Sunday, July 20, 2014

ನಾದಿನ್ ಗಾರ್ಡಿಮರ್ (Nadine Gordimer )

ದಕ್ಷಿಣ ಆಫ್ರಿಕಾದ ದಮನಿತರ ದನಿಯಾಗಿದ್ದ ಖ್ಯಾತ ಮಹಿಳಾ ಸಾಹಿತಿ ನಾದಿನ್ ಗಾರ್ಡಿಮರ್ ಇತ್ತೀಚೆಗೆ (ಜುಲೈ 13 2014)  ನಮ್ಮನ್ನು ಅಗಲಿದ್ದಾರೆ. ಈ ಸಮಯದಲ್ಲಿ ಅವರ ಬಫ಼ುಕಿನ ಬಗೆಗಿನ ಕಿರುನೋಟವನ್ನು ನಿಮ್ಮೊಂದಿಗೆ ಹಂಚಿಕೊಳ್ಲುವ ಪ್ರಯತ್ನವನ್ನಿಲ್ಲಿ ಮಾಡಿದ್ದೇನೆ.

15 ಕಾದಂಬರಿ, 21 ಕಥಾ ಸಂಕಲನ, ಹಲವಾರು ಪ್ರಬಂಧಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಅಪೂರ್ವ ಕೊಡುಗೆ ಸಲ್ಲಿಸಿದ್ದ ನಾದಿನ್ ತಮ್ಮ ೯೦ ರ ಅಂಚಿನಲ್ಲಿ ನಮ್ಮನ್ನೆಲ್ಲಾ ತೊರೆದು ಹೊರಟು ಹೋಗಿದ್ದಾರೆ. ವರ್ಣಭೇದ ನೀತಿಯ ವಿರುದ್ಧ ದಕ್ಷಿಣ ಆಫ್ರಿಕಾದಲ್ಲಿ ನಡೆದ ಹೋರಾಟದ ಭಾಗವೇ ಇವರು  ತಮ್ಮ ಸಮಕಾಲೀನರಾಗಿದ್ದ ದಕ್ಷಿಣ ಆಫ್ರಿಕಾ ಗಾಂಧಿ ನೆಲ್ಸನ್‌ ಮಂಡೇಲಾ ಅವರನ್ನು ಬಹುವಾಗಿಯೇ  ಪ್ರಭಾವಿಸಿದ್ದರು.

Nadine Gordimer (20 November 1923 – 13 July 2014)

ನಾದಿನ್ ಗಾರ್ಡಿಮರ್ ಯುರೋಪಿನಿಂದ ದಕ್ಷಿಣ ಆಫ್ರಿಕಾಕ್ಕೆ ವಲಸೆ ಬಂದಿದ್ದ ಯಹೂದಿ ಕುಟುಂಬದ ಕುಡಿಯಾಗಿದ್ದರು. ತಂದೆ ಇಸಿಡೊರ್‌ ಗಾರ್ಡಿಮರ್‌ ವೃತ್ತಿಯಲ್ಲಿ ಕೈಗಡಿಯಾರ ತಯಾರಕರು. ರಷ್ಯಾದ ಝಾರ್‌ ದೊರೆಗಳ ಹಿಡಿತದಲ್ಲಿದ್ದ ಈಗಿನ ಲಿಥುವೇನಿಯಾಕ್ಕೆ ಸೇರಿದವರು. ತಾಯಿ ಹನ್ನಾ ಲಂಡನ್‌ನವರು. ನಾದಿನ್‌ ಹುಟ್ಟಿದ್ದು ಟ್ರಾನ್ಸ್‌ವಾಲ್‌ ಸಮೀಪದ ಗಣಿಗಳ ಪಟ್ಟಣ ಸ್ಪ್ರಿಂಗ್ಸ್‌ನಲ್ಲಿ. ಸ್ವತಃ ನಿರಾಶ್ರಿತರಾದರೂ ಆಕೆಯ ತಂದೆಗೆ ಕಪ್ಪುಜನರ ಸಂಕಷ್ಟಗಳ ಬಗ್ಗೆ ಸಹಾನುಭೂತಿ ಇರಲಿಲ್ಲ. ಆದರೆ, ಕಪ್ಪುಜನರ ಬಡತನ ಹಾಗೂ ಅವರ ಶೋಷಿತ ಜೀವನವನ್ನು ಹತ್ತಿರದಿಂದ ಕಂಡ ಅಮ್ಮ ಹನ್ನಾ,  ಕಪ್ಪುಜನರ ಮಕ್ಕಳಿಗಾಗಿ ಬಾಲವಾಡಿಯೊಂದನ್ನು ತೆರೆದಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಎದ್ದುಕಾಣುತ್ತಿದ್ದ ಜನಾಂಗೀಯ ತಾರತಮ್ಯ ಹಾಗೂ ಆರ್ಥಿಕ ಅಸಮಾನತೆಯ ಬಗ್ಗೆ ಪುಟ್ಟ ನಾದಿನ್‌ಗೆ ನಿಧಾನಕ್ಕೆ ಅರಿವಾಗತೊಡಗಿತ್ತು. ನಾದಿನ್‌ ಅಮ್ಮ ಹನ್ನಾಗೆ ತನ್ನ ಮಗಳು ದೈಹಿಕವಾಗಿ ದುರ್ಬಲಳು ಎಂಬ ಭಾವನೆಯಿತ್ತು. ಜ್ವರ ಬಂದ ಕಾರಣಕ್ಕೆ ಶಾಲೆಯಿಂದ ಬಿಡಿಸಿಬಿಟ್ಟರು. ಮನೆಪಾಠದ ಮೂಲಕ ಓದು ಮುಂದುವರಿಸಬೇಕಾಯಿತು.

ಬಾಲ್ಯಸಹಜ ಚಟುವಟಿಕೆಯಿಂದ ದೂರವಿದ್ದ ಏಕಾಂಗಿ ನಾದಿನ್‌, ಪುಸ್ತಕಗಳ ನಂಟು ಬೆಳೆಸಿಕೊಂಡರು. ಚಿಕ್ಕ ವಯಸ್ಸಿನಲ್ಲೇ ಭಾವನೆಗಳನ್ನು ಬರಹದಲ್ಲಿ ಇಳಿಸತೊಡಗಿದರು. 1937ರಲ್ಲಿ ಇನ್ನೂ 14 ವರ್ಷದವರಿದ್ದಾಗ ಅವರ ಮೊದಲ ಕಥೆ ಪ್ರಕಟವಾಯಿತು. 1948ರಲ್ಲಿ ಸ್ಪ್ರಿಂಗ್ಸ್‌ನಿಂದ ಜೋಹಾನ್ಸ್‌ಬರ್ಗ್‌ಗೆ ಸ್ಥಳಾಂತರಗೊಂಡರು. ಬೋಧನಾ ಕಾರ್ಯದಲ್ಲಿ ತೊಡಗಿಕೊಂಡು ಬರಹ ಕೃಷಿ ಮುಂದುವರಿಸಿದರು.

1949ರಲ್ಲಿ ಸ್ಥಳೀಯ ದಂತವೈದ್ಯ ಗೆರಾಲ್ಡ್‌ ಗಾವ್ರನ್‌ ಅವರನ್ನು ನಾದಿನ್‌ ವರಿಸಿದರು. 1950ರಲ್ಲಿ ಈ ದಂಪತಿಗೆ ಒರಿಯನ್‌ ಎಂಬ ಪುತ್ರಿಯೂ ಜನಿಸಿದಳು. ಆದರೆ, ಬಹುಕಾಲ ಬಾಳದ ಈ ದಾಂಪತ್ಯ ಮೂರು ವರ್ಷದೊಳಗೆ ವಿಚ್ಛೇದನದಲ್ಲಿ ಅಂತ್ಯವಾಯಿತು.

1954ರಲ್ಲಿ ಕಲಾಕೃತಿಗಳ ಡೀಲರ್‌ ಆಗಿದ್ದ ರೇನ್‌ಹೋಲ್ಡ್‌ ಕ್ಯಾಸಿರರ್‌ ಎಂಬ ಗಣ್ಯ ವ್ಯಕ್ತಿಯನ್ನು ನಾದಿನ್‌ ಮದುವೆಯಾದರು. 2001ರಲ್ಲಿ ವೃದ್ಧಾಪ್ಯ ಸಂಬಂಧಿ ಕಾಯಿಲೆಯಿಂದ ಕ್ಯಾಸಿರರ್‌ ನಿಧನರಾಗುವವರೆಗೆ ಪ್ರೀತಿ ತುಂಬಿದ ತುಂಬು ದಾಂಪತ್ಯವನ್ನು ನಾದಿನ್‌ ಅನುಭವಿಸಿದರು.

ಸ್ಥಳೀಯ ಕಪ್ಪುಜನರ ನೋವು ಅವರ ಬರಹಗಳಲ್ಲಿ ಕಾಣತೊಡಗಿತು. ಪರಿಣಾಮ, ಅವರ ‘ದಿ ಲೇಟ್‌ ಬೂರ್ಜ್ವಾಸ್‌ ವರ್ಲ್ಡ್‌’, ‘ಅ ವರ್ಲ್ಡ್‌ ಆಫ್‌ ಸ್ಟ್ರೆಂಜರ್ಸ್‌’, ‘ಬರ್ಗರ್ಸ್‌ ಡಾಟರ್‌’ ಮತ್ತು ‘ಜುಲೈಸ್‌ ಪೀಪಲ್‌’ ಕೃತಿಗಳ ಮೇಲೆ ದಕ್ಷಿಣ ಆಫ್ರಿಕಾ ಸರ್ಕಾರ ನಿಷೇಧ ಹೇರಿತ್ತು. ಆಫ್ರಿಕನ್‌ ನ್ಯಾಷನಲ್‌ ಕಾಂಗ್ರೆಸ್‌ ಅಕ್ರಮ ಸಂಘಟನೆ ಎಂದು ಸರ್ಕಾರ ಘೋಷಿಸಿದ್ದರೂ ಅದರ ಸಕ್ರಿಯ ಸದಸ್ಯೆಯಾಗಿ ಅದು ಏರ್ಪಡಿಸುವ ಪ್ರತಿಭಟನೆಗಳಲ್ಲಿ ನಾದಿನ್‌ ಸದಾ ಭಾಗಿಯಾಗುತ್ತಿದ್ದರು. ಜಾಗತಿಕ ವೇದಿಕೆಗಳಲ್ಲಿ ದಕ್ಷಿಣ ಆಫ್ರಿಕಾದ ಕರಾಳ ರಾಜಕೀಯ ಸನ್ನಿವೇಶದ ಚಿತ್ರಣ ನೀಡತೊಡಗಿದರು.

1974ರಲ್ಲಿ ಅವರ ‘ದಿ ಕನ್ಸರ್ವೇಷನಿಸ್ಟ್‌’ ಕೃತಿಗೆ ಬೂಕರ್‌ ಪ್ರಶಸ್ತಿ ಬಂತು. 1991ರಲ್ಲಿ ನೊಬೆಲ್‌ ಪ್ರಶಸ್ತಿ ಅರಸಿಕೊಂಡು ಬಂತು. 

ಆಧಾರ: ಪ್ರಜಾವಾಣಿ

No comments:

Post a Comment