Wednesday, July 02, 2014

ನಮ್ಮಲ್ಲಿನ ಸ್ಥಳ ಪುರಾಣಾಗಳು(Myths) - 27

ಪುರಿ (Puri)

ಭಾರತದ ಪೂರ್ವ ಕರಾವಳಿ ರಾಜ್ಯವಾದ ಒಡಿಶ್ಯಾ ರಾಜ್ಯದ ಜಗತ್ಪ್ರಸಿದ್ದ ಯಾತ್ರಾಸ್ಥಳವೇ ಪುರಿ. ಇಲ್ಲಿನ ಶ್ರೀ ಜಗನ್ನಾಥ ತನ್ನ ಭಕ್ತರಿಂದ ಜಗದೊಡೆಯ, ಜಗತ್ಪಾಲಕ, ಜಗತ್ರಕ್ಷಕನೆಂದೆಲ್ಲಾ ಕೊಂಡಾಡಲ್ಪಟ್ಟಿದ್ದಾನೆ. ಇಂತಹಾ ಬಲರಾಮ ಸುಭದ್ರೆಯರೊಡಗೂಡಿ ನೆಲೆಸಿರುವ ಜಗನ್ನಾಥ ಸ್ವಾಮಿಗೆ ಪ್ರತಿ ವರ್ಷವೂ ಆಶಾಢ ಮಾಸದಲ್ಲಿ ರಥಯಾತ್ರೆಯು ನೆರವೇರುತ್ತದೆ. ಭಾರತದಲ್ಲಷ್ಟೇ ಅಲ್ಲದೆ ವಿಶ್ವದೆಲ್ಲೆಡೆ ಹೆಸರಾಗಿರುವ ಪುರಿ ಜಗನ್ನಾಥ ರಥಯಾತ್ರೆಗೆ ಕೋಟ್ಯಾಂತರ ಭಕ್ತರು ಸಾಕ್ಷಿಯಾಗುತ್ತಾರೆ.
 
Sri Jagannatha Swami, Puri, Odishya



***

Jagannatha Swami Temple, Puri
ಬಹುಕಾಲದ ಹಿಂದೆ ಮರಕತದಿಂದ ಮೈದುಂಬಿದ ನೀಲಮಾಧವನನ್ನು ನೀಲಗಿರಿಯ ಬುಡಕಟ್ಟಿನ ಅರಸನಾದ ವಿಶ್ವವಸುವು ಅರ್ಚಿಸುತ್ತಿದ್ದನು. ಅದೇ ವೇಳೆಯಲ್ಲಿ ಆವಂತಿ ರಾಜ್ಯದ ರಾಜನಾಗಿದ್ದ ಇಂದ್ರದ್ಯುಮ್ನನು ತಾನು ಸಹ ಮಹಾನ್ ವಿಷ್ಣುಭಕ್ತನಾಗಿದ್ದು ಅವನಿಗೆ ಸಹ ವಿಶ್ವವಸುವು ಪೂಜಿಸುತ್ತಿದ್ದ ನೀಲಮಾಧವ ವಿಗ್ರಹವನ್ನು ಹೇಗಾದರೂ ಪಡೆಯಬೇಕೆನ್ನುವ ಬಯಕೆಯುಂಟಾಯಿತು. ತನ್ನ ಈ ಕಾರ್ಯವನ್ನು ಸಾಧಿಸುವುದಕ್ಕಾಗಿ ಆ ರಾಜನು ವಿದ್ಯಾಪತಿ ಎನ್ನುವ ಬ್ರಾಹ್ಮಣಾನೋರ್ವನನ್ನು ಕಳುಹಿಸಿದ. ಆ ವಿದ್ಯಾಪತಿಯು ತಾನು ದಟ್ಟಾರಣ್ಯದ ಗುಹೆಗಳಲ್ಲಿ ವಿಗ್ರಹವನ್ನು ಹುಡುಕುತ್ತಾಬರಲು ವಿಶ್ವವಸುವಿನ ಪುತ್ರಿಯಾದ ಲಲಿತೆಯಲ್ಲಿ ಅನುರಕ್ತಳಾಗಿ ಅವಳನ್ನು ವರಿಸಿದನು. ಲಲಿತೆಯ ಮಾತಿಗೆ ಕಟ್ಟುಬಿದ್ದ ವಿಶ್ವವಸು ಅಳಿಯನ ಕಣ್ಣುಗಳಿಗೆ ಬಟ್ಟೆಯನ್ನು ಕಟ್ಟಿ ವಿಗ್ರಹವಿದ್ದ ಸ್ಥಳಕ್ಕೆ ಕರೆದೊಯ್ಯಲು ವಿದ್ಯಾಪತಿಯು ಸಾಸಿವೆ ಬೀಜಗಳನ್ನು ದಾರಿಯುದ್ದಕ್ಕೂ ಚೆಲ್ಲಿದನು. ಕೆಲದಿನಗಳ ಬಳಿಕ ಚಿಗುರಿದ ಸಾಸಿವೆ ಗಿಡದ ಜಾಡನ್ನು ಹಿಡಿದು ಇಂದ್ರದ್ಯುಮ್ನನ ಸೈನ್ಯ ಸಮೇತನಾಗಿ ವಿಗ್ರಹವಿರುವ ಸ್ಥಳಕ್ಕೆ ಬರಲು ವಿಗ್ರಹವೇ ಕಣ್ಮರೆಯಾಯಿತು. ವಿಗ್ರಹವು ನಾಪತ್ತೆಯಾಗಿದ್ದರಿಂದಾಗಿ ಬೇಸರಗೊಂಡು ಸಾಯಲು ಹೊರಟ ಇಂದ್ರದ್ಯುಮ್ನನಿಗೆ ಅಶರೀರವಾಣಿಯೊಂದು ಕೇಳಿಸಿ ಅದರ ಅನುಜ್ಞೆಯಂತೆಯೇ ತಾನು ವಿಷ್ಣು
ದೇವಾಲಯವನ್ನು ನಿರ್ಮಾಣ ಮಾಡಿದನು. ನಾರದರು ಅದರಲ್ಲಿ ನರಸಿಂಹ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದರು.


Jagannatha Swami Rathayathra, Puri 
ಇಷ್ಟಾದ ಬಳಿಕ ಇಂದ್ರದ್ಯುಮ್ನನ ಕನಸಿನಲ್ಲಿ ಬಂದ ಶ್ರೀ ಜಗನ್ನಾಥ ಸ್ವಾಮಿಯು ಸಮುದ್ರದಲ್ಲಿ ತೇಲಿಬರುವ ಮರದ ದಿಮ್ಮಿಯೊಂದರಿಂದ ವಿಷ್ಣು, ಬಲರಾಮ, ಸುಭದ್ರೆಯರ ಮೂರ್ತಿಗಳನ್ನು ನಿರ್ಮಿಸುವಂತೆ ನಿರ್ದೇಶಿಸಿದನು. ಅದಾಗ ಬಡಗಿಯ ವೇಷದಲ್ಲಿ ಬಂದ ದೇವಶಿಲ್ಪಿ ವಿಶ್ವಕರ್ಮನು ತಾನೇ ಆ ವಿಗ್ರಹಗಳನ್ನು ನಿರ್ಮಾಣ ಮಾದಲ್ಲು ತೊಡಗಿಕೊಂಡನು. ಆ ಸಮಯದಲ್ಲಿ ವಿಶ್ವಕರ್ಮನು “ತನ್ನ ಕೆಲಸ ಪೂರ್ಣ್ಗೊಂಡ ಬಳಿಕ ನಾನೇ ಹೇಳುತ್ತೇನೆ. ನಾನು ಹೇಳುವವರೆವಿಗೂ ಯಾರೂ ಆ ಕೊಠಡಿಯ ಬಾಗಿಲನ್ನು ತೆರೆಯಬಾರದು.” ಎನ್ನುವುದಾಗಿ ಅಪ್ಪಣೆ ಮಾಡಿದನು. ಇದಾಗಿ ಹಲವಾರು ದಿನಗಳುರುಳಿದರೂ ಸಹ ವಿಗ್ರಹ ನಿರ್ಂಆಣದ ಕೆಲಸದ ಸದ್ದೇ ಕೇಳಿಸದ ಕಾರಣದಿಂದ ದಿಗಿಲುಗೊಂಡ ಇಂದ್ರದ್ಯುಮ್ನ ಮಹಾರಾಜನು ಬಾಗಿಲನ್ನು ತೆರೆಯಿಸಲು ವಿಶ್ವಕರ್ಮನು ತಾನು ಅದೃಷ್ಯನಾಗಿದ್ದನು. ಪ್ರತಿಮೆಗಳು ಅಪೂರ್ಣಗೊಂಡಿದ್ದವು. ಅದೇ ಸಮಯದಲ್ಲಿ ಆ ಅಪೂರ್ಣ ವಿಗ್ರಹಗಳನ್ನೇ ಪ್ರತಿಷ್ಠೆ ಮಾಡುವಂತೆ ರಾಜನಿಗೆ ದೈವದ ಅಪ್ಪಣೆಯಾಗಲು ಅದೇ ಅಪೂರ್ಣ ವಿಗ್ರಹಗಳನ್ನು ನೇಮದಿಂದ ಪ್ರತಿಷ್ಠಾಪನೆ ಮಾಡಿಸಿದನು. ಇದೇ ಕಾರಣದಿಂದ ಜಗನ್ನಾಥನಿಗೆ ‘ದಾರುಬ್ರಹ್ಮ’ ಎಂಬ ಹೆಸರು ಪ್ರಾಪ್ತಿಯಾಯಿತು. ಅಂದಿನಿಂದ ಇಂದಿನವರೆಗೂ ಅದೇ ಸ್ವರೂಪದಲ್ಲಿ ತನ್ನ ಭಕ್ತಜನರಿಂದ ಪೂಜೆಗೊಳ್ಳುತ್ತಿರುವ ಜಗನ್ನಾಥ, ಬಲಭದ್ರ, ಸುಭದ್ರೆಯರು ವಿಷ್ಣು, ಶಿವ ಹಾಗೂ ಶಕ್ತಿಯ ಸ್ವರೂಪರಾಗಿದ್ದಾರೆ. 

No comments:

Post a Comment