Friday, August 22, 2014

ಆರಿತು ಅನಂತ ಬೆಳಕು - ಡಾ. ಯು.ಆರ್. ಅನಂತಮೂರ್ತಿ ಇನ್ನಿಲ್ಲ

ಕನ್ನಡದ ಹೆಮ್ಮೆಯ ಸಾಹಿತಿ ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಯು.ಆರ್. ಅನಂತಮೂರ್ತಿಯವರು ಇಂದು ನಮ್ಮನ್ನೆಲ್ಲಾ ಅಗಲಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅನಂತಮೂರ್ತಿ ಅವರನ್ನು ಇಂದು ಬೆಳಗ್ಗೆ ಬೆಂಗಳೂರು ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸಂಜೆ 6 ಗಂಟೆ ವೇಳೆಗೆ ಲಘು ಹೃದಯಾಘಾತವಾಗಿ, ನಂತರ ಚೇತರಿಕೆ ಕಾಣದೆ ಕೊನೆಯುಸಿರೆಳೆದರು ಎಂದು ಮಣಿಪಾಲ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಸುದರ್ಶನ್ ಬಲ್ಲಾಳ್ ತಿಳಿಸಿದರು.

ಈ ಹಿನ್ನೆಲೆಯಲ್ಲಿ ಭಗವಂತನು ಮೂರ್ತಿಗಳ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಎಂದು ಆಶಿಸುತ್ತಾ “ಕನ್ನಡ ಕರ್ನಾಟಕ” ಎನ್ನುವ ಕೃತಿಯೊಂದರಿಂದ ಆಯ್ದ ವರ ಲೇಖನ “ಅಕ್ಷರ ಜ್ಞಾನ ಮತ್ತು ಪ್ರಜ್ಞೆ” ಯನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ.

Dr. U.R. Ananthamurti (21 December 1932 - 23 August 2014)

***
ಬುಟ್ಟಿಯಲ್ಲಿ ಮಲವನ್ನು ತಲೆಯ ಮೇಲೆ ಹೊತ್ತಿರುವ ಹೊಲೆಯನ ಕೈಯಲ್ಲಿ ಪುಸ್ತಕವೋ ಅಥವಾ ದಿನಪತ್ರಿಕೆಯೊ ಇರಬಹುದಾದ ಸಾಧ್ಯತೆಯನ್ನು ಕಲ್ಪಿಸಿಕೊಳ್ಳೋಣ: ಆಗ ಮಲವನ್ನು ತಲೆಯ ಮೇಲೆ ಹೊರಬೇಕಾದದ್ದರ ಬಗ್ಗೆ ಅವನಿಗೇನು ಅನ್ನಿಸೀತು? ಹೊರಿಸುವುದರ ಬಗ್ಗೆ ನಮಗೇನು ಅನ್ನಿಸೀತು?
ಇಂತಹ ಸಾಧ್ಯತೆಯನ್ನು ಕಲ್ಪಿಸಿಕೊಳ್ಳುವುದು ಕೂಡ ಅಸಾಧ್ಯವೆಂದು ನಮಗೆ ಎನ್ನಿಸುವುದೇ ನಮ್ಮ ಸಾಮಾಜಿಕ ಜೀವನದ ದುರಂತ. ಇರುವ ವಾಸ್ತವಕ್ಕೆ ಒಗ್ಗಿಬಿಟ್ಟ ಜನ ನಾವು. ನಿತ್ಯ ನಾವು ನೋಡುವ ಹೇಸಿಗೆಯಿಂದ, ಹಿಂಸೆಯಿಂದ, ಅಸಮಾನತೆಯಿಂದ ನಮಗೆ ನಾಚಿಕೆಯಾಗುತ್ತಿಲ್ಲ.
ರಷ್ಯಾ ಚೀನಾ ದೇಶಗಳಲ್ಲಿ ರಾಜಕೀಯ ಸ್ವಾತಂತ್ರ್ಯವಿಲ್ಲೆಂದು ನಾವು ರೇಗಾಡುತ್ತೇವೆ; ‘ವಾಕ್ ಸ್ವಾತಂತ್ರ್ಯವಿಲ್ಲದ ಆ ದೇಶಗಳಲ್ಲಿ ಹೇಗೆ ಜನ ಬದುಕುತ್ತಾರೋ’ ಎಂದು ಆಶ್ಚರ್ಯಪಡುತ್ತೇವೆ. ಆದರೆ ಯಾಕೆ ಪ್ರತಿನಿತ್ಯ ಚೂರು ಚೂರೇ ಸಾಯಿಸುತ್ತ, ಕುಷ್ಠರೋಗದಂತೆ ನಮ್ಮ ನೈತಿಕ ಭಾವನೆಗಳನ್ನು ಕರಗಿಸುತ್ತ ಬದುಕನ್ನು ಕಸಕ್ಕೆ ಸಮಾನ ಮಾಡುವ ನಮ್ಮ ದೇಶದಲ್ಲಿರುವ ಹಿಂಸೆಯನ್ನು ನಾವು ಕಾಣುವುದಿಲ್ಲ? ನಮ್ಮ ವರ್ಗದ ಸುಖದುಃಖಗಳಿಗಷ್ಟೇ ನಮ್ಮ ಸಂವೇದನೆ ಪರಿಮಿತವಾದ ದುರಂತ ನಮ್ಮ ಸಮಾಜಕ್ಕೆ ವಿಶಿಷ್ಟವಾದ ಗುನವೆನ್ನಬಹುದು.
ಮಲ ಹೊತ್ತ ಹೊಲೆಯ ಪತ್ರಿಕೆಯೋದಬಲ್ಲವನಾಗಿದ್ದಲ್ಲಿ ನಮಗೂ ಅವನಿಗೂ ನಡುವಿರುವ ಮಾನವ ಸಂಬಂಧದಲ್ಲಿ ಒಂದು ಆಸ್ಫೋಟ ಉಂಟಾದೀತೇ ಎಂಬ ಕುತೂಹಲ ನನ್ನದು. ಯಾಖೆ ಈ ಕುತೂಹಲವೆಂದರೆ: ಈಗ ನನ್ನಂತೆಯೇ ಅವನು ಮನುಷ್ಯನಾಗಿದ್ದರೂ, ನನ್ನ ಹಾಗೇ ಕೋಪ ತಾಪಗಳು, ಓದಿ ಸಂತೋಷಪಡಬಲ್ಲ ಸಾಮರ್ಥ್ಯ, ನನ್ನ ಹಾಗೇ ಸಂಬಳ ಪಡೆಯುವ ನೌಕರನಾಗುವ ಶಕ್ತಿ ಇತ್ಯಾದಿಗಳು ಅವನಲ್ಲಿ ಸುಪ್ತವಾಗಿದ್ದರೂ, ಹೀಗೆ ಸುಪ್ತವಾಗಿರುವ ಸಾಧ್ಯತೆಗಳನ್ನು ನಾನಾಗಲೀ ಅವನಾಗಲೀ ಕಲ್ಪಿಸಿಕೊಳ್ಳಲೂ ಕೂಡ ಸಾಧ್ಯವಾಗದಂತಹ ಅಂತರ ನಮ್ಮಿಬ್ಬರ ನಡುವೆ ಇರುವುದರಿಂದಾಗಿ, ಈ ಅಸಹಜ ಅಂತರವನ್ನು ಅಕ್ಷರ ಜ್ಞಾನ ಹರಿದೀತೆ ಎಂಬುದು. ಅಕ್ಷರ ಬಾರದವನಿಗಿಂತ ಬಲ್ಲವನು ಹೆಚ್ಚು ಪಾಲು ನಮ್ಮ ರೀತಿಯ ಮನುಷ್ಯನಾಗಿ ನಮಗೆ ಕಾಣುತ್ತಾನೆ ಅಲ್ಲವೆ? ಆದ್ದರಿಂದ ಮಾನವ ಸಂಬಂಧಗಳಲ್ಲಿ ಆಸ್ಫೋಟ ಉಂಟಾಗಲು ಎಲ್ಲರೂ ಅಕ್ಷರಸ್ಥರಾಗುವುದು ಮೊದಲಿನ ಅಗತ್ಯವಲ್ಲವೆ ಎಂಬ ಪ್ರಶ್ನೆಯನ್ನು ನಾವು ತೀವ್ರವಾಗಿ ಪರಿಶೀಲಿಸಬೇಕು. ಆದರೆ ಅನ್ನ ಬಟ್ಟೆಗಳ ಅಗತ್ಯಗಳ ಪೂರೈಕೆಗೂ ಮೊದಲು ಅಕ್ಷರ ಜ್ಞಾನ ಎಲ್ಲರಿಗೂ ದೊರೆಯತಕ್ಕದ್ದು ಎಂಬ ನಿಶ್ಚಯ ನಾವು ಮಾಡಬಲ್ಲೆವೆ? ಸಾಮಾಜಿಕ ಪರಿವರ್ತನೆಯ ಅವಸರ ನಮಗೆ ನಿಜವಾಗಿ ಇದ್ದಲ್ಲಿ ಸಾರ್ವತ್ರಿಕ ಅಕ್ಷರತೆಯ ನಿಶ್ಚಯವನ್ನು ನಾವು ಮಾಡಿಯೇ – ತೀರುತ್ತೇವೆಂದು ನನಗೆ ಅನ್ನಿಸುತ್ತದೆ. ಆದರೆ ಅಂಥ ಅವಸರ ಈ ದೇಶದಲ್ಲಿ ಕಾಣುತ್ತಿಲ್ಲವೆಂದೂ ಬಾಯಿಬಿಟ್ಟು ಹೇಳಬೇಕಾಗಿಲ್ಲ.
ಉಗ್ರ ಸಮಾಜವಾದಿಗಳು ಸಹ ನನ್ನ ಉದಾಹರಣೆ ಕೇಳಿ ನಕ್ಕಾರು. ಅವರ ವಾದ ನಮಗೆ ಗೊತ್ತು. ಆರ್ಥಿಕ ಸಂಬಂಧಗಳಲ್ಲಿ ಮೊದಲು ಬದಲಾವಣೆಗಳಾಗಬೇಕು. ಬಸವ ಪ್ಲಸ್ ಗಾಂಧಿ ಮೈನಸ್ ಫ್ಲಶ್ ಕಕ್ಕಸಿನ ಸ್ಥಿತಿಯಲ್ಲಿ ಹರಿಜನೋದ್ಧಾರವಾಗಲಾರದು. ಗಾಂಧಿಯ ಜೊತೆ ಉಕ್ಕಿನ ಕೊಳಾಯಿಯೂ ಬೇಕು. ಆಗ ಮಾತ್ರ ಮಲ ಹೊರುವ ಅಗತ್ಯ ಮಾಯವಾಗುತ್ತೆ. ಸುಧಾರಕ ಸಮಾಜವಾದಿ ಕಳಕಳಿಯಿಂದ ಹೇಳುತ್ತಾನೆ: ಈಗಿಂದೀಗಲೇ ಕೈಗಾಡಿಯಲ್ಲಿ ಮಲವನ್ನು ತಳ್ಳಬಹುದಲ್ಲ; ಅಗತ್ಯವಾದ ಕಾನೂನು ಮಾಡೋಣ.
ಆದರೆ ನನಗೆ ಹೀಗೆ ಪ್ರಶ್ನೆ ಕೇಳುವ ಆಸೆ: ಸರ್ವರೂ ಈಗಿಂದೀಗಲೇ ಅಕ್ಷರಸ್ಥರಾಗಬೇಕೆಂಬ ಪ್ರಯತ್ನ ನಾವು ಮಾಡಿದಲ್ಲಿ ಮಲವನ್ನು ಕೈಗಾಡಿಯಲ್ಲಿ ತಳ್ಳುವುದರಲ್ಲಾಗಲೀ, ತಲೆಯ ಮೇಲೆ ಹೊರುವುದರಲ್ಲಾಗಲೀ ತನ್ನ ಜೀವನದ ಇತಿ ಮಿತಿಗಳನ್ನು ಕಂಡುಕೊಳ್ಳಲು ಯಾವನಾದರೂ ಮನುಷ್ಯನಾದವನು ಒಪ್ಪಿಕೊಳ್ಳುವುದು ಸಾಧ್ಯವೆ? ಸಾರ್ವತ್ರಿಕ ಅಕ್ಷರಜ್ಞಾನದಿಂದಾಗಿ ನಮ್ಮಲ್ಲಿ ಅವನಲ್ಲಿ ಒಂದು ಹೊಸ ಪ್ರಜ್ಞೆ ಮೂಡಬಹುದಲ್ಲವೆ? ಈಗಿಂದೀಗಲೇ ಹೊಲೆಯನೊಬ್ಬ ಅಕ್ಷರಸ್ಥನಾದಲ್ಲಿ ಉಂಟಾಗುವ ಆಸ್ಫೋಟ – ಅವನ ಪ್ರಜ್ಞೆಯಲ್ಲಿ, ನಮ್ಮ ಪ್ರಜ್ಞೆಯಲ್ಲಿ ನಮ್ಮಿಬ್ಬರ ಮೂಲತಃ ಮಾನವೀಯವಾದ ಸಂಬಂಧದ ಪ್ರಜ್ಞೆಯಲ್ಲಿ – ಎಷ್ಟೊಂದು ವ್ಯಾಪಕ ಬದಲಾವಣೆಗೆ ಪ್ರೇರಕವಾಗಲಿಕ್ಕಿಲ್ಲ? ಹಾಗಾದರೆ ಸಾಮಾಜಿಕ ಕ್ರಾಂತಿಗೆ ತಾವು ಬದ್ಧರೆಂದು ಸಾರುವ ಆಳುವ ವರ್ಗದ ಜನ ಈ ಅಸ್ಫೋಟನೆಗೆ ಬೇಕಾದ ಆತುರವನ್ನು ಯಾಕೆ ತೋರಿಸುತ್ತಿಲ್ಲ?
ಈಗಿರುವ ಪರಿಸ್ಥಿತಿಯಲ್ಲಿ ಹೊಲೆಯನೊಬ್ಬ ಅಕ್ಷರಸ್ಥನಾಗುವುದು ಯಾವಾಗ ಸಾಧ್ಯವೆಂದರೆ – ಅವನು ಮಧ್ಯಮ ವರ್ಗಕ್ಕೆ ಏರಬಲ್ಲ ಸ್ಥಿತಿಯನ್ನು ಮುಟ್ಟಿದ್ದಾನೆ ಎನ್ನುವಾಗ, ಆದರೆ ಈ ಬಗೆಯಲ್ಲಿ ಕ್ರಮೇಣ ನಡೆಯುವ ಬದಲಾವಣೆಯಿಂದ ನಾವು ಬಯಸುವ ಆಸ್ಫೋಟ ಆಗಬಾರದು. ಯಾಕೆಂದರೆ ಅಂಥ ಹೊಲೆಯ ನವಬ್ರಾಹ್ಮಣಿಕೆಯ ಅಂತಸ್ತನ್ನು ಮುಟ್ಟಿ ತನ್ನ ವರ್ಗದವರ ಶೋಷಣೆಗೆ ಆಗಲೇ ತಯಾರಾಗಿರುತ್ತಾನೆ. ಅವನ ಈಗಿರುವ ದೀನದಲಿತ ಸ್ಥಿತಿಯಲ್ಲೆ ಅಕ್ಷರಸ್ಥನಾಗತಕ್ಕದ್ದೆಂಬ ನಿಶ್ಚಯವನ್ನು ನಾವು ಮಾಡಬಲ್ಲವೆ ಎಂದು ಕೇಳುವುದೇ ನನ್ನ ಈ ಲೇಖನ ಉದ್ದೇಶ. ಬಹುಸಂಖ್ಯಾತ ಭಾರತೀಯರು ಇನ್ನೂ ಅಕ್ಷರಸ್ಥರು ಸಹ ಅಲ್ಲದ್ದರಿಂದ ನಮ್ಮ ನಡುವಿನ ಮಾನವೀಯ ಸಂಬಂಧ ಪ್ರಜ್ಞೆ ಸಹ ನಮಗಿಲ್ಲವೆಂಬ ಸಂಕಟದಿಂದ ನಮ್ಮಲ್ಲಿ ಸೂಕ್ಷ್ಮ ಮನಸ್ಸಿನವರಾದ ಕೆಲವರಾದರೂ ಸಹ ಈ ಬಗ್ಗೆ ಯೋಚಿಸಬಲ್ಲರೆ?
ಅಂದರೆ ಯುದ್ಧ ಪರಿಸ್ಥಿತಿಯ ತುರ್ತಿನಿಂದ ಅನಕ್ಷರತೆಯ ನಿರ್ಮೂಲನಕ್ಕೆ ನಾವು ಸಿದ್ಧರಾಗಬೇಕು. ದೈಹಿಕವಾಗಿ ಮಾನಸಿಕವಾಗಿ ಅಕ್ಷರ ಕಲಿಯುವುದು ಅಸಾಧ್ಯವಾದ ಮನುಷ್ಯನನ್ನು ಬಿಟ್ಟು ಉಳಿದವರು ಅಕ್ಷರಸ್ಥರಾಗದಿರುವುದು ಅಪರಾಧವಾಗಿ ಪರಿಗಣಿಸಬೇಕು. ಈಗ ಸಂತಾನ ನಿಯಂತ್ರಣದ ಪ್ರಚಾರ, ವಿಶ್ವವಿದ್ಯಾಲಯಗಳಲ್ಲಿ ನಡೆಯುವ ರಿಸರ್ಚ್ – ಇತ್ಯಾದಿ ಎಲ್ಲ ಬಗೆಯ ಖರ್ಚು ವೆಚ್ಚಗಳನ್ನು ಅವಶ್ಯವೆನಿಸಿದರೆ ನಿಲ್ಲಿಸಿ ಈ ಅಕ್ಷರ ಪ್ರಚಾರಕ್ಕಾಗಿ ವಿನಿಯೋಗಿಸಬೇಕು. ನಾವು ಆರ್ಥಿಕವಾಗಿ ಸ್ವಸಂಪೂರ್ಣರಾಗಲು ಎಷ್ಟು ಕಾಲ ಬೇಕೊ ಹೇಳುವುದು ಕಷ್ಟ; ಆದರೆ ಇಡೀ ದೇಶದ ಜನ ಅಕ್ಷರಸ್ಥರಾಗಲು ಹೀಗೆ ನಾವು ಮಾಡಿದ್ದಲ್ಲಿ ಎರಡು ಮೂರು ವರ್ಷಗಳು ಸಾಕಾದೀತು. ಅಂದರೆ, ನಮ್ಮ ಜನರ ಆರ್ಥಿಕ ವರ್ಗಗಳಲ್ಲಿ ಬದಲಾವಣೆಗಳಾಗುವುದಕ್ಕೆ ಮುಂಚೆಯೇ ಜನರು ಅಕ್ಷರಸ್ಥರಾಗಬೇಕು. ಈಗಿಂದೀಗಲೇ ಜನರು ಅಕ್ಷರಸ್ಥರಾದಲ್ಲಿ ನಮ್ಮ ಜನರ ನಡುವಿನ ವರ್ಗದ ಅಂತರ, ಬದುಕಿನ ಹೀನತೆ, ಸಾಕಲಾರದ ಮಕ್ಕಳನ್ನು ಹುಟ್ಟಿಸುವ ನಮ್ಮಮೂರ್ಖತನ, ಯಾವುದು ಈ ಕೂಡಲೇ ಆಡಳಿತದ ಭಾಷೆಯಾಗಬೇಕೆಂಬ ಪ್ರಶ್ನೆ – ಈ ಎಲ್ಲದರ ಬಗ್ಗೆಯೂ ಇಡೀ ದೇಶದಲ್ಲಿ ಒಂದು ವಿಚಾರ ಕ್ರಾಂತಿ ಸಾಧ್ಯವಾದೀತೆಂಬ ನಂಬಿಕೆ ನಮ್ಮಲ್ಲಿರಬೇಕು. ಆರ್ಥಿಕ ಕ್ರಾಂತಿಯ ಮುಖಾಂತರ ಇವೆಲ್ಲ ಆಗುತ್ತದೆಂಬ ಸಮಾಜವಾದಿ, ಜನರಿಗೆ ಹೊಟ್ಟೆ ಬಟ್ಟೆಗೆ ಸಿಕ್ಕಾಗ ಅವನು ಹೇಗೂ ವಿದ್ಯಾವಂತನಾಗುತ್ತಾನೆಂಬ ಬಂಡವಾಳಶಾಹಿವಾದಿಗಿಂತೇನೂ ಬೇರೆಯಲ್ಲ.
ಬ್ರಾಹ್ಮಣ ಜನಾಂಗವನ್ನು ನೋಡೋಣ. ಸಾಮಾನ್ಯವಾಗಿ ಪ್ರತಿಯೊಬ್ಬ ಬ್ರಾಹ್ಮಣನೂ. ಆತ ಅಡಿಗೆ ಭಟ್ಟಿನಿರಲಿ, ಪೂಜಾರಿಯಿರಲಿ, ಸೇವಕನಿರಲಿ – ಅಕ್ಷರಸ್ಥನಾಗಿರುತ್ತಾನೆ. ಆದ್ದರಿಂದ ಅವನ ಬಗ್ಗೆ ನಾವು ಯೋಚಿಸುವ ಕ್ರಮದಲ್ಲೆ ಬದಲಾವಣೆಯಾಗುತ್ತದೆ. ಬ್ರಾಹ್ಮಣ ಸೇವಕನಾಗಿದ್ದರೂ ಸಹ ಅವನನ್ನು ಬಹುವಚನದಲ್ಲಿ ಕರೆಯಬೇಕು ಎಂದು ಅವನ ಆಫೀಸರನಿಗೆ ಅನ್ನಿಸುವುದುಂಟು – ಅಲ್ಲವೆ? ಅಷ್ಟೇ ಅಲ್ಲ; ಯಾವ ಪರಿಸ್ಥಿತಿಯಲ್ಲೇ ಇರಲಿ ಬ್ರಾಹ್ಮಣ ಉದ್ಧಾರಕ್ಕಾಗಿ ಹಾತೊರೆಯುತ್ತಾನೆ; ತಾನಲ್ಲದಿದ್ದರೂ ತನ್ನ ಮಕ್ಕಳನ್ನಾದರೂ ಓದಿಸುತ್ತಾನೆ. ಏನೇನೋ ಕನಸು ಕಾಣುತ್ತಾನೆ. ಆದರೆ ಮಲವನ್ನು ಹೊತ್ತ ತಲೆಯಲ್ಲಿ ಏನು ಕನಸು ಸುಳಿದೀತು?
ಈತ ಮಧ್ಯಮ ವರ್ಗಕ್ಕೇರುವ ಅಪಾರ ಕಾಲಾವಧಿಯ ಬದಲಾವಣೆಗಳ ಮೂಲಕವೋ, ಅಥವಾ ಉಕ್ಕಿನ ಕೊಳಾಯಿ ಆರ್ಥಿಕ ಕ್ರಾಂತಿಗಳ ಮೂಲಕವೊ ಪರಿಹಾರ ಹುಡುಕುವ ನಮ್ಮ ಆಲೋಚನಾಕ್ರಮ ನಮ್ಮ ಸಾಮಾಜಿಕ ಪ್ರಜ್ಞೆಯನ್ನು ಸೃಷ್ಟ್ಯಾತ್ಮಕವಾಗಿ ಮಾಡಲಾರೆಂಬುದೇ ನನ್ನ ವಾದದ ತಿರುಳು. ಹೊಸ ವಾಸ್ತವದ ಹಂಬಲ, ಆತುರಗಳನ್ನು ಈಗಿಂದೀಗಲೇ ಚಿಗುರಿಸುವಂತಹ ಕಾರ್ಯವಿಧಾನಗಳನ್ನು ನಾವು ಹುಡುಕಬೇಕಾಗಿದೆ. ಕೂಡಲೇ ಸಾರ್ವತ್ರಿಕ ಅಕ್ಷರತೆಯನ್ನು ಸಾಧಿಸುವ ಆತುರ ನಮ್ಮಲ್ಲಿ ಹುಟ್ಟುವುದು ಸಾಧ್ಯವಾದಲ್ಲಿ ಹೀಗೆ ಭಾರತೀಯ ಮನಸ್ಸು ಮೂಲಭೂತವಾಗಿ ಬದಲಾಗಬಲ್ಲದೆಂಬ ಭರವಸೆ ಹುಟ್ಟಬಹುದೆಂದು ನನ್ನ ಎಣಿಕೆ.
ಈಗ ಕಾಂಗ್ರೆಸ್ ಸಮಾಜವಾದಿಗಳ ಮಾತಿನ ಕ್ರಮ, ಕಮ್ಯೂನಿಸ್ಟರ ವಿಚಾರ ಎಲ್ಲವೂ ಹಳಸಲು ಪ್ರಾರಂಭಿಸಿವೆ. ಕ್ರಾಂತಿಕಾರಕ ಬದಲಾವಣೆಗೆ ಅವಶ್ಯವಾದ ಸಂದರ್ಭವನ್ನು ಈಗಿಂದೀಗಲೇ ಸೃಷ್ಟಿಸುವ ಕೆಲಸಗಳಲ್ಲಿ ಎಲ್ಲರೂ ಸೋತಿದ್ದಾರೆ ಎನ್ನಿಸುತ್ತದೆ. ನಮ್ಮ ದೇಶದ ಎಲ್ಲ ಮುಖ್ಯ ರಾಜಕೀಯ ಪಕ್ಷಗಳೂ ಒಂದಲ್ಲ ಒಂದು ಪ್ರಾಂತ್ಯದಲ್ಲಿ ಅಧಿಕಾರದಲ್ಲಿದ್ದರೂ ಸಹ ಜನರಿಗೆ ಈಗಿರುವ ವಾಸ್ತವದ ಬಗ್ಗೆ ತೀವ್ರವಾದ ಜುಗುಪ್ಸೆ ಹುಟ್ಟಿಸುವಂತಹ ವಾತಾವರಣವನ್ನು ಯಾಕೆ ಸೃಷ್ಟಿಸಲಿಲ್ಲವೆಂಬುದನ್ನು ನಾವು ನಿಷ್ಠುರವಾಗಿ ಯೋಚಿಸಬೇಕು.
ಪ್ರಾಯಶಃ ಇದು ಕಾರಣವಿರಬಹುದು: ಈಗ ಬಾಯಿಯಿರುವ ಜನರೆಲ್ಲರೂ ಒಂದೋ ಮಧ್ಯಮವರ್ಗದವರು, ಅಥವಾ ಕಾರ್ಖಾನೆಗಳಲ್ಲಿ ವ್ಯವಸ್ಥಿತವಾಗಿ ಸಂಬಳ ಪಡೆಯುವ ಕೂಲಿ ವರ್ಗದವರು. ಮೂಲಭೂತವಾದ ಸಾಮಾಜಿಕ ಬದಲಾವಣೆಗಾಗಿ ನಿಶ್ಚಯ ಮಾಡಬಲ್ಲವರು ಪ್ರಾಯಶಃ ಇವರಲ್ಲವೇ ಅಲ್ಲವೇನೋ? ಆದರೆ ಪಾರ್ಲಿಮೆಂಟರಿ ರಾಜಕಾರಣದಲ್ಲಿ ಮತ ಚಲಾಯಿಸುತ್ತಿರುವ ಜನ ಇವರು. ಅಭಿಪ್ರಾಯ ರೂಪಿಸುವ ಶಕ್ತಿ ಇವರ ಕೈಯಲ್ಲಿದೆ. ಎಲ್ಲ ರಾಜಕೀಯ ಪಕ್ಷಗಳೂ ಇವರ ಬೆನ್ನು ಬಿದ್ದಿದ್ದಾರೆ. ಆದರೆ ಈ ಲೇಖನ ಬರೆಯುವಾಗ ನಾನು ಕೂಡ ಈ ವರ್ಗದ ಜನರೇ ಸಾರ್ವತ್ರಿಕ ಅಕ್ಷರತೆಯ ನಿಶ್ಚಯವನ್ನು ಕೈಗೊಳ್ಳುವರೆಂಬ ಭ್ರಮೆಯನ್ನು ಯಾಖೆ ಇಟ್ಟುಕೊಂಡಿದ್ದೇನೆ?
ಈಗ ಹೈಸ್ಕೂಲು ಮುಗಿಸಿದ ಅಷ್ಟು ಬುದ್ಧಿವಂತನಲ್ಲದ ಹುಡುಗ ಹೇಗೋ ಪ್ರಯತ್ನಿಸಿ ಮಾಸ್ಟರ್ ಡಿಗ್ರಿ ತನಕವೂ ಓದುವುದು ಸಾಧ್ಯವಾಗಿದೆ. ಈತ ಎಂ.ಎ. ಮಾಡಿದಾಗ ತಾನು ಎಸ್.ಎಸ್.ಎಲ್.ಸಿ.ಯಲ್ಲಿ ಮುಟ್ಟಿದ ಮಟ್ಟಕ್ಕಿಂತ ಸ್ವಲ್ಪ ಹೆಚ್ಚು ಮಟ್ಟವನ್ನು ಹಾಗೂ ಹೀಗೂ ಮುಟ್ಟಿರುತ್ತಾನೆ. ಆದರೆ ಈತ ಹೋಗುವ  ದೂರಕ್ಕಿಂತ ಇದೇ ಮಟ್ಟದ ಅಷ್ಟು ಜಾಣನಲ್ಲದ ಅಕ್ಷರಸ್ಥನೊಬ್ಬ ಅಕ್ಷರಸ್ಥನಾದಾಗ ಹೆಚ್ಚು ದೂರ ಹೋಗಿರುತ್ತಾನೆ. ಈಗ ಎಲ್ಲ ಜಾತಿಗಳಿಂದಲೂ ಮುಂದೆ ಬಂದ ಶೋಷಕವರ್ಗ ಪ್ರತಿ ತಾಲೂಕಿನಲ್ಲೂ ಡಿಗ್ರಿ ಕಾಲೇಜುಗಳನ್ನು ಸ್ಥಾಪಿಸಿಕೊಳ್ಳುತ್ತಿದ್ದಾರೆ. ಇದರಿಂದಾಗುವ ಪ್ರಯೋಜನ ಅಷ್ಟರಲ್ಲೆ ಇದೆ. ಆದರೆ ಈ ವರ್ಗದ ಕೈಯಲ್ಲಿ ಅಧಿಕಾರವಿರುವುದರಿಂದ ಎಲ್ಲ ಲಾಭಗಳನ್ನೂ ತನ್ನ ಹಿತಕ್ಕಾಗಿ ಮಾಡಿಕೊಳ್ಳುತ್ತಿದೆ.
ಆದರೆ ಒಬ್ಬ ಅನಕ್ಷರಸ್ಥ ಅಕ್ಷರಸ್ಥನಾದಾಗ ಅವನ ಕೈಯಲ್ಲಿ ಒಂದು ಬಂದೂಕನ್ನು ಕೊಟ್ಟಂತೆ.
ಆದರೆ ಅದಕ್ಕೆ ನಾವು ತಯಾರಾಗಿದ್ದೇವೆಯೇ? ಎಂಬುದೇ ಪ್ರಶ್ನೆ.

(ಆಧಾರ: ಕಣಜ - ಕನ್ನಡ ಜಾಲತಾಣ http://kanaja.in/archives/95559)


No comments:

Post a Comment