Monday, July 21, 2014

ಸರಸಮ್ಮನ ಸಮಾಧಿ: ‘ಸಮಾಧಿ’ಯಾಗಬಾರದ ಸತ್ಯದ ಕಥೆ

‘ನಾನೂ ಅಲ್ಲಿಗೇ ಹೋಗುವುದಾಯಿತೆ?’ ಎಂದು ಜಾನಕಿ ತೀರಾ ನಿಟ್ಟುಸಿರು ಬಿಡುವುದಾಯಿತು. ಅವಳ ಹ್ಣೆ ಬೆವರಿತ್ತು. ಸೆಕೆ ದಿವಸವೇನಲ್ಲ, ಅವಳಿಗಷ್ಟೊಂದು ಗಾಬರಿಯೂ ಆಗಿರಲಿಲ್ಲ. ಆದರೂ ಜಾನಕಿ, ನೆರೆಮನೆ ಸೀತಕ್ಕನೊಡನೆ ಮಾತನಾಡುತ್ತಾ ಕುಳಿತಿದ್ದವಳು ಹಣೆಯ ಬೆವರನ್ನು ಸವರಿಕೊಳ್ಳಬೇಕಾಯಿತು. ಕೈ ನೋಡುತ್ತಾಳೆ, ಬೆರಳುಗಳಿಗೆ ಕುಂಕುಮದ ನೀರು ಕರಗಿ ರಕ್ತದಂತೆ ಅಂಟಿಕೊಂಡಿತ್ತು. ಅದನ್ನು ಕಂಡು ಸೀತಕ್ಕನೊಡನೆ, “ಸೀತಕ್ಕ... ಇಲ್ಲಿ ನೋಡು ನನ್ನ ಕೈಬೆರಳನ್ನು..” ಎಂದಳು. ಒಮ್ಮಿಂದೊಮ್ಮೆಗೆ ‘ರಕ್ತ!’ ಎಂದು ಸೀತಕ್ಕ ಹೇಳುವ ಮೊದಲೇನೆ ಜಾನಕಿ “ರಕ್ತ ಅಲ್ಲ. ರಕ್ತದ ಹಾಗೆ...... ಇದೆಯಷ್ಟೆ. ಹಣೆ ಬೆವರಿ ಕುಂಕುಮವನ್ನು ತೇಲಿಸಿತು ನೋಡು ನಾನು ಬೆವರು ಉಜ್ಜಿಕೊಂಡೆನಲ್ಲ, ಈಗ ಅದೇ ರಕ್ತದ ಹಾಗೆ ಬೆರಳಿಗೆ ಅಂಟಿತು. ಸೀತಕ್ಕ ಏನು ರಕ್ತ, ಏನು ಬೆವರು! ಏನು ಕುಂಕುಮ! ನೋಡೆ, ಈ ಮನೆಯಲ್ಲಿ ಇಷ್ಟು ವರ್ಷಗಳ್ ನಾನು ಕಳೆದದ್ದು ಅಂತೀಯಾ. ಅದು ಹೀಗೆ ರಕ್ತ ಸೇರಿಸಿದ್ದು ಅಂತಿಟ್ಟುಕೊ! ಐದು ಮಕ್ಕಳನ್ನು ಹಡೆದ ಹೊಟ್ಟೆ ಇದು. ವರ್ಷ ಮೂವ್ವತ್ತೈದು ಮೀರಿತು. ಈ ಕುಂಕುಮದ ಗತಿ, ಇದು ಇದ್ದರೂ ಅಷ್ಟೆ.. ಇಲ್ಲದಿದ್ದ್ರೂ ಅಷ್ಟೆ ಅಂಬ ಹಾಗೆ.” ಎಂದು ಮಾತುಗಳನ್ನು ನಿಲ್ಲಿಸಿ, ಮೋರೆ ತಗ್ಗಿಸಿ ಬೆಅಳಿಗೆ ಅಂಟಿದ ಕುಂಕುಮದ ನೀರನ್ನೇ ಕಾಣುತ್ತಿದ್ದಳು. ಇಷ್ಟರ ತನಲ ಹಣೆ ಬೆವತಿದ್ದರೆ, ಈಗ ಕಣ್ಣುಗಳು 
ನೀರನ್ನು ಹನಿಯುವ ಹಾಗಾಯಿತು.
Sarasammana Samadhi  by Dr. Shivarama Karantha - Cover Page


ಸೀತಕ್ಕನಿಗೆ ಇದೊಂದು ಹೊಸ ಚಿತ್ರವಲ್ಲ. ಸೀತಕ್ಕ ಸ್ವತಃ ಕಣ್ಣೀರು ಸಾವಿರ ಸಾರಿ ಕರೆದವಳು. “ಕಣ್ಣೀರೆಂಬುದು ಹೆಂಗಸರ ಹಣೆಬರಹ.” ಎಂದು ಅವಳಾ ಒಂದು ಕಾಲದಲ್ಲಿ ಬದುಕಿದ್ದ ಗಂಡ ಹೇಳುತ್ತಿದ್ದರೂ ಸೀತಕ್ಕನ ಕಣ್ಣೀರು ಬೇರೆ ಕಡಿಮೆಯಾಗಿರಲಿಲ್ಲ. ಈಗ ಅವಳು ಕುಂಕುಮದ ಋಣವಿಲ್ಲದವಳು. ಆದರೂ ನೆಂತರ ಕಾಟ, ಬಡತನದ ಹಿಂಸೆ ಎಂದು ಕಣ್ಣೀರಿನ ಸ್ನಾನ ತಪ್ಪುತ್ತಿರಲಿಲ್ಲ. ಹೀಗೆ ತನಗೆ ಗಂಗಾ ಭಾಗೀರತಿ ತಪ್ಪದಿದ್ದರೂ ಬೇರೆಯವರು ಗೋಳುಗೆರೆಯುವುದನ್ನು ಕಂದರೆ ಸೀತಕ್ಕನಿಗೆ ಆಗದು. ಅದರಲ್ಲೂ ಅವಳ ಜೀವದ ಜಾನಕಿ ಅಳುವುದೆಂದರೆ ಅವಳ ಅಕ್ಕನೋ, ತಂಗಿಯೋ ಅತ್ತಂತೆ.......
***
ಇವು ಶಿವರಾಮ ಕಾರಂತರ ‘ಸರಸಮ್ಮನ ಸಮಾಧಿ’ ಕಾದಂಬರಿಯ ಮೊದಲ ಪುಟದ ಸಾಲುಗಳು.
ಡಾ. ಕೆ. ಶಿವರಾಮ ಕಾರಂತರು ಕನ್ನಡದ ಮಹೋನ್ನತ ಸಾಹಿತಿಗಳು, ಕಾದಂಬರಿಕಾರರು. ಇವರ ‘ಮೂಕಜ್ಜಿಯ ಕನಸುಗಳು’, ‘ಮೈಮನಗಳ ಸುಳಿಯಲ್ಲಿ’, ‘ಮರಳಿ ಮಣ್ಣಿಗೆ’, ‘ಬೆಟ್ಟದ ಜೀವ’ ಇವೇ ಮೊದಲಾದ ಕಾದಂಬರಿಗಳು ಬಹು ಪ್ರಸಿದ್ದವೂ, ಕನ್ನಡದ ಮೇರು ಕೃತಿಗಳು ಎನಿಸಿವೆ. ಇದೇ ಕಾರಂತರು ತಾವು ನಲವತ್ತರ ದಶಕದಲ್ಲಿ ಬರೆದ ‘ಸರಸಮ್ಮನ ಸಮಾಧಿ’ ಸಹ ಉತ್ತಮವಾದ ಕಾದಂಬರಿಯಾಗಿದ್ದು (ಕಾದಂಬರಿಯು ದೂರದರ್ಶನದಲ್ಲಿ ಧಾರವಾಹಿಯಾಗಿಯೂ ಯಶಸ್ವಿ ಪ್ರದರ್ಶನ ಕಂಡಿದೆ. ಅಲ್ಲದೆ ಚಲನಚಿತ್ರವಾಗಿ ರಾಷ್ಟ್ರ ಪ್ರಶಸ್ತಿಯನ್ನು ಗಳಿಸಿಕೊಂಡಿದೆ.) ಜನರು ತಲೆಮಾರುಗಳಿಂದ ಪೋಷಿಸಿಕೊಂಡು ಬಂದ ಮೂಡನಂಬಿಕೆಗಳನ್ನು ಪ್ರಶ್ನಿಸುವುದಲ್ಲದೆ, ಅದರ ನಂಬಿಕೆಗಳ, ಆಚರಣೆಗಳ ಕುರಿತಂತೆ ಸತ್ಯಾಸತ್ಯತೆಗಳನ್ನು ಪರಿಶೋಧಿಸುವ ಕೆಲಸ ಮಾಡುತ್ತದೆ.  
Dr. K. Shivarama Karantha (October 10, 1902 – December 9, 1997)


ಅಂದು ಜಾರಿಯಲ್ಲಿದ್ದ ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀ ಗೆ ತನ್ನದಾದ ಸ್ವತಂತ್ರ ಅಸ್ತಿತ್ವವಿರಲಿಲ್ಲ. ಅವಳ ಭಾವನೆಗಳಿಗೆ ಬೆಲೆ ಇರಲಿಲ್ಲ. ಭಾರತೀಯ ಪರಂಪರೆ, ಸಂಸ್ಕೃತಿಗಳು ತಾವು ಹೆಣ್ಣಿನ ಮನಸ್ಸಿನ ಮೇಲೆ ಹೇರುತ್ತಾ ಬಂದ ಪಾಪ-ಪುಣ್ಯ, ನ್ಯಾಯ-ನೀತಿ, ಸ್ವರ್ಗ-ನರಕಗಳೆನ್ನುವ ನಂಬಿಕೆಗಳು ಅವರನ್ನು ಒಂದು ಬಗೆಯ ಮನೋದಾಸ್ಯದಿಂದ ಬಂಧಿತರನ್ನಾಗಿಸಿದ್ದವು. ಹೀಗಾಗಿ ಅವರಾರೂ ಸಹ ಅವುಗಳನ್ನು ಪ್ತಶ್ನಿಸುವ ಧೈರ್ಯವನ್ನು ಬೆಳೇಸಿಕೊಂಡಿರುವುದಿಲ್ಲ. ಮಾನವನು ಬದುಕುವ ರೀತಿಯೇ ತೀರಾ ವೈಚಿತ್ರ್ಯದಿಂದ ಕೂಡಿದೆ. ಪರರ ವಿಚಾರಗಳಲ್ಲಿ ತಾವು ತೋರಿಸುವ ಆಸಕ್ತಿಯನ್ನು ತಮ್ಮನ್ನು ತಾವು ತಿದ್ದಿಕೊಳ್ಳುವುದಕ್ಕೂ ಸರಿ ದಾರಿಯಲ್ಲಿ ನಡೆಯುವುದಕ್ಕೂ ಅವನು ತೋರಿಸಲಾರ. ಅಲ್ಲದೆ ಪರರ ವಿಷಯಗಳಲ್ಲಿ ಯಾವೆಲ್ಲಾ ದೋಷಾರೋಪಣೆ,ತರ್ಕಗಳನ್ನು ಮಾಡಲೂ ಹೇಸದ ಮಾನವನು ತನ್ನದೇ ವಿಚಾರ ಬಂದಾಗ-ಎಂದರೆ ಅದೇ ವಿಷಯಗಳನ್ನು ತನಗೇ ಅಳವಡಿಸಿಕೊಳ್ಳಬೇಕಾದಾಗ ಮಾತ್ರ ಹಿಂಜರಿಯುತ್ತಾನೆ, ಅಲ್ಲದೆ ತಾನದರಿಂದ ಪಾರಾಗುವ ಸಲುವಾಗಿ ಯಾವ ಕೆಲಸಗಳಾನ್ನು ಮಾಡಲೂ ತಯಾರಾಗುತ್ತಾನೆ. ಇಂತಹಾ ಮನಸ್ಥಿತಿಯ ಗಂಡು-ಹೆಣ್ಣುಗಳ ಜೀವನದಲ್ಲಿ ನಡೆಯಬಹುದಾದ ಘಟನೆಗಳು ಅವರುಗಳ ಬದುಕನ್ನು ಎಲ್ಲಿಗೆ ಹೋಗಿ ತಲುಪಿಸುತ್ತವೆ ಎನ್ನುವುಅನ್ನು ಕಾದಂಬರಿಯು ಬಹಳ ಚೆನ್ನಾಗಿ ಚಿತ್ರಿಸಿದೆ. .

ಒಟ್ಟಿನಲ್ಲಿ 1930-40 ರ ಸಮಾಜದಲ್ಲಿನ ಮಹಿಳೆಯರ ಬದುಕಿನ ಚಿತ್ರಣವನ್ನು ನಮ್ಮ ಕಣ್ಮುಂದೆ ತರುವ ಈ 120 ಪುಟಗಳ ಚಿಕ್ಕ ಕಾದಂಬರಿ ಗಾತ್ರದಲ್ಲಿ ಚಿಕ್ಕದಾದರೂ ಕನ್ನಡ ಸಾಹಿತ್ಯ ಲೋಕದಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿರುತ್ತದೆ. ಹೀಗಾಗಿ ಕನ್ನಡ ಅಭಿಮಾನಿಗಳದ ತಾವೆಲ್ಲರೂ ಡಾ. ಕಾರಂತರ ಈ ಕಾದಂಬರಿಯನ್ನು ತಪ್ಪದೆ ಓದುವಿರೆಂದು ಆಶಿಸುತ್ತಾ.....

ನಮಸ್ಕಾರ. 

No comments:

Post a Comment