Friday, June 09, 2017

ಪಾರ್ವತಮ್ಮ ರಾಜ್ ಕುಮಾರ್ ಎನ್ನುವ ವಜ್ರೇಶ್ವರಿ ಭಾಗ - 3

ಬಡತನದಲ್ಲೂ ನಮ್ಮ ಪ್ರೀತಿ ಚೆನ್ನಾಗಿತ್ತು
----------------------------------------

ಚಿತ್ರೋದ್ಯಮದಲ್ಲಿ ನಾವು ನಡೆದು ಬಂದ ಹಾದಿ ಹೂವಿನ ಹಾಸಿಗೆಯೇನೂ ಆಗಿರಲಿಲ್ಲ. ಕಷ್ಟ ಇತ್ತು, ಜೊತೆಗೇ ಸುಖವೂ ಇತ್ತು. ಕಷ್ಟದಲ್ಲೇ ಹೆಚ್ಚಿನ ಸುಖ ಇರುತ್ತೋ ಏನೋ? ನನಗೆ ಎಷ್ಟೋ ಸಲ ಹಾಗನ್ನಿಸಿದೆ.


ಆಗೆಲ್ಲ ಮನೆ ನೋಡ್ಕೋತಿದ್ದವಳು ನಾನೇ. ಕೈಯಲ್ಲಿ ದುಡ್ಡಿಲ್ಲದ ಬಡತನದ ದಿನಗಳಲ್ಲೇ ನಾವು ಸುಖವಾಗಿದ್ವೋ ಏನೋ? ಒಂದೊಂದು ಸಾರಿ ಹಾಗನ್ನಿಸುತ್ತೆ. ಆಗ ವಾರಕ್ಕೊಂದು ಸಲ ಎಲೆಕ್ಟ್ರಿಕ್ ಟ್ರೇನ್ ಹತ್ತಿ ಬೀಚಿಗೆ ಹೋಗ್ತಾ ಇದ್ವಿ. ತಿಂಗಳಿಗೆ ಒಂದು ಸಲ ತಿರುಪತಿಗೆ ಹೋಗ್ತಿದ್ವಿ. ಎಲ್ಲರೂ ಒಟ್ಟಿಗೆ ಕೂತು ಊಟ ಮಾಡ್ತಿದ್ವಿ. ಆಗ ನಾವೆಲ್ಲ ಏನೇ ಆದ್ರೂ ಊಟ ಮಾತ್ರ ಒಟ್ಟಿಗೇ ಮಾಡ್ತಿದ್ವಿ. ಎಲ್ಲರೂ ನೆಲದಲ್ಲಿ ಕುಳಿತು ಊಟ ಮಾಡೋದು. ನಾನೇ ಎಲ್ಲರಿಗೂ ಕೈತುತ್ತು ಹಾಕಿದ್ದೆ.

ಆಮೇಲಾಮೇಲೆ ಶೂಟಿಂಗಿಗೂ ನಾನು ಹೋಗ್ತಿದ್ದೆ. ನನಗೆ ತುಂಬ ಮೆಚ್ಚುಗೆಯಾದೋರು ಪಂಡರಿಬಾಯಿ. ಅವರನ್ನು ನಾವು ಇವತ್ತಿಗೂ ನೆನಸ್ಕೋಬೇಕು. ನಮ್ಮೆಜಮಾನ್ರಿಗೆ ಅಷ್ಟು ಇಂಗ್ಲಿಷ್ ಗೊತ್ತಿರಲಿಲ್ಲ. ಸೆಟ್‌ನಲ್ಲಿ ಡೈರೆಕ್ಟರ್ ಏನೋ ಸೂಚನೆ ಕೊಟ್ಟಾಗ ಅದನ್ನು ಪಂಡರಿಬಾಯಿ ಮೆತ್ತಗೆ ಯಜಮಾನರಿಗೆ ಅರ್ಥವಾಗೋ ಹಾಗೇ ಹೇಳ್ತಿದ್ರು. ಅವರೂ ಅದನ್ನು ನೆನಪಿಸ್ಕೋತಾರೆ.

ಆಗೆಲ್ಲ ನಮಗೆ ಕೆಲಸ ಇರ್ತಿರಲಿಲ್ಲ. ಯಾಕೆಂದರೆ ಬರೀ ಡಬ್ಬಿಂಗ್ ಸಿನಿಮಾಗಳೇ ಬರ್ತಿದ್ವು. ನಾವೆಲ್ಲ ಕೆಲಸ ಇಲ್ಲದಾಗ ‘ಕನ್ನಡ ಚಲನಚಿತ್ರ ಕಲಾವಿದರ ಸಂಘ, ಮದ್ರಾಸು’ ಅನ್ನೋ ಹೆಸರಿನ ನಾಟಕ ಕಂಪೆನಿ ಮಾಡಿಕೊಂಡು ಕರ್ನಾಟಕದಲ್ಲಿ ನಾಟಕ ಆಡ್ತಾ ಇದ್ವಿ. ಅಲ್ಲಿ ಆಡ್ತಿದ್ದದ್ದು ಮೂರೇ ನಾಟಕ; ಕಣ್ಣಪ್ಪ, ಸಾಹುಕಾರ ಮತ್ತು ಎಚ್ಚಮನಾಯ್ಕ, ಅದರಲ್ಲಿ ಸುಮಾರು ಮೂವತ್ತು ಮಂದಿ ಇದ್ರು. ಅದವಾನಿ ಲಕ್ಷ್ಮೀದೇವಿ, ರಮಾದೇವಿ, ಮೈಸೂರು ಲಕ್ಷ್ಮೀ, ಕುಳ್ಳಿ ಜಯ, ಅಶ್ವತ್ಥ ಕೃಷ್ಣಶಾಸ್ತ್ರಿ, ರಾಮಚಂದ್ರ ಶಾಸ್ತ್ರಿ, ಜಿವಿ ಅಯ್ಯರ್, ಬಾಲಣ್ಣ, ನರಸಿಂಹರಾಜು.. ಅಷ್ಟೂ ಮಂದಿಗೂ ಆ ನಾಟಕ ಕಂಪೆನಿಯಿಂದಲೇ ಊಟ.


ಕರ್ನಾಟಕದ ಎಲ್ಲಾ ಕಡೆಯಲ್ಲೂ ನಾಟಕ ಮಾಡ್ತಾ ಇದ್ವಿ. ಆದರೆ ಮಂಗಳೂರಲ್ಲಿ ನಾಟಕ ಮಾಡಿದಾಗ ಮಾತ್ರ ಕಾಸು ಹುಟ್ಟಲಿಲ್ಲ. ಕೊನೆಗೆ ಬೆಳಗಾವಿಯಲ್ಲಿ ನಾಟಕ ಮಾಡಿ ಆ ಹಣದಲ್ಲಿ ಮಂಗಳೂರಿನ ಸಾಲ ತೀರಿಸಿದ ಪ್ರಮೇಯವೂ ಬಂದಿತ್ತು.
ಅದಾದ ಮೇಲೆ ‘ಮಹಿಷಾಸುರ ಮರ್ದಿನಿ’ ಸಿನಿಮಾದಲ್ಲಿ ಅವಕಾಶ ಸಿಕ್ತು. ಐದು ಸಾವಿರಕ್ಕೆಲ್ಲ ಒಪ್ಕೋಬೇಡ, ಹತ್ತು ಸಾವಿರ ತಗೋ ಅಂತ ಪ್ರಭಾಕರ ಶಾಸ್ತ್ರಿಗಳು ಹತ್ತು ಸಾವಿರ ಕೊಡಿಸಿದರು. ಅದಾದ ಮೇಲೆ ತುಕಾರಾಂ ಅಂತ ಒಂದು ಸಿನಿಮಾ. ಬಹುಶಃ ೧೯೬೨ರಲ್ಲಿ ಇರಬೇಕು. ಅದೇ ವರ್ಷ ಶಿವಣ್ಣ ಹುಟ್ಟಿದ್ದು. ಆಗ ಒಮ್ಮೆಗೇ ಕೈಗೆ ಐದು ಸಾವಿರ ಅಡ್ವಾನ್ಸು ಬಂತು. ಅಷ್ಟು ದುಡ್ಡು ಒಟ್ಟಿಗೆ ನೋಡಿದ್ದೇ ಆಗ.

ಆಮೇಲೂ ಪರಿಸ್ಥಿತಿಯೇನೂ ತುಂಬಾ ಸುಧಾರಿಸಲಿಲ್ಲ. ಬಂಗಾರದ ಮನುಷ್ಯ ಚಿತ್ರಕ್ಕೆ ಸಿಕ್ಕ ಸಂಭಾವನೆ ಮೂವತ್ತು ಸಾವಿರ ಮಾತ್ರ. ಆಗೆಲ್ಲ ಎಷ್ಟು ಕೊಡ್ತಾರೋ ಅಷ್ಟು ಅನ್ನೋ ಮನೋಭಾವ. ನಾನು ಬಂದ ಮೇಲೇ ವರುಷಕ್ಕೆ ಇಂತಿಷ್ಟು ಜಾಸ್ತಿ ಮಾಡೋಕೆ ಶುರುಮಾಡಿದ್ದು.

ಆಗೆಲ್ಲ ಎಷ್ಟು ಚೆನ್ನಾಗಿತ್ತು ಅನ್ನೋದಕ್ಕೆ ಇನ್ನೊಂದು ಉದಾಹರಣೆ ಕೊಡ್ತೀನಿ. ‘ರಣಧೀರ ಕಂಠೀರವ’ ಸಿನಿಮಾ ಮಾಡಿದಾಗ ತಗೊಳ್ಳೋರೇ ಇರಲಿಲ್ಲ. ಪ್ರಿಂಟ್ ಹಾಕಿಸೋಕೆ ದುಡ್ಡು ಕೊಡಿ ಅಂತ ಥಿಯೇಟರ್ ಥಿಯೇಟರ್ ಅಲೆಯೋದೇ ಆಗಿತ್ತು. ಆಗ ಭಾರತ್ ಟಾಕೀಸ್‌ನ ಷರೀಫ್ ಕರೆದು ಥಿಯೇಟರ್ ಕೊಟ್ಟರು ಆ ಥಿಯೇಟರ್ ಇರೋ ತನಕ ಅದರಲ್ಲಿ ಬರೀ ಕನ್ನಡ ಸಿನಿಮಾನೇ ಹಾಕ್ತಿದ್ರು. ಆ ಅಭಿಮಾನ ಈಗ ಯಾರಿಗಿದೆ?

* * *

ನನಗೆ ಆಗಿಂದಲೂ ಕಾದಂಬರಿಗಳನ್ನು ಓದೋ ಅಭ್ಯಾಸ. ಬಂಗಾರದ ಮನುಷ್ಯ, ಹೊಸ ಬೆಳಕು, ಎರಡು ಕನಸು, ಮಯೂರ, ಸಮಯದ ಗೊಂಬೆ ಮುಂತಾದ ಕಾದಂಬರಿಗಳನ್ನು ನಾನೇ ಓದಿ ಸಿನಿಮಾ ಮಾಡಿ ಅಂತ ಹೇಳಿದ್ದು. ನಾಗರಹಾವು ಕತೆಯನ್ನೂ ಇವರೇ ಮಾಡಬೇಕು ಅಂತ ನಂಗೆ ಆಸೆ ಇತ್ತು. ನಾನು ಓದಿದ ಮತ್ತೊಂದಷ್ಟು ಕತೆಗಳು ಇವತ್ತಿಗೂ ನೆನಪಿವೆ. ಅವನ್ನು ಸಿನಿಮಾ ಮಾಡಬೇಕು ಅನ್ನೋ ಆಸೆ ಈಗಲೂ ಇದೆ. ನೃಪತುಂಗ, ಅಂಬರೀಷ, ಕರ್ಣ, ಶಂಕರಾಚಾರ್ಯ, ವಿವೇಕಾನಂದ- ಇವೆಲ್ಲವೂ ಸಿನಿಮಾ ಆಗಬೇಕು.


ಬುದ್ಧನ ಪಾತ್ರದಲ್ಲಿ ರಾಜ್‌ಕುಮಾರ್ ನಟಿಸಬೇಕು ಅಂತ ತುಂಬ ಜನ ಹೇಳಿದ್ರು. ಆದರೆ ನನಗೆ ಅದರಲ್ಲಿ ಆಸಕ್ತಿ ಇಲ್ಲ. ಚಿಕ್ಕ ಪ್ರಾಯದ ಹೆಂಡತಿಯನ್ನೂ ಮಗನನ್ನು ಬಿಟ್ಟು ಹೋಗೋ ಗಂಡನ ಪಾತ್ರ ಅದು. ಅದು ನನಗೆ ಇಷ್ಟ ಆಗಲಿಲ್ಲ. ಒಬ್ಬೊಬ್ಬರು ಒಂದೊಂದು ಥರ ಯೋಚನೆ ಮಾಡ್ತಾರೆ ಅನ್ನಿ, ನನ್ನ ಯೋಚನೆ ಆ ದಿಕ್ಕಿನಲ್ಲಿತ್ತು. ಅದೇ ಕಾರಣಕ್ಕೆ ಮಾಸ್ತಿಯವರ ‘ಸುಬ್ಬಣ್ಣ’ ಕಾದಂಬರೀನ ರಾಜ್‌ಕುಮಾರ್ ಮಾಡಬೇಕು ಅಂದಾಗ ನಾನು ಬೇಡ ಅಂದೆ. ಅದರಲ್ಲೂ ಮನೆ ಬಿಟ್ಟು ಹೋಗೋ ಸಂದರ್ಭ ಇದೆ. ಎಚ್.ಎಲ್. ನಾಗೇಗೌಡರ ಒಂದು ಕಾದಂಬರಿಯಲ್ಲೂ ಹೆಂಡ್ತೀನ ಬಿಟ್ಟು ಹೋಗಿ ಮತ್ತೊಬ್ಬಳನ್ನು ಕಟ್ಟಿಕೊಂಡು ದೊಡ್ಡ ಮನುಷ್ಯ ಆಗೋ ಕತೆ ಇತ್ತು. ಕಟ್ಟಿಕೊಂಡ ಹೆಂಡ್ತೀನ ಬಿಟ್ಟು ಹೋದೋನು ದೊಡ್ಡ ಮನುಷ್ಯ ಹೇಗಾಗ್ತಾನೆ ಅಂತ ನಾನು ಒಪ್ಪಲಿಲ್ಲ. ಅಂಥ ಪಾತ್ರ ಮಾಡಿದರೆ ರಾಷ್ಟ್ರ ಪ್ರಶಸ್ತಿ ಬರುತ್ತೆ ಅಂತ ಯಾರೋ ಹೇಳಿದ್ರು. ಅದು ಬೇಕಾಗಿಲ್ಲ ಅಂದೆ ನಾನು.

ಮೊನ್ನೆ ಮೊನ್ನೆ ಯಾರೋ ‘ಜೋಗಿ’ ಸಿನಿಮಾ ನಿಮ್ಮ ಬ್ಯಾನರ್‌ನಲ್ಲಿ ಬರಬೇಕಿತ್ತು ಅಂದ್ರು. ಯಾವ ಬ್ಯಾನರಿನಲ್ಲಿ ಬಂದ್ರೇನಂತೆ. ಅದೂ ನಮ್ಮ ಸಿನಿಮಾನೇ ಅಂತ ಹೇಳಿದೆ ನಾನು. ಮೊದಲೆಲ್ಲ ‘ನಾವು ಹಾಗೇ ಯೋಚನೆ ಮಾಡ್ತಿದ್ವಿ. ಯಾರು ಮಾಡಿದ್ರೂ ಅದೂ ರಾಜ್‌ಕುಮಾರ್ ಸಿನಿಮಾ. ನಮ್ಮನೆಯಲ್ಲಿರೋ ಪಾತ್ರೆ, ಫರ್ನೀಚರ್ ಎಲ್ಲಾನೂ ನಾನು ಸಿನಿಮಾಕ್ಕೆ ಕೊಟ್ಟುಬಿಡ್ತಿದ್ದೆ. ಯಾಕೆಂದರೆ ಸಿನಿಮಾ ಚೆನ್ನಾಗಿ ಬರಬೇಕು ಅಂತ ನಮ್ಮ ಯೋಚನೆ.

* * *

ನನಗೆ ಪತ್ರಕರ್ತರನ್ನು ಕಂಡರಾಗೋಲ್ಲ. ಅವರನ್ನು ನಾನು ದೂರ ಇಡ್ತೀನಿ ಅಂತೆಲ್ಲ ಹೇಳ್ತಾರೆ. ಆದ್ರೆ ನನಗೆ ಅವರ ಮೇಲೆ ಅಂಥ ಸಿಟ್ಟೇನೂ ಇಲ್ಲ. ಯಾರೇ ಆಗ್ಲಿ ತಪ್ಪು ಮಾಡಿದಾಗ ಸಿಟ್ಟು ಬರುತ್ತೆ. ಸುಮ್ಮನೆ ಏನೇನೋ ಬರೆದಾಗ ಸಿಟ್ಟು ಬರುತ್ತೆ. ಅಂಥದ್ದೇ ಒಂದು ಪ್ರಸಂಗ ‘ಗಂಧದ ಗುಡಿ’ ಸಂದರ್ಭದಲ್ಲಿ ಆಯ್ತು. ರಾಜ್‌ಕುಮಾರ್ ಮತ್ತು ವಿಷ್ಣುವರ್ಧನ್ ಜೊತೆಯಲ್ಲಿರೋ ಫೋಟೋ ಅದು. ಅದರಲ್ಲಿ ರಾಜ್‌ಕುಮಾರ್ ನಗುತ್ತಾ ಕೈ ಮುಗಿದು ನಿಂತಿದ್ದರು. ಆ ಫೋಟೋ ಪ್ರಕಟಿಸಿದ ಪತ್ರಕರ್ತರೊಬ್ಬರು ಅದರ ಕೆಳಗೆ ಹೀಗೆ ಬರೆದಿದ್ದರು:


‘ರಾಜ್‌ಕುಮಾರ್ ನಗುತ್ತಿರುವುದು ಯಾಕೆ? ತನ್ನ ಪಾತ್ರ ಚೆನ್ನಾಗಿ ಬರಲಿ ಅಂತಾನಾ? ವಿಷ್ಣು ಪಾತ್ರವೇ ಚೆನ್ನಾಗಿ ಬರಲಿ ಅಂತಾನಾ? ತನ್ನ ಪಾತ್ರ ಕೆಟ್ಟು ಹೋದರೂ ಪರವಾಗಿಲ್ಲ, ವಿಷ್ಣು ಪಾತ್ರ ಚೆನ್ನಾಗಿ ಬರಲಿ ಅಂತಾನಾ?

ಇದನ್ನು ಓದಿದ ಯಾರಿಗೇ ಆದ್ರೂ ಸಿಟ್ಟು ಬರುತ್ತೋ ಇಲ್ವೋ ಹೇಳಿ. ಇದು
ಬರೆಯೋ ರೀತೀನಾ? ಹೀಗೆ ಯಾರಾದ್ರೂ ಬರೀತಾರಾ?

ಇದಾದ ಕೆಲವೇ ದಿನಗಳ ನಂತರ ನಾನು ಮೈಸೂರಿಗೆ ಹೋದೆ. ಜೊತೆಗೆ ಚಿ. ಉದಯಶಂಕರ್ ಕೂಡ ಬಂದಿದ್ದರು. ಅಲ್ಲಿ ಹೋಟೆಲಿನಲ್ಲಿ ಕುಳಿತಿರಬೇಕಾದರೆ ಆ ಪತ್ರಕರ್ತರು ಸಿಕ್ಕಿದರು. ನಾನು ಅವರನ್ನು ಸ್ವಲ್ಪ ಮಾತಾಡಬೇಕಿದೆ, ಬನ್ನಿ ಅಂತ ಕರೆದೆ.

(ಇದು ಖ್ಯಾತ ಪತ್ರಕರ್ತ ಜೋಗಿ ಅವರು ನಿರೂಪಿಸಿದ ಪಾರ್ವತಮ್ಮನವರ ಬದುಕಿನ ಅನುಭವಗಳು.)

No comments:

Post a Comment