Saturday, August 29, 2015

ಸಲ್ಲೇಖನ ಮರಣ ಆತ್ಮಹತ್ಯೆಯ ಇನ್ನೊಂದು ರೂಪವೆ?

ಜೈನ ಧರ್ಮ ಪವಿತ್ರ ಆಚರಣೆಯಾದ ಸಲ್ಲೇಖನ ವ್ರತಕ್ಕೆ ನಿಷೇಧ ಹೇರಿ ರಾಜಸ್ಥಾನ ಹೈಕೋರ್ಟ್ ಆದೇಶಿಸಿದೆ. ಸಲ್ಲೇಖನ ವ್ರತ ಆತ್ಮಹತ್ಯೆಗೆ ಸಮಾನವಾದದು, ಅದನ್ನು ನಿಷೇಧಿಸಬೇಕು ಎಂದು ನಿಖಿಲ್ ಸೋನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ರಾಜಸ್ಥಾನ ಹೈಕೋರ್ಟ್ ನ್ಯಾಯಾಧೀಶ ಸುನೀಲ್ ಅಂಬ್ಬಾವಿ ನೇತೃತ್ವದ ಖಂಡ ಪೀಠ ಐಪಿಸಿ ಸೆಕ್ಷನ್ 306(ಆತ್ಮಹತ್ಯೆಗೆ ಪ್ರೇರಣೆ), 309( ಆತ್ಮಹತ್ಯೆಗೆ ಯತ್ನ) ಪ್ರಕಾರ ಕಾನೂನು ಬಾಹಿರ. ಈ ವ್ರತ ಅನುಸರಿಸಲು ಮುಂದಾದಲ್ಲಿ ಅವರ ಮೇಲೆ ಎಫ್ಐಆರ್ ದಾಖಲಿಸಲಾಗುವುದು ಎಂದು ಜೈನರ ಆಚರಣಾ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಿದೆ. ಈ ತಿರ್ಪು ಜೈನ ಮತ್ತು ಹಿಂದು ಸಂಘಟನೆಗಳ ಕೋಪಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ತಲೆತಲಾಂತರಗಳಿಂದ ಅನುಸರಿಸಿಕೊಂಡು ಬಂದ ಈ ಸಂಪ್ರದಾಯಕ್ಕೆ ಈಗ ನಿಷೇಧ ಹೇರುತ್ತಿರುವುದೇಕೆ? ಸಲ್ಲೇಖನ ವ್ರತವನ್ನು ಯಾರು ಕೈಗೊಳ್ಳುತ್ತಾರೆ? ಈ ಆಚರಣೆಯ ಹಿಂದಿನ ಉದ್ದೇಶವೇನು? ಎನ್ನುವುದರ ಸಣ್ಣ ವಿಶ್ಲೇಷಣೆ ಇಲ್ಲಿದೆ.



"ಸಲ್ಲೇಖನ" ಪದ
ಸತ್‌ (ಶ್ಲಾಘನೀಯ), ಲೇಖನಾ (ಕಾರ್ಯಕ್ಲೇಷ) ಎಂಬ 2 ಪದಗಳು ಸಲ್ಲೇಖನವನ್ನು ವಿಧಿ ವಿಧಾನ ಸಾಧನೆ ತಪಸ್ಸು, ಯೋಗ ಎಂದೆಲ್ಲ ಗುರುತಿಸಲಾಗಿದೆ. ಇಂದ್ರಿಯ ನಿಗ್ರಹ, ಮಲವಿನಾಶ, ಕರ್ಮಕಳಂಕದಿಂದ ಮುಕ್ತಿ ಪಡೆದುಕೊಂಡು ಆತ್ಮದತ್ತ ಮನಸ್ಸನ್ನು ಕೇಂದ್ರೀಕರಿಸುವುದು.
ಸಲ್ಲೇಖನ ವ್ರತವನ್ನು ಉಲ್ಲೇಖಿಸುವ ಅತಿ ಪೂರ್ವಕಾಲದ ಕನ್ನಡ ಶಾಸನವು ಹರಪನಹಳ್ಳಿ ಜಿಲ್ಲೆಯ ಯರಂಬಳ್ಳಿಯಲ್ಲಿ ದೊರಕಿದೆ. 8ನೆಯ ಶತಮಾನದಲ್ಲಿ ಬಾದಾಮಿಯಿಂದ ಚಾಲುಕ್ಯ ಸತ್ಯಾಶ್ರಯನು ಆಳುತ್ತಿದ್ದಾಗ, ಸಿದ್ಧಣಂದಿ, ಶಿವಣಂದಿ ಮತ್ತು ಜಯಣಂದಿ ಎಂಬ ಮೂವರು ಮುನಿಗಳು ಥಾಣಿ ಆಚಾರ್ಯನ ಸನ್ನಿಧಿಯಲ್ಲಿ ಸಲ್ಲೇಖನಗೆಯ್ದು, ಮಡಿದು ಸತ್ತ ವಿವರ ಇದರಲ್ಲಿದೆ.
12ನೆಯ ಶತಮಾನಕ್ಕಿಂತ ಮುಂಚೆ ಈ ಪದವು ಶ್ರವಣಬೆಳಗೊಳದ ಶಾಸನಗಳಲ್ಲಿ ಬಳಕೆಯಾಗಿಲ್ಲ. ಆವರೆಗೂ ಪ್ರಚಾರದಲ್ಲಿದ್ದ ವ್ರತಮರಣಗಳನ್ನು ಇಲ್ಲಿಯ ಶಾಸನಗಳು ‘ಆರಾಧನಾ, ‘ಸನ್ಯಸನ, ‘ಸಮಾಧಿ, ಪದಗಳಿಂದ, ಒಂದುಬಾರಿ ಮಾತ್ರ ‘ಪಾಉಗ್ಗಮಣ ಪದದಿಂದ ಗುರುತಿಸಿರುವುವು. 13ನೆಯ ಶತಮಾನದಲ್ಲಿ ಒಮ್ಮೆ, 15ನೆಯ ಶತಮಾನದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡು, ಸಲ್ಲೇಖನ ಪದವು ದಾಖಲೆಗಳಿಂದ ಕಣ್ಮರೆಯಾಗಿಬಿಡುವುದು. ಶಾಸನಗಳಲ್ಲಿ ವ್ರತಮರಣವನ್ನು ಹೆಚ್ಚುಬಾರಿ ಗುರುತಿಸಿರುವುದು ‘ಸನ್ಯಸನ ಮತ್ತು ‘ಸಮಾಧಿ ಎಂಬ ಪದಗಳಿಂದ. ಇತಿಹಾಸದಲ್ಲಿ ಪಂಡಿತಮರಣವನ್ನು ಬರಮಾಡಿಕೊಂಡ ಏಕೈಕ ವ್ಯಕ್ತಿಯಂದರೆ, ಶಾಂತಲೆಯ ತಾಯಿ ಮಾಚಿಕಬ್ಬೆ. ಕ್ರಿ. ಶ. 1131ರಲ್ಲಿ, ತನ್ನ ಮಗಳ ಮರಣವಾರ್ತೆಯನ್ನು ಕೇಳಿ ವೈರಾಗ್ಯಕ್ಕೊಳಗಾಗಿ, ಸಲ್ಲೇಖನ ವ್ರತವನ್ನು ಸ್ವೀಕರಿಸಿ, ಅವಳು ಪಂಡಿತಮರಣ ಪಡೆದ ಕಲ್ಬರಹವಿದೆ.

ಸಲ್ಲೇಖನ ವ್ರತ
ಜೈನ ಧರ್ಮದಲ್ಲಿ ದೀಕ್ಷೆ ಪಡೆದ ವ್ಯಕ್ತಿ ತನ್ನ ಸ್ವಇಚ್ಛೆಯಿಂದ ನೀರು ಆಹಾರವನ್ನು ಬಿಟ್ಟು ಕ್ರಮಬದ್ದವಾದ ಉಪವಾಸ ಕೈಗೊಳ್ಳುತ್ತಾರೆ. ಆಹಾರ ಕ್ರಮಾಧಿಗಳನ್ನು ಬಿಡುತ್ತಾ ದೇಹದ ಮೇಲಿನ ಮಮತೆಯನ್ನು ಕಳೆದುಕೊಂಡು, ಕೊನೆ ಕ್ಷಣದವರೆಗೂ ಸಾವನ್ನು ಬಹಳ ಖುಷಿಯಿಂದಲೇ ಸ್ವೀಕರಿಸುವುದೇ ಸಲ್ಲೇಖನ ವ್ರತ.ದೇಹದಲ್ಲಿ ಬಂಧಿಸಲ್ಪಟ್ಟಿರುವ ‘ಆತ್ಮವನ್ನು ಬಿಡುಗಡೆಮಾಡಿ, ಅದನ್ನು ‘ಪರಮಾತ್ಮ ಸ್ಥಾನಕ್ಕೇರಿಸುವುದು, ಆ ಮೂಲಕ ಜನನಮರಣ ಚಕ್ರದಿಂದ ಮುಕ್ತಿ ಪಡೆದು­ಕೊಳ್ಳುವುದು, ಈ ಸಿದ್ಧಾಂತದ ಗುರಿ.
ಜೈನಸಿದ್ಧಾಂತದಲ್ಲಿ  ದೇಹತ್ಯಾಗವನ್ನು ಗುರುತಿಸುವ ಸುಮಾರು 48 ಪದಗಳಿವೆ. ಅವುಗಳೆಲ್ಲವೂ ಜೀವಿಯು ಮರಣದೆಡೆಗೆ ಹಾಕುವ  ಹೆಜ್ಜೆಗಳನ್ನು ಗುರುತಿಸುತ್ತದೆ.

ಸಲ್ಲೇಖನವನ್ನು ಏಕೆ ಕೈಗೊಳ್ಳಬೇಕು?
ಜೈನರ ಪ್ರಕಾರ, ಪ್ರತಿಯೊಂದು ಕ್ರಿಯೆ (ಆಹಾರ ಸೇವನೆಯನ್ನೂ ಸೇರಿ) ಅದು ಕರ್ಮಕ್ಕೆ ಸಂಬಂಧಿಸಿದ್ದಾಗಿದೆ. ಜೈನರು ಶುದ್ಧ ಸಸ್ಯಾಹಾರಿಗಳು, ಆದರೆ, ಸಸ್ಯಗಳಿಗೂ ಜೀವವಿದೆ ಎಂದು ನಂಬಿರುವ ಜೈನರು ತರಕಾರಿ, ಹಣ್ಣು ಮತ್ತು ಎಲೆಗಳನ್ನು ತಿನ್ನುವುದರಿಂದಲೂ ಅವುಗಳಿಗೆ ನೋವಾಗುತ್ತದೆ ಎಂದು ಭಾವಿಸತ್ತಾರೆ. ಹೀಗಾಗಿ ಅವುಗಳ ಸೇವನೆಯೂ ನಕಾರಾತ್ಮಕ ಕರ್ಮಕ್ಕೆ ಸಮಾನ. ಅವುಗಳಲ್ಲಿಯೂ ಜೀವಾಣುಗಳಿರುತ್ತವೆ. ಹೀಗಾಗಿ ಆಹಾರ ಸೇವನೆ ಸಸ್ಯಾಹಾರ ಸೇವನೆಯಿಂದ ಮರಗಳಿಗೆ ನೋವನ್ನು ಉಂಟು ಮಾಡಿದಂತೆ. ಅಷ್ಟೇ ಅಲ್ಲ ನೀರಿನಲ್ಲಿಯೂ ಸೂಕ್ಷ್ಮಾಣು ಜೀವಿಗಳು ಇರುತ್ತವೆ. ನೀರು ಕುಡಿಯುವುದು ಕೂಡ ನಕಾರಾತ್ಮಕ ಕರ್ಮಕ್ಕೆ ಕಾರಣ ಎಂಬುದು ಜೈನರ ನಂಬಿಕೆ. ದೇಹ ತ್ಯಾಗದ ವೇಳೆ ಹಳೆಯ ಕರ್ಮದ ಪಾಪದಿಂದ ದೇಹವನ್ನು ಶುದ್ಧೀಕರಿಸಿ ಮೋಕ್ಷ ಸಾಧಿಸಲು ಜೈನರು ಸಲ್ಲೇಖನ ವ್ರತ ಕೈಗೊಳ್ಳುತ್ತಾರೆ.

ಸಲ್ಲೇಖನ ಆತ್ಮಹತ್ಯೆಯಲ್ಲ
ಜೈನ ಮುನಿಗಳು ಮೊಕ್ಷ ಹಾಗೂ ಪುನರ್ಜನ್ಮಕ್ಕಾಗಿ ಸಲ್ಲೇಖನ ವ್ರತವನ್ನಾಚರಿಸುತ್ತಾರೆ. ಈ ಆಚರಣೆಯು 2500 ವರ್ಷಗಳಷ್ಟು ಪುರಾತನವಾಗಿದ್ದು, ಭಗವಾನ್ ಮಹಾವೀರನ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಅಲ್ಲದೆ, ಇದೊಂದು ಆತ್ಮಹತ್ಯೆಯ ಯತ್ನವಲ್ಲ. ಆತ್ಮಹತ್ಯೆ ಮಹಾಪಾಪ ಎಂದು ಎಲ್ಲಾ ಧರ್ಮಗಳು ಹೇಳುತ್ತವೆ. ಅದೇ ರೀತಿ, ಜೈನ ಧರ್ಮದಲ್ಲಿಯೂ ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪೆಂದು ಹೇಳಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ಮಾಡಿದ ಕರ್ಮಫ‌ಲಗಳು ಸಾವಿನ ಬಳಿಕವೂ ಹಾಗೆಯೇ ಉಳಿದುಕೊಳ್ಳುತ್ತವೆ. ಇದರಿಂದ ಜನ್ಮ ಮತ್ತು ಮರು ಹುಟ್ಟಿನಿಂದ ಪಾರಾಗಿ ಮುಕ್ತಿಹೊಂದಲು ಸಾಧ್ಯವಿಲ್ಲ. ಸಲ್ಲೇಖನ ವ್ರತದ ಬೆಂಬಲಿಗಳು ಈ ವಿಧಾನವನ್ನು ಆತ್ಮಹತ್ಯೆ ಎಂದು ಪರಿಗಣಿಸಬಾರುದು ಎಂದು ಹೇಳುತ್ತಾರೆ. 
ಇಷ್ಟಲ್ಲದೆ ಆತ್ಮಹತ್ಯೆಯಲ್ಲಿ ಹೋಗುವಂತೆ ಅರೆ ಕ್ಷಣದಲ್ಲಿ ವ್ಯಕ್ತಿಯ ಜೀವ ಹೋಗುವುದಿಲ್ಲ. ಸಲ್ಲೇಖನ ವ್ರತ ಸಂಪೂರ್ಣಗೊಳ್ಳಲು 30 ದಿನವಾದರೂ ಬೇಕು.ವ್ರತ ಕೈಗೊಳ್ಳುವ ವ್ಯಕ್ತಿ ಯಾವ ಬಗೆಯ ಮಾನಸಿಕ ಖನ್ನತೆಗೆ ಒಳಗಾಗಿ ಅಥವಾ ಭರವಸೆಯನ್ನು ಕಳೆದುಕೊಂಡಿರುವುದಿಲ್ಲ.
ಸಲ್ಲೇಖನ ವ್ರತ ಇಚ್ಛಾ ಮರಣಾಥವಾ ದಯಾ ಮರಣವಲ್ಲ. ಗುಣಪಡಿಸಲಾಗದ ನೋವಿನಿಂದ ಪರಾಗುವ ಸಲುವಾಗಿ ಉದ್ದೇಶ ಪೂರ್ವಕವಾಗಿ ಸಾವಿಗೆ ಶರಣಾಗುವುದು ಇಚ್ಛಾಮರಣವಾಗಿದೆ. ಆದರೆ, ಸಲ್ಲೇಖನ ವ್ರತ ಪ್ರಜ್ಞಾಪೂರ್ವಕವಾಗಿಯೇ ನಡೆಯುವ ಕ್ರಿಯೆಯಾಗಿದೆ. 

No comments:

Post a Comment