ಅದೊಂದು
ಸೈನಿಕ ಶಾಲೆ. ಇನ್ಸ್‌ಪೆಕ್ಷನ್‌ಗಾಗಿ ಹಿರಿಯ ಸೈನ್ಯ ಅಧಿಕಾರಿಯೊಬ್ಬರು ಆ ಶಾಲೆಗೆ ಭೇಟಿಯಿತ್ತಿದ್ದಾರೆ.
ವಿದ್ಯಾರ್ಥಿಗಳು ಶಿಸ್ತಿನಿಂದ ಸಾಲಾಗಿ ನಿಂತಿದ್ದಾರೆ. ಆ ಅಧಿಕಾರಿ ಒಬ್ಬೊಬ್ಬ ಹುಡುಗನ ಎದುರು ನಿಂತು
ನೀನು ದೊಡ್ಡವನಾದ ಮೇಲೆ ಏನಾಗುತ್ತೀಯಾ ಎಂದು ಕೇಳುತ್ತಾ ಬರುತ್ತಿರುತ್ತಾನೆ. ಅದು ಸೈನಿಕ ಶಾಲೆಯಾಗಿದ್ದರಿಂದ
ಹುಡುಗರಲ್ಲನೇಕರು ‘ನಾನೊಬ್ಬ ಶೂರ ಸೈನಿಕನಾಗುತ್ತೇನೆ’ ಎನ್ನುತ್ತಿದ್ದರು.ಕೆಲವರು ‘ನಾನು ದಿಟ್ಟ ಸೈನ್ಯಾಧಿಕಾರಿಯಾಗುತ್ತೇನೆ’
ಎಂದು ಎದೆಯುಬ್ಬಿಸಿ ಹೇಳುತ್ತಿದ್ದರು.
ಪ್ರಸನ್ನವದನನಾದ
ಸೈನಿಕ ಅಧಿಕಾರಿ ಮುಂದೆ ನಡೆಯುತ್ತಾ ಒಬ್ಬ ಕುಳ್ಳಗೆ, ದುರ್ಬಲನಾಗಿ ಕಾಣುತ್ತಿದ್ದ ಹುಡುಗನ ಎದುರು ನಿಂತ.
‘ನೀನು
ದೊಡ್ಡವನಾದ ಮೇಲೆ ಏನಾಗುತ್ತೀಯಾ?’ - ಕೇಳಿದರು.
ಆತನ
ಪ್ರಶ್ನೆಯ ಕೊನೆಗೆ ವ್ಯಂಗ್ಯ ಬೆರೆತಿದ್ದು ಎದ್ದು ಕಾಣುತ್ತಿತ್ತು.
‘ಇಡೀ
ಯುರೋಪ್ ಖಂಡದ ಚಕ್ರವರ್ತಿಯಾಗುತ್ತೇನೆ’ ಕೊಂಚವೂ ವಿಚಲಿತನಾಗದೆ ಉತ್ತರಿಸಿದ ಆ ಬಾಲಕ.
ಸೈನ್ಯಾಧಿಕಾರಿ
ಈ ಪುಟ್ಟ ಪೋರನನ್ನು ಕೊಂಚ ಗಾಬರಿ, ಕೊಂಚ ಅನುಮಾನ, ಕೊಂಚ ಉಡಾಫೆಯ ದೃಷ್ಟಿಯಲ್ಲಿ ನೋಡುತ್ತಾ
ಮುಂದಕ್ಕೆ ಹೋದ ಆದರೆ ಆ ಹುಡುಗ ಪಾಲಿಗೆ ಆ ಮಾತು ಕೇವಲ ಉಡಾಫೆಯ ಮಾತಾಗಿರಲಿಲ್ಲ. ಮುಂದೆ ಆತ ಇಡೀ ಯುರೋಪನ್ನು
ತನ್ನ ಕಾಲಡಿ ಹಾಕಿಕೊಂಡ ಸಾಮ್ರಾಟನಾದ.
‘ಅಸಾಧ್ಯ
ಎಂಬ ಪದ ನನ್ನ ಶಬ್ಧಕೋಶದಲ್ಲೇ ಇಲ್ಲ. ಅದೇನಿದ್ದರೂ ಮೂರ್ಖರ ಶಬ್ಧಕೋಶದಲ್ಲಿ ದೊರೆಯುವ ಪದ’ ಎಂದು ಅಬ್ಬರಿಸಿದ್ದ
ಆತ
ನೆಪೋಲಿಯನ್ ಬೊನಾಪಾರ್ಟೆ!
***
Napoleon Bonoparte (15 August 1769 – 5 May 1821) |
ನೆಪೋಲಿಯನ್
ಬೊನಪಾರ್ಟೆ ಯೂರೋಪಿನ ಇತಿಹಾಸದಲ್ಲಿ ವಿಶಿಷ್ಟಸ್ಥಾನ ಪಡೆದ ಮಹಾವೀರ. ಫ್ರಾನ್ಸ್‌ನ ಅಧಿಪತಿಯಾಗಿ ಅವನು
ತುಂಬಾ ಹೆಸರು ಗಳಿಸಿದ್ದ. ತನ್ನ ಅಧಿಕಾರಾವಧಿಯಲ್ಲಿ ಅನೇಕ ಯುದ್ಧಗಳನ್ನು ಮಾಡಿ ಯಶಸ್ವಿಯಾಗಿದ್ದ.
ಅಂತಹ ಒಂದು ಯುದ್ಧ ಇಂಗ್ಲೆಂಡಿನೊಡನೆ ಸಹ ನಡೆಯಿತು. ಆ ಘೋರ ಯುದ್ಧದಲ್ಲಿ ಅನೇಕ ಆಂಗ್ಲ ಸೈನಿರು ಸೆರೆ
ಸಿಕ್ಕಿದ್ದರು. ಅವರನ್ನೆಲ್ಲಾ ಸೆರೆಮನೆಗೆ ಕಳುಹಿಸಿ ವಿದ್ರೋಹಿಗಳೆಂಬ ಪಟ್ಟ ಕಟ್ಟಿದ್ದ. ಹೀಗಾಗಿ ಅವರಿಗೆ
ಒಂದಿಲ್ಲೊಂದು ದಿನ ಮರಣದಂಡನೆ ಶಿಕ್ಷೆ ಕಾದಿತ್ತು.
ಒಮ್ಮೆ
ಒಬ್ಬ ಆಂಗ್ಲ ಖೈದಿಯೊಬ್ಬನನ್ನು ಜೈಲಿನ ತೋಟದಲ್ಲಿ ಕೆಲಸ ಮಾಡಲು ಒಯ್ಯಲಾಗಿತ್ತು. ಸೆರೆಮನೆಯ ಗೋಡೆಗೆ
ತಾಗಿಕೊಂಡು ಒಂದು ಮರದ ಒಣ ಬೊಡ್ಡೆ ಇದ್ದುದನ್ನು ಗಮನಿಸಿ, ಅದನ್ನು ಪ್ರತಿದಿನ ಯಾರಿಗೂ ಕಾಣದಂತೆ ಕೆತ್ತಿ
ಅದನ್ನು ದೋಣಿಯಂತೆ ಮಾಡಿಕೊಂಡು ಅಲ್ಲಿಯೇ ಮುಚ್ಚಿಟ್ಟಿದ್ದ. ಒಂದುದಿನ ಅದನ್ನು ತೆಗೆದುಕೊಂಡು ಕಣ್ತಪ್ಪಿಸಿ
ಹೊರಗೋಡಿದ. ಹಾಗೆ ಹೋಗುವಾಗ ಅಲ್ಲಿಯೇ ಇದ್ದ ಗಿಡದಲ್ಲಿ ಬಿಟ್ಟಿದ್ದ ಕೆಲವು ಸೇಬನ್ನು ಒಂದು ಬಟ್ಟೆಯಲ್ಲಿ
ಕಟ್ಟಿಕೊಂಡು ಇನ್ನೇನು ನೀರಿಗೆ ಇಳಿಯಬೇಕು, ಅಷ್ಟರಲ್ಲಿ ನೆಪೋಲಿಯನ್ನನ ಸೈನಿಕರು ಅವನನನ್ನು ಹಿಡಿದು
ಚಕ್ರವರ್ತಿಯ ಎದುರು ನಿಲ್ಲಿಸಿದರು. ನೆಪೋಲಿಯನ್‌ಗೆ ನಖಶಿಖಾಂತ ಸಿಟ್ಟುಬಂತು. ಕೈನಲ್ಲಿ ಹಿಡಿದಿದ್ದ
ಗಂಟನ್ನು ನೋಡಿ ಅದೇನೆಂದು ವಿಚಾರಿಸಿದ. ಆಗ ಆ ಖೈದಿ ಹೇಳಿದ, 'ಇದರಲ್ಲಿ ಸೇಬಿನ ಹಣ್ಣುಗಳಿವೆ. ಅದನ್ನು
ನನ್ನ ಪ್ರೀತಿಯ ತಾಯಿಗೆ ನೀಡಲೆಂದು ತೆಗೆದುಕೊಂಡಿದ್ದೆ.’
``ನನ್ನ
ತಾಯಿ ನನ್ನನ್ನು ಕಷ್ಟಪಟ್ಟು ಸಾಕಿ ನನಗೆ ದೇಶಪ್ರೇಮವನ್ನು ಕಲಿಸಿದ್ದಳು. ನಾನು ದೊಡ್ಡವನಾದ ಮೇಲೆ
ನನ್ನನ್ನು ಸೈನ್ಯಕ್ಕೆ ಸೇರಿಸಿ ತಾಯಿನಾಡಿನ ಸೇವೆ ಮಾಡಲು ಹರಸಿ ಕಳುಹಿಸಿದ್ದಳು. ಇಂದು ನನ್ನ ತಾಯಿಯನ್ನು
ನೋಡುವ ಉತ್ಕಟ ಆಸೆಯಿಂದಾಗಿ ಹೀಗೆ ತಪ್ಪಿಸಿಕೊಳ್ಳುವ ಉಪಾಯ ಮಾಡಿದೆ’’ ಎಂದು ಹೇಳಿ ಶಿಕ್ಷೆಗೆ ತಯಾರಾಗಿ
ನಿಂತುಬಿಟ್ಟ. ತಾಯಿಯ ಬಗ್ಗೆ ಅಗಾಧ ಪ್ರೀತಿಯನ್ನು ಹೊಂದಿದ ಆಂಗ್ಲ ಖೈದಿಯ ಬಗ್ಗೆ ನೆಪೋಲಿಯನ್ನನ ಮನ
ಮಿಡಿಯಿತು. ಅವನ ಮಾತೃ ಪ್ರೀತಿ, ದೇಶದ ಬಗ್ಗೆ ಇರಿಸಿಕೊಂಡ ಗೌರವ ಕಂಡು ಸಂತಸವಾಯಿತು. ಅವನನ್ನು ಗೌರವಪೂರ್ವಕವಾಗಿ
ಬಿಡುಗಡೆಗೊಳಿಸಿ ಒಂದು ಹಡಗಿನಲ್ಲಿ ಅವನ ದೇಶಕ್ಕೆ ಕಳುಹಿಸಿಕೊಟ್ಟ. ಹಾಗೆಯೇ ಅವನಿಗೆ ಒಂದು ಬುಟ್ಟಿತುಂಬಾ
ಸೇಬು ಹಣ್ಣು ತುಂಬಿ ಅವನ ತಾಯಿಗೆ ತನ್ನ ಕಾಣಿಕೆ ಎಂದು ಹೇಳಿ ನೀಡಿದ.
No comments:
Post a Comment