರ್ದೇಶಕರಾಗಿ ನೇಮಕಗೊಂಡರು. ಅಲ್ಲಿಂದ 1974 ರಲ್ಲಿ ತಾವು ನಿವೃತ್ತಿಯಾಗುವವರೆಗೆ  ಮಂಗಳೂರು ವಿಶ್ವವಿದ್ಯಾನಿಲಯದಲ್ಲೇ ತಮ್ಮ ವೃತ್ತಿ ಬದುಕನ್ನು ನಡೆಸಿದ್ದ ಭಟ್ಟರು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ಪ್ರಾದ್ಯಾಪಕ ಮುಖ್ಯಸ್ಥರಾಗಿ ಸರಿಸುಮಾರು ಆರು ವರ್ಷಗಳ ಕಾಲ ಮಂಗಳೂರನ್ನೇ ತಮ್ಮ ಸಾಹಿತ್ಯಕೇಂದ್ರವಾಗಿ ಮಾಡಿಕೊಂಡಿದ್ದರು.
ಎಸ್.ವಿಪರಮೇಶ್ವರ ಭಟ್ಟ
ಇನ್ನು ಭಟ್ಟರ ಪಾಠದ ಶೈಲಿಗೆ ಮಾರುಹೋಗದವರಿರಲಿಲ್ಲ. ಇವರ ಪಾಠವನ್ನು ಕೇಳಲಿಕ್ಕಾಗಿ ಅನ್ಯ ತರಗತಿಯಿಂದಲೂ ವಿದ್ಯಾರ್ಥಿಗಳು ಬರುತ್ತಿದ್ದರು. ಹೀಗಾಗಿ ತರಗತಿಯ ಕೋಣೆ ವಿದ್ಯಾರ್ಥಿಗಳಿಂದಲೇ ತುಂಬಿ ಹೋಗಿರುತ್ತಿತ್ತು. ಇವರ ಪಾಠ ಹೇಳುವ ರೀತಿಯ ಬಗ್ಗೆ ಭಟ್ಟರ ಶಿಷ್ಯವೃಂದದಲ್ಲಿ ಪ್ರಮುಖರಾದ ಡಾ. ಬಿ.. ವಿವೇಕ ರೈಗಳು ತಾವು ಹೀಗೆ ನೆನೆಯುತ್ತಾರೆ-  ``ಪಾಠ ಅದೊಂದು ರಸಲೋಕದ ಯಾತ್ರೆಯಂತೆ. ಹದಿನಾರು ಮಂದಿಯ ತರಗತಿಯಾಗಲಿ , ಸಾವಿರ ಮಂದಿಯ ಸಭೆಯಾಗಲಿ , ಮಾತಿನ ರೀತಿ , ರೂಪಕಗಳ ಸರಮಾಲೆ , ತಮ್ಮ ಗುರು ಪರಂಪರೆಯ ಸಂಬಂಧದ ಅನುಭವಗಳನ್ನು ಬಿಚ್ಚುತ್ತಿದ್ದ ವೈಖರಿ , ವಿಷಯದ ಮಂಡನೆಯೊಂದಿಗೆ ಜೋಡಣೆಗೊಳ್ಳುತ್ತಿದ್ದ ನೂರಾರು ಅನುಭವದ ತುಣುಕುಗಳುಹೀಗೆ ಒಂದು ಗಂಟೆ ಮುಗಿಯುವುದರೊಳಗೆ ಒಂದು ರಸ ವಿಶ್ವಕೋಶದ  ಒಳಗಡೆ ತಿರುಗಾಟದ ಸುಖ ದೊರೆಯುತ್ತಿತ್ತು.’’
ಎಸ್.ವಿ. ಪರಮೇಶ್ವರ ಭಟ್ಟ್ರರೆಂದರೆ ಇಷ್ಟೇ ಅಲ್ಲ ಸ್ನೇಹಿತರೆ, ಅವರು ಕವಿಗಳು, ಸಂಸ್ಕೃತ ವಿದ್ವಾಂಸರು, ಸದಾ ಕನ್ನಡಕ್ಕಾಗಿ ತುಡಿಯುವ ಮಿಡಿಯುವ ಮನವುಳ್ಳವರು., ಹೀಗೆ ಹೇಳುತ್ತಾ ಹೋದರೆ ಅವರ ವ್ಯಕ್ತಿತ್ವದ ಒಂದೊಂದು ಮುಖವನ್ನು ವಿವರಿಸಲೂ ಒಂದೊಂದು ಲೇಖನವನ್ನೇ ಬರೆಯಬೇಕಾಗಬಹುದು. ಮಂಗಳೂರು ವಿಶ್ವವಿದ್ಯಾನಿಲಯದಿಂದ ನಿವೃತ್ತರಾದ ಮೇಲೆ ಮೈಸೂರಿನಲ್ಲಿ ನೆಲೆಸಿದ ಪರಮೇಶ್ವರ ಭಟ್ಟರಿಗೆ ಯುಜಿಸಿ ಪ್ರಾಯೋಜಿತ ಪ್ರಾಧ್ಯಾಪಕರಾಗಿ ಮಾನಸ ಗಂಗೋತ್ರಿಯಲ್ಲಿ ಕೆಲಸ ಮಾಡುವ ಅವಕಾಶವು ದೊರೆಯುತ್ತದೆ. ಅದಾಗ ಅವರು ಯಾವುದಾದರೊಂದು ವಿಷಯದ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಪ್ರಕಟಿಸಬೇಕಾದಾಗ  ಭಟ್ಟ್ರೌ ಆರಿಸಿಕೊಂಡ ವಿಷಯ  ಯಾವುದು ಗೊತ್ತೆ? ಕುವೆಂಪು ಅವರ ಕಾವ್ಯ! “ರಸಋಷಿ ಕುವೆಂಪುಹೆಸರಿನ ಬೃಹತ್ ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ ಮುಗಿಸಿದ ಭಟ್ಟರ ಕೆಲಸವನ್ನು ಕಂಡ ಕುವೆಂಪು ತಾವು ಪರಮೇಶ್ವರ ಭಟ್ತ್ರಿಗೆ ಹೀಗೊಂದು ಪತ್ರವನ್ನು ಬರೆಯುತ್ತಾರೆ-
"ನೀವು ಆರಿಸಿಕೊಂಡಿರುವ ವಿಷಯಕ್ಕೆ ನಿಮಗಿಂತಲೂ ಉತ್ತಮತರ ಅಧಿಕಾರಿ ದೊರೆಯುವುದು ಕಷ್ಟ! ನನ್ನಂತೆಯೇ ನೀವೂ ಹುಟ್ಟಿ, ಬೆಳೆದು, ಬಾಲ್ಯದಲ್ಲಿ ಮಲೆಕಾಡುಗಳ ಸಾನ್ನಿಧ್ಗದ ದಿವ್ಯಸೌಂದರ್ಯದ ಪೀಯೂಷವನ್ನು ಆಸ್ವಾದಿಸಿದ್ದೀರಿ. ಭಾಷಾ ಪಾಂಡಿತ್ಯದಲ್ಲಿ ನನ್ನೆಲ್ಲ ವಾಚ್ಯ ಲಕ್ಷ್ಯ ವ್ಯಂಗ್ಯಗಳನ್ನು ತಲಸ್ಪರ್ಶಿಯಾಗಿ ಅರಿಯುವ ಸಾಮಾರ್ಥ್ಯವನ್ನು ಪಡೆದಿದ್ದೀರಿ. ನೀವು ಇದುವರೆಗೆ ಪ್ರಕಟಿಸಿರುವ ವಿಮರ್ಶೆ ಲೇಖನಗಳನ್ನು ನೋಡಿರುವ ನನಗೆ ನನ್ನ ಕೃತಿಗಳ ದರ್ಶನ ಧ್ವನಿಯನ್ನು ದರ್ಶನವನ್ನು ಗ್ರಹಿಸುವ ಗಗನ್ನೋನ್ನತಿ ಧೀಶಕ್ತಿಯ ಕೃಪೆಗೂ ನೀವು ಪಾತ್ರರಾಗಿದ್ದೀರಿ. ನೀವೇ ಬರೆದಿರುವಂತೆ 'ನನ್ನ ಸಾಹಿತ್ಯಜೀವನದ ಕಾರ್ಯಕಲಾಪಗಳಲ್ಲಿ ಗ್ರಂಥ ಕಟ್ಟಕಡೆಯದಾಗಿ ಮಕುಟಪ್ರಾಯವಾದದ್ದಾಗಿ ರಾರಾಜಿಸಬೇಕು ಎಂಬುದು ನನ್ನ ಅಪೇಕ್ಷೆ' ಎಂಬುದು ಖಂಡಿತವಾಗಿಯೂ ಸಫಲವಾಗುತ್ತದೆ ಎಂಬುದು ನನ್ನ ಆಶೆ ಮತ್ತು ಅನಿಸಿಕೆ.
ಆದರೆ ಒಂದು ಹೆದರಿಕೆ!
ಜನರು ನಿಮ್ಮ ಗ್ರಂಥವನ್ನೇ ಓದಿ ತೃಪ್ತರಾಗಿ ನನ್ನ ಕೃತಿಗಳನ್ನು ಎಲ್ಲಿ ಓದದೇ ಹೋಗುತ್ತಾರೋ ಎಂದು!
ಹಾಗಾದರೂ ಆಗಿಹೋಗಲಿ! ನಷ್ಟವೇನಿಲ್ಲ! ಭಟ್ಟ ಪರಮೇಶ್ವರನಿಗೆ ಜಯವಾಗಲಿ.
ಕುವೆಂಪುರವರ ಮಾತುಗಳು ಶ್ರಿಯುತ ಎಸ್.ವಿ. ಪರಮೇಶ್ವರ ಭಟ್ಟರಲ್ಲಿದ್ದ ಅಗಾಧವಾದ ಪ್ರತಿಭಾ ಶಕ್ತಿಗೊಂದು ನಿದರ್ಶನ.
ಭಟ್ಟರ ಸಾಹಿತ್ಯ ವಿರಚನೆಗಳ ವಿಚಾರಕ್ಕೆ ಬಂದರೆ 1940 ರಲ್ಲಿ ಅವರ ಪ್ರಥಮ ಕವನ ಸಂಕಲನರಾಗಿಣಿಪ್ರಕಟವಾಯಿತು. ಮುಂದೆಉಪ್ಪು ಕಡಲು”, “ಇಂದ್ರ ಚಾಪ”, “ಇಂದ್ರ ಗೋಪ”, “ಅಂಚೆ ಪೆಟ್ಟಿಗೆ”, “ಜಹನಾರ”, “ಗಗನಚುಕ್ಕಿಇವು ಅವರ ಪ್ರಮುಖ ಕವನ ಸಂಕಲನಗಳಾಗಿವೆ. ``ಗಾಥಾಸಪ್ತಶತಿ’’, ``ಚಂದ್ರವೀಧಿ’’ ಮತ್ತು ``ಕೃಷ್ಣಮೇಧ’’ ಇವರ ಸಾಂಗತ್ಯ ಕೃತಿಗಳು. ``ಸೀಳು ನೋಟ’’ ಪರಮೇಶ್ವರ ಭಟ್ಟರ ವಿಮರ್ಶನಾ ಗ್ರಂಥವಾದರೆ ಮುದ್ದಣ ಕವಿಯ ``ಶ್ರೀರಾಮ ಪಟ್ಟಾಭಿಷೇಕಂ’’, ಮುದ್ದಣ ಕವಿಯ ``ಅದ್ಭುತ ರಾಮಾಯಣಂ’’, ``ಭೂಮಿ ಮತ್ತು ಧೂಮಕೇತು’’, ``ಕಣ್ಣುಮುಚ್ಚಾಲೆ-ಮಕ್ಕಳ ಸಾಹಿತ್ಯ ರಚನೆಗಳು’’ ಇವು ಅವರು ಸಂಪಾದಿಸಿದ ಕೃತಿಗಳಾಗಿವೆ.  ಬಹುಶ್ರುತ ವಿದ್ವಾಂಸರಾಗಿದ್ದ ಪರಮೇಶ್ವರ ಭಟ್ಟರು `ಕನ್ನಡ ಕಾಳಿದಾಸಎಂಬ ಖ್ಯಾತಿ ಪಡೆದವರು. ``ಕನ್ನಡ ಕಾಳಿದಾಸ ಮಹಾ ಸಂಪುಟ’’, ``ಕನ್ನಡ ಭಾಸ ಮಹಾ ಸಂಪುಟ``, ``ಕನ್ನಡ ಹರ್ಷ ಮಹಾ ಸಂಪುಟ’’, ``ಕನ್ನಡ ಬುದ್ಧ ಚರಿತೆ’’, ``ಕನ್ನಡಗಾಥಾ ಸಪ್ತಶತಿ’’, ``ಕನ್ನಡ ಗೀತಗೋವಿಂದ’’, ``ಕನ್ನಡ ಕವಿ ಕೌಮುದಿ’’, ``ಕನ್ನಡ ಅಮರ ಶತಕ’’ ಎಂಬ ಹೆಸರಿನಲ್ಲಿ ಸಂಸ್ಕೃತದ ಮಹಾಕಾವ್ಯಗಳನ್ನು ಅನುವಾದಿಸಿದ ಪರಮೇಶ್ವರ ಭಟ್ಟರು ಕಾಲಿದಾಸ, ಭಾಸ, ಹರ್ಷ ಇವರುಗಳನ್ನು ಕನ್ನಡಕ್ಕೆ ಅನುವಾದಿಸಿದವರಲ್ಲಿ ಮೊದಲಿಗರಾಗಿದ್ದಾರೆ
ಪರಮೇಶ್ವರ ಭಟ್ತರ ಇಂತಹಾ ಅಗಾಧ ಪಾಂಡಿತ್ಯಕ್ಕೆ ಗೌರವ ಸೂಚಕವಾಗಿ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳೂ ಅವರನ್ನು ಅರಸಿಕೊಂಡು ಬಂದಿವೆ. ಅವರ ``ಕಾಳಿದಾಸ ಮಹಾಸಂಪುಟ’’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಭಾಷಾಂತರ ಪ್ರಶಸ್ತಿ ನೀಡಿದೆ. ಮೈಸೂರು ಮತ್ತು ಕುವೆಂಪು ವಿಶ್ವವಿದ್ಯಾಲಯಗಳಿಂದ ಗೌರವ ಡಿ.ಲಿಟ್ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವಗಳು ಅವರಿಗೆ ದೊರೆತಿವೆಜೊತೆಗೆ, ತಮ್ಮ ಅಪಾರ ಶಿಷ್ಯವೃಂದ ಹಾಗೂ ಸಾಹಿತ್ಯಾಭಿಮಾನಿಗಳಿಂದ  'ಪೂರ್ಣಕುಂಭ' ಎಂಬ ಅಭಿನಂದನ ಗ್ರಂಥವೂ ಸಮರ್ಪಣೆಯಾಗಿದೆ.
ಇಷ್ಟಾಗಿಯೂ ಭಟ್ಟರು ತಾವೆಂದೂ ಸಜ್ಜನಿಕೆಯ, ಸರಳ ಜೀವಿಯಾಗಿಯೇ ಇದ್ದವರು. ಬಿ.. ವಿವೇಕ ರೈಗಳು ಹೇಳುವಂತೆ `` ತಾನು ನಗುವುದರೊಂದಿಗೆ ಇತರರನ್ನೂ ನಗಿಸುವ ಪ್ರೊಫೆಸರ್…...  ನೂರು ನೋವುಗಳ ನಡುವೆಯೂ ಸಾವಿರ ಬಗೆಯ  ನಗೆ ಚೆಲ್ಲಿದ ಪ್ರೊಫೆಸರ್ ಅವರ ವಿದ್ವತ್ತು ಸಾಧನೆಗಳು , ಬಹಳ ಮಂದಿಗೆ ಕಾಣದೆ ಹೋದದ್ದು ಕನ್ನಡ ಸಾಹಿತ್ಯ ಚರಿತ್ರೆಯ  ಒಂದು ವ್ಯಂಗ್ಯ……  ತಮ್ಮೊಡನೆ ಇರುವವರನ್ನೆಲ್ಲ ಸಂತೋಷ ಪಡುವಂತೆ ಮಾಡುತ್ತಿದ್ದರು.ಹಾಗೆ ನೋಡಿದರೆ ಅವರಿಗೆ ದೊರೆತಿರುವ ಪ್ರಶಸ್ತಿಗಳು ಬಹಳವೇನೂ ಇಲ್ಲ.ಸಣ್ಣ ಸಣ್ಣ ಊರುಗಳಲ್ಲಿ ತಮಗೆ ಮಾಡಿದ ಸನ್ಮಾನಗಳನ್ನು ಅವರು ಸಂಭ್ರಮದಿಂದ ಹೇಳಿಕೊಳ್ಳುತ್ತಿದ್ದರು. ಜನರ ಪ್ರೀತಿಯನ್ನು ಬಹಳ ದೊಡ್ಡ ಗೌರವ ಎಂದು ಭಾವಿಸುತ್ತಿದ್ದರು. ಅರ್ಥದಲ್ಲೂ ಪರಮೇಶ್ವರ ಭಟ್ಟರು  ಕನ್ನಡದ ಅಪೂರ್ವ ಸಾಹಿತಿ.’’
ಇಂತಹಾ ಅಪೂರ್ವ ಚೇತನವೊಂದು ಅಕ್ಟೋಬರ್ 27 2000 ಕ್ಕೆ ನಮ್ಮನ್ನೆಲ್ಲಾ ಕಣ್ಣೀರ ಕಡಲಲ್ಲಿ ಮುಳುಗಿಸಿ ಮರೆಯಾಯಿತು.
ಭಟ್ಟರಂತಹಾ ಅಪರೂಪದ ಪ್ರತಿಭೆ ಇನ್ನೊಮ್ಮೆ ಕನ್ನಡ ನಾಡಿನಲ್ಲಿ ಹುಟ್ತಿ ಬರಲಿ, ಹುಟ್ಟಿ ಬಂದು ಕನ್ನಡ ತಾಯಿಯ ಸೇವೆಯಲ್ಲಿ ನಿರಂತರವಾಗಿ ತೊಡಗುವಂತಾಗಲಿ ಎಂದು ಆಶಿಸುತ್ತಾ ಶತಮಾನದ ಜನುಮ ದಿನದ ಶುಭ ಸಮಯದಲ್ಲಿ ಅವರದೇ ಕವನದ ಕೆಳಗಿನ ಸಾಲುಗಳ ಗುನುಗುತ್ತಾ, ದಿವ್ಯ ಚೇತನಕ್ಕೆ ನಮಿಸೋಣ…..
`'ಪ್ರೀತಿಯ ಕರೆ ಕೇಳಿ
ಆತ್ಮನ ಮೊರೆ ಕೇಳಿ
ನೀ ಬಂದು ನಿಂದಿಲ್ಲಿ
ದೀಪ ಹಚ್ಚಾ'’
ನಮಸ್ಕಾರ. 

No comments:

Post a Comment