ಹಿಟ್ ಅಂಡ್ ರನ್ ಪ್ರಕರಣದಲ್ಲಿ ನಟ ಸಲ್ಮಾನ್ ಖಾನ್ ಅಪರಾಧಿ ಎಂದು ಮುಂಬೈ ಸೆಷನ್ಸ್ ಕೋರ್ಟ್ ಇಂದು (ಮೇ 6 ) ತೀರ್ಪು ನೀಡಿದೆ. 2002ರಲ್ಲಿ ನಡೆದ ಪ್ರಕರಣದ ತೀರ್ಪು ಇದಾಗಿದ್ದು ಸಲ್ಮಾನ್ ಖಾನ್ ಅಪರಾಧಿ ಎಂದು ತೀರ್ಪು ನೀಡಿರುವ ಕೋರ್ಟ್, 5 ವರ್ಷಗಳ ಜೈಲು ಶಿಕ್ಷೆ ಮತ್ತು 25 ಸಾವಿರ ರೂ. ದಂಡವನ್ನು ವಿಧಿಸಿದೆ. ಸಲ್ಮಾನ್ ಖಾನ್ ಪರ ವಕೀಲರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ
ಈ ಮಧ್ಯೆ ನಟ ಸಲ್ಮಾನ್ ಖಾನ್ ಅವರಿಗೆ ಬಾಂಬೆ ಹೈಕೋರ್ಟ್ ಎರಡು ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.ಅನಾರೋಗ್ಯ ಕಾರಣದಿಂದ ಸಲ್ಮಾನ್ ಖಾನ್ ಅವರಿಗೆ ಜಾಮೀನು ನೀಡುವಂತೆ ಅವರ ಪರ ವಕೀಲರು ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿದ ಬಾಂಬೆ ಹೈಕೋರ್ಟ್ ಎರಡು ದಿನಗಳ ಮಧ್ಯಂತರ ಜಾಮೀನು ನೀಡಿದೆ.
ಸೆಪ್ಟೆಂಬರ್ 28,2002ರ ಮಧ್ಯರಾತ್ರಿ 2 ಗಂಟೆಯ ವೇಳೆ ಮುಂಬೈನ ಬಾಂದ್ರಾ ರಸ್ತೆಯಲ್ಲಿ ಮಲಗಿದ್ದವರ ಮೇಲೆ ಲ್ಯಾಂಡ್ ರೋವರ್ ಕಾರು ಹರಿದು ಒಬ್ಬರು ಮೃತಪಟ್ಟರೆ, ನಾಲ್ವರಿಗೆ ಗಂಭೀರ ಗಾಯಗಳಾಗುತ್ತದೆ. ಸಲ್ಮಾನ್ ಖಾನ್ ಕಂಠಪೂರ್ತಿ ಕುಡಿದು ಚಲಾಯಿಸಿದ ಪರಿಣಾಮದಿಂದಲೇ ಈ ಅವಘಡ ಸಂಭವಿಸಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ 2002ರ ಅಕ್ಟೋಬರ್ 21ರಂದು ಐಪಿಸಿ ಸೆ. 304/2ರ ಅಡಿ ಖಂಡನೀಯ ನರಹತ್ಯೆ ಪ್ರಕರಣ ದಾಖಲಾಗುತ್ತದೆ. ಅಕ್ಟೋಬರ್ 24ರಂದು ಸಲ್ಮಾನ್ ಖಾನ್‍ರನ್ನು ಪೊಲೀಸರು ಬಂಧಿಸಿಸುತ್ತಾರೆ. ಬಳಿಕ ಜಾಮೀನಿನ ಮೇಲೆ ಸಲ್ಮಾನ್ ಬಿಡುಗಡೆಯಾಗುತ್ತಾರೆ. ಮಾರ್ಚ್ 2003 ರಿಂದ ಮಾರ್ಚ್ 2015ರವರೆಗೂ ವಾದ-ಪ್ರತಿವಾದ ನಡೆಯುತ್ತದೆ.
ಪ್ರಕರಣದ ಹಿನ್ನೋಟ
2002, ಸೆ. 28: ನಟ ಸಲ್ಮಾನ್ ಖಾನ್ ಮುಂಬೈನ ಬಾಂಧ್ರಾ ಪ್ರದೇಶದ ಹಿಲ್ ರಸ್ತೆಯ ಅಮೆರಿಕನ್ ಎಕ್ಸ್‌ಪ್ರೆಸ್ ಬೇಕರಿ ಸಮೀಪ ಅಡ್ಡಾ ದಿಡ್ಡಿ ಕಾರು ಚಲಾಯಿಸಿದ ಪರಿಣಾಮ ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟು ನಾಲ್ವರಿಗೆ ಗಂಭೀರ ಗಾಯ.
2002, ಸೆ. 28: ಬಾಂಧ್ರಾ ಪೊಲೀಸರಿಂದ ಸಲ್ಮಾನ್ ಖಾನ್ ಬಂಧನ ಮತ್ತು ಜಾಮೀನಿನ ಮೇಲೆ ಬಿಡುಗಡೆ.
2002, ಆ. 01: ಸಲ್ಮಾನ್ ಖಾನ್ ವಿರುದ್ಧ ಪೊಲೀಸರಿಂದ ಅಪಘಾತ, ಅತಿ ವೇಗ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ ಆರೋಪದ ಪ್ರಕರಣ ದಾಖಲು.
2002, ಆ. 07: ಸಲ್ಮಾನ್ ಖಾನ್ ಬಂಧನ
2002, ಆ. 21: ಪೊಲೀಸರಿಂದ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ.
2002, ಆ. 24: ಸಲ್ಮಾನ್ ಖಾನ್‌ಗೆ ನ್ಯಾಯಾಲಯದಿಂದ ಜಾಮೀನು
2003 ರಿಂದ 2007ರವರೆಗೂ ಬಾಂಬೆ ಹೈಕೋರ್ಟ್‌ನಲ್ಲಿ ಕಾನೂನು ಸಮರ
2007ರಿಂದ 2013: ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆ
2014, ಏ. 27: ಮತ್ತೆ ಚಾರ್ಜ್ ಶೀಟ್ ಸಲ್ಲಿಕೆ
ಇನ್ನೂ ಸಲ್ಮಾನ್ ಖಾನ್ ಮೇಲೆ ಯಾವ್ಯಾವ ಕೇಸ್ ಹಾಕಲಾಗಿದೆ?
ಐಪಿಸಿ ಸೆಕ್ಷನ್ 304/2 – ಶಿಕ್ಷಾರ್ಹ ನರಹತ್ಯೆ
ಐಪಿಸಿ ಸೆಕ್ಷನ್ 279 – ನಿರ್ಲಕ್ಷ್ಯ ಮತ್ತು ಅತೀ ವೇಗದ ಚಾಲನೆ
ಐಪಿಸಿ ಸೆಕ್ಷನ್ 337, 338 – ಪ್ರಾಣಕ್ಕೆ ಮಾರಣಾಂತಿಕ ಹಾನಿ
ಐಪಿಸಿ ಸೆಕ್ಷನ್ 427 – ಕಿಡಿಗೇಡಿತನದಿಂದ ಆಸ್ತಿ ಹಾನಿ
ಮೋಟಾರ್ ಕಾಯ್ದೆ ಸೆ.34 (ಎ)(ಬಿ) – ಸಾರಿಗೆ ನಿಯಮಗಳ ಉಲ್ಲಂಘನೆ
ಮೋಟಾರ್ ಕಾಯ್ದೆ ಸೆ. 185 – ಕುಡಿದು ವಾಹನ ಚಾಲನೆ, ಪರವಾನಗಿ ದುರುಪಯೋಗ
ಸಲ್ಮಾನ್ ಭಾಗಿಯಾಗಿರುವ ಇನ್ನೊಂದು ಪ್ರಮುಖ ಪ್ರಕರಣ ಕೃಷ್ಣಮೃಗ ಬೇಟೆ ಪ್ರಕರಣ 1998ರ ಅಕ್ಟೋಬರ್ 1-2ರಂದು ಕಂಕಾನಿ ಗ್ರಾಮದಲ್ಲಿ ಹಮ್ ಸಾಥ್ ಸಾಥ್ ಹೈ ಚಿತ್ರೀಕರಣದ ಸಂದರ್ಭದಲ್ಲಿ ರಾಜಸ್ಥಾನದ ಕಾಡೊಂದರಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಕೃಷ್ಣ ಮೃಗ ಬೇಟೆಯಾಡಿದ್ದರು. ಸಲ್ಮಾನ್ ಖಾನ್ ಅವರ ಜೊತೆಯಲ್ಲಿ ನಟಿ ಸೋನಾಲಿ ಬೇಂದ್ರೆ, ತಬು, ನೀಲಂ, ಸೈಫ್ ಅಲಿ ಖಾನ್ ಮುಂತಾದವರಿದ್ದರು. ಎಲ್ಲರ ಮೇಲೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಲೂನಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಎಪ್ರಿಲ್ 10, 2006ರಲ್ಲಿ ಪ್ರಕರಣಾಕ್ಕೆ ಸಂಬಂಧಿಸಿ ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಯಿತು. ಜೋಧಪುರ ಜೈಲಿನಲ್ಲಿ ಶಿಕ್ಷೆಗೆ ಒಳಗಾಗುವಂತೆ ಆದೇಶಿಸಲಾಯಿತು. ಜಾಮೀನು ದೊರೆಯುವವರೆಗೂ ಅವರು ಅಲ್ಲಿಯೇ ಕಾಲ ನೂಕಿದರು. ಪ್ರಕರಣ ವಿಚಾರಣೆ ಮತ್ತೊಮ್ಮೆ ನಡೆಸಲಾಗಿದ್ದು,ಅಂತಿಮ ತೀರ್ಪು ಮಾತ್ರ ಇನ್ನೂ ಹೊರಬರಬೇಕಿದೆ. ಇದರಲ್ಲಿಯೂ ಖಾನ್ ದೋಷಿಯಾಗಿದ್ದಾರೆಂದಾದಲ್ಲಿ ಕನಿಷ್ಟ ಪಕ್ಷ ಐದರಿಂದ ಏಳು ವರ್ಷಗಳ ಕಾಲ ಶಿಕ್ಷೆಯಾಗುವ ಸಂಭವವಿದೆ.
No comments:
Post a Comment