Wednesday, May 20, 2015

ವಿವೇಕ ಶಾನಭಾಗರ ಹೊಸ ಕಾದಂಬರಿ – ‘ಊರು ಭಂಗ’

‘ಎಲ್ಲವನ್ನೂ ಹೇಳುತ್ತೇನೆ...’
ಭಾಸ್ಕರರಾವ್ ಆಡಿದ್ದೆನ್ನಲಾದ ಮಾತಿನ ಕುರಿತು ನಮ್ಮೊಳಗೆ ತೀವ್ರ ಚರ್ಚೆ ಶುರುವಾಗಿತ್ತು. ಎರಡು ಶಬ್ದಗಳು ಒಂದು ಕಂಪನಿಯ ಕಾರ್ಪೊರೇಟ್ ಆಫೀಸಿನಲ್ಲಿ ಎಷ್ಟು ಕ್ರಾಂತಿಕಾರಿಯಾದ, ಭೀಕರ ಘೋಷಣೆಯಾಗಿ ಕೇಳಬಹುದೆನ್ನುವುದು ಇಂಥ ಜಗತ್ತಿನ ಬಗ್ಗೆ ಗೊತ್ತಿದ್ದವರಿಗೇ ಗೊತ್ತು. ಅಲ್ಲಿ ಮಾತ್ರ ಯಾಕೆ, ಕುಟುಂಬ ಅಥವಾ ರಾಜಕೀಯದಂಥ ಯಾವುದೇ ವ್ಯವಸ್ಥೆಯೂ ಅಂಜುವ ಶಬ್ದಗಳಿವು.
ಎಲ್ಲವನ್ನೂ ಹೇಳುತ್ತೇನೆಂಬುದೇ ಭಿನ್ನಮತದ ಅತ್ಯಂತ ಶಕ್ತಿಶಾಲಿ ಅಸ್ತ್ರ ತಾನೇ? ಪಕ್ಷ ತೊರೆದ ಧುರೀಣರು, ತಂಡದಿಂದ ಕೈಬಿಟ್ಟ ಆಟಗಾರರು, ಹೊಡೆದಾಡಿದ ವ್ಯಾಪಾರದ ಪಾಲುದಾರರು, ಜಗಳಾಡಿದ ಪ್ರೇಮಿಗಳು, ಬೇರೆಯಾದ ದಂಪತಿಗಳುಎಲ್ಲರೂ ಒಂದಲ್ಲ ಒಂದು ವಿಧದಲ್ಲಿ, ಒಂದಲ್ಲ ಒಂದು ರೂಪದಲ್ಲಿ ಅಸ್ತ್ರ ಎತ್ತಿಕೊಂಡವರೇ. ಎರಡು ಮಾತಿನಲ್ಲಿ ಎದೆಗಾರಿಕೆ, ಇಷ್ಟು ದಿನ ಸಾಧ್ಯವಾಗದ್ದನ್ನು ಈಗಲಾದರೂ ಮಾಡುತ್ತಿದ್ದೇನೆನ್ನುವ ಆತ್ಮಸಮಾಧಾನ, ತುಸು ಹುತಾತ್ಮತೆ ಇರುವಂತೆಯೇ ಸ್ವಲ್ಪ ವಿಶ್ವಾಸಘಾತುಕತನವೂ ಇದೆ.
ಕಂಪನಿಯ ವೈಸ್ ಪ್ರೆಸಿಡೆಂಟ್ ಆಗಿರುವ ಭಾಸ್ಕರರಾವ್ ಅವಧಿಗಿಂತ ಮುನ್ನ ನಿವೃತ್ತಿ ಪಡೆಯುತ್ತಾರೆ ಎಂಬುದು ಬೆಳಗಿನ ಮುಖ್ಯ ಸುದ್ದಿಯಾಗಿತ್ತು. ಅದು ಜೀರ್ಣವಾಗುವ ಮೊದಲೇ ಅವರು ಹೇಳಿದ್ದಾರೆನ್ನಲಾದಎಲ್ಲವನ್ನೂ ಹೇಳುತ್ತೇನೆ...’ ಎಂಬ ಶಬ್ದಗಳು ನಮ್ಮ ಆಫೀಸಿನಾದ್ಯಂತ ಕಂಪನಗಳನ್ನು ಎಬ್ಬಿಸಿದವು..………………………..

'Ooru Bhanga' novel 

***

ಇದು ವಿವೇಕ್ ಶಾನಭಾಗ ಅವರ ಮೂರನೆಯ ಕಾದಂಬರಿ.“ಊರು ಭಂಗ ದ ಮೊದಲ ಸಾಲುಗಳು ಸುಮಾರು ಇನ್ನೂರೈವತ್ತು ಪುಟಗಳ "ಊರು ಭಂಗ" ಕಾದಂಬರಿ ಆರಂಭದ ಪುಟಗಳಿಂದಲೇ  ಆವರಿಸಿಕೊಳ್ಳುವ ಧಾಟಿಯದು ಕಾರ್ಪೊರೇಟ್ ರಂಗದ ಒಳಸುಳಿಗಳನ್ನು ನಿಧಾನವಾಗಿ ಹೇಳುತ್ತಾ ಹೋದಂತೆ ತೆಂಕಣಕೇರಿ ಎಂಬ ಊರಿನ ಭೂತ ಜಗತ್ತು ಬಿಚ್ಚಿಕೊಳ್ಳತೊಡಗುತ್ತದೆ. ಕಾದಂಬರಿಯ ಮೊದಲ ಎರಡು ಅಧ್ಯಾಯಗಳು ಕಾರ್ಪೊರೇಟ್ ಜಗತ್ತಿನ ಕಿರು ಪರಿಚಯ ಮಾಡುವುದರೊಂದಿಗೆ, ಬರವಣಿಗೆಯ ನಿಖರ, ಆಕರ್ಷಕ ಶೈಲಿಯ ಪರಿಚಯವನ್ನೂ ಮಾಡುತ್ತವೆ. ಕಾದಂಬರಿಯುದ್ದಕ್ಕೂ  ಸಂಭಾಷಣೆಗಳು , ಸನ್ನಿವೇಶಗಳ ವಿವರಣೆಗಳು , ಎಲ್ಲವೂ ತುಂಬಾ ನೈಜವಾಗಿ ಮೂಡಿ ಬಂದಿವೆ. .
ಕಾದಂಬರಿಯ ಪ್ರಧಾನ ಪಾತ್ರ ಮನಮೋಹನ್ ಎರಡು ತಲೆಮಾರುಗಳ ನಡುವಿನ ಕೊಂಡಿ. ಮಧ್ಯವಯಸ್ಕನಾದ ಈತನಿಗೆ ಕಿಮಾನಿ ವಕೀಲರ ಕಾಲವೂ ಗೊತ್ತು, ಅತ್ಯಾಧುನಿಕ ಜಗತ್ತಿನ ಪ್ರತಿನಿಧಿಯಾದ ಶಮಿ ಕಾಲೀನರ ಮುಕ್ತತೆಯೂ ಗೊತ್ತು. ಆದರೆ ಇವೆರಡನ್ನೂ ಅನುಭವಿಸದ ಎಡಬಿಡಂಗಿ ಈತ. ಇವೆಲ್ಲದರ ಜೊತೆಗೆ ಇಲ್ಲಿ ಕ್ರಾಂತಿಕಾರಿಗಳ ಜಗತ್ತೂ ಇದೆ. ಚಂದ್ರು, ಚಿರಾಗ್ ಮೂಲಕ ಪರಿಚಯವಾಗುವ ವಿವರಗಳು ಕೂಡ ದಾಟುವುದು ಕೂಡ ಯಾವೂದೂ ಅಲ್ಲದ ಮನಮೋಹನನ ಮುಖಾಂತರ. ಕಿಮಾನಿ ವಕೀಲರು ಸ್ವಾತಂತ್ರ್ಯಪೂರ್ವದ ಒಂದು ತಲೆಮಾರನ್ನು, ಅದರ ಆದರ್ಶ, ಛಲ ಮತ್ತು ಹೋರಾಟದ ಮನೋಭಾವವನ್ನು ಸಾಂಕೇತಿಸುತ್ತಾರೆ. ಇಲ್ಲಿ ಸ್ವಾತಂತ್ರ್ಯಪೂರ್ವದ ದಿನಗಳ ಒಂದು ತಲೆಮಾರು ಚಂದು, ಚಿರಾಗ್ ತರದ ಸ್ನೇಹಿತರಿಂದ ಹಾದು ರಾಮ-ರಹೀಮರಿಂದ ಕಳಚಿಕೊಂಡ ಅಶೋಕನ ತರದ ಇಂದಿನ ತಲೆಮಾರಿನ ತನಕ ಚಾಚಿಕೊಳ್ಳುವ ಕಾಲಮಾನಕ್ಕೂ ಇದು ಹರಡಿಕೊಳ್ಳುತ್ತದೆ. ಮಾತ್ರವಲ್ಲ ಈ ಎಲ್ಲ ಕಾಲಮಾನದ ಸಹಜ ಬದಲಾವಣೆಗಳನ್ನು ಗಮನಿಸುತ್ತಲೇ ಅದರಲ್ಲಿನ ಸಾಂಕೇತಿಕತೆಗಳನ್ನೆಲ್ಲ ದುಡಿಸಿಕೊಂಡು, ಅದರಿಂದ ಬೇರೆಯಾದ ಕಾದಂಬರಿಯಾಗಿ ರೂಪುಗೊಳ್ಳುತ್ತದೆ.
ಇನ್ನು ಕಾದಂಬರಿಯ ವಿವರಗಳು ಸಿಕ್ಕುಸಿಕ್ಕಾಗದಂತೆ ಅಥವಾ ಗೋಜಲಾಗದಂತೆ ಓದುಗರ ಮುಂದಿಡುವ ಪರಿ ಗಮನಾರ್ಹ. ಜೊತೆಗೆ ಕೃತಿ ಮುಕ್ತವಾಗಿ ಹೇಳುವುದು ಗಟ್ಟಿ ಪಾತ್ರ ಹೆಣ್ಣು. ಅದು ಕಿಮಾನಿ ಮಾಸ್ತರರ ಪತ್ನಿ ನೀಲಾವತಿ ಮತ್ತು ಶಮಿ ತಾಯಿ ರೇವತಿ. ಇವರಿಬ್ಬರೂ ತಮ್ಮತಮ್ಮ ಮಿತಿಯೊಳಗೆ ತಮಗಿರುವ ಸವಾಲುಗಳನ್ನು ಎದುರಿಸಿ ಗೆಲ್ಲಲ್ಲು ಯತ್ನಿಸುತ್ತಿರುವವರು. ಹಾಗೆ ನೋಡಿದರೆ ಕಥಾನಕದೊಳಗೆ ಹೆಚ್ಚು ವಿವರಗಳು ಇರುವ ಪಾತ್ರಗಳು ಇವಲ್ಲ. ಆದರೂ ಕೃತಿ ಮುಗಿಸಿದಾಗ ಬರುವ ದೊಡ್ಡ ನಿಟ್ಟುಸಿರಿನೊಡನೆ ಆವರಿಸಿಕೊಳ್ಳುವ ಪಾತ್ರಗಳು ಇವೆರಡೆ ಎಂದರೆ ಅತಿಶಯೋಕ್ತಿಯಲ್ಲ. ಕಿಮಾನಿ ಮಾಸ್ತರರ ಮಗಳು ವಿಜಯಾ, ರೇವತಿ ಮಗಳು ಶಮಿ ತಮ್ಮ ತಮ್ಮ ಚೌಕಟ್ಟುಗಳ ಬಗ್ಗೆ ಸಿಟ್ಟಿರುವ ಆದರೆ ಅದು ವ್ಯಕ್ತವಾಗುವ ಪರಿಯಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಯೋಚಿಸದ ಪಾತ್ರಗಳಾಗಿ ಕಾಣುತ್ತವೆ. ಶಮಿ ಎಲ್ಲವನ್ನೂ ಮೀರಬೇಕೆನ್ನುವ ಹಠದಲ್ಲಿ ಯಾವುದನ್ನೂ ಮೀರಲಾಗದೆ ಸೋಲುವಾಕೆಯಾದರೆ,. ಚೌಕಟ್ಟಿನೊಳಗೆ ಎಲ್ಲ ಸುಖವನ್ನೂ ದಕ್ಕಿಸಿಕೊಳ್ಳಲು ಹೋಗಿ ಸೋಲುವಾತ ಮನಮೋಹನ. ಈ ಎರಡೂ ಪಾತ್ರಗಳ ಆಂತರಿಕ ಘರ್ಷಣೆಗಳನ್ನು ಇನ್ನೂ ಹೆಚ್ಚು ಪ್ರಬಲವಾಗಿ ಚಿತ್ರಿಸುವ ಸಾಧ್ಯತೆಗಳಿದ್ದರೂ ಲೇಖಕರು ಅದರ ಕಡೆ ಹೆಚ್ಚು ಗಮನ ಹರಿಸಿಲ್ಲ. ಎನ್ನಬೇಕು.
ಕಾದಂಬರಿಯಲ್ಲಿ ಮನುಷ್ಯ ಸಂಬಂಧಗಳು ಕೇವಲ ಒಳಗಿನ ಟೊಳ್ಳು ಸಂಭಾಳಿಸಿಕೊಳ್ಳುವುದಕ್ಕಷ್ಟೇ ಬೇಕೆನಿಸುವ, ಅದನ್ನು ಟೆಂಪೊರರಿಯಾಗಿ ತುಂಬಿಕೊಳ್ಳುವ ಒಂದಾನೊಂದು ದಾರಿಯಷ್ಟೇ ಆಗಿ, ಅದಕ್ಕಾಗಿ ಸಾಹಿತ್ಯ- ಕಥೆ ಕಟ್ಟುವ ಕೌಶಲ - ಬಾಲ್ಯದ ಅನುಭವಗಳು - ಒಲಿಸಿಕೊಳ್ಳುವ ಚಾಲಾಕಿತನ ಎಲ್ಲವನ್ನೂ ಬಳಸಿಕೊಳ್ಳಬಲ್ಲ ಮಟ್ಟಕ್ಕೆ ಇಳಿಯುವ ಮನುಷ್ಯ - ನನ್ನು ತೋರಿಸಿಯೂ ಇನ್ನೊಂದು ಕಡೆಯಿಂದ ಇವತ್ತಿನ ಕಾರ್ಪೊರೇಟ್ ಜಗತ್ತು ಇದನ್ನು ಹೇಗೆ ಬಳಸಿಕೊಳ್ಳಬಲ್ಲುದು ಎನ್ನುವುದನ್ನು ತೀರಾ ಸೂಕ್ಷ್ಮವಾಗಿ (ಭಾಸ್ಕರ ರಾವ್-ವ್ಯಾಂಡಿ ಶೊನಾಯ್-ಎಂಡಿ-ಸಾಹು-ಸನ್ಯಾಲ್-ರೇವತಿ) ತೋರಿಸಿರುವುದು ಈ ಕಾದಂಬರಿಯ ಇನ್ನೊಂದು ಆಯಾಮ. ವಿವಾಹಿತನಾದ ಮನಮೋಹನ್ ಶಮಿಯ ಒಡನಾಟಕ್ಕೆ ಎಳಸುವಲ್ಲಿ ಕೇವಲ ತೆಂಕಣಕೇರಿ ಎಫೆಕ್ಟನ್ನು ಮೀರುವ ಸಾಹಸ ಅಥವಾ ಪ್ರಯತ್ನವನ್ನಷ್ಟೇ ಕಾಣಬೇಕಿಲ್ಲ. ಇವತ್ತಿನ ತಲೆಮಾರು ಮಾತ್ರವಲ್ಲ, ನಡುವಯಸ್ಸಿನವರೂ ಸೋಶಿಯಲ್ ವೆಬ್ಸೈಟ್ಗಳಲ್ಲಿ, ಮೊಬೈಲುಗಳಲ್ಲಿ ಹೊಸ ಸ್ನೇಹಕ್ಕೆ, ಸಂಬಂಧಕ್ಕೆ ತಹತಹಿಸುತ್ತಿರುವಲ್ಲಿಯೂ ಈ ಒಳಗಿನ ಟೊಳ್ಳನ್ನೇ ವರ್ಚ್ಯುಯಲ್ ರಿಲೇಶನ್ಸ್ ಮೂಲಕ ತುಂಬಿಕೊಳ್ಳಲು ಮಾಡುವ ಲಂಘನವೇ ಕಾಣಿಸುತ್ತದೆ. ಹಾಗೆಯೇ ಈ ಪ್ರಕ್ರಿಯೆಯಲ್ಲಿ ಬಹುತೇಕ “ಊರುಭಂಗ ವನ್ನೇ ಬೇರೆ ಬೇರೆ ಅರ್ಥಗಳಲ್ಲಿ ಸಾಕ್ಷಾತ್ಕರಿಸುತ್ತದೆ.
ಇನ್ನು ಕಾದಂಬರಿಕಾರರು ಕ್ರಾಂತಿಯ ಬೆಳವಣಿಗೆ ತಲ್ಲಣಗಳು-ತವಕಗಳನ್ನು ದಕ್ಕಿಸಿಕೊಳ್ಳಲಾಗದೆ ಮೇಲ್ನೋಟದ ವಿವರಗಳ ಮೂಲಕವೇ ಚಂದೂ ಮತ್ತು ಚಿರಾಗರನ್ನು ಚಿತ್ರಿಸಿದ್ದಾರೆ. ಆದರೆ ಕ್ರಾಂತಿಗೆ ನಾನಾ ಆಯಾಮಗಳಿದ್ದು ಕೇವಲ ರಕ್ತ ಕ್ರಾಂತಿ ಮಾತ್ರವೇ ಕ್ರಾಂತಿಯಾಗಿರುವುದಿಲ್ಲ. ಶಸ್ತ್ರರಹಿತ ಕ್ರಾಂತಿಯೂ ಆಗಿರಬಹುದು ಎಂಬುದನ್ನು ನೆನೆಯಬೇಕಿದೆ.
Author Vivek Shanabhaga
ಐದು ಭಾಗಗಳಿರುವ ಕಾದಂಬರಿಯ ಒಂದು, ಮೂರು ಮತ್ತು ಐದು - ಮೂರು ಭಾಗಗಳು  ಇಂದಿನ ನಗರ ಕೇಂದ್ರಿತ ಕತೆಯಾಗಿದ್ದು ಉಳಿದೆರಡು ಭಾಗಗಳು ಎಪ್ಪತ್ತರ ದಶಕದ ಕತೆಗೆ ಸೀಮಿತವಾಗಿವೆ. ಹಿಂದಿನ ತಲೆಮಾರಿನ ವೃತ್ತಾಂತವು ನಿರೂಪಕ ತನ್ನ ಗೆಳತಿಗೆ ಹೇಳುವ ಕತೆಯ ರೂಪದಲ್ಲಿ ಬರುವುದೂ ಕಾದಂಬರಿಯ ಒಂದು ವಿಶೇಷ. ಇನ್ನು ಈ ಕಾದಂಬರಿ ಮೇಲೆ ಯಶವಂತ ಚಿತ್ತಾಲರ 'ಶಿಕಾರಿ' 'ಕೇಂದ್ರ ವೃತ್ತ್ತಾಂತ' ಕೃತಿಗಳ ಪ್ರಭಾವ ದಟ್ಟವಾಗಿ ಆವರಿಸಿಕೊಂಡಿರುವುದು ಎದ್ದು ಕಾಣುತ್ತದೆ. 'ಶಿಕಾರಿ'ಯಲ್ಲಿ ನಾಗಪ್ಪನ ಮೂಲಕ ಚಿತ್ತಾಲರು ಮುಂಬೈ ನಗರ ಜೀವನದ ಒಳಗನ್ನು ವಿವರಿಸಿದ್ದರೆ ಇಲ್ಲಿಯೂ ಮನಮೋಹನನ ಪಾತ್ರ ಅದನ್ನೇ ಮಾಡುತ್ತದೆ. ಇಲ್ಲಿಯೂ ಚಿತ್ತಾಲರ ಕೇಂದ್ರ ವೃತ್ತಾಂತದಂತೆಯೇ ತಾನು ಕೇಂದ್ರ ಎಂದುಕೊಂಡಿರುವ ಮನಮೋಹನನ ಕತೆಯಲ್ಲಿ ಅವನೇ ಬೇರೊಂದು ಕೇಂದ್ರದಿಂದ ಹೊರಟ ಬೇರೊಂದು ವೃತ್ತದ ಪರಿಧಿಯ ಮೇಲೆ ಕುಳಿತ ಒಂದು ಬಿಂದುವಷ್ಟೇ ಆಗಿರುವ ಸಾಧ್ಯತೆ ನಮ್ಮನ್ನು ಅಚ್ಚರಿಗೆ ಕೆಡಹುತ್ತದೆ.
ಕಡೆಯದಾಗಿ ಕಾದಂಬಿಕಾರರಾದ ಶಾನಬಾಗರೇ ಹೇಳಿದಂತೆ ಕಥೆ ಅಥವಾ ಕಾದಂಬರಿಯಲ್ಲಿ ಬರೆದ ಮೇಲೆ ಎಲ್ಲವೂ ನನ್ನ ಅನುಭವಕ್ಕೆ ಬಂದಂತೆಯೇ ಒಟ್ಟಾರೆಯಾಗಿ ಒಂದು ಕೃತಿ ಏನನ್ನು ಹೇಳುತ್ತಿದೆ ಎನ್ನುವುದನ್ನು ಕುರಿತು ಯೋಚಿಸುವ ಮನಸ್ಸು ಅದನ್ನು ಸಮಗ್ರವಾಗಿ ಒಂದು ಬೀಸಿನಲ್ಲಿ ಹಿಡಿದಿಡಲು ಬಯಸುವುದು ಕೂಡ ಅರ್ಥಮಾಡಿಕೊಳ್ಳುವ, ಗ್ರಹಿಸುವ ಸಹಜವಾದ ಪ್ರಯತ್ನ. ಮನಸ್ಸು ಒಂದನ್ನು ಇನ್ನೊಂದರ ಜೊತೆ ಜೋಡಿಸಲು, ಜೋಡಿಸಿ ಅರ್ಥದ ಪೊರೆ ಹಚ್ಚಲು ಮತ್ತು ತನ್ಮೂಲಕ ಇದು ಹೀಗೆ ಎಂದು ಗ್ರಹಿಸಲು ಬಯಸುವುದು ಕೂಡ ಇದು ತನಗೆ ದಕ್ಕಿತು ಎಂಬ ಸಮಾಧಾನ ಹೊಂದುವ ಅದರ ಸ್ವಾರ್ಥದಿಂದ ಪ್ರೇರಿತವಾದದ್ದೇ ಹೊರತು ಇನ್ನೇನಲ್ಲ. ಹೀಗಾಗಿ ಕಾದಂಬಿ ಓದಿದ ಪ್ರತಿ ಓದುಗರಲ್ಲಿಯೂ ಅದು ವಿಭಿನ್ನ ರೂಪವನ್ನು ತಾಳಿ ನಿಲುತ್ತದೆ. ಹೀಗೆ 'ಊರು ಭಂಗ' ಸರಾಗವಾಗಿ ಓದಿಸಿಕೊಳ್ಳುವ  ಶೈಲಿಯಾದರೂ ಹಲವು ಪದರಗಳನ್ನು ಕುಶಲತೆಯಿಂದ ಹೆಣೆದು ಸಿದ್ಧಪಡಿಸಿರುವ ಕಾದಂಬರಿಯಿದು ಎನ್ನಲಡ್ಡಿ ಇಲ್ಲ.

No comments:

Post a Comment