Tuesday, April 09, 2024

ಭಾರತದ ದೇವಾಲಯಗಳು ಕೃತಿಗೆ ಜಗದೀಶ ಶರ್ಮ ಸಂಪ ಅವರ ಮುನ್ನುಡಿ

ಇದು ಅಕ್ಷರ ತೀರ್ಥಯಾತ್ರೆ. ಇದನ್ನು ಓದತೊಡಗಿದಂತೆ ನೀವೊಂದು ಪಯಣ ಆರಂಭಿಸುತ್ತೀರಿ. ಅದು ನಿಮ್ಮನ್ನು ಭಾರತದ ಉದ್ದಗಲಗಳಿಗೆ ಕರೆದೊಯ್ಯುತ್ತದೆ. ನಿಮ್ಮ ಸನಿಹದ ತೀರ್ಥಕ್ಷೇತ್ರದಿಂದ ಆರಂಭಿಸಿ ದೂರದೂರದ ಕ್ಷೇತ್ರಗಳಿಗೆ ಭೇಟಿ ಮಾಡಿಸುತ್ತದೆ.


ಆಯಾ ತೀರ್ಥಕ್ಷೇತ್ರಗಳಿಗೆ ಹೋಗಿ ದೇವರ ದರ್ಶನ ಮಾಡಿದಾಗ ವಿಶಿಷ್ಟವಾದ ಫಲ ಸಿಗುತ್ತದೆ ಎನ್ನುವುದು ಪ್ರಾಚೀನರ ಅಭಿಮತ. ಅಲ್ಲಿಯದೇ ಆದ ತೀರ್ಥವಿಧಿಗಳನ್ನು ಮಾಡಿದಾಗ ಬಯಸಿದ್ದು ಸಿಗುತ್ತದೆ ಎನ್ನುತ್ತಾರೆ ಅವರು. ಆದರೆ ಆಯಾ ಕ್ಷೇತ್ರಗಳ ಕುರಿತು ಕೇಳಿದರೂ ಸಾಕು, ಓದಿದರೂ ಸಾಕು ಫಲ ಸಿಗುತ್ತದೆ ಎನ್ನುವ ಮಾತುಗಳನ್ನೂ ಹಿರಿಯರು ಆಡುತ್ತಾರೆ. ‘ಶ್ರವಣಾದೇವ ಮೋಕ್ಷದಮ್, ಪಠನಾದೇವ ಮೋಕ್ಷದಮ್ಎನ್ನುವ ಮಾತುಗಳು ಅಲ್ಲಲ್ಲಿ ಕೇಳಿಬರುತ್ತವೆ. ತೀರ್ಥಕ್ಷೇತ್ರದ ದರ್ಶನ ಮತ್ತು ಅಲ್ಲಿ ನಡೆಸುವ ಕ್ರಿಯೆಗಳು ಅಂತರಂಗದ ಅನುಭವವಾದಾಗ ಫಲ ಎನ್ನುವುದು ತಾತ್ತ್ವಿಕತೆ. ಆ ಅನುಭವ ಕೇಳಿದಾಗಲೂ ಓದಿದಾಗಲೂ ಸಾಧ್ಯವಾಗುವುದಾದರೆ ಮೇಲಿನ ಮಾತು ಅರ್ಥವತ್ತಾಗುತ್ತದೆ. ನೀವು ಇದನ್ನು ಓದುತ್ತಿದ್ದಾಗ ನಿಮಗೆ ಆ ಅನುಭವವಾಗುತ್ತದೆ. ಓದುತ್ತಾ ಓದುತ್ತಾ ನೀವು ಸುತ್ತತೊಡಗುತ್ತೀರಿ. ಒಂದು ಮಾನಸ ಯಾತ್ರೆ ನಡೆಸುತ್ತೀರಿ.

ಯಾವುದೇ ಓದು ಒಳಗೊಂದು ಅನುಭವವನ್ನು ಕಟ್ಟಿಕೊಡಬೇಕು. ಅದು ಆಯಾ ವಸ್ತುವಿನ ಅನುಪಸ್ಥಿಯಲ್ಲಿಯೂ ನಡೆಯಬೇಕು. ಎಂದರೆ ರಾಮಾಯಣವನ್ನೋ ಮಹಾಭಾರತವನ್ನೋ ಓದಿದಾಗ ರಾಮನ ವನವಾಸ, ಪಾಂಡವರ ವನವಾಸ, ಸೀತೆಯ ನೋವು, ದ್ರೌಪದಿಯ ಅವಮಾನ ಇದೆಲ್ಲ ನಮ್ಮದಾಗಬೇಕು. ನಮ್ಮೊಳಗೆ ಅವೆಲ್ಲ ಘಟಿಸಬೇಕು. ಇದು ಸಾಹಿತ್ಯದ ಓದಿಗಿರುವ ಪರಿಣಾಮ. ಈ ಕೃತಿಯನ್ನು ಓದುವಾಗ ನೀವೊಂದು ಭಾವಯಾನಕ್ಕೆ ಸಿದ್ಧರಾದರೆ ಕ್ಷೇತ್ರಗಳನ್ನು ಕಂಡ ಭಾವ ನಿಮ್ಮದಾಗುತ್ತದೆ.

ಜಗತ್ತಿನ ಎಲ್ಲ ಮತಗಳಲ್ಲೂ ತೀರ್ಥಯಾತ್ರೆ ಇದೆ. ಆದರೆ ಸನಾತನಿಗಳಲ್ಲಿ ಅದು ಬಹಳ ಪ್ರಧಾನ. ಇಲ್ಲಿ ಅದು ಒಂದೆರಡು ಕ್ಷೇತ್ರಗಳ ದರ್ಶನಕ್ಕೆ ಮುಗಿಯುವುದಿಲ್ಲ. ಸಾವಿರ ಸಾವಿರ ಕ್ಷೇತ್ರಗಳಿವೆ. ಭಾರತದ ಎಲ್ಲೆಡೆಯನ್ನು ಅವು ತುಂಬಿವೆ. ಇಂಥದೊಂದು ಪ್ರದೇಶದಲ್ಲಿ ತೀರ್ಥಕ್ಷೇತ್ರಗಳಿಲ್ಲ ಎನ್ನಲಾಗದು. ಅಷ್ಟು ವ್ಯಾಪಕತೆ ಅವುಗಳದ್ದು.


ನಮ್ಮವರು ಹರಿಯುವ ನದಿಯಲ್ಲಿ, ಆಕಾಶಕ್ಕೆ ಮುಖ ಮಾಡಿ ನಿಂತ ಗಿರಿಗಳಲ್ಲಿ, ಬಟ್ಟಬಯಲಲ್ಲಿ ಎಲ್ಲೆಡೆಯೂ ದೇವರನ್ನು ಕಂಡವರು. ಮಣ್ಣು, ಮರ, ಕಲ್ಲು, ನೀರು ಎಲ್ಲದರಲ್ಲೂ ಪಾವಿತ್ರ್ಯ ಅರಸಿದವರು. ಅವರ ಆ ಹುಡುಕಾಟದ ಪರಿಣಾಮವೇ ಇಷ್ಟೊಂದು ತೀರ್ಥಕ್ಷೇತ್ರಗಳು.

ಅಲ್ಲೆಲ್ಲ ದೈವ ಸಾನ್ನಿಧ್ಯ ಬರಲು ಅಥವಾ ಪ್ರಕಟಗೊಳ್ಳಲು ಅದರದ್ದೇ ಆದ ಕಾರಣಗಳಿರುತ್ತವೆ. ಅವುಗಳೇ ಸ್ಥಳ ಪುರಾಣಗಳು. ಪ್ರತಿ ಕ್ಷೇತ್ರದ ಆವಿರ್ಭಾವದ ಕಾರಣವನ್ನು ಅವು ತಿಳಿಸುತ್ತವೆ. ಅವುಗಳಲ್ಲಿ ಅದ್ಭುತಗಳಿವೆ, ಅಸಂಭಾವ್ಯಗಳಿವೆ, ಕಾರುಣ್ಯವಿದೆ, ದುಷ್ಟಶಿಕ್ಷಣವಿದೆ, ಶಿಷ್ಟಪರಿಪಾಲನೆಯಿದೆ. ಹೀಗೆ ಪ್ರತಿ ಸ್ಥಳಪುರಾಣವೂ ಅದರದ್ದೇ ಆದ ಕಾರಣಕ್ಕೆ ವಿಶಿಷ್ಟವೆನಿಸುತ್ತದೆ.

ಸ್ಥಳ ಪುರಾಣಗಳನ್ನು ನಂಬಲಾಗದು ಎನ್ನುವರುಂಟು. ಅವೆಲ್ಲ ಕಪೋಲ ಕಲ್ಪಿತ ಎನ್ನುವರುಂಟು. ದಂತಕಥೆಗಳು ಎನ್ನುವರುಂಟು. ಹಾಗೆಯೇ ಅವೆಲ್ಲವೂ ಸತ್ಯಸ್ಯ ಸತ್ಯ ಎಂದು ನಂಬುವವರೂ ಉಂಟು. ನಂಬಿಕೆ ಅಪನಂಬಿಕೆಗಳ ವಿಷಯ ಅದೇನೇ ಇದ್ದರೂ ಸ್ಥಳ ಪುರಾಣಗಳಲ್ಲಿ ಮನುಷ್ಯನಿಗೆ ಒಂದು ಭರವಸೆಯ ಭಾವವಿರುವುದನ್ನು ಗಮನಿಸಬಹುದು. ಮುಂದೇನು ಎಂದು ಕಂಗಾಲಾದ ಸ್ಥಿತಿಗೆ ಅಲ್ಲಿ ಪರಿಹಾರವಿದೆ. ತೀರ್ಥಯಾತ್ರೆಯ ಪರಿಣಾಮವಲ್ಲ, ಆ ಕಥೆಗಳೇ ಬದುಕಿನ ಅನಾಥ ಪ್ರಜ್ಞೆಯನ್ನು ದೂರಮಾಡುತ್ತವೆ. ಇದೊಂದೇ ಕಾರಣ ಸಾಕು ಸ್ಥಳ ಪುರಾಣಗಳ ವೈಶಿಷ್ಟ್ಯಕ್ಕೆ.

ರಾಘವೇಂದ್ರ ಅಡಿಗರು ಸಹಜವಾಗಿ ಬರೆಯುತ್ತಾರೆ. ಹಾಗಾಗಿ ಇದೊಂದು ಸರಳವಾದ ಓದಿನ ಅನುಭವ ಕೊಡುತ್ತದೆ. ಅವರು ಕೇಳಿದ, ಓದಿದ ಸಂಗತಿಗಳನ್ನು ಹಾಗೆಯೇ ನಿರೂಪಿಸುತ್ತಾರೆ. ‘ಹಾಗಿದೆ, ಅಷ್ಟು ಹೇಳಿದ್ದೇನೆಎನ್ನುವಂತೆ ಬರೆಯುತ್ತಾರೆ. ಆ ಕೇಳಿದ ಕಥೆಗಳ ಒಳಗೆ ಹೊಕ್ಕು ಅವರೇನೂ ಮಾಡುವುದಿಲ್ಲ. ಹೀಗೆ ವಸ್ತುವಿನ ಹೊರಗೆ ನಿಂತು ಬರೆಯುವುದು ಕಷ್ಟ. ‘ಇದು ಹೀಗಿರಬಹುದಾ, ಹೀಗೆ ಸಂಭವವಾ, ಇದಕ್ಕೆ ಸಾಕ್ಷ್ಯಾಧಾರಗಳಿವೆಯಾಎನ್ನುವ ಯಾವ ಪ್ರಶ್ನೆಗಳನ್ನೂ ಅವರು ಹಾಕಿಕೊಳ್ಳದೇ ಬರೆದಿದ್ದಾರೆ. ಅದರಿಂದಾಗಿಯೇ ಈ ಸ್ಥಳ ಪುರಾಣಗಳು ಅಧಿಕೃತತೆಯನ್ನು ಉಳಿಸಿಕೊಂಡಿವೆ. ಹಾಗಾಗಿಯೇ ಇದು ಪ್ರಾಮಾಣಿಕ ಬರಹವೂ ಆಗಿದೆ. ಇದೇ ಕಾರಣಕ್ಕೆ ಪ್ರತಿಯೊಂದು ಪ್ರತೀತಿಯೂ ವಿಸ್ಮಯವನ್ನು ಹೊತ್ತಿದೆ.

ಒಂದೆಡೆ ದಾಖಲಿಸಿದ್ದಕ್ಕೆ, ಪ್ರಾಮಾಣಿಕವಾಗಿ ಬರೆದಿದ್ದಕ್ಕೆ, ಸರಳತೆಗೆ ಅಡಿಗರು ಪ್ರಶಂಸಾರ್ಹರು. ಅವರ ಅಕ್ಷರಯಾನ ನಿರಂತರವಾಗಿ ನಡೆಯಲಿ ಎನ್ನುವುದು ಹಾರೈಕೆ.

-ಜಗದೀಶಶರ್ಮಾ ಸಂಪ

No comments:

Post a Comment